ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, December 10, 2013

ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!


ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!

ಅದೊಂದು ಸುದೀರ್ಘ ಐತಿಹಾಸಿಕ ಕಥೆ! ವಿಜಯನಗರ ಸಾಮ್ರಾಜ್ಯ ಪತನಗೊಳ್ಳುವ ಕಾಲದಲ್ಲಿ, ಅವರ ಪಾಳೇಗಾರರು, ಸಾಮಂತರು ಎಲ್ಲರೂ ಬೆಳೆಯುತ್ತ ಸಬಲರಾಗತೊಡಗಿದ್ದರು. ವಿಜಯನಗರ ವಂಶಸ್ಥನಾಗಿದ್ದ ಶ್ರೀರಂಗರಾಯ ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸಿದ್ದ. ಬರುವಾಗ ಆತನ ರಾಣಿ ಅಲಮೇಲಮ್ಮ ಪಾರಂಪರಿಕವಾಗಿ ಪ್ರಾಪ್ತವಾದ ಬಂಗಾರ, ಮುತ್ತು-ರತ್ನ-ಒಡವೆ ವಸ್ತುಗಳನ್ನೆಲ್ಲ ಕಟ್ಟಿಕೊಂಡು ಬಂದಿದ್ದಳು. ಮೈಸೂರು ಪ್ರಾಂತದಲ್ಲಿ ಪ್ರಬಲಗೊಳ್ಳುತ್ತಿದ್ದ ಯದುವಂಶದ ಅರಸ ಶ್ರೀರಂಗ ಪಟ್ಟಣದಮೇಲೆ ದಂಡೆತ್ತಿಹೋದ. ನಡೆದ ಯುದ್ಧದಲ್ಲಿ ಶ್ರೀರಂಗರಾಯ ಮಡಿದ. ಗತಿಸಿದ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನಲ್ಲಿ ಇರುವ ಅನರ್ಘ್ಯ ರತ್ನಗಳನ್ನು ಬಯಸಿದವರು ಮೈಸೂರು ಅರಸರು. ತನ್ನ ಮುಂದಿನ ಉಪಜೀವಿತಕ್ಕೆ ಆಪದ್ಧನವಾದ ಅದನ್ನು ಕೊಡೆನೆಂದ ಆಕೆಯನ್ನು ಅರಸನ ಸೈನಿಕರು ಅಟ್ಟಿಸಿಕೊಂಡು ಹೋದರು. ಓಡುತ್ತಾ ಓಡುತ್ತಾ ಆಕೆ ಕಾವೇರಿ ನದಿಯ ಮಾಲಂಗಿ ಎಂಬ ಪ್ರದೇಶಕ್ಕೆ ಬಂದಳು. ಅಲ್ಲಿಗೆ ಬಂದಾಗ ಅಟ್ಟಿಸಿ ಬಂದ ಸೈನಿಕರು ಆಕೆಯ ತಲೆಗೂದಲನ್ನು ಹಿಡಿದೆಳೆದರೂ ಸಹ, ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಣಿಯ ಕೂದಲುಗಳ ಒಂದಷ್ಟು ಭಾಗ ತುಂಡಾಗಿ, ಸೈನಿಕನೊಬ್ಬನ ಕೈಯ್ಯಲ್ಲಿ ಹಾಗೇ ಉಳಿಯಿತು. ಕೋಪೋದ್ರಿಕ್ತಳಾದ ಆ ತಾಯಿ, ತನ್ನ ಅಶಾಯಕತೆಯಲ್ಲಿ ಮೈಸೂರು ಅರಸರು ಕೊಟ್ಟ ಹಿಂಸೆಯನ್ನು ನೆನೆದು,  "ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಸಂತಾನ ಆಗದೇ ಹೋಗಲಿ" ಎಂದು ಶಪಿಸಿ ಕಾವೇರಿ ನದಿಯಾಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು.  

ಆ ಕ್ಷಣದಲ್ಲಿ ಮೈಸೂರು ರಾಜರಿಗೆ ಏನೂ ಅನ್ನಿಸಲಿಲ್ಲ; ಶಾಪವೆಲ್ಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಕೂಡ ಅವರಲ್ಲಿರಲಿಲ್ಲ. ಆದರೆ ನಂತರ ನಡೆದುಬಂದ ಮೈಸೂರು ಯದುವಂಶದ ಇತಿಹಾಸವನ್ನು ಗಮನಿಸುವಾಗ, [ಪಾಂಡವರ ಯುಧಿಷ್ಠಿರ ಬಳಸಿದ್ದ ಸಿಂಹಾಸನವೆಂಬ ಪ್ರತೀತಿ ಇದೆ]ವಿಜಯನಗರದಿಂದಲೇ ಬಂದಿತೆನ್ನಲಾದ  ಬಂಗಾರದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾಗಿ ಅರಸನೆನಿಸಿಕೊಳ್ಳುವ ವ್ಯಕ್ತಿಗೆ ಮಕ್ಕಳು ಆಗಲೇ ಇಲ್ಲ! ದತ್ತು ತೆಗೆದುಕೊಂಡು ಪಟ್ಟಾಧಿಕಾರಕ್ಕೆ ಬರುವ ಅರಸರಿಗೆ ಒಂದು ಪೀಳಿಗೆಗೆ ಮಕ್ಕಳು ಇನೊಂದು ಪೀಳಿಗೆ ಬರುವಷ್ಟರಲ್ಲಿ ಮತ್ತೆ ಮಕ್ಕಳಿಲ್ಲ!  

ಮೈಸೂರು ಅರಸರ ಮಹಾ ಸಂಸ್ಥಾನ ಕಳೆಗುಂದುವುದಕ್ಕೆ ಅಲಮೇಲಮ್ಮನ ಶಾಪ ಕೂಡ ಕಾರಣವಾಗಿದೆ ಎಂಬುದು ನಂಬಬಹುದಾದ ವಿಷಯ; ಅದನ್ನು ಸ್ವತಃ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರೇ ಒಪ್ಪಿಕೊಂಡಿದ್ದರು-ಅದು ಅವರ ತಪ್ಪಲ್ಲ, ಅವರ ವಂಶದ ಪೂರ್ವಜರ ತಪ್ಪು.

ನಿಕಟಪೂರ್ವ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರಿಗೆ ಮದುವೆಯಾಗಿ ಕೆಲವುಕಾಲ ಪುತ್ರಸಂತಾನವಾಗಲೇ ಇಲ್ಲ. ಜಯಚಾಮರಾಜೇಂದ್ರ ಒಡೆಯರ್ ಅವರು ಅವರ ದೊಡ್ಡಪ್ಪನಿಂದ ದತ್ತು ತೆಗೆದುಕೊಳ್ಳಲ್ಪಟ್ಟು ಸಿಂಹಾಸನವನ್ನೇರಿದ್ದರು. ಕಾಲಾನಂತರದಲ್ಲಿ ಮೈಸೂರಿಗೆ ಭಗವಾನ್ ಶ್ರೀಧರ ಸ್ವಾಮಿಗಳು ಬಂದಿದ್ದರು. ಮೈಸೂರಿನಲ್ಲಿ ಶಿಷ್ಯರಿಂದ ತನ್ನರಿವಿಗಿಲ್ಲದೇ ಗೊತ್ತುಪಡಿಸಲಾಗಿದ್ದ-[ಎರಡು ಕಡೆಗೂ] ಒಂದೇ ಸಮಯದಲ್ಲಿ ಜರುಗುತ್ತದೆಂದು ಘೋಷಿತವಾಗಿದ್ದ ಪ್ರವಚನ ವೇದಿಕೆಗಳಲ್ಲಿ ಏಕಕಾಲಕ್ಕೆ ಎರಡು ಶ್ರೀಧರರಾಗಿ ಪ್ರವಚನ ನಡೆಸಿದ ಸಂನ್ಯಾಸ ಶಿಖರ ಶ್ರೀಧರ ಸ್ವಾಮಿಗಳು! ಅಂತಹ ಮಹಾತ್ಮರು ಮೈಸೂರಿಗೆ ಬಂದಿದ್ದನ್ನು ತಿಳಿದು, ಜಯಚಾಮರಾಜೇಂದ್ರ ಒಡೆಯರ್ ಅವರ ಭಾವ ಸ್ವಾಮಿಗಳಿದ್ದೆಡೆ ಬಂದು, ನಮಸ್ಕರಿಸಿ ತನ್ನ ಸಹೋದರಿಗೆ ಪುತ್ರಸಂತಾನವಾಗಬೇಕೆಂದು ಪ್ರಾರ್ಥಿಸಿದ. ಎರಡು ನಿಮಿಷ ಮೇಲ್ಮುಖವಾಗಿ ಏನನ್ನೋ ಯೋಚಿಸಿದ ಶ್ರೀಧರರು ಸ್ವಲ್ಪ ನೀರನ್ನು ನೆಲಕ್ಕೆ ಬಿಟ್ಟರು. ಆಮೇಲೆ ತೆಂಗಿನಕಾಯೊಂದನ್ನು ಅಭಿಮಂತ್ರಿಸಿ ಅವರಿಗೆ ಕೊಟ್ಟು, ರಾಜ-ರಾಣಿಗೆ ಅದನ್ನು ಬಳಸಲು ಹೇಳುವಂತೆ ತಿಳಿಸಿದರು. ಇದರ ಪರಿಣಾಮವಾಗಿ ಹುಟ್ಟಿದ ಮಗುವಿನ ಹೆಸರಿನ ಮಧ್ಯೆ ’ದತ್ತ’ ಎಂಬ ಪದವನ್ನು ಕಾಣಬಹುದು. ಶ್ರೀಧರರು ಸಾಕ್ಷಾತ್ ದತ್ತಾವತಾರಿಯಾದುದರಿಂದ ಆ ಹೆಸರು ಬಳಸಲ್ಪಟ್ಟಿತು. ಶ್ರೀಧರಸ್ವಾಮಿಗಳ ಚರಿತ್ರೆಯಿಂದ ಈ ಮಾಹಿತಿಯನ್ನು ಸಂಗ್ರಹಿಸಿ ತಮಗೆ ಹೇಳಿದ್ದೇನೆ.

ವರ್ಣಭೇದ ಎಂಬುದನ್ನು ಗೀತೆಯಲ್ಲಿ ಕೃಷ್ಣ ಹೇಗೆಂದು ಹೇಳಿದ್ದಾನೆ:

ಚಾತುರ್ವಣ್ಯಂ ಮಾಯಸೃಷ್ಟಂ ಗುಣಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಜಾತಿ ಪದ್ಧತಿ, ವರ್ಣ ಪದ್ಧತಿ ಇವೆರಡೂ ಒಂದೇ ಅಲ್ಲ! ಜಾತಿ ಹುಟ್ಟಿನಿಂದ ಬಂದದ್ದು; ವರ್ಣ ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟದ್ದು. ಗೀತೆಯಲ್ಲಿ ಕೃಷ್ಣ ಹೇಳುವ "ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ"[ಗೀತಾ 4.13] ಎಂಬುದು ಮನುಷ್ಯನ ಸ್ವಭಾವದ ವರ್ಗೀಕರಣವಷ್ಟೆ. ಮನುಷ್ಯನ ಮನಸ್ಸಿನ ಜಾಯಮಾನಗಳು ಜಾತಿಗೆ ಸಂಬಂಧ ಪಟ್ಟಿದ್ದಲ್ಲ. "ನ ವರ್ಣಾನಾಂ ಭೇದಃ ನಾಸ್ತಿ | ಸರ್ವಂ ಬ್ರಾಹ್ಮಂ ಇದಂ ಜಗತ್" [ಎಲ್ಲರನ್ನೂ ಒಂದೇ ಸಮನಾಗಿ ಕಾಣು ಏಕೆಂದರೆ ಎಲ್ಲವನ್ನೂ ಮತ್ತು ಎಲ್ಲ ವರ್ಣದವರನ್ನು ಸೃಷ್ಟಿಸಿದ್ದು ಭಗವಂತನೇ ಆಗಿದ್ದಾನೆ.]ಎನ್ನುವ ಮಹಾಭಾರತದ ಮಾತು ಭೀಷ್ಮ ಧರ್ಮರಾಯನಿಗೆ ತಿಳಿಸುವ ಬುದ್ಧಿ ಮಾತು. ’ವರ್ಣ’ಎಂಬ ಪದಕ್ಕೆ ದೇಹದ ಬಣ್ಣ ಎಂಬ ಅರ್ಥವನ್ನಂತೂ ಇಲ್ಲಿ ಹೇಳಿಲ್ಲ. "ಅವರ ಬಣ್ಣ ಬಯಲಾಯ್ತು" ಎಂದರೆ, ಅದು ನಾಮ ನಮೂದಿತರ ದೇಹದ ಬಣ್ಣದ ಬಗ್ಗೆ ಹೇಳುತ್ತಿರುವುದಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಮನುಷ್ಯ ವಸಾಹತುಳ್ಳ ಪ್ರಪಂಚದ ಎಲ್ಲ ಭಾಗಗಳಲ್ಲೂ ವರ್ಣ ಪದ್ಧತಿ ಇದ್ದೇ ಇದೆ. ಆದರೆ ಅದಕ್ಕೆ ಒಂದು ರೂಪಕೊಟ್ಟು ಮನುಷ್ಯರನ್ನು ಅವರವರ ಸ್ವಭಾವಕ್ಕೆ ಅನುಗುಣವಾಗಿ ವರ್ಗೀಕರಿಸಿ ಹೆಸರು ಕೊಟ್ಟವರು ಪ್ರಾಚೀನ ಭಾರತದ ಬುದ್ಧಿ ಜೀವಿಗಳು. ಬುದ್ಧಿಯ ಬಲದಿಂದ ಬಾಳುವವರ ಗುಂಪು, ತೋಳ್ಬಲದಿಂದ ಆಳುವವರ ಗುಂಪು, ವ್ಯಾಪಾರ- ವ್ಯವಸಾಯದಲ್ಲಿ ನುರಿತು ನಾಡನ್ನು ಶ್ರೀಮಂತಗೊಳಿಸುವವರ ಗುಂಪು, ಮತ್ತು ಒಂದಲ್ಲ ಒಂದು ಕಸುಬಿನಲ್ಲಿ ಪರಿಣತಿ ಹೊಂದಿದ ಶ್ರಮಜೀವಿಗಳ ಗುಂಪು-ಈ ರೀತಿಯ ನಾಲ್ಕು ವರ್ಗವಿಲ್ಲದ ಸಮಾಜ ಎಲ್ಲಿದೆ? ದುರ್ದೈವದಿಂದ ಜಾತಿ ಮತ್ತು ವರ್ಣ ಎರಡೂ ಒಂದೇ ಎಂಬ ನಂಬಿಕೆ ಬಂದುಬಿಟ್ಟಿದೆ. ವಿಭಿನ್ನ ಆಚಾರ-ವಿಚಾರ-ವ್ಯವಹಾರಗಳನ್ನು  ಹೊಂದಿದ ಒಟ್ಟಾರೆ ಸಮಾಜದಲ್ಲಿ, ಒಂದೇತೆರನಾದ ಆಚಾರ ವಿಚಾರಗಳನ್ನು ಹುಡುಕುತ್ತಾ ತಮ್ಮ ತಮ್ಮ ಗುಂಪುಗಳಲ್ಲೇ ಮದುವೆಯಾಗುವ ರೂಢಿ ಬಂದು ಸಮಾಜದಲ್ಲಿ ಜಾತಿಯ ಬಿಗಿತ ಬಂದು ಬಿಟ್ಟಿತು. ಇದರ ಪರಿಹಾರ ಕ್ರಮೇಣ ಸಮಾಜ ತನ್ನನು ತಾನೇ ತಿದ್ದಿಕೊಳ್ಳುವ ಮೂಲಕ ಆಗಬೇಕು. ಇನ್ನು ಹಿಂದೂ ಎನ್ನುವ ಶಬ್ದ ‘ಸಿಂಧೂ’[ನದಿಯ ಹೆಸರು] ಎಂಬ ಶಬ್ದದಿಂದ ಬಂದದ್ದು. ಈ ಶಬ್ದ ಧರ್ಮದ ಹೆಸರಿಗಿಂತ ಹೆಚ್ಚಾಗಿ ಒಂದು ಪ್ರದೇಶದ ಹೆಸರನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಭಾರತವಾಸಿಗಳೆಲ್ಲ- ಅವರು ಯಾವ ಧರ್ಮಕ್ಕೆ ಸೇರಿದವರಾದರೂ- ಹಿಂದುಗಳೇ ಆಗಿದ್ದಾರೆ.

ಪ್ರಕೃತಿಯಲ್ಲಿ ಎಲ್ಲವುದರಲ್ಲೂ ವೈವಿಧ್ಯಗಳಿವೆ. ಮಾನವ ಜನಾಂಗದಲ್ಲಿ 5,000 ವಿಭಿನ್ನ ವಂಶಾವಳಿಗಳಿವೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಸಮಸ್ಯೆಯೊಂದರ ಕುರಿತ ಪರಿಹಾರಕ್ಕಾಗಿ ದೇಶದಾದ್ಯಂತ ತಿರುಗಿ ಈಗಾಗಲೇ 8,000 ವಿಭಿನ್ನ ಜನಾಂಗದ ಜನರ ಡಿ.ಎನ್.ಎ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ! ಭತ್ತದಿಂದ ಭತ್ತ, ತೆಂಗಿನಿಂದ ತೆಂಗು, ಮಾವಿನಿಂದ ಮಾವು, ಬೇವಿನಿಂದ ಬೇವು ಹೀಗೇ ಫಲಗಳಲ್ಲಿ ವೈವಿಧ್ಯತೆಯಿದೆ. ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕರವೀರ, ದಾಸವಾಳ, ನಾಗಲಿಂಗ, ಕದಳಿ ....ಹೀಗೇ ನೂರಾರು ವೈವಿಧ್ಯದ ಹೂವುಗಳನ್ನು ಕಾಣಬಹುದಾಗಿದೆ. ಸಸ್ಯಗಳಲ್ಲಿ ಪ್ರಭೇದ, ಜೀವಿಗಳಲ್ಲಿ ಪ್ರಭೇದ, ಕೀಟಗಳಲ್ಲಿ ಪ್ರಭೇದ, ಅದೆಲ್ಲಾ ಹಾಗಿರಲಿ ಪ್ರಾದೇಶಿಕವಾಗಿ ಒಂದೇ ಭೂಮಿಯ ಮಣ್ಣಿನಲ್ಲೇ ಪ್ರಭೇದಗಳಿವೆ! ಎಂದಾಗ, ಮನುಷ್ಯರ ನಡೆ-ನುಡಿ ವಂಶಾವಳಿಗಳಲ್ಲಿ ಪ್ರಭೇದಗಳು ಇರುವುದು ಸಹಜ ಮತ್ತು ಪ್ರಕೃತಿ ನಿರ್ಮಿತ! "ಮಾನವಕುಲ ತಾನೊಂದೆವಲಮ್" ಎಂಬ ಮಾತು ಸಾಮಾಜಿಕವಾಗಿ ಒಟ್ಟಾಗಿ ಬಾಳುವುದಕ್ಕಷ್ಟೇ ಬಿಟ್ಟರೆ ನಮ್ಮ ದಿನನಿತ್ಯದ ನಡತೆಯಲ್ಲಿ ಭಿನ್ನತೆಗಳು ಇದ್ದೇ ಇರುತ್ತವೆ. ಸಂಸ್ಕೃತಿ ಮತ್ತು ನಾಗರಿಕತೆಗಳ ಕುರಿತು ನಾನು ಈ ಹಿಂದೆ ಬರಿದಿದ್ದೆ. ನಾಗರಿಕತೆ ಮನುಷ್ಯರೆಲ್ಲಾ ಒಂದೇ ಎನ್ನುತ್ತದೆ-ಅದು ಸರಿ; ಒಂದೇ ಎಂಬ ಮನುಷ್ಯರು ಹೇಗಿರಬೇಕು ಎಂಬುದನ್ನು ಸಂಸ್ಕೃತಿ ಬೋಧಿಸುತ್ತದೆ-ಅದನ್ನು ಒಪ್ಪಿಕೊಳ್ಳಲು ’ಅಧುನಿಕ ಬುದ್ಧಿಜೀವಿಗಳು’ ಸಿದ್ಧರಿಲ್ಲ! ಮಾಂಸಾಹಾರ ತ್ಯಜಿಸಿ ಎಂದು ಬಿಟ್ಟರೆ ಮೈಮೇಲೆ ಬೀಳುವ ಮಂದಿ ಅದೆಷ್ಟಿಲ್ಲ? ಮಾಂಸಾಹಾರದಲ್ಲೂ ಹಿಂದೂಗಳಿಗೆ ಪೂಜ್ಯವಾದ ದನದಮಾಂಸವನ್ನು ತಿನ್ನುವ ಜನಾಂಗವನ್ನೂ ನೋಡುತ್ತೇವೆ. ಹೀಗೆಲ್ಲಾ ಇರುವಾಗ ’ಮಾನವಕುಲ ತಾನೊಂದೇವಲಮ್’ ಎಂಬುದು ಅಪ್ರಾಕೃತಿಕವಾಗುತ್ತದೆ-ಇದು ನನ್ನ ನೇರ, ಸ್ಪಷ್ಟ ದೃಷ್ಟಿಯ ನುಡಿ. ಯಾವಾಗ ಮನುಷ್ಯರೆಲ್ಲರ ಆಹಾರ-ವ್ಯವಹಾರ-ಆಚಾರ-ವಿಚಾರಗಳಲ್ಲಿ ಇಂಚಿಂಚೂ ಹೋಲಿಕೆಯಿರುತ್ತದೋ ಆಗ ಮಾತ್ರ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವಿದೆ-ಅಲ್ಲೀವರೆಗೂ ಗುಂಪುಗಳು ಹಾಗೇ ಇರುತ್ತವೆ, ಜಾತಿಗಳು ಹೋಗುವುದಿಲ್ಲ. ಈಗಿನ ಕಾಲದಲ್ಲಿ ಎಲ್ಲವೂ ಜಾತ್ಯಾತೀತ ಎಂದು ಚೀರಾಡಿಬಿಟ್ಟರೆ ಅದು ತಿಪ್ಪೆಸಾರಿಸಿದ ಕೆಲಸವಾಗಿ, ಒಳಗೆ ಹಾಗೇ ಕುಳಿತಿರುವ ತಿಪ್ಪೆಯ ಗಬ್ಬು ನಾತ ಹೊರಗಿರುವವರ ಮೂಗಿಗೆ ಹೊಡೆಯುತ್ತಲೇ ಇರುತ್ತದೆ! ಎಲ್ಲಿಯವರೆಗೆ ನಾನು ಹೇಳಿದ ಅಂಶಗಳಲ್ಲಿ ಸಾಮ್ಯತೆಯಿಲ್ಲವೋ ಅಲ್ಲೀವರೆಗೂ ಜಾತೀಯತೆ ಬದುಕುತ್ತದೆ ಮತ್ತು ಬಲಿಯುತ್ತದೆ. ಇದನ್ನು ಮನುಷ್ಯರಾಗಿ ನಾವು ಮೊದಲು ಮನಗಾಣಬೇಕು.

ವರ್ಣವ್ಯವಸ್ಥೆಯನ್ನು ಭಗವಂತ ಸ್ವತಃ ತಾನೇ ನಿರ್ಮಿಸಿದೆ ಎಂದಿದ್ದಾನೆ. ಒಂದೊಮ್ಮೆ ಗೀತಾಚಾರ್ಯ ಶ್ರೀಕೃಷ್ಣ ಗೀತೆ ಮಹಾಭಾರತದ ನಡುವೆ ಬಂದಿರುವುದೆಂಬ ಕಾರಣಕ್ಕೆ ಅದು ’ಬ್ರಾಹ್ಮಣ’ನೇ ಬರೆದಿದ್ದು ಎಂಬುದಾದರೆ ವ್ಯಾಸರು ಜಾತಿಯಿಂದ ಶೂದ್ರ ತಾಯಿಯಲ್ಲಿ ಜನಿಸಿದವರು. ಹಾಗಾದರೆ ಅವರು ಹಡೆದ ಮಾತೆಗೆ ದ್ರೋಹ ಬಗೆದರೇ? ಖಂಡಿತಕ್ಕೂ ಇಲ್ಲ. ಜಾತಿ ಪದ್ಧತಿಗೆ ಬ್ರಾಹ್ಮಣರೇ ಕಾರಣ ಎಂಬ ಅಪನಂಬಿಕೆ ಹುಟ್ಟಲಿಕ್ಕೆ ಇನ್ನೊಂದು ಕಾರಣ: ರಾಜರು ಬ್ರಾಹ್ಮಣರಿಗೆ ಕೊಡುತ್ತಿದ್ದ ರಾಜಾಶ್ರಯ ಮತ್ತು ಮರ್ಯಾದೆ. ರಾಜರುಗಳಿಗೆ ಬ್ರಾಹ್ಮಣ್ಯವೆಂಬುದರ ಮಹತ್ವ ಗೊತ್ತಿತ್ತು-ಹಾಗಾಗಿ ಅವರು ಅದಕ್ಕೆ ಮಹತ್ವ ಕೊಡುತ್ತಿದ್ದರು! ಇಂದು ಪ್ರಜೆಗಳೇ ತಲೆಯಿಲ್ಲದ ಪ್ರಭುಗಳು, ರಾಜಕೀಯ ಅತಂತ್ರ ಸ್ಥಿತಿಗಳು, ಮಿತಿಮೀರಿದ ಭ್ರಷ್ಟಾಚಾರ, ದೇಶವನ್ನೇ ಅಡವಿಡುವ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ರಾಜರಲ್ಲಿದ್ದ ಆಡಳಿತ ವೈಖರಿ ಪ್ರಜಾರಾಜರಲ್ಲಿಲ್ಲ! ಗೂಂಡಾಗಳೇ ಹಣಬಲ, ಜನಬಲ, ತೋಳ್ಬಲಗಳಿಂದ ಗೆದ್ದು ರಾಜಕೀಯ ಮಾಡುವಾಗ ಆಡಳಿತದ ಅನುಭವ ಅವರಿಗೆ ಹೇಗೆ ಬರಲು ಸಾಧ್ಯ? ಅಥವಾ ಪ್ರಜೆಗಳ ಸಂಕಷ್ಟವನ್ನು ಅರಿಯುವ ಮನಸ್ಸು ಅವರಿಗಾದರೂ ಹೇಗೆ ಬಂದೀತು? ಪ್ರಜಾತಂತ್ರದ ಸಮಸ್ಯೆಗಳನ್ನು ಇಂದು ನಾವು ಕಾಣತೊಡಗಿದ್ದೇವೆ; ಇದು ಮುಂದುವರಿಯುತ್ತದೆ-ಮುಂದೊಂದು ದಿನ ಘನಘೋರ ಯುದ್ಧ ಸಂಭವಿಸುತ್ತದೆ-ಅದರಲ್ಲಿ ಸಂಶಯವೇ ಇಲ್ಲ!

ಉತ್ತರಭಾರತದಲ್ಲಿ ಬ್ರಾಹ್ಮಣರಿಗೆ, ರಾಜರಿಗೆ ಇನ್ನೂ ಮಾನ್ಯತೆಯಿದೆ. ವಿನಾಕಾರಣ ಯಾರೂ ಅವರನ್ನು ದೂಷಿಸುವುದಿಲ್ಲ. ನಮ್ಮ ಕರ್ನಾಟಕದ ತುಂಬೆಲ್ಲ ರಾಜದ್ವೇಷಿಗಳು, ಬ್ರಾಹ್ಮಣ ದ್ವೇಷಿಗಳು  ಹುಟ್ಟಿಕೊಂಡಿದ್ದಾರೆ. ಬ್ರಾಹ್ಮಣರು ತಮ್ಮನ್ನು ತುಳಿದರು ಎಂಬ ತಪ್ಪು ಕಲ್ಪನೆಯಿಂದ ಪರಬ್ರಹ್ಮೋಪಾಸನೆಯನ್ನು ನಡೆಸುವ ಬ್ರಾಹ್ಮಣರನ್ನು ಬೈದು-ಜರಿದು-ಹೀಗಳೆದು ಪರೋಕ್ಷ ಬ್ರಹ್ಮನನ್ನೇ ದೂಷಿಸುತ್ತಿದ್ದಾರೆ. ಸಾಮಾನ್ಯ ರಾಜಸ್ತ್ರೀಯಾದ ಅಲಮೇಲಮ್ಮನ ಶಾಪವೇ ಇಷ್ಟೆಲ್ಲಾ ಕೆಲಸಮಾಡುತ್ತದೆ ಎಂದಾದಮೇಲೆ, ಆಚಾರವಂತ ಬ್ರಾಹ್ಮಣರ ಶಾಪ [ಬ್ರಾಹ್ಮಣರು ಶಾಪ ಹಾಕುತ್ತಿಲ್ಲ ಅದು ಬೇರೆ ಪ್ರಶ್ನೆ]ತಟ್ಟಿದರೆ ಏನಾಗಬಹುದೆಂದು ನೀವೇ ಊಹಿಸಿ!

ಒಂದೊಮ್ಮೆ ಬ್ರಾಹ್ಮಣರು ಎಂದುಕೊಂಡವರು ಏನನ್ನೂ ಹೇಳದೇ ಹೋಗಿದ್ದರೆ, ಕಲಿಸದೇ ಹೋಗಿದ್ದರೆ ಇಂದು ಮಾತನಾಡಲು ಬರುವ ಅದೆಷ್ಟೋ ಜನರಿಗೆ ಈ ಅರ್ಹತೆ ಕೂಡ ಇರುತ್ತಿರಲಿಲ್ಲ! ಇದು ಕೆಲವು ಓದುಗರ ಸ್ವಾಭಿಮಾನಕ್ಕೆ ವಿರೋಧವೆನಿಸಬಹುದು; ಆದರೆ ಸತ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ. ಪಂಕ್ತಿ ಭೇದವನ್ನು ಮಾಡುವ ಬ್ರಾಹ್ಮಣರು ಯಾಕೆ ಹಾಗೆ ಮಾಡಿದರು ಎನ್ನುವ ಚಿಂತನೆ ಯಾರಿಗೂ ಇಲ್ಲ, ಬೇಕಾಗಿಯೂ ಇಲ್ಲ. ’ಬ್ರಾಹ್ಮಣ್ಯ’ ಎಂಬುದೊಂದು ಹುಟ್ಟಿದಾರಭ್ಯ-ಅಜೀವ ಪರ್ಯಂತ ನಡೆಯುವ ವ್ರತ ಎಂಬುದನ್ನು ಬಹಳ ಜನ ಅರಿತಿಲ್ಲ. ರಾಜಾಶ್ರಯ ಕಳೆದುಕೊಂಡ ಬ್ರಾಹ್ಮಣರು, ಪ್ರಜಾಪ್ರಭುತ್ವದಲ್ಲಿ, ಉದರನಿಮಿತ್ತವಾಗಿ ಅನ್ಯವೃತ್ತಿಗಳತ್ತ ಮುಖಮಾಡಬೇಕಾಗಿ ಬಂತು. ಇದರಿಂದ ಎಲ್ಲರ ಸಂಪರ್ಕ-ಸಂಸರ್ಗ ಆರಂಭವಾಯ್ತು. ಇದರ ಪರಿಣಾಮವಾಗಿ ಬ್ರಾಹ್ಮಣ ಜಾತಿಯಲ್ಲಿ ಜನಿಸಿದ ಕೆಲವರನ್ನು ಬಾರ್ ಅಂಡ್ ರೆಸ್ಟಾರೆಂಟುಗಳಲ್ಲೂ ನೋಡುತ್ತಿದ್ದೀರಿ! ಇದೆಲ್ಲಾ ಆಗಬಾರದು, ಬ್ರಾಹ್ಮಣರ ಪೂಜೆ, ಪೂಜೆಗೆ ಬಳಸುವ ಪರಿಕರಗಳು, ದೇವಸ್ಥಾನ/ಪೂಜಾ ಕೇಂದ್ರಗಳು ಇವೆಲ್ಲಾ ಪರಿಶುದ್ಧವಾಗಿರಬೇಕೆಂಬ ಸದುದ್ದೇಶದಿಂದ ಅವರು ಪ್ರತ್ಯೇಕತೆಯಲ್ಲಿರುತ್ತಿದ್ದರು. ಅವರ ಸಂಖ್ಯೆಯೂ ಕೂಡ ತೀರಾ ಕಡಿಮೆ.

ಇಂದು ಸಂಸರ್ಗ, ಮೊಬೈಲ್ ಫೋನು, ಗಾಡಿ, ವ್ಯವಹಾರ ಇದೆಲ್ಲಾ ಹೆಚ್ಚಿದ್ದರಿಂದ ನಿಜವಾದ ಬ್ರಾಹ್ಮಣರಿಗಿಂತ ಜೋರಾಗಿ ಮೆರೆಯುವ ಅರ್ಚಕ-ವ್ಯಭಿಚಾರಿಗಳು ಅಲ್ಲಲ್ಲಿ ಕಾಣುತ್ತಾರೆ-ಇದು ಕಾಲದ ಮಹಿಮೆ. ಊಟಕ್ಕೆ-ಕೂಟಕ್ಕೆ-ಚಟಕ್ಕೆ ಇಂಥಾದ್ದಕ್ಕೆಲ್ಲಾ ಸಾವಿರದೋಪಾದಿಯಲ್ಲಿ ಹಣ ಸುರಿಯುವ ಮಂದಿ ಆರತಿ ತಟ್ಟೆಗೆ ಕಾಸು ಹಾಕುವ ಸುದ್ದಿ ಬಂದಾಗ ಮಾತ್ರ ಕಣ್ಣು ಕೆಂಪಗೆ ಮಾಡಿಕೊಳ್ಳುವುದು ಆಶ್ಚರ್ಯವಾಗುತ್ತದೆ. ಅದು ವೃತ್ತಿಗೊಂದು ಗೌರವ, ಪುಣ್ಯಕ್ಕೆ ಸಾಧನವೆಂದು ತಿಳಿದೂ, ದಾನವೆಂಬುದನ್ನು ಅರಿತೂ ಹಿಂದಿಗಡೆಯಿಂದ ಈ ರೀತಿ ಆಡಿಕೊಳ್ಳುತ್ತ ದೇವಸ್ಥಾನಗಳಿಗೆ ಹೋದಾಗ ಹತ್ತೋ ಇಪ್ಪತ್ತೋ ರೂಪಾಯಿ ಹಾಕಿದರೆ ಅದರ ಫಲ ಹಾಕಿದವರಿಗೆ ಲಭಿಸುವುದಿಲ್ಲ. ಹಾಕುವ ಮನಸ್ಸುಳ್ಳವರು ಹಾಕಬಹುದು-ಅದರಿಂದ ಪಡೆದವ ಹೇಗೇ ಇದ್ದರೂ ಕೊಟ್ಟವನಿಗೆ ಫಲ ಲಭ್ಯ. ಚಂದದ ಹುಡುಗಿಯನ್ನು ನೋಡುತ್ತ ಮನಸ್ಸು ಕೆಡಿಸಿಕೊಂಡರೆ ಅಂತಹ ಅರ್ಚಕನ ಕರ್ಮಕ್ಕೆ ತಕ್ಕ ಫಲವನ್ನು ಆತ ಅನುಭವಿಸುತ್ತಾನೆ. ನೀವು ಹೇಳಿದ್ದಷ್ಟೇ ಸತ್ಯವೆಂದು ವಾದಿಸುವ ಮೊದಲು ನಾನು ಹೇಳುವ ಮುಖವನ್ನೂ ತಿಳಿದುಕೊಂಡರೆ ನಾನು ಏನು ಹೇಳುತ್ತಿದ್ದೇನೆ ಎಂಬ ಅರಿವುಂಟಾಗುತ್ತದೆ.

ಇವತ್ತು ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಇವೆಲ್ಲಾ ಗೌರವದ ಹುದ್ದೆಗಳು. ಮಾನವರೆಲ್ಲರೂ ಒಂದೇ ಆದ್ದರಿಂದ ಅವರೂ ಎಲ್ಲರೊಂದಿಗೆ ಬೆರೆತುಬಿಡಲಿ ನೋಡೋಣ. ಅದು ಹಾಗಿರಲಿ, ಒಂದು ಸಣ್ಣ ತಾಲೂಕು ಮಟ್ಟದ ನ್ಯಾಯಾಧೀಶರು ಸಮಾಜದಲ್ಲಿ ಎಲ್ಲರೊಡನೆ ಬೆರೆಯುವುದಿಲ್ಲ; ಹಾಗೆ ಬೆರೆತರೆ ನ್ಯಾಯದಾನ ಸಾಧ್ಯವಿಲ್ಲ. ಇಂತಹ ಪ್ರತ್ಯೇಕತೆಗಳು ಯಾಕೆಂದರೆ ಉನ್ನತ ಮೌಲ್ಯಗಳನ್ನು ಆದರ್ಶಮಯವಾಗಿ ಎತ್ತಿ ಹಿಡಿಯುವುದಕ್ಕೆ. ವೇದ-ಶಾಸ್ತ್ರ-ಪುರಾಣ-ಮಹಾಕಾವ್ಯಗಳು ಅಷ್ಟು ಸುಲಭಕ್ಕೆ ಲಭ್ಯವಾಗುವ ಬದನೆಕಾಯಿಗಳಲ್ಲ! ಅವುಗಳನ್ನು ಅಭ್ಯಸಿಸಲು ಪೂರಕ ವಾತಾವರಣ ಬೇಕು, ಪೂರಕ ತಯಾರಿ ಬೇಕು, ಮನಸ್ಸು ನಿರುಮ್ಮಳವಾಗಿರಬೇಕು, ತ್ಯಾಗಜೀವನ ಬೇಕು, ಇದನ್ನೆಲ್ಲಾ ಹಿಂದಿನಿಂದ ನಡೆಸಿ ಬಂದವರು ಬ್ರಾಹ್ಮಣರು. ಬ್ರಹ್ಮಜ್ಞಾನವೇ ಅವರ ಪರಮೋಚ್ಚ ಆಸ್ತಿ. ಅವರ ಪ್ರವಚನ ಧಾರೆಗಳೇ ಉಳಿದ ಹಿಂದೂ ಜನರ ಕಲಿಕೆಗೆ ಆಧಾರವಾಗಿದ್ದು. ಇದನ್ನೆಲ್ಲಾ ಅರ್ಥಮಾಡಿಕೊಳ್ಳದೇ ಕೇವಲ ಒಂದೇ ನೇರಕ್ಕೆ ’ಮಾನವಕುಲ ತಾನೊಂದೆವಲಮ್’ ಎಂದುದನ್ನು ಅನುಮೋದಿಸಲು ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಬಿಡಲು ಸಿದ್ಧರಿಲ್ಲ, ನಿಜ, ಅದೊಂದು ಪಾರಂಪರಿಕ ವ್ರತ, ಅದನ್ನು ಪರಿಪೂರ್ಣವಾಗಿ ಬಿಟ್ಟರೆ, ಬಿಡುವವರ ಕುಲ ನಶಿಸಿ ಹೋದೀತು!
’ಬ್ರಾಹ್ಮಣ್ಯ’ ಎಂದರೇನು ಎಂದು ತಿಳಿಯಲಿ ಇಲ್ಲಿ ಓದಿ :   ಆ ಮುಖ

ಹಾಗಂತ ಎಲ್ಲರನ್ನೂ ನಾನು ದೂಷಿಸುವುದಿಲ್ಲ, ಹಳೇ ಮೈಸೂರು ಪ್ರಾಂತದ ಒಕ್ಕಲಿಗರ ಮನೆಗಳಲ್ಲಿ ಮಹಾರಾಜರ ಭಾವಚಿತ್ರಗಳು ಪೂಜೆಗೊಳುತ್ತವೆ. ಅವರಿಗೆ ರಾಜರು ಮತ್ತು ವಿಶ್ವೇಶ್ವರಯ್ಯನವರ ಭಾವಚಿತ್ರಗಳು ಮನೆಯಲ್ಲಿ ಇರಲೇಬೇಕು ಯಾಕೆಂದರೆ ಅವರು ಸಲ್ಲಿಸಿದ ಸಮಾಜ ಸೇವೆ ಬೆಲೆಕಟ್ಟಲಾಗದ್ದು. ಆದರೂ ರಾಜಕೀಯವಾಗಿ ರಾಜರನ್ನು ಸೋಲಿಸಲು ಮುಂದಾಗುವುದಕ್ಕೆ ಕಾರಣ ಅಲಮೇಲಮ್ಮನ ಶಾಪವೇ,  ಆ ಶಾಪದ ಪರಿಹಾರಕ್ಕಾಗಿ ಶ್ರೀಕಂಠದತ್ತರು ಬಹಳ ಪ್ರಯತ್ನ ಮಾಡಿದರು,  ಆದರೆ ಸಾಧ್ಯವಾಗಲಿಲ್ಲ! ವ್ಯಾವಹಾರಿಕ ಜಗತ್ತಿನಲ್ಲಿ ಏರಲೈನ್ಸ್, ರೇಷ್ಮೆ ಸೀರೆ ವ್ಯಾಪಾರ, ಪಂಚತಾರ ಹೋಟೆಲ್ ಮೊದಲಾದ ಉದ್ದಿಮೆಗಳನ್ನು ನಡೆಸಿದರು. ಎಲ್ಲಿಗೇ ಹೋದರು ವಿಧಿ ತನ್ನ ವಿರುದ್ಧ ನಡೆಯುವುದು ಅವರಿಗೆ ಅನುಭವಕ್ಕೆ ಬರುತ್ತಿತ್ತು! ಆದರೂ ಅವರ ಪ್ರಯತ್ನಕ್ಕೆ ಜಗನ್ನಿಯಾಮಕ ಶಕ್ತಿ ಅವರ ವೈಯ್ಯಕ್ತಿಕದಲ್ಲಿ ಅವರಿಗೊಂದು ದೊಡ್ಡ ಗೌರವ ಕಲ್ಪಿಸಿಕೊಟ್ಟಿದೆ; ಜನ್ಮಾಂತರಗಳಲ್ಲಿ ಮಹಾರಾಜರು ಬಹುದೊಡ್ಡ ಆಧ್ಯಾತ್ಮಿಕ ಎತ್ತರವನ್ನು ಏರಲಿದ್ದಾರೆ-ಅವರೊಬ್ಬ ಸಂನ್ಯಾಸಿಯಾಗಿ ಮರುಜನ್ಮ ತಾಳುವ ಲಕ್ಷಣಗಳು ನನಗೆ ಭಾಸವಾಗುತ್ತಿದೆ. ಯಾಕೆಂದರೆ ೮೦ನೇ ಇಸವಿಯಿಂದ ಆಧ್ಯಾತ್ಮಿಕವಾಗಿ ಅವರು ಬಹಳ ಮುನ್ನಡೆದಿದ್ದರು.

ಸಂವತ್ಸರವೊಂದರಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ವಸಂತ ನವರಾತ್ರಿ, ಗುಪ್ತನವರಾತ್ರಿ,  ಶರನ್ನವರಾತ್ರಿ, ಪೌಷ ನವರಾತ್ರಿ ಮತ್ತು ಮಾಘ ನವರಾತ್ರಿ. ಅವರು ವೈಭವೋಪೇತವಾಗಿ ಶಾಸ್ತ್ರೀಯವಾಗಿ ಆಚರಿಸುತ್ತಿದ್ದ ಶರನ್ನವರಾತ್ರಿಯನ್ನು ಮಾತ್ರ ನಾವೆಲ್ಲ ಮಾಧ್ಯಮಗಳ ಮೂಲಕ ಅಷ್ಟಿಷ್ಟು ಕಂಡಿದ್ದೇವೆ, ಆದರೆ ಅವರು ಆಚರಿಸುತ್ತಿದ್ದ ಇನ್ನುಳಿದ ಎರಡು ನವರಾತ್ರಿಗಳ ದೃಶ್ಯಗಳು ನಮಗೆ ಲಭ್ಯವಿಲ್ಲ. ದೇವರ ಪೂಜೆ ಅರಸರಲ್ಲಿ ಬಹಳ ರಕ್ತಗತವಾಗಿತ್ತು. ಇಷ್ಟೆಲ್ಲ ಇದ್ದೂ ಸಹ, ಅವರು ಮಾಡುವ ಕೆಲಸಗಳಲ್ಲಿ ಅವರಿಗೆ ಆಗಾಗ ಅಡ್ಡಿಯಾಗುತ್ತಿದ್ದುದು ಅಲಮೇಲಮ್ಮನ ಶಾಪ! ಇದು ವಿಷಾದದ ಸಂಗತಿ.      

Thursday, December 5, 2013

ಪ್ರಿಯೆ ಚಾರುಶೀಲೆ.....

 ಚಿತ್ರಋಣ: ಅಂತರ್ಜಾಲ

ಪ್ರಿಯೆ ಚಾರುಶೀಲೆ.....

ಆತ ಉತ್ತರದ ಬಂಗಾಲದ ಕಡೆಯ ಬ್ರಾಹ್ಮಣ ಹುಡುಗನಾಗಿದ್ದು ಸಂಚರಿಸುತ್ತಾ ಜಗನ್ನಾಥ ಪುರಿಗೆ ಬಂದಿದ್ದ ಮತ್ತು ಅಲ್ಲಿದ್ದ ಪದ್ಮಾವತಿ ಎಂಬ ನರ್ತಕಿಯನ್ನು ಬಹಳವಾಗಿ ಮೆಚ್ಚಿ, ಹಲವರ ವಿರೋಧದ ನಡೆವೆಯೂ ಆಕೆಯನ್ನು ಮದುವೆಯಾದ ಎಂಬುದು ಕೆಲವರ ಅಂಬೋಣ. ವಿದ್ವಾಂಸರು, ಬುಧಜನರು ಇದನ್ನು ಒಪ್ಪಿಲ್ಲ! ಆತನ ಬರಹಗಳಲ್ಲಿ ಅಲ್ಲಲ್ಲಿ ಪ್ರಸ್ತಾವವಾದ ಕೆಂದುಲಿಯೆಂಬ ಹೆಸರನ್ನೇ ಹಿಡಿದು ಬಂಗಾಲದಲ್ಲಿ ಅಂಥಾದ್ದೊಂದು ಊರಿರುವುದರಿಂದ ಆತ ಅಲ್ಲಿನವನೇ ಎಂದು ಕೆಲವರು ಹೇಳಿದರೆ, ಓಡಿಶಾದಲ್ಲಿಯೂ ಒಂದು ಕೆಂದುಲಿ ಇರುವುದರಿಂದ ಆತ ಓಡಿಶಾದವನೆಂದು ಒಂದಷ್ಟು ಜನ ಹೇಳುತ್ತಾರೆ. ಮಿಥಿಲಾದಲ್ಲಿರುವ ಕೆಂದುಲಿಯೆಂದು ಇನ್ನಷ್ಟು ಜನ ವಾದಿಸುತ್ತಾರೆ. ಆದರೆ ಜಯದೇವನ ಮೂಲವನ್ನು ಪಕ್ಕಾ ಇದೇ ಎಂದು ಬಲ್ಲವರಿಲ್ಲ! ಆತನ ತಂದೆ ಭಜದೇವಿ ಮತ್ತು ತಾಯಿ ರಮಾದೇವಿ ಎಂದು ಅವರಿವರು ಹೇಳುವುದಿದೆ. 

ಹಾಡನ್ನು ಎರಡೆರಡು ಸರ್ತಿ ಕೇಳಿದಾಗ ಮಾತ್ರ ಅದರಲ್ಲಿನ ಸ್ವರಮಾಧುರ್ಯ ಮತ್ತು ಕವಿಯ ಭಾವ ತನ್ಮಯತೆ ಗೊತ್ತಾಗುತ್ತದೆ. ಓಡಿಶಾದ ಕೋನಾರ್ಕ್ ಹತ್ತಿರದ ಕೂರ್ಮಪಾಠಕ ಎಂಬ ಪ್ರದೇಶದಲ್ಲಿ ಆತ ಸಂಸ್ಕೃತ ಕಾವ್ಯಭಾಗವನ್ನು ಅಭ್ಯಸಿಸಿದ ಎಂಬುದು ಕೆಲವು ದೇವಸ್ಥಾನಗಳಲ್ಲಿ ದೊರಕುವ ದಾಖಲೆಗಳ ಮೂಲಕ ತುಸುಮಟ್ಟಿಗೆ ತಿಳಿದುಬರುತ್ತದೆ; ಈ ಕಾರಣದಿಂದ ಆತ ಓಡಿಶಾದವನೇ ಎಂಬ ಸಂದೇಹ ದಟ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಾ| ಸತ್ಯನಾರಾಯಣ ರಾಜಗುರು ಎಂಬ ಇತಿಹಾಸ ಸಂಶೋಧಕರ ಸಂಶೋಧನೆಗಳ ಫಲವಾಗಿ, ಲಿಂಗರಾಜ ದೇವಸ್ಥಾನ, ಮಧುಕೇಶ್ವರ ದೇವಸ್ಥಾನ ಮತ್ತು ಸಿಂಹಾಚಲ ದೇವಸ್ಥಾನಗಳಲ್ಲಿನ ಕೆಲವು ಶಾಸನಗಳನ್ನು ವಿಶ್ಲೇಷಿಸಿದಾಗ, ಅವು ಜಯದೇವ ಕವಿಯ ಜೀವನದ ಮೇಲೆ ಬೆಳಕುಚೆಲ್ಲಿವೆ ಎನ್ನಲಾಗಿದೆ. ಕೂರ್ಮಪಾಠಕದ ವಿದ್ಯಾಕೇಂದ್ರದಲ್ಲಿ ಉಪಾಧ್ಯಾಯರ ಸಾಲಿಬಲ್ಲಿ ಜಯದೇವನಿದ್ದ ಎಂಬುದನ್ನು ಆ ಶಾಸನಗಳು ಹೇಳುತ್ತವಂತೆ. ಅವನು ಅಲ್ಲಿಯೇ ಕಲಿತು ಅಲ್ಲಿಯೇ ಮುಂದೆ ಉಪಾಧ್ಯಾಯನಾಗಿ ಬದುಕಿದ ಎಂಬುದು ಅವರ ಹೇಳಿಕೆ. ಎಳವೆಯಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಕಾವ್ಯ ರಚನೆ-ಸಂಗೀತ ಮತ್ತು ನರ್ತನ ಕಲೆಗಳ ಅಭ್ಯಾಸಕ್ಕಾಗಿ ಆತ ಕೆಂದುಲಿಯನ್ನು ತೊರೆದು ಕೂರ್ಮಪಾಠಕಕ್ಕೆ ಹೋದ ಎಂದು ತಿಳಿದುಬರುತ್ತದೆ.

ಮಹಾರಾಣಾ ಪ್ರಥ್ವೀರಾಜ ಚೌಹಾಣನ ಆಸ್ಥಾನದಲ್ಲಿ ಜಯದೇವನಿದ್ದ ಎಂಬುದು ಇನ್ನೊಂದು ದಾಖಲೆ; ಓಡಿಶಾದ ಹೊರಗಿನ ರಾಜ್ಯಗಳಲ್ಲಿ ಜಯದೇವನ ಬಗೆಗೆ ದೊರೆಯುವ ಪ್ರಥಮ ಮಾಹಿತಿ ಇದೇ ಆಗಿದೆ. ಹನ್ನೆರಡನೆಯ ಶತಮಾನದಲ್ಲಿ ರಾಜ್ಯಭಾರ ನಡೆಸುತ್ತಿದ್ದ ರಾಜಾ ಸಾರಂಗದೇವನ ಆಸ್ಥಾನದಲ್ಲಿ, ಜಯದೇವ ಕವಿಯ ಬಗ್ಗೆ ಇನ್ನೊಂದು ದಾಖಲೆ ಸಿಗುತ್ತದೆ. ೧೨ನೆಯ ಶತಮಾನದ ಕವಿ ಜಯದೇವನ ರಚನೆಯಾಗಿದೆ. ಒರಿಸ್ಸಾ ರಾಜ್ಯದ ಪುರಿ ಬಳಿಯ ಕೆಂದುಲಿ ಸಾಸನ್ ಎಂಬಲ್ಲಿ ಜನಿಸಿದನು ಎಂತಲೇ ನಾವು ಸ್ವೀಕರಿಸೋಣ. ಕವಿಯ ’ಗೀತಗೋವಿಂದ’, ವೃಂದಾವನದ ಕೃಷ್ಣ ಮತ್ತು ಗೋಪಿಕೆಯರು, ರಾಧೆ ಇವರ ನಡುವಿನ ಸಂಬಂಧವನ್ನು ವರ್ಣಿಸುತ್ತದೆ.  ಭಕ್ತಿ ಪಂಥದ ಬೆಳೆವಣಿಗೆಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ ಕಾವ್ಯಕೃತಿ ಇದಾಗಿದೆ.

ಹನ್ನೆರಡು ಅಧ್ಯಾಯವಾಗಿ ವಿಭಾಗಿಸಲ್ಪಟ್ಟ ಗೀತಗೋವಿಂದದ  ಪ್ರತೀ ಅಧ್ಯಾಯವೂ ಪ್ರಬಂಧವೆಂಬ ೨೪ ಭಾಗವಾಗಿ ವಿಭಾಗಿಸಲ್ಪಟ್ಟಿದೆ. ಪ್ರಬಂಧಗಳು ಅಷ್ಟಪದಿಗಳೆಂಬ ಎಂಟು ದ್ವಿಪದಿಗಳನ್ನು ಒಳಗೊಂಡಿವೆ.  ರಾಧೆ ಕೃಷ್ಣನಿಗಿಂತ ಶ್ರೇಷ್ಠಳು ಎಂದು ಈ ಗ್ರಂಥ ಹೇಳುವುದರ ಜೊತೆಗೆ ನಾಯಿಕೆ ರಾಧೆಯ ಎಂಟು ಲಹರಿಗಳನ್ನು ವಿವರಿಸುತ್ತದೆ. ಈ ವಿವರಣೆಗಳು ನಿರಂತರವಾಗಿ ಭಾರತೀಯ ನೃತ್ಯ ಪ್ರಕಾರಗಳ ಮೇಲೆ ತನ್ನ ಪ್ರಭಾವವನ್ನು ಬೀರಿವೆ, ಬೀರುತ್ತಿವೆ, ಬೀರುತ್ತಲೇ ಇರುತ್ತವೆ. ಜಯದೇವನ ’ಗೀತ ಗೋವಿಂದ’ವೆಂಬ ಕೃತಿ ಅದನ್ನು ಬರೆದ ಕೆಲವೇ ವರ್ಷಗಳಲ್ಲಿ ಭಾರತದಾದ್ಯಂತ ಬಹಳ ಜನಪ್ರಿಯವಾಯ್ತು ಎಂಬುದು ಗೊತ್ತಾಗುತ್ತದೆ. ಅಂದಿನ ಕಾಲದಲ್ಲಿ ಮುದ್ರಣ ಸಲಕರಣೆಗಳು ಇಂದಿನಂತಿರಲಿಲ್ಲ. ಮುದ್ರಣವೆಂದರೆ ಕಂಠಪತ್ರಗಳೆಂದು ಕರೆಯಲ್ಪಡುವ ತಾಳೆಗರಿಗಳಲ್ಲಿ ಅಕ್ಷರಗಳನ್ನು ಕೊರೆಯುವುದೇ ಆಗಿತ್ತು. ತಾಡವೋಲೆ ಅಥವಾ ತಾಳೆಗರಿಗಳು ಬಹಳ ಬಾಳಿಕೆ ಬರುತ್ತಿದ್ದುದರಿಂದ ಅವುಗಳನ್ನೇ ಬರಹಗಳನ್ನು ಕಾಪಿಡಲಿಕ್ಕಾಗಿ ಬಳಸಲಾಗುತ್ತಿತ್ತು. ಚಪ್ಪನ್ನೈವತ್ತಾರು ರಾಜ್ಯಗಳುಳ್ಳ ಆ ಕಾಲದಲ್ಲಿ ಸಾವಿರಾರು ಪ್ರತಿಗಳು ಹಂಚಲ್ಪಟ್ಟಿದ್ದರೆ ಜಯದೇವನ ಮೂಲ ಕಾವ್ಯವನ್ನು ಹಲವರು ಕುಳಿತು ಪ್ರತಿ ತೆಗೆಯಬೇಕಾಗುತ್ತಿತ್ತು ಎಂಬುದು ತಿಳಿಯುತ್ತದೆ.

ಸಂಸ್ಕೃತವೊಂದು ಸಮೃದ್ಧ ಭಾಷೆಯಾದ್ದರಿಂದ ಅದರಲ್ಲಿ ಸುಲಲಿತವಾಗಿ ಜೋಡಿಸಿದ ಪದಪುಂಜಗಳು ಸಹಜವಾಗಿಯೇ ಎಲ್ಲರಿಗೂ ಹಿಡಿಸುತ್ತವೆ; ಅದರಲ್ಲಂತೂ ಭಾವನೆಗಳನ್ನು ಕಟ್ಟಿಹಾಕಿದ ಪದಪುಂಜಗಳ ಕೃತಿ ಹೊರಬಂದರೆ ಅದನ್ನು ಯಾರು ತಾನೇ ಅಲ್ಲಗಳೆದಾರು?  ಜಯದೇವ ಕವಿ ಎಲ್ಲಿದ್ದ ಏನು ಮಾಡಿದ ಎಂಬುದಕ್ಕಿಂತ, ಆತ ಕವಿಸಮಯವನ್ನು ಉಪಯೋಗಿಸಿಕೊಂಡ ರೀತಿ, ತನ್ನಲ್ಲೇ ಕೃಷ್ಣನನ್ನು ಕಂಡುಕೊಂಡು ರಾಧೆಗಾಗಿ ಕೃಷ್ಣ ಹಂಬಲಿಸುವ ರೀತಿ, ರಾಧಾ-ಕೃಷ್ಣರ ವಿನೋದ-ವಿಹಾರ-ವಿರಹಗಳ ಸುತ್ತ ನಲಿಯುವ ಆತನ ಕಥಾನಕ ’ಗೀತ ಗೋವಿಂದ’, ಗೋವಿಂದನಿಗೆ ಆತ ಶ್ರದ್ಧಾಭಕ್ತಿ ಪುರಸ್ಸರವಾಗಿ ಬರೆದು ಸಮರ್ಪಿಸಿದ ಕಾವ್ಯ ಗುಚ್ಛ. ಕೆಂದುಲಿ ಸಾಸನ ತನ್ನ ಊರೆಂದು ಗೀತಗೋವಿಂದದಲ್ಲಿ ಆತ ಹೇಳಿಕೊಂಡಿದ್ದಾನೆ. ಜಗನ್ನಾಥ ಪುರಿ ದೇವಸ್ಥಾನದಲ್ಲಿ ’ಗೀತ ಗೋವಿಂದ’ ನೃತ್ಯ ರೂಪಕವಾಗಿ, ಸಂಗೀತವಾಗಿ ದೇವರಿಗೆ ಅರ್ಪಿತವಾಗುತ್ತಲೇ ಇದ್ದಿದ್ದರಿಂದಲೂ ಅದರ ಜನಪ್ರಿಯತೆ  ಹೆಚ್ಚಿತು ಎನ್ನುವವರೂ ಇದ್ದಾರೆ.

ವೈಷ್ಣವ ಪಂಥದ ಮಾಧವ ಪಟ್ನಾಯ್ಕ್ ಎಂಬ ಓರಿಯಾ ಕವಿಯ ಗ್ರಂಥವೊಂದರಲ್ಲಿಯೂ ಸಹ ಜಯದೇವನ ಹೆಸರು ಉಲ್ಲೇಖಿತವಾಗಿದೆ. ಈ ಮಾಧವ ಪಟ್ನಾಯ್ಕ್ ಎಂಬವರು ಚೈತನ್ಯ ಮಹಾಪ್ರಭುವಿನ ಸಮಕಾಲೀನರಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಚೈತನ್ಯರು ಪುರಿಯ ಜಗನ್ನಾಥ ಕ್ಷೇತ್ರಕ್ಕೆ ಭೇಟಿಕೊಟ್ಟ ಬಗೆಗೆ ಮಾಧವ ಪಟ್ನಾಯ್ಕ್ ಬರೆದಿದ್ದಾರೆ. ಪುರಿ ಕ್ಷೇತ್ರಕ್ಕೆ ಹೋದ ಚೈತನ್ಯರು, ಕವಿ ಜಯದೇವನಿಗೆ ಗೌರವಾರ್ಪಣೆ ಮಾಡಲು, ಅಲ್ಲಿಗೆ ಹತ್ತಿರವೇ ಇರುವ ಆತನ ಹುಟ್ಟೂರಾದ ಕೆಂದುಲಿ ಸಾಸನ್ ಎಂಬ ಪ್ರದೇಶಕ್ಕೆ ಹೋಗಿಬಂದರು ಎಂತಲೂ ಅವರು ದಾಖಲಿಸಿದ್ದಾರೆ. ಬಾಲ್ಯದಲ್ಲಿಯೇ ಜಯದೇವ ಕವಿ ಹೇಗೆ ಶಾಸ್ತ್ರ, ಪುರಾಣ ಎಲ್ಲದರಲ್ಲೂ ಪಾರಂಗತನಾಗಿದ್ದ ಎಂಬುದನ್ನು ತಿಳಿಸುವ ಮಾಧವ ಪಟ್ನಾಯ್ಕ್, ಕವಿಯ ಜೀವನದಮೇಲೆ ಪ್ರಭಾವ ಬೀರಿದ ಹಲವು ದಂತಕಥೆಗಳ ಬಗೆಗೂ ಆ ಗ್ರಂಥ ತಿಳಿಸಿಕೊಡುತ್ತದೆ.

ಮಹಾವಿಷ್ಣುವಿನ ದಶಾವತಾರವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವುದರಲ್ಲಿ ಕವಿ ಜಯದೇವ ಖ್ಯಾತನಾಗಿದ್ದನಂತೆ! ’ದಶಕೃತಿಕೃತೆ’ ಎಂಬ ಆತನ ಕೃತಿಯಲ್ಲಿ ಇದನ್ನು ಕಾಣಬಹುದು ಎಂಬುದು ವಿದ್ವಜ್ಜನರ ಹೇಳಿಕೆ. ಕೃಷ್ಣ ಮೂರು ಭಂಗಿಯಲ್ಲಿ ನಿಂತು ಹೇಗೆ ಮೋಹಕ ಮುರಳೀಗಾನವನ್ನು ಹೊಮ್ಮಿಸುತ್ತಿದ್ದ ಎಂಬುದನ್ನು ತನ್ನ ’ತ್ರಿಭಂಗಿ’ ಎಂಬ ಕೃತಿಯಲ್ಲಿ ಜಯದೇವ ಹೇಳಿದ್ದಾನೆ. ಜಯದೇವನೇ ರಚಿಸಿದನೆನ್ನಲಾದ ಎರಡು ಸ್ತೋತ್ರಗಳು ಸಿಖ್ಖರ ’ಗುರುಗ್ರಂಥ ಸಾಹಿಬ್’ನಲ್ಲಿ ಬಳಸಲ್ಪಟ್ಟಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಆ ಸ್ತೋತ್ರಗಳು ಭಾಗಶಃ ಸಂಸ್ಕೃತ ಮತ್ತು ಭಾಗಶಃ ಸಂಸ್ಕೃತದ ಅಲ್ಲಿನ ಸ್ಥಳೀಯ ಅಪಭ್ರಂಶಗಳು ಸೇರಿ ರೂಪಿತವಾಗಿವೆ ಎನ್ನುತ್ತಾರೆ. ಗುರುನಾನಕ್ರು ಜಗನ್ನಾಥ ಪುರಿಗೆ ಭೇಟಿ ಕೊಟ್ಟ ಸಮಯದಲ್ಲಿ, ಜಯದೇವನ ಕೃತಿಗಳು ಅವರಮೇಲೆ ಅಪಾರ ಪರಿಣಾಮವನ್ನು ಬೀರಿದವು ಎಂದು ಹೇಳುತ್ತಾರೆ.

ಓರಿಯಾ ದೇವಸ್ಥಾನಗಳಲ್ಲಿ ಅಸಂಘಟಿತ ದೇವದಾಸಿಯರನ್ನೆಲ್ಲ ಸೇರಿಸಿ, ಅವರಿಗೊಂದು ಸಾಂಘಿಕ ರೂಪವನ್ನು ಕೊಡುವಲ್ಲಿ ಜಯದೇವ ಕಾರಣನಾದ ಎಂದೂ ತಿಳಿದುಬರುತ್ತದೆ. ಓರಿಯಾ ಕವಿಗಳ ಕಾವ್ಯಗಳು ಹೆಚ್ಚಿದಂತೆ, ಓರಿಯಾ ದೇವಸ್ಥಾನಗಳಲ್ಲಿ ಅವುಗಳನ್ನು ಬಳಸಿಕೊಳ್ಳಲಾಗುತ್ತಿತ್ತಂತೆ. ದೇವರ ಸೇವೆಗಾಗಿಯೇ ತಮ್ಮನ್ನು ಮೀಸಲಾಗಿರಿಸಿ, ದೇವಸ್ಥಾನಗಳಲ್ಲಿ ಕವಿಗಳ ಕಾವ್ಯಾಲಾಪಕ್ಕೆ ನರ್ತಿಸುವ ಹೆಂಗಳೆಯರೇ ದೇವದಾಸಿಯರು. ಆ ಕಾಲದಲ್ಲಿ, ಅಂತಹ ದೇವದಾಸಿಯರು ನಡೆಸುವ ನರ್ತನ ಸೇವೆಗೆಂದೇ ನರ್ತನ ಮಂಟಪಗಳು ರೂಪುಗೊಳ್ಳುತ್ತಿದ್ದವು. ಸ್ವತಃ ಜಯದೇವನೂ ಒಬ್ಬ ಕವಿಯಾದ್ದರಿಂದ, ಆತನ ಕೃತಿಗಳೂ ನರ್ತನಕ್ಕೆ ಅಳವಡಿಸಲ್ಪಟ್ಟಿದ್ದರಿಂದ, ನರ್ತಕಿಯರೆನಿಸಿಕೊಂಡ ದೇವದಾಸಿಯರಿಗೊಂದು ಮರ್ಯಾದಿತ ಬದುಕನ್ನು ಒದಗಿಸಿಕೊಡುವ ಕಲ್ಪನೆ ಆ ಕಾಲದಲ್ಲೇ ಕವಿಯಲ್ಲಿ ಜಾಗೃತವಾಗಿತ್ತು ಎಂಬುದು ಆಶ್ಚರ್ಯವುಂಟುಮಾಡುತ್ತದೆ.

’ಗೀತ ಗೋವಿಂದದ’ದ ಇಂಗ್ಲಿಷ್ ಅವತರಣಿಕೆ ಪ್ರಧಮವಾಗಿ ಸರ್ ವಿಲಿಯಂ ಜೋನ್ಸ್ ಎಂಬವರಿಂದ ೧೭೯೨ರಲ್ಲಿ ನಡೆಯಿತು. ಓಡಿಶಾ ಅಥವಾ ಓರಿಸ್ಸಾಕ್ಕೆ ಅಂದು ಇದ್ದ ಹೆಸರು ಕಳಿಂಗ; ಆ ಕಳಿಂಗವೇ ಗೀತ ಗೋವಿಂದದ ತವರು ಎಂದು  ಈ ಹೊತ್ತಗೆಯ ಕರ್ತೃ ನಮೂದಿಸಿದ್ದಾರೆ. ನಂತರದ ದಿನಗಳಲ್ಲಿ, ಗೀತ ಗೋವಿಂದವು ಜಗದಾದ್ಯಂತ ಹಲವಾರು ಭಾಷೆಗಳಿಗೆ ಅನುವಾದಗೊಂಡಿತು. ಸಂಸ್ಕೃತ ಕಾವ್ಯ ಪ್ರಾಕಾರಕ್ಕೆ ಒಂದು ಅತ್ತ್ಯುತ್ತಮ ಉದಾಹರಣೆ ಇದೆಂದು ಪರಿಗಣಿಸಲ್ಪಟ್ಟಿದೆ. ಬಾರ್ಬರಾ ಸ್ಟಾಲರ್ ಮಿಲ್ಲರ್ ಎಂಬಾತ ’ಲವ್ ಸಾಂಗ್ ಆಫ್ ದಿ ಡಾರ್ಕ್ ಲಾರ್ಡ್ : ಜಯದೇವಾಸ್ ಗೀತ ಗೋವಿಂದ’["ಕಪ್ಪು ದೇವರ ಪ್ರೇಮ ಕಾವ್ಯ: ಜಯದೇವರ ಗೀತ ಗೋವಿಂದ"]"ಎಂಬ ಹೆಸರಿನಲ್ಲಿ ಇದನ್ನು ೧೯೭೭ರಲ್ಲಿ ಅನುವಾದಿಸಿದ್ದಾನೆ. ಈ ಪುಸ್ತಕವು ಜಾನ್ ಸ್ಟ್ರಾಟನ್ ಹಾವ್ಲೆಯ್ ಎಂಬವರ ಮುನ್ನುಡಿ ಮತ್ತು ವಿಸ್ತೃತವಾದ ವಿವರಣೆ ಯನ್ನು ಹೊಂದಿದೆ.

ತನ್ನ ಕಾವ್ಯಲೋಕದ ಮೂಲಕ ಸ್ವದೇಶೀಯರನ್ನೂ ಅಲ್ಲದೇ ವಿದೇಶೀಯರನ್ನೂ ಬರಸೆಳೆದ ಜಯದೇವ ಕವಿಯ     ಹುಟ್ಟೂರಿನ ಬಗೆಗೆ ಗೊಂದಲಗಳೇನೇ ಇದ್ದರೂ ಆತ ಕೊಟ್ಟಿರುವ ಕೃತಿಗಳು ಸಂಸ್ಕೃತ ಕಾವಲೋಕದ ರತ್ನಗಳಾಗಿವೆ. ಜಗನ್ನಾಥನಿಗೆ ತನ್ನನ್ನು ಸಮರ್ಪಿಸಿಕೊಂಡ ಕವಿಯ ಕಾವ ರಸದೌತಣ ಬಹಳ ಮನೋಜ್ಞವಾಗಿದೆ. ವಿನಮ್ರನಾಗಿ ಕವಿಗೆ ಸಾಷ್ಟಾಂಗವೆರಗುತ್ತ, ಆತನ ಕಾವ್ಯಗಳಿಗೆ ಜೀವತುಂಬಿದ ಕಲಾವಿದರಿಗೆ ನಮಿಸುತ್ತ, ಗೀತಗೋವಿಂದದ ಒಂದೆರಡು ಹಾಡುಗಳು ನಿಮಗಾಗಿ ಇದೋ ಈ ಕೆಳಗೆ ನೀಡಲ್ಪಟ್ಟಿವೆ, ನಮಸ್ಕಾರ :  






Wednesday, November 13, 2013

ತುಳಸಿಯ ಮಹತ್ವ

ಚಿತ್ರಋಣ: ಅಂತರ್ಜಾಲ 
ತುಳಸಿಯ ಮಹತ್ವ

ಸನಾತನ ಜೀವನ ವಿಧಾನ-ಸಂವಿಧಾನದಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಮಹತ್ವವಿದೆ-ಕಾರಣಗಳಿವೆ. ಹಬ್ಬಗಳು ಹೇಗೆಂದರೆ ಹಾಗೆ ಜೋಡಣೆಯಾಗಿಲ್ಲ; ಆಯಾಯ ಋತುಮಾನಗಳನ್ನವಲಂಬಿಸಿ, ಯಾವ ಶ್ರಾಯದಲ್ಲಿ ಯಾವ ರೀತಿಯ ಆಚರಣೆಯಿಂದ ಮಾನವರಿಗೆ ವೈಜ್ಞಾನಿಕವಾಗಿ ಅನುಕೂಲವಾಗುವುದು ಎಂಬುದನ್ನು ನಮ್ಮ ಪೂರ್ವಜರು ಅರಿತು ಕೊಂಡಿದ್ದರು. ಸಂಕ್ರಾಂತ್ರಿಯ ವೇಳೆಯಲ್ಲಿ ಎಳ್ಳು-ಬೆಲ್ಲವೆಂದರೇಕೆಂದರೆ ಶರೀರದಲ್ಲಿ ಎಣ್ಣೆಯ ಕೊರತೆ ಕಂಡು ಬರುವ ಸಮಯ ಅದಾಗಿರುತ್ತದೆ; ಎಳ್ಳಿನ ಸೇವನೆಯಿಂದ ಶರೀರಕ್ಕೆ ಬೇಕಾದ ಪರಿಶುದ್ಧ ತೈಲ ತಕ್ಕಮಟ್ಟಿಗೆ ಲಭಿಸುತ್ತದೆ. ರಾಮನವಮಿಯಂದು ಸೌತೇಕಾಯಿ ಕೋಸಂಬರಿ, ಪಾನಕ ಬಳಸುವುದು ಬಿಸಿಲ ಬೇಗೆಯಿಂದ ಬಳಲುವ ದೇಹವನ್ನು ತಂಪಾಗಿಸಲಿಕ್ಕೆ. ದೀಪಾವಳಿಯಲ್ಲಿ ದೀಪಗಳನ್ನು ಹಚ್ಚುವುದು- ಆ ಸಮಯದಲ್ಲಿ ಬೇಗನೆ ಕತ್ತಲು ಆವರಿಸುವುದರಿಂದ ಕತ್ತಲನ್ನು ಕಳೆಯಲು ಬೆಳಕಿನ ಹಬ್ಬ ಸಹಕಾರಿಯಾಗಿದೆ. ಅದೇ ರೀತಿ ಚಳಿಯ ಒಣಹವೆಗೆ ಒಡೆಯುವ ಚರ್ಮಕ್ಕೆ ಅಭ್ಯಂಜನವನ್ನು ಹೇಳಲಾಗಿದೆ. ಹೀಗೆಯೇ, ಪ್ರತಿಯೊಂದು ಹಬ್ಬಕ್ಕೂ ಕಾರಣಗಳಿವೆ; ಹೊರನೋಟಕ್ಕೆ ಅವು ಕಾಣದಂತಿವೆ! ಇಂತಹ ಹಬ್ಬಗಳ ಸಾಲಿನಲ್ಲಿ ಕಾರ್ತಿಕ ಶುದ್ಧ[ಶುಕ್ಲ] ದ್ವಾದಶಿಯಂದು ಆಚರಿಸಲ್ಪಡುವ ತುಲಸೀ ವಿವಾಹವೂ ಒಂದು.

ಕಾರ್ತಿಕ ಶುದ್ಧ ದ್ವಾದಶಿಯನ್ನು ಉತ್ಥಾನ ದ್ವಾದಶೀ ಎಂತಲೂ ಹೇಳುತ್ತೇವೆ. ಕೃಷ್ಣನಿಗೆ, ವಿಷ್ಣುವಿಗೆ ರೇವತಿ ನಕ್ಷತ್ರ ಪ್ರಿಯವಾಗಿರುವುದರಿಂದ ಅಂದಿನ ದಿನ ರೇವತಿ ನಕ್ಷತ್ರವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಅನಿಸಿಕೆ ಸನಾತನರದ್ದು. ಪರಮಾತ್ಮ ಮಹಾವಿಷ್ಣು ಪಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ,ವೈಷ್ಣವ ಮತ್ತು ಶ್ರೀವೈಷ್ಣವ ಸಂಪ್ರದಾಯಸ್ಥರು ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ ಕರೆಯುತ್ತಾರೆ. ಇಲ್ಲೊಂದು ಚಿಕ್ಕ ವ್ರತ: ಕಾರ್ತಿಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ, ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ಶುಚಿರ್ಭೂತರಾಗಿ,  ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಆ ದಿನ ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ಬಹಳ ಪ್ರಾಶಸ್ತ್ಯ. ವ್ರತದ ರಾತ್ರಿಯಂದೇ ಮಹಾವಿಷ್ಣುವನ್ನು ಎಬ್ಬಿಸುವ ಕೈಂಕರ್ಯ ನಡೆಯುತ್ತದೆ. ವೈಷ್ಣವ ಪಂಥದಲ್ಲಿ ಗೃಹಸ್ಥರು ಕೆಲವರು ಆಚರಿಸುವ ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯಾದ ಈ ರಾತ್ರಿ, ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ನಂತರ ಅದನ್ನು ಪೂಜಿಸಿ, ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ತುಳಸಿಯ ಹುಟ್ಟಿಗೆ ಎರಡು ಕಥೆಗಳಿವೆ: ಒಂದು ಕಥೆ ಇನ್ನೊಂದಕ್ಕೆ ಪೂರಕವಾಗಿದೆ.

ಹಿಂದಕ್ಕೆ ಜಲಂಧರನೆಂಬ ರಕ್ಕಸನಿದ್ದನಂತೆ. ಆತನ ಅತಿರೂಪವತಿಯಾದ ಹೆಂಡತಿ ವೃಂದಾ. ರಕ್ಕಸರು ಮತ್ತು ದೇವತೆಗಳ ನಡುವೆ ಜಗಳಗಳು, ಯುದ್ಧಗಳು ಅನೂಚಾನಾಗಿ ನಡೆಯುತ್ತಲೇ ಇದ್ದ ಕಾಲವದು. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಾಳ ತಪಶ್ಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ದೇವತೆಗಳ ಕಷ್ಟವನ್ನು ಕಂಡ ಮಹಾವಿಷ್ಣು, ಜಲಂಧರನ ವೇಷವನ್ನು ಧರಿಸಿ, ಜಲಂಧರನಿಲ್ಲದ ವೇಳೆಗೆ ಆ ಮನೆಗೆ ಬಂದು ವೃಂದಾಳೊಂದಿಗೆ ಮಿಲನಗೊಂಡು ಆಕೆಯ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ನಂತರ  ನಡೆದ ದೇವತೆಗಳು ಮತ್ತು ಜಲಂಧರರ ನಡುವಣ ಯುದ್ಧದಲ್ಲಿ, ಜಲಂಧರ ರಣರಂಗದಲ್ಲಿ ಮಡಿದನಂತೆ. ತನ್ನ ಶೀಲಹರಣ ಮಾಡಿ ಪಾತಿವ್ರತ್ಯವನ್ನಳಿದಿದ್ದ ಮಹಾವಿಷ್ಣುವಿಗೆ ಶಾಪ ನೀಡಿದ ವೃಂದಾ, ತನ್ನ ಪತಿಯ ಶವದೊಂದಿಗೆ ಸಹಗಮನ ಮಾಡಿದಳಂತೆ. ಈ ವೃಂದಾಳೇ ತುಳಸಿಯಾಗಿ ಪಾರ್ವತೀದೇವಿ ತಯಾರಿಸಿದ ಸಸ್ಯಕುಂಡದಲ್ಲಿ ಹುಟ್ಟಿದಳಂತೆ. ಇವಳೇ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾಗುತ್ತಾಳೆಂದು ಪ್ರತೀತಿ ಸಹ ಇದೆ.

ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ಮಹಾವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ತುಲನೆ ಮಾಡಲಾಗದಷ್ಟು ಮಹತ್ವವಿರುವ ಆ ಗಿಡಕ್ಕೆ ತುಲಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಲಸಿಯನ್ನೂ ವಿಷ್ಣುವು ಮದುವೆಯಾದನು ಎಂಬುದು ಗೊತ್ತಾಗುತ್ತದೆ. ಸನಾತನರಲ್ಲಿ ಪ್ರತಿ ಮನೆಯಲ್ಲೂ ಒಂದು ತುಳಸಿ ಗಿಡವಿರುವುದು ವಾಡಿಕೆ. ತುಳಸಿ ಗಿಡವು ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದಲ್ಲದೆ ಅಕಾಲಿಕ ಮರಣವನ್ನು ತಡೆಯುತ್ತದೆಂದು ನಂಬಿಕೆಯಿದೆ.

ಇಲ್ಲಿ ಕಥೆಗಳೇನೇ ಇದ್ದರೂ ತುಳಸಿ ಒಂದು ವಿಶಿಷ್ಟವಾದ ಔಷಧೀಯ ಗುಣವುಳ್ಳ ಸಸ್ಯವೆಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ಈ ಗಿಡದಿಂದ ಸುಮಾರು ಮೂವತ್ಮೂರಕ್ಕೂ ಅಧಿಕ ಕಾಯಿಲೆಗಳನ್ನು ಪರಿಹರಿಸಬಹುದು ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದೀಯ ಔಷಧ ಕ್ರಮಗಳಲ್ಲಿ ತುಳಸಿಯ ಬಳಕೆ ಹಾಸುಹೊಕ್ಕಾಗಿದೆ; ತುಳಸಿಯ ಬಳಕೆಯಿಲ್ಲದಿದ್ದರೆ ಆಯುರ್ವೇದ ಅಪೂರ್ಣವಾಗುತ್ತದೆ. 

ತುಳಸಿಯಷ್ಟೇ ಉತ್ತಮ ಅಂಶಗಳನ್ನು ಹೊಂದಿದ ಇನ್ನೊಂದು ಗಿಡ ನೆಲ್ಲಿ. ಬೆಟ್ಟದಲ್ಲಿ ಎತ್ತರದ ಮರವಾಗಿಯೂ ಬೆಳೆಯುವ ಇದನ್ನು ಬೆಟ್ಟನೆಲ್ಲಿ ಎಂದೂ ಹೇಳಲಾಗುತ್ತದೆ. ಮೋಸಗೊಂಡ ವೃಂದಾಳನ್ನು ಸಂಭಾಳಿಸುವ ಸಲುವಾಗಿ  ಆಕೆ ತುಳಸಿಯಾಗಿ ಜನಿಸಿದ ಮೇಲೆ, ಕಾರ್ತಿಕದ ದಿನಗಳಲ್ಲಿ ನೆಲ್ಲಿಯ ಗಿಡದಲ್ಲಿ ತಾನಿದ್ದು ಆಕೆಯನ್ನು ಮಹಾವಿಷ್ಣು ರಮಿಸುವನೆಂಬುದೊಂದು ಐತಿಹ್ಯ. ಅದೇ ಕಾರಣದಿಂದ ಮತ್ತು ನಂಬಿಕೆಯಿಂದ, ಇಂದಿಗೂ ಸಹ ತುಳಸಿಯ ಜೊತೆಗೆ ನೆಲ್ಲಿಯ ಚಂಡೆಯನ್ನೂ ಇಟ್ಟು ಪೂಜಿಸುವ ಸಂಪ್ರದಾಯ ಬಹುತೇಕ ಕಡೆಗಳಲ್ಲಿ ಕಾಣುತ್ತದೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಸಾಮಾನ್ಯವಾಗಿ ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸೀ ವಿವಾಹವನ್ನು ಮಾಡುವರು. ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಳಸೀ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು. ತುಳಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿಯೂ ಇದ್ದಳಂತೆ. ಕೃಷ್ಣನ ತುಲಾಭಾರದಲ್ಲಿ ತುಳಸಿಗಿರುವ ಮಹತ್ತನ್ನು ತೋರಿಸುವ ಸಲುವಾಗಿ ಕೃಷ್ಣ ಕೈಗೊಂಡ ನಿರ್ಧಾರದಂತೆ,  ತುಳಸೀದಳವನ್ನು ಇಡಲು, ಆ ಕಡೆಗೇ ತಕ್ಕಡಿ ವಾಲಿತ್ತೆಂಬ ಪುರಾಣೋಕ್ತ ಕಥೆಯಿದೆ. ಕೆಲವರು ಕೃಷ್ಣಭಕ್ತೆಯಾದ ಮೀರಾಳನ್ನೂ ತುಳಸಿಯೆಂದು ಹೇಳುವುದುಂಟು.  

ತುಳಸಿ ಹೇರಳವಾಗಿ ಆಮ್ಲಜನಕವನ್ನು ಹೊರಗೆಡಹುತ್ತಿರುವುದರಿಂದ ಇದು ವಾತಾವರಣದ ಶುದ್ಧೀಕರಿಸುತ್ತದೆ ಮತ್ತು ದೇಹದ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ವಿಜ್ಞಾನ ತಿಳಿಸಿದೆ. ತುಳಸಿಯ ಎಲೆ ಹಾಗೂ ಬೇರುಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವುದರಿಂದ ವೈದ್ಯಶಾಸ್ತ್ರವೂ ಇದಕ್ಕೆ ಪ್ರಾಧಾನ್ಯ ನೀಡಿದೆ. ಶಾಸ್ತ್ರರೀತ್ಯಾ ತುಳಸಿಯಲ್ಲಿ ಪ್ರತಿಶತ ಐವತ್ತರಷ್ಟು ವಿಷ್ಣುತತ್ತ್ವ ಮತ್ತು ಬಿಲ್ವದಲ್ಲಿ ಪ್ರತಿಶತ ಎಪ್ಪತ್ತರಷ್ಟು ಶಿವತತ್ತ್ವವಿರುತ್ತದೆ. ತುಳಸಿ ಮತ್ತು ಬಿಲ್ವಗಳನ್ನು ಪೂಜೆಯಲ್ಲಿ ಉಪಯೋಗಿಸುವುದರಿಂದ ಅವುಗಳಲ್ಲಿನ ದೇವತೆಗಳ ತತ್ತ್ವವು ಪ್ರತಿಶತ ಇಪ್ಪತ್ತರಷ್ಟು ಹೆಚ್ಚಾಗುತ್ತದೆ. ವಾತಾವರಣದಲ್ಲಿರುವ ರಜ-ತಮಗಳ ಪರಿಣಾಮವು ಪ್ರತಿಯೊಂದು ವಸ್ತುವಿನ ಮೇಲೆ ಆಗುತ್ತಿರುತ್ತದೆ. ತುಳಸಿ ಮತ್ತು ಬಿಲ್ವಗಳ ಮೇಲೆಯೂ ರಜ-ತಮಗಳ ಪರಿಣಾಮವಾಗುತ್ತದೆ. ರಜ-ತಮದೊಂದಿಗೆ ಹೋರಾಡಲು ದೇವತೆಯ ಪ್ರತಿಶತ ಇಪ್ಪತ್ತರಷ್ಟು ತತ್ತ್ವವು ವ್ಯಯವಾಗುತ್ತದೆ. ಇದರ ಪರಿಣಾಮವಾಗಿ ತುಳಸಿ ಮತ್ತು ಬಿಲ್ವಗಳು ಒಣಗುತ್ತವೆ. ಆದರೆ ಅವುಗಳಲ್ಲಿ ಮೂಲತಃ ಇರುವ ದೇವತೆಯ ತತ್ತ್ವಗಳು ಹಾಗೆಯೇ ಇರುತ್ತವೆ ಮತ್ತು ಅವು ಯಾವಾಗಲೂ ಅವುಗಳನ್ನು ಪ್ರಕ್ಷೇಪಿಸುತ್ತಿರುತ್ತವೆ. ಈ ಕಾರಣದಿಂದಲೇ ತುಳಸಿಯ ಎಲೆಗಳು ಮತ್ತು ಬಿಲ್ವಪತ್ರೆಯು ಯಾವಾಗಲೂ ಶುದ್ಧವಾಗಿರುತ್ತವೆ. ತುಳಸಿಯು ಯಾವಾಗಲೂ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸುತ್ತಿರುವುದರಿಂದ ತನ್ನ ಸುತ್ತಲಿರುವ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಆದುದರಿಂದಲೇ ಯಾವ ಮನೆಯಲ್ಲಿ ತುಳಸಿ ವೃಂದಾವನ ಇರುತ್ತದೆಯೋ ಆ ಮನೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪಂಚಭೂತಾತ್ಮಕವಾದ ಮಾನವ ಶರೀರದಲ್ಲಿ ಬೆಳಿಗ್ಗೆಯ ನಂತರದ ಘಳಿಗೆಗಳಲ್ಲಿ ರಜ-ತಮ ಗುಣಗಳು ಹೆಚ್ಚುತ್ತವೆ. ಮಧ್ಯಾಹ್ನದ ನಂತರ ಈ ಗುಣಗಳು ಅತಿಯಾಗಿ ಹೆಚ್ಚಿರುವುದರಿಂದ ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು ಎಂಬ ಸಂಪ್ರದಾಯವಿದೆ; ಯಾಕೆಂದರೆ ಶ್ರೀತುಳಸಿ ಸದಾ ಸಾತ್ವಿಕವಾಗಿರುತ್ತದೆ.

ತುಳಸಿಯ ಆಯುರ್ವೇದೀಯ  ಗುಣಗಳಲ್ಲಿ ಕೆಲವು ಇಂತಿವೆ: ದೇಹದ ರಕ್ತ ಶುದ್ಧಿಗೆ ತುಳಸೀಗಿಡದ ಬೇರಿನ ಲೇಹ್ಯವು ಪರಿಣಾಮಕಾರಿ. ತುಳಸೀ ಎಲೆಗಳೊಂದಿಗೆ ಪುದೀನಾ ಎಲೆಗಳನ್ನು ಸೇರಿಸಿ ತಿಂದರೆ ಹೊಟ್ಟೆಯ ಜಂತು ಹುಳುಗಳು ನಾಶವಾಗುತ್ತವೆ. ಅಸ್ತಮಾದಿಂದ ಉಸಿರಾಟಕ್ಕೆ ತೊಂದರೆಯಾದಾಗ ತುಳಸೀರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಉಸಿರಾಟವು ಸರಾಗವಾಗುವುದು. ಕೆಮ್ಮು-ಶೀತ ನೆಗಡಿಯಾದಾಗ ತುಳಸಿಯ ಕಷಾಯವು ದಿವ್ಯೌಷಧ. ಕೆಲವು ಬಗೆಯ ಚರ್ಮರೋಗಗಳಿಗೆ ತುಳಸಿ ಎಲೆ ಮತ್ತು ಉಪ್ಪು ಸೇರಿಸಿ ಅರೆದು ಹಚ್ಚಿದರೆ ವಾಸಿಯಾಗುವುದೆಂದು ತಿಳಿದುಬಂದಿದೆ. ತುಳಸಿಯು ಕೀಟ ಪ್ರತಿರೋಧಕ ಸಸ್ಯವೂ ಹೌದು. ಮನೆಯ ಅಂಗಳದಲ್ಲಿ ಸಾಲಾಗಿ ತುಳಸಿ ಗಿಡಗಳನ್ನು ನೆಟ್ಟು ಬೆಳೆಸಿದರೆ ಸೊಳ್ಳೆ-ಹಾವುಗಳ ಕಾಟವೂ ಇರುವುದಿಲ್ಲ. ಶ್ರೀ ತುಳಸಿ, ಕೃಷ್ಣ ತುಳಸಿ. ಈ ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ ಎನ್ನುವುದು ತುಳಸಿಯ ಇನ್ನೊಂದು ವಿಶೇಷ. ತುಳಸಿ ಎಲೆಗಳನ್ನು ಶುಚಿಗೊಳಿಸಿದ ತಾಮ್ರದ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಪ್ರತಿದಿನ ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮೀ ಮಹೂರ್ತದಲ್ಲಿ ಇದನ್ನು ಉಷಾಪಾನ ಮಾಡಿದರೆ ಅರ್ಥಾತ್ ಕುಡಿದರೆ ಇದು ಫಲಕಾರಿಯಾಗಿರುತ್ತದೆ. ತುಳಸಿ ಭಾರತೀಯರ ಪಾಲಿಗೆ ಸಂಜೀವಿನಿ. ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿ.

‘ಓಸಿಯಂ’ ಉಪವರ್ಗದ ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದ ತುಳಸಿಯಲ್ಲಿ ಸುಮಾರು ೧೫೦ ಪ್ರಭೇದಗಳಿವೆ. ಓಸಿಯಂನ ಹೆಚ್ಚಿನ ಪ್ರಭೇದಗಳು ಆಫ್ರಿಕಾದ ಶೀತವಲಯದ ಮಳೆ ಬೀಳುವ ಅರಣ್ಯ ಪ್ರದೇಶದಿಂದ ಬಂದಿದ್ದೆಂದು ಹೇಳಲಾಗುತ್ತದೆ. ಇವು ಸಮುದ್ರಮಟ್ಟದಿಂದ ಸುಮಾರು ೧೮೦೦ ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತುಳಸಿಯನ್ನು ಇಂದು ವಿಶ್ವದಾದ್ಯಂತ ಕಾಣಬಹುದಾಗಿದ್ದರೂ, ಉಷ್ಣವಲಯದಲ್ಲಿ ಇದು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ. ಸಮಶೀತೋಷ್ಣ ಪ್ರದೇಶದಲ್ಲಿ ಸಾಮಾನ್ಯವಾಗಿ ಮತ್ತು ಶೀತವಲಯದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತದೆ ಎಂಬುದು ಗಮನಾರ್ಹ ವಿಷಯ. ತುಳಸಿಯಲ್ಲಿ ಶ್ರೀ ತುಳಸಿ, ಕೃಷ್ಣ ತುಳಸಿ, ಸುಗಂಧ ತುಳಸಿ, ಕಾಮಕಸ್ತೂರಿ , ಕರ್ಪೂರತುಳಸಿ, ರಾಮ ತುಳಸಿ, ರಕ್ತತುಳಸಿ, ಕ್ಷುದ್ರಪತ್ರ ತುಳಸಿ ಇತ್ಯಾದಿಗಳಿದ್ದರೂ, ಇವುಗಳ ಪೈಕಿ ಕಾಮಕಸ್ತೂರಿ ಮತ್ತು ಕರ್ಪೂರ ತುಳಸಿಗಳಿಗೆ ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆಯಿದೆ. ಸಂಸ್ಕೃತದಲ್ಲಿ ತುಲಸಿಗೆ ಹಲವು ಹೆಸರುಗಳಿವೆ: ತುಲಸಿ, ಸುಲಭಾ, ಸುರನಾ, ಬಹುಮಂಜರಿ, ಶೂಲಘ್ನೀ, ದೇವ ದುಂದುಭಿ, ಪಾವನೀ ವಿಷ್ಣುಪ್ರಿಯಾ, ದಿವ್ಯಾ, ಭಾರತೀ ಹೆಸರುಗಳು ಪ್ರಮುಖವಾಗಿ ಕಾಣುತ್ತವೆ.

ಕರ್ಪೂರತುಳಸಿ: ಕರ್ಪೂರ ತುಳಸಿಯ ತವರು ಕೆನ್ಯಾ ದೇಶ. ಇದನ್ನು ಇಂಗ್ಲೀಷ್ನಲ್ಲಿ ‘ಕ್ಯಾಂಪರ್ ಬೆಸಿಲ್’ ಎನ್ನುತ್ತಾರೆ. ಸಸ್ಯಶಾಸ್ತ್ರದಲ್ಲಿ ಇದನ್ನು ’ಆಸಿಮಮ್ ಕಿಲಿಮಂಜಾರಿಕಮ್’ ಎನ್ನಲಾಗುತ್ತದೆ. ಈ ಸಸ್ಯದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ-ಭಟ್ಟಿ ಇಳಿಸಿದಾಗ, ಸುವಾನಸೆಯುಳ್ಳ ತೈಲ ದೊರಕುತ್ತದೆ. ಇದರ ಬಹುಪಾಲು ಗಟ್ಟಿಯಾಗಿದ್ದು, ಇದನ್ನೆ ಕರ್ಪೂರವೆನ್ನುವುದು. ಇದರ ಬೇರ್ಪಡಿಸುವಿಕೆಯಿಂದಾಗಿ ದೊರಕುವ ಎಣ್ಣೆಯನ್ನು ‘ಕ್ಯಾಂಫರ್ ಅಯಿಲ್’ ಎನ್ನುತ್ತಾರೆ. ಈ ತೈಲವನ್ನು ಸಾಬೂನುಗಳ ತಯಾರಿಗೆ, ಕೀಟನಾಶಕವಾಗಿ, ಸೊಳ್ಳೆಗಳ ತಡೆಗಟ್ಟುವಿಕೆಗೆ ಉಪಯೋಗಿಸುತ್ತಾರೆ.

ತುಳಸೀ ಪೂಜೆಯ ಸಂದರ್ಭದಲ್ಲಿನ ಮಂತ್ರ:

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ||

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||

ತುಲಸ್ಯಾಂ ಸಕಲಾ ದೇವಾಃ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||

ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||

ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೋದ್ಭೂತೇ ತುಳಸೀ ತ್ವಾ೦ ನಮಾಮ್ಯಹಮ್

ಎ೦ಬ ಶ್ಲೋಕದಿ೦ದ ತುಳಸಿಯನ್ನು ಧ್ಯಾನಿಸುವುದು, ಪೂಜಿಸುವುದು ಭಾರತೀಯರ ಸಂಪ್ರದಾಯ. ಶ್ಲೋಕ ಗೊತ್ತಿರದ ಭಾರತೀಯರಿಗೂ ಸಹ ತುಳಸಿಯ ಮಹತ್ವ ತಿಳಿದಿದೆ. ದೇವರಿಗೆ ನೈವೇದ್ಯ ಮಾಡುವಾಗ, ಶ್ರಾದ್ಧದ ವೇಳೆಯಲ್ಲಿ ದಾನ ನೀಡುವ ಸಮಯದಲ್ಲಿ ತುಳಸಿ ಅತ್ಯವಶ್ಯಕ. ದೇವತಾ ಪೂಜೆಯ ನ೦ತರ ತುಳಸಿ ಹಾಕಿರುವ ತೀರ್ಥವನ್ನು ಸೇವಿಸುವುದರಿ೦ದ ನಮ್ಮ ಶರೀರವು ಶುದ್ಧವಾಗುತ್ತದೆ. ಸನಾತನರಲ್ಲಿ ಮೃತರ ಕಳೇಬರವನ್ನು ಒಂದು ವಿಧಾನವಾದ ದಹನಕ್ರಿಯೆಗೆ ಒಳಪಡಿಸುವುದಾದರೆ, ಮೇಲೆ ತುಳಸಿ ಕಾಷ್ಟವನ್ನು ಇಟ್ಟು ಸುಡುತ್ತಾರೆ. ಇದರಿ೦ದ ಮೃತನ ದೇಹಕ್ಕೆ ಸದ್ಗತಿ ಸಿಗುತ್ತದೆ ಎ೦ಬ ನ೦ಬಿಕೆಯಿದೆ. ಹೀಗೆ ಲಕ್ಷ್ಮೀನಾರಾಯಣನ ಸಾನ್ನಿಧ್ಯವನ್ನು ಹೊ೦ದಿರುವ ತುಳಸಿಯನ್ನು ಪ್ರತಿನಿತ್ಯವೂ ಮತ್ತು ಹಬ್ಬಗಳಲ್ಲಿ ವಿಶೇಷ ರೀತಿಯಲ್ಲೂ ಪೂಜಿಸುವುದು ಸನಾತನ ಧಾರ್ಮಿಕ ಸ೦ಪ್ರದಾಯದ ಒ೦ದು ಪ್ರಮುಖ ಅ೦ಗವಾಗಿದೆ.

ಮನೆಯ ಮುಂದೆ ಒಂದಕ್ಕಿಂತ ಹೆಚ್ಚಿಗೆ ತುಳಸೀ ಗಿಡಗಳಿದ್ದರೆ ಇರುವ ಎಲ್ಲಾ ತುಳಸೀ ಗಿಡಗಳಿಗೆ ಕಟ್ಟೆ ಇರಬೇಕೆಂದಿಲ್ಲ. ಕಟ್ಟೆ ಕಟ್ಟುವುದರಿಂದ ನೀರು ಅತ್ತಿತ್ತ ಹೋಗುವುದಿಲ್ಲ ಮತ್ತು ಗಿಡದಿಂದ ಉದುರುವ ಹಣ್ಣೆಲೆಗಳು ಗೊಬ್ಬರದಂತೆ ಅದರಲ್ಲಿಯೇ ಉಳಿದು ಗಿಡದ ಬೆಳವಣಿಗೆಗೆ ಅನುಕೂಲವಾಗುವುದು. ಉತ್ಥಾನ ದ್ವಾದಶಿಯಂದು ಮಹಾವಿಷ್ಣುವನ್ನು ಎಚ್ಚರಿಸಲು ತ್ರಿಮೂರ್ತಿ ಪತ್ನಿಯರು ಮೂರು ಬೀಜಗಳನ್ನು ಎರಚಿದ್ದರಂತೆ ಎಂಬುದು ಇನ್ನೊಂದು ಐತಿಹ್ಯ. ಮೊದಲನೆಯ ಬೀಜವನ್ನು ಧಾತ್ರಿ (ಸರಸ್ವತಿ) ಎರಚಿದ್ದರಿಂದ, ಆಗ ಜನಿಸಿದವಳು ಧರಿತ್ರಿಯೆನಿಸಿದಳು. ಲಕ್ಷ್ಮಿಯು ಎರಚಿದ ಬೀಜದಿಂದ ಜನಿಸಿದವಳು ಮಾಲತಿ ಮತ್ತು ಗೌರಿಯು ಎರಚಿದ ಬೀಜದಿಂದ ಜನಿಸಿದವಳು ತುಳಸೀ. ಮನೆಯ ಮುಂದೆ ತುಳಸಿಯೊಡನೆ ಮಾಲತೀ ಹೂವಿನ ಗಿಡಗಳನ್ನು ಕಟ್ಟೆಕಟ್ಟಿ ನೆಡುವ ಅಭ್ಯಾಸ ಕೂಡ ಕೆಲವೆಡೆ ಕಂಡುಬರುತ್ತದೆ. ’ತು’ ಎಂದರೆ ಮೃತ್ಯು, ’ಲಸಿ’ ಎಂದರೆ ಧಿಕ್ಕರಿಸುವುದು; ಇದು ತುಳಸಿಯ ಅರ್ಥ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ತುಳಸಿಯನ್ನು ಪೂಜಿಸಿ, ನಮಸ್ಕರಿಸಿದರೆ ಯುಗದಲ್ಲಿ ಮಾಡಿದ ಪಾಪ ನಶಿಸುತ್ತದೆ ಎಂಬ ನಂಬಿಕೆಯಿದೆ. ಇಂಥಾ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಿ ಧನ್ಯರಾಗಲು ಹಬ್ಬವೆಂಬುದೊಂದು ಅವಕಾಶ.

Tuesday, November 12, 2013

ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ!

ಚಿತ್ರಕೃಪೆ: ಅಂತರ್ಜಾಲ
ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ! 


ಕುಮಟಾದಲ್ಲಿ ನಾನಿದ್ದ ಒಂದೆರಡು ವರ್ಷಗಳಲ್ಲಿ ಶಾನಭಾಗ ಮಾಮ ಮತ್ತು ನಾನು ಬಹಳ ಸ್ನೇಹಿತರಾಗಿದ್ದೆವು. ಅವರಿಗೆ ಎಂಬತ್ತಕ್ಕೆ ಹತ್ತಿರ; ನನಗೆ ಇಪ್ಪತ್ತಕ್ಕಿನ್ನೂ ಐದಾರು ದೂರ. ವಯಸ್ಸಿನ ಅಂತರ ಕಟ್ಕೊಂಡು ನಮ್ಗೇನಾಗಬೇಕು? ನಮ್ಮ ನಡುವೆ ಅಜ್ಜ-ಮೊಮ್ಮಗನಲ್ಲಿರುವಂಥ ಅಪ್ಪಟ ಪ್ರೀತಿ. ನನಗೆ ಕೊಂಕಣಿ ಮಾತನಾಡಲು ಬರ್ತಿರಲಿಲ್ಲ, ಅವರಿಗೆ ಕನ್ನಡದ ಕೆಲವು ಪದಗಳಿಗೆ ಕೊರತೆಯಾಗುತ್ತಿತ್ತು. ಆದರೂ ನಮ್ಮ ನಡುವೆ ಒಂದೇ ಒಂದು ದಿನ ಮಿಸ್ ಅಂಡರ್ಸ್ಟ್ಯಾಂಡಿಂಗ್ ಇರಲೇ ಇಲ್ಲ. ನೀವು ನಂಬೋದಾದ್ರೆ ನಂಬಿ ಬಿಟ್ರೆ ಬಿಡಿ; ಅದರಿಂದ ನನಗೇನೂ ನಷ್ಟವಿಲ್ಲ. ಪದಗಳನ್ನು ವಾಕ್ಯಗಳ ಚಹರೆಯಿಂದಲೂ ಅರ್ಥಮಾಡಿಕೊಳ್ಳಬಹುದು ಎಂಬುದು ಅರ್ಥವಾಗಿದ್ದೇ ನನಗೆ ಆ ಸಮಯದಲ್ಲಿ. "ವಿ ಕ್ಯಾನ್ ಅಂಡರ್ಸ್ಟ್ಯಾಂಡ್  ಬೈ  ವರ್ಚ್ಯೂ ಆಫ್ ಇಟ್ಸ್ ಇಮೋಶನ್" ಕೆಲವೊಮ್ಮೆ ಅವರ ಮನೆಯ ಅಡಿಗೆಯ ಪದಾರ್ಥಗಳನ್ನು ನನಗೆ ಕೊಡುತ್ತಿದ್ದರು; ಇನ್ನು ಕೆಲವೊಮ್ಮೆ ನಾನು ಕೊಡುವುದನ್ನು ಅವರು ಸ್ವೀಕರಿಸುತ್ತಿದ್ದರು. ಹೀಗೇ ಅವರ ನಮ್ಮ ಒಡನಾಟದ ವಿಶಿಷ್ಟ ಮತ್ತು ನಮ್ಮದೇ ಆದ ರೀತಿಯಲ್ಲಿ ಅಮೋಘವಾಗಿತ್ತು.

ನಾನು ಎಲ್ಲಿಗೇ ಹೋದರೂ ಅರೆನಿಮಿಷವೂ ಸುಮ್ಮನಿರುವ ಪೈಕಿ ಅಲ್ಲ ಎಂಬುದು ನಿಮಗೂ ಗೊತ್ತಾಗಿರಲು ಸಾಕು. ನಾಪಿತನ ಅಂಗಡಿಗೆ ಹೋಗಿ ಸರದಿಯಲ್ಲಿ ಕಾಯುತ್ತ ಕೂತಾಗ ಸಿಗುವ ಹಳೆಯ ಪೇಪರು, ಪತ್ರಿಕೆ ಏನೇ ಸಿಕ್ಕರೂ ಸಹ ಅದನ್ನೇ ಹೊಸದರಂತೆ ಆಸೆಪಟ್ಟುಕೊಂಡು ಓದುತ್ತಿದ್ದೆ. ನಾಪಿತನ ಅಂಗಡಿಗೆ ಬರುವ ಗಿರಾಕಿಗಳಲ್ಲಿ ಕೆಲವರು ಬಹಳ ಮಜಮಜಾ ಕಥೆಗಳನ್ನು ಹೊತ್ತು ತರುತ್ತಾರೆ! ಒಬ್ಬೊಬ್ಬರ ನಿರೂಪಣೆಯೂ ವಿಶಿಷ್ಟ ಮತ್ತು ವಿಭಿನ್ನ. ಅವರಿಗೆ ಅವರೇ ಸಾಟಿ! ಎಲ್ಲರ ಮಧ್ಯೆದಲ್ಲಿ ಬಾಯಿ ತೂರಿಸದೇ ಸುಮ್ಮನೆ ಕುಳಿತು ಅವರೆಲ್ಲ ಹೇಳುವುದನ್ನು ಕೇಳುವ ಜಾಯಮಾನ ನನ್ನದಾಗಿತ್ತು. ಕಥೆಗಳಲ್ಲಿ ಅದಲ್ಲ ಇದಲ್ಲ ಎಂಬುದಿಲ್ಲ, ಮುಖ್ಯಮಂತ್ರಿ ಸೀಟು ಅಲ್ಲಾಡುತ್ತಿರುವ ಸುದ್ದಿಯಿಂದ ಹಿಡಿದು ಮೇಲಿನ ಮನೆ ಮಾದೇವಕ್ಕನ ಮಗಳು ಓಡಿಹೋದ ಸುದ್ದಿಯವರೆಗೆ ಎಲ್ಲವೂ ಅಲ್ಲಿ ಲಭ್ಯ ಗೊತ್ತೇ? ನಾಪಿತನ ಕೆಮ್ಮು, ತುಪುಕ್ಕನೆ ಉಗುಳುವಿಕೆ ಇವೆಲ್ಲ ನಡುನಡುವೆ ಬರುವ ಛದ್ಮವೇಷಗಳಂತೆ ಇರುತ್ತಿದ್ದವು. ಒಳಕಲ್ಲಿನಲ್ಲಿ ರುಬ್ಬುವಾಗ ಕೈಯ್ಯಿಂದ ಹಿಟ್ಟನ್ನು ಮಗುಚಿ ಮಗುಚಿ ಮುಂದೆಹಾಕಿದಂತೇ ನಾಪಿತನ ಹೂಂ...ಗುಟ್ಟುವಿಕೆ ಕಥೆಗಾರರಿಗೆ ಉತ್ತೇಜನ ನೀಡುತ್ತಿತ್ತು. ಅಲ್ಲಿಗೆ ಬರುವ ಕಥೆಗಾರರಂತಹ ನಿಸ್ಸೀಮ ಕಥೆಗಾರರನ್ನು ನಾನು ಜಗದಲ್ಲಿ ಬೇರಾವ ಜಾಗದಲ್ಲೂ ಕಾಣಲೇ ಇಲ್ಲ! ಅವರಿಗೆಲ್ಲ ಯಾವ ಪ್ರಶಸ್ತಿ ನೀಡಿದರೂ ಸಾಲದು. ನಿಜ ಹೇಳ್ತೇನೆ ಕೇಳಿ: ನಾಪಿತ ನನ್ನನ್ನು ಬೇಗ ಮನೆಗೆ ಕಳಿಸಿಬಿಟ್ಟರೆ ಬೇಜಾರು; ನನಗೆ ಇನ್ನೂ ಇರುತ್ತಿದ್ದುದು ಕಥೆಯ ಹಸಿವು. ಇವತ್ತಿಗೂ ನಾಪಿತರ ಅಂಗಡಿ ನನಗೆ ಪ್ರೀತಿ ಯಾಕೆಂಬುದರ ಗುಟ್ಟು ನನಗಷ್ಟೇ ಗೊತ್ತು ಹೋಯ್, ಯಾರಲ್ಲೂ ಹೇಳ್ ಬೇಡಿ ಮಾರಾಯ್ರೆ.   

ಕಷ್ಟಪಟ್ಟು ಮೀನುಗಾರರೆಲ್ಲಾ ಸೇರಿ, ಬಸವರಾಜದುರ್ಗಕ್ಕೆ ಹೋಗಿ. ಅಲ್ಲಿರುವ ಜಟ್ಟುಗನಿಗೆ ಬಲಿಪೂಜೆ ಕೊಡದಿದ್ದರೆ ಅವರಿಗೆ ಜಾಸ್ತಿ ಮೀನು ಸಿಗುವುದಿಲ್ಲವಂತೆ. ಸಂಸಾರದ ತಾಪತ್ರಯ ತಪ್ಪುವುದಿಲ್ಲವಂತೆ. ಪೂಜೆ ಮಾಡುವಾಗ ಅಲ್ಲಿರುವ ಪೂಜಾರಿಯ ಕಾಲಿಗೆ ಗೆಜ್ಜೆಕಟ್ಟುತ್ತಾರಂತೆ. ಪೂಜಾರಿ ಮೈಮೇಲೆ ಜಟ್ಟುಗನ ಆವೇಶವಾದಾಗ ಪೂಜಾರಿ ಥಕಥಕನೆ ಕುಣಿಯುತ್ತಾನಂತೆ. ಆವ ಕುಣಿಯುವ ಹೊತ್ತಿಗೆ ಕಟ್ಟಿದ ದೊಡ್ಡಗೆಜ್ಜೆಯ ಸಪ್ಪಳ ಗೈಲ್ ಗೈಲ್ ಗೈಲ್ ಗೈಲ್ ಎನ್ನುವಾಗ ಸೇರಿದವರ ಎದೆಯಲ್ಲೆಲ್ಲ ಗಡಗಡಗಡ ನಡುಕ ಗೊತ್ತಾ? ಬಂದ ಭಕ್ತರ ಕೋಳಿಯನ್ನೆಲ್ಲ ಒಂದೊಂದಾಗಿ ಇಸಿದುಕೊಂಡು ಬಲಿಹಾಕಿದ ನಂತರ ಜಟ್ಟುಗ ಶಾಂತವಾಗುತ್ತಾನಂತೆ. ಅಲ್ಲಿಯವರೆಗೂ ಯಾರೂ ಪಿಟ್ಟಂತ ಮಾತನಾಡೂದಿಲ್ಲ ಗೊತ್ತಾ? ಅಲ್ಲೇನಿದ್ರೂ ಕೆಂಪು ಕುಂಕುಮ-ಅಡಕೆಮರದ ಶಿಂಗಾರ, ಸೇವಂತಿಗೆ ಹೂವು ಇವುಗಳ ರಾಶಿರಾಶಿ. ಇನ್ನೊಂದ್ ಪಕ್ಕದಲ್ಲಿ ತೆಂಗಿನಕಾಯಿಗಳ ರಾಶಿರಾಶಿ. ಜಟ್ಟುಗನ ಕಲ್ಲಿಗೆ ಕೊಡದ ನೀರು ಹಾಕಿ ಅಭಿಷೇಕಮಾಡಿ, ರಾಶಿ ರಾಶಿ ಕುಂಕುಮ ಚೆಲ್ಲಿ, ಊರಿಂದ ಕಟ್ಕೊಂಡುಬಂದ ಅಕ್ಷತೆಕಾಳುಗಳನ್ನೆಲ್ಲಾ ಹಾಕಿ, ಮೇಲಿಂದ ಬಿಳಿಯ ಶಿಂಗಾರ ಇಟ್ಟು, ಸೇವಂತಿಗೆ ಮಾಲೆಯಲ್ಲಿ ಅಲಂಕರಿಸಿದಾಗ ಜಟ್ಟುಗನಿಗೆ ಬಹಳ ಖುಷಿಯಂತೆ.

"ನಿಮ್ಗೆ ದುರ್ಗಾಕೇರಿ ದಾಮೋದರ ಗೊತ್ತದ್ಯಾ? ಕಳದೊರ್ಸ ಅಂವ ಪೂಜಿ ಕೊಡ್ಲಿಲ್ಲಾಗಿದ. ಏನಿಲ್ಲ, ತಾಪಡ್ತೋಪು ಸುರುವಾಯ್ತು ಜರ. ಎಲ್ಲೆಲ್ಲೆಲ್ಲಾ ತಿರಗಾಡ್ದ. ಯಾವ ಡಾಕ್ಟ್ರ ತಾವನೂ ಗುಣಾ ಆಗ್ಲಿಲ್ಲ. ಬರುವರ್ಸ್ದಗೆ ಎರಡೆರಡು ಕೋಳಿ ಕೊಡ್ತೆ ಹೇಳಿ ಹೇಳ್ಕಂಡ ನೋಡಿ. ಜರ ಪಟ್ನೆ ಇಳದೋಯ್ತು. ದೇವಪ್ಪ ಅವನ್ಯಲ್ರೀ ಇವರೆ[ನಾಪಿತನನ್ನುದ್ದೇಶಿಸಿ ಹೇಳಿದ್ದು] ಅಂವಗೂ ಅಷ್ಟೇವ, ಹೊಟ್ಟೀಲೆಲ್ಲಾ ಒಂಥರಾ ಆಯ್ತದೆ, ಜೀವ್ದಗೆಲ್ಲ ಹುಷಾರಿಲ್ಲ ಅಂದಾಯ್ತ ಇಲ್ವ, ಕೂಡ್ಲೇ ಜಟ್ಗಂಗೆ ಕೋಳಿ ಹರಕೆ ಹೇಳ್ಕಂಡ, ಮಾರನೇ ದಿನವೇ ಎಲ್ಲಾ ಆರಾಮು ಗೊತ್ತದ್ಯಾ? ಜಟ್ಗನ ಶಕ್ತಿ ಎಂತ ಕಮ್ಮೀ ಹೇಳಿ ಮಾಡಿರಾ? ಕುಂತಲ್ಲೆ ಜಟ್ಗ ಎಲ್ಲಾ ಲೆಕ್ಕ ಹಾಕ್ತದೆ."  ಇಂಥಾ ಹೇಳಿಕೆಗಳು, ಅವರಲ್ಲಿನ ಸಂಭಾಷಣೆಗಳನ್ನು ಕೇಳುತ್ತಿದ್ದಂತೆ ನನಗೆ ಮನದಲ್ಲಿ ಪೂಜಾರಿಯ ಗೆಜ್ಜೆಯ ಸಪ್ಪಳ ಮತ್ತು ಕತ್ತುಕುಯ್ಸಿಕೊಂಡು ಸಾಯುವಾಗ ಹಾರಾಡಬಹುದಾದ ಕೋಳಿಗಳ ಚಿತ್ರಣವೇ ಮನದಲ್ಲಿ ತುಂಬಿರುತ್ತಿತ್ತು. ಪ್ರಾಯಶಃ ಆ ಪೊಜೆಯ ದಿನ ಬಸವರಾಜದುರ್ಗದ ಆ ಪ್ರಾಂತವೆಲ್ಲಾ ರಕ್ತಮಯವೋ ಏನೋ ಎಂದೆನಿಸುತ್ತಿತ್ತು. ಅಂತಹ ಕಥೆಗಳನ್ನು ಕೇಳಿದ್ದ ರಾತ್ರಿ ಸ್ವಪ್ನದಲ್ಲಿ ಅಂಥಾದ್ದೇ ಮೇಲಾಟ ಕಾಣುತ್ತಿತ್ತು. ಕನಸಿನಲ್ಲೂ ಮತ್ತದೇ ದೃಶ್ಯಾವಳಿ: ಪೂಜಾರಿ ಥಕಥಕನೆ ಕುಣಿಯುತ್ತಿರುವುದು, ಅವನ ಕಾಲಿಗೆ ಕಟ್ಟಿದ ಗೆಜ್ಜೆ ಗೈಲ್ ಗೈಲ್ ಗೈಲ್ ಗೈಲ್, ಎಲ್ಲಿ ನೋಡಿದರೂ ಕೆಂಪುರಕ್ತ, ಕೆಂಪುಬಣ್ಣ!     

ಶಾನಭಾಗಮಾಮನ ಕಥೆಗಳು ಅಂತಹ ಕಥೆಗಳಿಗೆ ಭಿನ್ನಾವಾಗೇನೂ ಇರಲಿಲ್ಲ. ಆದರೆ ಹೇಳುವ ಶೈಲಿ ಬೇರೆ. ಕುವೆಂಪುವಿಗೆ ಕಥೆಗಾರ ಮಂಜಣ್ಣ ಸಿಕ್ಕಿದ್ದಂತೇ ನನಗೂ ಶಾನಭಾಗ ಮಾಮ ಸಿಕ್ಕಿದ್ದಕ್ಕೆ ಒಂಥರಾ ಖುಷಿಯಿತ್ತು. ಶಾನಭಾಗಮಾಮನದ್ದೂ ಬಾಡಿಗೆ ಮನೆ, ನನ್ನದೂ ಕೂಡ. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆ-ಬಾಡಿಗೆ ಅವರು ಕೊಡುತ್ತಿದ್ದರಷ್ಟೆ. ಶಾನಭಾಗಮಾಮನಿಗೆ ಮೈತುಂಬ ಬಡತನ; ಆದರೆ ಆತ ಬಹಳ ಬುದ್ಧಿವಂತ. ಪೋಸ್ಟಾಫೀಸಿನಲ್ಲಿ ಕೆಲಸಮಾಡುತ್ತಿದ್ದ ಶಾನಭಾಗಮಾಮನಿಗೆ ನಿವೃತ್ತಿಯಾಗಿ ದಶಕಗಳೇ ಕಳೆದಿದ್ದರೂ ಇನ್ನೂ ಪೋಸ್ಟ್ ಮಾಸ್ತರಿಕೆಯ ಹುದ್ದೆಯಲ್ಲಿರುವ ಗತ್ತು ಕಾಣುತ್ತಿತ್ತು! ತೆಳ್ಳಗಿನ ಕಡ್ಡಿ ಶರೀರದಲ್ಲಿ ಅರ್ಧಲೀಟರ್ ರಕ್ತ ಸಹ ಇದೆಯೋ ಇಲ್ಲವೋ, ಆದರೆ ಭಯಂಕರ ಸ್ವಾವಲಂಬಿ. ಯಾರನ್ನೂ ಅವಲಂಬಿಸಿ ಬದುಕುವ ಜಾತಿಯ ಪ್ರಾಣಿಯೇ ಅಲ್ಲ ಅದು!  ಜೊತೆಗೆ ಅದೇ ರೀತಿಯ ಲಕ್ಷಣದ, ಕಡ್ಡಿಗಾತ್ರದ ಹೆಂಡತಿ, ಮಗ. ಈ ಮೂರುಜನರುಳ್ಳ ಸಂಸಾರ.

ಮಗ ಯಾವುದೋ ವೈದ್ಯರ ಕ್ಲಿನಿಕ್ಕಿನಲ್ಲಿ ಕಾಂಪೌಂಡರ್ ಆಗಿ ಕೆಲಸಮಾಡುತ್ತಿದ್ದ. ಅಪ್ಪನಿಂದ ಅನುವಂಶೀಯವಾಗಿ ಪಡೆಕೊಂಡ ಬಹುದೊಡ್ಡ ಆಸ್ತಿಯೆಂದರೆ ಆಸ್ತಮಾ! ಮಳೆ-ಚಳಿಗಾಲದಲ್ಲಿ ನಿತ್ಯವೂ ಬೆಳಿಗ್ಗೆ ಅಪ್ಪ-ಮಗ ಇನ್ನೂ ಇದ್ದಾರೋ ಹೋಗಿಬಿಟ್ಟರೋ ಎಂಬಷ್ಟು ತ್ರಾಸು. ಏನುಮಾಡೋಣ? ಸಹಿಸಲೇ ಬೇಕಲ್ಲಾ? ಶಾನುಭಾಗ ಮಾಮನಿಗೆ ಬರುತ್ತಿದ್ದ ಪಿಂಚಣಿ ಎಂಟುನೂರೋ ಒಂಬೈನೂರೋ, ಅಷ್ಟೇ. ಮಗನಿಗೆ ಸಿಗುತ್ತಿದ್ದ ಸಂಬಳ ಒಂದೆರಡು ಸಾವಿರ ಇದ್ದಿತ್ತೋ ಏನೋ. ಅಷ್ಟರಲ್ಲೇ ಮೂವರ ಹೊಟ್ಟೆ-ಬಟ್ಟೆ-ಔಷಧ ಎಲ್ಲಾದಕ್ಕೂ ಆಗಬೇಕಿತ್ತು. ನನಗೆ ಅವರನ್ನೆಲ್ಲ ಕಂಡರೆ ಬಹಳ ನೋವೂ ಆಗುತ್ತಿತ್ತು. ಕೇವಲ ದುಡಿದದ್ದು ಮಾತ್ರ ನಮ್ಮದೇ? ದುಡಿಯುವ ದೈಹಿಕ ಆರೋಗ್ಯ, ಆಯುಷ್ಯ, ಅವಕಾಶ ಎಲ್ಲವನ್ನೂ ಜಗನ್ನಿಯಾಮಕ ಕೊಡಬೇಕಲ್ಲವೇ? ಬೇಸಿಗೆ-ಮಳೆ-ಚಳಿ ಮೂರೂ ಕಾಲಗಳಲ್ಲೂ ಶಾನಭಾಗ ಮಾಮನ ಮಗ ಹೊರಗೆ ಹೋಗುವಾಗ ಛತ್ರಿಯೊಂದು ಇದ್ದೇ ಇರುತ್ತಿತ್ತು; ಬಿಸಿಲಿಗೆ ಅದರ ಕಪ್ಪುಬಣ್ಣವೆಲ್ಲ ತಿರುಗಿ ಬಿಳಿಯ ಬಣ್ಣಕ್ಕೇ ತೀರಾ ಹತ್ತಿರವೆಂಬಷ್ಟು ಆಗಿಬಿಟ್ಟಿತ್ತು. ತಿಪ್ಪಾಭಟ್ಟರ ಕೊಡೆಯಂತೇ ಮಳೆಬಂದರೆ ನೀರೆಲ್ಲಾ ಒಳಗೋ ಹೊರಗೋ ಗೊತ್ತಿಲ್ಲ. ಕವಿಯೊಬ್ಬರು ಬಡತನವನ್ನೇ ಸುಖಿಸಿದ್ದನ್ನು ನೋಡಿ:

ತಿಪ್ಪಾ ಭಟ್ಟರ ಚಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆ ನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

ಎಂದು ಕವಿ ಹೇಳಿದ ಹಾಗೇ ಶಾನಭಾಗ ಮಾಮನ ಮಗನಲ್ಲಿರುವ ಕೊಡೆ ಸಹ ಅದೇ ರೀತಿಯದೇ ಆಗಿತ್ತೋ ಏನೋ, ಬಿಡಿಸಿ ಹಿಡಿದಾಗ ಅದರ ಅಂದವನ್ನು ನಾನು ನೋಡಲಾಗಿರಲಿಲ್ಲ, ಸಾರಿ. ಕಣ್ಣಿಗೊಂದು ಎಂಟಾಣೆ ಗಾಜಿನ ಸೋಡಾಬುಡ್ಡಿಯನ್ನು ಏರಿಸಿಕೊಂಡು ನಿತ್ಯವೂ ಎರಡೂ ಹೊತ್ತು ಕ್ಲಿನಿಕ್ಕಿಗೆ ಹೋಗಿಬರಬೇಕಾಗಿತ್ತು. ಬಹುಶಃ ಕಣ್ಣಿನ ನರದೌರ್ಬಲ್ಯ ಸಹ ಅನುವಂಶೀಯವಾಗಿಯೇ ಪ್ರಾಪ್ರವಾಗಿತ್ತೋ ಏನೋ. ಆದರೆ ಶಾನಭಾಗ ಮಾಮ ಅಷ್ಟು ದಪ್ಪದ ಸೋಡಾಬುಡ್ಡಿ ಬಳಸಿದ್ದನ್ನು ನಾನೆಂದೂ ನೋಡಿಲ್ಲ. ಅವರದೇನಿದ್ದರೂ ಗಾಂಧಿ ಕನ್ನಡಕ. ಬಡತನವಿದ್ದ ಕಾರಣಕ್ಕೋ ಏನೋ-ಗಾಂಧೀಜಿಯಂತೆಯೇ ಸರಳ ಜೀವನ.

ಇಂಥಾ ಶಾನಭಾಗ ಮಾಮನ ಮಗ ಮಳೆಗಾಲದಲ್ಲಿ ಒಂದು ದಿನ ಬರುವುದನ್ನು ದೂರದಿಂದ ನೋಡುತ್ತಿದ್ದೆ. ನಾವಿದ್ದ ಆ ಬಾಡಿಗೆಮನೆ ಎಕರೆಯಷ್ಟು ಖುಲ್ಲಾ ಜಾಗವನ್ನು ಹೊರಾವರಣದಲ್ಲಿ ಹೊಂದಿತ್ತು. ಸುತ್ತ ಕಲಿನ ಪಾಗಾರ. ಎರಡು ಪ್ರತ್ಯೇಕ ಮನೆಗಳು. ಮುಂದುಗಡೆ ಒಂದು ದಣಪೆ[ದಾಟಲು ಇರುವ ಜಾಗ]. ಹೇಳಿದೆನಲ್ಲಾ ಮಳೆಗಾಲದ ಒಂದು ದಿನ ಆತ ದಣಪೆಯ ಹತ್ತಿರ ನಿಂತಿರುವುದನ್ನು ನೋಡಿದೆ. ಕೆಲಸ ಮುಗಿಸಿ ಮನೆಗೆ ಬಂದಿರಬೇಕೆಂದು ಸುಮ್ಮನಾದೆ. ನನ್ನ ಕೆಲಸಕ್ಕೆ ತೆರಳಿದೆ. ಕಾಲುಗಂಟೆ ಬಿಟ್ಟು ಯಾಕೋ ಮತ್ತೊಮ್ಮೆ ಹೊರಗೆ ಬಂದು ನೋಡಿದರೆ ಆತ ಅಲ್ಲೇ ನಿಂತಿದ್ದ. ಏನೋ ಸಹಾಯವನ್ನು ನಿರೀಕ್ಷಿಸುವ ಹಾಗಿತ್ತು. ಆದರೆ ಆತನ ಕಣ್ಣು ನನಗೆ ಕಾಣುತ್ತಿರಲಿಲ್ಲ. ಸೋಡಾಬುಡ್ಡಿಯಲ್ಲಿ ಆತನಿಗೆ ನಾನು ಕಾಣುತ್ತಿದ್ದೆ. "ಉಂ ಬೆಬ್ಬೋ ಬೆಬ್ಬೋ ಬೆಬ್ಬೋ" ಎಂದು ಕೂಗುತ್ತಿದ್ದ. ನನಗೆ ಕೊಂಕಣಿಯ ಆ ಪದದ ಅರ್ಥ ಗೊತ್ತಿರಲಿಲ್ಲ. ಯಾವುದೋ ನಾಯಿಯಿರಬೇಕು-ಬೌ ಬೌ ಇದೆಯೆನ್ನುತ್ತಿದ್ದಾನೇನೋ  ಅಂದುಕೊಂಡೆ; ಕ್ಷಣಕಾಲ ಮತ್ತೂ ಹಾಗೆ ನೋಡುತ್ತಲೇ ಇದ್ದೆ. ಯಾವ ನಾಯಿಯ ಸುಳಿವೂ ಅಲ್ಲಿರಲಿಲ್ಲ. ಹೋಗಿ ನೋಡಿದೆ: ದಣಪೆಯ ಮಧ್ಯಭಾದಲ್ಲೊಂದು ದೊಡ್ಡ ಕಪ್ಪೆ ಕುಳಿತುಬಿಟ್ಟಿತ್ತು. [ಕೊಂಕಣಿಯಲ್ಲಿ ಕಪ್ಪೆಗೆ ’ಬೆಬ್ಬೋ’ ಎನ್ನುತ್ತಾರೆ ಎಂಬುದು ಆಗಲೇ ಗೊತ್ತಾಗಿದ್ದು.]ಬೆಬ್ಬೋವನ್ನು ಕಂಡವನೇ ಬೊಬ್ಬೆ ಹೊಡೆಯಲು ಆರಂಭಿಸಿಬಿಟ್ಟಿದ್ದ! ಅಕಸ್ಮಾತ್ ಬೆಬ್ಬೋವನ್ನು ಕೆಣಕಿ ಸರಕ್ಕನೆ ಅದು ಮೈಮೇಲೆ ಹಾರಿಬಿಟ್ಟರೆ!ಯಾರಿಗೆ ಬೇಕು ಫಜೀತಿ ಎಂಬುದು ಆತನ ಅನಿಸಿಕೆ. ನಾನು ಹೋಗಿ, ಆತನನ್ನು ಪಕ್ಕಕ್ಕೆ ಸರಿಸಿ, ಕಾಲು ಬಡಿದು ಕಪ್ಪೆಯನ್ನು ಹಾರಿಸದಿದ್ದರೆ ಆ ದಿನ ಅದೆಷ್ಟು ಹೊತ್ತು ಅಲ್ಲೇ ನಿಂತಿರುತ್ತಿದ್ದನೋ ಪುಣ್ಯಾತ್ಮ! ಯಾಕೆಂದರೆ ಆ ದಿನ ಶಾನಭಾಗ ಮಾಮ ಮನೆಯಲ್ಲಿರಲಿಲ್ಲ, ಹೊರಗೆಲ್ಲೋ ಹೋಗಿದ್ದ. ಕೆಲವು ಜನರಲ್ಲಿ ಎಷ್ಟು ಅಧೈರ್ಯ ನೋಡಿ. ಲೋಕದ ಜನಜೀವನೇ ಹಾಗೆ; ಒಂದಿದ್ದರೆ ಒಂದಿರುವುದಿಲ್ಲ. ಆದರೆ ಶಾನಭಾಗಮಾಮನ ಮನೆಯಲ್ಲಿ ಎರಡೂ ಇರಲಿಲ್ಲ-ಸಿರಿವಂತಿಕೆಯೂ ಇರಲಿಲ್ಲ, ಆರೋಗ್ಯವಂತ, ಸದೃಢ ಮಕ್ಕಳೂ ಇರಲಿಲ್ಲ.

ಜನನೀಂ ಜನ್ಮಸೌಖ್ಯಾನಾಂ ವರ್ಧಿನೀ ಕುಲಸಂಪದಾಂ |
ಪದವೀಂ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಪಡೆದು ಬಂದಿದ್ದನ್ನು ಮನುಷ್ಯ ಅನುಭವಿಸಲೇ ಬೇಕೆಂಬುದನ್ನು ನಾನು ಹೇಳಲು ಆರಂಭಿಸಿದ್ದು ಆ ಕಾಲದಿಂದಲೇ. ಲೋಕದ ವ್ಯಾವಹಾರಿಕ ಜಂಜಾಟಗಳು, ಇಲ್ಲಿನ ಬದುಕಿನ ಬಿಸಿ ನನಗೆ ತಟ್ಟಲಾರಂಭಿಸಿದ್ದು ಅದೇ ಸಮಯದಿಂದಲೇ. ಲೋಕ ನಾವೆಣಿಸಿದ ರೀತಿಯಲ್ಲಿ ಇರುವುದಿಲ್ಲ ಎಂಬ ಅರಿವುಂಟಾಗಿದ್ದು ಸಹ ಅಂದಿನಿಂದಲೇ. ನನ್ನಲ್ಲಿ ಹೇರಳ ಹಣವಿದ್ದರೆ ಒಂದಷ್ಟನ್ನು ಶಾನಭಾಗ ಮಾಮನಿಗೆ ಕೊಡಬಹುದಿತ್ತು; ಯಾಕೆಂದರೆ ಅವರು ಅಷ್ಟು ಒಳ್ಳೆಯವರು, ಅಷ್ಟು ಸಂಭಾವಿತರು, ಅಷ್ಟು ಸುಸಂಸ್ಕೃತರು, ಅಷ್ಟು ನಿಸ್ಪೃಹರು. ಔಷಧಕ್ಕೆ ಖರ್ಚಿಗಿಲ್ಲದೇ ಕೆಲವು ದಿನಗಳನ್ನು ಕಳೆದರೇನೋ ಎಂಬಂತಹ ಭಾವನೆಗಳೆಲ್ಲಾ ನನ್ನಲ್ಲಿ ಕೆರಳಿದಾಗ, ಅವರಲ್ಲಿ ನಾನು ಕೇಳಿದ್ದೂ ಇದೆ; ಆದರೆ ಆಗಲೇ ಹೇಳಿದೆನಲ್ಲಾ...ಭಯಂಕರ ಸ್ವಾಭಿಮಾನಿ; ಔಷಧವಿಲ್ಲದೇ ಸತ್ತರೂ ಬೇಜಾರಿಲ್ಲ ಇನ್ನೊಬ್ಬರಿಂದ ಪಡೆಯಬಾರದೆಂಬ ಮನೋಧರ್ಮ. 

ಇಷ್ಟೆಲ್ಲ ಕಷ್ಟಗಳ ನಡುವೆಯೂ ಜಾತೀಬಾಂಧವರು ನಮ್ಮ ಶಾನಭಾಗಮಾಮನಿಗೆ ಯಾವ ಸಹಾಯವನ್ನೂ ಮಾಡುತ್ತಿರಲಿಲ್ಲ ಬಿಡಿ. ಜಾತಿಗೀತಿ ಎಲ್ಲ ಒಂಥಾರಾ ಹಾಗೇನೆ. ಅದೆಲ್ಲಾ ಇರಬೇಕೋ ಇರಬೇಕು-ಅದನ್ನೇ ನೆಚ್ಚಿಕೊಂಡು ಕುಳಿತರೆ ಯಾವ ಕೆಲಸವೂ ಸಾಧ್ಯವಾಗದು. ನನ್ನ ಜೀವನಾನುಭವದಲ್ಲಿ ಇದುವರೆಗೆ ನಾನು ಅದೆಷ್ಟೋ ಸಾವಿರ ಜನರೊಡನೆ ಒಡನಾಡಿದ್ದೇನೆ. ಜಾತಿಯ ಪ್ರಶ್ನೆಯೇ ಇಲ್ಲ. ಉತ್ತಮರು-ಮಧ್ಯಮರು-ಅಧಮರು ಎಂಬುದು ಸ್ವಭಾವದಿಂದ ಗೊತ್ತಾಗುತ್ತದೆ-ಅದೇ ನಿಜವಾದ ಪ್ರಮಾಣ. ಎಲ್ಲಾ ಜಾತಿಗಳಲ್ಲೂ ಈ ಮೂರೂ ಜಾತಿಗಳಿವೆ. ಈ ಮೂರು ಜಾತಿಗಳೇ ಜೀವನವನ್ನು ನಿರ್ಧರಿಸುವಂಥವು. ಈ ಮೂರು ಜಾತಿಗಳಲ್ಲಿ ಶಾನಭಾಗ ಮಾಮನದ್ದು ಮೊದಲ ಜಾತಿ-ಉತ್ತಮ. ಸಾತ್ವಿಕರಾಗಿದ್ದ ಅಪ್ಪ-ಅಮ್ಮ-ಮಗನಿಗೆ ನಿತ್ಯ ಟೊಮ್ಯಾಟೋ ಸಾಸಿವೆಯೇ ಪ್ರಿಯವಾಗಿತ್ತು. ಇಂತಹ ಶಾನಭಾಗ ಮಾಮ ಕಷ್ಟಗಳನ್ನೆಲ್ಲ ಮರೆಯಲು ಗುರುವಿಗೆ ಶಿಷ್ಯನಂತಿದ್ದ ನನ್ನನ್ನು ಹತ್ತಿರ ಕೂರಿಸಿಕೊಂಡು ಕಥೆ ಹೇಳುತ್ತಿದ್ದ.  

ಮಣಕಿ ಗ್ರೌಂಡು ಕುಮಟಾದಲ್ಲಿ ಸಿಕ್ಕಾಪಟ್ಟೆ ಫೇಮಸ್ಸು; ಬೆಂಗಳೂರಿನಲ್ಲಿ ಅರಮನೆ ಮೈದಾನ ಇದ್ದಾಹಾಗೇ ಕುಮಟಾದಲ್ಲಿ ಅದೇ ಬಹುದೊಡ್ಡ ಮೈದಾನ. ಅಲ್ಲಿನ ಪ್ರಾದೇಶಿಕ ರೋಚಕ ಕಥೆಗಳು ಒಂದೆಡೆಗಾದರೆ, ಹೆರವಟ್ಟಾದ ಭಾಗದ ಕಥೆಗಳು, ಕೂಜಳ್ಳಿ-ವಾಲಗಳ್ಳಿ-ಕತಗಾಲ-ಕಾಗಾಲ-ಅಘನಾಶಿನಿ-ಹೆಗಡೆ ಹೀಗೇ ಸುತ್ತಲ ಎಲ್ಲಾ ಊರುಗಳ ಅಪರೂಪದ ಕಥೆಗಳನ್ನು ಮಾಮ ನನಗೆ ಹೇಳುವುದು ಅಭ್ಯಾಸವಾಗಿತ್ತು. ಹೇಳದಿದ್ದರೆ ಅವರಿಗೂ ಬೇಜಾರು; ಕೇಳದಿದ್ದರೆ ನನಗೂ ಬೇಜಾರು. ತಮಗೆ ತಿಳಿದ ಶಬ್ದಗಳಲ್ಲಿ ರಸವತ್ತಾಗಿ ಬಣ್ಣಿಸುತ್ತಿದ್ದ ಶಾನಭಾಗಮಾಮನ ಕಥೆಗಳನ್ನು ನಿತ್ಯವೂ ಸಂಧ್ಯಾವಂದನೆಯೆಂಬಂತೆ ಅರ್ಧತಾಸು ಕೇಳಲೇಬೇಕು. ರಜೆಯಿದ್ದರೆ ಅದು ತಾಸಿನವರೆಗೂ ವಿಸ್ತರಿಸಲ್ಪಡುತ್ತಿತ್ತು ಮಾರಾಯ್ರೆ.

ಹೀಗೆ ಒಂದು ದಿನ ಸ್ವಲ್ಪ ಒಣದ್ರಾಕ್ಷಿ ಹಿಡುಕೊಂಡು ಶಾನಭಾಗ ಮಾಮನಲ್ಲಿ ಕಥೆ ಕೇಳಲು ಹೋಗಿದ್ದೆ. "ಅರೇ ಭಟಮಾಮ್ ತೇ ಕಸಲ್ರೆ ಮಾರಾಯ? ಮಕ್ ನಕ ಮಕ್ ನಕ" [ಅರೇ ಭಟ್ ಮಾಮ್,(ಅವರು ತಮಾಷೆಗೆ ನನ್ನನ್ನು ಸಂಬೋಧಿಸುತ್ತಿದ್ದುದೇ ಹಾಗೆ)ಅದೆಂಥದೊ ಮಾರಾಯ? ನಂಗ್ ಬ್ಯಾಡ ನಂಗ್ ಬ್ಯಾಡ] ಅಂದರು. ನಾನು ಬಿಡ್ತೇನೆಯೇ? "ವೈನಿ, ತಗೊಳಿ" [ಅತ್ತಿಗೆ, ತಗೊಳಿ] ಅಂತ ಅವರ ಹೆಂಡತಿ ಕೈಲಿ ಕೊಟ್ಟು ಒಳಗೆ ಕಳಿಸುವುದರಲ್ಲಿ ಯಶಸ್ವಿಯಾದೆ. ಕಡುಬಡತನದಲ್ಲೂ ಸಹ ಏನೂ ಬೇಡವೆಂಬ ಭಾವನೆ ಅದೆಷ್ಟಿತ್ತು ಎಂದು ಹೇಳುವ ಸಲುವಾಗಿ ಈ ಸಂಗತಿಯನ್ನು ಹೇಳಬೇಕಾಯ್ತಷ್ಟೆ. ಅಂದಿನ ನಮ್ಮ ಕಥಾನಕ ಆರಂಭವಾಗಿತ್ತು: "ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ! ಎಲ್ಲಿ ಗೊತ್ತುಂಟೊ? ಬಸ್ತಿಪೇಟೆ ಆ ಸಣ್ಣ ಗುಡಿ ಇದ್ಯಲ್ಲಾ? ಅಲ್ಲಿಂದ ಹೊರಟು ಮೂರ್ಕಟ್ಟೆ ತನಕ ದಡದಡ ದಡದಡ ಓಡಾಡುದನ್ನ ನೋಡಿದ ಜನ ಇದ್ದಾರೆ. ಹಿಂದೆ ಯಾವ್ದೋ ಕಾಲ್ದಲ್ಲಿ ಯುದ್ಧ ಮಾಡಿದ ಸೈನಿಕ ಆಗಿದ್ನೋ ಏನೋ ಗೊತ್ತಿಲ್ಲ. ಅಲ್ಲಿ ಈ ರೀತಿ ನಡೆಯೂದಂತೂ ಗ್ಯಾರಂಟಿ. ಅಪ್ಪಿತಪ್ಪಿ ಅಂವ ಹೋಗುವಾಗ ಎದುರಿಗೆ ಸಿಕ್ಕದ್ರೆ ಬದುಕೂದೆ ಕಷ್ಟ ಅಂತಾರೆ."    

ಆ ಕಾಲದಲ್ಲಿ ಕುಮಟಾ-ಹೊನ್ನಾವರಗಳಂತಹ ನಮ್ಮ ಪಟ್ಟಣಗಳಲ್ಲಿ ರಾತ್ರಿ ಹತ್ತುಗಂಟೆಯ ನಂತರ ಥೇಟ್ ಹಳ್ಳಿಕೊಂಪೆಯ ವಾತಾವರಣ! ರಸ್ತೆಯಲ್ಲೆಲ್ಲ ನರಹುಳ ಬೇಕಂದ್ರೆ ಸಿಗ್ತಿರಲಿಲ್ಲ. ಹಳ್ಳಿಗಳಿಗೆ ಹೋಗುವ ಕಡೇ ಬಸ್ಸುಗಳು ಸಂಜೆ ೭ ಗಂಟೆಗೇ ಲಾಸ್ಟು. ಆಮೇಲೆ ಅಲ್ಲೇ ಇದ್ದ್ರೆ ಯಾರ್ದಾದ್ರೂ ಪರಿಚಯದವರ ಮನೆಲೋ ಲಾಡ್ಜ್ನಲ್ಲೋ ಉಳಕೋಬೇಕು. ಯಾರದೋ ಮನೇಲಿ ಉಳ್ಕೊಳ್ಳುದಕ್ಕೆ ಬೇಜಾರು, ಲಾಡ್ಜಿಗೆ ಸುಮ್ನೇ ದುಡ್ಡು ಹಾಳು! ಹೀಗಾಗಿ ಹಳ್ಳೀಜನ ಪಟ್ಟಣಗಳಲ್ಲಿ ಕೋರ್ಟು-ಕಚೇರಿ, ವಸ್ತ್ರ-ಬಟ್ಟೆ-ಜವಳಿ, ಕಿರಾಣಿ ಸಾಮಾನು ಇಂಥಾದ್ದೆಲ್ಲ ಕೆಲಸ ಇದ್ದ್ರೆ ಬೆಳಿಗ್ಗೆ ಫಸ್ಟ್ ಬಸ್ಸಿಗೇ ಹೋಗಿ ಆದಷ್ಟೂ ಬೇಗ ಮುಗಿಸಿಕೊಂಡು, ಸಂಜೆಯೊಳಗೆ ಊರು ಸೇರಿಕೊಳ್ತಿದ್ರು. ಪಟ್ಟಣಗಳಲ್ಲೇ ಇರೋ ಮಂದಿ ತಮ್ಮ ವ್ಯಪಾರ-ಸಾಪಾರ ಮುಗಿಸಿ, ತಕ್ಕಡಿ-ಕಲ್ಲು ಒಳಗೆ ಸರಿಸಿ, ಅಂಗಡಿ ಬಾಗಿಲುಹಾಕಿ ಮನೆ ಸೇರಿಕೊಂಡ್ರೆ ಮಾರನೇ ದಿನ ಹತ್ತುಗಂಟೆ ಮೇಲೇ ಮತ್ತೆ ಅವರ ಕೆಲಸ. ಇದು ಮಾಮೂಲೀ ರುಟೀನು. ಚಗತೆಗಿಡ [ತಗಟೆ ಸೊಪ್ಪು]ರಾತ್ರಿ ಹೊತ್ತಿನಲ್ಲಿ ಎರಡೂ ಭಾಗದ ಎಲೆಗಳನ್ನು ಮುಚ್ಚಿಕೊಳ್ಳುವಂತೇ ರಾತ್ರಿ ಮುಚ್ಚಿಕೊಳ್ಳುವ ಪಟ್ಟಣಗಳಲ್ಲಿ ಮಳೆಗಾಲ-ಚಳಿಗಾಲದಲ್ಲಂತೂ ಗಸ್ತು ತಿರುಗುವ ಪೋಲೀಸರೂ ಇರ್ತಿರಲಿಲ್ಲ. ಕುಮಟಾ ಪೋಲೀಸರಿಗೆ ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗುವುದು ಗೊತ್ತಿರ್ತದೆ ಬಿಡಿ. ಪೋಲೀಸರೇನು ಮನುಷ್ಯರಲ್ವೇ? ಅವರಿಗೂ ಮಕ್ಕಳು-ಮರಿಗಳು ಇದ್ದಾವೆ; ಒಂದೊಮ್ಮೆ ರಾತ್ರಿಯೆಲ್ಲಾ ತಿರುಗಿ ರುಂಡ ಇಲ್ದ ಸವಾರನ ಎದುರುಹಾಕಿಕೊಂಡ್ರು ಅಂತಿಟ್ಕೊಳಿ, ಏನಾದ್ರೂ ಹೆಚ್ಚು-ಕಮ್ಮಿ ಆದ್ರೆ ಅವರ ಸಂಸಾರದ ಗತಿ?

ವಿಷಯ ಹಾಗಿರಲಿ, ಇಂದು ಕುಮಟಾ-ಹೊನ್ನಾವರ ಎಲ್ಲಾ ಬದಲಾಗಿ ಹೋಗಿವೆ. ಅವುಗಳಿಗೂ ನಗರಗಳ ಲಕ್ಷಣ ಕ್ರಮೇಣ ಆವರಿಸಿಕೊಳ್ತಾ ಇದೆ. ಜನರಲ್ಲೂ ಮೊದಲಿನಷ್ಟ್ ಆತ್ಮೀಯ ಒಡನಾಟವಿಲ್ಲ;  ನವ [’ನಗ’]ನಾಗರಿಕತೆ ಜಾಗೃತವಾಗಿದೆ ಎಂದರ್ಥ! ಸರಕಾರ ಚತುಷ್ಪಥ ಮಾಡ್ತದಂತೆ. ಹಳ್ಳಿಹಳ್ಳಿಗಳಲ್ಲೂ ಬೇಕಾದಲ್ಲಿ ಬೇಡ್ದೇ ಇರುವಲ್ಲಿ ಎಲ್ಲಾ ಕಡೆಗೂ ರಸ್ತೆ, ತಾರು, ಬೋರು; ಓಡಾಡ್ತಾನೇ ಇರ್ತವೆ ಕಂತ್ರಾಟದಾರರ ಮತ್ತು ಅವರಿಗೆ ಕೆಲಸ ಕೊಡುವರರ ಕಾರು. ಶಾನಭಾಗ ಮಾಮ ಇಂದಂತೂ ಖಂಡಿತ ಬದುಕಿಲ್ಲ ಬಿಡಿ; ಅವರ ಹೆಂಡತಿಯೂ ಅಷ್ಟೆ. ಮಗ ಮಾತ್ರ ಅದೆಲ್ಲಿದ್ದಾನೋ ದೇವರಿಗಷ್ಟೆ ಗೊತ್ತು. ನಾನು ಕುಮಟಾಬಿಟ್ಟು ಬಹಳವರ್ಷವೇ ಕಳೀತು. ಅಂಥವರನ್ನೆಲ್ಲ ನೆನಪಿಸಿಕೊಳ್ಳುವುದೊಂದೇ ಉಳೀತು.   

Monday, November 11, 2013

ದೀಪಕ ರಾಗದ ಬೆನ್ನತ್ತಿ.......

ಚಿತ್ರಋಣ: ಅಂತರ್ಜಾಲ
ದೀಪಕ ರಾಗದ ಬೆನ್ನತ್ತಿ.......

ಮನಸ್ಸು ಉತ್ತರಭಾರತದ ದೇವಭೂಮಿಯೆಡೆಗೆ ತೆರಳಿದ್ದಾಗ, ಒಂದನೆಯ ಶತಮಾನಕ್ಕೂ ಮೊದಲು ಬದುಕಿದ್ದನೆನ್ನಲಾದ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ನೆನಪಿಸಿಕೊಳ್ಳತೊಡಗಿತ್ತು. ಆತನ ಸಾಧನೆ, ಪರಾಕ್ರಮಗಳು ಕಮ್ಮಿಯೇನಲ್ಲ.

ಭವ್ಯ ಭಾರತದ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪೌರಾಣಿಕ-ಚಾರಿತ್ರಿಕ ವ್ಯಕ್ತಿಯಾಗಿ ಹೊರಹೊಮ್ಮಿರುವ ರಾಜಾ ವಿಕ್ರಮಾದಿತ್ಯ ಬಹು ಜನಪ್ರಿಯ ವ್ಯಕ್ತಿ. ವಿಕ್ರಮಾದಿತ್ಯನ ಹೆಸರಿನಲ್ಲಿ ಅನೇಕ ಕಥೆಗಳು ಸೃಷ್ಟಿಯಾಗಿದ್ದರೂ, ಆ ಹೆಸರಿನ ಜೊತೆ ಘಟನೆ ಅಥವಾ ಸ್ಮಾರಕಗಳು ಸಂಯೋಗಗೊಂಡಿದ್ದರೂ, ಅವುಗಳಿಗೆ ಯಾವುದೇ ಐತಿಹಾಸಿಕ ವಿವರಗಳು ಸಿಗುವುದಿಲ್ಲವಾದ್ದರಿಂದ ವಿಕ್ರಮಾದಿತ್ಯನ ಕಾಲ ಇಂಥಾದ್ದೇ ಎಂಬುದನ್ನು ಆಧುನಿಕ ಇತಿಹಾಸಕಾರರು ಹೇಳಲು ಮುಂದಾಗುವುದಿಲ್ಲ. ಸಂಸ್ಕೃತದ ಎರಡು ಪ್ರಸಿದ್ಧ ಕಥಾನಕಗಳಾದ 'ವೇತಾಲ ಪಂಚವಿಂಶತಿ' ಅಥವಾ 'ಬೈತಾಳ್ ಪಚಿಸಿ' ಮತ್ತು 'ಸಿಂಹಾಸನ-ದ್ವಾತ್ರಿಂಶಿಕಾ' ಅಥವಾ 'ಸಿಂಹಾಸನ್ ಬತ್ತೀಸೀ' ಎಂದು ಕರೆಯಲ್ಪಡುವ ಗ್ರಂಥಗಳು ವಿವಿಧ ಬರಹಗಾರರ ನಿರೂಪಣೆಗಳಲ್ಲಿ ಸಂಸ್ಕೃತ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುತ್ತವೆ.

ವೇತಾಲ ಪಂಚವಿಂಶತಿಯಲ್ಲಿ ಇಪ್ಪತ್ತೈದು ಕಥೆಗಳಿದ್ದು, ಅದರಲ್ಲಿ, ರಾಜ ಪಿಶಾಚಿಯನ್ನು ಹಿಡಿದಿಟ್ಟುಕೊಂಡಾಗ,  ಆ ಪಿಶಾಚಿ ಒಗಟಿನಂಥ ಕಥೆಯನ್ನು ಹೇಳಿ ಅಂತ್ಯದಲ್ಲಿ ರಾಜನಿಗೆ ಪ್ರಶ್ನೆಯೊಂದನ್ನು ಮುಂದಿಡುತ್ತದೆ. ವಾಸ್ತವಾಗಿ ಇದಕ್ಕೂ ಹಿಂದೆ ಸಾಧುವೊಬ್ಬರು ರಾಜನನ್ನು ಉದ್ದೇಶಿಸಿ, ತುಟಿ ಎರಡು ಮಾಡದೆ, ಒಂದು ಮಾತೂ ಆಡದೆ, ಆ ಪಿಶಾಚಿಯನ್ನು ಕರೆತರಲು ಹೇಳಿರುತ್ತಾರೆ; ಮಾತನಾಡಿದಲ್ಲಿ ಆ ಪಿಶಾಚಿ ತನ್ನ ಸ್ಥಳಕ್ಕೆ ಹಾರಿ ಹೋಗಿಬಿಡುತ್ತದೆ ಎಂದೂ ಎಚ್ಚರಿಸಿರುತ್ತಾರೆ. ರಾಜನಿಗೆ ಉತ್ತರ ಗೊತ್ತಿಲ್ಲದಿದ್ದರೆ ಮಾತ್ರ ಸುಮ್ಮನಿರಬೇಕಾಗುತ್ತದೆ ಅಥವಾ ಅವನ ತಲೆ ಸಾವಿರ ಹೋಳಾಗುತ್ತದೆ. ದುರಾದೃಷ್ಟವಶಾತ್ ರಾಜನಿಗೆ ಪ್ರತಿಯೊಂದು ಉತ್ತರವೂ ಗೊತ್ತಿತ್ತು ಆದುದರಿಂದ ಉತ್ತರಿಸುವ ಮುಖಾಂತರ ಪಿಶಾಚಿ ಮರಳಿ ಮರದ ಕೊಂಬೆಗೆ ಸೇರುತ್ತಿತ್ತು!  ಇಪ್ಪತ್ನಾಲ್ಕು ಸಾರಿ ನಡೆದು ಕೊನೆಯ ಕಥೆಯ ಪ್ರಶ್ನೆ ವಿಕ್ರಮಾದಿತ್ಯನಿಗೆ ಒಗಟಾಗಿ ಉಳಿಯಿತು. ಕಥಾ-ಸರಿತ್ಸಾಗರದಲ್ಲಿ ಈ ಕಥೆಗಳ ನಿರೂಪಣೆಯನ್ನು ಕಾಣಬಹುದಾಗಿದೆ.

ಇಪ್ಪತ್ತೈದನೆಯ ಕಥೆಯಾಗಿ ಬೇತಾಳ ರಾಜಾ ವಿಕ್ರಮನಿಗೆ ಹೀಗೆ ಹೇಳುತ್ತದೆ: ಘನಘೋರವಾಗಿ ನಡೆದು ಮುಗಿದ ಯುದ್ಧರಂಗಕ್ಕೆ ಅಪ್ಪ-ಮಗ ಇಬ್ಬರು ವ್ಯಕ್ತಿಗಳು ಹೋಗುತ್ತಾರೆ. ಅಲ್ಲಿ ಆ ರಾಜ್ಯದ ರಾಣಿ ಮತ್ತು ರಾಜಕುಮಾರಿ ಇನ್ನೂ ಜೀವದಿಂದಿರುತ್ತಾರೆ. ತಮ್ಮೊಳಗೇ ಮಾತನಾಡಿಕೊಂಡು ಅಪ್ಪ ರಾಜಕುಮಾರಿಯನ್ನೂ ಮತ್ತು ಮಗ ರಾಣಿಯನ್ನೂ ಕೈಹಿಡಿದು ತಮ್ಮ ಮನೆಗೆ ಕರೆತಂದು, ನಂತರ ಮದುವೆಯಾಗುತ್ತಾರೆ. ಕಾಲಾನಂತರದಲ್ಲಿ ಮಗ-ರಾಣಿಯರ ದಾಂಪತ್ಯದಿಂದ ರಾಣಿ ಗಂಡುಮಗುವೊಂದನ್ನು ಹಡೆಯುತ್ತಾಳೆ. ಅದರಂತೆ ಅಪ್ಪ-ರಾಜಕುಮಾರಿಯರ ದಾಂಪತ್ಯದಿಂದ ರಾಜಕುಮಾರಿಗೊಬ್ಬಳು ಮಗಳು ಜನಿಸುತ್ತಾಳೆ. ನವಜಾತ ಶಿಶುಗಳ ಸಂಬಂಧವೆಂಥದು ಎಂಬುದನ್ನು ವಿವರಿಸುವಂತೇ ಬೇತಾಳ ರಾಜನಿಗೆ ತಾಕೀತು ಮಾಡುತ್ತದೆ. ರಾಜಾ ವಿಕ್ರಮನಿಗೆ ಈ ಸಮಸ್ಯೆಗೆ ಮಾತ್ರ ಉತ್ತರ ನಿಜಕ್ಕೂ ತಿಳಿದಿರಲಿಲ್ಲ. ಆತ ಮೌನಕ್ಕೆ ಶರಣಾದ. ಬೇತಾಳ ಅವನ ಹೆಗಲೇರಿ ಸಾಗಿಬಂತು; ಪ್ರೀತಿಯಿಂದ ತನ್ನ ಜನ್ಮವೃತ್ತಾಂತವನ್ನೆಲ್ಲ ರಾಜ ವಿಕ್ರಮಾದಿತ್ಯನಿಗೆ ಅರುಹಿತು:

ಹಿಂದೆ ಬೇತಾಳನ ಪಾಲಕರಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನನ್ನು ಭೇಟಿಮಾಡಿ ಆತನ ಆಶೀರ್ವಾದದಿಂದ ತನ್ನಪ್ಪ-ಅಮ್ಮ ಇಬ್ಬರು ಮಕ್ಕಳನ್ನು ಪಡೆದರೆಂದೂ ಒಬ್ಬ ತಾನು, ಇನೊಬ್ಬ ತನ್ನ ಸಹೋದರನೆಂದೂ ಹೇಳಿತು. ಮಕ್ಕಳು ಬೆಳೆಯುತ್ತಿರುವಾಗ ವಿದ್ಯಾಭ್ಯಾಸಕ್ಕಾಗಿ ಆ ತಾಂತ್ರಿಕ ತನ್ನಲ್ಲಿ ಬಿಡುವಂತೇ ಪಾಲಕರಿಗೆ ಹೇಳಿದನಂತೆ. ಅದರಂತೇ ಮಕ್ಕಳಿಬ್ಬರನ್ನೂ ಆ ಪಾಲಕರು ತಾಂತ್ರಿಕನಲ್ಲಿಗೆ ಕಳುಹಿಸಿದರು. ಬೇತಾಳನಿಗೆ ಜಗತ್ತಿನ ಸಕಲ ವಿದ್ಯೆಗಳನ್ನೂ ಹೇಳಿಕೊಟ್ಟ ಮಾಂತ್ರಿಕ, ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದನಂತೆ. ಬೇತಾಳನ ಸಹೋದರನಿಗೆ ಕಡಿಮೆ ವಿದ್ಯೆಗಳನ್ನು ಕಲಿಸಿಕೊಟ್ಟು ಆತನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಸಹೋದರನನ್ನು ಪಾಲಕರಿಗೆ ಮರಳಿಸಿ, ತನ್ನನ್ನು ಮಾಂತ್ರಿಕ ತನ್ನ ದೇವತೆಗೆ ಬಲಿಕೊಡಬೇಕೆಂದು ಬಯಸಿದ್ದ ಎಂಬುದನ್ನು ಬೇತಾಳ ಹೇಳಿತು. "ರಾಜನ್, ಸಮೀಪಿಸುತ್ತಿರುವ ಮಾಂತ್ರಿಕನ ಮನೆಯೊಳಗೆ ಹೋದಾಗ, ಅಲ್ಲಿ ನಿನಗೂ ಸಹಿತ ತಲೆಯನ್ನು ಬಗ್ಗಿಸುವಂತೇ ಆ ಮಾಂತ್ರಿಕ ಹೇಳುತ್ತಾನೆ. ತಲೆ ಬಗ್ಗಿಸಿದೆಯಾದರೆ ನಿನ್ನನ್ನೂ ಬಲಿಹಾಕಿಬಿಡುತ್ತಾನೆ. ನೀನೊಂದು ಉಪಾಯಮಾಡು: ಹೇಗೆ ಬಗ್ಗಬೇಕೆಂದು ಕೇಳುತ್ತಾ ಆತ ತಲೆಯನ್ನು ಬಗ್ಗಿಸಿದಾಗ ನೀನೇ ಆತನನ್ನು ಬಲಿಹಾಕಿಬಿಡು." ಎಂಬ ಸಲಹೆಯನ್ನಿತ್ತು ಸುಮ್ಮನಾಯಿತು. 

ರಾಜಾ ವಿಕ್ರಮಾದಿತ್ಯ ಬೇತಾಳದ ಆದೇಶದಂತೇ ನಡೆದುಕೊಂಡ. ಅದರ ಪರಿಣಾಮವಾಗಿ ಇಂದ್ರ ಮತ್ತು ಕಾಳೀ ದೇವಿ ರಾಜನಿಗೆ ಆಶೀರ್ವದಿಸಿದರು. ಖುಷಿಗೊಂಡ ಬೇತಾಳ "ರಾಜನೇ ನಿನಗೊಂದು ವರವನ್ನು ಕೊಡುತ್ತೇನೆ. ಏನು ಬೇಕು ಕೇಳು" ಎಂದಿತು. "ಮಾಂತ್ರಿಕನನ್ನು ಪಾಪಮುಕ್ತಗೊಳಿಸಿ, ಆತನ ಮನಸ್ಸನ್ನು ಶುದ್ಧೀಕರಿಸಿ ಆತನಿಗೆ ಜೀವದಾನ ನೀಡುವಂತೆ ಮಾಡು" ಎಂದು ರಾಜಾ ವಿಕ್ರಮ ಬೇತಾಳನಲ್ಲಿ ಕೇಳಿದ. ಮಾಂತ್ರಿಕನಿಗೆ ಮರುಜೀವ ನೀಡಿದುದರ ಜೊತೆಗೆ, ರಾಜಾ ವಿಕ್ರಮನ ಅತ್ಯುತ್ತಮ ಸ್ವಭಾವವನ್ನು ಮೆಚ್ಚಿದ ಬೇತಾಳವು, ಮುಂದೆಂದಾದರೂ ತನ್ನ ಅಗತ್ಯ ಬಿದ್ದಲ್ಲಿ, ನೆನೆದಾಗ ಬಂದು ಸಹಾಯಮಾಡುವೆನೆಂದು ರಾಜನಿಗೆ ವಾಗ್ದಾನ ಮಾಡಿತು.           

ಸಿಂಹಾಸನಕ್ಕೆ ಸಂಬಂಧಪಟ್ಟ ಈ ಕಥೆಗಳನ್ನು ವಿಕ್ರಮಾದಿತ್ಯನ ಸಿಂಹಾಸನಕ್ಕೆ ನಂಟು ಹಾಕಲಾಗಿದೆ. ಆದರೆ ಸಿಂಹಾಸನ ಕಳೆದು ಹೋಗಿತ್ತು, ಅನೇಕ ಶತಮಾನಗಳ ತರುವಾಯ ಧಾರ್ ನ ಪರಂಪರಾಗತ ರಾಜ, ರಾಜಾ ಭೋಜನು ಅದನ್ನು ಪತ್ತೆ ಹಚ್ಚಿದ. ಈ ಉತ್ತರೋತ್ತರ ರಾಜನೇ ಪ್ರಸಿದ್ಧನು ಮತ್ತು ಅವನು ಸಿಂಹಾಸನವನೇರುವ ಪ್ರಯತ್ನಗಳೇ ಕಥೆಗಳ ಕಟ್ಟು. ಈ ಸಿಂಹಾಸನವನ್ನು 32 ಹೆಣ್ಣು ಶಿಲೆಗಳೊಡನೆ ಸಿಂಗರಿಸಲಾಗಿದೆ, ಆ ಶಿಲೆಗಳು ಮಾತನಾಡಬಲ್ಲವು, ತಾವು ಹೇಳುವ ಕಥೆಗಳಲ್ಲಿ ಬರುವ ರಾಜ ವಿಕ್ರಮಾದಿತ್ಯನಷ್ಟು ಉದಾತ್ತವಾದವರು ಯಾರಾದರೂ ಇದ್ದರೆ ಮಾತ್ರ ಸಿಂಹಾಸನವೇರಬಹುದೆಂದು ಸವಾಲನ್ನು ಒಡ್ದುತ್ತವೆ. ಇದು ವಿಕ್ರಮಾದಿತ್ಯನ 32 ಪ್ರಯತ್ನಗಳಿಗೆ ಅಂದರೆ 32 ಕಥೆಗಳಿಗೆ ಕಾರಣವಾಗುತ್ತದೆ ಮತ್ತು ಪ್ರತಿ ಬಾರಿಯೂ ಭೋಜ ತನ್ನ ನಿಕೃಷ್ಟತೆಯನ್ನು ಒಪ್ಪಿಕೊತ್ತಾನೆ. ಅಂತಿಮವಾಗಿ, ಆ ಶಿಲೆಗಳು, ರಾಜಾ ಭೋಜನು ವಿನಮ್ರ ಭಾವನೆ ತಾಳುವುದರಿಂದ, ಸಂತಸಗೊಂಡು ಅವನನಿಗೆ ಸಿಂಹಾಸನವನ್ನೇರಲು ಅವಕಾಶ ಕೊಡುತ್ತವೆ. ಈ ಕಥೆಗಳಲ್ಲಿ ಕಂಡುಬರುವ ನೀತಿಸೂತ್ರಗಳನ್ನು ಗಮನಿಸಿದರೆ ಪೂರ್ವಜರ ಕರ್ತೃತ್ವ ಶಕ್ತಿ ಮತ್ತು ಉನ್ನತ ಮೌಲ್ಯಗಳ ಅರಿವು ನಮಗಾಗುತ್ತದೆ.

ರಾಜಾ ವಿಕ್ರಮಾರ್ಕನಿಗೆ ಶನಿಮಹಾತ್ಮ ತಗುಲಿಕೊಂಡು ಕಾಡಿದ ಕಥೆಯನ್ನು ಬಹುಸಂಖ್ಯಾಕರು ಕೇಳಿರುತ್ತೀರಿ. ವಿಕ್ರಮಾದಿತ್ಯನ ನ್ಯಾಯನಿರ್ಣಯ-ಸಿಂಹಾಸನದ ಬಗ್ಗೆ ಕೂಡ ಅನೇಕ ಕಥೆಗಳನ್ನು ತಾವೆಲ್ಲ ಕೇಳಿರುತ್ತೀರಿ. ಅದೇ ವಿಕ್ರಮಾದಿತ್ಯ ಮಹರ್ಷಿ ವ್ಯಾಸರು ಬರೆದ ಭವಿಷ್ಯ ಪುರಾಣದಲ್ಲೂ ಕಾಣಸಿಗುತ್ತಾನೆ. ಬಹುಶಃ ವ್ಯಾಸರು ಭವಿಷ್ಯದಲ್ಲಿ ನಡೆಯುವ ಘಟನೆಗಳಲ್ಲಿ ಹಲವನ್ನು ಪೇರಿಸಿ ’ಭವಿಷ್ಯ ಪುರಾಣ’ವನ್ನು ಬರೆದಿದ್ದಾರೆ ಎನಿಸುತ್ತದೆ. ಬಹುದೊಡ್ಡ ಚಕ್ರವರ್ತಿಯಾಗಿದ್ದ ವಿಕ್ರಮಾದಿತ್ಯನ ಆಸ್ಥಾನದಲ್ಲಿ,

धन्वन्तरिः क्षपणको मरसिंह शंकू वेताळभट्ट घट कर्पर कालिदासाः।
ख्यातो वराह मिहिरो नृपते स्सभायां रत्नानि वै वररुचि र्नव विक्रमस्य॥

ಧನ್ವಂತರೀ ಕ್ಷಪಣಕೋಮರಸಿಂಹ ಶಂಕು ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
ಖ್ಯಾತೋ ವರಾಹ ಮಿಹಿರೋ ನೃಪತೇ ಸ್ಸಭಾಯಾಂ ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ||

ಮಹಾಕವಿಗಳಾದ ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರರುಚಿ ಮತ್ತು ವರಾಹಮಿಹಿರ ಎಂಬ "ನವರತ್ನಗಳು" ಆಸ್ಥಾನ ಕವಿಗಳಾಗಿದ್ದರಂತೆ!! ಅಂತಹ ದೊರೆಯನ್ನು ಪಡೆಯಲು ಅವರು ಅದೆಷ್ಟು ಪುಣ್ಯಮಾಡಿರಬೇಡ! ವರಾಹಮಿಹಿರ ಅಂದಿನ ಪ್ರಖ್ಯಾತ ಜ್ಯೋತಿಷಿಯಾಗಿದ್ದ-ಖಗೋಲ ಗಣಿತಜ್ಞನಾಗಿದ್ದ ಎಂದು ತಿಳಿದುಬರುತ್ತದೆ. ಈತ ವಿಕ್ರಮಾದಿತ್ಯನ ಮಗನ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದನಂತೆ! ಹದಿನಾರು ಚರಣಗಳಿಂದ ಕೂಡಿದ ’ನೀತಿ ಪ್ರದೀಪ’ವೆಂಬ ಕೃತಿಯನ್ನು ಮಾಘಬ್ರಾಹ್ಮಣನಾದ ವೇತಾಲಭಟ್ಟ ರಚಿಸಿದ್ದನಂತೆ. ಬೇತಾಳನ ಕಥೆಗಳನ್ನೂ ಸಹ ಆತನೇ ರಚಿಸಿದನೋ ತಿಳಿಯದು. ಸಕಾ ಎಂಬಾತನನ್ನು ಜಯಿಸಿದ್ದ ನೆನಪಿಗೆ ಹೊಸ ಶಕೆಯನ್ನೇ ಆರಂಭಿಸಿದವನು ರಾಜಾ ವಿಕ್ರಮ; ಅದನ್ನೇ ನಾವು ಇಂದಿಗೂ ವಿಕ್ರಮಾರ್ಕ ಶಕೆ ಎನ್ನುತ್ತೇವೆ. ಈಗ ನಾವು ಶ್ರೀವಿಕ್ರಮಾರ್ಕ ಶಕ 2069-70ರಲ್ಲಿದ್ದೇವೆ. ಅಂದರೆ ಇಂದಿಗೆ 2070 ವರ್ಷಗಳ ಹಿಂದೆ ರಾಜಾ ವಿಕ್ರಮಾದಿತ್ಯ ಈ ಭರತಖಂಡದಲ್ಲಿ ಬಹುದೊಡ್ಡ ಸಂಸ್ಥಾನಿಕನಾಗಿ ರಾಜ್ಯಭಾರ ಮಾಡುತ್ತಿದ್ದ ಎಂಬುದು ಖಚಿತಗೊಳ್ಳುತ್ತದೆ.

ಕಾಳಿದಾಸ ಭೋಜರಾಜನ ಆಸ್ಥಾನದಲ್ಲೂ ಇದ್ದನಲ್ಲವೇ? ಹಾಗಾದರೆ ಅಂದಿನವರ ಆಯುರ್ಮಾನ ಬಹಳ ಹೆಚ್ಚಿಗೆ ಇದ್ದಿರಬೇಕು. ಇಂದಿಗೂ ೧೧೦-೧೩೦ ವರ್ಷಗಳ ಕಾಲ ಬದುಕಿರುವವರು ಇದ್ದಾರಲ್ಲ. ಉತ್ತರಭಾರತದಲ್ಲಿ ಸಾಧುವೊಬ್ಬನಿಗೆ ಆದಾಗಲೇ ಆರುನೂರು ವರ್ಷಗಳಿಗೂ ಅಧಿಕ ಆಯಸ್ಸು ಆಗಿದೆಯಂತೆ. ಅಂತೆಯೇ ಕಾಳಿದಾಸ ಮೊದಲು ವಿಕ್ರಮಾರ್ಕನಲ್ಲಿ ಅಶ್ರಯಪಡೆದಿದ್ದು, ಅವನ ಕಾಲಾನಂತರದಲ್ಲಿ ಭೋಜರಾಜನ ಆಸ್ಥಾನದಲ್ಲೂ ಇದ್ದಿರಬೇಕು. ಇತಿಹಾಸ ಸಂಶೋಧಕರಿಗೆ ಇವೆಲ್ಲ ಹೊಸ ಹೊಸ ಸರಕುಗಳಾಗುತ್ತವೆ ಮತ್ತು ಸವಾಲನ್ನೊಡ್ಡುತ್ತವೆ.

ಶನಿಪೀಡಿತನಾಗಿ ನಂದಿಶೆಟ್ಟಿಯ ಮನೆಯಲ್ಲಿ ಆಶ್ರಯಪಡೆದಿದ್ದ ರಾಜಾ ವಿಕ್ರಮಾದಿತ್ಯ ತಾನು ಯಾರು ಎಂಬುದನ್ನು ನಂದಿಶೆಟ್ಟಿಗೆ ಹೇಳಿರಲಿಲ್ಲ. ಕೈಕಾಲುಗಳನ್ನು ಕಳೆದುಕೊಂಡ ದುರವಸ್ಥೆಯಲ್ಲಿ ಇನ್ನೊಬ್ಬರ ಸಹಕಾರವಿಲ್ಲದೇ ಓಡಾಡಲಾಗದ ದೈನ್ಯಾವಸ್ಥೆಯಲ್ಲಿ ನಂದಿಶೆಟ್ಟಿಯ ಮನೆಗೆ ಅನಿರೀಕ್ಷಿತವಾಗಿ ಸೇರಿಕೊಳ್ಳುವಂತಾಗಿತ್ತು. ತಿರುಗುವ ಗಾಣದ ನೊಗದಮೇಲೆ ಕುಳಿತ ರಾಜಾವಿಕ್ರಮ ತಾನನುಭವಿಸುತ್ತಿದ್ದ ದುಃಖದ ಸನ್ನಿವೇಶಗಳನ್ನು ಮತ್ತು ತನ್ನ ನೋವನ್ನು ಮರೆಯಲು ದೀಪಕರಾಗವನ್ನು ಹಾಡಿದ್ದನಂತೆ. ಹಾಗೆ ಆತ ದೀಪಕರಾಗವನ್ನು ಹಾಡಿದಾಗ ನಂದಿಶೆಟ್ಟಿಯ ಮಹಲಿನಲ್ಲಿ ದೀಪಗಳೆಲ್ಲ ತಂತಾನೇ ಉರಿದವು ಎಂಬುದು ಐತಿಹ್ಯ. ಇಂದಿಗೂ ದೀಪಕರಾಗವಿದೆ; ಆದರೆ ಆ ರಾಗವನ್ನು ಸಂಗೀತಗಾರರು ಯಾಕೋ ಅಷ್ಟಾಗಿ ಬಳಸುತ್ತಿಲ್ಲ. ದೀಪಕರಾಗಕ್ಕೆ ಹೊಂದುವ ಪದ್ಯಗಳ ರಚನೆಗಳೂ ಸಹ ತೀರಾ ಕಮ್ಮಿ ಪ್ರಮಾಣದಲ್ಲಿ ನಡೆದಿವೆ. ಪ್ರಸಕ್ತ ಸಂಗೀತದಲ್ಲಿ ಹೆಸರುಮಾಡಿರುವ ಭಾರತೀಯ ಕಲಾವಿದರು ವಿಕ್ರಮಾರ್ಕ ಹಾಡಿದ್ದ ದೀಪಕರಾಗವನ್ನು ಅಲ್ಲಲ್ಲಿ ಬಳಸುತ್ತಿರಬೇಕೆಂಬುದು ನನ್ನ ಆಗ್ರಹಪೂರ್ವಕ ವಿನಂತಿ.

ದೀಪಕರಾಗವನ್ನು ಹುಡುಕುತ್ತ ನಡೆದ ನನಗೆ ಸಿಕ್ಕಿದ್ದು ಒಂದೆರಡು ಹಾಡುಗಾರರ ಹಾಡುಗಳು ಮಾತ್ರ. ಒಬ್ಬರು ಪಂಡಿತ್ ರಾಮ್ ಚತುರ್ ಮಲ್ಲಿಕ್ ಮತ್ತು ಇನ್ನೊಬ್ಬರು ಉಸ್ತಾದ್ ಗುಲಾಮ್ ಮುಸ್ತಾಫಾ ಖಾನ್. ಇನ್ನು ಕೆಲವರು ಬೆರಳೆಣಿಕೆಯ ಸಂಗೀತಗಾರರು ಅದನ್ನು ಹಾಡುತ್ತಾರೆ. ಯಾಕೆ ನಮ್ಮ ಸಂಗೀತಗಾರರು ಅದನ್ನು ಹಾಡುತ್ತಿಲ್ಲವೆಂಬುದು ಯಕ್ಷಪ್ರಶ್ನೆ. ಇನ್ನಾದರೂ ದೀಪಕರಾಗವನ್ನು ಊರ್ಜಿತಾವಸ್ಥೆಗೆ ತರಬೇಕು, ತಾವೂ ಬಳಸಿಕೊಂಡು ಮುಂದಿನ ನಮ್ಮ ಪೀಳಿಗೆಗೆ ಅದನ್ನು ಕಲಿಸಿಕೊಡಬೇಕು. ಮೇರುಸದೃಶ ವ್ಯಕ್ತಿತ್ವವನ್ನು ಹೊಂದಿದ್ದ ಚಕ್ರವರ್ತಿ ವಿಕ್ರಮಾದಿತ್ಯನ ನೆನಪು ನಮ್ಮೆಲ್ಲರಲ್ಲಿ ಚಿರಸ್ಥಾಯಿಯಾಗಿರುವುದರ ಜೊತೆಜೊತೆಗೆ ಆತ ಹಾಡಿದ ದೀಪಕರಾಗದ ಮೂಲಕ ಆತನಿಗೊಂದು ಗೌರವ ಸಮರ್ಪಣೆ ನಡೆಯುತ್ತಲೇ ಇರಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ, ನಮಸ್ಕಾರ.     








Saturday, November 9, 2013

ಅವಧೂತರಿವರು ಕೇಳ-ಇರುತೈತಿ ವಿಷಯ ಬಹಳ

 
ಚಿತ್ರಕೃಪೆ: ಅಂತರ್ಜಾಲ
ಅವಧೂತರಿವರು ಕೇಳ-ಇರುತೈತಿ ವಿಷಯ ಬಹಳ

ಜಗನ್ನಿಯಾಮಕನಾದ ಪರಬ್ರಹ್ಮನ ಒಂದು ರೂಪವಾದ ಮಹಾವಿಷ್ಣು ವೈಕುಂಠದಲ್ಲಿ ಶೇಷಶಾಯಿಯಾಗಿದ್ದಾನೆ. ಅವನ ಸಂದರ್ಶನಕ್ಕೆ ದೇವತೆಗಳೆಲ್ಲ ಆಗಾಗ ಬಂದುಹೋಗುತ್ತಿರುತ್ತಾರೆ ಎಂಬುದು ಮಹಾತ್ಮರು ಹೇಳಿದ ವಿಷಯ. ಅಂತಹ ಮಹಾವಿಷ್ಣುವಿನ ನಿರಂತರ ಅನುಸಂಧಾನದಲ್ಲಿ ನಿರತರಾಗಿ ನಿವೃತ್ತಿಮಾರ್ಗದಲ್ಲಿ ಸದಾ ತೊಡಗಿಕೊಂಡು ನಿವೃತ್ತಿ ಬಯಸುವವರಿಗೆ ಪ್ರೇರಕರಾದವರು ಸನಕಾದಿ ಮುನಿಗಳು. ಸನಕ, ಸನಂದನ, ಸನಾತನ, ಸನತ್ಸುಜಾತ ಮತ್ತು ಸನತ್ಕುಮಾರ ಎಂಬ ಐವರು ಪ್ರಮುಖರು, [ಇನ್ನು ಈ ಪಂಕ್ತಿಗೆ ಆಗಾಗ ಅನಿರುದ್ಧ, ಸನ, ಕಪಿಲ ಎಂಬವರೂ ಸೇರಿಕೊಳ್ಳುತ್ತಿರುತ್ತಾರೆ.] ಸನಕಾದಿ ಋಷಿಗಳು ಬ್ರಹ್ಮಮಾನಸ ಕುಮಾರರು ಮತ್ತು ಚಿರನೂತನರು-ಅಂದರೆ ಅವರು ಸದಾ ಬಾಲ್ಯಾವಸ್ಥೆಯಲ್ಲಿರುವಂತೆಯೇ ಕಾಣುತ್ತಾರೆ. ದಿಗಂಬರರಾದ ಈ ಐವರಿಗೆ ಸದಾ ಭಗವಂತನ ಧ್ಯಾನವೇ ವೃತ್ತಿ-ಪ್ರವೃತ್ತಿ ಎಲ್ಲಾ. ಇವರೆಲ್ಲಾ ಅವಧೂತರು. ಅವಧೂತರೆಂದರೆ ಭಗವಂತನಿಂದ ನೇರವಾಗಿ ಜ್ಞಾನವನ್ನು ಪಡೆದವರು ಎಂದರ್ಥ. ಯಾವ ವೇದ-ಶಾಸ್ತ್ರ ಏನನ್ನೂ ಓದದೆಯೂ ಎಲ್ಲವನ್ನೂ ಅರಿತ ಅಪರೋಕ್ಷ ಜ್ಞಾನಿಗಳು ಅವಧೂತರು. ಐಹಿಕ ಬದುಕಿನಲ್ಲಿ ಅವರಿಗೆ ನಿರಾಸಕ್ತಿ, ಅವರು ತಮ್ಮೊಳಗೇ ಆನಂದಲೋಕದಲ್ಲಿ ವಿಹರಿಸುವವರು.

ಇಂತಹ ಸನಕಾದಿ ಅವಧೂತರು ಕೃತಯುಗಕ್ಕೂ ಮುನ್ನ ಒಮ್ಮೆ ವೈಕುಂಠದತ್ತ ನಡೆದರು. ವೈಕುಂಠದ ದ್ವಾರಪಾಲಕರಾದ ಜಯ-ವಿಜಯ ಎಂಬವರು ಇವರನ್ನು ಯಾವುದೋ ಬಾಲಕರ ಗುಂಪು ಎಂದು ತಿಳಿದು ಅಡ್ಡಗಟ್ಟಿದರು. ಸನಕಾದಿಗಳು ತಮ್ಮ ಗುರುತನ್ನು ಹೇಳಿಕೊಂಡರೂ ಸಹ ಅವರು ಪರಮಾತ್ಮನ ಸನ್ನಿಧಿಗೆ ಹೋಗಲು ಬಿಡಲಿಲ್ಲ. ಇದರಿಂದ ಕುಪಿತರಾದ ಸನಕಾದಿಗಳು ಜಯ-ವಿಜಯರನ್ನು "ಭೂ ಲೋಕದಲ್ಲಿ ನೂರು ಜನ್ಮಗಳಕಾಲ ಮಾನವರಾಗಿ ಬಿದ್ದಿರಿ" ಎಂದು ಶಪಿಸಿಬಿಟ್ಟರು. ತಮ್ಮ ತಪ್ಪನ್ನು ಅರಿಯುವ ಹೊತ್ತಿಗೆ ಜಯ-ವಿಜಯರು ಶಾಪಗ್ರಸ್ತರಾಗಿಬಿಟ್ಟಿದ್ದರು. ಇನ್ನೇನು ಮಾನವರಾಗಿ ಭೂಮಿಗೆ ಬರುವ ಮೊದಲು ಮಹಾವಿಷ್ಣುವಿನಲ್ಲಿ ಕ್ಷಮಿಸುವಂತೇ ಬೇಡಿದರು. ದೇವದೇವ ಮಹಾವಿಷ್ಣು ಅವರಿಗೆ ಎರಡು ಆಯ್ಕೆಗಳನ್ನು  ನೀಡಿದ:"ಜಯ-ವಿಜಯರೇ, ನೋಡುವುದಕ್ಕೆ ನನ್ನದೇ ರೂಪವನ್ನು ಧರಿಸಿ ನನ್ನ ಬಾಗಿಲಭಟರಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಆದರೆ ಸನಕಾದಿಗಳನ್ನು ಯಾರೆಂದು ತಿಳಿಯದೇ ಅವರಿಗೆ ನನ್ನ ದರ್ಶನಕ್ಕೆ ಅಡ್ಡಿಪಡಿಸಿಬಿಟ್ಟಿರಿ. ಸನಕಾದಿಗಳು ನನ್ನ ಪರಮಾಪ್ತರು, ಏಕಾಂತ ಭಕ್ತರು. ಅವರಿಗೆ ನನ್ನೊಡನೆ ಸಂವಹಿಸುವ ಮುಕ್ತ ಅವಕಾಶವಿದೆ. ಅವರು ಎಂದು ಬೇಕಾದರೂ, ಯಾವಾಗ ಬೇಕಾದರೂ ಬರಬಹುದು, ಇಚ್ಛೆಬಂದಾಗ ಮರಳಿಹೋಗಬಹುದು. ಸದಾ ಪರಬ್ರಹ್ಮನ ಅನುಸಂಧಾನದಲ್ಲಿರುವ ಅವರಿಗೆ ವೈಕುಂಠಕ್ಕೆ ಮುಕ್ತ ಪ್ರವೇಶ. ಅದನ್ನರಿಯದೇ ನೀವು ತಪ್ಪುಮಾಡಿದಿರಿ, ಅವರು ತಿಳಿಸಿ ಹೇಳಿದರೂ ಅರಿಯದೇ ಬಾಗಿಲು ತೆರೆಯದಾದಿರಿ. ಅವರು ಕೊಟ್ಟ ಶಾಪವನ್ನು ನೀವು ಅನುಭವಿಸಲೇಬೇಕು. ಆದರೆ ನಿಮಗೆ ಆಯ್ಕೆಗಳನ್ನು ಕೊಡುತ್ತೇನೆ--ಶಿಷ್ಟರಾಗಿ ನೂರು ಮಾನವ ಜನ್ಮಗಳಲ್ಲಿ ನನ್ನನ್ನು ಆರಾಧಿಸಿ ನಂತರ ವೈಕುಂಠಕ್ಕೆ ಮರಳಬಹುದು ಅಥವಾ ದುಷ್ಟರಾಗಿ, ನನ್ನ ವಿರೋಧಿಗಳಾಗಿ ಮೂರು ಜನ್ಮಗಳನ್ನು ಕಳೆದು ಮತ್ತೆ ವೈಕುಂಠವನ್ನು ಸೇರಿಕೊಳ್ಳಬಹುದು. ಯಾವುದು ನಿಮ್ಮ ಆಯ್ಕೆಯೆಂದು ತಿಳಿಸಿ" ಎಂದು ನುಡಿದ.

"ಭಗವಂತ, ನಿನ್ನನ್ನು ಬಹುಕಾಲ ಬಿಟ್ಟಿರಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ದುಷ್ಟರಾಗಿ ಮೂರು ಜನ್ಮಗಳಲ್ಲಿ ನಿನ್ನನ್ನು ವಿರೋಧಿಸಿಯಾದರೂ ಸರಿ, ಬಹುಬೇಗ ಮತ್ತೆ ವೈಕುಂಠಕ್ಕೆ ಮರಳುವ ಅವಕಾಶ ಲಭಿಸಲಿ" ಎಂದು ವಿನಂತಿಸಿದರು. ಭಗವಂತ "ತಥಾಸ್ತು" ಎಂದ. ಜಯ-ವಿಜಯರು ದುಷ್ಟರಾಗಿ ಭೂಮಿಯಲ್ಲಿ ಜನಿಸಿದರು. ಕೃತಯುಗದಲ್ಲಿ ದಕ್ಷನ ಮಗಳು ದಿತಿ ಮತ್ತು ಕಷ್ಯಪರ ಮಕ್ಕಳಾಗಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬ ಹೆಸರಿನ ಅಣ್ಣತಮ್ಮಂದಿರಾಗಿ ಜನಿಸಿದರು. ಮಹಾವಿಷ್ಣು ವರಾಹ ಮತ್ತು ನಾರಸಿಂಹ ಅವತಾರಗಳಿಂದ ಅವರನ್ನು ವಧಿಸಿದ. ತ್ರೇತಾಯುಗದಲ್ಲಿ ವೈಶ್ರವ[ಬಹುದೊಡ್ಡ ಋಷಿ] ಮತ್ತು ದೈತ್ಯರಾಜಕುಮಾರಿ ಕೈಕಸಿಯರ ಮಕ್ಕಳಾಗಿ ಜನಿಸಿ ರಾವಣ-ಕುಂಭಕರ್ಣ ಎಂಬ ಹೆಸರು ಪಡೆದರು. ಮಹಾವಿಷ್ಣು ಶ್ರೀರಾಮನಾಗಿ ಅವರನ್ನು ವಧಿಸಿದ. ದ್ವಾಪರಯುಗದಲ್ಲಿ ವಸುದೇವನ ಸಹೋದರಿಯಾದ ಶ್ರುತದೇವಿ ಮತ್ತು ಚೇದಿಯ ರಾಜ ದಮಘೋಷ-ಈ ದಂಪತಿಯ ಮಕ್ಕಳಾಗಿ ಶಿಶುಪಾಲ ಮತ್ತು ದಂತವಕ್ರರೆಂಬ ಹೆಸರನ್ನು ಪಡೆದರು. ಭಗವಂತ ಶ್ರೀಕೃಷ್ಣನಾಗಿ ಅವರನ್ನು ವಧಿಸಿದ. ಹೀಗೆ ಮೂರು ಪಾಪಜನ್ಮಗಳಲ್ಲಿ ತಮ್ಮ ಪಾಪವನ್ನು ಪರಿಹರಿಸಿಕೊಂಡು ಶಾಪವಿಮೋಚನೆಯಾದ ಮೇಲೆ ಮರಳಿ ವೈಕುಂಠದಲ್ಲಿ ಜಯ-ವಿಜಯರಾಗಿ ಸ್ಥಾಪಿತರಾದರು ಎನ್ನುತ್ತದೆ ಭಾಗವತ ಮಹಾಪುರಾಣ.

ಬ್ರಹ್ಮಾಂಡವನ್ನು ಧರಿಸಿಯೂ ಅದರೊಳಗೇ ಹೊಕ್ಕೂ ಇರುವ ಪರಾಶಕ್ತಿಗೆ ಆಗಾಗ ಹಲವನ್ನು ಕೆದಕುವ ಅಪೇಕ್ಷೆ. ಯಾರ್ಯಾರನ್ನು ಎಲ್ಲೆಲ್ಲಿ ಹೇಗೆ ಹೇಗೆ ಪರೀಕ್ಷಿಸಲಿ ಎಂಬುದನ್ನು ಸದಾ ಪರಿಗಣಿಸುವ ಈ ಶಕ್ತಿ ಮಾಹಾವಿಷ್ಣುವಾಗಿ ದಶಾವತಾರ ತಾಳಿಯೂ, ಮಹಾಗಣಪತಿಯಾಗಿ ೧೭ ಅವತಾರತಾಳಿಯೂ, ಮಹಾಶಕ್ತಿಯಾಗಿ ಎಣಿಕೆಯಿಲ್ಲದಷ್ಟು ಅವತಾರತಾಳಿಯೂ ಭುವಿಯಲ್ಲಿ ವಿರಾಜಿಸಿದರೆ ಅವತಾರಗಳಲ್ಲೂ ವೈವಿಧ್ಯತೆ ಮೆರೆಯುವ ಪರಿ ಬಹಳ ಖುಷಿಗೊಳಿಸುವಂಥದು. ತಾನು ಹಲವು ರೂಪಗಳಲ್ಲಿದ್ದರೂ ಎಲ್ಲರೂಪಗಳ ಮೂಲ ರೂಪ ಒಂದೇ ಎಂಬ ತತ್ವವನ್ನು ಸಾರುವ ಈ ಶಕ್ತಿಯೇ ರಾಮನೂ ಆಗುತ್ತದೆ, ಹನುಮನೂ ಆಗುತ್ತದೆ. ತನ್ನಿಂದಲೇ ತನ್ನನ್ನು ಸೃಜಿಸಿ, ಸೇವಿಸಿ ವಿಸ್ಮಯವನ್ನುಂಟುಮಾಡುವ ಈ ಶಕ್ತಿಗೆ ಹಿಂದೊಮ್ಮೆ ಅತ್ರಿ ಮಹರ್ಷಿಯ ಕಾಲದಲ್ಲಿ ಅವರ ಮಗನಾಗಿ ಆಡುವ ಆಸೆ ಬಂತಂತೆ. ಆಗ ಹುಟ್ಟಿದ ಮಗುವೇ ದತ್ತಾತ್ರೇಯ.

ಅತ್ರಿ ಮಹರ್ಷಿಯ ಪತ್ನಿ ಅನಸೂಯಾ. ಮಹಾ ಪತಿವೃತೆಯಾದ ಅನಸೂಯೆ ಯಾವ ಅಸೂಯೆಯೂ ಇಲ್ಲದ ಸಾಧ್ವಿಮಣಿ. ಮುನಿಗೆ ತಕ್ಕ ಮಡದಿ, ರೂಪವತಿಯೂ ಗುಣಾಢ್ಯಳೂ ಆಗಿರುತ್ತಾಳೆ. ಕಾರ್ಯನಿಮಿತ್ತ ಅತ್ರಿ ಹೊರಗೆ ಹೋಗಿರುವ ಒಂದುದಿನ ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ಅದರಂತೇ ಬಂದ ಮೂರುಜನ ಗಂಡಸರಿಗೆ ಉಪಚರಿಸ ಬೇಕಲ್ಲ ? ಗಂಡ ಬರುವವರೆಗೆ ಬಹಳ ಸಮಯವಾಗಬಹುದೇನೋ, ಅಲ್ಲಿಯವರೆಗೂ ಅವರಿಗೆ ತೃಷೆಗೋ ಹಸಿವಿಗೋ ಏನನ್ನೂ ಕೊಡದೇ ಹಾಗೇ ಕೂರಿಸುವುದು ಸರಿಯೇ ಎಂದುಕೊಳ್ಳುತ್ತಾ ಅವರನ್ನು ಮಾತನಾಡಿಸುತ್ತಾಳೆ ಅನಸೂಯಾ. ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ. ಬೇಡಿಕೆಯನ್ನು ನೆರವೇರಿಸದಿದ್ದಲ್ಲಿ ಅತಿಥಿ ಸೇವೆಯನ್ನು ಭಂಗಗೊಳಿಸಿದ ಪಾಪವನ್ನು ಅನುಭವಿಸಬೇಕಾಗುತ್ತದೆಂದೂ ಸಾರುತ್ತಾರೆ.

ಕ್ಷಣಕಾಲ ಯೋಚಿಸಿದ ಅನಸೂಯೆ ಮೂವರನ್ನೂ ಒಂದೇ ಕಡೆ ಸಾಲಾಗಿ ಕುಳಿತುಕೊಳ್ಳಿರೆಂದೂ ತಾನು ಹಾಲೂಡಿಸಲು ಒಪ್ಪಿರುವೆನೆಂದೂ ತಿಳಿಸುತ್ತಾಳೆ. ಬಂದ ಮೂರೂ ಗಂಡಸರು ಒಂದೆಡೆ ಕುಳಿತು ಕಾಯುತ್ತಿರುವಾಗ ತನ್ನ ಕಮಂಡಲುವಿನಿಂದ ನೀರನ್ನು ತೆಗೆದು ಪರಾಶಕ್ತಿಯನ್ನು ಧ್ಯಾನಿಸಿ ಇವತ್ತು ತನ್ನ ಪತಿವೃತಾ ಧರ್ಮಕ್ಕೆ ಕಳಂಕ ತಟ್ಟುವ ಸಮಯ ಬಂದಿದೆಯೆಂದೂ ಅನಿವಾರ್ಯವಾಗಿ ಬಂದ ಅತಿಥಿಗಳನ್ನು ತಾನು ಸೇವಿಸಬೇಕಾಗಿದೆಯೆಂದೂ ಅಂದುಕೊಳ್ಳುತ್ತಾ ಎದುರಲ್ಲಿ ಕುಳಿತಿದ್ದ ಮೂರೂಜನ ಗಂಡಸರಿಗೆ ಪ್ರೋಕ್ಷಿಸಿಬಿಡುತ್ತಾಳೆ. ಕ್ಷಣಮಾತ್ರದಲ್ಲಿ ಮೂರೂಜನ ಗಂಡಸರು ಮೂರು ಸುಂದರ ಗಂಡು ಶಿಶುಗಳಾಗಿ ಮಲಗುತ್ತವೆ. ಅಮ್ಮನ ಅಕ್ಕರೆ ತುಂಬಿದ ಅನಸೂಯೆ ಆ ಶಿಶುಗಳಿಗೆ ಎದೆ ಹಾಲನ್ನು ನೀಡುತ್ತಾಳೆ ಮಾತ್ರವಲ್ಲ ಮೂವರನ್ನೂ ಒಂದೇ ತೊಟ್ಟಿಲೊಳಿಟ್ಟು ಜೋಗುಳಹಾಡಿ ರಮಿಸುತ್ತಾಳೆ. ಅವಳ ಭಕ್ತಿ,ಶ್ರದ್ಧೆಗೆ ಒಲಿದ ಪರಾಶಕ್ತಿಯ ಮೂರು ರೂಪಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ತಾವೆಂದೂ, ಪೂರ್ವದಲ್ಲಿ ಅನುಗ್ರಹಿಸಿದಂತೇ ಅತ್ರಿ ದಂಪತಿಯ ಮಗನಾಗಿ ಅಯೋನಿಜರಾಗಿ ಜನಿಸಲು ಬಂದಿದ್ದಾಗಿಯೂ ಅನಸೂಯೆಗೆ ತಿಳಿಸಿ ದೇಹವೊಂದರಲ್ಲೇ ಮೂರು ತಲೆ, ಆರು ಕೈಗಳು ಉಳ್ಳ ಒಂದೇ ಶಿಶುವಾಗಿ ಇನ್ನುಮುಂದೆ ಇದೇ ರೂಪದಲ್ಲಿ ಇರುವುದಾಗಿ ತಿಳಿಸುತ್ತಾರೆ. ಅತ್ರಿ ಮುನಿಗೆ ದತ್ತವಾಗಿ ಬಂದ ಈ ಮಗುವನ್ನು ಮುನಿದಂಪತಿ ದತ್ತಾತ್ರೇಯನೆಂದು ನಾಮಕರಣಗೈದು ಬೆಳೆಸುತ್ತಾರೆ.

ಸಹಜವಾಗಿ ಪರಾಶಕ್ತಿಯಾದ ಪರಬ್ರಹ್ಮನ ಒಂದು ಆವಿಷ್ಕಾರವಾದ ದತ್ತಾತ್ರೇಯ ಮುನಿಯ ಸುತ್ತ ಗೋವುಗಳು, ನಾಯಿಗಳು ಇನ್ನೂ ಹಲವು ಪಶು-ಪಕ್ಷಿಗಳು ಆಗಾಗ ಸುತ್ತುವರಿಯುತ್ತವೆ. ಆತನ ಸನ್ನಿಧಾನದಲ್ಲಿ ಸಿಗುವ ಅಪರಿಮಿತ ಆನಂದಾನುಭೂತಿಯಿಂದ ಆತನ ಪಕ್ಕವೇ ನಿಲ್ಲಲು ಇಷ್ಟಪಡುತ್ತವೆ. ಆ ಯಾ ಜನ್ಮಗಳಲ್ಲಿರುವ ತನ್ನದೇ ಹಲವು ಛೇದಿತ ಅಂಶಗಳಾದ ಅವೆಲ್ಲವುಗಳಲ್ಲೂ ಪ್ರೀತಿಯನ್ನು ತೋರುವ, ಅವುಗಳ ಐಹಿಕ ಸಂಕಷ್ಟಗಳನ್ನು ನಿವಾರಿಸುವ ಮನಸ್ಸು ದತ್ತಾತ್ರೇಯನದ್ದಾಗಿರುತ್ತದೆ. ಅನೇಕ ಋಷಿಗಳೂ, ಋಷಿಕುವರರೂ ಸೇರಿದಂತೇ ಹಲವರು ದತ್ತನ ಸಾಮೀಪ್ಯವನ್ನು ಬಯಸುವಷ್ಟು ಪೂರ್ಣಕಳಾ ರೂಪಿ ದತ್ತಾತ್ರೇಯನಾಗಿರುತ್ತಾನೆ. ಶಾಂತಸರೋವರದಲ್ಲಿ ನಿಂತ ನೀರಿನಂತೇ ಪ್ರಶಾಂತ ಮನಸ್ಸುಳ್ಳ ಆಜಾನುಬಾಹು ದತ್ತಾತ್ರೇಯ ಭುವಿಯ ಬಹುತೇಕರ ಕಣ್ಮಣಿಯಾಗುತ್ತಾನೆ. ಹಲವರ ಸಂಕಷ್ಟಗಳಲ್ಲಿ ಅವರ ಕಣ್ಣೀರೊರೆಸುವ ಪರಾಶಕ್ತಿಯ ಈ ರೂಪವನ್ನು ಜನ ಶಾಶ್ವತವಾಗಿ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ. ಸಂತಾನಹೀನರಿಗೆ ಸಂತಾನವನ್ನು ಕರುಣಿಸುವ, ವಿವಿಧ ಕಾಯಿಲೆಗಳಲ್ಲಿ ತೊಳಲುವವರಿಗೆ ಅವುಗಳಿಂದ ನಿವೃತ್ತಿನೀಡುವ, ಶುದ್ಧಹಸ್ತರಿಗೆ ಅಲೌಕಿಕ ಸಹಾಯವನ್ನು ಉಣಬಡಿಸುವ ದತ್ತಾತ್ರೇಯ ತಂದೆ-ತಾಯಿಯ ಅಪೇಕ್ಷೆಯಂತೇ ವಿವಿಧ ಸನ್ಯಾಸಿಗಳ ರೂಪದಲ್ಲಿ ಪುನರಪಿ ಜನಿಸುವೆನೆಂದು ತಿಳಿಸುತ್ತಾನೆ.

ದತ್ತಾತ್ರೇಯನ ಜಾಗೃತ ಸ್ಥಳಗಳಲ್ಲಿ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ಬಹಳ ಪ್ರಸಿದ್ಧವಾಗಿದೆ. ಶ್ರೀಪಾದ ವಲ್ಲಭರು ಮತ್ತು ನರಸಿಂಹ ಸರಸ್ವತಿಗಳು ಎಂಬ ಈರ್ವರು ಸನ್ಯಾಸಿಗಳು ಒಬ್ಬರಾದಮೇಲೆ ಒಬ್ಬರಂತೇ ಇದೇ ಸ್ಥಳದಲ್ಲಿ ನೆಲೆನಿಂತು ಹಲವುಕಾಲ ತಪಸ್ಸನ್ನಾಚರಿಸ್ದೂ ಅಲ್ಲದೇ ಜಗತ್ತಿಗೇ ಒಳಿತನ್ನು ಬಯಸಿ ಹಲವು ಕಾರ್ಯಗಳನ್ನು ನಡೆಸಿದ್ದಾರೆ. ಇಂದಿಗೂ ಗಾಣಗಾಪುರದಲ್ಲಿ ನಿರ್ಗುಣಪಾದುಕೆಗಳೆಂಬ ಮಾನವ ಪಾದವನ್ನೇ ಮುಟ್ಟಿದಂತೆನಿಸುವ ಪಾದುಕೆ ಪೂಜಿತವಾಗುತ್ತಿರುವುದು ನರಸಿಂಹ ಸರಸ್ವತಿಗಳ ದಿವ್ಯ ಅನುಗ್ರಹದಿಂದ. ಭೀಮಾ-ಅಮರಜಾ ನದಿಗಳು ಸೇರುವ ಜಾಗ ಇದಾದ್ದರಿಂದ ಸಂಗಮದಲ್ಲಿ ಸ್ನಾತರಾಗಿ ದತ್ತನ ಸೇವೆ ನಡೆಸಿದರೆ ಶ್ರೇಯಸ್ಕರವೆಂಬುದು ಶತಶತಮಾನಗಳ ಇತಿಹಾಸದಿಂದ ಅನಾವರಣಗೊಂಡ ಸತ್ಯ ವಿಷಯ. ಆಗರ್ಭ ಶ್ರೀಮಂತನೂ ಕೂಡ ಇಲ್ಲಿಗೆ ಬಂದಾಗ ತನ್ನ ಅಹಂಕಾರ ನಿವೃತ್ತಿಗಾಗಿ ಮಧುಕರೀ ಭಿಕ್ಷಾನ್ನವನ್ನು ಬೇಡುವುದು ಇಲ್ಲಿನ ಸಂಪ್ರದಾಯ!

ಸಖರಾಯ ಪಟ್ಟಣದ ಅವಧೂತರು

ಸ್ವಾಮಿ ದತ್ತಾತ್ರೇಯ ಕೂಡ ಅವಧೂತನೇ ಆಗಿದ್ದನೆನ್ನುವಾಗ ನಾವು ಅವಧೂತ ಯಾರೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು. ಅವಧೂತರಲ್ಲಿ ಪರಬ್ರಹ್ಮನ ಅಂಶಾಂಶ ರೂಪ ಜಾಗೃತವಾಗಿರುತ್ತದೆ ಎಂಬುದು ತಾತ್ಪರ್ಯ. ಇಂತಹ ಅವಧೂತ ಪರಂಪರೆಯಲ್ಲಿ ಬಂದ ಅಕ್ಕಲಕೋಟ ನರಸಿಂಹ ಸರಸ್ವತೀ ಮಹಾರಾಜರನ್ನು ಸಮರ್ಥರು ಎಂದೇ ಕರೆಯುತ್ತಿದ್ದರು. ಇದೇ ಪರಂಪರೆಗೆ ಸೇರಿದ ಮತ್ತೊಬ್ಬ ಐತಿಹಾಸಿಕ ಅವಧೂತರೆಂದರೆ ಸಮರ್ಥ ರಾಮದಾಸರು. ಸಮರ್ಥ ರಾಮದಾಸರ ಶಿಷ್ಯರಾಗಿ ಅವಧೂತ ಪರಂಪರೆಯಲ್ಲಿ ಮುನ್ನಡೆದವರು ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳು.[ವರದಹಳ್ಳಿ] ಅದಕ್ಕೆಂದೇ ಈ ಪರಂಪರೆಯ ಆರಾಧನಾ ಕ್ರಮದಲ್ಲಿ,


ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣ ಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂ ಚ ಶ್ರೀಧರಂ || 

ಎಂದು ಪ್ರಾರ್ಥಿಸುತ್ತೇವೆ. ಅವಧೂತರು ಪರಂಪರೆಯಿಲ್ಲದೆಯೂ ಅವರ ಮನಸ್ಸಿಗೆ ಬಂದಲ್ಲಿ ಜನಿಸಬಹುದು. ಆದರೆ ಅವಧೂತರಾದವರಿಗೆ ಈ ಲೋಕದ ಆಗುಹೋಗುಗಳ ಸಮಗ್ರ ಮಾಹಿತಿ ಗೊತ್ತಾಗುತ್ತಿರುತ್ತದೆ. ಆದರೂ ಅವರು ಅದನ್ನೆಲ್ಲ ಹೊರಗೆಡಹುವುದಿಲ್ಲ. ಅವಧೂತರ ಸಂಪ್ರದಾಯವೇ ಹಾಗಿದೆ. ಜಗತ್ತಿನ ರಹಸ್ಯಗಳನ್ನು ಸಂಪೂರ್ಣ ಅರಿತ ಅವಧೂತರು ಲೋಕಕಲ್ಯಾಣಾರ್ಥವಾಗಿ ಆಗಾಗ ಮಾನವ ರೂಪದಲ್ಲಿ ಜನ್ಮತಳೆಯುತ್ತಾರೆ. ಬಾಲ್ಯದಿಂದಲೇ ಅವರು ಲೌಕಿಕ ಜೀವನಕ್ಕೆ ವಿಮುಖವಾದ ಲಕ್ಷಣಗಳನ್ನು ತೋರುತ್ತಾರೆ. ಜನಸಾಮಾನ್ಯರಿಗೆ, ಉಳಿದ ಸಂನ್ಯಾಸಿಗಳಿಗೆ ಹೇಳಲ್ಪಟ್ಟ ಯಾವುದೇ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ. ಲೌಕಿಕ ಬದುಕಿನಲ್ಲಿ ಒಂಚೂರೂ ಆಸಕ್ತಿಯಿರದಂತೇ ಅವರ ಪರಿಸರ ಕೂಡ ಅದನ್ನೇ ಅನುಮೋದಿಸುತ್ತದೆ. ಶ್ರೀಧರ ಭಗವಾನರು ಅವಧೂತರಾದರೂ ಸಹ ಕ್ರಮಾಗತ ಸಂನ್ಯಾಸವನ್ನು ಸ್ವೀಕರಿಸಿದರು. ಅವಧೂತರು ಕ್ರಮಾಗತ ಸಂನ್ಯಾಸವನ್ನು ಸ್ವೀಕರಿಸಬಾರದು ಎಂದೇನಿಲ್ಲ. [ಹಿಂದಕ್ಕೆ ನರಸಿಂಹ ಸರಸ್ವತಿ ಮಹಾಸ್ವಾಮಿಗಳೂ ಕೂಡ ಕ್ರಮಾಗತ ಸಂನ್ಯಾಸವನ್ನು ಪಡೆದಿದ್ದರು.] ಕ್ರಮಾಗತ ಸಂನ್ಯಾಸ ದೀಕ್ಷೆಯನ್ನು ಪಡೆಯದಿದ್ದರೂ ಅವಧೂತರ ಆಚರಣೆಗಳೆಲ್ಲ ಭಿನ್ನವಾಗಿದ್ದು, ಸಂನ್ಯಾಸಿಗಳ ಆಚರಣೆಗಳಿಗಿಂತ ಉತ್ಕೃಷ್ಟವಾಗಿರುತ್ತವೆ. ಸಂನ್ಯಾಸಿಗಳು ಎಷ್ಟೋ ಜನ್ಮಗಳಲ್ಲಿ ಸಂನ್ಯಾಸಿಗಳಾಗಿ ಪಡೆಯಲಾರದ ಪಾರಮಾರ್ಥಿಕ ಶಕ್ತಿಯನ್ನು ಅವಧೂತರು ಜನ್ಮದಾರಭ್ಯ ಪಡೆದಿರುತ್ತಾರೆ! 

ಅವಧೂತರ ಕಥೆ ಇನ್ನೂ ವಿಸ್ತಾರಕ್ಕೆ ವ್ಯಾಪಿಸುತ್ತಲೇ ಹೋಗುತ್ತದೆ. ಭಾರತದಾದ್ಯಂತ ಅಲಲ್ಲಿ ಅವಧೂತರು ಜನಿಸಿ ಮರೆಯಾಗುವುದನ್ನು ನಾವು ಇಂದಿಗೂ ಕಾಣಬಹುದು! ಅಂತಹ ಅವಧೂತರೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು. ಶುಭದಿನ.

Wednesday, November 6, 2013

|| ಧರ್ಮೋ ರಕ್ಷತಿ ರಕ್ಷಿತಃ || -ಎಂಬುದರ ಅರ್ಥ

||ಧರ್ಮೋ ರಕ್ಷತಿ ರಕ್ಷಿತಃ||

ಭರತವರ್ಷದ ಋಷಿಮುನಿಗಳಿಗೆ ತಾವು ’ಧರ್ಮ’ಎಂದು ಬಣ್ಣಿಸಿದ ಜೀವನ ಸಂವಿಧಾನ, ಮಾನವ ಕುಲದ ಮೂಲಭೂತ ಜೀವನತತ್ತ್ವ ಒಳಗೊಂಡಿರುವ ಬಗ್ಗೆ ಸಂದೇಹವಿರಲಿಲ್ಲ. ಮಹಾಭಾರತವನ್ನು ಬರೆಯುವಾಗ ವೇದವ್ಯಾಸರೂ ಸಹ ಮೂಲವಾಗಿ ಇಟ್ಟುಕೊಂಡ ಅಂಶವೇ ಮಾನವ ಜೀವನ ಧರ್ಮ. ಧರ್ಮ ಎಂಬ ಪದ ಆಂಗ್ಲಭಾಷೆಗೆ ಸರಿಯಾಗಿ ತರ್ಜುಮೆಗೊಳ್ಳಲಿಲ್ಲ. ಸಹಸ್ರಾರು ವರ್ಷಗಳ ಕಾಲ ಜೀವನಕ್ಕೆ ಬೆಳಕಾಗಿ ಹಿಂದುಗಳನ್ನು ನಡೆಸಿದ ’ಧರ್ಮ’ ಎಂಬ ಪದದ ಬಗ್ಗೆ ಸ್ವಲ್ಪ ಚಿಂತಿಸೋಣ:

|| ಧರ್ಮೋ ರಕ್ಷತಿ ರಕ್ಷಿತಃ || -ಎಂಬ ಹೇಳಿಕೆಯಲ್ಲಿ ಧರ್ಮವು ರಕ್ಷಿಸುತ್ತದೆ ಎಂಬುದೇನೋ ಸರಿ. ಆದರೆ ಉಳಿದರ್ಧ ಭಾಗವನ್ನು ನಾವು ಅರ್ಥೈಸಬೇಕು. ಧರ್ಮದ ತಳಹದಿಯಲ್ಲಿ, ಧರ್ಮಮಾರ್ಗ ಹೇಳುವ ನೀತಿಸೂತ್ರಗಳನ್ನವಲಂಬಿಸಿ ಬದುಕುವ ಬದುಕನ್ನು ನಾವು ಆಯ್ದುಕೊಂಡರೆ ನಮಗೆ ರಕ್ಷಣೆ ಸಿಗುವುದು ಪ್ರಕೃತಿ ಸಹಜ. ಇದು ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕೆಂದು ಆಸಕ್ತರಾಗಿರುವವರೇ ಬಹಳ ಮಂದಿ; ತಿಳಿದುಕೊಂಡವರು ಕೆಲವೇ ಜನ. ಪಾಲಕರು ನೋಡಿಕೊಳ್ಳುತ್ತಾರೆ ಎಂದು ಮಕ್ಕಳ ವಿಷಯಕ್ಕೆ ನಾವು ಹೇಳುವಂತೇ ’ಧರ್ಮೋ ರಕ್ಷತಿ’ ಎಂದ ತಕ್ಷಣ ಧರ್ಮವು ನಮ್ಮನ್ನು ನೋಡಿಕೊಳ್ಳುತ್ತದೆ ಎಂಬ ಭಾವನೆ ಬರುತ್ತದೆ. ಇದು ಒಮ್ಮುಖ ಮಾತ್ರ, ವಿಷಯ ಅಷ್ಟು ಸರಳವಿಲ್ಲ, ಬಹಳ ಅರ್ಥಗರ್ಭಿತವಾಗಿದೆ!

ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಸ್ಥೂಲವಾಗಿ ನಾವು ಹೇಳಬಹುದು, ತನ್ನನ್ನು ರಕ್ಷಿಸಿದರೆ ತಾನು ನಿಮ್ಮನ್ನು ರಕ್ಷಿಸುತ್ತೇನೆ ಎಂಬ ಧರ್ಮಕ್ಕೆ ಅಂತಹ ಶಕ್ತಿ ನಿಜಕ್ಕೂ ಇದೆಯೇ? ಧರ್ಮ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ ಎಂದು ನಂಬಿಕೊಳ್ಳುವುದು ಸರಿಯಲ್ಲ, ಅದಕ್ಕಾಗಿ ಅದಕ್ಕೆ ರಕ್ಷಣೆಯ ಅಗತ್ಯವಿದೆ. ಯಾರು ಧರ್ಮಕ್ಕೆ ರಕ್ಷಣೆ ಕೊಡಲು ಮುಂದಾಗುತ್ತಾರೋ ಅವರು ಧರ್ಮದಿಂದಲೇ ರಕ್ಷಣೆಗೊಳಪಡುತ್ತಾರೆ! ಯಾರು ರಕ್ಷಣೆಯನ್ನು ಬಯಸುತ್ತಾರೋ ಅವರು ಧರ್ಮಕ್ಕೆ ಕುತ್ತು-ಗಂಡಾಂತರ ಬಾರದಂತೇ ನೋಡಿಕೊಳ್ಳಬೇಕಾದುದು ಮೊದಲ ಆದ್ಯತೆ.

ಹೀಗೊಮ್ಮೆ ಪ್ರಯೋಗಶೀಲರಾಗೋಣ: ಧರ್ಮ ಯಾವಾಗಲೂ ಗಂಡಾಂತರದಲ್ಲಿಲ್ಲ ಎಂದು ನಾವು ತಿಳಿದುಕೊಳ್ಳಬೇಕು. ಜಗತ್ತಿನ ಯಾವುದೇ ಇತಿಹಾಸ, ಪುರಾಣ, ಕಥೆಗಳು, ನಮ್ಮಲ್ಲಿನ ಪುರಾಣಗಳು, ಸಂಸ್ಕೃತದ ಕಥಾನಕಗಳು ತಮ್ಮ ಕಥಾನಕಗಳಲ್ಲಿ ಮುಖ್ಯವಾಗಿ ಬೊಟ್ಟುಮಾಡುವುದು ಧರ್ಮದಮೇಲೆ ನಡೆದ ಆಕ್ರಮಣಗಳಬಗ್ಗೆಯೇ ಆಗಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ಧರ್ಮದ ಹೆಚ್ಚುಗಾರಿಕೆಯೇನಲ್ಲ; ಅದು ಧರ್ಮ ಮತ್ತು ಅಧರ್ಮಗಳ ನಡುವಿನ ಸಮತೋಲನವೆಂಬುದು ನಮಗೆಲ್ಲ ಗೊತ್ತು. ಹಾಗಾದರೆ ಪ್ರಶ್ನೆ ಉದ್ಭವಿಸುವುದು ಧರ್ಮದಮೇಲಿನ ಸಂಪೂರ್ಣ ಅತಿಕ್ರಮಣದ ಬಗ್ಗಲ್ಲ, ಆದರೆ ಭಾಗಶಃ ನಡೆದ ಆಕ್ರಮಣಗಳ ಮೇಲೆ ಎನ್ನಬಹುದು. ಹಾಗೆ ಆತಿಕ್ರಮಣ ನಡೆಯದಂತೇ ಮಾಡಲು ಯಾವಾಗಲೂ ಧರ್ಮದ ಬಗ್ಗೆ ಕಾಳಜಿ ಮತ್ತು ಜಾಗೃತಿ ಇರಲೇ ಬೇಕಾಗುತ್ತದೆ. ಇದರರ್ಥ ಒಂದಷ್ಟು ಜನ ಪಹರೆಕಾದು, ಧರ್ಮವನ್ನು ಅಲಕ್ಷಿಸಿ ಅಧರ್ಮಮಾರ್ಗವನ್ನು ಹಿಡಿಯುವ ಮಂದಿಯನ್ನು ಮರಳಿ ಧರ್ಮದ ದಾರಿಗೆ ಕರೆತರಬೇಕೆಂಬುದಲ್ಲ. ಇತರರು ಧರ್ಮಾಚರಣೆಯಲ್ಲಿ ನಿರತರಾಗಿದ್ದಾರೋ ಎನ್ನುವುದನ್ನು ನೋಡುವ ಬದಲು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು: "ಧರ್ಮಮಾರ್ಗವನ್ನು ನಾವೆಷ್ಟು ಅನುಸರಿಸುತ್ತೇವೆ?"-ಎಂದು. ಪ್ರತಿನಿತ್ಯದ ನಮ್ಮ ಕೆಲಸಕಾರ್ಯಗಳಲ್ಲಿ, ಕರ್ತವ್ಯಗಳಲ್ಲಿ, ಕೌಟುಂಬಿಕ ಸೇವೆಗಳಲ್ಲಿ, ನೆರೆಹೊರೆಯವರೊಡನೆ ವ್ಯವಹರಿಸುವಲ್ಲಿ, ಪಟ್ಟಣ-ನಗರಗಳಿಗೆ ತೆರಳಿದಾಗ ನಡೆಸುವ ವ್ಯವಹಾರದಲ್ಲಿ, ನಮ್ಮ ರಾಜ್ಯ/ದೇಶಗಳಲ್ಲಿ, ಜಗತ್ತಿನಲ್ಲಿ ನಾವೆಷ್ಟು ಧರ್ಮದಿಂದ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ನಾವೇ ನಿಗಾ ಇರಿಸಬೇಕು. ನಾವು ನಮ್ಮೊಳಗೇ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ನಮಗೆ ಧರ್ಮದ ಮೇಲಿರುವ ಕಾಳಜಿಯ ಬಗ್ಗೆ ನಾವೇ ದುರ್ಬೀನು ಹಿಡಿದು ನೋಡಿಕೊಳ್ಳಬೇಕು.

ಸಮಾಜದ ಬಹುಸಂಖ್ಯಾಕರು ಅಧರ್ಮದ ಹಾದಿ ಹಿಡಿದರೆ, ಆಗ ಸಮಾಜವೇ ಗಂಡಾಂತರವನ್ನು ಎದುರಿಸಬೇಕಾಗಬಹುದು. ಮಹಾಭಾರತ ನಡೆಯುವುದಕ್ಕೆ ಇದೇ ತೆರನಾದ ಸಂಗತಿ ಕಾರಣವಾಗಿತ್ತು. ಅಧರ್ಮದ ತಾಕತ್ತು ಎಷ್ಟಿರುತ್ತದೆಂದರೆ ಧರ್ಮಮಾರ್ಗಿಗಳನ್ನೂ ಸಹ ಕೆಲಸಮಯ ಕೈಚೆಲ್ಲಿ ಕುಳಿತುಕೊಳ್ಳುವಂತೇ ಮಾಡಿಬಿಡುತ್ತದೆ. ಹಾಗಾಗಿಯೇ, ಕುರುಕ್ಷೇತ್ರದಲ್ಲಿ ಅರ್ಜುನ ತನ್ನಿಂದ ಯುದ್ಧಮಾಡಲಾಗದೆಂದು ರಥವಿಳಿದು ಬಾಣ-ಬಿಲ್ಲು ಕೆಳಗಿರಿಸಿ ಕುಳಿತಿದ್ದ. ರಣರಂಗದಲ್ಲಿ ಕ್ಷಾತ್ರ ಧರ್ಮವೇನೆಂಬುದನ್ನು ಶ್ರೀಕೃಷ್ಣ ಅರ್ಜುನನಿಗೆ ನೆನಪುಮಾಡಿಕೊಡಬೇಕಾಯ್ತು. ಹಾಗಾಗಿ ನಮ್ಮ ಜಾಗೃತಿಯಲ್ಲಿ ನಾವಿದ್ದು, ನಾವು ಮಾಡುತ್ತಿರುವ ಕಾರ್ಯ ಧರ್ಮಮಾರ್ಗದಲ್ಲಿದೆಯೇ ಎಂದು ನೋಡಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ಅಧರ್ಮದಿಂದ ತಲೆದೋರಬಹುದಾದ ಸಮಸ್ಯೆಗಳನ್ನು ಆಹ್ವಾನಿಸದಂತೇ ತಡೆಯಬೇಕು.

ಧರ್ಮದ ತಳಹದಿ ಅಷ್ಟೆಲ್ಲಾ ವಿಸ್ತಾರವಾಗಿದೆ ಎಂದಾದರೆ ಅದನ್ನು ತಿಳಿದುಕೊಳ್ಳುವ ಬಗೆಗೊಂದಿಷ್ಟು ಗಮನಕೊಡಲೇಬೇಕು. ಸ್ವಲ್ಪ ಪ್ರಯಾಸಕರ ಕೆಲಸವೇ ಆದರೂ ಪ್ರಯತ್ನಿಸಲೇಬೇಕು. ಸಂಸ್ಕೃತದಲ್ಲಿ ವಿಪುಲವಾಗಿ ವಿಭಿನ್ನ ಪದಗಳಿಂದ ಧರ್ಮದ ನಡಾವಳಿಯನ್ನು ಬಣ್ಣಿಸಿದರಾದರೂ ಹೀಗೇ ಇದ್ದರೆ ಅದು ಧರ್ಮ, ಹೀಗಲ್ಲದಿದ್ದರೆ ಅಧರ್ಮ ಎಂಬುದನ್ನು ನಮ್ಮ ಪೂರ್ವಜ ಮುನಿಜನರು ಹೇಗೆ ಅರಿತುಕೊಂಡರು ಎಂಬುದು ಬಹಳ ಕುತೂಹಲಕರ ಸಂಗತಿಯೇ. ಕೆಲವು ವ್ಯಾಖ್ಯೆಗಳನ್ನು ನೋಡಿ:

|| ಅಹಿಂಸಾ ಪರಮೋ ಧರ್ಮಃ ||-- ಅಹಿಂಸೆಯೆಂಬುದೇ ನಿಜವಾದ ಧರ್ಮ. ಅಹಿಂಸೆ ಎಂಬುದು ಶಾರೀರಿಕ ಹಿಂಸೆಯನ್ನು ಮಾತ್ರ ಹೇಳುವುದಿಲ್ಲ; ಮಾನಸಿಕ ಕಿರುಕುಳ, ನಿಂದನೆ, ದಬ್ಬಾಳಿಕೆ, ಜೀತ, ಸುಲಿಗೆ, ಶೋಷಣೆ ಮೊದಲಾದ ಹತ್ತು ಹಲವು ಸಂಗತಿಗಳನ್ನು ’ಅಹಿಂಸೆ’ ಎಂಬ ಒಂದೇ ಪದದಲ್ಲಿ ಇಲ್ಲಿ ಹಿಡಿದಿಡಲಾಗಿದೆ. ತದನಂತರದಲ್ಲಿ ಪ್ರಾಣಿಗಳನ್ನು ನಾವು ಹಿಂಸಿಸುವುದೂ ಸಹ ಸೇರಿಕೊಳ್ಳುತ್ತದೆ. ಹಿಂಸೆಯನ್ನು ಮಾಡದೇ ಇರುವುದೇ ನಿಜವಾದ ಧರ್ಮ ಎನ್ನುವ ಈ ಉಕ್ತಿಯಲ್ಲಿ  ಮಾನವೀಯ ಮೂಲಭೂತ ಹಕ್ಕು ಎದ್ದುಕಾಣುತ್ತದೆ!  

|| ಧರ್ಮೆನ ಹೀನಃ ಪಶುಭಿಃ ಸಮಾನಃ || -ಧರ್ಮವನ್ನು ತೊರೆದವನು ಪಶುವಿಗೆ ಸಮಾನ. ಪಶುವಿಗೆ ಧರ್ಮ-ಅಧರ್ಮಗಳ ಭೇದಭಾವ ಗೊತ್ತಿಲ್ಲ. ಹೆಣ್ಣು-ಗಂಡೆಂಬ ಎರಡೇ ಭಿನ್ನತೆಯನ್ನು ಅವು ಋತುಮಾನಗಳಿಗನುಸಾರವಾಗಿ ಗ್ರಹಿಸಬಲ್ಲವಷ್ಟೆ. ಯಾವುದು ತಪ್ಪು-ಯಾವುದು ಸರಿ ಎಂದು ವಿವೇಚನೆ ಮಾಡುವಷ್ಟು ವಿಕಸಿತ ಮೆದುಳನ್ನು ಅವು ಹೊಂದಿಲ್ಲ. ಅದಕ್ಕೇ ಧರ್ಮವನ್ನು ಬಿಟ್ಟವರನ್ನು ಪಶುಸಮಾನವೆಂದು ಹೇಳಲಾಗಿದೆ. 

|| ಯಥೋ ಧರ್ಮಸ್ಥಥೋ ಜಯಃ || -ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ. ಮಹಾಭಾರತ ಯುದ್ಧಕ್ಕೂ ಮೊದಲು ಯುದ್ಧ ಘಟಿಸದಂತೇ ತಡೆಯಲು ಕೃಷ್ಣ ಮೂರು ಸಲ ಸಂಧಾನಕ್ಕೆ ಯತ್ನಿಸಿದ್ದ; ಸುಯೋಧನನ ಅಹಂಕಾರ ಸಂಧಾನಕ್ಕೆ ಅವಕಾಶ ಕೊಡಲಿಲ್ಲ. ರಾಮಾಯಣದಲ್ಲಿ, ಶ್ರೀರಾಮ ಜನನಕ್ಕೂ ಸಾವಿರಾರು ವರ್ಷಗಳ ಮೊದಲೇ ರಾವಣ ಜನಿಸಿದ್ದ. ಸ್ವತಃ ಅಣ್ಣನಾದ ಕುಬೇರನ ಶ್ರೀಲಂಕೆಯ ಸಂಪತ್ತನ್ನು ಕಂಡು ಅದು ತನ್ನದಾಗಬೇಕೆಂದು ಬಲವಂತದಿಂದ ಪಡೆದುಕೊಂಡ. ಕುಬೇರ ಉತ್ತರದ ಅಲಕಾಪುರಿಗೆ ತೆರಳಿ ಹೊಸದಾಗಿ ಸಾಮ್ರಾಜ್ಯ ಸ್ಥಾಪಿಸಿಕೊಂಡರೆ ಅಲ್ಲಿಗೂ ಹೋದ ರಾವಣ ಕುಬೇರನಲ್ಲಿದ್ದ ಪುಷ್ಪಕ ವಿಮಾನವನ್ನು ಅಪಹರಿಸಿದ. ಸಾವಿರಾರು ಸ್ತ್ರೀಯರ ಮಾನಭಂಗ, ಭೋಗ ಇವುಗಳಲ್ಲಿ ನಿರತನಾಗಿದ್ದ ರಾವಣ ಪದೇ ಪದೇ ಅನ್ಯರಿಂದ ಶಾಪಗ್ರಸ್ತನಾಗಿದ್ದ. ವನವಾಸಿಗಳಾಗಿದ್ದ ರಾಮ-ಲಕ್ಷ್ಮಣರಿಗೆ ತೊಂದರೆಕೊಟ್ಟ ಆತನ ತಂಗಿ ಶೂರ್ಪಣಖೆಯ ಮಾತು ಕೇಳಿ ಸೀತೆಯನ್ನು ಅಪಹರಿಸಿ ಲಂಕೆಗೆ ಎಳೆದೊಯ್ದ. ವಾಲಿಯ ಜೊತೆ ಸ್ನೇಹ ಸಂಪಾದಿಸಿ ಹೆಂಡಿರನ್ನು ಬದಲಾಯಿಸಿಕೊಳ್ಳುವ ಒಪ್ಪಂದಕ್ಕೆ ಅಣಿಯಾದ. ಮಾಡಿದ್ದೆಲ್ಲವೂ ಧರ್ಮಬಾಹಿರ ಕೆಲಸಗಳೇ. ಅವನಲ್ಲಿ ಸಾಮ್ರಾಜ್ಯದಲ್ಲಿ ನಾಗರಿಕತೆಯಿತ್ತು ಆದರೆ ಸಂಸ್ಕೃತಿ ಇರಲಿಲ್ಲ. ಅಧರ್ಮ ಆತನ ಅಳಿವಿಗೆ ಕಾರಣವಾಯ್ತು.

ಭಾರತಕಥೆಯ ಅಂತ್ಯದಲ್ಲಿ ವ್ಯಾಸರು ಹೇಳುತ್ತಾರೆ: "ನಾನು ನನ್ನ ಕೈಗಳೆರಡನ್ನೂ ಮೇಲಕ್ಕೆತ್ತಿ ಕೂಗಿ, ಧರ್ಮಮಾರ್ಗದಿಂದ ಸಂಪತ್ತು ಮತ್ತು ಪ್ರೀತಿ ಬರಲಿ ಎಂದರೆ ಯಾಕೆ ಯಾರೂ ಕೇಳಿಸಿಕೊಳ್ಳುತ್ತಿಲ್ಲ?" ಇಷ್ಟೆಲ್ಲಾ ಇದ್ದರೂ ಧರ್ಮವೆಂದರೇನು ಎಂದು ಹೇಳುವಲ್ಲಿ ಇವಾವುದೂ ಕೆಲಸಮಾಡಲು ಸಮರ್ಥವಾಗಿಲ್ಲ! ಧರ್ಮವೇನೆಂಬುದನ್ನು ಅರಿಯಲು ವಿಭಿನ್ನ ನೋಟಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ. ವಿವಿಧ ಮುಖಗಳಲ್ಲಿ ವಿಭಿನ್ನವಾಗಿ ಹೊಳೆಯುವ ವಜ್ರದಂತೇ ಧರ್ಮದ ಮುಖಗಳು ಒಂದೊಂದು ಕಡೆ ಒಂದೊಂದು ರೀತಿ ಕಾಣುತ್ತವೆ; ಕೈಲಾಸ ಪರ್ವತವನ್ನು ನಾಲ್ಕು ದಿಕ್ಕಿನಿಂದ ನೋಡಿದವರೂ ವಿಭಿನ್ನ ರೂಪಗಳಿಗೆ ಅದನ್ನು ಹೋಲಿಸುತ್ತಾರಲ್ಲಾ ಇದೂ ಹಾಗೇ. ಎಲ್ಲಾ ಮುಖಗಳೂ ಸುಂದರವೇ ಆದರೆ ಸಮಗ್ರವಾಗಿ ಧರ್ಮವನ್ನು ವರ್ಣಿಸಲು ಯಾವುದೇ ಒಂದು ಮುಖದ ತೀರ್ಮಾನ ಮಾಪನವಾಗಲಾರದು. ಈಗ ಚಿಕ್ಕದೊಂದು ಉದಾಹರಣೆಯನ್ನು ನೋಡೋಣ:

ಒಂದೂರಿನಲ್ಲಿ ಒಬ್ಬಾತನಿದ್ದ, ಆತನಿಗೆ ನಾಲ್ಕು ಮಕ್ಕಳು. ತನ್ನ ಮಕ್ಕಳು ಶೀಘ್ರತೀರ್ಮಾನ ತೆಗೆದುಕೊಳ್ಳುವುದರ ಬದಲು ನಿಧಾನವಾಗಿ ತೆಗೆದುಕೊಳ್ಳುವುದನ್ನು ಕಲಿಯಲೆಂಬ ಆಸೆ ಆ ವ್ಯಕ್ತಿಗೆ. ನಾಲ್ವರಿಗೂ ಪ್ರಶ್ನೆಗಳನ್ನಿತ್ತು ಉತ್ತರಕ್ಕಾಗಿ ದೂರದಲ್ಲಿರುವ ಮರಸೇಬುವಿನ ಮರವನ್ನು ಕಂಡುಬರುವಂತೇ ಅವರನ್ನು ಕಳಿಸಿದ. ಮೊದಲನೇ ಮಗ ಚಳಿಗಾಲದಲ್ಲಿ ಅಲ್ಲಿಗೆ ತೆರಳಿದರೆ ಎರಡನೇ ಮಗ ವಸಂತಕಾಲದಲ್ಲಿ ತೆರಳಿದ, ಮೂರನೆಯಾತ ಬೇಸಿಗೆಯಲ್ಲಿ ತೆರಳಿದರೆ ನಾಲ್ಕನೆಯವ ಮಳೆಗಾಲದಲ್ಲಿ ಅಲ್ಲಿಗೆ ತೆರಳಿದ. ಎಲ್ಲರೂ ಅಲ್ಲಿಗೆ ಹೋಗಿಬಂದಾಯ್ತು ಎಂದಾದಮೇಲೆ ಅವರನ್ನೆಲ್ಲಾ ಒಟ್ಟಿಗೇ ಮಾತನಾಡಲು ಈ ವ್ಯಕ್ತಿ ಕರೆದ.

ಮೊದನೆಯ ಹೇಳಿದ "ಮರ ತುಂಬಾ ವಿಕೃಷ್ಟವಾಗಿದ್ದು ತಿರುವುಗಳಿಂದ ಕೂಡಿದೆ."

ಎರಡನೇ ಮಗ ಹೇಳಿದ-"ಮರ ಹಸಿರು ಮೊಗ್ಗುಗಳಿಂದ ಕೂಡಿದ್ದು ಫಲಭರಿತವಾಗಬಹುದೆಂಬ ಭರವಸೆಯಿಂದಿದೆ."

ಮೂರನೆಯ ಮಗ ಹೇಳಿದ-"ಮರ ಸುಂದರವಾದ ಹೂವುಗಳಿಂದ ಕೂಡಿದ್ದು ಆಹ್ಲಾದಕರ ಪರಿಮಳ ಬೀರುತ್ತಿದೆ. ಅಷ್ಟು ಚಂದದ ಮರವನ್ನು ನಾನು ಇದುವರೆಗೆ ಎಲ್ಲೂ ನೋಡಲಿಲ್ಲ."

ನಾಲ್ಕನೆಯವ ಹೇಳಿದ"ಮರ ಪ್ರಬುದ್ಧವಾಗಿದೆ, ಹಣ್ಣುಗಳು ಉದುರುತ್ತಿವೆ. ಸಮೃದ್ಧವಾಗಿದ್ದು ಜೀವನದಲ್ಲಿ ಸಂತೃಪ್ತವಾದ ಹಾಗೇ ಕಾಣುತ್ತಿದೆ.   

ಎಲ್ಲರ ಅಭಿಪ್ರಾಯಗಳನ್ನು ಕೇಳಿದ ತಂದೆ ಉತ್ತರಿಸಿದ: "ಎಲ್ಲರ ಹೇಳಿಕೆಗಳೂ ಸರಿಯೇ, ಆದರೆ ಒಬ್ಬೊಬ್ಬರು ಮರದ ಒಂದೊಂದು ಋತುವಿನ ಜೀವನಗತಿಯನ್ನು ಕಂಡಿದ್ದೀರಿ. ಒಂದೇ ಋತುವಿನಲ್ಲಿ ಮರದ ಜೀವನವನ್ನು ಅಳೆಯಲು ಹೇಗೆ ಅಸಾಧ್ಯವೋ ಹಾಗೇ ಮನುಷ್ಯನ ಜೀವನವನ್ನು ಅಷ್ಟು ಬೇಗ ಅಳೆಯಲು ಸಾಧ್ಯವಿಲ್ಲ. ಸಹಜವಾಗಿ ಮನುಷ್ಯ ಜೀವನದಲ್ಲಿ ಕಷ್ಟ, ನೆಮ್ಮದಿ, ಪ್ರೀತಿ, ಸಂತೋಷವೇ ಮೊದಲಾದ ಹಲವಾರು ಸನ್ನಿವೇಶಗಳಿರುತ್ತವೆ. ಎಲ್ಲಾ ಮುಖಗಳನ್ನೂ ನೋಡಿದಮೇಲೆ ಮಾತ್ರ ಒಬ್ಬ ಮನುಷ್ಯನ ಬಗ್ಗೆ ಹೇಳಲು ಸಾಧ್ಯ.  ಚಳಿಗಾಲದಲ್ಲಿ ಬೇಡವೆಂದು ಬಿಟ್ಟುಬಿಟ್ಟರೆ, ವಸಂತ ಋತುವಿನ ಭರವಸೆಯಿಂದ ನೀವು ವಂಚಿತರಾಗುತ್ತೀರಿ, ಬೇಸಿಗೆಯ ಸೌಂದರ್ಯವನ್ನು ಕಾಣಲು ಸಾಧ್ಯವಾಗುವುದಿಲ್ಲ, ಮಳೆಗಾಲದ ಸಮೃದ್ಧಿ-ಸಂತೃಪ್ತಿಯನ್ನು ಪಡೆಯಲಾಗುವುದಿಲ್ಲ."

ಋತುಮಾನಕ್ಕೆ ತಕ್ಕಂತೇ ಮರದ ಧರ್ಮ ಬದಲಾಗುತ್ತದೆ! ಹಾಗಾದರೆ ಮರದ ಸೊಬಗನ್ನು ಒಟ್ಟಾರೆಯಾಗಿ ತಿಳಿದುಕೊಳ್ಳಬೇಕಾದರೆ ನಾಲ್ಕೂ ಕಾಲಗಳಲ್ಲಿ ಅದನ್ನು ನೋಡಿ ಅರ್ಥೈಸಬೇಕಾಗುತ್ತದೆ. ಅದೇ ರೀತಿ ಧರ್ಮ ಎಂದರೇನು ಎಂಬುದನ್ನು ಅರಿಯಬೇಕಾದಾಗ ಹಲವು ಮುಖಗಳಿಂದ ಅದನ್ನು ಆಘ್ರಾಣಿಸಬೇಕು, ಆಸ್ವಾದಿಸಬೇಕು.

ಧರ್ಮದ ಬಗ್ಗೆ ತಿಳಿದುಕೊಳ್ಳಲು ಅನೇಕ ಉದಾಹರಣೆಗಳು ಸಿಗುತ್ತವಾದರೂ ಎಲ್ಲವೂ ನೇರವಾಗಿ ಅದನ್ನು ಪ್ರಸ್ತುತಗೊಳಿಸುವುದಿಲ್ಲ. ಮಹಾಭಾರತದ ’ಯಕ್ಷಪ್ರಶ್ನೆ’ಯ ಸನ್ನಿವೇಶವನ್ನು ನೋಡುವ ಮೂಲಕ ಧರ್ಮವನ್ನು ಅರಿಯಲು ಯತ್ನಿಸೋಣ:

ಗತಃಪ್ರಾಣರಾಗಿದ್ದ ತಮ್ಮಂದಿರ ಜೀವವನ್ನು ಮರಳಿಸುತ್ತಾ ಯುಧಿಷ್ಠಿರನಲ್ಲಿ ಯಕ್ಷ ಕೇಳಿದ:"ಒಬ್ಬನೇ ಸಹೋದರನಿಗೆ ಜೀವದಾನ ನೀಡುವೆ ಯಾರಾದರೂ ಒಬ್ಬನನ್ನು ಮಾತ್ರ ಆಯ್ದುಕೋ ಎಂದಾಗ ಯಾಕೆ ನಕುಲನನ್ನೇ ಆಯ್ದುಕೊಂಡೆ?"

ಯುಧಿಷ್ಠಿರ ಹೇಳಿದ : "ಧರ್ಮೊ ರಕ್ಷತಿ ರಕ್ಷಿತಃ" ಆತನ ಮಾತಿನ ಇಂಗಿತವೇನೆಂದರೆ ಯುಧಿಷ್ಠಿರ ಕುಂತಿಯ ಮಗ, ನಕುಲ ಮಾದ್ರಿಯ ಮಗ, ತನ್ನ ತಾಯಿ ಕುಂತಿಗೆ ತಾನೊಬ್ಬ ಮರಳಿ ಸಿಗುವಂತೆಯೇ ಮಲತಾಯಿ ಮಾದ್ರಿಗೆ ಒಬ್ಬ ಮಗನಾದರೂ ಮರಳಿ ಸಿಗಲಿ ಎಂಬುದಾಗಿತ್ತು.

ಸನಾತನತೆಯ ಪ್ರಮುಖ ಅಂಶವೇ ಧರ್ಮ. ಧರ್ಮದ ಸೆಲೆಯಿಂದಲೇ ಮಿಕ್ಕೆಲ್ಲ ನೀತಿಗಳು-ರೀತಿ-ರಿವಾಜುಗಳು ಹುಟ್ಟಿಕೊಂಡವು.  

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ ಲೋಕೇ ಧರ್ಮಿಷ್ಠಂ ಪ್ರಜಾಉಪಸರ್ಪಂತಿ
ಧರ್ಮೇಣ ಪಾಪಮಪನುದತಿ ಧರ್ಮೋ ಸರ್ವಂ ಪ್ರತಿಷ್ಠಿತಂ |
ತಸ್ಮಾದ್ಧರ್ಮಂ ಪರಮಂ ವದಂತಿ ||

              --ತೈತ್ತಿರೀಯ ಅರಣ್ಯಕದ ಮಹಾನಾರಾಯಣೋಪನಿಷತ್ತು.

ಸಾರಾಂಶ: ಧರ್ಮವು ಎಲ್ಲಾ ಜಗತ್ತಿನ ಆಧಾರ. ಲೋಕದಲ್ಲಿ ಜನರು ಧರ್ಮಿಷ್ಠರನ್ನು ಆಶ್ರಯಿಸುತ್ತಾರೆ. ಧರ್ಮದಿಂದ ಪಾಪವು ದೂರವಾಗುತ್ತದೆ. ಧರ್ಮದಲ್ಲಿಯೇ ಎಲ್ಲವೂ ನೆಲೆನಿಂತಿದೆ. ಆದ್ದರಿಂದ ಪ್ರಾಜ್ಞರು ಧರ್ಮವನ್ನು ಶ್ರೇಷ್ಠವೆಂದು ಹೇಳುತ್ತಾರೆ.

ಭಾಗವತ ಪುರಾಣದಲ್ಲಿ ನಾರದರು ಧರ್ಮರಾಜನಿಗೆ ಉಪದೇಶಿಸಿದ ಸನ್ನಿವೇಶವೊಂದಿದೆ. ಅಲ್ಲಿ ಅವರು ಸತ್ಯ, ದಯೆ, ನಾಚಿಕೆ ಮೊದಲಾದ ಮೂವತ್ತು ಗುಣಗಳನ್ನು ಯಾದಿಮಾಡಿ ಹೇಳುತ್ತಾರೆ: "ನೃಣಾಮಯಂ ಪರೋ ಧರ್ಮಃ ಸರ್ವೇಷಾಂ ಸಮುದಾಹೃತಃ" [ಇದು ಎಲ್ಲ ಮಾನವರಿಗೂ ಶ್ರೇಷ್ಠಧರ್ಮ] ಎಲ್ಲಾ ಮಾನವರಿಗೂ ಎಂದಿದ್ದರಿಂದ ಜಾತಿ, ಮತ, ಪಂಥ, ದೇಶ, ಕಾಲ, ಕುಲ, ವೃತ್ತಿ ಯಾವುದೇ ಆಗಿದ್ದರೂ ಧರ್ಮ ಎಂಬುದು ಮಾತ್ರ ಎಲ್ಲಾ ಮಾನವರಿಗೂ ಒಂದೇ ಎಂಬ ವಿಶಾಲದೃಷ್ಟಿಕೋನ ಅವರ ಹೇಳಿಕೆಯಲ್ಲಿದೆ. ಯಾವ ಧರ್ಮ ಜಗತ್ತಿನಲ್ಲಿ [ಮಾನವ ಜೀವನದಲ್ಲಿ] ಆದರ್ಶಗಳನ್ನು ಎತ್ತಿಹಿಡಿಯುತ್ತದೆಯೋ ಅಂತಹ ಧರ್ಮವೇ ನಿಜವಾದ ಧರ್ಮ.

ಧರ್ ಎಂಬ ಪದದಿಂದ ಧರ್ಮ ಹುಟ್ಟಿದೆ. ಧರ್ ಎಂದರೆ ಧರಿಸು, ಹಿಡಿದುಕೋ, ತಾಳಿಕೋ, ಇರುವ ಸ್ಥಿತಿಯಲ್ಲೇ ಹಾಗೇ ಕಾಪಾಡಿಕೋ ಎಂಬೆಲ್ಲಾ ಅರ್ಥಗಳಿವೆ. ಪೂರ್ವಾಗ್ರಹವಿಲ್ಲದೇ ಯಾವುದನ್ನು ಯಾವುದು ಇರುವ ಸ್ಥಿತಿಯಲ್ಲಿ ಹಾಗೇ ಇರಲಿಕ್ಕೆ ಬಿಡುವುದೋ ಮತ್ತು ಹಾಗೇ ಸುರಕ್ಷಿತವಾಗಿರುವುದನ್ನು ಅನುಮೋದಿಸುವುದೋ ಆ ನೀತಿಸೂತ್ರಗಳನ್ನೇ ಅಥವಾ ಜೀವನ ಸಂವಿಧಾನವನ್ನೇ ಧರ್ಮ ಎಂದು ನಾವು ಗುರುತಿಸಬಹುದಾಗಿದೆ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತೀ ಮನುಷ್ಯ ತಾನು ಸುಲಲಿತವಾಗಿ ಜೀವನ ಸಾಗಿಸುವುದರ ಜೊತೆಗೆ ಲೋಕದ ಎಲ್ಲರಿಗೂ ಅದೇ ರೀತಿಯಲ್ಲಿ ಬದುಕಲು ಬಿಡುವುದು, ಅವರ ಹಕ್ಕುಗಳನ್ನು ಮೊಟಕುಗೊಳಿಸದಿರುವುದು, ತನ್ಮೂಲಕ ಎಲ್ಲರೂ ಪರಸ್ಪರ ಧರ್ಮಾಚರಣೆಯೆಂಬ ಜೀವನ ಸಂವಿಧಾನಕ್ಕೆ ಬದ್ಧರಾಗಿರುತ್ತಾ ಅಭಿವೃದ್ಧಿಹೊಂದುವುದು ಧರ್ಮದ ಉದ್ದೇಶ.

ಧರ್ಮದಂತೇ ನಡೆದರೆ ಯಾರೂ ಆತಂಕ, ಕಳವಳಗಳನ್ನು ಎದುರಿಸುವ ಅಗತ್ಯವಿಲ್ಲ. ಎಲ್ಲರೂ ಧರ್ಮದ ಪಾಲನೆಮಾಡಿದಾಗ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಆಚರಿಸಲ್ಪಟ್ಟು ಜಾಗೃತವಾಗಿರುತ್ತದೆ. ಅಲ್ಲಿ ತಪ್ಪುಗಳಿಗೆ, ಜಗಳ-ದೊಂಬಿಗಳಿಗೆ ಅವಕಾಶವೇ ಇರುವುದಿಲ್ಲ. ಮಹಾಭಾರತದ ಸನ್ನಿವೇಶವೊಂದರಲ್ಲಿ ಹಠಹಿಡಿದು ಪ್ರಶ್ನೆ ಕೇಳುತ್ತಿರುವ ಯುಧಿಷ್ಠಿರನಿಗೆ ಭೀಷ್ಮರು ಕೊನೆಗೊಮ್ಮೆ ಉತ್ತರಿಸುತ್ತಾರೆ: ಧರ್ಮ ಸಕಲ ಜೀವಜಂತುಗಳ ಒಳಿತನ್ನು ಬಯಸುತ್ತದೆ; ಎಲ್ಲ ಜೀವಜಂತುಗಳ ಉನ್ನತಿ ಮತ್ತು ಅಭ್ಯುದಯವನ್ನು ಬಯಸುವ ಆಜ್ಞೆಯಾಗಿದೆ. ಹೀಗಾಗಿ ಯಾವುದು ಉನ್ನತಿ ಮತ್ತು ಅಭಿವೃದ್ಧಿಯೆಡೆಗೆ ಕರೆದೊಯ್ಯುತ್ತದೋ ಅದೇ ಧರ್ಮವೆಂದು ಪರಿಗಣಿಸಲ್ಪಡುತ್ತದೆ. ಎಲ್ಲಾ ಜೀವಜಂತುಗಳ ಅಸ್ಥಿತ್ವವನ್ನೂ, ಬದುಕನ್ನೂ ಎತ್ತಿಹಿಡಿಯುವುದರಿಂದ ಅದು ಧರ್ಮವೆನಿಸಿಕೊಳ್ಳುತ್ತದೆ. ಯಾವುದಕ್ಕೆ ಎಲ್ಲಾ ಜೀವಜಂತುಗಳ ಒಳಿತನ್ನು ನಿರ್ಧರಿಸಲು ಸಾಧ್ಯವೋ ಅದು ಧರ್ಮವೆನಿಸಿಕೊಳ್ಳುತ್ತದೆ.

ಧರ್ಮವೆಂಬುದಕ್ಕೆ ಇಂತಿಷ್ಟೇ ಜನ ಅದರ ಫಲಾನುಭವಿಗಳು ಎಂದಿಲ್ಲ, ಇಂಥಾದ್ದೇ ಗುಂಪು ತನ್ನನ್ನು ಅನುಮೋದಿಸುವವರು ಎಂಬುದಿಲ್ಲ, ಧರ್ಮವೆಂಬುದು ಯಾವುದೋ ಮತದ ಚರಾಸ್ತಿ, ಸ್ಥಿರಾಸ್ತಿ, ಅನುಯಾಯಿಗಳು, ಅನುಮೋದಕರು, ಪ್ರಚಾರಕರು, ಸಂಖ್ಯಾಬಲದಲ್ಲಿ ಹೆಚ್ಚಿಗೆ ಇರುವವರು ಇವ್ಯಾವುದೂ ಸಂಬಂಧವೇ ಇಲ್ಲ! ನೀತಿವಂತರಾಗಿ ಬದುಕುವುದು ಹೇಗೆ, ಯಾವುದು ನೀತಿ ಮತ್ತು ಯಾವುದು ಅನೀತಿ-ಇವಿಷ್ಟನ್ನು ವಿಧಿಸುವ ಕರ್ತೃತ್ವಶೀಲ ಮಾನವ ಜೀವನ ಸಂವಿಧಾನವೇ ಧರ್ಮ.    

ಮಹಾಭಾರತದ ಮಹತ್ವದ ಒಂದು ಘಟ್ಟ: ದ್ರೌಪದಿ ವಸ್ತ್ರಾಪಹರಣ. ಧರ್ಮಾತ್ಮನೆನಿಸಿದ ಧರ್ಮರಾಯ  ಜೂಜಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದೂ ಅಲ್ಲದೇ ಹೆಂಡತಿ ದ್ರೌಪದಿಯನ್ನು ಪಣವಾಗಿ ಇಟ್ಟನಲ್ಲಾ ಇದು ಸರಿಯೇ? ಯುಧಿಷ್ಠಿರನಿಗೆ ಆ ಅಧಿಕಾರವಿತ್ತೇ?- ಎಂಬುದು ಹಲವರ ಪ್ರಶ್ನೆ. ತನನ್ನು ಜೂಜಿಗೆ ಬಳಸಿಕೊಳ್ಳುವುದು ಸರಿಯೇ ಎಂದು ಸ್ವತಃ ದ್ರೌಪದಿ ತುಂಬಿದ ಸಭೆಯಲ್ಲಿ ಭೀಷ್ಮರಲ್ಲಿ ಕೇಳಿದಾಗ ಭೀಷ್ಮರಿಗೆ ಉತ್ತರಿಸುವುದು ಸಾಧ್ಯವಾಗಿರಲಿಲ್ಲ! "ನಿನ್ನ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದು ಧರ್ಮಸೂಕ್ಷ್ಮ" ಎಂದು ಮಾತು ಮುಗಿಸಿದ್ದರು. ಯುಧಿಷ್ಠಿರನಿಗೆ ಜೂಜಾಟದ ಚಟವಿತ್ತು ಎಂಬುದು ಧರ್ಮದ ಮುಖದಿಂದ ನೋಡಿದಾಗ ಅದು ಅತಿಯಾಗಿತ್ತೆಂದು ತಿಳಿಯುತ್ತದೆ. ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋದ ಆತನಿಗೆ ಕೊನೆಗೆ ತನ್ನನ್ನೂ ತನ್ನವರನ್ನೂ ಪಣವಾಗಿಡುವ ಹೊತ್ತು ಎದುರಾಯ್ತು. ಜೂಜಾಟವನ್ನೇ ಆಡದಿದ್ದರೆ ಕಥೆ ಬೇರೆಯಿರುತ್ತಿತ್ತು. ಧರ್ಮಾತ್ಮನೆನಿಸಿಕೊಂಡ ಯುಧಿಷ್ಠಿರನ ಕೆಲವು ತಪ್ಪುಗಳು ಧರ್ಮದ ದಾರಿಯಿಂದ ತುಸು ಭಿನ್ನವಾಗಿ ಕಾಣುತ್ತವೆ. ಇದರ ಪರಿಣಾಮವಾಗಿ ಪಾಂಡವರು ವನವಾಸ, ಅಜ್ಞಾತವಾಸ ಇತ್ಯಾದಿಗಳಲ್ಲಿ ಕಳೆಯಬೇಕಾಗಿ ಬಂತು. ನಮ್ಮ ಕವಿಜನರು ಇಂತಹ ಧರ್ಮಸೂಕ್ಷ್ಮಗಳ ಬಗ್ಗೆ ಬಹಳ ವಿವರಗಳನ್ನು ಒದಗಿಸಲು ಮುಂದಾಗುವುದಿಲ್ಲ. ’ಧರ್ಮಸ್ಯ ತತ್ತ್ವಮ್ ನಿಹಿತತ್ ಗುಹಾಯಾಮ್’ ಎಂಬಂತೇ ಧರ್ಮಸೂಕ್ಷಗಳ ಕಪ್ಪುಗುಹೆಗಳು ಅಲ್ಲಲ್ಲಿ ಕಾಣುತ್ತವೆ. ಪ್ರಾಯಶಃ ಜನ್ಮಾಂತರಗಳ ಕರ್ಮಬಂಧನಗಳ ಸೆರಗು ಅಲ್ಲಿರಬಹುದೇನೋ.  

ಇಂದಿನ ಮತ್ತು ಮುಂದಿನ ನಮ್ಮ ಪೀಳಿಗೆಗೆ ಇಂತಹ ಕಥೆಗಳನ್ನು ನಾವು ಹೇಳಬೇಕು. ಜೀವನದಲ್ಲಿ ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎಂಬುದನ್ನು ತನ್ಮೂಲಕ ಅವರು ನಿರ್ಧರಿಸಲು ಸಮರ್ಥರಾಗಬೇಕು. ರಾಮಾಯಣ-ಮಹಾಭಾರತಗಳಂತಹ ಮಹಾಕಾವ್ಯಗಳನ್ನು ಓದುವುದರಿಂದ ರಂಜನೆಯ ಜೊತೆಗೆ ಅವರಿಗೆ ಅವರ ಜೀವನದಲ್ಲಿ ಜೀವನ ಸಂವಿಧಾನದ ನೀತಿ ಸೂತ್ರಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ. ಇಂತಹ ಕಾವ್ಯಗಳು ವ್ಯಕ್ತಿಯ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.

ಜೀವನದಲ್ಲಿ ಕೆಲವೊಮ್ಮೆ ಧಾರ್ಮಿಕ ಸಂವಿಧಾನಕ್ಕೂ ರಾಜಕೀಯ ಸಂವಿಧಾನಕ್ಕೂ ಸಂಬಂಧಿಸಿದಂತೇ ನಮ್ಮಲ್ಲಿ ತಿಕ್ಕಾಟ ಆರಂಭವಾಗಬಹುದು; ಯಾವಾಗ ಅವೆರಡೂ ಬೇರೆ ಬೇರೆಯಾಗಿರುತ್ತವೋ ಅಂತಹ ಸನ್ನಿವೇಶಗಳಲ್ಲಿ ಯಾವುದನ್ನು ಅನುಸರಿಸಬೇಕು ಎಂದು ನಿರ್ಧರಿಸುವುದು ಸುಲಭವಲ್ಲ. ಸುಸಂಸ್ಕೃತನಾದವ ಧಾರ್ಮಿಕ ಸಂವಿಧಾನವನ್ನೇ ಒಪ್ಪಿಕೊಳ್ಳುತ್ತಾನೆ, ನಾಗರಿಕನಾದವ ರಾಜಕೀಯದ ಸಂವಿಧಾನವನ್ನು ಒಪ್ಪಿಕೊಳ್ಳುತ್ತಾನೆ. ಮಾನವ-ಧಾರ್ಮಿಕ ನೀತಿಸೂತ್ರಗಳು ಜೀವನದ ಮೂಲಭೂತ ಅಂಶಗಳು, ಅವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ಧರ್ಮದ ಉಲ್ಲಂಘನೆಯಾಗಬಹುದು. ಸಾಮಾಜಿಕ ಪರಿಣಾಮಗಳಿಗೆ ಅಂಜಿ ಧರ್ಮಕ್ಕೆ ವಿರೋಧವಾಗಿ ರಾಜಕೀಯ ಸಂವಿಧಾನವನ್ನು ಆಯ್ಕೆಮಾಡಿಕೊಳ್ಳುವ ಅನಿವಾರ್ಯತೆ ಕೆಲವರಿಗಿರಬಹುದು; ಆಯ್ಕೆ ಅವರವರ ಮನೋಧರ್ಮಕ್ಕೆ ಬಿಟ್ಟಿದ್ದು.

ಧಾರ್ಮಿಕ ಸಂವಿಧಾನ ಮತ್ತು ರಾಜಕೀಯ ಸಂವಿಧಾನಗಳ ತಿಕ್ಕಾಟವನ್ನು ಮಹಾತ್ಮಾಗಾಂಧಿ ಅನುಭವಿಸಿದ್ದರು; ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಕುಳಿತಿದ್ದ ಅವರು ಕರಿಯನೆಂಬ ಕಾರಣಕ್ಕೆ ಸೀಟು ಬಿಟ್ಟುಕೊಡಬೇಕಾಯ್ತು. ಅಂಥಾದ್ದೇ ಘಟನೆಯಲ್ಲಿ ಕರಿಯಳೆಂಬ ಕಾರಣಕ್ಕೆ ರೋಸಾ ಪಾರ್ಕ್ಸ್ ಬಸ್ಸಿನಲ್ಲಿ ಸೀಟುಬಿಟ್ಟುಕೊಡಬೇಕಾಯ್ತು. ಒಕ್ಕೂಟವನ್ನುಳಿಸುವ ಸಲುವಾಗಿ ಇರುವ ಯುದ್ಧದ ಅಗತ್ಯತೆಯ ಕುರಿತಂತೇ ಅಬ್ರಹಾಂ ಲಿಂಕನ್ ರನ್ನು ಯಮಯಾತನೆಗೆ ಈಡುಮಾಡಿದ್ದು ಇಂಥಾದ್ದೇ ಕಾರಣಕ್ಕಾಗಿ. ಆದರೆ ಇವರೆಲ್ಲರೂ ಮಾನವ ಜೀವನ ಸಂವಿಧಾನವನ್ನೇ ಆತುಕೊಂಡರು; ಧರ್ಮವನ್ನು ಬಿಡಲಿಲ್ಲ.  

ಸನಾತನ ಜೀವನಧರ್ಮದಲ್ಲಿ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮವೆಂದರೆ ಮಾನವ ಜೀವನ ಸಂವಿಧಾನ, ಅರ್ಥವೆಂದರೆ ಧರ್ಮಮಾರ್ಗದಲ್ಲಿ ಗಳಿಸುವ ಸಿರಿಸಂಪತ್ತು, ಕಾಮವೆಂದರೆ ಧರ್ಮಮಾರ್ಗದಲ್ಲಿ ಅನುಭವಿಸುವ ಸುಖೋಪಭೋಗಗಳು, ಮೋಕ್ಷವೆಂದರೆ ಸಕಲವನ್ನೂ ಅನುಭವಿಸಿದ ತೃಪ್ತಿಯಿಂದ ದೇಹದಿಂದ ಮತ್ತು ಜರಾಮರಣ ಚಕ್ರದಿಂದ ಬಿಡುಗಡೆಗೊಳ್ಳುವುದು. ಸಂತೋಷ, ಸಮೃದ್ಧಿ ಮತ್ತು ಉತ್ತಮ ಜೀವನ ಎಲ್ಲರೂ ಬಯಸುವ ಮಾನವ ಜನ್ಮಸಿದ್ಧ ಹಕ್ಕು; ಎಲ್ಲಿಯವರೆಗೆ ಧರ್ಮದ ತಳಹದಿಯಮೇಲೆ ಅವುಗಳನ್ನು ಅನುಭವಿಸಲಾಗುತ್ತದೋ ಅಲ್ಲಿಯವರೆಗೂ ಅದು ಸರಿಯೇ. ಮೋಕ್ಷವೇ ನಮ್ಮ ಗುರಿಯಾದರೆ, ಸಂಸಾರಿಗಳಾಗಿ ಸಮಾಜದಲ್ಲಿ ತೊಡಗಿಕೊಳ್ಳಬೇಕು, ತನ್ನಿಂದಾದ ಮಟ್ಟಿಗೆ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕು; ಆದರೆ ಎಲ್ಲವೂ ಧರ್ಮದ ನೆಲೆಗಟ್ಟಿನಲ್ಲೇ ನಡೆಯಬೇಕು.

Friday, November 1, 2013

ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!

ಚಿತ್ರಗಳ ಋಣ: ಅಂತರ್ಜಾಲ 
ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!
                                             
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಗಂಡುಮೆಟ್ಟಿನ ಕಲೆಯಾಗಿ ’ಯಕ್ಷಗಾನ’ವೆಂದು ನಾಮಾಂತರಗೊಂಡ ಕಲೆಯೊಂದರ ಬಗೆಗೆ ಡಾ| ಶಿವರಾಮ ಕಾರಂತರ ಸಂಶೋಧನೆ ಸಮಗ್ರವಾಗಿಲ್ಲ ಅಥವಾ ಸಮೃದ್ಧವಾಗಿಲ್ಲ ಎನ್ನುವ ಮಾತು ಸ್ಥಳೀಯ ಕಲಾಚಿಂತಕರಲ್ಲಿ ಆಗಾಗ ಕೇಳಿಬರುತ್ತಲೇ ಇರುವುದು ಹೊಸದೇನಲ್ಲ; ಕಾರಂತರು ನಡೆಸಿದ್ದು some-ಶೋಧನೆಯೇ ಹೊರತು ಸಂಶೋಧನೆ ಎನಿಸುವುದಿಲ್ಲ ಯಾಕೆ ಎಂಬುದನ್ನು ಸಮರ್ಥವಾಗಿ ಬಿಂಬಿಸಿದವರು ‘’ದಶಾತಾರಿಷ್ಟ’’ವನ್ನು ತಯಾರಿಸಿದ ’’ನಾಶಾ’’ ಹೊನ್ನಾವರ.[ನಾಜಗಾರ ಗಂಗಾಧರ ಶಾಸ್ತ್ರಿ, ಹೊನ್ನಾವರ]’ದಶಾವತಾರ ಆಟ’ದ ಕುರಿತು 2013ರಲ್ಲಿ ಪ್ರಕಟಗೊಂಡ, ನಾಶಾ ಅವರ ಸಂಶೋಧನಾ ಪ್ರಬಂಧಗಳ ಸಂಕಲನವೇ ’ದಶಾವತಾರಿಷ್ಟ’! ಸಾಹಿತ್ಯಾಸಕ್ತ ನ್ಯಾಯವಾದಿಯೆಂದು ಉತ್ತರಕನ್ನಡದಲ್ಲಿ ಗುರುತಿಸಲ್ಪಟ್ಟ, ಹೊನ್ನಾವರದ ಜಿ.ವಿ.ಭಟ್ಟರ ಮೂಲಕ ಇಂಥಾದ್ದೊಂದು ಪುಸ್ತಕ ಕೈಗೆ ಬಂದಾಗ, ವಿಲಕ್ಷಣ ಹೆಸರನ್ನು ಹೊತ್ತ ಹೊತ್ತಗೆಯ ಪುಟಗಳ ಹಿಂದೆ ಅಡಗಿರಬಹುದಾದ ಚಮತ್ಕಾರ-ಚಕ್ಷುಗಳನ್ನು ಮತ್ತು ಹರಿತವಾದ ಲೇಖನಿಯನ್ನು ಹುಡುಕುತ್ತಾ ಪುಟಗಳನ್ನು ತೆರೆದರೆ, ಸಮಯದ ಪರಿವೆಯನ್ನು ಹರಿದೊಗೆದು ಓದಿಯೇ ಮುಗಿಸಬೇಕೆಂಬ ಅನಿಸಿಕೆ ಕಾಡಿದ್ದರಿಂದ ಆ ಕೆಲಸ ಗಂಟೆಯೆರಡರಲ್ಲೇ ಸಂಪನ್ನವಾಯ್ತು. 

ದಶಾವತಾರ ಆಟದ ಅತ್ಯದ್ಭುತ ಕಲಾವಿದ ದಿ|  ಮೂಡ್ಕಣಿ ನಾರಾಯಣ ಹೆಗಡೆ
ಚಿತ್ರಕೃಪೆ: ಕೀರ್ತಿಕುಮಾರ ಶಾಸ್ತ್ರಿ,ಹೊನ್ನಾವರ

ಪುಟಗಳ ನಡುವಿನ ಪುಟವೊಂದರಲ್ಲಿ ನಾಶಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಸಕ್ರಿಯವಾಗಿ ಆಗದಿದ್ದರೂ, ’ದಶಾವತಾರ ಆಟ’ವೆಂಬ ರಂಗಪ್ರಕಾರದಿಂದ ರಂಜಿಸಿದ ಹಿರಿಯ ಕಲಾವಿದರ ಋಣದಲ್ಲಿ ನಾವೆಲ್ಲಾ ಇದ್ದೇವೆಂಬ ಅನಿಸಿಕೆಯಿಂದ, ಹಿರಿಯಕಲಾವಿದರು ಬಡತನದಲ್ಲಿದ್ದರೂ ಅದನ್ನು ಕಾರಣವಾಗಿಸಿಕೊಳ್ಳದೇ ಕಲೆಯ ಸಾಂಪ್ರದಾಯಿಕ ಮೌಲ್ಯಗಳ ಉಳಿವಿಗಾಗಿ ದುಡಿದರು ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಆರಂಭದಲ್ಲೇ ಕೊಟ್ಟುಬಿಡುವುದು ಔಚಿತ್ಯವಾಗುತ್ತದೆ: ತನ್ನ ಹೆಂಡತಿ-ಮಕ್ಕಳ ಉಪವಾಸ ಪರಿಸ್ಥಿತಿಗೆ ನೊಂದು ಎರಡು ಸಲ ಆತ್ಮಹತ್ಯೆಗೆ ಯತ್ನಿಸಿ ವಿಫಲರಾದ ದಿ. ಮಲ್ಲಗದ್ದೆ ಗಣೇಶ ಹೆಗಡೆಯವರು ಮರುದಿನದ ‘ಆಟ’ದಲ್ಲಿ ಮಾಯಾ ಹಿಡಂಬಿಯಾಗಿ, ರಾಣಿಯಾಗಿ ಪ್ರೇಕ್ಷಕರನ್ನು ದಂಗುಬಡಿಸಿದ್ದನ್ನು ಉತ್ತರಕನ್ನಡದ ಹಿರಿಯ ಜನತೆ ಬಲ್ಲರು. ಶರಾವತಿ ನದಿಯನ್ನು ದಾಟಲು ಒಂದೂವರೆ ಆಣೆ[9ಪೈಸೆ]ದುಡ್ಡಿಲ್ಲದೇ, ಸಾಬರ ಅಂಗಡಿಯಲ್ಲಿ ಒಂದು ಕಟ್ಟು ಬೀಡಿ ಕಟ್ಟಿಕೊಟ್ಟು-ಬಂದ ಹಣದಲ್ಲಿ ಮನೆತಲ್ಪಿದ ದಿ. ಕೆರೆಮನೆ ಶಿವರಾಮ ಹೆಗಡೆ ‘’ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ’’ ಎಂಬ ಪದ್ಯದ ಸನ್ನಿವೇಶದಲ್ಲಿ ಗಧಾಯುದ್ಧದ ಕೌರವನಾಗಿ ರಂಗವನ್ನೇ ಸಾಕ್ಷಾತ್ ಕುರುಕ್ಷೇತ್ರದ ರಣರಂಗವಾಗಿಸಿ ತೋರಿಸಿದ್ದನ್ನು ಅದೇ ಜನ ಬಲ್ಲರು. ತಮಗಿದ್ದ ಹದಿನಾರು ಗುಂಟೆ ಅಡಕೆತೋಟದ ಗೇಣಿ ತೀರಿಸಲಾರದೇ ಮನೆ ಜಪ್ತಿಯಾದಾಗ ಒಂದು ತಿಂಗಳಕಾಲ ಬರೇ ಹಾಲು ಕುಡಿದು ಬಾಲ್ಯವನ್ನು ಕಳೆದು, ಹಗಲು ತೋಟದಲ್ಲಿ ಗೆಯ್ದು-ರಾತ್ರಿ ಆಟದಲ್ಲಿ ದುಡಿದು ಕಲೆಗೊಂದು ಮಾನ್ಯತೆಯೊದಗಿಸಿಕೊಟ್ಟ ದಿ. ಡಾ| ಕೆರೆಮನೆ ಮಹಾಬಲ ಹೆಗಡೆಯವರನ್ನು ಆ ಜನ ಮರೆಯಲಾರರು. ಇಂತಹ ಮಹನೀಯರನೇಕರ ನಿಸ್ವಾರ್ಥ ಸೇವೆಯಿಂದ, ಹೈಗನಾಡಿನ ರಂಗಕಲೆಯೊಂದು ತನ್ನ ಛಾಪನ್ನು ಹಾಗೇ ಉಳಿಸಿಕೊಂಡಿತು ಎಂಬುದಾದರೆ ಈ ಕಲೆಯ ಐತಿಹಾಸಿಕ ಹುಟ್ಟು- ಬೆಳವಣಿಗೆಗಳ ಬಗ್ಗೆ, ಕಲೆಯ ಅಶ್ರಯದಾತರ ಬಗ್ಗೆ, ಕಲೆಯ ಪ್ರಾದೇಶಿಕ ವ್ಯಾಪ್ತಿಯ ಬಗ್ಗೆ, ಕಾಲಾನಂತರದಲ್ಲಿ ಕಲೆಯಮೇಲಾದ ದಾಳಿ/ಅತಿಕ್ರಮಣಗಳ ಬಗ್ಗೆ ಆಮೂಲಾಗ್ರ ತಿಳಿದುಕೊಳ್ಳುವ ಬಯಕೆ ಕೆಲವರಲ್ಲಾದರೂ ಉದ್ಭವವಾಗುತ್ತದೆ. ಸಂಭಾವ್ಯ ಸಂದೇಹಗಳಿಗೆ ಸಂಶಯಾತೀತ ಉದಾಹರಣೆಗಳೊಂದಿಗೆ, ಐತಿಹಾಸಿಕ ಕಾಲಘಟ್ಟವನ್ನು ಸಾಕ್ಷ್ಯಾಧಾರಗಳ ಸಹಿತ ತಿಳಿಸಿಕೊಡುವುದರತ್ತ ನಾಶಾ ಪರಿಶ್ರಮಿಸಿದ್ದಾರೆ.

ಶಾಸ್ತ್ರಿಗಳು ಹೇಳುವುದಿಷ್ಟೇ: ಯಕ್ಷಗಾನ ಬೇರೆ ಮತ್ತು ದಶಾವತಾರ ಆಟವೇ ಬೇರೆ. ಎರಡನೇ ಶತಮಾನದಲ್ಲಿ ಸಂಸ್ಕೃತದ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು, ಆ ಕಾಲಘಟ್ಟದಲ್ಲೇ ರಚಿತವಾದ ಭರತಮುನಿಯ ನಾಟ್ಯ ಶಾಸ್ತ್ರವನ್ನು ಸಮಗ್ರವಾಗಿ ಆಧರಿಸಿ, ಬಳಸಿಕೊಂಡು 13-14ನೇ ಶತಮಾನದಲ್ಲಿ ಹೈಗನಾಡಿನಲ್ಲೇ ಹುಟ್ಟಿ ಬೆಳೆದ ಸಮೃದ್ಧ ರಂಗ ಕಲೆ-‘’ದಶಾವತಾರ ಆಟ’’ ಎಂಬ ರಂಗಪ್ರಾಕಾರವೊಂದು ರಂಗ ನಾಟಕ. ತನ್ನದೇ ಆದ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ, ಸಾತ್ವಿಕ ಆಯಾಮಗಳನ್ನೊಳಗೊಂಡು, ನವರಸಗಳನ್ನುಳ ರಂಜನಾಮಯ ಕಥಾಕೌತುಕಗಳನ್ನು ಉಣಬಡಿಸುವಲ್ಲಿ ಋಣವಿಲ್ಲದ ಅಥವಾ ಇನ್ನಾವುದೇ ರಂಗಕಲೆಗೆ ಋಣಿಯಾಗಿರಬೇಕಾದ ಅಗತ್ಯತೆಯಿರದ ಸಮಗ್ರ ಕಲೆ ’ದಶಾವತಾರ ಆಟ.’ ಕೇವಲ ರಾಮಾಯಣ, ಮಹಾಭಾರತ ಮತ್ತು ಇನ್ನಿತರ ಪೌರಾಣಿಕ ಕಥಾಭಾಗಗಳನ್ನು ಪದ್ಯಗಳ ರೂಪದಲ್ಲಿ ಬರೆದು ಅದನ್ನು ’ಪ್ರಸಂಗ’ವೆಂದರು; ಅದು ಪ್ರಸಂಗದ ಪಠ್ಯವಾಯ್ತು. ಅಂತಹ ಪಠ್ಯವನ್ನಾಧರಿಸಿ ಅದನ್ನು ಕಂಠಸ್ಥಗೊಳಿಸಿಕೊಂಡ ’ಆಡುಗಾರ’ ಭಾಗವತ, ಸಾಂದರ್ಭಿಕವಾಗಿ ಲಯ ಮತ್ತು ರಾಗಗಳಿಗೆ ಒತ್ತುಕೊಡುತ್ತಾ, ಮಿಕ್ಕುಳಿದ ಸಮಯದಲ್ಲಿ ವಾಚಿಕದ ಸಂಭಾಷಣೆಗೆ ಅನುಕೂಲ ಕಲ್ಪಿಸುತ್ತಾ, ಪಾತ್ರಧಾರಿಗಳು ಪಾತ್ರವನ್ನು ಸಮರ್ಥವಾಗಿ ಅಭಿನಯಿಸುವ ಮೂಲಕವೇ ಕಥಾಹಂದರ ಬಿತ್ತರಗೊಳ್ಳುವಂತೇ ಮಾಡುವ ಕಲೆ ದಶಾವತಾರ ಆಟ.  
 
ಐದಾರು ಶತಮಾನಗಳ ಕಾಲ ಹೆಸರಿನಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ, ಸಂಪ್ರದಾಯಕ್ಕೆ ಕೊರತೆಯಿಲ್ಲದೇ ಮುನ್ನಡೆದುಬಂದಿದ್ದ ದಶಾವತಾರ ಆಟ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಕಾಲಘಟ್ಟದಲ್ಲಿ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದು ಶಾಸ್ತ್ರಿಯವರ ಅಭಿಪ್ರಾಯ. ಜೈನಧರ್ಮೀಯಳೂ ಪರಮತ ಸಹಿಷ್ಣುವೂ ಮತ್ತು ಶೂರಳೂ ದಕ್ಷಳೂ ಆಗಿದ್ದ ರಾಣಿ ಚೆನ್ನಭೈರಾದೇವಿ ’ದಶಾವತಾರ ಆಟ’ಕ್ಕೆ ಮೂಲದಲ್ಲಿ ಆಶ್ರಯದಾತಳು ಎಂದು ಹೇಳುವುದರ ಜೊತೆಗೆ ಹೈಗನಾಡಿನ ದಶಾವತಾರ ಆಟ ಬಡೋದೆ, ಸಾಂಗ್ಲಿ, ರಾಮದುರ್ಗ, ಮೈಸೂರು ಮೊದಲಾದ ಅನ್ಯಪ್ರದೇಶಗಳಿಗೆ ತೆರಳಿ ಪ್ರದರ್ಶನ ನಡೆಸಿ ಅಂದಿನ ರಾಜಮಹಾರಾಜರುಗಳಿಂದ ಮನ್ನಣೆ ಗಳಿಸಿತು ಎಂಬುದನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಬ್ರಿಟಿಷ ಗೆಜೆಟಿಯರ್ ನಂತೇ ಹೈಗನಾಡೆಂದು ಕರೆಸಿಕೊಂಡ ಗೇರುಸೊಪ್ಪೆ ರಾಣಿಯ ಸಾಮ್ರಾಜ್ಯ ಇಂದಿನ ದಕ್ಷಿಣಕನ್ನಡದ ಬ್ರಹ್ಮಾವರ ಹೊಳೆಯೀಚಿನ ಕುಂದಾಪುರವನ್ನೊಳಗೊಂಡು ಗಂಗಾವಳಿ ನದಿತಟದ ಅಂಕೋಲಾವರೆಗೆ ವ್ಯಾಪಿಸಿತ್ತು. ಇದನ್ನು ಇತಿಹಾಸ ತಜ್ಞ ಮಂಜೇಶ್ವರ ಗೋವಿಂದ ಪೈಯವರ ಬರಹಗಳಲ್ಲಿ ಮತ್ತು ಸಹ್ಯಾದ್ರಿ ಉತ್ತರ ಕಾಂಡದಲ್ಲಿ ಓದಿ ತಿಳಿದುಕೊಳ್ಳಬಹುದಾಗಿದೆ.
ದಿ|ಮೂಡ್ಕಣಿ ನಾರಾಯಣ ಹೆಗಡೆ-ಚುಕ್ಕಿಚಿತ್ರ ಕಲಾವಿದ ಕೀರ್ತಿಕುಮಾರ್ ಶಾಸ್ತ್ರಿ ಅವರ ರಚನೆಯಲ್ಲಿ

ದಶಾವತಾರ ಆಟವೆಂಬುದು ಕೇವಲ ಗಾನ ಪ್ರಧಾನವಾದದ್ದಲ್ಲ, ಮೊದಲೇ ಹೇಳಿದಂತೇ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ ಮತ್ತು ಸಾತ್ವಿಕ ಅಭಿನಯಗಳ ಮಜಲುಗಳನ್ನು ಮೇಳೈಸಿಕೊಂಡ ಕಲೆ.  ಸ್ಥೂಲವಾಗಿ ಹೇಳುವುದಾದರೆ ಅರವತ್ತರ ಮುದುಕ ಅಭಿಮನ್ಯುವಿನ ಪಾತ್ರವನ್ನು ಮಾಡಬಾರದು, ಕೃಶದೇಹಿ ಭೀಮನ ಪಾತ್ರವನ್ನು ಪೋಷಿಸಲಾಗದು, ಸ್ತ್ರೀಯರು ಪುರುಷವೇಷ ತೊಡುವುದರಿಂದ ಗಂಡಿನ ದನಿಯ ಅನುಕರಣೆ ಮಾಡಲು ಸಾಧ್ಯವಾಗದು-ಎಂಬೀರೀತಿಯ ‘’ಫಿಸಿಕಲ್ ಎಲಿಜಿಬಲಿಟಿ ಟು ಅಂಡರ್ ಟೇಕ್ ಅ ಕ್ಯಾರೆಕ್ಟರ್’’ ಎಂಬಂತಹ ನಿಯಮಗಳನ್ನು ತಿಳಿಸುವುದು ಆಂಗಿಕದ ಒಂದು ಭಾಗವಾಗುತ್ತದೆ. ಪಾತ್ರಕ್ಕೆ ತಕ್ಕ ವೇಷಭೂಷಣಗಳನ್ನು ಆಹಾರ್ಯಕ ವೆನ್ನುತ್ತೇವೆ; ಉದಾಹರಣೆಗೆ: ಕಲಾವಿದರು ಕಸೆವಸ್ತ್ರವೆಂಬ ಲುಂಗಿಯಂತಯ ಬಟ್ಟೆಯನ್ನು ಶರೀರದ ಕೆಳಭಾಗದಲ್ಲಿ ಧರಿಸುತ್ತಾರೆ-ಇದು ದೇವ, ದಾನವ, ಮಾನವರಿಗೆ  ಅಲ್ಲದೇ ರಾಜ, ಮಂತ್ರಿ, ಸೇವಕ ಮೊದಲಾದ ಪಾತ್ರಗಳಿಗೆ ತಕ್ಕಂತೇ ಭಿನ್ನಭಿನ್ನವಾಗಿರಬೇಕೆಂಬುದು ಸಂಪ್ರದಾಯ; ಆದರೆ ಇಂದು ಅದನ್ನು ಸಮವಸ್ತ್ರದಂತೇ ಎಲ್ಲಾ ಪಾತ್ರಧಾರಿಗಳೂ ಒಂದೇ ರೂಪದ ಕಸೆವಸ್ತ್ರವನ್ನು ಧರಿಸುತ್ತಿದ್ದಾರೆ. ವಾಚಿಕದಲ್ಲಿ ಮೂರು ಭಾಗಗಳು: ಒಂದು ಗೀತ ಅಥವಾ ಭಾಗವತಿಕೆ ಎರಡನೆಯದು ಕರಣ, ಮುದ್ರೆ ಮೊದಲಾದವುಗಳಿಂದ ಪದ್ಯದ ಹೇಳಿಕೆಯನ್ನು ಅಭಿವ್ಯಕ್ತಗೊಳಿಸುವುದು, ಮೂರನೆಯದು ಮಾತು ಅಥವಾ ಸಂಭಾಷಣೆ. ಸಾತ್ವಿಕವೆಂದರೆ ಶಬ್ದಶಹ ಸಾತ್ವಿಕ ಸ್ವಭಾವವೆಂದರ್ಥವಲ್ಲ, ಸಾತ್ವಿಕ ಎಂಬುದು ಪಾತ್ರದ ಸತ್ವ ಎಂಬುದನ್ನು ಬಿಂಬಿಸುತ್ತದೆ. ರಾವಣನಾಗಿ ಅಭಿನಯಿಸುವಾಗ ರಾವಣ ಕಠೋರ ಸ್ಥಾಯೀಭಾವ ಪಾತ್ರಧಾರಿಯಲ್ಲಿರಬೇಕು, ಅಕ್ರೂರನಾಗಿ ಕೃಷ್ಣನಲ್ಲಿಗೆ ಸಂದೇಶಹೊತ್ತು ಬಂದಾಗ ಅಕ್ರೂರನ ಭಕ್ತ/ವಿನೀತ ಭಾವ ಪಾತ್ರಧಾರಿಯಲ್ಲಿರಬೇಕು.

ಕಾರಂತರ ಸಂಶೋಧನೆಯಲ್ಲಿ ಅವರು ಕಂಡುಕೊಂಡ ಮೂಲ ಹೈಗನಾಡಿನ ದಶಾವತಾರ ಆಟವನ್ನು ‘’ಸುಂದರ ಸಂಪ್ರದಾಯ’’ ಎಂದು ಬಣ್ಣಿಸಿದ್ದರಂತೆ. ರಷ್ಯಾದೇಶದ ಬ್ಯಾಲೆ ನರ್ತನವನ್ನು ಸಮೀಕರಿಸಿ ಮೂಕಬ್ಯಾಲೆಯನ್ನು ಜೋಡಿಸಿ ದಶಾವತಾರ ಆಟವನ್ನು ಭಿನ್ನವಾಗಿ ರೂಪಿಸಲು ಯತ್ನಿಸಿದವರು ಕಾರಂತರು. ಅದೇ ಕಾಲಘಟ್ಟದಲ್ಲಿ ಅಂದರೆ ಸರಿಸುಮಾರು 1950-60ರ ದಶಕಗಳಲ್ಲಿ ’ದಶಾವತಾರ ಆಟ’ದ ಮೇಲೆ ಸಂಪ್ರದಾಯೇತರ ಹುಚ್ಚುಕುಣಿತಗಳು, ಉಪನ್ಯಾಸಗಳಂತಹ ಉದ್ದದ ಮಾತುಗಾರಿಕೆ ಇವೆಲ್ಲಾ ಸೇರಿಕೊಳ್ಳುವುದರ ಜೊತೆಗೆ ‘’ಯಕ್ಷಗಾನ’’ವೆಂದು ಹೆಸರಿಸಿ ಕಲೆಯನ್ನು ಕುಲಗೆಡಿಸಿಬಿಟ್ಟರು ಎಂಬುದು ಶಾಸ್ತ್ರಿಯವರ ಅಳಲು. ಇದಕ್ಕೆ ಪೂರಕವಾದ ಉದಾಹರಣೆಗಳನ್ನು ಅವರು ತಮ್ಮ ಲೇಖನಗಳಲ್ಲಿ ಹೇಳಿದ್ದಾರೆ. ’’ಯಕ್ಷಗಾನ’’ ಎಂಬುದು ದೇಶವ್ಯಾಪಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಹೆಸರು. ’ಯಕ್ಷ’ ಎಂಬ ಪದಕ್ಕೆ ಪೂಜಿಸುವವ, ಆರಾಧಿಸುವವ ಎಂಬೆಲ್ಲಾ ಅರ್ಥಗಳಿರುವುದರಿಂದ, ಪೂಜಾಂಗವಾಗಿ ಹಾಡುವವರನ್ನು ಯಕ್ಷಗಾನದವರು ಎನ್ನಲಾಗುತ್ತದೆ. ಇದಕ್ಕೆ ದಾಸಪಂಥವೂ ಹೊರತಲ್ಲ. ಕಲೆಗೊಂದು ಸ್ಥಾನ ಕಲ್ಪಿಸುವ ಭರದಲ್ಲಿ ಮೂಡಲಪಾಯ, ತೆಂಕುತಿಟ್ಟು, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ದಶಾವತಾರ ಆಟ ಎಲ್ಲವನ್ನೂ ಸೇರಿಸಿ ’ಯಕ್ಷಗಾನ’ವೆಂದು ಕರೆದುಬಿಟ್ಟರು, ಆದರೆ ದಶಾವತಾರ ಆಟವೆಂಬುದು ಯಕ್ಷಗಾನವಲ್ಲ, ಅದಕ್ಕೆ ತನ್ನದೇ ಆದ ಶಾಸ್ತ್ರೀಯತೆ ಇದೆ. ಹೇಗೆ ಹೇಗೋ ಕುಣಿದರೆ, ಗಾನಮಾಡಿದರೆ ಅದು ದಶಾವತಾರ ಆಟವಾಗುವುದಿಲ್ಲ.

ಬ್ರಹ್ಮಾವರದ ಹೊಳೆಯಿಂದಾಚೆಗೆ ಕೇರಳದವರೆಗಿನ ನಾಡು ತುಳುನಾಡೆಂದು ಗುರುತಿಸಲ್ಪಟ್ಟು ಗೇರುಸೊಪ್ಪೆ ನಗರದ ರಾಣಿಯ ಮಾಂಡಲಿಕರು ಬಾರಕೂರನ್ನು ರಾಜಧಾನಿಯನ್ನಾಗಿಸಿಕೊಂಡು ಅಲ್ಲಿ ಆಳುತ್ತಿದ್ದರು ಎಂಬುದು ಇತಿಹಾಸ. ಕೇರಳದ ಕಥಕ್ಕಳಿಯ ವೇಷಗಳನ್ನೇ ಹೋಲುವ ವೇಷಭೂಷಣಗಳನ್ನು ತೆಂಕುತಿಟ್ಟಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ಈ ನಾಲ್ಕೂ ಮಜಲುಗಳಲ್ಲಿ ಅತಿ ಭಿನ್ನವಾಗಿರುವ ತೆಂಕುತಿಟ್ಟು ಮತ್ತು ದಶಾವತಾರಗಳ ನಡುವಿನ ಸಾಮ್ಯ ಸಂಬಂಧವೆಂದರೆ ಕೇವಲ ಪ್ರಸಂಗ ಪಠ್ಯವೊಂದೇ! ತೆಂಕಿನಲ್ಲಿ ಬಳಸುವ ಜಾಗಟೆ ನುಡಿಸಲು ಬರುವಂಥದ್ದಲ್ಲ, ಮದ್ದಳೆಯ  ತಾತ್ಕಾರಕ್ಕೆ ಅಲ್ಲಿ ಮನ್ನಣೆಯೇ ಇಲ್ಲ, ಚಂಡೆಯ ಅಬ್ಬರ ಕೇರಳಿಗರ ಚಂಡೆಯ ದನಿಯನ್ನೇ ಹೋಲುವುದರಿಂದ ಇನ್ನಿತರ ವಾದ್ಯಗಳಿಗೆ ಪೂರಕವಾಗಿ ವಿಲಂಬಿತವಾಗಿ ಧೇನಿಸಬೇಕಿದ್ದ ಚಂಡೆಯ ಅಬರಾಟವೇ ಹೆಚ್ಚಿನದಾಗಿದೆ ಎಂಬುದನ್ನು ಗಮನಿಸಬೇಕು. ದಕ್ಷಿಣಕನ್ನಡ ಪ್ರಾಂತದ ವಿದ್ವಾಂಸರು ಅಭಿನಯಿಸಿ ತೋರಿಸಿಲಾರದ ತಮ್ಮ ನ್ಯೂನತೆಯನ್ನು ಉಪನ್ಯಾಸಗಳಂತಹ ವಾಗ್ಝರಿಗಳಿಂದ ತುಂಬಿಸಿಕೊಳ್ಳಲು ಯತ್ನಿಸಿದ್ದರೆ ಅದನ್ನೇ ಅನುಕರಿಸಿದ ದಶಾವತಾರ ಆಟದ ಕೆಲವು ಪಾತ್ರಧಾರಿಗಳು ಈ ನಮ್ಮ ರಂಗಕಲೆಯನ್ನು ಹಾಳುಗರೆಯುವುದಕ್ಕೆ ತಮ್ಮ ಕೊಡುಗೆ ನೀಡಿದರು ಎಂಬುದು ನಾಶಾರ ಅಂಬೋಣ.

ಮಂಟಪ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನ ಪ್ರಸಂಗಗಳನ್ನು ದಶಾವತಾರ ಆಟದ ತಿಟ್ಟು ಎನ್ನುವುದು ತೀರಾ ಅಸಂಗತವೆಂದು ಹೇಳುವ ನಾಶಾ, “ಒಬ್ಬರೇ ನಗುವುದು ಮಾತನಾಡಿಕೊಳ್ಳುವುದು ಇದಕ್ಕೆಲ್ಲಾ ಏನೆನ್ನಬೇಕೆಂದುಕೊಳ್ಳುತ್ತಿದ್ದೆ, ಮಾರನೇದಿನ ಮುರುಕು ಬಸ್ ಸ್ಟ್ಯಾಂಡಿನಲ್ಲಿ ಹುಚ್ಚನೊಬ್ಬ ಒಬ್ಬನೇ ಮಾತನಾಡಿಕೊಂಡು ನಗುವುದನ್ನು ಮಾಡುತ್ತಿದ್ದುದನ್ನು ಕಂಡಾಗ ಉತ್ತರ ದೊರೆಯಿತು” ಎನ್ನುತ್ತಾರೆ-ಆಕ್ರೋಶದಿಂದ. ನಾಲ್ಕು ಆಯಾಮಗಳ ಸಮಗ್ರ ಸಮಷ್ಟಿಯ ಪಾರಮ್ಯದಿಂದ ವೈಭವೋಪೇತವಾಗಿ ಮೂಡಬೇಕಾದ ರಂಗನಾಟಕವನ್ನು ಕೇವಲ ನೃತ್ಯಕ್ಕೆ, ಕೇವಲ ಗಾನಕ್ಕೆ, ಕೇವಲ ಅಭಿನಯಕ್ಕೆ ಅಥವಾ ಕೇವಲ ಮಾತುಗಾರಿಕೆಗೆ ಮೀಸಲಾಗಿಸುವುದನ್ನು ಶಾಸ್ತ್ರಿಯವರು ಒಪ್ಪುವುದಿಲ್ಲ. ಇದರ ಆಳಗಲ ವಿಸ್ತಾರಗಳನ್ನು ಅರಿಯದೇ ಏಕವ್ಯಕ್ತಿ ‘’ಪ್ರಹಸನ’’ಕ್ಕೆ ಶತಾವಧಾನಿ ಡಾ| ರಾ. ಗಣೇಶರು ಪಠ್ಯಬರೆದುಕೊಟ್ಟರು ಎಂಬುದಕ್ಕಾಗಿ ನಾಶಾ ವಿಷಾದಿಸುತ್ತಾರೆ. ನಾಲ್ಕು ಆಯಾಮಗಳ ಭಾಗವೇ ಆಗಿ, ಕಲಾವಿದರೊಂದಿಗೆ ಪ್ರಸಂಗದಾದ್ಯಂತ ಸಾತತ್ಯವಹಿಸುವ ’’ಆಡುಗಾರ’’ ಕೇವಲ ರಾಗಗಳ ಹಾಡುಗಾರನಲ್ಲಾ-ಬದಲಾಗಿ ಆತನೊಬ್ಬ ಕಥಾನಕವನ್ನು ಆಡಿಸುವ ’ಆಡುಗಾರ’ ಎನ್ನುವ ನಾಶಾ, ಮೂಡ್ಕಣಿ ನಾರಾಯಣ ಹೆಗಡೆಯಂತಹ ಮಹಾನ್ ಕಲಾವಿದರ ಕಾಲಘಟ್ಟದ ಘಟನೆಗಳನ್ನು ಓದುಗರ ಮುಂದೆ ಹರಡಿಕೊಂಡು ಕುಳಿತುಬಿಡುತ್ತಾರೆ! ಬೆಳ್ಳಿ-ಕಂಚು ಮಿಶ್ರಲೋಹಗಳ ಎರಕದಿಂದ ತಯಾರಿಸಿದ ದಶಾವತಾರದ ತಾಳಕ್ಕೆ ಲಯ-ಗಚ್ಚು ಮುಖ್ಯ, ಮೃದಂಗಕ್ಕೆ ತಾತ್ಕಾರ[ಬೋಲ್] ಮುಖ್ಯವೆಂಬುದನ್ನು ಹೇಳುವ ಗಂಗಾಧರರು, ರಂಗರೂಪಕದ ಭಾಗವೇ ಆದ ಭಾಗವತ, ಶೃತಿಯಾತ, ಮದ್ದಳೆಗಾರ ಮತ್ತು ಚಂಡೆವಾದಕ ಎಲ್ಲರೂ ಧರಿಸಬೇಕಾದ ಸಾಂಪ್ರದಾಯಿಕ ದಿರಿಸುಗಳ ಬಗೆಗೂ ಹೇಳುತ್ತಾರೆ.         

ಸಂವಹನ ಪ್ರಕ್ರಿಯೆಯಲ್ಲಿ ಭಾಷಾಬೆಳವಣಿಗೆಯ ನಂತರವೇ ಅದಕ್ಕೊಂದು ಅಂಗ-ಆಕಾರ ಕಲ್ಪಿತಗೊಂಡು, ವ್ಯಾಕರಣ-ಛಂದಸ್ಸು ಮೊದಲಾದವುಗಳು ರೂಪಿತವಾಗುತ್ತವೆ; ಅದರಂತೆಯೇ ಕಲೆ-ಸಾಹಿತ್ಯ-ಸಂಗೀತಗಳೂ ಕೂಡ ಇದಕ್ಕೆ ಹೊರತಲ್ಲ. ಬೆಳವಣಿಗೆಯ ಒಂದು ಹಂತದ ನಂತರ ಅವುಗಳಿಗೆ ಅವುಗಳದ್ದೇ ಆದ ಸಂವಿಧಾನಗಳು ಸ್ಥಾಪಿತವಾಗುತ್ತವೆ. ಕಾಲಘಟ್ಟಗಳಲ್ಲಿ ಹೊಸ ಹೊಸ ಮಾರ್ಪಾಡುಗಳು ಆಗುತ್ತಲೇ ಇರುವುದು ಹೊಸತನ ಬಯಸುವ ಪ್ರೇಕ್ಷಕರ/ವೀಕ್ಷಕರ/ಸಭಾಸದರ/ಶ್ರೋತ್ರಗಳ/ಓದುಗರ ನಡವಳಿಕೆಯನ್ನೂ ಅವಲಂಬಿಸಿರುತ್ತದೆ. ಭಾಷೆಯಾಗಿ ಸಂಸ್ಕೃತ ಇಂದಿಗೂ ತನ್ನತನವನ್ನು ಕಳೆದುಕೊಳ್ಳದೇ  ಸುಂದರವಾಗಿಯೂ ಸಮೃದ್ಧವಾಗಿಯೂ ಉಳಿದುಕೊಂಡಿದೆ. ಅದೇರೀತಿ, ಶಿಷ್ಟಕಲೆಯಾದ ’ದಶಾವತಾರ ಆಟ’ಕ್ಕೆ ಕೆಲವು ಅಲಿಖಿತ ಮತ್ತು ಅನುಕರಿಸಲ್ಪಟ್ಟ/ಅನುಸರಿಸಲ್ಪಟ್ಟ ನಿಯಮಗಳಿವೆ. ಪರಿವರ್ತನೆ ಜಗದ ಸಹಜ ನಿಯಮ. ಆದರೆ ತನ್ನತನವನ್ನು ಇಟ್ಟುಕೊಂಡೂ ನವಯುಗಕ್ಕೆ ಸ್ಪಂದಿಸುವ ಕಲೆಯಾಗಿ ’ದಶಾವತಾರ ಆಟ’ ಬೆಳೆಯಬೇಕು. ಹೊರಗಿನ ಹೊಸ ಹೊಸ ಉತ್ತಮ ರಂಗಪ್ರಯೋಗಗಳನ್ನು ಪೂರ್ವರಂಗಕ್ಕೆ/ಮೂಲರಂಗಚರ್ಯೆಗೆ ಭಂಗಬರದಂತೇ ಬಳಸಿಕೊಳ್ಳಬಹುದು; ಹಾಗೆ ಬಳಸಿಕೊಳ್ಳುವಾಗ ನಾಲ್ಕು ಆಯಾಮಗಳ ಸಮಷ್ಟಿಯ ನಿಯಮಗಳನ್ನು ಮೀರಿ ಜೋಡಣೆಯಾಗಬಾರದು. ಪಾತ್ರಧಾರಿ ಉಪನ್ಯಾಸ ಕೊರೆಯುವ ಬದಲು ಅಧ್ಯಯನಶೀಲನಾಗಿದ್ದು ನೂರು ಮಾತುಗಳಲ್ಲಿ ಹೇಳುವುದನ್ನು ಹಿತಮಿತವಾಗಿ ಮೂರೇ ಮಾತಿಗೆ ಇಳಿಸುವಷ್ಟು ಪ್ರೌಢಿಮೆ ಹೊಂದಿರಬೇಕು. ಕೊಡುವ ಗಂಟಿನಮೇಲೆ ಕಣ್ಣಿಟ್ಟು ನಡೆಯದೇ, ಹಿರಿಯರು ಬಳುವಳಿಯಾಗಿತ್ತ ’ಇಡಗಂಟ’ನ್ನು ಕಳೆಯದೇ, ಅಭಿಜಾತ ಕಲಾವಿದನಾಗಿ ಕಲೆಯನ್ನು ಪೋಷಿಸುವ ಮನೋಧರ್ಮ  ದಶಾವತಾರ ಕಲಾವಿದನಲ್ಲಿರಬೇಕು; ಅದು ನಾವು ನಮ್ಮ ಪೂರ್ವಜರಿಗೆ ಸಲ್ಲಿಸುವ ಕೃತಜ್ಞತೆ ಮತ್ತು ಕರ್ತವ್ಯ ಕೂಡ.         

ಹೈಗನಾಡಿನ ’’ದಶಾವತಾರ ಆಟ’’ ತನ್ನ ಅಂತಃಸತ್ವವನ್ನು ಹಾಗೇ ಉಳಿಸಿಕೊಳ್ಳಬೇಕಾದರೆ ಈ ಪ್ರಾಂತದ ನಿಜವಾದ ರಂಗಚಿಂತಕರು ಕಾರ್ಯಪ್ರವೃತ್ತರಾಗಿ ಅದಕ್ಕೊಂದು ಲಿಖಿತರೂಪದ ಸಂವಿಧಾನದ ನೆಲೆಗಟ್ಟು  ಕಲ್ಪಿಸಬೇಕೆಂಬುದು ಶಾಸ್ತ್ರಿಯವರ ಅಪೇಕ್ಷೆ. ಅಂದಿನ ಕಲಾತಪಸ್ವಿಗಳಾದ ಮೂಡ್ಕಣಿ ನಾರಾಯಣ ಹೆಗಡೆ, ಹೆಗಡೆಯ ಗಣಪ ಹೆಗಡೆ, ಮಾಳ್ಕೋಡ್ ಗಣಪ ಹೆಗಡೆ, ವಾಸು ಆಚಾರಿ, ಕೊಕ್ಕರ್ಣಿ ನರಸಿಂಹ ಕಮ್ತಿ, ಗಣಪತಿ ಪ್ರಭು, ಕಿಟ್ಟಪ್ಪ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಲ್ಲಗದ್ದೆ ಗಣೇಶ ಹೆಗಡೆ ಮೊದಲಾದ ರಂಗಕರ್ಮಿಗಳು ವಿದ್ಯುದ್ದೀಪ, ಮೈಕುಗಳ ಆಡಂಬರವಿಲ್ಲದ ಆ ಕಾಲಘಟ್ಟದಲ್ಲಿ, ವಿಶಾಲ ಕತ್ತಲ ಬಯಲಲ್ಲಿ ನಾಲ್ಕು ಅಡಕೆ ಕಂಬಗಳನ್ನು ನೆಟ್ಟು ನಿರ್ಮಿಸಿದ ರಂಗಸ್ಥಳದಲ್ಲಿ ಹೇಗೆ ಈ ಕಲೆಯನ್ನು ಪೋಷಿಸಿದರು ಎಂಬುದನ್ನು ಅವಲೋಕಿಸುತ್ತಾ, ಅನ್ಯ ಮಾಧ್ಯಮಗಳ ಹಾವಳಿಯಿದ್ದರೂ, ತನ್ನತನದಿಂದ ಇನ್ನೂ ಬದುಕಿರುವ ಈ ಸಮಗ್ರ ಕಲೆಗೆ ’’ದಶಾವತಾರ ಆಟ’’ ಎಂದೇ ಮರುನಾಮಕರಣವಾಗಬೇಕು ಎಂಬುದು ಶಾಸ್ತ್ರಿಯವರ ಬಯಕೆ; ’’ದಶಾವತಾರಿಷ್ಟ’’ದ ನಾಶಾರ ಹೇಳಿಕೆಗಳಲ್ಲಿ ಸತ್ಯವಿದೆ ಎಂಬುದನ್ನು ದಶಾವತಾರ ಆಟದ ಮೂಲ ಅಭಿರುಚಿಯನ್ನು ಹೊಂದಿದ ಹೈಗನಾಡಿಗರು ಬಲ್ಲರು.   

"ಎಂದೋ ಆಗಬೇಕಾಗಿದ್ದ ಕಾರ್ಯ ಇಂದು ಆಯಿತಲ್ಲ"ವೆಂದು ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉದ್ಗರಿಸಿದ್ದರೆ, ದಕ್ಷಿಣೋತ್ತರ ಕನ್ನಡ ಜಿಲ್ಲೆಯಾದ್ಯಂತ ನೆಲೆಸಿರುವ ಬಹುಶ್ರುತ ವಿದ್ವಾಂಸರು ಶಾಸ್ತ್ರಿಗಳ ಚಿಂತನೆಯನ್ನು ಮಾನ್ಯಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಾರಂತರ ನಿರ್ಲಕ್ಷ್ಯದಿಂದಾಗಿ ಅಸಡ್ಡೆಗೆ ಒಳಗಾಗಿ, ಜಾನಪದ ಕಲೆಯೆಂದೇ ಬೋರ್ಡು ಹಾಕಿಕೊಂಡ ’ಅಶಾವತಾರ ಆಟ’ದ ಈ ಚಿಂತನ ಗ್ರಂಥದಲ್ಲಿ ’ಆಡುಗಾರ’, ’ರಾಗವತ’ ಮೊದಲಾದ ನವಪದಗಳನ್ನು ರಂಜನೀಯವಾಗಿ ಸೃಜಿಸಿದ ಶಾಸ್ತ್ರಿಗಳ ವಿಡಂಬನಾ ಮನೋಭಾವ ಗಂಭೀರ ಓದಿನ ನಡುವೆ ಕಿರುನಗೆಗೆ ಕಾರಣವಾಗುತ್ತದೆ. ದಶಾವತಾರ ಹಿಂದೆ ಹೇಗಿತ್ತು, ನಡುವೆ ಹೇಗಿತ್ತು, ಇಂದು ಹೇಗಿದೆ ಮತ್ತು ಮುಂದೆ ಏನಾಗಬೇಕು ಎಂಬೆಲ್ಲ ಅಂಶಗಳು ಚರ್ವಿತಚರ್ವಣವೆನಿಸಿದ ರೀತಿಯಲ್ಲಿ ಹೇಳಲ್ಪಟ್ಟಿವೆ. ಒಟ್ಟಾರೆ, ’ದಶಾವತಾರಿಷ್ಟ’ ಆಯುರ್ವೇದೀಯ ಔಷಧಿಯಂತೇ, ದಶಾವತಾರಕ್ಕೆ ಅಂಟಿಕೊಂಡ ’ಯಕ್ಷಗಾನ’ವೆಂಬ ರೋಗವನ್ನು ಕಾಲಕ್ರಮದಲ್ಲಿ ಬೇರುಸಹಿತ ನಿವಾಳಿಸಬಲ್ಲ ಲಕ್ಷಣಗಳು ಕಾಣುತ್ತವೆ.