ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, May 25, 2010

ವಿಧಿಲಿಖಿತ

[ಚಿತ್ರ ಋಣ : ಫೋಟೋ ಸರ್ಚ್.ಕಾಂ ]

ತಮಗೆಲ್ಲ ತಿಳಿದಂತೆ ಈ ಜೀವ ಜಗತ್ತು ಪುನರ್ಜನ್ಮದಿಂದಾವೃತವಾದುದು. ಇತ್ತೀಚಿನ ಅನೇಕ ವೈಜ್ಞಾನಿಕ ಸಂಶೋಧನೆಗಳೂ ಕೂಡ ಇದನ್ನು ಒಪ್ಪುವ ಹಂತಕ್ಕೆ ಬಂದಿವೆ, ಆದರೂ ಮಾನವ ತಾನೇನು ಕಮ್ಮಿ ಎನ್ನುವ ಅಹಂ ತಕ್ಷಣಕ್ಕೆ ಬಿಟ್ಟುಕೊಡಲಾರ! ಸಮಾಜದಲ್ಲಿ ಭಿಕ್ಷಾಧಿಪತಿಯಿಂದ ಹಿಡಿದು ಲಕ್ಷಾಧಿಪತಿ-ಕೋಟ್ಯಾಢಿಪತಿಯವರೆಗೆ ಅನೇಕ ಬಡ-ಸಿರಿತನದ ಸ್ತರಗಳನ್ನು ನೋಡುತ್ತೇವೆ. ಎಷ್ಟೇ ಪ್ರಯತ್ನಿಸಿದರೂ ಒಂದೇ ತರಗತಿಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದು ಪಡೆದು ಬಂದ ಕರ್ಮ ಸಿದ್ಧಾಂತದ ಆಧರಿತ ನಡೆ. ಈ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೇ ನಾವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು! ಆದರೂ ಲೌಕಿಕವಾಗಿ ನಾವು ಬದುಕಿನಲ್ಲಿ ಹಲವು ಹತ್ತು ಆಸೆ ಇಟ್ಟುಕೊಳ್ಳುತ್ತೇವೆ. ಸೈಕಲ್ಲಿರುವವನಿಗೆ ಇಂಧನದಿಂದ ನಡೆಸುವ ದ್ವಿಚಕ್ರವಾಹನ ಕೊಳ್ಳುವ ಬಯಕೆ,ಅಂತಹ ದ್ವಿಚಕ್ರವಾಹನವಿರುವವನಿಗೆ ಕಾರು ಕೊಳ್ಳುವ ಬಯಕೆ, ಕಾರು ಇರುವವನಿಗೆ ಜಗತ್ತಿನಲ್ಲೇ ಹೆಚ್ಚಿನ ಮೊತ್ತದ ಹೊಸ ಕಾರನ್ನು ತನ್ನದಾಗಿಸಿಕೊಳ್ಳುವ ಬಯಕೆ, ಸಣ್ಣ ಉದ್ಯಮಿಗೆ ದೊಡ್ಡ ಉದ್ಯಮಿಯಾಗುವ ಕನಸು, ದೊಡ್ಡ ಉದ್ಯಮಿಗೆ ದೇಶದಗಲ ಬೆಳೆವ ಸ್ವಪ್ನ, ದೇಶದಗಲ ಬೆಳೆದ ಉದ್ಯಮಿಗೆ ಜಗತ್ತನ್ನೇ ತನ್ನ ಉದ್ಯಮದಿಂದ ಆವರಿಸುವ ಆಸೆ....ಹೀಗೆ ಇದು ಸನ್ಯಾಸಿ ಬೆಕ್ಕುಸಾಕಿದ ಕಥೆಯಂತೆ ಬೆಳೆಯುತ್ತಲೇ ಹೋಗುವ ಬಯಕೆ.

ಬಯಕೆಗಳ ಮಹಾಪೂರ! ಈ ಮಹಾಪೂರಕ್ಕೆ ನಮ್ಮ ದುರ್ಬಲ ಮನಸ್ಸೇ ಕಾರಣ. ಮೊನ್ನೆಯ ಪತ್ರಿಕೆಯೊಂದರಲ್ಲಿ ಮುನಿ ಶ್ರೀ ತರುಣಸಾಗರಜೀ ಹೇಳಿದ್ದಾರೆ- ಯಾವುದನ್ನೂ ಅಭ್ಯಾಸ ಅಂತ ಮಾಡಿಕೊಳ್ಳಬೇಡಿ ಅಂತ-ಅದು ಯಾವುದಕ್ಕೂ ಶಾಶ್ವತವಾಗಿ ಅಂಟಿಕೊಳ್ಳಬೇಡಿ ಎಂಬ ಸಂದೇಶ. ಕೆಲವರಿಗೆ ಹೊತ್ತಿಗೆ ಸರಿಯಾಗಿ ಚಹಾ ಕುಡಿಯದಿದ್ದರೆ ತಲೆನೋವು ಬರುತ್ತದೆ, ಹಲವರಿಗೆ ಗುಟ್ಕಾ ಜಗಿಯದಿದ್ದರೆ ತಲೆಗೆ ಏನೂ ಸೂಚಿಸುವುದೇ ಇಲ್ಲ, ಕೆಲವರು ಮದ್ಯ ಸೇವಿಸಿದರೇನೇ ವಾಹನ ಚಾಲನೆ ಮಾಡಲು ಬರುತ್ತದೆ...ಹೀಗೇ ಇವೆಲ್ಲ ಅಭ್ಯಾಸಗಳು. ಅಭ್ಯಾಸ ಸದಭ್ಯಾಸವೋ ದುರಭ್ಯಾಸವೋ ಅದು ಎರಡನೇ ಪ್ರಶ್ನೆ, ಆದರೆ ಈ ಅಭ್ಯಾಸ ಅನ್ನುವುದೇ ಅಂಟುಕೊಳ್ಳುವ ಬಯಕೆ. ಇದನ್ನು ನಮ್ಮ ತಲೆಯಲ್ಲಿ ಇಟ್ಟುಕೊಳ್ಳದೇ ನಮ್ಮ ಮುಷ್ಠಿಯಲ್ಲಿ ಬಿಗಿಹಿಡಿದು ನಡೆದರೆ ಆಗ ಅದು ಒಂದು ಅಭ್ಯಾಸವಾಗದೇ ಕೇವಲ ಉಪಯೋಗ ಅಥವಾ ಪ್ರಯೋಗವಾಗುತ್ತದೆ. ಆಗ ನಾವು ಆ ಕೆಲಸಗಳಿಗೆ ಯಜಮಾನರಾಗುತ್ತೇವೆಯೇ ಹೊರತು ದಾಸರಾಗುವುದಿಲ್ಲ. ಯಾವುದೇ ವಿಷಯಕ್ಕೆ ನಾವು ದಾಸರಾಗುತ್ತ ನಮ್ಮ ದೌರ್ಬಲ್ಯವನ್ನು ಹೆಚ್ಚಿಸಿಕೊಂಡರೆ ಆಗ ನಮ್ಮತನ ಕಳೆದುಹೋಗಿ ನಮ್ಮ ಇಹಪರದ ಸ್ವಾಸ್ಥ್ಯಗಳು ಅಸ್ವಸ್ಥಗೊಳ್ಳುತ್ತವೆ. ಈ ’ಅಭ್ಯಾಸ’ವೆಂಬ ಅಂಟನ್ನು ಬಿಟ್ಟು ಅವುಗಳ ಯಜಮಾನರಾದರೂ ಅವುಗಳಲ್ಲಿ ಒಳ್ಳೆಯದನ್ನು ಮಾತ್ರ ಆರಿಸಿಕೊಂಡು ಅವುಗಳಿಗೆ ಯಜಮಾನರಾಗುವುದು ಒಳಿತು. ಇಲ್ಲದಿದ್ದರೆ ಮುನಿಗಳು ಹೇಳಿದ್ದಾರೆ ಅಪರೂಪಕ್ಕೊಮ್ಮೆ ಹೆಂಡ ಕುಡಿದರೆ ತಪ್ಪಲ್ಲ ಎಂದುಕೊಂಡು ಸಾಧನೆಯ ಮಾರ್ಗದಲ್ಲಿ ಸ್ವಲ್ಪ ಮುನ್ನಡೆದ ವ್ಯಕ್ತಿ ಹೆಂಡದ ರುಚಿ ನೋಡಿ ಮತ್ತೆ ಅಪರೂಪಕ್ಕೊಮ್ಮೆ ಅದನ್ನು ಆಸ್ವಾದಿಸುವ ಯಜಮಾನತ್ವಕ್ಕೆ ಇಳಿಯಬಹುದು.


ಯುಗಧರ್ಮ ಎಂಬುದು ಸುಳ್ಳಲ್ಲ! ಈ ಯುಗದಲ್ಲಿ ಮದ್ಯ,ಮಾಂಸ,ಮಾನಿನಿ ಈ ಮೂರಕ್ಕೆ ಬಹಳ ದುರ್ವಾಜ್ಯವೂ ಮತ್ತು ಅವುಗಳ ಅಂಧಾದುಂಧಿ ವ್ಯಾಪಾರೀಕರಣದಿಂದ ಬಹಳ ಲಾಭವೂ ಬಂದು ಮಾಯೆ ಬಹಳ ವಿಜೃಂಭಿಸುತ್ತದೆ.ಜೂಜುಕೋರರು,ದಗಾಕೋರರು,ಹಲಾಲುಟೋಪಿಗಳು,ವಂಚಕರು,ಅತ್ಯಾಚಾರಿಗಳು,ದುರಾಚಾರಿಗ-ಳು,ಮಾದಕ ವ್ಯಸನಿಗಳೇ ರಾಜ್ಯಭಾರಮಾಡುತ್ತಾರೆ, ಅವರೇ ಆರ್ಥಿಕವಾಗಿ ಬಹಳ ಉನ್ನತ ಸ್ಥಾನಕ್ಕೆ ಎತ್ತಲ್ಪಟ್ಟು ಮೆರೆಯುತ್ತಾರೆ‍ ಎಂಬುದು ಜನಜನಿತ ಯುಗಧರ್ಮದ ಅಂಬೋಣ. ಅದು ಸತ್ಯವಾಗಿ ತೋರುತ್ತಿರುವುದೂ ಹೌದು. ಹೀಗಾಗಿ ಕೆಲವೊಮ್ಮೆ ಒಳ್ಳೆಯತನಕ್ಕೆ, ಸತ್ಯಕ್ಕೆ, ಸದಾಚಾರಿಗಳಿಗೆ ಸಡ್ಡುಹೊಡೆದು ಅಟ್ಟಹಾಸದಿಂದ ಮೆರೆವ ರೌಡಿ ತರಗತಿಯವರನ್ನು ನಾವು ಸಹಿಸಬೇಕಾಗಿದೆ. ಅಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡವರೆಲ್ಲ ಹಲವರನ್ನು ನೋಯಿಸಿ,ಹಿಂಸಿಸಿ ಮತ್ತೆ ಜನ್ಮಾಂತರದಲ್ಲಿ ಹೇಳವರಾಗೋ, ಕುಂಟರಾಗೋ ಹುಟ್ಟಿ ಪಾಪದ ಪ್ರಾಯಶ್ಚಿತ್ತ ಜೀವನವನ್ನು ನಡೆಸಬೇಕಾಗಿ ಬರುತ್ತದೆ.

ಹಲವರು ಹೇಳುವುದಿದೆ " ನಾನು ಈ ಜನ್ಮದಲ್ಲಂತೂ ಎಳ್ಳಷ್ಟೂ ತಪ್ಪುಮಾಡಿಲ್ಲ, ಆದರೂ ಅನುಭವಿಸುತ್ತಿರುವ ಕಷ್ಟಮಾತ್ರ ಹೇಳತೀರದು, ಒಮ್ಮೊಮ್ಮೆ ವಿಚಾರಿಸಿದರೆ ದೇವರು ಇರುವುದು ಸುಳ್ಳೇನೋ ಅನಿಸುತ್ತಿದೆ" ಎಂದೆಲ್ಲ. ಅದಕ್ಕೆ ಉತ್ತರ, ದೇವರು ಎಂಬ ಶಕ್ತಿ ನಾವು ಪ್ರತಿ ಘಳಿಗೆ-ಕ್ಷಣಗಳಲ್ಲೂ ಮಾಡುವ ತಪ್ಪು-ಒಪ್ಪುಗಳನ್ನು ಕಲೆಹಾಕಿ ಅಳೆದು-ಸುರಿದು ಮುಂದಿನ ನಮ್ಮ ಜನ್ಮವನ್ನು ನಿರ್ಧರಿಸುತ್ತದೆ. ಹೀಗಾಗಿ ಈ ಜನ್ಮದ ಕೆಲಸದ ಫಲವನ್ನೇ ನಾವು ಉಪಭೋಗಿಸದೇ ಹಿಂದಿನ ಜನ್ಮಾಂತರದ ಕರ್ಮಗಳ ಫಲಗಳನ್ನು ಪಡೆಯುತ್ತಿರುತ್ತೇವೆ-ಅನುಭವಿಸುತ್ತಿರುತ್ತೇವೆ. ಅಂತೆಯೇ ಅಂದುಕೊಂಡ ಹಾಗೆಲ್ಲಾ ನಾವು ಏನೆಲ್ಲಾ ಪಡೆಯಲು, ಏನೆಲ್ಲಾ ಆಗಲು ಆಗುವುದಿಲ್ಲ. ನಾನು ನಾಳೆಯೇ ಹಲವಾರು ಕೋಟಿಗೆ ಒಡೆಯನಾಗಿ ಅನೇಕ ಜನರನ್ನು ಸಹಾಯಕಾರನ್ನಾಗಿ ಇಟ್ಟುಕೊಂಡು ಹಾಯಾಗಿ ಬದುಕಬೇಕು ಎಂಬಂತ ಆಸೆಯಾಗಲೀ, ಛೆ ಆ ಹುಡುಗಿ ನನಗಾಗೇ ಹುಟ್ಟಿಬಂದ ಅಪ್ರತಿಮ ಸುಂದರಿ-ಆಕೆ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಬಯಸುವುದಿಲ್ಲ ಎಂಬ ಸೌಂದರ್ಯದ ಕುರುಡು ಕಲ್ಪನೆಯಾಗಲೀ, ಈ ಆಸ್ತಿ ನಂಗೇ ದಕ್ಕುತ್ತದೆ ಎಂಬ ವ್ಯಾಮೋಹವಾಗಲೀ ಕೇವಲ ನಮ್ಮ ಬಾಹ್ಯ ಪ್ರಪಂಚದ ವ್ಯಾಪಾರೀ ಚಿಂತನೆಗಳು-ಪ್ರಾಜ್ಞರು,ಜಿಜ್ಞಾಸುಗಳು,ಮುಮುಕ್ಷುಗಳು ಇವುಗಳನ್ನೆಲ್ಲ ’ಬಾಹ್ಯವೃತ್ತಿಗಳು’ ಎಂದಿದ್ದಾರೆ. ಇಂತಹ ಬಾಹ್ಯವೃತ್ತಿಗಳನ್ನು ಅರಿತು ಅವುಗಳನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ಬದುಕೋಣ ಎಂಬುದು ಜಗದಮಿತ್ರನ ಅಪೇಕ್ಷೆಯಾಗಿದೆ.


ವಿಧಿಲಿಖಿತ

ಹುಟ್ಟು ಸಾವುಗಳೆಲ್ಲ ನಮ್ಮ ಕೈಯೊಳಗಿಲ್ಲ
ಪಟ್ಟ ಪದವಿಯ ಬಯಸಿ ಹೊರಟಿಹೆವು ನಾವು
ಕೊಟ್ಟ ಪಾತ್ರವ ಮಾಡು ಪೋಷಿಸುತ ಚೆನ್ನಾಗಿ
ಮೆಟ್ಟಿ ಮಿಥ್ಯದ ಬಯಕೆ | ಜಗದಮಿತ್ರ

ಹೊರಗೆ ಬಣ್ಣದ ಗೋಡೆ ಒಳಗೆ ಮಣ್ಣಿನಗಚ್ಚು
ನರನಾಡಿಗಳ ರೀತಿ ತಂತಿ ತುಂಬಿಹುದು
ನರನ ನಯನವ ನಲಿಸಿ ಬಣ್ಣ ಬಿರುಕನು ಮುಚ್ಚಿ
ಹರನಮರೆಸುವ ತಂತ್ರ | ಜಗದಮಿತ್ರ

ಇರುವನಕ ಬೇಕೆಮಗೆ ಸಂಪತ್ತು ಧನಕನಕ
ಬರುವಾಗ ತರಲಿಲ್ಲ ಹೋಗುವಾಗಿಲ್ಲ
ಮರೆಯದಲೆ ಉಪಕ್ರಮಿಸು ಪರದ ಸತ್ಯವನರಿತು
ಗುರುತನದಿ ಬಾಳುನೀ | ಜಗದಮಿತ್ರ

ಕರ್ಮಬಂಧನದಿಂದ ಬಂಧಿತವು ಈ ಜೀವ
ಮರ್ಮವರಿಯದ ನಮಗೆ ತರುತಿಹುದು ಕಾವ
ಚರ್ಮವ್ಯಾಧಿಯರೀತಿ ಮರುಹುಟ್ಟು ಮತ್ತಂತ್ಯ
ತೀರ್ಮಾನ ಮನಕಿರಲಿ | ಜಗದಮಿತ್ರ

ಹಳೆಯ ಕಟ್ಟಡದಂತೆ ಸೋರುವುದು ಜೀವಜಗ
ಮಳೆಯ ಅಜ್ಞಾನದಾ ನೀರು ಹನಿಸುತಲಿ
ಕೊಳೆಯ ಎಳೆಯುತ ತಂದು ಸೋಕಿಸುತ ಮೈಮನಕೆ
ಮೆಳೆಯ ಮಾಯೆಯ ಮುಸುಕಿ | ಜಗದಮಿತ್ರ

ನನ್ನಮನೆ ನನ್ನಜನ ನಾನು ನನದೇ ಎಂಬ
ಕನ್ನವಿಕ್ಕುವ ಕೆಲಸ ಕಾರ್ಯಗಳು ಬೇಡ
ಮುನ್ನ ನೀ ಅರ್ಥವಿಸಿ ಚೆನ್ನಾಗಿ ಬ್ರಹ್ಮಾಂಡ
ಕನ್ನಯ್ಯನೊಲುಮೆ ಪಡೆ| ಜಗದಮಿತ್ರ

ಮತ್ತೆ ಹುಟ್ಟುವ ಬಯಕೆ ಗಗನದೆತ್ತರದಾಸೆ
ಮತ್ತುಬರಿಸುತ ಆತ್ಮಕಡರುತಿದೆ ಬಳ್ಳಿ
ಕುತ್ತು ಇದ ತಿಳಿದು ನೀ ಪಥ್ಯಜೀವಿತ ನಡೆಸಿ
ಹತ್ತು ಆ ಪರಮಪದ | ಜಗದಮಿತ್ರ