ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 22, 2010

ಸರ್ ಡಬ್ ವಾಂಯ್ !!

ಚಿತ್ರ ಋಣ : ಅಂತರ್ಜಾಲ
ಸರ್ ಡಬ್ ವಾಂಯ್ !!

ತೆನ್ನಾಲಿ ರಾಮಕೃಷ್ಣನ ಕಥೆಗಳನ್ನು ಕೇಳುವಾಗ ಕೆಲವೊಮ್ಮೆ ನನಗೆ ನೆನಪಾಗುವುದು ಅವನ ಸರ್ ಡಬ್ ವಾಂಯ್ ಕಥೆ! ಪ್ರಾಯಶಃ ಅಂದಿನ ಕಾಲಘಟ್ಟದಲ್ಲಿ ಬಹಳ ಸೃಜನಶೀಲತೆ [ಕ್ರಿಯೇಟಿವಿಟಿ] ಇರುವ ಜನರಲ್ಲಿ ಆತ ಒಬ್ಬನಾಗಿದ್ದ. ದುಡಿಮೆಗೆ ಮಾರ್ಗವಿಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದ ಕಾಲದಲ್ಲಿ ಕೇವಲ ತನ್ನ ಬುದ್ಧಿವಂತಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ರಾಜಮರ್ಯಾದೆ ಪಡೆದ ಮಹಾನುಭಾವ ತೆನ್ನಾಲಿರಾಮ. ಆಸ್ಥಾನ ವಿದ್ವಾನ್ ಬಿರುದಿಗೆ ಪಾತ್ರನಾಗುವಷ್ಟು ಪಾಂಡಿತ್ಯವನ್ನು ಸ್ವಯಾರ್ಜಿತವಾಗಿ ಅಭ್ಯಸಿಸಿ ಕರಗತ ಮಾಡಿಕೊಂಡ ತೆನ್ನಾಲಿ ಸಮಾಜಕ್ಕೆ ನ್ಯಾಯಪರತೆಯಿಂದ ನಡೆದುಕೊಂಡವ. ಶ್ರಾದ್ಧಕ್ಕೆ ಬರುವ ಪುರೋಹಿತರು ಶಾಸ್ತ್ರಸಮ್ಮತವಲ್ಲದ ಹೊರೆಕಾಣಿಕೆಗ ಭಾರವನ್ನು ಬಡಬಗ್ಗರಿಗೆ ಹೊರಿಸುವುದು ತಿಳಿದಾಗ ಕಾಯಿಸಿ ಬರೆ ಎಳೆದು ಪುರೋಹಿತರನ್ನೇ ದಂಗುಬಡಿಸಿದ ಅಪ್ಪಟ ಜನಪ್ರೇಮಿ. ರಾಜರು ಯಾವುದೇ ಮಹತ್ತಿನ ಕೆಲಸ ಮಾಡುವಾಗಲೂ ತನ್ನ ಸಲಹೆಯನ್ನು ಪಡೆಯುವಷ್ಟು ಎತ್ತರಕ್ಕೆ ಬೆಳೆದ ಮಹಾನ್ ಮೇಧಾವಿ. ಅಧಿಕಪ್ರಸಂಗಿಗಳಾಗಿ ತಾವೇ ಪಂಡಿತರೆಂದು ಮೆರೆಯುತ್ತಿದ್ದ ಹಲವಾರು ಜನರನ್ನು ತನ್ನ ಹಲವಾರು ಹಾಸ್ಯಪ್ರಸಂಗಗಳಿಂದಲೇ ಸೋಲಿಸಿ ಅವರಿಗೆ ಮಂಕುಕವಿದ ಬುದ್ಧಿಗೆ ಬೆಳಕು ಹರಿಸಿದ್ದೂ ಅಲ್ಲದೇ ಆ ಕಾರ್ಯದಲ್ಲೇ ಜನರಂಜಕನಾಗಿ ರಾಜರಂಜಕನಾಗಿ ಬಹುಪ್ರಸಿದ್ಧಿಯನ್ನು ಪಡೆದ ಹಾಸ್ಯರತ್ನ. ವಿಜಯನಗರ ಸಂಸ್ಥಾನಕಂಡ ಅದ್ಬುತ ವ್ಯಕ್ತಿಗಳಲ್ಲಿ ತೆನ್ನಾಲಿಯೂ ಒಬ್ಬ.

ತೆನ್ನಾಲಿಯ ಅನೇಕ ಕಥೆಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾಕೆಂದರೆ ಪ್ರತಿಯೊಂದೂ ಕಥೆ ಅಷ್ಟು ಪ್ರಸರಿಸಲ್ಪಟ್ಟಿದೆ, ಜನಪ್ರಿಯವಾಗಿದೆ. ಅಲ್ಲಿ ಬರುವ ಕ್ಷುಲ್ಲಕ ಸಂಗತಿಗಳೇ ಕಥೆಗಳ ಜೀವಜೀವಾಳ. ತೆನ್ನಾಲಿ ರಾಮಕೃಷ್ಣನ ಬೆಕ್ಕು ಹಾಲು ಕುಡಿದಿದ್ದು, ತೆನ್ನಾಲಿಯ ಕುದುರೆ ಕಾಂಪಿಟಿಶನ್, ತಿಲಕಾಷ್ಠ ಮಹಿಷ ಬಂಧನ ಇವೆಲ್ಲಾ ಅನಾಯಾಸವಾಗಿ ಎಲ್ಲರ ಕಿವಿಗೂ ತಲ್ಪಿದ ಹಾಸ್ಯಕಥಾನಕಗಳು. ಕೆಲವನ್ನು ಕನ್ನಡದ ’ಹಾಸ್ಯರತ್ನ ರಾಮಕೃಷ್ಣ’ ಸಿನಿಮಾ ನೋಡಿದರೆ ಕೆಲವು ಕಥೆಗಳು ದೃಶ್ಯರೂಪದಲ್ಲೂ ಲಭ್ಯ. ಅದಲ್ಲದೇ ’ಕೃಷ್ಣದೇವರಾಯ’ ಸಿನಿಮಾದಲ್ಲೂ ದಿ| ನರಸಿಂಹರಾಜು ತೆನ್ನಾಲಿಯ ಪಾತ್ರವನ್ನು ಬಹಳ ಸುಲಲಿತವಾಗಿ ಅಭಿನಯಿಸಿದ್ದಾರೆ. ಇಂತಹ ಕಥೆಗಳ ಪೈಕಿ ’ಸರ್ ಡಬ್ ವಾಂಯ್’ ಕೂಡ ಒಂದು.

ಮಹಾಮೇಧಾವಿ ಅಂದುಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಪಾಠ ಕಲಿಸುವ ಸಲುವಾಗಿ ತಲೆತುರಿಸಿಕೊಂಡ ತೆನಾಲಿ, ಬರುವ ದಾರಿಯಲ್ಲೇ ಘಟಿಸಿದ ಘಟನೆಯೊಂದನ್ನು ಅಸ್ತ್ರವಾಗಿ ಬಳಸಿ ಆತನನ್ನು ಹಿಮ್ಮೆಟ್ಟಿಸಿದ ಪ್ರಸಂಗ ನಮಗಿಲ್ಲಿ ಕಾಣಸಿಗುತ್ತದೆ. ಅವು ಮೂರು ವಿಭಿನ್ನ ಶಬ್ಧಗಳು ಒಂದನ್ನೊಂದು ಅವಲಂಬಿಸಿ ನಡೆದ ಕ್ರಿಯೆಗಳ ಸುತ್ತ ಬಳಸಲ್ಪಟ್ಟು ತೆನ್ನಾಲಿಯ ಮನದಲ್ಲಿ ಹುಟ್ಟಿ ಭಯಂಕರವಾದ ಅರ್ಜುನನ ಪಾಶುಪತಾಸ್ತ್ರವೋ ರಾಮನ ನಾರಾಯಣಾಸ್ತ್ರವೋ ಅಥವಾ ಅದಕ್ಕಿಂತ ಹೆಚ್ಚಿನ ಪರಿಣಾಮವುಳ್ಳದ್ದೋ ಎಂದೆನಿಸುವ ಈ ಅಸ್ತ್ರದ ನಿಜರೂಪ ತಿಳಿದಾಗ ನಾವು ನಗುತಡೆಯದಾಗುತ್ತೇವೆ. ಏನಿಲ್ಲಾ ಸ್ವಾಮಿ ಇದರಲ್ಲಿ ಇಷ್ಟೇ ಎನಿಸುವುದುದಾದರೂ ಮುಳ್ಳನ್ನು ಮುಳ್ಳಿಂದಲೇ ತೆಗೆವ ಚಾಕಚಕ್ಯತೆಯನ್ನು ಮೆರೆದು ವಿಜಯನಗರದ ಮಾನಕಾಪಾಡಿದ ಹಾಗೂ ಮಾನಸಮ್ಮಾನವನ್ನು ಪಡೆದ ತೆನ್ನಾಲಿ ಇಂದಿಗೂ ಸ್ತುತ್ಯಾರ್ಹ.

ಸರ್ ಎಂದರೆ[ ಇಂಗ್ಲೀಷ್ ಸರ್ ಅಲ್ಲ! ಅದೊಂದು ಸದ್ದು]ಹಿತ್ತಲಲ್ಲಿ ನಿಂತ ತೆಂಗಿನ ಮರದ ಗರಿ ಜಾರುವುದು, ಡಬ್ ಎಂದರೆ ಅದು ಕೆಳಗೆ ಬಿದ್ದಾಗಿನ ಸದ್ದು, ವಾಂಯ್ ಎಂದರೆ ಹತ್ತಿರದಲ್ಲೇ ಮೇಯುತ್ತಿದ್ದ ಎಮ್ಮೆ ಹೆದರಿ ಕೂಗಿದ್ದು. ಇದು ಒಟ್ಟಿಗೆ ಸೇರಿ ’ಸರ್ ಡಬ್ ವಾಂಯ್’ ಆಗಿದೆ. ಇದನ್ನು ಅರ್ಥೈಸದೇ ಹೈರಾಣಾದ ಮಹಾಪಂಡಿತ, ತೆನ್ನಾಲಿಯ ಕರ್ತೃತ್ವ ಶಕ್ತಿಗೆ ತಲೆಬಾಗಿ ನಮಿಸಿ ಹೊರಟುಹೋದದ್ದು ಇಂದಿಗೆ ನಮಗೆ ಇತಿಹಾಸ. ವೈರಸ್ ಬಂದಾಗ ಕಂಪ್ಯೂಟರಿಗೆ ಆಂಟಿವೈರಸ್[ಆಂಟಿ ಯಲ್ಲ ಸ್ವಾಮೀ ತಪ್ಪಾಗಿ ಭಾವಿಸಬೇಡಿ!] ಬೇಕೇಬೇಕು. ಅಲ್ಲಿ ಬರುವ ವೈರಸ್ ಗಳು ಈ ಕಥೆಯಲ್ಲಿ ಇರುವ ಮಹಾಪಂಡಿತನಂತೇ ಕಂಪ್ಯೂಟರನ್ನೇ ತಿಂದುಹಾಕುವಂತಿರುತ್ತವೆ! ಅಸಲಿಗೆ ಅವುಗಳ ದುರಹಂಕಾರ ಅಟಾಟೋಪ ಬಹಳ ಜಾಸ್ತಿ[ಟಿವಿಯಲ್ಲಿ ’ಡೊಮೆಕ್ಸ್’ ಜಾಹೀರಾತು ನೋಡಲು ಕೋರಲಾಗಿದೆ!]. ತನಗೆ ಮದ್ದೇ ಇಲ್ಲಾ ಅಂತ ತಿಳಿದರೆ ಅವು ಮಗ್ಗಲು ಬದಲಿಸಿ ದೈತ್ಯಾಕಾರವಾಗಿ ಇಡೀ ಕಂಪ್ಯೂಟರ್ ವ್ಯಾಪಿಸಿ ಇರಿಸಿರುವ ಮಾಹಿತಿಗಳನ್ನು ಅಳಿಸುವುದೋ, ನಾಪತ್ತೆಮಾಡುವುದೋ, ಪ್ರಿಂಟ್ ಬರದಂತೆಯೋ ನೆಟ್ ಕನೆಕ್ಟ್ ಆಗದಂತೆಯೋ ಮಾಡುವುದೋ ಮೆಮರಿ ಅಥವಾ ಹಾರ್ಡ್ ಡಿಸ್ಕ್ ಸುಟ್ಟುಹೋಗುವಂತೆ ಮಾಡುವುದೋ ಅವುಗಳ ’ಕ್ರಿಮಿ’ನಲ್ ಕೆಲಸ! ಈ ಕ್ರಿಮಿ ಸೂಕ್ಷಾಣುವಲ್ಲ, ಇದು ಕೂಡ ಒಂದು ತೆರನ ಸುಪ್ತಾಂಶವೇ! ಎಷ್ಟೋ ಜನ ಇನ್ನೂ ಕಂಪ್ಯೂಟರ್ ವೈರಸ್ ಎಂದರೆ ಅದು ಡೊಮೆಕ್ಸ್ ಜಾಹೀರಾತಿನಲ್ಲಿ ಬರುವ ರೂಪದಲ್ಲೋ ಅಥವಾ ಮನುಷ್ಯರಿಗೆ ಕಾಯಿಲೆತರುವಂಥದ್ದೇ ಕೀಟಾಣುವಾಗಿರಬಹುದೆಂದು ಅಂದುಕೊಂಡಿರುತ್ತಾರೆ, ಆದರೆ ಯಾರಲ್ಲಿ ಕೇಳುವುದು-ಕೇಳಿದರೆ ತನಗೆ ಗೊತ್ತಿಲ್ಲಾ ಎಂಬುದು ಆ ಕೇಳಿದ ವ್ಯಕ್ತಿಗೆ ತಿಳಿದು ತನ್ನನ್ನು ಆತ ’ಇಷ್ಟೇನೆ ಈತ’ ಎಂದು ತಿಳಿದುಬಿಟ್ಟರೆ ಕಷ್ಟ ಎಂದುಕೊಂಡು ನಮ್ಮ ಎಗೋ[ದುರಭಿಮಾನ]ಕ್ಕೆ ಧಕ್ಕೆಯಾಗದಂತೆ ಹಾಗೆ ಕೇಳಬೇಕಾದ ಹಲವು ಪ್ರಶ್ನೆಗಳನ್ನು ನಮ್ಮೊಳಗೇ ಹತ್ತಿಕ್ಕಿ ಬಂಧಿಸಿರುತ್ತೇವೆ. ಒಂದೇ ವ್ಯಾಖ್ಯೆಯಲ್ಲಿ ಹೇಳಬಹುದಾದರೆ- ವೈರಸ್ ಈಸ್ ಆಲ್ಸೋ ಎ ಸಾಪ್ಟವೇರ್ ಡಿಸ್ಟ್ರಕ್ಟಿವ್ ಇನ್ ನೇಚರ್ ! ಇಂತಹ ವೈರಸ್ ಬಂದಾಗ ಅದನ್ನು ತೆಗೆಯಲು ಉಪಾಯಹುಡುಕಿ ಅದಕ್ಕೆ ಬೇಕಾದ ತಂತ್ರಾಂಶ ಬರೆಯುವವರು ಕೆಲವರು[ ಅಸಲಿಗೆ ವೈರಸ್ ಬಿಡುವವರೂ ಅವರೇ, ಅವರ ಕೆಲಸವೇ ಅದು.ಕೆಲವೊಮ್ಮೆ ಹಾವಾಡಿಗರು ಹಳ್ಳಿಯ ಮನೆಗಳ ಹತ್ತಿರದಲಿ ಹಾವನ್ನು ಬಿಟ್ಟು ದೂರ ಹೋಗಿ ಒಂದೆರಡು ಗಂಟೆ ಕಳೆದು ಮತ್ತೆ ಬರುತ್ತಾರೆ-ಆಗ ಅವರಿಗೆ ಹಾವು ಹಿಡಿಯುವ ’ಅವಕಾಶ’ ಸಿಗುತ್ತದೆ. ಇದು ಹೊಟ್ಟೆ ಹೊರೆದುಕೊಳ್ಳುವ ವಿವಿಧೋದ್ದೇಶ ಯೋಜನೆಗಳಲ್ಲೊಂದು! ]

ಇರಲಿ, ನಾನು ಹೇಳ ಹೊರಟ ’ಸರ್ ಡಬ್ ವಾಂಯ್’ ಬೇರೇನೇ ಇದೆ! ನಾವೆಲ್ಲಾ ಪ್ರಾಥಮಿಕ ಶಾಲೆಗೆ ಹೋಗುವಾಗ ನಮ್ಮಗಿಂತ ಮೇಲಿನ ತರಗತಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಸ್ವಲ್ಪ ಕಿಡಿಗೇಡಿಗಳಿದ್ದರು. ಹೇಳಿದ ಕೆಲಸವನ್ನು ಮಾಡದೇ ಹಾಗೇ ಬಂದು ತರಗತಿಯಲ್ಲಿ ಕೂತುಕೊಳ್ಳುವುದು, ಶಿಕ್ಷಕರು ಶಿಕ್ಷೆ ವಿಧಿಸಿದರೆ ಅನುಭವಿಸುವುದು, ಆಮೇಲೆ ದಿನವೊಪ್ಪತ್ತು ಶಿಕ್ಷೆಕೊಟ್ಟ ಶಿಕ್ಷಕರಮೇಲೆ, ಅವಮಾನದಿಂದ ಕೆಂಡಾಮಂಡಲವಾಗಿ ಏನಾದ್ರೂ ಅನ್ನುತ್ತಿರುವುದು-ಇದೆಲ್ಲಾ ಅವರ ಚಾಳಿ. ಒಮ್ಮೆ ನಾವೆಲ್ಲಾ ಮೂರನೇ ಕ್ಲಾಸಿನಲ್ಲಿದ್ದ ವೇಳೆ ಇರಬೇಕು, ಆಗ ಐದನೇ ಈಯತ್ತೆಯಲ್ಲಿ ಒಬ್ಬ ಹುಡುಗನಿದ್ದ. ಹೆಸರು ವಿನಾಯಕ. ಆತ ವಿನಾಯಕನೇ ಹೌದು! ಆ ವಿನಾಯಕನಿಗೂ ಈ ವಿನಾಯಕನಿಗೂ ಅಂತರ ಬರೇ ಸೊಂಡಿಲು ಎಂಬಷ್ಟು ಬಹಳ ಕೀಟಲೆಯುಕ್ತ ಜಾಣ. ಆದರೆ ಸೊಂಬೇರಿ[ಆಳಸಿ]. ಮೈಗಳ್ಳನಾದ ಆತ ಕೆಲವೊಮ್ಮೆ ಹೋಮ್ ವರ್ಕ್ ಮಾಡದೇ ಹಾಗೇ ಬರುತ್ತಿದ್ದ. ಅವನ ಕ್ಲಾಸ್ ಟೀಚರ್ ಮುಕ್ತಕ್ಕವರು. ಅವರೂ ಅಷ್ಟೇ ಮಕ್ಕಳಿಲ್ಲದ ಅವರಿಗೆ ಮಕ್ಕಳನ್ನು ಪಾಲನೆ ಮಾಡುವ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲಾ ಎನಿಸುತ್ತದೆ; ಬಹಳ ಕೋಪ ಜಾಸ್ತಿ.

ನಾವೆಲ್ಲಾ ಆಗಾಗ ಅಜ್ಜನಮನೆಗೆ ತಾಯಿಯ ಜೊತೆ ಹೋಗಿಬಿಟ್ಟರೆ ಒಂದೆರಡು ದಿನ ಸ್ಕೂಲಿಗೆ ಬಂಕ್! ಮರಳಿ ಬಂದಾಗ ಶಾಲೆಗೆ ಮುಖತೋರಿಸಲೂ ಒಂಥರಾ. ನಮಗಿಂತ ನಮ ಸಹಪಾಠಿಗಳು ಹೆಚ್ಚು ವಿಷಯಗಳನ್ನು ಕಲಿತುಬಿಡುತ್ತಿದ್ದರಲ್ಲ! ಹೆದರಿಕೆ ಒಂದುಕಡೆಗಾದ್ರೆ ಬಾಕಿಬಿದ್ದ ವಿಷಯಗಳ ಕಲಿಯುವಿಕೆ ನೆನೆದು ಮನಸ್ಸು ಹೈರಾಣಾಗುತ್ತಿತ್ತು. ಆದ್ರೂ ಮಾತ್ರೆ ತಿಂದೂ ತಿಂದೂ ಅಭ್ಯಾಸ ಆಗಿ ಹೋದ ರೋಗಿಯರೀತಿ ನಮ್ಮ ಮನಸ್ಸು ಕೊನೆಗೊಮ್ಮೆ ಬರುವಂತಹ ಶಿಕ್ಷೆಗಳನ್ನೂ,ನಿಭಾಯಿಸಬೇಕಾದ ಬಾಕಿ ಕೆಲಸಗಳನ್ನೂ ಒಪ್ಪಿಕೊಳ್ಳುತ್ತಿತ್ತೇ ವಿನಃ ಅಜ್ಜನಮನೆಯ ಅಥವಾ ನೆಂಟರಮನೆಯ ವಿಸಿಟ್ ನಾವು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ! ಹಳ್ಳಿ ಜೀವನ ನೋಡಿ--ಅಲ್ಲಿ ಬಸ್ ವ್ಯವಸ್ಥೆ ಸ್ವಲ್ಪ ಕಮ್ಮಿಯೇ ಇರುತ್ತಿತ್ತು. ಸಾರಿಗೆಯ ಅಭಾವದಿಂದ ಅಮ್ಮ ಒಂದುದಿನ ಜಾಸ್ತಿ ಅಲ್ಲಿ ಉಳಿದರೆ ನಮಗೆ ಅಲ್ಲಿನ ಮಕ್ಕಳೊಂದಿಗೆ ಮತ್ತೊಂದು ದಿನದ ಹಬ್ಬ! ಮರಳಿ ನಮ್ನಮ್ಮ ಶಾಲೆಗೆ ಬಂದಾಗ ಟೀಚ ಕೇಳಿದರೆ ನಾವು " ಅಜ್ಜನ ಮನೆಯಲ್ಲಿ ಎಮ್ಮೆ ಕರುಹಾಕಿತ್ತು ಅದಕ್ಕೇ ನೋಡಲು ಹೋಗಿದ್ದೆವು" ಅಂತಲೋ ಅಥವಾ " ಅತ್ತೆಮನೆಯಲ್ಲಿ ಸತ್ಯನಾರಾಯಣ ಕಥೆ ಇತ್ತು " ಅಂತಲೋ ಪ್ರಾಮಾಣಿಕವಾಗಿ ಹೇಳುತ್ತಿದ್ದೆವು. ಗ್ರಾಮ್ಯ ಜೀವನಶೈಲಿಯ ಅನುಭವದಲ್ಲಿದ್ದು ಬಿಡುವುಸಿಕ್ಕಾಗ ಹಳ್ಳಿಯ ಕೆಲವುಜನರೊಂದಿಗೆ ಇಸ್ಪೀಟ್ ಆಟ, ತೆಂಗಿನಕಾಯಿ ವ್ಯಾಪಾರ ಇವೆಲ್ಲಾ ಮಾಡಿ ಗೊತ್ತಿದ್ದ ಕೆಲವು ಶಿಕ್ಷಕರು ಮತ್ತೇನೂ ಕೇಳದೇ ಹಿಂದೆ ಕಲಿಸಿದ್ದನ್ನು ಓದಿ,ಬರೆದು ತಯಾರಾಗಿ ಬರಲು ತಾಕೀತು ಮಾಡುತ್ತಿದ್ದರು. ಛೆ! ಅಷ್ಟಕ್ಕೆಲ್ಲಾ ಎಂದಾದ್ರೂ ನಾವು ಸೋಲುವುದುಂಟೇ !

ಕೋಪ ಬಂದ ಒಂದು ದಿನ ವಿನಾಯಕನಿಗೆ ಇಡೀ ಶಾಲೆಯನ್ನು ಮೂರುಸುತ್ತು ಬರುವಂತೇ ಮತ್ತು ಆಮೇಲೆ ಬೆಂಚಿನಮೇಲೆ ನಿಲ್ಲುವಂತೇ ಮುಕ್ತಕ್ಕವರ ಆಜ್ಞೆಯಾಯಿತು! ವಿನಾಯಕ ಕುದ್ದುಹೋದ. ಅವನಿಗೆ ಎಲ್ಲಾತರಗತಿಗಳವರೂ ಸುತ್ತುಹಾಕುವಾಗ ನೋಡುತ್ತಾರಲ್ಲ ಎಂಬ ಅವಮಾನವಾಗಿ ಬಹಳ ಹಳಹಳಿಸಿದ, ಕೇಳಿಕೊಂಡ. ಆದ್ರೂ ಮುಕ್ತಕ್ಕವರು ಪ್ರಸನ್ನರಾಗಲಿಲ್ಲ. ಶಿಕ್ಷೆ ಪಾಲಿಸಲೇ ಬೇಕಾಗಿತ್ತು! ಅಷ್ಟಕ್ಕೂ ಅದು ಸರಿಯೇ ಆದರೂ ವಿನಾಯಕನ ದೃಷ್ಟಿಯಲ್ಲಿ ಅದು ತಪ್ಪು. ವಿನಾಯಕ ತಡಮಾಡಲಿಲ್ಲ ಮೂರುಸುತ್ತು ಹಾಕೇ ಬಿಟ್ಟ. ಹಾಗೇ ಬೆಂಚಿನ ಮೇಲೆ ನಿಂತು ಶಾಲೆಯ ಅಂದಿನ ದಿನ ಮುಗಿಸಿದ.

ಮಾರನೇ ದಿನ ಬೆಳಿಗ್ಗೆ ಶಾಲೆಯ ಬಾಗಿಲು ತೆಗೆದಿದ್ದೇ ತಡ, ವಿನಾಯಕ ಅಲ್ಲಿದ್ದ. ಯಾಕೆ ಆ ದಿನ ಮಾತ್ರ ಅಷ್ಟುಬೇಗ ಎಂಬುದು ನಮಗೆ ತಿಳಿಯಲಿಲ್ಲ. ಶಾಲೆ ಎಂದಿನಂತೇ ಆರಂಭವಾಯಿತು. ಅರ್ಧಗಂಟೆಯೂ ಕಳೆದಿರಲಿಲ್ಲ. ಮುಕ್ತಕ್ಕವರು ಕೈ ಮೈ ತುರಿಸಿಕೊಳ್ಳುತ್ತಾ ಓಡುತ್ತಾ ಏನೋ ಆಗಿದೆಯೆಂದು ತಿಳಿಸಲು ಮುಖ್ಯಾಧ್ಯಾಪಕರ ಕೋಣೆಗೆ ಬಂದರು! ಇಡೀ ಮೈಕೈ ಲಿಬಿಲಿಬಿ ತುರಿಕೆ, ತುರಿಸಿದಷ್ಟೂ ಮತ್ತಷ್ಟು ಜಾಸ್ತಿ. ನಾನೆಲ್ಲೋ ಸಂದಿಯಲ್ಲಿ ಸುಮ್ಮನೇ ನೋಡುತ್ತಾ ವಿನಾಯಕ ಕಂಡ! ಗೆದ್ದ ಸಂಭ್ರಮದಲ್ಲಿ ಒಳಗೊಳಗೇ ನಗುತ್ತಿದ್ದ! ತುರಿಕೆ ಜಾಸ್ತಿಯಾಗಿ ವೈದ್ಯರನ್ನು ಕಾಣುತ್ತೇವೆ ಎಂದು ತಿಳಿಸಿ ಮುಕ್ತಕ್ಕವರು ಮನೆಗೆ ತೆರಳಿದರು. ಶಾಲೆಯಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ಪಠ್ಯಾವಧಿಗಳು ಖಾಲೀ ಬಿದ್ದವು. ಅಂತೂ ಅಂದಿಗೆ ಶಾಲೆಯ ಅವಧಿ ಮುಗಿದು ಮನೆಗೆ ತೆರಳಲು ಸೂಚಿಸುವ ಗಂಟೆಬಡಿಯಿತು. ಎಲ್ಲರೂ ಮನೆಗೆ ತೆರಳುವಾಗ ವಿನಾಯಕ ಬಹಳ ಸಂತೋಷದಿಂದ ನಗುತ್ತಿದ್ದ. " ಸರ್ ಡಬ್ ವಾಂಯ್ " ಎಂದ.

ಕೊನೆಗೆ ಗೊತ್ತಾಗಿದ್ದು ಇಷ್ಟು: ಹಿಂದಿನ ಸಾಯಂಕಾಲವೇ ವಿನಾಯಕ ಕೋಪದಿಂದ ಚೊಣಗಿ ಗಿಡ[ತುರಿಕೆ ಗಿಡ]ದ ಎಲೆಗಳನ್ನು ಪೇಪರಿನಲ್ಲಿ ಕಟ್ಟಿ ತಂದಿಟ್ಟುಕೊಂಡಿದ್ದ, ಬೆಳಿಗ್ಗೆ ಶಾಲೆಗೆ ಬಂದವನೇ ಮುಕ್ತಕ್ಕವರು ಕೂರುವ ಚೇರಿನ ಹಿಡಿಕೆ ಹಾಗೂ ಇನ್ನುಳಿದ ಎಲ್ಲಾ ಭಾಗಕ್ಕೆ ಅದನ್ನು ಸವರಿದ್ದ! ಅದರ ಪರಿಣಾಮ ಹೇಗಿರುತ್ತದೆ ಎಂದರೆ ಅನುಭವಿಸಿದ ಹಳ್ಳಿಗರಿಗೆ ಅಥವಾ ಹಳ್ಳಿಯ ಮೂಲದ ಜನರಿಗೆ ಮಾತ್ರ ಗೊತ್ತು! ಖುರ್ಚಿಯ ಮೇಲೆ ಕುಳಿತ ಮುಕ್ತಕ್ಕವರು ಕೈಮೈ ಖುರ್ಚಿಗೆ ಸೋಕಿರುವುದರಿಂದ ಆ ಸೊಪ್ಪಿನ ಪಸೆ ಮೈಗೆ ಹತ್ತಿಕೊಂಡಿದೆ, ತುರಿಕೆ ಶುರುವಾದಾಗ ಸರ್ ಅಂತ ಚೇರ್ ಎಳೆದು ಜಾರಿದ್ದಾರೆ, ಕೈಲಿದ್ದ ಡಸ್ಟರ್ ಡಬ್ ಎಂದಿ ನೆಲಕ್ಕೆ ಬಿದ್ದಿದ್ದೆ, ’ ಅಯ್ಯೋ ಏನಪ್ಪಾ ಇದು ’ ಎಂದು ಅವರು ತುರಿಸಿ ತುರಿಸಿ ಸುಸ್ತಾಗಿ ಕೈಮೈ ಕೆಂಪಗಾಗುತ್ತ ನಡೆದಿದೆ! ಕೊಬ್ಬರಿ ಎಣ್ಣೆ ಸವರಿಕೊಂಡರೆ ಆ ತುರಿಕೆ ನಿಲ್ಲುತ್ತಿತ್ತು. ಆದ್ರೆ ಹೇಳುವವರಾರು. ಯಾರಾದ್ರೂ ಬಾಯಿಬಿಟ್ಟರೆ ವಿನಾಯಕ ಮತ್ತೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಮೇಲಾಗಿ ಯಾವಮಕ್ಕಳನ್ನೂ ಎಂದಿಗೂ ಪ್ರೀತಿಯಿಂದ ಕಾಣದ ಮುಕ್ತಕ್ಕವರ ಮೇಲೆ ಬಹುತೇಕ ಮಕ್ಕಳಿಗೆ ಕೋಪವಿತ್ತು. ಯಾಕೆಂದರೆ ಒಂದಲ್ಲಾ ಒಂದುದಿನ ಅವರೂ ಬರೆಯದೇ ಬಂದವರೋ ಅಜ್ಜನಮನೆಗೆ ಹೋಗಿ ೩ ದಿನ ಬಿಟ್ಟು ಬಂದವರೋ ಆಗಿ ಶಿಕ್ಷೆ ಅನಿಭವಿಸಿದ್ದುಂಟು. ಹೀಗಾಗಿ ಯಾರೂ ಏನೂ ಚಕಾರವೆತ್ತಲಿಲ್ಲ. ವಿನಾಯಕನ ಕೈ ಮೇಲಾಯಿತು!

ಉಪಸಂಹಾರ [ ಇದು ಯಾರ ಸಂಹಾರವೂ ಅಲ್ಲ ಎಂಬುದಕ್ಕೆ !]
ಇದು ತಪ್ಪೋ ಒಪ್ಪೋ ಬೇರೆ ಪ್ರಶ್ನೆ. ತಪ್ಪೇ ಎಂದಿಟ್ಟಿಕೊಳ್ಳೋಣ. ಆದ್ರೆ ಇದೆಲ್ಲಾ ಅಂದಿನ ಬಾಲಕರ ಅಟಾಟೋಪಗಳು. ಅಂದು ಬಾಲಕರಿಗೆ ಮನೆಯಲ್ಲಿ ಯಾವ ಸಪ್ಪೋರ್ಟ್ ಸಿಗುತ್ತಿರಲಿಲ್ಲ. ಇಂದಾದರೆ ಸ್ವಲ್ಪ ಅಬ್ಬರಿಸಿದರೆ ಸಾಕು ಶಿಕ್ಷಕರಿಗೆ ಗ್ರಹಚಾರ ಕಾದಿರುತ್ತದೆ, ಪಾಲಕರು ಶಾಲೆಗಳಿಗೆ ನುಗ್ಗುತ್ತಾರೆ, ಕೊನೇಪಕ್ಷ ಯಾಕೆ ಹಾಗೆ ಮಾಡಿದ್ದು ಎಂದು ವಿಚಾರಿಸಿ ಮತ್ತೆ ಹಾಗೆ ಮಾಡದಂತೇ ಹೇಳುತ್ತಾರೆ. ಅಂದಿನ ನಮ್ಮ ಬಾಲ್ಯಕಾಲದಲ್ಲಿ ನಮಗೆ ನಾವೇ ಮಕ್ಕಳ ಮರಿ ಸೈನ್ಯ! ಏನಿದ್ದರೂ ನಾವೇ ಬಗೆಹರಿಸಿಕೊಳ್ಳಬೇಕು. ಶಾಲೆಗಳಲ್ಲಿ ಏನಾದರೂ ವಿಶೇಷವಿದ್ದರೆ ಮಾತ್ರ ಮನೆಯವರು ಬರುತ್ತಿದ್ದರು. ಅವರು ಎಂದಿಗೂ ಶಿಕ್ಷಕರಿಗೆ ಎದುರಾಡಿದವರಲ್ಲ! ನಮ್ಮಗಳ ಮನೆಯಲ್ಲಿ ಶಿಕ್ಷಕರು ಹಬ್ಬ ಹರಿದಿನಗಳಲ್ಲಿ ಆಗಾಗ ಆಮಂತ್ರಣದ ಮೇಲೆ ಊಟಕ್ಕೆ ಬರುತ್ತಿದ್ದರು.ಅವರು ಬಂದು ಹೋಗುವವರೆಗೂ ನಾವು ಕೋಣೆಯಿಂದಾಚೆ ಕಾಲಿಟ್ಟವರೇ ಅಲ್ಲ! " ಎಲ್ಲಿ ಇವನು " ಅಂತ ಮಾಸ್ತರು ಕೇಳಿದರೆ " ಇದ್ದಾನೆ ಇದ್ದಾನೆ, ಅವನಿಗೆ ನೀವು ಬಂದಿದ್ದೀರಲ್ಲಾ ಅದಕ್ಕೇ ನಾಚಿಕೆ " ಎಂದುತ್ತರಿಸುವ ಮನೆಯವರು ನಮ್ಮನ್ನು ಕರೆದು ಹೊರಬರುವಂತೇ ಹೇಳುತ್ತಿದ್ದರು. ಬಂದು ಹೋದ ಶಿಕ್ಷಕರು ಒಂದೆರಡು ದಿನ ಮೊಬೈಲ್ ಚಾರ್ಜ್ ಇದ್ದಹಾಗೇ ನಮ್ಮಗಳ ಮನೆಯ ನೆನಪಿನಲ್ಲಿದ್ದು ಆ ಮನೆಯ ಮಕ್ಕಳಿಗೆ ಶಿಕ್ಷೆ ಕೊಡುತ್ತಿರಲಿಲ್ಲ, ಮೂರನೇ ದಿನ ಯಥಾಸ್ಥಿತಿ ಅಂದ್ಕೊಳಿ! ಆದರೂ ನಮ್ಮ ಪಾಲಕರು ಕೊಡುವ ಊಟ ಮಕ್ಕಳನ್ನು ಶಿಕ್ಷಿಸದಿರಲಿ ಎಂಬುದಕ್ಕೆ ಲಂಚವಲ್ಲವಲ್ಲ,ಬದಲಾಗಿ ಮಕ್ಕಳನ್ನು ಇನ್ನೂ ಬಡಿದು,ತಿದ್ದಿ-ತೀಡಿ ಎಂಬ ಒತ್ತೇ ಅದರಲ್ಲಿರುತ್ತಿತ್ತು.

ಓದಿದಿರಿ ತಾನೇ? ಇಷ್ಟುಸಾಕು, ಸರ್ ಡಬ್ ವಾಂಯ್ ನಿಮ್ಮಲ್ಲೂ ಇದ್ದರೆ ಹೇಳಿ, ನಾನು ಕೇಳಬೇಕು. ಈ ಸರ್ ಡಬ್ ವಾಂಯ್ ಹಲವು ತೆನ್ನಾಲಿಗಳನ್ನು ಹುಟ್ಟುಹಾಕಲಿ ಎಂದು ಹಾರೈಸುತ್ತೇನೆ,ನಮಸ್ಕಾರ.

’ಅಹಂ ಬ್ರಹ್ಮಾಸ್ಮಿ’ !!


’ಅಹಂ ಬ್ರಹ್ಮಾಸ್ಮಿ’!!

[ ಅನೇಕ ಮಿತ್ರರು ಮೇಲ್ ಮಾಡಿ ಕೇಳಿದ್ದರಿಂದ ನನಗೆ ನವ್ಯಕಾವ್ಯ ಬರೆಯಲು ಇಷ್ಟವಿಲ್ಲದಿದ್ದರೂ ಬರೆಯಬೇಕಾಗಿ ಬರೆದೆ, ಓದಿನೋಡಿ, ಖುಷಿಕೊಡಲಿ ಬಿಡಲಿ ಓದುವುದು ನಿಮ್ಮ ಧರ್ಮ, ಬರೆಯುವುದು ನಮ್ಮ ನಿತ್ಯಕರ್ಮ ! ]

ಹದಿನಾರು ಸಲ ಬರೆದೆ
ಹದಿನಾರು ಅಪೂರ್ಣ ಕೃತಿಗಳು
ಎಲ್ಲವೂ ನನಗಂತೂ ಭಾವಪೂರ್ಣ
ಮಿಕ್ಕವರಿಗೆ ಅರ್ಥಹೀನ !
ಇದು ನನ್ನ ಪ್ರಾಮಾಣಿಕ ಪ್ರಯತ್ನ
ಹಲವುದಿನಗಳ ನಿದ್ದೆಗೆಟ್ಟ ಶ್ರಮ
ಶಬ್ದಗಳನ್ನೆಲ್ಲ ಕಲೆಹಾಕಿ
ಬೇಯಿಸಿ ಸೋಸಿ ಬಸಿದು ಕೊಟ್ಟ
ಹೊಚ್ಚಹೊಸ ಕವನಗಳು
ನೀವು ನಂಬಿ ಬಿಡಿ ಇದು ನನ್ನವೇ
ಸದ್ಯಕ್ಕೆ ನೀವು ನಂಬುತ್ತೀರಿ
ಯಾಕೆಂದರೆ ಇವೆಲ್ಲವೂ ಅಪೂರ್ಣ!
ಅವುಗಳಿಗೆ ಹಾಲು-ಮೊಸರನ್ನವುಣಿಸಿ
ನೀರೆರೆದು ಎಣ್ಣೆಹಚ್ಚಿ ತಲೆಬಾಚಿ
ಒಳ್ಳೆಯ ಬಟ್ಟೆ ತೊಡಿಸಿ ರಂಗಿಗೆ ಪೌಡರ್ ಹಾಕಿ
ಕಾಲಿಗೆ ಸಾಕ್ಸು ಶೂ ಹಾಕಿ
ನಿಮ್ಮ ಮುಂದೆ ನಡೆಯಬಿಟ್ಟಾಗಲೇ ನೀವೆನ್ನುತ್ತೀರಿ
ವಾ ವಾ ಎಂತಹ ಚೆಂದದ ಕವಿತೆಗಳಪ್ಪಾ!

ನನ್ನಗೋಳು ನನಗೇ ಗೊತ್ತು
ಮಲಬದ್ಧತೆಯಾದವರ ರೀತಿ
ಅವುಗಳ ಮುನ್ನಡೆಸುವಿಕೆ ಇನ್ನೂ ಹೊಳೆದಿಲ್ಲ
ನನ್ನೊಳಗೆ ಹಲವು ಕವಿ ಹುಟ್ಟಿ ಹುಟ್ಟಿ
ಮತ್ತೆ ಮತ್ತೆ ಸತ್ತುಹೋದ ಅನುಭವ
ಆದರೂ ಬಿಡಲಾರದ ತ್ರಿವಿಕ್ರಮ ನಂಟು !
ಹೊರಪ್ರಪಂಚಕೆ ಇದರ ಅರಿವುಂಟೇ ?
ನಿದ್ದೆ ಬಾರದೇಕೆ ಕನಸು ಬೀಳದೇಕೆ
ಕನಸಿನಲ್ಲಿ ಯಾರೋ ಬಂದು ಹೇಳಿಕೊಟ್ಟರೆ
ಮಾರನೇ ಬೆಳಿಗ್ಗೆಯೊಳಗೆ ಕವನಗಳನ್ನು
ಬರೆದು ಪ್ರಕಟಿಸಿಬಿಡುತ್ತಿದ್ದೆ
ಆಗ ಒತ್ತಟ್ಟಿಗೆ ಕೊಡುವ ಕೃತಿಗಳನ್ನು
ನೋಡಿ ಬೇಗ ಓದಿ ಅರ್ಥಮಾಡಿಕೊಳ್ಳಲಾರದ
ನಿಮ್ಮನ್ನು ಮರೆಯಲ್ಲಿ ನಿಂತು
ರಾಮ ವಾಲಿಗೆ ಬಾಣ ಬಿಟ್ಟಂತೇ
ಛೂಬಾಣ ಬಿಟ್ಟು ನಿಮ್ಮನ್ನು ಗೆದ್ದು ತೃಪ್ತನಾಗುತ್ತಿದ್ದೆ!
ಆದರೂ ರಾಮ ಕನಿಕರಿಸಿದಂತೆ
ಆಮೇಲೆ ನಿಮಗೆಲ್ಲಾ ನಾನೇ ಹೇಳಿಬಿಡುತ್ತಿದ್ದೆ
"ಓದಿದ ಮಹನೀಯರೇ ನಿಮಗಿದೋ ನಮನ" ಎಂದು

ಒಮ್ಮೆ ಹೀಗೂ ಅನಿಸುತ್ತದೆ
ಇಷ್ಟೆಲ್ಲಾ ಮಾಡುವುದು ಯಾವ ಪುರುಷಾರ್ಥಕ್ಕೆ ?
ನಾಕು ಜನರಿಗೆ ಅನ್ನಹಾಕಲಾರೆ
ಬೇಕಾದಂತೆಲ್ಲಾ ಬದುಕಲಾರೆ
ಸಂಬಳವೂ ಇಲ್ಲ ಗಿಂಬಳವೂ ಇಲ್ಲ
ಅಂದಮೇಲೆ ಇಂತಹ ನನಗೆ ಅಪೂರ್ವವಾದ
ಕೃತಿಗಳನ್ನು ಸುಮ್ಮನೇ ತಲೆಕೆಡಿಸಿಕೊಂಡು ನಾ ಬರೆದರೆ
ಓದುವ ಜನರಿಗೆ ಅರ್ಧವಾದ ರೀತಿಯಲ್ಲಿ
ಅದು ರುಚಿಸದೇ ಇದ್ದಾಗ
ಯಾವೊಬ್ಬನೂ ಹೂತ ರಥದ ಚಕ್ರವನ್ನು
ಎತ್ತಲು ಕರ್ಣನಿಗೆ ಸಹಾಯಮಾಡದಾಗ
ಚಕ್ರವ್ಯೂಹದಿಂದ ಹೊರಬರುವ
ಪ್ಲಾನು ಹೇಳಿಕೊಡದಾದಾಗ
ಮರುಕ ಹುಟ್ಟುತ್ತದೆ ನನ್ನ ಬಗೆಗೇ ನನಗೆ
ಜಗತ್ತೇ ಹೀಗೆ--ಸ್ವಾರ್ಥವೇ ತುಂಬಿದೆ!

ಅದಾಗಿ ಮೂರುದಿನ ಮಂಚಬಿಟ್ಟೇಳದಷ್ಟು
ಚಳಿಜ್ವರ ಬಂದಾಗ ನಾನು ಹಲವತ್ತಿದ್ದೇನೆ
ಯಾಕಪ್ಪಾ ಇದೂ ಬದುಕೇ ?
ನಾನು ಭಂಡಾಯನಲ್ಲ ಭಕ್ತಿ ಭಂಡಾರಿಯೂ ಅಲ್ಲ
ವರಕವಿಯೂ ಆಗಲಿಲ್ಲವೆಂಬ ನರಕಯಾತನೆ!
ಬರೆದೂ ಬರೆದೂ ಬರೆದೂ ತೂರಿಬಿಡುತ್ತೇನೆ
ಓದುವರು ಓದಲಿ ಓದದೇ ಇದ್ದರೆ ಬಿದ್ದಿರಲಿ
ಇವತ್ತಲ್ಲಾ ನಾಳೆ ಹಳೇ ಪೇಪರ್ ಮಾರುವ ಹುಡುಗ
ಅವನ ಪೇಪರ್ ಗಂಟಿನಿಂದ ಹೊರಡುವ
ಅಸಾಧ್ಯ ದನಿಕೇಳಿ ಬಿಚ್ಚಿ ತೆಗೆದು ನೋಡುತ್ತಾನೆ
ಸರಿಯಾಗಿ ಅರ್ಥವಾಗದಾಗ
ಹಿರಿಯರಿಗೆ ಕೊಡುತ್ತಾನೆ ಆಗ
ಅಲ್ಲಿ ಘಟಿಸುತ್ತದೆ ಶುಭಮುಹೂರ್ತ
ಮತ್ತೆ ಚಿಗುರುತ್ತವೆ ನನ್ನ ಕೃತಿಗಳು
ಮಂಕುತಿಮ್ಮನ ಕಗ್ಗದಂತೆ
ಮೈಸೂರು ಮಲ್ಲಿಗೆಯಂತೆ
ಹೆಚ್ಚೇಕೆ ಬೇಂದ್ರೆಯರನಾಕು ತಂತಿಯಂತೇ
ಹೀಗೆಂದುಕೊಂಡು ಮುಸುಕೆಳೆದು ಮಲಗುತ್ತೇನೆ
ತಪಸ್ಸು ಮಾಡುತ್ತೇನೆ ಮನಸಾರೆ
ಮುಂದೆಂದಾದರೂ ಮತ್ತೆ ಕವಿಯಾಗಿ ನಾ ಕಣ್ತೆರೆದರೆ
ಆಗ ನೀವೆನ್ನುತ್ತೀರಿಕಾವ್ಯ ಬ್ರಹ್ಮರ್ಷಿ’ !
ಅಂದಾದರೂ ಅನ್ನಿ ಬಿಟ್ಟಾದರೂ ಬಿಡಿ
ನಾನು ಬರೆದೇ ತೀರುತ್ತೇನೆ
ಇಂದಿಂಗೂ ಎಂದಿಗೂ ನಾನಿರುವವರೆಗೂ !