ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, May 21, 2012

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು
ಚಿತ್ರಋಣ: ಅಂತರ್ಜಾಲ

ಮೇದಿನಿಪ ಬಾರೆನುತ ತನ್ನಯ
ಜೋಡುಕರಗಳ ಮುಗಿದನಾಕ್ಷಣ

....ಎಂದು ಕೆಲವು ಯಕ್ಷಗಾನ ಪ್ರಸಂಗಗಳಲ್ಲಿ ಹಾಡುಗಳು ಕಾಣಸಿಗುತ್ತವೆ. ಮೇದಿನಿಯಲ್ಲೂ ಒಬ್ಬ ಮೇದಿನಿಪನಿದ್ದ. ಈಗ ಅದು ಗತ ವೈಭವದ ಇತಿ-ಹಾಸ! ಮೇದಿನಿಯ ಮಾರ್ಗ, ಅಲ್ಲಿನ ಚಾರಣದ ಕುರಿತು ಅನೇಕರು ಫೇಸ್ ಬುಕ್ ನಲ್ಲೂ ಕೂಡ ವಿವರ ಕೇಳಿದ್ದೀರಿ. ತಕ್ಕಮಟ್ಟಿಗೆ ನಿಮಗೆ ಉತ್ತರಿಸುವ ಪ್ರಯತ್ನದಲ್ಲಿ ಲೇಖನವನ್ನೇ ವಿಸ್ತರಿಸದರೆ ಒಳ್ಳೆಯದು ಎನಿಸಿತು, ಹಾಗೆ ಮಾಡುತ್ತಿದ್ದೇನೆ:  

ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ಗಡಿಭಾಗದಲ್ಲಿ ಬರುತ್ತದೆ ಈ ಮೇದಿನಿ ಪರ್ವತ. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ಮಾರ್ಗದಲ್ಲಿ ಬಡಾಳ ಎಂಬುದೊಂದು ಗ್ರಾಮ ಸಿಗುತ್ತದೆ. ಬಡಾಳವನ್ನು ದಾಟಿ ಹಾಗೇ ಮುಂದೆ ಸಾಗುವಾಗ ಮೂಡ್ನಳ್ಳಿ ಎಂಬುದೊಂದು ಚಿಕ್ಕ ಪ್ರದೇಶ ಕಾಣಿಸುತ್ತದೆ. ಸರಿಯಾಗಿ ಗ್ರಹಿಸದೇ ಇದ್ದರೆ ತಪ್ಪಿಹೋಗುವ ಸಂಭವವಿದೆ. ಮೂಡ್ನಳ್ಳಿಯಲ್ಲಿ ಬಲಕ್ಕೆ ತಿರುಗಿ ಮೂರು ಕಿ.ಮೀ ವರೆಗೆ ಜೀಪು/ಕಾರುಗಳನ್ನು [ನಾವೇ ತೆಗೆದುಕೊಂಡುಹೋದ] ಮುನ್ನಡೆಸಬಹುದು. ಅಲ್ಲಿಂದ ಮುಂದಕ್ಕೆ ಬೆಟ್ಟದ ಹಾದಿ. ಅಜಮಾಸು ೮ ಕಿ.ಮೀ. ಚಾರಣವೇ ಗತಿ. [ಸಿದ್ಧಾಪುರದಿಂದ ಕುಮಟಾಕ್ಕೆ ಬರುವಾಗ ಮೂಡ್ನಳ್ಳಿಯಲ್ಲಿ ಎಡಕ್ಕೆ ತಿರುಗಬೇಕು ಎಂಬುದನ್ನು ಗಮನಿಸಬೇಕು.] ಸುಂದರ ಕಾನನದ ಹಸಿರಿನ ನಡುವೆ ಸಾಗುವ ಕಾಲುಹಾದಿಯಲ್ಲಿ ಚಾರಣ ನಡೆಸುವುದೇ ತೃಪ್ತಿಕರ. ಯಾವುದೇ ಹೋಟೆಲ್ ಅಥವಾ ಪ್ರವಾಸೀ ಸೌಲಭ್ಯಗಳು ಲಭ್ಯವಿಲ್ಲ, ಎಲ್ಲವನ್ನೂ ಖುದ್ದಾಗಿ ವ್ಯವಸ್ಥೆ ಮಾಡಿಕೊಂಡೇ ಸಾಗಬೇಕು. ತಂಬು, ಗುಡಾರಗಳಿದ್ದರೆ ಬೆಟ್ಟದ ತಲೆಯಮೇರ್ಲೆ ಕಾಣುವ ಕಾನುದೀವರ ಮನೆಗಳ ಸಾಲಿನಲ್ಲಿ ವಸತಿಹೂಡಿಕೊಳ್ಳಬಹುದು. ಫೋಟೋಗ್ರಫಿಗೆ ಹೇಳಿಮಾಡಿಸಿದ ರಮ್ಯ ತಾಣ! ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರೀ ಬ್ಯಾಗಗಳನ್ನು ಆದಷ್ಟೂ ಬಳಸದಿರುವುದು ಪ್ರಕೃತಿಗೂ, ನಮಗೂ ಕ್ಷೇಮ. ಅನಿವಾರ್ಯವಾಗಿ ಬಳಸಿದ ಪಕ್ಷದಲ್ಲಿ ಅವುಗಳನ್ನು ಮರಳಿ ತರಬೇಕೇ ಹೊರತು ಅಲ್ಲಿ ಎಸೆಯಬಾರದು.

ಮೇದಿನಿಯ ತಲೆಭಾಗದಲ್ಲಿ ಇರುವ ಹೊಲಮನೆಗಳಲ್ಲಿರುವ ಕಾನುದೀವರು ಅಪ್ಪಟ ಸಂಪ್ರದಾಯವಾದಿಗಳು. ಅಲ್ಲಿ ಇನ್ನೂ ಒನಕೆಯನ್ನು ಬಳಸಿ ಭತ್ತಕುಟ್ಟಿ ಅಕ್ಕಿ ತಯಾರಿಸಲಾಗುತ್ತದೆ! ನೈಸರ್ಗಿಕವಾಗಿ ಬೆಳೆದ ಭತ್ತವನ್ನು ಒನಕೆಯಿಂದ ಕುಟ್ಟಿ ತಯಾರಿಸಿದ ಸಣ್ಣಕ್ಕಿ ಪರಿಮಳಭರಿತ ಮತ್ತು ಆರೋಗ್ಯಕ್ಕೆ ಉತ್ತಮ. ಆದರೆ ಅಕ್ಕಿ ಎಲ್ಲರಿಗೂ ಲಭ್ಯವಾಗುವುದಿಲ್ಲ ಯಾಕೆಂದರೆ ಬೆಳೆಯುವ ಪ್ರಮಾಣ ಬಹಳ ಕಮ್ಮಿ. ಕಾನುದೀವರು ತಮ್ಮ ಸ್ವಂತದ ಉಪಯೋಗಕ್ಕೆ ಬೆಳೆದುಕೊಳ್ಳುವ ಬೆಳೆ ಅದಾಗಿದೆ. ಮೇದಿನಿಯಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಡು ಹಣ್ಣುಗಳು ಕಾಣಸಿಗುತ್ತವೆ. ಕಾನುದೀವರಲ್ಲಿ ಯಾರನ್ನಾದರೂ ಪರಿಚಯಿಸಿಕೊಂಡು ಮಾಹಿತಿ ಪಡೆದರೆ ಅಲ್ಲಿನ ಚಾರಣಕ್ಕೆ ಹೊಸ ಆಯಾಮ ಸಿಗುತ್ತದೆ; ಗೊತ್ತಿಲ್ಲದ ಹಲವು ಸಂಗ್ತಿಗಳನ್ನು ತಿಳಿದುಕೊಳ್ಳಬಹುದು, ನಾಟಿವೈದ್ಯದ ಆಯುರ್ವೇದೀಯ ಔಷಧ ಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಬಹುದು, ಗಿಡ-ಮರಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು, ಕಾಡುಪ್ರಾಣಿಗಳ ಬಗ್ಗೆ ತಿಳಿಯಬಹುದು.

ಗಮ್ಯಸ್ಥಾನಗಳು ಎಲ್ಲರಿಗೂ ಅರಿವಲ್ಲ, ಮೇದಿನಿಗೆ ಹೋಗಬೇಕೇನೋ ಸರಿ, ಅಲ್ಲಿಗೆ ಹೋದಾಗ ಅಲ್ಲಿನ ಜನ ಹೇಳುವುದು ’ಕಂಚಿನಬಾಗಿಲ’ ಕೋಟೆ. ಎಷ್ಟೋ ಶತಮಾನಗಳ ಹಿಂದೆ ಯಾವುದೋ ಅರಸ ರಾಜ್ಯಭಾರ ನಡೆಸಿದ ಪ್ರದೇಶ ಮೇದಿನಿ! ಇಂದಿಗೂ ಕೋಟೆ ಬುರುಜುಗಳು, ಕೋಟೆಯ ಹಲವು ಅವಶೇಷಗಳು, ತೊರೆಗಳು, ಚಿಕ್ಕಪುಟ್ಟ ಸರೋವರಗಳು ಇವೇ ಮೊದಲಾಗಿ ಹಲವನ್ನು ವೀಕ್ಷಿಸಬಹುದಾಗಿದೆ. ಒಂದೇ ದಿನದಲ್ಲಿ ಬೆಳಿಗ್ಗೆ ತೆರಳಿ ಸಂಜೆ ಹಿಂದಿರುಗುವುದಾದರೆ ಮೇದಿನಿಯನ್ನು ಇಡಿಯಾಗಿ ನೋಡಿದ ಅನುಭವ ನಮ್ಮದಾಗುವುದಿಲ್ಲ. ಕೊನೇಪಕ್ಷ ಒಂದು ರಾತ್ರಿಯನ್ನು ಅಲ್ಲಿ ಕಳೆದರೆ ಪ್ರಕೃತಿಯ ರಮಣೀಯತೆ ಮತ್ತು ರಾತ್ರಿಯ ಸಂತಸ ಎರಡೂ ಸಿಗುವುದರಿಂದ ಹಾಗೆ ಮಾಡುವುದು ಉತ್ತಮ. ಸಿದ್ಧ ಆಹಾರವನ್ನು ಕೊಂಡೊಯ್ದುಕೊಳ್ಳಬಹುದು, ಸಾಮಗ್ರಿಗಳಿದ್ದರೆ, ಗ್ರಾಮೀಣ ಅಡುಗೆಯ ಅನುಭವ ಇದ್ದವರು ಜೊತೆಗಿದ್ದರೆ ಒಲೆಹಾಕಿಕೊಂಡು ಅಡುಗೆ ಮಾಡಿಕೊಳ್ಳಬಹುದು. 

ಮೇದಿನಿಯ ಜನರಿಗೆ ಹಲವು ಔಷಧಿಗಳ ಪರಿಚಯವಿದೆ. ಕಾನನದ ನಡುವಿನ ಗದ್ದೆಮನೆಗಳಲ್ಲಿ ಯಾರಿಗಾದರೂ ಕಾಯಿಲೆಯಾದರೆ ಬಹುದೂರ ಸಾಗಬೇಕಾಗಿ ಬರುವುದರಿಂದ ಗಿಡಮೂಲಿಕೆಗಳಿಂದ ದೊರೆಯಬಹುದಾದ ಪರಿಹಾರವನ್ನು ಅಲ್ಲಿನ ಜನ ಸಹಜವಾಗಿ ಅರಿತಿದ್ದಾರೆ. ವಂಶಪಾರಂಪರ್ಯವಾಗಿ ಅದು ಹಾಗೇ ಮುಂದುವರಿದಿದೆ. ಇವತ್ತಿಗೂ ದೊಡ್ಡಮಟ್ಟದ ಕಾಯಿಲೆಯೇನಾದರೂ ಕಾಣಿಸಿಕೊಂಡರೆ, ರೋಗಿಯನ್ನು ಕಂಬಳಿಮೂಟೆಯಲ್ಲಿ ಹೊತ್ತುಕೊಂಡು ೧೧ ಕಿ.ಮೀ. ಕ್ರಮಿಸಿ ನಂತರ ಮೂಡ್ನಳ್ಳಿಯಲ್ಲಿ ಸಿಗಬಹುದಾದ ವಾಹನವನ್ನು ಹಿಡಿದು ಕುಮಟಾಕ್ಕೋ ಸಿದ್ಧಾಪುರಕ್ಕೋ ಹೋಗಬೇಕಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಅನೇಕ ಕುಗ್ರಾಮಗಳಲ್ಲಿ ರಸ್ತೆಸೌಕರ್ಯವಿರದ ಹಿಂದಿನ ಕಾಲದಲ್ಲಿ ಕಂಬಳಿಮೂಟೆಯಲ್ಲಿ ರೋಗಿಯನ್ನು ಹೊತ್ತೊಯ್ಯುವುದು ರೂಢಿಗತವಾಗಿತ್ತು. ಒನಕೆ ಭತ್ತ ಕುಟ್ಟುವುದರ ಜೊತೆಗೆ ಕಂಬಳಿಮೂಟೆಯನ್ನು ಮಾಡಲೂ ಉಪಯೋಗಕ್ಕೆ ಬರುತ್ತದೆ. ಕಂಬಳಿಯನ್ನು ಉದ್ದವಾಗಿ ಹಾಸಿ ಅದರಲ್ಲಿ ರೋಗಿಯನ್ನು ಅಂಗಾತ ಮಲಗಿಸಿ, ಕಂಬಳಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಗಂಟುಕಟ್ಟಿ ಎರಡೂ ಗಂಟುಗಳಮೂಲಕ ಒನಕೆಯನ್ನು ತೂರಿಸಿ ಆ ಒನಕೆಯನ್ನು ಹಿಂದೊಬ್ಬ ಮತ್ತು ಮುಂದೊಬ್ಬ ಸೇರಿ ಹೊರುವುದು ವಾಡಿಕೆಯಾಗಿತ್ತು. ಅದು ಈಗಲೂ ಅಲ್ಲಿ ಜಾರಿಯಲ್ಲಿದೆ ಎಂದು ಕೇಳಿದ್ದೇನೆ.

ಕಾನುದೀವರ ಕಾರ್ಯಕ್ರಮಗಳು ಬಲು ವಿಶಿಷ್ಟ ಮತ್ತು ಅತ್ಯಂತ ಗ್ರಾಮೀಣ ಸೊಗಡಿನವಾಗಿವೆ. ಹಲವು ಬುಡಕಟ್ಟು ಜನಾಂಗಗಳಲ್ಲಿರುವಂತೇ ಪ್ರತಿಯೊಂದೂ ಕಾರ್ಯವೂ ಅವರದ್ದೇ ಆದ ಜಾನಪದ ಶೈಲಿಯ ಹಾಡುಗಳ ಮಿಳಿತದೊಂದಿಗೆ ನಡೆಯುತ್ತದೆ. ನನ್ನ ಬಂಧು ಸ್ವತಃ ನೋಡಿರುವಂತೇ, ಅಲ್ಲಿನ ಒಬ್ಬರ ಮನೆಯಲ್ಲಿ ಏನೋ ವಿಶೇಷವಿತ್ತು. ಕಾಡಮಧ್ಯದ ಈ ಜನರಿಗೆ ದೂರದ ಸಿದ್ಧಾಪುರದೆಡೆ ಅಲ್ಲೆಲ್ಲೋ ನೆಂಟರೂ ಇದ್ದಾರಂತೆ! ಕಾರ್ಯಕ್ರಮಕ್ಕೆ ಮೂರ್ನಾಕು ದಿನ ಮುಂಚೆಯೇ ನೆಂಟರು ಒಬ್ಬೊಬ್ಬರಾಗಿ ಕಾಲ್ನಡಿಗೆಯಲ್ಲಿ ನಡೆದು ಬಂದು ಸೇರಿಕೊಳ್ಳುತ್ತಿದ್ದರಂತೆ. ಹಿಂದೆ ಗ್ರಾಮೀಣಭಾಗದಲ್ಲಿ ನಡೆಯುತ್ತಿದ್ದಂತೇ ಕಾರ್ಯಕ್ರಮ ಎಂದರೆ ವಾರಗಟ್ಟಲೆಯ ಸಡಗರ. ಅಲ್ಲಿ ಹಾಡು-ಹಸೆ ಅವರದ್ದೇ ಆದ ಕುಣಿತ, ಪೂಜೆ-ಪುನಸ್ಕಾರ, ಅಹಾರವೈವಿಧ್ಯ ಇವೆಲ್ಲಾ ಇದ್ದೇ ಇರುತ್ತವೆ. ಕಾರ್ಯಮುಗಿದ ನಂತರವೂ ಕೂಡ ಉಳಿದುಕೊಂಡ ನೆಂಟರು ಒಬ್ಬೊಬ್ಬರೋ ಇಬ್ಬಿಬ್ಬರೋ ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಊರಿಗೆ ಮರಳುತ್ತಾರಂತೆ. ಇಂತಹ ಕಾರ್ಯಗಳು ನಮಗೆ ಬೇಕೆಂದಾಗಲೆಲ್ಲಾ ಏರ್ಪಡುವುದಿಲ್ಲ, ಅವು ಅಲ್ಲಿನ ಅವರ ಜೀವನದ ಭಾಗಗಳಲ್ಲವೇ? ಆದರೆ ಮೇದಿನಿಗೆ ಹೋದಾಗ ಪ್ರೀತಿಯಿಂದ ಅವರನ್ನು ಮಾತನಾಡಿಸಿ, ವಿನಂತಿಸಿದರೆ ಅವರಲ್ಲಿನ ಹಾಡುಗಳಲ್ಲಿ ಒಂದಷ್ಟನ್ನು ಕೇಳಬಹುದಾಗಿದೆ, ಅವರುಗಳಿಗೆ ಬಿಡುವಿದ್ದರೆ ಕುಣಿತವನ್ನೂ ಕುಣಿಸಿ ಕಾಣಬಹುದಾಗಿದೆ. 

ಹಲವು ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ ಮೇದಿನಿ ಚಾರಣಪ್ರಿಯರಿಗೆ ಹೇಳಿಮಾಡಿಸಿದ ಹಲವು ಸ್ಥಳಗಳಲ್ಲಿ ಒಂದು. ಅಲ್ಲಿಗೆ ಹೋದಾಗ ನಮ್ಮೆಲ್ಲಾ ಲೌಕಿಕ ಜಂಜಡಗಳು, ಆಮಿಷದ ಮೊಬೈಲ್ ಕರೆಗಳು, ಬೇಗುದಿಗಳು, ಕಚೇರಿಗೆ ಓಡುವ ಧಾವಂತದ ಬದುಕಿನ ನಿತ್ಯಸತ್ಯಗಳು ತುಸುಕಾಲ ಇಲ್ಲವಾಗುತ್ತವೆ; ಸ್ನಾನಮಾಡಿದ ಮೈ ಶುಚಿಗೊಂಡು ಆಹ್ಲಾದಕರ ಅನುಭವವಾಗುವಂತೇ ನಿಸರ್ಗಸ್ನಾನವನ್ನು ಅನುಭವಿಸಿದ ಮನಸ್ಸು ಪುಳಕಿತಗೊಳ್ಳುತ್ತದೆ. ಬಹಳದಿನಗಳಿಂದ ಬಳಸದೇ ಬಿಟ್ಟಿದ್ದ ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತದೆ! ಗಿಳಿ-ಗೊರವಂಕ, ನವಿಲು, ಕೆಂಬೂತ ಮುಂತಾದ ಹಲವು ಹಕ್ಕಿಗಳ ಕೂಗು ಕಿವಿನಿಮಿರಿಸುತ್ತದೆ. ಸರ್ರನೆ ಸರಿದುಹೋಗುವ ಯಾವುದೋ ಸರೀಸೃಪವನ್ನು ಹುಡುಕುವ ಮನವುಂಟಾಗುತ್ತದೆ. ಸಾಧ್ಯವಾದರೆ ಒಮ್ಮೆ ಹೋಗಿಬನ್ನಿ, ನಿಸರ್ಗ ಸಹಜಸ್ಥಿತಿಯನ್ನು ಕಲುಷಿತಗೊಳ್ಳದಂತೇ ನೋಡಿಕೊಂಡು ಒಂದಷ್ಟು ಸಮಯ ಹಾಯಾಗಿ ಕುಳಿತು, ನಡೆದಾಡಿ, ಕುಣಿದು-ಕುಪ್ಪಳಿಸಿ ವಿಹರಿಸಿ ಬನ್ನಿ, ಆಗದೇ?

------

ಓದುಗರಲ್ಲಿ ಒಂದು ವಿಜ್ಞಾಪನೆ: ಉದ್ದಿಮೆ ಮೀಡಿಯಾ ನೆಟವರ್ಕ್ ನಮ್ಮ ಹೊಸ ಉದ್ಯಮ. ಪ್ರೊಫೆಶನಲ್ಸ್, ಕಲಾವಿದರು, ವಿವಿಧ ಉದ್ದಿಮೆದಾರರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸು ಮನಸ್ಸಿದ್ದು ಬಹುಸಂಖ್ಯಾಕ ಜನರಿಗೆ ತಮ್ಮ ಬಗ್ಗೆ ಮಾಹಿತಿ ನೀಡಬಯಸುವ ಜನರಿಗೆ ಉದ್ದಿಮೆ ಮಾರ್ಗ ಕಲ್ಪಿಸುತ್ತದೆ. ಲ್ಲೋ ಪೇಜಸ್, ಪ್ರಿಂಟ್ ಆಡ್ಸ್, ಮಲ್ಟಿಮೀಡಿಯಾ ಆಡ್ಸ್, ಆನ್ ಲೈನ್ ಆಡ್ಸ್, ಪಬ್ಲಿಕ್ ರಿಲೇಶನ್ಸ್ ಮತ್ತು ಮಾನವ ಸಂಪನ್ಮೂಲ ಕುರಿತಾದ ಸಲಹೆಗಳನ್ನು-ಸೇವೆಗಳನ್ನು ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಲ್ಲೋಪೇಜಸ್ ಪ್ರಕಟಗೊಳ್ಳುತ್ತದೆ-ಜಾಹೀರಾತು ಬುಕಿಂಗ್ ಆರಂಭಗೊಂಡಿದೆ. ’ಉದ್ದಿಮೆ’ ಬಳಗದ ಲೇಖನಗಳನ್ನು ಸದ್ಯ   http://uddime.blogspot.in            ನಲ್ಲಿ ಓದಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು   uddime@gmail.com    ಮಿಂಚಂಚೆ ಕಳಿಸಿ ಸಂಪರ್ಕಿಸಲು ಕೋರುತ್ತೇನೆ, ಧನ್ಯವಾದಗಳು.