ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......
ರಾಜಾರಾಮನ ರಾಜಸಭೆ ಸೇರಿದೆ. ವಂದಿಮಾಗಧರು, ಪಂಡಿತ-ವಿದ್ವನ್ಮಣಿಗಳು, ಕಲಾವಿದರು, ಸಂಗೀತಗಾರರು, ಅರಮನೆ ಆಡಳಿತ ವರ್ಗ ಎಲ್ಲಾ ಸೇರಿದ ಶ್ರೀರಾಮನ ಒಡ್ಡೋಲಗ. ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿಂಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ ’ನಮ್ಮ ಕಾಲ ಸನ್ನಿಹಿತವಾಗಿದೆ’ ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೇನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ’ ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು’ ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಠಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.
ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.
ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -
" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "
ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.
ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ’ ರಾಮನ ಕೂಗ ’ ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ತೊರೆದುಹೋಗುವ ಕಾಲಕ್ಕೆ ಅಣ್ಣನನ್ನೊಮ್ಮೆ ಭಕ್ತಿಯಿಂದ ನೆನೆದುಕೊಂಡಿದ್ದಾನೆ.ಇದು ಮಹಾಕವಿ ವಾಲ್ಮೀಕಿ ಬರೆದ ರಾಮಾಯಣದ ಕಥಾಭಾಗ. ಹಿಂದೆಯೂ ನನ್ನೊಂದು ಕವನಕ್ಕೆ ಪೂರಕವಾಗಿ ಇದನ್ನು ಹೇಳಿದ್ದೆ.
ಇವತ್ತಿನ ನಮ್ಮ ರಾಜಕೀಯದ ಮಾಜಿಗಳ ಭೋಜನಾಂತರ್ಗತ ಸಂದೇಶವನ್ನು ಅನೇಕರು ಈಗಲೇ ತಿಳಿದಿದ್ದೇವೆ! ಹಣಬಲವೋ ಜನಬಲವೋ ಅಥವಾ ಹಣದ ಆಸೆಗೆ/ಅಧಿಕಾರದ ಅಸೆಗೆ ಹಲ್ಕಿರಿದು ಬರುವ ಗೋಸುಂಬೆ ತೆರನ ಬಾಲಬಡುಕರ ಬಲವೋ ರಾಜಕೀಯ ಸ್ಥಿತ್ಯಂತರ ಕಾಣುತ್ತಿದೆ! ನೆಲಗಳ್ಳತನದಲ್ಲಿ ಆರೋಪಗಳನ್ನು ಹೊತ್ತ ಯಡ್ಯೂರಪ್ಪ ಜನರ ಒತ್ತಡಕ್ಕೆ ಮಣಿದು ಖುರ್ಚಿ ಬಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದೊಮ್ಮೆ ಪಕ್ಷದ ಮುಖಂಡರು ಅಸ್ತು ಎನ್ನದಿದ್ದರೆ ಪಕ್ಷ ಒಡೆಯಲು ಸಿದ್ಧವಿರುವುದೂ ಅಷ್ಟೇ ’ಅಪಾರ’ದರ್ಶಕ ! ಯಾರ ಕೈಗೆ ಅಧಿಕಾರ ಕೊಟ್ಟು ಮೂಗುದಾರವನ್ನು ತನ್ನ ಕೈಲೇ ಇರಿಸಿಕೊಂಡು ಕುಣಿಸಬೇಕೆಂದುಕೊಂಡಿದ್ದಿತ್ತೋ ಹಿಂದೆ ಸ್ನೇಹಿತ, ಮಿತ್ರ, ಆಪ್ತ ಎನಿಸಿದ್ದ ಅದೇ ವ್ಯಕ್ತಿ-ಅನಾಯಾಸವಾಗಿ ತನಗೆ ಒದಗಿಬಂದ ಅವಕಾಶದಲ್ಲಿ ತನ್ನತನವನ್ನು ಮೆರೆದು ರಾಜ್ಯದ ಜನತೆಗೆ ಒಳಿತನ್ನು ಮಾಡಲು ಇನ್ನೇನು ಕೂರಬೇಕೆನ್ನುವ ಹೊತ್ತಲ್ಲೇ ಕಿಬ್ಬದಿಯ ಕೀಲು ಮುರಿದಂತೇ ಪರೋಕ್ಷ ಝಾಡಿಸಿ ಒದ್ದಿರುವುದು ಕಣ್ಣಲ್ಲಿ ಕಂಡರೂ ಪರಾಂಬರಿಸಬೇಕಿಲ್ಲದ ವಿಷಯ !
ಕೊಟ್ಟ ಒಂದು ಮಾತಿಗೆ ತಪ್ಪಿ ನಡೆದಿದ್ದಕ್ಕೆ ಶ್ರೀರಾಮ ಒಪ್ಪಿನಡೆದ; ತನಗತೀ ಪ್ರಿಯನಾಗಿದ್ದ ತಮ್ಮ ಲಕ್ಷ್ಮಣನನ್ನು ಅಗಲಿರಲಾರದ ಸ್ಥಿತಿಯಲ್ಲೂ ಅಗಲಿದ, ದೇಹಾಂತ ಶಿಕ್ಷೆ ವಿಧಿಸಿದ. ಅದರೆ ಅದು ಇಂದಿಗೆ ಕಥೆಯಾಗಿ ಪುಸ್ತಕವಾಗಿ ಕುಳಿತಿದೆಯೇ ಹೊರತು ಯಾರಿಗೆ ಆ ಆದರ್ಶ ಬೇಕಾಗಿದೆ ಸ್ವಾಮೀ ? ರಾಜೀನಾಮೆ ಕೊಟ್ಟು ಬೇಡವೆಂದು ಕಾಣಿಸಿಕೊಳ್ಳದೇ ಉತ್ತರಭಾರತಕ್ಕೆ ಓಡಿದರೂ ಅಂದಿನ ರಾಜ್ಯಪಾಲರು ಅದನ್ನು ಅಂಗೀಕರಿಸದೇ ಹಾಗೇ ಇರಿಸಿದ ಘಟನೆ ನಡೆದಿದ್ದು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ. ಅಂದಿನ ರಾಜಕೀಯದವರಿಗೆ ಕೊನೇ ಪಕ್ಷ ಒಂದು ರೀತಿ ಮರ್ಯಾದೆ ಇತ್ತು; ಇವತ್ತು ಮರ್ಯಾದೆ ಎಂದರೇನು ಎಂದು ರಾಜಕೀಯದವರೇ ನಮ್ಮನ್ನು ಹಂಗಿಸಲು ಮುಂದಾಗುತ್ತಾರೆ. ಎಂತೆಂಥವರಿದ್ದಾರೆ: ನೇರವಾಗಿ ವಿಧಾನಸೌಧದಲ್ಲೇ ಲಂಚ ಪಡೆದವರಿದ್ದಾರೆ, ಮಿತ್ರನ ಹೆಂಡತಿಯನ್ನು ಭೋಗಿಸಿದವರಿದ್ದಾರೆ, ನರ್ಸ್ ಗಳನ್ನು ಅಪ್ಪಿಮುದ್ದಾಡಿ ಕೋರ್ಟಿನಲ್ಲಿ ಅವಳೊಡನೆಯೇ ರಾಜಿಮಾಡಿಕೊಂಡ ಡ್ಯಾನ್ಸ್ ರಾಜಾಗಳಿದ್ದಾರೆ,ಶಾಸಕಾಂಗ ಸಭೆಯಲ್ಲೇ ಕೂತು ನೀಲಿಚಿತ್ರದ ಮಜಾ ತೆಗೆದುಕೊಂಡ ಮಹಿಮಾನ್ವಿತರಿದ್ದಾರೆ! ಸಾಕೋ ಬೇಕೋ ?
ಇವರನ್ನೆಲ್ಲಾ ಆಡಿಸಲು ತನ್ನಿಂದ ಸಾಧ್ಯವಾಗುವುದಿಲ್ಲಾ ಅದಕ್ಕೇ ತನಗೆ ಮುಖ್ಯಮಂತ್ರಿ ಗಾದಿ ಬೇಡಾ ಎಂದಿದ್ದರಂತೆ ದಿ| ವಿ.ಎಸ್.ಆಚಾರ್ಯ ! ಅವರ ದೂರಾಲೋಚನೆ ಎಷ್ಟು ನಿಜವಾಗಿದೆ ಅಲ್ಲವೇ? ಹಾಸಿಗೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ನುಸುಳಿಕೊಳ್ಳುವ ಮನೆಹಾಳ ನಿಸ್ಸೀಮರಿರುವಾಗ ಪ್ರಜಾರಾಜ್ಯದ ಪ್ರಜೆಗಳ ಸುಖ ಯಾರಿಗೆ ಬೇಕಾಗಿದೆ? ಕಥೆಯೊಂದು ಹೀಗಿದೆ : ಅಕ್ಬರ್ ರಾಜನಾಗಿದ್ದಾಗ ಅವನಿಗೆ ಚಾಣಾಕ್ಷ ಮಂತ್ರಿಯಾಗಿದ್ದಾತ ಬೀರ್ಬಲ್. ಒಮ್ಮೆ ರಾಜಭಕ್ತಿಯನ್ನು ಪರಿಶೀಲಿಸುವ ಆಸೆಯಿಂದ ಬೀರ್ಬಲ್ ಪ್ರಜೆಗಳಿಗೆ ಒಂದು ಪರೀಕ್ಷೆ ಒಡ್ಡಿದ. ಹೊಸದಾಗಿ ಕಟ್ಟಿಸಿದ ಟಾಕಿಯೊಂದಕ್ಕೆ ಮೇಲ್ಭಾಗದಲ್ಲಿ ಚಿಕ್ಕ ಕೊಳವೆಯ ಕಿಂಡಿಯೊಂದನ್ನು ಬಿಟ್ಟು ಪ್ರತಿಯೊಬ್ಬರೂ ಒಂದೊಂದು ಚೊಂಬು ಹಾಲು ಸುರಿಯುವಂತೇ ಡಂಗುರ ಹೊಡೆಸಿದ. ರಾಜನಮೇಲಿನ ನಿಚ್ಚಳ ಭಕ್ತಿಯಿದ್ದವರು ಕಮ್ಮಿ ಇದ್ದರು! ಅರೆಮನಸ್ಸಿನಿಂದಲೇ ರಾಜನ ಟಾಕಿಗೆ ಚೊಂಬು ಹಾಲನ್ನು ನಾವೇಕೆ ಸುರಿಯಬೇಕೆಂದುಕೊಂಡು ’ಹಲವರು ಹಾಲನ್ನು ಹಾಕಿದಾಗ ತಾನೊಬ್ಬನೇ ನೀರು ಹಾಕಿದರೆ ತಾನು ಹಾಕಿದ್ದು ಹಾಲೇ ಎಂದು ತಿಳಿಯುತ್ತಾರೆ, ಯಾರಿಗೂ ಗೊತ್ತಾಗುವುದಿಲ್ಲ’ ಎಂದುಕೊಂಡು ಮುಚ್ಚಿದ ಬಾಯ ಚೊಂಬು ಹಿಡಿದು ಒಬ್ಬೊಬ್ಬರೂ ನಿಧಾನವಾಗಿ ಬಿಟ್ಟೂ ಬಿಟ್ಟೂ ಬಂದು ಟಾಕಿಗೆ ಸುರುವಿದರು! ಗೊತ್ತಾದ ಹೊತ್ತಿಗೆ ಬೀರ್ಬಲ್ ಅಕ್ಬರನ ಎದುರಲ್ಲಿ ಟಾಕಿಯ ಕೆಳಭಾಗದ ನಳವನ್ನು ತಿರುಗಿಸಿದ್ದಾನೆ. ಏನಾಶ್ಚರ್ಯ ಪರಿಶುದ್ಧ ಗಂಗಾಭವಾನಿ ಹೊರಗೆ ಹರಿದು ಬಂದಿದ್ದಾಳೆ ! ಅಕ್ಬರನ ಕಾಲಕ್ಕೇ ಪ್ರಜೆಗಳು ಈ ರೀತಿ ಇದ್ದರೆಂದಮೇಲೆ ಇಂದಿನ ಪ್ರಜೆಗಳಲ್ಲಿ ತಾವು ಮಾಡಿಸಿಕೊಂಡು ಹೋಗುವ ಸರಕಾರೀ ಮೊಹರಿನ ಅವಶ್ಯಕತೆಯ ಕೆಲಸಗಳಿಗಾಗಿ ಲಂಚ ನೀಡದೇ ಇರುವವರೆಷ್ಟು? ತಾವೊಬ್ಬರೇ ಒಳಗಿಂದಲೇ ಮನೆಗೇ ಹೋಗಿ ಕೊಟ್ಟು ಕೆಲಸಮಾಡಿಸಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡ ಮಹನೀಯರೆಷ್ಟು ಎಂದು ಪ್ರಜೆಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಯಥಾ ಪ್ರಜಾ ತಥಾ ರಾಜಾ ಎಂದು ಸಂಸ್ಕೃತ ತನ್ನ ಹೇಳಿಕೆಯನ್ನು ಬದಲಿಸಿಕೊಳ್ಳಲು ಸೂಚಿಸಿದೆ, ಇದಕ್ಕೆ ಕಾರಣ: ಪ್ರಜಾಸತ್ತೆ! ಪ್ರಜೆ ಸಾಯದೇ ಬದುಕಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ತನ್ನೊಳಗೆ ಹರಿಶ್ಚಂದ್ರನನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವಾಗ ಪ್ರಜಾಮೂಲದಿಂದ ಲಂಚ ಎಂಬ ಶಬ್ದವೇ ನಾಶವಾಗುತ್ತದೋ ಆಗ ರಾಜಕೀಯ ಒಂದು ಹಿಡಿತಕ್ಕೆ ಬರುತ್ತದೆ. ಪ್ರಜಾರಾಜ್ಯಕ್ಕೊಂದು ಘನತೆ, ಮರ್ಯಾದೆ ಇರುತ್ತದೆ. ಮೇವು ಕಂಡಲ್ಲಿ ಪಶುವೊಂದು ಸಹಜವಾಗಿ ನುಗ್ಗುವಂತೇ ರಾಜಕೀಯ ಆಡುಂಬೊಲದಲ್ಲಿ ಧನದಾಹದ ಹೆಬ್ಬುಲಿಗಳೇ ಸೇರಿಕೊಂಡು ಆಡುಗಳು ಬಲಿಯಾಗಿವೆ! ಪ್ರಜಾಸತ್ತೆ ಎಂಬ ನದಿ ಮಲಿನವಾಗಿದೆ; ಕೆಲವು ಕಡೆ ಹೂಳುತುಂಬಿದೆ; ಇನ್ನೂ ಎಲವುಕಡೆ ನೀತಿ-ನಿಯಮಗಳೆಂಬ ನೀರಿಲ್ಲದ ಬರಡು ನದಿಯಾಗಿದೆ! ಸಾಕ್ಷಾತ್ ದೂರ್ವಾಸನೋ ಕಾಲಪುರುಷನೋ ಬಂದರೂ ಅವರಿಗೇ ತಿರುಮಂತ್ರ ಹಾಕುವ ಪ್ರತ್ಯಂಗಿರಾ ದೇವಿಯ ಕಳ್ಳ ಭಕ್ತರು ವಿಧಾನಸೌಧ ಸೇರಿದ್ದಾರೆ-ಸೂರೆ ಹೊಡೆಯುತ್ತಿದ್ದಾರೆ!
ಕೆಲವರು ೫೦ ವರ್ಷದಿಂದ ಮೇದರೆ ಇನ್ನೂ ಕೆಲವರು ೪೦ ರಿಂದ ಮತ್ತೆ ಕೆಲವರು ೩೦...೨೦..೧೦...೫ ಹೀಗೇ ಶಕ್ತ್ಯಾನುಸಾರ ಮೇಯುತ್ತಲೇ ಸಮಯ ಸರಿದುಹೋಗುತ್ತಿದೆ; ಬಡರೈತ, ಬಡಪ್ರಜೆ ಹೊತ್ತಿನ ತುತ್ತಿಗೂ ಅಲ್ಲಿಲ್ಲಿ ತೂರಾಡುತ್ತಾ ಕೈಒಡ್ಡುವ ಪ್ರಸಂಗ ನಡೆದೇ ಇದೆ. ಕಾಡುಗಳು ನಾಶವಾಗಿ ಕಾಡುಪ್ರಾಣಿಗಳು ಹಸಿದು ಊರಿಗೆ ನುಗ್ಗಿ ಹಳ್ಳಿಗಳ ರೈತರ ವಸಾಹತುಗಳನ್ನು ನಾಶಪಡಿಸಿದರೆ, ಕಾಡುನಾಶಕ್ಕೆ ಕಾರಣವನ್ನು ಹುಡುಕಿದರೆ ಇದೇ ಕಳ್ಳರು ಅಲ್ಲೂ ಸಿಗುತ್ತಾರೆ! ಒಂದುಕಾಲಕ್ಕೆ ಶ್ರೀಗಂಧ ಭರಿತ ನಾಡಾದ ಕರ್ನಾಟಕ ಇಂದು ಅಪರೂಪಕ್ಕೆ ಔಷಧಿಗೂ ಗಂಧದ ಮರಗಳು ಸಿಗದಂತಹ ಪ್ರದೇಶವಾಗಿದೆ! ಶ್ರೀಮಂತೆಯಾಗಿದ್ದ ಭೂಮಿಯಾಯಿಯ ಬಸಿರನ್ನೇ ಬಗೆದು ಅದಿರುಗಳನ್ನು ಬರಿದಾಗಿಗಿಸಿ ಕೈಚೆಲ್ಲುವ ಹಂತಕ್ಕೆ ಆಳುವ ಪ್ರಭುಗಳು ಮುನ್ನಡೆದಿದ್ದಾರೆ. ತಮ್ಮ ಖುರ್ಚಿ, ತಮ್ಮ ಬೊಕ್ಕಸ ಇವುಗಳ ಬಗ್ಗೆ ಮಾತ್ರ ಸದಾ ಆಸಕ್ತರಾದ ಈ ಖೂಳರಿಗೆ ಕೂಳೂ ಸಿಗದಂತೇ ಗಡೀಪಾರು ಮಾಡಬೇಕಾದ ಜನಸಾಮಾನ್ಯರಾದ ಮತದಾರರು ಆಡಳಿತ ಕೇಂದ್ರವಾದ ಬೆಂಗಳೂರಿಗೆ ಬರುವುದಕ್ಕೂ ಕಾಸಿಲ್ಲದ ಸ್ಥಿತಿಯಲ್ಲಿ ಮರುಗಿದ್ದಾರೆ. ಕೈಲಾಗದ ಅನಿವಾರ್ಯತೆಗೆ, ಚುನಾವಣೆಯ ಸಂದರ್ಭದ ಮುಖ ತೋರಿಸಿ ಹಲ್ಲುಗಿಂಜುವ ನೇತಾರ ಪುಡಿಗಾಸಿಗೆ ಕಯ್ಯೊಡ್ಡಿ, ಕುಡಿಸಿದ ಅಮಲಿನಲ್ಲಿ ಧಣಿಹೇಳಿದ ಗುರುತಿಗೆ ಒತ್ತುವ ದಯನೀಯ ಸ್ಥಿತಿಯಲ್ಲಿರುವ ಜನಾಂಗಕ್ಕೆ ತಿಳಿಸಿಹೇಳಿದರೂ ಅವರು ಅರಿಯುತ್ತಿಲ್ಲ; ತಿಳಿಸಿ ಹೇಳುವವರಿಗೂ ಇಷ್ಟವಿಲ್ಲ! ಸುಶಿಕ್ಷಿತರಿಗೆ ಮತದಾನವೇ ಬೇಡವಾದರೆ ಅಶಿಕ್ಷಿತರಿಗೆ ಮತದಾನ ಮತ್ತೆ ಮತ್ತೆ ಬರುವ ಹೆಂಡದ ಹಬ್ಬವಾಗಿದೆ!
’ನೀತಿ ಇದು’ ಎಂದು ಸರಿಯಾದ ಮಾರ್ಗದಲ್ಲಿ ನಡೆವ ಮನಸ್ಸುಳ್ಳ ಪ್ರಬುದ್ಧ ರಾಜಕಾರಣಿಗಳ ಸಂಖ್ಯೆ ಕಮ್ಮಿ ಇದೆ. ಅವರ ಮಾತು ನಡೆಯುತ್ತಿಲ್ಲ. ಅಪರಾಧ ಮಾಡದೇ ಇದ್ದರೂ ಅಪರಾಧಿಯಂತೇ ತಲೆತಗ್ಗಿಸಿ ಕೂರಬೇಕಾದ ಅಶೋಕವನದ ಸೀತೆಯ ಅರಣ್ಯ ರೋದನದಂತೇ ಒಬ್ಬಿಬ್ಬರು ಕೂಗುತ್ತಿದ್ದಾರೆ-ಅವರ ಕೂಗು ಯಾರಿಗೂ ಕೇಳಿಸುತ್ತಿಲ್ಲ! ಪಕ್ಷ-ಪಕ್ಷಗಳಲ್ಲಿ ಇದ್ದ ಕೆಟ್ಟ ರಾಜಕೀಯ ಪಕ್ಷಗಳಲ್ಲೇ ಬಣಗಳಾಗಿ ವಿಜೃಂಭಿಸಿ ಯಾರು ಮಿತ್ರ ಯಾರು ಶತ್ರು ಎಂಬೆಲ್ಲಾ ಕೆಟ್ಟ ಭಾವಗಳನ್ನು ಒಡಮೂಡಿಸಿ ಶಾಸಕಾಂಗ ಎಂಬುದೊಂದು ಡೊಂಬರಾಟದ ಕಂಪನಿಯಾಗಿದೆ, ಅದರ ಪ್ರೋತ್ಸಾಹದಿಂದ ನಡೆಯುವ ಸರಕಾರ ಸರ್ಕಸ್ ಕಂಪನಿಯಾಗಿದೆ! ಅನೀತಿಯನ್ನೇ ನೀತಿ ಎಂದು ಸಾರುವ ದುಡ್ಡಿನ ದೊಡ್ಡಪ್ಪಗಳು ಪ್ರಜಾಸೇವೆಗೆ ಇದ್ದ ಜಾಗವನ್ನು ರಾಜಕೀಯ ಇಂಡಸ್ಟ್ರಿ ಮಾಡಿದ್ದಾರೆ; ಅದರಿಂದ ಬೇಜ್ಜಾನು ಹಣ ಗುಂಜುತ್ತಾರೆ! ಅಧಿಕಾರ ಹಿಡಿದವರ ಹಾಗೂ ಅವರ ಬಂಟರ ಬಳಗಕ್ಕೇ ಖಾಸಗೀ ತಾಂತ್ರಿಕ/ಮೆಡಿಕಲ್ ಕಾಲೇಜುಗಳನ್ನು ನಡೆಸಲು ಅನುಮತಿ, ಪೆಟ್ರೋಲ್ ಬಂಕ್ ನಡೆಸಲು ಅನುಮತಿ ಇತ್ಯಾದಿಯಾಗಿ ಅಧಿಕ ಇಳುವರಿಯ ಆಯಕಟ್ಟಿನ ಜಾಗಗಳಲ್ಲಿ ಆ ಧನದಾಹೀ ಹುಲಿಗಳು ಅಡಗಿ ಕೂತಿವೆ; ಸದಾ ಮೇಯುತ್ತಲೇ ಇರುತ್ತವೆ!
ಗತಿ ಮುಂದಿನದೇನು? ಎಂದರೆ ಎಲ್ಲರೂ ಆಕಾಶದತ್ತ ಮುಖಮಾಡಿ ಬರಗಾಲದ ಭೂಮಿಯಲ್ಲಿ ಗದ್ದೆ ನಾಟಿ ಮಾಡಿಕೊಂಡು ಆಕಾಶದತ್ತ ಹಣುಕುವ ಬಡರೈತರಂತೇ ಕಾಣುತ್ತಾರೆ! ರಾಜಕೀಯದ ಇಂತಹ ಡೊಂಬರಾಟಗಳನ್ನು ನಿಯಂತ್ರಿಸುವ ಸಲುವಾಗಿ ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಬೇಕಾಗಿದೆ. ಕೆಲವರು ಹೇಳುತ್ತಾರೆ ಮುದುಕು ರಾಜಕಾರಣಿಗಳು ಆಸ್ತಿ-ಪಾಸ್ತಿ ನ್ಯಾಯವತ್ತಾಗಿ ಮಾಡಿಕೊಂಡರು ಎಂದು; ಆ ಕಾಲಕ್ಕೆ ರೈಟ್ ಟಿ ಇನ್ಫಾರ್ಮೇಷನ್ ಆಕ್ಟ್ ಇರಲಿಲ್ಲ, ಲೋಕಾಯುಕ್ತ ಇರಲಿಲ್ಲ. ಹಾಗೊಮ್ಮೆ ಇದ್ದಿದ್ದರೆ, ಗಣಕಯಂತ್ರಗಳಲ್ಲಿ ಸರಕಾರೀ ಕಡತಗಳು ನೋಡಸಿಗುವಂತಿದ್ದರೆ ೫೦-೬೦ ವರ್ಷಗಳ ಕಾಲ ಯಾರೂ ಹಾಗೇ ರಾಜಕೀಯದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆಗ ಗಂಟುಕಟ್ಟಿದವರು ಭದ್ರವಾದರು-ಈಗ ಬಂದವರು ಪ್ರಯತ್ನಿಸಿ ಕೆಲವರು ವಿಫಲರದರು; ಇನ್ನೂ ಕೆಲವರು ಉಂಡೂ-ಕೊಂಡೂ ಹೋದರು! ಯಾರ್ಯಾರು ಎಷ್ಟೆಷ್ಟು ನುಂಗಿದರು ಎಂಬುದಕ್ಕೆ ದಾಖಲೆ ಸಿಗದಂತೇ ಆಗಿಬಿಟ್ಟಿದೆ-ಹೀಗಾಗಿ ಅವರು ಗೆದ್ದೆವೆಂದು ವೃದ್ಧನಾರೀ ಪತಿವೃತೆ ಎಂಬಂತಾಡುತ್ತಿದ್ದಾರೆ. ಈ ರಾಜ್ಯದ ’ಮುತ್ಸದ್ಧಿಗಳು’ ಎನಿಸಿಕೊಳ್ಳುವ ಕೆಲವು ಮುದುಕರಿಗೆ 'ಮೊಸಳೆಕಣ್ಣೀರಿನ ಕರಾಮತ್ತು ಕೆಲಸಮಾಡುವುದು' ಗೊತ್ತಿದೆ! ಅಂತಹ ’ಮುತ್ಸದ್ಧಿಗಳು’ ರಾಜ್ಯಕ್ಕಾಗಿಯಾಗಲೀ ದೇಶಕ್ಕಾಗಿಯಾಗಲೀ ಕೊಟ್ಟ ಕೊಡುಗೆಗಳೇನೂ ಇಲ್ಲ!! ಪ್ರಜಾತಂತ್ರದಲ್ಲಿ ಪ್ರಜೆಗಳಿಂದ ಬಂದ ಹಣವನ್ನೇ ಪ್ರಜೆಗಳಿಗಾಗಿ ಸ್ವಲ್ಪವಾದರೂ ಪ್ರಾಯೋಗಿಕವಾಗಿ ಬಳಸಿದ್ದರೆ ಇಲ್ಲಿನವರೆಗೆ ಈ ಸ್ಥಿತಿ ಇರುತ್ತಿರಲಿಲ್ಲ! ಮೇಲಿನ ಟಾಕಿಗೆ ಹಾಲು ತುಂಬಿದ ಕಥೆಯಂತೇ ಆಳುವ ದೊರೆಗಳಲ್ಲಿ ಬಹುತೇಕರು ಟಾಕಿಗೆ ಸುರಿದಿದ್ದು ನೀರನ್ನೇ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.
ಎತ್ತಣ ಮಾಮರ ಎತ್ತಣ ಕೋಗಿಲೆ ಎಂದಂತೇ ಎತ್ತಣ ರಾಮಾಯಣ ಎತ್ತಣ ರಾಜಕಾರಣ ? ಯಾವುದೇ ರೀತಿ-ನೀತಿ ಇಲ್ಲದ ದುಷ್ಟರಿಂದ, ಲಜ್ಜೆಗೆಟ್ಟ ಪಾತಕಿಗಳೂ ಧನಪಿಶಾಚಿಗಳೂ ಕುಣಿಯುವ ರಂಗಸ್ಥಳವಾಗಿ ವಿಧಾನಸೌಧ ಆಶ್ರಯ ನೀಡುತ್ತಿದೆ. ತಮ್ಮನ್ನೇ ಸರಿಪಡಿಸಿಕೊಳ್ಳಲಾರದ ಜನ [ಯಾವುದೇ ಪಕ್ಷವಿರಲಿ]ಪ್ರಜೆಗಳ ಕುಂದುಕೊರತೆಗಳನ್ನು ಲಕ್ಷ್ಯಿಸುವರೇ? ಉತ್ತರವನ್ನು ನಿಮ್ಮೆಲ್ಲರ ಊಹೆಗೆ ಬಿಟ್ಟು ಪೂರ್ಣವಿರಾಮ ಹಾಕಿದ್ದೇನೆ.