ಚಿತ್ರಋಣ: ಅಂತರ್ಜಾಲ
ಆಯುರ್ವೇದದ ತಾಕತ್ತು ಅರ್ಥವಾಗಬೇಕಿದ್ದರೆ ಡಾ. ಗಿರಿಧರ ಕಜೆಯಂತಹ ವೈದ್ಯರು ಇರಬೇಕು!
ಕೃತಘ್ನತೆ
-------
ಪ್ರತೀರಾತ್ರಿ
ಎರಡು ಜಾಪಾಳ ಮಾತ್ರೆ
ಸೇವಿಸುತ್ತಿದ್ದ
ಆಸಾಮಿ
"ಬಾಳೇಹಣ್ಣು
ತಿಂತೇನೆ
ಹಾಗಾಗಿ
ಮಲವಿಸರ್ಜನೆ
ಸರಿಯಾಗಿ
ಆಗ್ತಿದೆ"
ಎಂದ !
------
ದೂರು
------
"ಹೆರಿಡಿಟರಿ ಆಗಿ
ಮಾತ್ರ ಬರುವ
ಈ ಕಾಯಿಲೆ,
೯೯ ಪರ್ಸೆಂಟು
ನಮ್ಮೆಜಮಾನ್ರಿಂದಲೇ
ನಂಗೆ
ಬಂದಿರೋದು ಡಾಕ್ಟ್ರೇ
-----
"ವೈದ್ಯರೇ, ಬೊಜ್ಜು ಕರಗಿಸಲು ಏನುಮಾಡಬೇಕು?"
"ಪ್ರತಿ ರಾತ್ರಿ ಎರಡು ಚಪಾತಿ ತಿನ್ನಿ"
" ಅದು ಸರಿ, ಎರಡು ಚಪಾತೀನ ಊಟಕ್ಕೆ ಮೊದಲು ತಿನ್ನಲೋ ನಂತರವೋ?"
------
ಇಂಥಾ ಜೋಕುಗಳನ್ನೂ ಆಯುರ್ವೇದದ ಬಗೆಗಿನ ಪೂರಕ ಮಾಹಿತಿಗಳ ಲೇಖನಗಳನ್ನೂ ಓದಬೇಕೆಂದರೆ ನೀವೊಂದು ಚಿಕ್ಕ ಕೆಲಸಮಾಡಬೇಕು! ಯಾವ ಕೆಲಸ ಎಂಬುದನ್ನು ಬಾಕಿ ಇಟ್ಟುಕೊಳ್ಳುತ್ತೇನೆ, ಅದು ಸ್ವಲ್ಪ ಸೀಕ್ರೆಟ್ಟು!
ಮುಖ ನೋಡಿ ಮುದುಕನೊಬ್ಬ ನಕ್ಕ! ನಾನೂ ನಕ್ಕೆ. ನಾನಂತೂ ಪುರಾಣಿಕ ಎಂಬುದು ನಿಮಗೆಲ್ಲಾ ಈಗಾಗಲೇ ತಿಳಿದುಹೋಗಿರುವ ಸೀಕ್ರೆಟ್ಟು. ಮುದುಕನೂ ನನ್ನ ಹಾಗೇನೇ. ಆದರೆ ಮುದುಕ ಕ್ವಾಲಿಫೈಡ್ ಎಂಬುದು ನೋಡಿದ ಕೂಡಲೇ ಗೊತ್ತಾಗ್ತಿತ್ತು; ಅಂದರೆ ನಾನು ಅದಲ್ಲ ಎಂದುಕೊಳ್ಳಬೇಡಿ ಮತ್ತೆ! ಮುದುಕ ಹೇಳಿದ ಕಥೆ ಬಹಳ ದೀರ್ಘವಾಗಿತ್ತು; ಅರ್ಧ ಕೇಳುತ್ತಿರುವಾಗ ನನಗೆ ಕೇಳಲು ಹೆದರಿಕೆಯಾಗಿ ಇನ್ನುಮುಂದೆ ಹೇಳಲೇಬೇಡಿ ಎನ್ನೋಣ ಎಂದುಕೊಂಡೆ, ಆದರೂ ನನ್ನಪಾಡಿಗೆ ನಾನೇ ಧೈರ್ಯ ತಂದುಕೊಂಡು ಸುಮ್ಮನೇ ಹೂಂ ಗುಟ್ಟುತ್ತಿದ್ದೆ. ಕಥೆ ಮುಗಿಯುವವರೆಗೂ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಯಾರೆಂಬುದು ಗೊತ್ತಿರದ ಸೀಕ್ರೆಟ್ಟು! ಕಥೆ ಮುಗಿದಾಗ ಮಾತ್ರ ನೆಮ್ಮದಿಯ ದಿನ ನನ್ನದಾಗಬಹುದೆಂಬ ಭಾವನೆ ಮನದೊಳಗೆಲ್ಲೋ ಮೂಡಿದ್ದು ಅಂದು ಯಾರಲ್ಲಿಯೂ ಹೇಳಿಕೊಂಡಿರದ ಸೀಕ್ರೆಟ್ಟು!!
ಅಂದಹಾಗೇ, ಮೈಸೂರಿನ ರಾಮಕೃಷ್ಣನದ್ದು ನಿವೃತ್ತ ಜೀವನ. ಮಕ್ಕಳು ವಿದೇಶದಲ್ಲೇ ಸೆಟ್ಲ್ ಆಗಿದ್ದರಿಂದಲೂ, ಇಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲವೆಂತಲೂ ವೃದ್ಧಾಪ್ಯ ಕಳೆಯಲು ತೆರಳಿದ್ದು ’ವಿಮಾನದಲ್ಲಿ ಹತ್ತಿರ’ವೆನಿಸುವ ಅಮೇರಿಕೆಗೆ! ಅಮೇರಿಕಾದಲ್ಲಿ ಮಕ್ಕಳ ಮನೆಯಲ್ಲಿ ಉಳಿದುಕೊಂಡು ನೆಮ್ಮದಿಯಿಂದಿದ್ದ ರಾಮಕೃಷ್ಣನಿಗೆ, ನಡೆದಾಡುವಾಗ ಕೆಲವೊಮ್ಮೆ ಇದ್ದಕ್ಕಿದ್ದಂತೇ ಶರೀರದ ಎಡಪಾರ್ಶ್ವದ ತುಂಬಾ ತಡೆಯಲಾರದ ನೋವು ಅನುಭವಿಸುವಂತಹ ದಿನಗಳು ಎದುರಾದವು; ನಡೆಯುವಾಗ ಮನೆಯ ಲಾನ್ ನಲ್ಲಿ ಬಿದ್ದುಬಿಡುತ್ತಿದ್ದ. ಸಹಿಸಲಸಾಧ್ಯ ನೋವು, ಎಡಪಾರ್ಶ್ವದ ಸ್ಥಿಮಿತವೇ ತಪ್ಪಿದ ಅನುಭವ. ಮಕ್ಕಳು ಬಿಡುತ್ತಾರೆಯೇ? ಅಮೇರಿಕೆಯಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆಲ್ಲಾ ಕರೆದೊಯ್ದರು. ನೂರಾರು ರೀತಿಯ ಪರೀಕ್ಷೆಗಳು ನಡೆದವು. ಅನೇಕ ವಿಧದ ಔಷಧಗಳು ಹೊಟ್ಟೆಯನ್ನು ಹೊಕ್ಕು ಉರಿಹೆಚ್ಚಿಸಿದವು. ಅಲ್ಲಿನ ವೈದ್ಯರಿಗೆ ಕಾಯಿಲೆ ಮಾತ್ರ ಗೊತ್ತಾಗಲೇ ಇಲ್ಲ! ರಾಮಕೃಷ್ಣ ಮತ್ತು ಮಕ್ಕಳು ಕೇಳಿದಾಗ ಇನ್ನೂ ಪರೀಕ್ಷೆಯಾಗಬೇಕು ಎನ್ನುತ್ತಿದ್ದರು. ಹೀಗೇ ವರ್ಷಗಟ್ಟಲೆ ಕಾಲ ನೂಕಿದ ರಾಮಕೃಷನಿಗೆ ನೋವು ಬಂದಾಗ ಅದನ್ನು ಸಹಿಸಲು ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದ್ದರ ಜೊತೆಗೆ ’ಪೇನ್ ಮ್ಯಾನೇಜ್ ಮೆಂಟ್’ಬಗ್ಗೆ ದಿನಗಟ್ಟಲೆ ತರಬೇತಿ ನಡೆಸಿ ಕೈತೊಳೆದುಕೊಂಡರು.
ಇಷ್ಟೇ ತನ್ನ ಜೀವನವೆಂದುಕೊಂಡ ರಾಮಕೃಷ್ಣ[ಅಶ್ವತ್ಥನಾರಾಯಣ], ಸುಮ್ಮನೇ ಮಲಗಿದ್ದಾಗ, ಒಮ್ಮೆ ಮಾತೃನೆಲ ಭಾರತದ ನೆನಪು ಬಂತು, ಇಲ್ಲಿನ ಆಯುರ್ವೇದದ ನೆನಪು ಬಂತು; ಯಾಕಾಗಬಾರದು ಒಮ್ಮೆ ಪ್ರಯತ್ನಿಸೋಣ ಎಂದುಕೊಂಡ ರಾಮಕೃಷ್ಣನಿಗೆ ಗೆಳೆಯರೊಬ್ಬರು ಕೆಲವು ಆಯುರ್ವೇದ ವೈದ್ಯರುಗಳ ಹೆಸರನ್ನು ಕೊಟ್ಟರು. ಭಾರತಕ್ಕೆ ಬಂದಿಳಿದ ರಾಮಕೃಷ್ಣ, ಸೀದಾ ನಡೆದದ್ದು ದಕ್ಷಿಣ ಕನ್ನಡಕ್ಕೆ. ಅಲ್ಲೊಬ್ಬ ಶೆಣೈ ಎನ್ನುವ ಮುಪ್ಪಿನ ಆಯುರ್ವೇದ ವೈದ್ಯರು-ಬೆಳಗಿನ ಪೂಜೆಯನ್ನು ಮುಗಿಸಿ ಮನೆಯ ಹೊರಜಗುಲಿಗೆ ಬಂದರು. ರಾಮಕೃಷ್ಣ ತನ್ನ ತೊಂದರೆಯನ್ನು ಹೇಳಿಕೊಂಡ. ತುಸು ಚಿಂತಿಸಿದ ಶೆಣೈ "ನೋಡಪ್ಪಾ, ನನಗೀಗ ಮುಪ್ಪು ಅವರಿಸಿ ಎಲ್ಲಾ ವಿಧದ ಚಿಕಿತ್ಸೆಗಳನ್ನೂ ಮಾಡಲು ಕಷ್ಟವಾಗುತ್ತದೆ. ನನ್ನ ಸಲಹೆಯನ್ನು ಸ್ವೀಕರಿಸುತ್ತೀಯಾ ಎಂತಾದರೆ ನಿನಗೊಂದು ಮಾತು ಹೇಳುತ್ತೇನೆ." "ಆಯ್ತು ಹೇಳಿ" ಎಂದ ರಾಮಕೃಷ್ಣನಿಗೆ ಶೆಣೈ ಹೇಳಿದ್ದು"ಬೆಂಗಳೂರಿನಲ್ಲಿ ನನ್ನ ಶಿಷ್ಯ ಗಿರಿಧರ ಕಜೆ ಇದ್ದಾನೆ, ವಿಳಾಸ ಕೊಡುತ್ತೇನೆ, ನಾನೂ ಫೋನಿನಲ್ಲಿ ಹೇಳುತ್ತೇನೆ, ಹೋಗಿ ಅಲ್ಲಿ ಚಿಕಿತ್ಸೆ ಪಡೆ."
ಡಾ| ಗಿರಿಧರ ಕಜೆ, ಒಮ್ಮೆ ತನ್ನ ಚಿಕಿತ್ಸಾಲಯದಲ್ಲಿ ಇದ್ದಾಗ ಭೇಟಿಗೆ ಬಂದ ರಾಮಕೃಷ್ಣ ನಡೆದ ಕಥೆಯನ್ನೆಲ್ಲ ಹೇಳಿದ. ನಾಡಿ ಪರೀಕ್ಷೆಯಿಂದಲೇ ಎಲ್ಲವನ್ನೂ ಅರಿತ ಡಾ|ಕಜೆ, "ಮೂರು ತಿಂಗಳ ಸಮಯ ಹೆಚ್ಚಿನ ಚಿಕಿತ್ಸೆ ಬೇಕು, ಅಮೇಲೆ ಕೆಲವು ವರ್ಷ ಔಷಧ ಚಿಕಿತ್ಸೆ ಮುಂದುವರಿಸಬೇಕು" ಎಂದರಂತೆ. ಡಾಕ್ಟರು ಹೇಳಿದ್ದನ್ನು ಒಪ್ಪಿದ ರಾಮಕೃಷ್ಣನಿಗೆ ಉಳಿದುಕೊಳ್ಳಲು ಮನೆ ಎಂಬುದೂ ಕೂಡ ಬೆಂಗಳೂರಿನಲ್ಲಿರಲಿಲ್ಲ; ಸಂಬಂಧಿಕರ ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ದೂರದ ಅಮೇರಿಕೆಯಿಂದ ಇಲ್ಲಿಯವರೆಗೆ, ಆಯುರ್ವೇದವನ್ನು ನಂಬಿ ಬಂದ ರಾಮಕೃಷ್ಣನನ್ನು ಹಾಗೇ ಕಳಿಸುವ ಮನಸ್ಸು ಡಾ. ಕಜೆಯವರಿಗೆ ಇರಲಿಲ್ಲ. ತಮ್ಮ ಪಂಚಕರ್ಮ ಚಿಕಿತ್ಸಾ ಪದ್ಧತಿಗೆ ಮೀಸಲಿಟ್ಟುಕೊಂಡ ಚಿಕಿತ್ಸಾಲಯದಲ್ಲೇ ಒಂದು ಕೊಠಡಿಯಲ್ಲಿ ರಾಮಕೃಷ್ಣನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ವಮನ, ವಿರೇಚನ, ಬಸ್ತಿ ಮೊದಲಾದ ಪಂಚಕರ್ಮ ಚಿಕಿತ್ಸೆಯ ವಿಭಾಗಗಳು ಹಂತಹಂತವಾಗಿ ನಡೆಯುತ್ತಿದ್ದ ಹಾಗೇ ರಾಮಕೃಷ್ಣ ತೆಳ್ಳಗಾಗುತ್ತ ನಡೆದ. ದಿನೇ ದಿನೇ ಕೃಶವಾಗುತ್ತಾ ಆಗುತ್ತಾ ಒಂದೂವರೆ ತಿಂಗಳಲ್ಲಿ ಸತ್ತೇ ಹೋಗುವನೇನೋ ಎನ್ನುವಷ್ಟು ಅಶಕ್ತನಾಗಿಬಿಟ್ಟ. ಡಾಕ್ಟರಮೇಲಿದ್ದ ಭರವಸೆ ಕಳೆದೇ ಹೋಗಿತ್ತಂತೆ. ಮಕ್ಕಳಿಗೆ ದೂರವಾಣಿಯಲ್ಲಿ ಮಾತನಾಡಿ "ಸುಖವಾಗಿದ್ದೇನೆ" ಎನ್ನುತ್ತಿದ್ದರೂ, ’ಬದುಕಿದ್ದರೆ ಮರಳಿ ಬರುತ್ತೇನೆ’ ಎಂದು ಮನದಲ್ಲೇ ಅಂದುಕೊಳ್ಳುತ್ತಿದ್ದನಂತೆ. ಗುಳಿಬಿದ್ದ ಕೆನ್ನೆ, ಹೂತುಹೋದ ಕಣ್ಣುಗಳು ಥೇಟ್ ತಪಸ್ಸಿಗೆ ಕುಳಿತ ದಧೀಚಿ! ಹಾಗೂ ಕೊನೆಗೊಮ್ಮೆ ತಾಳಲಾರದೇ "ಡಾಕ್ಟ್ರೇ ನಾನು ಬದುಕುತ್ತೀನಾ?" ಕೇಳಿದ್ದನಂತೆ. ಡಾ|ಕಜೆಗೆ ಎಳೆಯವಸ್ಸಾಗಿದ್ದರಿಂದ ಅನುಭವ ಸಾಲದೇನೋ ಎಂಬ ಅನುಮಾನವೂ ರಾಮಕೃಷ್ಣನಿಗೆ ಬಂದುಬಿಟ್ಟಿತ್ತೋ ಏನೋ. ಡಾಕ್ಟರು "ಏನೂ ಚಿಂತೆಮಾಡಬೇಡಿ, ಇನ್ನು ಮುಂದಿನ ಕೆಲವೇ ದಿನಗಳಲ್ಲಿ ನೀವು ದಪ್ಪಗಾಗುತ್ತೀರಿ, ಶಕ್ತಿ ಬರುತ್ತದೆ" ಎಂದಿದ್ದರಂತೆ. ಮೊದಲ ಒಂದೂವರೆ ತಿಂಗಳ ನಂತರದಲ್ಲಿ ಪಂಚಕರ್ಮದ ಮುಂದಿನ ಭಾಗಗಳು ಆರಂಭವಾದವು. ಕೊಡುವ ಆಹಾರಕ್ರಮದಲ್ಲೂ ಬದಲಾವಣೆಯಾಯ್ತು. ಜೊತೆಗೆ ಔಷಧಿಗಳೂ ಕೊಡಲ್ಪಡುತ್ತಾ ರಾಮಕೃಷ್ಣ ಸ್ವಲ್ಪ ಗಟ್ಟಿ ಆದ; ಬಾಳೆಹಣ್ಣಿಗಿರುವ ಸಿಪ್ಪೆಯಂತೇ, ಸೊರಗಿದ ಶರೀರಕ್ಕೊಂದು ಹೊಸ ಚರ್ಮ ಬಂದಿತ್ತು. ನೋಡಲು ಬಂದ ಅದ್ಯಾರೋ "ಸ್ವಲ್ಪ ಬಣ್ಣ ಆಗಿದ್ದೀರಿ, ಪರವಾಗಿಲ್ಲ’ ಎಂದರಂತೆ. ಮುಂದಿನ ಒಂದೂವರೆ ತಿಂಗಳಲ್ಲಿ ರಾಮಕೃಷ್ಣ ಪೂರ್ತಿ ಗಟ್ಟಿಯಾದ, ದಪ್ಪಗಾದ, ಮಾಮೂಲಾಗಿ ನಡೆದಾಡಹತ್ತಿದ.
ವಾಸಿಯಾಗಿ ಹೊರಟುನಿಂತ ರಾಮಕೃಷ್ಣ ಡಾಕ್ಟರಲ್ಲಿ ಕಾಯಿಲೆ ಬಗ್ಗೆ ವಿಚಾರಿಸಿದ. ಅಣು ವಿದ್ಯುತ್ ಕೇಂದ್ರದಲ್ಲಿ ಯಾವುದೋ ಹುದ್ದೆಯಲ್ಲಿ ಕೆಲಸಮಾಡುತ್ತಿದ್ದ ರಾಮಕೃಷ್ಣನಿಗೆ ಅಣುವಿಕಿರಣದ ಪ್ರಭಾವದಿಂದ ಇಡೀ ಶರೀರದಲ್ಲೂ ಟಾಕ್ಸಿನ್ಸ್ ಜಾಸ್ತಿಯಾಗಿತ್ತು. ಶರೀರ ಸಹಜಸ್ಥಿಯಲ್ಲಿರಲಿಲ್ಲ. ಇದನ್ನರಿತ ಡಾ. ಕಜೆ ತನ್ನ ಚಿಕಿತ್ಸಾ ಕ್ರಮದಿಂದ ರಾಮಕೃಷ್ಣನನ್ನು ಅದರಿಂದ ಮುಕ್ತನನ್ನಾಗಿಸಿದ್ದರು. ಕೃತಜ್ಞನಾದ ರಾಮಕೃಷ್ಣನಿಗೆ, ಕೆಲವು ತಿಂಗಳಿಗಾಗುವಷ್ಟು ಔಷಧೀ ಮಾತ್ರೆಗಳ ಪೊಟ್ಟಣ ಕೊಟ್ಟು, ಆ ನಂತರ ಅಂತರ್ದೇಶೀಯ ಕೊರಿಯರ್ ಮೂಲಕ ಬೇಕಾಗುವ ಔಷಧವನ್ನು ಕಳುಹಿಸುವ ಭರವಸೆ ಇತ್ತರು. ರಾಮಕೃಷ್ಣ ಈಗ ಆರೋಗ್ಯವಾಗಿದ್ದಾನೆ. ಕಥೆ ಕೇಳಿದಿರಲ್ಲಾ ಕಥಾನಾಯಕ ರಾಮಕೃಷ್ಣನನ್ನೇ ನಾನು ಮುದುಕ ಎಂದಿದ್ದು! ಅದಿರಲಿ ರಾಮಕೃಷ್ಣನನ್ನು ನಾನು ಭೇಟಿಯಾಗಿದ್ದೂ ಕೂಡ ಅಂಥದ್ದೇ ಒಂದು ವೇದನಾಮಯ ಸನ್ನಿವೇಶದಲ್ಲಿ:
ನನ್ನ ಹತ್ತಿರದ ಬಂಧುವೊಬ್ಬರಿಗೆ ಅನಿರೀಕ್ಷಿತವಾಗಿ ಬೆನ್ನ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು; ಆ ನೋವು ಅತಿಶೀಘ್ರವಾಗಿ ಎದೆಯೆಭಾಗಕ್ಕೂ ಕಾಲುಗಳವರೆಗೂ ಹಬ್ಬಿ, ಕಾಲುಗಳು ಜೋಮು ಹಿಡಿದಂತೆನಿಸಿ, ನಂತರ ಅರ್ಧಗಂಟೆಯಲ್ಲೇ, ಶರೀರದ ಕೆಳ ಅರ್ಧಭಾಗಕ್ಕೆ [ಸೊಂಟದಿಂದ ಕೆಳಗಿನ ಭಾಗಕ್ಕೆ] ಯಾವ ರೀತಿಯ ಸ್ಪಂದಿಸುವಿಕೆಯೇ ಇರುತ್ತಿರಲಿಲ್ಲ. ಮಲ-ಮೂತ್ರ ವಿಸರ್ಜೆನೆಗೆ ದ್ವಾರಗಳು ತೆರೆದುಕೊಳ್ಳುತ್ತಿರಲಿಲ್ಲ. ಹೀಗಾದಾಗ ನಾವು ಹೋಗದ ಅಲೋಪಥಿ ಆಸ್ಪತ್ರೆಗಳಿಲ್ಲ. ಬೆಂಗಳೂರಿನ ಅತಿ ಪ್ರಸಿದ್ಧ ಅನೇಕ ಆಸ್ಪತ್ರೆಗಳ ಎಲುವು-ಮೂಳೆ ತಜ್ಞರನ್ನು ಭೇಟಿಯಾಗಿ, ಅವರ ಚಿಕಿತ್ಸೆಗಳು ಫಲಕಾರಿಯಾಗದಾಗ, ಎಕ್ಸರೇ ಯಲ್ಲಿ ಏನೂ ಕಾಣದಾದಾಗ, ನರತಜ್ಞರನ್ನು ಭೇಟಿಯಾಗಿ, ಅವರ ಚಿಕಿತ್ಸೆಗೆ ಪೂರಕವಾಗುವ ಸ್ಕ್ಯಾನಿಂಗ್ ವಗೈರೆ ಮಾಡಿಸಿ, ಅವರು "ಸ್ಲಿಪ್ ಡಿಸ್ಕ್ ಥರಾ ಇದೆ, ಆಪರೇಶನ್ ಮಾಡಿದರೆ ಸರಿಹೋಗುತ್ತದೆ, ಆದರೆ ಅದು ಮತ್ತೆ ಮರಳಿ ಬರಬಹುದು, But, Mr.Bhat, There is no time, you have to admit the patient immediately now, else if delayed, it will be difficult to bring back to the original condition." ಎಂದು ಹೇಳಿಬಿಟ್ಟರು.
Ofcourse it was at one of the top 5 Hospitals in Bangalore, I was totally upset when an expert had declared this,but it was inevitable. I had listened to my innermost voice, which said"Go to Ayurveda" ಬಾಡಿದ ಮುಖಹೊತ್ತು ಏನೂ ಮಾಡಲು ತೋಚದೇ ಇದ್ದ ನನಗೆ ಯಾಕೋ ಒಮ್ಮೆ ಡಾ. ಕಜೆಯ ನೆನಪಾಯ್ತು. ಆಯುರ್ವೇದವನ್ನು ನೆಚ್ಚಿ ಚಿಕಿತ್ಸೆ ಕೊಡಿಸಲು ಮುಂದಾದ ನನ್ನ ನಿರ್ಧಾರವನ್ನು ತಿಳಿದ ಕೆಲವು ಸಂಬಂಧಿಕರು "ಎಲ್ಲೋ ಈತನಿಗೆ ಹುಚ್ಚು, ಹೋಗೀ ಹೋಗೀ ಇದ್ಕೆಲ್ಲಾ ಆಯುರ್ವೇದಾ ನಂಬೋದಾ?" ಎಂದು ಹೇಳಿದ್ದು ಕೇಳಿಬಂತು. ಆದರೂ ನನ್ನ ನಿರ್ಧಾರ ಅಚಲವಾಗಿತ್ತು. ಅಲ್ಲೀವರೆಗೆ ಡಾ.ಕಜೆಯನ್ನು ನಾನು ಬಲ್ಲೆ ಹೇಗೆ ಗೊತ್ತೇ? ಆಯುರ್ವೇದದಲ್ಲಿ ಎಂ.ಡಿ ಮುಗಿಸಿದ ಅವರೊಂದು ಚಿಕ್ಕ ಚಿಕಿತ್ಸಾಲಯ ಆರಂಭಿಸಿದ್ದರು. ಮಲ್ಲೇಶ್ವರದ ಕೆಲವು ಭಾಗಗಳಲ್ಲಿ ಆಯುರ್ವೇದದ ಬಗ್ಗೆ ನಿರರ್ಗಳವಾಗಿ ಉಪನ್ಯಾಸ ಮಾಡುತ್ತಾ ಜನರಿಗೆ ತಿಳುವಳಿಕೆ ಕೊಡುತ್ತಿದ್ದರು. ಕೆಲವೊಮ್ಮೆ ಕೆಲವು ಸಮಾರಂಭಗಳ ಹೊರಭಾಗದಲ್ಲಿ ತಮ್ಮ ಆಯುರ್ವೇದದ ದುಖಾನನ್ನು ಇಟ್ಟು, ಅಲ್ಲಿ ಸ್ವತಃ ಪ್ರತಿಯೊಂದೂ ಔಷಧಗಳ ಬಾಟಲಿಗಳನ್ನು, ಕರಡಿಗೆಗಳನ್ನು ಜೋಡಿಸುತ್ತಿದ್ದರು. ಆಯುರ್ವೇದ ಎಂದರೆ ಮೂಗುಮುರಿಯುವವರ ಮಹಾಪ್ರವಾಹದ ವಿರುದ್ಧ ಈಜಲು ಪ್ರಯತ್ನಿಸುತ್ತಿರುವ ಕೆಲವೇ ವೈದ್ಯರುಗಳ ಪೈಕಿ ಒಬ್ಬರು ಇವರಾಗಿದ್ದರು. ಇದಷ್ಟೇ ನನಗೆ ಗೊತ್ತು ಬಿಟ್ಟರೆ ಡಾಕ್ಟರು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಲ್ಲ ನಿಪುಣರು ಎಂಬುದರ ಅರಿವು ಇರಲಿಲ್ಲ. ಆದರೂ ದೇವರ ಮೇಲೆ ಭಾರಹಾಕಿ ನಾವು ನಡೆದಿದ್ದು ಡಾ. ಕಜೆಯವರಲ್ಲಿಗೆ. ಇಲ್ಲೊಂದು ಸೀಕ್ರೆಟ್ಟನ್ನು ಓದಿ :
ಸವಾಲು
-------
ಆರಂಭದಲ್ಲಿ
ಅಧುನಿಕ ವೈದ್ಯರಿಂದ
ರೋಗಿ ಪರೀಕ್ಷೆ,
ಸುತ್ತಿ ಸುತ್ತಿ
ಕೊನೆಯಲ್ಲಿ
ಆಯುರ್ವೇದ
ವೈದ್ಯರಿಗೇ ಪರೀಕ್ಷೆ!
ಇದು ನಮಗೇ ಹೇಳಿದಹಾಗಿದೆಯಲ್ಲ ಎಂದುಕೊಂಡವನು ನಾನು; ಬಹುಶಃ ಇದು ನಮಗೊಂದೇ ಅಲ್ಲ ಅನೇಕರಿಗೆ ಅಪ್ಲೈ ಆಗುವಂಥಾದ್ದು ಎಂದು ಈಗ ಅನ್ನಿಸುತ್ತಿದೆ! ಅಂತೂ ಇಂತೂ ನಾವು ಕಜೆಯವರಲ್ಲಿಗೆ ತಲ್ಪಿದೆವು. ವಾಹನದಿಂದ ರೋಗಿಯನ್ನು ಕುರ್ಚಿಯಲ್ಲಿ ಹೊತ್ತುಕೊಂಡು ಕ್ಲಿನಿಕ್ಕಿಗೆ ಹೋದೆವು. ಹೋಗುವಾಗ ನೋವಿನಿಂದ ಬಳಲುತ್ತಿದ್ದ ರೋಗಿಗೆ, ಕಜೆಯವರ ಸಂದರ್ಶನದ ವೇಳೆಯಲ್ಲೇ ಜಾಸ್ತಿಯಾಗಿ ತಾಳಲಾರದೇ ಅಳುಬಂದಿತು. ತಮ್ಮ ಸಹಾಯಕರ ಮೂಲಕ ಎರಡು ಮಾತ್ರೆಗಳನ್ನು ತರಿಸಿದ ಡಾಕ್ಟರು, ತಕ್ಷಣಕ್ಕೇ ಅದನ್ನು ಕೊಟ್ಟು ನೀರನ್ನೂ ಕೊಟ್ಟು ಉಪಚರಿಸಿದರು. ನಂಬುತ್ತೀರೇ? ಮಾತ್ರೆ ತೆಗೆದುಕೊಂಡ ಐದೇ ಐದು ನಿಮಿಷದಲ್ಲಿ ನೋವು ತಾಳಿಕೊಳ್ಳುವಷ್ಟು ಕಮ್ಮಿಯಾಯ್ತು. ಮುಂದಿನ ಚಿಕಿತ್ಸೆಗಳ ಬಗ್ಗೆ ನಾನು ಕೇಳುವ ಮೊದಲು ಡಾ. ಕಜೆ ನನ್ನಲ್ಲಿ ಕೇಳಿದರು"ಭಟ್ಟರೇ, ನಿಮಗೆ ಆಯುರ್ವೇದದಲ್ಲಿ ನಂಬಿಕೆ ಇದೆಯೇ? ಮತ್ತು ಸ್ವಲ್ಪ ದೀರ್ಘಕಾಲ ಚಿಕಿತ್ಸೆ ಪಡೆಯುವುದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?" ಈ ಎರಡೂ ಪ್ರಶ್ನೆಗಳಿಗೆ ನಾನು ಗೋಣು ಹಾಕಿದೆ. ನನಗೆ ಆಯುರ್ವೇದದಲ್ಲಿ ನಂಬಿಕೆ ಮತ್ತು ಶ್ರದ್ಧೆ ಎರಡೂ ಇದ್ದವು. ಆದರೆ ಬಹುತೇಕ ಔಷಧಗಳು ವಂಶಪಾರಂಪರಿಕ [proprietory medicines] ಆಗಿರುವುದರಿಂದ ಎಲ್ಲಾ ಡಾಕ್ಟರಿಗೂ ಎಲ್ಲಾ ರೀತಿಯ ಔಷಧ ಮೂಲಿಕೆಗಳ ಬಗ್ಗೆ ಮಾಹಿತಿಯಾಗಲೀ ಅಥವಾ ಅದರ ಲಭ್ಯತೆಯಾಗಲೀ ಇರುವುದಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ಡಾಕ್ಟರಿಗೆ ಕೈಮುಗಿದು ನಾವು ಮನೆಗೆ ಮರಳಿದೆವು. ಆ ರಾತ್ರಿ ಮತ್ತೆ ನೋವು ಕಾಣಿಸಿಕೊಂಡು ಬಹಳಕಾಲ ಮೂತ್ರ ವಿಸರ್ಜನೆಗೆ ಸ್ನಾಯುಗಳು ಸಮ್ಮತಿಸದೇ ಅತೀವ ತೊಂದರೆಯಾಯ್ತು. ಆಗಿನ್ನೂ ರಾತ್ರಿಯ ೮:೪೫. ಡಾಕ್ಟರಿಗೆ ಫೋನು ಮಾಡಿ "ಸರ್, ತಾವು ಸಾಯಂಕಾಲ ೫ ಗಂಟೆಗೆ ಕೊಟ್ಟ ಮಾತ್ರೆಗಳನ್ನೇ ಮತ್ತೆರಡನ್ನು ಈಗ ಕೊಡಲೇ, ಯಾಕೆಂದರೆ ಪರಿಸ್ಥಿತಿ ಹೀಗಾಗಿದೆ" ಎಂದೆ. " ಭಟ್ಟರೇ, ಅದು ಅಲೋಪಥಿಕ್ ಪೇನ್ ಕಿಲ್ಲರ್ ಮಾತ್ರೆಯಲ್ಲಾ, ನಾನು ಕೊಟ್ಟಿದ್ದು ಶುದ್ಧ ಆಯುರ್ವೇದದ ಮಾತ್ರೆ. ಮತ್ತೆ ಮತ್ತೆ ಹಾಗೆ ಕೊಡುವುದು ಬೇಡಾ, ನಾನು ಹೇಳಿದಂತೇ ಕ್ರಮ ಅನುಸರಿಸಿ, ಕ್ರಮೇಣ ಸರಿಹೋಗುತ್ತದೆ" ಎನ್ನುತ್ತಾ ಒಂದಷ್ಟು ಧೈರ್ಯ ಹೇಳಿದರು. ಒಂದಷ್ಟು ಸಮಯದ ನಂತರ ನೋವು ತಂತಾನೇ ಕಮ್ಮಿಯಾಯ್ತು, ವಿಸರ್ಜನಾ ಕ್ರಿಯೆಗಳನ್ನು ಕಷ್ಟಪಟ್ಟು ಮಲಗಿದಲ್ಲೇ ಮಾಡುವಂತಾಯ್ತು.
ಅದಾದ ಮಾರನೇ ಬೆಳಿಗ್ಗೆಯಿಂದ ಪ್ರತಿದಿನ ಬೆಳಿಗ್ಗೆ ೬ ಗಂಟೆಗೆ ನಾವು ಕಜೆಯವರ ಪಂಚಕರ್ಮ ಚಿಕಿತ್ಸಾಲಯಕ್ಕೆ ಹೋಗಬೇಕಾಗಿತ್ತು. ರೋಗಿಯಲ್ಲಿ ಪೂರ್ತಿ ಪಂಚಕರ್ಮ ತಡೆದುಕೊಳ್ಳಲಾಗದ ತೊಂದರೆ ಇರುವುದರಿಂದ, ಭಾಗಶಃ ಪಂಚಕರ್ಮ ಚಿಕಿತ್ಸೆಗಳು ನಡೆದವು-೨೪ ದಿನಗಳು. [ಈ ಚಿಕಿತ್ಸೆಗೆ ಅಲ್ಲಿಗೆ ಹೋಗುತ್ತಿದ್ದಾಗ ಒಮ್ಮೆ ರಾಮಕೃಷ್ಣ ಅಲ್ಲಿಗೆ ಬಂದಿದ್ದ! ನಮ್ಮ ರೋಗಿಗೆ ಚಿಕಿತ್ಸೆ ನಡೆಸುವ ವೇಳೆ ನಾನು ಹೊರಜಗುಲಿಯಲ್ಲಿ ಕೂತಾಗ ನನ್ನ-ರಾಮಕೃಷ್ಣನ ನಡುವೆ ಮಾತುಕತೆ ನಡೆದಿತ್ತು] ಇಷ್ಟಾಗುವಷ್ಟರಲ್ಲಿ ರೋಗಿಗೆ ಬಹುಪಾಲು ಹಿತವೆನಿಸಿತ್ತು. ನೋವು ಬರುತ್ತಿದ್ದರೂ ತಾಳಿಕೊಳ್ಳುವ ಮಟ್ಟವನ್ನು ಮೀರುತ್ತಿರಲಿಲ್ಲ, ಕಾಲುಗಳಿಗೆ ಜೋಮು ಹತ್ತುತ್ತಿರಲಿಲ್ಲ, ಸೊಂಟದ ಕೆಳಗಿನ ಕಂಟ್ರೋಲು ತಪ್ಪುವ ತೊಂದರೆ ಪರಿಹಾರವಾಗಿತ್ತು. ೨೪ ದಿನಗಳ ಚಿಕಿತ್ಸೆ ಮುಗಿದು ನಾವು ಹೊರಟಾಗ ಮುಂದಿನ ಔಷಧಕ್ರಮವನ್ನು ವಿವರಿಸಿ ಸುಮಾರು ೨ ವರ್ಷಗಳ ಕಾಲ ನಡೆಸಬೇಕು ಎಂದರು; ಆ ದಿನ ನಮಗೆ ನಿಜಕ್ಕೂ ಡಾಕ್ಟರು ದೇವರಂತೇ ಕಂಡರು! ಹೀಗೇ ತಿಂಗಳಿಗೊಮ್ಮೆ ಭೇಟಿಯಾಗುತ್ತಾ ಔಷಧಗಳನ್ನು ಬದಲಾಯಿಸಿಕೊಳ್ಳುತ್ತಾ ಎರಡೂವರೆ ವರ್ಷಗಳು ಕಳೆದವು. ಒಮ್ಮೆ "ಮುಂದಿನ ಸರ್ತಿ ಬರುವಾಗ ಪೂರ್ತಿ ನಿರೋಗಿಯಾಗಿ ಬರುತ್ತೀರಿ, ಇನ್ನು ಔಷಧದ ಅಗತ್ಯ ಬೀಳುವುದಿಲ್ಲ, ಆದರೆ ಸದ್ಯ ಭಾರ ಎತ್ತುವ ಕೆಲಸ ಇತ್ಯಾದಿಗಳನ್ನು ಮಾಡಬೇಡಿ" ಎಂಬುದರ ಜೊತೆಗೆ ಆಹಾರಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಂತೂ ಎರಡೂವರೆವರ್ಷಗಳಲ್ಲಿ ಡಾಕ್ಟರು ರೋಗಿಯ ರೋಗವನ್ನು ವಾಸಿಪಡಿಸಿದ್ದರು. ನನ್ನನ್ನು ಪ್ರತ್ಯೇಕ ಕರೆದು, "ಭಟ್ಟರೇ, ಇದು ಅಪರೂಪದ ತೊಂದರೆ, ವಾಸಿಮಾಡುವುದು ಕಷ್ಟ, ಆದರೆ ನಿಮ್ಮ ಬಂಧುವಿಗೆ ವಾಸಿಯಾಗಿದೆ ಎಂಬುದು ದೇವರ ದಯೆ ಮತ್ತು ನಿಮ್ಮೆಲ್ಲರ ಅದೃಷ್ಟ" ಎಂದರು. ತಾನು ವಾಸಿಮಾಡಿದ ರೋಗಿಯ ಅಥವಾ ತೊಂದರೆಯ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ!
ಇದಾದ ಕೆಲವೇ ದಿನಗಳಲ್ಲಿ ನಾನು ಬೆಂಗಳೂರು ಸುತ್ತುವಾಗ ಒಮ್ಮೆ ಪ್ರಭಾಕರ ಎಂಬುವರ ಪರಿಚಯವಾಯ್ತು. ಪ್ರಭಾಕರ, ಎಡ್ಮಿನಿಷ್ಟ್ರೇಟರ್ ಆಗಿ ಒಂದು ವಿದ್ಯಾಸಂಸ್ಥೆಯಲ್ಲಿ ಕೆಲಸಮಾಡುತ್ತಾರೆ. ಏನೋ ಸಂದರ್ಭಬಂದು 'ತನ್ನ ಹೆಂಡತಿಗೆ ಸನ್ತದ ಕ್ಯಾನ್ಸರ್ ಆಗಿತ್ತು-ಡಾ. ಕಜೆ ಗುಣಪಡಿಸಿದರು' ಎಂದರು. ಅಲೋಪಥಿ ಪರಿಣತರು ಆಪರೇಷನ್ ಮೂಲಕ ಕತ್ತರಿಸಿ ತೆಗೆಯುತ್ತೇವೆ ಎಂದು ಹೇಳಿದ್ದ ಸಿಸ್ಟ್ ಗಳಿರುವ ಆ ರೋಗಿಯನ್ನು ತನ್ನ ಆಯುರ್ವೇದೀಯ ಚಿಕಿತ್ಸೆಯಿಂದ ಗುಣಪಡಿಸಿದ ಬಗ್ಗೆ ಪ್ರಭಾಕರ ಅರ್ಧಗಂಟೆ ಮಾತನಾಡಿದರು. ಆದರೆ ಒಂದೇ ಒಂದು ದಿನ ಈ ಡಾಕ್ಟರು ನನ್ನಲ್ಲಿ ತಮ್ಮ ಸಾಧನೆಯ ಹೆಗ್ಗಳಿಕೆಯನ್ನು ಹೇಳಿಕೊಳ್ಳಲಿಲ್ಲ. ನಾವು ಅವರ ಪಂಚಕರ್ಮ ಥೆರಪಿ ಸೆಂಟರಿಗೆ ಹೋಗುತ್ತಿದ್ದಾಗ ನಟ ವಿಷ್ಣುವರ್ಧನ್ ಅಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರಂತೆ. ನಾವು ಬೆಳಿಗ್ಗೆ ೬ ಗಂಟೆಗೆ ಹೋಗುತ್ತಿದ್ದರೆ ಅವರು ಬೆಳಗಿನ ಜಾವ ೫ ಗಂಟೆಗೇ ಬಂದು ಚಿಕಿತ್ಸೆ ಪಡೆದು ತೆರಳುತ್ತಿದ್ದರು ಎಂಬುದನ್ನು ಅಲ್ಲಿನ ಸಹಾಯಕರು ನಮ್ಮಲ್ಲಿ ಹೇಳಿದ್ದರು. ಒಂದು ದಿನವಂತೂ"ನೀವು ೫ ನಿಮಿಷ ಮೊದಲು ಬಂದಿದ್ದರೆ ನಿಮಗೆ ವಿಷ್ಣುವರ್ಧನ್ ಸಿಗುತ್ತಿದ್ದರು"ಎಂದು ಕಾತರ ಕೆರಳಿಸಿದ್ದರು. ಅನೇಕ ಸಿನಿಮಾ ನಟರು, ರಾಜಕಾರಣಿಗಳು ಎಲ್ಲಾ ಬಂದುಹೋಗುತ್ತಿದ್ದರೂ ಡಾಕ್ಟರು ಮಾತ್ರ ಆ ಬಗ್ಗೆ ನಮ್ಮಲ್ಲಿ ಪ್ರಸ್ತಾಪಿಸಲೇರ್ ಇಲ್ಲ!
ನಮ್ಮ ರೋಗಿಗೆ ಕಾಯಿಲೆ ವಾಸಿಯಾದ ಕಾರಣ, ಆ ಅನುಭವದ ಆಧಾರದಮೇಲೆ, ನಮ್ಮ ಸುತ್ತಲಿನ ನೆಂಟರಿಷ್ಟರನ್ನು ಮತ್ತು ಪರಿಚಿತರನ್ನು ಅನೇಕರನ್ನು ನಾವು ಡಾಕ್ಟರಲ್ಲಿಗೆ ಕಳುಹಿಸಿದೆವು. ನಮ್ಮ ಉದ್ದೇಶವಿಷ್ಟೇ: ಆಯುರ್ವೇದವೇ ಅಡ್ಡ ಪರಿಣಾಮಗಳಿಲ್ಲದ ಉತ್ತಮ ಚಿಕಿತ್ಸಾ ಪದ್ಧತಿ. ತುರ್ತು ತಿಕಿತ್ಸೆಯೊಂದನ್ನು ಬಿಟ್ಟರೆ, ಮೂಳೆ ಮುರಿತವೊಂದನ್ನು ಬಿಟ್ಟರೆ ಮಿಕ್ಕಿದ ಕಾಯಿಲೆಗಳಿಗೆ ಆಯುರ್ವೇದವೇ ಒಳ್ಳೆಯದು, ಅದನ್ನು ಇಂಥಾ ಉತ್ತಮರೀತಿಯಲ್ಲಿ ನಡೆಸಿಕೊಡುವ ಡಾಕ್ಟರ್ ಮೂಲಕ ಅವರಿಗೆಲ್ಲಾ ಇರುವ ತೊಂದರೆ ಪರಿಹಾರವಾಗಲಿ ಎಂಬುದು. ಹಾಗೆ ಹೋದವರಲ್ಲಿ ಎಲ್ಲರೂ ಉತ್ತಮ ಅಭಿಪ್ರಾಯಗಳನ್ನೇ ಹೇಳಿದ್ದಾರೆ, ೯೦ ಪ್ರತಿಶತ ಜನ ಕಾಯಿಲೆಗಳಿಗೆ ಪರಿಹಾರ ಪಡೆದಿದ್ದಾರೆ. [ಎಲ್ಲರಿಗೂ ಪರಿಹಾರ ದೊರಕಿದೆ ಎನ್ನಬಹುದು ಆದರೆ ಕೆಲವರು ತೀರಾ ಅಸಡ್ಡೆಮಾಡಿ ಸರಿಯಾಗಿ ಚಿಕಿತ್ಸೆ ಪಡೆಯದೇ ಅವರೇ ತಪ್ಪಿಗೆ ಕಾರಣರಾಗಿರಬಹುದು, ಇನ್ನು ಕೆಲವರಿಗೆ ಅವರ ಹಣೆಬರಹದಲ್ಲಿ ಕೊನೆಯಹಂತವೆಂದು ಬರೆದಿದ್ದು ಚಿಕಿತ್ಸೆಗೆ ಅವಕಾಶವೇ ಇಲ್ಲದ ದಿನಗಳು ಅವರದ್ದಾಗಿರಬಹುದು.] ನಾಡಿ ಪರೀಕ್ಷೆ ಎಲ್ಲರಿಗೂ ಕರಗತವಾಗುವ ವಿದ್ಯೆಯಲ್ಲ. ಕೇವಲ ನಾಡಿಯನ್ನಷ್ಟೇ ಹಿಡಿದು ತಮ್ಮ ಚಿಕಿತ್ಸೆಯ ಮೊದಲ ಸಂದರ್ಶನ ಮುಗಿಸುವ ಡಾ.ಕಜೆಯವರಿಗೆ ರೋಗಿಯ ದೇಹಸ್ಥಿತಿ ಅದರಲ್ಲೇ ಗೊತ್ತಾಗಿಬಿಡುತ್ತದೆ! ಅಲೋಪಥಿಯಲ್ಲಿ ಚಿಕಿತ್ಸೆ ನೀಡಿ ವಾಸಿಯಾಗದೇ ಕೈಬಿಟ್ಟ ಅನೇಕ ರೋಗಿಗಳು ಅವರಲ್ಲಿಗೆ ಬಂದು ಪರಿಹಾರ ಕಂಡುಕೊಂಡಿದ್ದಾರೆ ಎಂಬ ದಾಖಲೆಗಳನ್ನು ಅವರ ಸಹಾಯಕರಿಂದ ಕೇಳಿ ತಿಳಿದುಕೊಂಡಾಗ, ಡಾ. ಕಜೆ ವೈದ್ಯಲೋಕದ ವಿಸ್ಮಯ ಎಂದೇ ಹೇಳಬೇಕಾಗುತ್ತದೆ. ಹದಿಮೂರು ವರ್ಷಗಳಲ್ಲಿ ಅವರ ಸಾಧನೆ ಅಪಾರ. ಶ್ರೀಸಾಮಾನ್ಯನಿಂದ ಹಿಡಿದು ಮಂತ್ರಿ ಸುರೇಶ್ ಕುಮಾರ್ ವರೆಗೆ ಎಲ್ಲರಿಗೂ[ಇದುವರೆಗೆ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ]ಚಿಕಿತ್ಸೆ ನೀಡುವ ಡಾಕ್ಟರು ರೋಗಿಗಳೊಟ್ಟಿಗೆ ಜಾಸ್ತಿ ಮಾತನಾಡುವುದಿಲ್ಲ ಯಾಕೆ? ಎಂಬ ಪ್ರಶ್ನೆ ಎದುರಾದರೆ, ಆಯುರ್ವೇದದಲ್ಲಿ ಮಾತಿಗಿಂತ ಮಾಡುವ ಚಿಕಿತ್ಸೆ ಪರಿಣಾಮಕಾರಿ ಮತ್ತು ಅಂತಹ ಚಿಕಿತ್ಸೆಗಾಗಿ ಕಾಯುತ್ತಿರುವ ಹಲವಾರು ರೋಗಿಗಳಿಗೆ ಡಾಕ್ಟರರ ಸಂದರ್ಶನ ಸಮಯದಲ್ಲಿ ಅವಕಾಶ ದೊರೆಯಲಿ ಎಂಬ ಕಾರಣದಿಂದ, ತ್ವರಿತಗತಿಯಲ್ಲಿ ಚಿಕಿತ್ಸೆಯನ್ನು ನೀಡಿ ಕಳಿಸುವುದು, ಜಾಸ್ತಿ ಮಾತನಾಡದಿರುವುದರ ಹಿಂದಿರುವ ಸೀಕ್ರೆಟ್ಟು:
ವಾಚಾಳಿ
-------
ದಿನವೊಂದಕ್ಕೆ
ನೂರಾ ಇಪ್ಪತ್ತು
ರೋಗಿ ಪರೀಕ್ಷಿಸುವ
ವೈದ್ಯ
ಕೇವಲ ಮೂರು ನಿಮಿಷ
ಮಾತನಾಡಿದರೂ
ದಿನವೊಂದಕ್ಕೆ
ಆರುಗಂಟೆ
ವಟಗುಟ್ಟಿದಂತಾಯ್ತು!
ಡಾಕ್ಟರ್
ಮೌನಿಯೇ?
ಸರಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿಭಾಗವಾದ ’ಆಯುಷ್’, ಡಾಕ್ಟರ್ ಕಜೆಯವರಿಂದ ಸಾಂದರ್ಭಿಕವಾಗಿ ಸಲಹೆಗಳನ್ನು ಪಡೆದಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕಜೆಯವರನ್ನು ಹುಡುಕಿಕೊಂಡು ಬಂದಿದೆ. ವಿವಿಧರಂಗಗಳಿಗೆ ಅವರು ಸಲ್ಲಿಸಿದ ಸೇವಾ ವಿವರಗಳನ್ನು ಪಟ್ಟಿಮಾಡಿದರೆ ಇದನ್ನೆಲ್ಲಾ ಒಬ್ಬ ಡಾಕ್ಟರು ಮಾಡಲು ಸಾಧ್ಯವೇ ಎಂಬ ಸಂದೇಹ ಬರುವಷ್ಟಿದೆ! ಚಿಕ್ಕ ವಯಸ್ಸಿನಲ್ಲೇ, ಲಂಕೆಗೆ ಜಿಗಿದ ಹನುಮಗಾತ್ರದಷ್ಟು ಸಾಧನೆಗಳನ್ನು ಮಾಡಿದವರು ಡಾ. ಕಜೆ. ಆಯುರ್ವೇದ ಸಮ್ಮೇಳನಗಳು, ಆಯುರ್ವೇದೀಯ ಶಿಬಿರಗಳು, ’ಆಯುರ್ವೇದ ಪರಿಕ್ರಮ’, ’ಆಯುರ್ವೇದ ಇನ್ ಎ ನಟ್ ಶೆಲ್’ ಎಂಬ ಆಯುರ್ವೇದೀಯ ವೈದ್ಯರುಗಳದ್ದೇ ಆದ ಒಂದು ಸಮ್ಮೇಳನ ಹೀಗೆಲ್ಲಾ ಆಯುರ್ವೇದಕ್ಕಾಗಿ, ಆಯುರ್ವೇದದಲ್ಲೇ ಶ್ರದ್ಧೆಯಿರುವ ಆಯುರ್ವೇದ ವೈದ್ಯರನ್ನೂ, ಆಯುರ್ವೇದ ನೆಚ್ಚಿಕೊಳ್ಳುವ ರೋಗಿಗಳನ್ನೂ ಕಲೆಹಾಕಿ, ಆಯುರ್ವೇದದ ಇಂದಿನ ಸ್ಥಿತಿಗತಿ-ಚಿಕಿತ್ಸೆ-ಔಷಧಗಳ ಬಗ್ಗೆ-ಆಯುರ್ವೇದ ಎದುರಿಸುತ್ತಿರುವ ಹೊಸಹೊಸ ಸವಾಲುಗಳ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಅದೆಷ್ಟೋ ರಾತ್ರಿಗಳನ್ನು ಆಯುರ್ವೇದ ಗ್ರಂಥಗಳ ಅಧ್ಯಯನಕ್ಕಾಗಿ ಮೀಸಲಿಟ್ಟು, ಭಾನುವಾರದ ರಜಾವನ್ನೂ ತೊರೆದು ’ಆಯುರ್ವೇದ ಪರಿಕ್ರಮ’ ಎಂಬ ಹೃದಯಸ್ಪರ್ಶೀ ಕಾರ್ಯಕ್ರಮ ನಡೆಸಿದ್ದಾರೆ. ಸ್ವಾಧ್ಯಾಯದಿಂದ ಮನದಲ್ಲಿ ಮೂಡಿದ ಹೊಸಹೊಸ ಮೂಲಿಕಾ ಮಿಶ್ರಣಗಳನ್ನು ಕ್ರಿಯಾತ್ಮಕವಾಗಿ ಸಿದ್ಧಪಡಿಸಿ ಅವರದ್ದೇ ಆದ ಅದೆಷ್ಟೋ ಔಷಧಗಳನ್ನು ತಯಾರಿಸಿದ್ದಾರೆ! As far as my view is concerned, in any profession, when profession is a passion it will be a success, when profession is just fashion it is failure. w.r.t. Dr.Kaje: Ayurveda has become his passion & he could achieve a lot just because of his this nature.
ಪ್ರಾಯಶಃ "ಇಷ್ಟು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ, ಜೈ ಹಿಂದ್" ಎಂದರೆ ಅದು ಶುದ್ಧ ತಪ್ಪು, ಯಾಕೆ ಗೊತ್ತೇ ಆಯುರ್ವೇದವೇ ಪ್ಯಾಶನ್ ಆಗಿರುವ ಈ ಡಾಕ್ಟರಲ್ಲಿ ಒಬ್ಬ ಒಳ್ಳೆಯ ವಾಗ್ಮಿಯಿದ್ದಾನೆ, ಒಬ್ಬ ಸಾಹಿತಿಯಿದ್ದಾನೆ, ಒಬ್ಬ ಕವಿಯಿದ್ದಾನೆ, ಒಬ್ಬ ಹಾಸ್ಯಗಾರನಿದ್ದಾನೆ, ಒಬ್ಬ ಆಡಳಿತಾಧಿಕಾರಿಯಿದ್ದಾನೆ! ಮೇಲೆ ಹೇಳಿದ ಸೀಕ್ರೆಟ್ಟುಗಳೆಲ್ಲಾ ಡಾ.ಕಜೆಯವರ ಹನಿಗವನಗಳು. ಈ ಸೀಕ್ರೆಟ್ಟುಗಳೆಲ್ಲಾ ಸೇರಿದಂತೇ, ಆಯುರ್ವೇದದ ಬಗ್ಗೆ ಅನೇಕ ಮೌಲಿಕ ಲೇಖನಗಳನ್ನು ಬರೆದು ಸೇರಿಸಿ, ಎಲ್ಲವನ್ನೂ ಒತ್ತಟ್ಟಿಗೆ ಪೇರಿಸಿ, ೨೦೦೮ ರಲ್ಲಿ ’ಪ್ರೊಫೆಶನಲ್ ಸೀಕ್ರೆಟ್ಸ್’ ಎಂಬ ಪುಸ್ತಕವನ್ನು ಹೊರತಂದವರು ಡಾ.ಕಜೆ. ಆರುತಿಂಗಳಲ್ಲೇ ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ಮತ್ತೆ ಮರುಮುದ್ರಣಗೊಂಡು ಮತ್ತೆ ಮಾರಾಟವಾಗಿ ಈಗ ಮೂರನೇ ಬಾರಿಗೆ ಮುದ್ರಣಗೊಳ್ಳುವಾಗ ಅದನ್ನು ಆಂಗ್ಲಭಾಷೆಗೂ ಅನುವಾದಿಸಿ/ತರ್ಜುಮೆಗೊಳಿಸಿ ಪ್ರಕಟಿಸಿದ್ದಾರೆ. ಡಾಕ್ಟರ್ ಬಗ್ಗೆ ಹೆಚ್ಚಿನ ಅರಿವು ಆ ಪುಸ್ತಕವನ್ನು ಓದುವುದರಿಂದ ಉಂಟಾಗುತ್ತದೆ. ಲಘು ಹಾಸ್ಯಪೂರಿತ ಬರಹಗಳು ಒಬ್ಬರೇ ಕುಳಿತು ಓದುವಾಗಲೂ ನಮ್ಮೊಳಗೇ ನಾವು ನಗುವಂತೇ ಮಾಡುತ್ತವೆ. [ಲೇಖನದ ಆರಂಭದಲ್ಲಿ ’ಚಿಕ್ಕ ಕೆಲಸವೊಂದನ್ನು ಮಾಡಿ’ ಎಂದಿದ್ದೆನಲ್ಲಾ:ಇನ್ನಷ್ಟು ಇಂಥಾ ಜೋಕುಗಳನ್ನು ಓದಲು ಡಾ.ಕಜೆಯವರ ’ಪ್ರೊಫೆಶನಲ್ ಸೀಕ್ರೆಟ್ಸ್’ ಕೊಂಡು ಓದಿನೋಡಿ!] ಇಷ್ಟೇ ಎಂದುಕೊಳ್ಳಬೇಡಿ, ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ನವರಂಗದ ಹತ್ತಿರ ಕಜೆಯವರ ಹೊಸದೊಂದು ಸುಸಜ್ಜಿತ ಆಯುರ್ವೇದ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಅಲೋಪಥಿ ಚಿಕಿತ್ಸಾ ಆಸ್ಪತ್ರೆಗಳಂತೇ ಈ ಆಸ್ಪತ್ರೆಯಲ್ಲೂ ಹಾಸಿಗೆಗಳು, ಪರೀಕ್ಷಣಾ ಕೊಠಡಿಗಳು, ಅಯುರ್ವೇದೀಯ ವೈದ್ಯರುಗಳು, ಪಂಚಕರ್ಮ ಮೊದಲಾದ ಥೆರಪಿ ಸೆಂಟರ್ ಎಲ್ಲವನ್ನೂ ಒದಗಿಸಲಾಗುತ್ತದೆ. ದಶಕದ ಸೇವಾವಧಿಯಲ್ಲೇ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಡಾ.ಕಜೆ ಒಬ್ಬ ವ್ಯಕ್ತಿಯಾಗಿ ಕಾಣುವುದಕ್ಕಿಂತಾ ನನಗೆ ಅವರೊಂದು ಸಂಸ್ಥೆಯಾಗಿ ಕಾಣುತ್ತಾರೆ. ನನಗೆ ಸ್ನೇಹಿತರಾಗಿರುವ ನೂರಾರು ವೈದ್ಯರಿದ್ದಾರೆ. ಒಂದಲ್ಲಾ ಒಂದು ಕಾರಣಕ್ಕೆ ಅವರೆಲ್ಲರ ಸಖ್ಯ ನನಗೆ ದೊರಕಿರುವುದು ನನ್ನ ಸೌಭಾಗ್ಯ; ಆ ಎಲ್ಲರ ಪೈಕಿ ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗಿದ್ದಾರೆ-ನಮ್ಮ ಮನೆಮಂದಿಯಂತೇ ಆಗಿಬಿಟ್ಟಿದ್ದಾರೆ. ಅಂಥವರಲ್ಲಿ ಡಾ.ಕಜೆ ಕೂಡಾ ಒಬ್ಬರು ಎಂಬುದು ಕೇವಲ ಬಾಹ್ಯ ನುಡಿಯಲ್ಲ!
ಆಯುರ್ವೇದ ಶಾಸ್ತ್ರಕ್ಕೆ ಮೂರುಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಚರಕ ಮತ್ತು ಸುಶ್ರುತರೆಂಬ ಮನೀಷಿಗಳು ತಮ್ಮ ತಪಸ್ಸಿದ್ಧಿಯ ಜೊತೆಗೆ, ತಮ್ಮ ನಿರಂತರ ಪರಿಶ್ರಮದಿಂದ ಆಯುರ್ವೇದದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅವರೀರ್ವರಿಗಿಂತಲೂ ಹಿಂದೆಯೇ ಆಯುರ್ವೇದ ಇದ್ದರೂ ಅಂದಿನ ಆಯುರ್ವೇದ ಗ್ರಂಥಗಳು ಲುಪ್ತವಾಗಿರುವುದರಿಂದ ನಮಗೆ ಸಿಗುವುದು ಚರಕ-ಸುಶ್ರುತರ ಬರಹಗಳುಳ್ಳ ಪುಸ್ತಕಗಳು ಮಾತ್ರ. ಲೋಕೋಪಕಾರದ ದೃಷ್ಟಿಯಿಂದ ಮಹಾನ್ ಮನೀಷಿಗಳು ತಮ್ಮ ಜೀವಿತವನ್ನೆಲ್ಲಾ ಸವೆಸಿ, ಸಿದ್ಧಪಡಿಸಿದ ವನೌಷಧೀಯ ಚಿಕಿತ್ಸಾ ಕ್ರಮ ಆಯುರ್ವೇದ. ಚರಕ-ಸುಶ್ರುತರ ಕಾಲದಲ್ಲಿ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಗಳೂ ನಡೆಯುತ್ತಿದ್ದವಂತೆ! ಆದರೆ ಮಧ್ಯಕಾಲೀನ ಪರಕೀಯ ಆಳರಸರ ದುರಾಡಳಿತದಿಂದ ಆಯುರ್ವೇದದ ಮೇಲೆ ಪರಕೀಯ ಔಷಧೀಯ ಪದ್ಧತಿಗಳು ದಾಳಿನಡೆಸಿದವು. ’ಹಿತ್ತಲಗಿಡ ಮದ್ದಲ್ಲ’ವೆಂಬಂತೇ, ಭಾರತೀಯರು ಸಹಜವಾಗಿ ಪರಕೀಯ ಚಿಕಿತ್ಸಾಕ್ರಮಗಳ ’ರುಚಿನೋಡಲು’ ತೊಡಗಿದರು. ತತ್ಕಾಲಕ್ಕೆ ಕ್ಷಣಿಕ ಪರಿಹಾರವನ್ನು ನೀಡುವ ಪದ್ಧತಿಗಳು ಕಾಲಕ್ರಮದಲ್ಲಿ ಉಂಟುಮಾಡುವ ದುಷ್ಪರಿಣಾಮಗಳ ಲೆಕ್ಕವನ್ನು ಯಾರೂ ಇಡಲಿಲ್ಲ! ಈಗೀಗ ಅದರ ಅರ್ಥವಾಗುತ್ತಿದೆ. ನಮ್ಮ ಮೂಲಗ್ರಂಥಗಳನ್ನು ಬಳಸಿಕೊಂಡು ವಿದೇಶೀಯರು ಪೇಟೆಂಟ್ ಪಡೆಯಲು ಮುಂದಾದಾಗ ನಮ್ಮಲ್ಲಿನ ಜನರಿಗೆ ಅರ್ಥವಾಗಿದೆ! ಹಿತ್ತಲ ಗಿಡವೂ ಕೂಡ ಯಾವುದಾದರೊಂದು ಮದ್ದು ತಯಾರಿಸಲು ಬರುತ್ತದೆ ಎಂಬುದು ಮನದಟ್ಟಾಗಿದೆ.
ಡಾ.ಸತ್ಯನಾರಾಯಣ ಭಟ್ ಎಂಬ ಇನ್ನೊಬ್ಬ ವೈದ್ಯರು ಮಗಳಿಗೆ ತಗುಲಿಕೊಂಡ ಕ್ಯಾನ್ಸರ್ ಬಗ್ಗೆ ’ತರಂಗ’ದಲ್ಲೊಮ್ಮೆ ಬರೆದಿದ್ದರು. ಅಮೇರಿಕಾದ ಅತ್ಯುನ್ನತ ಆಸ್ಪತ್ರೆಗಳು ಕೈ ತಿರುಗಿಸಿದಾಗ ಮರಳಿ ಭಾರತಕ್ಕೆ ಬಂದು, ಮನದಲ್ಲೇ ಆದದ್ದಾಗಲಿ ಎಂದುಕೊಂಡು, ಮನೆಯಲ್ಲೇ ಶುದ್ಧ ಅರಿಶಿನ ಮತ್ತು ಕರಿಮೆಣಸಿನ ಕಾಳು ಸೇರಿಸಿ ಪುಡಿಮಾಡಿ, ಅದನ್ನು ನಿತ್ಯ ಕಷಾಯ ಮಾಡಿ ಮಗಳಿಗೆ ಕೊಡುತ್ತಿದ್ದರಂತೆ. ಅದರಿಂದಲೇ ಆಕೆಯ ಕ್ಯಾನ್ಸರ್ ವಾಸಿಯಾಗಿ ಅಮೇರಿಕಾದ ವೈದ್ಯರು "ಏನು ಚಿಕಿತ್ಸೆ ಮಾಡಿದಿರಿ, ನಮಗೂ ತಿಳಿಸಿ" ಎಂದು ದುಂಬಾಲು ಬಿದ್ದಿದ್ದಾರಂತೆ! ಇಂಥಾ ಅತ್ಯುತ್ಕೃಷ್ಟ ಆಯುರ್ವೇದವನ್ನು ನಾವು ಮರೆಯುವುದು ತರವೇ? ನಾವೆಲ್ಲಾ ಮರೆತರೂ ಆಯುರ್ವೇದವನ್ನೇ ಉಸಿರಾಡುವ ಡಾ.ಕಜೆಯಂತಹ ಕೆಲವು ಜನ ಮರೆಯುವುದಿಲ್ಲ; ಮರೆಯಲೂಬಾರದು. ನಾನು ಇಲ್ಲಿ ಹೀಗೆ ಬರೆಯುತ್ತಿರುವುದು ಡಾ.ಕಜೆಯವರಿಗೆ ತಿಳಿದಿಲ್ಲ, ತಿಳಿದರೆ ’ಬೇಡಾ’ಎನ್ನುತ್ತಾರೆ ಎಂಬ ಅನಿಸಿಕೆಯಿಂದ ಬರೆದಿದ್ದೇನೆ. ಈ ಬರಹ ಅವರಿಗೊಂದು ಕೃತಜ್ಞತೆಮಾತ್ರ. ನಮ್ಮ ಸಮಸ್ಯೆ ಪರಿಹರಿಸಿದ ಅವರಿಗೆ ನಾವು ಇನ್ನೇನು ನೀಡಲು ಸಮರ್ಥರು? ಅಲ್ಲವೇ? ಪದ್ಮಭೂಷಣವನ್ನು ಡಾ.ಮೋದಿಗೆ ನೀಡಿದಂತೇ, ಡಾ.ಕಜೆಯವರ ಸೇವೆ ಮತ್ತು ಅಪ್ಪಟ ಆಯುರ್ವೇದದ ಬಳಕೆಯನ್ನು ಪ್ರಸರಣಮಾಡುವ ಶ್ರಮಕ್ಕೆ- ಕಜೆಯವರಿಗೂ ಅಂತಹ ಗೌರವ-ಪುರಸ್ಕಾರಗಳನ್ನು ಸರಕಾರ ಕೊಡಮಾಡುವಂತಾಗಲಿ ಎಂದು ಹಾರೈಸುತ್ತೇವೆ. ಅಂದಹಾಗೇ, ಅನೇಕರು ನನ್ನಲ್ಲಿ ಆಗಾಗ ಡಾ.ಕಜೆಯವರ ವಿಳಾಸ, ಅವರ ಲಭ್ಯತೆಗಳ ಬಗ್ಗೆ ವಿವರ ಕೋರುತ್ತಾರೆ. ಓದಿದ ನಿಮ್ಮಲ್ಲೂ ಕೆಲವರು ಹಾಗೆ ಕೇಳುವ ಮೊದಲೇ ತಗೊಳಿ ಕೊಟ್ಟುಬಿಡುತ್ತೇನೆ:
Prashaanthi Ayurvedic Centre
No.51, In between Sampige & Margosa Road, 7th Cross, Malleshwaram, Bangalore-03
Websites: www.kajeayurveda.in, www.drgiridharakaje.in
Email: info@kajeayurveda.in, info@drgiridharakaje.in
Phone Numbers for appointments: 9900041105, 9900051105, 9900061105
Phone Numbers for information : 080-23341105
Phone Numbers for emergencies : 080-23361105
you can also get daily health tips@ http://www.facebook.com/drkaje