ಅದೊಂದು ಗೊಂಡಾರಣ್ಯ. ಹಳೆಹಳೆಯ ಎತ್ತರದ ನಿತ್ಯಹರಿದ್ವರ್ಣ ಮರಗಳು, ಹೆಬ್ಬಲಸು-ನೇರಳೆ-ಆಲ ಇತ್ಯಾದಿ ಮತ್ತಿನ್ನಾವುದೋ ಕಾಡುಮರಗಳು ಒತ್ತೊತ್ತಾಗಿ ಬೆಳೆದು ಪರಸ್ಪರ ಸ್ನೇಹಸಂಪಾದಿಸಿ ಸುಖಿಸುತ್ತಿದ್ದ ಆ ಕಾಡಿನ ಕೆಲವೆಡೆಗಳಲ್ಲಿ ಹೆಜ್ಜೆಹಾಕಿದ ಕೆಲವರಿಗೆ ಏನೋ ಕಂಡಂತಾಯ್ತು. ಪೊದೆಗಳನ್ನು ಸವರಿ ಮುಂದಕ್ಕೆ ನಡೆದರೆ ಕಟ್ಟೆಯಂತಹ ಯಾವುದೋ ಕಲ್ಲು ಕಾಣತೊಡಗಿತ್ತು. ಮತ್ತಷ್ಟು ಕಣ್ಣರಳಿಸಿ ಮುಂದೆ ಸಾಗಿದರೆ ಹೆಮ್ಮರಗಳ ಮಧ್ಯದಿಂದ ಸೂರ್ಯನ ಬೆಳಕು ಸಾಕಷ್ಟು ಕೆಳಗೆ ತಲ್ಪದ ಜಾಗದ ಮಬ್ಬಿನಲ್ಲಿ ಮತ್ತಷ್ಟು ಅಸ್ಪಷ್ಟ ಆಕಾರಗಳು ಗೋಚರವಾದಂತಿದ್ದವು. ಕಾಡೊಳಗೆ ಚಾರಣಕ್ಕೆ ತೆರಳಿದ ಜನ ಮತ್ತಷ್ಟು ಪ್ರಯತ್ನಿಸಿ ಅಗೆದಗೆದು, ಕಡಿಕಡಿದು ಜಾಗ ಬಿಡಿಸಿದರೆ ಅಲ್ಲೊಂದು ದೇಗುಲದ ಪ್ರಾಕಾರದ ಗೋಡೆಯಾಕಾರ ಕಾಣತೊಡಗಿತ್ತು.
ಶೋಧನೆ ಮುಂದುವರಿದಾಗ ಪಾಣಿಪೀಠ ಅಡ್ಡಬಿದ್ದಿರುವುದು ಕಾಣಿಸಿತು, ಬೃಹದಾಕಾರದ ಲಿಂಗವೊಂದು ಅಡ್ಡಡ್ಡ ಮಲಗಿತ್ತು, ಪಕ್ಕದಲ್ಲೇ ಅತಿಸುಂದರವಾದ ಅಮ್ಮನವರ ವಿಗ್ರಹವೊಂದು ಅನತಿ ದೂರದಲ್ಲಿ ಕಾಣುತ್ತಿತ್ತು! ಬೆತ್ತದ ಬಳ್ಳಿಗಳು ಬಲೆನೇಯ್ದು ಹುತ್ತಬೆಳೆದು ಹತ್ತಿರಹೋಗಲು ಹೆದರಿಕೆಯಾಗುತ್ತಿದ್ದ ಜಾಗವದು. ಹಿಂದೆ ಯಾವುದೋ ಶತಮಾನದಲ್ಲೋ ಸಹಸ್ರಮಾನದಲ್ಲೋ ಅಲ್ಲಿ ದೇವಸ್ಥಾನವೆಂಬುದು ಇತ್ತೆಂಬುದಕ್ಕೆ ಅದು ಸಾಕ್ಷಿ. ಅಲ್ಲಿ ಅಮೋಘವಾದ ಪೂಜೆಗಳೂ ವೇದಘೋಷಗಳೂ ನಡೆದಿರುವ ಸಾಧ್ಯತೆಗಳು ದಟ್ಟವಾಗತೊಡಗಿತ್ತು. ಹರಿದುಬಿದ್ದ ಪ್ರಾಕಾರದ ಕಲ್ಲುಗಳೆಲ್ಲಾ ಒಂದೊಂದು ವಿಶಿಷ್ಟ ಆಕಾರವನ್ನು ಹೊಂದಿದ್ದವು, ಸುಂದರವಾಗಿದ್ದವು, ಗತಕಾಲದಲ್ಲೊಂದು ವೈಭವದ ದಿನಗಳನ್ನು ಅನುಭವಿಸಿದ ಕಥೆಯನ್ನು ಹೇಳುತ್ತದ್ದವು! ಅಲ್ಲಲ್ಲಿ ಶಿಲೆಯ ಹಣತೆಯಾಕಾರಗಳೂ ನಂದಿಯ ವಿಗ್ರಹವೂ ಸಹಿತ ದೊರಕಿದವು. ಚಾರಣಿಗರು ಅದನ್ನು ಅಷ್ಟಕ್ಕೇರ್ ಬಿಡಲಿಲ್ಲ, ಯಾರೋ ಜ್ಯೋತಿಷ್ಕರನ್ನು ಕೇಳಿದರು. ಅಲ್ಲೊಂದು ಪ್ರಸಿದ್ಧ ದೇವಸ್ಥಾನವಿದ್ದಿತ್ತೆಂದೂ ತ್ರಿಕಾಲ ಪೂಜೆ ನಡೆಯುತ್ತಿತ್ತೆಂದೂ ಅದನ್ನು ಮರಳಿ ನಿರ್ಮಿಸಿ ದೇವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಿ ಪೂಜೆ-ಪುನಸ್ಕಾರಗಳನ್ನು ಸಾಂಗವಾಗಿ ನಡೆಸಹತ್ತಿದರೆ ನಿಮಗೆಲ್ಲಾ ಶ್ರೇಯಸ್ಸು ಲಭಿಸುವುದೆಂದೂ ಆತ ಹೇಳಿದ.
ಚಾರಣಿಗರು ಏಳೆಂಟು ಕಿ.ಮೀ ದೂರದ ತಮ್ಮ ಊರಿಗೆ ಮರಳಿದರು, ಹಾಳುಬಿದ್ದ ದೇವಸ್ಥಾನವನ್ನು ಪುನಾರಚಿಸುವ ಶುಭಸಂಕಲ್ಪವನ್ನು ಕೈಗೊಂಡರು. ಕಾಡದಾರಿಯಲ್ಲಿ ವಾಹನ ಹೋಗುವಂತಿರಲಿಲ್ಲ, ಕಲ್ಲು,ಮರಳು, ಸಿಮೆಂಟು ವಗೈರೆ ಸಾಗಾಟಕ್ಕೆ ಆ ಗುಡ್ಡದ ದುರ್ಗಮಹಾದಿ ಸಮಸ್ಯೆಗಳ ಸವಾಲನ್ನು ಮುಂದಿಟ್ಟಿತ್ತು. ತಕ್ಕಮಟ್ಟಿಗಾದರೂ ದೇವಸ್ಥಾನವನ್ನು ಕಟ್ಟದೇ ಮತ್ತೆ ಪೂಜೆ ಆರಂಭಿಸುವುದು ಅಲ್ಲಿನ ವಿಗ್ರಹಗಳನ್ನು ನೋಡಿದ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಅತ್ತಕಡೆ ನೋಡಿದರೆ, ಪರಿಸರದಲ್ಲಿ ಸಾಮಗ್ರಿಗಳ ಸಾಗಾಟಕ್ಕೆ ಕಷ್ಟ, ಅಗತ್ಯ ಬೇಕಾದ ನೀರಿಗೆ ಬಾವಿಯ ವ್ಯವಸ್ಥೆಯಾಗಬೇಕಿತ್ತು, ಎಲ್ಲದಕ್ಕೂ ಮುಖ್ಯವಾಗಿ ಖರ್ಚಿಗೆ ಹಣದ ಅಗತ್ಯ ತೀವ್ರವಾಗಿತ್ತು. ಚಾರಣಿಗರು ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಅನಾದಿಯಲ್ಲಿದ್ದ ದೇವಸ್ಥಾನದ ಸುದ್ದಿ ತಿಳಿಸಿ ಅದರ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುವಂತೇ ಕೋರಿದರು. ಬಹಳ ಜನ ಕೊಟ್ಟರು, ಕೆಲವರು ತಗಾದೆ ತೆಗೆದರು, ಕೆಲವರು ಬೈದು ಕಳಿಸಿದರು --ಹೀಗೇ ಎಲ್ಲವನ್ನೂ ದೇವರ ಹೆಸರಿನಲ್ಲಿ ಚಾರಣಿಗರು ಸ್ವೀಕರಿಸಿದರು.
ಸ್ವತಃ ಭಕ್ತಿಯಿಂದ ಅನೇಕ ಸಾಮಗ್ರಿಗಳನ್ನು ಹೊತ್ತು ನಡೆದರು, ಒಂದಷ್ಟು ಜನರನ್ನು ಸಂಬಳಕ್ಕೆ ನೇಮಿಸಿ ಬಾವಿ ತೋಡಿಸಲು ಮುಂದಾದಾಗ, ಸುಮಾರು ಇಂಥದ್ದೇ ಜಾಗ ಆಗಬಹುದೆಂದು ನಿರ್ಣಯಿಸಿ ಅಗೆದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ಅಲ್ಲೊಂದು ಪುಷ್ಕರಿಣಿಯ ಪಾವಟಿಗೆಗಳು ಕಾಣತೊಡಗಿದ್ದವು! ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ದೇವಸ್ಥಾನ, ಪುಷ್ಕರಿಣಿ ಎಲ್ಲದರ ಕೆಲಸವೂ ಸಾಂಗವಾಯ್ತು. ಘನಪಾಠಿಗಳೂ ತಂತ್ರಿಗಳೂ, ಆಗಮಿಕರೂ ಬಂದು ಪ್ರಶಸ್ತವದ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪರಿಷ್ಠಾಪನಾಂಗ ನಾನಾ ತೆರನಾದ ಹೋಮ-ಹವನಾದಿಗಳನ್ನು ನಡೆಸಿದರು. ಗರ್ಭಗುಡಿಯಲ್ಲಿ ಎಣ್ಣೆಯ ದೀಪಗಳ ಮುಂದೆ ದೇವರ ವಿಗ್ರಹಗಳು ಕಂಗೊಳಿಸುತ್ತಿರುವುದನ್ನು ಕಂಡಾಗ ಚಾರಣಿಗರ ತಾವು ಅನುಭವಿಸಿದ ಕಷ್ಟಗಳೆಲ್ಲಾ ಮರೆತುಹೋದವು. ಮರಗಳನ್ನೂ ಕಡಿಯದೇ ಅಧುನಿಕ ಕಟ್ಟಡ ತಂತ್ರಗಾರಿಕೆಯಿಂದ ಮರಗಳನ್ನು ಉಳಿಸಿಕೊಂಡೇ ದೇವಸ್ಥಾನವನ್ನು ಕಟ್ಟಿದ ಹೆಮ್ಮೆ ಅವರದ್ದಾಗಿತ್ತು. ಕೆಲವು ಬೆತ್ತದ ಬಳ್ಳಿಗಳನ್ನು ಮಾತ್ರ ಭಾಗಶಃ ಕಡಿದಿದ್ದರಷ್ಟೆ. ಈಗದೊಂದು ಸುಂದರ ದೇವಸ್ಥಾನ ಸಹಿತ ಚಾರಣತಾಣವಾಗಿತ್ತು. ಸಾವಿರಾರು ಜನ ಬಂದು ಹೋಗುವುದಕ್ಕೆ ಆರಂಭಿಸಿದರು.
ದೂರದ ಊರುಗಳಿಂದ ಅಲ್ಲಿಗೆ ಬರುವ ಚಾರಣಿಗರು ಕಟ್ಟಡ ಕಟ್ಟಿಸಿದ ಮೂಲ ಚಾರಣಿಗರ ಊರಿನ ಮೂಲಕವೇ ಅಲ್ಲಿಗೆ ಹೋಗಬೇಕಿತ್ತು. ಪಟ್ಟಣಗಳ ಜನ, ನಗರಗಳ ಜನ ಅಲ್ಲಿಗೆ ಬಂದಾಗ ದೇವಸ್ಥಾನ ಕಟ್ಟಿಸಿದವರ ಪರಿಚಯವಾಗಿ, ಅವರಲ್ಲಿರುವ ಗಿಡಮೂಲಿಕೆಯ ಔಷಧಗಳನ್ನು ಕೊಂಡೊಯ್ಯತೊಡಗಿದರು. ಕಾಲಕ್ರಮದಲ್ಲಿ ಮೂಲ ದೇವಸ್ಥಾನ ಕಟ್ಟಿಸಿದ ಊರ ಚಾರಣಿಗರಿಗೆ ನಾಟಿ ವೈದ್ಯವೃತ್ತಿಯೇ ಹೆಸರನ್ನೂ ಸಂಪತ್ತನ್ನೂ ಗಳಿಸಿಕೊಟ್ಟಿತು.
ನಮ್ಮ ನಡುವೆ ಅದೆಷ್ಟೋ ಪ್ರತಿಭೆಗಳು ಹುದುಗಿಯೇ ಇರುತ್ತವೆ. ಸಮಾಜವೆಂಬ ಕಾಡಿನಲ್ಲಿ, ನಾಗರಿಕತೆಯ ಹೆಮ್ಮರಗಳ ನಡುವೆ, ಸ್ವಾರ್ಥದ ಬೀಳಲುಗಳೂ ಬೆತ್ತಗಳೂ ಬಲೆ ಹೆಣೆದುಕೊಂಡು, ಅವ್ಯವಸ್ಥೆಗಳ ಪೊದೆಗಳೊಳಗೆ, ಅವಕಾಶ ರಹಿತ ಹುತ್ತಗಳಲ್ಲಿ ಪ್ರತಿಭೆಗಳ ದೇವವಿಗ್ರಹಗಳು ಹುದುಗಿರುತ್ತವೆ. ಹಿಂದೆ ಯಾವುದೋ ಜನ್ಮದಲ್ಲಿ ಇದೇ ಲೋಕದಲ್ಲಿ ವಿಜೃಂಭಿಸಿದ್ದ ಆ ಪ್ರತಿಭೆಗಳು ಕಾಲಾನಂತರದಲ್ಲಿ ಈ ಲೋಕ ಬಿಟ್ಟುಹೋಗಿ ಮತ್ತೆ ಈ ಲೋಕದಲ್ಲಿ ಇನ್ನೊಂದು ಜನವೆತ್ತಿಬಂದಿರುತ್ತವೆ. ಅಂತಹ ಪ್ರತಿಭೆಗಳ ವಿಗ್ರಹಗಳನ್ನು ಹುಡುಕುವ ಕೆಲಸ ಸಂಸ್ಕಾರವಂತ ಚಾರಣಿಗರಿಂದ ಮಾತ್ರ ಸಾಧ್ಯ. ಪ್ರತಿಭೆಗಳ ವಿಗ್ರಹಗಳಿದ್ದಲ್ಲಿಗೆ ಹೋಗಬೇಕಾದರೆ ಅನೇಕ ಅಡೆತಡೆಗಳನ್ನು ಎದುರಿಸಿಕೊಂಡೇ ಹೋಗಬೇಕಾಗುತ್ತದೆ. ಸ್ವಾರ್ಥದ ಬೀಳಲುಗಳನ್ನೂ ಬೆತ್ತಗಳನ್ನೂ ಭಾಗಶಃ ಕಡಿದು, ನಾಗರಿಕತೆಯ ಹೆಮ್ಮರಗಳನ್ನು ಹಾಗೇ ಉಳಿಸಿಕೊಂಡು, ಪ್ರತಿಭೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅವುಗಳಿಗೆ ಸಂಸ್ಕಾರದ ದೇವಸ್ಥಾನವನ್ನು ಕಟ್ಟಬೇಕು. ಸಂಸ್ಕಾರದ ದೇವಸ್ಥಾನ ಕಟ್ಟುವುದಕ್ಕೆ ಉತ್ಕೃಷ್ಟ ಜೀವನಧರ್ಮ, ಸಂಸ್ಕೃತಿ, ಸದಾಶಯ, ನ್ಯಾಯ, ನೀತಿ ಮೊದಲಾದ ಸಾಮಗ್ರಿಗಳು ಬೇಕು. ಸಾಮಗ್ರಿಗಳಿಗೂ ಮೊದಲು ತಾಳ್ಮೆಯುಕ್ತ ಸಮಯದ ಹಣಬೇಕು. ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿಸಲ್ಪಟ್ಟಮೇಲೆ ಅಲ್ಲಿಗೆ ನಿತ್ಯವೂ ದೂರದ ಚಾರಣಿಗರು ಬಂದು ದರ್ಶಿಸಿ ಸಂತೋಷಪಡುತ್ತಾರೆ. ಚಾರಣಿಗರು ಬಂದುಹೋಗುವಾಗ ಸಂಸ್ಕಾರವಂತ ಚಾರಣಿಗರಿಂದ ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿತವಾದ ಬಗ್ಗೆ ತಿಳಿದುಕೊಳ್ಳುತ್ತಾರೆ, ಸಮಾಜೋದ್ಧಾರದ ಹಣಕೊಟ್ಟು ಸಂಸ್ಕಾರದ ಗಿಡಮೂಲಿಕೆಯನ್ನು ಅವರು ಕೊಂಡೊಯ್ಯುತ್ತಾರೆ. ಸಂಸ್ಕಾರವಂತ ಚಾರಣಿಗರು ಸಮಾಜೋದ್ಧಾರದ ವೃತ್ತಿಯನ್ನೇ ಆಯ್ದುಕೊಳ್ಳಬಹುದು. ಅದರಿಂದ ಅವರಿಗೆ ಗೌರವದ ಸಂಪತ್ತು ಸಿಗುತ್ತದೆ.
ಇವತ್ತಿನ ಸಮಾಜದಲ್ಲಿ, ಅದೂ ಮಹಾನಗರಗಳಲ್ಲಿ ೮೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿಗಳನ್ನು ತಮ್ಮ ಸ್ಕೂಲಿಗೆ ಸೇರಿಸಿಕೊಂಡು ೯೮ ಪರ್ಸೆಂಟು ಮಾರ್ಕ್ಸ್ ತೆಗೆಯುವಂತೇ ಮಾಡುವ ಅನೇಕ ಶಿಕ್ಷಣಸಂಸ್ಥೆಗಳಿವೆ. ೩೩ ಪರ್ಸೆಂಟು ಮಾರ್ಕ್ಸ್ ತೆಗೆದುಕೊಂಡವರನ್ನು ಮೂಸಿಯೂ ನೋಡದ ಅವರಿಗೆ ಪ್ರತೀವರ್ಷ ತಮ್ಮ ಮಕ್ಕಳ ಫಲಿತಾಂಶ ಪ್ರಗತಿಯನ್ನು ಹೇಳಿಕೊಳ್ಳುವುದೊಂದು ಹೆಮ್ಮೆ; ಜೊತೆಗೆ ಅದರಿಂದ ಹೊಸ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗಿ ಹೆಚ್ಚಿಗೆ ಡೊನೇಶನ್ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ೯೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿ ಜೀವನಪಥದಲ್ಲೂ ಸಕ್ರಿಯವಾಗಿ ಅಷ್ಟನ್ನೇ ಗಳಿಸುತ್ತಾನೆನ್ನಲು ಸಾಧ್ಯವಿಲ್ಲ. ವಾಣಿಜ್ಯಕವಾಗಿ ಸ್ವಾರ್ಥಕ್ಕಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಂದ ಪಠ್ಯಕ್ರಮದಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಅಲಕ್ಷ್ಯಕ್ಕೊಳಗಾಗುತ್ತಾರೆ. ಹೆಚ್ಚಿನ ಅಂಕಗಳನ್ನು ಪಡೆದವರಷ್ಟೇ ಯೋಗ್ಯತಾವಂತರೆಂದು ಹೇಳುವುದು ಸಾಧ್ಯವಿಲ್ಲ. ನಾಗರಿಕತೆಯಲ್ಲಿ ಪಠ್ಯಕ್ರಮವೆಂಬುದು ಜನಸಾಮಾನ್ಯರು ಕಲಿತುಕೊಳ್ಳಬೇಕಾದ ಒಂದು ಕ್ರಮ; ಅದರ ಹೊರತಾಗಿಯೂ ಅನೇಕ ವಿದ್ಯೆಗಳಿವೆ ಎಂಬುದನ್ನು ನಾವು ಮರೆಯಬಾರದು. ಯಾವ ವ್ಯಕ್ತಿಯಲ್ಲಿ ಯಾವ ಪ್ರತಿಭೆ ಅಡಗಿದೆಯೆಂದು ಗುರುತಿಸಬೇಕಾದ್ದು ಸಮಾಜದ ಕರ್ತವ್ಯ. ಒಂದೊಮ್ಮೆ ಕೆಲವು ಪ್ರತಿಭೆಗಳಿಗೆ ಅವಕಾಶ ಸಿಗದೇ ಇದ್ದರೆ ಅವರ ಪ್ರತಿಭೆಯಿಂದ ಸಮಾಜಕ್ಕೆ ಸಿಗಬೇಕಾದ ಫಲ ಸಿಗದೇ ಹೋಗಬಹುದು.
ನಾಗರಿಕತೆಗೂ ಸಂಸ್ಕಾರವಂತಿಕೆಗೂ ವ್ಯತ್ಯಾಸವಿದೆ. ಹಳ್ಳಿಗನೊಬ್ಬ ಆಲೆಮನೆಯಲ್ಲಿ ಗಾಣದ ನೊಗವನ್ನೆಳೆಯಲು ಕೋಣವನ್ನು ಕಟ್ಟಿದ್ದ. ಕೋಣದ ಕೊರಳಿಗೆ ಗಂಟೆಯನ್ನೂ ಕಟ್ಟಿದ್ದ. ಕೋಣ ಸುತ್ತಾ ಸುತ್ತುತ್ತಿರುವಾಗ ಗಾಣ ತಿರುಗಿ ಕಬ್ಬು ಹಿಂಡಲ್ಪಡುತ್ತಿತ್ತು. ಪಕ್ಕದಲ್ಲಿ ಬೆಲ್ಲ ಕಾಯಿಸುವುದನ್ನೋ ಇನ್ನೇನನ್ನೋ ಮಾಡಿಕೊಳ್ಳುತ್ತಾ ರೈತ ದೂರದಿಂದಲೇ ಆಗಾಗ "ಹೇಯ್" ಎಂದರೆ ಸಾಕು, ಕೋಣ ಸುತ್ತುತ್ತಿತ್ತು. ಕೊರಳಗಂಟೆ ಸದ್ದುಮಾಡುತ್ತಿದ್ದರೆ ಅದು ತಿರುಗುತ್ತಿದೆಯೆಂದೇ ಅರ್ಥ. ನಗರಿಗನೊಬ್ಬ ಅಲ್ಲಿಗೆ ಬಂದಾಗ ಕೇಳಿದ "ಅಲ್ಲಾ, ನೀವು ಕೋಣದ ಕೊರಳಿಗೆ ಗಂಟೆಕಟ್ಟಿದ್ದೀರಿ. ಕೇಳಿದರೆ ಗಂಟೆಯ ಸದ್ದಿನಿಂದ ಕೋಣ ಸುತ್ತುತ್ತಿದೆಯೋ ನಿಂತಿದೆಯೋ ಗೊತ್ತಾಗುತ್ತದೆ ಎನ್ನುತ್ತೀರಿ. ಒಂದೊಮ್ಮೆ ಕೋಣ ನಿಂತಲ್ಲೇ ಕತ್ತನ್ನು ಅಲ್ಲಾಡಿಸಿ ಗಂಟೆ ಸದ್ದನ್ನು ಹೊರಡಿಸುತ್ತಿದ್ದರೆ ಆಗ ನಿಮಗೆ ಗೊತ್ತಾಗುವುದೇ ಇಲ್ಲವಲ್ಲಾ?" ಎಂದಾಗ ರೈತ ಹೇಳಿದ "ನೋಡಿ ಸ್ವಾಮೀ, ಅದು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕೋಣ. ಹಾಗಾಗಿ ಅದಕ್ಕೆ ಕಳ್ಳತನ ಮೈಗಳ್ಳತನವೆಲ್ಲಾ ತಿಳೀದು." ನಿಂತಲ್ಲೇ ಕತ್ತು ಅಲ್ಲಾಡಿಸಿ ಗಂಟೆ ಸದ್ದುಬರುವಂತೇ ಮಾಡುವುದು ನಾಗರಿಕತೆಯ ಶಿಷ್ಟಾಚಾರವೆನಿಸಬಹುದು-ಸಂಸ್ಕಾರವೆನಿಸುವುದಿಲ್ಲ. ಅನ್ನಕೊಟ್ಟ ಒಡೆಯನ ಊಳಿಗವನ್ನು ಮಾಡುವ ಸಲುವಾಗಿ ಗಾಣವನ್ನು ತಿರುಗಿಸುವ ಹೃದಯವಂತಿಕೆ ಕೋಣಕ್ಕಿರುವ ಸಂಸ್ಕಾರ.
ಇನ್ನೊಂದು ಮಾತನ್ನು ನಾವು ನೆನಪಿಡಬೇಕು: ವಿದ್ಯೆ ಇರುವವರೆಲ್ಲಾ ಸಂಸ್ಕಾರವಂತರೆಂದು ಅಂದುಕೊಳ್ಳಬೇಕಿಲ್ಲ. ಪಠ್ಯಕ್ರಮದಂತೇ ಕೆಲವು ವಿಷಯಗಳಿಗಷ್ಟೇ ಬದ್ಧರಾಗಿ, ಅವುಗಳನ್ನಷ್ಟೇ ಓದಿಕೊಂಡ ಜನ ಅವುಗಳಾಚೆಗಿನ ಜಗತ್ತಿನಲ್ಲಿರುವ ಉನ್ನತ ಮತ್ತು ಉದಾತ್ತ ಅಂಶಗಳನ್ನು ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಳ್ಳದೇ ಇರಬಹುದು. ಓಡಾಡುವಾಗ ಕಾಣುವ ಅನಕ್ಷರಸ್ಥ ಹಳ್ಳಿಗರಿಗೆ ಪಠ್ಯಕ್ರಮದ ವಿದ್ಯೆ ದೊರೆಯದಿರಬಹುದು, ಆದರೆ ಬದುಕುವ ವಿದ್ಯೆಯಲ್ಲಿ ಅವರು ಪರಿಣತರು. ನವನಾಗರಿಕತೆಯ ಪಠ್ಯಕ್ರಮಗಳಲ್ಲಿ ಓದಿಕೊಂಡು ವೃತ್ತಿನಿರತರಾದ ಜನರ ವ್ಯಾಪಾರೀ ಬುದ್ಧಿಗಿಂತ ಹಳ್ಳಿಗರ ಮುಗ್ಧ ಮನಸ್ಸನ್ನು ನಾನು ಮೆಚ್ಚುತ್ತೇನೆ. ಶಿಷ್ಟಾಚಾರದ ಉಪಚಾರಕ್ಕಿಂತ ಹೃದಯವಂತಿಕೆಯಿಂದ ಸಹಜವಾಗಿ ನೀಡುವ ಉಪಚಾರ ಬಹಳ ದೊಡ್ಡದು. ಎಷ್ಟೋ ಸಲ ಹಳ್ಳಿಗರ ಹೃದಯವಂತಿಕೆ, ಅವರ ಸಂಸ್ಕಾರಗಳೆದುರು ನಗರಿಗರು ತಲೆತಗ್ಗಿಸಬೇಕಾದ ಹಂತ ಎದುರಾಗುತ್ತದೆ. ನವೆಲ್ಲಾ ಚೆನ್ನಾಗಿ ಓದಿಕೊಂಡಿರಬಹುದು, ಶಿಷ್ಟಾಚಾರಗಳನ್ನೂ ಕಲಿತಿರಬಹುದು, ಆದರೆ ಹಳ್ಳಿಗರಲ್ಲಿರುವ ಕಲ್ಮಷ ರಹಿತ ಸಂಸ್ಕಾರ ನಮ್ಮಲ್ಲಿದೆಯೇ ಎಂಬುದನ್ನು, ಆಗಾಗ ನಮ್ಮನ್ನೇ ನಾವು ಪರೀಕ್ಷೆಗೆ ಒಡ್ಡಿಕೊಂಡು ಪ್ರಶ್ನಿಸಬೇಕು. ನಮ್ಮೊಳಗಿನ ಬುದ್ಧಿಯೆಂಬ ಮೊಂಡು ಪೆನ್ಸಿಲ್ಲನ್ನು ಉತ್ತಮ ಸಂಸ್ಕಾರಗಳಿಂದ ಶಾರ್ಪ್ ಮಾಡಿಕೊಳ್ಳಬೇಕು. ಚೂಪಾಗಿರುವ ಪೆನ್ಸಿಲ್ಲಿನಿಂದ ಮಾತ್ರ ತೆಳುವಾದ ರೇಖೆಯುಳ್ಳ ಸುಂದರ ಚಿತ್ರ ಮೂಡಲು ಸಾಧ್ಯ. ಮೊಂಡಾಗಿದ್ದರೂ ಚಿತ್ರವೇನೋ ಮೂಡುತ್ತದೆ, ಆದರೆ ಅಕ್ಕಪಕ್ಕದಲ್ಲಿಟ್ಟಾಗ ಚಿತ್ರಗಳಲ್ಲಿ ವ್ಯತ್ಯಾಸವನ್ನು ಗಮನಿಸಬಹುದಾಗಿರುತ್ತದೆ.