ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 31, 2012

ಛೂ ಬಾಣ, ಹೂಬಾಣ ಮತ್ತು ’ಬಾಣ’ಗಳನ್ನು ಬಿಡುವ ಸಂಪಾದಕರುಗಳು !

ಚಿತ್ರ ಋಣ : ಅಂತರ್ಜಾಲ 
ಛೂ ಬಾಣ, ಹೂಬಾಣ ಮತ್ತು ’ಬಾಣ’ಗಳನ್ನು ಬಿಡುವ ಸಂಪಾದಕರುಗಳು!

ಕಲಿಯುಗದಲ್ಲಿ ರಾಮಬಾಣ ಕೇವಲ ಹೆಸರಿಗೆಮಾತ್ರ! ಯಾಕೆಗೊತ್ತೇ ಬಹುತೇಕರು ಎಡಪಂಥೀಯರು: ದೇವರು-ದಿಂಡರನ್ನು ನಂಬುವವರಲ್ಲ, ರಾಮ ಇದ್ದನೆಂಬ ಸಂಗತಿಯೇ ಅವರಿಗೆ ಅಸಂಗತ. ಇನ್ನು ಕೆಲವರಿಗೆ ರಾಮನ ಹೆಸರನ್ನು ಹೇಳಿ ಬೇಳೇ ಬೇಯಿಸಿಕೊಳ್ಳುವ ಕೆಲಸವಾದ್ದರಿಂದಲೂ ಇಂಥಾ ಆಸಾಮಿಗಳು ಕರೆದರೂ ರಾಮ ಈ ದಿಕ್ಕಿಗೆ ಮುಖಹಾಕುವುದಿಲ್ಲವೆಂಬುದು ಅವರಿಗೇ ಗೊತ್ತಿರುವುದರಿಂದಲೂ ರಾಮನಾಮದ ದುರುಪಯೋಗವಾಗುತ್ತಿದೆ. ವಿಷಯ ಹೀಗಿದ್ದರೂ ರಾಮನ ಬಾಣ ಗುರಿತಪ್ಪುತಿರಲಿಲ್ಲ ಎಂಬುದು ನಮಗೆಲ್ಲಾ ವಿದಿತವಾದ ಸತ್ಯಕಥೆ. ರಾಮಬಾಣವನ್ನು ವಿರೋಧಾಭಾಸವಾಗಿ ಉಪಯೋಗಿಸುವ ಪರಿಯೂ ಇದೆ: ಹೇಗೆ ಬೈಗುಳಗಳಿಗೆ ಕೆಲವರು ’ಮಂತ್ರ’ ಅಥವಾ ’ಸಂಸ್ಕೃತಪದಗಳು’ ಎನ್ನುತ್ತಾ ಪದಗಳಿಗೆ ಅಪಮೌಲ್ಯ ಹುಟ್ಟಿಸುತ್ತಾರೋ, ’ಸರಿಯಾಗಿ ಮುಖಕ್ಕೆ ಮಂಗಲಾರತಿಮಾಡಿದೆವು’ ಎಂದು ಹೇಳಿ ’ಮಂಗಲಾರತಿ’ಪದದ ’ಪದವಿ’ಯನ್ನು ಕಳೆಯುತ್ತಾರೋ ಅದೇ ರೀತಿ ನಮ್ಮಲ್ಲಿ ಕೆಲವು ಕಡೆ ಯಾರಾದರೂ ಕೆಟ್ಟ ಹೂಸು ಬಿಟ್ಟರೆ "ಅಯ್ಯೋ ಬಿಟ್ಟ್ನಪ್ಪಾ ಒಂದು ರಾಮಬಾಣ"ಎಂದು ಆಡಿಕೊಳ್ಳುವುದಿದೆ. ಹೀಗೇ ಕೆಲವು ಪದಗಳನ್ನು ನಮ್ಮನಮ್ಮ ಯೋಗ್ಯತೆಗೆ ಮತ್ತು ಅನುಕೂಲಕ್ಕೆ ತಕ್ಕಂತೇ ದುರುಪಯೋಗಮಾಡಿಕೊಳ್ಳುವವರ ಮಧ್ಯೆ ಬಾಣಗಳ ಬಗ್ಗೆ ಅವಲೋಕನಮಾಡುವ ಮನಸ್ಸಾಯ್ತು. ಬಾಣಗಳಲ್ಲೇ ವಿಶೇಷವಾದ ಶಕ್ತಿಯನ್ನು ಹೊಂದಿದಂತಹ ಬಾಣಗಳನ್ನು ಅಸ್ತ್ರಗಳೆಂದೂ ಕರೆಯುತ್ತಿದ್ದರು ಎಂಬುದು ತಿಳಿದುಬರುತ್ತದೆ, ಸರಿಯಷ್ಟೇ? ಬ್ರಹ್ಮಾಸ್ತ್ರ, ನಾರಾಯಣಾಸ್ತ್ರ, ಸರ್ಪಾಸ್ತ್ರ ಹೀಗೆಲ್ಲಾ ಕೇಳಿದ್ದೇವೆ ನಾವು ಅಲ್ಲವೇ? ಇಂತಹ ಅಸ್ತ್ರಗಳೋ ಬಾಣಗಳೋ ವೈರಿಗಳನ್ನೋ ವಿರೋಧಿಗಳನ್ನೋ ವಧೆಮಾಡಲು ಬಳಸಲ್ಪಡುತ್ತಿದ್ದವು ಎಂಬುದಂತೂ ನಿಜ; ಯಾಕೆಂದರೆ ನಾಗಾಲ್ಯಾಂಡ್ ಮಿಜೋರಾಮ್ ದಂಥಾ ಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಬಾಣಗಳ ಪ್ರಯೋಗ ಚಾಲ್ತಿಯಲ್ಲಿದೆ. ರಾಮನ ವಿರೋಧಿಯಾದ ವಾಲಿಗೆ ರಾಮಪ್ರಯೋಗಿಸಿದ ಬಾಣವೂ ಒಮ್ಮೆ ತಾಗಿರಲಿಲ್ಲವಂತೆ! ಹೀಗಿರುವಾಗ ಗುರಿತಲ್ಪದ ಅನೇಕ ಬಾಣಗಳನ್ನು ಬಿಡುವ ಹುಲುಮಾನವರು ನಮ್ಮ ನಡುವೆ ಇದ್ದಾರೆ; ಅವು ಬಾಣಗಳಲ್ಲ, ಆದರೆ ಮಾತಿನ ಬಾಣಗಳು, ಅಕ್ಷರ ಬಾಣಗಳು.

ವಿರೋಧಿಗಳನ್ನು ಬಗ್ಗುಬಡಿಯಲಷ್ಟೇ ಅಲ್ಲದೇ ಇನ್ನೂ ಕೆಲವು ಬಾಣಗಳನ್ನು ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಿದ್ದಾರೆ; ಈ ಬಾಣಗಳು ಕಾಮದೇವ ಮನ್ಮಥನಿಗೆ ಮೀಸಲು. ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲಗಳೆಂಬ ಶರಗಳನ್ನು ಎಸೆದು, ಸುಕುಮಾರ ಮನ್ಮಥ ಕುಮಾರ-ಕುಮಾರಿಯರ ನಡುವೆಯೋ ಅಥವಾ ಹರೆಯದ ಹೆಣ್ಣು-ಗಂಡಿನ ನಡುವೆಯೋ ವಿಷಯಾಸಕ್ತಿಯನ್ನು ಜಾಗೃತಗೊಳಿಸಿ, ಪರಸ್ಪರ ಅನುರಕ್ತರಾಗುವಂತೇ ಪ್ರೇರೇಪಿಸುತ್ತಾನೆ ಎಂದೂ ನಾವು ಕೇಳಿದ್ದೇವಲ್ಲವೇ? ಶಿವ-ಶಿವೆಯರ ಒಲವಿಗೆ ಕಾರಣನಾಗಿ ತನ್ನನ್ನೇ ಜಗತ್ತಿಗಾಗಿ ಬಲಿಹಾಕಿಕೊಂಡವ ಅರ್ಥಾತ್ ಮುಕ್ಕಣನ ಮೂರನೇ ಕಣ್ಣಿನ ಜ್ವಲಿತಾಗ್ನಿಯಲ್ಲಿ ಬೆಂದು ಬೂದಿಯಾದವ ಮನ್ಮಥ. ಸದ್ಯ ನಮಗೆ ಈ ಬಾಣಗಳ ಸುದ್ದಿಯೂ ಬೇಕಾಗಿಲ್ಲ! ಯಾಕೆಂದರೆ ನಮಗೆ ಇವೆಲ್ಲಾ ಕೇರ್ವಲ ಕಥೆಗಳಾಗಿ ಗೋಚರಿಸುವುದು ಕಲಿಯುಗದ ಗೋಚಾರಫಲ! ಮುಂದುವರಿದ ಜಗತ್ತಿನ ಅತಿಮುಂದುವರಿದ ತಂತ್ರಜ್ಞಾನದಲ್ಲಿ ಪಳಗಿದ ನಾವು, ಅಪ್ಪನನ್ನೇ ಅಪನಂಬಿಕೆಯಿಂದ ನೋಡುವ ಕಾಲ ಕಲಿಗಾಲ ಎಂದರೂ ತಪ್ಪಲ್ಲವಲ್ಲಾ? ಯಾರಮೇಲೂ ನಂಬಿಕೆ ಇಡಲಾರದ ಸ್ಥಿತಿಗೆ ನಮ್ಮನ್ನೇ ನಾವು ಒಡ್ಡಿಕೊಂಡಿದ್ದರೆ ಅದು ನಮ್ಮ ಅಧುನಿಕ ವಿಜ್ಞಾನದ ಸಂವಹನ ಪರಿಕರಗಳಿಂದ, ಸಮೂಹ ಮಾಧ್ಯಮಗಳ ದುರ್ಬಳಕೆಯಿಂದ ಆದ ಅಡ್ಡಪರಿಣಾಮ [ಸೈಡ್ ಇಫೆಕ್ಟ್] ಎಂಬುದಕ್ಕೆ ನನ್ನ ಜೊತೆ ನೀವೆಲ್ಲಾ ದುಡ್ಡು ತೆಗೆದುಕೊಳ್ಳದೇ ವೋಟುಹಾಕುತ್ತೀರೆಂಬ ನಂಬಿಕೆಯಂತೂ ಇದೆ!!  ಹೇಳುತ್ತಿರುವ ಈ ವಿಷಯವನ್ನು ಪೂರ್ತಿಯಾಗಿ ಓದಿ ತಿಳಿದ ನಿಮ್ಮಿಂದ, ಇಡಗಂಟು ಬಚಾವ್ ಆಗುವಷ್ಟಾದರೂ ವೋಟುಗಳು ಬೀಳುತ್ತವೆ ಎಂಬ ವಿಶ್ವಾಸವೂ ಇದೆ!--ಇದು ಅಪನಂಬಿಕೆಗಳ ನಡುವೆಯೇ ನಂಬಿಕೆ ಇಡಬಹುದಾದ ವಿಶಿಷ್ಟ ಕಾರ್ಯ!ಇರಲಿ ಬಿಡಿ. 

ಬಾಣ ಎಂಬುದನ್ನೇ ತನ್ನ ಹೆಸರನ್ನಾಗಿಸಿಕೊಂಡಿದ್ದವ ಒಬ್ಬ ಮಹಾಕವಿ. ಕಾಳಿದಾಸನಂತೇ, ಪಾಣಿನಿಯಂತೇ, ಭವಭೂತಿಯಂತೇ ಅವರ ಸಾಲಿನಲ್ಲಿ ನಿಲ್ಲುವ ಅಸಾಮಾನ್ಯರಲ್ಲಿ ಬಾಣನೂ ಒಬ್ಬ ಮಹನೀಯ, ಮನನೀಯ, ಸ್ಮರಣೀಯ. ಬಾಣನ ನಂತರ ಅನೇಕ ಕವಿಪುಂಗವರು ಈ ನೆಲದಲ್ಲಿ ಆಗಿಹೋದರು ಆದರೆ ಬಾಣ ಎಂಬ ಹೆಸರನ್ನು ಅವರ್ಯಾರೂ ಮತ್ತೆ ಇಟ್ಟುಕೊಳ್ಳಲಿಲ್ಲ; ಹೀಗಾಗಿ ಒಮ್ಮಡಿ [ಒಂದನೆಯ] ಬಾಣ, ಇಮ್ಮಡಿ ಬಾಣ, ಮುಮ್ಮಡಿಬಾಣ ಎಂದೆಲ್ಲಾ ಹೇಳುವ ಅಗತ್ಯ ಬೀಳುವುದಿಲ್ಲ. ಆದರೂ ಬಾಣ ಎಂಬ ಶಬ್ದದ ನೇರ ಹಾಗೂ ಪರೋಕ್ಷ ಮತ್ತು ಬೇಹುಗಾರಿಕಾ ಬಳಕೆ ಸದಾ ಜಾರಿಯಲ್ಲೇ ಇದೆ.  ಅದು ಹೇಗೆ ಎಂಬುದಕ್ಕೆ ಉದಹರಿಸಿಬಿಡುತ್ತೇನೆ: ಕಥೆಗಳಲ್ಲಿ, ’ಆರ್ಚರಿ’ ಎಂಬ ವಿದ್ಯೆಯ ಪರೀಕ್ಷೆಯ ಫಲಿತಾಂಶಗಳಲ್ಲಿ ನಮಗೆ ಕಾಣುವುದು ನೇರವಾದ ಬಾಣ.  ಆಗಾಗ ಕೆ.ಇ.ಬಿಯವರ ಬಿಲ್ಲುಬಂದಾಗ ಅನೇಕರಿಗೆ ಬಾಣದ ನೆನಪೂ ಆಗುವುದೂ ಇದೆ, ಇದು ಪರೋಕ್ಷ ಅವರು ಎಸೆಯುವ ಬಾಣ ಎಂದವರೂ ಇದ್ದಾರೆ! ’ನೀನೇ ತ್ರಿಪುರಸುಂದರಿ’ ಎಂಬುದನ್ನು ಒಪ್ಪಿಕೊಂಡ ಅಮಾಯಕನೆಡೆಗೆ, ಸುಂದರಿಯರೆಂದು ತಾವೇ ತಿಳಿದುಕೊಂಡವರು ತುಸುಹುಸಿನಗೆ ಚೆಲ್ಲಿ ಮಿಂಚಿಮಾಯವಾಗಿ, ವಾರಗಟ್ಟಲೆ ಆತ ಎದೆನೀವಿಕೊಳ್ಳುವಂತೇ ಮಾಡುವುದು ’ಬೇಹುಗಾರಿಕಾ ಬಾಣ’ ಎಂಬುದನ್ನು ಬಲ್ಲ ಅಮಾಯಕರು ಹೇಳಿಕೊಂಡಿದ್ದಾರೆ! ’ನಿನ್ನ ಹುಬ್ಬು ಕಾಮನಬಿಲ್ಲು’ ಎಂದು ಹೇಳಿಸಿಕೊಳ್ಳಲು ಬೇತಾಳದ ಕಥೆಗಳಲ್ಲಿ ಬರುವ ಛಲಬಿಡದ ತ್ರಿವಿಕ್ರಮನಂತೇ, ಅವಿರತ ಶ್ರಮ ಮತ್ತು ನಿಗಾವಹಿಸಿ ಸದಾ ಬ್ಯೂಟಿಪಾರ್ಲರಿನ ಸೇವೆ ಪಡೆದು ಹುಬ್ಬಿನಮೇಲೆ ಬಾಣಪ್ರಯೋಗಿಸುವ ಸುಂದರಿಯರು ಯಾರಲ್ಲಾ?--ಎಂಬುದನ್ನು ಹೆಂಗಸರೆನಿಸಿದ ಯಾರಲ್ಲಾದರೂ ಕೇಳಿ ಅವರು ಒಪ್ಪಿಯೂ ಒಪ್ಪದಿರುತ್ತಾರೆ! ಹುಬ್ಬಿನ ನೆನಪಾದಾಗ ಗುಬ್ಬಿಯ ನೆನಪೂ ಆಗುವುದಕ್ಕೆ ಕಾರಣ ಇಂತಿದೆ: ’ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ’!-ಎಂಬ ಅನಾದಿಯ ಹೇಳಿಕೆ. ಮುಷ್ಠಿಗಾತ್ರಕ್ಕಿಂತಲೂ ಚಿಕ್ಕದಾದ ಗುಬ್ಬಚ್ಚಿಯನ್ನು ಸದೆಬಡಿಯಲೋ ಬೆದರಿಸಲೋ ಬ್ರಹ್ಮಾಸ್ತ್ರ ಬೇಕೇ? ಅಂತೂ ’ಅಸ್ತ್ರವಿದ್ಯಾ ವಿಶಾರದ’ರು ಹಲವು ಮಜಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದಂತೂ ಅರ್ಥವಾಗುತ್ತದಲ್ಲಾ?

ಬಾಣಕ್ಕೆ ಶರ ಎಂಬುದೂ ಇನ್ನೊಂದು ಹೆಸರಷ್ಟೇ?  ಶರಪಂಜರ ಎಂಬ ಸಿನಿಮಾವೊಂದು ಕನ್ನಡದಲ್ಲಿ ಇರುವುದು ತಿಳಿದಿದೆ, ಶರಶಯ್ಯೆಯಲ್ಲಿ ಭೀಷ್ಮ ಪಿತಾಮಹ ಮಲಗಿದ್ದರಂತೆ, ಶರಧಿಗೆ ಅರ್ಜುನ ಶರದಿಂದಲೇ ನಿರ್ಮಿಸಿದ ಸೇತುವೆಯನ್ನೂ ಮತ್ತು ಅದನ್ನು ಮುರಿದುಹಾಕುತ್ತಿದ್ದ ಹನುಮನನ್ನೂ ಕೇಳಿದ್ದೇವೆ. ’ಧಾರವಾಡಕ್ಕೆ ಹೋಗುವ ಶರವೇಗದ ಬಸ್ಸುಗಳಿಗಾಗಿ’ ಎಂಬ ಬೋರ್ಡು ಹಿಂದೊಮ್ಮೆ ಹುಬ್ಬಳ್ಳಿ ಸಿಬಿಟಿ ನಿಲ್ದಾಣದಲ್ಲಿ ಕಾಣುತ್ತಿತ್ತು-ಅದು ಈಗಲೂ ಇದ್ದಿರಬಹುದೋ ಗೊತ್ತಿಲ್ಲ! ಬಸ್ಸುಗಳ ವೇಗಕ್ಕೂ ಶರವೇಗವೆಂದು ಕಲ್ಪಿಸಿ ಹೆಸರಿಸಿದ ಮಹಾನ್ ಕಲಾವಿದರು ನಮ್ಮಲ್ಲಿದ್ದಾರೆ ಎಂದಾಯಿತಲ್ಲವೇ? ಹೀಗೇ ಈ ಬಾಣದ ಕಥೆ ಬಿಚ್ಚಿಕೊಂಡಷ್ಟೂ ಮುಗಿಯದಷ್ಟು ಉದ್ದವಾಗುತ್ತದೆ; ಸನ್ಮಾನ ವೇದಿಕೆಯೊಂದರಲ್ಲಿ ಅನೇಕರ ’ಛದ್ಮವೇಷಗಳು’ ಮುಗಿದು ನಡುರಾತ್ರಿ ಕಳೆದ ನಂತರ, ಯಾವುದೋ ಅಜ್ಜಿಯಿಂದ ಹಾಡಲ್ಪಟ್ಟ ಕಮಲದಳಗಳ ಆರತಿಪದದ ಬಗ್ಗೆ, ಇನ್ನೂ ಸಭೆ ಮುಗಿದಿಲ್ಲವಲ್ಲಾ ಎಂಬ ಚಿಂತೆಯಲ್ಲಿ ಮುಳುಗಿದ್ದ ಗಂಗಾವತಿ ಪ್ರಾಣೇಶರಿಗೆ ಒಂದು ವಿಶಿಷ್ಟವಾದ ಅನುಭವವಾಗಿತ್ತಂತೆ;  ಅಜ್ಜಿ ಹಾಡುತ್ತಲೇ ಇದ್ದಳು ...ಒಂದು..ಎರಡು..ಮೂರು.. ನಾಕು....ಎಲ್ಲಾ ಮುಗಿದು ಈಗ

..ಅಷ್ಟದಳದ ಕಮಲದಲ್ಲಿ ಮೂಡಿಬಂದ ಲಿಂಗವೇ
ಇಷ್ಟವಾದ ಲಿಂಗವೇ ಅಷ್ಟುಮಾತ್ರ ಲಿಂಗವೇ   
ಓಂ ನಮಃಶಿವಾಯ ಓಂ  ನಮಃಶಿವಾಯ   
ಓಂ  ನಮಃಶಿವಾಯಾ  ಓಂ  ನಮಃಶಿವಾಯ
.
.
.
.
ಹೀಗೇ ದಳಗಳ ಸಂಖ್ಯೆಮಾತ್ರ ಏರುತ್ತಲೇ ಇರುವಾಗ ಮಧ್ಯೆ ಬೇಸತ್ತ ಪ್ರಾಣೇಶರು ಅಜ್ಜಿಯಲ್ಲಿ ಕೇಳಿದರಂತೆ:"ಇನ್ನೆಷ್ಟ್ ದಳಗಳ ಉಳ್ದಾವಬ್ಬೇ ?" ಅಂತ, ಆಕೆ ಹೇಳಿದಳಂತೆ " ನೂರಾ ಎಂಟು ದಳಗೋಳ್ ಅದಾವಪ್ಪಾ" ಅಂತ. ಇನ್ನೂ ಬಂಭತ್ತು ಹತ್ತರಾಗ ಇರೋ ಆಸಾಮಿ ೧೦೮ ಎಣಿಸೋ ವರೆಗೆ ’ರಾಹುಗ್ರಸ್ತ ದಿವಾಕರೇಂದು ಸದೃಶೋ’ ಎಂಬಂತೇ ಪ್ರಾಣೇಶರ ಫಜೀತಿ ಯಾಕೆ ಕೇಳ್ತೀರಿ! ಅಂತೂ ೧೦೮ ದಳಗಳಹಾಡನ್ನು ಅಜ್ಜಿ ಹಾಡುವುದರೊಳಗೆ ಮಳೆ ಆರಂಭವಾಗಿ ಆ ಮಳೆಯಲ್ಲೇ ವ್ಯವಸ್ಥಾಪಕರು "ಪ್ರಾಣೇಶ್, ತಗೋ ಅಪಾ ಸನ್ಮಾನ" ಎಂದು ನಿಂತಲ್ಲಿಂದಲೇ ಶಾಲು ಅವರೆಡೆಗೆ ಬೀಸಿ ಎಸೆದ ಕಥೆಯನ್ನು ಹೇಳುತ್ತಿದ್ದರು; ಅಂಥಾ ಬಾಣಪ್ರಯೋಗಗಳು ಉತ್ತರಕರ್ನಾಟಕದಲ್ಲಿ ಅಲ್ಲಲ್ಲಿ ಸರ್ವೇಸಾಮಾನ್ಯ ಎಂದೂ ಅವರು ಹೇಳುವುದನ್ನು ಕೇಳಿದ್ದೆ.  

’ಛೂಬಾಣ’ ಎಂಬುದು ಅಂಕಣವೊಂದಕ್ಕೆ ಟಿ.ಎಸ್.ರಾಮಚಂದ್ರರಾಯರೆಂಬ ಸಂಪಾದಕರು ಇಟ್ಟುಕೊಂಡ ಖಾಸಾ ಹೆಸರು. ಅವರ ಆ ಅಂಕಣದ ಬರಹಗಳು ರಾಜಕಾರಣಿಗಳಿಗೆ ಬಿಟ್ಟ ಬಾಣಗಳಂತೇ ಇರುತ್ತಿದ್ದವು ಎಂಬುದು ಓದುಗರ ಅಂಬೋಣ. ಛೂಬಾಣ ಬರೆಯುತ್ತಿದ್ದ ಟಿ.ಎಸ್. ಆರ್. ಪತ್ರಿಕಾರಂಗದಲ್ಲಿ ನಿಷ್ಠುರದ ಪತ್ರಕರ್ತರೆಂದೇ ಪ್ರಸಿದ್ಧ. ಶುದ್ಧಹೃದಯಿಗಳೂ  ಶುದ್ಧಹಸ್ತರೂ ಮತ್ತು ಸಿದ್ಧಹಸ್ತರೂ ಆಗಿದ್ದ ಅವರು ಜೀವನದಲ್ಲಿ ನಿಭಾಯಿಸಿದ್ದು ವಿಭಿನ್ನ ವೃತ್ತಿಗಳನ್ನು. ಕೊನೆಗೊಮ್ಮೆ ಅವರು ಪತ್ರಿಕಾ ಸಂಪಾದಕರಾಗಿ ಅದರಲ್ಲೇ ಬಹುಕಾಲ ಉಳಿದರು; ತನ್ನ ಛಾಪನ್ನು ಉಳಿಸಿದರು. ಕಟುಟೀಕೆಗಳಮೂಲಕ ವಾಸ್ತವವನ್ನು ತೆರೆದಿಡುತ್ತಿದ್ದ ಅವರು ಯಾರದೋ ಹಣದ ಆಮಿಷಕ್ಕೆ, ಮಾಸಾಶನಕ್ಕೆ ಕಯ್ಯೊಡ್ಡಿದವರಲ್ಲ. ನಾಳೆ ಹೇಗೆ ಎಂಬ ಚಿಂತೆ ಮನೆಯಲ್ಲಿದ್ದರೂ ತಮ್ಮ ಆರ್ಥಿಕ ಅನಿವಾರ್ಯತೆಯನ್ನು ಯಾರಮುಂದೂ ಅಲವತ್ತುಕೊಂಡವರಲ್ಲ! ಮಂಚದ ಮುರಿದ ನಾಲ್ಕನೇ ಕಾಲಿನ ಬದಲಿಗೆ ಹಳೆಯ ರದ್ದಿಗಳನ್ನು ಆಧಾರವಾಗಿ ಊತುಗೊಟ್ಟು ಮಂಚವನ್ನು ಬಳಸುತ್ತಿದ್ದ ಸ್ಥಿತಿ ಅವರದಾಗಿತ್ತು. ಕೊನೆಗೊಮ್ಮೆ ಹಣವೇ ಇಲ್ಲದ ದಿನದಲ್ಲಿ ಮಾರನೇ ದಿನ ಮನೆಗೆ ಬರುವ ಅತಿಥಿಗಳ ಸತ್ಕಾರಕ್ಕಾಗಿ ಮಂಚದ ಮುರಿದಕಾಲಿಗೆ ಪರ್ಯಾಯವಾಗಿ ಇರಿಸಿದ್ದ ರದ್ದಿಗಳ ಕಂತೆಯನ್ನೇ ಮಾರಿ, ಅದರಿಂದಲೇ ಬಂದ ಕೊಂಚಹಣದಲ್ಲೇ ಆ ಕೆಲಸವನ್ನು ನಿಭಾಯಿಸಿದ್ದರಂತೆ. ಮಂಚಕ್ಕೆ ಮೂರೇ ಕಾಲಾಯ್ತಲ್ಲ ಎಂಬ ಕಷ್ಟದ ಭಾವನೆಯಿರಲಿಲ್ಲ, ಅತಿಥಿಗಳು ವಕ್ಕರಿಸಿಕೊಂಡರಲ್ಲಾ ಎಂಬ ಅಸಹನೀಯ ಆಕ್ಷೇಪವಿರಲಿಲ್ಲ, ಸಂಪಾದಕನಾಗಿ ತನಗೀಸ್ಥಿತಿಯೇ ಎಂಬ ಖಿನ್ನತೆ, ಕೀಳರಿಮೆ ಇರಲಿಲ್ಲ. ಆದರೆ ಅತಿಸುಲಭವಾಗಿ ಮರೆತುಬಿಡುವ ನಮ್ಮಂತಹ ಜನರಿಗೆ ಅವರ ನೆನಪು ಮಾಸಿದರೂ ಅಲ್ಲಿಲ್ಲಿ ಛೂಬಾಣಗಳು ನಾಟಿದ ಗುರುತುಗಳು ಇನ್ನೂ ಕಾಣಸಿಗುತ್ತವೆ! 

"ಇಂದಿನ ಸಂಪಾದಕರುಗಳು ಜಾಸ್ತಿ ಮ್ಯಾನೇಜ್ ಮೆಂಟ್ ತಿಳಿದುಕೊಂಡವರು, ಹಲವು ಪತ್ರಿಕೆಗಳ ನಡುವೆ ತಮ್ಮ ಪತ್ರಿಕೆಯ ಪ್ರಸಾರದ ಬೆಳವಣಿಗೆ ಹೇಗೆಮಾಡಬೇಕೆಂಬುದರಲ್ಲಿ ನಿಪುಣರು" ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ. ಪತ್ರಿಕಾ ಸಂಪಾದಕರಿಗೆ ಪ್ರಸಾರವೇ ಮುಖ್ಯವೆನಿಸಿದಾಗ ಪ್ರಚಾರದ ಅಬ್ಬರದಲ್ಲಿ ಅವರು ತೊಡಗಿಕೊಳ್ಳುವುದ ಕಾಣುತ್ತದೆ. ಕೆಲಸಕ್ಕೆ ಬಾರದ ವಿಷಯಗಳನ್ನೂ ಅತಿವಿಶಿಷ್ಟ ವಿಷಯವೆಂಬಂತೇ ಬಿಂಬಿಸಹೊರಟು, ಬರಹಕೌಶಲದಲ್ಲಿ ತಮ್ಮನ್ನು ಮತ್ತೊಂದು ಜನ್ಮದಲ್ಲೂ ಮೀರಲಾಗದ ಬರಹಗಾರರನ್ನು ಪುಕ್ಕಟೆಯಾಗಿ ಬಳಸಿಕೊಂಡು, ಆ ಮೂಲಕ ಅವರ ಬರಹಗಳನ್ನು ಪ್ರಕಟಿಸಿದ ’ಔದಾರ್ಯ’ಕ್ಕೆ, ’ಕೀರ್ತಿ’ಗೆ ಇಂತಹ ಸಂಪಾದಕರು ಪಾತ್ರರಾಗುತ್ತಾರೆ; ಪಟಾಲಮ್ಮು ಬೆಳೆಯುತ್ತದೆ; ಸಂಪಾದಕರೆಂಬ ಅರಸರಿಗೆ ಪಕ್ಕದಲ್ಲಿ ಎಡಬಲಗಳಲ್ಲಿ ಕತ್ತಿಯನ್ನು ಝಳಪಿಸಿ ಅವರ ಠೊಳ್ಳು ಘನತೆಯನ್ನು ಹೆಚ್ಚಿಸುವ ಮಂದಿ ತಯಾರಾಗುತ್ತಾರೆ! ಎತ್ತರದ ಸ್ಥಾನದಲ್ಲಿ ಕುಳಿತ, ಸುಲಭ-ಅಲಭ್ಯ ಪಂಡಿತರೊಬ್ಬರು ಕಿತ್ತೆಸೆದಾಗ ’ಬ್ಲಾಗ್ ಬರೆಯಲೋ’ ಎಂದುಕೊಂಡರು, ಆದರೆ ಬ್ಲಾಗ್ ಬರಹಗಾರರ ಬಗ್ಗೆ ಅವರು ಅಸಭ್ಯ ಹೇಳಿಕೆಗಳನ್ನು ಅದಾಗಲೇ ಅಪ್ಪಣೆಕೊಡಿಸಿಬಿಟ್ಟಿದ್ದರು; ಅವರು ಅಂದು ಬಿಟ್ಟ ಬಾಣ ಅವರಿಗೇ ತಿರುಗಿನಾಟುವ ಆ ದಯನೀಯ ಹಂತದಲ್ಲಿ ಸ್ವತಂತ್ರ ವೆಬ್ ಸೈಟ್ ತೆರೆದರು, ಸ್ವಂತ ಮೊಬೈಲ್ ಸಂಖ್ಯೆಯನ್ನೇ ಅಲ್ಲಿ ನಮೂದಿಸಿ ಸುಲಭಲಭ್ಯರಾಗಿ ಅನೇಕರ ಅನುಕಂಪವನ್ನು ಗಳಿಸಿದರು! ಜಾಲತಾಣಗಳ ಮಾದರಿಯಲ್ಲಿ ಬ್ಲಾಗ್ ಒಂದು ತೆರನಾದದ್ದಾದರೆ ವೆಬ್ ಸೈಟ್ ಇನ್ನೊಂದು ತೆರನಾದದ್ದು; ನಿಮಿತ್ತಮಾತ್ರದ ಅಂತರಗಳು ಇವುಗಳಿಗೆ ಎಂಬುದು ತಂತ್ರಜ್ಞಾನ ನಿಪುಣರಿಗೆ ಮತ್ತು ಅಂತರ್ಜಾಲದ ಓದುಗರಿಗೆ ಗೊತ್ತು. "ಎಲ್ಲಿಯೂ ಪ್ರಕಟವಾಗದ ಲೇಖನಗಳನ್ನು ಸ್ವಂತ ಬ್ಲಾಗ್ ತೆರೆಯುವ ಮೂಲಕ ಪ್ರಕಟಿಸುತ್ತಾರೆ" ಎಂದ ಅವರ ಪೊಗರನ್ನು ಗಮನಿಸಿದಾಗ ಅವರು ಬಿಟ್ಟಿದ್ದೇ ಬಾಣ ಎನ್ನಬೇಕೋ ಅಥವಾ ’ಬಿಟ್ನಪ್ಪಾ ರಾಮಬಾಣ’ ಎಂದು ಅಪಸವ್ಯವಾಗಿ ಹೇಳಬೇಕೋ ತಿಳಿಯದಾಗಿದೆ.     

ಮೊನ್ನೆ ಒಬ್ಬರು ದಾರಿಯಲ್ಲಿ ಸಿಕ್ಕಿದ್ದರು, ಸ್ವಾತಂತ್ರ್ಯ ಪೂರ್ವದ ದೇಶಬಂಧು! ಅಂತರ್ಜಾಲದ ಬಗ್ಗೆ ತುಸುವೇ ಅರಿವುಳ್ಳವರೂ ಗಣಕಯಂತ್ರಗಳ ಬಗ್ಗೆಯೇ ಅಸಡ್ಡೆಯನ್ನು ಬೆಳೆಸಿಕೊಂಡ ವ್ಯಕ್ತಿ. ಮೊಮ್ಮಗನಂಥವರು ಕೆಲಸಮಾಡುವಾಗ ಮರೆಯಲ್ಲಿ ಕಂಡೂ ಕಾಣದಂತೇ ಆರ್.ಕೆ, ಲಕ್ಷ್ಮಣ್ ಅವರ ವ್ಯಂಗಚಿತ್ರದ ಶ್ರೀಸಾಮಾನ್ಯನಂತೇ ಗೋಚರಿಸುವ ಅವರಿಗೆ ಗಣಕಯಂತ್ರಗಳೂ ಸಂವಹನಕ್ಕೆ ಪ್ರಮುಖವಾಗಿ ಬಳಸಲ್ಪಡುತ್ತವೆ ಎಂಬುದು ತಿಳಿದುಬಂದ ಸುದ್ದಿ. ಛೆ ಛೆ ಎಲ್ಲಾದರೂ ಉಂಟೇ ಎಂಬ ರೀತಿ ಅಂತರ್ಜಾಲ ಮಾಧ್ಯಮವನ್ನು ಒಪ್ಪಲು ಸಿದ್ಧವಿರುವ ಜನ ಅದಲ್ಲ! ಹಲವು ಸುದ್ದಿಗಳ ನಡುವೆ "ಕನ್ನಡ ಸಾಹಿತ್ಯ ಪರಿಷತ್ತು ನಿಮ್ಮ ಬ್ಲಾಗ್ ಗಳನ್ನೆಲ್ಲಾ ಮಾನ್ಯಮಾಡುವುದಿಲ್ಲ" ಎಂದರು. "ಅಯ್ತು ಸ್ವಾಮೀ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯತೆಗಳ ಯಾದಿಯಲ್ಲಿ ಸೇರುವ ಏಕಮೇವ ಉದ್ದೇಶದಿಂದ ಬರೆಯುತ್ತಿಲ್ಲಾ, ನಮ್ಮ ಬರಹಗಳನ್ನು ಮೆಚ್ಚುವ, ಓದುವ ಸ್ನೇಹಿತ ಓದುಗ ಬಳಗಕ್ಕಾಗಿ ನಾವು ಬರೆಯುತ್ತೇವೆ"ಎಂದೆ. ಮುದ್ರಿತ ಪುಸ್ತಕಗಳ ರೂಪದಲ್ಲಿ ಬಂದಾಗಮಾತ್ರ ಕೃತಿಯ ಮನ್ನಣೆ ದೊರೆಯುತ್ತದೆ ಎಂಬುದು ಗೊತ್ತಿರುವ ವಿಷಯವೇ, ಆದರೆ ಕೇವಲ ಕೆಲವರ ಮನ್ನಣೆಗಾಗಿ ಮಾತ್ರ ನಾವು ಬರೆಯುವುದಿಲ್ಲ ಎಂಬುದನ್ನೂ ತಿಳಿಸಿದೆ. ಬರಹಗಾರ ಕೈಬರಹದಲ್ಲೇ ಬಿಟ್ಟಿದ್ದನ್ನು ಅನೇಕ ವರ್ಷಗಳ ನಂತರ ಯಾರೋ ಓದಿ ಇಷ್ಟಪಟ್ಟು ಪ್ರಕಟಿಸಿದ ದಾಖಲೆಗಳಿರುವಾಗ, ನಾಲ್ಕು ಜನ ಅಂತರ್ಜಾಲದಲ್ಲಿ ಸರಳವಾಗಿ ಸಿಗುವ ಬರಹಗಳನ್ನು ಓದಲಿ ಬಿಡಿ ಎಂದೆ. ಪೂರ್ವಾಗ್ರಹ ಪೀಡಿತರಾದ ಅವರನ್ನು ಅಂತರ್ಜಾಲದ ಯುಗಕ್ಕೆ ಕರೆತರುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂದುಕೊಂಡೆ; ಇಂತಹ ಓದುಗರು ಇರುವವರೆಗೆ ಅಭಿಷಿಕ್ತ ಸಂಪಾದಕರೆಲ್ಲರ ಸ್ಥಾನ ಭದ್ರವಾಗಿರುತ್ತದೆ, ಅದಕ್ಕೆ ಯಾವುದೇ ಡೋಕಿಲ್ಲ! ಕೆಲವು ಸಂಪಾದಕರ ’ಸಂಪಾದನೆ’ಗೂ ಯಾವುದೇ ಮುಜುಗರವಿಲ್ಲ!  

ಸಿರಿಯು ಸಂಪತ್ತು ಸ್ಥಿರವಲ್ಲ ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಕರಗಿಹೋದಂತೆ | ಸರ್ವಜ್ಞ

ಸಂಪಾದಿಸಿದ ಹಣ ಕೆಲಕಾಲ ನಿಮ್ಮದಾಗಿರಬಹುದು, ಆದರೆ ಅದೇ ಶಾಶ್ವತವಲ್ಲ, ರೂಪವತಿಯ ರೂಪ ಶಾಶ್ವತವಲ್ಲ. ಸೇರಿದ ಸಾವಿರ ಜನರ ಸಂತೆ ಜಾವದ ನಂತರ ಕರಗಿ ಖುಲ್ಲಾಜಾಗ ಕಾಣುವುದಲ್ಲಾ ಹಾಗೆಯೇ ಹಣ ಮತ್ತು ಹೊಗಳಿಕೆಗಳ ಹಾರತುರಾಯಿಗಳ ನಡುವೆ ಸಂಪಾದಕನಾದವ ತನ್ನತನವನ್ನು ಕಳೆದುಕೊಂಡರೆ ಅದು ಸಾಮಾಜಿಕ ಹೊಣೆಗಾರಿಕೆಯನ್ನು ಮರೆತ ಠಕ್ಕನೊಬ್ಬ ಗುರುವಾಗಿ ಮಠವನ್ನು ಮುನ್ನಡೆಸಿದಂತಾಗುತ್ತದೆ; ಕುಡಿದ ಮತ್ತಿನಲ್ಲಿ ಚಾಲಕ ಹಲವು ಪ್ರಯಾಣಿಕರುಳ್ಳ ವಾಹನವನ್ನು ಓಡಿಸುವ ರೀತಿ ಆಗುತ್ತದೆ. ನನ್ನದೊಂದು ಪರಿಪಾಠವಿದೆ: ಚರ್ಮವಾದ್ಯಗಳಾದ ಮೃದಂಗ, ತಬಾಲಾ ಮೊದಲಾದವುಗಳನ್ನು ಬಾರಿಸುವವರು, ಪ್ರತೀ ಕಚೇರಿಗೂ ಪೂರ್ವಭಾವಿಯಾಗಿ, ಸಣ್ಣ ಸುತ್ತಿಗೆಯಿಂದ ಚಿಕ್ಕ ಚಿಕ್ಕ ಹೊಡೆತಗಳನ್ನು ಕೊಟ್ಟು ಚರ್ಮವನ್ನು ಬಿಗುವಾಗಿಸಿಯೋ ಸಡಿಲಗೊಳಿಸಿಯೋ ಸಿದ್ಧಪಡಿಸಿಕೊಳ್ಳುತ್ತಾರಲ್ಲಾ ಅಂತೆಯೇ ಮಾಧ್ಯಮಗಳ ಸಂಪಾದಕರು ಯಾವುದೇ ಪೂರ್ವಾಗ್ರಹವಿಲ್ಲದೇ, ಭಾರತೀಯ ಮಹಾಕವಿಗಳ, ದಾರ್ಶನಿಕರ, ಶರಣರ ಕೃತಿಗಳನ್ನು ಆಗಾಗ ಆದಷ್ಟು ಓದಿಕೊಳ್ಳುತ್ತಲೇ ಇರಬೇಕು. ಅವರ ಆದರ್ಶಗಳ ಸುತ್ತಿಗೆ ನಮ್ಮ ಅಹಂಕಾರದ ಮೇಲುಹೊದಿಕೆಯನ್ನು ತಟ್ಟಿ-ಕುಟ್ಟಿ ಸರಿಪಡಿಸುತ್ತದೆ. ಕೇವಲ ಆಂಗ್ಲ ಸಾಹಿತ್ಯಗಳೋ ಇನ್ಯಾವುದೋ ದೇಶಗಳ, ಇನ್ಯಾವುದೋ ಭಾಷೆಗಳ ಕೃತಿಗಳು ಹಾಗಿವೆ-ಹೀಗಿವೆ ಎಂದು ಹುಯ್ಯಲಿಡುವುದು ತಪ್ಪುತ್ತದೆ.   

ತ್ರಿಪುರ ಸುಂದರಿ ತಾನೆಂದುಕೊಳ್ಳುವ ಹೆಣ್ಣೋರ್ವಳಂತೇ, ಸಂಪಾದಕರ ಸಾಲಿನಲ್ಲೇ ಕೆಲವರಂತೂ ತಾವು ಮಹಾನ್ ಸಾಧನೆ ಮಾಡಿದ ಜಗದ್ವಿಖ್ಯಾತ-ಅಸಾಮಾನ್ಯನೆಂದುಕೊಂಡವರೂ ಕೆಲವರಿದ್ದಾರೆ. ಹೀಗೆ ಹೇಳಿದಾಗ ನೇಪಥ್ಯದಲ್ಲಿ ನಿಂತು ಓದುವ ಅವರು, ತಮ್ಮ ಹೆಗಲು ಒರೆಸಿಕೊಂಡರೆ ತಪ್ಪಾಗದಲ್ಲಾ? ಹೆತ್ತವರಿಗೆ ಹೆಗ್ಗಣಮುದ್ದು ಎನ್ನೋ ಹಾಗೇ ಬರಹಗಾರರನೇಕರು ಅಂತರ್ಜಾಲದಲ್ಲೋ ಮತ್ತೆಲ್ಲೋ ತಮ್ಮ ಬರಹಗಳನ್ನು ಪ್ರಕಟಿಸಬಹುದು, ಪ್ರಕಟಪಡಿಸುವುದು ಅವರ ಆಸೆ, ಅಶಯ. ಆದರೆ ಪ್ರಕಟಿಸಿದ ಬರಹಗಳೆಲ್ಲಾ ಉತ್ತಮವೆಂಬುದು ಕೇವಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಮಾತ್ರಕ್ಕೆ ಒತ್ತುವ ಮುದ್ರೆಯಲ್ಲವಲ್ಲಾ? ಅಲ್ಲವೇ ಸಂಪಾದಕರೇ? ಪಂಡಿತರೆನಿಸಿಕೊಂಡ ’ಸಾಧು’ ಸಂಪಾದಕರು ಮಿಂಚಂಚೆಮೂಲಕ ಕಳಿಸಿದ ನನ್ನ ಸ್ವಂತದ ಬರಹಗಳನ್ನು ’ಹೆಸರಿಲ್ಲದ ಅಜ್ಞಾತ ವ್ಯಕ್ತಿ ಬರೆದು, ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಹಾಸ್ಯಲೇಖನ’ ಎಂದು ಪ್ರಕಟಿಸಿ-ಮೆರೆದ ಸೌಜನ್ಯವನ್ನು ನಾನು ಮರೆಯಲುಂಟೇ?  ಬ್ಲಾಗ್ ಬರಹಗಾನಾದ ನನ್ನ ಅನೇಕ ಲೇಖನಗಳನ್ನು ರೂಪಾಂತರಗೊಳಿಸಿ ಪ್ರಕಟಿಸಿದ ಮಹಾನ್ ಲೇಖಕರೂ, ಸಂಪಾದಕರೂ ಇದ್ದಾರೆ ಎಂದರೆ ನೀವು ನಂಬುತ್ತೀರೇ? ಕದ್ದು ಪ್ರಕಟಿಸಿದ ಚಂದದ ಒಂದು ಛಾಯಾಚಿತ್ರಕ್ಕೆ ಒದ್ದು ಪ್ರತಿಕ್ರಿಯಿಸಿದ ಒಬ್ಬ ಛಾಯಾಚಿತ್ರಗ್ರಾಹಕ ಕೂಡ ನನ್ನ ಬಳಗದಲ್ಲಿದ್ದಾರೆ. ಎಂದಮೇಲೆ, ಸಮೂಹಮಾಧ್ಯಮದ ಸಂಪಾದಕರ ಮೇರ್ಲೆ ಸದಾ ಬಾಣಬಿಡುವುದೇ ನಮ್ಮ ಆದ್ಯತೆಯಾಗಬೇಕ್ರ್ಏ ಎಂಬುದು ನನ್ನ ಚಿಂತನೆಯಾಗಿದೆ. ಭಟ್ಟಂಗಿಗಳ ನಡುವಿನಲ್ಲಿ ಬಿಟ್ಟ ಬಾಣ ನಾಟಬೇಕೆಂಬ ತುಡಿತದಿಂದ ಕದ್ದು ಪ್ರಕಟಿಸುವುದಕ್ಕಿಂತಾ, ಪರಾಕು ಹಾಕುವ ಬಳಗವನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಕೆಲಸಕ್ಕೆ ಬಾರದ ಲೇಖನಗಳನ್ನು ಪ್ರಕಟಿಸುವುದಕ್ಕಿಂತಾ ಮಾನ್ಯ ಸಂಪಾದಕರೇ, ಕೆಲವು ಉತ್ತಮ ಬರಹಗಳನ್ನು ನೇರವಾಗಿ ನನ್ನಂತಹ ’ಅಜ್ಞಾತ’ ವ್ಯಕ್ತಿಗಳ ಜಾತ ನಾಮಧೇಯದಲ್ಲೇ ಪ್ರಕಟಿಸಿದರೆ, ಆಗ ನೀವು ಹೆಗಲೊರೆಸಿಕೊಳ್ಳುವ ಪ್ರಮೇಯ ಬರುವುದಿಲ್ಲ!

ನನಗೊಂದು ವಿಷಯದಲ್ಲಿ ಖಾತ್ರಿಯಿದೆ: ಕೆಲವು ಸಂಪಾದಕರಿಗೆ ಉತ್ತಮ ಬರಹಗಾರರನ್ನು ಪರಿಚಯಿಸುವ ಇರಾದೆ ಇಲ್ಲ, ಕಾರಣವಿಷ್ಟೇ: ನಾಳೆ ತಮ್ಮನ್ನೂ ಮೀರಿ ಬೆಳೆದುಬಿಟ್ಟರೆ, ಹೆಸರುಗಳಿಸಿಬಿಟ್ಟರೆ ಜನ ತಮಗಿಂತಾ ಹೆಚ್ಚಿನ ಮಾನ್ಯತೆಯನ್ನು ಅಂಥಾ ಬರಹಗಾರರಿಗೆ ನೀಡಿಬಿಡುತ್ತಾರಲ್ಲಾ? ಅಂಥಾ ಸಂಪಾದಕರು ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು: ಇಂದಲ್ಲ ನಾಳೆ ಸೂರ್ಯನೇ ಪ್ರಕಾಶವುಳ್ಳವನೆಂದೂ ಚಂದ್ರ ಪ್ರತಿಫಲಿತ ಪ್ರಕಾಶವನ್ನು ಹೊಮ್ಮಿಸುವವನೆಂದೂ ಓದುಗರಿಗೆ ತಿಳಿಯುತ್ತದೆ. ಸ್ವಯಂ ಪ್ರಭೆಯುಳ್ಳ ಬರಹಗಾರರು ಬ್ಲಾಗ್ ಮೂಲಕವೇ ಬರೆಯಲಿ, ಫೇಸ್ ಬುಕ್ಕಿನಲ್ಲೇ ಬರೆಯಲಿ-ಜನ ಓದಿಯೇ ಓದುತ್ತಾರೆ. ಪ್ರತಿಭೆ ಎಂಬುದು ಕೈಗಡತಂದ ಸಾಮಾನಿನಂತಲ್ಲವಲ್ಲಾ?ಅದು ಸ್ವಂತಿಕೆ ಅಲ್ಲವೇ?  ಸ್ಟಾರ್ ಹೋಟೆಲ್ ಗಳಲ್ಲಿ ಸಿಗುವ ವ್ಯಂಜನಗಳಿಗಿಂತಾ, ರುಚಿಕಟ್ಟಾಗಿ ತಯಾರಿಸಿದ ಖಾನಾವಳಿಯ[ಮೆಸ್ಸಿನ] ಊಟಕ್ಕೆ ಜನ ಮುಗಿಬೀಳುತ್ತಾರೆ ಹೇಗೋ, ಹಾದಿಬದಿಯ ಪಾನಿಪೂರಿ ವ್ಯಾಪಾರಿಯೂ ಹದದಲ್ಲಿ ಪ್ರಾವೀಣ್ಯನಾದರೆ ಜನ ಸರದಿನಿಂತು ಕೊಳ್ಳುತ್ತಾರೆ ಹೇಗೋ, ಹಾಗೆಯೇ ಉತ್ತಮ ಬರಹಗಾರರಿಗೆ ಸಮಯವೊದಗುತ್ತದೆ. ಆ ಸಮಯದಲ್ಲಿ ತಾವೇ ಬಿಟ್ಟ ಬಾಣದ ’ಅಮೋಘ ಪರಿಮಳ’ವನ್ನು ಆಘ್ರಾಣಿಸಿ ತಲೆಯಾದೂಗುವ ಸ್ಥಿತಿ ಕೆಲವು ಸಂಪಾದಕರಿಗೇ ಬಂದರೆ ಅಶ್ಚರ್ಯವಿಲ್ಲ! ಆ ದಿನ ಬೇಗ ಬರಲಿ ಎಂದು ಅಶಿಸುತ್ತೇನೆ, ಮಾಧ್ಯಮ ಹಣಕ್ಕಾಗಿ ಮಾರಾಟವಾಗುವುದು ನಿಂತುಹೋಗಲಿ ಎಂದು ಹಾರೈಸುತ್ತೇನೆ.  


Tuesday, December 25, 2012

ಸ್ವರಚಿತ ಭಾಮಿನಿಗಳ ಮೂಲಕ ಭಾಷಾ ಸಗುಣಾರಾಧನೆ

ಚಿತ್ರಕೃಪೆ : ಅಂತರ್ಜಾಲ 
ಸ್ವರಚಿತ ಭಾಮಿನಿಗಳ ಮೂಲಕ ಭಾಷಾ ಸಗುಣಾರಾಧನೆ

ಬರುತಿರಲು ಪುಷ್ಪಕ ವಿಮಾನವು
ಥರಥರದ ಯೋಚನೆಯು ಮನದೊಳು
ಪರಿತಪಿಸಿ ತಲೆತಿರುವಿ ನೋಡಿದನಾಜಟಾಯುವು ತಾ |
ಭರದಿ ಸಾಗಿಸುತಿರ್ದ ಸೀತೆಯ
ಧುರದಿ ಮರಣವೆ ಬಂದರೂ ಬಿಡೆ
ಹರಿಯೆ ನಿನ್ನೊಳು ಸೇರಿಕೊಂಬೆನು ಶರಣತಾನೆನುತ ||

ಆಗಸದಲ್ಲಿ ಹಾರುತ್ತಿದ್ದ ಪುಷ್ಪಕದಲ್ಲಿ ಬಲವಂತದಿಂದ ಸಾಗಿಸಲ್ಪಡುತ್ತಿದ್ದ ಸೀತಾದೇವಿಯನ್ನು ಕಂಡ ಜಟಾಯುವಿನ ಹೃದ್ಗತವನ್ನು ಮೇಲಿನ ಪದ್ಯದಲ್ಲಿ ಕಾಣುತ್ತೀರಲ್ಲವೇ? ಕಾಲಬದಲಾದರೂ ಅಂದಿನ ಕವಿ-ಕಾವ್ಯ ಪರಂಪರೆಯನ್ನು ಮೆಲುಕಿಹಾಕಿದಾಗ ಎಂತೆಂತಹ ಪುಣ್ಯವಂತರು ಆಗಿಹೋದರು ಎಂಬುದು ತಿಳಿಯುತ್ತದೆ. ಅನೇಕರಿಗೆ ಕಾವ್ಯ-ಸಾಹಿತ್ಯ ದೇವರ ಸೇವೆಯಾಗಿತ್ತು-ತನ್ಮೂಲಕ ಪರೋಕ್ಷ ಸಮಾಜಸೇವೆಯಾಗಿತ್ತು. ಹೆಸರಿನ ಗೀಳಿನ ಹಿಂದೆ ಬಿದ್ದ ಜನವಲ್ಲ; ಕೆಸರಿನ ಪ್ರಶಸ್ತಿಗಳಿಗಾಗಿ ತೊಡಗಿಕೊಂಡವರಲ್ಲ. ಉಪಜೀವನದ ಅಗತ್ಯಗಳನ್ನು ನಿಭಾಯಿಸಿಕೊಳ್ಳುತ್ತಾ ಬಿಡುವಿನಲ್ಲಿ ತ್ರಿಕರಣ[ಕಾಯಾ-ವಾಚಾ-ಮನಸಾ]ಪೂರ್ವಕ ಶುಚಿರ್ಭೂತರಾಗಿ ತಾಡವೋಲೆಗಳನ್ನು ಸಿದ್ಧಪಡಿಸಿಕೊಂಡು ಅವುಗಳಮೇಲೆ ಅಕ್ಷರಗಳನ್ನು ಹರಿತವಾದ ಲೋಹದ್ದೋ ಮರದ್ದೋ ಕಡ್ಡಿಯಿಂದ ಕೊರೆಯುತ್ತಿದ್ದರು, ಕಾಲಾನಂತರದಲ್ಲಿ ವನಸ್ಪತಿಗಳ ತೆಗೆದ ರಸದಿಂದ ಮಸಿಯನ್ನು ತಯಾರಿಸಿಕೊಂಡು ಬೈನೆ ಮರದ ಕಡ್ಡಿಯಿಂದಲೋ ಹಕ್ಕಿಯ ಉದುರಿದ ಪುಕ್ಕದ ಬುಡದಿಂದಲೋ, ಮಸಿಯನ್ನು ಅದ್ದಿಕೊಂಡು ಬರೆಯಲು ತೊಡಗಿದರು. ಆ ಮಸಿ ಅಳಿಸಿಹೋಗದಂತಹದುದಾಗಿದ್ದು ಶತಶತಮಾನಗಳು ಕಳೆದರೂ ಗ್ರಂಥಗಳು ಕೆಡಲಿಲ್ಲ. ಆ ಕಾಲದಲ್ಲೂ ಹಿಂದಿಗಿಂತಾ ಹೊಸಕಾಲ ಎಂಬುದಿದ್ದಿರಲೇ ಬೇಕಲ್ಲಾ? ಆದರೆ ಹೊಸಕಾಲದ ಆಡಂಬರಕ್ಕೆ, ನವಜೀವನ ಧೋರಣೆಯಲ್ಲಾದ ಬದಲಾವಣೆಗೆ ಹಿತಮಿತವಾಗಿ ತೆರೆದುಕೊಂಡವರು ನಮ್ಮ ಪೂರ್ವಜರು. ಧಾವಂತದ ಜೀವನಕ್ಕೆ ಆಸ್ಪದವಿತ್ತವರಲ್ಲ; ಚಣಕಾಲವನ್ನು ವ್ಯರ್ಥಮಾಡಿದವರೂ ಅಲ್ಲ. ಎಲ್ಲರೂ ಶ್ರಮಜೀವಿಗಳಾಗಿದ್ದರು. ಹೆಂಗಸರಿಗಾಗಲೀ ಗಂಡಸರಿಗಾಗಲೀ ಯಂತ್ರಗಳ ಸಹಾಯ ಬೇಕಿರಲಿಲ್ಲ. ಅಗತ್ಯಗಳನ್ನು ಖುದ್ದಾಗಿ ತಯಾರಿಸಿಕೊಳ್ಳುವ ಸ್ವಾವಲಂಬನೆ ಇತ್ತು. ಬೊಜ್ಜು ಬೆಳೆದ ಹೆಂಗಸರ/ಗಂಡಸರ ಸಂಖ್ಯೆ ಇರಲಿಲ್ಲವೆಂದರೇ ತಪ್ಪಾಗಲಾರದು.  

ಬಂದ ಅತಿಥಿಯನ್ನು ಎಂದಿಗೂ ಅಸಡ್ಡೆಯಿಂದ ಕಂಡವರಲ್ಲ. ಅತಿಥಿಗಳಿಗೆ ಎಲ್ಲದರಲ್ಲೂ ಪ್ರಥಮ ಆದ್ಯತೆ. ಆತಿಥಿಗಳು ಉಂಡು, ತಿಂದು, ವಿಶ್ರಮಿಸಿ ಹೀಗೆಲ್ಲಾ ಆತಿಥ್ಯದಿಂದ ಸಂಪ್ರೀತರಾದಮೇಲೇ ತಾವು ಆಹಾರ ಸ್ವೀಕರಿಸುತ್ತಿದ್ದರು. ಇದರಲ್ಲಿ ರಾಜ-ಮಹಾರಾಜರೂ ಕಮ್ಮಿ ಇರಲಿಲ್ಲ! ಬಾಲ್ಯ ಸ್ನೇಹಿತ ಕುಚೇಲ ಬಂದ ಸುದ್ದಿ ತಿಳಿದ ಶ್ರೀಕೃಷ್ಣ ರಾಜಭವನದೊಳಗಿಂದ ಮಹಾದ್ವಾರದೆಡೆಗೆ ಪರಿವಾರಸಹಿತನಾಗಿ ಓಡೋಡಿ ಬಂದ ಕಥೆಯನ್ನು ಕೇಳಿದ್ದೇವೆ. ಸುಧಾಮನಿಗೋ ರೋಮರೋಮದಲ್ಲೂ ನಾಚಿಕೆ; ರಾಜ್ಯಾಡಳಿತದ ಸೂತ್ರಧಾರ ಕೃಷ್ಣನೆಲ್ಲಿ-ಬರಿಗೈ ದಾಸ ತಾನೆಲ್ಲಿ ಎಂಬ ಭಾವನೆ; ತನ್ನಲ್ಲಿ ಏನನ್ನು ಕಂಡು ಕೃಷ್ಣ ತನಗಾಗಿ ಹೀಗೆ ಇಷ್ಟೆಲ್ಲಾ ವಿಜೃಂಭಣೆಯ ಆತಿಥ್ಯವನ್ನು ನೀಡುತ್ತಿದ್ದಾನೆ ಎಂಬ ಮುಜುಗರ. ಸಹಪಾಠಿಯಾಗಿದ್ದುದೇನೋ ನಿಜವೇ, ಆದರೂ ಈಗ ಕೃಷ್ಣನೊಬ್ಬ ರಾಜರ್ಷಿ-ಪ್ರಜೆಗಳ ಸುಖದುಃಖಗಳನ್ನು ನಿಭಾಯಿಸುವವನು, ತಾನೋ ಸಂಸಾರಿಯಾಗಿ ತನ್ನ ಸಂಸಾರವನ್ನೇ ನಿಭಾಯಿಸಲಾಗದ ನಿರ್ಗತಿಕ. ವಿಷಯ ತಿಳಿದರೆ ಕೃಷ್ಣ ಏನೆಂದುಕೊಂಡಾನು ಎಂಬ ಭಯವೂ ಆತಂಕವೂ ಮಡುಗಟ್ಟಿದ್ದವು. ಅದೊಂಥರಾ ಭಯ, ಆತಂಕ, ಸ್ನೇಹಿತನನ್ನು ಬಹುಕಾಲದ ನಂತರ ಭೇಟಿಯಾದ ಹರ್ಷೋದ್ವೇಗ, ಮನೆಯ ಬಡತನವನ್ನು ನೆನೆದು ದುಃಖ ಹೀಗೆ ಹಲವು ಭಾವಗಳ ಸಮ್ಮಿಶ್ರಛಾಪು. ವಾದ್ಯ ಸಹಿತನಾಗಿ ಎದುರ್ಗೊಂಡ ಅತಿಥಿ ಸ್ನೇಹಿತ ಸುಧಾಮನನ್ನು ಕೃಷ್ಣ ರಾಜೋಚಿತ ಪೀಠದಲ್ಲಿ ಕುಳ್ಳಿರಿಸಿ, ರುಕ್ಮಿಣೀಸಹಿತನಾಗಿ ಪಾದತೊಳೆದು ಪೂಜಿಸಿದ. ಆಗಮನದ ದಣಿವನ್ನಾರಿಸಿಕೊಂಡ ಕುಚೇಲನ ಪಕ್ಕದಲ್ಲಿ ಕುಳಿತು ತನಗೇನು ತಂದೆಯೆಂದು ಪ್ರಸ್ತಾಪಿಸಿದಾಗ ಸುಧಾಮನ ಮಾತನ್ನು ಈ ರೀತಿ ಅಭಿವ್ಯಕ್ತಗೊಳಿಸಬಹುದಾಗುತ್ತದೆ: 

ಅರಿಯದಾದೆಯ ಮರುಳು ಮಾಧವ  ?
ದರುಶನವೆ ಸಾಕೆಂದು ಬಂದೆನು
ಪರಮಪಾವನವೆನ್ನ ಜೀವನ ಹೊರಡಲಪ್ಪಣೆಯೇ?
ಸರಸರನೆ ಅವಸರದಿ ಪೊರಟಿರೆ
ಬರುತಲಿರ್ದೆನು ಬರಿಯ ಕಯ್ಯೊಳು
ಪರಮಮಿತ್ರ ತೆರಳಲನುಮತಿಸೆನ್ನ ಭಾವಿಸದೆ   ||

ಹರುಕು ಪಂಚೆಯಲ್ಲಿ ಬಂದ ತಾನು ಪರಿಮಳಸೂಸುವ ಆ ದಿವ್ಯ ಪೀಠದಲ್ಲಿ ಕೂರುವುದು ಉಚಿತವೇ? ಎಂಬುದು ಕುಚೇಲನ ಮನದಿಂಗಿತವಾಗಿತ್ತು. ಬಾಲ್ಯಕಾಲ ಸಖ-ಕೃಷ್ಣ, ಆಗೆಲ್ಲಾ ತಾವು ಏನೆಲ್ಲಾ ತಿಂಡಿಗಳನ್ನು ಹಂಚಿಕೊಂಡು ತಿನ್ನುತ್ತಿದ್ದೆವು, ಆದರೆ ಇಂದು ತಾನು ಹೆಂಡತಿಯ ಮೂಲಕ ಬೇಡಿ ತಂದ ಹಿಡಿಯವಲಕ್ಕಿಯನ್ನು ಆತನಿಗೆ ಕೊಡಲಾರ. ಕೃಷ್ಣನಿಗೂ ಗೊತ್ತು, ಸುಧಾಮ ತನಗಾಗಿ ಏನನ್ನಾದರೂ ತಂದಿರುತ್ತಾನೆ, ಆತ ಬರುವಾಗ ಆತನನ್ನು ಆತನ ಮಡದಿ ಅತ್ತಿಗೆ ಬರಿಗೈಲಿ ಕಳಿಸಿರಲು ಸಾಧ್ಯವಿಲ್ಲ, ಏನನ್ನೋ ತನ್ನಿಂದ ಮುಚ್ಚಿಡುತ್ತಿದ್ದಾನೆ ಎನಿಸಿ ಸೊಂಟದ ಎಡೆಯಲ್ಲಿ ಸಿಕ್ಕಿಸಿಕೊಂಡಿದ್ದ ಹರುಕು ಪಂಚೆಯ ತುಂಡಿನಲ್ಲಿರುವ ಹಿಡಿ ಅವಲಕ್ಕಿಯನ್ನು ಆತ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಕೃಷ್ಣ ತಿಂದಿದ್ದು ಹಿಡಿಯವಲಕ್ಕಿಯನ್ನಲ್ಲ-ಪರೋಕ್ಷ ಕುಚೇಲನ ಬಡತನವನ್ನು! ದಿನವೊಪ್ಪತ್ತು ಉಳಿದು ಹೊರಟುನಿಂತ ಕುಚೇಲನಿಗೆ ಮನದೊಳಗಿನ ಅಷ್ಟೂ ಬೇಗುದಿಗಳು ಮರೆತುಹೋಗಿದ್ದವು. ಏನನ್ನು ಕೇಳಬೆಂದು ಬಂದನೋ ಅದನ್ನು ಕೇಳಲು ಆಸ್ಪದವೇ ಇರಲಿಲ್ಲ; ಆದರೂ ಸುಧಾಮನಿಗೆ ತನ್ನ ಕೃಷ್ಣನ ಸಾಮರ್ಥ್ಯದ ಅನನ್ಯ ಅನುಭವ ಅದಾಗಲೇ ಆಗಿಬಿಟ್ಟಿತ್ತು, ಹಾಗಾಗಿಯೇ ಸಂಸಾರ ಹೇಗೇ ಇರಲಿ ಕೃಷ್ಣ ದರುಶನವಿತ್ತನಲ್ಲಾ ಎಂಬ ಸಂತೃಪ್ತ ಭಾವ ಒಡಮೂಡಿತ್ತು. ಆ ಅನನ್ಯ ಭಾವದಲ್ಲೇ ಕುಚೇಲ ಕೃಷ್ಣನಿಂದ ಬೀಳ್ಕೊಂಡ, ನಡೆದು ಬಹುದೂರದ ತನ್ನ ಮನೆಯೆಡೆಗೆ ತೆರಳಿದಾಗ ಬಡವನ ಗುಡಿಸಲು ಸ್ವರ್ಣಮಹಲಾಗಿದ್ದನ್ನು ಕಂಡ, ಹೆಂಡತಿ-ಮಕ್ಕಳು ಸರ್ವಾಲಂಕರ ಭೂಷಿತರಾಗಿ ಸುಖದಿಂದಿರುವುದನ್ನು ಕಂಡ, ಮನೆಯನ್ನು ಸಮೀಪಿಸುತ್ತಿದ್ದಂತೆಯೇ ತನ್ನ ಉಡುಗೆ-ತೊಡುಗೆಗಳೂ ತಂತಾನೇ ಬದಲಾದುದನ್ನು ಕಂಡ!!     

ಅಕ್ರೂರ ಮತ್ತು ವಿದುರರೂ ಕೂಡ ಕೃಷ್ಣಭಕ್ತರೇ. ಭಾರತಕಥೆಯಲ್ಲಿ ಈ ಎಲ್ಲಾಪಾತ್ರಗಳೂ ತಮ್ಮನ್ನು ಪರಮಾತ್ಮನಿಗೆ ಅರ್ಪಿಸಿಕೊಳ್ಳುವುದನ್ನು ಕಾಣಲು ಸಾಧ್ಯವಾಗುತ್ತದೆ. ಪಾಂಡವರು ಉಂಡು ತೊಳೆದಿಟ್ಟ ಪಾತ್ರೆಗೆ ಅಂಟಿದ್ದ ಅಗುಳನ್ನೇ ಉಂಡು ತೃಪ್ತನಾದ ಗೊಲ್ಲ ವಿದುರನ ಮನೆಯಲ್ಲಿ ಹಾಲು ಕುಡಿದು ಹಾಲಿನ ಹೊಳೆಯನ್ನೇ ಹರಿಸಿದ! ಕಂಸದೂತನಾಗಿ ನಿರ್ವಾಹವಿಲ್ಲದೇ ಬಿಲ್ಲಹಬ್ಬಕ್ಕೆ ಕರೆಯಲು ಬಂದ ಅಕ್ರೂರ, ಭಾರತಕಥೆಯ ವಿಶಿಷ್ಟ ಮತ್ತು ಪುಟ್ಟ ಪಾತ್ರ. ದುರುಳನ ಆಸರೆಯಲ್ಲೇ ಇದ್ದರೂ ಶರಣನಾದ ಅಕ್ರೂರ ಮಥುರೆಯಿಂದ ಮುಂದಾಗಿ ಸಾಗಿಬರುತ್ತಾ ವೃಂದಾವನ ಕಂಡಕ್ಷಣವೇ ಭೂಮಿಯನ್ನು ಮುಟ್ಟಿ ಷಡಂಗ ನಮಸ್ಕಾರ ಸಲ್ಲಿಸುತ್ತಾನೆ. ಪರಮಾತ್ಮ ಶ್ರೀಕೃಷ್ಣ ನಡೆದಾಡುವ ಪುಣ್ಯಭೂಮಿ ಎಂಬ ಅನಿಸಿಕೆ ಆತನನ್ನು ಸೆಳೆದು, ಅರೆಘಳಿಗೆ ಅಲ್ಲಿಯೇ ಕೃಷ್ಣನಮನವನ್ನು ಸಲ್ಲಿಸುತ್ತಾ ವಿಶ್ರಮಿಸಿ ಮನದತೊಳಲಾಟದಲ್ಲೇ ಅಕ್ರೂರ ಕೃಷ್ಣದರ್ಶನಕ್ಕೆ ಮುಂದೆಸಾಗುತ್ತಾನೆ. ಕೃಷ್ಣನಿಗೆ ಅಕ್ರೂರ ವಾವೆಯಲ್ಲಿ ಮಾವನಾಗಬೇಕು. ಇಲ್ಲಿಯೂ ಕೂಡ  ಬಂದ ಅತಿಥಿಗೆ ಕೃಷ್ಣ ಯಥೋಚಿತ ಸತ್ಕಾರಗಳನ್ನು ನೀಡುವುದನ್ನು ಕಾಣುತ್ತೇವೆ. ನಂತರ ಕೃಷ್ಣ ಸಂವಹಿಸಿದ ಆರಂಭಿಕ ಪರಿಯನ್ನು ಹೀಗೆ ಹೇಳಬಹುದಾಗಿರುತ್ತದೆ: 

ಏನಿದಕ್ರೂರ ನಿನ್ನಯ ?
ಯಾನಸುಲಲಿತವೆಂದುಕೊಂಡೆ
ಧ್ಯಾನದಿರ್ದೆನು ತಾತ-ಅಜ್ಜಿ ಕುಶಲದಿಂದಿಹರೇ ?
ಕೋನದಿಂ  ವ್ಯಾಕುಲ  ಕಂಡೆ
ಹೀನಕಂಸನು ಮಥುರೆಗೆಳೆದವ
ಮಾನಿಸೆ ಶರಚಾಪಹಬ್ಬದ ನೆಪವನೊಡ್ಡಿಹನೇ ? 

 ಅಥವಾ 

ಬಂದೆಯಾ ಅಕ್ರೂರ ನಿನ್ನಯ 
ಸಂದ ಪಯಣವು ಸೌಖ್ಯವಾಯ್ತೆ
ಚಂದದಲಿ ಮುಂದೆನಗೆ ನೀ ಪೇಳ್   ಕುಶಲವಿಷಯಗಳ ।
ಸಂದುಹೋದವು ಬಹಳದಿನಗಳು
ಮಿಂದೆನಾ ನೆನಪಲ್ಲಿ ಅನುದಿನ
ಎಂದು  ನೋಳ್ಪೆನೊ  ಅಜ್ಜಿತಾತರು  ಕುಶಲದಿಂದಿಹರೇ?

ಇಂತೀಪರಿಯಲ್ಲಿ ಕಾವ್ಯರಚನಾ/ವಾಚನಾವಿನೋದದಲ್ಲಿ ಪೂರ್ವಜರು ಸಮಯವ್ಯಯಿಸುತ್ತಿದ್ದರು. ಪೂರ್ವಭಾವಿಯಾಗಿ ಮಹಾಕವಿಗಳ ಕಾವ್ಯವನ್ನು ವಾಚಿಸುತ್ತಿದ್ದರು, ಆನಂದಿಸುತ್ತಿದ್ದರು, ಅದರಿಂದ ಸಾಕಷ್ಟು ಆಳವಾದ ಲೋಕಜ್ಞಾನ ಲಭಿಸುತ್ತಿತ್ತು. ಓದಿ ಗಳಿಸಿದ ಪಾಂಡಿತ್ಯವನ್ನು ಕಾವ್ಯರಚನೆಯಲ್ಲಿ ತೊಡಗಿಕೊಂಡು ಒರೆಗೆ ಹಚ್ಚುತ್ತಿದ್ದರು; ಜೊತೆಗೆ ಭಾರತ-ರಾಮಾಯಣ ಮೊದಲಾದ ಕಾವ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ, ವೈಖರಿಯಲ್ಲಿ, ಛಂದಸ್ಸು-ಅಲಂಕಾರಗಳನ್ನು ಬಳಸಿ, ಬರೆಯುವುದು ಭಗವಂತನ ಸೇವೆ ಎಂಬ ಶ್ರದ್ಧೆಯಿಂದ ಬರೆಯುತ್ತಿದ್ದರು. ತಮ್ಮ ಖ್ಯಾತನಾಮರಾಗಬೇಕೆಂಬ ಭಾವವಾಗಲೀ ತಮಗೆ ಏನೋ ಸಂಭಾವನೆ ಸಿಗಬಹುದೆಂಬ ಅಪೇಕ್ಷೆಯಾಗಲೀ ಅಲ್ಲಿರುತ್ತಿರಲಿಲ್ಲ. ಇದಕ್ಕೆ ಮಹಾಕವಿ ಕುಮಾರವ್ಯಾಸ ಒಂದು ಜ್ವಲಂತ ಉದಾಹರಣೆ. ಅದುವರೆಗೆ ಮಹಾಭಾರತ ಕನ್ನಡಲ್ಲಿ ಪರಿಪೂರ್ಣವಾಗಿ ಕಾವ್ಯರೂಪದಲ್ಲಿ ಬಂದಿರಲಿಲ್ಲವೆನ್ನಬೇಕು. 

ಬರೆಯುತಿರಲಾ ಕುವರವ್ಯಾಸ
ಹರೆಯವುಕ್ಕುತ ಮುದುಕರಲ್ಲಿಯು
ಸರಸಕೆಳಸುತ ಕಾಲಮರೆವರು ಕಾವ್ಯಕೌತುಕದಿ |
ಸರಸತಿಯು ಮುದಗೊಂಡು ನಡೆತಂ
ದಿರಲು ನರ್ತಿಸೆ ನೂಪುರಗಳ
ಸ್ವರವನಾಲಿಸಿ ಚಕಿತಗೊಂಬರ್ ಭಾವವೇದಿಯೊಳು ||

ಮೆಥಮೆಟಿಕಲ್ ಮ್ಯಾಜಿಕ್ ಅಥವಾ ಗಣಿತದಲ್ಲಿ ಇಂದ್ರಜಾಲದಂತಹ ಚಮತ್ಕಾರಕ ಸಮಸ್ಯೆಗಳು ಕಾವ್ಯರಚನೆಯಲ್ಲಿ ಎದುರಾಗುತ್ತವೆ. ಸಂಖ್ಯಾಬಂಧವನ್ನು ನಿಭಾಯಿಸಿದಂತೇ ಪದಗಳ ಉಪಯೋಗ ಮತ್ತು ನಿರುಪಯೋಗವನ್ನೂ ಕಾಣಬಹುದಾಗುತ್ತದೆ. ಪದಗಳ ರಾಶಿಯನ್ನು ಹಾಕಿಕೊಂಡು ಪೋಣಿಸುವುದು ಕೂಡುವುದು ಕಳೆಯುವುದು ಮಾಡಬಹುದಾಗಿರುತ್ತದಾದರೂ ಸಮಯಮಿತಿಯ ಬಗ್ಗೆ ಅರಿವಿರಬೇಕಾದುದೂ ಅಷ್ಟೇ ಅಗತ್ಯ. ಇಂತಹ ಅಭಿಜಾತ ಕಾವ್ಯರಚನೆಯಲ್ಲಿ ತೊಡಗಿದಾಗ ಲಾಜಿಕ್ ಅಥವಾ ತರ್ಕಶಾಸ್ತ್ರದ ಪರಿಣಾಮವೂ ನಮಗೆ ಅನುಭವಕ್ಕೆ ಬರುತ್ತದೆ. ಮೇಲಾಗಿ ಸಮೂಹ ಮಾಧ್ಯಮಗಳಲ್ಲಿ ಸಿಗುವ ಕೀಳು ಅಭಿರುಚಿಯ ಕಥನಗಳ ಸಂಗ-ಸಾಂಗತ್ಯಕ್ಕಿಂತಾ ಇವು ಒಳ್ಳೆಯತನದೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ಉತ್ತಮದೆಡೆಗೆ ನಡೆಯುವಾಗ ಆದಷ್ಟೂ ತಪ್ಪುಮಾಡದಂತೇ ಮನಸ್ಸು ಎಚ್ಚರವಹಿಸುತ್ತದೆ. ತಪ್ಪೇ ಮಾಡದ ವ್ಯಕ್ತಿತ್ವಗಳು ರೂಪುಗೊಂಡರೂ ಅದು ಆಕಸ್ಮಿಕವಲ್ಲ! 

ಕೆಲಸ ಹೇರಳವೆಂಬ ಜನರಿಗೆ
ಒಲಸೆಪೋಗಲು ಸಮಯ ದೊರೆವುದು
ಕಲಸಿ ಬಡಿಸಲು ಉಂಬುವರ್ ಮೈತೊಳೆಯದಕಟಕಟಾ |
ಚಲಿಪುದಕೆ ಚರವಾಣಿಗೇ ಮೇಣ್
ಕಲಿಕಳತ್ರದ ’ಮುಖದಪುಸ್ತಕ’
ಕೊಲಿದುನೋವನುಭವಿಪರವರ್ಗೆ ಕಾಂಬುದೈ ವಿಕಟ ||

"ನಮ್ಮ ಕೆಲಸಕ್ಕೆ ಬಿಡುವೇ?" ಎನ್ನುವ ಮಹಾನುಭಾವರು ನಮ್ಮ ನಡುವೆ ಅದೆಷ್ಟಿಲ್ಲ? ಯಾರಿಗೂ ತೆರಪಿಲ್ಲ-ಪುರ್ಸೊತ್ತಿಲ್ಲ, ಕೆಲವರಿಗಂತೂ ಸ್ನಾನಮಾಡಲೂ ವೇಳೆಯಿಲ್ಲ. ಆದರೆ ಊಟಕ್ಕೆ, ಗಾಡಿಯಲ್ಲಿ ದೂರ ವಾರಗಟ್ಟಲೆ ವಿಹಾರಹೋಗಲಿಕ್ಕೆ, ಚರದೂರವಾಣಿಯಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಹರಟಲಿಕ್ಕೆ ಮತ್ತು ಮುಖಪುಸ್ತಕ[ಫೇಸ್ ಬುಕ್]ದಲ್ಲಿ ಬಹುಕಾಲ ’ತಮ್ಮತನ’ವನ್ನು ತೋರಿಸಿಕೊಳ್ಳಲಿಕ್ಕೆ ಮಾತ್ರ ಸಮಯ ಸಿಕ್ಕೇ ಸಿಗುತ್ತದೆ. ತಮ್ಮ ಬಗ್ಗೆ ಅಷ್ಟೆಲ್ಲಾ ಹೇಳಿಕೊಳ್ಳುವ, ಬಂಡಿತುಂಬಾ ಹೇರಿಕೊಂಡು ಬಂದು ಮುಖಪುಸ್ತಕದಲ್ಲಿ ಬಡಿಸುವ ಮಂದಿ ಒಂದಿನಿತು ಕಾಲ ಉತ್ತಮವಾದುದಕ್ಕೆ ಮೀಸಲಿಟ್ಟರೆ ಗಂಟೇನೂ ಹೋಗಲಾರದು ಎನಿಸುತ್ತದೆ. ಭಾನುವಾರವಂತೂ ಕೆಲವರಿಗೆ ಮುಗಿಸಲಾರದಷ್ಟು ಕೆಲಸ! ಹನ್ನೊಂದು ಗಂಟೆಗೆಲ್ಲಾ ಸೂರ್ಯ ಕಣ್ಣುಬಿಡುತ್ತಾನೆ![ಕಣ್ಣು ಬಿಡುತ್ತಾನೋ ಕಣ್ ಕಣ್ ಬಿಡುತ್ತಾನೋ ಶಿವನೇ ಬಲ್ಲ!!] ಸರಳವಾಗಿ ತಮಾಷೆಗೆ ಇಂಥವರ ವೈಖರಿಯನ್ನು ಬಣ್ಣಿಸುವುದಾದರೆ:

ತಿಂದೆವಾರಿಡ್ಲಿಗಳ ಜೊತೆಯಲಿ
ಮೆಂದೆವಾರೊಡೆಗಳನು ಅಡಿಗಾ-
ಸಿಂದ ತರಿಸುತ ಭಾನವಾರದ ಬೆಳಗುವೇಳೆಯಲಿ | 
ಮುಂದೆ ತಾರಾ ಹೋಟ್ಲ ಕಡೆಗೇ     /   [  ಮುಂದೆ ಕಾಫೀ ಡೇಯ ಕಡೆಗಿದೊ]
ನಿಂದು ನುಗ್ಗುತ ಸೀಟುಹಿಡಿವೆವು
ಚಂದದಲಿ ಮಯ್ಯಾಸು ಕರೆವುದು ರಾತ್ರಿಯಾಗುವೊಲು || 

ಇಂತಹ ’ಮಹನೀಯರ’ನ್ನು ಜ್ಞಾಪಿಸಿಕೊಂಡಾಗ ನಾನು ಓದಿದ್ದ

ಪೌರಜನವೈತರಲು ಬಂಡಿಯ
ನೂರ ಹೊರವಂಡಿಸಿದರೆಲ್ಲರು .......ಎಂಬ ಭಕಾಸುರ ವಧೆಯ ಕುರಿತಾದ ಭಾಮಿನಿ ನೆನೆಪಾಗುತ್ತದೆ! ತಿಂಡಿತಿಂದವರೆಲ್ಲಾ ಭಕಾಸುರರಲ್ಲ ನಿಜ. ಆದರೆ ತಿನ್ನುವುದಕ್ಕಾಗಿಯೇ ಕೆಲವುಜನ ಬದುಕಿರುತ್ತಾರೆ, ಸಮಯಕ್ಕೆ ಹೊಟ್ಟೆತೊಳೆದುಕೊಂಡು ಖಾಲೀಹೊಟ್ಟೆಹೊತ್ತು ಬಂದರೋ ಎಂಬಂತೇ ಭಾಸವಾಗುತ್ತದೆ! ಬದುಕುವುದಕ್ಕಾಗಿ ಮಾತ್ರ ತಿನ್ನು ಎನ್ನುತ್ತದೆ ವೇದ, ಆಯುರ್ವೇದ. ಆದರೆ ಅದನ್ನು ಪಾಲಿಸುವವರೆಷ್ಟು ಮಂದಿ ಎಂಬುದೂ ಕೆಲವೆಡೆ  ಪ್ರಶ್ನಾರ್ಹವೇ. 

ಕಾಲಯಾವುದಾದರೇನು ಹಿಂದೂ ಉತ್ತಮಕಾಲವಿತ್ತು, ಇಂದೂ ಉತ್ತಮಕಾಲವಿದೆ, ಮುಂದೂ ಇರುತ್ತದೆ ಎಂಬ ಉದಾತ್ತ ಅನಿಸಿಕೆಗಳನ್ನೇ ಇಟ್ಟುಕೊಂಡರೂ ನಿಯತಕಾಲಿಕೆಗಳಲ್ಲಿ ಬರುವ ಕಥೆ-ಕವನ-ಪ್ರಬಂಧಗಳನ್ನು ನೋಡುವಾಗ ಹಲವೊಮ್ಮೆ ಜನರ ಮನಃಸ್ಥಿತಿಯೇ ಬದಲಾಗಿದೆಯೇ ಎಂದೆನಿಸುವುದು ಸಹಜ. ಮಾತೆತ್ತಿದರೆ ಕನ್ನಡಭಾಷೆಯಬಗ್ಗೆ ಕನ್ನಡರಕ್ಷಣೆಯನ್ನು ಗುತ್ತಿಗೆಪಡೆದಂತೇ ಆಡುವ ಮಂದಿಗೇ ಛಂದೋಬದ್ಧ, ವ್ಯಾಕರಣ ಶುದ್ಧ ಕವನಗಳು ಹಿಡಿಸುವುದಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ಬೆಂಗಳೂರಿನಲ್ಲಿ ’ಜ್ಞಾನ’ ಎಂಬುದನ್ನು ಅದೆಷ್ಟು ಮಂದಿ ’ಗ್ಯಾನ’ ಎಂದುಚ್ಚರಿಸುವುದಿಲ್ಲ? ಇನ್ನು ’ಹಾವು’ ಎಂಬಲ್ಲಿ ’ಆವು’, ’ಹಾಲು’ ಎಂಬಲ್ಲಿ ’ಆಲು’, ನೀರಿಗೆ ಬಹುವಚನ ಕಲ್ಪಿಸಿ ’ನೀರ್ಗೊಳು’ ಇದೆಲ್ಲಾ ಆಭಾಸ ಉಂಟುಮಾಡುವ ಉಚ್ಚಾರಗಳಲ್ಲವೇ? ಈ ತರಗತಿಯಲ್ಲಿರುವ ಜನ ತಮ್ಮನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಾಗದೇ, ವ್ಯಾಕರಣವೆಲ್ಲ ಗೋಕರ್ಣಕ್ಕೆ ಹೋಗಲಿ ಎಂದೂ ಛಂದಸ್ಸೆಲ್ಲಾ ಚಂಡೀಗಡಕ್ಕೆ ಹೋಗಲಿ ಎಂದೂ ಅಟ್ಟಿಸಿ/ಓಡಿಸಿ ಭಾಷೆಯ ಅಂಗಸೌಷ್ಟವವನ್ನು ಕಳೆದರೇ ಎಂಬುದು ಹುಡುಕಬೇಕಾದ ಅಂಶ! ಮರವೊಂದಕ್ಕೆ ಟೊಂಗೆಗಳೂ ಎಲೆಗಳೂ ಬಣ್ಣವೂ, ಹೂಗಳೂ, ಕಾಯಿ-ಹಣ್ಣುಗಳೂ ಅದರ ಅಂಗಗಳಾಗಿವೆ ಹೇಗೋ ಹಾಗೆಯೇ ಭಾಷೆಯೊಂದಕ್ಕೆ ಛಂದಸ್ಸು, ಸಂಧಿ, ಸಮಾಸ, ವೃತ್ತ, ಅಲಂಕಾರ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ ಇವೆಲ್ಲಾ ಅಂಗಾಂಗಳೆನಿಸುತ್ತವಲ್ಲವೇ? ಮನವಿಟ್ಟು ಕಲಿಯಲಾಗದ ಮಂದಿಗೆ ಭಾಷೆಯಬಗ್ಗೆ ಇಲ್ಲದ ಬಡಿವಾರ ಕಾಣುತ್ತದೆ! ಭಾಷೆಯ ಅಂಗಗಳು ಕಬ್ಬಿಣದ ಕಡಲೆಯಂತೇ ಕಂಡರೆ ಆಗ ಭಾಷೆಯ ಬೆಳವಣಿಗೆಯಾದರೂ ಎಂತು?

ನಸುನಗುತಲೋದುತ್ತ ಬಂದಿರಿ
ತುಸುನಗುತ ಮರೆಯಲ್ಲಿ ನಿಂದಿರಿ
ಕಸುವಿಡುತ ಕನ್ನಡವ ಕಲಿಯಿರಿ ಮಿತ್ರಬಂಧುಗಳೇ |
ಒಸಗೆಯೆನ್ನದು ನಿಮ್ಮಮನದೊಳು
ಕುಸಿತವಾಗಿದೆ ಭಾಷೆಯೀಪರಿ
ಬೆಸುಗೆಹಾಕುತ ಮತ್ತೆ ಬೆಳೆಸಿರಿ ಭಾವಸಿಂಧುಗಳೇ ||

Friday, December 21, 2012

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ

ಚಿತ್ರಋಣ: ಅಂತರ್ಜಾಲ
ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ

ತಮ್ಮದೇ ಹಳ್ಳಿಮನೆಯ ಗೋಡೆಯಮೇಲಿನ ಚಿತ್ರಪಟಗಳನ್ನು ನೋಡುತ್ತಾ ಕುಳಿತಿದ್ದ ತನಗೆ ಒಂದು ಫೋಟೋ ನೋಡುತ್ತಿದ್ದಂತೇ ಏಕಾಏಕಿ ಕಣ್ಣುಗಳು ಮಂಜಾದವು, ಮರುಕ್ಷಣದಲ್ಲಿ ಪರಿವೆಯೇ ಇಲ್ಲದೇ ಕಣ್ಣ ಹನಿಗಳು ತೊಟ್ಟಿಕ್ಕತೊಡಗಿದವು. ಕುಟುಂಬದ ಹಿರಿಯರ ಚಿತ್ರಪಟಗಳನ್ನು ಅಣ್ಣ ಅಂದವಾಗಿ ಜೋಡಿಸಿದ್ದ. ಸಂಪ್ರದಾಯಸ್ಥರ ಮನೆಯ ಸೊಸೆಯಾಗಿ ಬಂದ ಸಾಧ್ವಿ ಅತ್ತಿಗೆ ದಿನವೂ ಅವುಗಳನ್ನು ಒರೆಸಿ ಹೂವಿಟ್ಟು ನಮಸ್ಕರಿಸುತ್ತಿದ್ದಳು. ಮುಪ್ಪಡರಿದ ದಿನಗಳಲ್ಲಿ ತೆಗೆಸಿದ ಕಪ್ಪು-ಬಿಳುಪು ಭಾವಚಿತ್ರ ಅದಾಗಿದ್ದರೂ ಆ ಮುಖವನ್ನು ತಾನು ಮರೆಯಲೊಲ್ಲೆ. ಮರೆಯಲಾರದಂತೇ ಮಾಡಿ ಮನದಲ್ಲಿ ಉಳಿದುಹೋದ ಸಾಲುಗಳು ಇಂತಿದ್ದವು:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಅಮ್ಮ ಕಟ್ಟಿಟ್ಟ ಅದೇನೋ ಮಡಿಗಂಟನ್ನು ತಾನು ಬಿಚ್ಚಿದಾಗ ಸಿಕ್ಕಿದ್ದು ಕೆಲವು ಪುಸ್ತಕಗಳು, ಮತ್ತು ಜಪದಸರ. ಓದಿದ ಪುಸ್ತಕದ ಓದಿದಭಾಗದ ಗುರುತುಹಾಕಿಕೊಳ್ಳಲಿಕ್ಕಾಗಿ ಇದ್ದ ಒಂದು ದಪ್ಪನೆಯ ಕಾಗದ ಮತ್ತು ಅದರಮೇಲೆ ಬರೆದಿದ್ದವು ಈ ಮೇಲಿನ ಸಾಲುಗಳು. ನರಸಿಂಹಸ್ವಾಮಿಯವರ ಕವಿತೆಯೊಂದರ ಈ ಭಾಗವನ್ನು ಅಮ್ಮ ಅದೆಷ್ಟು ಮೆಚ್ಚಿರಬೇಕು ಎಂದುಕೊಂಡ; ಅವರ ಹಾಡುಗಳೇ ಹಾಗಲ್ಲವೇ? ಯಾರಾದರೂ ಅತಿ ಸಹಜವಾಗಿ ಮೆಚ್ಚಬಹುದಾದ ಮೃದು-ಮಧುರ ಭಾವಗಳ ಸಾಲುಗಳಿರುತ್ತವೆ ಎಂದುಕೊಂಡ. ಮನದ ತುಂಬ ಹೇಳಲಾಗದ ದುಗುಡ ತುಂಬಿತ್ತು, ವಿಷಾದ ತುಂಬಿತ್ತು. ಭೋ ಎಂದು ಅತ್ತುಬಿಡುವ ಮನಸ್ಸಾಗುತ್ತಿತ್ತು-ಆದರೆ ವಯಸ್ಸಿಗ ತಾನು ಹಾಗೆ ಎಲ್ಲರೆದುರು ಅಳಲಾರ.

ಎಳವೆಯಲ್ಲಿಯೇ ಅಪ್ಪನ ಮುಖ ನೋಡಿರದ ಮಕ್ಕಳನ್ನು ಅಮ್ಮ ಸಲಹಿ ಬೆಳೆಸಿದ್ದಳು. ಯಾವುದೇ ಸರಿಯಾದ ಆದಾಯಮೂಲವಿರದ ಮನೆಯಲ್ಲಿ ಹೇಗೆ ತನ್ನನ್ನೂ, ಅಣ್ಣನನ್ನೂ ಮತ್ತು ಅಕ್ಕನನ್ನೂ ಬೆಳೆಸಿದಳೋ ಎಂಬುದೇ ಆಶ್ಚರ್ಯವಾಗಿತ್ತು. ಹೇಳಿಕೇಳಿ ಪುರೋಹಿತರ ಮನೆ. ನಾಲ್ಕು ಜನರಲ್ಲಿ ಬೇಡುವ ಹಾಗಿಲ್ಲ, ಮರ್ಯಾದೆಗೆಡುಕು ಕೆಲಸ ಮಾಡುವ ಹಾಗಿಲ್ಲ. ಗಂಡಸತ್ತವಳೆಂಬ ’ಬಿರುದು’ ಅದಾಗಲೇ ಪ್ರಾಪ್ತವಾಗಿಬಿಟ್ಟಿತ್ತು. ಮುತ್ತೈದೆಯರು ಧರಿಸುವ ಮಂಗಳ ಚಿನ್ಹೆಗಳನ್ನು ಕಳೆದಾಗಿತ್ತು. ಕೇಶಮುಂಡನವೊಂದನ್ನು ಮಾಡಿರಲಿಲ್ಲ ಯಾಕೆಂದರೆ ಸಮಾಜ ಸ್ವಲ್ಪ ಸುಧಾರಿಸಲ್ಪಟ್ಟಿದ್ದರಿಂದ ಅದು ಅನಿವಾರ್ಯವೆಂದೆನಿಸಲಿಲ್ಲ. ಕೇಶಮುಂಡನ ಮಾಡಿಸದೆಯೂ ಮನದಲ್ಲಿ ಸಂನ್ಯಾಸಿನಿಯಂತೇ ವ್ರತ ನಡೆಸಿದರೆ ದೇವರು ಮೆಚ್ಚುತ್ತಾನೆ ಎಂಬ ಭರವಸೆಯಿತ್ತು. ಅಪ್ಪ ಸತ್ತಾಗ ಹರೆಯದ ಹೆಣ್ಣಾಗಿದ್ದ ತಾಯಿಯ ಬಾಕಿ ಉಳಿದ ಆಸೆಗಳು-ಭರವಸೆಗಳು ಮಣ್ಣುಗೂಡಿಹೋಗಿದ್ದವು. ಜೀವನವೊಂದು ಗಾಳಿಗೋಪುರದಂತೇ ಭಾಸವಾಗುತ್ತಿದ್ದ ಆ ದಿನಗಳಲ್ಲಿ ಹರೆಯದ ಗಂಡಸರು ಬೇಡದ ಮಾತುಗಳನ್ನೇ ಆಡುತ್ತಿದ್ದರಂತೆ. ಆದರೂ ಅಮ್ಮ ತನ್ನತನವನ್ನು ಕಳೆದುಕೊಳ್ಳಲಿಲ್ಲ; ಕಾಮಕ್ಕೆ ಬಲಿಯಾಗಲಿಲ್ಲ. ಪರಪುರುಷರ ನೆಳಲೂ ಸೋಕದಂತೇ ಬದುಕಬೇಕೆಂದರೆ ಊರು ಬಿಟ್ಟು ಎಲ್ಲಾದರೂ ಹೋಗಬೇಕು, ಅದೂ ಹೆಣ್ಣೆಂಬ ಹೆಣ್ಣು ಸಂನ್ಯಾಸಿನಿಯಂತೇ ಇದ್ದರೂ ಪರವೂರುಗಳಲ್ಲೋ ಪರಸ್ಥಳಗಳಲ್ಲೋ ಅಲ್ಲಿನ ಗಂಡಸರು ಹಾಗೆ ಇರಗೊಟ್ಟಾರೆಯೇ?  ತುಂಬಿಹರಿವ ಕಾಮುಕರ ಕಾಮಪ್ರವಾಹದ ವಿರುದ್ಧ ನೈತಿಕ ನಾವೆಯನ್ನು ಮುನ್ನಡೆಸುತ್ತಾ ಸಾಗುವುದು ಸುಲಭದ ಮಾತಾಗಿರಲಿಲ್ಲ. ಇನ್ನೂ ಅರಿಯದ ಮಕ್ಕಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿಗೆ? ಮಕ್ಕಳ ಉಳಿವಿಗಾಗಿ ಏಳ್ಗೆಗಾಗಿ ತನಗೆ ತವರಲ್ಲಿ ಅಂದು ಕೊಟ್ಟಿದ್ದ ಬಂಗಾರವನ್ನೆಲ್ಲಾ ಮಾರಿಬಿಟ್ಟಳು ಆಕೆ.

ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬುದು ಅಮ್ಮನಿಗೂ ಗೊತ್ತಿತ್ತು. ಆದರೂ ತಂದೆಯ ವಿಯೋಗದ ದುಃಖ ತುಸುವಾದರೂ ದಮನವಾಗುವವರೆಗೆ ಆಕೆಗೆ ಇನ್ನೇನೂ ದಾರಿಯಿರಲಿಲ್ಲ. ತವರಿನಲ್ಲಿ ಈಗ ಯಾರೂ ಉಳಿದಿರಲಿಲ್ಲ; ಇದ್ದರೂ ಅವರ ಸಹಾಯವನ್ನು ಯಾಚಿಸುವುದು ಧರ್ಮವಲ್ಲ. ವರ್ಷದ ನಂತರ ಯಾವುದೋ ಒಂದು ದಾರಿ ಕಂಡುಬಂತು. ನೆರೆಕೆರೆಯ ಹೆಂಗಸರಿಗೆ ಭಜನೆ-ದೇವರನಾಮಗಳನ್ನೂ ಸಂಕೀರ್ತನೆ-ಸಂಗೀತವನ್ನೂ ಕಲಿಸಿಕೊಡುವುದೆಂದು ನಿರ್ಧರಿಸಿ, ದೇವಸ್ಥಾನದಲ್ಲಿದ್ದ ಅರ್ಚಕರ ಮುಂದೆ ನಿವೇದಿಸಿಕೊಂಡಳು. ತನ್ನ ಪತಿ ಮೊದಲು ಅದೇ ದೇವಸ್ಥಾನದಲ್ಲಿ ಅರ್ಚಕರಾಗಿದ್ದುದರಿಂದ ಈಗಿರುವ ಅರ್ಚಕರಿಗೆ ಕೆಲದಿನ ಪಾಠಗಳನ್ನೂ ಮಾಡಿದ್ದರಿಂದ ಆ ಅರ್ಚಕರು ಮಗನಂತೇ ಇದ್ದರು. ಗ್ರಾಮದ ಕೆಲಮನೆಗಳ ಜನ ಗುಡಿಗೆ ಬಂದಾಗ ಆ ಅರ್ಚಕರು ಹೀಗೆ ಭಜನೆ-ಸಂಕೀರ್ತನೆ-ಸಂಗೀತಗಳನ್ನು ಹೇಳಿಕೊಡುವ ಅಮ್ಮನ ಕುರಿತು ಪ್ರಸ್ತಾವಿಸಿದರು. ಒಂದಷ್ಟು ಹೆಂಗಳೆಯರು ಬಂದು ಕಲಿಯತೊಡಗಿದರು, ಆಧರವೇ ಇಲ್ಲದ ಅಮ್ಮನಿಗೆ ಕಾಸು-ಕವಡೆ ಅಂತ ಅಷ್ಟಿಷ್ಟು ಕೊಡುತ್ತಿದ್ದರು. ಇಂಥಾ ಕಷ್ಟದ ದಿನಗಳಲ್ಲಿ ತಮ್ಮನ್ನು ತಾಯಿ ಪೊರೆದದ್ದನ್ನು ಆತ ಕೇಳಿಬಲ್ಲ. ಆತನ ಮನ ಮತ್ತೆ ಮಡುಗಟ್ಟಿತು; ದುಃಖದ ಕಡಲು ಭುಗಿಲೆದ್ದಿತು.

ಮತ್ತೆ ತನಗೆ ತಾನೇ ಸಮಾಧಾನಿಸಿಕೊಂಡ ಆತನಿಗೆ ಈಗಿನ ತನ್ನಿರವಿಗೆ ಕಾರಣಳಾದ ಅಮ್ಮನ ದಯೆ, ತ್ಯಾಗ, ವಾತ್ಸಲ್ಯ ಇವುಗಳೆಲ್ಲದರ ಬಗ್ಗೆ ಮತ್ತೆ ಮತ್ತೆ ನೆನಪಾಗುತ್ತಲೇ ಇತ್ತು. ತನ್ನ ಬದುಕಿಗೆ ಮಕ್ಕಳು ಆಧಾರವಾಗಬೇಕೆಂದು ಅಮ್ಮ ಎಂದೂ ಬಯಸಿರಲಿಲ್ಲ. ಆದರೆ ಅವಳ ಕರ್ತವ್ಯವನ್ನು ಆಕೆ ನಡೆಸಿದ್ದಳು. ಕಷ್ಟಾರ್ಜಿತದಲ್ಲಿ ಹೊಟ್ಟೆಬಟ್ಟೆ ಕಟ್ಟಿ ತನ್ನನ್ನು ಓದಿಸಿದಳು. ನಿತ್ಯವೂ ಪಂಚತಂತ್ರ, ರಾಮಾಯಣ-ಮಹಾಭಾರತದ ಕಥೆಗಳನ್ನು ಹೇಳಿ ನೀತಿವಂತನಾಗಿ ಬಾಳುವಂತೇ ಬೋಧಿಸುತ್ತಿದ್ದಳು. "ದೇವರು ದಯೆತೋರುತ್ತಾನೆ, ನಿಮ್ಮೆಲ್ಲರನ್ನೂ ಸಲಹುತ್ತಾನೆ ಧೈರ್ಯಗೆಡಬೇಡ ಮಗಾ ನೀನು ಬಹುದೊಡ್ಡ ವ್ಯಕ್ತಿಯಾಗುತ್ತೀಯಾ" ಎಂದು ಹುರಿದುಂಬಿಸುತ್ತಿದ್ದಳು. ಓದಿನಲ್ಲಿ ತರಗತಿಗೆ ಪ್ರಥಮಸ್ಥಾನವನ್ನು ಗಳಿಸುತ್ತಾ ತಾನೇನೋ ಮುಂದೆ ಹೋಗುತ್ತಿದ್ದೆ. ವಿಧಿಲೀಲೆ ಮತ್ತು ಅಮ್ಮನ ಪುಣ್ಯವೆಂಬಂತೇ ಬೋಧನಾ ಶುಲ್ಕ ತೆಗೆದುಕೊಳ್ಳದೇ ಕೆಲವು ಶಾಲೆಗಳಲ್ಲಿ ಬೋಧನೆ ನಡೆಯಿತು; ತಗಲುವ ವೆಚ್ಚವನ್ನು ಶಿಕ್ಷಕರೇ ಭರಿಸಿದರು. ಶಿಕ್ಷಕರೊಬ್ಬರ ಮಾರ್ಗದರ್ಶನದಿಂದ ಹೆಚ್ಚಿನ ಅಂಕ ಪಡೆದಿದ್ದಕ್ಕಾಗಿ ವಿದ್ಯಾರ್ಥಿವೇತನ ದೊರೆಯಿತು. ಬಡವರು ಯಾರೆಲ್ಲಾ ಬಯಸಿದರೂ ಆಗುವುದು ಕಷ್ಟವೋ ಅಂಥಾ ಎಂಜಿನೀಯರಿಂಗ್ ಓದಿ ಅಲ್ಲಿಯೂ ಬಂಗಾರದ ಪದಕ ಪಡೆದೆ. ಕಂಪನಿಯೊಂದು ಕೈಬೀಸಿ ಕರೆದು ಉದ್ಯೋಗ ನೀಡಿತು. ಅಮ್ಮನ ಹರುಷಕ್ಕೆ ಪಾರವೇ ಇರಲಿಲ್ಲ. ಅಣ್ಣ ನನಗಿಂತಾ ಮೊದಲೇ ಓದಿದ್ದು ವೇದಪಾಠಗಳನ್ನು, ಆತ ತಂದೆಯಂತೇ ಅರ್ಚಕನಾಗಿ ಅಮ್ಮನ ಜೊತೆ ಅದೇ ಮನೆಯಲ್ಲಿ ಇದ್ದ. ತಾನುಮಾತ್ರ ಬೆಂಗಳೂರಿನ ದಾರಿ ಹಿಡಿದೆ; ಕಂಪನಿ ಸೇರಿದೆ. 

ಕಂಪನಿಗೆ ಹೊಸದಾಗಿ ಸೇರಿದಾಗ ತನಗೆ ಉದ್ಯೋಗದ ಪರಿಪೂರ್ಣ ಮಾಹಿತಿ ಇರಲಿಲ್ಲ. ಹಿರಿಯ ಸಹೋದ್ಯೋಗಿಗಳ ಕೃಪೆಯಿಂದ ಹಂತಹಂತವಾಗಿ ಕೆಲಸವನ್ನು ಕಲಿತುಕೊಂಡೆ. ವರ್ಷಗಳ ತರುವಾಯ ಕೆಲಸ ಸಲೀಸಾಯ್ತು. ಕೆಲಸ ಪಕ್ಕಾ ಬರುತ್ತದೆ ಎಂದಾದಾಗ ಗಣಕತಜ್ಞನಾದ ತನಗೆ ಟೀಮ್ ಲೀಡರ್ ಆಗಿ ಭಡ್ತಿಯಾಯ್ತು. ಗುಂಪಿನ ಮುಂದಾಳುವಾಗಿ ಕೆಲಸನಡೆಸುತ್ತಿರುವಾಗ ಬಹಳ ಹೊತ್ತು ತೊಡಗಿಕೊಳ್ಳಬೇಕಾಗುತ್ತಿತ್ತು. ಕೆಲಸ ಸಮಯಕ್ಕೆ ಮುಗಿಯದೇ ಇದ್ದರೆ ಮೇಲಧಿಕಾರಿಗಳಿಂದ ಹೇಳಿಸಿಕೊಳ್ಳಬೇಕಾದ ಪ್ರಮೇಯವಿತ್ತು. ಪೂರೈಸಲಾಗದ ಒತ್ತಡದಲ್ಲಿ ಸಹಾಯಕ್ಕೆ ಬಂದವಳು ಸಹೋದ್ಯೋಗಿ ಸುಲತಾ. ತನ್ನ ಕಾರ್ಯಬಾಹುಳ್ಯಗಳನ್ನರಿತು ಪ್ರತೀ ಹಂತದಲ್ಲೂ ತನಗೆ ನೆರವಾಗುತ್ತಿದ್ದಳು. ಅದ್ಯಾಕೋ ಅರಿಯೆ ಆಕೆಯನ್ನು ಕಂಡರೆ ಏಕೋ ಇಷ್ಟವೆನಿಸುತ್ತಿತ್ತು; ಆಕೆಗೂ ಅದೇ ಅನಿಸಿಕೆ ಇತ್ತು ಎಂಬುದು ಆಮೇಲೆ ತಿಳಿದುಬಂದ ವಿಷಯ. ಆಡಲಾಗದೇ ಉಳಿದ ಮಾತು ಒಂದುದಿನ ಆಡಿಯೇಹೋಯ್ತು; ಪರಸ್ಪರ ಇಷ್ಟಪಡುವುದಾಗಿ ತಾವು ಹೇಳಿಕೊಂಡೆವು. ನಂತರದ ದಿನಗಳಲ್ಲಿ ಹತ್ತಿರಹತ್ತಿರವಾಗುತ್ತಾ ನಡೆದದ್ದೇ ಅದೆಲ್ಲಾ....ಇಲ್ಲಿ ಬೇಡಬಿಡಿ. ಆ ಹಂತದಲ್ಲಿ ಅಮ್ಮನನ್ನೂ ಕೇಳದೇ ಮದುವೆಯಾಗಿಬಿಟ್ಟೆ. ಗೊತ್ತಾದಾಗ ಅಮ್ಮ ಅತ್ತಳು. ಆದರೂ ಮಗನನ್ನು ಕಡೆಗಣಿಸಲೊಲ್ಲಳು.

ಅಣ್ಣ ಅರ್ಚಕನಾಗಿ-ಪುರೋಹಿತನಾಗಿ ಕಷ್ಟಾರ್ಜಿತದಲ್ಲಿ ಬದುಕು ಸಾಗಿಸುತ್ತಾ ಅಮ್ಮನನ್ನೂ-ಅಕ್ಕನನ್ನೂ ತನ್ನ ಕುಟುಂಬವನ್ನೂ ಸಲಹುತ್ತಿದ್ದ. ಅಣ್ಣ-ಅಮ್ಮ ಕಷ್ಟದಲ್ಲೇ ಅಂತೂ ಅಕ್ಕನನ್ನು ಮದುವೆಮಾಡಿದರು. ಅಕ್ಕ ಮದುವೆಯಾಗಿ ಒಳ್ಳೆಯ ಮನೆಯನ್ನು ಸೇರಿದ್ದು ಅಮ್ಮನಿಗೆ ಬಹುಪಾಲಿನ ಭಾರವನ್ನು ಕಳೆದುಕೊಂಡ ಹಾಗಿತ್ತು. ಅಕ್ಕನ ಮದುವೆಗೆ ಸಹಾಯಮಾಡಲು ಮುಂದಾದಾಗ ಪೈಸೆಯನ್ನೂ ಬಿಚ್ಚದಂತೇ ಸುಲತಾ ತಡೆದಿದ್ದಳು. ಅಣ್ಣ ಹಣಕಾಸಿನ ಬಗ್ಗೆ ಎಂದೂ ನನ್ನಲ್ಲಿ ಕೈ ಒಡ್ಡಲಿಲ್ಲ. ಜೀವನಪೂರ್ತಿ ನೊಂದ ಅಮ್ಮ ಕೆಲದಿನ ’ಜಸ್ಟ್ ಫಾರ್ ಏ ಚೇಂಜ್’ ಗಾಗಿ ತಮ್ಮ ಜೊತೆಗಿರಲಿ ಎಂದು ಯಾಕೋ ಅನ್ನಿಸಿತು. ಒಮ್ಮೆ ಅಮ್ಮನಿಗೂ-ಅಣ್ಣನಿಗೂ ವಿಷಯ ತಿಳಿಸಿದೆ. ಅಮ್ಮ ಬೆಂಗಳೂರಿಗೆ ಒತ್ತಾಯದಿಂದ ಬಂದಿಳಿದಳು. ಬಸ್ಸಿನಿಂದಿಳಿದ ಅಮ್ಮನನ್ನೂ ಅಣ್ಣನನ್ನೂ ಕಾರಿನಲ್ಲಿ ಕೂರಿಸಿಕೊಂಡಾಗ ಅವರಿಗಾದ ಆನಂದ ಹೇಳತೀರದು! ಬುರ್ರನೆ ಹೊರಟು ಮನೆಸೇರಿಕೊಂಡೆವು. ಅಮ್ಮ-ಅಣ್ಣ ವಿಶಾಲವಾದ ತನ್ನ ಮನೆಯನ್ನು ನೋಡಿದರು. ಅವರಿಗೆ ಸುಲತಾಳನ್ನು ಪರಿಚಯಿಸಿದೆ. ಅಮ್ಮ-ಅಣ್ಣ ಬಂದಿದ್ದು ಸುಲತಾಳಿಗೆ ಹಿಡಿಸಿದ ಹಾಗೆ ಕಾಣಲಿಲ್ಲ; ತೋರಿಕೆಗೆ ನಕ್ಕಹಾಗಿತ್ತು. ಅಣ್ಣ ಒಂದೇ ದಿನ ತಮ್ಮ ಮನೆಯಲ್ಲಿದ್ದು ಮಾರನೇ ದಿನ ಊರಿಗೆ ಪಯಣಿಸಿಬಿಟ್ಟ. ಅಮ್ಮ ಇಲ್ಲೇ ಇದ್ದಳು. ಮನೆಯೆಲ್ಲಾ ಓಡಾಡುತ್ತಿದ್ದ ಅಮ್ಮನನ್ನು ಕಂಡರೆ ಕ್ರಮೇಣ ನಾಗಿಣಿಯಂತಾಗುತ್ತಿದ್ದವಳು ಸುಲತಾ. ಸ್ನಾನ, ಶುಚಿತ್ವ, ಮಡಿ, ಕೊಳೆ-ಮುಸುರೆ ಎಲ್ಲದರಲ್ಲೂ ಅಮ್ಮನಿಗೆ ಅವಳ ಅದೇ ರಿವಾಜು. ಊರಿಂದ ಬರುವಾಗ ಚೀಲದಲ್ಲಿ ಅದೇನೋ ಒಂದು ಮಡಿಗಂಟನ್ನು ತಂದಿದ್ದಳು. ಎರಡು ಮಣ್ಣಿನ ಬೋಗುಣಿಗಳನ್ನೂ ಒಡೆಯದಂತೇ ಬಟ್ಟೆಗಳಲ್ಲಿ ಸುತ್ತಿಕೊಂಡು ಜೋಪಾನವಾಗಿ ತಂದಿದ್ದಳು. "ಮಗಾ ಈ ಬೋಗುಣಿಗಳನ್ನು ತಂದಿದೀನಿ ಕಣೋ, ಮಾಡಿದ ಆಸೆಗಳೂ ರುಚಿಕಟ್ಟಾಗಿರುತ್ತವೆ, ಆರೋಗ್ಯಕ್ಕೂ ಒಳ್ಳೇದು, ಬಳಸಲು ಹೇಳು" ಎಂದು ಅಮ್ಮ ಅವುಗಳನ್ನು ಕೈಗೆತ್ತಿಕೊಟ್ಟಾಗ ಮನೆತುಂಬಾ ಟಪ್ಪರ್ ವೇರ್ ಪಾತ್ರೆಗಳನ್ನೂ ಬಾಟಲುಗಳನ್ನೂ ಹೊಂದಿರುವ ಸುಲತಾ ಇದನ್ನು ಸ್ವೀಕರಿಸುತ್ತಾಳೆ ಎಂಬ ಭರವಸೆಯಿರಲಿಲ್ಲ. ಅಂತೂ ಆ ದಿನ ಅಮ್ಮ ಸುಸ್ತಾಗಿದ್ದರೋ ಏನೋ ಮಲಗಿ ನಿದ್ದೆಹೋದರು ಎಂದುಕೊಂಡೆ. ತಾವಿಬ್ಬರೂ ತಮ್ಮ ಕೋಣೆಗೆ ಸೇರಿಕೊಂಡೆವು. ಅಮ್ಮನಿಗೆ ಗೆಸ್ಟ್ ರೂಮಿನಲ್ಲಿ ಹಾಸಿಗೆ ತೋರಿಸಿದೆ. 

ಮಾರನೇ ಬೆಳಿಗ್ಗೆ ಎದ್ದು ಲಿವಿಂಗ್ ರೂಮಿಗೆ ಬಂದರೆ ಅಮ್ಮ ಬೋಗುಣಿಗಳನ್ನು ಇಟ್ಟುಕೊಂಡು ನೀವುತ್ತಿದ್ದಳು. ಹಿಂದೆಯೇ ಎದ್ದುಬಂದ ಸುಲತಾ ಅವುಗಳನ್ನು ನೋಡಿದ್ದೇ ನೋಡಿದ್ದು "ಥೂ ಹಳ್ಳೀ ಗುಗ್ಗುಗಳು ಉಪಯೋಗಿಸುವ ಪಾತ್ರೆಗಳು ನಮಗೇಕೆ? ಎಲ್ಲಾದರೂ ಬಿಸಾಕಿ" ಎಂದುಬಿಟ್ಟಳು. ಅಮ್ಮನ ಮುಖದಲ್ಲಿ ಕಾಣಿಸಿದ ನೋವಿನ ಛಾಯೆಯನ್ನು ಅಕ್ಷರಗಳಲ್ಲಿ ಹೇಗೆ ಹೇಳಲಿ? ಬಚ್ಚಲುಮನೆಯಲ್ಲಿ ನಲ್ಲಿಯನ್ನು ಬಿಗಿಯಾಗಿ ಕಟ್ಟಿದ್ದಕ್ಕೆ ವಾಚಾಮಗೋಚರವಾಗಿ ಅಮ್ಮನನ್ನು ಸುಲತಾ ಬೈದುಕೊಂಡಿದ್ದು ಕೇಳಿಸಿತ್ತು. ತುತ್ತು ಕೊಟ್ಟವಳ ಮತ್ತು ಮುತ್ತುಕೊಟ್ಟವಳ ನಡುವೆ ಸಿಕ್ಕ ತನ್ನ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತೇ ಆಗಿತ್ತು. ನಿತ್ಯ ಸ್ನಾನಾನಂತರ ಅಮ್ಮ ಮಡಿಯುಟ್ಟು, ಮಡಿಗಂಟನ್ನು ಬಿಚ್ಚಿ ಅದೇನೋ ಪುಸ್ತಕಗಳನ್ನು ಓದುತ್ತಿದ್ದಳು. ದೇವರ ನಾಮಗಳನ್ನು ಸಣ್ಣಗೆ ಗುನುಗುತ್ತಿದ್ದಳು-ದೊಡ್ಡದಾಗಿ ರಾಗವಾಗಿ ಹಾಡಲು ಪರವಾನಗಿ ದೊರೆಯದೆಂಬ ಅನಿಸಿಕೆ ಅಮ್ಮನಿಗಿದ್ದಿರಬೇಕು. ಹಾಗಂತ ದೇವರಕೋಣೆ ಎಂದೇನೂ ಪ್ರತ್ಯೇಕ ಇರಲಿಲ್ಲ, ಇರುವ ಕೋಣೆಯಲ್ಲೇ ಒಂದು ಕಡೆ ಕೂತು ಆ ಕಾರ್ಯ ನಡೆಸುತ್ತಿದ್ದಳು. ಒಂದೆರಡು ದಿನ ಸುಲತಾ ಈ ಕೆಲಸದಲ್ಲಿದ್ದ ಅಮ್ಮನನ್ನು ಕೆಂಗಣ್ಣಿನಿಂದಲೇ ಕಂಡಳು. ದಿನಗಳೆಯುತ್ತಾ "ವಾಸನೆಬೀರುವ ಮಡಿಗಂಟು, ಮಡಿಗಂಟಂತೆ ಮಡಿಗಂಟು, ಎತ್ತಿ ಎಲ್ಲಾದರೂ ಎಸೀತೀನಿ ಗಬ್ಬುನಾತ" ಎಂದೆಲ್ಲಾ ರಂಪಮಾಡಿದಳು. ಅಮ್ಮನ ಕಣ್ಣುಗಳಲ್ಲಿ ನೀರನ್ನು ಕಂಡೆ; ಕಂಡೂ ಕಂಡೂ ಅಸಹಾಯಕನಾದೆ. ಮಾತಾಡಿದರೆ ಸುಲತಾ ತನ್ನನ್ನೇ ಬಿಟ್ಟುಹೋಗುವಳೆಂಬ ಹೆದರಿಕೆ, ಆಡದಿದ್ದರೆ ಅಮ್ಮನಿಗೆ ಹೇಗನಿಸಿರಬೇಡ ಎಂಬ ಆತಂಕ. ವಾಸ್ತವವಾಗಿ ಮಡಿಗಂಟು ಶ್ರೀಗಂಧ-ಧೂಪ-ಗುಗ್ಗುಳಗಳ ಪರಿಮಳವನ್ನು ಬೀರುತ್ತಿತ್ತು, ಸ್ವಚ್ಛ-ಶುಭ್ರ ರೇಷ್ಮೆಬಟ್ಟೆಯದಾಗಿತ್ತು, ಆದರೂ ಸುಲತಾಳ ಮೂಗಿಗೆ ಮಾತ್ರ ಇಲ್ಲದ ವಾಸನೆ ಬಡಿಯುತ್ತಿತ್ತು! 

ವಾರದಲ್ಲೇ ಅಮ್ಮ ಸಾವರಿಸಿಕೊಂಡ ಗಾಯಾಳುವಿನಂತೇ ಹೊರಟುನಿಂತಳು. ಬೇಡಾ ಎಂದರೂ ಕೇಳಲೇ ಇಲ್ಲ."ಒಮ್ಮೆ  ಹೀಗೆ ಬಾ ಮಗಾ" ಎಂದು ಕರೆದು ಅಪ್ಪಿಕೊಂಡು ತನ್ನಗಂಟಿನಲ್ಲಿದ್ದ ಚಿಲ್ಲರೆ ನಾಣ್ಯ-ನೋಟುಗಳನ್ನೆಲ್ಲಾ ಕೈಗೆ ಹಾಕಿ "ಒಳ್ಳೇದಾಗಿರಿ ಕಂದಾ, ಮಕ್ಕಳು ಮರಿಗಳು ಜನಿಸಿ ಮನೆತುಂಬಿ ನೂರ್ಕಾಲ ಸುಖವಾಗಿರಿ" ಎಂದು ಮನದುಂಬಿ ಹರಸಿ ಕಂಬನಿಗರೆದಳು. ಅಷ್ಟಕ್ಕೂ ಅಮ್ಮನ ಮಡಿಗಂಟಿನಲ್ಲಿದ್ದ ಪುಸ್ತಕಗಳನ್ನು ತಾನು ನೋಡಿರಲಿಲ್ಲ; ನೋಡಬೇಕು ಎನ್ನಿಸಲೂ ಇಲ್ಲ. ಅದೇನೋ ಆ ಹಳೇ ಕಾಲದ್ದು, ಸಾಫ್ಟ್ ವೇರ್ ನವರಾದ ತಮಗೆಲ್ಲಾ ಅದೇನು ಪ್ರಯೋಜನಕ್ಕೆ ಬಂದೀತು ಎಂಬ ಭಾವನೆ ಮನದಲ್ಲಿತ್ತು. ಅಮ್ಮನನ್ನು ಅಷ್ಟು ಶೀಘ್ರ ಊರಿಗೆ ಕಳುಹಿಸಿಕೊಡುವ ಮನಸ್ಸಿರಲಿಲ್ಲ. ಆದರೆ ಅಮ್ಮ ನಿಲ್ಲಬೇಕಲ್ಲಾ? ಹೊರಟುನಿಂತ ಅಮ್ಮನನ್ನು ತಾನೇ ಹೋಗಿ ಊರಿಗೆ ಕಳುಹಿಸಿ ಅದೇ ದಿನ ರಾತ್ರಿ ಮರಳಿ ಬಂದೆ. ಹೃದಯ ಭಾರವಾಗಿತ್ತು, ಮಾತು ಬಾರದಾಗಿತ್ತು. ಮರಳಿದ ತನ್ನನ್ನು ಸುಲತಾ ಬಾಗಿಲಲ್ಲೇ ತಡೆದಳು " ಹಲೋ ಇನ್ಮೇಲೆ ನಿಮ್ಮಮ್ಮನೋ ಅಣ್ಣನೋ ಈ ಕಡೆ ತಲೆಹಾಕಿದ್ರೆ ನಾನಂತೂ ಒಂದು ದಿನ ಇರಲಾರೆ. ನಿಂಗೆ ಬೇಕಾದ್ರೆ ನಂಜೊತೆ ಇರು ಇಲ್ಲವಾದ್ರೆ ಡೈವೋರ್ಸ್ ತಗೊಳ್ಳೋಣ" ಎಂದುಬಿಟ್ಟಳು.

ಅಮ್ಮನ ನೆನಪಿನಲ್ಲಿ ಮುಸುಕು ಮುಚ್ಚಿ ಮಲಗಿದಲ್ಲೇ ಅತ್ತೆ; ತಲೆಕೆಳಗಿನ ದಿಂಬು ನೆನೆದಿದ್ದು ನನಗೆಮಾತ್ರ ತಿಳಿದಿತ್ತು, ಬಿಸಿಯಾದ ತಲೆಯ ಆ ಕಾವಿಗೆ ಒದ್ದೆಯಾದ ದಿಂಬಿನ ಆ ಭಾಗ ಮತ್ತೆ ಒಣಗಿಹೋಗಿತ್ತು. ಮಕ್ಕಳನ್ನು ಹೆತ್ತು ಸುಖವಾಗಿರಿ ಎಂದು ಹರಸಿದ ತಾಯಿಯೇ ಕಣ್ಣೆದುರು ಸದಾ ಕಾಣುತ್ತಿದ್ದಳು. ಯಾರಲ್ಲಿಯೂ ಹೇಳಿಕೊಳ್ಳಲು ತನಗೆ ಯಾರಿದ್ದಾರೆ? ಬಚ್ಚಲುಮನೆಯಲ್ಲಿ, ಕಕ್ಕಸು ಕೋಣೆಯಲ್ಲಿ ನೆನಪಿಸಿಕೊಂಡು ಅಳುತ್ತಿದ್ದೆ, ಹೊರಗೆ ಅತ್ತರೆ ಆಕೆ ನೋಡಿದರೆ ಎಂಬ ಭಯ ಕಾಡುತ್ತಿತ್ತು. ಯಾಕೋ ಮನಸ್ಸು ಬಹಳ ಉದ್ವಿಗ್ನ ಗೊಂಡಿತ್ತು. ಅಮ್ಮ ಬಂದುಹೋದಮೇಲೆ ಸುಲತಾ ಬದಲಾಗಿಹೋಗಿದ್ದಳು. ಸರಿಯಾಗಿ ಮಾತನಾಡುತ್ತಿರಲಿಲ್ಲ,  ಬೇಕು-ಬೇಡಗಳಲ್ಲಿ ಆಸಕ್ತಿ ಕಮ್ಮಿಯಾಗಿತ್ತು. ಮನೆಗೆ ಬರ-ಹೋಗುವ ಸಮಯವೂ ಬದಲಾಗತೊಡಗಿತ್ತು. ಆಡಳಿತ ಮಂಡಳಿಗೆ ಹೇಳಿ ಬೇರೇ ಗುಂಪಿಗೆ ಸೇರಿಕೊಂಡಳು. ಅಲ್ಲಿ ಅದೇನು ನಡೆಯಿತೋ ತಿಳಿಯದು. ರಾಹುಲ್ ಎಂಬ ಆ ಗುಂಪಿನಲ್ಲಿದ್ದೊಬ್ಬಾತ ಸಲುಗೆಯಿಂದಿರುವುದು ಕಾಣಿಸಿತು. ಕೇಳುವ-ಹೇಳುವ ಕಥೆಯೇ ಇಲ್ಲ. ಕೇಳಿದರೆ ಆ ಕ್ಷಣದಲ್ಲೇ ಡೈವೋರ್ಸ್, ಕೇಳದಿದ್ದರೆ ಏನಾಗಬಹುದೆಂದು ಊಹಿಸಲೂ ಆಗಲಿಲ್ಲ. 

ನೊಂದಮನಸ್ಸಿಗೆ ಸಾಂತ್ವನ ಹುಡುಕುತ್ತ, ಶಾಂತಿ ಹುಡುಕುತ್ತಿದ್ದಾಗ ಯಾರೋ ಹೇಳಿದರು-ಅಮೇರಿಕಾದಿಂದ ಯಾರೋ ಬಂದಿದ್ದಾನಂತೆ, ಅವನ ಉಪನ್ಯಾಸಗಳು ತುಂಬಾ ಪರಿಣಾಮಕಾರಿಯಂತೆ. ಜೀವನದ ಜಿಗುಪ್ಸೆಯನ್ನು ಕಳೆಯಲು ಅವು ಸಹಕಾರಿಯಂತೆ ಎಂದು. ಆನ್ ಲೈನ್ ನಲ್ಲಿ ಮಾಹಿತಿಪಡೆದು ಟಿಕೆಟ್ ಖರೀದಿಸಿದೆ. ಉಪನ್ಯಾಸಕ್ಕೂ ಹೋಗಿಬಂದೆ. ಉಪನ್ಯಾಸ ಆಫ್ ಕೋರ್ಸ್ ಆಂಗ್ಲಭಾಷೆಯಲ್ಲಿ ನಡೆಯಿತು. ರಾಬಿನ್ ಮ್ಯಾಥ್ಯೂ ಎಂಬಾತ ಉಪನ್ಯಾಸ ನೀಡಿದ-ಆತ ಜಗತ್ಪ್ರಸಿದ್ಧ, ಆತನ  ಬಗ್ಗೆ ನಿಮಗೂ ತಿಳಿದಿರಲಿಕ್ಕೆ ಸಾಕು. ರಾಬಿನ್ ಮ್ಯಾಥ್ಯೂಗೆ ಭಾರತವೆಂದರೆ ಬಹಳ ಅಚ್ಚುಮೆಚ್ಚಂತೆ. ಆತ ಇಲ್ಲಿನ ರಾಮಾಯಣ-ಮಹಾಭಾರತ ಮತ್ತು ವೇದ-ಉಪನಿಷತ್ತುಗಳು ಅಲ್ಲದೇ ಭಗವದ್ಗೀತೆಯನ್ನೂ ಚೆನ್ನಾಗಿ ಓದಿ ತಿಳಿದುಕೊಂಡಿದ್ದಾನಂತೆ. "ದೆರ್ ಆರ್ ಸಚ್ ಇನ್ ವ್ಯಾಲ್ಯೂಯೇಬಲ್ ಡೈಮಂಡ್ಸ್ ಇನ್ ಇಂಡಿಯಾ" ಅಂದ. ಉಪನ್ಯಾಸಕ್ಕೆ ಸುಮಾರು ೫೦೦ ಜನ ಸೇರಿದ್ದರು. ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆಯೇ. ಎಲ್ಲರಿಗೂ ಸಾಂಸಾರಿಕ ಅಥವಾ ವ್ಯಾವಹಾರಿಕ ಸಮಸ್ಯೆಗಳೇ. ಕೃಷ್ಣನನ್ನು ಮ್ಯಾನೇಜ್ ಮೆಂಟ್ ಗುರು ಎಂದೂ ಗೀತೆ ಜಗತ್ತಿನಲ್ಲಿಯೇ ತಾನು ನೋಡಿದ ಅತಿಶ್ರೇಷ್ಠ ಗ್ರಂಥವೆಂದೂ ರಾಬಿನ್ ಮ್ಯಾಥ್ಯೂ ಹೇಳಿದ. ಉಪನ್ಯಾಸ ಮುಗಿದು ಹೊರಡುವಾಗ ಆತ ಎಲ್ಲರಿಗೂ ಒಂದು ಪುಸ್ತಕ ಶಿಫಾರಸ್ಸುಮಾಡಿದ. ಅದು ಅದೇ ಭಗವದ್ಗೀತೆ. "ಯು ಕ್ಯಾನ್ ಗೆಟ್ ಇಟ್ ಇನ್ ಯುವರ್ ಓನ್ ಲ್ಯಾಂಗ್ವೇಜ್ ಐ ಹೋಪ್, ಆಲ್ ದಿ ಬೆಸ್ಟ್" ಎಂದು ಎಲ್ಲರನ್ನೂ ಬೀಳ್ಕೊಟ್ಟ.

ನಿಜಕ್ಕೂ ಆತ ಹೇಳಿದ್ದು ಸರಿಯೇ ಎಂಬುದು ಗೀತೆಯನ್ನು ಅಂದಿನಿಂದ ಓದಲು ಆರಂಭಿಸಿದ ತನಗೆ ವೇದ್ಯವಾಯ್ತು. ನೋವಿನಲ್ಲೂ ನಲಿವಿನಲ್ಲೂ, ಸುಖ-ದುಃಖಗಳೆರಡರಲ್ಲೂ ಮನಸ್ಸನ್ನು ನಿರಾಳವಾಗಿ ಇರಿಸಿಕೊಂಡು ನಿರುಮ್ಮಳವಾಗಿರುವುದು ಹೇಗೆ ಎಂಬುದನ್ನು ತಿಳಿಯಲು ಗೀತೆಯನ್ನೋದಬೇಕು. ಗೀತೆ ಒಂದು ಧರ್ಮಗ್ರಂಥವಲ್ಲ, ಅದು ಮಾನವ ಜೀವನಧರ್ಮವನ್ನು ತಿಳಿಸುತ್ತದೆ. ಗೀತೆಯನ್ನು ಓದುತ್ತಾ ಓದುತ್ತಾ ಗೀತೆಯಲ್ಲಿ ಪಳಗಿಬಿಟ್ಟೆ. ಇಡೀ ಗೀತೆ ಕಂಠಪಾಠವಾಗಿ ಗೀತೆಯ ಕುರಿತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ವರ್ಷವೊಂದರ ಹಿಂದೆ ಡೈವೋರ್ಸ ನೋಟೀಸ್ ಕೊಟ್ಟ ಸುಲತಾ ಇನ್ನೂ ಇತ್ಯರ್ಥವಾಗದ್ದರಿಂದ ಬೇರೇ ಮನೆಯಲ್ಲಿದ್ದಳು. ಗೀತೆಯ ಕುರಿತಾದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನಡೆಸುತ್ತಿದ್ದಾಗ ಕಣ್ಣು ಅಕಸ್ಮಾತ್ ಎದುರಿಗೆ ಕೂತ ವ್ಯಕ್ತಿಯಮೇಲೆ ಹರಿಯಿತು: ಹೌದು ಅವಳೇ ಸುಲತಾ. ಮನಸ್ಸಿಗೆ ನೆಮ್ಮದಿ ಕಳೆದುಕೊಂಡು ಹಾಗೆ ಬಂದಿದ್ದಾಳೆ ಎಂದು ಬೇರೇ ಹೇಳಬೇಕೇ? ಪ್ರವಚನ ಮುಗಿದು ಹೊರಟಾಗ "ರೀ" ಎಂಬ ಕರೆ! ಸುಲತಾ ಬೆಂಬತ್ತಿ ಬಂದಳು. ತಾನಿನ್ನೆಂದೂ ಹಾಗೆ ನಡೆದುಕೊಳ್ಳುವುದಿಲ್ಲವೆಂತಲೂ, ಕೆಲಸ ಒತ್ತಡಗಳು ಮತ್ತು ಮಿಥ್ಯಾ ಲೋಕದ ಬಡಿವಾರದ ಜೀವನದಲ್ಲಿ ತೊಡಗಿಕೊಂಡ ತನಗೆ ಈಗ ನಿಜದ ಅರಿವಾಗಿದೆಯೆಂದೂ ಹೇಳಿದಳು.    

ಅಣ್ಣ ಮನೆಗೆ ಫೋನು ಹಾಕಿಸಿ ವರ್ಷಗಳೇ ಕಳೆದವು. ತನ್ನ ಸ್ವಂತ ದುಡಿಮೆಯಲ್ಲೇ ಅಣ್ಣ ಎಲ್ಲಾ ಖರ್ಚನ್ನೂ ನಿಭಾಯಿಸುತ್ತಾನೆ; ಹಣ ಕಳುಹಿಸಲೇರ್ ಎಂದರೆ ಬೇಡವೆಂಬ ಅಣ್ಣಂದಿರೂ ಇರುತ್ತಾರ್ಯೇ? ಇರುತ್ತಾರೆ ಎಂಬುದು ತನ್ನಣ್ಣನನ್ನು ನೋಡಿದರೆ ತಿಳಿಯುತ್ತದೆ! ಅಣ್ಣ ಕರೆಮಾಡಿದ್ದ. ವರ್ಷದ ಹಿಂದೆ ಅಮ್ಮ ಭಗವಂತನ ಪಾದ ಸೇರ್ರಿಕೊಂಡು ಈಗ ವರ್ಷಾಂತಕ ಕಾರ್ಯ ಬಂದುಬಿಟ್ಟಿದೆ ಎಂಬುದು ನೆನಪಿಗೆ ಬಂದಿದ್ದೇ ಆಗ. ಬೆಳಗಾದರೆ ನಗರದ ಕೆಲಸಗಳ ಒತ್ತಡದಲ್ಲಿ ತಮ್ಮನ್ನೇ ಮರೆತಿರುವಾಗ ಇನ್ನೆಲ್ಲಿಯ ಅಪ್ಪ-ಅಮ್ಮನ ನೆನಪು ಅಲ್ಲವೇ? ಅಮ್ಮ ತೀರಿಕೊಂಡಾಗ ತಾನೊಬ್ಬನೇ ಹೋಗಿದ್ದೆ-ಆಗ ಸುಲತಾ ದೂರವಾಗಿದ್ದಳು. ಅಣ್ಣ-ತಮ್ಮ ಪರಸ್ಪರ ಸಂತೈಸಿಕೊಂಡೆವಾದರೂ ಅಮ್ಮನ ಮಡಿಲಿನ ಆ ಪ್ರೀತಿ ಇನ್ನೆಲ್ಲಿ ಸಿಕ್ಕೀತು, ಇನ್ನೆಲ್ಲಿ ದಕ್ಕೀತು? ಈ ಸರ್ತಿ ತಮ್ಮ ದುಃಖದಲ್ಲಿ ಇನ್ನೊಬ್ಬಳು ಸಹಭಾಗಿ-ಅವಳೇ ಅರ್ಧಾಂಗಿ ಸುಲತಾ. ಜೊತೆಗೆ ಸಮಾಧಾನಿಸಿಕೊಳ್ಳಲು ಭಗವದ್ಗೀತೆಯ ತತ್ವಗಳು, ಕಿರುಹೊತ್ತಗೆಗಳು.

ಅಮ್ಮ ತೀರಿಕೊಂಡ ಗಡಿಬಿಡಿಯಲ್ಲಿ ಆಗ ಅಮ್ಮನ ಮಡಿಗಂಟನ್ನು ಬಿಚ್ಚಿ ನೋಡಿರಲಿಲ್ಲ. ಅಣ್ಣ ಅದನ್ನು ಎಲ್ಲೋ ಹಾಗೇ ಬಿಟ್ಟಿರಬೇಕೆಂದುಕೊಂಡಿದ್ದೆ. ಇಲ್ಲಾ ಇಲ್ಲಾ...ಅದು ಇನ್ನೂ ಮನೆಯಲ್ಲೇ ಇದೆ! ಅದನ್ನು ಅಣ್ಣ ಅಮ್ಮನಂತೇ ನಿತ್ಯವೂ ಬಳಸುವುದು ಈಗಿನ ವಾಡಿಕೆಯಂತೆ. ಅಂದಹಾಗೇ ಆ ಮಡಿಗಂಟನ್ನು ಕುತೂಹಲದಿಂದ ಬಿಚ್ಚಿದೆ. ಅದರಲ್ಲಿ ಪ್ರಥಮವಾಗಿ ಕಂಡ ಪುಸ್ತಕದ ಹೆಸರು "ಭಗವದ್ಗೀತೆ." ಅದರೊಟ್ಟಿಗೆ ಭರ್ತೃಹರಿಯ ನೀತಿ ಶತಕಗಳು, ರಾಮಾಯಣ ಮತ್ತು ಮಹಾಭಾರತಗಳಿವೆ. ಭಗವದ್ಗೀತೆಯ ನಡುವೆ ಆಗ ಹೇಳಿದೆನಲ್ಲಾ ದಪ್ಪನೆಯ ಗುರ್ತಿನ ಕಾಗದವಿದೆ. ಮತ್ತು ಅದರಮೇಲೆ ಹೀಗೆ ಬರೆದಿದೆ:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ಹಳ್ಳಿಮನೆಯ ಗೋಡೆಯಮೇಲಿರುವ ತಾನು ಗಮನಿಸುತ್ತಿರುವ ಆ ಚಿತ್ರಪಟದಲ್ಲಿರುವುದು ಅಮ್ಮನ ಭಾವಚಿತ್ರ. ಅಮ್ಮನ ಕಷ್ಟಕಾಲದಲ್ಲಿ ’ಗೀತೆ’ ಅಮ್ಮನಿಗೆ ಅಮ್ಮನಾದಳು, ಅಮ್ಮ ಹೊರಟುಹೋದಳು-ಗೀತೆಯನ್ನೇ ಅಮ್ಮನ ಜಾಗದಲ್ಲಿ ನಮ್ಮ ಹತ್ತಿರಬಿಟ್ಟು ಹೋದಳು. 

Wednesday, December 19, 2012

ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ.

ಿತ್ರಋಣ: ಅಂತರ್ಜಾಲ
ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ. 

[ ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೩ ]

ನೀವೀಗ ಕೇಳುತ್ತೀರಿ ’ಇದರಲ್ಲಿ ಹೊಸದೇನಿದೆ ಭಟ್ಟರೇ?’, ಹೊಸದು ಎಂದರೆ ಹೊಸದಲ್ಲ, ಹಳೆಯದಾಗಲು ಸಾಧ್ಯವಿಲ್ಲ ಅಂಥಾ ಕೆಲವು ವಿಷಯಗಳು ನಮಗೆ ಆಗಾಗ ಅಲ್ಲಲ್ಲಿ ಸಿಗುತ್ತವೆ; ಕಾಣುತ್ತವೆ, ಮನದಲ್ಲಿ ನೆಲೆನಿಂತು ಕಾಡುತ್ತವೆ; ಆತ್ಮೀಯವಾಗಿ ಆತುಕೊಳ್ಳುತ್ತವೆ; ಸ್ನೇಹಿತರ ಥರಾ ಜೋತುಬೀಳುತ್ತವೆ. ಅವು ನಮ್ಮವೇ ಮತ್ತು ನಮ್ಮವರದೇ ವಿಷಯಗಳು, ಗೊತ್ತಿರುವವೇ ಆದರೂ ಮತ್ತೊಮ್ಮೆ ಕೇಳುವ, ಕೆದಕುವ, ಕಾಣುವ, ತಿಳಿಯುವ ತಣಿಯದ ಕುತೂಹಲ! ರಾಮಕಥೆ ನಡೆಯುವಲ್ಲೆಲ್ಲಾ ಬೊಗಸೆಯಗಲಿಸಿ ಪ್ರೀತಿಯನ್ನೂ ದಯೆಯನ್ನೂ ಸದಾ ಅದೇ ಶ್ರೀರಾಮರೂಪ ದರುಶನವನ್ನೂ ಬೇಡುತ್ತ ಆನಂದಬಾಷ್ಪ ಸುರಿಸುವ ಹನುಮ ನಿಂತಿರುವ ಹಾಗೇ, ಇಂಥಾ ವಿಷಯಗಳು ಪ್ರಸ್ತಾಪವಾದಾಗಲೆಲ್ಲಾ ನಾವು ಹನುಮರಾಗುತ್ತೇವೆ-ಕಥಾನಾಯಕರು ರಾಮರಾಗುತ್ತಾರೆ; ಯಾಕೆಂದರೆ

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಬೀಡು

ನಮ್ಮ ಕನ್ನಡನಾಡು. ಅಷ್ಟೇ ಏಕೆ ಈ ಪುಣ್ಯಭೂಮಿ ಭಾರತ ಕೂಡಾ. ರಾಮಾಯಣ, ಮಹಾಭಾರತಗಳಂಥಾ ಅದ್ಭುತ ಕೃತಿಗಳು ಪ್ರಪಂಚದಲ್ಲಿ ಇನ್ನೆಲ್ಲೂ ಕಾಣುವುದಿಲ್ಲ. ಕೋಟಿ ಕೋಟಿ ಕೃತಿಕಾರರು ಜನಿಸಿ, ಬರೆದು ಸಾಗಿ ಸಂದರೂ ನಮ್ಮನೆಲದ ಈ ಕಾವ್ಯಗಳನ್ನು ಅವಲೋಕಿಸಿದರೆ ಬೇರಾವ ಕಾವ್ಯಗಳಿಗೂ ಆ ಸಾರ್ವಕಾಲಿಕತೆ ಇಲ್ಲ, ದಕ್ಕುವುದೂ ಇಲ್ಲ. ವ್ಯಕ್ತಿಯೊಬ್ಬ ಉತ್ತಮನಾದರೆ ಯಾವ ಫಲ? ಮಧ್ಯಮನಾದರೆ ಯಾವುದು? ಅಧಮನಾದರೆ ಏನು ಫಲ? ಯಾರ ಸಂಗ ಮುಕ್ತಿತರಂಗ? ಇನ್ಯಾರ ಸಂಗ ಇಹದ ವಂಗ? ಮತ್ತಿನ್ಯಾರ ಸಂಗ ಮಾನಭಂಗ? ಹೀಗೇ ಮನುಜ ಜೀವನಕ್ಕೆ ಯಾವುದು ವಿಹಿತ, ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದನ್ನು ಆಧಾರಸಹಿತವಾಗಿ ಎತ್ತಿಕೊಡುವ ಅದಮ್ಯ ಆಕರಗಳು ನಮ್ಮ ರಾಮಾಯಣ-ಮಹಾಭಾರತಗಳು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||

ನಿಶ್ಚಲ ತತ್ವವನ್ನು ಹೇಗೆ ಪದಕ್ರಮದಲ್ಲಿ ಶ್ರೀಶಂಕರರು ಬೋಧಿಸಿದರು ಎಂಬುದನ್ನು ಕಾಣುತ್ತೇವೆ. ಸಾಗರ ವಿಶಾಲವಾಗಿದೆ, ಸಂತೋಷಕೊಡುತ್ತದೆ. ಸಾಗರಗರ್ಭದಲ್ಲಿ ಮುತ್ತು-ರತ್ನಗಳೇ ಅಡಗಿವೆ. ಸಮೂಹದೊಡನೆ ವಿಹರಿಸುವಾಗ ಮಹಾಸಮುದ್ರ ಸುಖದ ಕಡಲು; ಅದೇ ಏಕಾಂತದಲ್ಲಿ ಒಬ್ಬರೇ ಕಡಲಕಿನಾರೆಯಲ್ಲಿ ಬಹುಕಾಲ ವಿಶ್ರಮಿಸಿದರೆ ಆಗ ಅಳುಬರುತ್ತದೆ ಎಂಬುದು ಕೂತು ನೋಡಿದವರ ಅನುಭವ. ಕಾರಣವಿಷ್ಟೇ: ನಾವು ಯಾರೆಂಬುದರ ಮೂಲವನ್ನು ಅಲ್ಲಿ ನಾವು ಕಾಣತೊಡಗುತ್ತೇವೆ! ನಾನು ನಿಜವಾಗಿಯೂ ಯಾರು? ಇಂಥವರ ಮಗನೇ, ಇಂಥಾ ಹುಡುಗನ ಅಪ್ಪನೇ-ಅಮ್ಮನೇ? ಇಂಥಾ ವ್ಯಕ್ತಿ ಗಂಡ ಯಾ ಹೆಂಡತಿಯೇ? ಎಲ್ಲವೂ ಹೌದು, ಆದರೆ ಅದಕ್ಕೂ ಮೀರಿ ನನ್ನೊಳಗೇನಿದೆ? ಹುಟ್ಟಿದಾಗ ಜೀವ ಎಂಬುದು ಎಲ್ಲಿಂದ ಬರುತ್ತದೆ, ಸತ್ತಾಗ ಅದೆಲ್ಲಿ ಮರೆಯಾಗಿ ಹೋಗುತ್ತದೆ? ಹೀಗೆ ಸಾಗುವ ಮನೋರಥದ ವೇಗ ಆ ಕಿನಾರೆಗೆ ಸೀಮಿತವಲ್ಲ; ಅದು ಆಕಾಶದ ಅವಕಾಶದ ಅನಂತತೆಯಲ್ಲಿ ಅದೇನನ್ನೋ ಹುಡುಕುತ್ತದೆ; ಹುಡುಕಲು ಹಾತೊರೆಯುತ್ತದೆ. ಮನುಷ್ಯನಿಗೆ ಇಡೀ ದಿನ ಕೆಲಸಮಾಡಿ ದಣಿದಾಗ ನಿದ್ದೆ ಆವರಿಸುತ್ತದೆ, ೨೪ ಗಂಟೆಗಳಲ್ಲಿ ಸಾಮಾನ್ಯವಾಗಿ ೫-೬ ಗಂಟೆಗಳ ಕಾಲ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆ ಮಾಡಿ ಎದ್ದರೇನೇ ಮುಂದಿನ ಕೆಲಸ ಸಲೀಸು, ನಿದ್ದೆ ಇಲ್ಲದಿದ್ದರೆ ಯಾವ ಕೆಲಸವೂ ಸಾಧ್ಯವೇ ಇಲ್ಲವೆಂಬ ಭಾವನೆ.

ನಿದ್ದೆಗೊಮ್ಮೆ ನಿತ್ಯಮರಣ
ಎದ್ದಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ನಮ್ಮನಷ್ಟೆ ಮರೆತಿದೆ !

ಬೇಂದ್ರೆಯವರ ಹಾಡು ಹಲವರಿಗೆ ಗೂಢ, ಕೆಲವರಿಗೆ ಘನತರ, ಅವು ವೇದಾಂತವನ್ನು ಸಾರುತ್ತವೆ. ಆ ವೇದಾಂತದಲ್ಲೇ ನಮ್ಮ ಮೂಲದ ಸೂತ್ರ ಅಡಗಿದೆ:

ಯೋ ವೇದಾದೌ ಸ್ವರಃ ಪ್ರೋಕ್ತೋ
ವೇದಾಂತೇ ಚ ಪ್ರತಿಷ್ಠಿತಃ |
ತಸ್ಯಃ ಪ್ರಕೃತಿ ಲೀನಸ್ಯ
ಯಃ ಪರಃ ಸಃ ಮಹೇಶ್ವರಃ ||

ನಮ್ಮ ಸುತ್ತ ನಡೆದಾಡಲು, ಬೆಳೆತೆಗೆಯಲು, ಮನೆಕಟ್ಟಿ ಸಂಸಾರ ನಡೆಸಲು ಈ ಭೂಮಿ ಇದೆ, ಕುಡಿಯಲು ಶುದ್ಧ ನೀರು ಸಾಕಾರಗೊಳ್ಳುತ್ತದೆ, ಉಸಿರಾಡಲು ಹವೆಯಿದೆ-ತಂಗಾಳಿಯಿದೆ, ಕಾಯಿಸಲು-ಬೇಯಿಸಲು-ದಹಿಸಲು ಅಗ್ನಿಯಿದೆ-ಬೆಂಕಿಯಿದೆ, ಇವೆಲ್ಲಾ ತನ್ನೊಳಗೇ ಇರಲು ಆಕಾಶವಿದೆ-ಅವಕಾಶವಿದೆ. ಬಿಸಿಲಿಗೆ ಸೂರ್ಯನಿದ್ದಾನೆ, ಬೆಳದಿಂಗಳಿಗೆ ಚಂದ್ರನಿದ್ದಾನೆ. ಆದರೆ ಅವು ನಮಗೆ ಸಕಲರೀತಿಯಲ್ಲಿ ನೆರವನ್ನು ನೀಡುತ್ತಿದ್ದರೂ ಅವುಗಳಲ್ಲೇ ಅವಿತಿರುವ ನಮ್ಮ ಮೂಲದ ಅರಿವು ನಮಗಿಲ್ಲ! ಈ ನೆಲದಲ್ಲಿ ರಾಮನಿದ್ದ-ಸಾರ್ವಭೌಮನಿದ್ದ, ಈ ನೆಲದಲ್ಲಿ ಕೃಷ್ಣನಿದ್ದ-ಜಗದ್ಗುರುವಿದ್ದ. ನಿರ್ಗುಣವು ನಮಗಾಗಿ ಸಗುಣವಾಗಿ ಬಂದಾಗ ಅದನ್ನು ಕಾಣುವ ಭಾಗ್ಯ ನಮಗಿರಲಿಲ್ಲ, ಕೆಲವರಿಗೆ ಸಿಕ್ಕಾಗ ಏನು ಕೇಳಬೇಕೆಂಬುದೇ ತಿಳಿಯಲಿಲ್ಲ. ಕೆಲವರಿಗೆ ಸಿಕ್ಕಾಗ ಏನೇನೂ ದಕ್ಕಲಿಲ್ಲ! ’ಭಗವಂತ ಸಿಕ್ಕರೆ ಏನು ಕೇಳುತ್ತೀಯ?’ ಎಂದು ಹಲವರಲ್ಲಿ ಪ್ರಶ್ನೆಮಾಡಿದರೆ, ಕೆಲವರಿಗೆ ದಿಕ್ಕೇ ತೋಚುವುದಿಲ್ಲ, ಇನ್ನೂ ಕೆಲವರಿಗೆ ಸಂಸಾರ ತಾಪ-ತ್ರಯಗಳ ಸಮಸ್ಯೆಗಳೇ ಪ್ರಧಾನವಾಗಿ ಗೋಚರಿಸಿ ಮತ್ತಿನ್ನೇನೂ ಕೇಳಲು ಉಳಿದಿರುವುದಿಲ್ಲ!

ನವನಾಗರಿಕತೆ ಎಂಬ ಆಮಿಷಕ್ಕೆ ಬಲಿಯಾದ ನಮ್ಮ ಯುವಪೀಳಿಗೆಯ ಹಲವರಿಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಅರಿವಿಲ್ಲ, ಸರಿಯಾಗಿ ಅರಿಯದೇ ಇರುವ ಹಿರಿಯರ-ಪಾಲಕ-ಎಡಪಂಥೀಯರ ದುರ್ಧೋರಣೆಯಿಂದ ನಮ್ಮ ಸಂಸ್ಕೃತಿಗೆ ಬೆಲೆಯಿಲ್ಲ! ಯುವ ಬರಹಗಾರರನ್ನು ಕೇಳಿದರೆ ಯಾವುದೋ ವಿದೇಶೀ,ಪರದೇಶೀ ಕವಿಗಳನ್ನು ಹೆಸರಿಸಿ ಉದ್ದುದ್ದ ಅಡ್ಡಡ್ಡ ಕೊರೆಯುತ್ತಾರೆ ಬಿಟ್ಟರೆ ಬಹುತೇಕರಿಗೆ ನಮ್ಮ ಕಾಳಿದಾಸನ ಕೃತಿಗಳ ಒಡನಾಟವಿಲ್ಲ, ಚಾಣಕ್ಯನ ಅರ್ಥಶಾಸ್ತ್ರದ ಸಾಂಗತ್ಯವಿಲ್ಲ, ಬಾಣ, ಭವಭೂತಿ, ಪಾಣಿನಿ, ವರಾಹಮಿಹಿರ, ಭಾಸ್ಕರ, ಆರವಿ ಯಾರದೂ ಹಿಡಿಸುವುದಿಲ್ಲ!-ಯಾಕೆಂದರೆ ಅರ್ಥವಾಗುತ್ತಿಲ್ಲ, ಅರ್ಥಗ್ರಹಿಸಿದವರನ್ನು ಕೇಳುವ ಮನಸ್ಸಿಲ್ಲ. ದೀಪದ ಚಿತ್ರಕ್ಕೂ ಉರಿಯುವ ದೀಪಕ್ಕೂ ಇರುವ ಸಹಜ ವ್ಯತ್ಯಾಸದ ಪರಿಕಲ್ಪನೆಯಿಲ್ಲ. ಪರದೇಶಗಳ ಪ್ರಲೋಭನೆಯಲ್ಲೇ-ಎಲ್ಲಾ, ಕೇಳುತ್ತಾರೆ ’ಅಲ್ಲಿ ಏನುಂಟು ಏನಿಲ್ಲ?’! ವಿದೇಶೀ ಕವಿ-ಸಾಹಿತಿಗಳನ್ನು ತಾನೂ ಓದಿದ್ದೇನೆ ಎಂಬುದನ್ನು ಕೊಚ್ಚಿಕೊಳ್ಳುವ-ಆ ಮೂಲಕ ’ವಿಶಾಲ ಓದುಗ’ ಎಂಬ ಬಿರುದನ್ನು ಪಡೆಯುವ ಹುಮ್ಮಸ್ಸು ನಮ್ಮ ಪ್ರಾಚೀನ ಕವಿ-ಸಾಹಿತಿಗಳನ್ನು ಮರೆಮಾಚಿಬಿಡುತ್ತದೆ. ಸಂಸ್ಕೃತಭಾಷೆ ಮತ್ತು ಅದರಲ್ಲಿನ ಕವಿ-ಕಾವ್ಯ-ಸಾಹಿತ್ಯಗಳನ್ನು ನಾವು ಬ್ರಾಹ್ಮಣೀಕರಿಸಿಬಿಟ್ಟಿದ್ದೇವೆ! ಅದು ಬ್ರಾಹ್ಮಣರದ್ದು ಎಂದು ಸೀಲು ಹೊಡೆದು ತೆಗೆಯಲಾರದಂತೇ ಮುಚ್ಚಳ ಜಡಿದುಬಿಟ್ಟಿದ್ದೇವೆ; ಕಂಡಲ್ಲಿ ಹೂಂಕರಿಸುತ್ತೇವೆ, ಧಿಕ್ಕರಿಸುತ್ತೇವೆ. ಆದರೆ ಒಮ್ಮೆ ಅಂಥಾ ಕೃತಿಗಳ ಬಗ್ಗೆ ಕಿಂಚಿತ್ತಾದರೂ ತಿಳಿದುಕೊಂಡರೆ ನಾವೇರ್ನು ಈ ಜಗತ್ತಿನಲ್ಲಿ ಎಂಬುದನ್ನು ಅರಿಯಲು ಅದು ಸಹಕರಿಸುತ್ತದೆ. ಈ ಜನಸಾಗರದ ಕಿನಾರೆಯಲ್ಲಿ ಕುಳಿತು ನಮ್ಮನ್ನು ನಾವು ಮತ್ತೊಮ್ಮೆ ಯಾರು?-ಎಂದು ಪ್ರಶ್ನಿಸಿಕೊಳ್ಳುವುದಕ್ಕೆ ಅದು ಅನುಕೂಲ ಕಲ್ಪಿಸುತ್ತದೆ.

ಆಗೊಮ್ಮೆ ಈಗೊಮ್ಮೆ ನಮಗೆ ಕೆಲವು ವಿಶೇಷ ಘಟನೆಗಳು ಕಾಣುತ್ತವೆ. ೧೯ನೇ ಶತಮಾನದ ಅಂತ್ಯದ ಮತ್ತು ೨೦ನೇ ಶತಮಾನದ ಆದಿಯಲ್ಲಿ ಜೀವಿಸಿದ್ದ ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ, ಸಮಾಜಕ್ಕೆ ಹಲವಾರು ವಿಶಿಷ್ಟ ಕೊಡುಗೆಗಳನ್ನು ಕರುಣಿಸಿದ ವಿಶ್ವೇಶ್ವರಯ್ಯ, ಕಾವ್ಯವನ್ನೇ ಉಸಿರಾಗಿ ಬದುಕಿ ಅದರಲ್ಲೇ ಸರಸವಾಡಿದ ಮುದ್ದಣ, ಸಿಗುವುದೆಲ್ಲವನ್ನೂ ತ್ಯಜಿಸಿ ತ್ಯಾಗಿಯಾಗಿ-ಯೋಗಿಯಾಗಿ ಬದುಕಿದ ಡಿವಿಜಿ, ರಾಮಾಯಣ ದರ್ಶನವನ್ನು ತನ್ನದೇ ವ್ಯಾಖ್ಯಾನದಲ್ಲಿ ಬರೆದ ಕುವೆಂಪು, ಮಕ್ಕಳ ಅವಸಾನಗಳನ್ನು ಕಾಣುತ್ತಲೇ ನಾಕುತಂತಿಯನ್ನು ಮೀಟಿದ-ಗಂಗಾವತರಣವನ್ನು ತೋರಿಸಿದ ಬೇಂದ್ರೆ, ಬಡತನದಲ್ಲೂ ಸುಖದಾಂಪತ್ಯದ ಸೊಬಗನ್ನು ಮಲ್ಲಿಗೆಯಾಗಿ ಪೋಣಿಸಿದ ನರಸಿಂಹಸ್ವಾಮಿ ಇವರೆಲ್ಲಾ ನಮ್ಮ ನಡುವಿನ ಆಶ್ಚರ್ಯವಾಗುತ್ತಾರೆ! ಅವತಾರಗಳಂತೇ ಕಾಣುತ್ತಾರೆ! ಕುವೆಂಪು, ವಿಶೇಶ್ವರಯ್ಯನವರವನ್ನುಳಿದು [ವಿಶ್ವೇಶ್ವರಯ್ಯನವರಿಗೂ ರಾಜಾಶ್ರಯ ಸಿಗುವ ಮೊದಲು ಕೂಳಿಗೂ ಕಷ್ಟವಿತ್ತು!] ಇನ್ನುಳಿದ ಎಲ್ಲರ ಮನೆಗಳಲ್ಲೂ ಬಡತನ ಹೇಗಿತ್ತು ಎಂಬುದರ ಬಗ್ಗೆ ಮತ್ತೆ ಹೊಸ ವ್ಯಾಖ್ಯಾನ ಬೇಡ. ಅವರೆಲ್ಲಾ ಆ ಯಾ ಕೆಲಸಗಳಿಗಾಗಿಯೇ ಜನಿಸಿದರು, ಬಾಳಿದರು. ರಾಮಾನುಜನ್ ಜೀವಿಸಿದ್ದು ೩೨ ವರ್ಷ, ಮುದ್ದಣ ಬದುಕಿದ್ದು ೩೧ ವರ್ಷ, ಆದಿಶಂಕರರು ಬದುಕಿದ್ದು ೩೨ ವರ್ಷ, ಆದರೆ ಸಾಮಾನ್ಯನೊಬ್ಬನ ಜೀವಿತದಲ್ಲಿ ಸಾಧಿಸಲಾಗದ್ದನ್ನು ಅವರು ಸಾಧಿಸಿ ತೋರಿಸಿದರು. ಇವರ್ಯಾರಿಗೂ ಅವರ ಉಪಜೀವನ, ಜೀವಿತಕ್ಕೆ ಬಳಸುವ ವಸ್ತುಗಳು-ಉಪಕರಣಗಳು, ವಾಹನಗಳು, ಅನುಕೂಲತೆಗಳು, ಸಂವಹನ ಮಾಧ್ಯಮದ ಸವಾಲುಗಳು ಸಾಧನೆಗೆ ಅಡ್ಡಿಬರಲಿಲ್ಲ; ಯಾರೂ ಪೂರ್ವಾಗ್ರಹ ಪೀಡಿತರಾಗಿರಲಿಲ್ಲ. 

ಜಟಿಲೋ ಮುಂಡೀ ಲುಂಛಿತಕೇಶಃ
ಕಾಷಾಯಾಂಬರಬಹುಕೃತವೇಷಃ|
ಪಶ್ಯನ್ನಪಿ ಚ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||

ಹರಿ-ಹರ ಭೇದವೆಣಿಸದ ಭಗವತ್ಪಾದ ಶಂಕರರದ್ದು

ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||

ಎಂಬ ಭಾವ. ಹಾಗಾಗಿ ಅವರು ಜೀವನದ ಕೊನೆಯಲ್ಲಿ ಭಜಗೋವಿಂದಮ್ ಎನ್ನಿ ಎನಲಿಲ್ಲ ಎಂಬುದು, ಹಾಗೆ ವಾದಿಸುವ ಮೂಢರಿಗೆ ನನ್ನ ಉತ್ತರವಾಗಿದೆ.  ’ಉದರನಿಮ್ಮಿತ್ತಂ ಬಹುಕೃತವೇಷಃ’ ಎಂದು ಅದೆಷ್ಟೋ ಸಾರಿ ಬಳಸುತ್ತೇವೆ-ಅದು ಎಲ್ಲಿಂದ ಬಂತೆಂಬುದು ನಮಗೆ ಗೊತ್ತಿರುವುದಿಲ್ಲ; ಯಾಕೆಂದರೆ ’ಭಜಗೋವಿಂದಮ್’ ಸ್ತೋತ್ರವನ್ನು ನಾವು ಪೂರ್ಣವಾಗಿ ಪಠಿಸಲಿಲ್ಲ; ಅದು ಯಾರೋ ಸಂನ್ಯಾಸಿ ಹೇಳಿದ್ದೆಂಬ ಅಸಡ್ಡೆಯಿಂದ ನಮಗೆ ಬೇಕಾಗಿಯೂ ಇಲ್ಲ! ಅಲ್ಲವೇ?  ವೈದ್ಯ, ತಂತ್ರಜ್ಞ, ವಿಜ್ಞಾನಿ, ಬರಹಗಾರ, ರೈತ, ರಾಜಕಾರಣಿ ಯಾವುದೇ ವೇಷವನ್ನು ತೊಟ್ಟರೂ ಎಲ್ಲವೂ ನಮ್ಮ ಉದರಂಭರಣೆಯ ಮೂಲೋದ್ದೇಶದಿಂದಲೇ ಆಗಿವೆ. ಹಸಿದವನಿಗೆ ಹೊಟ್ಟೆ ತುಂಬಿಸುವ ಚಿಂತೆ, ಹೊಟ್ಟೆ ತುಂಬಿದಮೇಲೆ ಹಾಯಾಗಿ ನಿದ್ರಿಸುವ ಚಿಂತೆ, ಉಂಡು ಹಾಯಾಗಿ ನಿದ್ರಿಸುವಷ್ಟರಮಟ್ಟಿಗೆ ಅನುಕೂಲವುಳ್ಳ ವ್ಯಕ್ತಿಗೆ ಮೈಥುನದ ಚಿಂತೆ,  ಹೀಗೇ ಈ ಸಂಸಾರ ’ಸಂನ್ಯಾಸಿ ಸಾಕಿದ ಬೆಕ್ಕಿನ ಕಥೆ’ಯಂತಾಗುತ್ತದೆ!

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಂ |
ವೃದ್ಧೋ ಯಾತಿ ಗ್ರಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಂ ||

ಎಲ್ಲವೂ ಸರಿಯಿದ್ದರೆ ಕೊಳ್ಳುಬಾಕರಾಗುತ್ತೇವೆ. ಜೀವನಕ್ಕೆ ಬೇಡವಾದ ಕ್ರೆಡಿಟ್ ಕಾರ್ಡ್ ಮೊರೆಹೋಗುತ್ತೇವೆ, ಸಾಲದಲ್ಲಿ ಕಾರು ಕೊಳ್ಳುತ್ತೇವೆ, ಸಾಲಮಾಡಿ ಇನ್ಯಾರೂ ಕಟ್ಟದ ಬಂಗಲೆ ಕಟ್ಟುತ್ತೇವೆ! ಬೇರಾರಲ್ಲೂ ಇರದ ದಿರಿಸುಗಳೇ ಬೇಕು, ವಿದೇಶೀ ಪರಿಮಳದ್ರವ್ಯಗಳೇ ಬೇಕು. ಹೀಗೇ ಅತಿಯಾಶೆ ನಮ್ಮನ್ನು ದೋಚಿಬಿಡುತ್ತದೆ; ಎಲ್ಲದರ ಅರಿವಾಗುವಾಗ ಬೆಳಗಾಗಿಹೋಗಿರುತ್ತದೆ, ಆದರೆ ನಮ್ಮ ಮನಸ್ಸಿಗೆ ಮಾತ್ರ ಅಂಧಕಾರ ಹೆಚ್ಚುತ್ತಲೇ  ಹೋಗುತ್ತದೆ! 

ನೀರವದ ನಡುರಾತ್ರಿಯಲ್ಲಿ ರಾಜಕುಮಾರ ಸಿದ್ಧಾರ್ಥ ಹಯವನ್ನಡರಿ ಹೊರಟಿದ್ದ! ಕುದುರೆಗೆ ಅಪರಾತ್ರಿಯ ಕತ್ತಲ ಹಾದಿಯಲ್ಲಿ ಅದೆಲ್ಲಿಗೋ ತೆರಳುವ ಯೋಚನೆ, ಯೋಜನೆ ವಿಚಿತ್ರವಾಗಿ ಕಂಡಿತು. ಆದರೆ ಸಿದ್ಧಾರ್ಥನ ಮನಸ್ಸು ದೃಢವಾಗಿತ್ತು, ಅಚಲವಾಗಿತ್ತು. ಲೋಕಪರ್ಯಟನೆಯನ್ನು ಮಾಡಿದ್ದ ಆತ ಪ್ರಜೆಗಳಲ್ಲಿನ ಸುಖದುಃಖಗಳ ಸಂಭವನೀಯತೆಯನ್ನು ಮನದಲ್ಲೇ ಕೂಡಿ-ಕಳೆದು, ಎಣಿಸಿ-ಗುಣಿಸಿ ಜೀವನದಲ್ಲಿ ಸುಖಕ್ಕಿಂತ ಹೆಚ್ಚಿನ ಭಾಗ ದುಃಖವೇ ಎಂಬುದನ್ನು ಮನಗಂಡಿದ್ದ. ಸುಖವನ್ನೀವ ಈ ಜಾಗದ ಎಲ್ಲಾ ಭೋಗವಸ್ತುಗಳೂ ಪರೋಕ್ಷ ದುಃಖವನ್ನೇ ಕೊಡುವಂಥವು ಎಂಬುದು ಅವನ ಮನಸ್ಸಿಗೆ ನಿಲುಕಿಬಿಟ್ಟಿತ್ತು. ಜನರ ಕೊನೆಮೊದಲಿಲ್ಲದ ದುಃಖಕ್ಕೆ ಕಾರಣವನ್ನು ಕಾಣಬಯಸಿದ ಸಿದ್ಧಾರ್ಥ ಪರಚಿಂತನೆಯಲ್ಲಿ ತೊಡಗಿಕೊಂಡಿದ್ದ, ಈ ರಾಜ್ಯ-ಈ ಸತಿಸುತರು-ಈ ಧನಕನಕ ಭೋಗಭಾಗ್ಯಗಳೆಲ್ಲಾ ನಶ್ವರವೆನಿಸಿದವು. ಪ್ರೀತಿಯ ಕುದುರೆಯನ್ನಡರಿ ಬಹುದೂರದ ಕಾಡಿಗೆ ಯುವರಾಜ ತೆರಳುವ ಸಂದರ್ಭದಲ್ಲಿ  ಕುದುರೆಗೆ ತಿಳಿಹೇಳಿದ ಬಗೆಯನ್ನು ಕವಿ ಹೀಗೆ ಬಣ್ಣಿಸಿದ್ದಾರೆ :

ತಿರುತಿರುಗಿ ನನ್ನ ಮೊಗ ನೋಡದಿರು ಬೇಡದಿರು
ಕೊರಗದಿರು ಮರುಗದಿರು ನನ್ನ ಸಲುವಾಗಿ
ಅರಿವಿನಾ ಮಾರ್ಗವಿದು ಪರದ ಸನ್ಮಾರ್ಗವಿದು
ಧರೆಯ ದುಃಖದ ಭಾರವಿಳಿಪ ಮಾರ್ಗವಿದು

ನಡೆ ಹಯವೇ ನಡೆ ಮುಂದಕೀಗ
ಸಾರವಿಲ್ಲದ ಸುತಸತಿ ವ್ಯಾಮೋಹದಿಂ ದೂರ
ಸಾರಿಹೋಗುವ ನಾವು ಮುಂದಕೀಗ

ಬೋಧೀವೃಕ್ಷದ ಕೆಳಗೆ ಆಸೀನನಾದ ಸಿದ್ಧಾರ್ಥ, ನಮಸ್ಕರಿಸಿ ಕುದುರೆಯನ್ನು ಮರಳಿ ರಾಜಧಾನಿಗೆ ಕಳುಹಿಸಿದ. ಬಹುಕಾಲದ ತಪಸ್ಸಿನ ಬಳಿಕ ಒಂದುದಿನ ಜ್ಞಾನೋದಯವಾಯಿತು. ’ಆಸೆಯೇ ದುಃಖಕ್ಕೆ ಮೂಲ’ ಎಂಬ ಕಾರಣ ಅವನ ದೃಷ್ಟಿಗೆ ಗೋಚರಿಸಿತು. ಆಸೆಯನ್ನು ತೊಡೆದುಹಾಕಿ ನಿರುಮ್ಮಳರಾಗಲು ಜನರಿಗೆ ಕರೆ ನೀಡಿದ ಸಿದ್ಧಾರ್ಥ, ಗೌತಮ ಬುದ್ಧನೆನಿಸಿದ. ಇದೇ ಆಶಯವನ್ನು ಸನಾತನ ಧರ್ಮಸೂತ್ರ ಆ ಮೊದಲೇ ಪರೋಕ್ಷ ಹೇಳಿತ್ತು. ತನ್ನ ಜೀವಿತಕ್ಕೆ ಅತ್ಯಾವಶ್ಯಕವಾದ ವಸ್ತು-ಒಡವೆಗಳನ್ನು ಬಿಟ್ಟು ಮಿಕ್ಕರೀತಿಯಲ್ಲಿ ಧನ-ಕನಕ-ಆಸ್ತಿ-ವಸ್ತುಗಳ ಸಂಚಯನ ಸರಿಯಲ್ಲವೆಂದು ಅದು ಸಾರಿದೆ. ’ಸರಳ ಜೀವನ ಮತ್ತು ಉನ್ನತ  ಚಿಂತನ’ಇದು ಸನಾತನ ಜೀವನಧರ್ಮದಲ್ಲಿ ನಡೆದುಬಂದ ಪರಂಪರೆ-ಇದನ್ನು ಗಾಂಧೀಜಿ ಕೂಡ ಅನುಸರಿಸಿದರು. ವಿದೇಶಕ್ಕೆ ಸೂಟು ಬೂಟಿನಲ್ಲಿ ತೆರಳಿದ್ದ ಗಾಂಧೀಜಿ ಅರಿವಿನ ಮೆಟ್ಟಿಲನ್ನು ಏರುತ್ತಾ ಹೋದಂತೇ ಅವುಗಳನ್ನೆಲ್ಲಾ ಕಿತ್ತೆಸೆದು ಪಂಚೆಗಳೆರಡರಲ್ಲೇ ದೇಶದುದ್ದಗಲ ಸಂಚರಿಸುತ್ತಿದ್ದರು. ಮಾಯಾಲೋಕದ ಮಾಯೆಯ ಮೋಡಿಗೆ ಒಳಗಾಗದೇ ಬದುಕುವ ಸರಳ ಜೀವಿತವನ್ನು ಬದುಕುತ್ತಾ ಉಳಿದವರಿಗೆ ತೋರಿಸಿದರು. 

ತಿರುಕನೊಬ್ಬ ಕನಸುಕಂಡ, ಕನಸಿನಲ್ಲಿ ಆ ರಾಜ್ಯದ ರಾಜ  ಸತ್ತುಹೋಗಿದ್ದ, ವಾರಸುದಾರರಿಲ್ಲದ ಕಾರಣ ಅಮಾತ್ಯರು ಪಟ್ಟದಾನೆಯ ಸೊಂಡಿಲಲ್ಲಿ ಹಾರವನ್ನು ಕೊಟ್ಟು, ನೂತನ ರಾಜನನ್ನು ಆಯ್ಕೆಮಾಡುವಂತೇ ವಿನಂತಿಸುತ್ತಾರೆ. ಗಜ-ಗಾಂಭೀರ್ಯದಲ್ಲಿ ಮುಂದರಿದು ಬಂದು ಹಾರಹಾಕಿ ತಾನೇ ರಾಜನಾದ ಹಾಗೇ ಅನ್ನಿಸುತ್ತದೆ. ಆಹಹಾ ಎಂಥಾ ಭಾಗ್ಯ! ಯಾರುಗುಂಟು ಯಾರಿಗಿಲ್ಲ. ತುಸು ನಿಮಿಷ ತಡೆದು ಸಿಟ್ಟಿಗೆದ್ದ ರಾಜನ ಸೈನಿಕರು ಮನೆಗೆ ಮುತ್ತಿಗೆ ಹಾಕಿದಹಾಗೇ ಭಾಸವಾಗಿ ಎಚ್ಚರವಾಗುತ್ತದೆ-ತಿರುಕ ಮಗ್ಗಲು ಬದಲಾಯಿಸಿ ಹೆದರಿ ಎದ್ದು ಕುಳಿತುನೋಡುತ್ತಾನೆ-ನಡೆದಿದ್ದು ಕನಸು, ನಿಜವಲ್ಲ!  ಆದರೆ ನಿಜವೇ ಎನ್ನುವ ಭಾವನೆಮಾತ್ರ ಅದಷ್ಟು ಕಾಲ ಸುಳ್ಳಾಗಿರಲಿಲ್ಲ. ವೇದಿಕೆಯಲ್ಲಿ ಸತ್ತಂತೇ ಮಲಗಿದ ವ್ಯಕ್ತಿಯನ್ನು ಮೇಲೆತ್ತಲು ಯಾವ ಉಪಕರಣದ ಸಹಾಯವನ್ನೂ ಪಡೆಯದೇ ಐಂದ್ರಜಾಲಿಕ ಮೇಲೆತ್ತುತ್ತಾನೆ, ವೇದಿಕೆಯನ್ನೇ ಸುಂದರ ಪುಷ್ಪೋದ್ಯಾನವನ್ನಾಗಿ ಮಾಡುತ್ತಾನೆ. ಇಂದ್ರಜಾಲ ಪ್ರದರ್ಶನ ಮುಗಿಯುವವರೆಗೂ ಅದು ಸುಳ್ಳಲ್ಲ, ಆಚೆ ಎದ್ದು ಬಂದಮೇಲೆ ಅದು ನಿಜವಲ್ಲ! ಸಾವಿರಾರು ರೂಪಾಯಿಗಳ ನೋಟುಗಳನ್ನು ಚಕಚಕನೇ ಸೃಜಿಸುವ ಜಾದೂಗಾರನಿಗೆ ಮನೆಯಲ್ಲಿ ಬಡತನ!! ಹಾಗಾದರೆ ನಾವು ನೋಡಿದ್ದು ಸುಳ್ಳೇ? ಸುಳ್ಳಲ್ಲ, ಅದು ನಿಜವೇ. ಆದರೆ ಅದೊಂದು ಭ್ರಮಾಲೋಕ; ಅದರಂತೇ ಈ ಲೋಕ! ಅದಕ್ಕೇ ಈ ಲೋಕ ಮಿಥ್ಯಾಲೋಕ; ಇದು ಇಂದ್ರಜಾಲ, ಮಹೇಂದ್ರನಾಡುವ ಮಹೇಂದ್ರಜಾಲ.

ಕಸ್ತ್ವಂ ಕೋಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ  ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ ||


ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು|ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಯಾರ ಮಗನೇ ಆದರೂ ಯಾರೇ ಜೊತೆಯಲ್ಲಿದ್ದರೂ ವಿಧಿ ಬರಹವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭಿಮನ್ಯು ಅಮ್ಮನ ಉದರಲ್ಲಿದ್ದಾಗ ಚಕ್ರವ್ಯೂಹವನ್ನು ಭೇದಿಸಿ ಒಳನುಗ್ಗುವವರೆಗಿನ ಕಥೆ ಕೇಳಿದ್ದ, ನಂತರದ ತಂತ್ರಗಾರಿಕೆ ಅವನಿಗೆ ಗೊತ್ತಿರಲಿಲ್ಲ. ಈ ಪ್ರಪಂಚ ಕಂಡ ಅತೀ ಎಳವೆಯ ಮಹಾನ್ ಪರಾಕ್ರಮಿ ಎಂಬುದರಲ್ಲಿ ಎರಡುಮಾತಿಲ್ಲ, ಅರ್ಜುನನ ಮಗನೂ ಹೌದು, ಅಜ್ಜ ದೇವೇಂದ್ರನ ಮೊಮ್ಮಗನೂ ಹೌದು, ಹತ್ತಿರದಲ್ಲೇ ಮಾವನೆನಿಸಿಕೊಂಡ ಕೃಷ್ಣ ಕೂಡ ಇದ್ದಾನೆ. ಆದರೂ ಅಭಿಮನ್ಯು ಸತ್ತನೇಕೆ ಎಂಬುದು ನಮ್ಮ ಸರ್ವಜ್ಞ ಕವಿಯ ಪ್ರಶ್ನೆ. ಯಾರೇ ಇದ್ದರೂ ಆ ಯಾರೋ ಯಾರೂ ಅಲ್ಲ! ಅವರೆಲ್ಲಾ ನಿಮಿತ್ತಮಾತ್ರ. ನಾಟಕದ ಪಾತ್ರಗಳಂತೇ, ಯಕ್ಷಗಾನದ ವೇಷಗಳಂತೇ ಆ ಯಾ ಕಾಲಕ್ಕೆ ಹಾಗೆ ಗೋಚರವಷ್ಟೇ. ಯಾವುದು ಸತ್ಯ ಎಂದರೆ ಈ ಜಗದ ಆಚೆ ಇರುವ ಪರವೇ ನಿಜವಾದ ಸತ್ಯ.  ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಬ್ರಹ್ಮಾಂಡದ ವರ್ಣನೆ ಬರುತ್ತದೆ: ದೇವಿಯನ್ನು ’ಅನೇಕ ಕೋಟಿ ಬ್ರಹ್ಮಾಂಡ ಜನನಿ’ ಮತ್ತು ಲಲಿತಾ ತ್ರಿಶತಿಯಲ್ಲಿ ’ಲಕ್ಷ ಕೋಟ್ಯಂಡ ನಾಯಿಕಾ’ಎಂದೂ ವರ್ಣಿಸಲಾಗಿದೆ. ಕೇವಲ ನಾವಿರುವ ಈ ಬ್ರಹ್ಮಾಂಡವನ್ನು ತೆಗೆದುಕೊಂಡರೆ: ಉದ್ದ ಒಂದು ಲಕ್ಷ ಜ್ಯೋತಿರ್ವರ್ಷಗಳು ಅರ್ಥಾತ್ ೬೦,೦೦೦,೦೦೦,೦೦೦ ಕೋಟಿ ಮೈಲುಗಳು. ನಮ್ಮ ಆಯುಷ್ಯ ೧೦೦ವರ್ಷವಿದ್ದು, ಗಂಟೆಗೆ ೧೦೦೦ಮೈಲುಗಳ ವೇಗದಲ್ಲಿ ದಿನ-ವಾರ-ತಿಂಗಳು-ವರ್ಷ-ಜನ್ಮವಿಡೀ ಪಯಣಿಸುತ್ತಲೇ ಹೋದರೆ, ಗುರಿಯನ್ನು ತಲ್ಪುವುದಕ್ಕೆ ನಮಗೆ ಅಂತಹ ೭೦ ಕೋಟಿ ಜನ್ಮಗಳು ಬೇಕು!!! ಈ ಬ್ರಹ್ಮಾಂಡದ ಎಡಪಾರ್ಶ್ವದಲ್ಲಿ, ಬ್ರಹ್ಮಾಂಡದ ಕೇಂದ್ರಬಿಂದುವಿನಿಂದ ೨೦,೦೦೦,೦೦೦,೦೦೦ ಕೋಟಿ ಮೈಲುಗಳ ದೂರದಲ್ಲಿ ಸೂಜಿಯ ಮೊನೆಗಿಂತಾ ಚಿಕ್ಕದಾಗಿ ಕಾಣುವುದೇ ನಮ್ಮ ಸೌರಮಂಡಲ!!ಈ ಸೌರಮಂಡಲದ ವ್ಯಾಸ ೭೩೩ ಕೋಟಿ ಮೈಲುಗಳು. ನಮ್ಮ ಬ್ರಹ್ಮಾಂಡದ ಎಂಟುಕೋಟಿ ಭಾಗಗಳಲ್ಲಿ ಇದು ಒಂದು ಭಾಗಮಾತ್ರ! ವಿಸ್ತಾರದ ಮರುಭೂಮಿಯ ಅತಿ ಚಿಕ್ಕ ಮರಳುಕಣದಂತೇ ಎನ್ನಬಹುದಾದ ಇದರಲ್ಲಿ, ನಮ್ಮ ಪೃಥ್ವಿಯೂ ನವಗ್ರಹಗಳೂ ಅಡಗಿವೆ. ನಮ್ಮ ಪೃಥ್ವಿಯ ವ್ಯಾಸ ೭೯೨೬ ಮೈಲುಗಳು, ಅಂದರೆ ಮರಳಿನ ಕಣವನ್ನು ಮತ್ತಷ್ಟು ವಿಭಜಿಸಿ ೧೦ ಲಕ್ಷ ಭಾಗಮಾಡಿದರೆ ಆಗ ಸಿಗುವ ಒಂದು ಭಾಗ ಮಾತ್ರ ನಮ್ಮ ಪೃಥ್ವಿ!!

ನಮ್ಮ ಬ್ರಹ್ಮಾಂಡದ ಅಗಲ ಅದರ ಉದ್ದದ ಒಂಭತ್ತನೇ ಒಂದು ಭಾಗ. ಲಟ್ಟಣಿಗೆಯ ಆಕಾರದಲ್ಲಿರುವ ನಮ್ಮ ಬ್ರಹ್ಮಾಂಡದ ಉಬ್ಬು ಹೊಟ್ಟೆಯಂತಿರುವ ಭಾಗದಲ್ಲಿ ಅಜಮಾಸು ೫,೦೦೦ ಕೋಟಿ ನಕ್ಷತ್ರಗಳಿವೆಯೆಂಬುದು ವಿಜ್ಞಾನಿಗಳ ಒಂದು ಅಂದಾಜು. ಬ್ರಹ್ಮಾಂಡದ ಒಳಭಾಗದಲ್ಲಿ ಇರುವ ಒಟ್ಟೂ ನಕ್ಷತ್ರಗಳ ಸಂಖ್ಯೆ ೧೦,೦೦೦ ಕೋಟಿ. ನಕ್ಷತ್ರಗಳ ನಡುವಿನ ಜಾಗದಲ್ಲಿ, ಆ ಅವಕಾಶದಲ್ಲಿ ಒಂದು ಬಗೆಯ ಅನಿಲ ತುಂಬಿಕೊಂಡಿದೆ. ಈ ಬ್ರಹ್ಮಾಂಡದ ಒಳಭಾಗದಲ್ಲಿ ನಮ್ಮ ಸೌರಮಂಡಲವನ್ನೇ ಹೋಲುವ ಸಹಸ್ರ ಲಕ್ಷ ಸೌರಮಂಡಲಗಳಿವೆ ಎಂಬುದು ಅನೇಕ ವಿಜ್ಞಾನಿಗಳ ಊಹೆ. ಆದರೆ ಅವು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ! ಬ್ರಹ್ಮಾಂಡದ ಜನನ ಸರಿಸುಮಾರು ೧೫೦೦ ಕೋಟಿವರ್ಷಗಳ ಹಿಂದೆ ಆಗಿರಬಹುದೆಂಬುದು ಒಂದು ಅಂಬೋಣ. ಜನನಕ್ಕೆ ಕಾರಣ ಪ್ರಳಯದಂತಹ ಮಹಾಸ್ಫೋಟ! [ಬಿಗ್ ಬ್ಯಾಂಗ್]ಎಂದು ನಂಬಲಾಗಿದೆ. ಸ್ಫೋಟಕ್ಕೆ ಕಾರಣಗಳು ತಿಳಿದುಬಂದಿಲ್ಲ! ಹಬ್ಬಲ್, ಐನ್ ಸ್ಟೀನ್ ಮುಂತಾದ ಕೆಲ ವಿಜ್ಞಾನಿಗಳು ಕೊಟ್ಟ ಕಾರಣಗಳು ಹೀಗಿವೆ: ಮಹಾಸ್ಫೋಟಕ್ಕೆ ಚಣಕಾಲ ಮುಂಚೆ ವಿಶ್ವವು ಅತ್ಯುಚ್ಚ ತಾಪಮಾನದಲ್ಲಿತ್ತು. ಗಾತ್ರ ಶೂನ್ಯವಾಗಿದ್ದು ಒತ್ತಡ ಅತ್ಯಧಿಕಗೊಂಡು ಸ್ಫೋಟಿಸಿತು. ಸ್ಫೋಟದ ನಂತರ ವಿಶ್ವವು ಹಿಗ್ಗಿ ತಣ್ಣಗಾಯ್ತು! ವಿಕಿರಣವೇ ಪ್ರಧಾನವಾಗಿದ್ದ ಆ ಸಮಯದಲ್ಲಿ ಕಾಲಾನಂತರದಲ್ಲಿ ಉಪ-ಪರಮಾಣು ಕಣಗಳಿಂದ ಹಗುರವಾದ ಜಲಜನಕ, ಹೀಲಿಯಂ ಮೊದಲಾದ ಮೂಲಧಾತುಗಳು ಅಸ್ತಿತ್ವಕ್ಕೆ ಬಂದವು. ವಿಶ್ವದ ವಯಸ್ಸು ಹೆಚ್ಚಿದಂತೇ ತಾಪಮಾನ ಕಮ್ಮಿಯಾಗುತ್ತಾ ಅದರಲ್ಲಿ ಅಸಂಖ್ಯ ಬ್ರಹ್ಮಾಂಡಗಳು ಹೆಪ್ಪುಗಟ್ಟಿ ಘನಾಕಾರ ಪಡೆಯಲು ಆರಂಭಿಸಿದವು.

ಈ ಸಂದಿನಲ್ಲೇ ನಿಂತು ಆಮೂಲಾಗ್ರ ಚಿಂತನ-ಮಂಥನ ನಡೆಸಿದಾಗ,

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ || 

ಎಂಬ ಶ್ಲೋಕದ ಅರ್ಥವ್ಯಾಪ್ತಿಗೆ ಹೊಸ ಹೊಳಹು ಲಭಿಸುತ್ತದೆ. ಒಂದು ಪೂರ್ಣವಿತ್ತು-ಅದರಿಂದ ವಿಭಜನೆಗೊಂಡ ತುಣುಕುಗಳು ಹಲವು ಅಪೂರ್ಣವಾದರೂ ಮೂಲಮಾತ್ರ ಪೂರ್ಣವೇ, ಪರಿಪೂರ್ಣವೇ! ಮಣ್ಣಿನಿಂದ ಮಡಕೆ-ಕುಡಿಕೆ-ಬೋಗುಣಿ-ಮೊಗೆ-ಹಣತೆ-ತಾಟು ಮೊದಲಾದ ಪಾತ್ರೆಗಳನ್ನೋ ಅಲಂಕಾರಿಕ ವಸ್ತುಗಳನ್ನೋ ಸಿದ್ಧಪಡಿಸಲಾಗುತ್ತದೆ, ಆದರೆ ಅವುಗಳಲ್ಲೆಲ್ಲಾ ಇರುವುದು ಮಣ್ಣೇ ಮತ್ತು ಅವು ಒಡೆದು ಮಣ್ಣೊಳಗೆ ಮತ್ತೆ ವಿಲೀನವಾದಾಗ ಇರುವುದು ಮಣ್ಣೇ ಸರಿ. ಮಿಸುನಿಗೆ ಕೆಲವು ಲೋಹಗಳನ್ನು ಸೇರಿಸಿ ಕಾಯಿಸಿ ಎರಕಹೊಯ್ದು ಪುಟಕೊಟ್ಟಾಗ ಬಂಗಾರದ ವಿವಿಧ ಆಕಾರದ ಆಭರಣಗಳು ತಯಾರಾಗುತ್ತವೆ. ಬಳಸಿ ನೋಡುತ್ತ ಹಳಸಿ ಬೇಸರಗೊಂಡ ಆಭರಣಗಳನ್ನು ಕರಗಿಸಿದಾಗ ಬಂಗಾರವನ್ನೇ ಮರಳಿ ಪಡೆಯಬಹುದಾಗಿದೆ. ನೀರಿನ ಆಗರದಲ್ಲಿ ನೀರು ಪೂರ್ಣವಾಗಿದೆ, ತುಂಬಿಕೊಂಡ ಪಾತ್ರೆಯಲ್ಲಿ ಆ ಯಾ ಪಾತ್ರೆಯ ಆಕಾರವಾಗಿ ಗೋಚರಿಸುವ ನೀರಿಗೆ ಸ್ಪಷ್ಟವಾದ ಸ್ವತಂತ್ರ ಆಕಾರವಿಲ್ಲ! ತುಂಬಿಕೊಂಡ ನೀರನ್ನು ಮತ್ತೆ ಅದೇ ಮೂಲದಲ್ಲಿ ಚೆಲ್ಲಿದರೆ ಅದು ಅಲ್ಲಿರುವ ನೀರಿನಲ್ಲಿ ಸೇರಿಹೋಗುತ್ತದೆಯೇ ಹೊರತು ತಾನು ಬೇರೇ ಎಂದು ತೋರ್ಪಡಿಸುವುದಿಲ್ಲ.

ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿಸಮರ್ಪಣೆ ಮಾಡಿ ಬದುಕಿರೊ 

ಎಂಬ ದಾಸರ ಹಾಡೂ ಕೂಡ ನೆನಪಾಗುತ್ತದೆ. ದಾಸರು ಭಗವಂತ ಕೊಟ್ಟ ವಸ್ತುಗಳನ್ನೂ ಧನ-ಕನಕ-ಧಾನ್ಯಾದಿಗಳನ್ನೂ ಹರಿಸೇವೆಗೆ ಸಮರ್ಪಿಸುವ ಕುರಿತು ಹೇಳುವುದಕ್ಕೆ ಮಾತ್ರ ಇದನ್ನು ಸೀಮಿತವಾಗಿಸಿದ್ದಾರೆ, ಆದರೆ ಅದನ್ನೇ ಆಳವಾಗಿ ನಿರಾಳವಾಗಿ ಯೋಚಿಸಿದರೆ ನಮ್ಮೊಳಗಿನ ’ನಾನು’ ವನ್ನು ನಮ್ಮ ಹೊರಗೆಲ್ಲಾ ಇರುವ ’ನಾನು’ವಿನಲ್ಲಿ ಚೆಲ್ಲಿದರೆ ಆಗ ದೊರೆವುದೇ ಮೋಕ್ಷ! ಚಿಂತಿಸುವುದು ಸುಲಭ ಎಸಗುವುದು ಕಷ್ಟವಾದ ಈ ಕಾರ್ಯವನ್ನು ನಾವು ಮಾಡಿದ್ದೇ ಆದರೆ ಇಂಥಾ ಬ್ರಹ್ಮಾಂಡದ ನಾಯಕನಲ್ಲಿ ಲೀನವಾಗಿ ಆನಂದಮಯಕೋಶವನ್ನು ಸೇರಿಬಿಡುತ್ತಿದ್ದೆವು-ಜರಾಮರಣ ಚಕ್ರದಿಂದ ಬಿಡುಗಡೆ ಪಡೆಯುತ್ತಿದ್ದೆವು! ಇಂತಹ ದೈವೀ ಚಿಂತನೆಯಿರುವೆಡೆಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಿಧಾನವಾಗಿ ಹಿಂಜರಿಯುತ್ತವೆ. ಆ ಹಿಂಜರಿಕೆಗೆ ಕಾರಣವೇನೆಂದರೆ ಇಡೀ ಪ್ರಪಂಚದ ತುಂಬ ನಮಗೆ ವೈರಿಗಳೇ ಇಲ್ಲದಂತೇ, ಇಡೀ ಈ ಬ್ರಹ್ಮಾಂಡವೇ ನಮ್ಮ ಮನೆಯಂತೇ ಭಾವನೆ ಒಡಮೂಡುವುದು. ಹಾಗೊಮ್ಮೆ ಅಂಥಾ ಭಾವನೆ ಬಂದಿದ್ದೇ ಆದರೆ ಐಹಿಕ ಮನೋವೈಕಲ್ಯಗಳು ದೂರವಾಗುತ್ತವೆ,ಜಗಳ-ದೊಂಬಿ-ಕೋಲಾಹಲ-ಕೊಲೆ-ಸುಲಿಗೆ-ದರೋಡೆ-ಹಿಂಸೆ-ದಗಾ-ಮೋಸ ಇತ್ಯಾದಿಯಾಗಿ ಎಲ್ಲಾ ಅನೀತಿಗಳಿಗೂ ಆಸ್ಪದ ಕಮ್ಮಿಯಾಗುತ್ತದೆ. ನಾವು ನಾವಾಗಿ, ನಮ್ಮ ನಿಜದ ನೆಲೆಯನ್ನು ಅರಿತು, ಹಿನ್ನೆಲೆಯನ್ನು ಅರಿತು, ಪ್ರಕೃತಿ ಸಹಜ ಸನಾತನ ಮಾನವ ಜೀವನದ ಲಕ್ಷಣಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನಮ್ಮನ್ನು ಕರೆದೊಯ್ಯುವ ದಾರಿ ದೀವಿಗೆಗಳಾದ ರಾಮಾಯಣ-ಮಹಾಭಾರತಗಳ ಮೂಲದಿಂದ ಹರಿದುಬಂದ ಜ್ಞಾನಗಂಗೆ ಹಲವು ಕವಿಗಳಿಗೆ ಸ್ಫೂರ್ತಿಯಾಯ್ತು, ಅಂತಹ ಅನರ್ಘ್ಯರತ್ನಗಳನ್ನು ತಮ್ಮದಾಗಿಸಿಕೊಂಡ ಮಹಾನುಭಾವರುಗಳು ಋಷಿಸದೃಶರಾದರು, ಋಷಿಸದೃಶರೇ ಕವಿಗಳಾಗಿ ಅನೇಕ ಕಾವ್ಯ-ಸಾಹಿತ್ಯಗಳನ್ನು ಬರೆದರು. ಅಂಥಾ ಸಂಗತ ಜ್ಞಾನವನ್ನು ಪಡೆದ ಅವರಲ್ಲಿ ಎಡಪಂಥೀಯರು ಜನಿಸಲಿಲ್ಲ ಯಾಕೆಂದರೆ ಹಿಮಾಲಯವನ್ನು ಕಂಡ ಮಧುಗಿರಿಯ ಬೆಟ್ಟಕ್ಕೋ ಹೊಂಗಲದ ಬಯಲಿಗೋ ತಮ್ಮ ಎತ್ತರದ ಮತ್ತು ಸಾಮರ್ಥ್ಯಗಳ ಪರಿಮಿತಿ ಅರಿವಿಗೆ ಬರುತ್ತದಲ್ಲವೇ?  ಪ್ರಾಚೀನ ಕವಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿಷಯಕವಾಗಿ ತಮ್ಮ ಮೇರುಸದೃಶ ಕೃತಿಗಳನ್ನು ಲೋಕಕ್ಕೆ, ಈ ಅಖಂಡ ಭಾರತಕ್ಕೆ ಕೊಡುಗೆಯಾಗಿ ನೀಡಿದರು; ಕೃತಿಗಳ ರಚನೆಯ ಹಿಂದೆ ಸನಾತನ ಸಂಸ್ಕೃತಿಯನ್ನು ಮುನ್ನಡೆಸುವುದರ ಜೊತೆಗೆ ಸಾಮಾಜಿಕ ಲೋಕಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಮಹತ್ವ ಪಡೆದಿತ್ತೇ ವಿನಃ ತಮ್ಮ ತೀಟೆಗಾಗಿ ಅವರೆಂದೂ ಕೃತಿಗಳನ್ನು ರಚಿಸಲಿಲ್ಲ. ಹೀಗಿದ್ದ ನಾಡಲ್ಲಿ, ದೇಶದಲ್ಲಿ ಶಾಂತತೆಗೆ ಭಂಗವಿರಲಿಲ್ಲ!

ಬೆಟ್ಟದ ಬುಡದಲೊಂದು ಮನೆಯಮಾಡಿ ಮೃಗ-ಪಕ್ಷಿಗಳಿಗಂಜಿದೊಡೆಂತಯ್ಯಾ
ಸಮುದ್ರದಾ ತಡಿಯಲೊಂದು ಮನೆಯಮಾಡಿ ನೆರೆ-ತೊರೆಗಳಿಗಂಜಿದೊಡೆಂತಯ್ಯಾ 
ಸಂತೆಯೊಳಗೊಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ

ಎಂಬ ಶರಣರ ವಚನದಂತೇ ಹೊರಜಗದಲ್ಲಿ ಗೌಜು-ಗಲಾಟೆ ಏನೇ ಇದ್ದರೂ ತಮ್ಮೊಳಗೇ ತಾವು ಶಾಂತವಾಗಿರುವುದಕ್ಕೆ, ಚಿತ್ತವನ್ನು ಪ್ರಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಆರ್ಷೇಯ ಸಂಸ್ಕೃತಿ ಕಾರಣವಾಗಿತ್ತು. ಅದೇ ರೂಢಮೂಲದಿಂದ ಇಂದಿಗೂ ಭಾರತ ವಿಶ್ವಕ್ಕೇ ಮಾದರಿಯಾಗಿದೆ! ಅಮೇರಿಕದಂತಹ ದೊಡ್ಡಣ್ಣ ಎನಿಸಿಕೊಂಡ ಪರಮಾಣು ನಿಪುಣನಿದ್ದರೂ, ರಷ್ಯಾದಂತಹ ಮುಂದುವರಿದ ರಾಷ್ಟ್ರವಿದ್ದರೂ, ಜಪಾನ್ ನಂತರ ಶ್ರೇಷ್ಠ ತಂತ್ರಜ್ಞಾನ ನಿಪುಣ ದೇಶವಿದ್ದರೂ ಭಾರತ ಎಲ್ಲವುಗಳ ನಡುವೆ ವಿಶಿಷ್ಟವಾಗಿ ಕಂಗೊಳಿಸುತ್ತದೆ ಯಾಕೆಂದರೆ ಇಲ್ಲಿರುವ ವ್ಯಕ್ತಿಗಳೊಬ್ಬೊಬ್ಬರಲ್ಲೂ ಸುಪ್ತವಾಗಿ ರಾಮಾನುಜನ್, ವಿಶ್ವೇಶ್ವರಯ್ಯ, ಕುವೆಂಪು, ಡೀವಿಜಿ, ಮುದ್ದಣ, ಪಂಪ, ಕುಮಾರವ್ಯಾಸ ಮೊದಲಾದವರು ಅವಿತಿದ್ದಾರೆ!! ಜಗತ್ತಿನಲ್ಲಿ ತಾನೇ ಮುಂದು ಎಂದು ಬೆನ್ನು ತಟ್ಟಿಕೊಳ್ಳುವ ಪರದೇಶ ಮೆರೆಯತೊಡಗಿದಾಗ ಅಗೋಚರಶಕ್ತಿಯೊಂದು ಭಾರತಕ್ಕೆ ನವಚೈತನ್ಯವನ್ನು ನೀಡುತ್ತದೆ! ಆ ಮೂಲಕ ಹೊಸದೊಂದು ಆವಿಷ್ಕಾರ ಭಾರತದಲ್ಲಿ ಹುಟ್ಟಿಕೊಂಡು ಭಾರತ ಮುನ್ನಡೆಯುತ್ತದೆ; ವಿಶಿಷ್ಟವೆಂದು ಪರಿಗಣಿಸಲ್ಪಡುತ್ತದೆ. ಜಗತ್ತಿನ ಸರ್ವರ ಕ್ಷೇಮವನ್ನು ಬಯಸಿ, ಹಿತವನ್ನು ಬಯಸಿ ಯುಗಯುಗಗಳಿಂದ ಇಲ್ಲಿನ ಋಷಿಗಳು ಘೋರ, ಅಖಂಡ ತಪಸ್ಸನ್ನಾಚರಿಸಿ, ತಮ್ಮ ತಪಸ್ಸಿನ ಫಲವನ್ನು ಈ ನಮ್ಮ ಭಾರತಕ್ಕೆ ಕೊಟ್ಟು ತೆರಳಿದ್ದಾರೆ; ಕೆಲವರು ನಮಗೆ ಕಾಣಿಸದಂತೇ ಹಿಮಾಲಯದೆಡೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ!

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||

ಜಗತ್ತಿನಲ್ಲಿಯೇ ಅತ್ಯುಚ್ಚವಾದ ಸಂಸ್ಕೃತಿಯನ್ನು ತಮ್ಮ ದೂರದರ್ಶಿತ್ವದಿಂದ, ಜ್ಞಾನಚಕ್ಷುವಿನಿಂದ ಅನುಗ್ರಹಿಸುವ ತಪಸ್ವಿಗಳು ನೆಲೆಸಲು ಹಿಮಾಲಯ ನಮ್ಮ ಪಾಲಿಗೆ ಸಹಕಾರಿಯಾಯ್ತು. ಅಂತಹ ಹಿಮಾಲಯವನ್ನು ಉತ್ತರಕ್ಕೆ ಹೊಂದಿ, ಹಿಂದೂ ಮಹಾಸಾಗರವೆಂಬ ಸಮುದ್ರವನ್ನು ದಕ್ಷಿಣಕ್ಕೆ ಹೊಂದಿರುವ ಈ ನಮ್ಮ ಭಾರತಮಾತೆ ಆಗಾಗ ಆಗಾಗ ಅತಿಶಯ ಶ್ರೇಷ್ಠ ಸಾಧಕರನ್ನು ಹಲವು ರಂಗಗಳಲ್ಲಿ ಹಡೆಯುತ್ತಲೇ ಇರುತ್ತಾಳೆ. ಅಂಥಾ ತಾಯಿ ಭಾರತಿಗೆ ನಮಸ್ಕಾರಗಳು, ಸನಾತನ ಋಷಿಪರಂಪರೆಗೆ ನಮಸ್ಕಾರಗಳು, ಮತ್ತು ಸುದೀರ್ಘ ಬರಹವನ್ನು ಮನವೆಂಬ ನಾಸಿಕದಿಂದ ಆಘ್ರಾಣಿಸಿದ ನನ್ನ ಭಾರತದ ಸಹೋದರ ಸಹೋದರಿಯರಾದ ನಿಮಗೂ ನಮಸ್ಕಾರಗಳು.    

[ಈ ಅಧ್ಯಾಯವನ್ನು ಮುಗಿಸುವ ಮುನ್ನ ಒಂದು ವಿಜ್ಞಾಪನೆ: ಭಗವದ್ಗೀತೆಯನ್ನು ಕಂಠಪಾಠಮಾಡಿಕೊಂಡು, ಕೇಳಿದ ಭಾಗವನ್ನು ಹೇಳಿದವರಿಗೆ, ಕೆಲವುವರ್ಷಗಳಿಂದ ನಿರಂತರವಾಗಿ, ದಕ್ಷಿಣಾಮ್ನಾಯ ಶೃಂಗೇರೀ ಶ್ರೀಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ನಗದು ಬಹುಮಾನ ೨೫,೦೦೦ ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸುತ್ತಾರೆ. ಕುಸಿದ ಸಾಮಾಜಿಕ ಮೌಲ್ಯವನ್ನು ಮರಳಿ ಕಟ್ಟುವ ಪ್ರಾತಃಸ್ಮರಣೀಯರ ಈ ಪ್ರಯತ್ನ ಅಭಿನಂದನೀಯ. ಕೇವಲ ಹಣಕ್ಕಾಗಿಯಲ್ಲದೇ, ಓದುಗ ಸಮೃದಯರು ಈ ವಿಷಯದಲ್ಲಿ ಆಸಕ್ತಿ ತಳೆದು ಗೀತೆಯನ್ನು ಓದಿ, ಮನನಮಾಡಿ, ಅದರ ಸನಾತನ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಈ ಬರಹಗಾರನ ಅಪೇಕ್ಷೆ ಕೂಡ ಆಗಿದೆ.]

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||


Saturday, December 15, 2012

ಮಹಾಮೇರು ಕಾರಂತರೂ ಬಣ್ಣದ ತುತ್ತೂರಿಯ ವಿಶ್ವೇಶ್ವರ ಭಟ್ಟರೂ

ಚಿತ್ರಋಣ : ಅಂತರ್ಜಾಲ 
ಮಹಾಮೇರು ಕಾರಂತರೂ ಬಣ್ಣದ ತುತ್ತೂರಿಯ ವಿಶ್ವೇಶ್ವರ ಭಟ್ಟರೂ

ತುಂಬಿದಕೊಡ ತುಳುಕುವುದಿಲ್ಲ ಎಂಬುದನ್ನು ಕಳೆದವಾರವಷ್ಟೇ ಪರಾಂಬರಿಸಿದ್ದೆ; ಅದು ಕಳೆದವಾರ ಮಾತ್ರ ನೋಡಿದ್ದಲ್ಲ, ಹದಿನೈದು-ಹದಿನಾರು ವರ್ಷಗಳ ಒಡನಾಟದ ವ್ಯಕ್ತಿಯ ಸ್ವಭಾವದ ಮರುಪರಿಶೀಲನೆ, ಅಷ್ಟಕ್ಕೂ ಆ ಸ್ತರದಲ್ಲಿದ್ದರೆ ಯಾರೇ ಆದರೂ ಕೊಬ್ಬಿ ನೆಲದಮೇಲೇ ನಡೆಯುತ್ತಿರಲಿಲ್ಲ! ಅಂತಹ ಮೇರು ವ್ಯಕ್ತಿತ್ವ ಶತಾವಧಾನಿ ಡಾ| ರಾ.ಗಣೇಶರದ್ದು. ಹಿಮಾಲಯದ ಮೌಂಟ್ ಎವರೆಸ್ಟ್ ಆಗಿಯೂ ಹತ್ತಿರದ ನಂದಿಬೆಟ್ಟದ ಹಾಗೇ ತೋರುವ ಅವರ ಸೌಜನ್ಯ, ಪದಗಳ ವ್ಯಾಪ್ತಿಗೆ ಮೀರಿದ್ದು. ಅಲ್ಲಿ ಪ್ರಲೋಭನೆಯ ಹಪಾಹಪಿಯಿಲ್ಲ, ಅಧಿಕಾರದ ದಾಹವಿಲ್ಲ, ಯಾವುದೇ ಪೈಪೋಟಿಯಿಲ್ಲ, ಕ್ಷುಲ್ಲಕ ರಾಜಕೀಯವಿಲ್ಲ, ಅದು ಅದೃಷ್ಟದ ಬಲವೂ ಅಲ್ಲ; ಅದೊಂದು ಪ್ರಾಮಾಣಿಕನ ಸತತ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಸಿದ್ಧಿ. ತುಂಬಿದ ಕೊಡದಂತೇ ಖಾಲೀಕೊಡ ಕೂಡ ತುಳುಕುವುದಿಲ್ಲ; ಅದರಲ್ಲಿ ತುಳುಕಲು ಏನೂ ಇರುವುದಿಲ್ಲವಲ್ಲಾ-ಹೀಗಾಗಿ. ಆದರೆ ಅರ್ಧ ಅಥವಾ ಭಾಗಶಃ ತುಂಬಿದ ಕೊಡ ಮಾತ್ರ ಹೊತ್ತು ನಡೆವಾಗ ಸದಾ ತುಳುಕಾಡುತ್ತಲೇ ಇರುತ್ತದೆ!! ’ಮಾಧ್ಯಮದ ಮಂದಿ’ ಎಂದುಕೊಳ್ಳುವ ಅನೇಕರಿಗೆ ಆ ಸ್ಥಿತಿ, ಆ ದರ್ಪ ಮತ್ತು ದುರಹಂಕಾರ. ನಾನೂ ಹಾಗೆ ನೋಡಿದರೆ ಮಾಧ್ಯಮದಲ್ಲಿಯೇ ಇದ್ದೇನೆ; ಆದರೆ ನಾನು ಹಾಗೆ ಅಂಥಾ ಕೊಳಕು ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ನನ್ನ ಹೆಜ್ಜೆ ಬಹುಸಂಖ್ಯಾಕರಿಗೆ ಗೊತ್ತೇ ಇಲ್ಲ!  ನಾನು ಗೋಸ್ಟ್ ರೈಟರ್ ಅಲ್ಲ; ಆದರೆ ಅಂಥಾ ಜನಗಳನ್ನು ಕಂಡವನು. ಗೋಸ್ಟ್ ರೈಟಿಂಗ್ ಎಂಬುದಕ್ಕೆ ಕನ್ನಡದಲ್ಲಿ ’ಪೈಶಾಚ ಬರಹಗಾರಿಕೆ’ ಎಂದರೆ ತಪ್ಪಾದೀತು ಅದು ’ನೆರಳುಬರಹಗಾರಿಕೆ’ ಎಂದರೇ ಸರಿಯೇನೋ ಎಂಬುದು ನನ್ನ ಅನಿಸಿಕೆ.  ಕನ್ನಡದಲ್ಲಿ ’ಹೆಸರೊಬ್ಬರದು ಬಸಿರೊಬ್ಬರದು’ ಎಂಬ ನಾಣ್ನುಡಿಯೊಂದಿದೆ-ಅದೇ ರೀತಿ ಇನ್ನೊಬ್ಬರ ಪರವಾಗಿ ಅವರ ಹೆಸರಿನಲ್ಲಿ ಬರೆದುಕೊಡುವ ಸಂಸ್ಕೃತಿ ಕನ್ನಡದಲ್ಲಿ ಬಹಳ ಪ್ರಾಚೀನಕಾಲದಲ್ಲಿ ಇರಲಿಲ್ಲವೇನೋ; ಆದರೆ ಈಗೀಗ ಅದೇ ಜಾಸ್ತಿಯಾಗುತ್ತಿದೆ! ಬಿಡುವಿಲ್ಲದ ಪತ್ರಕರ್ತರಿಗೋ ವೈದ್ಯರಿಗೋ ಅಥವಾ ಇನ್ಯಾವುದೋ ವೃತ್ತಿಯವರಿಗೋ ’ಸಾಹಿತಿಗಳು’ ಎಂಬ ಮತ್ತೊಂದು ಫಲಕವನ್ನು ತಗುಲಿಸಿಟ್ಟುಕೊಳ್ಳುವಾಸೆ! ಅದಕ್ಕೇ ಅಂತಹ ಜನರಿಗೆ ಅನುಕೂಲಕರವಾಗಿ, ಹೊಟ್ಟೆಪಾಡಿಗಾಗಿ ಬರೆದುಕೊಡುವ ಮಂದಿ ಇದ್ದಾರೆ. ಅವರ ಹೆಸರು ಅಲ್ಲಲ್ಲಿ ಗೊತ್ತಿದ್ದರೂ ’ಅವರೇ ಇವರು’ ಎಂಬುದು ಅವರೇ  ಬಿಡುವಿಲ್ಲದ ’ಅವರಿಗಾಗಿ’ಬರೆದ ಪುಸ್ತಕಗಳನ್ನು ಕೊಂಡಾಗ ತಿಳಿಯದು!

ಪ್ರತಿಯೊಬ್ಬ ಬರಹಗಾರನಿಗೂ ಅವನದ್ದೇ ಆದ ಶೈಲಿಯಿರುತ್ತದೆ. ಅದು ಅನೇಕರಿಗೆ ಹಿಡಿಸಲೂ ಬಹುದು, ಹಿಡಿಸದೆಯೂ ಇರಬಹುದು. ಜಾಗೃತಗೊಂಡ ಸಾಹಿತ್ಯಸರಸ್ವತಿಯ ಅಂಗಳದಲ್ಲಿ ಕಳಪೆ ಕಾಮಗಾರಿಯ ಅಡ್ಡಕಸುಬಿಗಳೂ ಇದ್ದಾರೆ; ಚೆನ್ನಾಗಿ ಕೃಷಿಮಾಡಿ ಫಸಲುಣುವ ಜನವೂ ಇದ್ದಾರೆ. ದಿನಕ್ಕೊಂದಷ್ಟು ಕೃತಿಗಳ ಬಿಡುಗಡೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದೇ ಇರುತ್ತದೆ. ಪ್ರಕಟಣೆಗೊಂಡು ಬಿಡುಗಡೆಗೊಂಡ ಕೃತಿಗಳೆಷ್ಟು ಎಂಬುದಕ್ಕಿಂತಾ ಬಹುಸಂಖ್ಯಾಕ ಓದುಗರು ಸಹಜವಾಗಿ ಮೆಚ್ಚಿದ ಕೃತಿಗಳೆಷ್ಟು ಮತ್ತು ಬರಹಗಳ ಒಳಹೂರಣದ ಸಾರ್ವಕಾಲಿಕತೆ ಎಷ್ಟು ಎಂಬುದರ ಮೇಲೆ ಬರಹಗಾರರು ಯಾವ ಮಟ್ಟಿನವರು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಇಂದು ಒತ್ತಾಯಕ್ಕಾಗಿ ’ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸುವವರನ್ನೂ, ತಮ್ಮ ಬರಹಗಳಿಗೂ ತಮಗೊಂದು ಪ್ರತಿಕ್ರಿಯೆ ಈತನಿಂದ ಸಿಗಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯಿಸುವವರನ್ನೂ ಕಾಣುತ್ತೇವೆ; ಬರವಣಿಗೆಯ ರಂಗದಲ್ಲೂ ಪಕ್ಷ-ಪಂಗಡ-ಗುಂಪುಗಾರಿಕೆ ಇದೆ ಎಂದರೆ ನಂಬುವುದು ಕಷ್ಟವಾಗುತ್ತದೆ-ಆದರೆ ಹಾಗಿದೆ ಎಂಬುದನ್ನು ಅರಿತೂ ನಂಬದಿರುವುದು ಬುದ್ಧ್ಯಾ ಎಸಗುವ ಅಪರಾಧವಾಗುತ್ತದೆ. ಬರಹಗಾರರಲ್ಲಿ ಬಲ ಮತ್ತು ಎಡಪಂಥೀಯರು ಎಂಬ ಪ್ರಮುಖ ವಿಭಾಗಗಳಿವೆ: ಭಾರತೀಯ ಮೂಲ ಸಂಸ್ಕೃತಿ ಮತ್ತು ಸದಾಶಯಗಳನ್ನು ಅರ್ಥೈಸಿಕೊಂಡು ಒಪ್ಪಿ ನಡೆಯುವವರು ಬಲಪಂಥೀಯರೆನಿಸಿದರೆ ನಮ್ಮ ಸಂಸ್ಕೃತಿಯ ಮಹತ್ವವನ್ನೂ ಆದರ್ಶಗಳನ್ನೂ ಅರಿಯದೇ ಹಾರುವ ಮೊಲಕ್ಕೆ ಮೂರೇ ಕಾಲೆಂದು ಘೋಷಿಸಿ ತಮ್ಮ ಬೆನ್ನು ತಟ್ಟಿಕೊಳ್ಳುವವರು ಎಡಪಂಥೀಯ ಬರಹಗಾರರು. ಈ ಪಂಥಗಳಿಗೆ ತಕ್ಕಂತೇ ಅವರವರಿಗೆ ಅವರವರ ಓದುಗರೇ ವಾರಸುದಾರರು! ಸತ್ಯವನ್ನು ಸತ್ಯವೆಂದು ಹೇಳಲು ಹೆದರಿಕೊಳ್ಳುವ ಕಾಲ ಬಂದುಬಿಟ್ಟಿದೆ ಯಾಕೆಂದರೆ ಸುಳ್ಳನ್ನೇ ಸತ್ಯವೆಂದು ನಕಲುದಾಖಲೆಸಹಿತ ಶ್ರುತಪಡಿಸಿ ಬಹುಮತವನ್ನು ಕೀಳುವ ಮಂದಿ ತಯಾರಾಗಿದ್ದಾರೆ; ಸತ್ಯವನ್ನು ಹೇಳುವವರ ಸಂಖ್ಯಾಬಲದ ಕೊರತೆ ಮನಗಂಡು ಸತ್ಯವನ್ನು ಕಂಡರೂ ಕಾಣದಂತೇ ಸುಮ್ಮನಿದ್ದುಬಿಡುವ ’ಬದುಕಿಕೊಳ್ಳುವ ಉಪಾಯ’ವನ್ನು ಮೊರೆಹೊಕ್ಕವರು ಅನೇಕರಿದ್ದಾರೆ; ಕುಡುಕರಲ್ಲದವರ ಸಂಖ್ಯೆ ಕಮ್ಮಿ ಇರುವ ಜಾಗದಲ್ಲಿ ಕುಡುಕರು ಹಾಕಿದ ಸಂಸ್ಕೃತಿಯೇ ವಿಜೃಂಭಿಸುತ್ತಿದೆ, ಕುಡಿಯದವರು ಮರ್ಯಾದೆಗೆ ಅಂಜಿ ಮನೆಯಲ್ಲೇ ಉಳಿದುಹೋಗಿದ್ದಾರೆ!   

ಸಂಪಾದಕರಾದೆವು ಎಂಬ ಮಾತ್ರಕ್ಕೆ ತಾವು ಹೇಳುವುದೆಲ್ಲಾ ಸತ್ಯ ಮತ್ತು ಅದನ್ನು ಜನ ಮೆಚ್ಚುತ್ತಾರೆ ಎಂದುಕೊಂಡು ತಮಗೆ ಸಿಕ್ಕಿದ ರಾಗದಲ್ಲೇ ಗರ್ಧಬಗಾಥೆಯನ್ನು ವಿಸ್ತರಿಸುತ್ತಾ ನಡೆದ ಮಂದಿಯೂ ನಮ್ಮಲ್ಲಿ ಇದ್ದಾರೆ. ಇಂದು ಪತ್ರಿಕಾ ಮಾಧ್ಯಮದ ಅಥವಾ ಸಮೂಹ ಮಾಧ್ಯಮದ ಬೆಳವಣಿಗೆಯಲ್ಲಿ ಗಣಕಯಂತ್ರದ ಜೋಡಣೆಯಿಂದ ಆದ ಕ್ಷಿಪ್ರಗತಿಯ ಬದಲಾವಣೆಗಳಿಂದ, ಬಹುತೇಕ ಪತ್ರಿಕೆಗಳು ಒಂದನ್ನೊಂದು ಅನುಕರಿಸುತ್ತಲೋ ಅಥವಾ ಸೃಜನಾತ್ಮಕ ವಿನ್ಯಾಸಗಾರರ, ಮುದ್ರಕರ ಕೈಚಳಕಗಳಿಂದಲೋ ಮೊದಲಿನ ಕಾಲಕ್ಕಿಂತಾ ಹೆಚ್ಚಿನ ಗುಣಮಟ್ಟವನ್ನು ಮುದ್ರಣ-ವಿನ್ಯಾಸ-ಮುದ್ರಣಕಾಗದಗಳಲ್ಲಿ ಪಡೆದಿವೆ; ಆದರೆ ಬರಹಗಳ ದೃಷ್ಟಿಯಿಂದ ಮೌಲ್ಯಯುತ ಬರಹಗಳ ಸಂಖ್ಯೆ ಕಮ್ಮಿಯಾಗಿದೆ ಎಂಬುದು ಸರ್ವವಿದಿತ. ಹಣತೆಗೆದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಬರೆಯುವ ಮಂದಿ ಕೆಲವರಾದರೆ ತಲೆಯಲ್ಲಿ ಹೊಳವೇ ಇಲ್ಲದೇ ಸಿಕ್ಕಿದ್ದನ್ನೇ ಕಲಸುಮೇಲೋಗರ ಮಾಡಿ ಚಿತ್ರಾನ್ನ ಬಡಿಸುವ ಸಂಪ್ರದಾಯ ಕೆಲವರದು. ನವೆಂಬರ್ ನಲ್ಲಿ ಆರಂಭಗೊಳ್ಳುತ್ತದೆಂಬ ಹೊಸ ಪತ್ರಿಕೆಯೊಂದರ ಮಾಜಿ ಭಾವೀ ಸಂಪಾದಕರನ್ನು ಅನಿರೀಕ್ಷಿತವಾಗಿ ಭೇಟಿಯಾದೆ: ಆಹಹ ಏನು ಒನಪು ಒಯ್ಯಾರ, ಬೆಡಗು ಬಿನ್ನಾಣ ಅಂತೀರಿ !! ಇನ್ನೂ ಪತ್ರಿಕೆ ಹೊರಟೇ ಇಲ್ಲ ಆಗಲೇ ಮುಖ್ಯಮಂತ್ರಿಗಿಂತಲೂ ಬ್ಯೂಸಿ!! ಈಗ ಪತ್ರಿಕೆಯನ್ನು ಹೊರಡಿಸಬೇಕೆಂದಿದ್ದ ಯಜಮಾನರು ನಿರ್ಧಾರವನ್ನು ಕೈಬಿಟ್ಟಿದ್ದರಿಂದ ಅವರ ಪದವಿ-ಪಟ್ಟಕ್ಕೆ ಕುತ್ತುಬಂದು ಬ್ಯೂಸಿ ಎಂಬುದು ಠುಸ್ ಪಟಾಕಿಯಾಗಿಬಿಟ್ಟಿದೆ; ಪಾಪ ಮಾತನಾಡಿಸುವವರೂ ಇಲ್ಲ! ಸಿಕ್ಕಿದ ಪಟ್ಟವನ್ನು ದುರುಪಯೋಗ ಪಡಿಸಿಕೊಳ್ಳುವ ’ಪುಣ್ಯಾತ್ಮ’ರನ್ನೂ ಕಂಡಿದ್ದೇವೆ. ರಾಜಕೀಯದ ಖೂಳರಿಂದ ಒಂದಷ್ಟು ತೆಗೆದುಕೊಂಡು ಅವರನ್ನು ಹೊಗಳಿ ಬರೆಯುವುದೇನು, ಗಣಿಧಣಿಗಳಿಂದ ಪ್ರಸಾದ ಸ್ವೀಕರಿಸಿ ಅವರಕುರಿತು ಬಣ್ಣಿಸುವುದೇನು ಅಲ್ಲದೇ ಕಂಡವರ ಶೀಲ ಶಂಕಿಸುವಂತೇ ಇಲ್ಲದ ಆರೋಪಹೊರಿಸಿ ’ಇನ್ನೂ ಮುಂದೆ ಇನ್ನಷ್ಟು ಬರೆಯುತ್ತೇವೆ’ ಎಂದು ಅಮಾಯಕರನ್ನು ಹೆದರಿಸಿ ರೋಲ್ ಕಾಲ್ ಮಾಡುವ ಜನಗಳೂ ಇದ್ದಾರೆ.

ಹಿಂದಕ್ಕೆ ಗಾಂಧೀಜಿ, ಡಿವಿಜಿ ಇವರೆಲ್ಲಾ ಪತ್ರಕರ್ತರೋ ಸಂಪಾದಕರೋ ಆಗಿದ್ದ ಕಾಲಕ್ಕೆ ಪತ್ರಿಕೆಯೆಂದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಸರಕಾರಕ್ಕೆ ತಿಳಿಸುವ ಮತ್ತು ಸರಕಾರದ/ಆಳರಸರ ಡೊಂಕುಗಳನ್ನು ತಿದ್ದುವ ಮಾಧ್ಯಮ ಅದಾಗಿತ್ತು. ಆದರೆ ಈಗ ಹಾಗಿಲ್ಲ; ಪತ್ರಿಕೆ ಎಂದರೆ ಉಳ್ಳವರ/ ಆಳರಸರ ಹೊಗಳಿಕೆಗಳನ್ನು ಪ್ರಕಟಿಸುವ ಪತ್ರಕರ್ತರ ಆಡುಂಬೊಲವಾಗಿವೆ. ಇತ್ತೀಚೆಗೆ ತಮ್ಮ ಸ್ವಾರ್ಥಕ್ಕಾಗಿ ಪರಸ್ಪರಲ್ಲಿನ ಕಿತ್ತಾಟಗಳ ಅಂತರಂಗವನ್ನು ಬಹಿರಂಗಗೊಳಿಸುವ ಮಾಧ್ಯಮಗಳಾಗಿವೆ. ಒಬ್ಬರಮೇಲೆ ಇನ್ನೊಬ್ಬರಿಗೆ ಯಾವುದೇ ಪ್ರೀತಿ, ವಿಶ್ವಾಸ, ವೃತ್ತಿಸೌಹಾರ್ದ ಇಲ್ಲ; ಹಾವು-ಕಪ್ಪೆ ವಿಶ್ವಾಸವಾಗಿಬಿಟ್ಟಿದೆ! ’ವಿಜಯಕರ್ನಾಟಕ’ದಲ್ಲಿ ಅಂಕಣಗಳು ಖುಲ್ಲಾಬಿದ್ದಾಗ ಉತ್ತಮ ಬರಹಗಾರರನ್ನು ಹುಡುಕುವ ಬೇಟೆ ನಡೆದಿತ್ತು ಎಂದು ಕೇಳಿದ್ದೇನೆ, ಆಗ ಕೆಲವರು ಅಂಕಣಕಾರರಾಗಿ ಬರೆಯತೊಡಗಿದರು, ಅಂಕಣ ಬರೆಯಲು ಅವಕಾಶಕೊಟ್ಟೆವು ಎನ್ನುತ್ತಾ ಅಂದಿನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಮತ್ತು ಅವರ ಪಟಾಲಮ್ಮು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ; ಅವಕಾಶ ಕೊಟ್ಟಿದ್ದು ಬರಹಗಾರನಿಗೆ ನೀಡಿದ ಭಿಕ್ಷೆ ಎಂಬಂತೇ ನಡೆದುಕೊಂಡ ರೀತಿಗಳೂ ಇವೆ.  ಉತ್ತಮ ಬರಹಗಾರರಿಲ್ಲದೇ ಪತ್ರಿಕೆ ನಡೆಯುವುದಿಲ್ಲ; ಪತ್ರಿಕೆಯ ಸಿಬ್ಬಂದಿ ಮಾತ್ರವೇ ಉತ್ತಮಬರಹಗಾರರೆನ್ನಲು ಬರುವುದೂ ಇಲ್ಲ! ಬರವಣಿಗೆ  ಎಂಬುದುದೊಂದು ಅಭಿಜಾತ ಕಲೆ! ಅದು ವ್ಯಕ್ತಿಯಲ್ಲಿ ತಂತಾನೇ ಸ್ಫುರಿಸಿಬೇಕು; ತಾನು ಕೆತ್ತುವ ವಿಗ್ರಹದ ಅಂಗಸೌಷ್ಟವದ ಬಗ್ಗೆ ಶಿಲ್ಪಿಗೆ ಮೊದಲೇ ಹೇಗೆ ತಿಳಿದಿರುತ್ತದೋ ಹಾಗೇ ಬರಹಗಾರನಿಗೆ ತನ್ನ ಬರಹವೊಂದರ ಆಮೂಲಾಗ್ರ ಪರಿಕಲ್ಪನೆ ಮನದ ಅಡುಗೆ ಮನೆಯಲ್ಲಿ ಪಾಕಗೊಂಡುಬಿಡುತ್ತದೆ. ಆ ಪಾಕವನ್ನು  ಸಮಯಕ್ಕೆ ಸರಿಯಾಗಿ ತಟ್ಟೆಗೆ ಇಳಿಸಿ ಹಾಲುಬಾಯಿಯನ್ನೋ ಮೈಸೂರುಪಾಕನ್ನೋ ಕತ್ತರಿಸಿ ಕೊಡುವುದು ಬಾಕಿ ಉಳಿಯುವ ಕೆಲಸವಾಗುತ್ತದೆ. ಅಂತಹ ಬರಹಗಳು ಓದುವುದಕ್ಕೂ, ಆಸ್ವಾದಿಸುವುದಕ್ಕೂ ಹಿತವಾಗಿರುತ್ತವೆ. ಕೇವಲ ಪದವಿಯಿಂದ ಮಾತ್ರ ’ಜರ್ನಲಿಸ್ಟ್’ ಆದವರಿಗೆ ಪಾಕದ ಸಿದ್ಧಿ ಸಾಧ್ಯವಿದೆ ಎನ್ನಲಾಗುವುದಿಲ್ಲ;ಅದು ಹೊಟ್ಟೆಪಾಡಿನ ವೃತ್ತಿಯಾಗುತ್ತದೆ.

ಸಹೃದಯರೊಬ್ಬರು ಜಂಗಮವಾಣಿಯಲ್ಲಿ ಮಾತನಾಡಿ, ಕಳೆದವಾರ ಪ್ರಜಾವಾಣಿಯಲ್ಲಿ ಬಂದ ಪ್ರಳಯದ ಬಗೆಗಿನ ವೈಜ್ಞಾನಿಕ ಲೇಖನವೊಂದರ ಬಗ್ಗೆ ತಿಳಿಸಿ, ಆ ಮುತ್ಸದ್ಧಿ ಬರಹಗಾರರು ಹೀಗೆ ಯಾಕೆ ಬರೆದರು ಎಂದು ಕೇಳಿದರು. ವಿಷಯವಿಷ್ಟೇ: ವಿಜ್ಞಾನಿಗಳು ಪ್ರಳಯ ಸದ್ಯಕ್ಕಿಲ್ಲ ಎಂಬುದಕ್ಕೆ ಭಾರತೀಯ ಜ್ಯೋತಿಷಿಗಳ ಸಹಮತ ಮತ್ತು ಜ್ಯೋತಿಷಿಗಳ ಪ್ರಕಾರ ನಲ್ವತ್ತು ಲಕ್ಷ ವರ್ಷಗಳವರೆಗೂ ಪ್ರಳಯವಿಲ್ಲವಂತೆ ಎಂಬುದು ಅವರು ಮಾಡಿದ ಉಡಾಫೆ. ಬಲಪಂಥೀಯರೂ ಕೆಲವೊಮ್ಮೆ ಬೆನ್ನುಮೂಳೆಯ ಡಿಸ್ಕ್ ಸ್ಲಿಪ್ ಆದಂತೇ ಆಗುವುದು ನೋಡಿ ನನಗೆ ನಗುಬಂತು. ಕಲಿಯುಗಕ್ಕೆ ೪,೩೨,೦೦೦ ಮಾನುಷವರ್ಷಗಳು ಎಂದು ವೇದಾಂಗ ಜ್ಯೋತಿಷ ನಿಖರವಾಗಿ ಹೇಳಿದೆ; ವೇದಾಂಗ ಜ್ಯೋತಿಷ್ಯ ಗಣಿತಾಧಾರಿತವಾಗಿದೆ.  ವೇದಾಂಗ ಜ್ಯೋತಿಷ್ಯವೇ ಬೇರೆ ಮತ್ತು ಫಲಜ್ಯೋತಿಷ್ಯವೇ ಬೇರೆ. ಟಿವಿ ಜ್ಯೋತಿಷಿಗಳು ಫಲ ಹೇಳುವುದು ಫಲಜ್ಯೋತಿಷದ ಆಧಾರದ ಮೇಲೆಯೇ ಹೊರತು ವೇದಾಂಗ ಜ್ಯೋತಿಷ್ಯವನ್ನು ಅವರು ಬಳಸುವುದು ಅಷ್ಟಕ್ಕಷ್ಟೇ. ವೇದಾಂಗ ಜ್ಯೋತಿಷ್ಯ ಖಗೋಲ ಗಣಿತವನ್ನೂ ಒಳಗೊಂಡಿದ್ದು ಆ ವಿಷಯಕವಾಗಿ ನಮ್ಮ ಪ್ರಾಚೀನರಾದ ಇಬ್ಬರು ಆರ್ಯಭಟಂದಿರು, ಭಾಸ್ಕರಾಚಾರ್ಯ ಮೊದಲಾದವರು ಕೆಲಸ/ಸಂಶೋಧನೆ ಮಾಡಿದ್ದಾರೆ. ಫಲಜ್ಯೋತಿಷ್ಯಕ್ಕೆ ವೈಯಕ್ತಿಕ ತಪಸ್ಸಿನ ಫಲ ಮತ್ತು ದೂರದರ್ಶಿತ್ವ ಬೇಕಾಗುತ್ತದೆ. ಒಂದೇ ಕುಂಡಲಿಗೆ ಫಲಜ್ಯೋತಿಷ್ಯ ಹೇಳುವ ಬೇರೆ ಬೇರೇ  ’ಗುರೂಜಿ’ಗಳಿಂದ ಫಲಗಳು ಬೇರೆ ಬೇರೇ ಹೇಳಲ್ಪಡುವುದು ಅದಕ್ಕೇ! ಏನೂ ಇರಲಿ ವಿಜ್ಞಾನಿಗಳೆನಿಸಿಕೊಂಡವರು ಪ್ರಳಯ ಸದ್ಯಕ್ಕಿಲ್ಲ ಎಂದು ಇಂದು-ನಿನ್ನೆ ಹೇಳುವ ಬಹುಕಾಲ ಮೊದಲೇ ವೇದಾಂಗ ಜ್ಯೋತಿಷ್ಯ ಕಲಿಯುಗದ ಅಂತ್ಯ ಯಾವಾಗ ಎಂಬುದನ್ನು ತಿಳಿಸಿದೆ. ಅದನ್ನಷ್ಟು ಬಳಸಿಕೊಂಡ ಫಲಜ್ಯೋತಿಷಿಗಳು ವಿಜ್ಞಾನಿಗಳ ಜೊತೆಗೆ ತಮ್ಮ ಸಹಮತವೆಂದು ಹೇಳಿದ್ದಾರೆ. ಬರೆಯುವಾಗ ಲೇಖಕರು ಇದನ್ನು ಸರಿಯಾಗಿ ಗ್ರಹಿಸದೇ ಉಡಾಫೆ ಮಾಡಿದ್ದು ಓದುಗ ಹಿತೈಷಿಗಳೊಬ್ಬರಿಗೆ ಹಿಡಿಸದಾಗಿದೆ. ಗೊತ್ತಿಲ್ಲದ ವಿಷಯವಾದರೆ ಉಡಾಫೆ ಮಾಡಬಾರದಲ್ಲವೇ? ಗೊತ್ತಿಲ್ಲದ ಶಿವನನ್ನು ಕಾಳಿಮಠದ ಮಹಾಸ್ವಾಮಿಯನ್ನಾಗಿಸಿದ್ದು ನಮ್ಮ ವಿಶ್ವೇಶ್ವರ ಭಟ್ಟರು ಸಂಪಾದಿಸುತ್ತಿರುವ ಸುವರ್ಣ ನ್ಯೂಸ್ ವಾಹಿನಿ, ಗೊತ್ತಲ್ಲವೇ?  ಕಾವಿ ತೊಟ್ಟವರೆಲ್ಲಾ ಸನ್ಯಾಸಿಗಳಲ್ಲ ಎಂಬ ಕಾಮನ್ ಸೆನ್ಸ್ ಇಲ್ಲದೇ ಹಾದಿಹೋಕ ಮಟನ್ ಬಾಕನನ್ನು ’ಮಹಾಸ್ವಾಮಿ’ಯನ್ನಾಗಿ ಪರಿವರ್ತಿಸಿದ ’ಗರಿಮೆ’ ಆ ವಾಹಿನಿಗೆ ಸಲ್ಲುತ್ತದೆ, ಈ ಬಗ್ಗೆ ಜಾಸ್ತಿ ಬೇಡ ...ಗೊತ್ತು ನಿಮಗೆ ಅದನ್ನೇ ಕೇಳೀ ಕೇಳೀ ವಾಕರಿಕೆ ಬರುವಷ್ಟಾಗಿದೆ.     

ಪತ್ರಿಕಾ ಸಂಪಾದಕರನ್ನೇ ಗಣ್ಯವ್ಯಕ್ತಿಗಳು ಎನ್ನಲು ಸಾಧ್ಯವಾಗುವುದಿಲ್ಲ! ಪತ್ರಿಕೆಗಳು ಜನರ ಧೋರಣೆಗಳನ್ನು ಪ್ರತಿನಿಧಿಸುವ ಕಾಲ ಮುಗಿದಮೇಲೆ ಅವು ಸಾರ್ವಜನಿಕರ ಹಿತಾಸಕ್ತಿಯನ್ನೇ ಎತ್ತಿಹಿಡಿಯುತ್ತವೆ ಎಂಬ ತಳಹದಿ ಬುಡಕಳಚಿದ ಮೇಲೆ, ಹಣಕ್ಕಾಗಿ ವರದಿಗಳನ್ನು ಪ್ರಕಟಿಸಲು ಸಿದ್ಧರಿರುವ ಅನೇಕ ಸಂಪಾದಕರು ಎದುರು ಕಾಣುತ್ತಿರುವಾಗ, ಕ್ರಯ-ವಿಕ್ರಯಗಳ ಆಗರವಾಗಿ ಮಾಧ್ಯಮಗಳು ಬೆಳೆಯುತ್ತಿರುವಾಗ, ಸಂಪಾದಕರು ಗಣ್ಯರಲ್ಲ; ಅವರೂ ನಮ್ಮೆಲ್ಲರಂತೆಯೇ ಒಬ್ಬರು, ಅವರು ಆ ನೌಕರಿ ಮಾಡುತ್ತಿದ್ದಾರೆ ಎಂಬುದು ಅರ್ಥವಾಗಬೇಕಾದ ಪ್ರಧಾನ ಅಂಶವಾಗಿದೆ. ದುಡ್ಡೇ ಎಲ್ಲವೂ ಎಂಬ ಧೋರಣೆ ತಳೆದ ಜನ ಸ್ವಹಿತವನ್ನು ಕಾಪಾಡಿಕೊಳ್ಳುತ್ತಾರೆಯೇ ವಿನಃ ಅಲ್ಲಿ ಸಾರ್ವಜನಿಕರ ಹಿತಾಸಕ್ತಿ ನಗಣ್ಯವಾಗುತ್ತದೆ. ತೀರ್ಥಹಳ್ಳಿಯ ಟಿ.ಎಸ್.ರಾಮಚಂದ್ರರಾಯರು, ಡಿವಿಜಿಯವರು ಇವರೆಲ್ಲಾ ಸಂಪಾದಕರಾಗಿದ್ದಾಗ ಅವರ ಮನೆಗಳಲ್ಲಿ ಬಂದ ಅತಿಥಿಗಳಿಗೆ ಕಾಫಿ ಕೊಡಲು ಕಷ್ಟಪಡಬೇಕಾದ ಆರ್ಥಿಕತೆ ಇತ್ತು! ಯಾಕೆಂದರೆ ಅವರು ಹಣಕ್ಕಾಗಿ ಸಂಪಾದಕೀಯವನ್ನೋ ಪತ್ರಿಕಾಧರ್ಮವನ್ನೋ ಮಾರಿಕೊಂಡವರಲ್ಲ; ಪತ್ರಿಕೆಗಳಿಂದ ಸಿಗುವ ಸಂಬಳವೋ ಆದಾಯವೋ ಅವುಗಳನ್ನು ನಡೆಸಲೇ ಸಾಲುತ್ತಿರಲಿಲ್ಲ ಎಂದಮೇಲೆ ಮನೆಗೆ ಹಣತೆಗೆದುಕೊಂಡು ಹೋಗುವುದೆಲ್ಲಿಬಂತು?  ಇನ್ನು ಬರವಣಿಗೆಯ ಶೈಲಿ ಕೈ ಹಿಡಿದಿದ್ದನ್ನು ಮನಗತ ಮಾಡಿಕೊಂಡ ಒಂದಿಬ್ಬರು ಪೀತಪತ್ರಿಕೆಗಳನ್ನು ನಡೆಸುತ್ತಾರೆ; ರೋಲ್ ಕಾಲ್ ಮಾಡಿ ಕೋಟಿಗಟ್ಟಲೆ ಹಣಗಳಿಸಿ ಈಗ ಅವರಿಗೂ ನೆಮ್ಮದಿಯಿಲ್ಲ-ಸಮಾಜದ ಹಲವರ ಮನೆಗಳಲ್ಲಿ ಅಂಥಾ ಬರಹಗಾರರ ದುರ್ದೆಸೆಯಿಂದ, ಬಹಿರ್ದೆಶೆಯಿಂದ,  ಬದುಕು ಮೂರಾಬಟ್ಟೆಯಾಗಿದೆ ಎಂಬುದೂ ಸುಳ್ಳಲ್ಲ; ಅಂಥಾ ಜನ ಶಾಲೆಗಳನ್ನು ನಡೆಸುತ್ತೇವೆ ಎನ್ನುತ್ತಾರೆ, ಅನಾಥರನ್ನು ಸಾಕುತ್ತೇವೆ ಎನ್ನುತ್ತಾರೆ ಎಲ್ಲಾ ಕಣ್ಣೊರೆಸುವ ಕುಚೋದ್ಯಗಳಾಗಿ ಕಾಡುತ್ತವೆ-ತಲೆಯಲ್ಲಿ ಸಾಮಾನುಳ್ಳವರಿಗೆ!  

ದೇವಮುಡಿಯಲ್ಲಿ ಕೂತ ಹೂವು ತಾನು ಜಗವನ್ನಾಳುವ ದೇವನ ತಲೆಯನ್ನೇರ್ ಏರಿದ್ದೇನೆ ಹೇಗಿದೆ? ಎಂದು ಬೀಗುತ್ತಿತ್ತಂತೆ, ಮಾರನೇದಿನ ನಿರ್ಮಾಲ್ಯ ವಿಸರ್ಜನೆಯ ಪೂಜೆಯಲ್ಲಿ ಅರ್ಚಕರು ಅದನ್ನು ಪ್ರಸಾದವೆಂದು ತೆಗೆದು ಒಮ್ಮೆ ಆಘ್ರಾಣಿಸಿ ಮೂಲೆಗೆಸೆದರಂತೆ; ಆನಂತರ ಅದು ಯಾವುದೋ ಮರದಬುಡದಲ್ಲಿ ಹೋಗಿಬಿದ್ದಿತೋ ಕಸಕ್ಕೇ ಸೇರಿತೋ ತಿಳಿಯದು. ಹಾಗೆಯೇ ಆಯಕಟ್ಟಿನ ಸ್ಥಳವಾದ ಸಂಪಾದಕನೆಂಬ ಹುದ್ದೆಯಲ್ಲಿ ಕುಳಿತ ಹಲವರಿಗೆ ಅವರ ಅರ್ಹತೆಗಿಂತಾ ಬಿರುದು-ಬಾವಲಿಗಳೇ ಜಾಸ್ತಿಯಾಗಿವೆ; ಎಲ್ಲೆಲ್ಲೂ ಢಾಳಾಗಿ ಅವು ಸಾರ್ವಜನಿಕರ ಕಣ್ಣಿಗೆ ರಾಚುತ್ತವೆ ಮತ್ತು ಹಾಗೆ ರಾಚಲಿ ಎಂಬುವ ಉದ್ದೇಶವೇ ಅವರಿಗೂ ಇರುವುದರಿಂದ ಸಮೂಹಸನ್ನಿಯಾದಹಾಗೇ ಸಂಪಾದಕರೆಲ್ಲಾ ಗಣ್ಯರು ಎಂದು ನಮ್ಮ ಹಿರಿತಲೆಗಳು ತಿಳಿದುಕೊಂಡುಬಿಡುತ್ತವೆ; ಹೇಗೆ ನಮ್ಮಲ್ಲಿ ಆಳರಸರೂ ಶಾಸಕರೂ, ಮಂತ್ರಿಗಳೂ ಜನಪ್ರತಿನಿಧಿಗಳು-ಸಾರ್ವಜನಿಕರ ಕೆಲಸಗಾರರು ಎಂಬುದನ್ನು ಮರೆತು ಅವರಿಗೆಲ್ಲಾ ನಾವು ಡೊಗ್ಗು ಸಲಾಮು ಹೊಡೆಯುತ್ತೇವೋ ಹಾಗೆಯೇ. ಮಾಧ್ಯಮಗಳಲ್ಲಿ ಬರುವ ವರದಿಗಳ ಸತ್ಯಾಸತ್ಯತೆಯ ಬಗ್ಗೆ ಹೊಸದಾಗೇನೂ ಹೇಳುವುದೇ ಬೇಕಿಲ್ಲ; ಯಾಕೆಂದರೆ ಅದು ಯಾರಿಗೂ ಗೊತ್ತಿರದ ಗಮ್ಮತ್ತಿನ ವಿಷಯವೇ ಅಲ್ಲ; ಟಿ.ಆರ್.ಪಿ ಹೆಚ್ಚಿಸಿಕೊಂಡು ಹಲವುಕೋಟಿಗಳ ಜಾಹೀರಾತುಗಳನ್ನು ಸುಲಭವಾಗಿ ಪಡೆಯಬಹುದಲ್ಲಾ ಅಲ್ಲವೇ?

ಹೂವುಗಳು ಲಕ್ಷಾಂತರವಿದ್ದರೂ ದೇವಮುಡಿಗೆ ಏರುವ ಹೂವಿಗೆ ಯೋಗ ಇರಬೇಕು; ಹೂವು ಶವಗಳಿಗೂ ಹೋಗಬಹುದು, ರಾಜಕಾರಣಿಗಳ ಹಾರ-ತುರಾಯಿಗಳಿಗೂ ಹೋಗಬಹುದು, ಅಥವಾ ಇನ್ನಾವುದೋ ಅಲಂಕಾರಕ್ಕೂ ಬಳಸಲ್ಪಡಬಹುದು, ಯಾರಿಗೂ ಕಾಣದೇ ಬಾಡಿ ಹೋಗಲೂಬಹುದು. ಅದೇ ರೀತಿ ಯೋಗದಿಂದ ಅಥವಾ ಅದೃಷ್ಟದಿಂದ ಕೆಲವರು ಹುದ್ದೆಗಳನ್ನು ಅಲಂಕರಿಸುತ್ತಾರೆ; ಮಾಜಿಯಾಗಿರುವ ’ಮಣ್ಣಿನಮಗ’ ಇರುವ ಈ ನಾಡಿನಲ್ಲಿ ಅದೃಷ್ಟಕ್ಕೆ ಹೊಸ ಉದಾಹರಣೆ ಬೇಕೇ? ರೈತರೆಲ್ಲಾ ಮಣ್ಣಿನಮಕ್ಕಳೇ, ಆದರೆ ಮಣ್ಣಿನಮಗ ರೈತ ಎಂದು ಯಾರಾದರೂ ಒಪ್ಪಿಕೊಳ್ಳಲು ಸಾಧ್ಯವೇ? ಹೀಗಾಗಿ ಅದೃಷ್ಟದಿಂದ ಸಿಕ್ಕ ಹುದ್ದೆಯಲ್ಲೇ ನಾನಾ ಕಸರತ್ತುನಡೆಸಿ ಮತ್ತಷ್ಟು ಪ್ರಚಾರ, ಪ್ರಭಾವಳಿ ಗಿಟ್ಟಿಸಿಕೊಳ್ಳುವುದು ಕೆಲವರ ಜಾಯಮಾನ. ಅದೃಷ್ಟ ಇರುವವರೆಗೆ ಹೂವು ದೇವರ ಪಲ್ಲಕ್ಕಿಯಲ್ಲೇ ಇರುತ್ತದೆ! ಅದೇ ರೀತಿ ಅದೃಷ್ಟದಿಂದ ಪಡೆದ ಹುದ್ದೆಯಲ್ಲಿ ಮತ್ತದೇ ಅದೃಷ್ಟದಿಂದ ರಾಜಕೀಯ ನಡೆಸಿ ಇನ್ನಷ್ಟು ಸೌಲಭ್ಯಗಳನ್ನೂ ಸೌಕರ್ಯಗಳನ್ನೂ ಪಡೆದುಕೊಳ್ಳುವುದು ಕಂಡ ನಗ್ನಸತ್ಯ. ಅದೃಷ್ಟ ಖುಲಾಯಿಸಿದಾಗ ಪತ್ರಿಕಾ ಸಂಪಾದಕನೊಬ್ಬ ಝಡ್ ಕೆಟೆಗರಿ ಸೆಕ್ಯುರಿಟಿಯನ್ನೂ ಪಡೆಯಬಹುದು ಎಂದು ಓದಿತಿಳಿದ-ಅರ್ಥವಿಲ್ಲದ ಸಂಗತಿ. ಸಂಪಾದಕನೊಬ್ಬನಿಗೆ ಆ ಮಟ್ಟದ ಹೆದರಿಕೆ ಉಂಟಾಗುವಷ್ಟು, ಈ ಸಮಾಜ ಅಷ್ಟೊಂದು ಅಧಃಪತನಕ್ಕಿಳಿದಿದೆ ಎಂದರೆ ಹಾಗೆ ಸಮಾಜವನ್ನು ರೂಪುಗೊಳಿಸಿದ ಔದಾರ್ಯಕರ್ಮವನ್ನು ಮಾಧ್ಯಮವೇ ಹೊತ್ತುಕೊಳ್ಳಬೇಕಾಗುತ್ತದೆ; ಅಂತಹ ಸಮಾಜದ ಜಾತಃಕರ್ಮದಿಂದ ಅಂತ್ಯೇಷ್ಟಿಯವರೆಗಿನ ಸಕಲ ಸಂಸ್ಕಾರಗಳನ್ನೂ ಅದೇ ಮಾಧ್ಯಮ ನಡೆಸಿಕೊಡಬೇಕಾದ ಔಚಿತ್ಯವಿದೆ!      

ಪತ್ರಿಕೆ/ಮಾಧ್ಯಮ ಎಂಬುದು ಸಾರ್ವಜನಿಕರ ಮುಖವಾಣಿ ಎಂಬುದನ್ನು ಮರೆತು, ಅಲ್ಲಿ ಕೇವಲ ಸ್ವಾರ್ಥಲಾಲಸೆಯಿಂದಲೂ ಪ್ರಚಾರಪ್ರಿಯತೆಯಿಂದಲೂ ಪತ್ರಿಕಾಕರ್ತರೇ ಪರಸ್ಪರ ಕಚ್ಚಾಡಿಕೊಳ್ಳುವುದು ಎಂಥಾ ಹಾಸ್ಯಾಸ್ಪದ ವಿಷಯವೆಂದರೆ ಇಂಥವರೂ ಸಮಾಜವನ್ನು ತಿದ್ದುವ ಸಂಪಾದಕರುಗಳಾಗುತ್ತಾರೆ! ಒಬ್ಬ ಎಲೆಯಡಿಕೆ ಉಗುಳಿನ ಬಗ್ಗೆ ಬರೆದರೆ ಮತ್ತೊಬ್ಬ ಚರಂಡಿಯ ನೀರನ್ನು ಎತ್ತಿ ಎರಚಿದ ಬಗ್ಗೆ ಬರೆಯುತ್ತಾನೆ. ಜಗತ್ತಿಗೆಲ್ಲಾ ಸೂರ್ಯನೇ ತಾನೆಂದೂ, ತಾನು ರಿವಾಜಿನಂತೇ ಜೇಬಿನಿಂದ ಹೊರತೆಗೆದದ್ದೇ ಬಂದೂಕೆಂದೂ, ಹಾರಿಸಿದ ಪೀತ ಬರಹಗಳೇ ಶಿಕಾರಿಯೆಂದೂ ಕೊಚ್ಚಿಕೊಳ್ಳುವ ವ್ಯಕ್ತಿಯೊಬ್ಬನ ಪತ್ರಿಕೆ ಪೂರ್ತಿ ಅವನ ವೈಭೋಗಗಳದೇ ರಾಡಿ! ತನ್ನ ಆ ಪುಸ್ತಕ ಇಷ್ಟು ಲಕ್ಷ ಖರ್ಚು ತನ್ನ ಈ ಪುಸ್ತಕ ಅಷ್ಟು ಸಾವಿರ ಪ್ರತಿ ಈಗಾಗಲೇ ಸೋಲ್ಡ್ ಔಟ್ ಎಂದು ಮೀಸೆತಿರುವುವ ಮೂರೂಬಿಟ್ಟ ಯಜಮಾನರಿಗೆ ನೈತಿಕತೆ ಮತ್ತು ಅನೈತಿಕತೆಗಳ ಅಂತರ ಮತ್ತು ಅರ್ಥ ಎರಡೂ ಗೊತ್ತಿಲ್ಲ! ಊದಿದ ಪುಂಗಿಯನ್ನೇ ಊದುತ್ತಿದ್ದರೂ, ಸದಾ ಆಲೈಸುವ ಹೆಡ್ಡ ನಾಗಗಳು ’ತುಸು ಬುಸುಗುಟ್ಟಿದರೂ ಎಲ್ಲಾದರೂ ಅದೇ ಪುಂಗಿಯಿಂದ ಆತ ಬಡಿದು ಸಾಯಿಸಬಹುದು’ ಎಂದು ಹೆದರಿಕೊಂಡು ಬಾಲಮಡಚಿಕೊಂಡಿವೆ ಎಂಬುದು ಅಷ್ಟೇ ಸತ್ಯ. ತಮ್ಮದೇ ಗಟಾರಗಳಲ್ಲಿ ಮುಳುಗಿ ನಾತ ಬೀರುತ್ತಿರುವ ಇಂಥವರೇ ಗಟಾರಭಾತ್ಮೆಗಳನ್ನು ಸೃಷ್ಟಿಸಿ ಬರೆಯುವ ಚಾಕಚಕ್ಯತೆ ಉಳ್ಳವರೆಂಬುದು ಸುಳ್ಳಲ್ಲ, ಆದರೆ ಅಂಥಾ ಪೀತಬರಹಗಳೇ ಜನರಿಗೆ ಬೇಕಾಯ್ತೇ ಎಂಬುದು ಬಹುದೊಡ್ಡ ಪ್ರಶ್ನೆ; ಉತ್ತರಿಸುವವರಿಲ್ಲ! ಕುಡಿದೂ ಕುಡಿದೂ ಕುಡಿದೂ ಮೈಗೊಂಡುಹೋದಹಾಗೇ ಪೀತಸಾಹಿತ್ಯವನ್ನೇ ಓದಿ ಮಜಾಪಡೆಯುವ ವರ್ಗವೇ ಜಾಸ್ತಿ ಆಗಿದೆಯೇನೋ ಎಂಬ ಭಾವನೆ ಬರುತ್ತಿದೆ. ಯಾಕೆಂದರೆ ಪ್ರತಿನಿತ್ಯ ವಾಹಿನಿಗಳಲ್ಲಿ ಬರುವ ಅನೈತಿಕ ಸಂಬಂಧಗಳ ಕುರಿತಾದ ಅತಿವಿಜೃಂಭಿತ ವರದಿಗಳು ಅದನ್ನು ಸಾಬೀತುಪಡಿಸುತ್ತವೆ!

ಇನ್ನು ಸಾಹಿತಿಗಳು ತಾವೆಂದುಕೊಳ್ಳುವ ಕೆಲವು ಪತ್ರಿಕಾಕರ್ತರ ಬಗ್ಗೆ, ಅವರು ಬರೆದ ಪುಸ್ತಕಗಳ ಬಗ್ಗೆ ಹೇಳುವುದಾದರೆ ರಟ್ಟೆಗಾತ್ರದ ಪುಸ್ತಕಗಳಲ್ಲಿ ಹೇಳಿಕೊಳ್ಳುವ ಅಂಥಾದ್ದೇನಿದೆ ಎಂಬುದು ಎಲ್ಲೂ ಕಾಣುತ್ತಿಲ್ಲ; ಪುಸ್ತಕಗಳನ್ನು ಬರೆದದ್ದು ಯಾರೋ ಹೆಸರು ಇನ್ಯಾರದೋ ಆದ ಕೆಲವು ಘಟನೆಗಳ ಬಗ್ಗೆಯೂ ಕೇಳಿ ತಿಳಿದಿದ್ದೇನೆ. ಮೂಲ ಕೃತಿಗಳ ಅನುವಾದಗಳಂತೂ ದೇವರಿಗೇ ಪ್ರೀತಿ; ತಲೆದಿಂಬಿಗೆ ಪರ್ಯಾಯವೆನಲೂ ಗಡಸುತನದಿಂದ ಕುತ್ತಿಗೆ ನೋವು ಆದರೆ ಕಷ್ಟ! ನಿದ್ರೆ ಬಾರದ ಯಾರಾದರೂ ಇದ್ದರೆ ನಾನು ಕೆಲವು ಪುಸ್ತಕಗಳನ್ನು ಓದಲು ಕೊಡಬಹುದು, ಮಾರು ದೂರ ಕಂಡರೂ ಸಾಕು ನಿದ್ದೆ ಆರಂಭವಾಗಿಬಿಡುತ್ತದೆ. ಎಲ್ಲಾ ಬೆಕ್ಕುಗಳು ಹಾಲನ್ನೇ ಇಷ್ಟಪಟ್ಟರೆ ತೆನ್ನಾಲಿಯ ಬೆಕ್ಕು ಹಾಲನ್ನು ಕಂಡು ಓಡುತ್ತಿತ್ತು ಎಂಬ ಕಥೆ ಕೇಳಿರುವಿರಲ್ಲ? ಸಾಹಿತ್ಯದಲ್ಲಿ ಅನಾಸಕ್ತಿ ಹುಟ್ಟಬೇಕೆಂದರೆ ಅಂಥಾ ನಾಕು ಪುಸ್ತಕಗಳೇ ಸಾಕು! ನಾಳಿನದಿನ ಅಂಥಾ ಕೃತಿಗಳಿಗೂ ’ಜ್ಞಾನಪೀಠ’ ಬಂದರೆ ಆಶ್ಚರ್ಯವಿಲ್ಲ. ಇಂಥಾ ಸಾಹಿತಿಗಳಲ್ಲಿ ಅನೇಕರು ತಮ್ಮ ಶಂಖಗಳಲ್ಲಿ ಏನನ್ನೋ ಹಾಕಿಕೊಂಡು ಇಗೋ ತೀರ್ಥ ಎಂದು ಎರಚಿದರೆ ಬೊಗಸೆಹಿಡಿದು ಕುಡಿಯುವ ದಡ್ಡಮಂದಿಗೆ ಅದರ ಪರಾಮರ್ಶೆಮಾಡುವ ಯೋಗ್ಯತೆ ಇಲ್ಲದ್ದು ತಿಳಿಯುತ್ತದೆ; ಹಿಮಾಲಯವನ್ನು ಅಳೆಯಲು ಮಾರುದ್ದದ ಮೀಟರ್ ಪಟ್ಟಿ ಸಾಕು ಎಂದು ಜ್ಞಾತಿಗಳೊಬ್ಬರು ಹೇಳಿದ್ದರು-ಅದರಂತೇ ಓದುಗರು ಅಳೆಯುವ ಪಟ್ಟಿಯಾಗದಷ್ಟು ದಡ್ಡರೇ? ಎಂಬುದು ಅರ್ಥವಾಗದ ರಹಸ್ಯ; ಅದು ವ್ಯಕ್ತಿಗತ ಅಂಧಾಭಿಮಾನವೂ ಇರಬಹುದು! ಏನನ್ನು ಓದಬೇಕು ಏನನ್ನು ಓದಬಾರದು ಅಥವಾ ಏನನ್ನು ಯಾವಾಗ ಎಷ್ಟರಮಟ್ಟಿಗೆ ಓದಬೇಕು ಎಂಬುದು ಓದುಗ ಮಹಾಶಯರಿಗೆ ಬಿಟ್ಟ ವಿಷಯವಾಗಿದೆ;ಅದು ಅವರವರ ಆಯ್ಕೆಯಾಗಿದೆ. ಸಾವಿರ ಸಾವಿರ ಪುಸ್ತಕಗಳ ರಾಶಿ ಹಾಕಿದರೂ ಗಂಟೆಗಳಲ್ಲಿ ಅವುಗಳನ್ನು ಅಳೆದು-ಸುರಿದು ಯಾವುದನ್ನು ಓದಲೇಬೇಕು, ಯಾವುದನ್ನು ಓದಬೇಕು, ಯಾವುದನ್ನು ಓದಬಹುದು, ಯಾವುದನ್ನು ಓದಿದರೆ ಪರವಾಯಿಲ್ಲ, ಯಾವುದನ್ನು ಓದಲೇಬಾರದು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸದ್ಯ ನನಗೆ ದಕ್ಕಿದೆ, ಅದು ಸತತ ಓದಿನಿಂದ ಹಲವರಿಗೆ ದಕ್ಕಲೂ ಬಹುದು. ಯಾವುದೋ ಪುಸ್ತಕವನ್ನು ಓದುವುದಿಲ್ಲ ಎಂದರೆ ಅದು ನನ್ನ ಓದಿನ ವ್ಯಾಪ್ತಿಗೆ ಬರುವುದಿಲ್ಲ ಎಂಬರ್ಥವೇ ಹೊರತು ಅದು ಧಿಮಾಕಿನ ವಿಷಯವಾಗಿರುವುದಿಲ್ಲ. ಹೇಗೆ ಔತಣ ಕೂಟದ ಊಟದ ತಟ್ಟೆಯಲ್ಲಿರುವ ಎಲ್ಲಾ ಖಾದ್ಯಗಳನ್ನೂ ಎಲ್ಲರೂ ತಿನ್ನುತ್ತಾರೆ ಎಂಬ ನಿಗದಿಯಿಲ್ಲವೋ ಹಾಗೆಯೇ ಓದು ಕೂಡ ಐಚ್ಛಿಕ, ಅದು ಬಲವಂತದ ಮಾಘಸ್ನಾನವಲ್ಲ.            

’ಕನ್ನಡಪ್ರಭ’ದ ವಿಶ್ವೇಶ್ವರಭಟ್ಟರು ದಿ| ಶಿವರಾಮ ಕಾರಂತರ ಉದಾಹರಣೆಯನ್ನು ’ಅಡಾಸಿಟಿ’ ಎಂಬ ಆಂಗ್ಲಪದವನ್ನು ಉದ್ದರಿಸುವುದಕ್ಕೆ ತಮ್ಮ ೬.೧೨.೨೦೧೨ರ ವ್ಯಾಖ್ಯಾನದಲ್ಲಿ ಮಂಡಿಸಿದ್ದರು, ಆ ಕುರಿತು ಕೆಲವು ಕಡೆ ಪ್ರಸ್ತಾಪಗಳು ಆಗುತ್ತಿರುವುದು ಕಂಡುಬಂದಿದೆ. ’ಭಾಷಾತಜ್ಞ’ ಭಟ್ಟರು ಸೊಕ್ಕು ಮತ್ತು ಧಿಮಾಕು ಎಂಬ ಪದಗಳಿಗೆ ಭಾಷ್ಯವನ್ನು ಬರೆಯಲು ಹವಣಿಸಿ, ಕಾರಂತರ ಜೀವನದ ಒಂದು ಘಟನೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕಾರಂತರಿಗಿದ್ದಿದ್ದು ಧಿಮಾಕೇ ಹೊರತು ಸೊಕ್ಕಲ್ಲ, ಸಾಕಷ್ಟು ವಿದ್ವತ್ತು ಮತ್ತು ವಿಷಯ ಪ್ರೌಢಿಮೆ ಇರುವ ವ್ಯಕ್ತಿಗೆ ಧಿಮಾಕು ಇದ್ದರೆ ತಪ್ಪಲ್ಲ ಎಂದು ಅಪ್ಪಣೆಕೊಡಿಸಿಬಿಟ್ಟಿದ್ದಾರೆ. ಇಲ್ಲಿ ಅವರಿಗೆ ಒಂದು ಮಾತನ್ನು ತಿಳಿಸಬಯಸುತ್ತೇನೆ ಏನೆಂದರೆ: ಕಾರಂತರಿಗೆ ಸೊಕ್ಕು, ಧಿಮಾಕು ಎರಡೂ ಇರಲಿಲ್ಲ; ಬದಲಾಗಿ ಅವರ ವ್ವಭಾವವೇ ವಿಶಿಷ್ಟವಾಗಿತ್ತು. ಕಾರಂತರು ಬದುಕಿನಲ್ಲಿ ಅನುಭವಕ್ಕಾಗಿ, ಮಾಹಿತಿಗಾಗಿ ಸ್ವಂತ ಆಸ್ತಿಯನ್ನು ಮಾರಿ ವಿದೇಶಕ್ಕೆ ತೆರಳಿದ್ದರು, [ಮೀಸಾಕಾಯ್ದೆಯಲ್ಲಿ ಹಲವು ದೇಶಭಕ್ತರನ್ನು ಇಂದಿರಾಗಾಂಧಿ ಬಂಧಿಸಿದ್ದ ಕಾಲದಲ್ಲಿ] ತಮಗೆ ಕೊಡಮಾಡಿದ ಪದ್ಮಪ್ರಶಸ್ತಿಯನ್ನು ಮರಳಿ ಬಿಸುಟಿದ್ದರು, ಓಡಾಡುವಾಗ ವಾಹನದಲ್ಲಿ ವಾಹನ ಚಲಿಸುವ ದಿಕ್ಕಿಗೆ ವಿರುದ್ಧ ಮುಖದಲ್ಲಿ ಎಂದೂ ಕೂರುತ್ತಿರಲಿಲ್ಲ, ಬೆಳಿಗ್ಗೆ ಸೂರ್ಯೋದಯದ ನಂತರವೇ ಆರಂಭವಾಗುವ ಅವರ ಯಾನ ಸೂರ್ಯಾಸ್ತದ ನಂತರ ಇರುವಲ್ಲೇ ನಿಂತುಬಿಡಬೇಕಿತ್ತು-ಇವೆಲ್ಲಾ ಅವರ ರಿವಾಜುಗಳು. ಅದರಂತೇ ಓದಿಗೂ ಕೂಡ ಅವರು ಅವರದ್ದೇ ಆದ ಚೌಕಟ್ಟನ್ನು ರೂಪಿಸಿಕೊಂಡಿದ್ದರು. ಬಹುಪಠಿತ್ವದ ಪಂಡಿತರಾದ ಕಾರಂತರಿಗೆ ಭಟ್ಟರು ಹೇಳಿದ ಕನ್ನಡದ ಹಿರಿಯ ಕವಿಯ ಕವನಗಳು ಹಿಡಿಸದಿದ್ದುದಕ್ಕೆ ಕಾರಣವಿರಬಹುದು. ಆ ಹಿನ್ನೆಲೆಯಲ್ಲಿ ಕಾರಂತರು "ನಿಮ್ಮ ಕಾವ್ಯಗಳನ್ನು ಓದುವುದು ನನಗೆ ಕಷ್ಟ, ನಿಮ್ಮ ಪುಸ್ತಕದ ಬಿಡುಗಡೆಗೆ ನಾನು ಬರಲಾರೆ" ಎಂದು ಹೇಳಿದ್ದಿರಬಹುದು; ಅದು ಅವರ ಸಹಜ ಪ್ರವೃತ್ತಿ. ಕಾರಂತರು ಒಳಗೊಂದು ಹೊರಗೊಂದು ಇಟ್ಟುಕೊಂಡ ಜನವಲ್ಲ; ಯಾವುದನ್ನು ಹೇಳುತ್ತಿದ್ದರೋ ಅದನ್ನೇ ಮಾಡುತ್ತಿದ್ದರು. ಕೇವಲ ಹೊರಜನರ ದೃಷ್ಟಿಕೋನದಿಂದ ಅದನ್ನು ಅಳೆದು ಅವರಿಗೆ ಧಿಮಾಕಿತ್ತು ’ಅಡಾಸಿಟಿ’ಗೆ ಅದು ಉದಾಹರಣೆ ಎಂಬುದು ಭಟ್ಟರ ಮಾಡಿದ ಅನರ್ಥವಾಗಿದೆ. ಮುಕ್ತವಾಗಿ ಹೇಳ್ಬೇಕೆಂದರೆ ಭಾಷೆ ಕರತಲಾಮಲಕವಾಗಿದೆ ಎಂಬ ಸೊಕ್ಕಿಗೆ ಉದಾಹರಣೆ ನಮ್ಮ ಭಟ್ಟರು ಎಂದರೆ ತಪ್ಪಾಗಲಾರದಲ್ಲ! 

’ಅಂಡೆಪಿರ್ಕಿ’ ಎಂಬ ಪದವನ್ನು ತಿಂಗಳಾನು ಗಟ್ಟಲೆ ಧಾರಾವಾಹಿಯಂತೇ ವಿಜಯಕರ್ನಾಟಕದಲ್ಲಿ ಕೊರೆದಿದ್ದ ಭಟ್ಟರು ಅಲ್ಲಿಯೂ ಈಗಿರುವ ’ಕನ್ನಡಪ್ರಭ’ದಲ್ಲಿಯೂ ರಿಚರ್ಡ್ ಬ್ರಾನ್ಸನ್ ಮತ್ತು ಐಪಾಡ್ ಇಂತಹ ಕೆಲವು ವಿಷಯಗಳನ್ನು ಬಿಟ್ಟು ಬೇರೇ ಪ್ರಪಂಚದ ಪರಿಮಾರ್ಜನೆಗೆ ತೊಡಗಿಕೊಳ್ಳಲಿಲ್ಲ. ಹೆಚ್ಚೆಂದರೆ ಚೀನಾ ಗೋಡೆಯಮೇಲೆ ಅವರು ನಡೆದಿದ್ದು-ನಿಂತಿದ್ದು, ಪ್ರಧಾನಿಯ ಜೊತೆ ವಿಮಾನಯಾನದಲ್ಲಿ ಸಹಯಾತ್ರೆ ಮಾಡಿದ್ದು ಇಂಥಾ ಹೈಲೆವೆಲ್ ಪ್ರವಾಸಗಳ ಕುರಿತು ಕೆಲವು ದಿನ ಕೊರೆದಿದ್ದು-ಕೊಚ್ಚಿಕೊಂಡಿದ್ದು  ಬಿಟ್ಟರೆ ಕನ್ನಡಸಾಹಿತ್ಯದ ಮಜಲುಗಳ ಮತ್ತು ಅದರ ಆಳಗಲಗಳ ಬಗೆಗಿನ ಘನಪಾಂಡಿತ್ಯ ಭಟ್ಟರಿಗೆ ಸಿದ್ಧಿಸಲಿಲ್ಲ ಎಂಬುದನ್ನು ಅನೌಪಚಾರಿಕವಾಗಿ ಒಪ್ಪಬೇಕಾದ ವಿಷಯವಾಗಿದೆ. ’ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್’ ಎಂದ ಕನ್ನಡಕವಿಯ ಒಕ್ಕಣೆಯಂತೇ, ಕುಳಿತಲ್ಲೇ ಏನನ್ನೂ ಓದದೇ ಕೆಲವರು ಪಂಡಿತರಾಗಲೂ ಬಹುದು ಎಂಬುದು ಅಂದೇ ಸಾಧ್ಯವಾಗಿತ್ತು ಎನಿಸುತ್ತದಲ್ಲಾ ಅಂತೆಯೇ ಭಟ್ಟರೂ ಕೂಡ ಹಾಗೇ ಪಂಡಿತವರ್ಗದಲ್ಲಿ ಸೇರಿರುವುದರ ಜೊತೆಗೆ ಮಹಾಪಂಡಿತ ಎಂಬ ಬಿರುದನ್ನೂ ಪಡೆಯಲು ಅವಿರತ ತೊಡಗಿಕೊಂಡಿರುವುದು ವೇದ್ಯವಾಗುತ್ತದೆ. ಹೀಗಾಗಿ ಅವರು ಆಗಾಗ ಹಿರಿಯ ಕವಿ-ಸಾಹಿತಿಗಳ ಸುತ್ತ ಮತ್ತು ಯಾವುದೋ ಕೆಲವೊಂದು ಪದಗಳ ಸುತ್ತ ಗಿರಕಿಹೊಡೆಯಲು ಆರಂಭಿಸಿ ತಲೆಸುತ್ತು ಬಂದು ಸುಸ್ತಾದವರಂತೇ ಕಾಣಿಸುತ್ತಾರೆ!  ರಾಜಕೀಯದಲ್ಲಿ, ಪ್ರಭಾವಲಯ ಸೃಷ್ಟಿಸುವುದರಲ್ಲಿ ಮತ್ತು ತಾನು ’ಮಹಾಪಂಡಿತ’ ಎನಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಅವರಿಗೆ ಪ್ರಾವೀಣ್ಯತೆ ಇದೆ ಎಂಬುದು ಸುಳ್ಳಲ್ಲ. ಹಾಗೆಂದೇ ಗಿಂಡಿ ಹಿಡಿದವರು, ಪ್ರಪಂಚ ಬೆತ್ತಲುಮಾಡುವವರು, ಬುಡಬುಡಿಕೆ ಬಾರಿಸುವವರು, ರೀಡರ್ಸ್ ಡೈಜೆಸ್ಟ್ ಲೇಖನಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸುವವರು  ಮೊದಲಾದವರೆಲ್ಲಾ ಸದಾ ಬೆತ್ತವನ್ನೋ ಕತ್ತಿಯನ್ನೋ  ಹಿಡಿದ ’ಕರಗ’ದ ವ್ರತಧಾರಿಗಳಂತೇ ಅವರ ಸುತ್ತ ’ಸಭಾರತ್ನ’ಗಳಾಗಿ ಶೋಭಿಸುತ್ತಾರೆ! ಹೋಗಲಿ ಬಿಡಿ ಪತ್ರಕರ್ತರೆಲ್ಲಾ ಸಾಹಿತಿಗಳಾಗಬೇಕೆಂದೇನೂ ಇಲ್ಲ, ಅಥವಾ ಸಾಹಿತಿಗಳೆಲ್ಲಾ ಪತ್ರಕರ್ತರಾಗಬೇಕೆಂದೂ ಇಲ್ಲ, ಎರಡನ್ನೂ ಏಕಕಾಲಕ್ಕೆ ಸಾಧಿಸಿದ, ಸಾಮಾಜಿಕ ನಿಲುವನ್ನು ವಾದಿಸಿದ ಕೆಲ ಮಹಾತ್ಮರು ನಮ್ಮಲ್ಲಿ ಆಗಿಹೋಗಿದ್ದಾರೆ; ಸಾಹಿತಿ-ಪರ್ತಕರ್ತರೆಂದೆನಿಸಿಕೊಳ್ಳುವ ತುರಿಕೆಯುಳ್ಳವರು ಅಂಥಾ ಮಹಾತ್ಮರ ನಡೆಯನ್ನು ಗಮನಿಸಿ, ಅವರ ಹಾದಿಯಲ್ಲಿ ನಡೆದರೆ ಒಳಿತಾಗುತ್ತಿತ್ತು; ಆದರೆ ಅಂಥಾ ಪತ್ರಕರ್ತರಿಗೆ ಗಂಟಕೀಳಲು ಆಗುತ್ತಿರಲಿಲ್ಲ ಎಂಬುದೂ ಗಮನಿಸಬೇಕಾದ ತಾತ್ಪರ್ಯ. ಹಾಗೊಮ್ಮೆ ತಿರುತಿರುಗಿ ಅವಲೋಕಿಸಿದಾಗ ಭಟ್ಟರ  ತುತ್ತೂರಿ ಬಣ್ಣದ ತಗಡಿನದ್ದೆನಿಸಿದರೆ ಕಾರಂತರಂಥಾ ಶಕ್ತಿ ಮೇರು ಪರ್ವತವಾಗಿ ಕಾಣುತ್ತಾರೆ; ಜಾತ್ರೆ ಮುಗಿದರೂ ಜನ ಮರೆಯದ ಕನ್ನಡದ ಕೆಲವು ವ್ಯಕ್ತಿತ್ವಗಳಲ್ಲಿ ಕಾರಂತರೂ ಒಬ್ಬರು-ಅವರು ಭಟ್ಟರ ನಿಮ್ನ ಪದಗಳಿಗೆ ನಿಲುಕುವ ಸಣ್ಣ ಜನ ಅಲ್ಲ ಬಿಡಿ!   


Thursday, December 13, 2012

ಮಂಜಿನ ಮಧುಬಾಲೆ !

ಚಿತ್ರಋಣ: ಅಂತರ್ಜಾಲ
ಮಂಜಿನ ಮಧುಬಾಲೆ !

[ಚಳಿಗಾಲದ ಮುಂಜಾವಿನ ದೃಶ್ಯಕ್ಕೊಂದು ಕವನ] 

ಕಾನನದ ಅಂಚಿನಲಿ ಭೂರಮೆಯ ಸಂಚಿಯಲಿ
ಬಾನಗಲ ಕೆಂಪಡರಿ ಬೆಳಕುs ಹರಿದೂ
ತಾನ ತಾನನವೆಂಬ ಹಕ್ಕಿಗಳು ಚುಂಚಿನಲಿ
ಯಾನವಾರಂಭಿಸೆ ಲಲ್ಲೆsಗರೆದೂ 

ಭಾನು ರಥವೇರಿಬರೆ-ಮೇನೆಯಡರಿದ ತೆರದಿ
ಕೋನದಲಿ ಮರಗಳವು ಸಾಲು ನಿಂದು
ತಾನು ತಾನೆನ್ನುತ್ತ ಛಂಗನೋಡುವ ಭರದಿ
ದೀನಕಂಗಳ ಹರಿಣsಗಳವು ಸಂದು

ಧ್ಯಾನದಲಿ ಭಕ ಸಾಧು ಗಂಟೆಗಟ್ಟಲೆ ಹೊತ್ತು
ಮೀನುಗಳ ಹಂಬಲಿಸಿ ಮಡುವಿನಲ್ಲಿ
ಯೇನಕೇನದಿ ಕೆಲವು ಮತ್ಸ್ಯಗಳಿಗೆ ಕುತ್ತು
ಹೀನ ಸನ್ಯಾಸಿಯ ಗೊಡವೆಯಲ್ಲಿ !

ಮಾನ ಮುಚ್ಚಿಕೊಂಬ ಷೋಡಶಿ ಮೋಡಗಳು 
ಊನವ ಮರೆಮಾಚಿ ವಿವಿಧಾಕಾರ !
ಧೇನು-ಕರುಗಳ ಕೂಗು ದೂರದ ಕಾಡುಗಳ
ಧೇನಿಸಿ ಹಸಿಹುಲ್ಲು ಹಸಿರಾಹಾರ

ಸಾನುರಾಗದಿ ಸಖನ ಸೇವಿಪ ಈ ಭೂಮಿ
ಕಾನೂನು ಇಹ ರೀತಿ ಮಾಘದಲ್ಲಿ
ಸೇನೆ ನುಗ್ಗಿದಂತೆ ಸುರಿದು ಮಂಜನು ಚಿಮ್ಮಿ
ಮೌನಿಯಾ ಕೆಳೆರಾಯ ರಾಗದಲ್ಲಿ ! 

ಜೇನುಗಳು ಗುಂಯ್ಯೆಂದು ಹೂಗಳ ಮಕರಂದ- 
ಪಾನದ ಸಮಯಕ್ಕೆ ಸೋಬಾನೆಯು
ಸ್ನಾನದಿ ಶುಚಿಗೊಂಬ ಧರಣಿ ಮಂಜಲಿ ಮಿಂದು 
ಮ್ಲಾನವದನೆಯಾಗಿ ಮಧುಬಾಲೆಯು

Sunday, December 9, 2012

ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಚಿತ್ರಋಣ :ಅಂತರ್ಜಾಲ
ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಮಹಾಸ್ವಾನಿಗಳು ಮೈತುಂಬಾ ಕೆಂಪುಶಾಲನ್ನು ಹೊದ್ದಿದ್ದರು. ತಲೆಗೆ ಕೆಂಪು ರೇಷ್ಮೆಯ ಮುಂಡಾಸನ್ನು ಸುತ್ತಿದ್ದರು. ಹಣೆಯಲ್ಲಿ ಧರಿಸಿದ್ದ ವಿಭೂತಿಯ ಅವಶೇಷವೂ ಇತ್ತು. ನಿಧಾನವಾಗಿ ಭಾವುಕರಾಗಿ,  ಇಳಿಸಂಜೆ ಮೋಡಕವಿದ ವಾತಾವರಣದಲ್ಲಿ ಗಾಂಧೀಬಜಾರಿನಲ್ಲಿ ಹೆಜ್ಜೆಹಾಕುತ್ತಿದ್ದಾಗ ದೂರದಿಂದಲೇ ಇದನ್ನು ಕಂಡು ಜಂಗಮರೊಬ್ಬರು ಓಡೋಡಿ ಬಂದರು. ನಮಸ್ಕರಿಸುತ್ತಾ "ಶರಣು, ತಮ್ಮದು ಯಾವ ಮಠ?" ನಮ್ಮ ಮಹಾಸ್ವಾಮಿಗಳು ಉತ್ತರಿಸದರು "ನಮ್ಮದು ತಿಮ್ಮಲಿಂಗದೇವರ ಮಠ." ಆಗ ಜಂಗಮರು "ಏನಾದರೂ ತತ್ವ ಅಪ್ಪಣೆಯಾಗಬೇಕು" ಎಂದರು. ಸಂತೋಷಗೊಂಡ ಮಹಾಸ್ವಾಮಿಗಳು ಜಂಗಮರನ್ನು ಬಸವನಗುಡಿಯ ಕ್ಲಬ್ ಎದುರಿಗಿರುವ ಸಣ್ಣ ಉದ್ಯಾನಕ್ಕೆ ಕರೆದೊಯ್ದರು. ಸಂಜೆಯವೇಳೆ ಕ್ಲಬ್ಬಿಗೆ ಬರಬಹುದಾದ ತಮ್ಮ ಪರಿಚಿತರಿಗೆ ಕಾಣದಂತೇ ಕುಳಿತು ತತ್ವಪದಳನ್ನು ಆಶುವಾಗಿ ಕಟ್ಟಿಹೇಳಿದರು:

ನವಕೋಟಿ ಹಣವೇನು ಶಿವಭಕ್ತಿಯಿಲ್ಲದೇ-ಜಂಗಮಯ್ಯ |
ಶಿವಭಕ್ತಿಯಿರುವಾಗ ನವಕೋಟಿ ಹಣವೇಕೆ? ಜಂಗಮಯ್ಯ ||
ಭದ್ರಾಕ್ಷಿಯಿಲ್ಲದೇ ರುದ್ರಾಕ್ಷಿಯಿಂದೇನು ಜಂಗಮಯ್ಯ |
ಭದ್ರಾಕ್ಷಿಯಿದ್ದರೆ ರುದ್ರಾಕ್ಷಿಯೇತಕೋ ಜಂಗಮಯ್ಯ ||
.
.
.
.
.
ಏನೇನೋ ಗತ್ತುಮಾಡಿದ ನಮ್ಮಶಿವ 
ಏನೋ ಗಮ್ಮತುಮಾಡಿದ |
ಪಟ್ಟೆಬೂದಿ ಹಚ್ಚಿಕೊಂಡು | ಬೆಟ್ಟದೋಳ್ನ ಕಟ್ಟಿಕೊಂಡು
ಹುಚ್ಚು ಹುಚ್ಚು ಲೀಲೆಮಾಡಿದ ||
ಬೆತ್ತಲೇಲಿ ನೃತ್ಯಮಾಡಿದ-ನಮ್ಮಶಿವ
ಕತ್ತಲೇಲಿ ಸೃಷ್ಟಿಮಾಡಿದ |
ಬೆತ್ತಲೇಲಿ ನೃತ್ಯಮಾಡಿ | ಕತ್ತಲೇಲಿ ಸೃಷ್ಟಿಮಾಡಿ
ಸೊಟ್ಟಾಪಟ್ಟೆ ಲೋಕಮಾಡಿದ ||

ತಂಬೂರಿ-ಚಿಟಿಕೆಗಳಿಲ್ಲದ ಜಾಗವನ್ನು ಕೈತಟ್ಟಿ ತಾಳಹಾಕಿ ಮೈಕುಲುಕಿಸಿ ರಾಗವಾಗಿ ಹಾಡಿದರು ಮಹಾಸ್ವಾಮಿಗಳು. ತಲೆಯಲ್ಲಾಡಿಸುತ್ತಾ ತತ್ವಪದಗಳನ್ನು ಕೇಳುತ್ತಿದ್ದ ಜಂಗಮರು "ಟೀಪು ಅಪ್ಪಣೆಯಾಗಬೇಕು ಗುರುವೇ" ಎಂದಾಗ ಹಾಡಿದ ತತ್ವಪದಗಳಿಗೆ ವ್ಯಾಖ್ಯಾನವನ್ನೂ ಮಾಡಿದರು. ಈ ಇಡಿಯ ಸಂದರ್ಭವನ್ನು ಆಸ್ವಾದಿಸಬಯಸುವವರು ಡಿವಿಜಿಯವರ ’ಜ್ಞಾಪಕಚಿತ್ರಶಾಲೆ’ಯ ಏಳನೇಭಾಗವನ್ನು ಓದಬೇಕು. ಸರಳಮುಗ್ಧ ಸ್ವಭಾವವನ್ನು ಗೌರವಿಸಿ ಅದರಂತೇ ನಡೆದು ಸಮಾಧಾನ ನೀಡಬಲ್ಲ ಹೃದಯವಂತಿಕೆ ಮತ್ತು ಸರಳಪದಗಳಲ್ಲಿಯ ಹೆಣೆದ ತತ್ವಪದಗಳಲ್ಲಿಯೂ ಗಹನವೇದಾಂತದ ಸಂದೇಶಗಳನ್ನು ಹುದುಗಿಸಿ ಕಟ್ಟಿಕೊಡಬಲ್ಲ ಬಲ್ಮೆ ಡಿವಿಜಿಯವರಿಗೆ ಸಹಜವಾಗಿ ರಕ್ತಗತವಾಗಿತ್ತು. ಅಂದಹಾಗೇ ಗಾಂಧೀಬಜಾರಿನಲ್ಲಿ ಜಂಗಮರಿಗೆ ಸಿಕ್ಕ ಆ ಮಹಾಸ್ವಾಮಿಗಳು ಡಿವಿಜಿ ಎಂದರೆ ಆಶ್ಚರ್ಯಪಡಬೇಡಿ ! ಹರಿಹರ ಭೇದವನ್ನು ಅಳಿಸಲು ತಮ್ಮದು ತಿಮ್ಮ[ಹರಿ]ಲಿಂಗ[ಹರ]ದೇವರ ಮಠ ಎಂದಿದ್ದನ್ನು ಗಮನಿಸಬೇಕು. ಚಿಕ್ಕಂದಿನಿಂದಲೂ ಸಂನ್ಯಾಸ ಮತ್ತು ಪರಿವ್ರಾಜಕತ್ವದೆಡೆಗೆ ಅವರ ಮನಸ್ಸು ವಾಲುತ್ತಿತ್ತು. ಸದಾ ಅವಧೂತಪ್ರಜ್ಞೆಯನ್ನು ಹೊಂದಿದ್ದ ಡೀವಿಜಿ ಅಂತಹ ದಿರಿಸುಗಳಲ್ಲಿ ಅವಧೂತರಂತೆಯೋ ಜಂಗಮರಂತೆಯೋ ಕಾಣುತ್ತಿದ್ದರು ! ಎಪ್ಪತ್ತು ದಾಟಿದ ನಂತರವೂ ಅವರಿಗೆ ಭೈರಾಗಿ-ಜಂಗಮ ಜೀವನದ ಆಕರ್ಷಣೆ ಹೋಗಿರಲಿಲ್ಲ. ಅಂತಹ ಒಂದು ಪ್ರಸಂಗವೇ ಈ ಮೇಲೆ ಹೇಳಿದ್ದು.     

ಮಹಾತ್ಮರಿಗೆ ಜೀವನದಲ್ಲಿ ಕಷ್ಟಗಳಿರುವುದಿಲ್ಲವೆಂದೇನೂ ಅಲ್ಲ; ಎದುರಾದ ಕಷ್ಟಗಳಿಗೆ ತಮ್ಮಲ್ಲೇ ಪರಿಹಾರ ಕಂಡುಕೊಳ್ಳುವುದು ಅವರ ಸಾಮರ್ಥ್ಯ. ಕಷ್ಟ ಮನುಷ್ಯ ಸಹಜ ಎಂಬ ಭಾವದಿಂದ ತನಗೆ ಬಂದ ಕಷ್ಟವನ್ನು ಮೂರನೆಯವರಾಗಿ ಎದುರುನಿಂತು ಉತ್ತರಹೇಳಿಕೊಂಡು ಸಮಾಧಾನ ಪಡುವುದು ಅವರ ಐಚ್ಛಿಕ ನಡೆಗಿರುವ ಹಿರಿಮೆ. ೧೮-೧೯-೨೦ನೇ ಶತಮಾನದ ಕನ್ನಡದ ಬಹುತೇಕ ಕವಿಗಳು ಜೀವನದಲ್ಲಿ ಬಡವರಾಗೇ ಇದ್ದರು. ಬಡತನ ಅವರಿಗೆ ಸಹಿಸಲಸಾಧ್ಯ ವೇದನೆಯಾಗಿ ಕಾಡಲಿಲ್ಲ; ಬಡತನ ತಮಗೆ ದೇವರುಕೊಟ್ಟ ಭಾಗ್ಯ ಎಂದುಕೊಂಡೇ ಅದನ್ನವರು ಅನುಭವಿಸಿದರು; ಮುರುಕು ಗುಡಿಸಲೋ ಹರುಕು ಚಾಪೆಯೋ ಅದರಲ್ಲೇ ತೃಪ್ತಿಯಿಂದ ಕಾವ್ಯ-ಸಾಹಿತ್ಯದ ಕೃಷಿ ನಡೆಸಿದರು. ಬಡತನದಲ್ಲಿ ಕಣ್ಣೆದುರು ಸಾಯುವ ಮಕ್ಕಳ ಅನಿವಾರ್ಯ ಅಗಲಿಕೆಯ ನೋವನ್ನು ಸಹಿಸಿಯೂ ಬದುಕಿದವರು ವರಕವಿ ಬೇಂದ್ರೆ. ದೇಶಪರ್ಯಟನೆಯ ಕನಸನ್ನು ಕಾಣುತ್ತಾ ಆರ್ಥಿಕ ಹೀನ ಸ್ಥಿತಿಯಲ್ಲಿ ಎಲ್ಲಿಗೂ ಹೋಗಲಾರದಾದಾಗ ಇರುವಲ್ಲೇ ಕಾವ್ಯದಲ್ಲಿ, ಕೃತಿಗಳಲ್ಲಿ ವಿಹರಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಬಡತನ ಅವರನ್ನೆಲ್ಲಾ ಆಳಲಿಲ್ಲ; ಆದರೆ ಅವರಿಗೂ ಬಡತನವಿತ್ತು ಎಂಬುದನ್ನು ಅಂಥವರ ಕೃತಿಗಳಿಂದ ಅಂದಾಜಿಸಿಕೊಳ್ಳಬಹುದಾಗಿದೆ. ಬದುಕಿನ ಬಂಡಿಗಳು ಸಾಗುವ ಮಾರ್ಗಗಳು ವಿಭಿನ್ನ; ಕೆಲವರಿಗೆ ಅವು ಸುಸೂತ್ರ, ಇನ್ನು ಕೆಲವರಿಗೆ ಅವು ಅತಂತ್ರ. ಸಾಗುವ ಹಾದಿ ಸುಗಮವೋ ದುರ್ಗಮವೋ ಅದನ್ನು ಕಾರಣವಾಗಿಸಿಕೊಳ್ಳದೇ ಪಾಲಿಗೆಬಂದದ್ದೇ ಪಂಚಾಮೃತವೆಂದು ಒಪ್ಪಿ, ನ್ಯಾಯ-ನೀತಿ-ಧರ್ಮಮಾರ್ಗದಿಂದ ಬದುಕಿ, ಬದುಕನ್ನು ಆದರ್ಶವಾಗಿ ತೋರಿಸಿದವರು ಆ ಕವಿಗಳು. ಕೆಲವರಿಗಂತೂ ಮನೆಯಲ್ಲಿ ನಿತ್ಯಪಡಿಗೂ ಕಷ್ಟವಿತ್ತು. ಆದರೂ ಅವರ ಮನೆಗಳಲ್ಲಿ ನಂದಾದೀಪ ನಂದುತ್ತಿರಲಿಲ್ಲ; ಬರುವ ಅತಿಥಿಗಳಿಗೆ ಅಶನ-ವಶನಕ್ಕೆ ಕೊರತೆಯಾಗುತ್ತಿರಲಿಲ್ಲ !

ತಲೆಪಾಗಿನೊಳಕೊಳಕ ಪಂಚೆನಿರಿಯೊಳಹರುಕ
ತಿಳಿಸುವೆಯೆ ರಜಕಗಲ್ಲದೆ ಲೋಗರಿಂಗೆ ?
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ-
ನಿಳೆಗೆ ಹರಡುವುದೇಕೊ-ಮಂಕುತಿಮ್ಮ

ಸವರಿದ ಕೈಗಿದ್ದ ಕೊಳೆಯಿಂದ, ಹರಿದ ಬೆವರಿನಿಂದ ತಲೆಗೆ ಸುತ್ತಿದ ಮುಂಡಾಸು ಹೊಲಸಾಗಿರಬಹುದು, ಉಟ್ಟಪಂಚೆಯ ನಿರಿಗೆಯಲ್ಲಿ ಹರುಕುಕೂಡ ಇರಬಹುದು ಅದನ್ನು ತೊಳೆದುಕೊಡುವ ರಜಕನೊಬ್ಬನಿಗಲ್ಲದೇ ಲೋಕಕ್ಕೆಲ್ಲಾ ಹೇಳುತ್ತಾರ್ಯೇ? "ಹೋಯ್ ನನ್ನ ಪಂಚೆ ಹರಿದುಹೋಗಿದೆ", "ಹೋಯ್ ನನ್ನ ಬಟ್ಟೆ ನಾರುತ್ತಿದೆ" ಎಂದು ಯಾರಾದರೂ ಪ್ರಚಾರಮಾಡುವುದು ವಿಹಿತವೇ? ಅಂತೆಯೇ ನಮ್ಮೊಳಗಿನ ಅಳಲು-ದುಗುಡ-ದುಃಖ-ದುಮ್ಮಾನಗಳನ್ನು ನಮ್ಮೊಳಗೇ ಬಗೆಹರಿಸಿಕೊಳ್ಳಬೇಕು. ನಮ್ಮೊಳಗೇ ಒಬ್ಬನಿದ್ದಾನಲ್ಲ, ಅವನೊಡನೆ ಮಾತ್ರ ಹಂಚಿಕೊಳ್ಳಬೇಕು ಎಂಬುದು ಈ ಕಗ್ಗದ ತಾತ್ಪರ್ಯ.

ತಿಮ್ಮಗುರುವಿಗೆ ಬದುಕು ಪೂರ್ತಿ ನೂರಾರು ಸಮಸ್ಯೆಗಳಿದ್ದರೂ ಅವುಗಳನ್ನವರು ಕಂಡ, ನಿಭಾಯಿಸಿದ ರೀತಿಕಂಡು ಬೆರಗಾಗುತ್ತೇವೆ. ಸರಕಾರಕ್ಕೆ ಒದಗಿಸಿದ ಸೇವೆಗೆ ಸಂದ ಅದೆಷ್ಟೋ ಧನಾದೇಶ ಪತ್ರ[ಚೆಕ್ಕು]ಗಳನ್ನು ಅವರು ಹಣವಾಗಿ ಪರಿವರ್ತಿಸಲೇ ಇಲ್ಲ. ಸಾರ್ವಜನಿಕರು ಕಟ್ಟಿದ ತೆರಿಗೆಯ ನಯಾಪೈಸೆಯೂ ಸಾರ್ವಜನಿಕ ಕೆಲಸಗಳಿಗೋ ಸರಕಾರದ ಕೆಲಸಗಳಿಗೋ ವಿನಿಯೋಗವಾಗಬೇಕೇ ಹೊರತು ಇನ್ಯಾವುದೋ ಕಾರಣಗಳಿಗೆ ಯಾರ್ಯಾರದೋ ಕೈಸೇರಬಾರದು ಎಂಬ ಅಭಿಲಾಶೆ ಅವರದಾಗಿತ್ತು. ಬಯಸಿದರೆ ಬೇಕಷ್ಟು ಹಣಗಳಿಸಿ ಸಿರಿವಂತರಾಗಿ ಬದುಕುವ ಅವಕಾಶಗಳೂ ಅರ್ಹತೆಯೂ ಡಿವಿಜಿಯವರಿಗಿದ್ದವು. ತನ್ನ ಸಾಮಾನ್ಯ ಜೀವನಕ್ಕೆ ಎಷ್ಟು ಕಮ್ಮಿ ಧನ ಬೇಕೋ ಅಷ್ಟನ್ನು ಮಾತ್ರ ನೇರವಾಗಿ ತಾನು ನಡೆಸಿದ ವೃತ್ತಿಯಿಂದ ಗಳಿಸಿದರೇ ಹೊರತು ಬಹುಮಾನವಾಗಿಯೋ, ಸನ್ಮಾನವಾಗಿಯೋ ಬಂದ ಹಣವನ್ನೂ ಸಲಹೆಗಳಿಗೆ ಗೌರವವಾಗಿ ಸಲ್ಲಿಸಲ್ಪಟ್ಟ ಹಣವನ್ನೋ ಅವರು ಸ್ವೀಕರಿಸಲೇ ಇಲ್ಲ. ಸರ್.ಎಂ. ವಿಶ್ವೇಶ್ವರಯ್ಯನವರು ಡಿವಿಜಿಯವರ ಸಮಕಾಲೀನರಾಗಿದ್ದು ಸರಕಾರದ ಹಲವು ಕಾರ್ಯಕ್ರಮಗಳಿಗೆ, ಕೆಲಸಗಳಿಗೆ ರಾಜನೀತಿಯ ಸಲಹೆಗಳನ್ನು ಗುಂಡಪ್ಪನವರಿಂದ ಪಡೆಯುತ್ತಿದ್ದರು. ಅದಕ್ಕಾಗಿ ಮೈಸೂರು ಸರಕಾರ ಅವರಿಗೆ ಒತ್ತಾಯಪೂರ್ವಕವಾಗಿ ಧನಾದೇಶಗಳನ್ನು ನೀಡುತ್ತಿತ್ತು; ಸ್ವೀಕರಿಸಲು ಒಪ್ಪದೇ ಇದ್ದರೆ ಮುಂದೆ ಅಂತಹ ಸಲಹೆಗಳನ್ನು ಕೇಳುವುದಿಲ್ಲ ಎಂದೂ ಸರಕಾರದ ಅಧಿಕಾರಿಗಳು ತಿಳಿಸಿದಾಗ, ಸಾರ್ವಜನಿಕರ ಹಿತಕ್ಕಾಗಿ ತಾನು ಸಲಹೆಗಳನ್ನು ಕೊಡುವುದು ಒಳಿತು-ಅದರಿಂದ ವಿಮುಖನಾಗಬಾರದು ಎಂಬ ದೃಷ್ಟಿಯಿಂದ ಹೊರನೋಟಕ್ಕೆ ಧನಾದೇಶಗಳನ್ನು ಪಡೆಯಲು ಒಪ್ಪಿದರು; ಪಡೆದ ಎಲ್ಲಾ ಧನಾದೇಶಗಳನ್ನೂ  ಕಬ್ಬಿಣದ ಪೆಟ್ಟಿಗೆಯಲ್ಲಿ[ಟ್ರಂಕ್] ಹಾಗೇ ಇಟ್ಟುಬಿಟ್ಟರು! ಇದು ಸರಕಾರದ ಗಮನಕ್ಕೂ ಬರಲಿಲ್ಲ!

ಹೀಗೆ ಬಾಳಿದ ತಿಮ್ಮಗುರುವಿನ ಸತಿಸುತರ ಬಗ್ಗೆ ನಾವು ಬಹಳಷ್ಟನ್ನು ಕೇಳಿಲ್ಲ. ಕಾರಣವಿಷ್ಟೇ: ತಿಮ್ಮಗುರು ತಮ್ಮ ವೈಯ್ಯಕ್ತಿಕವನ್ನು ಬಹಳವಾಗಿ ಯಾರಲ್ಲೂ ಪ್ರಸ್ತಾವಿಸುತ್ತಿರಲಿಲ್ಲ. ಡಿವಿಜಿಯವರು ನಿತ್ಯ ಪುರಂದರದಾಸರೆಂಬುದನ್ನು ಎಲ್ಲರೂ ಬಲ್ಲರು. ಅದೇ ಬದುಕಿಗೆ ಗುಂಡಪ್ಪನವರು ತಮ್ಮನ್ನು ಒಗ್ಗಿಸಿಕೊಂಡುಬಿಟ್ಟಿದ್ದರು. ಅವರ ಮಡದಿ ಭಾಗೀರಥಮ್ಮನವರು ಆರ್ಥಿಕವಾಗಿ ಅನುಕೂಲವುಳ್ಳ ಕುಟುಂಬದಿಂದಲೇ ಬಂದವರಾದರೂ ಪತಿಯೊಂದಿಗೆ ಬದುಕುವಾಗ ಪತಿಯ ಇಚ್ಛೆಯನ್ನೇ ಅನುಸರಿಸಿದವರು. ಎಂದೂ ಗಂಡ ಗುಂಡನ ಆಶಯಗಳಿಗೆ ವಿರುದ್ಧವಾಗಿ ನಡೆದವರಲ್ಲ. ’ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದ ಬಿಕ್ಕಟ್ಟಿನ ಕಾಲದಲ್ಲಿ ಗುಂಡಪ್ಪನವರ ಹತ್ತಿರದ ನೆಂಟರೊಬ್ಬರ ಮನೆಯಲ್ಲಿ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೆಂಡತಿಮಕ್ಕಳು ಅಲ್ಲಿಗೆ ತೆರಳಬೇಕೆಂದು ಹೇಳಿ ತಾವು ಯಾವುದೋ ಬರವಣಿಗೆಗೆ ತೊಡಗಿದ್ದರು. ಸಂಜೆಯಾದರೂ ಹೆಂಡತಿ ಹೊರಟಂತೇ ಕಾಣಲಿಲ್ಲ. ಆ ಬಗೆಗೆ ಪ್ರಶ್ನಿಸಿದಾಗ "ಮಕ್ಕಳನ್ನು ಕಳುಹಿಸಿದ್ದೇನೆ" ಎಂಬ ಉತ್ತರ ಪಡೆದು "ಇಲ್ಲಾ ಇಲ್ಲಾ ತೀರಾ ಹತ್ತಿರದವರ ಮನೆ ನೀನು ಹೋಗಲೇಬೇಕು" ಎಂದು ಅನುಜ್ಞೆ ನೀಡಿದಾಗ ಉಪಾಯಗಾಣದ ಭಾಗೀರಥಮ್ಮನವರು ಗದ್ಗದಿತರಾಗಿ ಹೇಳಿದರು "ನೋಡಿ, ನೀವು ಹೋಗುವಂತೇ ಬಲವಂತಮಾಡುತ್ತಿದ್ದೀರಿ. ನನಗಿರುವುದು ಇದೊಂದೇ ಸೀರೆ. ಇದೂ ಅಲ್ಲಲ್ಲಿ ಹರಿದಿದೆ. ಇಂಥಾ ಸೀರೆಯುಟ್ಟು ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವುದು ಅವರಿಗೂ ಮುಜುಗರ ಉಂಟುಮಾಡಬಹುದು. ನನಗೇನೋ ಇದರಲ್ಲೇ ಸಮಾಧಾನವಿದೆ. ಆದರೆ ಜನ ನಿಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಅದು ನನಗೆ ಹಿಡಿಸುವುದಿಲ್ಲ. ಧರ್ಮಪತ್ನಿಯಾಗಿ ನಾನು ನಿಮ್ಮ ಮರ್ಯಾದೆಯನ್ನು ಕಾಪಾಡಬೇಕಲ್ಲವೇ? ಹೊಸಸೀರೆ ಬೇಕೆಂದು ನಾನೇನೂ ಬಯಸುತ್ತಿಲ್ಲ, ಆದರೆ ಈ ಸಂದರ್ಭದಲ್ಲಿ ಯುಕ್ತವಾದ ನಿರ್ಧಾರವನ್ನು ನಾನು ಕೈಗೊಂಡಿದ್ದೇನೆ, ಅದಕ್ಕೆ ನೀವು ಅಡ್ಡಿಯಾಗಬಾರದೆಂಬುದು ನನ್ನ ಬೇಡಿಕೆ."   

ಕವಿ ನರಸಿಂಹಸ್ವಾಮಿಯವರಿಗೆ ವೆಂಕಮ್ಮ ಹೇಗೆ ಅನ್ವರ್ಥವಾದ ಮಡದಿಯಾಗಿದ್ದರೋ ಹಾಗೆಯೇ ಅಥವಾ ಅದಕ್ಕೂ ತುಸು ಮಿಗಿಲಾದ ರೀತಿಯಲ್ಲೇ ಗಂಡನ ನೆರಳಾಗಿ ಬದುಕಿದವರು ಭಾಗೀರಥಮ್ಮ. ಇಂಥಾ ಭಾಗೀರಥಮ್ಮ ಎಳವೆಯಲ್ಲೇ, ಹರೆಯದಲ್ಲೇ ಅಗ್ನಿಆಕಸ್ಮಿಕಕ್ಕೆ ಬಲಿಯಾದರು. ಆಗಿನ್ನೂ ಡಿವಿಜಿಯರಿಗೆ ಮೂವೈತ್ತೈದೂ ತುಂಬಿರಲಿಲ್ಲ. ಮನದನ್ನೆಯ ಅವಸಾನವನ್ನು ಸಹಿಸಿಕೊಂಡು ತನ್ನ ’ನಿವೇದನ’ವನ್ನು ಆ ನೆನಪಿನಲ್ಲಿ ರಚಿಸಿದರೆಂದು ಕೆಲವರ ಅಭಿಪ್ರಾಯ. ಅದರಲ್ಲಿನ ಶೀರ್ಷಿಕಾ ಕವನ ಡಿವಿಜಿಯವರ ಮನದ ನವಿರಾದ ಭಾವನೆಗಳನ್ನು ಸ್ಪಷ್ಟಪಡಿಸುತ್ತವೆ: 

ಎನ್ನಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದೆ ಬರಹವ |
ಇನ್ನದೆಂತು ನೋಡಿನಗುತ
ಲೊರೆವೆ ಸರಸವ ||

ಕಿರಿಯ ಮಕ್ಕಳಳುವ ದನಿಗೆ
ಹಿರಿಯರಿಡುವ ಕಣ್ಣಪನಿಗೆ
ಕರಗದೆದೆಯ ಬಿದಿಯು ಬಣಬು
ಕವಿತೆಗೊಲಿವನೇಂ |
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ||

ನಿಡುಗಾಲ ತನ್ನ ಬಯಕೆಗಳನ್ನೆಲ್ಲಾ ಅದುಮಿ ಪತಿಸೇವೆಗೈದ ಹರೆಯದ ಮನದನ್ನೆ, ಸಾಧ್ವಿ ಸತ್ತು ಮಲಗಿದಾಗ, ಎಳೆಯ ಮಕ್ಕಳು ಕಂಬನಿಗರೆಯುತ್ತಿರುವಾಗ, ಸುತ್ತಸೇರಿದ ಹಿರಿಯರೂ ಕಂಡೂಕಾಣಿಸದಂತೇ ಅತ್ತು ಕಣ್ಣೊರೆಸಿಕೊಳ್ಳುತ್ತಿರುವಾಗ ಕವಿಯಲ್ಲುಂಟಾದ ಭಾವಗಳು ಹೇಗಿದ್ದವು ಎಂಬುದಕ್ಕೆ ಇದು ಕನ್ನಡಿ. ತನಗಾಗಿ ಬದುಕನ್ನೇ ಅರ್ಪಿಸಿಕೊಂಡು, ಗಂಡ ಗುಂಡಪ್ಪನ ಬದುಕುವ ರೀತಿಯನ್ನೇ ಒಪ್ಪಿಕೊಂಡು ಅದೇ ತನ್ನ ಭಾಗ್ಯವೆಂದು ಪರಿಗಣಿಸಿ ಡಿವಿಜಿಯವರೊಡನೆ ಹೆಜ್ಜೆಹಾಕಿದವರು ಭಾಗೀರಥಮ್ಮನವರು. ಎಷ್ಟೇ ಆರ್ಥಿಕ ಮುಗ್ಗಟ್ಟು ಎದುರಾದರೂ ಅದನ್ನೆಲ್ಲಾ ಧಿಕ್ಕರಿಸಿ, ಸಹಿಸಿ, ವಹಿಸಿಕೊಂಡು, ಬರೆದಂತೆಯೇ ಬದುಕಿದ ಅತ್ಯಂತ ವಿರಳ ಸಾಹಿತಿ-ಕವಿ ಗುಂಡಪ್ಪನವರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆ ಹೀಗೇ ಹಲವಾರು ಪ್ರಕಾರಗಳಲ್ಲಿ ದೇಶಕ್ಕಾಗಿ ದುಡಿದವರು, ನುಡಿದವರು, ಮಿಡಿದವರು ಡಿವಿಜಿ. ಸಂಸಾರಿಯೋ? ಹೌದು ಸಂಸಾರಿ, ಅವಧೂತರೋ? ಹೌದು ಅವಧೂತರು, ವೇರ್ದಾಂತಿಯೋ? ಹೌದು ವೇದಾಂತಿ-ಹೀಗೇ ಹಲವು ಮುಖಗಳಲ್ಲಿ ಶೋಭಿಸುತ್ತಾ ಆಸ್ತಿಕತೆಯಲ್ಲಿರುವ ನಾಸ್ತಿಕತೆಯನ್ನೂ ನಾಸ್ತಿಕತೆಯಲ್ಲಿರುವ ಆಸ್ತಿಕತೆಯನ್ನೂ ಹೊರತೆಗೆದು ತೋರಿಸುತ್ತಾ ’ಪರೋಪಕಾರಾರ್ಥಮಿದಂ ಶರೀರಂ’ ಎಂಬ ವ್ಯಾಖ್ಯೆಗೆ ಸಮರ್ಪಕ ಉದಾಹರಣೆಯಾಗಿ ನಿಲ್ಲುವ ಧೀಮಂತ ವ್ಯಕ್ತಿ ಗುಂಡಪ್ಪನವರು. ಅನೇಕಬಾರಿ ಆಲೋಚಿಸುವಾಗ ಅವರೊಬ್ಬ ವ್ಯಕ್ತಿ ಎನಿಸುವುದಕ್ಕಿಂತಾ ಹೆಚ್ಚಾಗಿ ಒಂದು ಸಂಸ್ಥೆ ಅಥವಾ ಸಂಸ್ಥಾನ ಎಂದರೇ ಸಮಂಜಸ ಎನಿಸುತ್ತದೆ; ನಾನು ಎನ್ನುವುದನ್ನು ಮರೆತು ನಾವು ಎಂಬುದನ್ನೇ ಆತುಕೊಂಡಿದ್ದ ಅವರಿಗೆ ದೇಶದ ಎಲ್ಲರ ಸಂಸಾರವೂ ಅವರದೇ ಆಗಿತ್ತು! ದೇಶವೇ ಅಥವಾ ಜಗವೇ ಅವರ ಕುಟುಂಬವಾಗಿತ್ತು. ||ವಸುಧೈವ ಕುಟುಂಬಕಮ್|| ಎಂಬುದನ್ನು ಅಕ್ಷರಶಃ ನಡೆಸಿದವರು, ಹಾಗೆ ಬಾಳಿದವರು ಡಿವಿಜಿ. ಇಂಥಾ ಮಹಾತ್ಮನ ಜೀವನದ ಘಳಿಗೆಗಳನ್ನು ಸೆರೆಹಿಡಿಯಲು ಪ್ರಾಮಾಣಿಕವಾಗಿ ನಡೆದ ಪ್ರಯತ್ನ ’ಬ್ರಹ್ಮಪುರಿಯ ಭಿಕ್ಷುಕ’ ಎಂಬ, ಅವಧಾನಿ ಗಣೇಶರು ಬರೆದ ಪುಸ್ತಕ. ವೇಗದ ಓದುಗರು ೪೫ ನಿಮಿಷಗಳಲ್ಲಿ ಓದಿಸಾಗಬಹುದಾದ ೧೫೮ ಪುಟಗಳ ಸಂಗ್ರಹಾರ್ಹ ಹೊತ್ತಿಗೆ ಮತ್ತೊಮ್ಮೆ ನಿಮ್ಮ ನೆನಪಿಗಾಗಿ ಈ ಹೊತ್ತಿಗೆ! ನಮಸ್ಕಾರ.