ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 9, 2010

ಬೆಡಗಿನ ಮುಂಜಾವು

ಬೆಡಗಿನ ಮಂಜಿನ ಮುಂಜಾವನ್ನು ಅನುಭವಿಸಬೇಕೆ ಹೊರತು ಅದನ್ನು ಹಾಡಿನಲ್ಲಿ, ಪದಗಳಲ್ಲಿ ಬಣ್ಣಿಸಲು ಸ್ವಲ್ಪ ಕಷ್ಟ, ಒಂದೊಂದು ಕೆಡೆಗೆ ನಮ್ಮ ನಿಸರ್ಗದ ಬೆಳಗು ಮತ್ತು ಬೆಡಗು ಒಂದೊಂದು ಥರ ! ಇಡೀ ದಿನದಲ್ಲಿ ತಂಪಾದ ವಾತಾವರಣ ಇರುವುದು ಮುಂಜಾವಿನಲ್ಲಿ ಮಾತ್ರ. ಬೆಳಗಿನ ೫ ಗಂಟೆ ಅತೀ ತಣ್ಣಗಿನ ಕಾಲ ವೆಂದು ವಿಜ್ಞಾನ ಹೇಳುತ್ತದೆ. ನಮಗೆ ಅತ್ಯುಪಯುಕ್ತವಾದ ozone ಪದರಕೂಡ ಈ ಹೊತ್ತಿನಲ್ಲೇ ಭೂಮಿಯ ಹತ್ತಿರಕ್ಕೆ ಇಳಿದಿರುತ್ತದೆ.


ಈ ಸಮಯ ಆನಂದಮಯ. ಸ್ವಲ್ಪ ಮಂಜು ಇದ್ದರೆ, ಥರಥರದ ಹೂವುಗಳು ಅರಳಿ ಪರಿಮಳ ಬೀರಿದ್ದರೆ, ಗಿಡ-ಮರಗಳು ಮಂದ ಮಾರುತಕ್ಕೆ ತಲೆಯಲ್ಲಾಡಿಸಿ ತೊನೆಯುತ್ತಿದ್ದರೆ, ಹಕ್ಕಿಗಳು ತಮ್ಮ ವಿವಿಧ ಧ್ವನಿಗಳಲ್ಲಿ ಕಲರವ ಎಬ್ಬಿಸಿದರೆ, ದುಂಬಿಗಳು ಹಾರಡಿದರೆ, ಚಿಟ್ಟೆಗಳೂ ಕೈ ಜೋಡಿಸಿದರೆ, ಆಕಳ ಎಳೆಗರುಗಳು ಅಂಬೆ ಎಂದು ಕೂಗಿದರೆ, ಮಾವು ತನ್ನ ನಳಿದೋಳುಗಳಿಂದ ತೋರಣ ಕಟ್ಟಿದ್ದರೆ, ಸಣ್ಣ ಕಾಮನ ಬಿಲ್ಲು ಹುಟ್ಟಿಕೊಂಡರೆ ಯಾರಿಗೆ ಬೇಕು ಇಂದ್ರನ ನಂದನವನ, ಇದೇ ಭುವಿಯ ನಂದನವನವಲ್ಲವೇ ? ಇದನ್ನು ನೀವೂ ಹಾಡಿನ ಮೂಲಕ ಅನುಭವಿಸಿ ಬನ್ನಿ --------ಬೆಡಗಿನ ಮುಂಜಾವು


ಎಷ್ಟು ಚಂದವೀ ಸೃಷ್ಟಿಯ ಸೊಬಗಿದು
ಇಂಪಿನ
ತಂಪಿನ ಮುಂಜಾವು
ಇಷ್ಟವಾಯ್ತೆನಗೆ ನಿಸರ್ಗ ನೋಂಪಿಯು
ಬೆಡಗಿನ
ನಿತ್ಯೋತ್ಸವದರಿವು


ಚೆಂಗುಲಾಬಿಯ ತುಂಬ ಮುತ್ತು ಪೋಣಿಸಿ ಇಟ್ಟು
ಮತ್ತೆ
ದಿನಕರನು ಬರಲು
ಬೃಂಗಕುಂತಳೆ ಹೇಳು ಯಾರಿಗಿದು ಔತಣವು
ಪ್ರತಿದಿನವು ನಡೆಯುತಿರಲು


ಮಂದಮಾರುತ ಬೀಸಿ ಮುಂಗುರಳ ನೇವರಿಸೆ
ಗಿಡ
-ಮರಗಳವು ನಲಿಯುತಾ
ಬಂದಜನತೆಗೆ ಹಸಿರ ಹುಲ್ಲ ಚಾಪೆಯ ಹಾಸಿ
ಕರೆ
ವಳದೋ ತಾಯಿ ಸತತ


ಜಾಜಿ ಮಲ್ಲಿಗೆ ಕೇದಗೆ ಸಂಪಿಗೆಯ
ಕಂಪು
ಬನದ ತುಂಬೆಲ್ಲ ಹರಡಿ
ರಾಜದುಂಬಿಯ ಕರೆಯೆ ನಡೆಸಿಹವು ಪೈಪೋಟಿ
ರಾಜಿಸುತ
ತನುವನೀಡಿ


ಮಾವು ತೂಗುತ ತೋರಣವ ಕಟ್ಟಿ ಬಾಂದಳದಿ
ಜಾವದಲೆ ಶುಭವಕೋರಿ
ಆವು ಕರುಗಳು ಕೊರಳ ಗಂಟೆಯಾಡಿಸಿ ತಾವು
ಜೀವನೋತ್ಸವದಿ ಹಾರಿ


ಹೊಗೆಯ ನಗುವಿನ ಮಂಜು ಮುಸುಕಿಹುದು
ಬಯಲಿನಲಿ
ತಣ್ಣನೆಯ ಚಳಿಯ ಬೀರಿ
ಬಗೆಯ ಚಿಟ್ಟೆಗಳೆಲ್ಲ ಹಾರಾಡಿ ನಲಿದಿಹವು
ಸಿಹಿಯ
ಮಕರಂದ ಹೀರಿ