ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 13, 2012

’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ


’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ

ಕೆಲವು ಕವಿ-ಸಾಹಿತಿಗಳಿಗೆ ತಾವು ಬರೆಯುತ್ತೇವೆ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ವಿದ್ಯೆಯಲ್ಲಿ ಯಾವುದೇ ಹೆಚ್ಚಿನ ಪದವಿ ಪಡೆದಿರದ ವೃತ್ತಿಯಲ್ಲೂ ಎಲ್ಲೋ ಉದರಂಭರಣೆಗಾಗುವ ಒಂದಷ್ಟು ಕಾಸು ಒದಗಿಸುವ ರೀತಿಯಲ್ಲಿ ಬದುಕನ್ನು ನಿರೂಪಿಸಿಕೊಳ್ಳುವ ಕೆಲವರು ಕೀಳರಿಮೆಯಲ್ಲೇ ದಿನ ದೂಡುತ್ತಾರೆ. ಬರೆದ ಕೃತಿಗಳನ್ನು ಹಿಂದೆಂದೋ ಒಬ್ಬ ಮಹಾನುಭಾವ ಬರೆದಿದ್ದ-ಅದನ್ನು ಪ್ರಸ್ತುತ ಪಡಿಸಿದ್ದೇನೆ ಎನ್ನುತ್ತಾ ತಮ್ಮ ಇರವನ್ನು ಹೊರಗೆಡಹದೇ, ಬೇರೆ ಬೇರೆ ಹೆಸರುಗಳಲ್ಲಿ ಪದ್ಯ ಮತ್ತು ಗದ್ಯಗಳನ್ನು ರಚಿಸುತ್ತಾರೆ. ಎಲೆಮರೆಯ ಕಾಯಿಯಾಗಿ ಮಾಗಿ ಹಣ್ಣಾಗುವವರು ಕೆಲವರಾದರೆ ಕಾಯಿದ್ದಾಗಲೇ ಕಾಯಿಲೆಕಸಾಲೆಯಿಂದ ಉದುರಿಹೋಗುವವರೂ ಇದ್ದಾರೆ. ಹಾಗೆ ಉದುರಿ ಹೋದ ಕನ್ನಡದ ನಕ್ಷತ್ರಗಳಲ್ಲಿ ಒಬ್ಬ ಕವಿ ಮುದ್ದಣ.

ಪಠ್ಯಪುಸ್ತಕಗಳಲ್ಲಿ ಮುದ್ದಣನೆಂಬ ಕವಿ ಹಿಂದೆಂದೋ ೧೦-೧೨ ನೆಯ ಶತಮಾನದಲ್ಲಿ ಬದುಕಿದ್ದನೇನೋ ಎಂಬ ಹಾಗೇ ಓದುವ ನಾವು ಮುದ್ದಣನ ಕಾಲಮಾನವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಿರಲಿಲ್ಲ. ೨೧ನೇ ಶತಮಾನದ ಹಿಂದಿನ-ಇಂದಿನ ಕೊಂಡಿಯಾಗಿ ಹಲವು ಜನಪ್ರಿಯ ಕವನಗಳನ್ನು ಸೃಜಿಸಿದ ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೇಳಿಕೆಯಂತೇ ಮುದ್ದಣ ಬಹಳ ಹಿಂದಿನವನಲ್ಲ. ಆತ ೧೯೦೧ರ ವರೆಗೂ ಬದುಕಿದ್ದ. ಉಡುಪಿಯ ನಂದಳಿಕೆ ಗ್ರಾಮದಲ್ಲಿ ಜನಿಸಿದ್ದ ಈ ವ್ಯಕ್ತಿ ವೃತ್ತಿಯಿಂದ ದೈಹಿಕ ಶಿಕ್ಷಕನಾಗಿದ್ದ. ದೈಹಿಕ ಶಿಕ್ಷಕನಾದ ತನ್ನ ಬರಹಗಳನ್ನು ಜನ ಓದಿ ಮೆಚ್ಚಬಹುದೇ ಎಂಬ ಅನುಮಾನದಿಂದಲೇ ಬರೆದ ಎಲ್ಲಾ ಕೃತಿಗಳನ್ನೂ ಮುದ್ದಣನ ಕೃತಿ ಎಂದು ಹೆಸರಿಸಿದ! ಭಟ್ಟರ ಬಾಲ್ಯ ಶಿವಮೊಗ್ಗೆಯಲ್ಲಿ ಕಳೆಯಿತು. ಭಟ್ಟರ ಕುಟುಂಬ ಅಂದಿಗೆ ವಾಸವಿದ್ದಿದ್ದೂ ಮತ್ತು ಮುದ್ದಣನ ಹೆಂಡತಿ ಮನೋರಮೆಯ ತವರುಮನೆ ಇದ್ದಿದ್ದೂ ಒಂದೇ ಕೇರಿಯಲ್ಲಿ! ಎಳವೆಯಲ್ಲಿ ತನ್ನ ಮೂವತ್ತೊಂದನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ ಮುದ್ದಣನ ಹೆಂಡತಿ ಮುಂದಿನ ತನ್ನ ಜೀವನವನ್ನು ಶಿವಮೊಗ್ಗೆಯ ಕಾಗೆ ಕೋಡಮಗ್ಗಿ ಎಂಬ ಜಾಗದಲ್ಲೇ ಕಳೆದಳು. ಮುದ್ದಣನ ಮೊಮ್ಮಗ ಭಟ್ಟರ ಚಡ್ಡೀ ದೋಸ್ತನಾಗಿದ್ದ! ಮುದ್ದಣನ ಮಗನ ಮನೆಗೆ ನಿತ್ಯ ಕೇರಂ ಆಟ ಆಡಲು ಹೋಗುತ್ತಿದ್ದ ಭಟ್ಟರು ತಾನು ಸಾಕ್ಷಾತ್ ಮನೋರಮೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ! ಇದಕ್ಕೇ ಎನ್ನುವುದು ಪಠ್ಯವೆಂಬ ಬದನೇಕಾಯಿಗಳಲ್ಲಿ ಸಿಗುವ ಮಾಹಿತಿ ಪರಿಪೂರ್ಣವಲ್ಲ, ದೋಷರಹಿತವೂ ಅಲ್ಲ. ಬೇರೇ ಆಕರಗಳನ್ನು ಓದಿದಾಗಲೇ ನಿಜದ ಅರಿವು ನಮಗೆ ಆಗಲು ಸಾಧ್ಯ.

’ಮುದ್ದಣ’ನೆಂಬ ಕಾವ್ಯನಾಮದಲ್ಲಿ ಕವಿ ತಾನು ರಚಿಸಿದ ಕೆಲವೇ ಕೃತಿಗಳಿಂದ ಜನಪ್ರಿಯನಾಗಲು ಕಾರಣ ಆತನೇ ತನ್ನ ಕೃತಿಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ವಿಮರ್ಶೆಮಾಡಿಕೊಂಡಿದ್ದು. ’ಮುದ್ದಣ-ಮನೋರಮೆ’ಯರ ಸರಸ ಸಲ್ಲಾಪ ಎಲ್ಲರಿಗೂ ಗೊತ್ತಿರುವ ವಿಚಾರ. ’ರತ್ನಾವತಿ ಕಲ್ಯಾಣ’ವಂತೂ ಯಕ್ಷಗಾನದ ಅತ್ಯಂತ ರಸಮಯ ಪ್ರಸಂಗ. ಅಲ್ಲಿನ ಶಬ್ದಲಾಲಿತ್ಯದಲ್ಲಿ ಕವಿ ಕೇಳುಗರನ್ನು/ಓದುಗರನ್ನು ಯಾವುದೋ ಆನಂದದ ವಿಹಾರಕ್ಕೆ ಕರೆದೊಯ್ಯುತ್ತಾನೆ. ಅದರಲ್ಲಿನ ಸನ್ನಿವೇಶಗಳು ವಿಲಾಸಪೂರ್ಣ. ಯಕ್ಷಗಾನದಲ್ಲಿ ಕೆಲವು ಪ್ರಸಂಗಗಳನ್ನು ಬೀಳು ಪ್ರಸಂಗಗಳು ಎಂದು ಗುರುತಿಸಲಾಗಿದೆ. ಯಾವ ಪ್ರಸಂಗ ಕೆಲವೊಮ್ಮೆ ತನ್ನದೇ ಏಕತಾನತೆಯಿಂದ ಬೋರುಹೊಡೆಸುತ್ತದೋ ಅಂಥಾದ್ದನ್ನು ಬೀಳು ಪ್ರಸಂಗ ಎನ್ನುತ್ತಾರೆ. ಪೂರ್ಣರಾತ್ರಿ ಯಕ್ಷಗಾನದಲ್ಲಿ ಬೋರು ಹೊಡೆಸುವ ಸನ್ನಿವೇಶಗಳು ಬಂದಾಗ ನಾವೆಲ್ಲಾ ಎದ್ದು ಚಾ ಕುಡಿಯಲು ಹೋಗುತ್ತಿದ್ದುದು ನೆನಪಿದೆ. ಪ್ರಸಂಗ ಬೀಳು ಎನಿಸಿದರೂ ಕಥೆ ಪೌರಾಣಿಕವಾಗಿ ಮನ್ನಣೆಗಳಿಸಿರುವುದರಿಂದ ಅಂತಹ ಪ್ರಸಂಗಗಳನ್ನು ಆಡುವುದಿತ್ತು. ಬೇಸತ್ತ ಜನರಿಗೆ ಅಂತಹ ಪ್ರಸಂಗಗಳ ಜೊತೆಯಲ್ಲಿ ’ರತ್ನಾವತಿ ಕಲ್ಯಾಣ'ಆಡಿ ರಂಜಿಸುವುದು ಮೇಳದವರ ಪ್ರಯತ್ನವಾಗಿತ್ತು! ಅದೇ ಮುದ್ದಣ ’ಕುಮಾರ ವಿಜಯ’ ಎಂಬ ಯಕ್ಷಗಾನವನ್ನೂ ಬರೆದಿದ್ದಾನೆ.

ಪುರಾತನ ಕೃತಿಗಳು ಎಂದರೆ ಜನ ಕುತೂಹಲ ಸಹಜದಿಂದ ಓದುತ್ತಾರೆ ಎಂಬ ಅನಿಸಿಕೆಯಿಂದ ಮಾರುವೇಷತೊಟ್ಟು ಕನ್ನಡ ಸಾರಸ್ವತಲೋಕದಲ್ಲಿ ಬದುಕಿದ್ದವ ಈ ಮುದ್ದಣ. ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಅದ್ಭುತ ರಾಮಾಯಣ’, ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’ ಮುಂತಾದ ಹೆಚ್ಚಿನದಾಗಿ ರಾಮಕಥೆಯನ್ನೇ ಆಧರಿಸಿದ ಕೃತಿಗಳನ್ನು ಬರೆದ. ೧೮೭೦ ರ ಜನವರಿ ೨೪ರಲ್ಲಿ ಉಡುಪಿಯ ನಂದಳಿಕೆಯಲ್ಲಿ ಜನಿಸಿದ ಲಕ್ಷ್ಮೀನಾರಣಪ್ಪ ಬದುಕಿದ್ದು ಕೇವಲ ೩೧ ವರ್ಷ. ವ್ಯಾಯಾಮ ಶಿಕ್ಷಕನಾಗಿದ್ದ ಈತ ಶ್ರಮಪಟ್ಟು ಹಳಗನ್ನಡವನ್ನು ಅಭ್ಯಾಸ ಮಾಡಿ ಹಳಗನ್ನಡದಲ್ಲೇ ಕೃತಿಗಳನ್ನು ರಚಿಸುವ ಪಾಂಡಿತ್ಯ ಗಳಿಸಿದ. ಹೆಂಡತಿಯ ನಿಜ ನಾಮಧೇಯ ಕಮಲಾಬಾಯಿ. ವಿನೋದಪ್ರಿಯನಾಗಿದ್ದ ಮುದ್ದಣ ಮುಗ್ಧೆಯಾದ ಹದಿಹರೆಯದ ಮನೋರಮೆಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ! ಕಮಲಾಬಾಯಿಯನ್ನು ತಾನೇ ಇಟ್ಟ ’ಮನೋರಮೆ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದನಂತೆ. ೧೮೯೩ರಲ್ಲಿ ಮುದ್ದಣನಿಗೆ ವಿವಾಹವಾಗಿತ್ತು. ೧೯೦೦ ರಲ್ಲಿ ಮಗ ’ರಾಧಾಕೃಷ್ಣ’ ಹುಟ್ಟಿದ್ದ. ೧೯೦೧ ರಲ್ಲಿ ಮುದ್ದಣ ಗತಿಸಿದಾಗ ಕಮಲಾಬಾಯಿಗೆ ಹದಿನೆಂಟೋ ಇಪ್ಪತ್ತೋ ವಯಸ್ಸಿರಬಹುದು. ಮುಂದೆ ಅವಳನ್ನೂ ರಾಧಾಕೃಷ್ಣನನ್ನೂ ಆಕೆಯ ತವರು ಮನೆಯವರು ತಮ್ಮಲ್ಲಿಗೆ ಕರೆದೊಯ್ದರು ಎನ್ನುತ್ತಾರೆ ಕವಿ ಲಕ್ಷ್ಮೀನಾರಾಯಣ ಭಟ್ಟರು.

ದೊಡ್ಡವನಾದಮೇಲೆ ಮುದ್ದಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗೆಯ ಎ.ವಿ.ಗರ್ಲ್ಸ್ ಸ್ಕೂಲ್‍ನಲ್ಲಿ ಅಧ್ಯಾಪಕರ ಕೆಲಸಕ್ಕೆ ಸೇರಿದ. ಗೆಳೆಯರು ಪರಿಚಿತರು ಬಾಬುರಾವ್ ಎಂಬ ತೋಂಡಿ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಭಟ್ಟರ ಕಡೆಯ ಅಕ್ಕ ಸಾವಿತ್ರಿ ಎಂಬಾಕೆ ರಾಧಾಕೃಷ್ಣರ ವಿದ್ಯಾರ್ಥಿನಿಯಾಗಿದ್ದಳಂತೆ. ಭಟ್ಟರ ಬಾಲ್ಯದ ಮನೆ ಮತ್ತು ರಾಧಾಕೃಷ್ಣರ ಮನೆ ಇದ್ದಿದ್ದು ಒಂದೇ ಸಾಲಿನಲ್ಲಿ. ಒಂದು ವಠಾರದ ಮನೆಯಲ್ಲಿ ರಾಧಾಕೃಷ್ಣ ಮತ್ತು ಹೆಂಡತಿ ಸರಸ್ವತಮ್ಮ ಹಾಗೂ ಅವರ ಐದು ಜನ ಮಕ್ಕಳು ಜೊತೆಗೆ ತಾಯಿ ಕಮಲಾಬಾಯಿ[ಮನೋರಮೆ] ಇದ್ದರಂತೆ. ಕಮಲಾಬಾಯಿಗೆ ಆಗ ಸುಮಾರು ೬೫ ವರ್ಷ ಕಳೆದಿತ್ತೋ ಏನೋ ಎನ್ನುತ್ತಾರೆ ಭಟ್ಟರು. ಮಕ್ಕಳೆಲ್ಲರ ’ಕಮಲಜ್ಜಿ’ಯಾಗಿದ್ದಳು ಮುದ್ದಣನ ಆ ಮನೋರಮೆ! ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ಭಟ್ಟರಿಗೆ ಸಹಪಾಠಿಯೂ ಸ್ನೇಹಿತನೂ ಆಗಿದ್ದು ಕೇರಂ ಆಟದ ಹುಚ್ಚು ಭಟ್ಟರನ್ನು ಪ್ರತೀನಿತ್ಯ ಕೇರಂ ಬೋರ್ಡ್ ಇರುವ ರಾಧಾಕೃಷ್ಣಯ್ಯನವರ ಮನೆಗೆ ಹೋಗುವಂತೇ ಮಾಡುತ್ತಿತ್ತು. ಅಲ್ಲಿಗೆ ಹೋದಾಗ ಪ್ರತಿದಿನ ಮನೆಯ ಹಾಲ್ ನಲ್ಲಿ ಗೋಡೆಗೆ ತಗುಲಿಹಾಕಿದ್ದ ಚಿತ್ರಪಟವೊಂದು ಭಟ್ಟರನ್ನು ಸೆಳೆಯುತ್ತಿತ್ತಂತೆ. ಅದರ ಕೆಳಗೆ ’ನಂದಳಿಕೆ ಲಕ್ಷ್ಮೀನಾರಣಪ್ಪ’ ಎಂದು ಬರೆದಿತ್ತು ಎಂದಿದ್ದಾರೆ ಭಟ್ಟರು. ಆ ಚಿತ್ರ ಮುದ್ದಣ ಕವಿಯದ್ದೆಂದಾಗಲೀ ಕಮಲಜ್ಜಿಯೇ ’ಮನೋರಮೆ’ ಎಂದಾಗಲೀ ಅರಿತಿರದ ಭಟ್ಟರಿಗೆ ಆಗ ಹದಿಮೂರು-ಹದಿನಾಲ್ಕು ವಯಸ್ಸು. ಹೇಳಬೇಕೂಂದ್ರೆ ಭಟ್ಟರಿಗೆ ಹೆಚ್ಚಿನ ಕವಿಗಳ ಅದರಲ್ಲೂ ಮುದ್ದಣನ ಹೆಸರೇ ಗೊತ್ತಿರದ ಕಾಲಘಟ್ಟ ಅದು.

ಒಂದು ದಿನ ಎಂದಿನಂತೇ ಬಾಲಕ ಭಟ್ಟರು ಆಡಲು ಹೋದಾಗ ಮಕ್ಕಳ್ಯಾರೂ ಮನೆಯಲ್ಲಿರಲಿಲ್ಲ. ಹಾಲ್ ನಲ್ಲಿ ಗೋಡೆಗೆ ಆನಿಸಿಟ್ಟಿದ್ದ ಕೇರಂ ಬೋರ್ಡ್ ಮತ್ತು ಪಾನು[ಕಾಯಿ]ಗಳ ಡಬ್ಬ ಎತ್ತಿಕೊಂಡು ಆ ಮನೆಯ ವಠಾರದಲ್ಲಿ ಮನೆಯ ಮುಂದಿರುವ ಮಣ್ಣ ಜಗಲಿಯಮೇಲೆ ಹರಡಿಕೊಂಡು ಒಬ್ಬರೇ ಆಟವಾಡುತ್ತಿದ್ದಾಗ " ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ, ಬೆಳಿಗ್ಗೆ ಸಂಜೆ ಬರೇ ಆಟ, ಓದುವುದು ಯಾವಾಗಪ್ಪಾ? " ಎಂದು ಮೊಮ್ಮಗನೇ ಆಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಗದರಿಕೊಂಡಹಾಗೇ ಕೇಳಿದ್ದರಂತೆ. ಅವರಿಗೆ ಆಗ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ. " ಸೀತಾರಾಮ ಅಲ್ಲ ಕಮಲಜ್ಜಿ ನಾನು ಅಣ್ಣ [ಭಟ್ಟರ ಬಾಲ್ಯದ ಅಡ್ಡ ಹೆಸರು]ಸೀತಾರಾಮ ಎಲ್ಲೋ ಹೋಗಿದ್ದಾನೆ, ನಾನು ಅವನಿಗೇ ಕಾಯ್ತಿದ್ದೀನಿ" ಎಂದಾಗ " ಓ ನೀನಾ ! ಸರಿ ಬಿಡು " ಎಂದಿದ್ದರಂತೆ. " ನಿನ್ನ ಅಮ್ಮ, ಗೌರ, ಸಾವಿತ್ರಿ[ಗೌರಿ, ಸಾವಿತ್ರಿ ಭಟ್ಟರ ಅಕ್ಕಂದಿರು] ಚೆನ್ನಾಗಿದ್ದಾರಾ? " ಎಂದು ಅನೇಕ ದಿನ ಕೇಳುತ್ತಿದ್ದುದೂ ಇತ್ತಂತೆ. ಹೀಗೇ ಮನೋರಮೆಯೊಟ್ಟಿಗೆ ನೇರವಾಗಿ ಸಂಭಾಷಿಸಿದ ಹೆಗ್ಗಳಿಕೆ ಭಟ್ಟರದು. ಭಟ್ಟರ ಬಾಲ್ಯ ಕಳೆದು ಕನ್ನಡ ಆನರ್ಸ್ ಮಾಡಲು ಮೈಸೂರಿಗೆ ಅವರು ಹೋದಾಗ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ಸಂಪಾದಿಸಿದ್ದ ’ಅದ್ಭುತ ರಾಮಾಯಣ’ದ ಮುನ್ನುಡಿಯನ್ನು ಓದುತ್ತಿರುವಂತೆಯೇ ಭಟ್ಟರಿಗೆ ಮುದ್ದಣ-ಮನೋರಮೆಯರ ಬಗ್ಗೆ, ಮುದ್ದಣ ಎಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬಬಗ್ಗೆ ತಿಳಿಯಿತೆಂದು ಹೇಳಿದ್ದಾರೆ.

ಮುದ್ದಣ ಬದುಕಿದ್ದರೆ ಮಹಾಕವಿ ಎನಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದ. ಅವನು ’ಗೋದಾವರಿ’ ಎಂಬ ಕದಂಬರಿಯನ್ನು ಅರ್ಧ ಬರೆದಿದ್ದ. ವಿಧಿ ಅದನ್ನು ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಹಸ್ತಪ್ರತಿಯಲ್ಲಿದ್ದ ಅದೆಲ್ಲೋ ಹಾಗೇ ಜೀರ್ಣವಾಗಿ ಹೋಯ್ತು. ’ರಾಮಪಟ್ಟಾಭಿಷೇಕ’ ಪದ್ಯ ರೂಪದಲ್ಲಿದ್ದರೆ ’ಅದ್ಭುತ ರಾಮಾಯಣ’ ಮತ್ತು ’ರಾಮಾಶ್ವಮೇಧ’ ಗದ್ಯ ರೂಪದಲ್ಲಿವೆ. ಆದರೂ ’ರಾಮಾಶ್ವಮೇಧ’ ಹೆಚ್ಚು ಕಾವ್ಯ ಸತ್ವದಿಂದ ಕೂಡಿದೆ. ’ಜೋ ಜೋ’ ಎಂಬ ಶಬ್ದಾರ್ಥ ಸಂಶೋಧನ ಲೇಖನವೊಂದನ್ನು ’ಚಕ್ರಧಾರಿ’ ಎಂಬ ಕಾವ್ಯನಾಮದಿಂದ ’ಸುವಾಸಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಕೃತಿಗಳನ್ನು ತನ್ನದೆನ್ನದೇ ಹಿಂದಿನ ಯಾರೋ ಹಳಗನ್ನಡದ ಕವಿಯ ಕೃತಿಗಳೆಂದು ಹೇರ್‍ಳಿಕೊಂಡ ಆತನಿಗೆ ತನ್ನ ಕವಿತ್ವವನ್ನು ಜನ ಗುರುತಿಸಿ ತನ್ನ ಕೃತಿಗಳು ಮೆರೆಯುವ ಕಾಲವನ್ನು ನೋಡಬಿಡಲಿಲ್ಲ ಆ ವಿಧಿ; ಉತ್ತಮ ಕೃತಿಗಳನ್ನು ರಚಿಸಿಯೂ ಗೊತ್ತಾಗದಂತೇ ಕರ್ಪೂರದಂತೇ ಕರಗಿಹೋದ ಕವಿ ಮುದ್ದಣ. ಮೈಸೂರಿನ ’ಕಾವ್ಯ ಮಂಜರಿ’ ಮತ್ತು ’ಕಾವ್ಯ ಕಲಾನಿಧಿ’ ಮಾಸಪತ್ರಿಕೆಗಳು ಮುದ್ದಣನ ಮೂರೂ ರಾಮಕಥೆಗಳನ್ನು ಭಾಗ ಭಾಗವಾಗಿ ಪ್ರಕಟಿಸಿದ್ದವಂತೆ. ’ರಾಮಾಶ್ವಮೇಧ’ ಪೂರ್ತಿ ಪ್ರಕಟವಾಗುವುದಕ್ಕೂ ಮೊದಲೇ ತೀರಿಕೊಂಡ ಮುದ್ದಣ ಪ್ರೀತಿಯ ಪತ್ನಿಯನ್ನೂ, ವರ್ಷವೊಂದು ತುಂಬಿದ ಮಗನನ್ನೂ ಬಿಟ್ಟು ಹೊರಟುಹೋದ; ದುರಂತ ಕಥೆಯಾದ. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲಾ ಅವನವೇ ಎಂದೂ ತಿಳಿದದ್ದು ಆತ ಮರಣಸಿದ ನಂತರವೇ.

ಮುದ್ದಣನ ಕೃತಿಯಲ್ಲಿ ಪ್ರತಿಮಾತ್ಮಕವಾಗಿ ಪ್ರಕಟಗೊಳ್ಳುವ ವಿಮರ್ಶಾತತ್ವ ಅವನಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಉನ್ನತ ಸ್ಥಾನ ಕಲ್ಪಿಸಿದೆ. ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರುವುದಕ್ಕಿಂತ ಮೊದಲು ಕಾವ್ಯ ಸಾಹಿತ್ಯ ಕೇವಲ ಪ್ರತಿಭೆಯ ಫಲ ಎಂಬ ರೋಮಾಂಚಕ ಕಲ್ಪನೆ ಇತ್ತು. ಕಾವ್ಯಕ್ಕೆ ಪ್ರತಿಭೆಯೇನೋ ಅವಶ್ಯಕವೇ ಆದರ ಜೊತೆಜೊತೆಗೆ ಕವಿಯ ಶ್ರಮ ಮತ್ತು ಬುದ್ಧಿಮತ್ತೆ ಬಹಳ ಬೇಕು ಎಂಬುದನ್ನು ಎಲಿಯಟ್ ವಿಷದಪಡಿಸಿದ್ದಾನೆ. ತಾನು ಬರೆದ ಅದೆಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ ಕವಿತೆಗೆ ಬುದ್ಧಿಯ ಚುಚ್ಚುಮದ್ದನ್ನು ನೀಡುವ ಕವಿ ಕೆಲವೊಮ್ಮೆ ಬರಡು ಭೂಮಿಯಲ್ಲಿ ಬೀಜಬಿತ್ತಿ ನೀರು-ಗೊಬ್ಬರ ತಕ್ಕಮಟ್ಟಿಗೆ ಪೂರೈಸಿ, ಮಳೆಗಾಗಿ-ಬೆಳೆಗಾಗಿ ಪ್ರಾರ್ಥಿಸಿ ಕುಳಿತ ರೈತನಂತಿರುತ್ತಾನೆ! ಉತ್ತಮ ಫಸಲು ಬರಬಹುದು ಬರದೇ ಇರಬಹುದು ಅದು ಅವನ ಅದೃಷ್ಟದಾಟ!!

ಇದನ್ನೇ, ಎಲಿಯಟ್ ಬರುವುದಕ್ಕಿಂತಾ ಮೊದಲೇ, ಕನ್ನಡದ ಕವಿ ಮುದ್ದಣ ತನ್ನ ’ರಾಮಾಶ್ವಮೇಧ’ದಲ್ಲಿ ವಾರೆನೋಟದಲ್ಲಿ ಪ್ರತಿಬಿಂಬಿಸಿದ್ದ ಎಂದರೆ ತಪ್ಪಾಗಲಾರದು. ಹೃದ್ಯವಾದ ಪ್ರಸಂಗದಲ್ಲಿ ಮುದ್ದಣ ಮತ್ತು ಪತ್ನಿ ಮನೋರಮೆ ಅ ಕಾವ್ಯದೊಳಗೆ ಸೂತ್ರಧಾರ ನಟನಟಿಯರಂತೇ ಬಂದು ಪಾತ್ರನಿರ್ವಹಿಸುತ್ತಾರೆ. ಮುದ್ದಣ ನಿರ್ದಿಷ್ಟವಾದ ಉದ್ದಿಶ್ಯದಿಂದ ನಿರ್ಮಿಸಿಕೊಂಡಿದ್ದು ಈ ಕಾವ್ಯತಂತ್ರ! ಹಿಂದಿನ ಕವಿಗಳು ತಮ್ಮ ಪಾಂಡಿತ್ಯವನ್ನು ಮೆರಸಲು ಬಳಸಿದ ಕ್ಲಿಷ್ಟಕರ ಶಬ್ದಪ್ರಯೋಗಗಳೂ, ದೇವತಾ ಸ್ತುತಿಗಳೂ , ಅನವಶ್ಯಕವಾದ ವಿದ್ವತ್ಪೂರ್ಣ ಆಡಂಬರದ ಪದಗಳೂ ಕಾವ್ಯವನ್ನು ಕೆಡಿಸುತ್ತವೆ ಎಂಬ ಕಲ್ಪನೆ ಮುದ್ದಣನಿಗಿತ್ತು. ನಡೆದುಬಂದ ಸಂಪ್ರದಾಯಕ್ಕೆ ಏಕಾಏಕಿ ಪೂರ್ಣವಿರಾಮ ಹಾಕಿಬಿಟ್ಟರೆ ಓದುವ ಜನ " ಓಹೋ ಈತನಿಗೆ ಪಾಂಡಿತ್ಯವಿಲ್ಲ" ಎಂದು ಭಾವಿಸಲೂ ಬಹುದು ಅಥವಾ ಕೃತಿಗಳು ಅಂತಹ ಸಂಪ್ರದಾಯವಾದಿಗಳ ಅವಜ್ಞೆಗೆ ಕಾರಣವೂ ಆಗಬಹುದು ಎಂಬ ದೃಷ್ಟಿಕೋನದಿಂದ ತನ್ನ ಕಾವ್ಯವನ್ನೇ ಒರೆಗೆ ಹಚ್ಚುವಲ್ಲಿ ತಾನು ಕಾವ್ಯದೊಳಗೇ ಸೂತ್ರಧಾರ ಪಾತ್ರವಾಗಿ ಸೇರಿಕೊಂಡು ಹೆಂಡತಿಯನ್ನೂ ಹಾಗೇ ಸೇರಿಸಿಕೊಂಡುಬಿಟ್ಟ! ಸೂತ್ರಧಾರ ನಲ್ಲ-ನಲ್ಲೆಯರ ಮಧ್ಯೆ ನಡೆಯುವ ಸರಸ ಸಂಭಾಷಣೆ ಕಾವ್ಯವನ್ನು ವಿಮರ್ಶಿಸುತ್ತಾ ನಡೆಯಿತು!

" ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ " ಮುಂತಾಗಿ ಕಾವ್ಯಾರಂಭ ಮಾಡಿದಾಗ ಸುಂದರಿಯೂ ಜಾಣೆಯೂ ಆದ ಮನೋರಮೆ ಆತನನ್ನು ತಡೆದು " ಇದೇನು ನಿನ್ನ ಕಥೆಯ ಹೇಳಾಟ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವುದೇ? ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥಾ ಕಷ್ಟದ ಶೈಲಿ ಬಳಸುತ್ತೀಯಾ? ತಿಳಿಯುಂಥಾ ಮಾತಿನಲ್ಲಿ ಕಥೆ ಹೇಳಬೇಡವೇ? " ಎಂದು ಮೂಗು ಮುರಿಯುತ್ತಾಳೆ. ಮುಂದೆ ಮತ್ತೆಲ್ಲೋ ಆಗಾಗ ಆಡಂಬರದ ಅಲಂಕಾರಗಳು ಜಾಸ್ತಿಯಾದಾಗ " ಯಾರಿಗೆ ಬೇಕು ಆ ವರ್ಣನೆ ಕಥೆ ಮುಂದುವರಿಸು" ಎಂದು ಛೇಡಿಸುತ್ತಾಳೆ. ಇದೇ ರಸಸಂವಾದ ರಾಮಕಥಾನಕವೆಂಬ ರೇಷ್ಮೆಯ ಪೀತಾಂಬರಕ್ಕೆ ಬಂಗಾರದ ಜರಿಯ ಅಂಚಿನಂತಿದ್ದು ಕೃತಿ ಅನನ್ಯವಾಗಿ ಎದ್ದು ನಿಲ್ಲುತ್ತದೆ. ಶೃಂಗಾರ ರಸತುಷಾರದ ಸಿಂಚನದೊಂದಿಗೆ ಪರೋಕ್ಷವಾಗಿ ಕಾವ್ಯವನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುವ ಕನ್ನಡದ ಏಕೈಕ ಕವಿಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ!

ಕಡಲಂಚಿನ ಕಾವ್ಯಲಹರಿಯೇ ಯಕ್ಷಗಾನದ ಮೂಲ ಸ್ವತ್ತು! ಹಲವು ರಾಗಗಳಲ್ಲಿ, ಛಂದಸ್ಸುಗಳಲ್ಲಿ ಪ್ರಸಂಗಗಳನ್ನು ಹಾಡುವಂತೇ ಹೊಸೆಯುವ ಕವಿತ್ವವೇ ಅದರಲ್ಲಿನ ತಾಕತ್ತು! ಭಾಮಿನಿ ಷಟ್ಪದಿ, ಭೋಗ ಷಟ್ಪದಿ ರಾಗಗಳನ್ನು ಹಾಡುವಾಗ ಸಹಜವಾಗಿ ಹಳಗನ್ನಡದ ಮೇರು ಕವಿಗಳು ನೆನಪಿಗೆ ಬರುತ್ತಾರೆ.

ನಾಂದಿಯೊಳು ವರವ್ಯಾಸ ಮುನಿವರ ......
ಕವಿಜನಸಂದಣಿಗೆ ಬಲಬಂದು .....
.
.
ಅಂಬುನಿಧಿಯಾತ್ಮಜಗೆ ಕೈಮುಗಿದಂಬುಜಾಸನ ವಾಣಿಯರ
ಪಾದಾಂಬುಜಕೆ ಪೊಡಮಟ್ಟು ಪೇಳುವೆನೀಕಥಾಮೃತವ ...............

ಎಂದು ಭಾಗವತರು ರಾಗವಾಗಿ ನಾಂದಿಹಾಡುತ್ತಿರುವಾಗಲೇ ರನ್ನ, ಪಂಪ, ಹರಿಹರ, ಕುಮಾರವ್ಯಾಸಾದಿ ಹಲವು ಕನ್ನಡ ಕವಿಗಳು ನಮ್ಮ ಮನದಲ್ಲಿ ಹಾದುಹೋಗುವುದು ಸಾಹಿತ್ಯ ರುಚಿಸುವ ಯಕ್ಷಗಾನಾಸಕ್ತರಿಗೆ ಸಹಜ. ಹಿತಮಿತ ಸಂಗೀತ, ಅದ್ಭುತ ಪ್ರಾಸಬದ್ಧ ಸಾಹಿತ್ಯ, ನವರಸಗಳಿಗೆ ತಕ್ಕುದಾದ ರಾಗಪ್ರಸ್ತಾರ, ಅದರದ್ದೇ ಆದ ತಾಳ, ಲಯ, ಬಿಡ್ತಿಗೆ, ಚಂಡೆ-ಮದ್ದಳೆ-ಗೆಜ್ಜೆಗಳ ಸಮ್ಮಿಶ್ರ ಸ್ವರಸಂದೋಹ, ಗೆಜ್ಜೆಯ ನಾದವನ್ನೇ ಹೋಲುವ ತಾಳದ ಸದ್ದು --ಇವೆಲ್ಲಾ ಹಿಮ್ಮೇಳದ ಕೊಡುಗೆಯಾದರೆ ಹಾಡಲು ಸುಲಭವಾಗುವಂತಹ ಪ್ರಾಸಬದ್ಧ ಮತ್ತು ಸ್ವರಶುದ್ಧ ಹಾಡುಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪೋಣಿಸಿಕೊಟ್ಟ ಮಹತಿಯ ಔದಾರ್ಯ ಕನ್ನಡ ಕವಿಗಳದ್ದಾಗಿದೆ. ಅಂತಹ ಕವಿಜನಸಂದಣಿಯಲ್ಲಿ ಮುದ್ದಣ ಕೂಡ ಒಬ್ಬ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಆ ಕವಿಜನಸಂದಣಿಗೂ ನಮಸ್ಕರಿಸುವುದರ ಜೊತೆಗೇ ನಾನು ಬಹಳವಾಗಿ ಮೆಚ್ಚುವ ಕವಿ ಶ್ರೀ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೂ ವಂದಿಸುವುದು ಇಂದಿನ ಈ ಲೇಖನದ ಔಚಿತ್ಯ.