ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 29, 2013

ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ


ಚಿತ್ರಋಣ : ಅಂತರ್ಜಾಲ  
ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ  

ಪದಗಳಮೃತ ವಿಬುಧ ಜನರಿಗೆ
ಹದದೊಳೆತ್ತಿದ ಪಾಕ-ಪಕ್ವವು
ಮುದದಿ ಬರೆದನು ಗದುಗು-ಭಾರತ ಬಯಸಿ ಸುಕೃತವ |
ಚದುರನಾಕವಿ ಕುವರವ್ಯಾಸಗೆ
ಗದಗಿನೊಡೆಯಗೆ ಸಕಲಮುನಿಜನ
ಪದಗಳಿಗೆ ಪೊಡಮಟ್ಟು ಪೇಳುವೆ ಕವಿಕಥಾಮೃತವ ||

ಮಹಾಕವಿ ಮುಮಾರವ್ಯಾಸಗೆ ಸಾಷ್ಟಾಂಗ ನಮಸ್ಕಾರ. ನಾನು ಅನೇಕಾವರ್ತಿ ಹೇಳಿದ್ದಿದೆ: ಅಷ್ಟೆಲ್ಲಾ ಕೆಲಸಗಳ ನಡುವೆ ಹೇಗೆ ಬರೆಯುತ್ತೀರಿ ? ಎಂಬೀ ಪ್ರಶ್ನೆಗೆ ಉತ್ತರಿಸುವುದು ಕಷ್ಟ; ಅದು ಆದ್ಯತೆಯ ಐಚ್ಛಿಕ ವಿಷಯ. ಉತ್ತಮ ಕಾವ್ಯ-ಸಾಹಿತ್ಯಗಳ ಆರಾಧನೆಯೊಂದು ಸೇವೆ-ಅದು ಸಮಾಜಕ್ಕೆ ನಾವು ಸಲ್ಲಿಸಬಹುದಾದದ್ದು. ಹಿಂದಕ್ಕೆ ಕವಿಗಳಿಗೆ ರಾಜಾಶ್ರಯವಿತ್ತು, ಯಾಕೆಂದರೆ ಕವಿಗಳು ವೇದತುಲ್ಯ ಮೌಲ್ಯಗಳನ್ನು ಆಧರಿಸಿ ಕಾವ್ಯ-ಸಾಹಿತ್ಯಗಳನ್ನು ಭಗವಂತನೆ ಸೇವೆಯೆಂಬ ರೀತಿಯಲ್ಲಿ ರಚಿಸುತ್ತಿದ್ದರು. ಈಗಿನ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹೆಚ್ಚಿನ ಅಧ್ಯಯನ/ಅಧ್ಯಾಪನ ವೃತ್ತಿಯಲ್ಲಿರುವ ಕೆಲವು ಜನ ಸಾಹಿತ್ಯದಲ್ಲಿ ತೊಡಗುತ್ತಾರೆ ಎಂಬುದೊಂದು ಅನಿಸಿಕೆ ಸಮಾಜದಲ್ಲಿ ನಿಂತಿದೆ; ಯಾಕೆಂದರೆ ಅವರ ಉಪಜೀವಿತಕ್ಕೆ ಬೇಕಾದ ಆರ್ಥಿಕ ಭದ್ರತೆಯೊಂದು ಅಲ್ಲಿ ಸಿಕ್ಕಿರುತ್ತದೆ ಮತ್ತು ಅಧ್ಯಾಪನಕ್ಕೆ ಮಿಕ್ಕಿ ಉಳಿದವೇಳೆಯಲ್ಲಿ, ರಜಾದಿನಗಳಲ್ಲಿ ಅವರು ಬರೆಯಲು ಸಾಧ್ಯ ಎಂಬುದು ಸಹಜ ಅನಿಸಿಕೆ. ಆದರೆ ಬರೆಯಲು ಅದೊಂದೇ ಅರ್ಹತೆ ಸಾಕಾಗದು, ಬರೆಯುವ ವ್ಯಕ್ತಿಗೆ ಬರೆಯುವುವ ಉತ್ಕಟೇಚ್ಛೆ ಇರಬೇಕಾದುದರ ಜೊತೆಗೆ ಬರವಣಿಗೆಯಲ್ಲಿ ತಾದಾತ್ಮ್ಯತೆ ಬೇಕು. ಓದುಗರು ಸ್ವೀಕರಿಸುತ್ತಾರೋ ಅಥವಾ ಪತ್ರಿಕೆಗಳು ಪ್ರಕಟಿಸಬಹುದೋ, ಪ್ರಶಸ್ತಿಗಳು ದೊರೆಯಬಹುದೋ ಎಂಬೆಲ್ಲಾ ಚಿಂತೆಗಳು ಕಾಡಬಾರದು. ಬರವಣಿಗೆಯಲ್ಲೇ ಅತೀವ ಆನಂದವನ್ನು ಅನುಭವಿಸುವ ವ್ಯಕ್ತಿ ಮಾತ್ರ ಬರೆಯಲು ಅರ್ಹನಾಗುತ್ತಾನೆ ಮತ್ತು ಹಾಗೆ ಬರೆಯುವಾತನಿಗೆ ಯಾವ ಅಡೆತಡೆಗಳೂ ಕಾಣಿಸುವುದಿಲ್ಲ. ಕನ್ನಡದ ಮಹಾಕವಿ ಕುಮಾರವ್ಯಾಸನ ಬಗೆಗೆ ಬರೆಯಬೇಕೆಂಬ ಬಹಳ ದಿನಗಳ ಅಪೇಕ್ಷೆಗೆ ಇಂದು ಅಕ್ಷರರೂಪ ಕೊಡುವಲ್ಲಿ ಮುಂದಾಗುತ್ತಿದ್ದೇನೆ. ಇದೊಂದು ಪುಟ್ಟ ಅವಲೋಕನವಷ್ಟೇ ಹೊರತು ವಿಮರ್ಶೆಯಲ್ಲ.

ಕುಮಾರವ್ಯಾಸನಂಥಾ ಕವಿ ನಮಗೆ ಸಿಕ್ಕಿದ್ದು ಕನ್ನಡಿಗರ ಅದೃಷ್ಟ, ಈ ಭುವನದ ಭಾಗ್ಯ. ಸಮೀಕ್ಷೆಯೊಂದರ ಪ್ರಕಾರ ಕ್ರಿ.ಶ. ೧೦ನೇ ಶತಮಾನಕ್ಕೂ ಮುನ್ನ ಕನ್ನಡದಲ್ಲಿ ಮಹಾಭಾರತ ಕಾವ್ಯ ಇರಲೇ ಇಲ್ಲ!! ನಂತರ ಬಂದ ಆದಿಕವಿ ಪಂಪ ಪಂಪ ಭಾರತವನ್ನು ಬರೆದ. ಪಂಪನ ಭಾರತ ಚೆನ್ನಾಗೇ ಇದ್ದರೂ ೧೪ನೇ ಶತಮಾನದಲ್ಲಿ ಇದ್ದನೆನ್ನಲಾದ ಕುಮಾರವ್ಯಾಸನ ’ಕರ್ಣಾಟ ಭಾರತ ಕಥಾಮಂಜರಿ’ಗೆ ಅದು ಸರಿಗಟ್ಟಲಿಲ್ಲ. ತನ್ನ ದೇಶ, ಊರು, ಕಾಲ, ವೃತ್ತಿ, ಮನೆತನ, ಕುಲ,ಗೋತ್ರ ಏನೊಂದನ್ನೂ ಎಲ್ಲಿಯೂ ಲಿಖಿತರೂಪದಲ್ಲಿ ದಾಖಲಿಸದ ಈ ಕವಿಯನ್ನು ಗದುಗಿನ ನಾರಣಪ್ಪ ಎಂದು ಸ್ಥಾನಿಕ ಹಿರಿಯರು ಗುರುತು ಹಿಡಿದಿದ್ದಾರೆ. ಗದುಗಿನ ಕೋಳಿವಾಡ ಗ್ರಾಮದಲ್ಲಿ ಈತ ೧೪೩೦ ರ ಸುಮಾರಿಗೆ ಇದ್ದನೆಂಬುದು ಒಂದು ಹೇಳಿಕೆ. ’ಕುಮಾರವ್ಯಾಸ’ ಎಂಬ ಕಾವ್ಯನಾಮವನ್ನು ಮಾತ್ರ ತನ್ನ ಭಾರತ ಕೃತಿಯಲ್ಲಿ ಬಳಸಿರುವುದು ಕಂಡುಬಂದಿದ್ದು ಅನೇಕರು ಆತನ ನಿಜನಾಮಧೇಯವೇ ಕುಮಾರವ್ಯಾಸ ಎನ್ನುತ್ತಾರೆ. ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಒದ್ದೆ ಪಂಚೆಯನ್ನುಟ್ಟು ಕುಳಿತು ಆಡುತ್ತಾ ಹಾಡುತ್ತಾ ಮೈಮರೆಯುತ್ತಿದ್ದನಂತೆ; ಕೆಲಕಾಲ ಈ ಪಯಣ ನಿತ್ಯವೂ ಒದ್ದೆ ಪಂಚೆ ಆರುವವರೆಗೆ ನಡೆಯುತ್ತಿದ್ದೆಂದು ಸಂಶೋಧಕರ ಅಭಿಪ್ರಾಯ. ವೀರನಾರಾಯಣನಲ್ಲಿ ಅನನ್ಯ ಶರಣತೆಯನ್ನು ಹೊಂದಿದ್ದ ಕುಮಾರವ್ಯಾಸ, ಭಕ್ತಿರಸವುಕ್ಕಿಹರಿದು ಹಾಡುವಾಗ, ಬರೆಯುವಾಗ ಜನ ಸುತ್ತಲೂ ಸೇರುತ್ತಿದ್ದರು ಎಂಬುದು ಪ್ರತೀತಿ. ಅಚ್ಚರಿಯಿಂದ ಬಾಯ್ದೆರೆದು ಕೇಳುತ್ತಿದ್ದ ಸುತ್ತಲ ಜನರಿಗೆ ಪಂಚೆ ಆರಿದಮೇಲೆ ಒಮ್ಮೆಲೇ ನಿರಾಸೆಯಾಗುತ್ತಿತ್ತು, ಮತ್ತೆ ರಸಗವಳಕ್ಕಾಗಿ ನಾಳೆಯವರೆಗೆ ಕಾಯಬೇಕಾಗುತ್ತಿತ್ತು. ಅಂತಹ ಅನೇಕ ನಾಳೆಗಳಿಗಾಗಿ ಅಂದಿನ, ಅಲ್ಲಿನ ಬುಧಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಅವರೇಕೆ ನಾವೂ ಸಹಿತ ಅಂತಹ ಕಾವ್ಯವನ್ನು ಮರೆಯಲು ಸಾಧ್ಯವೇ?

ಕವಿಯೊಬ್ಬನ ಭಾವಪರವಶತೆ ಮತ್ತು ನಿಷ್ಕಳಂಕ ಚಿತ್ತವೃತ್ತಿ ಕಾವ್ಯದ ತೋರಣನಾಂದಿಯಲ್ಲೇ ಗೋಚರವಾಗಿಬಿಡುತ್ತದೆ!  ಇಲ್ಲೂ ಸಹ ಆದಿಪರ್ವದಲ್ಲಿ ಕಥಾಪ್ರವೇಶಕ್ಕೂ ಮುನ್ನ ಈ ಕವಿಯ ವಿನಮ್ರ ನಡೆ, ಆ ಭಕ್ತಿ, ಆ ಪ್ರಾರ್ಥನೆ, ಆ ತೋಡಿಕೊಳ್ಳುವಿಕೆ, ಆ ದಾರ್ಷ್ಟ್ಯಭಾವ, ಆ ನಿರಹಂಕಾರ ಎಲ್ಲವನ್ನೂ ಕಾಣಬಹುದಾಗಿದೆ.

ಮೊದಲಾಗಿ ಕವಿ, ಗಣಪನನ್ನು ಕುರಿತು ಪ್ರಾರ್ಥಿಸಿದ್ದನ್ನು ನೋಡಿ:

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರ ಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||


ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ಕನ್ನಡದಲ್ಲಿ ಭಾಮಿನಿ ಷಟ್ಪದಿಕಾರನೆಂಬ ಗೌರವವೂ ಕುಮಾರವ್ಯಾಸನಿಗಿದೆ. ಗಜಮುಖನನ್ನು ಇನ್ನಾವ ರೀತಿಯಲ್ಲಿ ಹೊಗಳ ಬಹುದು?  ಸಿಹಿಯಾದ ಕಬ್ಬನ್ನು ಕಚ್ಚಿ ತಿನ್ನುವಾಗ ಜಗಿದಷ್ಟೂ ಅದರ ರಸ ಹೊರಹೊಮ್ಮುತ್ತದೆ ಹೇಗೋ ಹಾಗೇ ಈ ಕವಿಯ ಕಾವ್ಯದ ಪ್ರತೀ ಸಾಲುಗಳಲ್ಲಿ ಯಾ ಪಾದಗಳಲ್ಲಿ ಪದಮಾಂತ್ರಿಕತೆ ತುಂಬಿದೆ! ರಸಭರಿತ ರಸಪೂರಿ ಮಾವಿನ ಹಣ್ಣಿನಂತೇ ಒಂದನ್ನು ಓದಿದರೆ ಅದು ಇನ್ನೊಂದರೆಡೆಗೆ ನಮ್ಮನ್ನು ಸೆಳೆಯುತ್ತದೆ. ನವರಸಗಳನ್ನೂ ತುಂಬಿಕೊಳ್ಳುತ್ತಾ ಹೋಗುವ ಈ ಭಾರತ ಕಾವ್ಯ ಹೇಗಿದೆಯಪ್ಪಾ ಎಂದರೆ  ಮನವೆಂಬ ಹಸಿದ ಹೊಟ್ಟೆಗೆ ಮೃಷ್ಟಾನ್ನ ಭೋಜನವಿದ್ದಂತೇ ಇದ್ದು ಊಟದ ನಂತರ ತೇಗುಬರುವಂತೇ ಕಾವ್ಯವನ್ನು ಸಮಗ್ರವಾಗಿ ಓದಿಪೊರೈಸಿದಾಗ ಮನಸ್ಸು ತೃಪ್ತವಾಗುತ್ತದೆ.  


ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ |
ರಾವಣಾಸುರ ಮಥನಶ್ರವಣ ಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರ ನಾರಯಣ ||


ವೀರನಾರಾಯಣನಲ್ಲಿ ಕವಿಯ ಭಕ್ತಿಯ ಗಮ್ಯ ಎದ್ದು ಕಾಣುತ್ತದೆ. ಹರಿಹರ ಭೇದವೆಣಿಸದ ಕವಿ ಹರನಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:


ಶರಣ ಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರು ಚರಿತ್ರ ನಿರುಪಮ ಭಾಳ ಶಿಖಿನೇತ್ರ |
ಕರಣ ನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀ ರಮಣ ||


ವಾಗ್ದೇವಿಯಲ್ಲೇ ಅಮ್ಮನವರ ಎಲ್ಲಾ ರೂಪಗಳನ್ನೂ ಕಂಡು ನುತಿಸಿದ ಪರಿ ಇಂತಿದೆ :

ವಾರಿಜಾಸನೆ ಸಕಲ ಶಾಸ್ತ್ರ ವಿ
ಚಾರ ದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ |
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||


ಆದಿನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವ ಗು
ಣಾಧಿ ದೇವತೆ ಅಮರ ವಂದಿತ ಪಾದಪಂಕರುಹೆ |
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ||


ವೀರನಾರಾಯಣನೇ ನಿಜವಾದ ಕವಿ, ತಾನು ಕೇವಲ ಲಿಪಿಕಾರ ಎಂಬ ಕವಿಯ ವಿನಮ್ರ ಭಾವಗಳನ್ನು ಮುಂದೆ ಕಾಣುತ್ತೇವೆ :

ವೀರ ನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು |
ಚಾರು ಕವಿತೆಯ ಬಳಕೆಯಲ್ಲ ವಿ
ಚಾರೊಸುವ ಡಳವಲ್ಲ ಚಿತವ
ಧಾರುಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ||


ಶ್ರೀರಾಮ ನನ್ನು ನೆನೆಯುತ್ತಾ :

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ |
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾವಹ ಭೀಮ ರಘುಕುಲ
ರಾಮ ರಕ್ಷಿಸು ವೊಲಿದು ಗದುಗಿನ ವೀರನಾರಯಣ ||


ದೇವಿ ಲಕ್ಷ್ಮಿ-ಪಾರ್ವತಿಯರನ್ನು ನೆನೆದಿದ್ದು ಹೀಗೆ :


ಶರಧಿಸುತೆ ಸನಕಾದಿ ವಂದಿತೆ
ಸುರ ನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ |
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮೀ ಕೊಡುಗೆಮಗಧಿಕ ಸಂಪದವ ||

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಬುಜೆಯೆ ಪಾವನ ಮೂರ್ತಿ ಪದ್ಮಜ ಮುಖ್ಯ ಸುರಪೂಜ್ಯೆ |
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷಮರ್ಧಿನಿ
ಭುಜಗಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ||


ವೇದವ್ಯಾಸರನ್ನು ಸ್ತುತಿಸಿದ ಪದ್ಯ ಇಲ್ಲಿದೆ:

ದುರಿತ ಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ನಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು |
ತರಳನನು ತನ್ನವನೆನುನತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರರಾಯ ||

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದನತ ಸಂಸಾರ ಕಾನನ ಘನ ದವಾನಳನು |
ನಣ್ದನಣ್ದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ||


ಸಜ್ಜನರಲ್ಲಿ, ಬುಧಜನರಲ್ಲಿ, ಪ್ರಾಜ್ಞರಲ್ಲಿ ಮಾಡಿದ ಮನವಿ ಇಂತಿದೆ :

ತಿಳಿಯ ಹೇಳುವ ಕೃಷ್ಣಕಥೆಯನು
ಇಳೆಯಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವನು ಕೃಷ್ಣಮೆಚ್ಚಲಿಕೆ |
ಹಲವುಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಮಂಚಮ ಶ್ರುತಿಯ ||

ವೇದಗಳು ನಾಲ್ಕಾಗಿ ವಿಂಗಡಿತವಾದಮೇಲೆ, ವೇದವ್ಯಾಸರಿಗೆ ಸಮತೂಕದ ಇನ್ನೊಂದು ಕಥೆಯನ್ನು ಲೋಕದ ಹಿತಾರ್ಥ ಬರೆಯಬೇಕೆಂಬ ಇಚ್ಛೆ ಒಡಮೂಡಿತಂತೆ. ಹಾಗೆ ಸಂಕಲ್ಪವಾದಾಗ ಬಹುಕಾಲ ಬಾಯಿಗೆ ಬಂದದ್ದನ್ನು ಕೃತಿಗೆ ಇಳಿಸುವ ಲಿಪಿಕಾರನೊಬ್ಬನ ಅಗತ್ಯತೆ ಇತ್ತು. ನಾರದರ ಪ್ರವೇಶದಿಂದಾಗಿ ಗಣಪನ ಪರಿಚಯವಾಗಿ, ಭಾರತಕಥೆಯನ್ನು ಗಣಪ ಶುಂಡವನ್ನೊಲೆದು ಗೀರ್ವಾಣ ಲಿಪಿಯಲ್ಲಿ ಬರೆದ ಮತ್ತು ಅರ್ಥವಿಸಿಕೊಂಡು ಪಂಚಮವೇದವೆನಿಸಲಿ ಎಂದು ಹರಸಿದ ಎಂಬುದು ಐತಿಹ್ಯ. ಭರತವಂಶದ ಕುಲ ಹುಟ್ಟಿಬೆಳೆದ ಕಥೆಯನ್ನು ವಿಸ್ತರಿಸುವುದರಿಂದ ಕಥೆ ಭಾರತವೆಂದೂ ಮಹಾಭಾರತವೆಂದೂ ಕರೆಯಲ್ಪಟ್ಟಿತು. ಸ್ವತಃ ಗಮಕಿಯಾಗಿದ್ದ ಕುಮಾರವ್ಯಾಸ ಸಂಗೀತವನ್ನೂ ಬಲ್ಲವನಾಗಿದ್ದ. ಕರಣಿಕ ರ ಮನೆತನದಲ್ಲಿ ಹುಟ್ಟಿದ ಆತನ ಮನೆತನದವರು ಕೋಳಿವಾಡ ಗ್ರಾಮದಲ್ಲಿ ಶಾನುಭೋಗರಾಗಿದ್ದರು ಎಂಬುದು ತಿಳಿದುಬರುತ್ತದೆ. ಯಾವ ರಾಜನ ಮೆಚ್ಚುಗಾಗಿಯೂ ಬರೆಯದೇ ಕೇವಲ ವೀರನಾರಾಯಣನ ಸೇವೆ ಎಂಬರ್ಥದಲ್ಲಿ ತನ್ನೊಳಗೆ ತಂತಾನೇ ಹೊಮ್ಮಿದ ಪದ್ಯಗಳನ್ನು ಬರೆದ. ವಿಜಯನಗರದ ಕೃಷ್ಣದೇವರಾಯನ  ಕಾಲದಲ್ಲಿ ಇದ್ದಾತನೆಂದು ಕೆಲವರು ಹೇಳಿದರೂ ಅದಕ್ಕೂ ಮುನ್ನವೇ ಆತ ಬದುಕಿರುವ ಕುರುಹು ಸಿಗುತ್ತದೆ. ಕಾವ್ಯದಲ್ಲಿ ಒಂದೆಡೆ ಕೃಷ್ಣರಾಯನೆಂದು ನಮೂದಿಸಿದ್ದರೂ ಅದು ಭಾರತ ಕಥೆಯಲ್ಲಿನ ಶ್ರೀಕೃಷ್ಣನನ್ನು ಕುರಿತಾದ ಸಂಬೋಧನೆಯೇ ಹೊರತು ವಿಜಯನಗರಕ್ಕೆ ಸಂಬಂಧಿಸಿದ್ದಲ್ಲ.    

ಪದದ ಪ್ರೌಢಿಮೆ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರು ಮೀ ಕಥಾಂತರಕೆ |
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ||

ಪೌಢಿಮೆಯುಳ್ಳ ಸಜ್ಜನರೇ, ಈ ಕಥೆಯನ್ನು ಬೆದಕಿ ಕೆದಕಿ ಪದಗಳ ಪ್ರೌಢಿಮೆಯ ಬಗ್ಗೆ ಚಿಂತಿಸದೇ ಇದೊಂದು ಕೃಷ್ಣಕಥೆಯಾಗಿದ್ದು, ಪದ್ಮನಾಭನ ಪಾದದಲ್ಲಿ ಎರೆದ ತುಳಸೀ ನೀರಿನಂತಿದೆ ಎಂದು ಭಾವಿಸಿರಿ ಎಂದಿದ್ದಾನೆ. ಪದಲಾಲಿತ್ಯವನ್ನು ಮುಂದೆ ನೋಡಿ :

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ |
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ||

ತನ್ನಲ್ಲೂ ಒಂದು ಬಲುಹು ಒಂದು ವೈಶಿಷ್ಟ್ಯವಿದೆಯೇನೆಂದರೆ: ಪದ್ಯಗಳನ್ನು ಬರೆಯುವ ಮುನ್ನ ಹಲಗೆ-ಬಳಪ ಬಳಸಲಿಲ್ಲ, ಒಮ್ಮೆ ಬರೆದ ಪದಗಳನ್ನು ಯಾವುದೇ ಕಾರಣಕ್ಕೂ ಅಳಿಸಿದವನಲ್ಲ! ಇನ್ನೊಬ್ಬರು ಬರೆದ ಕಾವ್ಯದ ಶೈಲಿಯನ್ನೋ ಪದಗಳನ್ನೋ ಆಯ್ದುಕೊಳ್ಳಲಿಲ್ಲ, ಬರೆದ ತಾಡವೋಲೆಗಳಲ್ಲಿ[ಕಂಠಪತ್ರ] ಚಿತ್ತುಗಳು-ಹೊಡೆದುಹಾಕಿ ಹೊಸದಾಗಿ ಬರೆದ ಅವಲಕ್ಷಣಗಳು ಇರುವುದಿಲ್ಲ ಎಂಬ ಅಗ್ಗಳಿಕೆ ತನ್ನದೆಂದು ಕವಿ ಹೇಳಿಕೊಂಡಿದ್ದಾನೆ. ಮಹಾಕಾವ್ಯವನ್ನು ಬರೆಯುವಾಗ ಕವಿಗಳಿಗೆ ತಿಂಗಳಾನುಗಟ್ಟಲೆ ಸಮಯ ಹಿಡಿಯುತ್ತದೆ; ಶಿಲ್ಪಿಯ ಮನದಭಿತ್ತಿಯಲ್ಲಿ ಮೂಡಿದ ಮೂರ್ತಿ ಎದುರಿನ ಶಿಲೆಯಲ್ಲಿ ಅರಳಿ ನಿಲ್ಲುವವರೆಗೆ ಅದಕ್ಕೆ ಸಾವಿರಾರು ಚೇಣುಗಳು ಬೇಕಾಗುತ್ತವೆ-ವರ್ಷಗಟ್ಟಲೆ ಯಾ ತಿಂಗಳಾನುಗಟ್ಟಲೆ ಕಾಲವ್ಯಯವಾಗುತ್ತದೆ ಹೇಗೋ ಹಾಗೇ. ಮಹಾಕಾವ್ಯದ ರಚನೆಯಲ್ಲಿ ಒಮ್ಮೆ ಬರೆದ ಪದಗಳನ್ನು ಅಳಿಸದ, ಯಾರನ್ನೂ ಅನುಕರಿಸದ, ಹಲಗೆ-ಬಳಪದಲ್ಲಿ ಬರೆದು ತಿದ್ದಿಕೊಳ್ಳುತ್ತಾ ಅದನ್ನು ಕಂಠಪತ್ರಕ್ಕಿಳಿಸದ, ಕಂಠಪತ್ರದಲ್ಲಿ ನಡುವೆಯೆಲ್ಲೂ ಕಾಟು, ಗೀಟು ಹಾಕಿ ನಂಜಾಗಿಸದ ಕವಿಯೊಬ್ಬನಿದ್ದರೆ ಆತ ಕುಮಾರವ್ಯಾಸ!!!    

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮರೆವುದು ಲೇಸ ಸಂಚಿಪುದು |
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರ ನಾರಾಯಣನ ಕಿಂಕರಗೆ ||

ಈ ಮಹಾಕವಿ ಅದೆಷ್ಟು ವಿನಯ ಗುಣ ಸಂಪನ್ನ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಕೃತಿಯನ್ನೋದಿದ ಪಂಡಿತರು, ಪದ ನಿಷ್ಣಾತರು, ಕವಿ-ಕಾವ್ಯ ಕೋವಿದರು, ಸೂಕ್ತಿಕಾರರು, ಭಾವುಕರು ಏನಾದರೂ ತಪ್ಪು ಕಂಡರೆ ತಿದ್ದಿ, ಕ್ಷಮಿಸಿ, ಈ ವೀರನಾರಾಯಣನ ಕಿಂಕರನಿಗೆ ಬುದ್ಧಿಹೇಳಿ ಎಂಬ ಕೋರಿಕೆಯಲ್ಲಿ ಅನನ್ಯಭಾವ ಕಾಣುತ್ತದೆ.

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ |
ಬಣಗುಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸ  ನುಳಿದವರ ||


ರಾಮಾಯಣದ ಭಾರವನ್ನು ಹೊರಲಾರದೇ ಆದಿಶೇಷ ತಿಣುಕಿದನಂತೆ. ಅಲ್ಲಿ ಕಾಲಿಡಲಾಗದಷ್ಟು ಜಾಗವಿಲ್ಲದ ಮಹಾಚರಿತೆ ಅದಾಗಿದೆ. [’ಕಾಲಿಡು’ ಎಂಬುದನ್ನು ಕೆಲವರು ವಿಚಿತ್ರವಾಗಿ ನೋಡುತ್ತಾರೆ. ನಾನು ಹಿಂದೊಮ್ಮೆ "ವೇದಗಳಿಗೆ ಕಾಲಿಡುವ ಮುನ್ನ" ಎಂದು ಬರೆದಿದ್ದನ್ನು ಯಾರೋ ಮಹಾನುಭಾವ ಆಕ್ಷೇಪಿಸಿದ್ದು ನೆನಪಿಗೆ ಬರುತ್ತಿದೆ. ಕಾಲಿಡು ಎಂದರೆ ನಮ್ಮ ಕಾಲುಹಾಕಿ ಅದನ್ನು ಮಲಿನಮಾಡುವುದು ಎಂಬರ್ಥವಲ್ಲ, ಕಾಲಿಡು ಬದಲಾಗಿ ಕೈಯಿಡು ಎಂದು ಹೇಳಬಹುದಿತ್ತಲ್ಲಾ ಎನ್ನುವವರೂ ಇರುತ್ತಾರೆ! ಕಾಲಿಡು, ಪಾದಾರ್ಪಣೆಮಾಡು ಎಂಬೆಲ್ಲಾ ಪರ್ಯಾಯ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ, ಆರಂಭಿಸುವುದಕ್ಕೆ ಕಾಲಿಡುವುದು ಎಂದು ಪರ್ಯಾಯವಾಗಿ ಹೇಳುತ್ತಾರೆ.] ರಾಮಾಯಣ ಬರೆದ ಕವಿಗಳಿಗೆ ಸುಸ್ತಾಗಿರಬಹುದು ಆದರೆ ಶುಕರೂಪನಾದ ತನಗೆ ಸಾಕೆಂದು ಯಾವಾಗಲೂ ಅನಿಸುವುದಿಲ್ಲ ಮತ್ತು ಸಾಕಾಗಿರಬೇಕೆಂದುಕೊಂಡವರನ್ನು ಕುಣಿಸಿ ನಗದಿರುತ್ತಾನೆಯೇ ಕುಮಾರವ್ಯಾಸ ? ಎಂಬುದು ಕವಿಯ ಪ್ರಶ್ನೆ.

ಹರಿಯ ಬಸಿರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಡಗಿಹವನೇಕ ಪುರಾಣ ಶಾಸ್ತ್ರಗಳು |
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ||

ಸಕಲ ವೇದ, ಪುರಾಣ ಶಾಸ್ತ್ರಗಳನ್ನು ಸಮೀಕರಿಸಿ ಬರೆದ ಭಾರತ ಹರಿಯ ಬಸಿರಳೊಳಗೆ ಅಡಗಿದ ಬ್ರಹ್ಮಾಂಡವನ್ನು ಬಿಂಬಿಸುತ್ತದೆ. ಪರಮ ಭಕ್ತಿಯಿಂದ ಈ ಕೃತಿಯನ್ನು ಓದಿದ, ಉತ್ತಮ ಗುಣಗಳನ್ನು ನಡತೆಯನ್ನು ಅವಲಂಬಿಸಿಕೊಂಡ ಜನರಿಗೆ ದುರಿತದ ಅಂಕುರ ಬೇರನ್ನೇ ನೀಗಿಸುತ್ತದೆ ಎಂಬುದನ್ನು ವ್ಯಾಸಾರು ಹೇಳಿದ್ದಾರಾಗಿ ಕವಿ ಕುಮಾರವ್ಯಾಸ ಶ್ರುತಪಡಿಸಿದ್ದಾನೆ. ಮುಂದುವರಿಯುತ್ತಾ :

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ |
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರ ವ್ಯಾಸ ಭಾರತವ ||


ರಾಜರುಗಳಿಗೆ/ಕ್ಷತ್ರಿಯರಿಗೆ  ಇದು ವೀರವೆನಿಸಿದರೆ, ಬ್ರಾಹ್ಮಣರಿಗೆ ಪರವೇದದ ಸಾರವಾಗಿ ತೋರುತ್ತದೆ, ಯೋಗಿಗಳಿಗೆ-ಮುನಿಜನರಿಗೆ ತತ್ವವಿಚಾರವಾಗಿ ತೋರುತ್ತದೆ ಮತ್ತು ಮಂತ್ರಿಗಳಿಗೆ ರಾಜನೀತಿಯ ಬುದ್ಧಿಯನ್ನು ಹೇಳುತ್ತದೆ. ಇದಲ್ಲದೇ ವಿರಹಿಗಳಿಗೆ ಶೃಂಗಾರಕಾವ್ಯವೆನಿಸಿದರೆ ಪಂಡಿತರಿಗೆ ಅಲಂಕಾರವಾಗಿ ಕಾಣುತ್ತದೆ, ಒಟ್ಟಿನಲ್ಲಿ ಕಾವ್ಯ ಪ್ರಧಾನಕಾವ್ಯವಾಗುತ್ತದೆ ಬರೆಯೆಂದು ವ್ಯಾಸರ/ವೀರನಾರಾಯಣರ ಅಪ್ಪಣೆ/ಪ್ರೇರಣೆ ದೊರತದ್ದರಿಂದ ಕುಮಾರವ್ಯಾಸ ಭಾರತವನ್ನು ಬರೆದನೆಂದು ತಿಳಿಸಿದ್ದಾನೆ. ಕಾವ್ಯದ ಫಲಶ್ರುತಿಯನ್ನು ನೋಡಿ :

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮ ಯಾಗ ಫಲ |
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ||


ವೇದಪಾರಾಯಣದ ಸುಕೃತ ಫಲ, ಗಂಗಾದಿ ಸಕಲ ಮಂಗಳತೀರ್ಥಸ್ನಾನ ಫಲ, ಬಂಗಾರದಿಂದ ಅಲಂಕರಿಸಿದ ಗೋದಾನಾದಿ ದಾನಗಳನ್ನು [ಕೃಚ್ಛ್ರ]ಮಾಡಿದ ಫಲ, ಯಾಗಗಳಲ್ಲೇ ಶ್ರೇಷ್ಠವೆನಿಸಿದ ಜ್ಯೋತಿಷ್ಟೋಮ ಯಾಗ ಮಾಡಿದ ಫಲ, ಭೂದಾನವನ್ನೂ-ವಸ್ತ್ರದಾನವನ್ನೂ-ಕನ್ಯಾದಾನವನ್ನೂ ಮಾಡಿದ ಫಲ ಈ ಭಾರತ ಕಥೆಯನ್ನಾದರಿಸಿ ಕೇವಲ ಒಂದೇ ಒಂದಕ್ಷರವನ್ನೋದಿದರೂ ಲಭಿಸುತ್ತದೆ ಎಂದು ಉಲ್ಲೇಖಿಸಿದ್ದಾನೆ; ಎಂದಮೇಲೆ ವೀರನಾರಾಯಣನಮೇಲೆ ಆತನಿಗೆ ಯಾವ ನಿಷ್ಠೆ ಇದ್ದೀತು ಎಂಬುದು ಗೊತ್ತಾಗುತ್ತದೆ.

ಚೋರನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು |
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರ ರೌರವವನ್ನು ಕೆಡಿಸುಗು ಕೇಳ ಸಜ್ಜನರ ||


ಕಳ್ಳರು ಚಂದ್ರನನ್ನು ನಿಂದಿಸಿದರೇನು, ಹಾಲನ್ನು ಕುಡಿಯಲಾರದ ಕ್ಷಯರೋಗಿ ಹಳಿದರೇನು, ನಡೆಯಲಾರದವ ವಾರಣಾಸಿಯನ್ನು ನೆನೆಸಿ ನಕ್ಕರೇನು? ಯಾವ ತೊಂದರೆಯೂ ಇರದು. ಭಾರತದ ಕಥಾ ಪ್ರಸಂಗವನ್ನು ಕ್ರೂರ ಕರ್ಮಿಗಳು ಎಲ್ಲಿ ತಿಳಿಯಬಲ್ಲರು? ಸಜ್ಜನರು ಇದನ್ನು ಶ್ರವಣಮಾಡಿದ ಮಾತ್ರಕ್ಕೆ ಘೋರ ನರಕ ತಪ್ಪುತ್ತದೆ ಎಂದು ಬಣ್ಣಿಸಿದ್ದಾನೆ. ಸಂಬಂಧಗಳ ರಹಸ್ಯ ಮತ್ತು ರಹದಾರಿಯನ್ನು ಈ ಕೆಳಗಿನ ಪದ್ಯದಲ್ಲಿ ಗಮನಿಸಿ :

ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನ ನತುಳಭುಜಬಲದಿ |
ಕಾದಿಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರ ನಾರಯಣ ||


ಈ ಪದ್ಯ ಬಹಳ ಜನಪ್ರಿಯವೆನಿಸಿದ್ದರಿಂದ ಇದಕ್ಕೆ ಹೊಸದಾಗಿ ಅರ್ಥವಿವರಣೆ ಬೇಕಿಲ್ಲ.

ಕುಮಾರವ್ಯಾಸನೊಬ್ಬ ಸ್ವತಂತ್ರ ಕವಿ. ಆತ ಯಾರನ್ನೂ ಆಶ್ರಯಿಸಲಿಲ್ಲ. ವ್ಯಾಸರ ಮೂಲ ಕಥೆಯೊಂದೇ ಆತನಿಗೆ ಆಧಾರ. ಪಂಪನಿಗೆ ಭಾರತ ಲೌಕಿಕ ಕಾವ್ಯವಾದರೆ ಕುಮಾರವ್ಯಾಸನಿಗೆ ಭಗದ್ವಿಲಾಸವಾಗಿ ಕಂಡಿತು! ಪಂಪನಿಗೆ ತನ್ನ ಕಾವ್ಯ ಪ್ರತಿಭೆಯ ಪ್ರಕಾಶನಕ್ಕೆ ಭಾರತಕಥೆ ಕಾರಣವಾದರೆ  ಕುಮಾರವ್ಯಾಸನಿಗೆ ಆತ್ಮ ಪ್ರಕಾಶನಕ್ಕೆ ಅಡಿಗಲ್ಲು ಹಾಕಿತು. ಪಂಪ ಲೌಕಿಕ ಮತ್ತು ಧಾರ್ಮಿಕಗಳೆಂಬ ಇಮ್ಮೊಗದ ದರ್ಶನ ಮಾಡಿಸಿದರೆ ಕುಮಾರವ್ಯಾಸನ ಪರಿಪೂರ್ಣ ವ್ಯಕ್ತಿತ್ವದ ಪ್ರತಿಮಾರೂಪವಾಗಿ ಆತನನ್ನು ಕಾವ್ಯಯೋಗಿಯೆನಿಸಿತು. ಕುಮರವ್ಯಾಸ ಕಾವ್ಯದ ಒಂದೊಂದು ಪ್ರಾಸಸ್ಥಾನವೂ ರೂಪಕವನ್ನು ಕವಿಮನದಲ್ಲಿ ಮೂಡಿಸುತ್ತದೆ. ಯಾವ ಪದ್ಯವೂ ಕಥಾಭಾಗವೂ ಎಲ್ಲೂ ಅತಂತ್ರವಾಗಿಲ್ಲ, ಕುತಂತ್ರ ಸೇರಿಲ್ಲ. ಹೊಸದಾಗಿ ಓದುವ ಕನ್ನಡಿಗರಿಗೆ ಕನ್ನಡದ ಸುವಿಶಾಲ ಪದಶ್ರೇಣಿಗಳ, ಸಂಧಿ-ಸಮಾಸಗಳ ಪರಿಚಯ, ಉಪಮೆ-ಅಲಂಕಾರಗಳ ಪರಿಚಯ ಇಲ್ಲಿ ಸಾಧ್ಯ; ಈ ದೃಷ್ಟಿಯಿಂದ ಹೊಸಬರಿಗೆ ಸ್ವಲ್ಪ ಕಬ್ಬಿಣದ ಕಡಲೆ ಎನಿಸಿದರೂ ಆ ಕಾಲಕ್ಕೆ ಕವಿ ಬಳಸಿದ ಎಲ್ಲಾ ಪದಗಳೂ ಸಹಜಗತಿಯಲ್ಲಿ ಭಾಷೆಯಲ್ಲಿ ಬಳಕೆಯಲ್ಲಿದ್ದವು ಎಂಬುದನ್ನು ಮರೆಯಬಾರದು.

ಸಂಧ್ಯಾಸಮಯದ ಪಶ್ಚಿಮ ದಿಕ್ಕಿನಲ್ಲಿನ ಬಣ್ಣಗಳ ಹರಹು, ಸಾಗರದ ನೀಲವರ್ಣದ, ವಸಂತಮಾಸದಲ್ಲಿ ತುಂಬಿನಿಂತ ಮರಗಳ ಹಸಿರು ಹೀಗೇ ಆಯಾಯ ಸಂದರ್ಭದಲ್ಲಿ ಬಳಸಿದ ಪದ್ಯಗಳಲ್ಲಿ ಪದಪುಂಜಗಳು ಬರಹಗಾರನ ಶಬ್ದದಾರಿದ್ರ್ಯವನ್ನು ದೂರಮಾಡುತ್ತವೆ. ಯುದ್ಧ, ಸಾಹಸ, ಶಪಥ, ಬೈಗುಳ, ಕಿಡಿನುಡಿ, ಕಟಕಿ, ಬಿರುನುಡಿ, ಕಿರಿನುಡಿ, ಹಾಸ್ಯ, ಸರಸ, ವ್ಯಂಗ್ಯ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ, ಕರುಣೆ ಎಲ್ಲದರಲ್ಲೂ ಕಾಳಿದಾಸನಂತೇ ಕುಮಾರವ್ಯಾಸ ತನ್ನದೇ ಆದ ಛಾಪನ್ನು ಮೂಡಿಸಿದ್ದಾನೆ. ಪಶುವಿನಿಂದ ಹಿಡಿದು ಯೋಗಿ ಮಹಾಯೋಗಿಗಳ ವರೆಗಿನ ಪಾತ್ರ ಚಿತ್ರಣ ಅತ್ಯದ್ಭುತ, ಅನವದ್ಯ, ಹೃದ್ಯ.

ಊಹೆದೆಗೆಹಿನ ಕಂಬನಿಯ ತನಿ
ಮೋಹರದ ಘನಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ |

--ಎಂಬಲ್ಲಿ ಕೌರವ ಎಂಥವ ಎಂಬುದನ್ನು ಚಿತ್ರಿಸಿದ್ದಾನೆ. ಸನ್ನಿವೇಶಗಳಲ್ಲಿ ಪದ್ಯದಲ್ಲಿನ ಲಾಲಿತ್ಯವನ್ನು ಗಮನಿಸುವುದಾದರೆ : ಮಾಹಾಭಾರತದಲ್ಲಿ ಅಗ್ನಿಕನೆಯಂತೇ ಜ್ವಲಿಸುವ ದ್ರೌಪದಿ ತನ್ನ ಸ್ವಯಂವರದ ಸಮಯದಲ್ಲಿ ಅಣ್ಣ ದೃಷ್ಟದ್ಯುಮ್ನನಿಂದ ಶ್ರೀಕೃಷ್ಣನ ಪರಿಚಯ ಪಡೆಯುತ್ತಾಳೆ, ಆಗ ಆಕೆಯ ಮನೋಗತವೇನಿತ್ತು ಎಂಬುದನ್ನು ಹೀಗೆ ಹೇಳುತ್ತಾನೆ:

ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿಯೋಗಿ ರೋಮಾಂ
ಚನದ ಮೈಯ್ಯುಬ್ಬಿನಲಿ ತನುಪುಳುಕಾಂಬು ಪೂರದಲಿ |
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ||

ಇದೇ ಕುಸುಮಕೋಮಲ ವ್ಯಕ್ತಿತ್ವದ ದ್ರೌಪದಿ ಭಾರತ ಕಥೆಯಂತ್ಯದಲ್ಲಿ ಮಕ್ಕಳನ್ನು ಕಳೆದುಕೊಂಡು ಶೋಕ ವಿಹ್ವಲಳಾಗಿದ್ದಾಗ, ತನ್ನ ಮಕ್ಕಳನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲಲು ನುಗ್ಗುತ್ತಿರುವ ಅರ್ಜುನ ಮತ್ತು ಭೀಮರನ್ನು ತಡೆದು ಹೇಳುವುದನ್ನು ನೋಡಿ:

ಬಂದಳಾ ದ್ರೌಪದಿಯಹಹ  ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ |
ಕೊಂದು ಕೂಗದೆ ಕೃಪೆಯನಬಲಾ
ವೃಂದ ಸಮಸುಖ ದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ ||  

ಹೀಗೇ ಭಾರತಕಥೆಯ ಪ್ರತೀ ಪಾತ್ರವೂ ವಿಶಿಷ್ಟ ಮತ್ತು ಪದ್ಯಗಳೂ ಕೂಡ. ನಾರಣಪ್ಪನ ಭೀಮ ಬಹಳ ಕೋಲಾಹಲದವನು. ಬಾಲ್ಯದಲ್ಲೇ ನೂರುಜನವೇರಿದ ಮರವನ್ನು ಗಡಗಡನೆ ಅಲುಗಾಡಿಸಿ ಕೌರವರು ದೂರಿಟ್ಟಾಗ ತನ್ನ ಮೈಯ್ಯನ್ನು ತಾನೇ ಪರಚಿಕೊಂಡು

ಗಾಯಮಾಡಿದರೆಂದು ತೋರಿಸಿ ತಪ್ಪಿಸಿಕೊಂಡವ. ಮೈಯ್ಯಲ್ಲಿ ಶಕ್ತಿ-ಸಾಮರ್ಥ್ಯವಿದ್ದೂ ಆತ ತೋರಿದ ಸಂಯಮ ಕಾವ್ಯದಲ್ಲಿ ಢಾಳಾಗಿ ಬಿಂಬಿತವಾಗಿದೆ. ಮಹಾಪರಾಕ್ರಮಿ, ಮಹಾಬಲಶಾಲಿ ಭೀಮ, ಅರಗಿನರಮನೆಯ ಉರಿಯಿಂದ ತಪ್ಪಿಸಿಕೊಂಡು ತನ್ನವರನ್ನು ಕಾಡಿಗೆ ಎತ್ತಿಕೊಂಡೊಯ್ದು ಮಲಗಿಸಿ, ನಿದ್ರಾಭಂಗವಾದಂತೇ ಅವರ ಕಾಲೊತ್ತುತ್ತಾ, ಅವರ ಸ್ಥಿತಿಯನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಾನೆ! ಇಡೀ ಭಾರತದಲ್ಲಿ ಅಳದೇ ಇರುವ ಪಾತ್ರಗಳು ಎರಡು: ಶ್ರೀಕೃಷ್ಣ ಮತ್ತು ಅಭಿಮನ್ಯು. ಯಾರೇ ಅತ್ತರೂ ಅಳದಿದ್ದರೂ ತೀರಾ ಏನೂ ಅನ್ನಿಸದ ನಮಗೆ ದಟ್ಟಡವಿಯಲ್ಲಿ ನಡುರಾತ್ರಿಯಲ್ಲಿ ತನ್ನವರ ಹೀನಾಯ ಸ್ಥಿತಿಯನ್ನು ಕಂಡು ಮರುಗಿದ, ನರಳಿದ ಭೀಮನನ್ನು ಕುಮಾರವ್ಯಾಸ ಬಣ್ಣಿಸುವಾಗ ಕರುಳು ಚುರಕ್ ಎನ್ನುತ್ತದೆ, ಕಣ್ಣೆವೆಗಳು ಒದ್ದೆಯಾಗದೇ ಇರುವುದಿಲ್ಲ!

ಭಾರತ ಕಥೆಯಲ್ಲಿ ವ್ಯಾಸರು ಖಳ ಚತುಷ್ಟಯರನ್ನು ಹೆಸರಿಸಿದ್ದು ಅವರಲ್ಲಿ ಕರ್ಣ ಮತ್ತು ಕೌರವರು ಇಬ್ಬರು ಪ್ರಧಾನರಾಗಿದ್ದಾರೆ. ಅತಿಯಾಗಿ ಪ್ರೀತಿಸದೇ ಅತಿಯಾಗಿ ದೂಷಿಸದೇ ಮಿತಿಯಲ್ಲಿ ಕಥೆಯನ್ನು ನಡೆಸಿದ ವ್ಯಾಸರಿಗಿಂತ ತುಸು ಭಿನ್ನ ರೀತಿಯಲ್ಲಿ ಕುಮಾರವ್ಯಾಸ ಬಣ್ಣಿಸಿದರೂ ಎಲ್ಲೂ ಧರ್ಮದ ಎಲ್ಲೆಯನ್ನು ಮೀರಿಲ್ಲ. ಹಾಗಂತ ಭಾಸ,ಅ ಪಂಪ, ರನ್ನ ಇವರೆಲ್ಲಾ ಈ ಖಳರನ್ನು ಉದತ್ತೀಕರಿಸಿದ್ದಾರೆ! ಮೂಲ ಕಥೆಯ ಕರ್ತೃವಾದ ವೇದವ್ಯಾಸರೇ ಇಂತಿಂಥವರು ಖಳರು ಎಂದರೆ ಅಲ್ಲೇನೋ ಬಲವಾದ ಕಾರಣವಿರಲೇಬೇಕಲ್ಲವೇ? ಅದನ್ನರಿಯದ ಅದೆಷ್ಟೋ ಜನ ಈ ಪಾತ್ರಗಳನ್ನೂ ಪುಣ್ಯೋಪೇತರು, ಆದರ್ಶಪ್ರಾಯರು, ಸ್ವಾಭಿಮಾನಿಗಳು ಎಂದು ಬಣ್ಣಿಸುವುದು ಖೇದಕರ. ಅನೇಕಾವರ್ತಿ ವಿವಿಧ ಮಾರ್ಗಗಳಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರೂ ಫಲಪ್ರದವಾಗದ ಕಾರಣ ಯುದ್ಧ ಸನ್ನಾಹವನ್ನು ನಡೆಸಿದ ಕೃಷ್ಣನ ಕಾರಸ್ಥಾನವನ್ನು ಅರಿತುಕೊಂಡ ಕೌರವನನ್ನು ಕುಮಾರವ್ಯಾಸ ಹೀಗೆ ಚಿತ್ರಿಸುತ್ತಾನೆ:

ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ಹದನನಾಡಿಸುವ |
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರವ ತಿಳಿಯಲ
ಭಿನ್ನನೀ ಮುರವೈರಿ ನಾವಿನ್ನಂಜಲೇಕೆಂದ ||


ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಟ ಧಾ
ರುಣಿಯ ಸಿರಿಗೆಳೆಸುವನಲ್ಲಳಾಕಿಲ್ಲ ಕಾಯದಲಿ |
ರಣ ಮಹೋತ್ಸವವೆನ್ನ ಮತ ಕೈ
ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ||

ವೀರನಾದ, ವಿರಥನಾದ ಕರ್ಣನ ಅವಸಾನದ ಘಟ್ಟದಲ್ಲಿ ಮಾರಣಾಸ್ತ್ರವು ಆತನ ಎದೆಯನ್ನು ಭೇದಿಸಿದ್ದರೂ ಅಮೃತವಾಗಿಯೇ ಉಳಿದಿದ್ದ ಕರ್ಣನ ಬಳಿಗೆ ಬ್ರಾಹ್ಮಣ ವೇಷದಲ್ಲಿ ಬಂದು ಕರ್ಣಕುಂಡಲವನ್ನು ಎದೆಯೊಳಗಿನ ಅಮೃತೋದಕವನ್ನು ಪಡೆದುಕೊಳ್ಳುವಾಗ ಕರ್ಣನಿಗೆ ಬಂದಾತ ಶ್ರೀಕೃಷ್ಣನೆಂಬುದು ಸ್ಪಷ್ಟವಾಗುತ್ತದೆ. ಸಾವಿನ ಸನಿಹದಲ್ಲಿರುವ ಸಮಯದಲ್ಲೂ ಸಾವಿರ ದಾನಗಳೆಲ್ಲಕ್ಕಿಂತಲೂ ಶ್ರೇಷ್ಠವಾದ ತನ್ನ ಕರ್ಣಕುಂಡಲ ಮತ್ತು ಅಮೃತಕಲಶಗಳ ದಾನವನ್ನು ಕರ್ಣ ನೆರವೇರಿಸಿದ ಆ ಘಳಿಗೆಯಲ್ಲಿ ಕೃಷ್ಣ ಆತನಿಗೆ ಪರಮಪದವನ್ನು ಕರುಣಿಸುತ್ತಾನೆ:

ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ |
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದು ದಮರಗಣ ||

ವಿಸ್ತಾರವಾದ ಭಾರತಕಥೆಯ ಸೊಬಗನ್ನು ಒಂದೆರಡು ಪದ್ಯಗಳಲ್ಲಿ ತಿಳಿಸಲು ನಾನು ಶಕ್ತನಲ್ಲ. ಭಾರತಕಥೆಯನ್ನು ಪುರಾಣದ ರೂಪದಲ್ಲೇ ಆದರಿಸಿ, ಆಧರಿಸಿ ತಮ್ಮ ಜೀವಿತವನ್ನು ಕಳೆದವರು ನಮ್ಮೆಲ್ಲಾ ಪೂರ್ವಜರು. ಇಂದಿನ ನವನಾಗರಿಕತೆಯಲ್ಲಿ ಭಾರತವೇ ಅಪ್ರಸ್ತುತವೆಂತಲೂ ಗೀತೆಯೇ ಅಸಮರ್ಪಕವೆಂತಲೂ ಹೇಳತೊಡಗಿದ್ದೇವೆಂದರೆ ಅದರರ್ಥ ನೈತಿಕವಾಗಿ ನಡೆಯುವ ಜವಾಬ್ದಾರಿಯನ್ನು ನಾವು ನಿಧಾನವಾಗಿ ತೊರೆಯುತ್ತಾ ಸ್ವೇಚ್ಛಾಚಾರವನ್ನು ರೂಢಿಗೆ ತಂದುಕೊಳುತ್ತಾ ಶ್ರೇಷ್ಠ ಜೀವನಧರ್ಮವನ್ನು ಕಡೆಗಣಿಸಿ ಅಧಃಪತನಕ್ಕೆ ಇಳಿಯುತ್ತಿದ್ದೇವೆ ಎಂಬುದು ಸೂಚ್ಯ. ಇಂತಹ ಪ್ರಾಗೈತಿಹಾಸವನ್ನು ವಿಶದೀಕರಿಸುವ ಮಹಾಕಾವ್ಯಗಳನ್ನೂ ಸಹಿತ ಪೂರ್ವಜರು ವ್ಯಾಸಪೀಠದಮೇಲೆ ರೇಷ್ಮೆಬಟ್ಟೆಯಲ್ಲಿ ಸುತ್ತಿ ಇಡುತ್ತಿದ್ದರು; ಆಗಾಗ ಅದರ ಪ್ರವಚನಗಳು ನಡೆಯುವಾಗ ಪೂಜಿಸಿ ಬಳಸುವುದು ವಾಡಿಕೆಯಾಗಿತ್ತು. ಐದು ಸಹಸ್ರವರ್ಷಗಳನ್ನು ಕಲಿಯುಗದಲ್ಲಿ ಕಳೆದಿದ್ದೇವೆ ಎಂದರೆ ಅದಕ್ಕೂ ಹಿಂದಿನದೆನ್ನಲಾದ ವೇದಗಳನ್ನು ಕೇವಲ ಮೌಖಿಕವಾಗಿ ಉಚ್ಚರಿಸುತ್ತಾ ವರ್ಗಾಯಿಸಿಕೊಂಡು ಕಾಪಿಟ್ಟ ಜನರಿಗೆ, ಜ್ಞಾನ ಭಂಡಾರವನ್ನು ಹಾಗೆ ಸಲಹಿದ್ದಕ್ಕೆ ರಾಜರುಗಳು ಗೌರವವಾಗಿ ಅವರ ಉಪಜೀವಿತಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರು. ಮನದಮೂಸೆಯಲ್ಲಿ ಕಠಿಣ ಪರಿಶ್ರಮದಿಂದ ಜೋಪಾನಮಾಡಿದ ಶ್ರುತಿಗಳು ಅಥವಾ ವೇದಗಳು ಎಲ್ಲರಿಗೂ ಅರ್ಥವಾಗದ ಕಾರಣ ಅವುಗಳ ವ್ಯುತ್ಪತ್ತಿಯೆನಿಸಿದ ಭಾರತಕಥೆಯನ್ನು  ಧರ್ಮಸೂತ್ರದಂತೇ ಸುಲಭದಲ್ಲಿ ಅರಿಯಲು ಕರುಣಿಸಿದವರು ಭಗವಾನ್ ವೇದವ್ಯಾಸರು. ಕನ್ನಡಿಗರಿಗಾಗಿ ಕನ್ನಡದಲ್ಲಿ ಅದನ್ನು ಬರೆದದ್ದು ಮಹಾಕವಿ ಕುಮಾರವ್ಯಾಸ. ಪಂಪಭಾರತದಿಂದ ಇತ್ತೀಚೆಗೆ ಬಂದ ತುರಂಗಭಾರತದ ವರೆಗೆ ಇರುವ ಎಲ್ಲಾ ಭಾರತಕಥೆಗಳ ನಡುವೆ ಅಷ್ಟೇ ಅಲ್ಲ ಕನ್ನಡ ಕಾವ್ಯಪರಂಪರೆಗೇ ಅತ್ಯದ್ಭುತ ಮತ್ತು ಅತಿಶ್ರೇಷ್ಠ ಕೊಡುಗೆ ಗದುಗಿನ ನಾರಣಪ್ಪನ ಈ ’ಕರ್ಣಾಟ ಭಾರತ ಕಥಾಮಂಜರಿ.’ ಸ್ಥೂಲವಾಗಿ ಆತನ ಬಗ್ಗೆ ಹೇಳಿದೆನೆಂಬ ತೃಪ್ತಭಾವ ಮನದಲ್ಲಿ ಮೂಡುತ್ತಿದೆ. ಅದೇ ಭಾವದಲ್ಲಿ ಕವಿಗಿನ್ನೊಮ್ಮೆ ಉದ್ದಂಡ ಪ್ರಣಾಮ ಸಲ್ಲಿಸುತ್ತಿದ್ದೇನೆ:

ಎನಿಸು ಸೊಗಸಿದು ಕಾವ್ಯ ಭಾರತ
ಮಣಿಸುವುದು ಮಿಕ್ಕುಳಿದುದೆಲ್ಲವ
ತಿನಿಸು ಬಲು ಸಿಹಿ ನುತಗುಣರು ಭಾವುಕರು ಸುಜನರಿಗೆ |
ಕನಸು ಮನಸಲು ಕಂಡೆನದ್ಭುತ
ಎಣಿಕೆಯಿಲ್ಲದೆ ಮುಗಿವೆ ಕರಗಳ
ಮಣಿಸಿ ಎನ್ನೀಶಿರವ ಗದುಗಿನ ನಾರಣಪ್ಪನಿಗೆ ||

Friday, January 25, 2013

ತಟ್ಟಿಸಿಕೊಳ್ಳದವರ ಮಧ್ಯೆ ಅನಂತ್ ರಾಮ್ ಭಿನ್ನವಾಗಿ ಕಾಣುತ್ತಾರೆ !

ಚಿತ್ರಋಣ :ಅಂತರ್ಜಾಲ 
ತಟ್ಟಿಸಿಕೊಳ್ಳದವರ ಮಧ್ಯೆ ಅನಂತ್ ರಾಮ್ ಭಿನ್ನವಾಗಿ ಕಾಣುತ್ತಾರೆ !

ಮೂರ್ನಾಲ್ಕುದಶಕಗಳ ಹಿಂದೆ ಅಂಚೆಗೆ ಇದ್ದ ಮಹತ್ವ ಇವತ್ತಿನ ದಿನ ಇಲ್ಲ. ಅದಕ್ಕೂ ಮುಂಚಿನದಂತೂ ನಮ್ಮ ಕನ್ನಡದ ಮೇರು ಕವಿ-ಸಾಹಿತಿಗಳ ಕಾಲ; ಆ ಕಾಲದಲ್ಲಿ ಅಂಚೆಯೇ ಪ್ರಮುಖ ಸಂವಹನ ಮಾಧ್ಯಮವಾಗಿತ್ತು. ದೂರವಾಣಿ ಬಂದಿದ್ದೇ ತಡವಾಗಿ ಎಂದು ಹೇಳಬಹುದು. ದೂರವಾಣಿ ದುಬಾರಿಯಾದುದರಿಂದಲೂ ಅಂಚೆ ’ಬಡವರ ಬಾದಾಮಿ’ ಎನಿಸಿದ್ದರಿಂದಲೂ ಅಂಚೆಯನ್ನೇ  ಮಧ್ಯಮ ವರ್ಗದ ಜನ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಮೇಲಾಗಿ ಅಂಚೆಯಲ್ಲಿ ಬೇಕುಬೇಕಾದ್ದನ್ನು ಬರೆಯಬಹುದಿತ್ತು;ಕುಳಿತು ನಿಧಾನವಾಗಿ ನೆನಪಿನಾಳದಿಂದ ತೆಗೆದು ತೆಗೆದು ತೋಡಿಬಡಿಸುವ ಸಾಧ್ಯತೆ ಹೆಚ್ಚಿತ್ತು. ಒಲವಿರಲಿ- ಗೆಲುವಿರಲಿ, ಸುಖವಿರಲಿ-ದುಃಖವಿರಲಿ, ಕಷ್ಟಕಾರ್ಪಣ್ಯದ ದಿನಗಳೇ ಇರಲಿ ಯಾವುದನ್ನು ಯಾರ್ಯಾರಲ್ಲಿ ಹೇಳಿಕೊಳ್ಳಬೇಕೋ ಹಾಗೆ ಹೇಳಿಕೊಳ್ಳಬಹುದಾಗಿತ್ತು. ಜೀವನಕ್ಕೆ ಅಂಥಾ ಧಾವಂತ ಸ್ಥಿತಿ ಇರಲಿಲ್ಲ. ಉಣ್ಣುವ ಊಟದ ಅಗಳಗುಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಜಗಿದು ರುಚಿಯ ಆಮೋದವನ್ನು ಪಡೆದಂತೇ ಜನ ಜೀವನದ ಕಷ್ಟ-ಸುಖಗಳ ಮಜಲುಗಳನ್ನು ಸಹಜಗತಿಯಲ್ಲಿ ಸ್ವೀಕರಿಸುತ್ತಿದ್ದರು; ಅಂದಿನ ಜೀವನದಲ್ಲಿ ಪರಸ್ಪರರಿಗಾಗಿ ತುಡಿಯುವ ಅಂಥಾ ಜನವಿದ್ದರು. ಜೀವನ ಮೌಲ್ಯಾಧಾರಿತವಾಗಿತ್ತು. ಸನಾತನ ಜೀವನ ಮೌಲ್ಯಗಳಿಗೆ ಮೌಲ್ಯವಿತ್ತು, ಗೌರವವಿತ್ತು. ದುಶ್ಚಟಗಳ ಬೆನ್ನತ್ತಿಹೋದವರನ್ನು, ಸಮಾಜ ಘಾತುಕ ಕೆಲಸ ಮಾಡುವವರನ್ನು, ನೀತಿ ತಪ್ಪಿ ನಡೆದವರನ್ನು ಜನ ದಂಡಿಸುತ್ತಿದ್ದರು. ಇಷ್ಟೇ ಏಕೆ ಇನ್ನೂ ಆಳಕ್ಕೆ ಇಳಿದರೆ ಸಮಾಜದಲ್ಲಿ ಇರುವ ವರ್ಗಗಳಲ್ಲಿ ದ್ವೇಷ-ವೈಷಮ್ಯಗಳು ಇರಲಿಲ್ಲ.

ನರಸಿಂಹ ಸ್ವಾಮಿಯವರ ಮಲ್ಲಿಗೆ ಸಂಕಲನದಲ್ಲಿ ಬಳೆಗಾರ ಚೆನ್ನಯ್ಯನನ್ನು ನೋಡಿದ್ದೀರಿ.

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೇ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ

ಅಂಥಾ ಚೆನ್ನಯ್ಯಂದಿರು ಅದೆಷ್ಟೋ ಜನರಿದ್ದರು! ವ್ಯಾಪಾರಕ್ಕೂ ಮೀರಿದ ಸಂಪರ್ಕ-ಸಂಬಂಧದ ತುಡಿತ ಅವರಲ್ಲಿತ್ತು. [ಸಂವಹನಕ್ಕಾಗಿ ಈ ಮಾರ್ಗವನ್ನು ಸ್ವಾತಂತ್ರ್ಯ ಯೋಧರೂ ಬಳಸಿಕೊಂಡರು ಎಂಬುದು ತಿಳಿಯುತ್ತದೆ] ನಾನು ಚಿಕ್ಕವನಿರುವಾಗ ನನ್ನ ಅಜ್ಜಿ ಒಮ್ಮೆ ಭಿಕ್ಷುಕರಲ್ಲಿ ಪ್ರೀತಿಯಿಂದ ಮಾತನಾಡುತ್ತಿರುವುದನ್ನು ನೋಡಿದ್ದೆ. ಆ ಭಿಕ್ಷುಕ ದಂಪತಿ ಆಗಾಗ ಬರುತ್ತಿದ್ದರು; ಅವರು ಗ್ರಾಮ ಗ್ರಾಮಗಳನ್ನು ಸುತ್ತುವವರು, ಇಂದಿಲ್ಲಿ ನಾಳೆ ಮುಂದಿನಗ್ರಾಮ, ನಾಡಿದ್ದು ಮತ್ತೊಂದು ಹೀಗೇ. "ಅಮ್ಮಾ ಅಬ್ಳಿಮನೆಯಲ್ಲಿ ಎಲ್ಲಾ ಅರಾಂ ಅವ್ರೆ ಹದಿನೈದಿಪ್ಪತ್ತು ದಿನದ ಹಿಂದೆ ನಾವು ಹೋಗಿ ಬಂದೀವಿ" ಎಂದು ಅವರೆಂದಾಗ ಅಜ್ಜಿಯ ಮುಖದಲ್ಲಿ ಮಲ್ಲಿಗೆಯರಳಿದ್ದನ್ನು ಕಂಡಿದ್ದೆ! ಭಿಕ್ಷುಕರಲ್ಲೂ ವಿಷಯವನ್ನು ನಿವೇದಿಸಿದ ತೃಪ್ತಭಾವ ಕಾಣುತ್ತಿತ್ತು!! ಅಬ್ಳಿಮನೆ [ಮನೆಯ ಹಿಂಭಾಗದಲ್ಲಿ ಗುಡ್ಡದಿಂದ ಬಂದು ಗುದುಕುವ  ಕುಡಿಯುವ ನೀರಿನ ಅಬ್ಬಿ ಇತ್ತಾದ್ದರಿಂದ ಆ ಮನೆಗೆ ಅಬ್ಳಿಮನೆ ಎಂದು ಹೆಸರಿತ್ತು] ನನ್ನಜ್ಜಿಯ ತವರುಮನೆ. ತವರೆಂದರೆ ಹೆಣ್ಣುಮಕ್ಕಳಿಗೆ ಅದೆಷ್ಟು ಪ್ರೀತಿಯಲ್ಲವೇ? ಹೌದು ಪಾಪ, ಹೆಣ್ಣಿನ ಜೀವನಗತಿಯೇ ಹಾಗೆ, ಹುಟ್ಟುವುದೊಂದೆಡೆ, ಬಾಳುವುದಿನ್ನೊಂದೆಡೆ. ಬಾಲ್ಯವನ್ನು ಕಳೆದ ತವರನ್ನು ತೊರೆದು ಯೌವ್ವನಾವಸ್ಥೆಯಲ್ಲಿ ಗಂಡನಮನೆಗೆ ಸೇರುವುದು ಅನಿವಾರ್ಯ ಅಲ್ಲವೇ? ಎರಡೂ ಕಡೆಯ ಕುಟುಂಬಗಳ ಕ್ಷೇಮವನ್ನು ಸದಾ ದೇವರಲ್ಲಿ ಸಂಪ್ರಾರ್ಥಿಸುತ್ತಾ ಅದನ್ನೇ ಅನವರತ ಹಾರೈಸುತ್ತಾ ಬದುಕುವ ಜೀವ ಹೆಣ್ಣು. ಕೇವಲ ಹತ್ತು ಹರದಾರಿ ದೂರವಿದ್ದರೂ ತವರನ್ನು ಬಹುದೂರ ಇದೆಯೆಂಬ ರೀತಿ ಅಗಲಿರಲಾರದ ಭಾವನೆಗಳನ್ನು ಒಲವನ್ನು ಮನದ ತುಂಬಾ ತುಂಬಿಕೊಂಡು, ಎಂದು ನಾನು ತವರಿಗೆ ಹೋದೇನು ಎಂಬುದನ್ನೇ ಕನವರಿಸಿಕೊಳ್ಳುತ್ತಾ ಬದುಕುವವಳು ಆ ಸಾಧ್ವಿ.

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯ ನಿಟ್ಟು 
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ದಾಂಪತ್ಯ ಜೀವನದ ಭಾವನೆಗಳ ತಾಕಲಾಟವನ್ನು ಕಾವ್ಯದಲ್ಲಿ ಹೆಣ್ಣು-ಗಂಡು ಎರಡೂ ಪಾತ್ರಪೋಷಣೆಮಾಡುತ್ತಾ ಅನುಭವಿಸಿದವರು ನರಸಿಂಹಸ್ವಾಮಿಯವರು. ವಾರದಕಾಲ ಗಂಡನಮನೆ ಅಥವಾ ತನ್ನಮನೆಯನ್ನು ಬಿಟ್ಟು ತವರಲ್ಲುಳಿದ ಹೆಂಡತಿ, ತನ್ನ ಅನುಪಸ್ಥಿತಿಯಲ್ಲಿ ಇರಬಹುದಾದ ಗಂಡನ ಬೇಸರದ ದಿನಗಳನ್ನು ಗಣಿಸುತ್ತಾ ಹೇಳುವ ಕವನ ಈ ಮೇಲಿನದು. ಬಳೆಗಾರರು, ಬಣಸಾಲಿಗಳು ಯಾನೇ ಪಡಸಾಲಿಗಳು [ಕೆಂಪುದಾರ, ಕಾಶೀದಾರ, ಅರಿಶಿನ-ಕುಂಕುಮ, ಪಿನ್ನು, ಕನ್ನಡಿಕರಡಿಗೆ, ದೇವರಪಟ ವಗೈರೆಗಳನ್ನು ಮಾರುವಾತ], ಕುಂಬಾರರು, ಕೌದಿ ಹೊಲಿಯುವವರು, ಕುಲಾವಿ ಕಟ್ಟಿಕೊಡುವವರು ಹೀಗೇ ತರಾವರಿ ಹಳ್ಳಿವರ್ತಕರು ಅಂದಿನದಿನಮಾನದಲ್ಲಿ ಕಾಣಸಿಗುತ್ತಿದ್ದರು; ಇಂಥವರು ಮಾಧ್ಯಮವಾಗಿ ಇಕ್ಕೆಲಗಳ ಕುಟುಂಬಗಳ ಸಂಬಂಧಗಳನ್ನು ಅರಿತು ಸಂದೇಶಗಳನ್ನು ಹಂಚುತ್ತಿದ್ದರು. ಇದರಿಂದ ವ್ಯಾಪಾರಿಗಳಿಗೆ ವ್ಯಾಪಾರವೂ ಹೆಚ್ಚುತ್ತಿತ್ತು ಮತ್ತು ಗಿರಾಕಿಗಳ ಜೊತೆ ಆತ್ಮೀಯತೆಯೂ ಬೆಳೆದು ಅದೊಂಥರಾ ಅವಿನಾಭಾವ ಸಾಂಗತ್ಯ ಏರ್ಪಡುತ್ತಿತ್ತು! ಇಂಥಾ ವ್ಯಾಪಾರಿಗಳನ್ನು ಯಾರೂ ಬರಬೇಡವೆಂದು ಕಳಿಸುತ್ತಿರಲಿಲ್ಲ; ಬದಲಾಗಿ ಬರಲಿ ಎಂದೇ ಬಯಸುತ್ತಿದ್ದರು. ಬಂದ ಇಂಥಾ ವ್ಯಾಪಾರಿಗಳಿಗೆ ಹಸಿವು-ನೀರಡಿಕೆಗಳಿಗೆ ಕೊಟ್ಟು ಕಳಿಸುವುದೂ ಕೂಡ ಇತ್ತು! ಎಷ್ಟು ಚೆನ್ನಾಗಿತ್ತು ನೋಡಿ ಈ ಅಲಿಖಿತ ಒಡಂಬಡಿಕೆ!!

ನಂತರದಲ್ಲಿ ಆರಂಭಗೊಂಡಿದ್ದೇ ಅಂಚೆಸೇವೆ. ಹಳ್ಳಿಗರಲ್ಲಿ ಅನೇಕರಿಗೆ ಅಕ್ಷರ ಬರುತ್ತಿರಲಿಲ್ಲ. ಅಂಚೆಯಾತನಿಗೆ ಅಕ್ಷರ ಬರಲೇಬೇಕಿತ್ತು, ಆತ ಮನೆಮನೆಗೆ ಬಂದು ಕಾಗದಗಳನ್ನು ಕೊಟ್ಟೋ ತೆಗೆದುಕೊಂಡೋ ಹೋಗಬೇಕಿತ್ತು. ಬಂದಿರುವ ಅಂಚೆಯನ್ನು ಓದಿ ಹೇಳುವುದು ಮತ್ತು ಹೋಗುವ ಅಂಚೆಗಳನ್ನು ಬರೆದು-ಓದಿತಿಳಿಸಿ ಅನುಮತಿ ಪಡೆದು ರವಾನಿಸುವುದು ಅಂಚೆಯಣ್ಣನ ಕೆಲಸವಾಗಿತ್ತು. ಜೀವನದ ಭಾವನೆಗಳನ್ನು ಹಂಚಿಕೊಳ್ಳುವ ಅಂಚೆಯಣ್ಣನೆಂದರೆ ಎಲ್ಲರಿಗೂ ಮಿತ್ರನೆಂಬುದೇ ಸರಿ. ದೂರದಿಂದ ನಡೆಯುತ್ತಲೋ ಸೈಕಲ್ ತುಳಿಯುತ್ತಲೋ ದಣಿದು ಬರುವ ಆತನಿಗೆ, ಬೇಸಿಗೆಯಲ್ಲಿ ಮಜ್ಜಿಗೆ, ಮಳೆ-ಚಳಿಗಾಲದಲ್ಲಿ ಚಾ-ಕಾಫಿ ಇಂತಹ ಉಪಚಾರ ನಡೆಯುತ್ತಿತ್ತು. ಬಂದಿರುವ ಕಾಗದವನ್ನೋದುವ ಅಂಚೆಯಣ್ಣ ಅದರಲ್ಲಿ ದುಃಖಕರ ಸಂದೇಶವಿದ್ದರೆ ನಿಧಾನವಾಗಿ, ಬಹುನಿಧಾನವಾಗಿ ತಿಳಿಸುವ ಪರಿಪಾಟವಿತ್ತು; ಶುಭ ಸಮಾಚಾರವಿದ್ದರೆ ಆತ ಆತುರಾತುರವಾಗಿ ಹೇಳಿ ಸಂಭ್ರಮಕ್ಕೆ ಕಾರಣನಾಗುತ್ತಿದ್ದ. ಅಂಚೆಯವ ಸರಕಾರೀ ನೌಕರ ಎಂಬುದನ್ನೇ ಮರೆತ ಆತ್ಮೀಯತೆ ಅಲ್ಲಿರುತ್ತಿತ್ತು. ಇಂಥಾ ಕಾಲದಲ್ಲಿ ನಗರಗಳಲ್ಲಿ-ಪಟ್ಟಣಗಳಲ್ಲಿ ನೆಲೆಸಿದ ಕನ್ನಡ ಸಾರಸ್ವತರು ತಮ್ಮದೇ ಆದ ರೀತಿಯಲ್ಲಿ ಉದ್ದದ ಪತ್ರಗಳನ್ನು ಬರೆದುಕೊಳ್ಳುತ್ತಿದ್ದರು. ರಸಗವಳಗಳಂತಿರುವ ಅಂಥಾ ಪತ್ರಗಳ ನಿರೀಕ್ಷಣೆಯಲ್ಲೇ ಪರಸ್ಪರರಲ್ಲಿ ಕಾತರವಿರುತ್ತಿತ್ತು. ದುಶ್ಯಂತನಿಗೆ ಶಕುಂತಲೆ ಕಮಲಪತ್ರದಲ್ಲಿ ಸಂದೇಶ ಬರೆದಳು ಎಂಬಲ್ಲಿಂದ ’ಪತ್ರ’ ಎಂಬ ಪದ ಹುಟ್ಟಿತು ಎಂಬ ವಾದ ಕೆಲವರದು; ಅಂಥಾ ದುಶ್ಯಂತ -ಶಕುಂತಲೆಯರೂ ವಿರಳವಾಗಿ ಅಲ್ಲಲ್ಲಿ ಇರುತ್ತಿದ್ದು ಅವರು ಮದುವೆಯಾದ ಬಳಿಕದ ವಿರಹವನ್ನು ತೋಡಿಕೊಳ್ಳುವ ದುಶ್ಯಂತ-ಶಕುಂತಲೆಯರಾಗಿರುತ್ತಿದ್ದರು. ಅಂತಹ ದಂಪತಿಯ ಚಿತ್ರಣವನ್ನೇ ಕಾವ್ಯವಾಗಿಸಿದವರು ನರಸಿಂಹಸ್ವಾಮಿಗಳು. ಕೆಲವೊಮ್ಮೆ ಪತ್ರದ ನಿರೀಕ್ಷಣೆಯಲ್ಲಿದ್ದಾಗ ಅದು ಸಮಯಕ್ಕೆ ಬಾರದೇ ಹೋದರೆ ಹೇಳಿಕೊಳ್ಳಲಾಗದ ಬೇಗುದಿ ಮನವನ್ನಾವರಿಸುತ್ತಿತ್ತು-ಆದರೂ ಅದೊಂಥರಾ ಸುಖವೇ ಆಗಿರುತ್ತಿತ್ತು. ಕಾದು- ಸೋತು-ಸುಣ್ಣವಾದ ದಿನಗಳಲ್ಲಿ ದೂರದಲ್ಲಿ ಅಂಚೆಯವ ಬಂದನೆಂದರೆ ಆತ ಬಂದು ತಲ್ಪುವವರೆಗೆ ತಡೆಯಲಾರದ ತಳಮಳ, ಹೋಗಿ ತಾವೇ ಪಡೆದು ಓದಿಕೊಳ್ಳುವ ಆತುರ. ವಿರಹದ ದಿನಗಳನ್ನು ಪತ್ರಿಸಿದ ದಂಪತಿಗಳ ರಸಾನುಭವವನ್ನು ಅವರ ಬಾಯ್ಮಾತುಗಳಲ್ಲೇ ಕೇಳಿದರೆ ಅರ್ಥವಾದೀತು!       

ರಾಜು ಎಂಬಾತ ನನ್ನ ಪರಿಚಿತರೊಬ್ಬರ ಮಗ. ಆತ ಐದನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ನೋಡುತ್ತಿದ್ದೆ; ಸದ್ಗುಣಗಳುಳ್ಳ ಸಂಭಾವಿತ ಹುಡುಗ. ಪ್ರೌಢಶಾಲೆ ಮುಗಿಸಿ ದ್ವಿತೀಯ ಪದವಿಪೂರ್ವ ತರಗತಿ ಮುಗಿಯುವವರೆಗೂ ಕೆಲವು ತಾಂತ್ರಿಕ ಸಲಹೆಗಳನ್ನು ಪಡೆಯಲು ಫೋನು ಮಾಡುತ್ತಿದ್ದ. ಇದೀಗ ಕಳೆದ ಸಾಲಿನಲ್ಲಿ ಎಂಜಿನೀಯರಿಂಗ್ ಮುಗಿಸಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಸೇರಿಕೊಂಡಿದ್ದಾನಂತೆ ಅಂತ ಯಾರೋ ಅಂದರು. ಇತ್ತೀಚೆಗೆ ಆತನ ದೂರವಾಣಿಯಾಗಲೀ ಮಿಂಚಂಚೆಯಾಗಲೀ ಬಂದಿರಲಿಲ್ಲ ಹಾಗಾಗಿ ಆತ ಸಹಜವಾಗಿ ಕಲಿಕೆಯ ಕರ್ತವ್ಯಗಳ ಒತ್ತಡದಲ್ಲಿರಬೇಕೆಂದುಕೊಂಡಿದ್ದೆ. ಮೊನ್ನೆ ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ರಾಮಕಥೆಗೆ ರಾಜು ಬಂದಿದ್ದ. ಅಗಲದಲ್ಲಿ ಮತ್ತು ಎತ್ತರದಲ್ಲಿ ಬೆಳೆದುನಿಂತ ಅವನ ಗುರುತು ಕೇವಲ ಮುಖದಿಂದ ಮಾತ್ರ ತಿಳಿಯುತ್ತಿತ್ತು. ರಾಜುವನ್ನು ಕಂಡೆ; ಆತ ಯಾವತ್ತಿನ ಹಾಗೆ ನಗಲಿಲ್ಲ, ಮಾತನಾಡಲಿಲ್ಲ, ಬದಲಾಗಿ ಕೈಯ್ಯಲ್ಲಿ ಹಿಡಿದಿದ್ದ ಸುಟ್ಟ ಜೋಳದ ಕುಂಡಿಗೆಯನ್ನು ತಿರುತಿರುವಿ ತಿನ್ನುತ್ತಿದ್ದ. ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ, ತಲೆಯಮೇಲೆ ಆನಿಸಿಟ್ಟ ಕನ್ನಡಕ ಕಂಡಿತು. ಪ್ರಾಯಶಃ ಆತನಿಗೆ ನನ್ನ ಗುರುತು ನೆನಪಿಗೆ ಬರುತ್ತಿಲ್ಲವೇನೋ ಎಂದುಕೊಂಡೆ ಮತ್ತು ರಾಜುವೇ ಹೌದೋ ಅಲ್ಲವೋ ನೋಡಿಬರೋಣವೆಂದು ಹತ್ತಿರ ಹೋಗಿ ನೋಡಿದೆ..ಉಹುಂ ರಾಜುವಿನ ಮುಖದಲ್ಲಿ ಬದಲಾವಣೆ ಇರಲಿಲ್ಲ. ರಾಜುವಿನ ಮನಸ್ಸು ಮಾತ್ರ ಭರ್ತಿ "ನಾನ್ಯಾಕೆ ಮಾತನಾಡಲಿ ನಾನೊಬ್ಬ ಸಾಫ್ಟ್ ವೇರ್ ಎಂಜಿನೀಯರು" ಎನ್ನುತ್ತಿರುವುದು ನನ್ನ ಅನುಭವಕ್ಕೆ ನಿಲುಕುತ್ತಿತ್ತು. ಪಕ್ಕದಲ್ಲಿ ಹುಡುಗಿಯೊಬ್ಬಳು ನಿಂತಿದ್ದಳು-ಅವರಲ್ಲೇ ಏನೋ ಹೇಳಿಕೊಂಡು ನಕ್ಕರು-ನನ್ನೆಡೆಗೆ ದೃಷ್ಟಿ ಹರಿಯದಂತೇ ಇದ್ದರು. ಅರ್ಥವಾಗಿತ್ತು ನನಗೆ: ರಾಜು ಬದಲಾಗಿದ್ದಾನೆ, ಬೇರೇ ಲೋಕದವರಂತೇ ಆಡುತ್ತಾನೆ; ತಿಂಗಳಿಗೆ ಐದಂಕೆಯ ಸಂಬಳ ಪಡೆಯುತ್ತಿರುವ ಆತನಿಗೆ ನಾವೆಲ್ಲಾ ಯಾರೋ ಆಗಿಬಿಟ್ಟಿದ್ದೇವೆ, ಅಪರಿಚಿತರಾಗಿಬಿಟ್ಟಿದ್ದೇವೆ. ರಾಜು ಬದಲಾಗಿರಬಹುದು [ಆತ ಗಣಕ-ತಾಂತ್ರಿಕ ವಿದ್ಯೆ ಕಲಿತಿದ್ದಾನಲ್ಲಾ?] ಆದರೆ ಅನಂತ್ ರಾಮ್ ಎಂಬ ತುಂಬಿದಕೊಡದ ಸ್ವಭಾವದಲ್ಲಿ ಬದಲಾವಣೆ ಕಾಣಲಿಲ್ಲ! ರಾಜುವಿನ ತಂದೆ-ತಾಯಿಗಳೂ ಬದಲಾಗಿಲ್ಲ!! 

ಹದಿನಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನನಗೆ ಅನಿರೀಕ್ಷಿತವಾಗಿ ಪರಿಚಯವಾದವರು ಅನಂತ್ ರಾಮ್. ಅವರೊಬ್ಬ ಸರಳ ಸಾತ್ವಿಕ ಸರಕಾರೀ ನೌಕರ. ಎದುರುಬದುರು ಬಾಡಿಗೆಮನೆಗಳಲ್ಲಿ ವಾಸಿಸುತ್ತಿದ್ದ ನಾವು ಎದುರಾದಾಗ, ಮನೆಗಳ ಹೊರಗೆ ಗಾಡಿ ತೊಳೆಯುವಾಗ ಸಿಕ್ಕಾಗ ಮುಖದಲ್ಲಿ ಮುಗುಳು ನಗುವಿನ ಹೊರತು ಹೆಚ್ಚಿಗೆ ಪರಿಚಯವಿರಲಿಲ್ಲ. ತಿಂಗಳುಗಳ ನಂತರ ಅವರ ಕೆಲಸಕಾರ್ಯಗಳು ನನಗೆ ಗೋಚರಿಸತೊಡಗಿದವು. ಕುಡಿಯುವ ನೀರು ಸರಬರಾಜಿನಲ್ಲಿ ದೀರ್ಘ ವ್ಯತ್ಯಯವಿದ್ದರೆ,ಬೀದಿ ದೀಪಗಳು ಬಹುದಿನಗಳ ಕಾಲ ಉರಿಯದೇ ಇದ್ದರೆ ಅಥವಾ ಹಗಲಲ್ಲೂ ಉರಿಯುತ್ತಲ್ರ್ಏ ಇದ್ದರೆ, ಮ್ಯಾನ್ ಹೋಲ್ ಹಾದಿಹೋಕರ ಅವಘಡಕ್ಕೆ ಕಾರಣವಾಗುತ್ತಿದ್ದರೆ, ಬೀದೀನಾಯಿಗಳ ಉಪಟಳ ತೀರಾ ಮಿತಿಮೀರಿದರೆ, ಪೂಟ್ ಪಾತ್ ನಲ್ಲಿ ಹಾಸುಗಲ್ಲುಗಳು ಜಾರುತ್ತಿದ್ದರೆ, ರಸ್ತೆಯಲ್ಲಿ ಯಾರೋ ಅಪರಿಚಿತರು ಕುಡಿದು ಬಿದ್ದಿದ್ದರೆ[ಇಂಥದ್ದಕ್ಕೆ ದೂರವಾಣಿಯೇ] ಸಂಬಂಧಿಸಿದ ಇಲಾಖೆಗಳಿಗೆ ಅಂಚೆ/ದೂರವಾಣಿ ಮೂಲಕ ಅವರು ಸಂವಹಿಸುತ್ತಿದ್ದರು. ವಾಸಿಸುವ ಪ್ರದೇಶದ ನಾಗರಿಕರ  ಕೊರತೆಗಳನ್ನು ಕೇಳಿತಿಳಿದು, ಸಹಿ ಸಂಗ್ರಹಿಸಿ ಅಹವಾಲನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಖುದ್ದಾಗಿ ತಲ್ಪಿಸುತ್ತಿದ್ದರು. ಎಂದಿಗೂ ಯಾರಲ್ಲೂ ಚಿಕ್ಕಾಸನ್ನೂ ಪಡೆದವರಲ್ಲ; ಯಾವುದೇ ಚುನಾವಣೆಗಾಗಲೀ ರಾಜಕೀಯದ ಅನುಕೂಲತೆಗಾಗಲೀ ಈ ಕೆಲಸವನ್ನವರು ಕೈಗೊಂಡವರಲ್ಲ. ನಮ್ಮಲ್ಲಿ ನಾವು ಪಡಾಬಿದ್ದ ಕೆಲಸಗಳೆಂದು ಕರೆಯುವ ಇಂಥಾ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಮಹತ್ವ ನೀಡಿದ ವ್ಯಕ್ತಿಯನ್ನು ನಾನು ಅನಂತ್ ರಾಮ್ ಅವರಲ್ಲಿ ಕಂಡಿದ್ದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಸ್ವಂತ ಹಿತಾಸಕ್ತಿಯಷ್ಟೇ ಅಥವಾ ಅದಕ್ಕಿಂತಾ ಹೆಚ್ಚಿಗೆ ಎಂಬ ರೀತಿಯಲ್ಲಿ ಪರಿಗಣಿದವರು ಅವರು. ತಟ್ಟಿಸಿಕೊಳ್ಳುವವರು ಮತ್ತು ತಟ್ಟಿಸಿಕೊಳ್ಳದವರು ಎಂಬೆರಡು ವರ್ಗ ಗೊತ್ತಲ್ಲಾ ತನ್ನಂತೇ ಪರರು ಎಂದು ಬಗೆದು, ಅನೇಕರಿಗೆ ಬೇಕಾಗುವ ಉಪಕೃತ ಜೀವನವನ್ನು ನಡೆಸುವವರಿಗೆ ತಟ್ಟಿಸಿಕೊಳ್ಳುವವರು ಎನ್ನುತ್ತೇವಲ್ಲವೇ? ಅನಂತ್ ರಾಮ್ ಬಹಳ ತಟ್ಟಿಸಿಕೊಳ್ಳುವ[ಹಚ್ಚಿಕೊಳ್ಳುವ] ಜನ; ಹಾಗಂತ ಬೆನ್ನು ತಟ್ಟಿಸಿಕೊಳ್ಳುವ ಬೂಟಾಟಿಕೆಯ ಜನ ಅಲ್ಲ! 

ವಿಶೇಷವೆಂದರೆ ಮಧುಮೇಹದಂತಹ  ತೊಂದರೆ ಬಾಧಿಸುತ್ತಿದ್ದರೂ ತಮ್ಮ ಕಷ್ಟಗಳ ಮಧ್ಯೆಯೂ ಅವರು ಸಾರ್ವಜನಿಕರ ಸೇವೆಯನ್ನು ನಿಲ್ಲಿಸಲಿಲ್ಲ. ಅಜಮಾಸು ನನ್ನ ಅಪ್ಪನ ವಯಸ್ಸಿನ ಅವರೊಡನೆ ಸ್ನೇಹ ಬೆಳೆಯಿತು; ಸಾರ್ವಜನಿಕ ಜೀವನದ ಕರ್ತವ್ಯಗಳ ಬಗೆಗೂ ಗಮನ ಹರಿಯಿತು. ಅಂದಿನಿಂದ ಇಂದಿನವರೆಗೂ ಅವರ ಒಡನಾಟ ಹಾಗೇ ಇದೆ. ಅವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ, ವೃತ್ತಿನಿರತ ಸಾಫ್ಟ್ ವೇರ್ ತಂತ್ರಜ್ಞರಾದರು. ಅನಂತ್ ರಾಮ್ ನಿವೃತ್ತರಾದರೂ ಅವರ ಸಾರ್ವಜನಿಕಸೇವೆ ಮಾತ್ರ ನಿಂತಿಲ್ಲ. ತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮನ್ನು ಕರೆಯುತ್ತಾರೆ; ನಾವೂ ಹಾಗೇನೆ. ಗಂಡ-ಹೆಂಡತಿ  ಇಬ್ಬರೂ ದುಡಿದಿದ್ದರಲ್ಲಿ ಹಿಂದೆಯೇ ಎರಡು ನಿವೇಶನ ಖರೀದಿಸಿದ್ದರು-ಎರಡು ಮನೆಗಳನ್ನು ಕಟ್ಟಿ ಪ್ರವೇಶ ಸಮಾರಂಭಕ್ಕೆ ಕರೆದಿದ್ದರು, ಮಗಳ ಮದುವೆಗೆ ಕರೆದಿದ್ದರು. ಜಾತಿ-ಮತ-ಗೋತ್ರಗಳನ್ನು ಕೇಳುವ ಅಲ್ಪಮತಿ ನನ್ನದಲ್ಲ. ಇಂದು ನಾವು[ನಾನು ಇದ್ದವನು ಈಗ ಸಂಸಾರಿಯಾಗಿ ನಾವು ಎಂದಾಗಿದೆ!] ಅವರು ಬೇರೇ ಬೇರೇ ಪ್ರದೇಶಗಳಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಮೊನ್ನೆ ಕೂಡಾ ಸಂಕ್ರಾಂತಿಗೆ ಪೂರ್ವಭಾವಿಯಾಗಿ ಅವರ ಪತ್ರವೊಂದು ಬಂತು; ಹಾಗೆ ಪ್ರತೀವರ್ಷ ಅವರು ಬರೆಯುತ್ತಾರೆ. ಪತ್ರ ತಂದ ಸಂತೋಷವನ್ನು ಹೇಗೆ ಹೇಳಲಿ? ಅದಕ್ಕುತ್ತರವಾಗಿ ನಾನೊಂದು ಪತ್ರ ಬರೆದೆ, ಎಂದಿನ ನನ್ನ ಸಾಹಿತ್ಯಕ-ಕಾವ್ಯಾತ್ಮಕ ಬರಹ ಅದಾಗಿತ್ತು-ಹೆಚ್ಚಿಲ್ಲ: ಒಂದೇ ಪುಟದಷ್ಟು, ಅದನ್ನು ಓದಿದವರೇ ಮತ್ತೆ ಅವರು ಮರುತ್ತರ-ಮಾರುತ್ತರ ಬರೆದಿದ್ದಾರೆ-"ಜೀವನದಲ್ಲಿ ಇದುವರೆಗೆ ಇಂಥಾ ಉತ್ತಮ ಬರವಣಿಗೆಯನ್ನು ಆಸ್ವಾದಿಸಿರಲಿಲ್ಲ, ಪತ್ರದ ಅಕ್ಷರಕ್ಷರವೂ ಭಾವನೆಗಳನ್ನು ಮೀಟುತ್ತವೆ, ಕಟ್ಟುಹಾಕಿಸಿ ಗೋಡೆಗೆ ಹಚ್ಚಿಟ್ಟುಕೊಳ್ಳುವಾ ಎನಿಸುತ್ತದೆ" ಎಂದು ಅಭಿನಂದನೆ ತಿಳಿಸಿದ್ದಾರೆ.

ಹೀಗೇ ಪತ್ರಗಳು ತರಬಹುದಾದ ಭಾವನೆಗಳು ಮಿಂಚಂಚೆಯಲ್ಲಿ ಕಾಣುವುದಿಲ್ಲ. ವಿದ್ಯುನ್ಮಾನದ ನಾನಾ ಅವಿಷ್ಕಾರಗಳಿಂದ ಜಗತ್ತು ಕಿರಿದಾಗಿದೆಯೇನೋ ಸರಿ, ಆದರೆ ಮನುಷ್ಯ ಮನುಷ್ಯರ ನಡುವಿನ ದೂರ ಜಾಸ್ತಿಯಾಗಿದೆ! ಜೀವನ ಅಧಿಕ ಧಾವಂತದ್ದಾಗಿದೆ. ಉಂಡ ಮಂದಿಗೆ ಊಟಮಾಡಿದಮೇಲೆ ಏನು ಊಟಮಾಡಿದೆ ಎಂಬುದು ಗೊತ್ತಿರುವುದಿಲ್ಲ; ನಿಂತಲ್ಲೇ ತಿನ್ನುವ-ಉಣ್ಣುವ ಹೊಸ ಪರಂಪರೆ ಕಾಣುತ್ತಿದೆ. ಆಯುರ್ವೇದದಲ್ಲಿ ಹೇಳಿದ ನಿಷಿದ್ಧ ಕ್ರಿಯೆಗಳೆಲ್ಲಾ ಆಚರಣೆಯಲ್ಲಿವೆ! ಜೀವನದ ಬಹುಭಾಗ ಮಾಧ್ಯಮಗಳ ಮುಂದೆ ಕಳೆದುಹೋಗುತ್ತಿದೆ. ಯಾರೂ ತೀರಾ ಆಪ್ತರೆನಿಸುವುದಿಲ್ಲ; ಆಪ್ತರೆನಿಸಿಕೊಳ್ಳುವ ಮನೋಭಾವ ಯಾರಲ್ಲೂ ಇಲ್ಲ, ಕೇವಲ ಢಾಂಬಿಕವಾಗಿ ’ಹ್ಯಾಪಿ ಬರ್ತಡೆ ಟೂ ಯೂ ಅಥವಾ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ’ ಎನ್ನುತ್ತೇವೆ. ಎಲ್ಲೆಲ್ಲೂ ಕ್ರತ್ರಿಮ ನಗು, ಕೆಲಸಗಳ್ಳತನ, ಮೈಗಳ್ಳತನ, ತೋರಿಕೆಯ ಶ್ರೀಮಂತಿಕೆ[ಫಾಲ್ಸ್ ಪ್ರೆಷ್ಟೀಜ್], ತನಗೇನು ಕಮ್ಮಿ ಎಂದುಕೊಳ್ಳುವ ಏನೂಗೊತ್ತಿಲ್ಲದ ಜನ, ಪರರನ್ನು ಪೀಡಿಸಿ ಪಡೆದ ಹಣದಲ್ಲಿ ಮೋಜು-ಮಜಾ ಪಡೆಯುವ ಮಂದಿ ಹೀಗೇ ಪಟ್ಟಿ ಬೆಳೆಯುತ್ತದೆ, ಪುಟಗಳನೇಕ ತುಂಬುತ್ತವೆ. ಇಂದು ಬರುವ ಅಂಚೆಯಣ್ಣನಿಗೆ ಆ ಮನ್ನಣೆಯಿಲ್ಲ; ನಾವೆಲ್ಲಾ ವಿದ್ಯಾವಂತರಾಗಿದ್ದೇವಲ್ಲಾ?-ಅವನ ಸಹಕಾರ ಬೇಕಾಗಿಲ್ಲ, ಅಂಚೆಯಣ್ಣನಲ್ಲೂ ಆ ಮುಗ್ಧ-ಸ್ನಿಗ್ಧ ಭಾವವಿಲ್ಲ ಎಂದರೆ ತಪ್ಪಲ್ಲ. ಬದಲಾದ ಕಾಲಘಟ್ಟದಲ್ಲಿ ಅಂಚೆ ಇಲಾಖೆ ಬಸವಳಿದಿದೆ-ಸೇವೆಗೆ ಸಲ್ಲುವ ಸಂಬಳ ಮೊದಲಾದ ಖರ್ಚಿಗೆ ಸರಕಾರಕ್ಕೆ ಅಂಚೆ ಇಲಾಖೆಯಿಂದ ಬರುವ ಆದಾಯ ಎಲ್ಲೂ ಸಾಲುತ್ತಿಲ್ಲ! ಆದರೂ ಅಂಚೆ ಹಾಗೇ ಕುಂಟುತ್ತಾ ನಡೆದಿದೆ; ಇನ್ನೂ ನಿಂತಿಲ್ಲ, ನಿಲ್ಲಬಾರದು. ಇಂದು ಹಳ್ಳಿಗಳೆಲ್ಲಾ ಸಣ್ಣ ಸಣ್ಣ ಪಟ್ಟಣಗಳಂತಾಗಿಬಿಟ್ಟಿವೆ, ಅಲ್ಲಿ ಹಳ್ಳೀ ವ್ಯಾಪಾರಿಗಳಾದ ಬಳೆಗಾರ ಚೆನ್ನಯ್ಯ, ಪಡಸಾಲಿ ಕನ್ನಯ್ಯ, ಕುಂಬಾರ ರಾಮಯ್ಯ ಬರುವುದಿಲ್ಲ; ಯಾಕೆಂದರೆ ಮನೆಯಂಗಳದಲ್ಲಿ ವ್ಯಾಪಾರ ಕುದುರುವುದಿಲ್ಲ. ಹಾಗಾಗಿ ಹಿಂದೊಮ್ಮೆ ಬಳಕೆಯಲ್ಲಿದ್ದ ’ಮಂದಿ-ಮಾಧ್ಯಮ’ ನಿಂತು ಬಹಳಕಾಲ ಸಂದಿದೆ. ಮಿಂಚಂಚೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಮ ಗ್ರಾಮಗಳಲ್ಲೂ ತಳವೂರಿದೆ; ವ್ಯಾಪಾರ-ವಹಿವಾಟಿಗೇನೋ ತ್ವರಿತ ಮಾಹಿತಿ ರವಾನೆಗೆ ಉತ್ತಮವಾಗೇ ಇದೆ; ಆದರೆ ಇಲ್ಲಿ ಭಾವನೆಗಳಿಲ್ಲ ಅಥವಾ ಅಷ್ಟಾಗಿ ಭಾವನೆಗಳು ತುಂಬಿದ ಪತ್ರಗಳು ಇಲ್ಲಿರುವುದಿಲ್ಲ. ಕಾಯುವ ಕಾತರ, ಪಡೆಯುವ ಆತುರ   ಇಲ್ಲವೇ ಇಲ್ಲ ಎನ್ನಬಹುದು. ಸಂವಹನ ಕ್ರಿಯೆಯಲ್ಲಿ ಸಂಬೋಧನಾ ಪದಗಳ ಲಾಲಿತ್ಯವೂ ಕಾಣಬರುವುದಿಲ್ಲ. ಯಾಂತ್ರೀಕೃತ ದೋಣಿಯಲ್ಲಿ ಅಂಬಿಗನಿಗೆ ಕೆಲಸವಿಲ್ಲ. ಬರಡಾದ ಬದುಕಿನ ಬದಲು ಕುಲಕಸುಬು ತೊರೆದು ಜನ ಇನ್ನಾವುದೋ ವೃತ್ತಿ ಆತುಕೊಂಡು ಕಷ್ಟಪಡುತ್ತಿದ್ದಾರೆ. ಇಷ್ಟೆಲ್ಲಾ ಬದಲಾವಣೆಗಳ ನಡುವೆಯೂ,  ಮಹಾನಗರವಾಸಿಗಳ ಮಧ್ಯೆಯೂ, ಅಲ್ಲಲ್ಲಿ ಅನಂತ್ ರಾಮ್ ಥರದವರು ಕಾಣುತ್ತಾರೆ-ಭಿನ್ನವಾಗಿಕಾಣುತ್ತಾರೆ; ಮೈಮನದ ತುಂಬಾ ಮೃದುಮಧುರ ಸ್ನೇಹಲ ಭಾವವನ್ನು ತುಂಬಿಸುತ್ತಾರೆ, ಶುಭಶುಭ್ರ ಅಕ್ಷರಳ ಮಂಗಲ ಸೇಸೆಯನ್ನು ಎರಚುತ್ತಾರೆ. ಅನಂತ್ ರಾಮ್ ಥರದವರಿಗೆ ಅನಂತ ಕೃತಜ್ಞ, ಹೊಸಬಾಟಲಿಯಲ್ಲಿ ಹಳೆಯ ಹೆಂಡವನ್ನು ತುಂಬಿಸಿಕೊಟ್ಟ ಎಂದು ಅಸಡ್ಡೆಮಾಡದೇ ಓದಿ ಮನ್ನಿಸಿದ ನಿಮಗೂ ಕೂಡ ಸದಾ ಕೃತಜ್ಞ, ನಮಸ್ಕಾರ.           

Tuesday, January 15, 2013

ದೀಪಂ ದೇವ ದಯಾನಿಧೇ-೭


ದೀಪಂ ದೇವ ದಯಾನಿಧೇ-೭

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.


 ತೇಜೋಮಯಂ ದಿವ್ಯಮಮೇಯಶಕ್ತಿಂ ಸನಾತನಂ ಶಾಂತಮನಾಮಯಂಚ
ಅದ್ವೈತಮಾಶ್ಚರ್ಯಮಚಿಂತ್ಯರೂಪಂ ಪರಾತ್ಪರಂ ನಿತ್ಯಮನಂತಮಾದ್ಯಂ |
ಜ್ಞಾನಪ್ರಕಾಶೇನ ವಿಶುದ್ಧಸತ್ತ್ವೋ ಯಂ ಪಶ್ಯತಿ ಸ್ವಾತ್ಮನಿ ಚಿಂತ್ಯಮಾನಂ
ಶ್ರೀಸೌಮ್ಯಕಾಶೀಶ ಮಹೇಶ್ವರಾಯ ತಸ್ಮೈ ನಮಃ ಸ್ವಾಮಿ ತಪೋವನಾಯ ||


ಕಾಶಿ  ಅತ್ಯಂತ ಪ್ರಾಚೀನ ಪಟ್ಟಣ ಮತ್ತು ಹಿಂದೂ ಜನಾಂಗಕ್ಕೆ ಅದು ಅತ್ಯಂತ ಪವಿತ್ರ ಕ್ಷೇತ್ರ. ಹಿಂದೂ ಧರ್ಮದ ಕೇಂದ್ರಸ್ಥಾನವೇ ಕಾಶಿ ಎಂದರೆ ತಪ್ಪಾಗಲಾರದು. ವರುಣಾ ಮತ್ತು ಅಸಿ ಎಂಬೆರಡು ಪುಣ್ಯನದಿಗಳ ಮಧ್ಯದ ಈ ಭಾಗವನ್ನು ವಾರಣಾಸಿ ಅಥವಾ ವಾರಾಣಸಿ ಎಂತಲೂ ಕರೆಯುತ್ತಾರೆ. ಬನಾರ ಎಂಬ ಅರಸ ಹಿಂದಕ್ಕೆ ರಾಜ್ಯವಾಳುತ್ತಿದ್ದುದರಿಂದ ಬನಾರಸ್ ಎಂದೂ ಕರೆಯಲ್ಪಟ್ಟಿದೆ. ಸಕಲಪಾಪಗಳನ್ನೂ ತೊಳೆಯುವ ಗಂಗಾನದಿಯ ದಡದಮೇಲೆ ಕಾಶಿಯಿದೆ. ವಿಶ್ವಕ್ಕೇ ನಾಥನಾದ ವಿಶ್ವನಾಥನ ಜೊತೆ ಆತನ ಸಹಧರ್ಮಿಣಿ ವಿಶಾಲಾಕ್ಷಿ ಕೂಡ ನೆಲೆಸಿದ ಈ ಪುಣ್ಯಧಾಮ ಅನಾದಿಯಿಂದಲೂ ಘಟಾನುಘಟೀ ವಿದ್ವನ್ಮಣಿಗಳು, ಪಂಡಿತ ಶ್ರೇಷ್ಠರು, ಮಹಾಮಹೋಪಾಧ್ಯಾಯರು ನೆಲೆಸಿರುವ ನೆಲೆವೀಡು. ದುರ್ಲಭವಾದ ಸನಾತನ ವಿದ್ಯೆಗಳನ್ನು ಪಡೆಯುವ ಗಮ್ಯಸ್ಥಾನವೆಂದರೆ ಇದೊಂದೇ ಎಂಬುದು ಇಂದಿಗೂ ಸತ್ಯ. ದೇವಗಂಗೆ ಭಾಗೀರಥಿಯುದ್ದಕ್ಕೂ ಇಲ್ಲಿ ಹಲವಾರು ಸ್ನಾನ ಘಾಟ್[ಘಟ್ಟ]ಗಳಿವೆ. ಸಾವಿರದೋಪಾದಿಯ ಸಗರಸಂತತಿ ವಿನಾಶವಾದಾಗ ಅವರೆಲ್ಲರ ಸ್ವರ್ಗಪ್ರಾಪ್ತಿಗೆ, ಶಾಂತಿಗೆ ಬೇಕಾಗಿ ಸೂರ್ಯವಂಶ ಸಂಜಾತ-ಶ್ರೀರಾಮ ಪೂರ್ವಜ-ರಾಜರ್ಷಿ ಭಗೀರಥ ಘೋರ ತಪಸ್ಸನ್ನು ಮಾಡಿ, ಹರಿಯಪದದಿಂದ ಹರಿದು ಬರಿಸಿದ ದಿವ್ಯನದಿಯೇ ಭಾಗೀರಥಿ. 

ಹರಿಪಾದನಖದಿಂದ
ಹರಿದುಬಂದಳೆ ಗಂಗಾ
ಪರಮಪುರುಷ ಸಂಗ
ವರವನ್ನೆ ಕೊಡು ತುಂಗಾ

ಭಾಗ್ಯವ ಕೊಡೆ ಗರತಿ ಭಾಗೀರಥಿ.....

ಎಂಬ ಭಜನೆಯೊಂದು ನೆನಪಿಗೆ ಬರುತ್ತಿದೆ. ಹಿಂದೂಗಳಲ್ಲಿ ಅದರಲ್ಲೂ ಬ್ರಾಹ್ಮಣರಾದವರಲ್ಲಿ ಸುಳ್ಳಿಗೆ ಅವಕಾಶವಿರಲಿಲ್ಲ. ಸುಳ್ಳು ಹೇಳುವುದೂ ಇನ್ನೊಬ್ಬನನ್ನು ವಧಿಸುವುದೂ ಒಂದೇ ಮಟ್ಟದ ತಪ್ಪೆಂಬ ಮೌಲ್ಯ ಅಂದಿನಕಾಲಕ್ಕಿತ್ತು. ಯಾರೂ ಸುಳ್ಳಾಡುತ್ತಿರಲಿಲ್ಲ. ಆದರೆ ಜನರಿಗೆ ಅದರಲ್ಲೂ ದ್ವಿಜರಿಗೆ ಒಂದು ಸುಳ್ಳನ್ನು ಮಾತ್ರ ಹೇಳಲು ಅವಕಾಶವಿತ್ತು-ಈಗಲೂ ಇದೆ; ಈ ಸುಳ್ಳನ್ನು ಹೇಳಲೇಬೇಕೆಂಬ ಆಗ್ರಹಕೂಡ ಇತ್ತು, ಯಾಕೆಂದರೆ ಕಾಡುಮೇಡುಗಳೇ ತುಂಬಿ ಸಮೃದ್ಧವಾಗಿದ್ದ ಅಂದಿನ ಭಾರತದಲ್ಲಿ, ದುರ್ಗಮದ ಹಾದಿಯಲ್ಲಿ ಕಾಶೀಯಾತ್ರೆ ಎಂಬುದು ಸುಲಭವಾಗಿರಲಿಲ್ಲ. ಇಂದಿಗೂ ಮದುವೆಗೆ ಮುನ್ನ ಕಾಶೀಯಾತ್ರೆಗೆ ಹೊರಡುವ ಒಂದು ಸಾಂಕೇತಿಕ ಕ್ರಮ ರೂಢಿಯಲ್ಲಿದೆ. ಅಂದಿನ ಆರ್ಥಿಕ ಸ್ಥಿತಿಯಲ್ಲಿ ಎಲ್ಲರಿಗೂ ಹೋಗಿ ಬರಲು ಸಾಧ್ಯವಾಗುತ್ತಲೂ ಇರಲಿಲ್ಲ. ಕಾಶಿಗೆ ಹೋಗುವಮುನ್ನವೇ ತಿಂಗಳಾನುಗಟ್ಟಲೆ ತಯಾರಿ ನಡೆಯುತ್ತಿತ್ತು, ಮಕ್ಕಳ ಮುಂಜಿ-ಮದುವೆ ಕರ್ತವ್ಯಗಳನ್ನು ಪೂರೈಸಿ, ಗಂಡುಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನೆಲ್ಲಾ ವಹಿಸಿ, ಇನ್ನೇನು ಮರಳಿ ಬಂದರೂ ಸರಿ, ಬಿಟ್ಟರೂ ಸರಿ ಎಂಬ ಧೋರಣೆಯಲ್ಲೇ ಕಾಶಿಗೆ ತೆರಳುತ್ತಿದ್ದರು; ಕಾಶಿಗೆ ಹೋಗಿ ಮರಳಿಬಂದವರಿಗೆ ಇಂದಿನ ’ಫಾರಿನ್ ರಿಟರ್ನ್ಡ್’ ವೈದ್ಯರಿಗಿಂತ ಹೆಚ್ಚಿನ ಗೌರವ ದೊರೆಯುತ್ತಿತ್ತು. ಗ್ರಾಮದಹೊರಗೆ ಸರಿದೂರದಲ್ಲಿ ಸ್ವಾಗತಕಮಾನು-ತೋರಣ ನಿರ್ಮಿಸಿ ವೇದಘೋಷ, ಪೂರ್ಣಕುಂಭ, ಮಂಗಲವಾದ್ಯಗಳ ಸಮೇತ ಅವರನ್ನು ಎದುರ್ಗೊಂಡು, ಗ್ರಾಮಕ್ಕೆ ಕರೆತರಲಾಗುತ್ತಿತ್ತು. ಅವರು ಕುಂಭಗಳಲ್ಲಿ ತುಂಬಿಸಿಕೊಂಡ ಬಂದ ದೇವಗಂಗೆಯನ್ನು ವಿಧಿವತ್ತಾಗಿ ಗೌರವಿಸಿ, ಪೂಜಿಸಲಾಗುತ್ತಿತ್ತು. ಮನೆಗೆ ಮರಳಿದ ದಿನಗಳೆರಡರಲ್ಲಿ ’ಕಾಶೀದೇವಕಾರ್ಯ’ ಅಥವಾ ಕಾಶೀಸಮಾರಾಧನೆ ನಡೆಸಿ ಗ್ರಾಮದ ಜನರಿಗೆ ಅವರು ಮೃಷ್ಟಾನ್ನ ಭೋಜನವನ್ನು ನೀಡುತ್ತಿದ್ದರು. ಸತ್ಯಕ್ಕಾಗಿ ತನ್ನನ್ನೇ ಮಾರಿಕೊಂಡ ರಾಜಾ ಹರಿಶ್ಚಂದ್ರನ ಕೆಲಕಾಲದ ಕಾರ್ಯಸ್ಥಾನವನ್ನೊಳಗೊಂಡ ಕಾಶಿಗೆ ಅಷ್ಟೊಂದು ಮಹತ್ತು. ಹಾಗಾದರೆ ಯಾವ ಸುಳ್ಳನ್ನು ನಾವು ಹೇಳಬಹುದಿತ್ತು ಅಥವಾ ಹೇಳಬಹುದು ಎಂದರೆ:


ಅಹಂ ಕಾಶೀ ಗಮಿಶ್ಯಾಮಿ ಗಂಗಾಸ್ನಾನಂ ಕರೋಮ್ಯಹಮ್ |
ಕರೋಮಿ ವಿಶ್ವನಾಥಸ್ಯ ದರ್ಶನಂ ಮುಕ್ತಿ ಹೇತವೇ ||   

ಪ್ರತೀ ಮುಂಜಾವಿನಲ್ಲಿ ಪ್ರಾತಸ್ಮರಣೆಗೈಯ್ಯಬೇಕು, ಆಗ ಆ ನಡುವೆ ಒಮ್ಮೆ "ನಾನು ಕಾಶಿಗೆ ಹೋಗುತ್ತೇನೆ-ಗಂಗಾಸ್ನಾನ ಮಾಡಿ ಒಡೆಯ ವಿಶ್ವನಾಥನನ್ನು ದರ್ಶಿಸುತ್ತೇನೆ"- ಎಂದು ಹೇಳಬೇಕಂತೆ. ಆ ಆಸೆ ಪೂರ್ಣವಾಗಲಿ ಬಿಡಲಿ, ಹಾಗೊಂದು ಪುಣ್ಯಸಂಕಲ್ಪ ಮನಸ್ಸಿನಲ್ಲಿ ಉದ್ಭವಿಸಬೇಕು ಎಂಬ ಉದ್ದೇಶದಿಂದ ಅದನ್ನು ಪಠಿಸಲು ಹೇಳುತ್ತಿದ್ದರು.

ಇಂಥಾ ಪುಣ್ಯಭೂಮಿ ಕಾಶಿಯಲ್ಲಿನ ಮಣಿಕರ್ಣಿಕಾ ಘಾಟ್ ನಲ್ಲಿ ಆದಿಶಂಕರರು ಉಳಿದುಕೊಂಡಿದ್ದರು. ನಿತ್ಯವೂ ಗಂಗೆಯಲ್ಲಿ ಸ್ನಾನ, ಸ್ವಾಮಿ ವಿಶ್ವನಾಥನ ದರ್ಶನ, ಅನ್ನಪೂರ್ಣೇಶ್ವರಿಯ ಸೇವೆ, ಸಮಯದ ಹೆಚ್ಚಿನ ಭಾಗ ಧ್ಯಾನ-ತಪಸ್ಸಿಗೆ ಮೀಸಲು, ಮಿಕ್ಕುಳಿದ ಸಮಯದಲ್ಲಿ ವೇದಾಂತಸಾರವನ್ನು ಬೋಧಿಸುವ ಕೆಲಸ-ಹೀಗೆ ಅವರ ದಿನಚರಿ ಸಾಗಿತ್ತು. ಕಾಶಿಯನ್ನು ಸೇರಿದ ಪ್ರಥಮದಲ್ಲೇ ಅನ್ನಪೂರ್ಣೇಶ್ವರಿಯನ್ನು ಕಾಣುವ ಹಂಬಲ ಶಂಕರರಿಗಾಯ್ತು-ಆಕೆ ಕಾಶೀಪುರಾಧೀಶ್ವರಿ. ಹಾಗೆ ಅನ್ನಪೂರ್ಣೆಯ ಮುಂದೆ ಅವರು ಹೋಗಿ ತಲೆಬಾಗಿ ನಿಂತಾಗ ಅವರಿಗೆ ದಿವ್ಯಾನುಭವವಾಯ್ತು.

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

ನಾನಾರತ್ನ-ವಿಚಿತ್ರ-ಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜ-ಕುಂಭಾಂತರೀ |
ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

ಚಿತ್ರವಿಚಿತ್ರ ವೇಷಗಳನ್ನು ಧರಿಸಿದಂತೇ, ನಾನಾವಿಧದ ಬಂಗಾರದ ಆಭರಣಗಳನ್ನು ತೊಟ್ಟಂತೇ, ಪಾತಕಿಗಳನ್ನು ವಧಿಸಿದ ಮಹಾಕಾಳಿಯಂತೇ, ಮೂರುಲೋಕಗಳನ್ನು ರಕ್ಷಿಸಿದ ಮಾಹಾಮಾತೆಯಂತೇ ಆಕೆಯ ರೂಪ ಗೋಚರವಾಯ್ತು. ಶಂಕರರ ಅರಿವಿಗೇ ಇರದಂತೇ, ಹೃದ್ಗತವಾದ ಸ್ತೋತ್ರವೊಂದು ಅವರ ಬಾಯಿಂದ ಹೊರಹೊಮ್ಮಿತು.

ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ||

ಮಾತಾ ಚ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ |
ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ ||

[ಮಾನವತಾವಾದದ ಕುರಿತು ಯಾರೋ ಒಬ್ಬಿಬ್ಬರು ಒಂದೆರಡು ಮಾತುಗಳನ್ನು ಆಡಿಬಿಟ್ಟರೆ ಅವರನ್ನೇ ’ಮಹಾನ್ ಮಾನವತಾವಾದಿ’ ಎಂದು ತಿಳಿದುಬಿಡುತ್ತೇವೆ, ಹಾಗೆ ಕರೆದು ಗೌರವಿಸುತ್ತೇವೆ. ಆದರೆ ಮೂರುಲೋಕಗಳೂ ಸಹಿತ ನನ್ನದೇಶವೇ, ಎಲ್ಲರೂ ನನ್ನವರೇ ಎಂದ ಶಂಕರರ ಉಕ್ತಿ ಹಲವರಿಗೆ ಕಾಣದಲ್ಲಾ? ]

"ಕೇವಲ ಜ್ಞಾನವೈರಾಗ್ಯ ಸಿದ್ಧಿಗಾಗಿ ಈ ಶರೀರ ನಶಿಸದಂತೇ ಕೆಲಕಾಲ ಉಳಿಯಲು ಭಿಕ್ಷೆಯನ್ನು ನೀಡು ತಾಯಿ" ಎಂದು ದೇವಿ ಅನ್ನಪೂರ್ಣೆಯಲ್ಲಿ ಶಂಕರರು ಪ್ರಾರ್ಥಿಸಿದರು. ಶಂಕರರು ಭಾವಪೂರ್ಣವಾಗಿ ಈ ಸ್ತೋತ್ರವನ್ನು ಉದ್ಗರಿಸಿದಾಗ ಅವರೊಬ್ಬ ಮಹಾನ್ ತೇಜಸ್ವಿಯಂತೇ ಸುತ್ತ ನೆರೆದ ಭಕ್ತಭಾವುಕರಿಗೆ ಭಾಸವಾಯ್ತು; ಶಂಕರು ನಡೆದೆಡೆಗೆಲ್ಲಾ ಅನೇಕರು ಅವರನ್ನು ಹಿಂಬಾಲಿಸಿದರು, ನಿತ್ಯವೂ ಅವರ ಪ್ರವಚನಗಳನ್ನು ಅನೇಕರು ಆಲಿಸಿದರು. ಬಾಲಸನ್ಯಾಸಿಯ ಮಾತುಗಳನ್ನು ಕೇಳಲು ಅಬಾಲವೃದ್ಧರಾದಿಯಾಗಿ ಹಲವರು ಸೇರುತ್ತಿದ್ದರು. ಅವರ ಸನ್ನಿಧಿಯಲ್ಲಿ ಅನೇಕರಿಗೆ ಅತ್ಯಂತ ಶಾಂತಿ ಲಭಿಸುತ್ತಿತ್ತು. ದಿನಗಳೆದಂತೇ ಶಂಕರರು ಕಾಶೀ ಪಟ್ಟಣದಲ್ಲಿ ಮನೆಮಾತಾದರು; ಅವರ ಸುದ್ದಿ ಅಷ್ಟು ವ್ಯಾಪಕವಾಯ್ತು, ಯಾರ ಬಾಯಲ್ಲಿ ಕೇಳಿದರೂ ಬಾಲಸನ್ಯಾಸಿಯ ಬಗ್ಗೆ ಹೇಳುವವರೇ!  

ಹೀಗಿರುತ್ತಲೊಮ್ಮೆ, ಅತ್ಮಾಜ್ಞಾನಾಕಾಂಕ್ಷಿಯಾದ ಹುಡುಗನೊಬ್ಬ ಚೋಳದೇಶದ ಕಾವೇರಿತಟದಿಂದ ಗುರುಗಳ ಶೋಧದಲ್ಲಿ ಕಾಶಿಗೆ ಬಂದನು. ಬಾಲಸನ್ಯಾಸಿಯ ಕುರಿತು ಯಾರೋ ಆತನಿಗೆ ಸುದ್ದಿ ತಿಳಿಸಿದರು. ಶೀಘ್ರಾತಿಶೀಘ್ರವಾಗಿ ಶಂಕರರನ್ನು ಹುಡುಕಿಬಂದ ಆ ಬಾಲಕ ಶಂಕರರಿಗೆ ಸಾಷ್ಟಾಂಗವೆರಗಿದನು. ವಿದ್ಯೆಕಲಿಯುವುದರಲ್ಲಿ ಆತನಿಗೆ ಅತ್ಯಂತ ಶ್ರದ್ಧೆ, ಸಾಕಷ್ಟು ಓದಿಕೊಂಡಿದ್ದ ಕೂಡ. ಆತನಲ್ಲಿನ ಪರಮವಿರಕ್ತ ಭಾವವನ್ನು ಗ್ರಹಿಸಿದ ಶಂಕರರು ದಿವ್ಯದೃಷ್ಟಿಯಿಂದ ಆತನ ಹಿನ್ನೆಲೆಯನ್ನರಿತರು, ಶುಭದಿನದ ಶುಭಮುಹೂರ್ತವೊಂದರಲ್ಲಿ ಆತನಿಗೆ ಸಂನ್ಯಾಸದೀಕ್ಷೆ ನೀಡಿ ’ ಸನಂದನ’ ಎಂದು ಹೆಸರಿಸಿದರು. ಸನಂದನರು ಶಂಕರರ ಪ್ರಥಮಶಿಷ್ಯರೆನಿಸಿದರು. ಅದ್ವೈತ ಸಿದ್ಧಾಂತವನ್ನು ಸನಂದನರು ಚೆನ್ನಾಗಿ ಅರ್ಥಮಾಡಿಕೊಂಡು ಗುರುಸೇವೆಯಲ್ಲಿ ಸದಾ ತೊಡಗಿರುತ್ತಾ ಅವರ ಅನುಗ್ರಹಕ್ಕೆ ಪಾತ್ರರಾದರು. ಸನಂದನರು ಹಲವಾರು ಗ್ರಂಥಗಳನ್ನು ವಿಮರ್ಶಿಸಿದ್ದಾರೆ. ಬ್ರಹ್ಮಸೂತ್ರ ಭಾಷ್ಯವನ್ನು ಶಂಕರರು ಬರೆದಾಗ ಅದಕ್ಕೆ ವಿವರಣೆಯನ್ನು ಇದೇ ಸನಂದನರು ಬರೆದರು.   

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ |
ಜೀವನ್ಮುಕ್ತಸ್ತು ತದ್ವಿದ್ವಾನಿತಿ ವೇದಾಂತ ಡಿಂಡಿಮಃ  ||

ಬ್ರಹ್ಮವೇ ಸತ್ಯ. ಜಗತ್ತಿನಲ್ಲಿ ಕಾಣುವ ಸ್ಥಾವರಕ್ಕೆ, ಜಂಗಮಕ್ಕೆ, ಪ್ರಾಣಿವರ್ಗಕ್ಕೆ, ಜಡವಸ್ತುಗಳಿಗೆ ಎಲ್ಲದಕ್ಕೂ ಇದೊಂದೇ ಆತ್ಮ. ಈ ಜಗತ್ತು ತಾನು ತೋರುವ ರೂಪದಲ್ಲಿ ಸತ್ಯವಲ್ಲ. ಬ್ರಹ್ಮದಂತೆ ಜಗತ್ತು ಸತ್ಯವಲ್ಲವಾದುದರಿಂದ ಅದು ಮಿಥ್ಯೆ. ಈ ಜಗತ್ತಿನಲ್ಲಿ ಇರುವ ಸಮಸ್ತ ಜೀವಿಗಳೂ ಬ್ರಹ್ಮವೇ ಹೊರತು ಬೇರೆಯಲ್ಲ. ಆತ್ಮ ಪರಮಾತ್ಮರಿಗೆ ಭೇದವಿಲ್ಲ. ಎರಡೂ ಬೇರೆ ಬೇರೇ ಅಲ್ಲ. ಇದಕ್ಕೆ ನಾವು ಉದಾಹರಣೆಗಳನ್ನು ಹೀಗೆ ನೋಡಬಹುದಾಗಿದೆ:

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ || 

ಒಂದು ಪೂರ್ಣವಿತ್ತು-ಅದರಿಂದ ವಿಭಜನೆಗೊಂಡ ತುಣುಕುಗಳು ಹಲವು ಅಪೂರ್ಣವಾದರೂ ಮೂಲಮಾತ್ರ ಪೂರ್ಣವೇ, ಪರಿಪೂರ್ಣವೇ! ಮಣ್ಣಿನಿಂದ ಮಡಕೆ-ಕುಡಿಕೆ-ಬೋಗುಣಿ-ಮೊಗೆ-ಹಣತೆ-ತಾಟು ಮೊದಲಾದ ಪಾತ್ರೆಗಳನ್ನೋ ಅಲಂಕಾರಿಕ ವಸ್ತುಗಳನ್ನೋ ಸಿದ್ಧಪಡಿಸಲಾಗುತ್ತದೆ, ಆದರೆ ಅವುಗಳಲ್ಲೆಲ್ಲಾ ಇರುವುದು ಮಣ್ಣೇ ಮತ್ತು ಅವು ಒಡೆದು ಮಣ್ಣೊಳಗೆ ಮತ್ತೆ ವಿಲೀನವಾದಾಗ ಇರುವುದು ಮಣ್ಣೇ ಸರಿ. ಮಿಸುನಿಗೆ ಕೆಲವು ಲೋಹಗಳನ್ನು ಸೇರಿಸಿ ಕಾಯಿಸಿ ಎರಕಹೊಯ್ದು ಪುಟಕೊಟ್ಟಾಗ ಬಂಗಾರದ ವಿವಿಧ ಆಕಾರದ ಆಭರಣಗಳು ತಯಾರಾಗುತ್ತವೆ. ಬಳಸಿ ನೋಡುತ್ತ ಹಳಸಿ ಬೇಸರಗೊಂಡ ಆಭರಣಗಳನ್ನು ಕರಗಿಸಿದಾಗ ಬಂಗಾರವನ್ನೇ ಮರಳಿ ಪಡೆಯಬಹುದಾಗಿದೆ. ನೀರಿನ ಆಗರದಲ್ಲಿ ನೀರು ಪೂರ್ಣವಾಗಿದೆ, ತುಂಬಿಕೊಂಡ ಪಾತ್ರೆಯಲ್ಲಿ ಆ ಯಾ ಪಾತ್ರೆಯ ಆಕಾರವಾಗಿ ಗೋಚರಿಸುವ ನೀರಿಗೆ ಸ್ಪಷ್ಟವಾದ ಸ್ವತಂತ್ರ ಆಕಾರವಿಲ್ಲ! ತುಂಬಿಕೊಂಡ ನೀರನ್ನು ಮತ್ತೆ ಅದೇ ಮೂಲದಲ್ಲಿ ಚೆಲ್ಲಿದರೆ ಅದು ಅಲ್ಲಿರುವ ನೀರಿನಲ್ಲಿ ಸೇರಿಹೋಗುತ್ತದೆಯೇ ಹೊರತು ತಾನು ಬೇರೇ ಎಂದು ತೋರ್ಪಡಿಸುವುದಿಲ್ಲ. ಕನಸಿನಲ್ಲಿ ತಿರುಕನೊಬ್ಬ ರಾಜಕುವರಿಯನ್ನು ವರಿಸಿ ರಾಜನಾದದ್ದು ನಿಜ, ರಾಜಭೋಗವನ್ನು ಅನುಭವಿಸಿದ್ದು ನಿಜ, ಆದರೆ ಕನಸು ಮುಗಿದಾನಂತರ ತಾನು ರಾಜನೆಂದರೆ ದಾರಿಹೋಕರು ತಿರುಕನನ್ನು ಹುಚ್ಚನೆಂದು ಕಲ್ಲು ಹೊಡೆದಾರು! ಅಲ್ಲವೇ? ಈ ಪ್ರಪಂಚವೊಂದು ದೊಡ್ಡ ಕನಸು, ಗೊತ್ತಾಗುವ ವೇಳೆಗೆ ಕನಸು ಹರಿದಿರುತ್ತದೆ; ಜೀವನ ಮುಗಿದಿರುತ್ತದೆ!  

ಶಂಕರರ ವಾಗ್ಝರಿಯನ್ನು ಕೇಳಲು ಬಂದ ಜನರಿಗೆ ಅವರು ಹೇಳುತ್ತಿರುವ ವಿಷಯ ಸಂಪೂರ್ಣ ಮನದಟ್ಟಾಗುತ್ತಿತ್ತು. ಮಾಡುವ ಪ್ರತೀ ಕ್ರಿಯೆಯಲ್ಲೂ ಸೃಷ್ಟಿಯ ಪ್ರತೀ ಕೌತುಕದಲ್ಲೂ ಬ್ರಹ್ಮವನ್ನೇ ಅವರ್ರು ಕಂಡರು. ಶಂಕರರು ಎಲ್ಲವೂ ಬ್ರಹ್ಮಮಯ ಎಂದು ಹೇಳಲು ಕಾರಣವಿತ್ತು:

ಬ್ರಹ್ಮೈವೇದಮ್ ಅಮೃತಂ ಪುರಸ್ತಾತ್
ಬ್ರಹ್ಮಪಶ್ಚಾತ್ ಬ್ರಹ್ಮ ದಕ್ಷಿಣತಃ ಚೋತ್ತರೇಣ |
ಅಧಶ್ಚ ಊರ್ಧ್ವಂ ಚ ಪ್ರಸೃತಂ
ಬ್ರಹ್ಮೈವೇದಂ ವಿಶ್ವ ಮಿದಂವರಿಷ್ಠಮ್ ||

--ಬ್ರಹ್ಮದ ಕುರಿತು ಉಪನಿಷತ್ತು ಹೀಗೆ ಹೇಳಿದೆ. ಎದುರಿಗೆ ಕಾಣುವುದು, ಹಿಂದೆಕಾಣುವುದು, ಎಡಬಲಗಳಲ್ಲಿ ಕಾಣುವುದು, ಕೆಳಗೆ-ಮೇಲೆ ಎಲ್ಲೆಡೆಗೂ ಹರಡಿರುವುದೂ ಉತ್ತರದಕ್ಷಿಣಗಳ ಕಡೆಗಿರುವುದೂ ನಾಶರಹಿತವಾದ ಬ್ರಹ್ಮವೇ. ಚರಾಚರಾತ್ಮಕವಾದ ಜಗತ್ತಿನಲ್ಲಿರುವುದೆಲ್ಲ ಬ್ರಹ್ಮವೇ. ಎಂದಮೇಲೆ ಬ್ರಹ್ಮಮಾತ್ರ ಸತ್ಯ. 

ಒಂದು ದಿನ ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಚಾಂಡಾಲನೊಬ್ಬ ನಾಲ್ಕು ನಾಯಿಗಳನ್ನು ಹಿಡಿದುಕೊಂಡು ದಾರಿಗಡ್ಡಲಾಗಿ ಬಂದ. "ದೂರಹೋಗು ನಾನು ಸ್ನಾನಾಮಾಡಿ ಮಡಿಯಲ್ಲಿ ಬಂದಿದ್ದೇನೆ ದಾರಿ ಕೊಡೆ"ಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಆತನ ಸ್ಪರ್ಶವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ?  ನೀನು ಜ್ಞಾನಿ ಎಂದು ತಿಳಿದಿದ್ದೇನೆ, ಹೇಳು ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ಏಕಕಾಲಕ್ಕೇ ಆಶ್ಚರ್ಯವನ್ನೂ ಅವಮಾನವನ್ನೂ ಅನುಭವಿಸಿದ ಶಂಕರರು  ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು! 

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ-ಪಿಪೀಲಿಕಾಂತ-ತನುಷು ಪ್ರೋತಾ ಜಗತ್ಸಾಕ್ಷಿಣೇ |
ಸೈವಾಹಂ ನ ಚ ದೃಶ್ಯ ವಸ್ತ್ವಿತಿ ದೃಢಾಪ್ರಜ್ಞಾಪಿ ಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರ ವಿಸ್ತಾರಿತಂ
ಸರ್ವಂ ಚೈತದವಿದ್ಯಯಾ ತ್ರಿಗುಣಯಾಶೇಷ ಮಯಾ ಕಲ್ಪಿತಮ್ |
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

[ಬರಹ ಬಹಳ ದೀರ್ಘವಾಗುವುದನ್ನು ತಪ್ಪಿಸಲು ಸ್ತೋತ್ರಗಳ ಕೆಲವು ಭಾಗಗಳನ್ನು ಮಾತ್ರ ನಮೂದಿಸಿದ್ದೇನೆ.]  ಹೀಗೇ ಅಸ್ಪೃಶ್ಯತೆಯನ್ನು ಅಂದಿಗೇ ಸಲ್ಲವೆಂದವರು ಶಂಕರರು. ಸಹಸ್ರಮಾನ ಕಳೆದಮೇಲೆ ಗಾಂಧೀಜಿಯೋ ಇನ್ಯಾರೋ ಹೇಳಿದ್ದರೆ ಅವರು ಶಂಕರರ ಆದರ್ಶವನ್ನೇ ಬಳಸಿಕೊಂಡರು ಎಂದು ತಿಳಿಯಬೇಕಾಗಿದೆ. ಶಂಕರರ ಜೀವನದ ಅರೆಘಳಿಗೆಯೂ ವ್ಯರ್ಥವಾಗಲಿಲ್ಲ. ಅಲ್ಲಿ ಮಾನವ ಸಹಜ ಅನುಭವ ಮತ್ತು ಅನುಭಾವ ಕಂಡುಬರುತ್ತದೆ. ಮಾನವೀಯತೆಗಾಗಿ ಮತ್ತು ಸನಾತನ ಜೀವನಧರ್ಮದ ಉದಾತ್ತ ತತ್ತ್ವಗಳನ್ನು ಎತ್ತಿಹಿಡಿಯಲಿಕ್ಕಾಗಿ ಅವರು ಇರುವಷ್ಟೂ ಕಾಲ ಶ್ರಮಿಸಿದರು. ವಿಜ್ಞಾನಿಯೊಬ್ಬ ಸಂಶೋಧನೆಯಲ್ಲಿ ತೊಡಗಿಕೊಂಡು ಸಫಲನಾದಾಗ ಲೌಕಿಕ ಬದುಕಿಗೆ ಆಗಬಹುದಾದ ಉಪಕಾರದಂತೇ ಅಲಭ್ಯ ಆರ್ಷೇಯ ವಿದ್ಯೆಯನಾಂತು ಮುನ್ನಡೆದ ಶಂಕರರು ಲೋಕಕ್ಕೆ ನೀಡಿದ ಕಾಣಿಕೆಗಳಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ವೈಜ್ಞಾನಿಕ ಸಂಶೋಧನೆಗಳಲ್ಲಿ ರಾಸಾಯನಿಕಗಳನ್ನು ಉಪಯೋಗಿಸುವಾಗ ಹೇಗೆ ಕಟ್ಟುಪಾಡುಗಳು, ನೀತಿ-ನಿಯಮಗಳು ಇರುವವೋ ಹಾಗೇ ಸಂನ್ಯಾಸಧರ್ಮ ಎಂಬುದಕ್ಕೊಂದು ಇದಮಿತ್ಥಂ ಎಂಬ ಚೌಕಟ್ಟನ್ನು ಕಲ್ಪಿಸಿಕೊಟ್ಟವರು ಶಂಕರರು. ಅದು ಅವರ ಅನುಭವಜನ್ಯ ಅಮೃತ; ಅರಿಯಲಾರದವರಿಗೆ, ಅನುಭವಿಸಲಾರದವರಿಗೆ ವಿಚಿತ್ರ ಸಂಕಟ!

ಅಧರ್ಮವೇ ಧರ್ಮವೆಂದು ತಿಳಿದುಕೊಂಡಿದ್ದ, ಕ್ರೌರ್ಯ-ಮಾನವಬಲಿ ಮೊದಲಾದ ಪಾತಕಗಳೂ ಪಾತಕಿಗಳೂ ತುಂಬಿದ್ದ ಸಮಾಜದಲ್ಲಿ "ಧರ್ಮ ಹೀಗಿದೆ" ಎಂದು ಸಾಧಿಸುವುದು ಸುಲಭದ ಮಾತಾಗಿರಲಿಲ್ಲ, ಅದೂ ಹೇಳಿಕೇಳಿ ಬಾಲ ಸಂನ್ಯಾಸಿಯೊಬ್ಬ ಅದನ್ನು ಸಾಧಿಸುತ್ತಾನೆಂದರೆ ನಂಬಲಸಾಧ್ಯವಾದ ಸಂಗತಿಯಾಗಿತ್ತು. ಅಂತಹ ಅಭೇದ್ಯ ಅಧರ್ಮದ ಕೋಟೆಯನ್ನೊಡೆದು  ಧರ್ಮಸಾಮ್ರಾಜ್ಯವನ್ನು ಪ್ರತಿಷ್ಠಾಪಿಸಿದವರು ಶ್ರೀಶಂಕರ ಭಗವತ್ಪಾದರು. ಶಂಕರರ ಅವತಾರಕ್ಕೂ ಮುನ್ನ ಮಠಗಳು ಇರಲಿಲ್ಲ. ಜೀವನಧರ್ಮ ಹೀಗಿದೆ, ಅದನ್ನು ಆಚರಿಸಿ ತೋರಿಸಲು ಗುರುವೊಬ್ಬಬೇಕು, ಗುರುವಿಗೆ ಆಚರಣೆಗೆ ಶ್ರದ್ಧಾಕೇಂದ್ರವೊಂದು ಬೇಕು, ಆ ಪ್ರದೇಶದಲ್ಲೇರ್ ಗುರು ವಾಸಿಸುತ್ತಾ, ಆಗಾಗ ಪರ್ಯಟನೆ ನಡೆಸುತ್ತಾ ಧರ್ಮಪ್ರಬೋಧಮಾಡಬೇಕು ಎಂಬುದು ಶಂಕರರ ದೂರದರ್ಶಿತ್ವವಾಗಿತ್ತು; ದೇಶವಾಸಿಗಳು ಸನ್ಮಾರ್ಗದಲ್ಲಿ, ಧರ್ಮಮಾರ್ಗದಲ್ಲಿ ನಡೆಯಬೇಕು ಎಂಬುದು ಅವರ ಬಯಕೆಯಾಗಿತ್ತು. ವಿಜ್ಞಾನಿಗಳೆಲ್ಲರೂ ಒಂದೇ ಅಲ್ಲ ಹೇಗೋ ಹಾಗೇ ಸಂನ್ಯಾಸಿಗಳೆಲ್ಲರೂ ಒಂದೇ ಮಟ್ಟದವರಾಗುವುದಿಲ್ಲ. ಜಗತ್ತಿನಲ್ಲಿ ಶಂಕರರಂಥಾ ಮತ್ತೊಬ್ಬ ಅದ್ಭುತ ಬಾಲಪ್ರತಿಭೆಯ ಜನನ ಇದುವರೆಗೆ ಆಗಲಿಲ್ಲ, ಬಹುಶಃ ಭವಿಷ್ಯದಲ್ಲೂ ಆಗುವ ಲಕ್ಷಣವಿಲ್ಲ.   

ಪ್ರಾಂತವೊಂದರಲ್ಲಿ ಜನಾಂಗವೊಂದರ ಕುರಿತು ಶ್ರಮಿಸಿದ ಇಂದಿನ ಸಾಧು-ಸಂತರಿಗೆ ನಾವು ಅಪಾರವಾದ ಪ್ರಚಾರವನ್ನೂ, ಹಾರತುರಾಯಿ ಪದ್ಮಭೂಷಣ, ಭಾರತರತ್ನ, ಡಾಕ್ಟರೇಟ್ ಮೊದಲಾದ ಪ್ರಶಸ್ತಿಗಳನ್ನೂ ನೀಡಿ ಗೌರವಿಸುತ್ತೇವೆ, ಗೌರವಿಸಿದ್ದೇವೆ; ತಪ್ಪಲ್ಲ-ಸರಿಯೇ ಇದೆ, ಆಕ್ಷೇಪವಿಲ್ಲ. [ಈಗೀಗ ರಾಜಕೀಯ ಮಾಡುವುದಕ್ಕಾಗಿ ಜಾತೀವಾರು ಸ್ವಾಮಿಗಳನ್ನು ಮಾಡಿಕೊಳ್ಳುತ್ತಿದ್ದೇವೆ, ಸಂಸ್ಕಾರ ಬೇಕಿಲ್ಲ, ಧರ್ಮಸೂತ್ರ ಗೊತ್ತಿರಬೇಕಿಲ್ಲ, ಶ್ರುತಿ-ಸ್ಮೃತಿ-ಪುರಾಣಗಳ ಓದು ಬೇಕಿಲ್ಲ, ಉಟ್ಟಿದ್ದೇ ಕಾವಿ, ತೊಟ್ಟಿದ್ದೇ ದಂಡ] ಆದರೆ ದುರ್ಗಮವಾದ ಬೆಟ್ಟಗುಡ್ಡಗಳನ್ನೂ ಕಾಡುಮೇಡು ನದಿಸರೋವರಗಳನ್ನೂ ಹೊಂದಿದ್ದ ಅಖಂಡ ಭಾರತವನ್ನು ಅನೇಕಾವರ್ತಿ ಕೇವಲ ಕಾಲ್ನಡಿಗೆಯಲ್ಲಿ ಸಂಚರಿಸಿ, ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿ, ಮಾನವೀಯತೆಯನ್ನು ಕೃತಿಯಿಂದ ಮಿಡಿದ[ಕೇವಲ ಒಂದು ಜನಾಂಗದ ಒಳಿತನ್ನು ಮಾತ್ರ ಬಯಸಿದವರಲ್ಲ] ಮಹಾನ್ ಚೇತನಕ್ಕೆ ನಾವೇನು ಕೊಟ್ಟಿದ್ದೇವೆ? ಬರಿದೇ ನಿಯತಕಾಲಿಕೆಗಳಲ್ಲಿ ಶಂಕರರ ವಿರುದ್ಧ ಎಡಪಂಥೀಯ ವಿಚಾರಲಹರಿಯನ್ನು ಹರಿಬಿಡುತ್ತೇವೆ; ಆ ಮೂಲಕ ಅವರ ಅವಕೃಪೆಗೆ ಗುರಿಯಾಗಬೇಕಾದೀತೇ ಹೊರತು ಹೆಚ್ಚಿನದೇನನ್ನೂ ಮಾಡಲಸಾಧ್ಯ. ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೇ ಶಂಕರರು ಸನಾತನತೆಯ ಕುರಿತಾಗಿ ಹೇಳದ ವಿಷಯವಿಲ್ಲ. ಜೀವಿತದ ೩೨ ವಯಸ್ಸಿನೊಳಗೆ ಸಾರ್ವಕಾಲಿಕವೆನಿಸಿದ ಕೃತಿಗಳನ್ನು ಶಂಕರರು ನೀಡಿದ್ದಾರೆ. ಕೇವಲ ಬಾಯಿಗೆ ಬಂದದ್ದನ್ನು ಬಡಬಡಾಯಿಸುವ ಎಡಪಂಥೀಯರು ಮಾತನಾಡುವ ಮುನ್ನ ಅವರ ಬಗ್ಗೆ, ಅವರ ಕೃತಿಗಳ ಆಳಗಲ-ವಿಸ್ತಾರಗಳ ಅಗಾಧತೆಯ ಬಗ್ಗೆ, ಅವರ ಸಮಾಜಮುಖೀ ಕೆಲಸಗಳ ಬಗ್ಗೆ ಆಮೂಲಾಗ್ರ ತಿಳಿದುಕೊಂಡರೆಮಾತ್ರ ಆ ವ್ಯಕ್ತಿತ್ವ ಕಣ್ಣಮುಂದೆ ನಿಲ್ಲಲು ಸಾಧ್ಯವಾಗುತ್ತದೆ. ಅಂತಹ ದಿವ್ಯ ತೇಜೋಮಯ ಮೂರ್ತಿಗೆ ಸಾಷ್ಟಾಂಗ ನಮಸ್ಕಾರಗಳು.

ಅಖಂಡಭಾವ ಶಿವರೂಪತತ್ತ್ವಶ್ಚಿತಿ ಸ್ವಭಾವಃ ಪರಮಾತ್ಮ ಸತ್ಯಃ
ಸತ್ಯಸ್ಯ ಸತ್ಯಃ ಸುಧಿಯೈವ ಗಮ್ಯಃ ಪರಃ ಪ್ರಧಾನಾತ್ಪರಮೇಶ್ವರೋ ಯಃ |
ಆದ್ಯಂತಹೀನೋ ನಿರಪೇಕ್ಷದೀಪ್ತಿಃ ಸ್ವತಃ ಸ್ವರೂಪೇಣ ವಿಪುಲ್ಲಿತೋ ಯಃ
ಶ್ರೀಸೌಮ್ಯಕಾಶೀಶ ಮಹೇಶ್ವರಾಯ ತಸ್ಮೈ ನಮಃ ಸ್ವಾಮಿ ತಪೋವನಾಯ ||


[ಮತ್ತೆ ಕೆಲಸಮಯದ ನಂತರ ಮುಂದುವರಿಯುತ್ತದೆ]


Monday, January 7, 2013

ದಮ್ಮಿದ್ದರೆ ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಲಿ !

ಚಿತ್ರಋಣ : ಅಂತರ್ಜಾಲ 
ದಮ್ಮಿದ್ದರೆ ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಲಿ !

ವಿಜಯಕರ್ನಾಟಕದಲ್ಲಿ ಖಾಲೀ ಬಿದ್ದ ಕೆಲವು ಜಾಗಗಳನ್ನು ಕೆಲವರು ತುಂಬಿಸುವತ್ತ ಟೊಂಕಕಟ್ಟಿದ್ದಾರೆ; ಈ ಪೈಕಿ ಉಮಾಪತಿಯೆಂಬವರೂ ಒಬ್ಬರು. ವಾರದಲ್ಲೊಮ್ಮೆ ಅದೂ ಇದೂ ಕಸಗಳನ್ನು ಎದುರು ತಂದು ’ಡೆಲ್ಲಿ ಡೈರಿ’ಎಂದು ಗುಡ್ಡೆ ಹಾಕುವುದು ಅವರ ಕಾಯಕ! ಅಹಿಂದವೇ ಮೂರ್ತಿವೆತ್ತಂತೇ ತಾನಿದ್ದೇನಲ್ಲಾ ಎಂದು ಒಂದಷ್ಟು ಉಗುಳುತ್ತಲೇ ಅದರಮೇಲೇ ನಡೆಯುವುದು ಅವರ ಹೆಚ್ಚುಗಾರಿಕೆ! ೧೫ ದಿನಗಳ ಹಿಂದೆ ಪಂಡಿತ್ ರವಿಶಂಕರ್ ಗತಿಸಿದಾಗ ಅವರ ವೈಯ್ಯಕ್ತಿಕ ಬದುಕಿನ ಶೋಕಿಗಳನ್ನು ಬಣ್ಣಿಸುವತ್ತ ಅವರ ಗಾಡಿ ನಡೆದಿತ್ತು, ಇವತ್ತು ಅವರಿಗೆ ಸಿಕ್ಕಿದ್ದು ಸರಸಂಘ ಚಾಲಕ ಭಾಗವತರ ನುಡಿ. ಭಾರತೀಯ ಮೌಲ್ಯಗಳನ್ನು ಪಾಲಿಸಿದ್ದರೆ ಮಾನಭಂಗ/ಶೀಲಹರಣ ಕಾರ್ಯ ನಡೆಯುವುದು ಸಾಧ್ಯವಿಲ್ಲ-ಈಗಿನ ಹೆಣ್ಣುಮಕ್ಕಳು ಭಾರತೀಯತೆಯನ್ನು ಬಿಟ್ಟು ವಿದೇಶೀ ಸಂಸ್ಕೃತಿಗೆ ಒಗ್ಗಿಕೊಂಡು ಹಾಗೆ ನಡೆಯುತ್ತಿರುವುದರಿಂದ ಮಾನಭಂಗ/ಶೀಲಹರಣ ಘಟಿಸುವುದಕ್ಕೆ ಅಲ್ಲಿ ವಿಪುಲ ಅವಕಾಶವಿದೆ ಎಂದು ಭಾಗವತರು ಹೇಳಿದ್ದನ್ನೇ ಉಮಾಪತಿಯವರು ತಮ್ಮ ಜಾಗತುಂಬುವ ಕೆಲಸಕ್ಕೆ ವಿಷಯವಸ್ತುವನ್ನಾಗಿ ಪರಿಗಣಿಸಿ ಕೃಷ್ಣಸರ್ಪದ ರೀತಿ ಬುಸುಗುಟ್ಟುತ್ತಾ ಹಾಲಾಹಲವನ್ನೇ ಕಕ್ಕಿದ್ದಾರೆ. ಮಾಧ್ಯಮದಲ್ಲಿ ಎಡಪಂಥೀಯರಿಗೆ ಜಾಸ್ತಿ ಮಣೆಹಾಕುತ್ತಿರುವುದರಿಂದ ಆ ಸಂಖ್ಯೆ ಏರುತ್ತಿದೆ ಎಂದು ಕಳೆದವಾರವಷ್ಟೇ ನಾನು ಹೇಳಿದ್ದೆ-ಇದು ಅದಕ್ಕೊಂದು ಜ್ವಲಂತ ನಿದರ್ಶನ.

ಮಾನವ ಜನಾಂಗವನ್ನು ವರ್ಣಾಶ್ರಮಕ್ಕೆ ವಿಭಕ್ತಗೊಳಿಸುವ ಮುನ್ನ ಒಂದಾನೊಂದು ಕಾಲದಲ್ಲಿ ಮಾನವಜನಾಂಗ ಒಂದೇ ಆಗಿದ್ದಿತು, ಆಗ ಕೇವಲ ಹೆಣ್ಣು ಮತ್ತು ಗಂಡು ಎಂಬ ಜಾತಿಗಳಿದ್ದವು -ಎಂದುಕೊಳ್ಳೋಣ. ಚಾತುರ್ವಣ ಮಾಡುವಾಗ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂದು ತಮ್ಮನ್ನು ಗುರುತಿಸಿಕೊಳ್ಳಲಿಕ್ಕೆ ಕೆಲವರಾದರೂ ಸಿದ್ಧರಾಗಿರಲೇಬೇಕಲ್ಲವೇ? ಒಂದಿರುವುದು ನಾಲ್ಕಾಗುವ ಸಮಯದಲ್ಲಿ ಉ಼ಚ್ಚ-ನೀಚ ಎಂಬ ಪರಿಭೇದ ಇರುತ್ತದೆ ಎಂದು ಗೊತ್ತಾದಮೇಲೂ ಹಾಗೆ ತಮ್ಮನ್ನು ಆ ಯಾ ಗುಂಪುಗಳಲ್ಲಿ ಗುರುತಿಸಿಕೊಳ್ಳಲಿಕ್ಕೆ ಅಂದಿನ ಜನ ಸಿದ್ಧರಾದರೇ? ಇದನ್ನು ಕೆದಕಿದಾಗ ನಮಗೆ ವರ್ಣಾಶ್ರಮ ಮೇಲ್ವರ್ಗದವರು ತಮ್ಮ ಅನುಕೂಲಕ್ಕಾಗಿ ನಿಯಮಿಸಿದ ಕಟ್ಟುಪಾಡಲ್ಲ ಎಂಬುದು ಯಾರೇ ಹೊರಗಿನಿಂದ ಒಪ್ಪಿಕೊಳ್ಳದೇ ಹೋದರೂ ಒಳಗಿನಿಂದ ಕಾಣುವ, ಕಾಡುವ ಸತ್ಯ. ಉಂಡುಟ್ಟು ಜೀವಿಸುವ ಮಾನವನಲ್ಲಿ ಮೂಲವಾಗಿ ಇರುವುದು ಅಹಮಿಕೆ, ಅಹಮಿಕೆ ಇರುವ ಜನಾಂಗ ಎಂದಿಗೂ ತಾವು ಕೆಳಗಿನವರು ಇನ್ನೊಂದಷ್ಟು ಮೇಲಿನವರು ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗಾದರೆ ಜಿಜ್ಞಾಸೆ ಮಾಡಿದರೆ ತಿಳಿಯುವುದು ಮೂಲ ಮಾನವ ಜನಾಂಗವನ್ನು ಮೇಲ್ವರ್ಗ ಮತ್ತು ಕೆಳವರ್ಗ ಅಥವಾ ಚಾತುರ್ವರ್ಣ ಎಂದು ವಿಭಜಿಸಿದ್ದು ಇನ್ನಾವುದೋ ನಾಯಕಶಕ್ತಿ, ನಿರೂಪಕ ಶಕ್ತಿ, ಜಗನ್ನಿಯಾಮಕ ಶಕ್ತಿ.           

|| ಚಾತುರ್ವರ್ಣಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ ||

ಎಂದ ಶ್ರೀಕೃಷ್ಣ ಚಾತುರ್ವರ್ಣ ತನ್ನದೇ ಸೃಷ್ಟಿ ಎಂದು ತನ್ನನ್ನೇ ಆರೋಪಿಸಿಕೊಂಡಿದ್ದಾನೆ ಮತ್ತು ಹಾಗೆ ವಿಭಜಿಸುವುದಕ್ಕೆ ಕಾರಣವನ್ನೂ ಹೇಳಿದ್ದಾನೆ.

ವಾರಪತ್ರಿಕೆ ನಡೆಸುವ ಮಾಜಿ ರೌಡಿಯೊಬ್ಬ ಈ ಹಿಂದೊಮ್ಮೆ ’ವೈದಿಕ ವೈರಸ್’ ಎಂದು ಹೆಸರಿಸಿ ಪತ್ರಿಕೆಯ ಪ್ರಚಾರವನ್ನು ಹೆಚ್ಚಿಸಿಕೊಳಲು ಪ್ರಯತ್ನಿಸಿ ವಿಫಲನಾದ; ಇದರಿಂದ ಸಮಾಜದಮೇಲೆ ದುಷ್ಪರಿಣಾಮವಾಯ್ತೇ ಹೊರತು ಆತನಿಗೆ ಪೈಸೆ ಪ್ರಯೋಜನವೂ ಆಗಲಿಲ್ಲ. ಅವನ ಅಂಬೋಣ ಕೃಷ್ಣ ಯಜುರ್ವೇದದ ಪುರುಷಸೂಕ್ತದ ಹೇಳಿಕೆಯ ಬಗ್ಗೆ ಜಾಸ್ತಿ ಇತ್ತು.

ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂರಾಜನ್ಯಃ ಕೃತಃ || ಊರೂ ತದಸ್ಯ ಯದ್ವೈಶ್ಯಃ | ಪದ್ಬ್ಯಾಗ್ಂ ಶೂದ್ರೋ ಅಜಾಯತ || ಚಂದ್ರಮಾ ಮನಸೋ ಜಾತಃ | ಚಕ್ಷೋಸ್ಸೊರ್ಯೋ ಅಜಾಯತ | ಮುಖಾದಿಂದ್ರಶ್ಚಾಗ್ನಿಶ್ಚ | ಪ್ರಾಣಾದ್ವಾಯುರಜಾಯತ | ನಾಭ್ಯಾ ಆಸೀದಂತರಿಕ್ಷಮ್ | ಶೀರ್ಷ್ಣೋ ದ್ಯೌಸ್ಸಮವರ್ತತ | ಪದ್ಬ್ಯಾಂ ಭೂಮಿರ್ದಿಶಶ್ಶ್ರೋತಾತ್ | ತಥಾ ಲೋಕಾಗ್ಂ ಅಕಲ್ಪಯನ್ ||

ಇದು ಮಾಜಿರೌಡಿಯವರಿಗೆ ಜೀರ್ಣವಾಗಿರಲಿಲ್ಲ. ಈ ಮಂತ್ರವನ್ನು ವಿಶದೀಕರಿಸುತ್ತಾ, ಮಂತ್ರವನ್ನೂ ಸರಿಯಾಗಿ ಮುದ್ರಿಸದೇ, ಅರ್ಥವನ್ನೂ ಅನರ್ಥವಾಗಿ ತಿಳಿಸಿ ಯಾವ ಬ್ರಾಹ್ಮಣನೂ ಇದಕ್ಕೆ ಉತ್ತರ ನೀಡುವುದಿಲ್ಲ ಎಂದುಬಿಟ್ಟನಾತ! ದೇವರ ಮೂರ್ತರೂಪದ ಯಾವ ಯಾವ ಅಂಗಾಂಗಗಳಿಂದ ಯಾರು ಯಾರು ಜನಿಸಿದರು ಎಂಬುದನ್ನು ಈ ಮಂತ್ರ ತಿಳಿಸುತ್ತದೆ ಮತ್ತು ಬ್ರಹ್ಮಾಂಡದ ಸ್ಥೂಲ ಕಲ್ಪನೆಯನ್ನು ಇದು ಹೇಳುತ್ತದೆ. ಇದನ್ನೇ ಹಿಡಿದುಕೊಂಡು ಬ್ರಾಹ್ಮಣರು ತಾವು ಮೇಲೆ ಎಂದರು ದಿನವಿಡೀ ದುಡಿಯುವ ಶೂದ್ರನಿಗೆ ಕೊನೇ ದರ್ಜೆ --ಹೀಗೆಲ್ಲಾ ಪ್ರಲಾಪಿಸಿದ್ದ. ಅವನ ವಾದ ಹಾಗಿರಲಿ, ಬ್ರಾಹ್ಮಣ್ಯದ ಬಗ್ಗೆಯೇ ತಿಳಿಯದೇ ಬ್ರಾಹ್ಮಣರನ್ನು ಟೀಕಿಸುವುದು ಎಷ್ಟು ಕೀಳು ಅಭಿರುಚಿ ಎಂದು ಆತನಿಗೆ ತಿಳಿದಿಲ್ಲ, ತಿಳಿಯುವುದೂ ಇಲ್ಲ-ಯಾಕೆಂದರೆ ಆತ ಜಗಮೊಂಡ! ಬ್ರಾಹ್ಮಣರಿಗೆ ಏನೂ ಕೆಲಸವಿಲ್ಲಾ, ಆರಾಮು, ಹೋಮ-ಪೂಜೆಮಾಡುವುದು ಕಾಸು ಎಣಿಸೋದು ಹಾಯಾಗಿರೋದು ಎಂದು ಹೇಳಿದ್ದ ಆತನಿಗೂ ಸೇರಿದಂತೇ ಬ್ರಾಹ್ಮಣ ವಿರೋಧಿಗಳಿಗೆ ನನ್ನದೊಂದು ಆಹ್ವಾನ: ’ಬ್ರಾಹ್ಮಣ್ಯ’ದಲ್ಲಿ ಒಂದು ವರ್ಷ ಜೀವಿಸಿ ತೋರಿಸಿ, ನನಗೆ ಗೊತ್ತು ಅದು ಸುಲಭಸಾಧ್ಯದ್ದಲ್ಲ. ಎಲ್ಲಾ ವರ್ಣಗಳವರಿಗೂ ಅವರದ್ದೇ ಆದ ಕೆಲಸಗಳಿವೆ, ವಿಧಿಗಳಿವೆ, ಅವು ಸುಮ್ಮನೇ ಅಲ್ಲ. ವೈಶ್ಯನೊಬ್ಬ ವ್ಯಾಪಾರಕ್ಕೆ ಸಕಲ ಸಿದ್ಧತೆಗಳನ್ನೂ ಸದಾ ನಡೆಸುತ್ತಲೇ ದಿನವಿಡೀ ಅಂಗಡಿಮುಂಗಟ್ಟು ಸಜ್ಜುಗೊಳಿಸಿ ಹೆಣಗಾಡಬೇಕಾಗುತ್ತದೆ, ಕ್ಷತ್ರಿಯನೊಬ್ಬ ದೇಶದ ವೈರಿಗಳನ್ನು ಬಡಿದೋಡಿಸಿ ಪ್ರಜೆಗಳನ್ನು ಸುರಕ್ಷಿತವಾಗಿಡಬೇಕಾಗುತ್ತದೆ-ಇಂದು ನಮ್ಮ ಸೈನ್ಯದವರೇ ಕ್ಷತ್ರಿಯರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಜಗತ್ತಿನಲ್ಲಿ ಖಾಲಿ ಇರುವವರಿಗೆ ಅನ್ನವಿರುವುದಿಲ್ಲ; ಪ್ರತಿಯೊಬ್ಬನೂ ಉದ್ಯೋಗನಿರತ/ಕರ್ತವ್ಯನಿರತನಾಗಿರಲೇಬೇಕು. ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತೊಬ್ಬ ನಾಪಿತ ಮೂರು ಜನರಿದ್ದರೆ ಹೊರಗಿನಿಂದ ಮನುಷ್ಯನನ್ನು ಚೆನ್ನಾಗಿ ರೂಪಿಸಬಹುದು ಆದರೆ ಅಂತರಂಗದಿಂದಲ್ಲ ಎಂದು ಕವಿ ಕುವೆಂಪುವೇ ಹೇಳಿದ್ದಾರೆ. ಸಂಸ್ಕಾರ ಎಂಬುದು ಅಂತರಂಗಕ್ಕೆ ಸಂಬಂಧಿಸಿದ್ದು; ಅದು ಸ್ವಭಾವವನ್ನು ಕ್ರಮಾಗತಗೊಳಿಸುತ್ತದೆ. ತಿನ್ನುವ ಆಹಾರದಮೇಲೆ ಮನಸ್ಸು ರೂಪಿತವಾಗುತ್ತದೆ, ರೂಪುಗೊಂಡ ಮನಸ್ಸನ್ನು ಬುದ್ಧಿ ಪ್ರೇರೇಪಿಸುತ್ತದೆ, ಬುದ್ಧಿ ಪ್ರೇರಿತನಾದ ವ್ಯಕ್ತಿಗೆ ಚಿತ್ತಸ್ವಾಸ್ಥ್ಯ ಸಿಗುವುದು ಉತ್ತಮವಾದ ಕೋಶಗಳ ಓದುವಿಕೆಯಿಂದ ಮತ್ತು ಉತ್ತಮವಾದ ವಿಷಯಗಳನ್ನು ಆಲಿಸುವಿಕೆಯಿಂದ. ಆ ಎರಡೂ ಮತ್ತು ಅವುಗಳಿಗೆ ತಳಹದಿಯಾಗಿ ಹೇಳಿದ ಸಮರ್ಪಕ ಆಹಾರವೂ ಇಲ್ಲದ ಮಾಜಿರೌಡಿಗೆ ಯಾವ ಮಟ್ಟದ ತಿಳುವಳಿಕೆ ಇದ್ದೀತು? ಯಾವುದು ನಿಲುಕೀತು ? ವರ್ಣಾಶ್ರಮಗಳು ಗುಣ, ಕರ್ಮ, ಸ್ವಭಾವ, ವೃತ್ತಿಗಳಿಂದ ಆಗುವಂಥವೇ ಹೊರತು ಹುಟ್ಟಿನಿಂದಲ್ಲವಲ್ಲ!

ಮದುವೆಯೊಂದರಲ್ಲಿ ಭಾಗವಹಿಸಿದ್ದೆ, ಊಟಕ್ಕಾಗಿ ನೂಕುನುಗ್ಗಲು-ಕಾರಣ ತಿಳಿಯಲಿಲ್ಲ; ಒಂದು ಪಂಕ್ತಿ ಮುಗಿದು ಎಂಜಲು ಎಲೆಗಳನ್ನು ತೆಗೆಯುವುದಕ್ಕೂ ಮುನ್ನವೇ ಜನ ಆಸನಗಳಲ್ಲಿ ಕೂರುವುದಕ್ಕಾಗಿ ನುಗ್ಗುತ್ತಿದ್ದರು. ಊಟಕ್ಕೇನೋ ಮೇಜು ಇದೆ ಆದರೆ ಕುಳಿತುಕೊಳ್ಳುವ ಆಸನ ಹೊರತುಪಡಿಸಿ ಮೇಜಿನ ಕೆಳಗಿನ ನೆಲದಲ್ಲಿ ಆಹಾರ-ಪದಾರ್ಥಗಳಿ ಚೆಲ್ಲಿವೆ, ಗಲೀಜಾಗಿದೆ-ಅಶುದ್ಧವಾಗಿದೆ. ಆದರೆ ನುಗ್ಗುವವರಿಗೆ ಅದರ ಬಗ್ಗೆ ಗಮನವಿರಲಿಲ್ಲ. ಸಾಮಾನ್ಯವಾಗಿ ಹಿಂದೆ ಊಟಕ್ಕಾಗಿ ಈ ಸ್ಥಿತಿ ಇರಲಿಲ್ಲ. ಇದಕ್ಕೆ ಕಾರಣ ತಡವಾಗಿ ನನಗೆ ತಿಳಿದುಬಂತು. ಪಂಕ್ತಿಭೇದ ಮಾಡಬಹುದು ಎಂಬುದನ್ನು ಶಂಕಿಸಿ  ತಾವು ನಿಮ್ನವರ್ಗದವರೆಂದುಕೊಂಡ ಕೆಲವುಜನ ಗುಂಪುಕಟ್ಟಿಕೊಂಡು ಮುನ್ನುಗ್ಗುತ್ತಿದ್ದರು, ಗುಂಪುಗಳೊಂದಷ್ಟು ನುಗ್ಗುವಾಗ ಎಲ್ಲರೂ ಗಲಿಬಿಲಿಗೊಂಡು ನುಗ್ಗುತ್ತಿದ್ದರು. ಊಟಕ್ಕೆ ಕುಳಿತ ಕೆಲವರಲ್ಲಿ ಸಂಪ್ರದಾಯಸ್ಥ ಶ್ರದ್ಧಾಳುಗಳು ಅಂಗಿ ತೆಗೆದು ಪಂಚೆ ಉಟ್ಟು ಕುಳಿತಿದ್ದರೆ ಕೆಲವರು ಸ್ನಾನವನ್ನೂ ಮಾಡಿಬಂದ ರೀತಿ ಇರಲಿಲ್ಲ-ಅವರ ಬೆವರಿನ ನಾತ ಅಷ್ಟು ದೂರದವರೆಗೂ ತುಂಬಿತ್ತು. ಅಲ್ಲಿ ನಡೆಯುತ್ತಿರುವುದು ಶುಭಕಾರ್ಯದಲ್ಲಿ ಅನ್ನದಾನ ಅಲ್ಲವೇ? ಅನ್ನದಾನವನ್ನು ಸ್ವೀಕರಿಸುವಾಗ ಕನಿಷ್ಠ ಸ್ನಾನವನ್ನೂ ಮಾಡಿ ಶುಚಿರ್ಭೂತರಾಗದೇ ಹಾಗೇ ಮೈತುಂಬ ಕೊಳೆಕೊಳೆ ಬಟ್ಟೆಯಲ್ಲಿ ಬಂದು ಕುಳಿತರೆ  ಪಕ್ಕದಲ್ಲಿ ಸ್ನಾನ-ಪೂಜೆಮಾಡಿ, ಅಂಗಿ ತೆಗೆದು ಪಂಚೆ ಧರಿಸಿ ಬಂದು ಕುಳಿತವರಿಗೆ ಹೇಗೆನಿಸಬೇಡ? ಹೋಗಲಿಬಿಡಿ, ನಡೆಯುವಾಗ ಉಗುಳಿಕೊಳ್ಳುತ್ತಲೇ ನಡೆಯುವ ಜನ ನಮ್ಮ ಸುತ್ತ ಅದೆಷ್ಟು ಕಾಣಸಿಗುವುದಿಲ್ಲ?

ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||

ನಾವು ವಾಸಿಸುವ ಈ ಭೂಮಿಗೂ ಒಂದು ಮಾರ್ಯಾದೆಯಿದೆ, ಆಕೆಯನ್ನು ಮಹಾವಿಷ್ಣುವಿನ ಪತ್ನಿ ಎಂದು ಪರಿಗಣಿಸಿದೆ ನಮ್ಮ ಸನಾತನ ಜೀವನಧರ್ಮ. ಬದುಕಿನ ಅನಿವಾರ್ಯತೆಗೆ ಕೆಲವು ಪ್ರದೇಶಗಳನ್ನು ನಾವು ಅತುಕ್ರಮಿಸಿಕೊಳ್ಳುವುದು, ಹೊಲಸುಮಾಡುವುದು ಅನಿವಾರ್ಯ, ಆದರೆ ಭೂಭಾಗದಲ್ಲಿ ಎಲ್ಲೆಂದರಲ್ಲಿ ಹೊಲಸುನಾರುವಂತೇ ಮಾಡಿದರೆ ಅದು ಜೀವನಕ್ಕೆ ಮಾರಕವಾಗುತ್ತದೆ; ವೈರಾಣುಗಳು ಹುಟ್ಟಿ ಹೊಸಹೊಸ ಕಾಯಿಲೆಗಳು ಸಮಾಜವನ್ನು ತಲ್ಲಣಿಸುತ್ತವೆ. ಈ ಕಾರಣದಿಂದ ಉಗುಳುಗುಪ್ಪೆಗಳನ್ನು ನಮ್ಮಲ್ಲಿ ಇಟ್ಟಿರುತ್ತಾರೆ-ಅಂಥಲ್ಲಿ ಮಾತ್ರ ಉಗುಳಬೇಕು. ನಮ್ಮಲ್ಲಿನ ಕೆಲವು ಅಹಿಂದದ ಮೂರ್ತಿಗಳು ಮಾತೆತ್ತಿದರೆ ಸಿಂಗಾಪೂರದ ಸುದ್ದಿ ಹೇಳುತ್ತಾರೆ-ಆದರೆ ಸಿಂಗಾಪೂರದಷ್ಟು ಶುಚಿತ್ವವನ್ನು ಕಾಪಾಡುತ್ತಾರೆಯೇ? ಅದರ ನೂರನೇ ಒಂದು ಭಾಗದಷ್ಟಾದರೂ ಕಾಪಾಡುತ್ತಾರೆಯೇ? ಶುಚಿತ್ವವನ್ನು ಅಶುಚಿತ್ವದಿಂದ ಬೇರ್ಪಡಿಸುವ ಸ್ವಭಾವವನ್ನೇ ಅರಿಯದ ಜನ ಮುಂದುವರಿದ ಜಗತ್ತು, ೨೨ನೇಶತಮಾನ ಎಂದುಬಿಟ್ಟರೆ ಸಾಕೇ? ಕೆಲವು ಜನರಲ್ಲಿ ಮಾಂಸಾಹಾರವನ್ನು ಒಂದೆಡೆ ಉದ್ದನೆಯ ರಾಶಿಹಾಕಿ, ಸುತ್ತ ಎಲ್ಲರೂ ಕುಳಿತು, ಸತ್ತ ಪ್ರಾಣಿಯನ್ನು ಮಾಂಸಾಹಾರೀ ಪ್ರಾಣಿಗಳು ಹರಿದು ಭಕ್ಷಿಸುವಂತೇ ಎಳೆದೆಳೆದು ತಿನ್ನುವುದು ಕಾಣುತ್ತದೆ-ಇದು ಭಾರತೀಯ ಪದ್ಧತಿಯೇ? ಅಲ್ಲವಲ್ಲಾ? ಕೆಲವರು ’ಹಂಚಿತಿನ್ನುವ ದೊಡ್ಡತನ’ ಎಂಬ ನೆಪದಲ್ಲಿ ಒಬ್ಬರ ಎಲೆಯನ್ನು ಇನ್ನೊಬ್ಬರ ಎಲೆಗೆ ತಾಗಿಸಿಕೊಂಡು ಕೂರುವುದು, ಒಬ್ಬರು ತಿಂದುಬಿಟ್ಟ ಕೇಕು ಮೊದಲಾದುವನ್ನು ತಿನ್ನುವುದು-ತಿನ್ನಿಸುವುದು ಇಂಥಾದ್ದೆಲ್ಲಾ ಕಾಣುತ್ತದೆ, ಇವನ್ನೆಲ್ಲಾ ಭಾರತೀಯ ಜೀವನಧರ್ಮ ಹೇಳುತ್ತದೆಯೇ? ಮಾನವ ಸಹಜವಾಗಿ ಜನ್ಮಾಂತರಗಳ ಕರ್ಮಬಂಧನಗಳಿಂದ ಕೆಲವರಿಗೆ ಇಲ್ಲದ ಸಾಂಕ್ರಾಮಿಕ ರೋಗಗಳು ಇದ್ದಿರಬಹುದೆಂಬ ಧೋರಣೆಯನ್ನು ಹೊಂದಿರುವ ಜನ, ಹಾಗೆ ಒಂದೇ ಎಡೆಯಿಂದ ಹಂಚಿತಿನ್ನುತ್ತೇವೆ ಎಂಬ ’ಅತಿಸೌಜನ್ಯ’ದ ಔಚಿತ್ಯವಾದರೂ ಎಂಥದ್ದು? 

ಗಂಡಸಿನ ಅಣತಿಯನ್ನು ಶಿರೋಧಾರ್ಯ ಎಂದು ಸ್ವೀಕರಿಸಿ ಸಾಲು ಸಾಲು ಗಂಡುಮಕ್ಕಳನ್ನು ಹೆತ್ತುಕೊಟ್ಟರೆ, ಹೆಣ್ಣುಭ್ರೂಣವನ್ನು ಸದ್ದಿಲ್ಲದಂತೇ ಹೊಸಕಿಹಾಕಿದರೆ, ನಪುಂಸಕ ಗಂಡನನ್ನು ವೀರ್ಯವಂತ ಪುರುಷೋತ್ತಮ ಎಂದು ಕೊಂಡಾಡಿದರೆ, ಮೊಬೈಲ್ ಫೋನು ಮುಟ್ಟದೇ ಇದ್ದರೆ, ಚೀನಾ ಮೂಲದ ಸಸ್ಯಾಹಾರೀ ವ್ಯಂಜನ ಚೌಮೀನ್ ತಿನ್ನದೇ ಇದ್ದರೆ, ಜೀನ್ಸ್ ಪ್ಯಾಂಟ್ ತೊಡದೇ ಹೋದರೆ, ಭಾಗವತರ ಭಾರತದಲ್ಲಿ ಹೆಣ್ಣುಮಕ್ಕಳಿಗೆ-ಹದಿಹರೆಯದ ತರುಣಿಯರಿಗೆ ಸಮಸ್ಯೆಯೇ ಇಲ್ಲ ಎಂದು ಭಾಗವತರು ಹೇಳಿದ್ದಾರೆ----ಎಂಬುದನ್ನು ಉಮಾಪತಿಯವರು ಉದ್ದರಿಸಿದ್ದಾರೆ. ’ಕಮಾನ್ ..ಕ್ ಮಿ’, ’ಕಿಸ್ ಮಿ’, ’ಬಾಂಡ್ ಗರ್ಲ್’, ’ಬೋಲ್ಡ್’, ’ನಾಟಿ ಗರ್ಲ್’ ಇಂಥದ್ದನ್ನೆಲ್ಲಾ ಎದೆಭಾಗದಲ್ಲಿ ಬರೆದ, ಚಿತ್ರವಿಚಿತ್ರ ಬಣ್ಣದ ಚಿತ್ತಾರಗಳುಳ್ಳ ವಿದೇಶೀ ತರಗತಿಯ ದಿರಿಸುಗಳು ದೇಹದ ಉಬ್ಬುತಗ್ಗುಗಳನ್ನು ವಿಶದವಾಗಿ ತೆರೆದುತೋರಿಸಿದರೆ ಶರೀರದಲ್ಲಿ ಕಸುವಿರುವ ತರುಣರನ್ನು ಕೆಲಕಾಲವಾದರೂ ಆ ಸಂಗ್ತಿ ಕುಣಿಸುತ್ತದೆ ಎಂಬುದು ಉಮಾಪತಿಯವರಿಗೆ ತಿಳಿಯುವುದಿಲ್ಲ ಪಾಪ! ಎಲ್ಲವನ್ನೂ ಬಿಟ್ಟೆನೆಂದ [ಯಾವ ಅರ್ಥದಲ್ಲೋ!] ಇಡೀ ಮಾಯ್ನಮಿಡಿ ಮಠದವರನ್ನೂ ವಾರಗಳ ಕಾಲ ಕುಣಿಸುವ ವಯಾಘ್ರ ಇದು ಎಂಬುದು ಅವರಿಗೆ ಅರಿವಾಗುವುದಿಲ್ಲ! ಅನೇಕ ತರುಣಿಯರು ದೇವಸ್ಥಾನಗಳಿಗೂ, ಮಠ-ಮಾನ್ಯಗಳಿಗೂ ಅಂಥದ್ದೇ ಜೀನ್ಸ್ ಮತ್ತು ಟೀ ಶರ್ಟ್ ತೊಟ್ಟು ಹೋಗುತ್ತಾರಲ್ಲಾ ಹಾಗೆ ಹೋಗುವ ಅವರ ಮನಸ್ಸಿನಲ್ಲಿ ಅವರಿಗೆ ಬೇಕಾದುದು ದೇವರ/ಸ್ವಾಮಿಗಳ ದರ್ಶನವೋ ಅಥವಾ ಅದು ಅವರ ಪ್ರದರ್ಶನವೋ? ಹಿಂದೂ ಜೀವನ ಪದ್ಧತಿಗೆ ಇರುವ ಡ್ರೆಸ್ ಕೋಡ್ ಕೊನೇಪಕ್ಷ ಮಠ-ಮಂದಿರಗಳಂಥಾ ಪ್ರದೇಶಗಳಲ್ಲಾದರೂ ಜಾರಿಯಲ್ಲಿರಬೇಕಲ್ಲಾ? ವಿದೇಶೀ ದಿರಿಸುಗಳಲ್ಲಿ ಬರಬೇಡಿ ಎಂದರೂ ಅದು ಅಹಿಂದದವರಿಗೆ ಮಾಡಿದ ಅವಮಾನವೇನೋ ಅಲ್ಲವೇ ಉಮಾಪತಿಗಳೇ? ಮಾಂಸಾಹಾರ ಮತ್ತು ಶಾಕಾಹಾರ ಎರಡನ್ನೂ ಅಕ್ಕ-ಪಕ್ಕದಲ್ಲಿ ತಯಾರಿಸುವ ಹೋಟೆಲಿನಲ್ಲಿ ಒಂದಕ್ಕೆ ಬಳಸಿದ ಸೌಟುಗಳನ್ನೇ ಇನ್ನೊಂದಕ್ಕೆ ಬಳಸುತ್ತಾರೆ ಎಂಬುದು ಬಹಳಜನರಿಗೆ ತಿಳಿದಿದೆ. ಮಾಂಸಾಹಾರವೆಂದರೆ ವಿಷವಲ್ಲ ನಿಜ-ಆದರೆ ಮಾಂಸಾಹಾರವನ್ನು ಜೀವನಪರ್ಯಂತ ತಿನ್ನದೇ ಇರುವುದೇ ಒಂದು ವ್ರತ; ಅದು ಅಹಿಂದದವರಿಗೆ ಅಪಥ್ಯ! ಮಾಂಸಾಹಾರ ಭುಂಜಿಸದೇ ಕೇವಲ ೪೫ ದಿನಗಳ ವ್ರತವನ್ನು ನಡೆಸುವ ಅಯ್ಯಪ್ಪ ಭಕ್ತರನ್ನು ಅವರು ಅಹಿಂದದವರೇ ಆದರೂ ಮಡಿ-ಗುರು-ಸ್ವಾಮಿ ಎಂಬ ಗೌರವದಿಂದ ಬೇರ್ಪಡಿಸುವ ಜನ ಜೀವನಪರ್ಯಂತ ವ್ರತದಲ್ಲಿ ಇರುವ ಜನರಿಗೆ ಯಾವ ಗೌರವ ಕೊಡುತ್ತಿದ್ದಾರೆ? ಹೇಳಲೇ-ಆವರನ್ನು ಮಾಂಸಾಹಾರಿಗಳಾಗುವಂತೇ ಕರೆನೀಡುತ್ತಿದ್ದಾರೆ-ಪ್ರೋತ್ಸಾಹಿಸಿ ಆರಂಭಿಸಲು ಸ್ಪಾನ್ಸರ್ ಶಿಪ್ ಸಹ ಘೋಷಿಸುತ್ತಾರೆ!    

"ಈ ದೇಶದ ಎಲ್ಲ ಅಸಮಾನತೆ ಮತ್ತು ಅನ್ಯಾಯದ ಮೂಲ ವಿಷವೃಕ್ಷ ಎನಿಸಿರುವ ಜಾತಿವ್ಯವಸ್ಥೆಯ ಬೇರುಗಳು ಭಾಗವತರ ಭಾರತದಲ್ಲಿ ಈಗಲೂ ಆಳ ಮತ್ತು ಸುಭದ್ರ"-ಎಂದು ಉಮಾಪತಿಯವರು ಅಪ್ಪಣೆಕೊಡಿಸಿದ್ದಾರೆ! ಮುಂದುವರಿಸಿದ ಅವರು, ಜಾತಿ ವ್ಯವಸ್ಥೆಯ ವಿರುದ್ಧ ದನಿಗಳಾದರೂ ಎದ್ದಿವೆ, ಸವಾಲನ್ನಾದರೂ ಎಸೆದಿವೆ ಎನ್ನುವಾಗ ಜಾತಿವ್ಯವಸ್ಥೆ ಯಾಕೆ ಉದ್ಭವವಾಯ್ತು ಎಂಬ ಬಗ್ಗೆ ಕಿಂಚಿತ್ತಾದರೂ ಚಿಂತಿಸಿದರೇ? ಉಮಾಪತಿಯವರ ಮಾರೀಪತ್ತಿನಲ್ಲಿ ಇರುವುದು ಜಾತೀಯತೆಯ ವಿರುದ್ಧದ ಸೋಗಿನಲ್ಲಿ ಕೇವಲ ಒಂದು ಜನಾಂಗದ ವಿರುದ್ಧ ಬುಸುಗುಟ್ಟುವ ಕಾಳಿಂಗ ಎಂಬುದು ಸಾಮಾನ್ಯ ಓದುಗನಿಗೂ ತಿಳಿಯುತ್ತದೆ; ಅದು ಆಗಾಗ ಹಾಗೆ ತಿಳಿಯುತ್ತಲೇ ಇದೆ."ಭಾಗವತರು ಮತ್ತು ಅವರು ಮುಟ್ಟಿಸಿಕೊಳ್ಳುವ ಕುಲಜರ ಅಂಗಳಗಳಿಗೆ ಈಗಲೂ ಕೆಳಜಾತಿಗಳವರಿಗೆ ಪ್ರವೇಶ ದುಸ್ತರವೇ.ಕೊಬ್ಬಿದ ಕುಲಜ ಹೋರಿಗಳಿಗೆ ಕೆಳಜಾತಿಯ ಹೆಣ್ಣುಮಕ್ಕಳು ಮೈ ಒಪ್ಪಿಸಿಕೊಳ್ಳದಿದ್ದರೆ ಮಾತ್ರವೇ ಖೈರ್ಲಂಜೆಗಳೂ, ಕಂಬಾಲಪಲ್ಲಿಗಳೂ ಭಾರತದಲ್ಲಿ ಜರುಗುತ್ತವೆ. ಇಲ್ಲವಾದರೆ ಅತ್ಯಾಚಾರಗಳ ಸೊಲ್ಲೇ ಇಲ್ಲ. ಬಿಟ್ಟಿ ಚಾಕರಿ ಮಾಡದೇ ಹೋದರೆ, ನ್ಯಾಯವಾದ ಕೂಲಿ ಬೇಡಿದರೆ ಮಾತ್ರವೇ ಸಾಮಾಜಿಕ ಬಹಿಷ್ಕಾರ ಹಾಕಿಯಾರು..ಕೈಗಳನ್ನೇ ಕಡಿದು ಹಾಕಿಯಾರು. ಇಟ್ಟದ್ದನ್ನು ತಿಂದು ಜೀತಮಾಡಿದರೆ, ತಲೆತಲಾಂತರಗಳಿಂದ ತೊತ್ತುಗಳಾಗಿಯೇ ಗೇದಿರುವ ನಮಗೂ ತುಂಡು ಭೂಮಿಯನ್ನು ಕೊಟ್ಟುಬಿಡಿ ಎಂದು ಕೇಳದೇ ಹೋದರೆ ಭಾರತದಲ್ಲಿ ಹಿಂಸೆ, ದೌರ್ಜನ್ಯ ನಡೆಯುವುದೇ ಇಲ್ಲ. ಭಾಗವತರು ಸರಿಯಾಗಿಯೇರ್ ಹೇಳಿದ್ದಾರೆ" ಎಂದು ಭಾಗವತರನ್ನು ಕುಟುಕಿದ ಉಮಾಪತಿಗಳಲ್ಲಿ ಒಂದು ಪ್ರಶ್ನೆ: ಟಾಟಾ ಬಿರ್ಲಾ ಗಳಂತಹ ಮೇಧಾವಿಗಳು, ಸ್ಥಿತಿವಂತರು ಬಹುದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ ಸರಿಯಷ್ಟೇ? ಶತಮಾನಗಳಿಂದ ಕೆಲವು ಕುಟುಂಬಗಳವರು ಅಂಥಾ ಕಂಪನಿಗಳಿಗೆ ಚಾಕರಿ ಮಾಡಿಕೊಡುತ್ತಿದ್ದಾರಲ್ಲಾ ಅವರಲ್ಲಿ ಯಾರಾದರೂ ನಮಗೂ ಅಂತಹ ಕಂಪನಿಗಳ ಆಸ್ತಿಯನ್ನು ತುಂಡುಮಾಡಿಕೊಡಿ ಎಂದು ಕೇಳಿದರೆ ಹೇಗೆ? ಯಾಕೆಂದರೆ ಕಂಪನಿಗಳಿಗೆ ಬರುವ ಆದಾಯಕ್ಕೂ ನೌಕರರಿಗೆ ಸಿಗುವ ಸಂಬಳಕ್ಕೂ ಹೋಲಿಸಲಾರದ ಆಕಾಶ-ಪಾತಾಳಗಳ ಅಂತರವಿದೆಯಲ್ಲಾ? ಹೇಗೆ ಆಗದೇ? ಇನ್ನು ಮೈ ಒಪ್ಪಿಸಿಕೊಳ್ಳುವುದು ಬಿಡುವುದು ಹೆಣ್ಣುಮಕ್ಕಳಿಗೆ ಅವರ ಐಚ್ಛಿಕ ವಿಷಯವಾಗಿದೆ, ನಡತೆಯಲ್ಲಿ ಕಟ್ಟುನಿಟ್ಟಿನಿಂದಿರುವ ಮಹಿಳೆಯನ್ನು ತನ್ನ ತೀಟೆ ತೀರಿಸುವಂತೇ ಮಾತನಾಡಿಸಲು ಯಾವ ಪರಪುರುಷನೂ ಹಿಂಜರಿಯುತ್ತಾನೆ, ಅಂಥಾ ಸನ್ನಿವೇಶಗಳಿಗೆ ಆಸ್ಪದ ಸಿಗದಂತೇ ನಡತೆಯುಳ್ಳ ಸ್ತ್ರೀಯರು ನೋಡಿಕೊಳ್ಳುತ್ತಾರೆ, ಮೇಲಾಗಿ ಮೇಲೊಬ್ಬ ಕಾವಲುಗಾರ-ಗೊಂಬೇ ಆಡ್ಸೋನು ಕುಳಿತಿದ್ದನ್ನು ಒಪ್ಪುವ ಬಲಪಂಥೀಯರಾದವರಿಗೆ ಆ ಸಹಾಯ ಎಂದಿಗೂ ದೊರೆಯುತ್ತದೆ ಉಮಾಪತಿಗಳೇ-ಸಂದೇಹಿಸಿದವರಿಗೆ ಅದು ಅಲಭ್ಯವಾಗಿಬಿಡುತ್ತದೆ-ಅದಕ್ಕೇ ತಮ್ಮಂತಹ ಅಹಿಂದ ಮೂರ್ತಿಗಳು ಹುಟ್ಟಿಕೊಂಡುಬಿಡುತ್ತಾರೆ.

ಶಂಭೂಕನನ್ನು ಕೊಂದನೆಂದೂ ಸೀತೆಯನ್ನು ಕಾಡಿಗಟ್ಟಿದನೆಂದೂ ಶ್ರೀರಾಮನನ್ನೂ, ಒಲಿದುಬಂದ ಹೆಣ್ಣು ಶೂರ್ಪನಖಿಯನ್ನು ಒಲ್ಲೆನೆಂದು ಕಳಿಸದೇ ಕಿವಿ-ಮೂಗುಗಳನ್ನು ಕತ್ತರಿಸಿ ಸಾಂಕೇತಿಕ ಶೀಲಹರಣಮಾಡಿದಾತ ಲಕ್ಷ್ಮಣನೆಂದೂ,ಕೆಳಜಾತಿಯ ಏಕಲವ್ಯನಿಗೆ ಧನುರ್ವಿದ್ಯೆ ಹೇಳಿಕೊಡದೇ ಇದ್ದರೂ ಹೆಬ್ಬೆರಳನ್ನು ದಾನವಾಗಿ ಪಡೆದ ಕ್ರೂರಿ ದ್ರೋಣಾಚಾರ್ಯನೆಂದೂ ಸಾರಿದ ಉಮಾಪತಿಗಳು ಭಾಗವತರ ಭಾರತದ ಪರಂಪರೆಯಲ್ಲಿ ಇಂಥಾ ಮಾನವೀಯತೆಯ ಜ್ವಲಂತ ನಿದರ್ಶನಗಳು ಸಾಲುಗಟ್ಟಿ ನಿಂತಿವೆಯೆಂದೂ ಅತ್ಯಂತ ಕಳಕಳಿಯುಳ್ಳ ಅಹಿಂದ ಮೂರ್ತಿ ಸ್ಪಿನ್ನರ್ ಆಗಿ ವಿಕೆಟ್ಟುಗಳನ್ನು ಕೆಡವಲು ಪ್ರಯತ್ನಿಸಿದ್ದಾರೆ. ಪರಂಪರೆಯ ಕುರಿತಾದ ಅಸಮರ್ಪಕ ಹೊತ್ತಗೆಗಳನ್ನು ಓದಿದ ಅಲ್ಪರ ಮನಸ್ಸು, ಅರೆತುಂಬಿದ ಕೊಡದಂತೇ ತುಳುಕುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಅವರು ಹೇಳಿದ ಪ್ರತಿಯೊಂದೂ ಘಟನೆಗಳ ಹಿಂದೆ ಅದಕ್ಕೆ ಹಿನ್ನೆಲೆ ಕಾರಣಗಳು ಸಾಕಷ್ಟಿವೆ-ಮೇಲ್ನೋಟಕ್ಕೆ ಅವು ತಪ್ಪ್ರ್ಏ ಎಂದು ಭಾಸವಾದರೂ ಅವಾವುವೂ ತಪ್ಪಲ್ಲ ಎಂಬುದನ್ನು ಆಧಾರ ಸಹಿತವಾಗಿ ಸಮಯಬಂದಾಗ ನಿರೂಪಿಸಬಹುದೆಂದು ಮಾತ್ರ ಉಮಾಪತಿಗಳಿಗೆ ಹೇಳಬಯಸುತ್ತೇನೆ.

ಬ್ರಹ್ಮಚರ್ಯ ಎಂಬುದು ಕೇವಲ ಶಾರೀರಿಕ ಕ್ರಿಯೆಯಲ್ಲ. ಕಾಯಾ ವಾಚಾ ಮನಸಾ [ತ್ರಿಕರಣ ಪೂರ್ವಕ] ಮೈಥುನವನ್ನು ಬಯಸದೇ ಇರುವುದು ಬ್ರಹ್ಮಚರ್ಯವಾಗುತ್ತದೆ. ಜಮದಗ್ನಿಯ ಮಡದಿ ರೇಣುಕೆ ಕೊಳದ ನೀರನ್ನು ತರಲು ತೆರಳಿದಾಗ, ಅತ್ಯಂತ ಸ್ಫುರದ್ರೂಪಿ ಗಂಧರ್ವನೊಬ್ಬ ಅಪ್ಸರೆಯರೊಂದಿಗೆ ಜಲಕ್ರೀಡೆಯಾಡುತ್ತಿರುವ ದೃಶ್ಯಾವಳಿಯನ್ನು ಕಂಡು ಮೈಮರೆತು ತುಸುಹೊತ್ತು ಕಳೆಯುತ್ತಾ, ಆ ಗಂಧರ್ವನೊಂದಿಗೆ ಮೈಥುನದ ಸುಖವನ್ನು, ರತಿಸುಖವನ್ನು ಅನುಭವಿಸಿದರೆ ಎಂಬ ಭಾವಗಳನ್ನು ಮನಸ್ಸಿನತುಂಬ ತುಂಬಿಕೊಳ್ಳುತ್ತಾಳೆ. ಪತನಗೊಂಡ ಪಾತೀವ್ರತ್ಯದ ಪರಿಣಾಮವಾಗಿ ಆ ಕ್ಷಣಕ್ಕೆ ಮರಳಿನ ಕೊಡ ತಯಾರಿಸಲು ಸಾಧ್ಯವಾಗಲಿಲ್ಲ, ಹಾವು ಹರದಾರಿ ದೂರ ಸರಿದುಹೋದದ್ದರಿಂದ ಹೊರುವ ತೆಲೆಗೆ ಸಿಂಬಿಯಾಗಿ ಸಿಗಲಿಲ್ಲ. ಇದು ಮತ್ತದೇ ನೈತಿಕತೆಯ ಪ್ರಶ್ನೆ. ಮುನಿ ಜಮದಗ್ನಿ ತನ್ನ ನಿತ್ಯ ನೈಮಿತ್ತಿಕ ಪೂಜಾಕಾರ್ಯಗಳಿಗಾಗಿ ಮಡಿಯ ನೀರು ಸಂಗ್ರಹಿಸಿ ತರಲು ಆಜ್ಞಾಪಿಸಿದ್ದಾನೆ-ಆಕೆ ತೆರಳಿದ್ದಾಳೆ. ಹಾಗೆ ಹೋದವಳು ಪತಿಯ ವ್ರತವನ್ನು ಮರೆತು ಪರಪುರುಷನಲ್ಲಿ ಮನವನ್ನು ಚಣಕಾಲ ಇರಿಸಿದ್ದಾಳೆ-ತನ್ಮೂಲಕ ಪಾತಿವ್ರತ್ಯಕ್ಕೆ ಭಂಗಬಂದಿದೆ. ತಡವಾಗಿ ಬರಿಗೈಲಿ ಬಂದ ಮಡದಿಯ ವೃತ್ತಾಂತಗಳು ಜಮದಗ್ನಿಯ ದಿವ್ಯದೃಷ್ಟಿಗೆ ಗೋಚರವಾಗಿವೆ-ಜಮದಗ್ನಿ ಆಕೆ[ರೇಣುಕೆ]ಯ ರುಂಡವನ್ನು ಕಡಿದು ಚೆಲ್ಲುವಂತೇ ಮಕ್ಕಳನ್ನು ಕೇಳಿದ್ದಾನೆ. ನೋಡಿ, ನೈತಿಕತೆಗೆ ಅತ್ಯಂತ ಮಹತ್ವವನ್ನು ನಮ್ಮ ಪುರಾತನರು ನೀಡಿದ್ದರು. ಇವತ್ತು ನಮ್ಮನ್ನಾಳುವ ಆಳರಸರು ಶಾಸನಸಭೆಯಲ್ಲಿ ಕುಳಿತು ನೀಲಿ ಚಿತ್ರಗಳನ್ನು  ನೋಡಿ ಆನಂದಿಸುತ್ತಾರೆ; ಅನೇಕ ಯುವಕ ಯುವತಿಯರು ನೀಲಿಚಿತ್ರಗಳಿಂದ ಪ್ರೇರಿತರಾಗುತ್ತಾರೆ; ಉದ್ದೀಪಿತರಾಗುತ್ತಾರೆ. ಆದರೆ ಇವರಿಗೆಲ್ಲಾ ಯಾವುದಾದರೂ ಶಿಕ್ಷೆ ಇದೆಯೇ? ಇಲ್ಲ. ಹೊತ್ತು-ಹೆತ್ತು ಬೆಳೆಸಿದ ಅಪ್ಪ-ಅಮ್ಮನನ್ನು ಧಿಕ್ಕರಿಸಿ ಯಾವನೋ ಹುಡುಗನೊಟ್ಟಿಗೆ ಓಡಿಹೋಗುವ ಮಗಳು ಆತನ ತೀಟೆ ತೀರದ ನಂತರ ಬಸುರಿಯಾಗಿ ತವರಿಗೆ ಬರುತ್ತಾಳೆ, ಬಳಸಿ ಎಸೆದ ಬಾಡಿದ ಹೂವಿನಂತಾಗುತ್ತಾಳೆ- ಇದು ಸರಿಯೆಂದೇ ನಿಮ್ಮ ವಾದವೇ? ಹರೆಯದ ಹುಡುಗ-ಹುಡುಗಿಯರ ಪ್ರೀತಿ ಕೇವಲ ಬಾಹ್ಯಾಕರ್ಷಣೆಯದ್ದು ಎಂದರೆ ಅದು ನಿಮಗೆ ಅಸಹ್ಯವಾಗಿ ಕಾಣುತ್ತದಲ್ಲವೇ? ಒಮ್ಮೆ ಅಪ್ಪ-ಅಮ್ಮನ ಜಾಗದಲ್ಲಿ ನಿಂತು ನೋಡಿ ಉಮಾಪತಿಗಳೇ.

ಅಕಾಲದಲ್ಲಿ ಸ್ತ್ರೀಯರು ವಾಹನಗಳಲ್ಲಿ ಏಕಾಂಗಿಯಾಗಿ ಸಂಚರಿಸುವುದು ಸರಿಯಲ್ಲ, ಒಂದೊಮ್ಮೆ ಹಾಗೆ ಸಂಚರಿಸಿದರೂ ಇರುವ ಸಾಧಕ-ಬಾಧಕಗಳನ್ನು ಅರಿತೇ ಹೆಜ್ಜೆಯಿಡಬೇಕಾಗುತ್ತದೆ. ಇಂದು ದಿನಕ್ಕೊಬ್ಬ ’ಪ್ರಿಯತಮ’ರೊಟ್ಟಿಗೆ, ಸಿಕ್ಕಿದಲ್ಲಿಗೆ ತೆರಳುವ ’ಪ್ರಿಯತಮೆ’ಯರೂ ಇದ್ದಾರೆ. ಅಂಗಿಬದಲಿಸಿದ ಹಾಗೇ ನಿತ್ಯವೂ ಹೊಸಹೊಸ ಶೋಧ ಅವರ ವೈಖರಿ! ಕಂಡಲ್ಲಿ ಅಂಡಲೆಯುವುದು, ಸಿಕ್ಕಿದ್ದನ್ನು ತಿಂದು-ಕುಡಿದು ಮೈಮರೆತು ಮಜಾ ಉಡಾಯಿಸುವುದು ಅವರ ಧರ್ಮವಾಗಿದೆ! ಬಾರುಗಳಲ್ಲಿ ಸರಿರಾತ್ರಿಯವರೆಗೂ ಇರುತ್ತಾರೆ, ಅನಧಿಕೃತ ಗುಪ್ತ ಪ್ರದೇಶಗಳಲ್ಲಿ ರೇವು ಪಾರ್ಟಿಗಳಲ್ಲಿ ಮಹಿಳೆಯರು ತೊಡಗುತ್ತಾರೆ, ಯುವಕರೊಂದಿಗೆ ಕುಣಿದು ಕುಪ್ಪಳಿಸುತ್ತಾ ಕೊನೆಗೊಮ್ಮೆ ಎಲ್ಲಾ ನಡೆದುಹೋಗುತ್ತದೆ! ಹೆಣ್ಣು ಭೌತಿಕವಾಗಿ ಸ್ವೀಕರಿಸುವ ಸ್ವಭಾವದವಳು, ಗಂಡಿನದು ದುಂಬಿಯಂತೇ ಬೀರುವ ಸ್ವಭಾವ. ನೈಸರ್ಗಿಕವಾಗಿ ಹೆಣ್ಣಿಗೆ ಅದೇ ವಯಸ್ಸಿನ ಗಂಡಿಗಿಂತಾ ಬುದ್ಧಿ ಹೆಚ್ಚಿರುತ್ತದೆ; ಆದರೆ ನೆಶೆಯಲ್ಲಿ ವಿವೇಚನೆ ಕಮ್ಮಿಯಾಗುತ್ತದೆ. ಗಂಡಿನ ವೀರ್ಯಾಣುಗಳನ್ನು ತುಂಬಿಕೊಳ್ಳುವ ಅವಳಲ್ಲಿ ಗರ್ಭಾಂಕುರ ಆಗದಂತೇ ಪ್ರತಿಬಂಧಕಗಳನ್ನು ಉಪಯೋಗಿಸಿದ್ದರೂ ಭಾವನೆಗಳು ಉದ್ಭಸುತ್ತವೆ. ಭಾವನಾತ್ಮಕವಾಗಿ ಆಕೆ ಭೋಗಿಸಿದ ಪುರುಷನಲ್ಲಿ ಆಸಕ್ತಳಾಗುತ್ತಾಳೆ. ಮತ್ತು ಹಲವು ಸಂಗಾತಿಗಳನ್ನು ಕೆಲಕೆಲವು ದಿನಗಳ ಮಟ್ಟಿಗೆ ಇಟ್ಟುಕೊಂಡು ಬದಲಾಯಿಸುತ್ತಾ ನಡೆಯುವಾಗ ಮಾರಕ ರೋಗರುಜಿನಗಳು ಬರಲು ಸಂಪೂರ್ಣ ಸಾಧ್ಯತೆಗಳಿವೆ. ಹೀಗಾಗಿ "ಸ್ತ್ರೀ ಅಬಲೆ" ಎಂದೇ ಭಾರತೀಯರು ಘೋಷಿಸಿದರು, ಅವಳ ಸುರಕ್ಷತೆಗಾಗಿ ಹಲವು ಮಾರ್ಗಗಳನ್ನು ತಿಳಿಸಿದರು. ಅನೇಕ ಅಹಿಂದ ಮೂರ್ತಿಗಳು ಅದನ್ನೇ ತಪ್ಪಾಗಿ ತಿಳಿದಿದ್ದಾರೆ.   

ಇನ್ನು ರಾಮನ ವಿಷಯಕ್ಕೆ ಬರೋಣ. ’ಬುದ್ಧಿಜೀವಿಗಳು’ ಎಂದು ತಾವೇ ಪರಸ್ಪರ ಬೋರ್ಡು ಹಾಕಿಕೊಂಡ ಎಡಪಂಥೀಯರಿಗೆ ಶ್ರೀರಾಮ ಪರಮವೈರಿ. ರಾಮನ ಆದರ್ಶಗಳು ಅವರಿಗೆ ಲೆಕ್ಕಕ್ಕೇ ಇಲ್ಲ. ರಾಜಕುವರನಾಗಿ ಆತ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿದ್ದು, ವನವಾಸದಲ್ಲಿ ಅನುಭವಿಸಿದ ಕಷ್ಟಗಳು, ತನ್ನದಲ್ಲದ್ದಕ್ಕೆ ಕಯ್ಯೊಡ್ಡದ ಅಥವಾ ಬಯಸದ ಆತನ ಸುಗುಣ, ಕಲ್ಲಾಗಿದ್ದ ಅಹಲ್ಯೆಗೆ ಮರುಜೀವಿತ ನೀಡಿದ ದಿವ್ಯಶಕ್ತಿ, ದುಷ್ಟಶಕ್ತಿಗಳ ದಮನಕ್ಕೆ ಆತನ ಕ್ರಮಗಳು, ಮಾನವರಲ್ಲದ ವಾನರರೊಡನೆ ಆತನ ಸಖ್ಯ ಮತ್ತು ಅವರಲ್ಲಿಯೂ ಆತ ತೋರಿದ ಸಂಯಮ ಮತ್ತು ಸಹಜ ನಿಷ್ಕಲ್ಮಷ ಪ್ರೀತಿ, ಯಕ್ಕಶ್ಚಿತವೆನಿಸುವ ಅಳಿಲಿನ ಸೇವೆಯನ್ನೂ ಗಣೆನೆಗೆ ತೆಗೆದುಕೊಂಡಿದ್ದು, ನೀತಿ ತಪ್ಪಿದ ವಾಲಿಯನ್ನು ನಿಗ್ರಹಿಸಿ-ವಧಿಸಿದ್ದು, ಶರಣ ವಿಭೀಷಣನಿಗೆ ಲಂಕೆಯನ್ನು ಕೊಟ್ಟು ಪಟ್ಟಾಭಿಷಿಕ್ತನನ್ನಾಗಿಸಿದ್ದು ಇಂತಹ ಹಲವು ಸಾವಿರ ಘಟನೆಗಳು ಅವರಿಗೆ ಕಾಣಲಾರವು. ಸೀತೆಯನ್ನು ಕಾಡಿಗೆ ಕಳಿಸಿದ ಎಂಬ ಒಂದೇ ಅಂಶವನ್ನು ಹಿಡಿದು ಜರಿಯುವುದು ಎಂಥಾ ಖೂಳ ಬುದ್ಧಿ. ಅಷ್ಟಕ್ಕೂ ರಾಮಾಯಣದ ಕರ್ತೃವಾದ ವಾಲ್ಮೀಕಿಮುನಿಯ ಆಶ್ರಮ ಹತ್ತಿರದಲ್ಲಿದ್ದು ಬಸುರಿ ಸೀತೆಯನ್ನು  ಸಲಹುವಂತಾದದ್ದು ರಾಮನ ಪರೋಕ್ಷ ಜೀವಕಾರುಣ್ಯವೇ ಸರಿ.  ಇಂತಹ ರಾಮನಿಗೆ ಆತ ಹುಟ್ಟಿದ ನಾಡಿನಲ್ಲಿ ಆತ ಜನಿಸಿದ ಅಯೋಧ್ಯೆಯಲ್ಲಿ ದೇಗುಲವಿಲ್ಲ! ತ್ರೇತಾಯುಗ ದ್ವಾಪರಯುಗಗಳು ಮುಗಿದಾನಂತರ ಬಂದ ಮ್ಲೇಚ್ಛರ ಅಹವಾಲಿಗೆ ಮನಗೊಟ್ಟು, ಇಂದು ದೇಶವಾಸಿ ೭೫% ಇರುವ ಹಿಂದೂಗಳ ಆಶಯಗಳನ್ನು ಬಲಿಹಾಕಿದ್ದಾರೆ. ಸನಾತನಿಗಳ ಆರಾಧ್ಯದೈವವಾದ ರಾಮನಿಗೆ ಆತ ನಡೆದಾಡಿದ, ರಾಜ್ಯಭಾರ ನಡೆಸಿದ ದೇಶದಲ್ಲೇ, ಅದೂ ಆತನದ್ದೇ ಆದ ಅಯೋಧ್ಯೆಯಲ್ಲೇ ಇದ್ದ ದೇಗುಲವನ್ನು ಒಬ್ಬ ಬಾಬರಿ ಅಂದು ಕೆಡವಿದ. ಇಂದು ದೇಶವ್ಯಾಪಿ ೨೫% ರಷ್ಟು ಬಾಬರಿಗಳೇ ತುಂಬಿದ್ದಾರೆ. ತುಂಬಿರುವ ೨೫% ಬಾಬರಿಗಳಿಗೆ ಹೊಲಸು ತಿನ್ನುವ ಬ್ರಷ್ಟ ರಾಜಕಾರಣಿಗಳು ವೋಟಿಗಾಗಿ ಹಪಹಪಿಸುತ್ತ,  ಸಹಾಯ ನೀಡುವ ನೆಪದಲ್ಲಿ ನರಸತ್ತವರಾಗಿದ್ದಾರೆ, ಹೀಗಾಗಿ ಹಿಂದೂಗಳ ಶತಶತಮಾನಗಳ ಕೂಗಿಗೆ ಬೆಲೆಯೇ ಇಲ್ಲ. ಇದೇ ಆಟವನ್ನು ಹಿಂದೂ ಸನಾತನಿಗಳು ಪಾಕಿಸ್ತಾನದಲ್ಲಿ ನಡೆಸಲು ಸಾಧ್ಯವೇ? ಅಲ್ಲಿನ ಮಸೀದಿಯನ್ನು ಕೆಡವಿ ಶತಮಾನಗಳ ವರೆಗೆ ಬೀಗ ಜಡಿದು ತಮ್ಮ ಜಾಗ ಎನ್ನಲು ಅಲ್ಲಿನ ಪಾತಕಿಗಳು ಅವಕಾಶ ನೀಡುವರೇ? ನಾನು ಹೇಳುತ್ತಿದ್ದೇನೆ ನನ್ನ ದೇಶದ ಮೂಲನಿವಾಸಿಗಳಿಗೆ ದಮ್ಮಿಲ್ಲ. ದಮ್ಮಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವಾಗಲಿ, ನಿಮ್ಮತನವನ್ನು ಉಳಿಸಿಕೊಳ್ಳಲೂ ಗೊತ್ತಾಗದ ನಿಮ್ಮಿಂದ ದೇಶದಲ್ಲಿ ಸನಾತನಿಗಳ ರಕ್ಷಣೆ ಸಾಧ್ಯವೇ? ಬನ್ನಿ ಇನ್ನಾದರೂ, ಈಗಲಾದರೂ ನಮ್ಮತನದ ಉಳಿವಿಗೆ ಹೋರಾಡೋಣ, ಇದು ಸ್ವಾರ್ಥಿಗಳಾದ ಆಳರಸರಿಂದ ಆಗುವ ಕೆಲಸವಲ್ಲ, ಅಹಿಂದ ಮೂರ್ತಿಗಳು ಇದನ್ನು ವಿರೋಧಿಸುತ್ತವೆ! ಆದರೆ ಎಂಥಾ ಪ್ರಬಲ ವಿರೋಧವಿದ್ದರೂ ಈ ದೇಶಕ್ಕೆ ಅದರದ್ದೇ ಆದ ಮೂಲ ನೆಲೆಯೊಂದಿದೆ-ಅದು ಸನಾತನತೆ, ಅದು ಎರವಲು ಪಡೆದ ಬುತ್ತಿಯಲ್ಲ, ಯುಗಯುಗಗಳಿಂದಲೂ ಭಾರತವ್ಯಾಪಿ ಇರುವ ಜಗತ್ತಿನಲ್ಲೇ ಅತ್ಯುತ್ಕೃಷ್ಟವಾದ ಜೀವನಧರ್ಮ ಸನಾತನ ಧರ್ಮ. ದುಷ್ಟ ರಾಜಕಾರಣಿಗಳೇ, ನಾವು ಯಾರದೋ ನೆಲವನ್ನು ನಿಮ್ಮಲ್ಲಿ ಕೇಳುತ್ತಿಲ್ಲ, ರಾಮನಿಗಾಗಿ ನೀವು ಇನ್ನಾವುದೋ ಜಾಗದ ಭಿಕ್ಷೆಹಾಕಬೇಕಿಲ್ಲ-ನಮಗೆ ಬೇಕಿರುವುದು ನಮ್ಮ ಮನೋಭೂಮಿಕೆಯಲ್ಲಿ ರಾಮ ಹುಟ್ಟಿದ ಸ್ಥಳವೆಂದು ಪರಿಗಣಿತವಾದ, ಉತ್ಖನನ ಸಮಯದಲ್ಲಿಯೂ ಹಲವಾರು ದಾಖಲೆಗಳು, ವಿಗ್ರಹಗಳು ಸಿಕ್ಕು ಸಾಬೀತಾದ ರಾಮಜನ್ಮಭೂಮಿ, ಅದನ್ನು ಸನಾತನಿಗಳಿಗೆ ಬಿಟ್ಟುಕೊಡಿ, ಅದಕ್ಕಾಗಿ ಕೋರ್ಟು-ಪಂಚಾಯತಿ ಬೇಕಾಗಿಲ್ಲ, ಯಾಕೆಂದರೆ ಅದು ಸನಾತನಿಗಳ ಜನ್ಮಸಿದ್ಧ ಹಕ್ಕು, ಅದು ಈ ದೇಶದ ಮೂಲನಿವಾಸಿಗಳ ಆಸ್ತಿ. ಯಾವ ವಲಸಿಗರು ಈ ನೆಲದ ಮೂಲನಿವಾಸಿಗಳ ಜೀವನಸೂತ್ರಗಳನ್ನೂ ನೀತಿಯನ್ನೂ ವಿರೋಧಿಸುತ್ತಾರೋ ಯಾವ ವಲಸಿಗರು, ಪರಿವರ್ತಿತರು ಸನಾತನಿಗಳನ್ನು ಹಿಂಸಿಸುತ್ತಾರೋ ಅಂಥಾ ವಲಸಿಗರನ್ನೂ ಪರಿವರ್ತಿತರನ್ನೂ ದೇಶಬ್ರಷ್ಟರನ್ನಾಗಿಸುವವರೆಗೆ ನೆಮ್ಮದಿಯಿಲ್ಲ, ಸುಖವಿಲ್ಲ. ಒಂದೇ ಅವರ ಬೆಳೆಯುತ್ತಿರುವ ಬಾಲ ಕತ್ತರಿಸಿ ಬಾಯಿಗೆ ಬೀಗ ಜಡಿದು ಬದುಕುವಂತೇ ಮಾಡಬೇಕು ಇಲ್ಲಾ ಅವರು ದೇಶವನ್ನೇ ತೊರೆಯುವಂತೇ ಮಾಡಬೇಕು. ಯಾವ ಮನುಷ್ಯ ಇಲ್ಲಿನ ಮೂಲ ಜೀವನಧರ್ಮದ ವಿರೋಧಿಯೋ ಆತ ದೇಶವಿರೋಧಿಯೂ ಹೌದು; ಆತ ಬೇಹುಗಾರನೂ ಹೌದು, ಆತ ಪರಮನೀಚನೋ ಹೌದು; ಮಿತ್ರರೇ, ಕರೆಕೊಡುತ್ತಿದ್ದೇನೆ: ದಮ್ಮಿದ್ದರೆ ಬನ್ನಿ, ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಿರಲಿ, ನಮಸ್ಕಾರ.      

Wednesday, January 2, 2013

ಜಗದ ಮಾಯದಾಟಗಾರ

ಚಿತ್ರ ಋಣ : Ta Prohm Temple, Cambodia
Photograph by Peter Nijenhuis , www.InterestingPlac.es

ಜಗದ ಮಾಯದಾಟಗಾರ
[ಸನ್ಮಿತ್ರರೇ, ನಿಸರ್ಗದ ಕೌತುಕವನ್ನು ಬಣ್ಣಿಸುವುದು ಕಬ್ಬಿಗನ ಕನಸು. ಸದಾ ಹಲವಾರು ಸಾಂಸಾರಿಕ ವಿಷಯಗಳೇ ಎಡತಾಕಿರುವಾಗ ಅವುಗಳನ್ನು ಬಿಟ್ಟು ಹೊರಜಗತ್ತನ್ನು ಬೆರಗುಗಣ್ಣುಗಳಿಂದ  ಕಾಣುವ ಮನೋವೃತ್ತಿಗೆ ಹೂತ ಹುಣಿಸೇ ಮರವೂ ಕವನಕ್ಕೆ ವಿಷಯವಾದೀತು ಎಂದು ಬೇಂದ್ರೆ ಹೇಳಿದ್ದಾರೆ; ಅದನ್ನೇ ಕವನಿಸಿದ್ದಾರೆ. ಕಾಂಬೋಡಿಯಾದ/ ಈ ಜಗತ್ತಿನ ಅತೀ ಪುರಾತನ ಬೃಹದ್ದೇಗುಲವನ್ನು ಕಾಣುವಾಗ ಮನಸ್ಸಿಗೆ ಅಂಥದ್ದೇ ಭಾವ, ಆ ಭಾವಗಳ ಮಜಲಿನಲ್ಲಿ ಹುಟ್ಟಿದ್ದು ಈ ಕವನ, ಒಪ್ಪಿಸಿಕೊಂಡು ಓದುವ  ನಿಮ್ಮೆಲ್ಲರಿಗೂ  ಅನಂತ ಮುಂಗಡ ಧನ್ಯವಾದಗಳು  :   ]

ಮಗುವದೊಂದು ಆಟಕೆಳಸಿ ಬುಗುರಿಯನ್ನು ಚಲಿಸಿತು
ನಿಗದಿಗೊಂಡ ಸಮಯವಿಲ್ಲ ಸೊಗೆದೆಳೆಯುತ ನಲಿಯಿತು |
ನೆಗೆದು ನೆಗೆದು ಹಾರಿ ಕುಣಿದು ಹಗುರಗೊಂಡ ಸೊಬಗಲೂ
ಮುಗುದಮನಕೆ ಬೇಡವಾಯ್ತು ಬುಗುರಿಯಾಟ ನಲಿವಲೂ !

ಯುಗದ ಧರ್ಮ ಬಗೆಯ ಕರ್ಮ ಬಂಧಗಳಲಿ ಸಿಲುಕುತ
ಹೆಗಲಮೇಲೆ ಭಾರಹೊತ್ತು ಮುಗಿಯದಂತೆ ನಡೆಯುತ |
ಚಿಗರೆಕಂಡ ಸೀತೆ ತೆರದಿ ಹಲವು ಪಡೆವ ಹಂಬಲ
ಚಿಗಿತ ವಿಷಯಲೋಲುಪತೆಯು ನಿಗಮ ದುಃಖಕೆ ಬೆಂಬಲ !  

ಸೊಗದ ಮಾಯದಾಟಗಾರ ದಾಳಗಳನು ಬೀಸುವ
ಮೊಗವ ತೋರ ಸನಿಹಬಾರ ರೂಪದಲ್ಲಿ ಇರನವ |
ಯುಗಯುಗದಲು ಬರುವೆನೆಂದ ಗೀತೆಯಲ್ಲಿ ಮಾಧವ
ನೊಗವನೆಳೆವ ನಮಗದೆಲ್ಲಿ ಎಂದು ಕಾಂಬೆ ಕೇಶವ ?

ಸಗರಪುತ್ರರಿಂಗೆ ನಾಕ ಕರುಣಿಸಲ್ಕೆ ದೇಶದಿ
ಮಿಗಿಲುಗೊಂಡು ತುಂಬಿಹರಿದಳ್ ದೇವಗಂಗೆ ಕೋಶದಿ |
ಒಗೆದು ಬೆಳಕ ಚೆಲ್ಲಿ ಜೀವಕೋಟಿಗಳನು ಸಲಹುವ
ಮುಗಿದು ಕಯ್ಯ ಕಟ್ಟಿದರಸ ಭಾನುಗೊಂದು ಭವನವ ||

ಜಗದ ದೇವ ಯುಗದ ದೈವ ಬಗೆವುದೆಲ್ಲ ತಿಳಿಯದು
ನಗದು ರೂಪ ಬಿಗಿಯ ಸಡಿಲಿಸುತ್ತಲೊಮ್ಮೆ ನಗುವುದು |
ಸಿಗುವುದಿಲ್ಲ ನಮ್ಮ ಕಣ್ಗೆ ನಮ್ಮೊಳಗವಿತಿದ್ದರೂ
ಸಿಗದ ಸೂತ್ರ ಹಿಡಿದು ಜಗವ ಕುಣಿಸಿ ನಡೆಸುತಿರುವುದು ||