ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 25, 2010

ಸೆಲ್ಲಾನಂದಿನಿಯ ’ಕನ್ನಡೀ’ಕರಣ !!

ಚಿತ್ರ ಕೃಪೆ : ಫೋಟೋ ಸರ್ಚ್

ಸೆಲ್ಲಾನಂದಿನಿಯ ’ಕನ್ನಡೀ’ಕರಣ
!!

ನೀವು ಎಲ್ಲೇ ಇರಿ, ಹೇಗೇ ಇರಿ, ಊಟಮಾಡಿರಿ, ಹಸಿದ ಹೊಟ್ಟೆಯಲ್ಲಿರಿ, ನಿದ್ದೆ ಮಾಡಿರಿ, ನಿದ್ದೆಮಾಡದೇ ಆಯಾಸಪಟ್ಟಿರಿ, ಸ್ನಾನಮಾಡಿರಿ ಅಥವಾ ಗಬ್ಬುನಾತಹೊಡೆಯುತ್ತಿರಿ, ಹಲ್ಲುಜ್ಜಿರಿ ಅಥವಾ ಉಜ್ಜದೇ ನಾರುವ ಬಾಯಲ್ಲಿರಿ ಆದರೆ ನೀವುಮಾಡಬಹುದಾದ ಅಥವಾ ಮಾಡುತ್ತಿರುವುದೇ ಆದ ಒಂದು ಕಾಮನ್ ಕೆಲಸ ಎಂದರೆ ಮೊಬೈಲ್ ಗುಂಡಿ ಒತ್ತುತ್ತಿರುವುದು ! ಮೊಬೈಲ್ ಬಂದು ದಶಮಾನೋತ್ಸವ ಆಗಿಹೋಗಿದೆ ! ಆದರೆ ದಶಮಾನೋತ್ಸವವನ್ನು ಯಾರು ಎಲ್ಲಿ ಆಚರಿಸಿದರೆಂದು ತಿಳಿದಿಲ್ಲ. ತಳ್ಳುಗಾಡಿಯ ತಿಪ್ಪೇಸ್ವಾಮಿಯಿಂದ ಹಿಡಿದು ಟಾಟಾರ ತನಕವೂ ಹೋಗಲಿಬಿಡಿ ಇನ್ನೂ ತುಸು ಮೇಲೆ ಹೋಗೋಣ ಬಿಲ್ ಗೇಟ್ಸ್ ತನಕವೂ ಇದರ ವ್ಯಾಪ್ತಿ ಹಬ್ಬಿದೆ. ಯಾರಿಗೆ ಬೇಡ ಸೆಲ್ಲು ? ಒಂದಾನೊಂದು ಕಾಲದಲ್ಲಿ ಸೆಲ್ಲು ಅಂದರೆ ಬರೇ ಬ್ಯಾಟರಿ ಸೆಲ್ಲು ಮಾತ್ರವಾಗಿತ್ತು. ಮಿಕ್ಕಿದ್ದಕ್ಕೆಲ್ಲಾ ನಮಗೆ ಸೆಲ್ಲು ಎಂಬ ಶಬ್ದದ ಬಳಕೆ ಗೊತ್ತಿರಲಿಲ್ಲ. ಈಗ ತಕಳಿ ಮಾತುಮಾತಿಗೆ ಸೆಲ್ಲು ಬಂದೇಬರುತ್ತದೆ. ಯಾಕೆಂದರೆ ಅದಿಲ್ಲದಿದ್ದರೆ ಜೀವನವೇ ಇಲ್ಲ. ಹೊಲದಲ್ಲಿ ಕೂಲಿಮಾಡುವಾತ ನಾಳೆ ಬರುತ್ತೇನೆ ಎಂದು ಇನ್ಯಾರೋ ಯಜಮಾನರಿಗೆ ತನ್ನ ಕೆಸರುಕೈಯ್ಯಲ್ಲೇ ಕಾಲ್ ರಿಸೀವ್ ಮಾಡಿ ಮಾತಾಡುವುದು ಸೆಲ್ಲಿನಲ್ಲೇ ಅಲ್ಲವೇ? ಹಾಗೇ ಈ ಸೆಲ್ಲು ಬಂದಮೇಲೆ ಲ್ಯಾಂಡ ಫೋನ್ ಗಳೆಲ್ಲಾ ಹುಡುಗಿಯರ ಮುಂದೆ ಅಜ್ಜಿಯರು ಇದ್ದಂತೇ ಭಾಸವಾಗುತ್ತದೆ ! ಕೆಲವೊಮ್ಮೆ ಅಜ್ಜಿಯರು ಮನೆಯ ಪ್ರಾಯದ ಹುಡುಗಿಯರ ಅಲಂಕಾರವನ್ನು ಕಂಡು ಕರುಬುತ್ತ ಸಂದುಹೋದ ತಮ್ಮ ಪ್ರಾಯದ ದಿನಗಳನ್ನು ನೆನೆಯುತ್ತಾ ಒಳಗೊಳಗೇ ಅಳುವುದನ್ನು ಯಾರು ಅರಿತಿಲ್ಲ ? ಹೀಗೆ ಬರೆದರೆ ಇದೂ ಹೊಸ ವಿಷಯವೇ ಎಂದಿ ನೀವು ಕೆಳಲೂಬಹುದು. ತಾಳಲಾರದೆ ಏನೋ ಅಂದಾಗ ಬೇಸರವಾಗಿ ತರಲೆಮಾಡುವ ಆ ಹುಡುಗಿಯರನ್ನು ಅಜ್ಜಿಯಂದಿರು ಹಿಡಿಶಾಪಹಾಕಿದ ಹಾಗೇ ಬೈಯ್ಯುತ್ತಾರಲ್ಲ, ಉದಾಹರಣೆಗೆ : " ಇರಿ ನಿಮಗೂ ಮುಪ್ಪು ಬಂದೇ ಬರುತ್ತದೆ, ನನನ್ನು ಈಗ ಹೇಗೆ ಟೀಕಿಸಿದಿರೋ ಅದೇರೀತಿ ನಿಮ್ಮನ್ನು ನಿಮ್ಮ ಮೊಮ್ಮಕ್ಕಳು ಆಡಿಕೊಂಡಾಗ ಆಗ ನಿಮಗೆ ಅರ್ಥವಾಗುತ್ತದೆ." -ಇದೇ ಅಲ್ಲವೇ ಕಾಲಚಕ್ರ ? ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂದು ಕನ್ನಡ ಶಾಲೆಯಲ್ಲಿ ನಾವು ಬರೆದುಕೊಟ್ಟ ಭಾಷಣದಲ್ಲಿ ಹಲವು ಸರ್ತಿ ಹೇಳಿದ್ದಿತ್ತು, ಆದರ ಅರ್ಥ ತೀರಾ ನಮಗೆ ಗೊತ್ತಿರದಿದ್ದರೂ ಭಾಷಣಮಾಡುವುದಕ್ಕೆ ನಾವೇನೂ ಕಮ್ಮಿ ಇರಲಿಲ್ಲ ಸ್ವಾಮೀ ! ಕೆಲವೊಮ್ಮೆ ಗುತ್ತೇದಾರರು ಪತ್ತೇದಾರೌ ಇವರೆಲ್ಲಾ ಟೊಂಕಕಟ್ಟಿ ರಾಜಕೀಯದಲ್ಲಿ ಶಾಸಕ ಪ್ರಜೆಗಳಾದಾಗ ನಾನು ಅಂದುಕೊಂಡಿದ್ದಿದೆ--ಹೌದಪ್ಪಾ ಹಿಂದಿನ[ಬೆಂಚಿನ] ಮಕ್ಕಳೇ ಮುಂದಿನ ನಾಗರಿಕರು ! ಈಗ ನೀವೂ ನಾವೂ ಉದ್ದುದ್ದ ಸರ್ಟಿಫಿಕೇಟ್ ಇಟ್ಟುಕೊಂಡು ಮಿಕಿಮಿಕಿ ಅಂತ ವಿಧಾನಸೌಧದಲ್ಲಾಗುವ ಜಟ್ಟಿಕಾಳಗವನ್ನು ನೋಡುವುದಿಲ್ಲವೇ ?

ಹೋಯ್, ಇರಲಿ ವಿಷಯಾಂತರಿಸಬೇಡಿ ನಾವು ಮಾತನಾಡಬೇಕಾದ್ದು ಬಹಳ ಇದೆ. ಸಮಯದ ತೊಂದರೆ ನಿಮಗೂ ನಮಗೂ ಅಡ್ಡಬಂದರೂ ಹೆಚ್ಚೇನಲ್ಲ, ಅದು ಮಾಮೂಲು. ಆದರೂ ಬೆಳಿಗ್ಗೆ ಗಡಿಬಿಡಿಯಲ್ಲಿ ಬಾತ್ ರೂಂ ನಲ್ಲಿ ಸರಸರ ಸ್ನಾನಮಾಡುವಾಗ ಕಾಲುಜಾರಿ, ಮೈಯ್ಯುಜ್ಜಿಕೊಳ್ಳುವಾಗ ನಮ್ಮ ಉಗುರೇ ನಮಗೆ ಪರಚಿ ಗಾಯವಾಗಿ, ದಸೋಬುಸೋ ಎಂದು ಪ್ಯಾಂಟು ಶರ್ಟು ತೊಟ್ಟು ಬೆಲ್ಟ್ ಸರಿಪಡಿಸಿಕೊಳ್ಳುತ್ತಲೇ ಮನೆಯಲ್ಲಿ ತಿಂಡಿ ರೆಡಿಯಿರದ ಕಾರಣ ಓಡುತ್ತಾ ಓಡುತ್ತಾ ಎಸ್.ಎಲ್.ವಿ ಫಾಸ್ಟ್ ಫುಡ್ ಗೆ ಎಂಟ್ರಿಕೊಟ್ಟು, ಒಂದರ್ಧ ಇಡ್ಲಿನೋ ಪಡ್ಲಿನೋ ತಿಂದು, ಬಸ್ಸೋ ಗಾಡಿಯೋ ಹತ್ತಿ ಆಫೀಸು ತಲುಪಿ ಕೆಲಸಮಾಡುವುದರಲ್ಲೇ ನಾವು ತೃಪ್ತರಲ್ಲವೇ ? ಹಾಗೇನೇ ಇರುವ ಸಮಯದಲ್ಲೇ ಎಲ್ಲಾ ಅಡ್ಜಸ್ಟ್ ಮೆಂಟು. ಯಾರೋ ಹೇಳಿದರು ’ಲೈಫ್ ಈಸ್ ಫುಲ್ ಆಫ ಅಡ್ಜಸ್ಟ್ ಮೆಂಟ್ ’ ಅಂತ, ರೇನಾಲ್ಡ್ ಪೆನ್ನಿಗೆ ಪಾರ್ಕರ್ ಪೆನ್ನಿನ ರೀಫಿಲ್ಲು ಹೊಂದುವುದಿಲ್ಲ, ಬೆಂಗಳೂರಿನ ಯಾಕೆ ಹಳ್ಳಿಯ ಹುಡುಗೀರಿಗೂ ಸಾಪ್ಟ್ ವೇರ್ ಹುಡುಗನನ್ನು ಬಿಟ್ಟರೆ ವೃತ್ತಿಯ ಹುಡುಗರು ಹೊಂದುವುದಿಲ್ಲ ! ಪ್ಯಾಂಟನ್ನು ಶರೀರದ ಮೇಲ್ಭಾಗಕ್ಕೂ ಶರ್ಟ್ ನ್ನು ಶರೀರದ ಕೆಳಭಾಗಕ್ಕೂ ಹಾಕಿಕೊಳ್ಳಿ ಅಡ್ಜಸ್ಟ್ ಆಗುವುದಿಲ್ಲ ಅಂದಮೇಲೆ ಎಲ್ಲಿಬಂತು ಹೊಂದಾಣಿಕೆ ?

" ಹಲೋ ಯಾರು ಸರ್ ? ಯಾರೂ ? ಅಲ್ಲಲ್ಲ ರಾಂಗ್ ನಂಬರ್ "

ಬರೆಯುತ್ತಿರುವಾಗ ನನ್ನ ಸೆಲ್ಲೇ ಕವಕ್ಕನೆ ಕೂಗಿಬಿಡಬೇಕೆ ? ಈ ಸೆಲ್ಲು ತಯಾರುಮಾಡಿದವರಿಗೆ ಇನ್ನೊಂದು ಮಾತನ್ನು ಹೇಳಬೇಕು. ತಯಾರು ಮಾಡುವಾಗಲೇ ಏನಾದರೂ ಪ್ರೋಗ್ರಾಂ ಬರೆದು ನಾವು ಬ್ಯೂಸಿ ಇರುವಾಗ ತಂತಾನೇ ಅದು ಬಂದ ಕಾಲ್ ಯಾರದೆಂದು ನಮಗೆ ಹೇಳಬೇಕು. ಚಂದದ ಹುಡುಗಿ ಕಾಲ್ ಮಾಡಿದರೆ ಮುದುಕಪ್ಪಗಳಿಗೆ ಅವರ ಫೋಟೋ ಕಾಣಿಸಬೇಕು. ಪಡ್ಡೆಗಳಿಗೆ ಹುಡುಗೀರ ಕಾಲ್ ಬರುತ್ತಿದ್ದ ಹಾಗೇ " ಹಾಯ್ ಲವ್ಲೀ " ಎಂದು ಅದೇ ಮೊದಲಾಗಿ ಹೇಳಿಬಿಡಬೇಕು. ಹುಡುಗೀರಿಗೆ ಪಡ್ಡೆಗಳೋ ಮುದುಕಪ್ಪಗಳೋ ಯಾರು ಕಾಲ್ ಮಾಡುತ್ತಿದ್ದಾರೆಂದು ಮೊದಲೇ ತಿಳಿದುಹೋಗಬೇಕು. ಪಡ್ಡೆಗಳಾದರೆ ಅವುಗಳಿಗೆ ಮತ್ತೆ ಪ್ಯಾರಲಲ್ ಕನೆಕ್ಷನ್ ಎಷ್ಟಿದೆ ಎಂಬುದನ್ನೂ ಅದು ಹೇಳುವಷ್ಟು ಜಾಣತನದಿಂದ ಕೂಡಿರಬೇಕು. ಮುದುಕಪ್ಪಗಳು ಪದೇ ಪದೇ ಕಾಲ್ ಮಾಡಲು ಆರಂಭಿಸಿದರೆ ಹುಡುಗೀರ ಸೆಲ್ಲಿನಿಂದ ಅವರಿಗೆ ಅಜ್ಜಿಯರ ದನಿ ಕೇಳಬೇಕು. ಹೀಗೇ ಯಾರ್ಯಾರಿಗೆ ಎಲ್ಲೆಲ್ಲಿ ಯಾವ್ಯಾವ ರೀತಿ ಸೌಕರ್ಯಬೇಕೋ ಅಷ್ಟನ್ನೂ ಒದಗಿಸುವ ಸೆಲ್ಲುಗಳ ಬರಲಿ ಎಂದು ಅವರಲ್ಲಿ ಪ್ರಾರ್ಥಿಸೋಣ!

ಇತ್ತೀಚೆಗೆ ಯಾರೂ ಬಹುತೇಕ ಸೆಲ್ ಬಿಟ್ಟು ಇರುವುದೇ ಇಲ್ಲ. ಅಲ್ಲೆಲ್ಲೋ ಪ್ರಶ್ನೆ ಕೇಳಿದಾಗ ಯರೋ ಒಬ್ಬ ಹೇಳಿದ ನೆನಪು-- ತನಗೆ ಸೆಲ್ ಮತ್ತು ಲ್ಯಾಪ್ ಟಾಪ್ ಬಿಟ್ಟು ಬದುಕಲು ಸಾಧ್ಯವಾಗುವುದೇ ಇಲ್ಲಾ ಎಂದು. ಅಂತೂ ಸೆಲ್ಲಿಲ್ಲದೇ ಲೈಫಿಲ್ಲ, ಲ್ಯಾಪ್ ಟಾಪಿಲ್ಲದೆಯೂ ಲೈಫಿಲ್ಲ, ನೆಟ್ ಇಲ್ಲದೆಯೂ ಲೈಫಿಲ್ಲ.....ಲೈಫು ಇಷ್ಟೇನೆ ! ಹುಡುಗಿಯರಿಗೆ ಅನೇಕ ಕಂಪನಿಗಳು ಎಸ್.ಎಮ್.ಎಸ್ ಬಹಳಷ್ಟು ಕೊಟ್ಟು ಉಪಕಾರಮಾಡಿದ್ದಾರೆ. ಹೆಚ್ವಾಶಿ ಎಲ್ಲಾ ಹುಡುಗೀರೂ ಸೆಲ್ಲಾನಂದಿನಿಗಳೇ ! ಇದರಲ್ಲಿ ತಪ್ಪಿಸಿಕೊಂಡಿರುವವರಿದ್ದರೆ ಅವರಿಗೆ ಯಾವುದೋ ಕಾಯಿಲೆಯೋ ಕಸಾಲೆಯೋ ಇರಬೇಕೆಂದೇ ಅರ್ಥ ಎಂಬಷ್ಟರ ಮಟ್ಟಿಗೆ ಬೆಳೆದಿದೆ ಈ ಸೆಲ್ಲು ಪ್ರೇಮ. ಕಾಲದ ಅನುಬಂಧವೇ ಹಾಗೆ. ಕಾಯಿದೆ ಎಂಬುದು ಪುಸ್ತಕದಲ್ಲಿ ಬರೆಯಲ್ಪಟ್ಟಿದೆ; ನಡೆಯಬೇಕಾದ್ದು ನಡೆದೇ ಇದೆ ಅಲ್ಲವೇ ? ಉದಾಹರಣೆಗೆ : ವರದಕ್ಷಿಣೆ ಸಾಮಾಜಿಕ ಪಿಡುಗು ಎಂದು ಮೆಜುಗುದ್ದಿ ಭಾಷಣಮಾಡಿ ಚಪ್ಪಾಳೆಯ ಹೊರೆಹೊರುವ ರಾಜಕಾರಣಿಯ ಮಗನಿಗೆ ಹೆಣ್ಣುಕೊಡುವವರು ಸೂಟ್ ಕೇಸ್ ತುಂಬಿಸಿಯೇ ಕೊಡಬೇಕಾಗುತ್ತದೆ. ವರದಕ್ಷಿಣೆ ಹಲವಾರು ಸ್ತರಗಳಲ್ಲಿ ಚಾಲ್ತಿಯಲ್ಲಿದ್ದೇ ಇದೆ. ವರದಕ್ಷಿಣೆ ತೆಗೆದುಕೊಂಡಿಲ್ಲವಾದರೆ ಗಂಡಿಗೆ ಏನೋ ಐಬು ಎಂಬಲ್ಲಿಯವರೆಗೆ ಅದು ಕಾಮನ್ ಆಗಿಬಿಟ್ಟಿದೆ ! ದೇಶದಲ್ಲಿ ಜಾತಿ ವ್ಯವಸ್ಥೆ ಬೇಡವೆನ್ನುವ ಸರಕಾರದ ಎಲ್ಲಾ ಅರ್ಜಿಗಳಲ್ಲಿ ಹೆಸರು, ಕುಲ-ಗೋತ್ರಗಳಂತೇ ಜಾತಿ ______ ಎಂದು ಕೇಳುತ್ತಾರೆ ! ನಿಜವಾಗಿಯೂ ಜಾತಿಪದ್ಧತಿಯ ನಿರ್ಮೂಲನವಾಗಬೇಕೆಂದಿದ್ದರೆ ಸರಕಾರಕ್ಕೇಕೆ ಬೇಕು ಜಾತಿಯ ಕಾಲಮ್ಮು ?

ಅರೆರೆ, ಎದ್ದೋಡಿ ಹೋಗುತ್ತಿದ್ದೀರಲ್ರೀ ಕೇಳ್ರಿ ಇಲ್ಸ್ವಲ್ಪ. ಇಡೀ ದಿನ ಸೆಲ್ಲು ಒತ್ತುತ್ತಾ ಅದಕ್ಕೇ ಅಂಟಿಕೊಂಡಿದ್ದರೆ ಮನೆಯ ಅಥವಾ ಕಚೇರಿಯ ಮಿಕ್ಕುಳಿದ ಜನರಿಗೆ ಕಷ್ಟವಲ್ಲವೇ ? ಆ ಅನಿಸಿಕೆ ಅಂತಹ ಸೆಲ್ಲಾನಂದಿನಿಗಳಿಗೆ ಬರುವುದೇ ಇಲ್ಲವೇ ? ಅದೇನ್ ಎಸ್.ಎಮ್.ಎಸ್ಸು ಅಂತೀರಿ....ಮೊಬೈಲ್ ಚಾಟಿಂಗು....ಮೊಬೈಲ್ ಚಾಟಿಂಗು. ಮನೆಗೆಬಂದು ಕೋಣೆಗೆ ಸೇರಿಕೊಂಡುಬಿಟ್ಟರೆ ಅವರ ಲೋಕವೇ ಬೇರೆ. ಸೆಲ್ಲಾಯಿತು ಅವರಾಯಿತು. ಸೆಲ್ ನೆಟವರ್ಕ್ ಇಲ್ಲದಿದ್ದರೆ ಅವರ ಚಿಂತೆಯನ್ನು ಕೇಳಬೇಕೆ ? ತಿಂಡಿ-ಊಟ ರುಚಿಸುವುದಿಲ್ಲ, ನಿದ್ದೆ ಬರುವುದಿಲ್ಲ. ಮಾರನೇದಿನ ಪಡ್ಡೆಗಳೋ ಅಥವಾ ಬೇರೇ ಫ್ರೆಂಡುಗಳೋ ಕಾಲ್ ಮಾಡಿದರೆ ಸಾಕು " ಆಯ್ ಮಿಸ್ಸಡ್ ಯೂ ಏ ಲಾಟ್ ಯೂ ನೋ " ! ಹೌದ್ರೀ ಹೌದ್ರೀ ನೀವು ಮಿಸ್ಸಡ್ ಏ ಲಾಟು ಅಲ್ಲಿ ಮನೇಲಿ ಪಾಪ ಅಪ್ಪ-ಅಮ್ಮ ಹಿಡಿದು ಕಾಯ್ತಾ ಇರ್ತಾರೆ ಊಟದ ತಾಟು !

ಕನ್ನಡ ಭಾಷೆಯ ಶಬ್ದಲಾಲಿತ್ಯದಲ್ಲಿ ಕಾಣುವ ವೈಖರಿ ಬೇರಾವ ಭಾಷೆಯಲ್ಲೂ ಸಿಗದೇನೋ ಎಂಬುದು ನನ್ನಿಸಿಕೆ. ಶಬ್ದಗಳನ್ನು ಅಲ್ಲಲ್ಲೇ ತಿರುಚಿ,ಮಗುಚಿ ಬೇರೆಯದೇ ಕಲ್ಪನೆ ಕೊಡಬಹುದಾದ ಸುಲಲಿತ, ಸಮೃದ್ಧ ಭಾಷೆ ನಮ್ಮ ಕನ್ನಡ. ನಾನು ಇಲ್ಲಿ ಕನ್ನಡೀಕರಿಸುವವರೆಗೆ ಸ್ವಲ್ಪ ತಾಳ್ಮೆ ಇರಲಿ ಮಾರಾಯರೆ! ಕನ್ನಡೀಕರಣ ಎಂದರೆ ಯಾವುದೋ ಕವಿ-ಸಾಹಿತಿಗಳು ಬೇರೇ ಭಾಷೆಯಲ್ಲಿ ಬರೆದದ್ದನ್ನು ಕನ್ನಡಕ್ಕೆ ತರ್ಜುಮೆಮಾಡುವುದಲ್ಲ. ಬದಲಾಗಿ ಕನ್ನಡಿಗೆ ನಮ್ಮ ಸೆಲ್ಲಾನಂದಿನಿಗಳು ಹಲವೊಮ್ಮೆ ಆತುಕೊಳ್ಳುವುದು! ಶರೀರದಲ್ಲಿ ಎಂತೆಂಥಾ ಹಿಡಿಂಬೆಗಳನ್ನೂ ಮೀರಿಸುವಂತವರು " ಹಾಯ್ " ಎಂದು ಕನ್ನಡಿಯಲ್ಲಿ ಪೋಸ್ ಕೊಟ್ಟು ಹೇಗೆ ಕಾಣುತ್ತೇನೆ ಎಂದು ತಮ್ಮನ್ನು ತಾವೇ ನೋಡಿಕೊಳ್ಳುವುದು. ಹಳೆಯ ಚೂಡೀದಾರದ ಬದಲಾಗಿ ಹೊಸ ಜೀನ್ಸ್ ಮತ್ತು ಮಲ್ಲಿಕಾಶೇರಾವತ್ ಬಳಸುವಂತಹ ಟಾಪು ಹಾಕಿಕೊಂಡು ಹೇಗೆ ಕಾಣುತ್ತೇನೆ ಎಂದು ತಿರುತಿರುಗಿ ನೋಡುವುದು. ಅದಾದಮೇಲೆ ಸ್ವಲ್ಪ ಏನೋ ಕಮ್ಮಿಯೆಂದೆನೆಸಿ ಬ್ಯೂಟೀ ಪಾರ್ಲರಿಗೆ ಹೋಗಿಬಂದು ಮತ್ತದೇ ಕನ್ನಡೀಕರಣ! ಆಗಲೂ ಸರಿಯೆನಿಸದಿದ್ದರೆ ಮತ್ತೆ ಸಿಗೋ ಜಾಹೀರಾತುಗಳನ್ನೆಲ್ಲಾ ಮಗುಚಿ ಅಲ್ಲಿರುವ ರೂಪದರ್ಶಮ್ಮಗಳ ರೀತಿಯನ್ನೇ ಅನುಕರಿಸಲು ತೊಡಗುವುದು. " ಆಯ್ ಮಿನ್ ಇಟ್ ಈಸ್ ಸೋ ಸ್ವೀಟ್ ಯೂ ನೋ ...ಸೋ ಕ್ಯೂಟ್ ಯೂ ನೋ " ಎಂದೆಲ್ಲಾ ಚಪಲಕ್ಕೆ ಹೇಗೇಗೋ ಇಂಗ್ಲೀಷ್ ಬಳಸುವುದು. ಕನ್ನಡ ಬಂದರೂ ಸ್ವಲ್ಪ ಇಂಗ್ಲೀಷ್ ಮಿಕ್ಸ್ ಮಾಡಿದರೇ ಹೆಚ್ಚಿನ ಜನ ಆಸಕ್ತರಾಗುತ್ತಾರೆ ಎಂದು ತಿಳಿದು ಯಾವುದೋ ಭಾಷೆಯಮೂಲದವರಂತೇ ಮೈಸೂರಿನ ಪಕ್ಕದ ಕೆ.ಎಂ.ದೊಡ್ಡಿಯಲ್ಲಿ ಹುಟ್ಟಿಬೆಳೆದ ಹುಡುಗಿಯೂ ಆಡುವುದು ನೋಡಿದರೆ ’ಕನ್ನಡೀ’ಕರಣವನ್ನೂ ಕನ್ನಡೀಕರಣವನ್ನೂ ಮಾಡುತ್ತಾ ಸೇವೆಗೈಯುತ್ತಿರುವ ಅವರಿಗೆ ಕೈಲಾದ ಪ್ರಶಸ್ತಿಗಳನ್ನೆಲ್ಲಾ ಕೊಡಬೇಕೆನಿಸಿದರೆ ತಪ್ಪೆಂದು ಭಾವಿಸಬೇಡಿ.

ನವಿಲು ಕುಣಿಯಿತು ಅಂತ ಕೆಂಬೂತವೂ ಕುಣಿಯಿತು ಎಂಬುದು ಯಾರೋ ಓಬೀರಾಯ ಮಾಡಿದ ಗಾದೆ! ಯಾಕೆಂದರೆ ಈಗಿನ ಬ್ಯೂಟೀ ಪಾರ್ಲರ್ ಗಳಲ್ಲಿ ರಿಪೇರಿ ಮಾಡಲು ಇನ್ನೇನು ಸಾಧ್ಯವೇ ಇಲ್ಲಾ ಎನ್ನುವ ಕೆಟ್ಟಮುಖದವರನ್ನೂ ಮನುಷ್ಯರೂಪಕ್ಕೆ ತಿರುಗಿಸುತ್ತಾರಪ್ಪ.

" ಹೋಯ್ ಭಟ್ರೇ ಪರಿಚಯ ಸಿಗ್ಲಿಲ್ವಾ ? ನಾನು ರಾಧಿಕಾ.....ನಿಮ್ಮ ಹಳೇಮನೆ ಹತ್ತಿರ ಇದ್ನಲ್ಲ ..."

ತಲೆಕೆರೆದುಕೊಳ್ಳುತ್ತಾ ಯಾಕೆ ಗುರುತುಸಿಗಲಿಲ್ಲವೆಂದು ನೋಡಿದರೆ ಕಾಲೀಸೈಟು ಕ್ಲೀನ್ ಮಾಡಿ ಹೊಸಮನೆ ಕಟ್ಟಿದಂತೇ ಅವಳ ಮುಖಕ್ಕೆ ಅದೆಂತೆಂಥದೋ ಕ್ರೀಮು ಬಳಿದು, ಲಿಪ್ ಸ್ಟಿಕ್ಕು ಉಜ್ಜಿ, ಸಹಜವಾಗಿದ್ದ ಕಣ್ಣ ಹುಬ್ಬನ್ನು ಉದ್ಯಾನವನದ ಸಾಲುಗಿಡಗಳನ್ನು ಕಟ್ ಮಾಡಿದಂತೇ ಟ್ರಿಮ್ ಮಾಡಿ .....ಬೇಡರೀ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂತೂ ಆಕೆಗೆ ಉತ್ತರ ನೀಡಿ ಕಳಿಸಿದೆ ಅನ್ನಿ." ಮಾಡಿಕೊಳ್ಳಲಿ ಬಿಡಿ, ನಿಮ್ಮಪ್ಪನ ಗಂಟೇನು ಹೋಯ್ತು ? " ಎಂದು ನೀವು ಕಾಲುಕೆದರಿ ನಿಲ್ಲುವ ಮೋದಲೇ ನಾನೇ ಹೇಳಿಬಿಡುತ್ತೇನೆ ಕೇಳಿ:
" ನಮ್ಮ ಪಕ್ಷದಲ್ಲಿ ಆ ಥರ ಯಾವುದೇ ಜನ ಇಲ್ಲಾ, ನಾವೆಲ್ಲಾ ಒಂದು ಸಿದ್ಧಾಂತವನ್ನು ನೆಚ್ಚಿಕೊಂಡು ಬೆಳೆದ ಪಕ್ಷ. ನಮಗೆ ಕೋಟಿಯಾಗಲೀ ಕೋಟಿಕೋಟಿಯಾಗಲೀ ಯಾವುದರ ಬಗ್ಗೆಯೂ ತಿಳಿದಿಲ್ಲ. ನಾವೆಲ್ಲಾ ಒಟ್ಟಿಗೇ ಇದ್ದೇವೆ.. ಒಟ್ಟಿಗೇ ಇರ್ತೇವೆ " ...ಛೆ ಛೆ ....ಇದು ನಾನು ಶಾಸಕನಾದ ಕನಸುಕಂಡು ಹಲುಬಿದ್ದು ಇಲ್ಲೂ ಬಂದುಬಿಡ್ತಾ ಹೋಗ್ಲಿ ಬಿಡಿ... ಅವರೆಲ್ಲಾ ಏನಾರೂ ಮಾಡ್ಕೊಳ್ಲಿ. ನಾವಾಯಿತು ನಮ್ಮ ಕೆಲಸವಾಯಿತು.

’ಕನ್ನಡೀ’ಕರಣ ಜಾಸ್ತಿಯಾದಮೇಲೆ ಮುದುಕಪ್ಪಗಳೂ ಸುಮ್ಮನೇ ಕುಳಿತಿಲ್ಲ. ಕೂದಲು ಇದ್ದರೆ ಸರಿ ಇರದಿದ್ದರೆ ಕೂದಲು ಇರುವಂತೆಯೇ ಕಾಣುವಂತೇ ಅಷ್ಟು ಸಹಜವಾದ ವಿಗ್ ಧರಿಸಿ ಕನ್ನಡಿಗೆ ಜೋತುಕೊಳ್ಳುತ್ತಾರೆ. ಕೂದಲು ಬೆಳ್ಳಗಾದವರು ಬಣ್ಣ ಹಚ್ಚಿಕೊಂಡು ಕನ್ನಡಿ ಎದುರು ನಿಂತು ಇನ್ನೊಮ್ಮೆ ಮದುವೆಗೆ ತಯಾರಾಗಿರುವ ಗಂಡಿನಂತೇ ಸಂಭ್ರಮಿಸುತ್ತಾರೆ. ಬಿಳಿಯ ಕಣ್ಣು ಹುಬ್ಬಿಗೆ, ಮೀಸೆಗೆ, ಗಡ್ಡಕ್ಕೆ ಎಲ್ಲೆಡೆಯೂ ಬಣ್ಣ ! ಕೆಲವರು ಕಣ್ಣಿಗೆ ಹೆಂಗಳೆಯರಂತೇ ಕಾಡಿಗೆ ಬೇರೆ ! ಎಲ್ಲವನ್ನೂ ಪೂರೈಸಿದ ಮೇಲೆ ಕನ್ನಡಿಯ ಎದುರುನಿಂತು ಬೇರೆ ಬೇರೆ ರೀತಿಯಲ್ಲಿ ನಕ್ಕು ನೋಡುತ್ತಾರೆ. ಹಲ್ಲು ಅಷ್ಟಾಗಿ ಸರಿಕಾಣಿಸದಿದ್ದರೆ ಮಾರನೇದಿನವೇ ಹಲ್ಕಟ್ ಸಾರಿ ಹಲ್ಲುತಜ್ಞರನ್ನು ಭೇಟಿಮಾಡುತ್ತಾರೆ ! " ಬಾಯಲ್ಲಿ ಸರಿಯಾಗಿ ಏನೂ ಬ್ಯಾಲೆನ್ಸೇ ಇಲ್ಲವಲ್ರೀ " ಎಂದು ಅವರಂದರೆ " ಡಾಕ್ಟ್ರೇ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ....ಹಲ್ಲೂಂದ್ರೆ ಏನು ಮುತ್ತು ....ಮುತ್ತು ಪೋಣಿಸಿರೋ ಹಾಗೇ ಮಾಡ್ಕೊಡಿ " . ವೈದ್ಯರಿಗೆ ವಿಧಿಯಿಲ್ಲ ! ತಂತಿ-ತಂಬೂರಿ ಎಲ್ಲಾ ತಗಂಡು ಅದೆಷ್ಟು ರೀತಿ ರಿಪೇರಿ ಸಾಧ್ಯವೋ ಅಷ್ಟನ್ನೂ ಮಾಡುತ್ತಲೇ ಇರುತ್ತಾರೆ..ವಾರ ವಾರಕ್ಕೂ ಸಿಟ್ಟಿಂಗು ಸಿಟ್ಟಿಂಗು....ಗಿರಾಕಿ ಮತ್ತೆ ಕಣ್ಣು ಕೆಂಪಗೆ ಮಾಡುವವರೆಗೂ ಸಿಟ್ಟಿಂಗೇ ಕೆಲವುಕಡೆ ! ಅಂತೂ ಸಿಟ್ಟಿಂಗ್ ಎಲ್ಲಾ ಮುಗಿಸಿ ಬಂದ ಮಾಮ ಮತ್ತದೇ ’ಕನ್ನಡೀ’ಕರಣ !

’ಕನ್ನಡೀ’ಕರಣದ ಭರದಲ್ಲಿ ನವೆಂಬರ್ ಹತ್ತಿರಬಂದಿರುವುದರಿಂದ ಕೊನೇಪಕ್ಷ ರಾಜ್ಯೋತ್ಸವದ ಸಮಯದಲ್ಲಾದರೂ ಕನ್ನಡಿ ಬದಿಗಿರಿಸಿ ಕನ್ನಡವನ್ನು ಸ್ವಲ್ಪ ಮಾತನಾಡೋಣವೇ ? ಅಂದಹಾಗೇ ಈ ಲೇಖನದಲ್ಲಿ ಬಳಸಲಾದ ಇಂಗ್ಲೀಷ್ ಶಬ್ದಗಳು ನಮ್ಮ ’ಕನ್ನಡೀ’ಕರಣದವರ ಪ್ರಭಾವದಿಂದ ಹುಟ್ಟಿದ್ದಿರುತ್ತದೆ. [ ’ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಕೇವಲ ಕಾಲ್ಪನಿಕ’ ಎಂಬ ಬೋರ್ಡು ಓದುತ್ತೀರಲ್ಲಾ, ಅದೇ ಸ್ಟೈಲಿನಲ್ಲಿ ಓದಿಕೊಳ್ಳಿ]