ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 16, 2011

ದಿನಕರನ್ ಟ್ರಾನ್ಸ್‍ಪೋರ್ಟ್!

[ಅಜ್ಞಾತ ಚಿತ್ರಕಲಾವಿದನಿಗೆ ನಮಸ್ಕಾರ ]

ದಿನಕರನ್ ಟ್ರಾನ್ಸ್‍ಪೋರ್ಟ್!

ತೀರಾ ಹಗುರವಾಗಿ ಮಾತನಾಡಬೇಡಿ. ನಾವು ಅಷ್ಟೇನೂ ಹಗುರವಲ್ಲ. ನಮಗೂ ಸಾಕಷ್ಟು ಸ್ವಾಭಿಮಾನವಿದೆ. ತುಸು ಹೆಚ್ಚಾಗಿ ನಾವೂ ಕಮ್ಮಿಯೇನಲ್ಲ ಎನ್ನಲು ಕನ್ನಡನಾಡಿನಲ್ಲಿ ಅದೂ ಬೆಂದಕಾಳೂರೆಂಬ ಬೆಂಗಳೂರಿನಲ್ಲಿ ನಾವು ನೆಲೆನಿಂತು ಒಂದು ಲೆವಲ್ ಮ್ಯಾಂಟೇನ್ ಮಾಡಿಕೊಂಡಿದ್ದೇವೆ. ಉಟ್ಟಬಟ್ಟೆಯೂ ಚಿಕ್ಕ ಚಡ್ಡಿಯೇ ಆಗಿದ್ದು ಅದೇ ಸ್ಥಿತಿಯಲ್ಲಿ ಇಲ್ಲಿಗೆ ಬಂದ ಈ ದಿನಕರನ್ ಏನಿಲ್ಲವೆಂದರೂ ಇವತ್ತಿಗೆ ನಾಲ್ಕು ಲಾರಿ ಮತ್ತು ೬ ಕಾರುಗಳ ಮಾಲೀಕನಾಗಿರುವುದೇ ಇದಕ್ಕೆ ಸಾಕ್ಷಿ!

" ನೀ ಎನ್ನ ಪೇಸರಂಗ ಎನಕೆ ತೆರಿಯಾದು " ಎದುರಿಗೆ ಕುಳಿತಿರುವವರ ಮಾತನ್ನು ಕೇಳಿ ಅವಾಕ್ಕಾದರು ದಿನಕರನ್. ದಿನಕರನ್ ಬೆಂಗಳೂರಿನ ಕೊಳೇಗೇರಿ ತಮಿಳಿಗರ ಸಂಘದ ಅಧ್ಯಕ್ಷರೂ ಹೌದು. ಅಲ್ಲೇ ಇರುವ ಜಾಗದಲ್ಲೇ ಸ್ವಲ್ಪ ಎತ್ತರದ ಗುಡಿಸಲು ಕಾಣಿಸುತ್ತದೆ ನೋಡಿ ಅದೇ ಅವರ ಮನೆ. ಬಹಳ ಸರಳ ಜೀವನ !ಹರುಕು ಮುರುಕು ಕನ್ನಡ ಕಲಿತಿದ್ದ ದಿನಕರನ್ ಪರವಾಗಿ ಅಂದು ಕೊಳೇಗೇರಿಯಲ್ಲಿ ನಿಂತು ಸಭೆಯಲ್ಲಿ ಮಾತನ್ನಾಡುತ್ತಿದ್ದುದು ದಿನಕರನ್ ಅವರ ಸ್ನೇಹಿತ ಮುನಿರಾಜು-ಕನ್ನಡದವರೇ. ತಮಿಳರೇ ತುಂಬಿರುವ ಸಭೆಯಲ್ಲಿ ಕನ್ನಡದಲ್ಲಿ ಭಾಷಣಮಾಡಲು ಎದೆಗಾರಿಕೆ ಬೇಕು ಸ್ವಾಮೀ. ಸ್ವಲ್ಪ ರೌಡೀ ಶೈಲಿಯಲ್ಲೇ ಬದುಕುತ್ತಿದ್ದ ಮುನಿರಾಜುಗೆ ಹುಂಬಧೈರ್ಯ ಸಹಜವಾಗೇ ಇದೆ; ಹಾಗಾಗಿ ಮುನಿರಾಜು ಕನ್ನಡದಲ್ಲೇ ಮಾತನಾಡುತ್ತಿದ್ದುದು. ನೀವು ತಿಪ್ಪಸಂದ್ರ, ನೀಲಸಂದ್ರ, ಕೃಷ್ಣರಾಜಪುರ ಇಲ್ಲೆಲ್ಲಾ ಸುತ್ತಾಡಿ ಒಂದೆರಡು ರಸ್ತೆಗಳ ಬಗ್ಗೆ ಕೇಳಿ-ನಿಮಗೆ ತಮಿಳಿನಲ್ಲೇ ಪೂರ್ಣ ಮಾಹಿತಿ ಸಿಗುತ್ತದೆಯೇ ಹೊರತು ಕನ್ನಡದಲ್ಲಲ್ಲ! ಮೈಚಿವುಟಿಕೊಂಡು ನಾವೆಲ್ಲಿದ್ದೇವೆ ಅಂತಲೋ ಸಚಿನ್ ತೆಂಡೂಲ್ಕರ್ ತಂಪು ಪಾನೀಯದ ಜಾಹೀರಾತೊಂದರಲ್ಲಿ " ಮೈ ಕಹಾಂ ಹೂಂ ..." ಎಂದು ಹಲ್ಲುಕಿರಿದ ಹಾಗೇ ಮಾಡುತ್ತಲೋ ನಾವೆಲ್ಲಿದ್ದೇವೆ ಎಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಕನ್ನಡಿಗರಿಗಿದೆ.

ಜನಜೀವನ ವೈವಿಧ್ಯದಲ್ಲಿ ಹಲವು ಆಸೆಗಳನ್ನು ಜನಸಾಮಾನ್ಯರು ಅದುಮಿಡಲು ಸಾಧ್ಯವೇ ಇಲ್ಲ. ಅದರಲ್ಲೂ ಸುತ್ತಲೂ ಉನ್ನತಮಟ್ಟದ ಜೀವನವನ್ನು ಉಪಭೋಗಿಸುವ ಜನರನ್ನು ಕಾಣುತ್ತಾ ಬದುಕುವ ಕೊಳೆಗೇರಿಗರಿಗೆ ತಾವೂ ಹಲವು ಸೌಲಭ್ಯಗಳನ್ನು ಪಡೆಯುವಾಸೆ. ಆದರೆ ಅದು ಸಾಧ್ಯವೇ? ಅಂತಹ ಅದಮ್ಯ ಆಸೆಗಳನ್ನು ಸಿಗುವ ಚಿಕ್ಕಪುಟ್ಟ ಪರಿಕರಗಳಿಂದಲೇ ಪಡೆದುಕೊಳ್ಳುವುದು ಅವರಲ್ಲೇ ಕೆಲವರ ಇರಾದೆಯಾದರೆ ಇನ್ನು ಕೆಲವರು ಅವರಲ್ಲೂ ಅಂತಸ್ತುಗಳನ್ನು ತೋರಬಯಸುವವರು ! ಇಂತಹ ’ಅಂತಸ್ತಿನ ಕೊಳೆಗೇರಿ’ ವಾಸಿಗಳಿಗೆ ಅವರ ಅನುಕೂಲಕ್ಕಾಗಿ ಅವರಲ್ಲೇ ಒಬ್ಬ ಸ್ಥಾಪಿಸಿದ ನಾಮಫಲಕವಿಲ್ಲದ ಸಂಸ್ಥೆ ’ದಿನಕರನ್ ಟ್ರಾನ್ಸ್‍ಪೋರ್ಟ್’ !

ಮಾರುಕಟ್ಟೆಯಲ್ಲಿ ಸಿಗುವ ಹಳೆಯಬಟ್ಟೆಗಳಲ್ಲಿ ಚೆನ್ನಾಗಿಕಾಣುವ ಒಂದು ಸಫಾರಿ ದಿರಿಸನ್ನು ಖರೀದಿಸಿ ಹಾಕಿಕೊಂಡು ಕತ್ತಿನಲ್ಲಿ ಮಿಂಚುವ ರೋಲ್ಡ್ ಗೋಲ್ಡ್ ಸರ, ಹತ್ತೂ ಬೆರಳುಗಳಿಗೆ ಥಳಥಳ ಹೊಳೆಯುವ ಕಲ್ಲುಗಳುಳ್ಳ ಕ್ಷಮಿಸಿ ನವರತ್ನಗಳುಳ್ಳ [ ಆಭರಣದ ಅಂಗಡಿಗಳಲ್ಲಿ ನಾವು ಕೊಳ್ಳುವಾಗ ’ನವರತ್ನಗಳೆ’ಂದು ನಮಗೆ ಮೋಸದಿಂದ ಮಾರಲ್ಪಡುವ ವಸ್ತುಗಳು ವಿನ್ಯಾಸ ವೈಖರಿಗೆ ಸೋಲುವ ಹೆಂಗಸರ ಕೊಸರುವಿಕೆಯಿಂದ ಅಸಹಾಯರಾಗಿ ಅದೇ ಆಭರಣಗಳನ್ನು ಬದಲಾಯಿಸಿ ಹೊಸದು ಕೊಳ್ಳಲು ಹೋದಾಗ ಕಲ್ಲುಗಳೆಂದು ಅದೇ ಅಂಗಡಿಯವರಿಂದ ಗುರುತಿಸಲ್ಪಟ್ಟು ಬೆಲೆಯಿಲ್ಲದ ಹರಳುಗಳಾಗಿ ನಮ್ಮ ಹೃದಯದಲ್ಲಿ ರಕ್ತ ಹರಳುಗಟ್ಟಿಸುವುದು ಹಗಲು ದರೋಡೆಯ ಇನ್ನೊಂದು ರೂಪ ಎನ್ನೋಣವೇ ? ಮಿಕ್ಕೆಲ್ಲಕ್ಕೂ ಆಯ ಅಳತೆ ಕಲ್ಪಿಸಿರುವ ಸಮಾಜದಲ್ಲಿ ಆಭರಣಗಳಿಗೆ ಮತ್ತು ರೇಶ್ಮೆ ಬಟ್ಟೆಗಳಿಗೆ ಇನ್ನೂ ಸಮರ್ಪಕ ಮೌಲ್ಯಮಾಪನ ಬರದಿದ್ದುದು ನಮ್ಮ ಆಧುನಿಕ ವಿಜ್ಞಾನದ ಔನ್ನತ್ಯಕ್ಕೆ ಹಿಡಿದ ಕನ್ನಡಿ ಎನ್ನೋಣವೇ ? ಅಥವಾ ನಾವೇ ಬುದ್ದುಗಳು ಎಂದುಕೊಂಡು ಸುಮ್ಮನಾಗೋಣವೇ ?-ತೀರ್ಮಾನ ನಿಮಗೇ ಬಿಟ್ಟಿದ್ದು! ] ಉಂಗುರಗಳನ್ನು ತೊಟ್ಟ ಉದ್ದನೆಯ ಸಣಕಲು ಇದ್ದಿಲಬಣ್ಣದ ವ್ಯಕ್ತಿಯೇ ಶ್ರೀಮಾನ್ ದಿನಕರನ್. ಏಕಾಂಗಿಯಾಗಿ ಸಾಹುಕಾರನಾಗಿಯೂ ನೌಕರನಾಗಿಯೂ ’ಒನ್ ಮ್ಯಾನ್ ಆರ್ಮಿ’ ಎಂಬಂತೇ ಅವರು ಚಾಲಕನೂ ಮಾಲಕನೂ ಆಗಿ ಹಲವು ಗಾಡಿಗಳನ್ನು ನಡೆಸುತ್ತಾ ಇದ್ದಾರೆ. ಎಲ್ಲಕ್ಕೂ ಮೇಲ್ಗಡೆ ’ದಿನಕರನ್ ಟ್ರಾನ್ಸ್‍ಪೋರ್ಟ್’ ಎಂದೇ ಬರೆದಿರುತ್ತದೆ. ಅವರು ಬರೆಸಿರುವ ಅಕ್ಷರಗಳಲ್ಲಿ ಸ್ವಲ್ಪ ತಪ್ಪಿದ್ದರೆ ತಿದ್ದುಕೊಂಡು ಓದಿ.

ದಿನಕರನ್ ಟ್ರಾನ್ಸ್‍ಪೋರ್ಟ್ ಬಗ್ಗೆ ಬರೆಯಬೇಕಾಗಿ ಬಂದುದು ಏಕೆಗೊತ್ತೋ ಅವರನ್ನು ಆಡಿಕೊಳ್ಳುವ ಸಲುವಾಗಿ ಖಂಡಿತಾ ಅಲ್ಲ. ಅವರಲ್ಲಿರುವ ಗಾಡಿಗಳಿಗೆ ಒಂದಕ್ಕೂ ಸರಿಯಾದ ಬ್ರೇಕು, ಸಸ್ಪೆನ್ಶನ್ ವಗೈರೆ ಇಲ್ಲ. ಅಕಸ್ಮಾತ್ ರಸ್ತೆಯಲ್ಲಿ ಅವರು ಗಾಡಿತೆಗೆದುಕೊಂಡು ಹೊರಟರೆ ಅವರ ಹಿಂದೆ ಹಾಗೂ ಮುಂದೆ ಚಲಿಸುವ ಗಾಡಿಗಳವರು ಅವರವರ ಬ್ರೇಕುಗಳನ್ನು ಅತಿಯಾಗಿ ಆತುಕೊಂಡೇ ಇರಬೇಕಾದ ಅಪ್ರಮೇಯವಿದೆ. ಬರೇ ಗೇರಿನಲ್ಲೇ ನಿಯಂತ್ರಿಸಿ ನಿಲ್ಲಿಸುವ ಕಲೆ ದಿನಕರನ್ ಅವರಿಗೆ ಸಿದ್ಧಿಸಿದೆಯಾದರೂ ಒಂದೊಮ್ಮೆ ಗಾಡಿ ನಿಲ್ಲದೇ ಹೋದರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ! ಬೇಸಿಗೆಯಲ್ಲಿ ಹಲವುಸಲ ಏಕಕಾಲಕ್ಕೆ ಒಂದು ಕೊಳೇಗೇರಿಯವರು ಇನ್ನೊಂದೆಡೆ ಸಂಬಂಧ ಕುದುರಿಸಲೋ ಅಥವಾ ಇನ್ನೇತಕ್ಕೋ ಹೋಗಬೇಕಾದಾಗ ಕೆಲವರು ಅವರನ್ನು ಕರೆದೇ ಕರೆಯುತ್ತಾರೆ. ಆಗ ಒಂದೇ ದಿನ ಒಂದೇ ಸಮಯಕ್ಕೆ ಹಲವು ಗಾಡಿಗಳನ್ನು ಚಲಾಯಿಸುವ ಪ್ರಮೇಯ ಬಂದರೆ ಆಗ ಚಾಲಕರಾಗಿ ಅವರ ಪರಿಚಯದ ಕೆಲವು ಸ್ಲಮ್ ಹುಡುಗರು ಅವರ ಗಾಡಿಗಳನ್ನು ಎತ್ತುಕೊಂಡು ಹೊರಡುವುದಿದೆ. ಅಂತಹ ಸನ್ನಿವೇಶಗಳಲ್ಲಿ ದೇವರಮೇಲೇ ಭಾರಹಾಕಿ ನಡೆಯಬೇಕಾದ ಪರಿಸ್ಥಿತಿ ದಾರಿಹೋಕರದು.

ಉಳಿದ ದಿನಗಳಲ್ಲಿ ನಗರಪಾಲಿಕೆಯ ಕಸ ವಿಲೇವಾರಿಗೂ ಅವರ ಗಾಡಿಗಳು ಹೋಗುತ್ತಿರುತ್ತವೆ. ಒಂದೇ ಹೆಡ್ ಲೈಟಿರುವ ಒಕ್ಕಣ್ಣಗಳು, ಚಕ್ರಗಳ ಅಲೈನಮೆಂಟು ಕಳೆದುಹೋಗಿ ನಾನಾ ರೀತಿಯಲ್ಲಿ ನರ್ತಿಸುತ್ತಾ ಓಡುವ ಲಾರಿ ಮತ್ತು ಕಾರುಗಳು, ಸವಕಳಿಯಾಗಿ ಇನ್ನೇನು ಒಡೆದು ಹೋಗಬಹುದಾದ ರೀತಿಯ ಟೈರುಗಳು, ರಾಚಿರುವ ರಾಡಿಗಳೇ ಬಣ್ಣಗಳಾಗಿ ’ಕಳೆಕಟ್ಟಿರುವ’ ವಾಹನಗಳು, ಬೆಂಕಿಬಿದ್ದಾಗ ಮೇಲೇಳುವ ಹೊಗೆಯಂತೇ ದುತ್ತನೇ ಹೊಗೆಯುಗುಳುವ ಗಾಡಿಗಳು, ಗೇರ್ ಬದಲಾಯಿಸಿದಾಗ ಕಿಟಾರನೆ ಕಿರುಚುವ ಗಾಡಿಗಳು ಹೀಗೇ ವೈವಿಧ್ಯಮಯ ಗಾಡಿಗಳನ್ನು ದಿನಕರನ್ ಹೊಂದಿದ್ದಾರೆ. ಕಾರುಗಳೆಲ್ಲಾ ಬಹುತೇಕ ಪ್ರೀಮಿಯರ್ ಪದ್ಮಿನಿ ಅಥವಾ ಪ್ರೀಮಿಯರ್ ೧೦೮ ಈ ಕಾರುಗಳು. ಒಂದುಕಾಲಕ್ಕೆ ರಾಜಕಾರಣಿಗಳ ಕನಸಿನ ಕಾರಾಗಿದ್ದ ಕಾಂಟೆಸ್ಸಾ ಕಾರೂ ಒಂದು ಇತ್ತೀಚೆಗೆ ಬಂದು ಸೇರಿದೆ! ಲಾರಿಗಳಲ್ಲಿ ಹಲವೆಲ್ಲಾ ಕಲ್ಲಂಗಡಿ ಹಣ್ಣಿನ ಮೂತಿಯವು! ಆ ಲಾರಿಗಳ ಬಾಡಿ ಬಿಲ್ಡರ‍್ ಗಳು ಯಾರೋ ಅವರಿಗೆ ಬಹುಮಾನ ಘೋಷಿಸಬೇಕು. ಹೀಗೇ ವೈವಿಧ್ಯಮಯ ಗಾಡಿಗಳನ್ನು ನಡೆಸುವ ದಿನಕರನ್ ಅವರು ಖಾಲಿ ಇರುವ ದಿನಗಳಲ್ಲಿ ಮಿಕ್ಕಿದ ಗಾಡಿಗಳನ್ನೆಲ್ಲಾ ಅವರ ಏರಿಯಾದ ಹತ್ತಿರ ರಸ್ತೆಗಳಲ್ಲೇ ನಿಲ್ಲಿಸಿ [ಕೆಲವು ಸದಾ ಅಲ್ಲೀ ಇಲ್ಲೀ ಪೂರ್ತಿ ಕೆಟ್ಟು ವಾರಗಟ್ಟಲೆ ನಿಂತೇ ಇರುತ್ತವೆ ಅನ್ನಿ]ಅವರ ಗಿರಾಕಿಗಳಿಗೆ ಬೇಕಾದ ಕಾರನ್ನು ತೆಗೆದುಕೊಂಡು ಹೊರಡುತ್ತಾರೆ. ಒಮ್ಮೆ ಈ ಗಾಡಿ ಚಲಾಯಿಸಿದರೆ ಇನ್ನೊಮ್ಮೆ ಆ ಗಾಡಿ ಹೀಗೇ ಗಿರಾಕಿಗಳ ತೃಪ್ತಿಯೇ ಅವರ ಧ್ಯೇಯ !

ಅವರ ಗಾಡಿಗಳಲ್ಲಿ ಓಡಾಡುವ ಮಂದಿಗೆ ಅದೇ ಪರಮಾನಂದ! ಅದು ಅವರಿಗೆ ಅತ್ಯಂತ ಹೆಮ್ಮೆಯ ಅಂತಸ್ತಿನ ವಿಷಯ! ಒಂದೊಮ್ಮೆ ಓಡಾಡುವಾಗ ಏನಾದರೂ ಆದರೂ ಜನ್ಮದಲ್ಲೇ ದುಡಿಯಲಾರದಷ್ಟನ್ನು ಸರಕಾರ ಪರಿಹಾರಧನವಾಗಿ ಕೊಡುತ್ತದೆ ಎಂಬ ಅಭಿಮತವೂ ಇರಬಹುದು. ಬೆಂಗಳೂರಿಗರಾದರೆ ನೀವು ದಿನಕರನ್ ಟ್ರಾನ್ಸ್‍ಪೋರ್ಟ್ ಗಾಡಿಗಳನ್ನು ನೋಡಿಯೇ ಇರುತ್ತೀರಿ. ಕೆಲವರಂತೂ ಕೇವಲ ವಾಸನಾಬಲದಿಂದಲೇ ಈ ಗಾಡಿಗಳನ್ನು ಪತ್ತೆಹಚ್ಚಬಲ್ಲರು! ಫಿಟ್‍ನೆಸ್ ಸರ್ಟಿಫಿಕೇಟ್ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಹಲವು ಗಾಡಿಗಳ ಪೈಕಿ ಇವೂ ಸೇರುತ್ತವೆ. ಯಶವಂತಪುರದ ಮಂಡಿದೊರೆಗಳ ಕಿರಾಣಿ ಸಾಮಾನು ಸಾಗಿಸುವ ಕೆಲವು ಲಾರಿಗಳು ವೈಖರಿಯಲ್ಲಿ ಈ ವಾಹನಗಳ ಸಂಬಂಧಿಗಳು. ಕೆಲವೊಮ್ಮೆ ಅದಲುಬದಲಾದರೂ ತಿಳಿಯದಷ್ಟು ಸಾಮ್ಯತೆ ಇದೆ. ಒಂದೇ ವ್ಯತ್ಯಾಸವೆಂದರೆ ದಿನಕರನ್ ಅವರ ಲಾರಿಗಳಿಗೆ ಕಸವಿಲೇವಾರಿಮಾಡುವಾಗ ಅಂಟಿದ ಕೊಳೆಯ ಚಿತ್ರಗಳು, ಬಗ್ಗಡದ ಕಲೆಗಳು ಮತ್ತದರ ಅಸಾಧ್ಯ ’ಘಮಲು’! ಬಿಟ್ಟರೆ ಮಿಕ್ಕುಳಿದ ಸ್ಥಿತಿ ಒಂದೇ.

ಇನ್ನು ಕೆಲವು ಮರಳು ಲಾರಿಗಳು. ಅವುಗಳಲ್ಲಿ ನಿನ್ನೆಯವರೆಗೆ ಕಿನ್ನರ್ [ಕ್ಷಮಿಸಿ ಅವರನ್ನೇ ಕೇಳಿದಾಗ ತಾನು ’ಕಿನ್ನರ್’ ಎನ್ನುತ್ತಿದ್ದರು ಅಷ್ಟೆಲ್ಲಾ ಕಲಿತವರು: ಕಿನ್ನರ್= ಕ್ಲೀನರ್]ಆಗಿದ್ದವರು ಇಂದು ಡೈವರ್ [ಅವರೇ ಹೇಳಿದ್ದು]ಆಗುತ್ತಾರೆ. ಅವರಲ್ಲಿ ಅನೇಕರಿಗೆ ಸರಿಯಾದ ಸೂಚನೆಗಳ ಅರಿವಿರುವುದಿಲ್ಲ. ಚಾಲನೆಮಾಡುವಾಗ ಒಂದು ಪೆಗ್ಗು ’ಪರಮಾತ್ಮ’ನನ್ನು ಒಳಗೆ ಬಿಟ್ಟುಕೊಂಡುಬಿಟ್ಟರೆ ಅವರಲ್ಲಿರುವ ಪರಮಾತ್ಮ ಆಡಿಸಿದ್ದೇ ಆಟ! ಯಶವಂತಪುರದಲ್ಲಿ ಇದೇ ರೀತಿಯ ಮರಳು ಲಾರಿಯೊಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಹುಡುಗನೋರ್ವನನ್ನು ಬಲಿತೆಗೆದುಕೊಂಡಿದ್ದು ನನಗೆ ಕಣ್ಣಿಗಿನ್ನೂ ಕಟ್ಟಿದಂತಿದೆ.ಅದು ನಡೆದು ಒಂದು ವರ್ಷ. ಹೀಗಾಗಿ ಆ ಡೈವರ್ ನಡೆಸಿದ ಘಟನೆ ವಾರ್ಷಿಕೋತ್ಸವದ ನೆನಪಿನಲ್ಲಿ ಇದನ್ನು ಬರೆಯುತ್ತಿದ್ದೇನೆ! ಒಮ್ಮೆ ಬಸ್ಸಿನಲ್ಲಿ ನೆಲಮಂಗಲ ಕಡೆಯಿಂದ ಬರುತ್ತಿದ್ದಾಗ ಬೆಳಗಿನ ಜಾವದಲ್ಲಿ ತುಂತುರು ಮಳೆ ಹನಿಯುತ್ತಿತ್ತು. ಒಂದು ಮರಳುಲಾರಿ ಮುಂದೆ ಬರುತ್ತಿದ್ದುದು ಮಾತ್ರ ಗೊತ್ತು. ಆಮೇಲೆ ನಮ್ಮ ಬಸ್ಸು ರಸ್ತೆಯ ಪಕ್ಕದ ಮರವನ್ನು ಮುದ್ದಿಸಿತ್ತು. ನಮ್ಮ ಡ್ರೈವರ್ ಹೆದರಿ ಓಡಿಹೋಗಿದ್ದ! ಆದರೆ ಬಸ್ಸಿನಲ್ಲಿ ಇರುವವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು. ಮರಳಲಾರಿ ಅಡ್ಡ ಬಂದುಬಿಟ್ಟಿತಂತೆ ಎಂದು ಯಾರೋ ಹೇಳಿದರು. ಸದ್ಯ ಬದುಕಿದೆಯಾ ಬಡಜೀವವೇ ಎನ್ನುತ್ತಾ ಕಾಲೆಳೆದುಕೊಂಡು ಮನೆಗೆ ಹೋದಮೇಲೆ ದೇವರಿಗೆ ತುಪ್ಪದ ದೀಪ ಹಚ್ಚಿದೆವು !

೧೯೯೮ ರ ವರೆಗೂ ಕಾರೆಂಬುದು ಒಂದು ವಿಶೇಷ ಆಸ್ತಿ-ಅಂತಸ್ತಿನ ಹೆಗ್ಗುರುತಾಗಿತ್ತು. ಆಮೇಲೆ ಬಂದ ತಂತ್ರಾಂಶ ಕಂಪನಿಗಳ ಉನ್ನತ ಸಂಬಳದಿಂದ ಸಾಮಾಜಿಕ ಕ್ರಾಂತಿಯುಂಟಾಗಿ ’ಗಂಡಾಗುಂಡಿ ಮಾಡಿಯಾದರೂ ಗಡಿಗೇ ತುಪ್ಪಾ ಕುಡೀಬೇಕು’ ಎನ್ನುವ ಹೇಳಿಕೆಯನ್ನೇ ಬೇರೇ ರೀತಿಯಲ್ಲಿ ಹೇಳುತ್ತಾ ವಿದೇಶೀ ಬ್ಯಾಂಕುಗಳು ಬಂದವು. ಎಲ್ಲದಕ್ಕೂ ಸಾಲ ನೀಡಲ್ಪಟ್ಟಿತ್ತು. ೧೯೮೦ರ ವೇಳೆಗೆ ಹೇಗೆ ಎಲ್ಲರಮನೆಯ ಛಾವಣಿಯಮೇಲೆ ಟಿವಿ ಆಂಟೆನಾ ಕಾಣಿಸಿದರೇ ಅದೊಂದು ಅಂತಸ್ತಿನ ಧ್ಯೋತಕವಾಗಿತ್ತೋ ಅದೇ ತೆರನಾಗಿ ೧೯೯೮ರಿಂದ ಸುಮಾರು ೨೦೦೦ನೇ ಇಸವಿಯ ವರೆಗೆ ಎಲ್ಲರ ಮನೆಯಮುಂದೂ ಒಂದೊಂದು ಕಾರು! ಕಾರುಬಾರು ಜೋರು. ಆಮೇಲೆ ೨೦೦೧ ರಲ್ಲಿ ಆದ ಜಾಗತಿಕ ಆರ್ಥಿಕ ಹಿಂಜರಿತ ಹಲವು ತಂತ್ರಾಂಶ ತಂತ್ರಜ್ಞರನ್ನು ಬೀದಿಯಲ್ಲಿ ನಿಲ್ಲುವಂತೇ ಮಾಡಿತು. ಅವರಿಗೆ ಕರೆದು ಕೊಟ್ಟು ಕಾರು-ಬಂಗಲೆ ಕೊಡಿಸಿದ್ದ ಬ್ಯಾಂಕುಗಳು ಬಾಕಿಹಣ ಪಾವತಿಯಾಗದಾದಾಗ ಕೊಟ್ಟಿದ್ದನ್ನೆಲ್ಲಾ ಕಿತ್ತುಕೊಂಡರು. ಈ ದಿನಗಳಲ್ಲಿ ವಾಹನಸಾಲ ಸರ್ವೇಸಾಮಾನ್ಯವಾಗಿಹೋಯಿತು. ಈಗ ಕಾರೆಂಬುದು ಅಂತಸ್ತಿನ ಪ್ರಶ್ನೆಯಲ್ಲ-ಅನುಕೂಲದ ಪ್ರಶ್ನೆಯಾಗಿದೆ.ಆದರೆ ಕೆಲವರಿಗೆ ಮಾತ್ರ ಅದು ಇನ್ನೂ ಅಂತಸ್ತಿನ ಹೆಗ್ಗುರುತೇ ಆಗುಳಿದಿದೆ. ಇಂತಹ ಹೆಗ್ಗುರುತಿಗಾಗಿ ೧೯೮೫ ರಲ್ಲಿ ಚಾಲ್ತಿಯಲ್ಲಿ ಕಣ್ಮಣಿಯಾಗಿದ್ದ ಪ್ರೀಮಿಯರ್ ಪದ್ಮಿನಿ ಕಾರುಗಳು ಇಂದೂ ಅವರಲ್ಲಿವೆ. ಅಪರೂಪಕ್ಕೊಮ್ಮೆ ರಸ್ತೆಗೆ ಇಳಿಯುವ ಅವುಗಳನ್ನು ತಿರುಗಿಸುವಾಗ, ಬ್ರೇಕ್ ಹಾಕುವಾಗ ಚಾಲಕನಾಗಿರುವ ಯಜಮಾನ ಅನುಭವಿಸುವ ಯಾತನೆ ಪಕ್ಕದ ಗಾಡಿಗಳಲ್ಲಿ ಕೂತಿರುವ ನಮಗೆ ನೋಡಸಿಗುತ್ತದೆ. ಆದರೂ ಅವರಿಗೆ ಅದೇ ಕಾರು ಬೇಕು! ಅವರ ಈ ರಥಯಾತ್ರೆ ಅಲ್ಲಲ್ಲಿ ಹಲವು ಸರ್ತಿ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತದೆ ಎಂಬುದನ್ನೂ ಅವರು ಅರಿತಂತಿಲ್ಲ, ಇದು ವಿಪರ್ಯಾಸ.

ನಮ್ಮ ಬಿಳೀ ಕಾಪರ್ ಬಾಟಮ್ ಸಾರಿ ಸಾರಿ ಖಾಕಿ ಬಾಟಮ್ ನವರು ಖರ್ಚಿಗೆ ಕಾಸುಬೇಕಾದಾಗೆಲ್ಲಾ ಸಿಗ್ನಾಲ್ ತಿರುವಿನಲ್ಲೋ ಪಕ್ಕದಲ್ಲೋ ನಿಂತು ಸಿಗ್ನಾಲ್ ಹಳದಿ ಇರುವಾಗ ದಾಟಿದವರನ್ನೂ ಹಿಡಿದು ಸಾವಿರದೆಂಟು ತರಲೆಮಾಡುತ್ತಾರೆ. ಆಮೇಲೆ ನೂರೋ ನೂರೈವತ್ತೋ ತೆತ್ತರೆ ಕೋಳೀಸಾರಿಗೋ ’ಪರಮಾತ್ಮ’ನ ಲೆಕ್ಕಕ್ಕೋ ಆಯ್ತು ಎಂದು ಬಿಟ್ಟುಬಿಡುತ್ತಾರೆ. ಅದೇ ಖಾಖೀ ಬಾಟಮ್ ನವರಿಗೆ ಇಂತಹ ’ರಥ’ಗಳು ಕಾಣಿಸುವುದೇ ಇಲ್ಲವೋ ಅಥವಾ ಇವುಗಳ ಹಿಂದೆಯೂ ಯಾವುದೇ ಮಾಫಿಯಾ ಇದೆಯೋ ತಿಳಿಯದಾಗಿದೆ. ಅಂತೂ ’ಸಿಂಗಾಪೂರ್’ ಆಗುತ್ತಿರುವ ಬೆಂಗಳೂರಿನಲ್ಲಿ ಎತ್ತಿನ ಗಾಡಿಗಳನ್ನಂತೂ ಮುಖ್ಯರಸ್ತೆಗಳಲ್ಲಿ ನಿಲ್ಲಿಸಿದರು, ಆದರೆ ಕಲ್ಲಂಗಡಿ ಮೂತಿಯ ರಥಗಳು ಮಾತ್ರ ಹರೆದಾಡುತ್ತಲೇ ಇವೆ. ಅವುಗಳ ಉಪಟಳ ಹೇಳತೀರದ್ದು. ಡೈವರು ದಾರಿ ಕೊಟ್ಟರೆ ನಾವು ಮುಂದೆ ಸಾಗಬೇಕು. ಒಪಕ್ಷ ದಾರಿ ಕೊಡಲಿಲ್ಲವೋ ಆ ರಥಗಳ ಹಿಂದೆ ನಾವು ಕಾಲಾಳುಗಳಂತೇ ತೆರಳಬೇಕು!

ಅಗೋ ನೋಡಿ ನಾನು ಹೇಳುತ್ತಿರುವಂತೇ ಬಂದೇ ಬಿಟ್ಟಿತು ’ದಿನಕರನ್ ಟ್ರಾನ್ಸ್‍ಪೋರ್ಟ್’ ಲಾರಿ. ರಬ್ಬರ್ ಹಾರ್ನ್ ಪೋಂ ಪೋಂ ಪೋಂ ಎನ್ನುವುದು ಸದ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲೂ ಈಗ ಕಾಣಿಸುತ್ತಿಲ್ಲ, ಆದರೆ ಈ ರಥಗಳಲ್ಲಿದೆ. ಯಾಕೆಂದರೆ ಮಿಕ್ಕಿದ ಹಾರ್ನ್ ಗಳಿಗೆ ಬ್ಯಾಟರಿ ಬಹಳ ಬೇಕಾಗುತ್ತದೆ ಇದಾದರೆ ಬ್ಯಾಟರಿ ಇರದಿದ್ದರೂ ಸೈ! ಬೆಂಗಳೂರಿನಲ್ಲಿ ವಿಹರಿಸುವ ಜನ ಒಮ್ಮೆಯಾದರೂ ’ದಿನಕರನ್ ಟ್ರಾನ್ಸ್‍ಪೋರ್ಟ್’ ಕಾರು ಹತ್ತಿ- ಜಸ್ಟ್ ಫಾರೇ ಚೇಂಜ್ ! ಜೈ ದಿನಕರನ್ !