ಚಿತ್ರಕೃಪೆ: ಅಂತರ್ಜಾಲ
ಕೂಪಮಂಡೂಕದೊಡನೆ ಸಂವಾದ !
[ಆತ್ಮೀಯ ಓದುಗಮಿತ್ರರೇ, ಜಗದಮಿತ್ರನ ಕಾವ್ಯದ ೨೯ನೇ ಕಂತನ್ನು ಲೋಕಾರ್ಪಣೆಗೈದಿದ್ದೇನೆ. ವಾಸ್ತವದಲ್ಲಿ ಇದು ೩೩ನೇ ಕಂತು, ೩-೪ ವಿಶೇಷ ಕಂತುಗಳನ್ನು ಇಲ್ಲಿ ಪ್ರಕಟಿಸದೇ ಮುಂಬರುವ ’ಜಗದಮಿತ್ರನ ಕಗ್ಗ’ ಪುಸ್ತಕಕ್ಕಾಗಿ ಕಾಯ್ದಿರಿಸಿದ್ದೇನೆ]
ಮೊಲಕೆ ಮೂರೇಕಾಲು ನಾಕು ಇಲ್ಲೆಂದೆನುತ
ಹೊಲದ ಕೂಪದ ಕಪ್ಪೆ ಆಗುವುದು ತರವೇ?
ಬಿಲವೆ ಮಹಲೆನಗೆಂಬ ಇಲಿಗುಂಟೆ ಹುಲಿಯರಿವು ?
ಗೆಲುವು ಅರಿತಾಮೇಲೆ | ಜಗದಮಿತ್ರ
ಅದು ಕಾಣುವಾವರೆಗೆ ನಿನ್ನರಿವು ಇದಕೆ ಮಿತ
ಇದುವದುವು ಅಳಿಯುವುದು ನವ್ಯದರಿವಿನಲಿ !
ಕೆದಕುತ್ತ ನಡೆವಂಗೆ ಕೊನೆಯಿಲ್ಲ ಶೋಧನೆಗೆ
ಬದುಕು ವೈಶಾಲ್ಯದಲಿ | ಜಗದಮಿತ್ರ
ಮುಕ್ತಮನದಿಂದೊಮ್ಮೆ ನಿತ್ಯ ಹೊಸದನು ಅರಿತು
ವ್ಯಕ್ತಿತ್ವ ಬೆಳೆಸಿಕೊಳು ಹಲವು ಹರವಿನಲಿ
ತ್ಯಕ್ತವಪ್ಪುದೆ ನಿಜವು ತ್ಯಜಿಸೆ ಕೆಲಜನವದನ ?
ಶಕ್ತ ನೀನಾಗರಿತು | ಜಗದಮಿತ್ರ
ಅಣುವ ಕಾಣುವ ಮುನ್ನ ಅಣುವಿಗಾಗಿಯೆ ಶೋಧ
ಪಣತೊಟ್ಟು ಹುಡುಕಿದರು ಪರಮಾಣುಗಳನು
ಕಣಕಣವು ದೈವತವು ವಿಜ್ಞಾನ ಸೀಮಿತವು
ಗುಣದಲ್ಲೆ ನಿರ್ಗುಣವು | ಜಗದಮಿತ್ರ
ಮಡಿಯುಟ್ಟು ದೇವಳದಿ ಇಡಿದಿನವ ಕಳೆಯುತ್ತ
ಕಡೆಗೊಮ್ಮೆ ಶಿವನೆ ಕೇಶವನೆ ಗತಿಯೆನದೆ
ತೊಡಗಿ ಕರ್ತವ್ಯದಿಂ ನಡೆಸು ಜೀವನವನ್ನು
ಬಡವಧನಿಕನು ನೀನೆ ! ಜಗದಮಿತ್ರ
ಚಂದ್ರಲೋಕಕೆ ತೆರಳಿ ತಂದರದೊ ಮೃತ್ತಿಕೆಯ
ಇಂದ್ರಲೋಕವು ಕಂಡರಚ್ಚರಿಯೆ ತಡದಿ ?
ಮಂದ್ರದಲಿ ಸುಳ್ಳೆಸುಳ್ಳೆನುತ ವಾದಿಪಗಿಲ್ಲಿ
ಸಂದ್ರ ಸಂಶೋಧಕಗೆ | ಜಗದಮಿತ್ರ
ವೇದಗಳು ಹೇಳಿದವು ಮೂಲರೂಪದ ಮಹಿಮೆ
ಶೋಧನೆಗೆ ಆಕಾಶ ಅವಕಾಶ ಇಹದಿ
ಭೇದಿಸಲು ಅದನೊಂದ ಮತ್ತೊಂದು ಕಾಣುವುದು
ಸಾಧನೆಗೆ ಫಲವುಂಟು | ಜಗದಮಿತ್ರ
ಮಡಿಯು ಪಂಚೆಯಲಲ್ಲ ಮನದಲ್ಲಿ ಭಾವದಲಿ
ಬಡಿದಾಟ ಮೇಲ್ತನಕೆ ಬರಿದೆ ಬಡಿವಾರ
ತೊಡೆದುಹಾಕಾನಿನ್ನ ಕಲ್ಮಶವನನುದಿನವು
ಬಡವ ನೀನ್ ಜ್ಞಾನದೊಳು | ಜಗದಮಿತ್ರ
ಮೆರವಣಿಗೆ ಜೈಕಾರ ಹಿತಮಿತದಿ ಇರಲಷ್ಟೆ
ಬರಹಗಳ ಸುಳ್ಳು ದಾಖಲೆ ಕಂತೆ ಬೇಕೆ ?
ತೆರೆದಿರಿಸು ಮನವನಾಗಸದೆತ್ತರಕೆ ಎಲ್ಲು
ಬಿರಿದು ದೊಡ್ಡವನಾಗು | ಜಗದಮಿತ್ರ
ನಾವು ಕಂಡಿದ್ದೆಲ್ಲ ಸತ್ಯವೇ ಇರಬಹುದು
ಹಾವು ಹುತ್ತದೊಳಿರಲು ತೋರುವುದು ಹೇಗೆ?
ಭಾವುಕತೆ ಬದಿಗೊತ್ತಿ ಮನದ ಮೇಲ್ಸ್ತರದಲ್ಲಿ
ಠಾವು ಅದ್ವೈತಮಯ | ಜಗದಮಿತ್ರ