ರಾಮಾಂಜನೇಯ ಯುದ್ಧ
ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನ ಪರಿಚಯವಾದಂದಿನಿಂದ ಇಂದಿನವರೆಗೂ ಕಲ್ಪದಲ್ಲಿ ನೆಲೆಸಿದ್ದು ಸದಾ ರಾಮ ಸ್ಮರಣೆಯಲ್ಲಿ ನಿರತ ನಮ್ಮ ಹನುಮಣ್ಣ. ವಜಕಾಯಿಯೆಂದು ಕ್ಯಾತಿ ಪಡೆದು ಶತಯೋಜನ ವಿಸ್ತೀರ್ಣದ ಸಾಗರವನ್ನೇ ಹಾರಿ ಲಂಕೆಯನ್ನು ತಲ್ಪಿದ ಏಕಮೇವಾದ್ವಿತೀಯ ಸಾಹಸಿ ಈ ಗುಣವಂತ. ರಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಬಯಸದೇ ಮುಂದಿನ ಕಲ್ಪದಲ್ಲಿ ಬ್ರಹ್ಮಪದವನ್ನು ಪಡೆದ ಅಸೀಮ ಸಾಧಕ ಈ ಮಹಾನ್ ಯುಕ್ತಿವಂತ. ಇಂತಹ ಹನುಮನಿಗೂ ಆತನ ಆರಾಧ್ಯ ಸ್ವಾಮಿ ರಾಮನಿಗೂ ಯುದ್ಧವೇ ? ಕಲ್ಪಿಸಿಕೊಳ್ಳಲೂ ಅಸಾಧ್ಯ! ಆದರೆ ಇದು ಪುರಾಣೋಕ್ತ ಸತ್ಯ. ರಾಮಾಯಣ ಕಂಡ ಸತ್ಯ.
ರಾಮಾಯಣವನ್ನು ಎಲ್ಲಾದರೂ ಎಂದಾದರೂ ಹೇಗಾದರೂ ಓದಿ, ಅಲ್ಲಿ ಕಣ್ಣಿಂದ ದಳ ದಳ ದಳನೇ ನೀರು ಹರಿಸುತ್ತ-ಬಾಷ್ಪಾಂಜಲಿಯನ್ನು ಹಿಡಿದು ತಗ್ಗಿ ಬಗ್ಗಿ ನಮಿಸುವ ಹನುಮ ನಮಗೆಲ್ಲಾ ಕಾಣದ ಸ್ಥಿತಿಯಲ್ಲಿ ಕೂತೇ ಇರುತ್ತಾನೆ ಎಂಬುದು ಪ್ರತೀತಿ. ಆತ ತನ್ನ ತಪೋಬಲದಿಂದ ತನ್ನ ಪ್ರಸ್ತುತಿಯನ್ನು ಏಕಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ಪ್ರಚುರಗೊಳಿಸಬಲ್ಲ ಮಹಿಮಾನ್ವಿತ. ಹೀಗಾಗಿ ರಾಮಾಯಣವನ್ನು ಬಳಸುವವರು ಆಂಜನೇಯನಿಗೊಂದು ಆಸನವನ್ನು ಕಲ್ಪಿಸಿ ಅಲ್ಲಿ ಆತನ ಚಿತ್ರಪಟವನ್ನಿಟ್ಟು ಹೂವು ಹಣ್ಣುಗಳನ್ನು ಸಮರ್ಪಿಸುತ್ತಾರೆ.
ರಾಮಾಯಣದಲ್ಲಿ ವಿಶ್ವಾಮಿತ್ರರ ಪಾತ್ರ ಕೂಡ ಮಹತ್ವ ಪೂರ್ಣವಾದುದು. ತನ್ನ ಸ್ವಾಯತ್ತ ಕಲ್ಪನೆಯಿಂದ ಕ್ಷತ್ರಿಯನಾದ ಕೌಶಿಕ ಮಹಾರಾಜ ಕೇವಲ ತನ್ನ ದೀರ್ಘಕಾಲದ ಉದ್ದಂಡ, ನಿಕಟ, ನಿಷ್ಕಲ್ಮಷ, ಜ್ವಲಂತ ತಪಸ್ಸಿನಿಂದ ಮಹರ್ಷಿಯಾಗಿ ತ್ರಿಶಂಕುವಿಗೆ ಬೇರೊಂದು ಸ್ವರ್ಗವನ್ನೇ ಸೃಷ್ಟಿಸಿ ಹಲವು ಆಖ್ಯಾನಗಳಿಗೆ ಕಾರಣೀಭೂತರಾಗಿ ಬ್ರಹ್ಮರ್ಷಿ ಎಂಬ ಪದವನ್ನು ಪಡೆದ ಹಠಸಾಧಕ ಮಹಾಮುನಿ ವಿಶ್ವಾಮಿತ್ರ. ಇಂತಹ ವಿಶ್ವಾಮಿತ್ರರಿಗೆ ಒಮ್ಮೆ ಏನೋ ಮನಸ್ಸಲ್ಲಿ ಸಂಕಲ್ಪವಾಗಿ ಅವರು ರಾಮನನ್ನು ಕರೆದರು. ಶಕುಂತ ಎಂಬ ಸೂರ್ಯವಂಶಜ ವ್ಯಕ್ತಿ ಕ್ರೌಂಚಪಕ್ಷಿಜೋಡಿಯನ್ನು ಬಾಣದಿಂದ ಹೊಡೆದುರುಳಿಸುವಾಗ ಒಂದು ತನ್ನ ಯಜ್ಞಕುಂಡಕ್ಕೆ ಬಿದ್ದು ತನ್ನ ವೃತಭಂಗವಾಯಿತು,ಮಾಡಿದ ತಪ್ಪಿಗೆ ಕ್ಷಮೆಯಾಚಿಸದೇ ತಪ್ಪು ಮಾಡಿದ್ದಾನೆ ಆ ಶಕುಂತ ಆತನನ್ನು ೮ ದಿನಗಳಲ್ಲಿ ವಧಿಸು ಎಂಬುದಾಗಿ ಅಜ್ಞಾಪಿಸಿದರು. ಗುರು ವಿಶ್ವಾಮಿತ್ರರ ಆದೇಶಕ್ಕೆ ರಾಮ ಅಸ್ತು ಎಂದ. ಆ ಕ್ಷಣದಿಂದಲೇ ಪ್ರಾರಂಭವಾಯಿತು ಶಕುಂತನ ಬೇಟೆ!
ಇತ್ತ ತನ್ನ ವಧೆಗಾಗಿ ರಾಮನನ್ನು ನಿಯೋಜಿಸಿದ್ದನ್ನು ಜನರಿಂದ ಕೇಳಿ ತಿಳಿದ ಶಕುಂತ ದಿಕ್ಕಾಪಾಲಾಗಿ ಓಡುತ್ತ ಹನುಮನ ಅಮ್ಮ ಅಂಜನಾದೇವಿಯಿದ್ದಲ್ಲಿಗೆ ಬಂದು ಪಾದಕ್ಕೆ ಬಿದ್ದು ಪ್ರಾಣಭಿಕ್ಷೆ ಬೇಡಿದ. ಯಾರು ಯಾವ ಕಾರಣಕ್ಕೆ ಆತನನ್ನು ಕೊಲ್ಲಲು ಮುಂದಾಗಿದ್ದಾರೆ ಎಂಬುದನ್ನು ಕೇಳಲಾಗಿ ತನಗೆ ಪ್ರಾಣಭಿಕ್ಷೆ ಕೊಡುತ್ತೇನೆಂಬ ವಾಗ್ದಾನ ಕೊಟ್ಟರೆ ಮಾತ್ರ ಆಮೇಲೆ ಅದನ್ನು ತಿಳಿಸುವುದಾಗಿ ಹೇಳಿದ! ಜೀವಭಯದಿಂದ ಹೆದರಿ ಕಂಗಾಲಾಗಿದ್ದ ಆತನಿಗೆ ಅಂಜನಾದೇವಿ ಪ್ರಾಣಭಿಕ್ಷೆಯನ್ನು ಕೊಡುವುದಾಗಿ ವಾಗ್ದಾನ ಮಾಡಿಬಿಟ್ಟಳು! ನಂತರ ತಿಳಿದದ್ದು ಆತನನ್ನು ಕೊಲ್ಲಲು ಬರುತ್ತಿರುವುದು ಸ್ವತಃ ಶ್ರೀರಾಮ ಎಂಬುದು. ಆಗ ಆಕೆ ಕಕ್ಕಾವಿಕ್ಕಿಯಾದಳು. ಕಂದ ಹನುಮನನ್ನು ಕರೆದು ಅಮ್ಮನಾದ ತನಗೆ ಈ ಒಂದು ಆಸೆಯನ್ನು ಪೂರೈಸಿಕೊಡುವಂತೆ ಮಗನಲ್ಲಿ ಮೊರೆಯಿತ್ತಳು.
ಅಯೋಧ್ಯೆಯಲ್ಲಿ ರಾಮ ನಡೆಯುವ ಎಲ್ಲಾ ವರ್ತಮಾನಗಳನ್ನು ತಿಳಿದುಕೊಳ್ಳುತ್ತಲೇ ಇದ್ದ. ಶಕುಂತ ಹನುಮನಿದ್ದಲ್ಲಿಗೆ ಓಡಿರುವುದೂ ಮತ್ತು ಹನುಮನಿಂದ ರಕ್ಷಿತನಾಗಿರುವುದೂ ರಾಮನಿಗೆ ತಿಳಿದುಬಂತು. ರಾಮ ಬಹಳ ಜಂಜಡದಲ್ಲಿ ಸಿಲುಕಿದ್ದ. ಇತ್ತ ಗುರುವಿನ ಅದೇಶವನ್ನು ಪರಿಪಾಲಿಸಬರದು ಅಥವಾ ಅತ್ತ ಸದ್ಭಕ್ತನ ಜೊತೆ ವೈರುಧ್ಯ ಮಾಡಿಕೊಂಡು ಶಕುಂತನಿಗಿಂತಲೂ ಮೊದಲು ಹನುಮಂತನನ್ನು ಮುಗಿಸಬೇಕು-ಎಂತಹ ಪೇಚಾಟ ನೋಡಿ. ಕ್ರುದ್ಧನಾದ ರಾಮ ಅರಮನೆಯ ಉಪ್ಪರಿಗೆಯಲ್ಲಿ ಶತಾಯ ಗತಾಯ ತಿರುಗುತ್ತಿದ್ದ. ಏನುಮಾಡೋಣ ಏನುಮಾಡೋಣ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಹಾಗೂ ಹೀಗೂ ಮನದಲ್ಲೇ ಒದ್ದಾಡುತ್ತ ದಿನವೊಂದನ್ನು ಕಳೆದ ರಾಮ. ಹಾಗಂತ ಶಕುಂತನನ್ನು ಮುಗಿಸುವ ಕಾರ್ಯವನ್ನು ಬಹಳ ಮುಂದೂಡುವಂತಿರಲಿಲ್ಲ.
ಇತ್ತ ರಾಮ ಹೊರಗಡೆಗೆ ಹೋದ ಸಮಯದಲ್ಲಿ ಅಂಜನಾದೇವಿ ಅಯೋಧ್ಯೆಗೆ ಹಣ್ಣು-ಹೂವಿನೊಂದಿಗೆ ಬಂದು ದೇವೀ ಎಂದು ಕರೆದು ತನ್ನ ಅಳಲನ್ನು ಸೀತಾಮಾತೆಗೆ ತೋಡಿಕೊಂಡಳು. ಸೀತೆಯ ಮನಸ್ಸು ಅವಳ ಅಹವಾಲನ್ನು ಅವಲೋಕಿಸಿ, ಅನಸೂಯಾ ದೇವಿಯಿಂದ ಪ್ರೇರಿತವಾದ ಪತಿವೃತಾಧರ್ಮದ ಫಲಾಫಲದ ಪರಿಶೀಲನೆಗಾಗಿಯೂ ಮತ್ತು ಹಿಂದೆ ಹನುಮನಿಂದ ಪಡೆದ ಸೇವೆಯ ಕೃತಜ್ಞತಾರ್ಥವಾಗಿಯೂ ಎರಡು ವರಗಳನ್ನು ಅನುಗ್ರಹಿಸಿತು. ಮೊದಲನೆಯದಾಗಿ ರಾಮ ಹನುಮನ ಮೇಲೆ ಬಿಡುವ ಎಲ್ಲಾ ಬಾಣಗಳೂ ಶಾಂಡಿಲ್ಯಪತ್ರೆಗಳಾಗಿ, ಬಿಲ್ವಪತ್ರೆಗಳಾಗಿ,ತುಳಸೀದಳಗಳಾಗಿ ಆತನಮೇಲೆ ಬೀಳಲಿ, ಎರಡನೆಯದು ರಾಮ ಬ್ರಹ್ಮಾಸ್ತ್ರವನ್ನು ಹನುಮನ ಮೇಲೆ ಪ್ರಯೋಗಿಸಿದರೆ ಅದು ವೈಜಯಂತೀ ಹಾರವಾಗಿ ಆತನ ಕೊರಳಲ್ಲಿ ವಿಜೃಂಭಿಸಲಿ-ಎಂಬೀ ವರಗಳನ್ನು ಪಡೆದು ಹೊರಟುಹೋದಳು. ಈ ವಿಷಯವನ್ನು ರಾಮನಲ್ಲಿ ಸೀತೆ ಭಿನ್ನವಿಸಲಿಲ್ಲ, ಆ ಕಾರಣ ರಾಮನಿಗೆ ಇದು ತಿಳಿಯಲೇ ಇಲ್ಲ. ಹಾಗಂತ ಸೀತೆಯ ಕಪಟತನವಲ್ಲ ಇದು! ತನಗೋಸ್ಕರ ಲಂಕೆಯವರೆಗೆ ಜೀವವನ್ನೇ ಪಣವಾಗಿಟ್ಟು ಹಾರಿಬಂದು ತನ್ನನ್ನು ಪರೋಕ್ಷವಾಗಿ ರಕ್ಷಿಸಿದ, ತನ್ನ ಮಗನ ಸಮಾನನೆಂದು ಸೀತೆ ತಿಳಿದುಕೊಂಡ ಹನುಮನ ರಕ್ಷಣೆಯ ಕಾರ್ಯದಲ್ಲಿ ಅವಳಿಗೆ ಆಸಕ್ತಿ ಇತ್ತು, ತಾಯಿಯ ಮಮತೆ-ವಾತ್ಸಲ್ಯ ಇತ್ತು, ಮಗುವಿನ ಮೇಲಿರುವಂತಹ ಪ್ರೇಮವಿತ್ತು. ರಾಮನ ಮನಸ್ಸನ್ನು ಬದಲಾಯಿಸಿ ಹೇಗಾದರೂ ಮಾಡಿ ಯುದ್ಧವನ್ನು ತಪ್ಪಿಸಿಬೇಕೆಂಬ ಇರಾದೆ ಅವಳದಾಗಿತ್ತು. ಅದಕ್ಕಾಗಿ ಅವಳು ರಾಮನ ಬರವನ್ನೇ[ಬರುವಿಕೆಯನ್ನೆ]ಕಾದಳು.
ರಾಮ ಬಂದ, ತಿಂಡಿ ಬೇಡ-ಊಟಬೇಡ, ಕನಸಲ್ಲೂ ಅದೇ ಕನವರಿಕೆ, ರಾಮನ ಮುಖ ತುಂಬಾ ಕೆಂಪಡರಿ ಹೋಗಿತ್ತು. ಸೈರಣೆಯನ್ನೇ ಕಳೆದುಕೊಂಡಿದ್ದ ರಾಮ ತನ್ನೋಳಗೇ ಹೊಯ್ದಾಡುತ್ತಿದ್ದ. ಏನುಮಾಡಲಿ ಏನುಮಾಡಲಿ--ಅಂದುಕೊಳ್ಳುತ್ತ ಅದೇ ಕೈ ಕೈ ಹಿಸುಕಿಕೊಳ್ಳುವ ಕೆಲಸ. ಇದನ್ನು ಪರಾಂಬರಿಸಿದ ಸೀತೆ ರಾಮನ ಸಮಸ್ಯೆ ಏನೆಂಬುದನ್ನು ಕೇಳಿದಳು.[ತನಗೆ ಅದರ ಅರಿವಿದೆಯೆಂಬುದನ್ನು ಅವನ ಗಮನಕ್ಕೆ ತರಲಿಲ್ಲ, ತಂದರೆ ರಾಮಾಯಣದ ಕಥೆ ಇನ್ನೇನೋ ಆಗುತ್ತಿತ್ತೇನೋ!] ರಾಮ ವಿವರಿಸಿದ. ತಾನು ಕೊಲ್ಲಬೇಕಾದ ಶಕುಂತನನ್ನು ಹನುಮ ಬಚ್ಚಿಟ್ಟು ಪರೋಕ್ಷ ಸ್ವಾಮಿದ್ರೋಹಮಾಡಿದ್ದಾನೆ, ಹನುಮನನ್ನು ಕೊಲ್ಲದೇ ವಿಧಿಯಿಲ್ಲ, ಆ ಕಪಿಗೆ ಕಪಿ ಬುದ್ಧಿಯನ್ನು ಬಿಟ್ಟು ಬೇರೆ ಬುದ್ಧಿ ಬರಲು ಆತ ಹುಟ್ಟಿದ್ದು ಕಪಿಯಜಾತಿಯಲ್ಲಲ್ಲವೇ ? ಎಂದೆಲ್ಲ ಬಡಬಡಾಯಿಸಿದ. ಮನದಲ್ಲಿ ಒಮ್ಮೆ ಕನಿಕರವೂ ಇನ್ನೊಮ್ಮೆ ಕೋಪವೂ ಉಕ್ಕಿಹರಿಯುತ್ತಿತ್ತು. ತನಗಾಗಿ ಹನುಮ ಮಾಡಿದ ಸೇವೆಯನ್ನು ನೆನೆದು ರಾಮ ಬಹಳ ದಯಾರ್ದ್ರ ಹೃದಯವನ್ನು ತಳೆಯುತ್ತಾನೆ -ಮರುಕ್ಷಣ ತನ್ನ ಗುರುವಿನ ವೈರಿಯನ್ನು ತನ್ನಿಂದ ಅಡಗಿಸಿಟ್ಟು ಹನುಮ ಆತನನ್ನು ರಕ್ಷಿಸಿ ಸ್ವಾಮಿದ್ರೋಹಿಯಾದ ಎಂಬುದನ್ನು ನೆನೆದು ರಾಮ ವಜ್ರದಷ್ಟು ಕಠೋರನಾಗುತ್ತಾನೆ! ಈ ಎರಡೂ ಆಚೆ-ಈಚೆ ಆಚೆ-ಈಚೆ ಮನದ ಮಗ್ಗಲುಬದಲಿಸುತ್ತ ರಾಮನಿಗೆ ಕೊನೆಗೊಮ್ಮೆ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದ ಅನುಭವವಾಗಿದೆ! ನಿಂತ ಮೆಟ್ಟಲ್ಲೇ ಹೊರಡುವ ನಿರ್ಧಾರಕ್ಕೆ ಬಂದ ರಾಮನನ್ನು ಮಡದಿ ಸೀತೆ ಏನೇ ಹೇಳಿದರೂ ಕೇಳದೇ ಹಿಂಬಾಲಿಸಿದ್ದಾಳೆ.
ಅಡವಿಗೆ ನಡೆತಂದ ಶ್ರೀರಾಮ ಅಂಗದ ಮುಂತಾದ ಕೆಳದರ್ಜೆಯ ವಾನರ ನಾಯಕರನ್ನು ಕರೆದು ಹನುಮನಿಗೆ ಸುದ್ದಿ ತಲ್ಪಿಸಿ ಯುದ್ಧಕ್ಕೆ ದುರವೀಳ್ಯವನ್ನು ಕಳುಹಿಸಿದ್ದಾನೆ. ದೂರದಿಂದ ಓಡೋಡಿ ಬಂದ ಅವರು ಮಾರುತಿಗೆ ನಡೆದ ವಿಷಯವನ್ನೆಲ್ಲ ಅರುಹಿದ್ದಾರೆ, ಶಕುಂತನನ್ನು ಬಿಟ್ಟುಕೊಡುವಂತೆ ಬೇಡಿದ್ದಾರೆ. ಆದರೆ ಹನುಮ ಬಿಡಬೇಕಲ್ಲ! ಆತ ಅಮ್ಮನಿಗೆ ಮಾತುಕೊಟ್ಟಿದ್ದ! ತನ್ನ ಪ್ರಾಣವನ್ನಾದರೂ ಕೊಟ್ಟಾನೆಯೇ ಹೊರತು ಜೀವ ಇರುವವರೆಗೆ ಶಕುಂತನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದನ್ನು ಆತ ಯಾವುದೇ ಕಾರಣಕ್ಕೂ ಅಲ್ಲಗಳೆಯಲಿಲ್ಲ, ಅದನ್ನು ಕಾರ್ಯಗತಗೊಳಿಸದೇ ಬಿಡಲೂ ಸಿದ್ಧನಿರಲಿಲ್ಲ. ಆದರೂ ನಿತ್ಯ ನೈಮಿತ್ತಿಕ ಆಚರಣೆಯಂತೇ ರಾಮಭಜನೆಯಲ್ಲೇ ತಲ್ಲೀನನಾಗಿದ್ದ ಹನುಮ.
ರಾಮಾ ರಾಮಾ ರಾಮಾ ರಾಮಾ
ಪಾಲಿಸು ನನ್ನನು ನೀ ರಘುವೀರ
ರಾಮಾ ರಾಮಾ ರಾಮಚಂದ್ರಾ...ಶ್ರೀ ರಾಮಚಂದ್ರಾ
ನಿನ್ನ ಭಕುತರ ಭಕುತನು ನಾನು
ಅನ್ನವನೀಯುವ ಪ್ರಭುವರ ನೀನು
ಘನ್ನ ಮಹಿಮನೇ ಶರಣೆಂಬೆನು ನಾ
ಮನ್ನಿಸಿ ನೀ ಪೊರೆಯೋ..ಅನುದಿನಾ....
ಅಮ್ಮನ ಅಣತಿಯು ನನ್ನನು ಹಿಡಿದು
ಸುಮ್ಮನೆ ಕೂರಲು ಮತ್ತದು ಬಿಡದು
ಒಮ್ಮೆ ಕ್ಷಮಿಸಿ ಆ ಬಡ ಶಮಂತಗೆ
ಒಮ್ಮತದಲಿ ಜೀವನವನು ಕರುಣಿಸೋ ....
ಗುರುನೀನು ಗುಣಧಾಮನು ನೀನು
ಹರಿ ನೀನು ಪುರುಷೋತ್ತಮ ನೀನು
ಅರಿಹಂತನು ನೀ ಅಭಯಂಕರ ನೇ
ಪರಿನೋಡುತಲರಿ ಸಲಹೆನ್ನಾ.......
ಅಯೋಧ್ಯಾರಾಮಾ ...ದಶರಥರಾಮಾ...ಕೌಸಲ್ಯಾರಾಮಾ...ಕಾರುಣ್ಯರಾಮಾ...ರಾಮಾ..ರಾಮಾ......
ರಾಮನ ಪುರಪ್ರವೇಶವಾಯಿತು. ರಾಮ ಹನುಮನಿದ್ದಲ್ಲಿಗೆ ಧಾವಿಸಿಬಿಟ್ಟ. ಇನ್ನೇನು ಬಾಣಪ್ರಯೋಗವಷ್ಟೇ ಬಾಕಿ! ಆದರೂ ಮಗುವಿನ ಥರದ ಮಾರುತಿಯನ್ನು ನೋಡಿ ಶಕುಂತನನ್ನು ಬಿಟ್ಟುಬಿಡುವಂತೆ ಸ್ವತಃ ಬುದ್ಧಿವಾದ ಹೇಳಿದ. ಎಷ್ಟೇ ಹೆಳಿದರೂ ಕೇಳದ ಹನುಮಂತ ರಾಮನೊಡನೆ ಯುದ್ಧವನ್ನೇ ಬೇಕಾದರೂ ಮಾಡಿಯೇನು ಆದರೆ ಶಕುಂತನನ್ನು ಬಿಡಲೊಲ್ಲೆ ಎಂದು ಪಟ್ಟುಹಿಡಿದ. ಯುದ್ಧ ನಡೆಯಿತು. ರಾಮ ನಾಮವನ್ನು ಜಪಿಸುತ್ತ ಕುಳಿತ ಹನುಮ, ಆಅತನ ಮೇಲೆ ಬಾಣಗಳ ಪ್ರಯೋಗಕ್ಕೆ ಮುಂದಾದ ರಾಮ. ನಡುವೆ ಬಾನಂಗಳದಿಂದ ಭಾಸ್ಕರ ವಾಲುತ್ತ ಮುಳುಗತೊಡಗಿದ. ಇದನ್ನು ದೂರಗ್ರಾಹಿಯಾಗಿ ನೋಡುತ್ತ ನಿಂತ ವಿಶ್ವಾಮಿತ್ರರು ಅಲ್ಲಿಗೆ ಬಂದು ರಾಮಾ ನೀನು ಇಷ್ಟುಹೊತ್ತು ಅಡೆನು ಮಾಡಿದೆ? ಸಂಜೆ ಸಮೀಪಿಸಿದರೂ ನಿನ್ನಿಂದ ಶಕುಂತನನ್ನು ವಧಿಸಲಾಗಲಿಲ್ಲವಲ್ಲಾ...ಅದೋ ನೋಡು ಸೂರ್ಯನಿಗೆ ತಡೆಹಿಡಿಯುತ್ತಿದ್ದೇನೆ ಬೇಗನೇ ಯುದ್ಧ ಪೂರೈಸಿ ಮುಗಿಸು ಎಂದರು. ವಿಶ್ವಾಮಿತ್ರರು ಅಷ್ಟುಮಾಡಿದ್ದೇ ತಡ ರಾಮ ಎಲ್ಲಿಲ್ಲದ ಅಸ್ತ್ರಗಳನ್ನು ಮಾರುತಿಯ ಮೇಲೆ ಪ್ರಯೋಗಿಸತೊಡಗಿದ.
ಉಹುಂ..ಏನೂ ಪ್ರಯೋಜನವಾಗಲಿಲ್ಲ. ಎಲ್ಲವೂ ಶಾಂಡಿಲ್ಯ, ಭಿಲ್ವ ಮುಂತಾದ ಪತ್ರೆಗಳಾಗಿ ಹನುಮನ ತಲೆಯಮೇಲೆ ಬೀಳುತ್ತಿದ್ದವು. ಕೊನೆಗೊಮ್ಮೆ ಬ್ರಹ್ಮಾಸ್ತ್ರ ಪ್ರಯೋಗಿಸಿದ. ಅದು ವೈಜಯಂತೀ ಹಾರವಾಗಿ ಹನುಮನ ಕೊರಳಿಗೆ ಬಂದು ಬಿತ್ತು. ಬಹಳ ಆಶ್ಚರ್ಯಚಕಿತನಾದ ರಾಮ ಜೊತೆಗೇ ಇದ್ದ ಸೀತೆಯನ್ನು ಕೇಳಿದ. ಆಗ ಆಕೆ ಹಿಂದೆ ನೀಡಿದ ವರಗಳನ್ನು ಹೇಳಿದಳು. ಪುನಃ ಕೋಪಗೊಂಡ ರಾಮ ನಾರಾಯಣಾಸ್ತ್ರವನ್ನು ಹೊಅರತೆಗೆದ..ಇನ್ನೇನು ಬಿಡಬೇಕು..ಅಷ್ಟರಲ್ಲಿ ಪುನಃ ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ರಾಮನನ್ನು ತಡೆದರು. ಹಿಡಿದಿರುವ ನಾರಾಯಣಾಸ್ತ್ರದಿಂದ ಪ್ರಳಯಸದೃಶ ವಾತಾವರಾಣ ಉಂಟಾಗಿ ಹಲವು ಸಾವು-ನೋವು ಸಂಭವಿಸುವುದರಿಂದ ಅದು ಬೇಡವೆಂತಲೂ ಯಾವ ಶಕುಂತನಿಗಾಗಿ ರಾಮ ಹುಡುಕುತ್ತಿದ್ದಾನೋ ಅವನ ರುಂಡ ಅಲ್ಲಿ ಬಿದ್ದಿದೆ ನೋಡು ಎಂತಲೂ ರಾಮನಿಗೆ ಅಪ್ಪಣೆಕೊಡಿಸಿದರು. ಒಪ್ಪಿದ ಮಾತನ್ನು ತಾನು ಪೂರೈಸಿಕೊಟ್ಟದ್ದಕ್ಕೆ ರಾಮನಿಗೆ ಸಮಧಾನವಾಯಿತು, ಆದರೆ ಅದನ್ನು ಹನುಮನಿಗೂ ಹೇಳಿಬಿಡು ಎಂದು ಹೇಳಿದರು ವಿಶ್ವಾಮಿತ್ರರು. ಸತ್ತ ಶಕುಂತನನ್ನು ಕಂಡು ಹನುಮ ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂದು ಕ್ರುದ್ಧಗೊಂಡ ಹನುಮ ಇದೆಲ್ಲಾ ಆ ಮುನಿಯ ಆಟವೆಂದು ವಿಶ್ವಾಮಿತ್ರರ ಮೇಲೆ ಹರಿಹಾಯತೊಡಗಿದಾಗ ಮಧ್ಯೆ ನಾರದರ ಪ್ರವೇಶವಾಯಿತು. ನಾರದರು ಬರುಬರುತ್ತಿದ್ದಂತೆ ಹನುಮನಿಗೆ ಸಶರೀರಿಯಾಗಿ ಜೀವಂತವಿರುವ ಶಕುಂತನನ್ನು ತೋರಿಸಿದರು. ತನ್ಮೂಲಕ ಅಲ್ಲಿ ಏನು ನಡೆಯಿತು ಎಂಬುದನ್ನು ವಿಸ್ತರಿಸಿ ಹೇಳಿದರು. ರಾಮ-ರಾಮನಾಮ ಈ ಎರಡರ ಮಹಾತ್ಮೆಯನ್ನು ಜಗತ್ತಿಗೆ ತೋರುವ ಸಲುವಾಗಿ ಅದರಲ್ಲೂ ರಾಮನಾಮಕ್ಕೆ ಸರಿಸಾಟಿಯಾದ ನಾಮವಿಲ್ಲ ಎಂಬುದನ್ನು ಸಾರುವುದಕ್ಕಾಗಿ ಅದನ್ನು ಪ್ರಚುರಪಡಿಸಲು ಹನುಮನೇ ಸರಿಯಾದ ಭಕ್ತ ಎಂಬುದನ್ನು ಮನಗಂಡು ಇಷ್ಟೆಲ್ಲ ನಾಟಕವನ್ನು ಮುನಿ ವಿಶ್ವಾಮಿತ್ರರು ಹೆಣೆದಿದ್ದರು ಎಂಬುದನ್ನು ತಿಳಿಸಿದರು.
ವಿಷಯ ತಿಳಿದ ಹನುಮ ಬಹಳ ಸಂತೊಷಗೊಂಡ. ಲೋಕದಲ್ಲಿ ಯಾರೂ ಕೃತಘ್ನರಾಗಿರಬಾರದು, ಬದುಕಿನಲ್ಲಿ ಕೃತಜ್ಞತಾಭಾವ ಬಹಳ ದೊಡ್ಡದು--ಇದನ್ನೂ ಕೂಡ ಈ ಕಥೆಯಿಂದ ಲೋಕಾರ್ಪಣೆಮಾಡಿದ ಮುನಿಗಳಿಗೆ ಎಲ್ಲರೂ ಅಭಿವಂದಿಸೋಣ ಎಂಬಲ್ಲಿಗೆ ರಾಮ-ಸೀತೆಯರನ್ನು ಮತ್ತೆ ಹನುಮ ಸುತ್ತುತ್ತ ತನ್ನ ಭಕ್ತಿಯನ್ನು ಪುನಃ ಅಭಿವ್ಯಕ್ತಗೊಳಿಸಿದ. ರಾ ಎನ್ನುವಾಗ ಸಕಲ ಪಾಪಗಳೂ ನಮ್ಮ ಬಾಯಿಂದ ಹಒಅರಗೆ ಹೋಗಿ ಮ ಎಂದಾಗ ಹೊರಗಿನ ಪಾಪಗಳು ಒಳಗೆ ಬಾರದಂತೆ ತುಟಿ ಮುಚ್ಚಿಕೊಳ್ಳುವುದರಿಂದ ಈ ರಾಮ ಶಬ್ಧ ಅತಿ ವಿಶಿಷ್ಟವಾಗಿದೆಯೆಂತಲೂ, ಮಹಾವಿಷ್ಣುವಿನ ಕುರಿತ ಅಷ್ಟಾಕ್ಷರೀ ಮಹಾಮಂತ್ರದಿಂದ ’ರಾ’ ಎನ್ನುವ ಅಕ್ಷರವನ್ನೂ ಶಿವಪಂಚಾಕ್ಷರಿ ಮಹಾಮಂತ್ರದಿಂದ ’ಮ’ ಎಂಬ ಅಕ್ಷರವನ್ನೂ ತೆಗೆದು ಪೋಣಿಸಿ ’ರಾಮ’ಎಂದು ಹೆಸರಿಡಲಾಗಿದ್ದನ್ನು ಮಹರ್ಷಿ ವಿಶ್ವಾಮಿತ್ರರೂ ಮತ್ತು ನಾರದರೂ ನೆನಪಿಸಿಕೊಂಡರು, ರಾಮನಾಮ ಜಪದ ಫಲವಾಗಿ ಹನುಮ ಸೋಲಲಿಲ್ಲ ಮಾತ್ರವಲ್ಲ ಶಕುಂತನೂ ಬದುಕುಳಿದ ಎಂಬುದನ್ನು ಜಗತ್ತು ನೋಡಿ ನಲಿಯಿತು.