ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 12, 2011

ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು !


ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು!

ಆಶ್ಚರ್ಯವಾಯಿತೇ ? ಕನ್ನಡದಲ್ಲಿ ಆಗಾಗ ನಮಗೆ ಕೆಲವು ಹೊಸ ಹೊಸ ಸಂಧಿ[ಗ್ಧ] ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾಮೂಲಾಗಿ ಹೇಗೋ ಪರಿಹಾರವಾಗಿಬಿಟ್ಟರೆ ಇನ್ನೂ ಕೆಲವು ಅಸಾಧಾರಣ ನೆನಪಾಗಿ ಮನದ ಮೂಸೆಯಲ್ಲೆಲ್ಲೋ ಠಿಕಾಣಿ ಹೂಡಿಬಿಡುತ್ತವೆ. ಮನೆಯೊಳಗೆ ಸೇರಿಕೊಂಡ ಹಾವಿನಹಾಗೇ ಆಗಾಗ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸುವವು ಕೆಲವಾದರೆ ಅವುಗಳಲ್ಲೇ ಹತ್ತಾರು 'ಭಿನ್ನಮತೀಯ' ಸಂಧಿಗಳು ನಗುವನ್ನೂ ತರಿಸುತ್ತವೆ. ಕೆಲವೊಮ್ಮೆ ಈ ನಗು ಹೇಗೆಂದರೆ ಒಬ್ಬರೇ ಕುಳಿತು ಘಟನೆ ನೆನೆದರೆ ಯಾ ಓದಿದರೆ ಓಡಿಬರುವ ನಗು ಪಕ್ಕದಲ್ಲೆಲ್ಲೋ ಹಾದುಹೋಗುವವರನ್ನಾಗಲೀ ಅಥವಾ ಅಲ್ಲೇ ಆಚೆ ಈಚೆ ಕುಳಿತು ತಂತಮ್ಮ ಲೋಕದಲ್ಲೇ ಏನೋ ಓದಿನಲ್ಲಿ ವಿಹರಿಸುತ್ತಿರುವವರಾಗಲೀ ಸರಕ್ಕನೆ ನಮ್ಮತ್ತ ಮುಖಮಾಡಿ ’ನಿನ್ನೆ ತನಕ ಸರಿ ಇದ್ನಲ್ಲ ಏನಾಗಿರಬಹುದು ? ’ ಎಂಬ ತಲೆಕೆರೆತಕ್ಕೊಳಗಾಗುವಷ್ಟು ಪ್ರಭಾವಶಾಲಿಯಾಗಿರುತ್ತವೆ.

ನಾವು ಪದವೀಪೂರ್ವ ವ್ಯಾಸಂಗಕ್ಕೆ ಕಾಲೇಜಿಗೆ ಹೋಗುವಾಗ ಗೋಕರ್ಣದಿಂದ ಸಹಾಧ್ಯಾಯಿಯೊಬ್ಬ ಬರುತ್ತಿದ್ದ. ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರ ಫಲವಾಗಿ ಒತ್ತಾಯಪೂರ್ವಕವಾಗಿ ನಾವು ಸಂಧಿ, ಸಮಾಸ, ಛಂದಸ್ಸು ಇವುಗಳ ಬಗ್ಗೆ ಗಮನವಿರಿಸಲೇ ಬೇಕಾಗುತ್ತಿತ್ತು. ಒಮ್ಮೆ ಗಮನ ಕಮ್ಮಿಯಾಯಿತೋ ನಾವು ಬಳಸುವ ಕನ್ನಡ ನಮ್ಮಕಾಲದ ಹಳ್ಳಿಯ ಮಕ್ಕಳ ದೊಗಳೇ ಚಡ್ಡಿಯಂತೇ ಯಾವುದೋ ಒಂದುಕಡೆ ಜಾರಿಬಿಡುತ್ತಿತ್ತು. ಆಗಾಗ ಹುಕ್ಕುಗಳು ಬಕ್ಕಲ್ಲುಗಳು ಇರದೇ ಹಾಗೇ ಮಡಚಿ ಸೆಕ್ಕಿಕೊಂಡ ಚಡ್ಡಿಯ ಮೇಲಂಚು ಕೈಕೊಟ್ಟು ಕಳವಳಕ್ಕೀಡುಮಾಡಿದಂತೇ ಆಗಿಬಿಡುವ ಸಂಧಿ[ಗ್ಧ]ಕಾಲವೂ ಇತ್ತು. ಹಾಗಾಗಿ ಕನ್ನಡದಮೇಲೆ ಸದಾ ನಿಗಾ ಇರಿಸಲೇ ಬೇಕಾಗಿತ್ತು! "ಇವತ್ತು ಕನ್ನಡ ಉಪಾಧ್ಯಾಯರಿಂದ ಹೇಗಾದರೂ ಬಚಾವ್ ಮಾಡಿ ಮರ್ಯಾದೆ ಕಾಪಾಡು, ನಿಂಗೆ ಕಾಯಿ ಒಡೆಸುತ್ತೇನೆ " ಎಂದು ಸ್ಥಳೀಯ ಕೆಲವು ದೇವರಿಗೆ ಲಂಚದ ಆಮಿಷವೊಡ್ಡುವುದೂ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ನಿಜಕ್ಕೂ ಕನ್ನಡ ಬಹಳ ಮೇರು ಸ್ಥಾನದಲ್ಲಿರುತ್ತದೆ. ನಿಮಗೆ ಅದರ ಪರಿಶುದ್ಧ ಅನುಭವ ಮಂಗಳೂರಿಗೆ ಹೋದಾಗ ಆಗಬಹುದು. ಪುಸ್ತಕದಲ್ಲಿ ಇರುವ ಸಾಲುಗಳನ್ನು ಬರೆದಷ್ಟೇ ಸಮಯ ತೆಗೆದುಕೊಂಡು [ಮಾತಿನಲ್ಲೂ] ಅದೇರೀತಿ ಬಳಸುವುದು ಅಲ್ಲಿನ ವಾಡಿಕೆ.

ಇರಲಿ, ಕಲಿಸುವ ವಿಷಯದಲ್ಲಿ ಸ್ವಲ್ಪ ಚೆನ್ನಾಗೇ ಪ್ರೌಢಿಮೆ ಹೊಂದಿದ್ದ ಕನ್ನಡ ಪಂಡಿತರು ಆಗಾಗ ಹೂಂಕರಿಸಿದರೆ ಕಟ್ಟಡದ ತಾರಸಿಯೇ ಹಾರಿಹೋಗುವ ನಿರೀಕ್ಷಣೆಯಿತ್ತು. ಮೇಲಾಗಿ ಹೆಣ್ಣು-ಗಂಡುಮಕ್ಕಳ ಸಹಶಿಕ್ಷಣ ಪದ್ಧತಿಯಾಗಿರುವುದರಿಂದ ಆ ಹೆಣ್ಣುಮಕ್ಕಳ ಎದುರಿಗೆ ನಾವು ಗುರುಗಳಿಂದ ’ಮಂತ್ರಾಕ್ಷತೆ’ ಹಾಕಿಸಿಕೊಳ್ಳಲು ಸುತರಾಂ ಸಿದ್ಧರಿರಲಿಲ್ಲ. ಹಾಗಂತ ತೀರಾ ’ಸುಸಂಸ್ಕೃತರಾದ’ ನಮ್ಮಲ್ಲೇ ಕೆಲವರು ಅಸಾಮಾನ್ಯ ಸಾಧನೆಗೈದು ’ರಾಕೆಟ್ಟು’ ಕಂಡುಕೊಂಡಿದ್ದರು! ಅವರಮುಂದೆ ನಮ್ಮ ಅಬ್ದುಲ್ ಕಲಾಮ್ ಸಾಹೇಬರು ಕಂಡುಹಿಡಿದ ರಾಕೆಟ್ಟು ಏನೇನೂ ಅಲ್ಲ! ದುಡ್ಡುಕೊಡುವುದೂ ಬೇಡ ಧೂಪಹಾಕುವುದೂ ಬೇಡ, ಕುಳಿತಲ್ಲೇ ಕಂಡುಹಿಡಿದ ಬಿಟ್ಟಿ ಸಂಶೋಧನೆ: ಒಂದೊಂದು ರಾಕೆಟ್ಟು ಸುಯ್ಯನೆ ಹೊರಟಿತು ಎಂದರೆ ಅದು ಗುರಿಮುಟ್ಟಿಯೇ ತೀರುತ್ತಿತ್ತು! ’ಅಗ್ನಿ’ ಪೃಥ್ವಿ’ ಎಲ್ಲವುಗಳಿಗಿಂತಲೂ ಪರಿಣಾಮಕಾರಿಯಾದ ಅವು ಕೆಲವೊಮ್ಮೆ ಹುಡುಗಿಯರ ಕಡೆಗೂ ಹೋಗಿ ಮಾತನಾಡಿಸುತ್ತಿದ್ದವು. ಪಂಡಿತರು ಕರಿಹಲಗೆಯಮೇಲೆ ಏನನ್ನೋ ವಿಸ್ತರಿಸುವಾಗ ಅವರ ಕಿವಿಯ ವರೆಗೂ ಸಾಗುವ ರಾಕೆಟ್ಟುಗಳು ಯಾವ ’ಬೇಹುಗಾರಿಕಾ ಸಂಸ್ಥೆ’ಗೆ ಸೇರಿದ್ದೆಂದು ತಿಳಿಯದೇ ಕೋಪಗೊಳ್ಳುವ ಅವರಿಗೆ ವಿಷಯಾಂತರಕ್ಕೆ ಕಾರಣವಾದರೆ ಇನ್ನೂ ಕೆಲವು ಸಂದಿ[ಗ್ಧ] ಸಮಯದಲ್ಲಿ ಸುಣ್ಣದ ಕಡ್ಡಿ ಬಿಸಾಕಿ ಅವರು ಹೊರಟೇ ಹೋಗುತ್ತಿದ್ದರು.

ಇಂತಹ ಸಂಧಿ[ಗ್ಧ] ದಿನಗಳಲ್ಲೇ ಗೋಕರ್ಣದಲ್ಲಿ ’ಮಂಗರ್ಷಿ’ ಎಂಬೊಂದು ಅಡ್ಡಹೆಸರಿನ ಕುಟುಂಬವಿದೆ ಎಂಬುದು ಗೊತ್ತಾಗಿದ್ದು! ನನಗಂತೂ ಈ ಸೃಷ್ಟಿಯಲ್ಲಿ ಎಂತೆಂತಹ ಅದ್ಭುತ ಹೆಸರುಗಳಿವೆಯಪ್ಪಾ ಎನ್ನಿಸಿಬಿಟ್ಟಿತ್ತು. ಕೇವಲ ಪ್ರಭಾಕರ, ಕಮಲಾಕರ ಇಂಥಾದ್ದನ್ನು ಬಿಟ್ಟರೆ ಎಮ್ಮೆಕರ, ಆಕಳಕರವನ್ನು ನೋಡಿದ್ದ ನಮಗೆ ಬಾಂಧೇಕರ, ಮಾಲ್ಸೇಕರ, ಕುಮಟಾಕರ, ಹೊನ್ನಾವರಕರ, ಚಂದಾವರಕರ, ಅಸ್ನೋಟೀಕರ ಈ ಥರದ ಹಲವು ಹೊಸಹೊಸ ’ಕರ’ಗಳೂ ಕಂಡವು! ಅವುಗಳಲ್ಲೆಲ್ಲಾ ತೀರಾ ಸಾಮಾನ್ಯ ಸಂಧಿ ಇರುವುದರಿಂದ [ಉದಾಹರಣೆಗೆ ಕುಮಟಾ+ಕರ= ಕುಮಟಾಕರ] ಗಮನಿಸುವಂತಹ ಅಂಥಾ ವಿಶೇಷವೇನೂ ಉಳಿಯಲಿಲ್ಲ. ಆದರೆ ಆಗಷ್ಟೇ ಸವರ್ಣದೀರ್ಘ ಸಂಧಿ, ಜಸ್ತ್ವ ಸಂಧಿ, ಸ್ತುತ್ವಸಂಧಿ ಇತ್ಯಾದಿಗಳನ್ನು ಕನಸಲ್ಲೂ ನೆನೆದು ಅವುಗಳನ್ನು ಮಟ್ಟಹಾಕಲು ಅಣ್ವಸ್ತ್ರಗಳಿಗಾಗಿ ಕೆಲವರು ಶೋಧ ನಡೆಸಿದ್ದರು. ಆಗ ನಮ್ಮಲ್ಲೇ ಒಬ್ಬ ಸಹಾಧ್ಯಾಯಿಯ ಅಡ್ಡಹೆಸರು ’ಮಂಗರ್ಷಿ’ ಎಂದಿತ್ತು. ಶೂನ್ಯವೇಳೆಯಲ್ಲಿ ’ರಾಕೆಟ್ಟು’ ಕಂಡು ಹಿಡಿದ ’ವಿಜ್ಞಾನಿ’ಗಳೆಲ್ಲಾ ಸೇರಿ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಒಬ್ಬಾತ ಸಂಧಿ ಬಿಡಿಸಿದ್ದು ಹೀಗೆ: ಮಂಗ + ಋಷಿ= ಮಂಗರ್ಷಿ [ಋಣಾನುಬಂಧ ಸಂಧಿ] ! ಪಾಪದ ಸಹಾಧ್ಯಾಯಿ ಮಂಗರ್ಷಿ ನೋಡುವುದಕ್ಕೂ ಸ್ವಲ್ಪ ಮಂಗಕ್ಕೆ ಹತ್ತಿರದ ಸಂಬಂಧಿಯಂತೇ ತೋರುತ್ತಿರುವುದರಿಂದ ಆತನಿಗೆ ಹಳೆಯ ಋಣಾನುಬಂಧವಿರಬೇಕೆಂದು ಯಾರೋ ಹಲುಬಿದರು. ’ವಿಜ್ಞಾನಿಗಳು’ ಕೇಕೇ ಹಾಕಿ ನಕ್ಕರು. ನಾವು ಮತ್ತೆ ಏನೂಮಾಡಲಾರದ ಅಸಹಾಯ ಸಂಧಿ[ಗ್ಧ] ಕಾಲದಲ್ಲಿದ್ದೆವು.

ಆ ದಿನಗಳಲ್ಲಿ ಕರ್ನಾಟಕದಾದ್ಯಂತ ಮಡಿ ಉಟ್ಟ[ಕೆಂಪು] ಬಸ್ಸುಗಳು ಓಡಾಡುತ್ತಿದ್ದವು! ಅನೇಕ ಬಸ್ಸುಗಳಲ್ಲಿ ವಿಧವಿಧಾವಾದ ಎಚ್ಚರಿಕೆಗಳನ್ನು ಬರೆದಿಡಲಾಗುತ್ತಿತ್ತು. ’ನಿಮ್ಮ ಸಾಮಾನಿಗೆ ನೀವೇ ಜವಾಬ್ದಾರರು’ , ’ ವಾಹನ ಚಲಿಸುವಾಗ ಯಾವುದೇ ಅಗಾಂಗಗಳನ್ನು ಹೊರಹಾಕಬಾರದು’,’ಧೂಮಪಾನ ನಿಷೇಧಿಸಿದೆ’[ಮದ್ಯಪಾನ ಅಡ್ಡಿಯಿಲ್ಲ ಅಂತಲೇ?] ನಮಗೆಲ್ಲಾ ಈ ಒಕ್ಕಣಿಕೆಗಳ ’ಕೆಮಿಕಲ್ ರಿಯಾಕ್ಷನ್’ ಗೊತ್ತಾಗುತ್ತಿರಲಿಲ್ಲ, ಆದರೆ ನಮ್ಮಜೊತೆಗೆ ಇದ್ದ ’ವಿಜ್ಞಾನಿಗಳು’ ಇವುಗಳ ಬಗ್ಗೆ ಗಮನಹರಿಸುತ್ತಿದ್ದರು. ಅವರುಗಳ ಜೊತೆ ಇರುವಾಗ ಎಲ್ಲೆಲ್ಲೂ ಹಿಮಾಲಯದ ಕಡಿದಾದ ಆಘಾತಕಾರೀ ದಾರಿಗಳೇ ಕಾಣುತ್ತಿದ್ದವು ನಮಗೆ. ಅವರು ಯಾಕೆ ನಕ್ಕರು ನಮ್ಮನ್ನು ನೋಡಿ ನಕ್ಕರೇ ಅಥವಾ ಬೇರೇ ಇನ್ಯಾವುದೋ ವಿಷಯಕ್ಕೆ ನಕ್ಕರೇ ಎಂಬುದನ್ನು ಅರ್ಥೈಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದ ’ಟ್ಯೂಬ್‍ಲೈಟುಗಳು’ ನಾವಾಗಿದ್ದೆವು.

ಆಗೆಲ್ಲಾ ಬಸ್ಸುಗಳಲ್ಲೇ ಆಗಲಿ ಯಾವುದೇ ಕಚೇರಿಗಳಲ್ಲೇ ಆಗಲಿ ಗಣಕಯಂತ್ರಗಳು ಇನ್ನೂ ’ಗಣೇಶಪೂಜೆ’ಯಲ್ಲಿದ್ದುದರಿಂದ ಬರಹಗಳನ್ನು ’ಸ್ಟೆನ್ಸಿಲ್’ ಥರದ ಲೋಹದ ತಗಡನ್ನು ಬಳಸಿ ಬಣ್ಣಗಳಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದರು. ಅಕ್ಷರಗಳಲ್ಲಿ ಆಂಗಿಕ ಶುದ್ಧತೆಯಿರದೇ ಅವು ಅಪೂರ್ಣವಾಗಿ ಕೆಲವು ಬಿಟ್ಟಸ್ಥಳಗಳಿಂದ ಕೂಡಿ ಕಲ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಉದಾಹರಣೆಗೆ ’ಹೊನ್ನಾವರ’ ಎಂದು ಬರೆದಿದ್ದು ’ಪೊನ್ನಾದರ’ ಆಗಿಯೂ ಕಾಣುವ ಸಂಧಿಕಾಲ ವಿತ್ತು. ಆದರೂ ’ಅದು’ ’ಇದೇ’ ಎಂಬ ಭಾವನಾತ್ಮಕ ವಿಶ್ಲೇಷಣೆ ಎಮ್ಮೆಫ್ ಹುಸೇನನ ಚಿತ್ರ ನೋಡುಗರಲ್ಲಿರುವಂತೇ ನಮ್ಮ ಹಳ್ಳಿಗರಲ್ಲೂ ಅರ್ಥೈಸುವ ಆ ’ಶಕ್ತಿ’ ಇತ್ತು. ಇಂತಹ ಸಮಯದಲ್ಲಿ ಕೆಲವೊಮ್ಮೆ ಬರೆಯುವಾಗ ಎಲ್ಲಾದರೂ ಅಪ್ಪಿತಪ್ಪಿ ಯಾವುದೋ ಅಕ್ಷರದ ಕಾಲೋ ಕೈಯ್ಯೋ ಅಚ್ಚುಮೂಡದಿದ್ದರೆ ಅಪಾರ್ಥಕೊಡುವ ಸಂಧಿ[ಗ್ಧ]ಕಾಲವೂ ಬರುತ್ತಿತ್ತು. ಕೆಲವೊಮ್ಮೆ ಬೆಂಗಳೂರಿನಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಬೆಂಗಳೂರು-ಭಟ್ಕಳ್ಳ ಎಂದೂ ಗೋಕರ್ಣದಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಗೋಕರ್ಣ-ಭಟ್ಕಳ್ಳ ಎಂದೂ ಬರೆದಿದ್ದರೆ ಸಹಜವಾಗಿ ಬರೆಯುವ ಹಲವು ತಪ್ಪುಗಳಲ್ಲಿ ಇವೂ ಎರಡು ಎಂದು ಸುಮ್ಮನಾಗುವುದು ಕನ್ನಡಿಗರ ಹೆಗ್ಗುಣವಾಗಿತ್ತು. ನಮ್ಮ ’ವಿಜ್ಞಾನಿಗಳು’ ಆಗೆಲ್ಲಾ ರಸ್ತೆಯುದ್ದಕ್ಕೂ ಸಿಗುವ ಮೈಲಿಗಲ್ಲುಗಳಲ್ಲಿ ಬರೆದಿರುವ ಅಕ್ಷರಗಳಲ್ಲಿ ಕೆಲವು ತಿದ್ದುಪಡಿ ಮಾಡುತ್ತಿದ್ದರು. ಉದಾಹರಣೆಗೆ ’ಆರೊಳ್ಳಿ’ ಎಂಬ ಹಳ್ಳಿಯ ಹೆಸರು ’ಆಠೊಳ್ಳಿ’ ಯಾದರೆ ’ಭಾಸ್ಕೇರಿ’ ಇದ್ದಿದ್ದು ’ಭಾಸ್ಕೇಠಿ’ ಯಾಗಿ ಕೂರುತ್ತಿತ್ತು. ಕಪ್ಪು ಅಕ್ಷರಗಳಲ್ಲಿರುವ ಅವುಗಳ ಮಧ್ಯೆ ರಸ್ತೆರಿಪೇರಿಗೆ ತಂದು ಚೆಲ್ಲಿದ್ದ ದಾಮರು ಬಳಸಿ ಅಕ್ಷರಗಳಿಗೆ ’ಗೌರವ’ ಸೂಚಿಸುವುದರಿಂದ ಮುಂದಿನವರ್ಷ ಮತ್ತೆ ಅಲ್ಲಿಗೆ ಬೋರ್ಡು ಬರೆಯುವಾತ ಬರುವಾಗ ಆತನಿಗೆ ಮೂಲಹೆಸರೇ ಹೀಗಿರಬಹುದು ಎಂಬ ಕಲ್ಪನೆ ಬರುತ್ತಿತ್ತು. ಮತ್ತೆ ತಪ್ಪೇ ಬರೆಯಲ್ಪಟ್ಟು ಢಾಳಾಗಿ ಕಣ್ಣಿಗೆ ಹೊಡೆಯುತ್ತಿತ್ತು. ಇದೇ ರೀತಿ ಕಿಲೋ ಮೀಟರು ಲೆಕ್ಕ ೩೦೦ ಎಂದು ಇಂಗ್ಲೀಷ್ ಅಂಕೆಗಳಲ್ಲಿ ನಮೂದಿಸಿದ್ದು ೮೦೦ ಆಗಿರುತ್ತಿತ್ತು ! ಯಾರೋ ಹಾದಿಹೋಕ ಅದನ್ನು ಓದಿಕೊಂಡು ತಪ್ಪಾಗಿ ಗ್ರಹಿಸಿ ತೊಂದರೆಯಾಬಗಹುದೆಂಬ ’ಸಂಶೋಧನೆ’ ನಮ್ಮ ’ವಿಜ್ಞಾನಿಗಳಿಗೆ’ ಇರಲಿಲ್ಲ.

’ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡು’ ಎಂಬುದೊಂದು ಕನ್ನಡದ ಗಾದೆ ಅಲ್ಲವೇ? ಹಾಗೇ ಅಂದು ಅಲ್ಲಿ ವಿಜೃಂಭಿಸಿದ ನಮ್ಮ ’ರಾಕೆಟ್ಟು ವಿಜ್ಞಾನಿಗಳೇ’ ಇಂದು ರಾಜಕೀಯ ಮುಖಂಡರಾಗಿದ್ದಾರೆ! ಯಾವುದೋ ಅಮ್ಮ ಮತ್ತು ಇನ್ಯಾವುದೋ ಅಪ್ಪಗಳ ಕೂಡುವಿಕೆಯ ಸಂಧಿಯಿಂದ ಜನಿಸಿದ ಈ ಜೀವಿಗಳು ಯಾರನ್ನೋ ಬಲಿಹಾಕುತ್ತಾರೆ, ಎಲ್ಲೋ ಮೇಯುತ್ತಾರೆ, ಮಂತ್ರಿಮಾಗಧರೂ ಆಗುತ್ತಾರೆ. ಇದು ಕಲಿಯುಗದ ಧರ್ಮವಾಗಿದೆ ! ವಿಧಾನಸೌಧಗಳಲ್ಲಿ ಮೇಜುಹತ್ತುವುದು, ಮೈಕೈ ಮಿಳಾಯಿಸಿ ಹೊಡೆದಾಡುವುದು ಅದೇ ’ವಿಜ್ಞಾನಿಗಳ’ ಪ್ರತಿರೂಪವಾಗಿದೆ. ನಿಮ್ಮ ಮಕ್ಕಳು ಏನೂ ಆಗದಿದ್ದರೂ ಪರವಾಗಿಲ್ಲ ಇಂತಹ ’ವಿಜ್ಞಾನಿ’ಗಳಾಗಲಿ ಎಲ್ಲಾದರೂ ಮಂತ್ರಿಮಂಡಲ ಸೇರಿ ಬದುಕಿಕೊಂಡು ಹೋಗುತ್ತಾರೆ! ಹಲವಾರು ಜನರಿಗೆ ಸಂಧಿ[ಗ್ಧತೆ]ಯನ್ನು ತಂದಿಡುವ ಇಂಥವರು ಹಲವಾರು ಕಡೆ ತಿರುಗಿ ಅಲ್ಲೆಲ್ಲಾ ಬೇರೆ ಬೇರೆ ಸಂಧಿ[ಸುವ]ಕ್ರಿಯೆಯನ್ನು ಮಾಡಿ ಅನೇಕ ’ಮರಿ ವಿಜ್ಞಾನಿಗಳ’ ಕೊಡುಗೆ ನೀಡುತ್ತಾರೆ! ಬ್ರಷ್ಟಾಚಾರ ನಿರ್ಮೂಲನಾ ಆಂದೋಲನಕ್ಕೆ ಇವರೂ ಸೇರಿಕೊಂಡರೆ ಆಶ್ಚರ್ಯವೇನಿಲ್ಲ. ಅವರಲ್ಲೇ ಕೆಲವರು ಪಾದಯಾತ್ರೆ ಮಾಡುತ್ತಾರೆ-ಕ್ವಿಂಟಾಲುಗಟ್ಟಲೇ ಒಣಹಣ್ಣು-ಬೀಜಗಳನ್ನು [ಡ್ರೈ ಫ್ರೂಟ್ಸ್] ತಿಂದು ಹಾಕುತ್ತಾರೆ!

ಹೊಸ ಪರಿವೀಕ್ಷಣೆ : ಚೆನ್ನಾಗಿ ಓದಿದವರು ವೈದ್ಯರೋ , ತಂತ್ರಜ್ಞರೋ ಆಗುತ್ತಾರೆ, ಸ್ವಲ್ಪ ಓದಿದವರು ಆಡಳಿತಾತ್ಮಕ ಸೇವೆಗೆ ಸೇರುತ್ತಾರೆ, ಚಿಲ್ಲರೇ ಓದಿದವರು ಆಡಳಿತ ನಡೆಸುವವರಿಗೆ ಸಹಾಯಕರೋ ಅಥವಾ ಕಂತ್ರಾಟುದಾರರೋ ಆಗುತ್ತಾರೆ, ಏನೂ ಓದದ ರೌಡಿಗಳು ಈ ಎಲ್ಲರನ್ನೂ ಆಳುವ ಪ್ರಭುಗಳಾಗುತ್ತಾರೆ ! ಇದು ಭಾರತದಲ್ಲಿ ಮಾತ್ರ ಸಾಧ್ಯ, ಜೈ ಹಿಂದ್ !