ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 6, 2010

ಬಾಟಲೀ ಪುತ್ರ ಪುರಾಣಂ




ಕುಡಿತವೆಂಬ ದುಶ್ಚಟಕ್ಕೆ ಬಲಿಯಾಗಿ ಅನೇಕರು ಮನೆ-ಮಠ ಮಾರುವಷ್ಟು ಅದಕ್ಕೇ ತಮ್ಮನ್ನು ಮಾರಿಕೊಂಡಿದ್ದಾರೆ. ಅಪ್ಪಿ ತಪ್ಪಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕುಡುಕನ ಮಡದಿಯಾಗಿ ಕನಸು ಕಟ್ಟಿ ಬಾಳುವ ಹೆಂಡತಿಯ ಗೋಳು ಹೇಳತೀರ. ಕುಡುಕನನ್ನು ತಿದ್ದುತ್ತೇನೆ, ಅವನ ಚಟವನ್ನು ಸಾತ್ವಿಕ ಶಕ್ತಿಯಿಂದ ಬಿಡಿಸುತ್ತೇನೆ ಎಂದು ಹೊರಟು ಅವನನ್ನೇ ಪ್ರೀತಿಸಿ ಮದುವೆಯಾಗಿ, ಮಗುವನ್ನು ಪಡೆದು ಒಂದೆರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯೊಬ್ಬಳನ್ನು ನೋಡಿ ಮರುಗಿದ್ದೇನೆ; ಹೌದು ಕುಡುಕರೇ ಹೀಗೆ, ಅವರು ಯಾರಿಗೂ ಬಗ್ಗದ ಅಧುನಿಕ ಕುಡುಕರು. ಹಿಂದೆ ಒಂದು ಕಾಲಕ್ಕೆ ಹಳ್ಳಿಯ ಭಟ್ಟಿ ಸಾರಾಯಿಗಳಿದ್ದವು.ಅವುಗಳನ್ನು ಕುಡಿಯುವವರೂ ಇದ್ದರು, ಅದರ ಪರಿಪಾಠ ಬದಲಿತ್ತು, ಅಲ್ಲಿ ಒಣ ಪ್ರತಿಷ್ಠೆಗಾಗಿ ಸಮೂಹಸನ್ನಿಗೊಳಗಾಗಿ ಕುಡಿಯುತ್ತಿರಲಿಲ್ಲ.ಆದರೆ ಅಂಥವರೂ ಕೂಡ ಸ್ವಲ್ಪ ತಿಳಿಸಿ ಹೇಳಿದರೆ ಬಿಡುವಲ್ಲಿ ಮುಂದಾಗುತ್ತಿದ್ದರು. ಇಂದು ಕುಡಿಯುವುದೂ ಒಂದು ಕಲೆ ! ಕಾರ್ಪೋರೆಟ್ ಕಲ್ಚರ್ ! ಗುಂಡು-ತುಂಡು ಎಂದು ಅನೇಕ ಹುಡುಗರು ಹೇಳುತ್ತಾ ತಿರುಗುವುದನ್ನು ನೋಡಿದ್ದೇನೆ. ಅದೆಲ್ಲಾ ಆದಮೇಲೆ ಅವರಿಗೆ ಇನ್ನೂ ಕೆಲವು ಇಲ್ಲದ್ದು ನೆನಪಾಗುತ್ತವೆ. ದೇಶದಲ್ಲಿ ಅಲೋಪಥಿ ಔಷಧ ಅಂಗಡಿಗಳು ಮತ್ತು ಬಾರ್ ಅಂಡ್ ರೆಸ್ಟಾರೆಂಟ್ ಗಳು ಮಿತಿ ಮೀರಿದ ವೇಗದಲ್ಲಿ ಹೆಚ್ಚುತ್ತಲೇ ಇವೆ. ಎಲ್ಲಿಯವರೆಗೆ ಇವುಗಳ ನಾಯಿಕೊಡೆಯ ರೀತಿಯ ವೇಗದ ಬೆಳವಣಿಗೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಕುಡುಕರ, ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಮ್ಮೆದುರಿಗೆ ಬರುವ ಯಾವ ವ್ಯಕ್ತಿ ಕುಡುಕರ ಸಾಲಿಗೆ ಸೇರುವುದಿಲ್ಲ ಎಂಬುದನ್ನು ಹೇಳುವುದೇ ಕಷ್ಟ, ಅದು ಅಷ್ಟು ಕೆಟ್ಟ ಜನಪ್ರಿಯ ತುಡಿತ ! ಸಂಘ ಸಂಸ್ಥೆಗಳು ಅನೇಕ ಪ್ರಯತ್ನಿಸುತ್ತಾ ಕುಡುಕರ ಚಟಗಳನ್ನು ಬಿಡಿಸಲು ಬಹಳ ವಿಸ್ತ್ರತ ಅಧ್ಯಯನ,ಅನುಸರಣ ಪ್ರಕ್ರಿಯೆಯಲ್ಲಿ ತೊಡಗಿವೆ, ಆದರೂ ಈ ಕುಡುಕ ಅಪ್ರತಿಮ ಕಳ್ಳ ಮನೋಭಾವದವರು. ತಾಯಿ-ಹೆಂಡತಿ-ಮಕ್ಕಳು ಯಾರಲ್ಲಿಯೂ ನಿಜ ಹೇಳದ ಅವರು 'ದೇವರಾಣೆ ಇನ್ನು ಕುಡಿಯುವುದಿಲ್ಲ ' ಎಂದು ಪ್ರತಿಜ್ಞೆ ಮಾಡಿ ಮಗ್ಗುಲಲ್ಲೇ ಮತ್ತೆ ಬಾಟಲಿ ಮಲಗಿಸಿ ಕೊಂಡೇಬಿಡುತ್ತಾರೆ !

ಒಂದುಕಡೆ ಕುಡುಕರ ಸಂಖ್ಯೆ ಜಾಸ್ತಿ ಆಗುವಂತೆ ಪ್ರೇರೇಪಿಸುವ, ಆ ಕೆಟ್ಟಕಲೆಯನ್ನು ಪೋಷಿಸುವ ಲಿಕ್ಕರ್ ಬ್ಯಾರನ್ [ಹೆಂಡದ ದೊರೆಗಳು] ಬೆಳೆಯುತ್ತಲೇ ಇದ್ದಾರೆ. ಅವರುಗಳ ಸಾಮ್ರಾಜ್ಯ ವಿಸ್ತರಣೆ ಸದಾ ಉನ್ನತಿಯಲ್ಲಿದೆ. ಅನೇಕ ಮಹಡಿಗಳ ಹೊಸ ಹೊಸ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಈ ಕಟ್ಟಡಗಳ ಬುನಾದಿಯ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳ ಕಣ್ಣೀರಿನ ಕಥೆಗಳಿವೆ, ಲಕ್ಷಾಂತರ ಎಳೆಯ ಕುಡುಕರ ಗೋರಿಗಳಿವೆ ! ಇತ್ತ ಕುಡುಕ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಅತ್ತ ಹೆಂಡದ ದೊರೆಗಳು ಬಿಸ್ನೆಸ್ ಮೀಟಿಂಗ್ ಗಳಲ್ಲಿ ಬ್ಯುಸಿಯಾಗಿರುತ್ತ, ಲಲನೆಯರ ಮಧ್ಯೆ ತೊಳಲಾಡುತ್ತಾ, ಬೇಡದ ಸಂಸ್ಕೃತಿಗಳ ಅಘೋಷಿತ ಹರಿಕಾರರಾಗಿ ವಿಜೃಂಭಣೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದು ತಾವೂ ಅತಿ ಶ್ರೇಷ್ಠರೆಂಬ ಹೆಗ್ಗಳಿಕೆಯಿಂದ ಕೊಬ್ಬುತ್ತಿದ್ದಾರೆ; ರಾಜ್ಯ ರಾಜ್ಯಗಳನ್ನೇ ಕೊಳ್ಳುವಷ್ಟು
ದುಡ್ಡುಮಾಡಿಕೊಂಡು ಅನೆಕದೇಶಗಳಲ್ಲಿ ವ್ಯವಹಾರ ನಡೆಸುವತ್ತ ಮುನ್ನುಗ್ಗಿದ್ದಾರೆ. ಇಂತಹ ಸಮಾಜ ಘಾತುಕರಿಗೆ,ಹಗಲು ದರೋಡೆಕೋರರಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ,ಕೊಟ್ಟು ಸನ್ಮಾನಿಸುತ್ತೇವೆ. ಇವರು ಚುನಾವಣೆಗಳಿಗೆ ನಿಲ್ಲಲು ಆಸ್ಪದ ಕೊಡುತ್ತೇವೆ, ನಾಳೆ ಒಂದು ದಿನ ಅಂತಹ ಹೆಂಡದ ದೊರೆಗಳ ಸಂಪೂರ್ಣ ಆಳ್ವಿಕೆಗೆ ಒಳಪಡುವ ಪ್ರಜಾಪ್ರಭುತ್ವವೆಂಬ ದುರಂತ ಕಥೆಯೊಂದರ ಹಂದರವನ್ನು ದೂರ ದೃಷ್ಟಿಯಿಂದ ನಾವು ಈಕ್ಷಿಸಬಹುದಾಗಿದೆ. ಇವತ್ತಿನ ನಮ್ಮಂಥವರ ಸ್ಥಿತಿ ಹೇಗಿದೆ ಅಂದರೆ ಬೆಕ್ಕಿಗೆ ಗಂಟೆ ಕಟ್ಟಲಾರದ ಇಲಿಗಳು ನಾವಾಗಿದ್ದೇವೆ. ನಮ್ಮಲ್ಲಿ ಈ ಕೆಟ್ಟ ಶಕ್ತಿಗಳ ವಿರುದ್ಧ ಭಂಡೇಳುವ ಸಂಘಶಕ್ತಿಯಿಲ್ಲ! ಆ ಸಂಘವನ್ನು ಕಟ್ಟುವ ಸಾಧ್ಯತೆ ಮೊದಲೇ ಕಾಣುತ್ತಿಲ್ಲ ! ಇಂತಹ ಕೈಲಾಗದ ಹತಾಶ ಮನೋಸ್ಥಿತಿಯಲ್ಲಿ ಹುಟ್ಟುವ ಹಲವು ಸಾತ್ವಿಕ ಕ್ರೋಧರೂಪಗಳು ಸಾಕಾರಪಡೆದು ಒಂದು ಕೃತಿಯಾಗಿ ಹೊರಬಂದರೆ ಹೇಗೆ? ಅದು ನಮ್ಮೆಲ್ಲಾ ನೊಂದ ಮಾತೆಯರ-ಮಹಿಳೆಯರ ಪರವಾಗಿ ಕುಡುಕರ ಬಗ್ಗೆ, ಅವರನ್ನು ಕುಣಿಸುವ,ಆಡಿಸುವ ಹೆಂಡದ ದೊರೆಗಳ ಬಗ್ಗೆ ಬರೆದ ಹಾಸ್ಯದ ಹೊನಲಾಗಲಿ ಅಲ್ಲವೇ ? ಇಂತಹ ಕೆಟ್ಟ ಸನ್ನಿವೇಶಗಳಲ್ಲಿ ನಮ್ಮ ಹರಕಂಗಿ ಮಾಬ್ಲೇಶ್ವರ ಕವಿ ಬರೆಯತೊಡಗುತ್ತಾನೆ !


ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಸೋಮಕಾಂಡದ ಪೇಯಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ನಭಯಂ ನಾಸ್ತಿ ಸ್ವಭಾವತಃ " ಅಂದರೆ ಕುಡಿತದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಅದರಲ್ಲೇ ಮುಳುಗಿ ಸಾಯುವವನಾಗಿರುತ್ತಾನೆ ಎಂದೂ ಅವನೊಳಗಿನ ಹೆಂಡ ಹೊರಗಿನ ಹೆಂಡವನ್ನು ಕರೆದು ಒಳ ಸೇರಿಸಿಕೊಳ್ಳಲು ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಕೆಟ್ಟ ದ್ರವಪದಾರ್ಥ ಅವನ ಕಣ್ಣಿಗೆ ಬಿತ್ತು. ಅದರಿಂದ ಬಂದ ಒಂದು ಆರ್ತನಾದ ಅವನಿಗೆ ಕೇಳಿಸಿತು .
ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ದ್ರವರೂಪದ ಆತ್ಮ ಹೀಗೆ ಉತ್ತರಿಸಿತು. " ಸ್ವಾಮೀ ರಾಮ, ನಿನ್ನ ಬರುವಿಕೆಗಾಗೇ ಇಷ್ಟು ದಿನ ಕಾದಿದ್ದೆನಪ್ಪಾ, ನನ್ನ ಗುರುತು ಸಿಗಲಿಲ್ಲವೇ? ಲಂಕೆಯಲ್ಲಿ ನಿನ್ನಜೊತೆ ಸಹಸ್ರಾರು ಕಪಿಗಳು ಸೇರಿ ರಾವಣನ ಸಂಹಾರವನ್ನು ಮಾಡುವ ಘಳಿಗೆಯಲ್ಲಿ ರಾವಣನ ಶರೀರದಲ್ಲಿ ಅಡಗಿದ್ದ ಅಸದೃಶ ಶಕ್ತಿ ನಾನಾಗಿದ್ದು, ಆತ ಸೋತು ಉಚ್ಚೆ ಹೊಯ್ದಾಗ ಆ ರೂಪದಲ್ಲಿ ಹೊರಬಿದ್ದು ಬಹಳ ತೊಳಲಾಡಿಬಿಟ್ಟೆ, ಆದರೂ ಬಿಡದೆ ನಿನ್ನ ಕಪಿ ಸೈನಿಕರನೇಕರು ನನ್ನನ್ನು ತುಳಿದು ಜಾರಿಬೀಳುವಂತೆ ಮಾಡಿದೆ. ಆ ಸ್ಥಿಯಲ್ಲಿ ಅದನ್ನರಿತ ನೀನು ಕೋಪದಿಂದ ನನಗೆ ಕೆಟ್ಟ ವಾಸನೆ ಹೊಡೆಯುವ ದ್ರವವಾಗಿ ಬಿದ್ದಿರು ಎಂದು ಶಾಪವಿತ್ತೆ "

ರಾಮ ಆಜ್ಞಾಪಿಸಿದ -" ಆಗಲಿ, ಆದದ್ದೆಲ್ಲ ಒಳ್ಳೆಯದೇ ಅಂತ ತಿಳಿ, ಕಲಿಯುಗದಲ್ಲಿ ಬಾಟಲಿಗಳಲ್ಲಿ ಬರ್ತಿಯಾಗುವ ಮದಿರೆಯಾಗಿ ನಿನ್ನ ವಶರಾಗುವ ಹಲವು ಪಾಪಿಜನರ ವಂಶ ನಿರ್ವಂಶ ಮಾಡಿ ಮರಳಿ ಪಾತಾಳಕ್ಕೆ ಹೋಗು, ಅಲ್ಲಿ ಮುಂದೆ ನೀ ಸುಖದಿಂದಿರು,ಕಾಲಾನಂತರದಲ್ಲಿ ಪ್ರಳಯ ಸಂಭವಿಸಿದ ಮೇಲೆ ಒಳ್ಳೆಯ ರೂಪವನ್ನ ಪಡೆದು ಸ್ವಸ್ಥಾನಕ್ಕೆ ಸೇರು "

ಹರಕಂಗಿ ಮಾಬ್ಲೇಶ್ವರ ಕವಿ ಬರೆದ ಈ ಪುರಾಣದ ಸಂಕ್ಷಿಪ್ತ ರೂಪ ತಮಗಾಗಿ----



[ಚಿತ್ರಗಳ ಋಣ : ಅಂತರ್ಜಾಲ]

ಬಾಟಲೀ ಪುತ್ರ ಪುರಾಣಂ

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ಮೊದಲಂ ಕಿಂಗಫಿಶರ್ ಬಾಟಲಿಂ ಬಗಲೊಳಿಟ್ಟು ಮದ್ದಾನೆ ಥರದಿಂದ ಮುನ್ನುಗ್ಗುತಂ ಎದುರಿಗೆ ಬಂದವಗೆಲ್ಲ ಗಣನೆಗಂ ತೆಗೆದುಕೊಳಲೇನಪ್ಪನೆ ಕಡುಪಾಪಂ ಬರ್ಪುದು ಅದಕಂ ಮರೆತು ತಳ್ಳುತ ಮುಂದೆ ಮುಳ್ಳು ಹಂದಿಯಥರದಿ ದುರುಗುಡುತಂ ಮುದದಿ ತಾನೊಬ್ಬನೇ ನಸುನಗುತಿದ್ದ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ವೋಡ್ಕಾ ವಿಸ್ಕಿಯದೇನು ಬಂತು ಮಹಹಾ ರಮ್ಮೇನು ಜಿನ್ನೆನ್ನುತಂ ಅಲ್ಲಿ ವೊಡಾಫೋನಿಲ್ಲವೇ ಕುಂತು ಕರೆಯಲವರ್ಗಳಂ ಡೋರು ಸಪ್ಲೈ ಮಾಳ್ಪರು ಮಿಗೆ ಬಿಲ್ಲಕೂಡಮವರೇ ತರ್ಪರು ಅನಿತರೊಳ್ ದ್ವೈತಮದ್ವೈತವಾಗಿ ವಿಶಿಷ್ಟಾದ್ವೈತಮಾಗಿ
ಹರಿಹರ ಭೇದವೆಣಿಸದೆ ಗಟಗಟನೆ ಕುಡಿದು ಉಮ್ಮಳಿಸಿದರೆ ಇಂದ್ರನ ಒಸಗೆ ಹತ್ತಿರವೆಂದನೈ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಮಲ್ಯರ್ ಖೋಡೆಗಳಾದಿ ಹಲವರ್ ನಿಸ್ವಾರ್ಥದಿಂ ಜನತೆಗಂ ಬಹು ಪ್ರೀತಿಲಿ ಕೊಡಮಾಳ್ಪರ್ ತಾವು ಹಲವು ರೂಪಂಗಳಂ ನೀಡುತಂ ಬಸಿದು ಕೊಡಲಾ ಬಾಟಲಿಯೋಳ್ ಹೊಸಲೋಕಕೆಲ್ಲ ಕರೆದೊಯ್ವ ಕುಸುಮಕೋಮಲಾಂಗಿಯರ ಚಿತ್ರವಂ ಬರೆದು ರಸ್ತೆಯಿಕ್ಕೆಲಕಂಟಿಸಲ್ಕೆ ನಮಗದನಂ ನೋಡುತ ನೆಶೆಬರ್ಪುದು ಇದು ಪಾನಂಗಳೊಳಗೆ ಅತಿ ಶ್ರೇಷ್ಠಮೆಂದ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಅವ ಧರಿಸಿ ಬಾಟಲಿಯ ಕೈಯ್ಯಲಿ ಹದನೆ ತಿರುಗಿಸಿ ಬೂಚು-ಮುಚ್ಚಳ ತೆಗೆದು ಬಿಸುಡುತ ಮೂಸುತಹಹ ಪರಿಮಳವು ಘನವೆನುತಂದದಲಿ ಸರಕ್ಕನೆ ಗ್ಲಾಸೊಳದನಂ ಬಗ್ಗಿಸುತ ಮಿಗೆ ಐಸು ಪೀಸುಗಳನೆಲ್ಲ ತೆಗೆತಂದು ಟಣಕು ಟಣಕು ಟಣಕೆನೆ ಅದರೊಳಿಟ್ಟು ಮೂರಾವರ್ತಿ ಎತ್ತಿ ಬಾಯ್ಗಿಳಿಸೆ ನಿಡುಸುಯ್ದು ಜಗವನೆ ಮರೆತ ವಿಚಿತ್ರವಂ ಕಂಡು ನಡುಗಿದ ನಮ್ಮ ಶಂಭೋ ಮಹಾದೇವ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಸಾಟಿಯುಂಟೆ ಮೂಜಗದಿ ಎನಗೇನುಕಮ್ಮಿ ಎಂದೆನುತ ಮಿಗೆ ತೂರಾಡುತಂ ಹಾರಿ ಹಾರಿ ತನ್ನಿರವನೆ ಮರೆತು ಥಕತೈ ಎನಲಂ ಸ್ವರ್ಗದಲಿರ್ಪ ಮಹಾಮಹಿಮ ಭರತಮುನಿ ಕಿಟಕಿಯಿಂದಾಚೆ ಗಾವುದ ಗಾವುದ ದೂರ ದೃಷ್ಟಿ ಬೀರೆ ಕಂಡನಪಸವ್ಯ
ಕುಂಡೋದರನ ಭರತನಾಟ್ಯವಂ ಅಯ್ಯೋ ಎಂದೆನುತ ಹಣೆಯಂ ತಾಂ ಚಚ್ಚಿಕೊಂಡ ನೋಡಾ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಒಂದಿನಿತು ಕಾಸಿಲ್ಲದಲೇ ಮುಗಿದಾದೊಂದುದಿನ ಪತ್ನಿಯಂ ಅಂಗಳದಿ ಎಳೆತಂದು ಭಕ್ತಿಯಿಂ ಮಂಗಳದ ಸೂತ್ರವಂ ಸರ್ರನೆ ಬಲಗೈಲಿ ತಾಂ ಪಿಡಿದು ಹರಿಯಲ್ಕೆ ಕೆನಲುತ ಕೆಂಡವಾದಳು ಗರತಿ ಗಂಡನ ಗುಂಡಿನಾಟದಲೀಂ ಮಿಗೆ ನಂಗಾನಾಚು ಮಾಡೆಂದ ಭೂಪನ ಕಂಡು ನಡುಗಿದರ್ ಪಕ್ಕದೊಳಿರ್ಪ ಅಂಗನೆಯರೆಲ್ಲ ಸೇರುತೈತಂದು ಭಂಗವ ಬಿಡಿಸಲ್ಕೆ ಎಳೆದೊಯ್ದರದೋ ಗೆಳತಿಯ ಮಾನಮಂ ಮುಚ್ಚುತ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಿಜಿ ಅಮೇರಿಕ ಸ್ವಿಟ್ಜರ್ ಲೆಂಡು ಜೆಪಾನು ಎಂತೆಲ್ಲ ತೂಫಾನಿನಂತೆ ಸಗ್ಗದ ವಿಮಾನಮಂ ಏರಿ ಅಂಬರಕೇರಿ ತೊಡೆಯಲಿ ಲ್ಯಾಪುಟಾಪಿಡುತಂ ಪಕ್ಕದಿ ಚಂದಿರಾನನೆಯರ ಸೆಳೆದುಕೊಳುತಂ ಮುಸಿ ಮುಸಿ ನಗುತ ಬಿಳಿ ಮಂಗನಂ ತೆರದಿ ತುಸು ಬಿಟ್ಟ ಗಡ್ದವಂ ಬರಿದೆ ಸ್ಟೈಲಿಗೆ ತುರಿಸಿಕೊಳುತಂ ವಸುಮತಿಯ ಮಡಿಲಲ್ಲಿ ಬಿದ್ದಿಹ ಹಲವರ ಕಸುವು ತನದೆಂದೆನುತ ಉಸುರಿ ನಕ್ಕನು ಹೆಂಡದೊರೆ ತಾಂ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಗರತಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ

Monday, April 5, 2010

ಕಳ್ಳಮನಕೆ ಬೋಧನೆ

ಬದುಕಿನಲ್ಲಿ ಅನೇಕರು ಕಳ್ಳತನಕ್ಕೆ ಇಳಿಯುವುದು ಏನೂ ತೋಚದಾಗ, ತಮಗೆ ಯಾವುದೇ ದುಡಿಮೆಯ ಮಾರ್ಗ ಕಾಣದಾಗ, ಬದುಕೆಂಬ ವ್ಯವಹಾರದಲ್ಲಿ ಸೋತಾಗ, ಆಸೆ ಅತಿಯಾದಾಗ. ಮನದಲ್ಲಿ ತುಂಬಿರುವ ಹಲವು ಮುಳ್ಳುಗಳಲ್ಲಿ ಇದೂ ಒಂದು ಮುಳ್ಳು. ಕಳ್ಳತನ ಅನುವಂಶೀಯತೆಯಲ್ಲ ! ಕಳ್ಳತನ ಹುಟ್ಟಾ ಬಂದಿದ್ದಲ್ಲ, ಬದಲಿಗೆ ಆಮೇಲೆ ಕಲಿತ ಕೆಟ್ಟ ಪಾಠ ! ಎಳವೆಯಲ್ಲೇ ಒಳ್ಳೆಯ ಗುರು ಸಿಗದಿದ್ದರೆ ಅಡ್ಡ ಮಾರ್ಗ ಹಿಡಿದು, ಬೆಳೆಯುತ್ತ ದೊಡ್ಡವರಾದಾಗ ಅದನ್ನೇ ಸರಿ ಎಂದು ಸಮರ್ಥಿಸುತ್ತ ತಿರುಗುವ ಮನಕ್ಕೆ ಸರಿಯಾದ ಗುರು ಸಿಕ್ಕರೆ ಪರಿವರ್ತಿತವಾಗಬಹುದು. ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿ | ಶ್ರೀ ಬೆಟಗೇರಿ ಕೃಷ್ಣ ಶರ್ಮರು ' ಕಳ್ಳರ ಗುರು ' ಎಂಬ ಕಥೆಯೊಂದನ್ನು ಬರೆದಿದ್ದಾರೆ, ಅದರಲ್ಲಿ ಕಳ್ಳ ಹೇಗೆ ರಾತ್ರಿ ದೊಂದಿ ಹೊತ್ತಿಸಿಕೊಂಡು ಬಂದು ವೈದ್ಯರೊಬ್ಬರ ಮನೆಯ ಬಾಗಿಲು ಬಡಿದು ಸಹಾಯಕ್ಕಾಗಿ ಬೇಡುವುದು, ವೈದ್ಯರು ತಮ್ಮ ಕರ್ತವ್ಯಪರತೆಯಿಂದ ಆತ ಕಳ್ಳನೆಂದು ಗೊತ್ತಿದ್ದರೂ ಆತನ ಜೊತೆಗೆ ಹೋಗಿ ಆತನ ಮಗುವನ್ನು ಕಾಯಿಲೆಯಿಂದ ಗುಣಮುಖವಾಗಿಸಿ ಬದುಕಿಸಿದ್ದು, ಮುಂದೆ ಆ ಕಳ್ಳ ತನ್ನ ಸ್ವಭಾವ ತಿದ್ದಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದು --ಇದನ್ನೆಲ್ಲ ಹೇಳಿದ್ದಾರೆ.

ಇವತ್ತಿನ ಸಿರಿಯ-ಸಂಪತ್ತಿನ ಬೆಡಗಿನ ವೈಭೋಗಗಳನ್ನು ಕಂಡು ಮನಸ್ಸು ಶೀಘ್ರ ಅವುಗಳನ್ನೆಲ್ಲ ಉಪಭೋಗಿಸುವ,ಉಪಯೋಗಿಸುವ ಆತುರಕ್ಕೆ ಒಳಗಾಗುತ್ತದೆ. ಅಂತಹ ಆತುರ ಕೆಲವೊಮ್ಮೆ ಮನಸ್ಸನ್ನು wild thinking ಹಚ್ಚುತ್ತದೆ, ಅಲ್ಲಿ ನಾವು ನಮ್ಮತನವನ್ನು ಮರೆತು ಏನೇನೋ ಕನಸುಕಂಡು ಆ ಹುಚ್ಚು ಸಾಹಸಕ್ಕೆ ಅಣಿಯಾಗುತ್ತೇವೆ. ಬೇಡದ ಆ ಸಂಪತ್ತಿಗೆ ಕೈಚಾಚಿ ಹಲವು ನೀತಿಬಾಹಿರ ಚಟುವಟಿಕೆಗಳಿಗೆ ಮನ ಮುಂದಾಗುತ್ತದೆ, ಇದಕ್ಕೆಲ್ಲ ಕಾರಣ overnight riches. ತ್ವರಿತ ಶ್ರೀಮಂತಿಕೆಯ ಬೆನ್ನು ಹತ್ತುವಿಕೆ. ಅವರ ಹತ್ತಿರ ಬಂಗಲೆಯಿದೆ ನನಗೂ ಇರಲಿ, ಅವರ ಹತ್ತಿರ BMW ಕಾರಿದೆ ನನ್ನ ಹತ್ತಿರವೂ ಇರಲಿ, ಅವರ ಮನೆಯಲ್ಲಿ ೫೬" ಎಲ್ ಈ ಡಿ ಟಿವಿ ಇದೆ ನಮ್ಮ ಮನೆಯಲ್ಲೂ ಇರಲಿ ಎಂಬ ಬಯಕೆ, ಅದೂ ನಾಳೆಯೇ ಬೇಕೆಂಬ ಆಸೆ. ಇಂತಹ ಆಸೆಗಳಿಗೆ ಕಡಿವಾಣ ಹಾಕದಿದ್ದರೆ ನಾವು ಯವುದೋ ಒಂದು ಅರ್ಥದಲ್ಲಿ ಕಳ್ಳರಾಗುತ್ತೇವೆ! ಇನ್ನು ಕೆಲವರು ಆಸ್ಪತ್ರೆಯ ಖರ್ಚಿಗಾಗಿ ದುಡ್ಡಿಲ್ಲದೆ, ಎಲ್ಲೂ ಸಾಲವೂ ಸಿಗದೇ ಅನಿವಾರ್ಯತೆಯಲ್ಲಿ ಕಳ್ಳರಾಗುತ್ತಾರೆ-ಅಂಥವರಲ್ಲಿ ನನ್ನ ಪ್ರಾರ್ಥನೆ--ನೀವು ನೇರ ಮಾಧ್ಯಮಗಳಲ್ಲಿ ನಿಮ್ಮ ಅನಿವಾರ್ಯತೆ ತಿಳಿಸಿ ಪ್ರಾರ್ಥಿಸಿ, ನಮ್ಮ ಜನ ಸಹಾಯಮಾಡುತ್ತಾರೆ, ಬದಲಾಗಿ ಕಳ್ಳತನ ಬೇಡ. ಇನ್ನು ಹೆಸರಿಗಾಗಿ ಕಳ್ಳತನ, ಕೃತಿ ಚೌರ್ಯಮಾಡಿಯಾದರೂ ಹೆಸರು ಪಡೆಯಬೇಕೆಂಬ ಉಳ್ಳವರ ಕಳ್ಳತನ,ಆಡಿಯೋ ವೀಡಿಯೋ ಪೈರೆಸಿ ಹೀಗೆ ಹಲವು ವಿಧದ ಕಳ್ಳತನಗಳಿವೆ, ಕಳ್ಳತನಗಳ ಕುರಿತಾಗಿ ಮನಸ್ಸು ಬೇಸರಿಸಿದಾಗ ಹುಟ್ಟಿದ ಕೆಲವು ಚುಟುಕಗಳನ್ನು ಸದ್ಗುರು ಡೀವೀಜಿಯವರನ್ನು ನೆನೆದು ಅವರ ಕಗ್ಗದ ರೀತಿಯಲ್ಲಿ ಬರೆಯಲು ಹೊರಟ ಪ್ರಯತ್ನದ ಕೂಸು ಇದು --



[ಚಿತ್ರ ಋಣ : ಅಂತರ್ಜಾಲ ]

ಕಳ್ಳಮನಕೆ ಬೋಧನೆ

ಕಳ್ಳತನ ಎಂಬುವುದು ಕಳ್ಳಿ ಹಾಲಿನ ರೀತಿ
ಮುಳ್ಳು ಕುಟುಕುತ ಜೀವಹಿಂಸಿಪ ಅನೀತಿ
ಎಳ್ಳು ನೀರನು ಬಿಟ್ಟು ಮರೆನಿನ್ನ ನೋವುಗಳ
ಜೊಳ್ಳು ನೀನಾಗದಿರು | ಜಗದಮಿತ್ರ

ಬೆಳ್ಳಗಿರುವುದು ಎಲ್ಲ ಹಾಲಲ್ಲ ತಿಳಿದಿರಲಿ
ಉಳ್ಳವರಲೂ ಕಳ್ಳ ಬುದ್ಧಿ ತಾನಿಹುದು
ಬೆಳ್ಳಕ್ಕಿ ಕೊಕ್ಕರೆಯ ಬೋಧನೆಯ ಕೇಳುತಲಿ
ಮಳ್ಳುಬೀಳಲು ಬೇಡ | ಜಗದಮಿತ್ರ

ಕಾಸುಕಾಂಚಾಣ ಬೆಳ್ಳಿಬಂಗಾರದೊಡವೆಗಳ
ವಾಸನೆಯ ಹಿಡಿದು ಬೆಂಬಲಿಸುವುದು ಬೇಡ
ವಾಸಿಯಾಗದ ರೋಗ ಅದುಮಾತ್ರ ವಸುಧೆಯೊಳು
ಬೀಸು ದೊಣ್ಣೆಯನದಕೆ | ಜಗದಮಿತ್ರ

ಕಂಡವರ ಮನೆಯ ಸಿರಿ ಕಣ್ತುಂಬಿ ಹಲುಬದಿರು
ಭಂಡಧೈರ್ಯದಿ ನುಗ್ಗಿ ದೋಚಲವುಗಳನು
ಉಂಡಮನೆಗೆರಡು ಬಗೆಯುವ ಯೋಚನೆಯ ಬಿಟ್ಟು
ಗಂಡು ನೀನಾಗಿ ಮೆರೆ | ಜಗದಮಿತ್ರ

ಶೀಘ್ರದಲಿ ಕೈತುಂಬ ತುಂಬಿಕೊಳುವಾಮನದಿ
ವ್ಯಾಘ್ರವೇಷಕೆ ಕೊಡದೆ ಕೆಟ್ಟ ಅವಕಾಶ
ಉಗ್ರನಾಗಿಹ ನಾರಸಿಂಹನನು ನೆನೆಯುತ್ತ
ಜಾಗ್ರತೆಯ ನೀನುಣಿಸು | ಜಗದಮಿತ್ರ

ಹೆಣ್ಣು ಹೊನ್ನು ಮಣ್ಣು ಮೂರು ವಿಷಯಗಳಲ್ಲಿ
ಕಣ್ತಪ್ಪಿ ಬೀಳದಿರು ಆಳ ಕಮರಿಯಲಿ
ಉಣ್ಣು ನಿನಗಿರುವಷ್ಟು ಸಣ್ಣವನು ನೀನಲ್ಲ !
ಕಣ್ಣು ಕೈಯ್ಯೊಳಗಿರಲಿ | ಜಗದಮಿತ್ರ

ಒಳ್ಳೆತನವಿರೆ ದೈವ ಕೊಡುವುದದು ನಿನಪಾಲು
ಸುಳ್ಳುಹೇಳುತ ಕರೆಯದಿರು ಸಂಪದವನು
ಪೊಳ್ಳುಮನಕೀ ಬೋಧೆ ತುಂಬು ನೀ ಕಲಿಸುತ್ತ
ಮುಳ್ಳುಗಳ ಹೊರತೆಗೆಯೋ | ಜಗದಮಿತ್ರ

Sunday, April 4, 2010

ಕನ್ನಡಮ್ಮನ ಕೈತುತ್ತು ನೆನೆದು

ಆಗಾಗ ನಾವು ಮಾಡಬೇಕಾದ ಕರ್ತವ್ಯಗಳಲ್ಲಿ ಕನ್ನಡಮ್ಮನ ನೆನಪೂ ಒಂದು. ನಮ್ಮಿಂದ ಏನನ್ನೂ ಕೇಳದ ತಾಯಿ ನಮಗೆಲ್ಲವನ್ನೂ ಕೊಡುತ್ತಲೇ ಇರುತ್ತಾಳೆ. ತಾಯಿಗೆ ತನ್ನ ಮಗಿವಿನ ಮೇಲೆ ಅದಮ್ಯ ಆಸೆ, ಬಿಟ್ಟಿರಲಾರದ ಪ್ರೀತಿ, ನಿರ್ವ್ಯಾಜ-ನಿಷ್ಕಳಂಕ ಹೊಕ್ಕುಳ ಬಳ್ಳಿಯ ಮೋಹದ ಹರಹು. ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ, ಒಮ್ಮೆ ಹೆತ್ತಮೇಲೆ ಅದು 100 % RECORDED IN MIND ! ಮಗು ಕುಂಟೋ-ಕುರುಡೋ-ಮೂಕವೋ-ಬುದ್ಧಿಮಾಂದ್ಯವೋ ಅದಕ್ಕಾಗಿ ಮಗುವನ್ನು ತೊರೆಯುವುದಿಲ್ಲ. ಎಷ್ಟೋ ಮಕ್ಕಳು ಪೋಲಿಯೋ ಆಗಿ ಬಳಲುತ್ತಿದ್ದರೂ ತಾಯಿ ತಾನು ಮುದುಕಾಗಿ ದೇಹ ಬಿಡುವವರೆಗೂ ಪ್ರೀತಿಯಿಂದ ಪೊರೆದಿದ್ದನ್ನು, ಹೊತ್ತು ಹೊತ್ತಿಗೆ ಅವರ ಬೇಕುಬೇಡಗಳನ್ನು ಕೇಳಿ ತಿಳಿದು ಪೂರೈಸಿದ್ದನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಇಂತಹ ಅಮ್ಮ ತನಗೇ ಹಸಿವಿದ್ದರೂ, ಆರೋಗ್ಯ ಕೆಟ್ಟಿದ್ದರೂ ತನ್ನ ಮಗು ಮಾತ್ರ ಉಂಡುಟ್ಟು ಸುಖವಾಗಿರಲಿ ಎಂದು ಬಯಸುತ್ತಾಳೆ,ಹಾರೈಸುತ್ತಾಳೆ, ಹರಸುತ್ತಾಳೆ , ತನ್ನಿಂದ ಆಗುವ ಸರ್ವ ಪ್ರಯತ್ನ ಮಾಡುತ್ತಾಳೆ. ಮಗು ದೊಡ್ಡದಾಗಿ ೫೦ ವರ್ಷವಾದರೂ ತಾಯಿಗೆ ಇನ್ನೂ ಅದು ಮಗುವೇ ! ಆ ಹಸಿ ಹಸಿ ಪ್ರೀತಿಯನ್ನು ಅವಳು ತೊಡೆದುಹಾಕುವುದೇ ಇಲ್ಲ. ಇಂತಹದೇ ಪ್ರೀತಿ ನಮ್ಮ ಕನ್ನಡಮ್ಮನದು, ಅಲ್ಲಿ ಹೇಳಲು ಬಾಯಿಲ್ಲ, ಹರಸಲು ಕಾಣುವ ಕೈಯಿಲ್ಲ, ಆದರೆ ಎಲ್ಲವೂ ಅವ್ಯಕ್ತ, ಆ ಅವ್ಯಕ್ತದಲ್ಲೇ ಆನಂದ ಕೊಡುವ ಪರಿ ಅದ್ಭುತ, ಶಾಶ್ವತ, ಚಿರಂತನ, ಚಿರನೂತನ. ಅಂತಹ ಹೆತ್ತ ಕನ್ನಡಮ್ಮ ಕೊಡುತ್ತಿರುವ ಕೈತುತ್ತನ್ನು ನೆನೆಸಿ ಬರೆದೆ, ನಿಮಗರ್ಪಿಸಿದೆ ಇಗೋ ಸ್ವೀಕರಿಸಿ ಈ ಹಾಡು--




ಕನ್ನಡಮ್ಮನ ಕೈತುತ್ತು ನೆನೆದು


ಕನ್ನಡ ಜನತೆಯ ಮನವನು ತಣಿಸಲು
ನನ್ನಾಸೆಯ ಕೃತಿ ಬರೆದಿಹೆನು
ಮುನ್ನಡೆಸಿರಿ ನೀವ್ ಬಂಧುಗಳೆಲ್ಲರು
ಉನ್ನತ ದಿನವನು ಬಯಸಿಹೆನು

ರನ್ನ ಷಡಕ್ಷರಿ ಪಂಪ ಹರಿಹರರು
ಕಣ್ಣತೆರೆಸಿದರು ಅಂದಿನಲಿ
ಜನ್ನ ಲಕುಮಿಪತಿ ಪೊನ್ನ ಮುದ್ದಣರು
ಮುನ್ನ ಬರೆದರದೋ ಪ್ರೀತಿಯಲಿ

ಅನುಕೂಲದಿ ಅರೆಗಳಿಗೆಯ ಎತ್ತಿಡಿ
ಮನೆವಾರ್ತೆಯ ಜೊತೆ ಅನುದಿನವು
ಇನಕುಲೇಂದ್ರನೋಲೈಸುತ ಬೆಳಗಿರಿ
ಮನುಕುಲಕಾಗುವ ಸುಪಥವನು

ಅನ್ನವೀಯುತಲಿ ಪೊರೆದೀ ಕನ್ನಡ
ಅನ್ಯ ಭಾಷೆಗಿಂತಲು ಮಿಗಿಲು
ಮಾನ್ಯಮಾಡಿ ನಿಮ್ಮೆದೆಗೂಡಲಿ ತುಸು
ನನ್ನೀ ಅಮ್ಮನ ಸುಖಮಡಿಲು

ವನರಾಶಿಯ ಸಹ್ಯಾದ್ರಿಯ ಶ್ರೇಣಿಯ
ಘನ ಖನಿಜದ ನಿಕ್ಷೇಪಗಳ
ಅನವರತವು ಕಾಪಿಡಿ ಕೊಲೆಗೈಯ್ಯದೆ
ಜನಕೀಯಲಿ ಸುಖ ಭೋಗಗಳ

ಕನವರಿಸಿದೆ ನಾ ಮುಂದಿನ ದಿನಗಳ
ಧನ-ಕನಕೇತರ ಕಣಜಗಳ
ಕೆನೆ ಹಾಲ್ಮೊಸರು ತುಪ್ಪ ಜೇನುಗಳ
ಕೊನೆಯಿರದಿರಲೀ ಊಟಗಳ

ಜನಸಂಪದವದು ಹರುಷದಿ ನಲಿಯಲಿ
ಮನದುಂಬುತ ಈ ಕೃತಿಗಳನು
ವನಸಿರಿಯದ ಶಾಶ್ವತವಿಡೆ ಜಗದಲಿ
ಕನಸದು ನನಸೆಂದೆನ್ನುವೆನು

Saturday, April 3, 2010

ಬ್ರೆಕಿಂಗ್ ನ್ಯೂಸ್ !!



ಬ್ರೆಕಿಂಗ್ ನ್ಯೂಸ್

" ಎಲ್ಲಾ ವೀಕ್ಷಕರಿಗೂ ಕಳಪೆ ಟಿವಿ 24 X 7 ಗೆ ಸ್ವಾಗತ, ನಾನು ಸಂಜನಾ,

" ಇವತ್ತಿನ ವಿಶೇಷ ಎಂದರೆ ಇಂದು ಕಳಪೆ ಟಿವಿ ಗೆ ಹತ್ತನೇ ವರ್ಷದ ಹುಟ್ಟಿದ ಹಬ್ಬ, ದೇಶಾದ್ಯಂತ ತನ್ನ ಬ್ರೆಕಿಂಗ್ ನ್ಯೂಸ್ ಮೂಲಕ ಮನೆಮಾತಾಗಿರುವ ಕಳಪೆ ಟಿವಿ ಜನಸಾಮಾನ್ಯರ ನಾಡಿಮಿಡಿತವನ್ನು ಬೆಂಬಲಿಸುತ್ತಾ ಟಿ.ಆರ್.ಪಿ ರೇಟಿನಲ್ಲಿ ಪ್ರಥಮಸ್ಥಾನ ಗಳಿಸಿ ಹಲವು ಕಂಪನಿಗಳ ಜಾಹೀರಾತುಗಳನ್ನು ದಿನವಿಡೀ ಪ್ರಸಾರಿಸುತ್ತಾ ಸಮಾಜದಲ್ಲಿ ಬಹಳ ಸ್ತುತ್ಯಾರ್ಹ ಕಾರ್ಯಕ್ರಮಗಳನ್ನು ಕೊಡುತ್ತಿದೆ, ಇದಕ್ಕಾಗಿ ಈ ಸಲದ ಪದ್ಮ ಪ್ರಶಸ್ತಿಯನ್ನು ಪಡೆಯುವಲ್ಲಿ ಕೂಡ ನಮ್ಮ ಕಳಪೆ ಟಿವಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಹೇಳಲು ಬಹಳ ಸಂತಸವೆನಿಸುತ್ತಿದೆ "

" ಇಂದು ಬೆಳಗಿನ ಜಾವ ಹಾಸಿಗೆಪಾಳ್ಯದಲ್ಲಿ ನಡೆದ ಮನಕಲಕುವ ಘಟನೆಯನ್ನು ತಮಗೆ ತೋರಿಸುತ್ತಿದ್ದೇವೆ ಈ ನೇರಪ್ರಸಾರದಲ್ಲಿ , ಬನ್ನಿ ಹಾಗಾದ್ರೆ ನಮ್ಮ ವರದಿಗಾರ ಪ್ರಾಣೇಶ್ ಈಗ ನಮ್ಮ ಸಂಪರ್ಕದಲ್ಲಿದ್ದಾರೆ ಅವರಜೊತೆ ಅದರ ಬಗ್ಗೆ ತಿಳಿದುಕೊಳ್ಳೋಣ "

" ಪ್ರಾಣೇಶ್ ಹೇಳಿ, ಕೇಳಿಸ್ತಾ ಇದ್ಯಾ ? "

" ಕೇಳಿಸ್ತಾ ಇದೇ ಸಂಜನಾ, ಇಲ್ಲಿ ಮಂಜುನಾಥ್ ಅವರ ಮನೆಯಲ್ಲಿ ಬೆಳಗಿನ ಜಾವ ಹಾಸಿಗೆಯಲ್ಲಿ ಏನೋ ಕಚ್ಚುತ್ತಿದೆ ಎನಿಸಿ ತುರಿಕೆಯಾಗಿ ಎದ್ದು ಲೈಟ್ ಹಾಕಿ ನೋಡಿದ್ದಾರೆ, ನೋಡಿದರೆ ಅತಿದೊಡ್ಡ ತಿಗಣೆ ಹಾಸಿಗೆಯನ್ನು ಬಿಟ್ಟು ಓಡುತ್ತಿತ್ತು , ಅಂತೂ ಹಲವುನಿಮಿಷಗಳ ಕಾಲ ಪ್ರಯತ್ನಿಸಿ ಆ ತಿಗಣೆಯನ್ನು ಹಿಡಿಯುವಲ್ಲಿ ಮಂಜುನಾಥ್ ಯಶಸ್ವಿಯಾಗಿದ್ದಾರೆ ಸಂಜನಾ "

" ನಂತರ ಏನ್ಮಾಡದ್ರು ಪ್ರಾಣೇಶ್ ? ಪ್ರಾಣಿದಯಾಸಂಘದವರಾಗಲೀ ಸರಕಾರದ ಅರಣ್ಯ ಇಲಾಖೆಯ ಅಧಿಕಾರಿಗಳಾಗಲೀ ಭೇಟಿ ನೀಡಿದ್ದಾರಾ ಅಲ್ಲಿಗೆ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿದ್ದ ಮಂಜುನಾಥ್ ಅವರು ತಿಗಣೆಯನ್ನು ಮನೆಯ ಹೊರಗೆ ತಂದು, ವರಾಂಡಾದಲ್ಲಿರುವ ನೆಲದಮೇಲಿಟ್ಟು ಕಲ್ಲಿನಿಂದ ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಇನ್ನು ಅದರ ಬಗ್ಗೆ ತನಿಕೆಯಾಗಬೇಕಷ್ಟೇ "

" ತುಂಬಾ ಜನ ಸೇರಿದ್ದಾರಾ ಅಲ್ಲಿ ? "

"ಹೌದು, ಮೊದಲು ಮಂಜುನಾಥ್ ಅವರ ಕೋಪದ ಕೂಗನ್ನು ಕೇಳಿ ಅಕ್ಕ-ಪಕ್ಕದವರೆಲ್ಲ ಬಂದರು, ಆಮೇಲೆ ಏನೋ ಗಲಾಟೆ ಅಂತ ರಸ್ತೆಯಲ್ಲಿ ಹೋಗುತ್ತಿರುವವರೆಲ್ಲಾ ನೋಡಲು ಬರುತ್ತಿದ್ದಾರೆ, ಒಟ್ನಲ್ಲಿ ಈಗಾಗಲೇ ಸಾವಿರಾರು ಜನ ಬಂದು ಹೋಗಿದ್ದಾರೆ, ಮಂಜುನಾಥ್ ಅವರ ಕೋಪ ಇನ್ನೂ ಇಳಿದಿಲ್ಲ"

" ಮಂಜುನಾಥ್ ಅವರಿಗೆ ಮೈಕ್ ಕೊಟ್ಟು ಮಾತನಾಡಿಸಲು ಸಾಧ್ಯವಾಗಬಹುದಾ ಪ್ರಾಣೇಶ್ ? "

" ಇಲ್ಲ ಸಂಜನಾ, ಬಹಳ ಕೋಪದಲ್ಲಿರುವ ಅವರು ಏನನ್ನಾದರೂ ಕೇಳಿದರೆ ಹೊಡೆಯೋದಕ್ಕೆ ಬರುತ್ತಾರೆ, ಹೀಗಾಗಿ ತಕ್ಷಣಕ್ಕೆ ಅದು ಸಾಧ್ಯವಾಗುತ್ತಿಲ್ಲ, ಆಮೇಲೆ ಸ್ವಲ್ಪ ಪರಿಸ್ಥಿತಿ ತಣ್ಣಗಾದಮೇಲೆ ಪ್ರಯತ್ನಿಸಬಹುದು ಅಷ್ಟೇ "

" ವೀಕ್ಷಕರೇ ನೀವೀಗ ಟಿ.ವಿ ಪರದೆಯ ಮೇಲೆ ನೋಡುತ್ತಿರುವ ಕೆಂಪು ಬಣ್ಣದ ಜಾಗವೇ ತಿಗಣೆಯನ್ನು ಹೊಸಕಿಹಾಕಿರುವ ಜಾಗ, ಕೋಪದಲ್ಲಿದ್ದ ಮಂಜುನಾಥ್ ಅವರು ಹೇಳದೆ ಕೇಳದೆ ತಿಗಣೆಯನ್ನು ಜಜ್ಜಿ ಸಾಯಿಸಿಬಿಟ್ಟಿದ್ದಾರೆ, ಜಾಗೃತ ದಳಗಳು, ಪೊಲೀಸರು, ಸಂಬಂಧಪಟ್ಟ ಇಲಾಖೆಗಳವರು ಇನ್ನೂ ಬರುವುದರಲ್ಲಿದ್ದಾರೆ, ಬಹುಶಃ ಇಂದು ಸಾಯಂಕಾಲದ ಹೊತ್ತಿಗೆ ಪರಿಸ್ಥಿತಿ ಏನು ಎಂದು ಅರ್ಥವಾಗಬಹುದು "

" ಬನ್ನಿ ವೀಕ್ಷಕರೆ ಈ ವಿಷಯದ ಬಗ್ಗೆ ಮಾತನಾಡಲು ನಮ್ಮ ಸ್ಟುಡಿಯೋಗೆ ಇಂದು ಖ್ಯಾತ ಪರಿಸರವಾದಿ ಗುಣಪ್ಪರವರು ಮತ್ತು ತಿಗಣೆ ವಂಶಾಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಮಾನ್ಯ ತೊನ್ನುಪರಮೇಶಪ್ಪರವರು ಬಂದಿದ್ದಾರೆ ಅವರ ಜೊತೆ ಚರ್ಚೆಮಾಡೋಣ, ಮಾನ್ಯ ಗುಣಪ್ಪರವರೇ ತಮಗೆ ಕಳಪೆ ಟಿವಿ ಗೆ ಸ್ವಾಗತ "

" ನಮಸ್ಕಾರ"


" ಮಾನ್ಯ ತೊನ್ನು ಪರಮೇಶಪ್ಪರವರೇ ತಮಗೂ ಕೂಡ ಕಳಪೆ ಟಿವಿಗೆ ಆತ್ಮೀಯ ಸ್ವಾಗತ "

" ನಮಸ್ಕಾರ "

" ಗುಣಪ್ಪರವರೇ ಈಗ ತಮಗೊಂದು ಪ್ರಶ್ನೆ --ಇತ್ತೀಚಿನ ವರದಿಗಳ ಪ್ರಕಾರ ತಿಗಣೆಯ ಸಂತತಿ ನಶಿಸಿ ಹೋಗುತ್ತಿದೆ ಎನ್ನಲಾಗುತ್ತಿದೆ, ಇದು ನಿಜವೇ ? "

" ಮೊದಲನೆಯದಾಗಿ ತಿಗಣೆ ಎಂದರೆ ಅದು ಗೋಮಾತೆಗೆ ಸಮ, ಯಾಕೆಂದರೆ ನಿದ್ದೆ ಅತಿರೇಕವಾಗಿ ನಾವು ತುಂಬಾ ಆಲಸಿಯಾಗಿ ಹೊದ್ದು ಮಲಗೇ ಇದ್ದಾಗ ಅದು ಬಂದು ಎಚ್ಚರಿಸದಿದ್ದರೆ ಹೊರಗೆ ಲೋಕದಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ, ಹೀಗಾಗಿ ಅಂತಹ ಆಪತ್ಕಾಲದಲ್ಲೂ ಎಬ್ಬಿಸಿ ಸಹಾಯಮಾಡುವ ತಿಗಣೆಯನ್ನು ' ಜಾಗೃತಜನ ಮಿತ್ರ ' ಎಂದು ಗೌರವಿಸಬೇಕಾದ್ದು ನಮ್ಮ ಕರ್ತವ್ಯ "


" ನೀವೇನಂತೀರಿ ಪರಮೇಶಪ್ಪ ? "


" ಈಗ ಗುಣಪ್ಪನವರು ಹೇಳಿದ್ದು ಸರಿಯೇ ಇದೆ, ತಿಗಣೆಯಲ್ಲಿ ಎಷ್ಟು ವಿಧ ಮತ್ತು ಅವುಗಳ ರಕ್ಷಣೆ ಮುಂದೆ ಹೇಗೆ ಎಂಬ ಬಗ್ಗೆ ತಮಗೆ ಗೊತ್ತಿರಬಹುದು ನಾನೀಗಾಗ್ಲೇ ಸಂಶೋಧನೆ ನಡೆಸಿದ್ದೇನೆ, ಇದು ನನಗೆ ಹೊಳೆದಿದ್ದು ಹಳೆಯ ನಮ್ಮ ಮನೆಯಲ್ಲಿ, ತಾತನ ಕಾಲದ ಹತ್ತಿ ದಿಂಬು ಉಪಯೋಗಿಸುತ್ತಿದ್ದಾಗ ! ಅಲ್ಲಿ ಅನೇಕಥರದ ಉದ್ದನೆಯ ,ಅಗಲದ, ಸಣ್ಣ, ದೊಡ್ಡ ಹೀಗೆ ಹಲವಾರು ಸೈಜಿನ ತಿಗಣೆಗಳು ಲಭ್ಯವಿವೆ, ಇನ್ನೂ ಹುಡುಕುತ್ತಲೇ ಇದ್ದೇನೆ. ತಾತ ಈಗ ಇರದ ಕಾರಣ ತಿಗಣೆಗಳ ಮೂಲ ಸಿಗುತ್ತಿಲ್ಲ, ಅವರಿದ್ದರೆ ಬಹಳಷ್ಟು ಮಾಹಿತಿ ಪಡೆಯಬಹುದಿತ್ತು "

" ವೀಕ್ಷಕರೇ, ಈಗ ನಮ್ಮೊಂದಿಗೆ ಚರ್ಚೆಗೆ ಇನ್ನೊಬ್ಬ ಧೀಮಂತ ವ್ಯಕ್ತಿ ಸೇರಿಕೊಳ್ಳಲಿದ್ದಾರೆ, ಮೈಪರಚಿಕೋನಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಮೇರಿಕಾದ ವಾಶಿಂಗ್ ಟನ್ ಡಿ.ಸಿ ಯಲ್ಲಿ ಉನ್ನತ ವ್ಯಾಸಂಗ ಪೂರೈಸಿ ಮರಳಿ ಭಾರತಕ್ಕೆ ಬಂದು ದೇಶಾದ್ಯಂತ 'ಜನಸೇವೆಗೆಂದು' ಬ್ರಾಂಚ್ ಹೊಂದಿರುವ ಟಿವಿ ಇಂಟರ್ನ್ಯಾಷನಲ್ ಹೆಲ್ತ್ ಕೇರ್ ಲಿಮಿಟೆಡ್ ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಟಿವಿ ಗಂಗಣ್ಣ [ತಿಗಣೆ ವಿರೋಧಕ ಗಂಗಣ್ಣ ಇರಬಹುದೇ ? ] ಬಂದಿದ್ದಾರೆ, ಅವರಿಂದ ತಿಗಣೆ ಕಚ್ಚಿದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ, ಮಾನ್ಯ ಡಾ|ಟಿವಿ ಗಂಗಣ್ಣರವರಿಗೆ ಸ್ವಾಗತ "


"ನಮಸ್ಕಾರ "


"ಡಾಕ್ಟರೇ, ಹೇಳಿ ತಿಗಣೆ ಕಚ್ಚಿದರೆ ಒಳ್ಳೆಯದೋ ಕೆಟ್ಟದ್ದೋ, ಅದರ ಪರಿಣಾಮಗಳೇನು ? "

" ತಿಗಣೆ ಕಚ್ಚಿದ್ದು ತುಂಬಾನೇ ಹಾಳು, ತಿಗಣೆಗಳನ್ನು ಹಲವು ಕಾಲದಿಂದ ಕಚ್ಚಿಸಿಕೊಳ್ಳುತ್ತಿರುವವರು ಸರಿಯಾದ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ತಪಾಸಣೆಮಾಡಿಸಿಕೊಳ್ಳಬೇಕು. ತಿಗಣೆಗಳು ಅನೇಕ ರೋಗಗಳನ್ನೂ ಹರಡುವ ಸಾಧ್ಯತೆಯನ್ನು ಅಮೇರಿಕಾದ ವಿಜ್ಞಾನಿಗಳು ಅಲ್ಲಗಳೆಯುತ್ತಿಲ್ಲ. ನಾನು ತಿಳಿದಮಟ್ಟಿಗೆ ತಿಗಣೆ ಕಚ್ಚಿದವರಿಗೆ ನಮ್ಮ ಹೆಲ್ತ್ ಕೇರ್ ಥರದ ಆಸ್ಪತ್ರೆಗಳಲ್ಲಿ ಸಂಪೂರ್ಣ ಸಿ.ಟಿ.ಸ್ಕ್ಯಾನಿಂಗ್ ಮಾಡಿ, ಬ್ಲಡ್ ಮತ್ತು ಯುರಿನ್ ಟೆಸ್ಟ್ ಮಾಡಿಸಿ, ಎಲ್ಲಕ್ಕೂ ಮಿಗಿಲಾಗಿ ಎಂ ಆರ್ ಆಯ್ ಸ್ಕ್ಯಾನಿಂಗ್ ಮಾಡಿಸಿಕೊಂಡ ಬಳಿಕವಷ್ಟೇ ಅವರ ದೇಹಸ್ಥಿತಿ ಯಾವ ಹಂತದಲ್ಲಿದೆ ಎಂದು ತೀರ್ಮಾನಕ್ಕೆ ಬರಲು ಸಾಧ್ಯ "

" ಅಲ್ಲ ಡಾಕ್ಟರೇ, ಆಸ್ಪತ್ರೆಗಳಲ್ಲಿ ಇದಕ್ಕೆಲ್ಲ ತುಂಬಾ ಖರ್ಚಾಗುತ್ತದಲ್ಲವೇ ? ಜನಸಾಮಾನ್ಯರಿಗೆ ಇದು ಹೊರೆಯಾಗುವುದಿಲ್ಲವೇ ಅಂತ ? "


" ಇಲ್ಲ, ಉನ್ನತ ವ್ಯಾಸಂಗವನ್ನು ಅಮೆರಿಕಾದಂತಹ ದೇಶಗಳಲ್ಲಿ ಪೂರೈಸಿ ಇಲ್ಲಿ ಇಷ್ಟು ಕಡಿಮೆ ಖರ್ಚಿನಲ್ಲಿ
ಶುಶ್ರೂಷೆಯನ್ನು ಒದಗಿಸಿಕೊಡುತ್ತಿರುವುದೇ ಒಂದು ದೊಡ್ಡ ಕೆಲಸ ! ಹೀಗಾಗಿ ಕಡಿಮೆ ವೆಚ್ಚದಲ್ಲಿ ಆಗಬೇಕೆನ್ನುವವರು ಇಂಡಿಯನ್ ಆಯುರ್ವೇದ ಕ್ಕೆ ಮೊರೆಹೋಗಲಿ ಏನೂ ಕೆಲಸಕ್ಕೆ ಬಾರದ ಆ ಪದ್ಧತಿ ಇತ್ತೀಚೆಗೆ ಬರೇ ಹೆಸರು ಮಾಡಿದೆ, ಹೀಗಾಗಿ ಜನರ ಮನಸ್ಸಿಗಾದರೂ ನೆಮ್ಮದಿ ಸಿಗಬಹುದು, ಒಳ್ಳೆಯ ಟ್ರೀಟ್ ಮೆಂಟ್ ಸಿಗಬೇಕೆಂದು ಬಯಸುವವರು ನಮ್ಮಂಥ ಆಯ್ ಎಸ್ ಓ ಸರ್ಟಿಫೈಡ್ ಆಸ್ಪತ್ರೆಗಳಿಗೆ ಬರುತ್ತಾರೆ, ಸ್ವಲ್ಪ ಹೆಚ್ಚೋ-ಕಮ್ಮಿಯೋ ಎಲ್ಲ ಸೌಲಭ್ಯ ಒಂದೇ ಕಡೆ ಪಡೆದು ಸಂಪೂರ್ಣ ಗುಣಮುಖರಾಗುತ್ತಾರೆ "

" ಆಯುರ್ವೇದ ಬಹಳ ಉನ್ನತವಾಗಿದೆ, ದೇಹದಲ್ಲಿ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ ಎಂದು ಹೇಳುತ್ತಾರೆ , ತಾವೇನೆನ್ನುತ್ತೀರಿ ಇದಕ್ಕೆ ? "


" ಆಯುರ್ವೇದ ಅನ್ನುವುದು ಅಳಲೇಕಾಯಿ ಪಂಡಿತರ ಪದ್ಧತಿ, ನಮ್ಮ ಅಲೋಪಥಿಯ ಹಾಗೆ ಅದಕ್ಕೆ ಬಹಳ ರೀತಿಯ ಪುಸ್ತಕಗಳಾಗಲೀ ಪರಿಕರಗಳಾಗಲೀ ಇಲ್ಲ, ಹೀಗಾಗಿ ಅದರ ಬಗ್ಗೆ ನಾನು ಹೇಳಲು ಇಷ್ಟಪಡುವುದಿಲ್ಲ "

" ಅಂತೂ ಭಾರತೀಯ ಆಯುರ್ವೇದ ಏನೂ ಪ್ರಯೋಜನವಿಲ್ಲ ಎಂಬ ಅಭಿಪ್ರಾಯ ತಮ್ಮದು, ಇರಲಿ, ವೀಕ್ಷಕರೆ ನಾವೀಗ ಒಂದು ಚಿಕ್ಕ ವಿರಾಮ ತೆಗೆದುಕೊಳ್ಳೋಣ, ಮತ್ತೆ ನಮ್ಮ ಚರ್ಚೆಯನ್ನು ಮುಂದುವರಿಸೋಣ ವಿರಾಮದ ನಂತರ, ಸೋ ಲೆಟ್ಸ್ ಟೇಕ್ ಅ ಸ್ಮಾಲ್ ಬ್ರೇಕ್ "

Friday, April 2, 2010

ದೀಪಂ ದೇವ ದಯಾನಿಧೇ-೨



ದೀಪಂ ದೇವ ದಯಾನಿಧೇ-
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೨ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||


ಶ್ರೀ ಆದಿಶಂಕರರು ಚಿಕ್ಕ ಬಾಲಕನಾಗಿದ್ದಾಗ ಅವರ ತಂದೆ ದಿನಾಲೂ ಹತ್ತಿರವಿರುವ ಒಂದು ಅಮ್ಮನವರ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದರು. ದಿನವೂ ಒಂದಷ್ಟು ಹಾಲನ್ನು ತೆಗೆದುಕೊಂಡು ಹೋಗಿ ಅದರಿಂದ ಅಭಿಷೇಕ ಮಾಡಿ, ಸ್ವಲ್ಪ ಉಳಿಸಿಕೊಂಡು ಮರಳಿ ಮನೆಗೆ ಬಂದಾಗ ದೇವಿಯ ಪ್ರಸಾದವೆಂದು ಅದನ್ನು ಶಂಕರರಿಗೆ ಕುಡಿಯಲು ಕೊಡುತ್ತಿದ್ದರು. ಶಂಕರರು ಯಾಕೆ ಇದನ್ನು ತರುತ್ತೀರಿ ವಿಚಾರಿಸಿದಾಗ ದೇವಿ ಹಾಲನ್ನು ತಾನು ಕುಡಿದು ಸ್ವಲ್ಪವನ್ನು ಪ್ರಸಾದವಾಗಿ ಕೊಂಡೊಯ್ಯಲು ಹೇಳುತ್ತಾಳೆ ಎಂದು ಶಂಕರನಿಗೆ ಹೇಳಿದರು. ಕೆಲವು ಸಮಯದ ನಂತರ ಕಾರ್ಯನಿಮಿತ್ತ ಕೆಲದಿನಗಳಕಾಲ ದೂರದ ಊರಿಗೆ ಪ್ರಯಾಣ ಮಾಡಬೇಕಾಗಿ ಬಂತು. ಆಗ ಅವರು ದೇವೀಪೂಜೆಯನ್ನು ಹೆಂಡತಿಗೆ ವಹಿಸಿ ಹೋದರು. ಶಂಕರರ ಅಮ್ಮ ದಿನವೂ ಗುಡಿಗೆ ಹೋಗಿ ಎಂದಿನಂತೆ ಪೂಜೆಯನ್ನು ನಡೆಸಿಕೊಂಡಿದ್ದರು ಮತ್ತು ಹಾಲನ್ನು ತಂದು ಮಗನಿಗೆ ಕೊಡುತ್ತಿದ್ದರು, ಇದರಲ್ಲಿ ಏನೂ ಬದಲಾವಣೆ ಇರಲಿಲ್ಲ. ಒಂದುದಿನ ಶಂಕರರ ತಾಯಿ ಋತುಮತಿಯಾಗಿರುತ್ತ ಪೂಜೆಯನ್ನು ಮಾಡಲಾರದಾದರು. ಬಾಲಕ ಶಂಕರನಿಗೆ ಪೂಜೆ ಮಾಡಿಕೊಂಡು ಬರುವಂತೆ ಹೇಳಿದರು. ಎಷ್ಟಿದ್ದರೂ ಚಿಕ್ಕ ಮುಗ್ಧ ಮುದ್ದು ಬಾಲಕ ಶಂಕರ ತಾಯಿಯ ಆಜ್ಞೆಯೂ ಮತ್ತು ತನ್ನ ಇಷ್ಟವೂ ಎರಡೂ ಪೂರೈಸಿತೆಂದು ಹಾಲು ತೆಗೆದುಕೊಂಡು ಪೂಜೆಗೆ ಹೋದರು. ಪೂಜೆ ಮುಗಿಯಿತು.
ಎದುರಿನ ಪಾತ್ರೆಯಲ್ಲಿ ಹಾಲುಮಾತ್ರ ಹಾಗೇ ಉಳಿದಿತ್ತು ! ಶಂಕರರು ಪ್ರಾರ್ಥಿಸಿದರೂ ಪ್ರಯೋಜನವಾಗಲಿಲ್ಲ. ತನ್ನ ಪೂಜೆಯಲ್ಲಿ ಏನೋ ದೋಷವಿರಬೇಕೆಂದು ಶಂಕರರು ಜೋರಾಗಿ ಅಳಲು ಪ್ರಾರಂಭಿಸಿದರು.

ಇದನ್ನು ಕಂಡ ದೇವಿ ಹಾಲನ್ನು ಪೂರ್ತಿಯಾಗಿ ಕುಡಿದುಬಿಟ್ಟಳು ! ಬಾಲಕ ಅಳು ನಿಲ್ಲಿಸಿ ಪಾತ್ರೆ ನೋಡಿದಾಗ ತೊಟ್ಟು ಹಾಲು ಕೂಡ ಇರಲಿಲ್ಲ. ಅಯ್ಯೋ ಇದೇನು ಬಂತು ನನಗೆ ದೇವಿ ಪ್ರಸಾದದ ಹಾಲು ಕೊಡುತ್ತಿಲ್ಲವಲ್ಲ ಎಂದುಕೊಳ್ಳುತ್ತಾ ಮತ್ತೆ ಅಳುವುದಕ್ಕೆ ಪ್ರಾರಂಭಿಸಿದರು ಶಂಕರರು. ಆಗ ಒಂದು ಘಟನೆ ಸಂಭವಿಸಿತು. ಶಂಕರರ ಮುಗ್ದ ಪ್ರೀತಿಗೆ,ಭಕ್ತಿಗೆ,ಪೂಜೆಗೆ ಮನಸೋತ ದೇವಿ ಪ್ರತ್ಯಕ್ಷಳಾಗಿ, ಶಂಕರರನ್ನು ಹಸುಳೆಯಂತಾಗಿ ಮಾಡಿ ಎತ್ತಿಕೊಂಡು ಸ್ತನ್ಯಪಾನ ಮಾಡಿಸಿದಳು. ಸ್ವಲ್ಪ ಹೊತ್ತಿನ ಬಳಿಕ ಶಂಕರನ್ನು ಮುದ್ದಾಡಿ ಪುನಃ ಮೊದಲಿನ ಬಾಲಕ ರೂಪಕ್ಕೆ ತಂದಿತ್ತಳು. ಬಾಲಕ ಶಂಕರ ದೇವಿಯ ಈ ದಿವ್ಯ ಪ್ರಸಾದದಿಂದ ಅತಿವಿಶಿಷ್ಟ ಜ್ಞಾನವನ್ನು ಪಡೆದರು. ಅವರ ಬಾಯಿಂದ ಆಗ ಹುಟ್ಟಿದ ಸ್ತೋತ್ರವೇ ' ಸೌಂದರ್ಯ ಲಹರೀ ' .

ಇತ್ತ ಊರಿಗೆ ತೆರಳಿದ್ದ ಶಿವಗುರು [ಶಂಕರರ ತಂದೆ] ಮರಳಿ ಬಂದರು. ಶಂಕರರ ವಿಷಯವಾಗಿ ಮಾತನಾಡುತ್ತ ತಿಳಿದಾಗ ಅವರಿಗೆ ಅದ್ಭುತವೂ,ಆಶ್ಚರ್ಯವೂ ಆಯಿತು. ಸೌಂದರ್ಯ ಲಹರಿಯ ಒಂದೊಂದೂ ಶ್ಲೋಕಗಳು ದೇವಿಯ ವಿವಿಧ ರೂಪ ವಿಶೇಷಗಳನ್ನು ಬಣ್ಣಿಸುತ್ತವೆ. ಮತ್ತು ಒಂದೊಂದೂ ಶ್ಲೋಕದ ಅನುಷ್ಠಾನದಿಂದ ಇಂತಿಂತದೇ ಫಲವನ್ನು ಪಡೆಯಬಹುದೆಂದು ವ್ಯಾಖ್ಯಾನಿಸಿ ತಿಳಿಸಿದರು. 100 ಶ್ಲೋಕಗಳುಳ್ಳ ಸೌಂದರ್ಯಲಹರೀ ಒಂದು ವಿಶಿಷ್ಟ ಸಾತ್ವಿಕ ಉಪಾಸನಾ ವಿಧಾನ. ಪ್ರಸಕ್ತ ಎಲ್ಲರ ಒಳಿತನ್ನು ಬಯಸಿ ದೇವಿಯ ವಿದ್ಯಾಲಕ್ಷ್ಮೀ ಸರಸ್ವತೀ ರೂಪವನ್ನು ಧ್ಯಾನಿಸುವ ಮೂರನೇ ಶ್ಲೋಕವನ್ನು ಇಲ್ಲಿ ಕೊಡುತ್ತಿದ್ದೇನೆ--

ಅವಿದ್ಯಾನಾಮಂತಸ್ತಿಮಿರ ಮಿಹಿರದ್ವೀಪನಗರೀ
ಜಡಾನಾಂ ಚೈತನ್ಯಸ್ತಬಕಮಕರಂದಸ್ರುತಿಝರೀ |
ದರಿದ್ರಾಣಾಂ ಚಿಂತಾಮಣಿಗುಣನಿಕಾ ಜನ್ಮ ಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪುವರಾಹಸ್ಯ ಭವತಿ ||

ಮಥಿತಾರ್ಥ-
ಅಜ್ಞಾನಿಗಳ ಅಂತಃಕರಣದಲ್ಲಿರುವ ಅವಿದ್ಯೆಯೆಂಬ ಕತ್ತಲೆಗೆ ಸೂರ್ಯೋದಯದಂತೆ, ಸಮುದ್ರ ಮಧ್ಯದಲ್ಲಿದ್ದ ಶುಭ್ರನಗರದಂತೆ, ಮಂದಬುದ್ಧಿಗಳಿಗೆ ಜ್ಞಾನವೆಂಬ ಹೂಗೊಂಚಲ ಮಧುರಸದಂತೆ, ದರಿದ್ರರಿಗೆ ಬೇಡಿದ್ದನ್ನು ಕೊಡುವಂತಹ ಚಿಂತಾಮಣಿಯಂತೆ ಇರುವ ಈ ಪಾದರೇಣುವು ಸಂಸಾರದಲ್ಲಿ ಮುಳುಗಿದವರಿಗೆ ಮುರಾರಿಯಾದ ಮಹಾವಿಷ್ಣುವಿನ ವರಾಹರೂಪದ ಕೋರೆದಾಡೆಗಳಂತೆ ಉದ್ಧಾರಕವಾಗಿದೆ.

ಶ್ಲೋಕವನ್ನು ನಿತ್ಯವೂ ಸ್ನಾನಾದಿ ಶುದ್ಧೀಕರಣ ಮಾಡಿಕೊಂಡು, ಸಾಧ್ಯವಾದರೆ ಏನನ್ನಾದರೂ [ವಿಶೇಷವಾಗಿ ಉದ್ದಿನವಡೆಯನ್ನು] ನೈವೇದ್ಯವಾಗಿಟ್ಟು, ಅನೇಕಸಾರಿ ಶ್ರದ್ಧಾಭಕ್ತಿಯಿಂದ ಪಠಿಸಿದರೆ, ವಿದ್ಯೆಯೂ, ಐಶ್ವರ್ಯವೂ ಲಭಿಸುತ್ತದೆಂದು ಶಂಕರರು ಹೇಳಿದ್ದಾರೆ.

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

Thursday, April 1, 2010

ನಶ್ವರದಲ್ಲಿರುವ ಶಾಶ್ವತ ನಾದ

ಶ್ರೀ ಆದಿ ಶಂಕರರು ' ಅಯಿಗಿರಿ ನಂದಿನಿ ' ಅಂತ ಅಮ್ಮನವರನ್ನು ಕಂಡು ಹಾಡಿ ನುತಿಸಿದರು. ಅದೇ ದಾಟಿಯಲ್ಲಿ ಬೇರೆ ಅರ್ಥದಲ್ಲಿ ಒಂದು ಹಾಡು ಬರೆಯುವ ಹೀಗೊಂದು ಪ್ರಯತ್ನ ನಡೆಯಿತು. ಪ್ರಕೃತಿಯಲ್ಲಿ ಒಂದು ಅಘೋಷಿತ ನಡೆಯಿದೆ, ಅಲ್ಲಿ ದೈವ ನಿರ್ಮಿತ ಪಂಚಭೂತಗಳ ವಿಲಂಬಿತ ಮತ್ತು ಶಾಶ್ವತ ಒಂದು ನಾದವಿದೆ. ಅದನ್ನು ಆಸ್ವಾದಿಸಲೇ ನಮಗೆ ಬಿಡುವೆಲ್ಲಿದೆ ? big bang ಅಂದರೆ ಕಿವಿ ನಿಮಿರುತ್ತದೆ ನಮಗೆ, ಆದರೆ ನಮ್ಮ ವೇದ-ಶಾಸ್ತ್ರಗಳು ತಮ್ಮ ಬೆಳಕಿಂಡಿಯಿಂದ ನಮಗೆ ಎತ್ತಿ ಕೊಡುತ್ತಿದ್ದರೆ ನಾವು ಬಾಲಿಶರಾಗುತ್ತೇವೆ; ಪೂರ್ವಾಗ್ರಹ ಪೀಡಿತರಾಗುತ್ತೇವೆ; ಹಿತ್ತಾಳೆಕಿವಿಯವರಾಗುತ್ತೇವೆ ! ನಮಗೆ ಅಮೇರಿಕ ಹೇಳಿದ್ದೇ ವೇದ. ಎಲ್ಟನ್ ಜಾನ್ ಬಾರಿಸಿದ್ದೇ ಗಿಟಾರು ! ನಮ್ಮ ಮೂಲ ಸಂಸ್ಕೃತಿಯ ಅಂದ-ಚಂದ ಯಾರಿಗೆ ಬೇಕು ಸ್ವಾಮಿ ? ಅದೆಲ್ಲಾ ಪುಸ್ತಕದ ಬದನೇಕಾಯಿ, ಕಾಲಹರಣ ಮಾಡುವ ಕಾಡುಹರಟೆ ಅಂದುಕೊಳ್ಳುತ್ತೇವೆ, ಅಲ್ಲವೇ ? ಶಾಲೆಯಲ್ಲಿ ನಮಗೆ ಇಂಗ್ಲೀಷ್ ಮಾಧ್ಯಮವೇ ಬೇಕು. ಮಕ್ಕಳು ಶಾಲೆಗೆ ಹೋದ ಮರುದಿನವೇ ಹರುಕು ಮುರುಕು ಆಂಗ್ಲಭಾಷೆಯಲ್ಲಿ 'ನೋ ಯಾ ಗೋ ಯಾ ' ಅಂದರೆ ನಮ್ಮೊಳಗೊಳಗೇ ಒಂಥರಾ ಅದಮ್ಯ ಆನಂದ, ಮೈಮನ ವೆಲ್ಲ ಗಾಳಿಯಿಂದ ಬಲೂನು ಬೀಗಿದಂತೆ ಬೀಗಿ ಖುಷಿಯೋ ಖುಷಿ ! ಎಲ್ಲರಲ್ಲೂ ಹೇಳಿಕೊಳ್ಳುವ ತವಕ! ಇನ್ನು ಸಿಕ್ಕಾಪಟ್ಟೆ ಬೇಕಾದ್ದನ್ನ ಬೇಡದ್ದನ್ನ ಎಲ್ಲವನ್ನೂ ತಿಂದು ತಿಂದು ಹೊಟ್ಟೆ ಬರಿಸಿಕೊಂಡು ಬೆಳಿಗ್ಗೆ ಉದ್ಯಾನದಲ್ಲಿ ವ್ಯಾಯಾಮ ಮಾಡಲು ಜಾಗಿಂಗ್ ಹೋಗುವಾಗ ದಾರಿಯಲ್ಲಿ ಅರ್ಧ ಕಾಪಿ ಕುಡಿದು ಪಾರ್ಕಿನಿಂದ ಮರಳಿ ಬರುವಾಗ ಪೂರಿಸಾಗು, ಕೇಸರಿಬಾತು ಕಂಪೆನಿಗೆ ಇಡ್ಲಿವಡೆ ಎಲ್ಲಾ ಮುಕ್ಕಿ ನೆಮ್ಮದಿಯಿಂದ ಜಾಗಿಂಗ್ ಪೂರೈಸಿ ಮರಳುತ್ತೇವೆ ! ಎಲ್ಲೋ ಯಾಕೋ ಸುಮ್ಮನೇ ಹುಡುಗರು ಹೊಡೆದಾಡಿದರೆ ರಾಜಕೀಯದ ಬಣ್ಣ ಹಚ್ಚಿ 'ಕೋಮು ಗಲಭೆ' ಎನ್ನುತ್ತೇವೆ ! ಪ್ರಕೃತಿ ಇವೆಲ್ಲವನ್ನೂ ನೋಡುತ್ತಾ ಸುಮ್ಮನೇ ನಮ್ಮೊಟ್ಟಿಗೆ ಹಾಗೆ ಸಾಗಿದೆ. ಅದು ನಮಗೆ ಮಿಥ್ಯಾಲೋಕದ ಹಲವು ಅನುಕೂಲಗಳನ್ನೂ ನೀಡದಂತೆ ಮಾಡಿ ನಾವು ಬಹಳ ಸುಖವೆಂದು ತಿಳಿದಾಗ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ! ಹೀಗಾಗಿ ಪ್ರಕೃತಿಯಲ್ಲಿ ಅನನ್ಯವಾಗಿ ಅನುರಳಿಸುವ ಆ ನಾದವನ್ನು ಆಲಿಸಲು ಪ್ರಯತ್ನಿಸಿದರೆ ಪ್ರಕೃತಿಗೆ ಅನುಗುಣವಾಗಿ ನಡೆದರೆ ನಮಗೆ ಸಮಸ್ಯೆಗಳು ಕಡಿಮೆ ಬರಬಹುದು. ಇಲ್ಲಿ ನಭೋಮಂಡಲದ ಅವಕಾಶಗಳ ನಡುವೆ ಬ್ರಹ್ಮಾಂಡದ ಒಂದೇ ರಾಗದ ಕೂಗು ಸದಾ ಹೊಮ್ಮುತ್ತಿದೆ, ಅದನ್ನು ಹಲವರು ' ಓಂ' ಕಾರವೆಂದರೆ ಕೆಲವರು ಏನೋ ಶಬ್ಧಎಂದಿದ್ದಾರೆ, ವಿಜ್ಞಾನಿಗಳು ಇನ್ನೂ big bang ತಲೆಯಲ್ಲೇ ಇದ್ದಾರೆ ! ಆ ಸ್ವರವನ್ನು ಅಲೈಸುತ್ತ, ಚೋದ್ಯವಾಗಿ ಬರೆದ ಒಂದು ಹಾಡು ನಿಮಗಾಗಿ---




[ಚಿತ್ರ ಋಣ : ಅಂತರ್ಜಾಲ]

ನಶ್ವರದಲ್ಲಿರುವ ಶಾಶ್ವತ ನಾದ

ಚಕಚಕ ಚಂಚಲ ಮಿಂಚಿನ ಗೊಂಚಲ
ಕಂಚಿನ ಶಬ್ಧದ ಮಾರ್ದನಿಯು
ಪಂಚಭೂತಗಳ ಇಂಚಿಂಚಲು ಅದು
ಸಂಚರಿಸುವ ಪರಿ ಅದ್ಬುತವು

ವತ್ಸರ ವತ್ಸರ ಕಳೆದು ವಿಲಂಬಿತ

ತಾತ್ಸಾರವು ಇರದಿಹ ನಡೆಯು
ಕುತ್ಸಿತ ಬುದ್ಧಿಯ ಹುಲುಮಾನವಗಿದು
ತತ್ಸಮ ಪ್ರತಿರೋಧದ ಗಣಿಯು

ನಶ್ವರದೀಜಗ ಬಲು ಬಲು ಸೋಜಿಗ

ಶಾಶ್ವತ ಮಡಿಲೊಳು ಅವಿತಿಡುತ
ಅಶ್ವಗಂಧ ಗೋಮೇದಿಕ ಕೇಸರಿ
ಈಶ್ವರನಾಟದ ದಾಳಗಳು

ಕಾಮ ಕ್ರೋಧ ಲೋಭ ಮೋಹ ಮದ
ಆಮಶಂಕೆ ಥರ ಮತ್ಸರವು
ರಾಮ-ಹನುಮ ದೈವಾದಿಗಳನು ನಾವ್
ಕೋಮಿಗೀಡುಮಾಡುವ ವಿಧಿಯು

ತಜ್ಜನಿತ ಜನಿತ ನವತಾಪದ

ಮಜ್ಜನದೋಳ್ ಮನ ಕಲುಷಿತವು
ಅಜ್ಜ-ಅಜ್ಜಿಯರ ಬಿಡದೀ ಮಾಯೆಯು
ನುಜ್ಜಾದರು ಗುಜ್ಜಾಡುತಲಿ

ಘಾತುಕ ಪಾತಕ ಬುದ್ಧಿಯು ನಮ್ಮದು

ಜಾತಕದಲಿ ಅದು ಬರೆದಿಹುದು
ನೀತಿಶತಕ ನೂರೆಂಟು ಓದಿದರು
ಭೀತಿಯೇ ಇಲ್ಲದ ಭಂಡತನ

ಮಜಮಜ ಬಲುಮಜ ಬಲು ಮೋಜಿನ ಮಜ

ನಿಜದರಿವದು ಯಾತಕೆ ಬೇಕು ?
ಅಜಗಜಾಂತರವು ಇರೆ ತೊಂದರೆಯೇನ್ ?
ರಜೋಗುಣದಿ ಮುನ್ನಡೆಯುವೆವು

ಬೀಗುತ ತೇಗುತ ಗಾತ್ರದ ಉದರವ

ಹಾಗೆ ಒಮ್ಮೆ ನೇವರಿಸುತಲಿ
ನೀಗುತಪಾನವಾಯು ಮಂದಸ್ಮಿತ
ರೋಗದ ಕಣಜವ ಬಚ್ಚಿಡುತ

Wednesday, March 31, 2010

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !



[ಚಿತ್ರಗಳ ಋಣ: ಅಂತರ್ಜಾಲ ]

ಕೈಲಾಗದು ಎಂದು ಕೈಕಟ್ಟಿ ಕುಳಿತರೆ !

ಹಲವು ಸಲ ನಾವು ಎಷ್ಟು ಚಿಕ್ಕದಾಗಿ ವಿಚಾರಿಸುತ್ತೇವೆಂದರೆ ಸಣ್ಣದೊಂದು ಕೆಲಸ ಕೂಡ ಮಾಡಲು ನಮ್ಮಿಂದ ಸಾಧ್ಯವೇ ಇಲ್ಲ ಎಂದು. ಇಲ್ಲಾ ಅದು ನನ್ನಿಂದ ಸಾಧ್ಯವಿಲ್ಲ, 'ಇದು ನನ್ನಿಂದ ಆಗದ ಮಾತು','ಅದೆಂದರೆ ನನಗೆ ತಲೆನೋವು', 'ಅದರ ಹತ್ತಿರ ಕೂಡ ಸುಳಿಯೋದಿಲ್ಲ', 'ನಾನು ಮಾಡಲಾರೆನಪ್ಪಾ ಬೇಕಾದ್ರೆ ಅವರು ಮಾಡಿಕೊಳ್ಳಲಿ' -- ಈ ಧೋರಣೆ ಸರಿಯಲ್ಲ. ಮನುಷ್ಯ ಪ್ರಯತ್ನ ಶೀಲನಾಗಿರಬೇಕು. ಬಹಳ ಪ್ರಯತ್ನಿಸಿಯೂ ಫಲಸಿಗದಿದ್ದರೆ ಹಿಡಿದ ಮಾರ್ಗ ಬದಲಾಯಿಸಿ ಬೇರೆ ಮಾರ್ಗದಲ್ಲಿ ತೊಡಗಿಕೊಳ್ಳಬೇಕು. ಅಂತೂ ಸರಿಯಾದ ಸತ್ಸಂಕಲ್ಪದಿಂದ ಪ್ರಯತ್ನಶೀಲರಾದರೆ ಅದಕ್ಕೆ ಫಲ ಇದ್ದೇ ಇದೆ.

ತೊಡಗಿಕೊಳ್ಳುವ ಕೆಲಸಗಳಲ್ಲಿ ಎರಡು ಬಗೆ. ಒಂದು ಏಕ ವ್ಯಕ್ತಿ ನಿರ್ವಹಿಸಬಹುದಾದದ್ದು, ಇನ್ನೊಂದು ಬಹುವ್ಯಕ್ತಿಗಳು ಸೇರಿ ನಿರ್ವಹಿಸಬಹುದಾದ ಕೆಲಸಗಳು. ಅನೇಕ ವೈಯಕ್ತಿಕ ಕೆಲಸಗಳನ್ನು ಒಬ್ಬರೇ ಮಾಡಿಕೊಳ್ಳಬಹುದು. ಹಾಗೇಯೇ ಅನೇಕ ಸಾಮಾಜಿಕ ಕೆಲಸಗಳನ್ನೂ ಕೂಡ. ಉದಾಹರಣೆಗೆ
ವೈಯಕ್ತಿಕ ಕೆಲಸಗಳು --
ನಮ್ಮ ಬಟ್ಟೆ ನಾವೇ ಒಗೆಯುವುದು, ಬಟ್ಟೆ ಇಸ್ತ್ರಿ ಮಾಡಿಕೊಳ್ಳುವುದು, ಬೇಕಾದ ಸಾಮಾನು ತಂದುಕೊಳ್ಳುವುದು, ತಿಂಡಿ-ತೀರ್ಥ ತಯಾರಿಸಿಕೊಳ್ಳುವುದು, ಪಾತ್ರೆ-ಪಗಡೆ ತೊಳೆದುಕೊಳ್ಳುವುದು,
ಸಾಮಾಜಿಕ ಕೆಲಸಗಳು--
ಮಂದಿರ ಮಸೀದಿಗಳನ್ನು ಸ್ವಚ್ಛಗೊಳಿಸುವುದು, ಬೀದಿ ದೀಪಗಳು ಇರದಿದ್ದರೆ ಹಾಕಿಸಲು ಪ್ರಯತ್ನಿಸುವುದು, ವೃದ್ಧರು-ಕುರುಡರು ರಸ್ತೆ ದಾಟುವಾಗ ಸ್ವಲ್ಪ ಸಹಾಯ ಮಾಡುವುದು, ಸರಕಾರೀ ಶಾಲೆಗೆ ಬೇಕಾದ ಯವುದೋ ಪರಿಕರ ತಂದುಕೊಡುವುದು, ಬೀದಿ ಗುಡಿಸುವವರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಂದ ಅದು ಸರಿಯಾಗಿ ನಡೆಯುವ ಹಾಗೆ ನೋಡಿಕೊಳ್ಳುವುದು.
ಇವೆಲ್ಲ ಯಾರೂ ಮಾಡಬಹುದಾದ ಅತಿ ಚಿಕ್ಕ ಕೆಲಸಗಳು.





ಇನ್ನು ಕೆಲವು ಕೆಲಸಗಳು ಸಾಮೂಹಿಕವಾಗಿರುತ್ತವೆ. ಆದರೆ ಕೆಲವು ಕೆಲಸಗಳಿಗೆ ಸಮೂಹ ಶಕ್ತಿಯೇ ಬೇಕು. ಅಲ್ಲಿಯೂ ವೈಯಕ್ತಿಕ ಮತ್ತು ಸಾಮಾಜಿಕ ಎಂದು ಎರಡು ವಿಭಾಗಗಳು. ಉದಾಹರಣೆಗಳು
ವೈಯಕ್ತಿಕ ಕೆಲಸಗಳು---
ಸ್ವಂತಕ್ಕೆ ಮನೆ ಕಟ್ಟಿಕೊಳ್ಳುವುದು, ದೊಡ್ಡ ಜಮೀನನ್ನು ಉತ್ತು ಬಿತ್ತುವುದು ಇತ್ಯಾದಿ.
ಸಾಮಾಜಿಕ ಕೆಲಸಗಳು--
ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಮಾರ್ಗ ರಚನೆ ಇತ್ಯಾದಿ.



ಕೆಲಸಗಳಲ್ಲಿ ನಮಗೆ ಆದರ್ಶವೆನ್ನಿಸುವ ಕೀಟಗಳು, ಪಶು-ಪಕ್ಷಿಗಳು ನಮ್ಮೆದುರಿಗೆ ಜೀವನಾಸಕ್ತಿಯನ್ನು ಕೆರಳಿಸಿ ಮನಸ್ಸಿಗೆ ಬೇಕಾದ ಆಸಕ್ತಿಯೆಂಬ ಇಂಧನವನ್ನು ದೊರಕಿಸಿಕೊಡುತ್ತವೆ. ಗೀಜಗ ಪಕ್ಷಿ ತನ್ನ ಗೂಡು ಅಲಂಕರಿಸಿಕೊಳ್ಳುವುದು, ಲಕ್ಷಾಂತರ ಗೆದ್ದಲುಗಳು ಸೇರಿ ಹುತ್ತ ಕಟ್ಟುವುದು, ಸಾವಿರಾರು ಜೇನುಗಳು ಸೇರಿ ಗೂಡುಕಟ್ಟುವುದು. ಮಾರೆತ್ತರ-ಅಗಲ ಬೆಳೆದ ಹುತ್ತ ನೋಡಿದರೆ ನಮಗೇ ಆಶ್ಚರ್ಯ, ಬಾಟಲಿಗಳಲ್ಲಿ ಲೀಟರ್ ಗಟ್ಟಲೆ ಜೇನುತುಪ್ಪ ನೋಡಿದಾಗ ನಮಗನ್ನಿಸುವುದು ಇಷ್ಟೊಂದು ಜೇನುತುಪ್ಪ ಬರುತ್ತದೆಯೇ ಎಂದು---ಯಸ್, ಎಲ್ಲವೂ ಸಾಧ್ಯ ಪ್ರಗತಿ ಪಥದಲ್ಲಿ, ಸದಾ ಚಲಶೀಲತೆಯಲ್ಲಿರುವ ವ್ಯಕ್ತಿತ್ವದಲ್ಲಿ, ಕೆಲಸಮಾಡುವ ಮನೋಧರ್ಮ ಬೆಳೆಸಿಕೊಂಡವರಲ್ಲಿ. ನಿಸರ್ಗ ನಮಗೆ ಇದರ ಜೊತೆಜೊತೆಗೆ ಒಗ್ಗಟ್ಟಿನ ತತ್ವವನ್ನೂ ಬೋಧಿಸುತ್ತದೆ. ಹಲವು ಗೆದ್ದಲುಗಳ ಪರಿಶ್ರಮ ಒಂದು ಹುತ್ತ! ಹಲವು ಜೇನುನೊಣಗಳ ಪರಿಶ್ರಮ ಹಲವು ಲೀಟರ್ ಜೇನುತುಪ್ಪ ! ಅಲ್ಲಿ ಜಗಳಗಳಿಲ್ಲ,ನಿತ್ಯದ ದೊಂಬಿಗಳಿಲ್ಲ, ಅಘೋಷಿತ ನಾಯಕತ್ವ, ಅದೇನೋ ಸಂಕೇತ- ನಮಗೆ ಅರ್ಥವಾಗದ್ದು, ಅವುಗಳಿಗೆ ಅರ್ಥವಾಗಿದ್ದು. ಕೆಲಸ ಯಾರು ಎಂದು ಹೇಗೆ ಎಲ್ಲಿ ಮಾಡಬೇಕೆಂಬುದನ್ನು ಯಾರು ನಿರ್ಣಯಿಸುತ್ತಾರೆ ಅಲ್ಲಿ ? ಹುತ್ತಕ್ಕೆ ಇದೇ ಆಕಾರವೆಂದೂ, ಜೇನುಗೂಡು ಹೀಗೇ ಜೋತು ಬಿದ್ದರೂ ಬೀಳದ ಅಂಟಿನಿಂದ ಕೂಡಿರಬೇಕೆಂದೂ ಯಾರು ಹೇಳಿದರು ? ಗೀಜಗ ಹಕ್ಕಿಗೆ ನೇಯ್ಗೆ ಕಲಿಸಿದ ಗುರು ಯಾರು. ಇದನ್ನು ನೋಡಿದಾಗ ನಮಗೆ ನಮ್ಮ basic instinct ಸರಿಯಾಗಿದ್ದರೆ ಕೆಲಸ ಮಾಡಲು ಮಾರ್ಗ ತನ್ನಿಂದ ತಾನೇ ತೋರುತ್ತದೆ.

ಶತಮಾನವೂ ಸರಿಯಾಗ ಮುಗಿದಿರದ ಇತಿಹಾಸದಲ್ಲಿ ನಾವು ಸರ್ ವಿಶ್ವೇಶ್ವರಯ್ಯನವರನ್ನು ನೋಡಿದ್ದೇವೆ. ಆ ಕಾಲದಲ್ಲಿ ರಭಸದಿಂದ ದುಮ್ಮಿಕ್ಕಿ ಹರಿವ ನದಿಗಳಿಗೆ ಒಡ್ಡು ಕಟ್ಟಲು ದೇಶದುದ್ದಗಲ ಸಂಚರಿಸಿದ ಕೆಲಸ ಮಾಡಿದ ಮಹಾನುಭಾವ ಅವರು. ಪ್ರಾರಂಭದಲ್ಲಿ ಕೆಲವರು ಅವರನ್ನು ಅಪಹಾಸ್ಯಮಾಡಿದರು. 'ತಲೆ ಇಲ್ಲದ ವ್ಯಕ್ತಿ ತರಲೆ ಕೆಲಸಕ್ಕೆ ಕೈಹಾಕಿದ್ದಾನೆ ಇದೆಲ್ಲಾ ಆಗುವುದು ಉಂಟೇ? ' ಆದರೆ ಅದು ಆಗಿದ್ದರಿಂದಲೇ ನಾವು ಇಂದು ಅನೇಕಕಡೆ ನೀರು, ವಿದ್ಯುಚ್ಛಕ್ತಿ ಪಡೆಯುತ್ತಿದ್ದೇವೆ.

ಆಗಲೂ ತರಲೆಗಳಿಗೇನೂ ಕಮ್ಮಿಯಿರಲಿಲ್ಲ. ಯಾರೋ ಒಬ್ಬಾತ ಕೇಳಿದ



" ನಾವು ಕಾರ್ಮಿಕರು ಇಷ್ಟು ಶ್ರಮ ವಹಿಸುತ್ತೇವೆ, ನಮಗೆ ಸಂಬಳ ಕಡಿಮೆ, ಆದರೆ ಎಂಜಿನೀಯರ್ ಎನಿಸಿಕೊಂಡು ಮೇಜು-ಕುರ್ಚಿ ಹತ್ತಿ ಕೂರುವ ವಿಶ್ವೇಶ್ವರಯ್ಯಗೆ ಮಾತ್ರ ಜಾಸ್ತಿ ಸಂಬಳವೇಕೆ ? "

ವಿಶ್ವೇಶ್ವರಯ್ಯನವರ ಕಿವಿಗೆ ಇದು ಬಿತ್ತು, ಅವರು ಆತನನ್ನು ಕರೆದು ಒಂದು ಕೋಳಿಮೊಟ್ಟೆ ತರಲು ಹೇಳಿದರು. ಆತ ತಂದ. ಅದನ್ನು ಮೇಜಿನಮೇಲೆ ನೆಟ್ಟಗೆ ನಿಲ್ಲಿಸುವಂತೆ ಹೇಳಿದರು, ಆತ ಪ್ರಯತ್ನಿಸಿ ಸೋತ. ತಾವು ನಿಲ್ಲಿಸುವ ಪ್ಲಾನ್ ಹೇಳಿ ಮಾಡಿ ತೋರಿಸಿದರು- ಒಂದು ಉಂಗುರವನ್ನು ಮೇಜಿನಮೇಲಿಟ್ಟು ಅದರಲ್ಲಿ ಮೊಟ್ಟೆ ನಿಲ್ಲಿಸಿದರು. ಆಮೇಲೆ ಹೇಳಿದರು ವಿಶ್ವೇಶ್ವರಯ್ಯನ ಇಂತಹ ಪ್ಲಾನಿಗೆ ಸಂಬಳವಪ್ಪಾ ಎಂದು. ವಿಶ್ವೇಶ್ವರಯ್ಯ ಪಡೆದ ಸಂಬಳದ ಬಹುಭಾಗವನ್ನು ಸಮಾಜಕ್ಕಾಗಿಯೇ ಕೊಟ್ಟರು! --ಇದೂ ಕೂಡ ಸ್ತುತ್ಯಾರ್ಹ. ನಮ್ಮಲ್ಲಿ ಸಂಬಳ ಪಡೆದ ನಾವು ಹತ್ತು ರೂಪಾಯಿ ದಾನವಾಗಿ ಕೊಡುವಾಗ ಹಿಂದೆ-ಮುಂದೆ ನೋಡುತ್ತೇವೆ, ಆದರೆ ಮಹಾತ್ಮರು ದಾನ ಮತ್ತು ತ್ಯಾಗಗಳನ್ನು ಮೈಗೂಡಿಸಿಕೊಂಡಿರುತ್ತಾರೆ.



ಹೀಗೇ ಇಂತಹ ವಿಶ್ವೇಶ್ವರಯ್ಯ ಅಂದಿನ ದೊಂದಿ ದೀಪದ ಕಾಲದಲ್ಲಿ ಅದು ಹೇಗೆ ಅಷ್ಟೊಂದು ಕ್ರಿಯಾಶೀಲರಾದರು ? ಅಲ್ಲವೇ ? ಅವರು ಮಾಡಲೇಬೇಕಾದ ಕೆಲಸವಂತೂ ಅದಾಗಿರಲಿಲ್ಲ, ಆದರೆ ಭವಿಷ್ಯದ ದೇಶದ ಕನಸನ್ನು ಕಂಡ ಭವ್ಯ ಭಾರತದ ಭಾಗ್ಯ ವಿಧಾತ ಅವರು. ತಮ್ಮ ವೈಯಕ್ತಿಕ ಜೀವನವನ್ನು ಕಡೆಗಣಿಸಿ ಸಮಾಜಮುಖಿಯಾಗಿನಿಂತು ಪ್ರಜೆಗಳ ಕ್ಷೇಮಕ್ಕಾಗಿ ತ್ಯಾಗ ಮಾಡಿದ ಕರ್ಮಯೋಗಿ ಅವರು. ಬೀದಿಯಲ್ಲಿ ಯಾರೋ ಅಪಘಾತಕ್ಕೀಡಾದರೆ ಸಂಬಂಧವೇ ಇಲ್ಲವೇನೋ ಎಂದುಕೊಂಡು ಸಾಗುವ ನಮಗೂ ಸಮಾಜದಲ್ಲಿ ಯಾರಿಗೂ ತೊಂದರೆಯಾಗದಿರಲಿ ಎಂಬ ವಸುದೈವಕುಟುಂಬ ಉದ್ದೇಶ ಹೊಂದಿ ಬದುಕಿದ್ದ ಅವರಿಗೂ ಅಜಗಜಾಂತರ ! ನಾವು ಸಂಬಳ-ಸಮಯ ಈ ಲೆಕ್ಕ ಮಾತ್ರ ಸರಿಯಾಗಿ ಕಲಿಯುತ್ತೇವೆ, ಆದರೆ ನಾವೇನು ಮಾಡಿದೆವು-ಏನು ಕೊಟ್ಟೆವು ಅದು ನಮಗೆ ನೆನಪಿಗೆ ಬರುವುದಿಲ್ಲ,ಬೇಕಾಗುವುದೂ ಇಲ್ಲ. ಇದು ಸರಿಯೇ ? ಬೀದಿಯಲ್ಲಿ ನಾಯಿಯೂ ಹಂದಿಯೂ ಬದುಕುತ್ತವೆ, ಅವುಗಳದ್ದೂ ಜೀವನವೇ. ಕೆಲಸಮಯದ ನಂತರ ಸತ್ತುಹೋಗುತ್ತವೆ-ಗೊತ್ತಿರದ ಇತಿಹಾಸ, ಅವುಗಳ ನಡೆಯೇ ಹಾಗೆ. ಬದುಕಿದರೆ ಇಂತಹ ಬದುಕಿಗೆ ಹೊರತಾದ ಧೀರ, ಗಂಭೀರ, ವೀರ ಬದುಕನ್ನು ತಮ್ಮ ಸಾಧನೆಯಿಂದ ತೋರಿಸುವ ಬದುಕು ಬದುಕಬೇಕು. ವೀರ ಎಂದ ತಕ್ಷಣ ಮಚ್ಚು-ಲಾಂಗು ಝಳಪಿಸುವುದಲ್ಲ-ಅದು ರೌಡಿಸಂ, ಧೀರ ಎಂದ ತಕ್ಷಣ ಹದಿನೆಂಟು ಮದುವೆಯಾಗಿ ನೂರಿಪ್ಪತ್ತು ಮಕ್ಕಳನ್ನು ಹುಟ್ಟಿಸುವುದಲ್ಲ-ಅದು ಪಿಡುಗು, ಗಂಭೀರ ಎಂದಾಕ್ಷಣ ಯಾರಿಗೂ ಉಪಕರಿಸದೇ ಮುಖ ಸಿಂಡರಿಸಿ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುವುದಲ್ಲ- ಅದು ವ್ಯರ್ಥ.

ಹಳ್ಳಿಯ ಮತ್ತು ಪಟ್ಟಣದ ಕಬ್ಬಿನಾಲೆಯ ಕಥೆ ನೆನಪಾಗುತ್ತಿದೆ-
ಹಳ್ಳಿಯಲ್ಲಿ ಕಬ್ಬಿನಾಲೆ ತಾವು ನೋಡಿರುತ್ತೀರಿ, ಅಲ್ಲಿ ಹೋರಿಯೊಂದು ಗಾಣವನ್ನು ತಿರುಗಿಸುವಂತಹ ವ್ಯವಸ್ಥೆ ಇರುತ್ತದೆ, ಹೋರಿಯ ಕೊರಳಿಗೆ ಒಂದು ಗಂಟೆ. ಎಲ್ಲೋ ಮೂಲೆಯಲ್ಲಿದ್ದು ಒಬ್ಬಾತನೆ ಬೆಲ್ಲದ ಕೊಪ್ಪರಿಗೆ ಮತ್ತದರ ಬೆಂಕಿ ಎಲ್ಲವನ್ನೂ ನಿರ್ವಹಿಸುತ್ತಾ ಕೇವಲ ತನ್ನ ' ಹೇ ..ಹೇ ..' ಎಂಬ ಶಬ್ಧದಿಂದ ಹೋರಿ ತಿರುಗುತ್ತಿರುವಂತೆ ಮಾಡುವುದು ಗಾಣದವನ ಕೆಲಸ, ಅಲ್ಲಿ ಆತ ಗಂಟೆಯ ಸದ್ದನ್ನು ಆಲಿಸುತ್ತಿರುತ್ತಾನೆ, ಗಂಟೆ ಕೇಳಿ ಬರುತ್ತಿದ್ದರೆ ಹೋರಿ ತಿರುಗುತ್ತಿದೆ ಎಂದು ಅರ್ಥ. ಅದು ಹಳ್ಳಿಯ ಹೋರಿ ಅದಕ್ಕೇ ಹಾಗೆ ತಿರುಗುತ್ತಿರುತ್ತದೆ. ಪಟ್ಟಣದ ಹೋರಿಗೆ ತಲೆ ಜಾಸ್ತಿ ! ಅದೂ ಕೆಟ್ಟವಿಚಾರದಲ್ಲಿ ! ಇಲ್ಲಿನ ಹೋರಿ ಯಜಮಾನಿಗೆ ಗಂಟೆ ಸದ್ದು ಕೇಳಿಸಿದರೆ ಸಾಕು ಎಂಬುದನ್ನು ಅರಿತು ನಿಂತಲ್ಲೇ ಕೊರಳನ್ನು ಅಲ್ಲಾಡಿಸುತ್ತದೆ ! ಬಡಪಾಯಿ ಗಾಣದವ ತಿರುಗಿ ನೋಡುವವರೆಗೂ ಹಾಗೇ ನಡೆದಿರುತ್ತದೆ. ಇದು ಮೈಗಳ್ಳತನಕ್ಕೆ ಒಂದು ಉದಾಹರಣೆ ಅಷ್ಟೇ !



ಸಜ್ಜನರು-ಮಾಹತ್ಮರು ಅನೇಕರು ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಬಗೆಗೆ ಓದಿಕೊಂಡು, ಅವರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಒಳ್ಳೆಯ ಸಂಕಲ್ಪದಿಂದ, ಒಳ್ಳೆಯ ಆಶಯ ಹೊತ್ತು, ಹೊತ್ತು ಕಳೆಯುವಾಗ ಚಿಂತನೆ ಮಾಡಿ ಕಳೆಯೋಣ, ಕ್ರಿಯಾಶೀಲರಾಗೋಣ, ಕೆಲಸ ಮಾಡೋಣ, ನಿಸ್ವಾರ್ಥರಾಗೋಣ, ಭಾರತ ಗುಡಿಯ ಕಟ್ಟೋಣ!

Tuesday, March 30, 2010

ಉಷೆಯ ಬೆನ್ನಹತ್ತಿ !!

ಉಷೆಯೆಂಬರಸಿಯ ಜೊತೆ ರಮಿಸದ ಅರಸನಿಲ್ಲ ! ಅಲ್ಲಿ ಪ್ರತಿಯೊಬ್ಬನೂ ಅರಸನೇ, ಕಾಸು-ಕಾಂಚಾಣ, ರಾಜ್ಯ-ಬೊಕ್ಕಸ, ವಜ್ರ-ವೈಡೂರ್ಯ, ವಾಹನ-ಬಂಗಲೆಗಳ ಮಿತಿಯಿಲ್ಲ, ಅವು ಇದ್ದರೂ ಇರದಿದ್ದರೂ ಸಿಗುವ ಸೌಂದರ್ಯ ಮತ್ತು ತೃಪ್ತಿ ಒಂದೇ ! ಇನ್ನೇನು ಜಗವನಾಳುವ ದೊರೆ ಸೂರ್ಯನುದಿಸುವ ಕೆಲವೇ ಕಾಲ ಮುನ್ನ ಈ ಉಷೆ ಬಂದಿರುತ್ತಾಳೆ ! ಅವಳು ಬರದ ದಿನವೇ ಇಲ್ಲ. ಅವಳಿಗೆ ರಜಾ ಇಲ್ಲವೇ ಇಲ್ಲ. ಪ್ರಾಯತುಂಬಿದ ಹುಡುಗಿ ಈ ಉಷಾ ಎಲ್ಲರ ಮನದ ರಾಣಿ ! ಮನಗೆದ್ದ ತ್ರಿವೇಣಿ ! ಅವಳ ಬಿಂಕ-ಬಿನ್ನಾಣ,ಕೆಂಪಡರಿದ ತುಟಿಯ ತುಂಟ ನಗು, ಅವಳ ಸಿಂಹ ಕಟಿಯ ಮೈಮಾಟ,ನಳಿದೋಳುಗಳು,ಸುಮಧುರ ಕಂಠ ಅಬ್ಬಬ್ಬಾ ಅವಳನ್ನು ಬಣ್ಣಿಸಲೇ ಶಬ್ಧ ಸಾಲದು. ಬೆಳದಿಂಗಳ ಬಾಲೆಯಾದ ಅವಳನ್ನು ಬೆನ್ನುಹತ್ತಿ ಕಣ್ತುಂಬ ನೋಡಬೇಕು, ಅವಳನ್ನು ಹೇಗಾದರೂ ಮಾಡಿ ಲವ್ ಮಾಡಬೇಕು.ಅವಳ ಪ್ರೀತಿ ಪಡೆಯಲೇ ಬೇಕು. ಅವಳ ಅಪ್ಪ ಏನಾದರೂ ಅಂದುಕೊಳ್ಳಲಿ ತೊಂದರೆಯಿಲ್ಲ, ನನಗವಳು ಬೇಕೇ ಬೇಕು ! ಯಾರನ್ನಾದರೂ ಬಿಟ್ಟೇನು ಉಷಾಳನ್ನು ಮಾತ್ರ ಮರೆಯಲಾರೆ,ತೊರೆಯಲಾರೆ,ಬಿಡಲಾರೆ. ಅವಳ ನಗುವಲ್ಲಿ ಅಹಹ ಎಂಥಹ ಸೌಂದರ್ಯವಪ್ಪ ಅದು, ದಂತವೈದ್ಯರು ಶ್ರಮಿಸಿದರೂ ಅಷ್ಟು ಸುಂದರವಾಗಿ ಮಾಡಲಾರದ ದಂತವೈಖರಿ ನನ್ನ ಉಷಾಳದ್ದು. ನೋಡಿ ನೋಡಿ -->ಸಂಪಿಗೆಯ ಎಸಳಿನ ಮೂಗೇ ಖರೆ,ನಿಜ! ಹಸಿರು ಸೀರೆಯುಟ್ಟು ಕೆಂಪು ರವಿಕೆ ತೊಟ್ಟು ಹಾಗೊಮ್ಮೆ ಬಳುಕುತ್ತ ಬಳುಕುತ್ತ ನಡೆದು ಬರುವಾಗ ನನ್ನ ಉಷೆಗೆ ಬೇರೆ ಸಾಟಿಯುಂಟೇ ? ಅವಳ ಮೈಯ ಪರಿಮಳಕ್ಕೆ ಮನಸೋತ, ಅವಳ ಸೆರಗಲ್ಲೊಮ್ಮೆ ಹುದುಗಿ ಸುಖಪಡುವ, ಅವಳ ಚೇತೋಹಾರಿ ನೇವರಿಕೆಗೆ ಬಯಸಿದ, ಅವಳ ಮಧುರ ಚುಂಬನಕ್ಕೆ ಅಧರವೊಡ್ಡಿದ ರಸಿಕ ನಾನಾದರೆ ನಿಮಗೇನು ಹೊಟ್ಟೆಕಿಚ್ಚೇ ? ಹಾಗಾದರೆ ನನ್ನಿಂದ ಉಷೆಯನ್ನು ನೀವು ಪಡೆಯಲು ಪ್ರಯತ್ನಿಸಿ ನೋಡೋಣ ? ಅವಳಪ್ಪ ಬಂದಾನು ಹುಷಾರು !


[ಚಿತ್ರ ಋಣ : ರಾಜಾ ರವಿವರ್ಮ ]

ಉಷೆಯ ಬೆನ್ನಹತ್ತಿ !!

ಸರಸವಾಡುವ ಬಾರೆ ಹೇ ಉಷೇ
ವಿರಸ ದೂರ ನೀರೇ ಬಹು ತೃಷೆ

ಮಂಜಹನಿಯ ಮುಕುಟ ಧರಿಸುತಾ
ರಂಜಿಪ ತ್ರಿಭುವನ ಸುಂದರಿಯೇ
ಮುಂಜಾವಿನಲೇ ನಂಜು ನಿವಾರಿಸಿ
ಅಂಜನ ಹಿಡಿದು ರೂಪವ ತೋರೇ

ರನ್ನ ಕೇಯೂರ ಹಚ್ಚಿದ ವಡ್ಯಾಣ
ಪನ್ನಗಧರನರಸಿಯ ಸಹಸಖಿಯೇ
ನನ್ನೀ ಮನಕಾನಂದವ ನೀಡುತ
ಮುನ್ನ ರಮಿಸು ನೀ ಸೆರಗನು ಹಾಸುತ

ಹರೆಯ ಉಕ್ಕಿ ಹರಿವ ನಿನ್ನನು ನಾ
ಧರೆಯ ಸಿಂಹಕಟಿ ನಳಿದೋಳ್ ನೋಡುತ
ಮರೆಯೆ ಮೂಜಗವ ಕಳೆದುಕೊಳ್ಳುತಾ
ಮೆರೆಯುತಿದ್ದೆ ಗಡುತರದಿ ಬೀಗುತಾ

ತುಟಿಯ ಕೆಂಪು ಹರಡಿ ಪರಿಸರದಿ
ಸುಟಿಯಿರದಾ ಕಂಪು ಬಲು ಒನಪು
ನಿಟಿನಿಟಿ ಉರಿವಾಗ್ನಿಯ ಬಣ್ಣದಝರಿ
ನಟನೆಯಿಲ್ಲದಾ ನಗುಮುಖ ತೋರೇ

ಹಸಿರು ಸೀರೆಯ ತುಂಬಾ ಚಿತ್ತಾರದ
ಕುಸುರಿ ಹೂವ ಬಿಂಬಾ ಥರ ಥರದ
ಉಸುರಿ ಕಿವಿಯೊಳು ಪ್ರೇಮ ವಾಂಛೆಯನು
ಹೊಸರೀತಿಯ ಕಾಮನೆಗಳ ತಣಿಸು

ಸಂಪಿಗೆ ನಾಸಿಕ ಸುಖದಾ ಕೆನ್ನೆಯು
ಸೊಂಪಾಗಿ ಬೆಳೆದು ಬಿಗಿದಿಹ ಕಂಚುಕವು
ಇಂಪಿನ ಕೋಕಿಲ ಮಾರ್ದನಿ ನಿನ್ನದು
ಕಂಪುಸೂಸುವಾ ಮಲ್ಲಿಗೆ ಜಡೆಯೂ

ಹರುಷದಿ ಅಡಿದಾಂಗುಡಿಯಿಡುತಲಿ ಬಾ
ಅರಿಶಿನ ಕುಂಕುಮ ಹಚ್ಚಿದ ಮೊಗದಿ
ನಿರಶನ ನೀ ಬರದಿರೆ ಕಳೆಗುಂದುತ
ಅರಸ ನಾ ಕರೆವೆ ಪ್ರತಿದಿನ ಸರಸಕೆ


Monday, March 29, 2010

ಹನುಮಂತನ ವಿಸ್ಮೃತಿ



ಹನುಮಂತನ ವಿಸ್ಮೃತಿ


ಅತುಲಿತ
ಬಲಧಾಮಂ ಹೇಮ ಶೈಲಾಭ ದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ |
ಸಕಲ ಗುಣನಿಧಾನಂ ವಾನರಾಣಾಮಧೀಶಂ
ರಘುಪತಿವರಭಕ್ತಂ ವಾತಜಾತಂ ನಮಾಮಿ ||



ಎಲ್ಲಾ ಓದುಗ ಮಿತ್ರರಿಗೆ ಆಂಜನೇಯನ ಹುಟ್ಟಿದ ಹಬ್ಬದ ಶುಭಾಶಯಗಳು !

ಇವತ್ತು ಆಂಜನೇಯನ ನೆನಪಿನಲ್ಲಿ ಚಿಕ್ಕದೊಂದು
ಸಂದೇಶ--

ಸೀತೆಯನ್ನು ಹುಡುಕಲು ಹೊರಟ ಆಂಜನೇಯನಿಗೆ ಋಷಿಯೊಬ್ಬರು ದಾರಿಯಲ್ಲಿ ಸಿಕ್ಕು ಸೀತೆ ಎಲ್ಲಿರುವಳೆಂಬ ಭಾತ್ಮೆ ಕೊಡುತ್ತಾರೆ. ನಿಶ್ಚಲ ತಪೋನಿರತರಾಗಿದ್ದ ಅವರ ಜಡೆ ಭೂಮಿಗಿಳಿದು ಹುದುಗಿಹೋಗಿ ಅವರನ್ನು ಎತ್ತಲಾಗದಿದ್ದರೂ ಹನುಮ ತನ್ನ ಭೀಮಬಲದಿಂದ ಅವರನ್ನು ಎತ್ತಿ ಸಂತುಷ್ಟಗೊಳಿಸಿ ಅವರಿಂದ ಅವರ ತಪೋ ಬಲದಿಂದ ಸೀತೆ ಎಲ್ಲಿರುವಳೆಂಬ ಸುದ್ದಿಯನ್ನು ತಿಳಿಯುತ್ತಾನೆ. ಸೀತೆ ಸಮುದ್ರದಾಚೆಗಿನ ಲಂಕಾಪಟ್ಟಣದಲ್ಲಿ ರಾವಣನ ರಾಜ್ಯದಲ್ಲಿ ಅಶೋಕವನವೆಂಬಲ್ಲಿ ಶೋಕತಪ್ತಳಾಗಿರುವಳು ಎಂದು ತಿಳಿದು ಮರುಗುತ್ತಾನೆ. ಬಳಿಕ ತನ್ನ ವಾನರ ಸಮೂಹವನ್ನು ಕರೆದುಕೊಂಡು ಲಂಕೆಗೆ ಹೋಗಲು ಯಾರು ಸಿಗಬಹುದೆಂದು ವಿಚಾರಿಸುತ್ತಾನೆ. ಸಮುದ್ರದಕ್ಕೆ ಹತ್ತಿರದ ಎತ್ತರದ ಒಂದು ಪ್ರದೇಶದಲ್ಲಿ ಕುಳಿತು ಎಲ್ಲರೂ ವಿಚಾರಿಸುತ್ತಿರಲಾಗಿ ಯಾರೂ ಸಾಗರೋಲ್ಲಂಘನ ಮಾಡುವವರು ಸಿಗುವುದಿಲ್ಲ. ಅಂಗದ,ಜಾಂಬವ ಮೊದಲಾದ ಕಪಿವೀರರೆಲ್ಲ ಮನದಲ್ಲಿ ತಮ್ಮ ಅಘೋಷಿತ ನಾಯಕ ಶ್ರೀಮದಾಂಜನೇಯನನ್ನು ಪ್ರಾರ್ಥಿಸುತ್ತಾರೆ. ಆಂಜನೇಯ ಸಮುದ್ರ ಕಂಡವನೇ ಸಣ್ಣಗಾಗಿಬಿಟ್ಟಿದ್ದಾನೆ! ಎಲ್ಲಿ ಏನನ್ನೂ ಮಾಡಬಲ್ಲ ಘನ ದಾರ್ಷ್ಟ್ಯ ವ್ಯಕ್ತಿತ್ವದ ಆಂಜನೇಯ, ಕಬ್ಬಿಣದ ಕಡಲೆಯನ್ನೂ ಕಟರ್ ಕಟರ್ ಎಂದು ಜಗಿದುಬಿಡುವ ಹನುಮ, ಮೆಘವನ್ನೂ ನಾಚಿಸುವ ವೇಗದಲ್ಲಿ ನಿಸ್ಸೀಮನಾದ ಮಾರುತಿ, ಜಾಗದ ಗೊಡವೆ ನೋಡದೆ ಬೆಳೆದುನಿಲ್ಲಬಹುದಾದ ಇಚ್ಛಾ ಶಕ್ತಿಯ ಶಾರೀರಿ, ವಜ್ರಮುಷ್ಠಿಯಿಂದ ಗುದ್ದುತ್ತೇನೆಂದು ಹೊರಟರೆ ಯಾರಿಂದಲೂ ತಪ್ಪಿಸಲಾರದ ಹಠಸಾಧಕ, ರಾಮನ ಇರವಿಗೆ ಅರಿವಿಗೆ ಮರುಗಿ-ರಾಮನ ಸತತ ಸಂತತ ದಾಸ್ಯವನ್ನು ತ್ರಿಕರಣಪೂರ್ವಕ ಒಪ್ಪಿ ನಡೆತಂದ ಮಹಾನುಭಾವ ಇಂದು ಸುಮ್ಮನೆ ಒಂದು ಕಡೆ ಕುಳಿತುಬಿಟ್ಟಿದ್ದಾನೆ.

ಹನುಮನಿಗೆ ತನ್ನ ಶಕ್ತಿಯ ಅರಿವಿಲ್ಲ, ಆತ ಪಾರ್ವತಿ-ಪರಮೇಶ್ವರರ ವರದಿಂದ ಭುವಿಯದಲ್ಲದ ಒಂದಂಶ ರುದ್ರಾಂಶ ಸಂಭೂತನಾಗಿ ವಾಯುದೇವನಿಂದ ಸಾಗಿಸಲ್ಪಟ್ಟು ಅಂಜನಾದೇವಿಯ ಗರ್ಭದಲ್ಲಿ ಅಂಕುರಗೊಂಡು ಬೆಳೆದ ವಿಶಿಷ್ಟ ಶಕ್ತಿಯ ಸಾಕಾರ ಎಂಬುದು ಅವನಿಗೆ ಗೊತ್ತಿಲ್ಲ. [ಇಲ್ಲಿ ಗಮನಿಸಬೇಕಾದ ಒಂದು ಸಂದರ್ಭ --ಮಹಾವಿಷ್ಣು ಶ್ರೀರಾಮನಾಗಿ ಬಂದಾಗ, ಪರೋಕ್ಷ ಸಹಾಯಕ್ಕಾಗಿ ಪರಮೇಶ್ವರ ತನ್ನ ಪ್ರಬಲ ಅಂಶವೊಂದನ್ನು ಭೂಮಿಗೆ ಕಳಿಸಿ ತನ್ಮೂಲಕ ಸೇವೆಗೈಯ್ಯುವುದು ಇದು ಹರಿ-ಹರರು ಹೇಗೆ ಒಂದೇ ಎಂಬ ಗುರುತನ್ನು ತೋರಿಸಿಕೊಡುತ್ತದೆ! ] ಕುಳಿತುಬಿಟ್ಟಿದ್ದಾನೆ, ಸಣ್ಣ ಹುಡುಗ ಕುಳಿತಂತೆ, ಏನೋ ಕಾಯಿಲೆಗೋ ಕಷ್ಟಕ್ಕೋ ಸೋತು ನಾವೆಲ್ಲಾ ಕುಳಿತಂತೆ, ಬಹಳ ಚಿತಾಕ್ರಾಂತನಾಗಿ ಕುಳಿತಿದ್ದಾನೆ. ಅವನಿಗೆ ಸಮುದ್ರೋಲ್ಲಂಘನ ಮಾಡಿ ಸೀತಾಮಾತೆಯನ್ನು ಯಾರು ಹುಡುಕಿಯಾರು ಎಂಬುದಷ್ಟೇ ಚಿಂತೆ. ಆ ಚಿಂತೆಯಲ್ಲಿ ಸೊರಗಿ ಸುಣ್ಣವಾಗಿ ಕ್ಷಣಕಾಲ ಬಸವಳಿದುಹೋಗಿದ್ದಾನೆ ಹನುಮ. ಆ ಸಮಯ ವೃದ್ಧನಾದ ಜಾಂಬವ ಹತ್ತಿರ ಬಂದಿದ್ದಾನೆ, ಹನುಮನಿಗೆ ಅವನಲ್ಲಿರುವ ಶಕ್ತಿಯನ್ನು ಹುರಿದುಂಬಿಸಿ ನೆನಪಿಗೆ ತಂದುಕೊಡುತ್ತಾನೆ. ಬಹಳ ಸಮಯದವರೆಗೆ ಹೇಳಿದ ಮೇಲೆ ನಮ್ಮ ಹನುಮಣ್ಣ ರೆಡಿ! ಹೀಗೇ ಹನುಮಂತನ ವಿಸ್ಮೃತಿ ಮಾಯವಾಗಿ ತಾನು ಜಿಗಿದೇ ಜಿಗಿಯುತ್ತೇನೆ ಎಂಬ ವಿಶ್ವಾಸ ಮೂಡುತ್ತದೆ, ನಂತರ ನಿಜಕ್ಕೂ ಆತ ಜಿಗಿದದ್ದು, ಲಂಕೆಗೆ ಸಾಗಿದ್ದು ರಾಮಾಯಣದ ಮಹತ್ತರ ಘಟ್ಟ. ಹನುಮನಿಲ್ಲದೆ ರಾಮಾಯಣ ಕಲ್ಪಿಸಲೂ ಸಾಧ್ಯವಿಲ್ಲ.



ಬಲಿಷ್ಠನಾದ ಹನುಮ ಒಂದು ಯಕ್ಕಶ್ಚಿತ ಕಸದಂತೆ ಕುಳಿತುಬಿಟ್ಟಿದ್ದ, ತನ್ನ ಶಕ್ತಿಯ ಅರಿವಿಗೆ ಬಂದಾಗ ಆತ ಪುನಃ ಮಹಾಬಲಿಷ್ಠನಾದ. ನಮ್ಮ ಮನಸ್ಸಲ್ಲೂ ಮನಸ್ಸೆಂಬ ಹನುಮ ಸುಮ್ಮನೇ ಕುಳಿತಿರುತ್ತಾನೆ, ಆತನಿಗೆ ಚಾಲನೆ ಕೊಡಿ, ಆತನಿಗೆ ಪೂರಕ ಸಂದೇಶ ಕೊಡಿ, ನಮಗೂ ಹನುಮಬಲ ಬರಲಿ, ನಾವೆಲ್ಲಾ ಜಿಗಿದು ಈ ಭವಸಾಗರದವನ್ನು ಬಹಳ ಸುಲಭದಲ್ಲಿ ದಾಟುವಂತಾಗಲಿ ಎಂದೂ, ಹನುಮನ ನಿಷ್ಠೆ, ಒಲವು,ಕಾರ್ಯತತ್ಪರತೆ, ಶ್ರದ್ಧೆ ನಮಗೆ ಒದಗಿಬರಲೆಂದೂ ಶ್ರೀ ಹನುಮಂತ ನಲ್ಲಿ ಪ್ರಾರ್ಥಿಸೋಣ.


ಹನುಮ ನಿನ್ನ ನೆನೆಯಲೊಮ್ಮೆ ಬಂತು ಚೈತ್ರ ಪೌರ್ಣಮಿ
ವನದ ತುಂಬ ಹೂವ ಹಾಸಿ ಹಾಡುತ ಜೋಗುಳಗಳ

ರಾಮನಾಗಿ ಮಹಾವಿಷ್ಣು ತಾನು ಬಂದು ಭುವಿಯತಳದಿ
ಭೀಮಬಲದ ನಿನ್ನ ಕರೆದು ಅಪ್ಪಿ ಮುದ್ದನಾಡಿದ
ವ್ಯೋಮಯಾನಗೈದ ನಿನ್ನ ಕಾಮಿತಫಲ ಕೊಡೋ ಎನುತ
ನೇಮ ನಿನ್ನೊಳಿರಿಸಿ ಸತತ ನಾಮಸ್ಮರಣೆ ಮಾಡಲೇ ?

ಇಷ್ಟಮಿತ್ರರೆಲ್ಲ ಸೇರಿ ಸೃಷ್ಟಿ ಯೊಳಗೆ ಸಭೆಯ ಕರೆದು
ಕಷ್ಟಕಳೆಯೆ ನೆನೆದು ಹೆದರಿ ಆತು ನಿನ್ನ ಕರೆದರೂ
ಅಷ್ಟುಗಟ್ಟಿ ದೇಹವೆನಲು ಅಂಬುಧಿಯನು ಜಿಗಿದುನಿಂತ
ಶ್ರೇಷ್ಠನಡೆಯು ನಿನದಾಯ್ತು ಜನುಮದಲ್ಲಿ ಪಾವನ

ಎಲ್ಲಿ ನೋಡೆ ನಿನ್ನ ಶಕುತಿ ಯುಕುತಿ ಸತತ ನೆನಪಿನಲ್ಲಿ
ಮಲ್ಲಿನಾಥಪುರದ ಮಗುವೇ ಕಲ್ಲದೇಹ ನಿನ್ನದೂ
ಬಲ್ಲವರೊಡನಾಡುವಾಗ ದೈನ್ಯತೆಯ ನೆರಳಿನಲ್ಲಿ
ಅಲ್ಲಿ ಬಂತು ಬ್ರಹ್ಮ ಪದವು ಸಾರ್ಥಕತೆಯ ಬಾಳಿನಲ್ಲಿ


Wednesday, March 24, 2010

ಎಲ್ಲಿ ತೆರಳಲೇಕೆ ನಾನು ?



ಶ್ರೀರಾಮನವಮಿಯ ಸುತ್ತಮುತ್ತ ನಡೆಸುತ್ತಿರುವ ವಿಷಯ ಸಂಚಾಲಿತ ಕಥನ-ಕವನದಲ್ಲಿ ಇಂದಿನ ಪಾತ್ರ ರಾಮಾಯಣದಲ್ಲಿ ಅಂತ್ಯಕಾಲದ ' ಲಕ್ಷ್ಮಣನ ಸ್ವಗತ '.

ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿನ್ಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ 'ನಮ್ಮ ಕಾಲ ಸನ್ನಿಹಿತವಾಗಿದೆ' ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೆನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ' ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು' ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ' ರಾಮನ ಕೂಗ ' ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ಹೀಗೊಮ್ಮೆ ನೆನೆದುಕೊಂಡಿದ್ದಾನೆ ---


ಎಲ್ಲಿ ತೆರಳಲೇಕೆ ನಾನು ?

ಅಣ್ಣಾ ನಿನ್ನ ಬಿಟ್ಟು ಎಲ್ಲಿ ತೆರಳಲೇಕೆ ನಾನು ?
ಕಣ್ಣ ಹನಿಯ ಒರೆಸುವುದಕೆ ಬರುವುದಿಲ್ಲವೇನು ?
ಅಣ್ಣಾ .....ಅಣ್ಣಾ....ಅಣ್ಣಾ.....ಅಣ್ಣಾ ...ಶ್ರೀ.. ರಾಮಚಂದ್ರ

ಹುಟ್ಟಿನಿಂದ ಇಲ್ಲೀವರೆಗೆ ನಿನ್ನ ಜೊತೆಯಲೀ
ಕಷ್ಟಮರೆತು ಸಾಗಿಬಂದೆ ಇಹದ ಬದುಕಲೀ
ಎಷ್ಟು ಕಠಿಣವಾಯ್ತು ವಿಧಿಯು ಎಮ್ಮ ಬಾಳಲೀ
ಮುಷ್ಠಿಯಲ್ಲಿ ಹಿಡಿದು ತಿರುಚಿ ನರಳಿಸುತ್ತಲೀ

ಊಟತಿಂಡಿ ಆಟಪಾಠ ನಿನ್ನ ಜೊತೆಯಲೇ
ನೋಟದಲ್ಲಿ ಅಣ್ಣಾ ಮರೆತೆ ನಿನ್ನ ತನದಲೇ
ಕಾಟ ತೊರೆಯಲೆಂದು ಪಿತಗೆ ಕೈಕೆಯಿಂದಲೇ
ಓಟಕಿತ್ತೆ ನಾಡತ್ಯಜಿಸಿ ಕಾಡ ಕಡೆಯಲೇ

ತಂದೆಯಾಜ್ಞೆಯಂತೆ ನಡೆದೆ ನೀನು ಕಾಡಿಗೆ
ಬಂದೆ ನಿನ್ನೀ ಅನುಜ ಜೊತೆಗೆ ನನ್ನ ಪಾಡಿಗೆ
ಕಂದನಂತೆ ನೋಡ್ದ ನಿನ್ನ ಜೀವನಾಡಿಗೆ
ಇಂದು ಏಕೆ ತೆರೆಯನೆಳೆವೆ ನನ್ನ ಜೋಡಿಗೆ ?

ಪ್ರೀತಿಯಿಂದ ನೀನು ಕೊಟ್ಟ ಹಲವು ತುತ್ತನು
ನೀತಿಯೆಂಬ ಮುತ್ತು ರತ್ನದೊಡವೆ ಹುತ್ತನು
ರೀತಿಯಿಂದ ನಿನ್ನ ಜೊತೆಗೆ ಬಳಸುತಿರ್ದೆನು
ಭೀತಿಯಿರದೆ ಬದುಕು ತುಂಬ ಮೆರೆಯುತಿದ್ದೆನು

ಜಿಂಕೆ ಹಿಡಿಯೆ ಮುಂದೆ ತೆರಳಿ ನೀನು ಹೋಗಲು
ಮಂಕುಕವಿದ ಮನವದಾಯ್ತು 'ನೀನು ಕೂಗಲು'
ಸಂಕಟದಲಿ ಗುಡಿಯ ತೊರೆದು ನಿನ್ನ ಸೇರಲೂ
ಅಂಕಿತವನ್ನು ಇಟ್ಟು ಬರೆದೆ ರೇಖೆ ಭುವಿಯೊಳು

ಕಳೆದ ಮಾತೆ ಸೀತೆ ಯನ್ನು ಮನವು ನೆನೆಯುತಾ
ಒಳಗೆ ಉರಿದ ಬೆಂಕಿಯಲ್ಲೇ ದಿನವ ಕಳೆಯುತಾ
ಉಳಿದ ದಿನವ ನಿನ್ನ ಜೊತೆಗೆ ಹಾಗೇ ಸವೆಸುತಾ
ತೊಳೆದೆ ನನ್ನ ಪಾಪಕರ್ಮ ಪಾದ ಸ್ಮರಿಸುತಾ

ಕಾಲಪುರುಷ ಬಂದ ಸಮಯ ಹಲವು ಬಗೆದೇನೂ
ಲೀಲೆಯನ್ನು ಕೇಳಿ ತಿಳಿದು ಭಯದಲಿದ್ದೆನು
ಬಾಲಿಶತನ ಮುಗ್ದ ರೂಪ ಕಾಲ ಮೆರೆದನೂ
ಅಲಿಸೆಂದು ನಿನ್ನ ಕರೆದು ಗೆಲುವಮೆರೆದನೂ !

ಒಮ್ಮೆ ನನ್ನ ಅಪ್ಪಿ ಮುದ್ದ ನೀಡು ಎನುತಲೀ
ಒಮ್ಮತದಲೇ ಆಜ್ಞೆ ನಡೆಪೆ ಎನುತ ಭರದಲೀ
ಹೆಮ್ಮೆಯೆನಗೆ ಅಣ್ಣ ಕೊಟ್ಟ ಶಿಕ್ಷೆ ಪಡೆವಲೀ
ಅಮ್ಮನಂತೆ ಪೊರೆದ ನಿನ್ನ ಕಣ್ಣ ಎದುರಲೀ

ಮಾಟಮಂತ್ರ ಏನದಾಯ್ತು ನಮ್ಮನಗಲಿಸೆ ?
ಪಾಠ ಹೊಸದು ಕಾಲ ಕೊಟ್ಟ ಬದುಕ ತೀರಿಸೆ
ನೋಟವೊಮ್ಮೆ ಬೀರು ಸಾಕು ಪ್ರೇಮತೋರಿಸೆ
ಸಾಟಿಯಿಲ್ಲ ಅಣ್ಣಾ ನಿನ್ನ ಕರುಣೆಮೀರಿಸೆ !

Tuesday, March 23, 2010

ಸ್ವಸ್ಥ ಚಿತ್ತಕೆ ದಾರಿ

ಆಪಾದಮಪಹರ್ತಾರಂ ದಾತಾರಂ ಸರ್ವ ಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||


ಆದರ್ಶಗಳಿಗೆ ಇನ್ನೊಂದು ಹೆಸರು ಕೋಸಲ ದೇಶದ ಸಾಮ್ರಾಟ, ಅಯೋಧ್ಯಾಧೀಶ ಪ್ರಭು ಶ್ರೀರಾಮಚಂದ್ರ , ಆತನ ಜನ್ಮದಿನವಾದ ಶ್ರೀರಾಮನವಮಿಯ ಇಂದು ತಮಗೆಲ್ಲ ಶುಭಹಾರೈಕೆಗಳು.

--------

|| ಮನ ಏವ ಮನುಷ್ಯಾಣಾಂ ||


ಇದು ಸಂಸ್ಕೃತದ ವ್ಯಾಖ್ಯೆ. ಮನುಷ್ಯನ ಮನಸ್ಸು ಎಲ್ಲವನ್ನೂ ನಿರ್ವಹಿಸಬಲ್ಲ ಅಗಾಧ ಶಕ್ತಿ ಹೊಂದಿದೆ. ಮನಸ್ಸಿನಲ್ಲಿ ಉದ್ಭವವಾಗುವ ಭಾವ ತರಂಗಗಳೇ ಎಲ್ಲದನ್ನೂ ನಿರ್ದೇಶಿಸುತ್ತವೆ,ನಿರ್ವಹಿಸುತ್ತವೆ. ನಾವು ಕೈ ಎತ್ತಬೇಕೇ? ಕಾಲು ಕುಣಿಸಬೇಕೆ ? ನೋಡಬೇಕೇ ? ಕೇಳಬೇಕೇ ? ಹಾಡಬೇಕೇ? ತಿನ್ನಬೇಕೇ? ಮಲ-ಮೂತ್ರ ವಿಸರ್ಜಿಸಬೇಕೆ? ಮಲಗಬೇಕೇ? ಹರಟೆ ಹೊಡೆಯಬೇಕೆ ? ಸಿರಿವಂತರೆಂದು ಮೆರೆಯಬೇಕೇ? ಬಡವರೆಂದು ಕರುಬಬೇಕೇ? ಅವಹೇಳನ ಅನುಭವಿಸಬೇಕೇ? ವಿಮಾನ ಓಡಿಸಬೇಕೆ ? ಯುದ್ಧಮಾಡಬೇಕೇ? ಮನಸು ಸಂದೇಶ ಕೊಡಬೇಕು. ಒಳ್ಳೆಯ ಕೆಟ್ಟ ಎಲ್ಲಾ ಸಂದೇಶಗಳನ್ನೂ ಮನಸ್ಸೇ ಕೊಡುವುದು.

ಇನ್ನೊಬ್ಬರ ಆಸ್ತಿಗೆ ಹೊಂಚುಹಾಕುವುದು, ಯಾವುದೊ ಹುಡುಗಿಯನ್ನು ಪ್ರೀತಿಸಿ ಪಡೆದು ಕೈ ಕೊಡುವುದು, ದರೋಡೆ-ಸುಲಿಗೆಗಳನ್ನು ಮಾಡುವುದು, ಪರರ ಬ್ಯಾಂಕ್ ಖಾತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅವರ ಹಣ ಲಪಟಾಯಿಸುವುದು, ಟೀಚರ್ ಮೇಡಮ್ಮ ನ್ನು ಹೇಗಾದರೂ ಮಾಡಿ ಮುಖಭಂಗ ಮಾಡುವುದು, ಪೆಟ್ರೋಲ್ ಹಾಕುವಾಗ ಕೆಲವು ಪಾಯಿಂಟಗಳನ್ನು ಎಗರಿಸುವುದು, ನಕಲಿ ಛಾಪಾಕಾಗದ, ನೋಟು ಮುದ್ರಿಸಿ ಹಂಚಿ ದೇಶದ್ರೋಹ ಮಾಡುವುದು, ಭಾರತದಲ್ಲಿದ್ದೇ ಪಾಕಿಸ್ತಾನದಲ್ಲಿರುವ ಮನೋಸ್ಥಿತಿ ಅನುಭವಿಸಿ ಅವರಿಗೆ ಸಹಾಯಮಾಡುವುದು, ಪರೀಕ್ಷೆಯಲ್ಲಿ ನಕಲು [ಕಾಪೀ ]ಮಾಡುವುದು, ಸೆಕ್ರೆಟರಿಯಾಗಿ ಕೆಲಸ ಮಾಡುವ ಹುಡುಗಿಗೆ ಕೇಳಿ ತನ್ನ ಇಚ್ಛೆ ಪೂರೈಸದಿದ್ದರೆ ಅವಳನ್ನು ಕೆಲಸದಿಂದ ವಜಾಮಾದುವುದು, ಬೇಡದ ಬಾಸಿನ ವಿರುದ್ಧ ಸುಮ್ಸುಮ್ನೇ ದೂರು ಕೊಡುವುದು ಇವೆಲ್ಲಾ ಸಾಂದರ್ಬಿಕ ಮನಸ್ಸಿನ ಕೆಟ್ಟ ಆಲೋಚನಾ ಸ್ವರೂಪಗಳು.

ಪರೋಪಕಾರ, ಬೂಟಾಟಿಕೆಯಿಲ್ಲದ ಸಮಾಜಸೇವೆ, ಯಾರನ್ನೂ ಸುಮ್ಮನೇ ದೂರದಿರುವುದು, ವೃತ್ತಿಪರರಾಗಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದು, ದೇಶ ಸೇವೆಯಲ್ಲಿ ವೈಯಕ್ತಿಕ ಜೀವನವನ್ನೇ ತೊರೆಯುವುದು, ಬಡವರಿಗೆ-ಆರ್ತರಿಗೆ ಕೈಲಾದ ಸಹಾಯ ಮಾಡುವುದು, ವಿನಾಕಾರಣ ಕೋಪಗೊಳ್ಳದಿರುವುದು, ಹೆಂಡತಿಯ ಆದಾಯದಲ್ಲಿ ಜೀವಿಸದಿರುವುದು, ಹೆಂಡತಿಯನ್ನು ಸಂಶಯಿಸದಿರುವುದು, ಹೆಂಡತಿಯ ತೌರಿನಿಂದ ವರದಕ್ಷಿಣೆ ಕೇಳದಿರುವುದು, ವೃದ್ಧ ತಂದೆ-ತಾಯಿಗಳನ್ನು ಸೇವೆ-ಸುಶ್ರೂಷೆಮಾಡುವುದು, ಯಾರು ಕೇಡನ್ನೇ ಬಗೆದರೂ ಅವರಿಗೆ ಒಳಿತನ್ನೇ ಬಯಸುವುದು, ದೇವರು ಕೊಟ್ಟ ಆರ್ಥಿಕತೆಯಲ್ಲಿ ಅದು ಪಾಲಿಗೆ ಬಂದ ಪಂಚಾಮೃತವೆಂದು ಭಾವಿಸಿ ತೃಪ್ತಿಯಿಂದಿರುವುದು, ಸರಳ ಜೀವನ ನಡೆಸುವುದು ಇವೆಲ್ಲ ಸಮಾಜ-ಮನೆ ಮಠ,ದೇಶ ಕಟ್ಟುವ ಒಳ್ಳೆಯ ಭಾವನಾ ತರಂಗಗಳು.

'ಹುಚ್ಚು ಮನಸ್ಸಿನ ಹತ್ತು ಮುಖಗಳು ' ಹೇಗಿರುತ್ತವೆ ಎಂದು ನಮ್ಮ ಹಿರಿಯ ಸಾಹಿತಿ ಕಡಲತೀರದ ಭಾರ್ಗವ ದಿ| ಶ್ರೀ ಶಿವರಾಮ ಕಾರಂತರು ಹೇಳಿದ್ದಾರಷ್ಟೇ ? ಇಂತಹ ಹಲವು ರೂಪದ ಮನಸ್ಸಿಗೆ ಒಂದೇ ರೀತಿಯಲ್ಲಿ ಹೋಗಲಿಕ್ಕೆ ರುಜುಮಾರ್ಗವೊಂದಿದೆ. ಅದು ಎಲ್ಲರಿಗೆ ಸಹಜವಾಗಿ ಧಕ್ಕುವ ಸುಲಭದ ದಾರಿಯಲ್ಲ! ಅದನ್ನು ಅನುಷ್ಠಾನದಲ್ಲಿ ತರಲು ಪ್ರಯತ್ನಿಸಬೇಕು, ನಿರಂತರ ಪ್ರಯತ್ನದಿಂದ ಅದು ಒಂದು ಹಂತದಲ್ಲಿ ಸಿದ್ಧಿಸುತ್ತದೆ, ಅದನ್ನೇ SELF CONTAINED OR SELF CONTENTMENT ಅಂತ ಕರೆಯುತ್ತಾರೆ.

ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ--.
ಒಮ್ಮೆ ಒಬ್ಬನಿಗೆ ನಿದ್ದೆ ಮಾಡುವಾಗ ಕಿವಿಯಲ್ಲಿ ಸಣ್ಣ ಜಿರಲೆಮರಿಯೊಂದು ಒಳಗಡೆ ಹೋದ ಹಾಗನ್ನಿಸಿತು. ಅದು ನಿಜವಾಗಿರಲಿಲ್ಲ. ಅನ್ನಿಸಿಕೆ ಅಷ್ಟೇ! ಕಿವಿಗೆ ಕಡ್ಡಿ ಮತ್ತಿತರ ಏನೇನೋ ಹಾಕಿ ತೆಗೆಯುವ ಪ್ರಯತ್ನ ನಡೆದೇ ನಡೆಯಿತು. ಆದರೆ ಪ್ರಯೋಜನವೇನೂ ಇರಲಿಲ್ಲ. ಕೊನೆಗೆ ಯಾವುದೊ ಕಿವಿ ತಜ್ಞ ವೈದ್ಯರಿದ್ದ ಕಡೆ ಹೋಗಿ ತೋರಿಸಿದ್ದೂ ಆಯಿತು, ಆ ವೈದ್ಯರೇ ನಿಷ್ಪ್ರಯೋಜಕರೆಂಬ ಬಿರುದನ್ನೂ ಅವರ ಹಿಂದೆ ಅವರಿಗೆ ಕೊಟ್ಟಿದ್ದಾಯಿತು. ಮನಸ್ಸು ಗಲಿಬಿಲಿ, ಏನೋ ಗುಳುಗುಳು ಆದ ರೀತಿ- ಕಿವಿಯ ತುಂಬಾ ಒಳಭಾಗದಲ್ಲಿ. ಕೊನೆಗೊಮ್ಮೆ ಮನೆಯವರು ತಾಳಲಾರದೆ ಯಾರದೋ ಸಲಹೆಯ ಮೇರೆಗೆ ಮನಸ್ಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋದಾಗ, ಅವರು ಕಥೆಯನ್ನೆಲ್ಲ ಕೇಳಿ ಮರುದಿನ ಬರಲು ತಿಳಿಸಿದರು. ಮರುದಿನ ಆತನನ್ನು ತನ್ನ ಲ್ಯಾಬಿನ ಒಳಗೆ ಮಲಗಿಸಿ ಸಮ್ಮೋಹಕ ವಿದ್ಯೆ ಬಳಸಿದರು. ಎಬ್ಬಿಸಿದ ಮೇಲೆ 'ನೋಡು ಹೊರಗೆ ತೆಗೆದಿದ್ದೇನೆನ್ನುತ್ತ' ಮೊದಲೇ ಹಿಡಿದು ಬನ್ನಿನ ಮೇಲೆ ಬಿಟ್ಟುಕೊಂಡಿದ್ದ ಒಂದು ಜೀವದಿಂದಿರುವ ಜಿರಲೆಮರಿ ತೋರಿಸಿದರು. ಅದರ ನಂತರ ಆತ ಫುಲ್ ಖುಷ್ ! ಅಲ್ಲಿಂದ ಮುಂದೆ ಕಿವಿಯಲ್ಲಿ ಏನೂ ತೊಂದರೆ ಬರಲೇ ಇಲ್ಲ. Doctor the Great !

ಮನಸ್ಸಿಗೆ ಸಂಸ್ಕಾರ ಕೊಡಬಹುದು. ಅದನ್ನು ತಿದ್ದಬಹುದು.ಅದನ್ನು ಕೆಟ್ಟ ಅಥವಾ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದು ನಮಗೆ ಸಾಧ್ಯ, ಹೇಗೆ ಕಲಿತವರು ವಾಹನ ಚಾಲನೆ ಮಾಡುತ್ತಾರೋ ಹಾಗೇ ಈ ಮನಸ್ಸಿಗೆ ನಮ್ಮೊಳಗೇ ಒಬ್ಬ ಚಾಲಕ ಬೇಕು, ಆತ ಇದ್ದಾನೆ, ಆದರೆ ತರಬೇತಿ ಬೇಕು. ಅದನ್ನೇ ಮನಗಂಡು ತಿಮ್ಮಗುರು ಡೀವೀಜಿಯವರ ಶೈಲಿಯಲ್ಲಿ ಜಗದ ಮಿತ್ರ ಸಾರಿದ್ದಾನೆ ---




[ಚಿತ್ರ ಋಣ : ಅಂತರ್ಜಾಲ]

ಸ್ವಸ್ಥ ಚಿತ್ತಕೆ ದಾರಿ

ವಿಶ್ವ ಪರಿಧಿಯೊಳೆನ್ನ ಸ್ವಸ್ಥ ಚಿತ್ತದೊಳಿಟ್ಟು
ನಶ್ವರದ ಬದುಕಿನಲಿ ಅರಿತು ನಡೆಯಲಿಕೆ
ಪೇಶ್ವೆ ಚಾಲುಕ್ಯಾದಿ ಹಲವರಾಳುತ ಮಡಿದರ್
ಶಾಶ್ವತವ ನೀ ತೋರು | ಜಗದಮಿತ್ರ

ಮುನಿಸು ನಮ್ಮಯ ವೈರಿ ಹರುಷ ಪರರಿಗೆ ಮಾರಿ
ಅನಿಸಲಿದು ಮನದಲ್ಲಿ ಅಚ್ಚೊತ್ತಿ ಸ್ಥಿರದಿ
ಘನತರದ ಕಾರ್ಯಗಳ ಮಾಡು ಇದನಂ ಮೀರಿ
ಮನಸು ಮರ್ಕಟ ನೋಡ | ಜಗದಮಿತ್ರ

ಮನಸು ಕನಸನು ಕಂಡು ತನ್ನಲ್ಲೇ ಬೀಗುತ್ತ
ತಿನಿಸು ಕಂಡಾ ಕತ್ತೆ ರೂಪ ತಾ ನಹುದು
ನೆನೆಸಿ ಜೀವನದಾಳ ಅಗಲಗಳ ವಿಸ್ತಾರ
ನನಸ ನಿಜದಲಿ ಹುಡುಕು | ಜಗದಮಿತ್ರ

ನೋವು ನಲಿವುಗಳೆಲ್ಲ ಕ್ಷಣದ ಭಾವದ ಹಂತ
ಕಾವು -ಖುಷಿಗಳ ತರುವ ಮನದ ಅಲೆಗಳವು
ಹಾವು ಎಂದೇ ಹೆದರಿ ಕತ್ತಲೆಯ ಹಗ್ಗಕ್ಕೆ
ನಾವು ಮಣಿಯುವುದೇಕೆ? ಜಗದಮಿತ್ರ

ವಿಷಮ ವೃತ್ತವೆ ಇರಲಿ ವಿಷದ ಘಳಿಗೆಯೆ ಬರಲಿ
ನಿಶೆಯ ಕಾರ್ಗತ್ತಲದು ಮುತ್ತಿ ಈ ಮನಕೆ
ಪಶುವಿನಂ ಮುಂದೆ ಹುಲ್ಲನದು ತೋರಿ ಕರೆದಾಗ
ನೆಶೆಯೇರಿ ನಲುಗದಿರು | ಜಗದಮಿತ್ರ

ಸಿರಿತನವು ಬಡತನವು ಮನದ ಅನಿಸಿಕೆಯಹುದು
ಅರಿಯದೀಮನದ ಮೂಸೆಯ ಮಜಲುಗಳನಂ
ಹಿರಿದು ಹಿಗ್ಗಲು ಬೇಡ ಬರಿದೆ ಕುಗ್ಗಲು ಬೇಡ
ಇರಿದು ಕಲಿಸಾ ಮನಕೆ | ಜಗದಮಿತ್ರ

ಉಣಬೇಕು ಉಡಬೇಕು ಎಂಬ ಈ ಇಂಗಿತವು
ಕಣಕಣದಿ ತುಂಬಿಹುದು ಜೀವ ಪರಿಧಿಯಲಿ
ಗುಣಿಸಿ ನಿನ್ನಿರುವಿಕೆಗೆ ತಕ್ಕಷ್ಟು ಬಳಸುತ್ತ
ಮಣಿಸು ಮನಸನು ಹದಕೆ | ಜಗದಮಿತ್ರ

Monday, March 22, 2010

ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು


ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು

ಭುವಿಯ ಉದ್ದಗಲ ಸಹಸ್ರಾರು ವರ್ಷಗಳಿಂದ ಎಷ್ಟೋ ಅರಸರು-ಚಕ್ರವರ್ತಿಗಳು ಆಳಿ ಅಳಿದರು. ಎಂತೆಂತಹ ಪರಾಕರಮಿಗಳಿದ್ದರು ಅಲ್ಲವೇ ? ಒಬ್ಬರಿಗಿಂತ ಇನ್ನೊಬ್ಬರು ಮೀರಿಸುವ ರೀತಿ ಬದುಕಿದ್ದರು.ತಮ್ಮ ತಮ್ಮ ಉನ್ನತಿಗಾಗಿ ಹಲವು ವಿಧದ ಉಪಾಸನೆಗಳನ್ನು ಕೈಗೊಳ್ಳುತ್ತಿದ್ದರು. ಉಪಾಸನೆ ಎಂದ ತಕ್ಷಣ ಬರೇ ದೇವರ ಪೂಜೆ ಎಂಬ ಭಾವನೆ ಬೇಡ. ಉಪಾಸನೆ ಎಂದರೆ ಕೈಗೆತ್ತಿಕೊಂಡ ಆಯಾ ರಂಗಗಳಲ್ಲಿ ಅವರು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದರು, ಅಭ್ಯಾಸ ನಿರತರಾಗಿರುತ್ತಿದ್ದರು, ಏಕತಾನತೆ, ತಾದಾತ್ಮ್ಯತೆ ಇಟ್ಟುಕೊಂಡಿರುತ್ತಿದ್ದರು.ಆದರೂ ಅವರು ಎಣಿಸಿದ ರೀತಿಯಲ್ಲಿ ಎಲ್ಲವೂ ನಡೆಯುತ್ತಿರಲಿಲ್ಲ. ಇವತ್ತೂ ಅಷ್ಟೇ, ನಾವು ನಿಮಿತ್ತ ಮಾತ್ರಕ್ಕೆ ಹೀಗೇ ಆಗಬೇಕು , ಹೀಗೇ ಮಾಡಬೇಕು, ಹೇಗೆ ನಡೆಯಬೇಕು ಎಂದೆಲ್ಲಾ ಸಂಕಲ್ಪಿಸುತ್ತೇವೆ. It is only a resolution towards reaching different goals. ಆದರೆ ಸಂಕಲ್ಪ ವಿಧಿಯಿಂದ ಪೂರ್ವ ನಿರ್ಧರಿತವಾಗಿರುತ್ತದೆ. ಒಬ್ಬ ಹೇಗೆ ಎಲ್ಲಿ ಯಾವಾಗ ಹುಟ್ಟಬೇಕು, ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಬೇಕು, ಯಾವ ಕೆಲಸ ಮಾಡಬೇಕು, ಯಾರ್ಯಾರ ಜೊತೆ ಸಂಪರ್ಕದಲ್ಲಿರಬೇಕು, ಉಪಜೀವನಕ್ಕಾಗಿ ಯಾವ ವೃತ್ತಿ ಆಯ್ದುಕೊಳ್ಳಬೇಕು, ಎಷ್ಟನ್ನು ಪಡೆಯಬೇಕು-ಎಷ್ಟನ್ನು ಕಳೆಯಬೇಕು ಇದೆಲ್ಲ ಪೂರ್ವನಿರ್ಧರಿತ.

ಇದಕ್ಕೊಂದು ಚಿಕ್ಕ ಉದಾಹರಣೆ-- ಒಮ್ಮೆ ನಾವು ಇಬ್ಬರು ದ್ವಿಚಕ್ರ ವಾಹನದಲ್ಲಿ ಹತ್ತಿರದ ಯವುದೋ ಪ್ರದೇಶಕ್ಕೆ ಹೊರಟಿದ್ದೆವು. ರಸ್ತೆಯಲ್ಲಿ ಮುಂದೆ ಸಾಗುತ್ತ ಒಂದುಕಡೆ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಪಕ್ಕದಲಿ ಬೀಡಾಡಿ ನಾಯಿಯೊಂದು ಮಲಗಿತ್ತು. ನಾವು ಅದಬಗ್ಗೆ ಅಷ್ಟೊಂದು ಗಮನವಿತ್ತು ನಡೆಯಲಿಲ್ಲ.ನಮ್ಮ ಪಾಡಿಗೆ ನಾವು ಮುಂದೆ ಹೋಗುತ್ತಿದ್ದೆವು. ಹೋಗುತ್ತಾ ಅನಿರೀಕ್ಷಿತವಾಗಿ ಆ ನಾಯಿ ಅದು ಯಾವ ವೇಗದಲ್ಲಿ ಹಾರಿಬಂತೋ ತಿಳಿಯದು, ಬಂದು ಮೈಗೆ ಹಾರಿ ಹಿಂದಿದ್ದವರನ್ನು ಕಚ್ಚಿಬಿಟ್ಟಿತು. ನಾನು ಚೆನ್ನಾಗಿ ಝಾಡಿಸಿ ಒದ್ದಿರದಿದ್ದರೆ ಇನ್ನೂ ಆಳದ ಗಾಯ ಮಾಡಿಬಿಡುತ್ತಿತ್ತೇನೋ,ಸದ್ಯ ಇದ್ದಷ್ಟು ಶಕ್ತಿ ಹಾಕಿ ನಾನು ಒದ್ದೆ, ಓಡಿಹೋಯಿತು. ಎಷ್ಟೋ ದಿನ ಆ ರಸ್ತೆಯಲ್ಲಿ ಸಾಗಿದ್ದ ನಮಗೆ ಆ ನಾಯಿ ಹಲವಾರು ಬಾರಿ ಕಣ್ಣಿಗೆ ಬಿದ್ದಿತ್ತು, ಆದರೆ ಏನೂ ಮಾಡ ಬಡಪಾಯಿ ಎನಿಸಿಕೊಂಡ ಆ ನಾಯಿ ಅಂದು ಮಾತ್ರ ರೌಡಿಯಾಗಿತ್ತು, ತನ್ನ ಹಲ್ಲೆಂಬ ಮಚ್ಚಿನಿಂದ ನಮಗೆ ತಿವಿಯಲು ಬಂದಿತ್ತು. ನಂತರ ಆ ದಿನ ನಾವು ಎಲ್ಲಿಗೆ ಹೊರಟಿದ್ದೆವೋ ಆ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಬೇಕಾಯಿತು. ಹಣ ಖರ್ಚುಮಾಡಬೇಕಾದುದು ಒಂದುಕಡೆಗಾದರೆ ಚುಚ್ಚು ಮದ್ದು ತೆಗೆದುಕೊಳ್ಳುವ ಅನಾವಶ್ಯಕ ತೊಂದರೆ ಇನ್ನೊಂದುಕಡೆ,ಅಂತೂ ಹೀಗೊಂದು ಹೊಸ ಸಮಸ್ಯೆ ಗಂಟು ಬಿದ್ದು ಸಂಕಲ್ಪ ಅಂದಿಗೆ ವಿಕಲ್ಪವಾಯಿತು.

ಬೇಗನೇ ಹೋಗಿಬಿಡಬಹುದೆಂಬ ಧೋರಣೆಯಿಂದ ಹೊರಟ ಮಾರ್ಗಮಧ್ಯದಲ್ಲಿ ಹಲವಾರು ಅಡೆತಡೆಗಳು ಬರಬಹುದು, ಗಾಡಿಗೆ ಇನ್ಯಾರೋ ಗುದ್ದುವುದು, ಗಾಡಿ ಆಯ ತಪ್ಪುವುದು, ನಮಗೇ ಕಕ್ಕಸಕ್ಕೆ ಶೀಘ್ರವೇ ಹೋಗಬೇಕೆನಿಸುವುದು,ಬಿಸಿಲಲ್ಲಿ ತಲೆ ಸುತ್ತಿ ಬಂದಂತಾಗುವುದು, ಯಾಕೋ ತುಂಬಾ uneasyness ಎನಿಸುವುದು ಇವೆಲ್ಲಾ ಒಂದೊಂದು ಕಾರಣಗಳು. ಇನ್ನು ನಾವೆಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿ ಅವರು ಆ ಕಾರ್ಯಕ್ರಮ ಮುಂದೂಡುವುದು, ಅಥವಾ ಅನಿರೀಕ್ಷಿತವಾಗಿ ದೊಡ್ಡ ಮನುಷ್ಯರ್ಯಾರೋ ತೀರಿಕೊಂಡು ಆ ದಿನ ಎಲ್ಲಾಕಡೆ ಬಂದ್ ಆಚರಿಸಬೇಕಾಗಿ ಬರಬಹುದು, ಯವುದೋ ಒತ್ತಡದಿಂದ ಕಾರ್ಯಕ್ರಮ ಅರ್ಧಕ್ಕೇ ನಿಲ್ಲುವುದು. ಕಾರ್ಯಕ್ರಮಕ್ಕೆ ಜನ ಸಾಲದಾಗಿ ಬಂದು ಅದನ್ನು ರದ್ದುಪಡಿಸುವುದು....ಇತ್ಯಾದಿ ಹಲವಾರು ಕಾರಣಗಳಿಂದ ಆ ಕಾರ್ಯ ವಿಘ್ನಬಾಧಿತವಾಗಿಬಿಡಬಹುದು. ಇದಕ್ಕೆಲ್ಲಾ ನಾವು ಹೊಣೆಯೇ ? ಅಲ್ಲವಲ್ಲ, ಆದರೆ ಕೆಲಸಮಾತ್ರ ನೆರವೇರಿರುವುದಿಲ್ಲ.

ಹೀಗೇ ನಮಗಿಂತ ಹಿರಿದಾದ, ನಮ್ಮ ದೃಷ್ಟಿಗೆ, ನಮ್ಮ ದೂರದರ್ಶಿತ್ವಕ್ಕೆ ಗೋಚರವಿಲ್ಲದ ಯಾವುದೋ ಕಾಣದ ಅದ್ಬುತ ಶಕ್ತಿಯ ಕೈವಾಡವಿದೆಯೆಂದು ನನಗಂತೂ ಆಗಾಗ ಅನ್ನಿಸಿದೆ. ಅದರ ಸಂಕಲ್ಪವೇ ನಿಜದ ಸಂಕಲ್ಪ ಹೊರತು, ನಮದು ಆ ದಿಸೆಯಲ್ಲಿ ಪ್ರಯತ್ನವಷ್ಟೇ ! ಇದನ್ನೇ ನೆಚ್ಚಿ ನಮ್ಮ ತಿಮ್ಮಗುರು ಸ್ವಾನುಭವದಿಂದ ಬರೆದಿದ್ದೇ

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೇ ನೆಲವಿಹುದು | ಮಂಕುತಿಮ್ಮ

ಎಷ್ಟು ಅನುಭವ ಜನ್ಯ ಇದು.

ಹಾಗಂತ ಎಲ್ಲಾ ದೇವರು ಕೊಡುವುದು ಅಂತ ನಾವು ಕರ್ತವ್ಯ ವಿಮುಖರಾಗಿ ಆಲಸ್ಯದಿಂದ ಇರುವುದು ಸಲ್ಲ. ಕರ್ತವ್ಯ ಮಾಡುತ್ತಲೇ ಇರಬೇಕು-ಫಲ ನಿರೀಕ್ಷಣೆ ಇಲ್ಲದೇ ಕೆಲಸವನ್ನು ದೈವಾರ್ಪಣ ಭಾವದಿಂದ, ಶೃದ್ಧೆಯಿಂದ ಮಾಡಬೇಕು. ಕೆಲಸ ಮಾಡುವುದೇಕೆ- ಹೇಗೂ ನಮಗೆ ಗಜಕೇಸರಿ ಯೋಗ ಇದೆ ಅಂತ ಕುಳಿತರೆ ಗಜಕೇಸರಿ ಯೋಗ ಬಂದು ಹೋದರೂ ಅದರ ಗಂಧ-ಗಾಳಿಯೂ ತಾಗುವುದಿಲ್ಲ;ಸೋಕುವುದಿಲ್ಲ. ಡಬ್ಬದಲ್ಲಿರುವ ಅಕ್ಕಿ ಹಾಗೇ ಇರುತ್ತದೆ, ಅನ್ನ ಬೇಕೇ ? ಪ್ರಯತ್ನ ಮಾಡಿ, ಅನ್ನ ಮಾಡಬೇಕು.ವರ್ಷವಿಡೀ ಓದದೆ ನಾಡಿದ್ದು ಪರೀಕ್ಷೆಯಿದೆ, ಏನೂ ಓದಲಿಲ್ಲ ಏನಾದರಾಗಲಿ ದೇವರು ಮಾಡಿದಂತಾಗುತ್ತದೆ ಎಂದುಕೊಂಡು ಹೀಗೆ ಕರ್ತವ್ಯ ಮಾಡದೇ ಡೀವೀಜಿಯವರ ಕಾವ್ಯ ಹೇಳಿಕೊಂಡರೆ ಅದರ ಅರ್ಥ ಬೇರೆ ರೀತಿಯಾಗುತ್ತದೆ !

ಆದಿ ಶಂಕರರು ಹೇಳುತ್ತಾರೆ

|| ಕ್ಷಣಸಃ ಕ್ಷಣಸಶ್ಚೈವ
ವಿದ್ಯಾಮರ್ಥಂಚ ಸಾಧಯೇತ್ ||

ವಿದ್ಯೆಗೂ, ಹಣ ಗಳಿಕೆಗೂ ಒಳ್ಳೆಯ ಮಾರ್ಗದಲ್ಲಿ ಕ್ಷಣ ಕ್ಷಣದ ಪ್ರಯತ್ನವೂ ಅಗತ್ಯ ಅಂತ. ಅಂದರೆ, ಬದುಕಿರುವಷ್ಟು ಕಾಲ ನಮ್ಮ ಉಪಜೀವನಕ್ಕೆ ಬೇಕಾಗುವ ಎಲ್ಲಾ ಕೆಲಸಕಾರ್ಯಗಳಲ್ಲಿ ಸದಾ active ಆಗಿ ತೊಡಗಿಕೊಂಡಿರಬೇಕು ಎಂದು.ಅದನ್ನು ಬಿಟ್ಟು ಬರೇ ಮಂದಿರ-ಮಸೀದಿ ಗುಡಿ-ಗುಂಡಾರಗಳನ್ನು ಸುತ್ತಿ ಸುಮ್ಮನೇ ಪೂಜಿಸಿದರೆ ನಮ್ಮ ಕಾರ್ಯಸಾಧನೆ ಸಾಧ್ಯವಿಲ್ಲ, ಮನುಷ್ಯ ಪ್ರಯತ್ನ ಶೀಲನಾಗಿ ಕೆಲಸ ನಿರ್ವಹಿಸುತ್ತಾ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸಿದರೆ ಅದು ಸರಿಯಾದ ಮಾರ್ಗ!


ನಮ್ಮ ತಿಮ್ಮಗುರುವಿಗೂ ಅವರ ಜೀವನದಲ್ಲಿ ಹಲವು ಮಜಲುಗಳು ಬಂದವು. ಬದುಕಿನ ಬಂಡಿ ನಡೆಸಲು ಜಟಕಾ ಬಂಡಿಗೆ ಬಣ್ಣ ಹೊಡೆಯುವ ಕೆಲಸವನ್ನೂ ದಿ|| ಡೀವೀಜಿ ಮಾಡಿದ್ದರು ಎಂದರೆ ಇಂದಿಗೆ ನಮಗೇ ಆಶ್ಚರ್ಯವಾದರೂ ಸತ್ಯವೇ ಇದು. ಇದನ್ನು ಮಾಡುತ್ತಾ ಮಾಡುತ್ತಾ ಬರೆದ
ಸಾಲು

ಏನಾನುಮಂ ಮಾಡು ಕೈಗೆತೊರೆತುಜ್ಜುಗವ
ನಾನೇನು ಹುಲು ಕಡ್ಡಿಯೆಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದಗುಡಿ ಯೂಳಿಗದಿ
ತಾಣನಿನಗಿಹುದಿಲ್ಲಿ | ಮಂಕುತಿಮ್ಮ

ಎಂತೆಂತಹ ಮಹಾನುಭಾವರು ಯಾವ್ಯಾವ ಕೆಲಸಗಳನ್ನು ಮಾಡಿದ್ದರು ನೋಡಿ ! ಅಂದಮೇಲೆ ಸಂಕಲ್ಪ ನಂದೇ/ನಮದೇ ಅಂತ ಬೀಗುತ್ತ/ಕೊಬ್ಬುತ್ತ ನಡೆದರೆ ಸಂಕಲ್ಪ ವಿಕಲ್ಪವಾಗಬಹುದಲ್ಲ ? ಮನುಷ್ಯರು ನಾವು ನಿಮಿತ್ತ ಮಾತ್ರರು. ಮಿಕ್ಕುಳಿದ ಎಲ್ಲಾ ಭಗವಂತನ ಕೃಪೆ ಮತ್ತು ಆತನ ನಿರ್ಧಾರ. ನಾವು ವೀಣೆಯಾದರೆ ವೈಣಿಕ ಆ ದಿವ್ಯ ಶಕ್ತಿ. ವೀಣೆ ಚೆನ್ನಾಗಿ ನುಡಿಸಲೂ ಬಹುದು, ಕೆಟ್ಟದಾಗಿ ನುಡಿಸಲೂ ಬಹುದು ಅಥವಾ ತಂತಿ ಕಿತ್ತು ಬಿಸಾಡಲೂ ಬಹುದು. ಇಂತಹದನ್ನು ನೆನಪಿಟ್ಟು ನಾವು

|| ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂತು ದೈವತಂ ||

ಎಂಬ ಉಲ್ಲೇಖದಂತೆ ಯಾವುದೇ ರೂಪದಲ್ಲಾದರೂ ಆ ಶಕ್ತಿಯನ್ನು ನೆನೆಯೋಣ, ನಮ್ಮದೇ ಎಲ್ಲಾ ಅಂತ ಮೆರೆಯದಿರೋಣ, ತನ್ಮೂಲಕ ಭಗವಂತ ನಮ್ಮ ಒಳ್ಳೆಯ 'ಸಂಕಲ್ಪ' ವೆಂಬ ಪ್ರಯತ್ನಕ್ಕೆ ಒಳ್ಳೆಯ ಫಲನೀಡಲಿ, ನಮ್ಮ ಕುದುರೆ ಗೆಲ್ಲಲಿ, ಜೀವನದಲ್ಲಿ ನಮಗೆ ನಾವೆಣಿಸಿದ ರೀತಿಯಲ್ಲೇ ಕೆಲಸಕಾರ್ಯಗಳು ನಡೆಯಲಿ ಎಂದು ಪ್ರಾರ್ಥಿಸೋಣವೇ ?

Sunday, March 21, 2010

ಎಂಥ ದಿವ್ಯ ಸ್ಪರ್ಶ

ಮಗುವಿನ ಬಗ್ಗೆ ಬರೆಯಲು ಹೊರಟೆ, ಕಾರಣ ಇಷ್ಟೇ, ಮಗನಿಗೆ ಹುಷಾರಿರದೆ ೩ ದಿನಗಳಾದವು, ವಿಪರೀತ ಜ್ವರ, ಯಾವ ಔಷಧವನ್ನೂ ಲೆಕ್ಕಿಸದ ಜ್ವರ, ಮಗುವಿನ ಮುಖದ ನಗೆ ಮಾಯವಾದಾಗ ಅದು ನಮ್ಮ ಮುಖ-ಮನಗಳ ಸಂಪೂರ್ಣ ಅಂತಃಸ್ಸತ್ವವನ್ನು ಎಳೆದು ಹಾಕಿದ ಹಾಗೇ.ಈ ಮಧ್ಯೆ ನಿನ್ನೆ ಒಂದು ಕ್ಷಣ ಆಚೆ ಬಂದು ಮಗನಕಡೆ ಹೋಗುವಷ್ಟರಲ್ಲಿ ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಕುಳಲ್ಲಿಟ್ಟ ಥರ್ಮಾಮೀಟರ್ ತೆಗೆದು ಬಾಯಲ್ಲಿ ಇಟ್ಟುಕೊಂಡು ಕಚ್ಚಿ, ಅದರ ಪಾದರಸವಿರುವ ಭಾಗ ಬಾಯಲ್ಲಿ ಒಡೆದುಹೋಯಿತು, ಪಾದರಸವೆಂಬುದು ತುಂಬಾ ವಿಷವಾದ್ದರಿಂದ ನಾವು ಸುತ್ತದ ಆಸ್ಪತ್ರೆಗಳಿಲ್ಲ, ಭಾನುವಾರವಾದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಗೊತ್ತಿರುವ ತಜ್ಞ ವೈದ್ಯರಿಲ್ಲ! ದೇವರಮೇಲೆ ಭಾರಹಾಕಿ ರಾತ್ರಿ ಕಳೆದಿದ್ದೇವೆ. ಇದರ ಬಗ್ಗೆ ಬಹಳ ಬರೆಯಲು ಇಂದು ಸಮಯವಿರದ ಕಾರಣ ತಮ್ಮಲ್ಲಿ ಕ್ಷಮೆ ಕೇಳಿ ಬರೇ ಒಂದು ಚಿಕ್ಕ ಹಾಡನ್ನು ಬರೆದಿದ್ದೇನೆ


ಎಂಥ ದಿವ್ಯ ಸ್ಪರ್ಶ

ಎಂಥ ದಿವ್ಯ ಸ್ಪರ್ಶ ನಿನದು ಮಂತ್ರ ಮುಗ್ಧ ಮಾಡಿತು !
ಬಂತು ಯಾಕೆ ತಾಪ ಜ್ವರವು ನಗುವ ನುಂಗಿ ಹಾಕಿತು?

ಕಾರಣವೇ ಇಲ್ಲ ಅದಕೆ ಬರಿದೇ ಬಂದು ನೂಕಿತು
ವಾರವಿಡೀ ನಮ್ಮ ಬದುಕು ಹೊರಳಿ ಬಾಡಿ ನರಳಿತು

ದೇವನಿತ್ತ ಶರೀರ ಪಂಚಭೂತ ಪರಿಧಿಯೋಳ್
ಭಾವದಟ್ಟ ಕಟ್ಟಳೆಗಳ ಗೂಡಿದು ವಿಶ್ರಮಿಸುವೋಲ್

ನಿನ್ನ ಮುಗುಳು ನಗೆಯು ತಂತು ಹಲವುಶಕ್ತಿ ಪೂರಕ
ಮೊನ್ನೆಯಿಂದ ನಗುವೇ ಇಲ್ಲ ಯಾವುದು ಮಾರಕ

ನಮ್ಮ ದುಃಖವ ದುಮ್ಮಾನವ ಕಳೆದೆವು ನಿನ್ನ ನೋಡುತ
ಒಮ್ಮೆ ಮತ್ತೆ ನಗೋ ಮಗುವೆ ಪುನಃ ಚೇತರಿಸುತ

Saturday, March 20, 2010

ಡಿಶ್ಶು ಎಂಬ ಅರ್ಥವಾಗದ ಕೊಡೆ



ಡಿಶ್ಶು ಎಂಬ ಅರ್ಥವಾಗದ ಕೊಡೆ

ಹೀಗೇ ನನ್ನ ಬಾಲ್ಯಕಾಲ, ಮೊದಲೊಮ್ಮೆ ಹೇಳಿದಂತೆ ಅವಿಭಕ್ತ ಕುಟುಂಬವಾದ್ದರಿಂದ ನಮಗೆಲ್ಲ ಅಜ್ಜ-ಆಜ್ಜಿ, ಚಿಕ್ಕಪ್ಪಂದಿರು, ಅತ್ತೆ ಹೀಗೇ ಎಲ್ಲಾ ಒಟ್ಟಿಗೆ ಇದ್ದೆವು. ಅದು ಬಹಳ ಮೌಲ್ಯದ ಕಾಲ ಹಣಕ್ಕಿಂತ ಮಾನವ ಗುಣಕ್ಕೆ ಬೆಲೆ ಇದ್ದಕಾಲ.ಎಲ್ಲರೂ ಸಣ್ಣ ವಿಶೇಷವನ್ನೂ ದೊಡ್ಡದಾಗಿ ಹಂಚಿ ಬದುಕಿದ ಕಾಲವದು. ಹೀಗೇ ಒಂದು ದಿನ ಭಾನುವಾರವಾದ್ದರಿಂದ ಶಾಲೆಗೆ ರಜಾ ಇತ್ತು. ನಮ್ಮೂರ ಪಟೇಲರ ಮನೆ ಸಹಜವಾಗಿ ಶ್ರೀಮಂತರ ಮನೆ ಎನಸಿ ಕೊಂಡದ್ದರಿಂದ ಹೊಸದೇನಾದರೂ ಬಂದರೆ ಮೊದಲ ಬಾರಿ ಅಲ್ಲಿಗೇ ಬರುವುದಿತ್ತು. ಅದನ್ನು ನೋಡಿ ನಂತರ ಸಾಧ್ಯವಾದವರು ಅದೆರೀತಿಯ ಪ್ರಾಡಕ್ಟ್ ಕೊಳ್ಳಲು ಏನಿಲ್ಲಾ ಅಂದರೂ - ವರ್ಷಗಳ ಅಂತರವಿರುತ್ತಿತ್ತು.

ಅಪರೂಪಕ್ಕೆ ನಮ್ಮೂರ ಪಟೇಲರ ಮನೆಗೆ ಟಿವಿ ಮತ್ತು ಡಿಶ್ ಎಲ್ಲಾ ಬಂದಿದೆ ಎಂಬ ಸುದ್ದಿ ಬಂತು.ಎಂದಿನ ಹಾಗೆ ನಮ್ಮದು ನೋಡುವ ಬಳಗ! ನಾವೆಲ್ಲಾ ತರಾ ತುರಿಯಿಂದ ಓಡಿದ್ದೇ ಓಡಿದ್ದು. ಏನಿಲ್ಲಾ ಅಂದ್ರೂ ಸುಮಾರು ೩೦೦-೪೦೦ ಜನ ಸೇರಿದ್ವಿ-ಕಾರಣ ಏನೆಂದರೆ >ಟಿವಿ ಮತ್ತು ಡಿಶ್ ಪ್ರತಿಷ್ಠಾಪಿಸಲು ಯಾರೋ ಹುಬ್ಬಳ್ಳಿಯಿಂದ ಬಂದಿದ್ದ !

ಅಲ್ಲಿಗೆ ನಾವು ಹೋದಾಗ ನೋಡಿದ್ದು ಎರಡೇ
ಒಂದು ಕಪ್ಪನೆಯ ದೊಡ್ಡ ಪಟ್ಟಿಗೆ, ಎರಡನೆಯದು ಏನೋ ಡಿಶ್ ಅಂತಾರಲ್ಲ ಅದು. ಅರ್ಥವಾಗದ ಬದುಕು ! ಬಹಳ ತಲೆಕೆಡಿಸಿಕೊಂಡರೂ ಅದು ಏನೆಂಬುದೇ ಅರ್ಥವಾಗುತ್ತಿರಲಿಲ್ಲ. ಪಟೇಲರ ಮನೆಯವರು ಏನೂ ಹೇಳಲಿಲ್ಲ.

" ಹುಡುಗ್ರೆ ಸುಮ್ನೇ ಇರಿ, ಗಲಾಟೆ ಮಾಡ್ಬೇಡಿ, ಬಂದಿದಾರಲ್ಲ ಹುಬ್ಬಳ್ಳಿ ಸರು ಅವರು ಏನ್ಮಾಡ್ತಾರೆ ಅಂತ ಸುಮ್ನೇ ನೋಡ್ತಾ ಇರಿ ನಿಮ್ಗೇ ಗೊತ್ತಾಗ್ತದೆ "
ಅಂತ ಪಟೇಲರ ಮೊಮ್ಮಗ ಹೇಳಿದ. ನಮ್ಮನೆದಲ್ಲವಲ್ಲ, ಅವರು ನೋಡಲು ಕೊಡುವ ಅವಕಾಶವೇ ದೊಡ್ಡದು. ಹೀಗಾಗಿ ಸುಮ್ಮನೇ ಕುಳಿತು ನೋಡುತ್ತಿದ್ದೆವು.

ಹುಬ್ಬಳ್ಳಿ ಮಾವ ಕಪ್ಪು ಬಾಕ್ಸನ್ನು ತೆಗೆದು ಜೋಡಿಸಿ ಹಚ್ಚಿ ನೋಡುವಾಗ ನಮಗೆ ತಡೆಯಲಾರದ ಕಾತುರ, ಆದರೆ ಅತ ಹೇಳಿದ ಡಿಶ್ ಸರಿಯಾಗಿ ಕೂತಿಲ್ಲ ಅದು ಕೂತರೇನೆ ಡಿಡಿ ಬರುತ್ತೆ ಎಂದು. ಡಿಡಿ ಎಂದರೇನು ಅದು ಹೇಗೆ ಬರುತ್ತೆ ?
ಅದಕ್ಕೆಲ್ಲ ತಾಳ್ಮೆಯಿಂದ ಏನೋ ಸಿಗ್ನಾಲು ಅಂತೆಲ್ಲ ಉತ್ತರ ಹೇಳಿದ ಆತ ಪಾಪ.

ಆಮೇಲೆ ಡಿಶ್ ಪ್ರತಿಷ್ಠಾಪನೆಗೆ ತೊಡಗಿದ. ದೊಡ್ಡದೊಂದು ಬೆಳ್ಳಿಯ ಥರದ ಕೊಡೆ,. ಮಳೆ ಬಂದರೆ ನಾವು ಕೊಡೆಯನ್ನು ಹಿಡಿಯುತ್ತೇವೆ ಆದರೆ ಇಲ್ಲಿ ಉಲ್ಟಾ ಕೇಸು ! ಕೊಡೆಯನ್ನು ಮೇಲೆಮಾಡಿ ಹಿಡಿಯಬೇಕು, ಅದನ್ನು ಆಚೀಚೆ ತಿರುಗಿಸಿ ಅಡ್ಜಸ್ಟ್ ಮಾಡಬೇಕು ! ನಮಗಿದೆಲ್ಲಾ ಹೊಸದು.

ನಾನು ನೋಡುತ್ತಾ ನೋಡುತ್ತಾ ನೋಡುತ್ತಾ ತುಂಬ ಹತ್ತಿರದಿಂದ ಆತನಿಗೆ ಅಲರ್ಜಿಯಾಗುವಷ್ಟು ನೋಡಿದೆ ಆತನಿಗೋ ಇದನ್ನೆಲ್ಲಾ ದಿನಾಲೂ ನೋಡೀ ನೋಡೀ ಬೇಸರವಾದ ಹಾಗಿತ್ತು. ಆತ

" ಅದನ್ನೇನು ನೋಡುತ್ತೀಯಾ, ಅದರಲ್ಲಿ ಏನೂ ಇಲ್ಲಾ " ಎಂದ, ಬಹುಶಃ ಆತ ಏನಾದರೂ ಭೀಮಸೇನ್ ಜೋಷಿಯವರ ಭಕ್ತನಾಗಿದ್ದು , ಹಾಡು ಹಾಡಿದ್ದರೆ ರೀತಿ ಹಾಡುತ್ತಿದ್ದನೇನೋ



[ ಚಿತ್ರ ಋಣ : ಅಂತರ್ಜಾಲ ]

ಡಿಶ್ಶು ನೋಡಲು ಬಂದೆಯಾ ಎನ್ನಯತಂದೆ
ಡಿಶ್ಶು ನೋಡಲು ಬಂದೆಯಾ
ಅಪ್ಪನಿನ್ನ ನೋಡಿ ನಕ್ಕು ನಾ ಸುಸ್ತಾದೆನೇ ?

ಅಳಿಲು ಕಾಗೆಯ ರೀತಿ ತಲೆಯ ಆಚೀಚೆ ತಿರುಗಿ
ಕುಳಿತು ಕಾಣಲು ಅದರಡಿಗೆ ಹೋಗಿ
ಬಳಲಿ ಬೆಂಡಾದ ನಿನ್ನ ಮುಖವನೆ ನೋಡುತ
ಬಳಿಬಂದು ಹೇಳಲು ಏನಿದೆ ಅದರಲಿ

ದೊಡ್ಡದಾದೊಂದು ಕೊಡೆಯು ಅದರ ನಡುವೆ
ಗಿಡ್ಡದೊಂದು ಬಾಕ್ಸು
ಅಡ್ಡಡ್ಡ ಹಲವು ಕಡ್ಡಿಯ ಗೂಡದು ಅಲ್ಯೂಮೀನಿಯಂ
ದಡ್ಡ ನೋಡಲೇನುಂಟಾಥರ ಅದರಲಿ

ನಿನ್ನಂಥಾ ಹುಡುಗರಿಲ್ಲ ಎನ್ನಂತೆ ನಗುವರಿಲ್ಲ
ಸಣ್ಣ ಹುಡುಗನೆಂದು ಜಾಸ್ತಿ ನಾ ನಗಲಿಲ್ಲ
ಸುಮ್ಮನೇ ಇರಲಿನ್ನು ಸಾಧ್ಯವಾಗದು ಎನಗೆ
ತಮ್ಮ ಹೇಳುವೆ ಕೇಳು ಏನಿಲ್ಲ ಅದರಲಿ

ಹುಲಿಯಂತೆ ಹಸಿದ ಕಣ್ಣುಗಳಿಂದ ನೋಡಲು
ಅಲೆಯುವುದೇ ಬರಿದೇ ಎಡತಾಕಲು
ಬಲವೇ ಸಾಲದು ಕಣೋ ನಕ್ಕು ಸೋತುಹೋದೆ
ಸಲಿಗೆಯಿಂದಿರುವ ನಮ್ಮ ನರಹರಿ ವಿಠಲ

ಅಂತೂ ಡಿಶ್ ಪ್ರತಿಷ್ಠಾಪಿಸಿ ಆಯ್ತು.ನಂತರ ಟಿವಿ ಚಾಲೂ ಮಾಡುವುದು. ಪಟೇಲರ ಮನೆಯಲ್ಲಿ ಈಗ ಹಳೆಯ ಪಟೇಲರಿಲ್ಲ, ಅವರೀಗ ದಿವಂಗತರು. ಅವರಮಗ ಎಲ್ಲರಜೊತೆ ಆಗಾಗ ಸುಮ್ಸುಮ್ನೆ ಎಂಬ ಶಬ್ಧಬಳಸಿ ಮಾತಾಡೋದರಿಂದ ಅವನನ್ನು ' ಸುಮ್ಸುಮ್ನೆ ಸುರೇಶ' ಅಂತ ಊರವರು ಕರೀತಾ ಇದ್ರು. ಸುಮ್ಸುಮ್ನೆ ಸುರೇಶ್ರದ್ದೂ ಕೂಡ ಈಗ ಮಾಜಿ ಪಟೇಲ್ಕೆ, ಯಾಕೆಂದ್ರೆ ಪಟೇಲ ಅನ್ನೋ ಶಬ್ದ ಹೋಗಿಬಿಟ್ಟಿದೆ ಈಗ. ಅದರೂ ಗತ್ತಿಗೆ ಏನೂ ಕಮ್ಮಿ ಇರಲಿಲ್ಲ ಬಿಡಿ! ಥೇಟ್ ಅಪ್ಪನ ಪಡಿಯಚ್ಚು, ಪೊದೆ ಮೀಸೆ, ಕೈಯಲ್ಲಿ ಎರಡುಮೊಳದುದ್ದ ಇರುವ ಬೆಳ್ಳಿ ಕಟ್ಟಿಸಿದ ದೊಣ್ಣೆ, ಹೆಗಲಮೇಲೊಂದು ಚಂದಗಾವಿ ಶಾಲು. [ಇದು ಕಾಶಿಗೆ ಹೋದಾಗಅವರಪ್ಪ ತಂದಿದ್ದು! ] ಅಂತೂ ರಾಯರು ಉದ್ಘಾಟನೆ ಮಾಡಲು ಬಂದರು ! ಬಂದು ಆನ್ ಮಾಡಿದ್ದೇ ಕಪ್ಪು ಬಾಕ್ಸೊಳಗೆ ಅದೇನೋಗಜಿಬಿಜಿ ಗಜಿಬಿಜಿ, ಬೆಳ್ಳಗಿರುವ ಪರದೆ ತುಂಬಾ ಲಕ್ಷಗಟ್ಟಲೆ ಚುಕ್ಕಿಗಳು, ಹುಬ್ಬಳ್ಳಿ ಮಾವ ಅಡ್ಜಸ್ಟ್ ಮಾಡುತ್ತಲೇ ಇದ್ದ;ಎದುರಿಗಿರುವ ಸುಣ್ಣದ ಅಂಡೆಯ ಥರದ ಏನನ್ನೋ ತಿರುಗಿಸಿ ತಿರುಗಿಸಿ ಸೋತ ! ಏನಾಶ್ಚರ್ಯ ಅಂತೂ ಸುಮಾರು ಹೊತ್ತಾದ ಮೇಲೆ ಅದರೊಳಗೆಮನುಷ್ಯರು ಬಂದರು ! ಎಲ್ಲರೂ ಚಪ್ಪಾಳೆ ಹೊಡೀರೋ ಅಂತ ಪಟೇಲರ ಮೊಮ್ಮಗ ಹೇಳಿದ, ಎಲ್ಲರೂ ಚಪ್ಪಾಳೆ ಹೊಡೆದೆವು. ಟಿವಿ ಉದ್ಘಾಟನೆಗೆ ಕೋಸಂಬರಿ ಪನವಾರ ಮಾಡಿದ್ದರು ಜೊತೆಗೊಂದು ಹಲ್ವ ಪೀಸು, ಟಿವಿಗೆ ಮಂಗಳಾರತಿ ಮಾಡಿ ಎಲ್ಲರಿಗೂ ಪ್ರಸಾದವಿತರಣೆ ಆಯಿತು. ಎಲ್ಲರಿಗೂ ಖುಷಿಯೋ ಖುಷಿ, ಅದರಲ್ಲೂ ಸುಮ್ಸುಮ್ನೆ ಸುರೇಶ್ರಿಗೆ ಇನ್ನೂ ಖುಷಿ! ಯಾರಮನೆಯಲ್ಲೂ ಥರ ಟಿವಿ ಇರಲಿಲ್ಲ, ಟಿವಿ ನೋಡಿದ್ದೇ ನೋಡಿದ್ದು.ಅಷ್ಟು ಸಣ್ಣ ಬಾಕ್ಸೊಳಗೆ ಮನುಷ್ಯರು ಹೇಗೆ ಹೊಕ್ಕು ಕುಣಿಯುತ್ತಾರೆ ಎಂಬುದು ನನ್ನ ಸಮಸ್ಯೆ, ಮತ್ತು ಅವರು ಎಷ್ಟು ಹೊತ್ತಿನಲ್ಲಿ ಟಿವಿ ಎಂಬ ಕಪ್ಪು ಬಾಕ್ಸೊಳಗೆ ಬರುತ್ತಾರೆ --ಇದೆಲ್ಲಾ ಅರ್ಥವಾಗಿರಲಿಲ್ಲ, ನನಗೊಂದೇ ಅಲ್ಲ ಅಲ್ಲಿರುವ ಯಾರಿಗೂ, ಬಹುಶಃ ಸುಮ್ಸುಮ್ನೆ ಧಣಿಗೂ !