ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, May 13, 2013

ಕಪ್ಪೆ ಶಂಕರ ಮತ್ತೆ ಶಂಕರ ಮತ್ತು ನನ್ನ ಬಾಲ್ಯ

ಚಿತ್ರಗಳ ಕೃಪೆ : ಶೃಂಗೇರಿ ಡಾಟ್ ನೆಟ್ 
ಕಪ್ಪೆ ಶಂಕರ ಮತ್ತೆ ಶಂಕರ ಮತ್ತು ನನ್ನ ಬಾಲ್ಯ

ಮನೆಯ ಪಕ್ಕದಲ್ಲಿ ಬೆಕ್ಕು ಮರಿಹಾಕಿತ್ತು. ಅದರಲ್ಲೇನು ವಿಶೇಷವೆಂದು ನೀವು ಕೇಳುವ ಮುನ್ನ ಉತ್ತರ ರೆಡಿಯಾಗಿದೆ, ಬೆಕ್ಕು, ನಾಯಿ ಅಥವಾ ಯಾವುದೇ ಪ್ರಾಣಿ/ಜೀವಿ ಮರಿಹಾಕುವುದು ಸಹಜವಷ್ಟೆ. ಆದರೆ ಇದು ಮರಿಹಾಕುವ ವಿಷಯಕ್ಕಿಂತ ಮರಿಗಳನ್ನು ಜೋಪಾನಮಾಡಿ ಬೆಳೆಸುವ, ಲಾಲನೆಪಾಲನೆ ಮಾಡುತ್ತ ಪೋಷಿಸುವ ಅಮ್ಮನ ಮುದ್ದಿನ ಬಗೆಗಿನ ಮಾತು. ಬೆಕ್ಕು ಮರಿಹಾಕುವಾಗಲೇ ಹುಟ್ಟಿದ ಮರಿಗಳಿಗೆ ಯಾವುದೇ ಬಾಧೆ ತಟ್ಟದಂತೇ ಸೂಕ್ತ ಜಾಗವನ್ನು ಆಯ್ದುಕೊಳ್ಳುತ್ತದೆ, ಬಹುಶಃ ಎಲ್ಲಾ ಪ್ರಾಣಿಗಳೂ ಕೂಡ ಆದಷ್ಟು ಹಾಗೇ ಮಾಡುತ್ತವೆ. ಮರಿಗಳು ಹೊರಬಂದಾಗ ಕಣ್ಣನ್ನೂ ತೆರೆಯದೇ ಕೂಗಲಾರಂಭಿಸುತ್ತವೆ; ಕಿರುಚುವುದು ಅವುಗಳ ಬೇಡಿಕೆಯನ್ನು ಮಂಡಿಸಲಿಕ್ಕೆ. ಹೊಟ್ಟೆ ಹಸಿಯುತ್ತದೆ ಆದರೆ ಏನು ಮಾಡಬೇಕೆಂಬುದು ತಿಳಿಯುವುದಿಲ್ಲ ಎಂದಾದಾಗ ಮರಿಗಳು ಲಬೋ ಲಬೋ ಎಂದು ಕಿರುಚುವುದು ವಾಡಿಕೆ. ಕೆಲವೊಮ್ಮೆ ಬೇರೇ ತೊಂದರೆಗಳಲ್ಲೂ ಹಾಗೆ ಕೂಗಿಕೊಳ್ಳಬಹುದು. ಹೆತ್ತ ಮರಿಗಳನ್ನು ಕಣ್ಣೆವೆ ಮುಚ್ಚದೇ ಕಾಪಾಡುವುದು ಅಮ್ಮನ ಜವಾಬ್ದಾರಿ. ಅದು ಅನೂಹ್ಯ ಅನನ್ಯ ಕರುಳ ಮಿಡಿತ, ಹೃದಯದ ತುಡಿತ. ಮರಿಗಳಿಲ್ಲದೇ ಅಮ್ಮ ಇಲ್ಲ, ಅಮ್ಮನಿಲ್ಲದೇ ಮರಿಗಳಿಲ್ಲ ಎಂಬಂಥಾ ಸ್ಥಿತಿ. ಹಾರುವ ಗಿಡುಗ-ಹದ್ದುಗಳ ಕಣ್ಣಿಗೆ ಬೀಳದಂತೇ, ಬಿಸಿಲು-ಮಳೆ ಮೈಗೆ ಸೋಕದಂತೇ ಎಳೆಯ ಕಂದಮ್ಮಗಳನ್ನು ಹಚ್ಚಗೆ ಬೆಚ್ಚಗೆ ಸುರಕ್ಷಿತವಾಗಿರುವಂತೇ ಪಾಲಿಸುವುದು ಅಮ್ಮನಿಗಿರುವ ದೈವೀದತ್ತ ಕಲೆ.  

ಮೊನ್ನೆ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಬಂದಾಗ ನನ್ನ ಬಾಲ್ಯದ ನೆನಪಾಯ್ತು. ಮಳೆಗಾಲದ ಆರಂಭದಲ್ಲಿ ಕರಾವಳಿಯಲ್ಲಿ ಗುಡುಗಿನ ಅಬ್ಬರ ಸದಾ ಇರುತ್ತದೆ. ಕಿವಿಗಡಚಿಕ್ಕುವ ’ಗುಡುಗುಮ್ಮನ’ ಸದ್ದಿಗೆ ಎಳೆಯ ಮಕ್ಕಳಾದ ನಾವೆಲ್ಲಾ ಬಹಳ ಹೆದರಿಕೊಳ್ಳುತ್ತಿದ್ದುದುಂಟು. ಕೋಲ್ಮಿಂಚು ನೋಡಲು ಹಿರಿಯರು ಹೊರಗೆ ಕರೆದರೂ ಕೂಡ, ಗುಡುಗುಮ್ಮ ಬರುವ ಸಂಭವನೀಯತೆಗೆ ನಮ್ಮ ಬಯಕೆ ಬತ್ತಿಹೋಗುತ್ತಿತ್ತು. ರಾತ್ರಿಯಲ್ಲಿ ನಾನು ಮಲಗುತ್ತಿದ್ದುದು ಅಜ್ಜ-ಅಜ್ಜಿಯರ ಮಧ್ಯೆಯಲ್ಲಿ. ಅದೊಂದು ಸಂತೃಪ್ತ ಅವಿಭಕ್ತ ಕುಟುಂಬ ಜೀವನ. ಪ್ರಾಯಶಃ ಇಂದಿನ ದಿನಮಾನದಲ್ಲಿ ಎಲ್ಲೂ ಕಂಡುಬರುವುದು ಅಪರೂಪ. ರಾತ್ರಿ ಏರೇರ್ರಿ ಅಬ್ಬರಿಸುವ ಗುಡುಗುಮ್ಮನ ಸದ್ದಿಗೆ ಎಚ್ಚರಗೊಳ್ಳುತ್ತಿದ್ದರೆ, ಅಜ್ಜ-ಅಜ್ಜಿ ಯಾರಾದರೊಬ್ಬರು ತಮ್ಮ ಹೊದಿಕೆಯಲ್ಲಿ ನನ್ನನ್ನು ಸೇರಿಸಿಕೊಂಡು ಸಂಭಾಳಿಸುತ್ತಿದ್ದರು; ಅವರ ಬೆಚ್ಚನೆಯ ಹೊದಿಕೆಯಲ್ಲಿ ರಕ್ಷಣೆ ಸಿಕ್ಕ ನಿರಾಶ್ರಿತರಂತೇ ಹಾಯಾಗಿ ನಿದ್ದೆಗೆ ಜಾರುತ್ತಿದ್ದೆ. ಆ ದಿನಗಳಲ್ಲಿ ಮುಂದೊಂದು ದಿನ ಹೊರ ಜಗತ್ತಿನ ಅರಿವು ನಮಗಾಗಬಹುದೆಂಬ ಯಾವೊಂದು ಅನಿಸಿಕೆಯೂ ಇರಲಿಲ್ಲ. ನಮಗೆ ನಮ್ಮದೇ ಆದ ಜಗತ್ತು, ನಮ್ಮದೇ ಜಾಯಮಾನ, ಆಟ-ಪಾಠ-ಕಲಿಕೆ, ಅದರಾಚೆಗೆ ನಾವೆಂದೂ ತಲೆಹಾಕಿದವರೇ ಅಲ್ಲ!

ಗುಡುಗಿನ ಅಬ್ಬರವಾಗಲೀ ಸಮುದ್ರದ ಭೋರ್ಗರೆತವಾಗಲೀ ಹೆಚ್ಚಲ್ಲ ಆದರೆ ಜೀವನ ಎಂಬ ಸಾಗರದ ಅಲೆಗಳ ಮೊರೆತ ಮಾತ್ರ ಬಹುದೊಡ್ಡದು ಎಂದು ತಿಳಿಯಲು ಆರಂಭಿಸಿದ್ದು ಕಾಲೇಜಿಗೆ ಹತ್ತಿದಮೇಲೆ. ಓದು ಮುಗಿಸಿ ದುಡಿಮೆಗೆ ಇಳಿಯುವಾಗ ಹಾಗೂ ಆ ನಂತರದ ಜೀವನವನ್ನು ಅವಲೋಕಿಸಿದರೆ ’ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂದು ಅನುಭವಿಕರು ಯಾಕೆ ಹೇಳಿದರು ಎಂಬುದು ತಿಳಿಯಿತು. ಅಲ್ಲಿಯವರೆಗೂ ಅಂಥಾ ಯಾವುದೇ ತೊಂದರೆಗಳು ಬಾಧಿಸದಂತೇ ನೋಡಿಕೊಂಡವರು ನಮ್ಮ ಹಿರಿಯರು. ಎಳವೆಯಲ್ಲೇ ನಮ್ಮನ್ನು ದುಡಿಮೆಗೆ ಹಚ್ಚದೇ, ತಮ್ಮ ಕಷ್ಟಾರ್ಜಿತದಲ್ಲೇ ನಮಗೆ ಸಿಗಬಹುದಾದ ವಿದ್ಯೆಯನ್ನು ಕೊಡಿಸಿ, ಜೀವನದ ಮೌಲ್ಯಗಳನ್ನೂ ಬದುಕುವ ಕ್ರಮವನ್ನೂ ಕಲಿಸಿಕೊಟ್ಟು ಒಂದು ಹಂತಕ್ಕೆ ತಂದರು. ಆ ನಂತರದಲ್ಲಿ ಎಲ್ಲರಂತೇ ನಮ್ಮ ಜೀವನದ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕಾಯ್ತು. ಅವರ ಕೃಪಾಶ್ರಯದಲ್ಲಿ ಬೆಳೆದ ನನಗೆ, ಆರ್ಥಿಕ ಜಂಜಡಗಳಾಗಲೀ ಇನ್ನಾವುದೇ ತಾಪತ್ರಯಗಳಾಗಲೀ ಇಲ್ಲದಿದ್ದ ಬಾಲ್ಯವನ್ನು ನೆನೆದಾಗ ಮತ್ತೆ ಬಾಲಕನಾಗಿಯೇ ಇರುವ ಆಲೋಚನೆ ಎದ್ದುಬಿಡುತ್ತದೆ, ಅದು ಸಾಧ್ಯವೇ?  

ಕಳೆದ ಹದಿನೈದು ವರ್ಷಗಳಿಂದ ಪ್ರತೀ ಮಳೆಗಾಲದಲ್ಲೂ ಗುಡುಗು ಅಬ್ಬರಿಸಿದಾಗ ಪಾಲಕರು/ಪೋಷಕರು  ಜೊತೆಯಲ್ಲಿರಲಿಲ್ಲ, ಆದರೂ ಗುಡುಗಿಗೆ ಮನಸ್ಸು ಹೆದರಲಿಲ್ಲ. ಗುಡುಗು ಎಂದರೇನು, ಮಿಂಚು ಎಂದರೇನು, ಅವುಗಳ ಉತ್ಪತ್ತಿ ಹೇಗೆ? ಯಾಕೆ? ಇವುಗಳನ್ನೆಲ್ಲಾ ಓದುತ್ತಾ ದೊಡ್ಡವರಾಗುತ್ತಿದ್ದರೂ, ಊರಿನ ಮನೆಯಲ್ಲಿರುವವರೆಗೂ ಹಿರಿಯರ ಆರೈಕೆಯ, ರಕ್ಷಣೆಯ ನಿರೀಕ್ಷೆಯಿರುತ್ತಿತ್ತು. ಪಾಪ, ನಮ್ಮ ಹಿರಿಯರ ಬಗ್ಗೆ ಅವರ ಹಿರಿಯರು ಅಷ್ಟೊಂದು ಕಾಳಜಿ ವಹಿಸಿದರೋ ಇಲ್ಲವೋ ಆದರೂ ನಮಗಂತೂ ಅದು ಚ್ಯುತಿಯಾಗಲಿಲ್ಲ. ಹೊರಪ್ರಪಂಚಕ್ಕೆ ಒಂದೊಂದೇ ಕಾಲಿಡುತ್ತಾ ಸಮಾಜವನ್ನು ನಾವು ಅರ್ಥಮಾಡಿಕೊಳ್ಳತೊಡಗಿದಾಗ, ಜಗತ್ತು ನಾವಂದುಕೊಂಡಷ್ಟು ಸುಂದರವಲ್ಲ ಎಂಬ ಕಟು ಸತ್ಯ ಅನುಭವವೇದ್ಯವಾಯ್ತು. ಸಮಾಜದಲ್ಲಿನ ಹಲವು ಕಲ್ಮಶಗಳಲ್ಲಿ ಸಿಕ್ಕು ತೊಳಲಾಡುವಂತಾದ ಮುಗ್ಧ ಮನಸ್ಸು, ಒಂದು ಹದಕ್ಕೆ ನೆಲೆನಿಲ್ಲುವಾಗ ಕೆಲವು ಸಮಯ ತೆಗೆದುಕೊಂಡಿತು.

ಚಿಕ್ಕವನಾಗಿದ್ದಾಗ, ಮನುಷ್ಯ ಎಂಬುದು ಜೀವವರ್ಗದಲ್ಲೊಂದು ಪ್ರಭೇದ, ಹಲವು ಪ್ರಾಣಿಗಳಲ್ಲಿ ಮನುಷ್ಯನೆಂಬುದು ಬುದ್ಧಿಯುಳ್ಳ ಪ್ರಾಣಿ ಎಂಬುದನ್ನೆಲ್ಲಾ ಜೀವಶಾಸ್ತ್ರದಲ್ಲಿ ಓದಿಕೊಂಡ ಬಳಿಕ ಆಹಾರ ಪ್ರಕ್ರಿಯೆಯಲ್ಲಿ ಆಹಾರ ಸರಪಳಿಯ ಬಗೆಗೆ ತಿಳಿದುಕೊಳ್ಳಬೇಕಾದ ಪ್ರಮೇಯ ಬಂತು. ಕೀಟ-ಕಪ್ಪೆ-ಹಾವು-ಹದ್ದು ಈ ರೀತಿಯಲ್ಲಿ ಅವುಗಳ ವಿವರಗಳನ್ನು ತಿಳಿದಾಗ ಯಾಕೋ ಖುಷಿಯೆನಿಸಲಿಲ್ಲ. ಆದರೆ ಆ ಪ್ರಾಣಿಗಳಿಗೆ ತೀರಾ ವಿಕಸಿತ ಮೆದುಳು ಇಲ್ಲವೆಂಬುದನ್ನು ಜೀವಶಾಸ್ತ್ರ ಹೇಳುತ್ತಿತ್ತು. ಕೀಟದ ಮೆದುಳಿಗಿಂತ ಕಪ್ಪೆಯ ಮೆದುಳು ವಿಕಸಿತ, ಕಪ್ಪೆಯ ಬುದ್ಧಿಮಟ್ಟಕ್ಕಿಂತ ಹಾವಿನದು ವಿಕಸಿತ, ಹಾವಿಗಿಂತ ಹದ್ದಿನದು ವಿಕಸಿತ ....ಹೀಗೇ ಮೆದುಳು ಎಂಬ ಕ್ರಿಯಾಶೀಲ ಅಂಗಕ್ಕೆ ತಾಕತ್ತನ್ನು ಒದಗಿಸುವ ಶಕ್ತಿಯ ಬಗೆಗೆ ಮಾತ್ರ ನಾವು ಅರಿಯಲೇ ಇಲ್ಲ! ಒಂದು ಇನ್ನೊಂದನ್ನು ಕೊಂದು-ತಿಂದು ಬದುಕುತ್ತದೆ ಎಂದಾದಾಗ ಅವುಗಳ ಜೀವನ ಅದೆಷ್ಟು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ ಅನ್ನಿಸಿತು. ಅಪ್ಪ-ಅಮ್ಮನ ಅರಿವು ಕ್ರಿಮಿ-ಕೀಟಗಳಾದಿಯಾಗಿ ಎಲ್ಲಾ ಜೀವಿಗಳಿಗೂ ಇರುತ್ತದೋ ಇಲ್ಲವೋ ಆದರೆ ಕೆಲವು ಪ್ರಾಣಿಗಳಿಗಂತೂ ಆ ಅನುಭವ ಇರುತ್ತದೆ ಎಂಬುದನ್ನು ಬೆಕ್ಕು-ನಾಯಿಗಳ ಸಂಸಾರದಿಂದ ಕಂಡುಕೊಳ್ಳಬಹುದು. 

ಆಹಾರಕ್ಕಾಗಿ ಪ್ರಾಣಿಗಳು ಇತರೆ ಪ್ರಾಣಿಗಳನ್ನು ಕೊಲ್ಲುವುದು ಅನಿವಾರ್ಯವೆಂದಾಯ್ತು, ಆದರೆ ಅತಿವಿಕಸಿತ ಮೆದುಳನ್ನು ಪಡೆದ ಮಾನವ ತನ್ನ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವುದು ಮನಸ್ಸಿಗೆ ಬಹಳ ಬಾಧಿಸಿಬಿಟ್ಟಿತು. ಪಂಚೇಂದ್ರಿಯಗಳಲ್ಲಿ ಒಂದಾದ ಜಿಹ್ವೆಯ ಚಾಪಲ್ಯಕ್ಕಾಗಿ, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪರ್ಯಾಯ ಅನುಕೂಲ ಮತ್ತು ಅವಕಾಶಗಳಿದ್ದರೂ ಜೀವಿಗಳನ್ನು ಸಾಕುವುದು, ಸಾಕಿ ಕೊನೆಗೊಮ್ಮೆ ಏಕಾಏಕಿ ಕತ್ತರಿಸಿ ಭುಂಜಿಸುವುದು ಬಹಳ ನೋವನ್ನು ತರುವ ಸಂಗತಿ. ನಗರವಾಸಿಯಾದಮೇಲೆ, ಓಡಾಡುವ ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಕೋಳಿಗಳನ್ನು ಇಟ್ಟು ಮಾರುವಾಗ ಕತ್ತರಿಸುವ ಸಮಯದಲ್ಲಿ ಅವು ಜೀವಭಯದಿಂದ ಕೂಗಿಕೊಳ್ಳುವ ಆರ್ತನಾದವನ್ನು ಕೇಳಿದರೆ ಅವುಗಳಿಗೂ ಬದುಕುವ ಅಧಿಕಾರವಿಲ್ಲವೇ ಅನ್ನಿಸುತ್ತದೆ. ಬುದ್ಧಿವಂತ ಮಾನವ ಕಾಡುಪ್ರಾಣಿಗಳಲ್ಲಿ ಹಲವನ್ನು ತನ್ನ ತೆವಲಿಗೆ ಕತ್ತರಿಸಿ ತಿನ್ನುತ್ತಿದ್ದ, ಅವು ಸಿಗದಂತಾದ ನಂತರದ ದಿನಗಳಲ್ಲಿ,  ಕೋಳಿ, ಕುರಿ, ಮೊಲ, ದನ ಇತ್ಯಾದಿಗಳನ್ನು ಹಿಂಸಿಸುವುದನ್ನು [ವಿಪರ್ಯಾಸವೆಂದರೆ ಅಂತಹ ಜನಗಳೇ ಪ್ರಾಣಿದಯಾ ಸಂಘಗಳನ್ನು ನಡೆಸುತ್ತಾರೆ, ಕಾಗೆ-ನಾಯಿ-ಗಿಡುಗಗಳನ್ನು ಅಪಾಯದಿಂದ ರಕ್ಷಿಸಲು ಮುಂದಾಗಿ "ಜೀವಿಯ ಜೀವರಕ್ಷಣೆ ಮಾಡಿದೆವು" ಎಂದು ಟಿವಿಯಲ್ಲಿ ಪೋಸುಕೊಡುತ್ತಾರೆ!] ನೆನೆದರೆ ಅವುಗಳ ಕುಟುಂಬ ಜೀವನ, ಅವುಗಳ ಮಕ್ಕಳು-ಮರಿಗಳು, ಆ ಮರಿಗಳ ಮುಂದಿನ ಸ್ಥಿತಿ ಇವುಗಳನ್ನೆಲ್ಲಾ ನೆನೆದು ಬಹಳ ಸುಸ್ತಾಯ್ತು. ಒಮ್ಮೆಯಂತೂ ದೇವರಲ್ಲಿ ಇಡೀ ದಿನ ಪ್ರಾರ್ಥಿಸಿದ್ದಿದೆ:"ಓ ದೇವರೇ ಈ ಪ್ರಪಂಚವನ್ನು ಹಿಂಸೆಯಿಂದ ಮುಕ್ತಗೊಳಿಸು" ಎಂದು.

ಇರುವೆಯಿಂದ ಹಿಡಿದು ಆನೆಯ ವರೆಗಿನ ಎಂಬತ್ತು ಕೋಟಿ ಜೀವರಾಶಿಗಳಲ್ಲಿ, ಪಾಪ ಮಾಡಿದವರು ವಿಕಸಿತ ಮೆದುಳಿಲ್ಲದ ತೀರಾ ಕೆಳಗಿನ ಜೀವ ಪ್ರಭೇದಗಳಲ್ಲಿ ಜನಿಸುತ್ತಾರಂತೆ! ಕುರಿ-ಕೋಳಿ-ದನ-ಮೊಲ ಇವುಗಳೆಲ್ಲವನ್ನೂ ವಧಿಸುವುದನ್ನು ಕಂಡಾಗ, ಅವುಗಳಿಗೆ ಚಿತ್ರಹಿಂಸೆ ನೀಡುವುದನ್ನು ಕಂಡಾಗ, ಅಂತಹ ಜನ್ಮ ನಮಗೆ ಬಾರದಂತೇ ನಾವು ಪಾಪಮುಕ್ತವಾಗಬೇಕು ಅನ್ನಿಸಿತು. ಆದರೆ ಪರಿಪೂರ್ಣ ಪಾಪಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಅನ್ನಿಸಲೇರ್ ಇಲ್ಲ. ಯಾಕೆಂದರೆ ಯಾವುದೇ ಜೀವಿಯನ್ನು ನೇರವಾಗಿ ನಾವು ವಧಿಸಿ ತಿನ್ನಲು ಹೋಗದಿದ್ದರೂ, ಕಚ್ಚುವ ಸೊಳ್ಳೆಗಳನ್ನು ಚಚ್ಚಿಹಾಕುತ್ತೇವೆ, ಕಾಡುವ ಇರುವೆ-ಜಿರಲೆ-ತಿಗಣೆ-ಹೇನು ಇವೇ ಮೊದಲಾದ ಜೀವಿಗಳಿಗೆ ಅಂತ್ಯಕಾಣಿಸುತ್ತೇವೆ. ಅರಿತೋ ಅರಿಯದೆಯೋ ನಡೆದಾಡುವಾಗ ಅಥವಾ ವಾಹನ ಚಲಿಸುವಾಗ ಇರುವೆಗಳಂತಹ ಅತಿ ಚಿಕ್ಕ ಜೀವಿಗಳು ಅದೆಷ್ಟೋ ನಮ್ಮಿಂದ ಹತವಾಗುತ್ತವೆ. ಅಂದಮೇಲೆ ನಾವೂ ಒಂದು ದಿನ ಇರುವೆಯೋ ಜಿರಲೆಯೂ ಆಗಿ ಹುಟ್ಟಿ ಹಿಂಸೆ ಅನುಭವಿಸುವುದಿಲ್ಲ ಎಂಬುದನ್ನು ಹೇಳುವುದು ಹೇಗೆ? 

ಅತಿಮಧುರವಾದ ಜೇನನ್ನು ಸವಿಯುವಾಗ ಆ ಹುಳಗಳ ಸಂಗ್ರಹವನ್ನು ಬಲಾತ್ಕರಿಸಿ ತೆಗೆಯುತ್ತೇವೆ; ಹಾಗೆ ಜೇನು ತೆಗೆಯುವಾಗ ಅವುಗಳ ಅನೇಕ ಮೊಟ್ಟೆ-ಮರಿಗಳು ಹತವಾಗುತ್ತವೆ, ಜೊತೆಗೆ ಕೆಲವು ಜೇನುಹುಳಗಳೂ ಸಹ. ಸಮಾರಂಭಗಳಲ್ಲಿ ಚಂದವಾಗಿ ಕಾಣಿಸಿಕೊಳ್ಳಲು ಪಳಪಳ ಹೊಳೆಯುವ ರೇಷ್ಮೆ ಬಟ್ಟೆಯನ್ನು ತೊಟ್ಟುಕೊಳ್ಳುತ್ತೇವೆ, ಪ್ರತೀ ರೇಷ್ಮೆದಾರದ ಹಿಂದೆ ರೇಷ್ಮೆಹುಳವೊಂದರ ಹಿಂಸಾತ್ಮಕ ಬಲಿ ನಡೆದಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಚರ್ಮದ ಬೆಲ್ಟು, ಬ್ಯಾಗು, ಶೂ ಬಳಸುತ್ತೇವೆ-ಅವುಗಳ ತಯಾರಿಕೆಗೂ ಹಿಂದೆ ನಡೆಯುವ ಕೃತ್ಯಗಳಾಗಲೀ, ಒಂದಾನೊಂದು ದಿನದಲ್ಲಿ ಅವು ಜೀವಿಗಳ ತೊಗಲುಗಳಾಗಿದ್ದವು ಎಂಬುದಾಗಲೀ ನೆನಪಿಗೆ ಬರುವುದಿಲ್ಲ. ಈ ಎಲ್ಲಾ ಕೃತ್ಯಗಳ ಹಿಂದೆ ಅದೆಷ್ಟು ಹಿಂಸೆಯಿದೆ, ಅದೆಷ್ಟು ನೋವಿದೆ ಎಂದರೆ ಆ ನೋವನ್ನು ಹೇಳಿಕೊಳ್ಳಲು, ಸಂಘಕಟ್ಟಿ ಹರತಾಳ ನಡೆಸಲು ಆ ಜೀವಿಗಳಿಗೆ ಮಾತು ಬಾರದು, ಆ ನರಕಯಾತನೆಯಿಂದ ತಪ್ಪಿಸಿಕೊಳ್ಳಲು ಅವಕಾಶವೇ ಇರದು. ಹಲವು ಮಾನವ ಜೀವಗಳ ಹರಣಕ್ಕೆ ಕಾರಣನಾದ ಪರಮನೀಚ ಖೈದಿಯೊಬ್ಬನನ್ನು ಗಲ್ಲಿಗೇರಿಸುವುದಾದರೆ, ನಮ್ಮಲ್ಲಿನ ಹಲವು ಜನ ಆತನ ಬೆಂಬಲಕ್ಕೆ ನಿಲ್ಲುತ್ತಾರೆ, ಗಲ್ಲು ನಡೆಯದಂತೇ ತಡೆಯಲು ಮುಂದಾಗುತ್ತಾರೆ. ಏನೊಂದೂ ತಪ್ಪುಮಾಡದ ಜೀವಿಗಳ ಹರಣವಾಗುವಾಗ ಯಾರೂ ತಪ್ಪಿಸರಲ್ಲಾ ಎಂಬ ಕಟುವಾಸ್ತವಿಕತೆ ಈ ಜಗದ ಕರಾಳ ಮುಖದ ದರ್ಶನವನ್ನು ಸಮಗ್ರವಾಗಿ ಮಾಡಿಸಿಬಿಟ್ಟಿತು.  

ಬಾಲ ಸಂನ್ಯಾಸಿಯೊಬ್ಬ ಹೀಗೆ ಪ್ರಾರ್ಥಿಸಿದ :

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ ||

[ಕರ-ಚರಣಗಳಿಂದ, ವಚನ-ಶರೀರ-ಕರ್ಮದಿಂದ, ಕೇಳುವುದರಿಂದ ನೋಡುವುದರಿಂದ, ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದರಿಂದ, ವಿಹಿತವೋ ಅವಿಹಿತವೋ ನಡೆದ ಸರ್ವಾಪರಾಧಗಳನ್ನೂ ಕ್ಷಮಿಸು ಜಯ ಜಯ ಶ್ರೀಮಹಾದೇವನೇ] 

ಮೂರನೇ ವಯಸ್ಸಿಗೂ ಮುನ್ನ ಅಪ್ಪನನ್ನು ಕಳೆದುಕೊಂಡಿದ್ದ ಅತಿಸುಂದರ ಬಾಲಕನಿಗೆ ಅಮ್ಮನೊಬ್ಬಳೇ ಆಸರೆಯಾಗಿದ್ದಳು. ಅಮ್ಮನಿಗೆ ಮಗನೇ ಎಲ್ಲಾ, ಮಗನನ್ನು ಬಿಟ್ಟು ಜಗವೇ ಇರಲಿಲ್ಲ. ಎಳೆಯಬಾಲಕ ಅಮ್ಮನನ್ನೇ ಆರೈಕೆಮಾಡುವಷ್ಟು ಪ್ರಬುದ್ಧನಿದ್ದ! ದೇಶಸೇವೆಗಾಗಿ ಸಂಕಲ್ಪಿಸಿದ ಬಾಲಕ ಅಮ್ಮನಿಗೆ ಮಾತ್ರ ತನ್ನನ್ನು ಮೀಸಲಾಗಿಡಲಿಲ್ಲ, ’ಸ್ವದೇಶೋ ಭುವನತ್ರಯಂ’ ಎಂದುಕೊಂಡುಬಿಟ್ಟ, ಲೋಕದ ಎಲ್ಲರನ್ನೂ ತನ್ನವರಂತೇ ಕಂಡು, ತಪಸ್ಸಿಗೆ-ಸಾಧನೆಗೆ ಹೊರಟುನಿಂತ ಮಗನನ್ನು ತನ್ನ ಸ್ವಾರ್ಥಕ್ಕಾಗಿ ತಡೆದು ನಿಲ್ಲಿಸದಾದಳು ಆ ತಾಯಿ ಆರ್ಯಾಂಬೆ. ಬಾಲ ಬೈರಾಗಿ ೯ನೇ ವಯಸ್ಸಿಗೇ ಸಂನ್ಯಾಸಿಯಾದ. ಅದರಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ. ಸರ್ವಸಂಗ ಪರಿತ್ಯಾಗಿಯಾದ ಸಂನ್ಯಾಸಿ ಉತ್ತಮ ಸಮಾಜದ ಪುನರ್ನಿರ್ಮಾಣಕ್ಕಾಗಿ ಸನಾತನ ವೈದಿಕ ಧರ್ಮವನ್ನು ಪುನರ್ಪ್ರತಿಷ್ಠಾಪಿಸಿದ; ದೇಶಾದ್ಯಂತ ಸಂಚರಿಸಿ ಜನರಿಗೆ ತನ್ನ ಸಂಗವನ್ನು ನೀಡಿದ, ದರ್ಶನ-ಸಂದರ್ಶನವನ್ನು ನೀಡಿದ. ಅಷ್ಟು ಎಳೆಯವಯಸ್ಸಿನಲ್ಲಿ ದಂಡಕಾರಣ್ಯಗಳನ್ನೂ ಗೊಂಡಾರಣ್ಯಗಳನ್ನೂ ಕಾಲ್ನಡಿಗೆಯಲ್ಲೇ ಉಪಕ್ರಮಿಸಿದ ಆ ಬಾಲನ ರಕ್ಷಣೆಗೆ ಮಾನವರಾರೂ ಇರಲಿಲ್ಲ!

ಸುಡುವ ಬಿಸಿಲು ಜಡಿಯ ಮಳೆಯು
ಬಿಡದೆ ಕೊರೆವ ಚಳಿಯ ನಡುವೆ
ನಡೆಯುತಿದ್ದ ಬಾಲನಲ್ಲಿ ಅಡವಿಯಿದ್ದೆಡೆ |
ಪೊಡವಿಯಾಗೆ ನೀಚ ಸತ್ರ
ಗೊಡವೆ ಜಗದ ಧರ್ಮಸೂತ್ರ 
ಕೊಡವಿ ಬಂಧಗಳನು ತೊರೆದು ಗುರುಗಳಿದ್ದೆಡೆ ||   [ಸ್ವ-ರಚಿತ]



ಸುರಿವ ಮಳೆ, ಸುಡುವ ಬಿಸಿಲು, ಬಿಡದೆ ಕೊರೆವ ಚಳಿಯ ನಡುವೆ ಕಾಷಾಯವಸ್ತ್ರವನ್ನುಟ್ಟು, ದಂಡ-ಕಮಂಡಲ ತೊಟ್ಟು, ಮೂರಾವರ್ತಿ ಈ ಅಖಂಡ ಭಾರತವನ್ನು ಸಂಚರಿಸಿದ. ಸಂನ್ಯಾಸ ದೀಕ್ಷೆಯಾಗುತ್ತಲೇ ಆತ್ಮಸಾಕ್ಷಾತ್ಕಾರ ಪಡೆದ. ನಂತರ, ಮೊಟ್ಟಮೊದಲ ಆಮ್ನಾಯ ಧರ್ಮಪೀಠಕ್ಕಾಗಿ ನೆಲೆಯನ್ನು ಹುಡುಕಿದ. ನಡೆಯುತ್ತಾ ನಡೆಯುತ್ತಾ ಶೃಂಗೇರಿಗೆ ಬಂದ ಬಾಲ ಸಂನ್ಯಾಸಿಗೆ,  ಪ್ರಸವವೇದನೆಯ ಕಪ್ಪೆ ಮತ್ತು ಅದಕ್ಕೆ ನೆರವಾಗಿ ಹೆಡೆಯೆತ್ತಿ ನಿಂತ ಹಾವಿನ ದ್ವೇಷರಹಿತ-ಅಹಿಂಸಾ ಮನೋಧರ್ಮ, ಚಿಕಿತ್ಸಕವಾಗಿ ಪ್ರಥಮವಾಗಿ ಗೋಚರಿಸಿ ಚಕಿತಗೊಳಿಸಿತು!! ಅದು ಮಹರ್ಷಿಗಳಾದ ವಿಭಾಂಡಕ ಮತ್ತು ಋಷ್ಯಶೃಂಗರ ದಿವ್ಯ ನೆಲೆವೀಡು ಎಂಬುದು ಜ್ಞಾನಚಕ್ಷುವಿಗೆ ಗೋಚರವಾಯ್ತು; ಈ ಕಾರಣದಿಂದ ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವನ್ನು ಸ್ಥಾಪಿಸಿದ--ಆ ಬಾಲ ಸಂನ್ಯಾಸಿ ಶ್ರೀಆದಿಶಂಕರ.

ನನ್ನ ಬಾಲ್ಯಕ್ಕೂ ನನ್ನಂತಹ ಹಲವರ ಬಾಲ್ಯಕ್ಕೂ ಶಂಕರ ಭಗವತ್ಪಾದರ ಬಾಲ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ನಮ್ಮಂತಹ ಜನಸಾಮಾನ್ಯರು ಮನುಷ್ಯರಾಗಿ ಜನಿಸುವುದಕ್ಕೇ ಪುಣ್ಯ ಬೇಕಂತೆ. ಅತೀವ ಪುಣ್ಯಸಂಪಾದನೆ ಮಾಡಿದವರು ಮಹಾತ್ಮರಾಗುತ್ತಾರೆ, ಅತೀವ ಸಾಧನೆ ಮಾಡಿದ ಮಹಾತ್ಮರು ಸಂನ್ಯಾಸಿಗಳಾಗುತ್ತಾರೆ, ಅತೀವ ಸಾಧನೆ ಮಾಡಿದ ಸಂನ್ಯಾಸಿಗಳು ಮೂಲದಲ್ಲಿ ಲೀನವಾಗುತ್ತಾರೆ! ಸಂನ್ಯಾಸಿಗಳ ಪಾದಗಳಡಿಯಲ್ಲಿ ಸಿಲುಕಿದರೆ ಕೆಲವು ಜೀವಗಳಿಗೆ ಮೇಲ್ಮಟ್ಟದ ಪುನರ್ಜನ್ಮ ಸಿಗಬಹುದು. ಜೀವನ್ಮುಕ್ತರ ಪಾದಗಳು ಸೋಕಿದರೆ ಜೀವನ್ಮುಕ್ತಿ ಪಡೆಯಬಹುದಾದ ಉನ್ನತ ಜನ್ಮ-ಜೀವನ ಜೀವಿಗಳಿಗೆ ಲಭಿಸಬಹುದು. ನಾವು ಓದಿದ ಜೀವಶಾಸ್ತ್ರ-ಪ್ರಭೇದ-ಆಹಾರ ಸರಪಳಿ-ರೀತಿ-ನೀತಿ-ರಿವಾಜುಗಳನ್ನೆಲ್ಲಾ ನಿಯಂತ್ರಿಸುವ ನಿಗಮಗೋಚರ ಶಕ್ತಿಯೊಂದು ಇದ್ದೇ ಇದೆ. ಆ ಶಕ್ತಿಯ ಬಗೆಗಿನ ಮಾಹಿತಿ ನಮ್ಮ ಸಾಮಾಜಿಕ ಜೀವವಿಜ್ಞಾನ ಯಾ ಭೌತವಿಜ್ಞಾನದ ಹೊತ್ತಗೆಗಳಲ್ಲಿ ಲಭ್ಯವಿಲ್ಲ; ಭವಿಷ್ಯದಲ್ಲೂ ಲಭ್ಯವಾಗುವುದಿಲ್ಲ. ಹಿಂಸಾತ್ಮಕವಾದ ಪ್ರಪಂಚದ ಚರಾಚರ ವಸ್ತುಗಳ, ಜೀವಿಗಳ ಮೂಲ ಇರುವುದು ಒಂದೇ ಕಡೆಯಲ್ಲಿ. ಆ ಮೂಲದಲ್ಲಿ ನನ್ನಂಥವರ ಪ್ರಾರ್ಥನೆ ಇಷ್ಟೇ: "ಓ ದೇವರೇ ಮತ್ತೊಮ್ಮೆ ಶಂಕರ ಅವತರಿಸಲಿ."

ವ್ಯಾಮೋಹಮಯವಾದ ಈ ಜಗತ್ತಿನಲ್ಲಿ, ಇರುವೆಯ ಸಂಸಾರ ಇರುವೆಗೆ ಗೊತ್ತು, ಆನೆಯ ಸಂಸಾರ ಆನೆಗೆ ಗೊತ್ತು, ಬೆಕ್ಕಿನ ಸಂಸಾರ ಬೆಕ್ಕಿಗೆ ಗೊತ್ತು, ನನ್ನ ಸಂಸಾರ ನನಗೆ ಗೊತ್ತು, ಆದರೆ ಜರಾಮರಣ ಚಕ್ರದಿಂದ ಬಿಡುಗಡೆ ಪಡೆದ ಶಂಕರರಂತಹ ದಿವ್ಯ ಚೇತನಕ್ಕೆ ’ಜಗತ್ತೇ ಸಂಸಾರ’ವಾಗಿ ಗೊತ್ತು! ಜಗತ್ತನ್ನೇ ಪಾಲಿಸಹೊರಟ, ಪೋಷಿಸಹೊರಟ ಮಾತೃ ಹೃದಯೀ ಶಂಕರರಿಗೆ ತಾನೊಬ್ಬ ಬಾಲಕ,  ಗುಡುಗು-ಸಿಡಿಲು ಬಾಧಿಸಬಹುದೆಂಬ ಭಯವಿರಲಿಲ್ಲ, ಯಾವುದೇ ಕ್ರೂರಮೃಗಗಳು ದಾಳಿಯಿಟ್ಟು ಕೊಂದು ತಿಂದಾವೆಂಬ ಅಂಜಿಕೆಯಿರಲಿಲ್ಲ, ಕಳ್ಳಕಾಕರು ಹಿಡಿದು ಥಳಿಸಿಯಾರೆಂಬ ಹೆದರಿಕೆಯೂ ಇರಲಿಲ್ಲ. ಯಾಕೆಂದರೆ ಅವೆಲ್ಲವುಗಳ ಆಂತರ್ಯದಲ್ಲಿ ಅವನೇ ಅವಿತಿದ್ದ; ಲೋಕಶಂಕರನಾಗಿದ್ದ. "ಲೋಕಹಿತಂ ಮಮ ಕರಣೀಯಂ" ಎನ್ನುತ್ತಾ ಕಲ್ಲುಮುಳ್ಳುಗಳ ದುರ್ಗಮದ ಹಾದಿಯಲ್ಲಿ, ಸುಕೋಮಲವಾದ ತನ್ನ ಪಾದಗಳನ್ನು ಲೆಕ್ಕಿಸದೇ, ನಮಗಾಗಿ ನಡೆದಾಡಿದ್ದ ಅಂತಹ ಬಾಲ ಸಂನ್ಯಾಸಿ ಶಂಕರನಿಗೆ ಅಗಣಿತ ಕೋಟಿ ಸಾಷ್ಟಾಂಗ ನಮಸ್ಕಾರಗಳು. 


 ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
      ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||