ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 9, 2010

ಮಂಗೇಕಾಯಿ ದೊಣ !!ಮಂಗೇಕಾಯಿ ದೊಣ


ಕವಲಕ್ಕಿಯಲ್ಲಿ ಯಕ್ಷಗಾನಗಳು ನಡೆಯುವುದು ಸರ್ವೇ ಸಾಮಾನ್ಯವಾಗಿತ್ತು. ಒಂದು ಸೀಸನ್ ಅಂದರೆ ನವೆಂಬರ್ ನಿಂದ ಮೇ ವರೆಗೆ ಮಳೆಇರದ ದಿನಗಳಲ್ಲಿ ಅನೇಕ ಮೇಳಗಳು[TROUPES] ಬಂದು ಆಟ ಆಡಿ ಹೋಗುತ್ತಿದ್ದವು. ಕೆರೆಮನೆ, ಅಮೃತೇಶ್ವರಿ, ಸಾಲಿಗ್ರಾಮ ಹೀಗೆಲ್ಲಾ ಅನೇಕ ಹೆಸರಿನ ಮೇಳಗಳು. ಅಂದಿನ ಪ್ರಸಂಗಗಳಾದರೋ ರಾತ್ರಿ ೯:೩೦ಕ್ಕೆ ಪ್ರಾರಂಭವಾಗಿ ಕೋಡಂಗಿ, ಬಾಲಗೋಪಾಲವೇಷ, ಸ್ತ್ರೀ ವೇಷದವರ ಗಣಪತಿ ಪೂಜೆ ಹೀಗೆ ಅದೂ ಇದೂ ಅಂತ ೧೧ ಗಂಟೆಯವರೆಗೆ ಎಳೆಯುತ್ತಿದ್ದರು, ಆಗ ಬರುವುದು ಕಟ್ಟುವೇಷಗಳ ಒಡ್ಡೋಲಗ ಎಂಬ ತಿಟ್ಟು.ಇದಕ್ಕೆಲ್ಲ ಸಭಾ ಲಕ್ಷಣ ಎಂದು ಕರೆಯುತ್ತಿದ್ದರು. ಆ ಹೊತ್ತಿಗೆ ಊರಪರವೂರ ದೊಡ್ಡ ದೊಡ್ಡ ಖುಳಗಳೆಲ್ಲ ನಿಧಾನವಾಗಿ ಹೆಗಲಿಗೆ ಶಾಲೋ, ಉದ್ದನೆಯ ಮಫ್ಲರ್ ಎಂಬ ತಲೆಗೆ ಕಟ್ಟಿಕೊಳ್ಳುವ ಉಣ್ಣೆಯ ವಸ್ತ್ರವೋ ಹೆಗಲಿಗೇರಿಸಿಕೊಂಡು ಟೆಂಟಿನ ಒಳಗೆ ಒಬ್ಬೊಬ್ಬರಾಗಿ ನಿಧಾನಕ್ಕೆ ಹೆಜ್ಜೆಯಿಡುತ್ತ ಬಂದು ಆರಾಮ ಖುರ್ಚಿಯಲ್ಲಿ ಆಸೀನರಾಗುತ್ತಿದ್ದರು. ಹೀಗೆ ನಮಗೆ ಚಿಕ್ಕ ಮಕ್ಕಳಿಗೆ ಇದನ್ನೆಲ್ಲಾ ತಿರುತಿರುಗಿ ನೋಡುತ್ತಾ ನೋಡುತ್ತಾ ಸಮಯ ಸರಿದು ಹೋಗುತ್ತಿತ್ತು.

ರಾತ್ರಿ ಅನೇಕಬಾರಿ ಮಧ್ಯೆ ಮಧ್ಯೆ ಕುಳಿತಲ್ಲೇ ಬಸ್ಸಿನಲ್ಲಿ ಓಲಾಡುತ್ತ ನಿದ್ದೆ ಮಾಡಿದ ಹಾಗೇ ನಿದ್ದೆ ಮಾಡಿ ಜೋರಾಗಿ ಚಂಡೆ ಬಡಿದಾಗ ಓಹೋ ಏನೋ ಜೋರಾಗಿ ನಡೆಯುತ್ತಿದೆ ಎಂದು ಗಾಡಿಗೆ ಬ್ರೇಕು ಬಿದ್ದ ಹಾಗೇ ಎದ್ದು ಕೂರುತ್ತ ಅನುಭವಿಸುವ ಅಂದಿನ ಯಕ್ಷಗಾನ ಆಟಗಳೇ [ಪ್ರದರ್ಶನಗಳೇ] ಹಾಗೆ.
ಹಿಂದೆ ಮುಂದೆ ಕಥೆ ತಿಳಿಯದೆ ಕೆಲವೊಮ್ಮೆ ಎಲ್ಲರೂ ನಕ್ಕರೆಂದು ನಾವು ನಗದಿದ್ದರೆ ಮರ್ಯಾದಿಗೆ ಕಮ್ಮಿ ಎಂದು ನಗುವುದಿತ್ತು. ಯಾಕೆಂದರೆ ಸಭಿಕರ ದೃಷ್ಟಿಯಲ್ಲಿ ನಾವು ನಿದ್ದೆ ಮಾಡಿದವರಲ್ಲ ನೋಡಿ! ಹೆಚ್ಚೆಂದರೆ ಪಕ್ಕದಲ್ಲಿ ಕುಳಿತ ಮಹನೀಯನಿಗೆ ನಮ್ಮ ನಿದ್ದೆ ಸ್ವಲ್ಪ ಗೊತ್ತಾಗಿರಬಹುದು, ಆದರೆ ನಾವು ಪಾಪ ಸಣ್ಣವರಲ್ಲವೇ ? ಅದಕ್ಕೇ ಅವರು ನಮ್ಮ ಪಕ್ಷ ! ಅವರೇನೂ ಅನ್ನುತ್ತಿರಲಿಲ್ಲ. ಎಲ್ಲರಿಗೂ ನಾವು ನಿದ್ದೆ ಮಾಡಿದ್ದು ತಿಳಿಯಬಾರದಲ್ಲ ?

ಅನೇಕ ಭಾವುಕರು ಯಕ್ಷಗಾನ ನೋಡಲು ಬರುತ್ತಿದ್ದರು, ಅದರಲ್ಲಿ ಕಾಯಂ ಬರುವ ಮುದುಕರೂ ಕೆಲವರಿದ್ದರು, ಬಹಳ ತಲೆ ಅಲ್ಲಾಡಿಸುತ್ತಾ ತನ್ಮಯತೆಯಿಂದ ನೋಡುತ್ತಿದ್ದ ಅವರು ಭಾವಾವೇಶಕ್ಕೆ ಒಳಗಾಗಿ ಕೆಲವೊಮ್ಮೆ ಯುದ್ಧ ಥರದ ಸನ್ನಿವೇಶಗಳಲ್ಲಿ ವೇದಿಕೆಯ ಹತ್ತಿರ ಹೋಗಿ ತಾವೇ ರಾವಣನನ್ನೋ, ಕೌರವನನ್ನೋ, ಮಾಗಧನನ್ನೊ ವಧಿಸಲು ಹೊರಟ ಥರ ಹೊರಟುಬಿಡುತ್ತಿದ್ದರು ! ಯಾರಾದರೂ ಹೋಗಿ ಅವರ ರಸಭಂಗ ಮಾಡಿ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆತರುತ್ತಿದ್ದರು. ಕೆಲವೊಮ್ಮೆ ತಪೋಭಂಗಗೊಂಡ ಋಷಿಗಳಂತೆ ಅವರು ಕೊಪಾವಿಷ್ಟರಾಗುತ್ತಿದ್ದರು, ಅಂತೂ ಸಮಾಧಾನಿಸಿ ಕುಳ್ಳಿರಿಸಲಾಗುತ್ತಿತ್ತು.

ಕವಲಕ್ಕಿಯಲ್ಲಿ ಆಟ
ಮುಗಿದ ಮರುದಿನ ನಮಗೆ ಸುತ್ತಲ ಶಾಲೆಗಳಿಗೆ ನನ್ನಂಥ ಕೆಲಮಕ್ಕಳಿಗೆ ಅಘೋಷಿತ ರಜೆ ! ಯಾಕೆಂದರೆ ಆ ದಿನ ಹಗಲೋ ರಾತ್ರಿಯೋ ಅದರ ಅರಿವೇ ನಮಗಾಗುತ್ತಿರಲಿಲ್ಲ. ಆ ಹಗಲೆಲ್ಲ ಜೊಲ್ಲುಸುರಿಸುತ್ತ ನಿದ್ದೆ ಮಾಡಿದರೂ ಮಧ್ಯೆ ಬಾಯಾರಿಕೆ, ಮತ್ತೆ ಅದೇ ವೇಷಗಳು, ಜೋರಾಗಿ ಚಂಡೆ ಗಕ್ಕನೆ ಎದ್ದು ಕೂರುವುದು, ನೆತ್ತಿಗೆರಿದ ಎರಡೋ ಮೂರೋ ಗಂಟೆಯ ಬಿಸಿಲಿನ ಸೂರ್ಯನ ಬೆಳಕನ್ನು ನೋಡಿ ಓಹೋ ಇದು ಹಗಲಿರಬೇಕು ನಾನೆಲ್ಲಿದ್ದೇನೆ ಎಂದು ನಾವಿರುವ ಸ್ಥಳವನ್ನು ಅಪರಿಚಿತರ ಮನೆಯ ಥರ ನೋಡುವುದು-ಇದೆಲ್ಲ ಆ ಕಳೆದ ರಾತ್ರಿ ತೊರೆದ ನಿದ್ದೆಯ ಪರಿಣಾಮ. ಆದರೂ ಅಂದಿಗೆ ಆಟವನ್ನು ಎಂದೂ ಬಿಡದ ನಿಷ್ಕಪಟ ಪ್ರೇಕ್ಷಕರು ನಾವು !

ಕವಲಕ್ಕಿಯಲ್ಲಿ ಆಟ ಮುಗಿದ ಮರುದಿನವಲ್ಲ ಆ ಮರುದಿನ ನಮ್ಮೂರಲ್ಲಿ ನಮ್ಮ ಮೇಳದ ಹಗಲು ಬಯಲಾಟ ! ಆಸಕ್ತ ಹುಡುಗರೆಲ್ಲ ಸೇರಿ ನಮಗೆ ನಾವೇ ಪ್ರಸಂಗ ಪಾತ್ರಗಳನ್ನೆಲ್ಲ ಹಂಚಿಕೊಂಡು, ಇದ್ದಿಲ ಮಸಿ ಮತ್ತು ಹಳ್ಳಗಳಲ್ಲಿ ಸಿಗುವ ಕೆಂಪುಕಲ್ಲು ತೇಯ್ದು ಮಾಡಿದ ಕೆಂಬಣ್ಣ, ಬಂಗಾರದ ಬಣ್ಣಕ್ಕೆ ಅರಿಶಿನಪುಡಿ ಹೀಗೆ ಒಂದೆರಡು ಬಣ್ಣಗಳನ್ನೆಲ್ಲ ಇಟ್ಟುಕೊಂಡು, ಹಳೆಯ ಉರುಟಿನ ಸೋರುವ ಸೀಮೆ ಎಣ್ಣೆ ಅಗ್ಗಿಷ್ಟಿಕೆ [ಸ್ಟವ್] ಅನ್ನು ಚಂಡೆಯಾಗಿ ಮಾಡಿಕೊಂಡು, ಹರಿದ ಚಾದರಗಳನ್ನು-ಬೆಡ್ ಶೀಟ್ ಗಳನ್ನು ಟೆಂಟಗಾಗಿ ಬಳಸಿಕೊಂಡು ಬಹಳ ಉತ್ಸುಕರಾಗಿ ಆಟ ಪ್ರಾರಂಭಿಸಿ ನಡೆಸುತ್ತಿದ್ದೆವು. ಸ್ವಲ್ಪ ಹಾಡಬಲ್ಲವರು ಭಾಗವತರಾಗುತ್ತಿದ್ದರು. ಸಾಹಿತ್ಯ ತಪ್ಪಿದರೆ ತೊಂದರೆಯಿರಲಿಲ್ಲ,ಎಲ್ಲಾ ಅಡ್ಜೆಸ್ಟ್ ಮೆಂಟ್. ಆದರೆ ಭಾವನೆಗೆ ಧಕ್ಕೆ ಬರದಂತೆ ಅದದೇ ರಾಗಗಳನು 'ಭಾಗವತ' ಹೊರಹೊಮ್ಮಿಸಬೇಕಾಗಿತ್ತು.

" ಭಳಿರೇ ಪರಾಕ್ರಮ ಕಂಠಿರವ "

" ಬನ್ನಿರಯ್ಯ "

" ಬಂದತಕ್ಕಂತಾ ಕಾರಣ "

ಕಾರಣ ಹೇಳಲು ಬರುತ್ತಿರಲಿಲ್ಲ ಏನೋ ಸ್ವಲ್ಪ ತಲೆತುರಿಸಿಕೊಂಡು
" ಯುದ್ಧ ಕೈಗೊಳ್ಳುವುದು "

ಎಂದೆಲ್ಲ ಮುಂದರಿವ ನಮ್ಮ ಯಕ್ಷಗಾನದಲ್ಲಿ ಯುದ್ಧಗಳೇ ಜಾಸ್ತಿ ! ಹಾಗಂತ ಹೊಡೆದಾಟವಲ್ಲ ! ಕೌರವ-ಭೀಮರ ನಡುವೆ, ರಾಮ-ರಾವಣರ ನಡುವೆ ನಡೆವ ಯುದ್ಧಗಳವು ! ಶರಸೇತು ಬಂಧನ ವೆಂಬ ಪ್ರಸಂಗ ತುಂಬಾ ಲೀಲಾಜಾಲವಾಗಿ ಆಡುವ ಕಾಯಂ ಪ್ರಸಂಗಗಳಲ್ಲೊಂದು ! ಯಾಕೆಂದರೆ ಅಲ್ಲಿ ಪಾತ್ರಧಾರಿಗಳ ಸಂಖ್ಯೆ ಕಮ್ಮಿ, ನಮ್ಮಲ್ಲಿ ಯಾರಾದರೂ ಹುಡುಗರು ಅಲ್ಲಿ-ಇಲ್ಲಿ ಅಜ್ಜನಮನೆಗೋ ಅತ್ತೆ ಮನೆಗೋ ಹೋಗುತ್ತಾ ಬರದೇ ಇದ್ದಾಗ ಆಟ ನಡೆಯಲೇ ಬೇಕಲ್ಲ ! ಒತ್ತಾಯದ ಟಿಕೆಟ್ ಇಶ್ಯೂ ಮಾಡಿದವರ ರೀತಿ ಆಟ ನಡೆಸೇ ನಡೆಸುತ್ತಿದ್ದೆವು ! ನೆಟ್ಟಗೆ ನಿಲ್ಲಿಸಿದ ದಪ್ಪ ತುದಿಯ ಕೋಲೊಂದು ಸ್ಟ್ಯಾಂಡ್ ಮೈಕ್ ಆಗಿ ಕೆಲಸಮಾಡುತ್ತಿತ್ತು ! ಪ್ರಮುಖ ಪಾತ್ರಧಾರಿಗಳು ಅಂದು ಭಾಗವಹಿಸಲು ರಜಹಾಕಿದ್ದರೆ ಅದಕ್ಕೆ ಸಮಜಾಯಿಷಿ ಕೊಟ್ಟು ವಿನಂತಿಸುವ ಭಾಷಣ ನನ್ನದಾಗಿರುತ್ತಿತ್ತು.

" ನಮ್ಮ ಅನಿವಾರ್ಯತೆಯಲ್ಲಿ ಸಹೃದಯೀ ಪ್ರೇಕ್ಷಕರು ಎಂದಿನಂತೆ ಸಹಕರಿಸಬೇಕೆಂದು ಪ್ರಾರ್ಥಿಸುತ್ತೇನೆ, ಮುಂಬರುವ ದಿನಗಳಲ್ಲಿ ಇನ್ನೂ ಉತ್ಕೃಷ್ಟ ರೀತಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಆಡಿತೋರಿಸುವವ
ರಿದ್ದೇವೆ, ತಮ್ಮ ಪ್ರೋತ್ಸಾಹ ಹೀಗೇ ಸತತವಾಗಿರಲಿ "

--- ಇದು ಪ್ರಸಿದ್ಧ ಕಲಾವಿದರಾಗಿದ್ದ ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮಾತುಗಳನ್ನು ಅನುಕರಿಸಿದ್ದಾಗಿರುತ್ತಿತ್ತು ! ನಮ್ಮಲ್ಲೇ ಒಬ್ಬ [ ಶ್ರೀ] ಚಿಟ್ಟಾಣಿ, ಒಬ್ಬ [ಶ್ರೀ ಕೆರೆಮನೆ] ಮಹಾಬಲ ಹೆಗಡೆ, ಮತ್ತೊಬ್ಬ [ಶ್ರೀ] ನೆಬ್ಬೂರು, ಇನ್ನೊಬ್ಬ [ಶ್ರೀ]ಕಾಳಿಂಗನಾವುಡ ಹೀಗೆ ಎಲ್ಲರೂ ನಾವೇ! ಅಂದಿನ ಆ ಆಟಗಳು ಬಹಳ ರಸದೌತಣ ನಮಗೆ, [ಹೀಗೆ ಯಕ್ಷಗಾನ ಬಲ್ಲವರಿಗೆ ಅರ್ಥವಾಗುತ್ತದೆ ] ಅಲ್ಲಿ ಕೆಲವು ನಮಗಿಂತ ಚಿಕ್ಕ ಮಕ್ಕಳು ನಮ್ಮ ಪ್ರೇಕ್ಷಕರಾಗುತ್ತಿದ್ದರು. ಚಿಕ್ಕ ಮಕ್ಕಳಿಂದ ನಮಗೆ ಒಳ್ಳೆಯ ಕಲಾವಿದರಿಗೆ ಸಿಕ್ಕಷ್ಟು ಗೌರವ ಸಿಗುತ್ತಿತ್ತು, ಯಾಕೆಂದರೆ ಮುಂದೆ ಅವರು ನಮ್ಮಿಂದ ಕಲಿಯುವವರಿರುತ್ತಿದ್ದರು !

" ನಿನ್ನಯ ಬಲು ಏನೋ ಮಾರುತಿಯನ್ನು ನಿರೀಕ್ಷಿಪೆನು " -- ಈ ಹಾಡಿಗೆ ಹಾಗೂ

" ಊಟದಲಿ ಬಲು ನಿಪುಣನೆಂಬುದ ....ತಾ ತೈಯ್ಯಕ್ಕು ಧೀಂ ತತ್ತ ತೈಯ್ಯಕ್ಕು ಧೀಂ ತತ್ತ."

ಇಂತಹ ಹಾಡುಗಳಿಗೆ ನರ್ತಿಸಿದಾಗ ಚಪ್ಪಾಳೆ ಬೀಳಲೇ ಬೇಕು! ಇಲ್ಲಾ ಅಂದರೆ ಆತ ಚೆನ್ನಾಗಿ ಕುಣಿದಿಲ್ಲ ಎಂದರ್ಥ! ಮಾತು ಮಾತು ಮಾತು, ಏನಂತೀರಿ ನೀವು? ಅರ್ಥಗಳನ್ನು ನಮ್ಮ ಗೇರು ಬೆಟ್ಟದ ಜಾಗಗಳು, ಅಲ್ಲಿನ ಗಿಡಮರಗಳು ಕೇಳಿವೆ ಗೊತ್ತಾ ? [ಇಂದು ಆ ಮರಗಳೆಲ್ಲ ಮುದುಕಾಗಿ ನಾನು ಊರಿಗೆ ಹೋದಾಗ ನೋಡಿದರೆ ಬಹುಶಃ ಅವು ನನ್ನ ನೋಡಿ ನಗುತ್ತವೇನೋ ಅನ್ನಿಸುತ್ತಿದೆ ! ]

ಇಂತಹ ಪರಿಸರದಲ್ಲಿ ಪ್ರಾಥಮಿಕ ಶಾಲೆ ಕಲಿತವರು ನಾವು.

" ಶಾರದಾಂಬೆಯೆ ವಿಧಿಯ ರಾಣಿಯೆ ವಂದಿಸುವೆ ನಾ ನಿನ್ನನು ......." ಪ್ರಾರ್ಥನೆ ಹಾಡುತ್ತ ನಿಂತು ಹಿಂದೆ ಮುಂದೆ ಓಲಾಡುತ್ತಾ ಅಂದು ಹಾಡುವ ಪರಿ ಅದೊಂದು ನಮ್ಮದೇ ಲೋಕ ! ಅಂದಿನ ಶಿಕ್ಷಕರೂ ಕೂಡ ಇಂದಿನಂತಿರಲಿಲ್ಲ, ಅವರು ನಿಸ್ಪೃಹರಾಗಿರುತ್ತಿದ್ದರು. ಅವರಲ್ಲಿ ಮಕ್ಕಳಿಗೆ ಸರಿಯಾಗಿ ಕಲಿಸಬೇಕೆಂಬ ಒತ್ತಾಸೆ ಬಹಳವಾಗಿರುತ್ತಿತ್ತು. ಅದರಲ್ಲಿ ಕೆಲವರು ಸಂಗೀತ ಸಾಹಿತ್ಯ ಕಲೆಗಳಲ್ಲಿ ಹೆಚ್ಚಿನ ಆಸಕ್ತಿಯಿರುವವರೂ ಇರುತ್ತಿದ್ದರು. ಕೆಲವರಿಗೆ ಕಥೆಗಳನ್ನು ಹೇಳಬೇಕೆಂಬ ಮನೋಭೂಮಿಕೆ ಇರುತ್ತಿತ್ತು. ಶಾಸ್ತ್ರಿ ಮಾಸ್ತರು ಸಂಗೀತ ಕಲಿಸಿದರೆ ಕುಸಲೇಕರ್ ಮಾಸ್ತರು ಯಕ್ಷಗಾನ ಕಲಿಸುತ್ತಿದ್ದರು. ಗುರು ಮಾಸ್ತರು ಕಥೆ ಹೇಳಿದರೆ ಶಾನಭಾಗ್ ಮಾಸ್ತರು ಹಳ್ಳಿಯ-ಪಟ್ಟಣದ ಜೀವನದ ಬಗ್ಗೆ ಬಹಳ ರಸವತ್ತಾಗಿ ವಿವರಿಸುತ್ತಿದ್ದರು. ನಮಗೆ ಎಲ್ಲರೂ ಇಷ್ಟವೇ. ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿ ನಮ್ಮಲ್ಲಿನ ವ್ಯಕ್ತಿಗತ ವೈಶಿಷ್ಟ್ಯಗಳನ್ನು ಹುಡುಕಲು ಪ್ರಯತ್ನಿಸಿದ ಗುರುಗಳು ಅವರೆಲ್ಲಾ. ಅವರಿಗೆಲ್ಲ ಒಮ್ಮೆ ನಮಸ್ಕಾರಗಳು.

ಇಂತಹ ಶಾಲೆಯಲ್ಲಿ ಒಬ್ಬ ಸಹಪಾಟಿ ರಮೇಶ. ವಯಸ್ಸಿನಲ್ಲಿ ಸುಮಾರು ಹಿರಿಯನಾಗಿ ಡುಮ್ಕಿ ಹೊಡೆಯುತ್ತ ಆತ ನನ್ನ ಕ್ಲಾಸಲ್ಲಿ ನನಗೆ ಸಿಕ್ಕವ. ಅವನ ತಂದೆ ವ್ಯಾಪಾರೀ ವೃತ್ತಿಯವರಾದ್ದರಿಂದಲೋ ಏನೋ ಅವನಿಗೆ ಓದೇ ಇಷ್ಟವಾಗುತ್ತಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಇಂದು ಕಲಿತಿದ್ದು ನಾಳೆ ಪುನಃ ಕಲಿಯಬೇಕಾದ ಪರಿಸ್ಥಿತಿ ! ಆದರೂ ನಮ್ಮ ಗುರುಮಾಸ್ತರು ಅವನನ್ನು ತಿದ್ದಲು ಬಹಳ ಯತ್ನಿಸಿದವರು. ಕನ್ನಡ ಶಬ್ಧಗಳನ್ನೇ ಸರಿಯಾಗಿ ಬರೆಯಲು ಬರದ ಆತನಿಗೆ ಅನೇಕ ರೀತಿಯಲ್ಲಿ ಹೇಗೆ ಹೇಳಿದರೆ ಅರ್ಥವಾಗುತ್ತದೆ ಎಂಬುದನ್ನು ಶೋಧಿಸಲು ಹೊರಡುತ್ತಿದ್ದ ಸಂಶೋಧಕ ನಮ್ಮ ಗುರುಮಾಸ್ತರು ! ಹೀಗೆ ದಿನಗಳೆಯುತ್ತಿದ್ದವು. ನಾವು ಬೆಳೆಯುತ್ತಿದ್ದೆವು - ೬ ನೆ ತರಗತಿಯಲ್ಲಿ. ಒಂದುದಿನ ಹೀಗೆ ಏನೋ ಬರೆಯಲು ಕೊಟ್ಟರು. ಗಣಿತ ಕಲಿಸುತ್ತಿದ್ದರು. ಎಲ್ಲರೂ ಬರೆದರೂ ರಮೇಶ ಮಾತ್ರ ಬರೆಯಲಿಲ್ಲ. ಅವನನ್ನು ನಿಲ್ಲಿಸಿದರು.

" ಹೇ ರಮೇಶ, ಯಾಕೋ ಬರೆದಿಲ್ಲ ? ಇವತ್ತು ಬೆಳಿಗ್ಗೆ ಏನು ತಿಂಡಿ ಮಾಡಿದ್ರು ನಿಮ್ಮನೇಲಿ ? "

" ಮೊಗೇಕಾಯಿ ದೊಡ್ಣ "

ಮೊಗೇಕಾಯಿ ಅಂದರೆ ಮಂಗಳೂರು ಸೌತೆಕಾಯಿ. ಅದನ್ನು ಸಿಪ್ಪೆ, ತಿರುಳು ತೆಗೆದು ಚೆನ್ನಾಗಿ ತುರುಮಣೆಯಲ್ಲಿ ತುರಿದು ಅಥವಾ ಮೆಟ್ಟುಗತ್ತಿಯಲ್ಲಿ [ಈಳಿಗೆ ಮಣೆ] ಚಿಕ್ಕ ಚಿಕ್ಕ ತುಂಡು ಮಾಡಿ, ರುಬ್ಬಿದ ಅಕ್ಕಿಯ ಹಿಟ್ಟಿಗೆ ಅವುಗಳನ್ನು ಸೇರಿಸಿ ದಪ್ಪಗೆ ದೊಡ್ಡಗೆ ಈರುಳ್ಳಿ ದೋಸೆಯ ಥರ ಅದನ್ನು ಹುಯ್ಯುವುದರಿಂದ ಅದು ' ಮೊಗೇಕಾಯಿ ದೊಡ್ಣ ' ಎಂಬ ಹೆಸರು ಪಡೆದಿದೆ. ತಿನ್ನಲು ಒಂಥರಾ ಡಿಫರೆಂಟ್ ಆಗಿರುವ ಈ ದೋಸೆ ಇಂದಿಗೂ ನಮ್ಮಲ್ಲಿ ಚಾಲ್ತಿಯಲ್ಲಿದೆ, ಆರೋಗ್ಯಕ್ಕೆ ತುಂಬಾ ಹಿತಕರವೂ ಹೌದು. ಇರಲಿ ಗುರುಮಾಸ್ತರು ಮುಂದುವರಿಸಿ

" ಅದನ್ನೇ ಸರಿಯಾಗಿ ಬರಿ ನಿನ್ನನ್ನು ಈ ಸಲ ಪಾಸುಮಾಡುತ್ತೇನೆ "

ಸುಮಾರು ಸಮಯ ಕೊಟ್ಟರು, ಆತ ಬಹಳ ಪ್ರಯತ್ನಿಸಿದ, ಬಹಳ ಬಹಳ ಬಹಳ ಒದ್ದಾಡಿದ. ನಂತರ ಬರವಣಿಗೆ ಗುರುಗಳಿಗೆ ಪ್ರಕಟಿಸಿದ. ಆತ ಬರೆದಿದ್ದ-

' ಮಂಗೇಕಾಯಿ ದೊಣ '

ಗುರುಮಾಸ್ತರು ಅದನ್ನು ಎಲ್ಲರಿಗೂ ಓದಿಹೇಳಿದರು, ಇಡೀ ತರಗತಿಯ ಮಕ್ಕಳು ಬಿದ್ದು ಬಿದ್ದು ನಕ್ಕರು. ಆದರೆ ರಮೇಶ ಮರದ ಕೆಳಗೆ ಬಿದ್ದ ಮಂಗನ ಥರಾ ಇದ್ದ ಪಾಪ ! ನಾನು ಹೊರಗೆ ಸ್ವಲ್ಪ ನಕ್ಕರೂ ನನ್ನೊಳಗೆ ಆ ಪಾಪ ಪ್ರಜ್ಞೆ ಕಾಡುತ್ತಿತ್ತು. ಆತ ಒಳ್ಳೆಯ ಹುಡುಗ ಆದರೆ ವಿದ್ಯೆ ಹತ್ತುತ್ತಿರಲಿಲ್ಲ ! ಏನುಮಾಡುವುದು. ದಿನಾಲೂ ಬೆಳಿಗ್ಗೆ

' ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ '

'ವಿದ್ಯೆ ಕಲಿಯದವ ಹದ್ದಿಗಿಂತಲೂ ಕಡೆ '

--ಇವೆಲ್ಲಾ ಗಾದೆಗಳನ್ನು ನಾವು ಪಠಿಸುತ್ತಿದ್ದೆವು, ಅರ್ಥ ಎಷ್ಟರಮಟ್ಟಿಗೆ ಆಗುತ್ತಿತ್ತು ಅನ್ನುವುದು ಬೇರೆ ಪ್ರಶ್ನೆ!

ನನಗೆ ಅವನದೇ ಚಿಂತೆ ಮನಸ್ಸಲ್ಲಿ. ಪಾಪ ಏನಾದರಾಗಲಿ ಆತ ಕಲಿಯಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು. ಎಂದಿನಿಂದಲೂ ನಾನೊಬ್ಬ ಭಾವಜೀವಿಯೇ! ನನ್ನ ಸಾಂತ್ವನದ ಮಾತುಗಳಾದವು. ಆತನಿಗೆ ನನ್ನಮೇಲೆ ಎಲ್ಲಿಲ್ಲದ ಪ್ರೀತಿ. ವಿ. ಆರ್.ಭಟ್ ವಿ.ಆರ್.ಭಟ್ ಎನ್ನುತ್ತಾ ಸದಾ ಬೆನ್ನಟ್ಟುತ್ತಿದ್ದ. ಏನಾದರೂ ಗೊತ್ತಾಗದಿದ್ದರೆ ಬರೆದುಕೊಡು ಎಂದು ಕೇಳುತ್ತಿದ್ದ. ಮುಂದೆ ಹಾಗೆ ಹೇಗೋ ಅಂತೂ ನಮ್ಮ ಜೊತೆ ಅವನೂ ಏಳನೇ ತರಗತಿಗೆ ಬಂದ.

ಏಳನೇ ತರಗತಿ ಎಂದರೆ ಪ್ರಾಥಮಿಕ-ಮಾಧ್ಯಮಿಕ ಶಾಲೆಯ ಓದು ಮುಕ್ತಾಯವಾಗಿ ಪ್ರೌಢ ಶಿಕ್ಷಣಕ್ಕೆ ಬೇರೆ ಶಾಲೆಗೆ ಹೋಗಬೇಕು, ಮಧ್ಯೆ ಪಬ್ಲಿಕ್ ಪರೀಕ್ಷೆ ಒಂದಿರುತ್ತಿತ್ತು. [ನಾವು ಬರುವಷ್ಟರಲ್ಲಿ ಅದು ಶಾಲೆಯಲ್ಲೇ ನಡೆಸಬಹುದಾದ ಮಟ್ಟಕ್ಕೆ ಬಂತು] ಆತ ಹೇಗೆ ಪಾಸು ಮಾಡಬಲ್ಲ ಎಂದು ನನಗೆ ಅನ್ನಿಸುತ್ತಿತ್ತು. ಕೊನೆಗೂ ಆತ ಪಾಸಾಗಲಿಲ್ಲ, ಮತ್ತೆ ಅದೇ ಶಾಲೆಯಲ್ಲಿ ಉಳಿದುಕೊಂಡ.ನನಗೆ ತುಂಬಾ ಬೇಜಾರಾಯಿತು. ಹೀಗೆ ಎಷ್ಟೋ ಜನ ಸಹಪಾಟಿಗಳನ್ನು ಆತ ಪಡೆದಿದ್ದ, ಅವರೆಲ್ಲ ಮುಂದಕ್ಕೆ ಮುಂದಕ್ಕೆ ಹೋಗುತ್ತಿದ್ದರು.ಆತ ಮಾತ್ರ ಹಾಗೇ ಇರುತ್ತಿದ್ದ. ಆತ ಈಗಲೂ ಸಿಗುತ್ತಾನೆ. ತಮ್ಮನೆಗೆ ಬರುವಂತೆ
ನನಗೆ ದುಂಬಾಲು ಬೀಳುತ್ತಾನೆ. ಜೀವನದಲ್ಲಿ ಆತ ಸೋತಿಲ್ಲ ! ಈಗ ಆತ ಎಲೆಕ್ಟ್ರಿಕ್ ಕೆಲಸ ಕಲಿತು ಅದನ್ನು ಮಾಡುತ್ತಾನೆ, ಕೆಲವು ರೆಪೇರಿ ಕೆಲಸ ಮಾಡುತ್ತಾನೆ. ತಂದೆ ಮಾಡಿದ್ದ ವ್ಯಾಪಾರವನ್ನೂ ಮಾಡುತ್ತಾನೆ, ದುಡಿಯುತ್ತಾನೆ. ಹಳ್ಳಿಯಲ್ಲೇ ಸುಖವಾಗಿದ್ದಾನೆ.

ಬದುಕಿನಲ್ಲಿ ಓದು-ಅಕ್ಷರ ಕಲಿಕೆ ಮಾತ್ರ ವಿದ್ಯೆಯಲ್ಲ, ವೃತ್ತಿ ಕಲಿಕೆ ಕೂಡ ವಿದ್ಯೆ. ಇಂದಂತೂ ಎಷ್ಟೆಲ್ಲಾ ವಿದ್ಯೆಗಳಿವೆ, ಓದು ಬಾರದವರು ಎಂತೆಂತಹ ವೃತ್ತಿ ನಡೆಸಿದ್ದಾರೆ,ಚೆನ್ನಾಗಿ ದುಡಿದು ಬದುಕುತ್ತಿದ್ದಾರೆ.ಮಾಡುವ ಕೆಲಸದಲ್ಲಿ ಆಸಕ್ತಿ -ಶ್ರದ್ಧೆ ಮುಖ್ಯವೇ ಹೊರತು ಬರೇ ಅಕ್ಷರ ಕಲಿಕೆಯಲ್ಲ;ಪುಸ್ತಕದ ಬದನೇಕಾಯಿಯಲ್ಲಿ ಹೇಳಿದಷ್ಟನ್ನೇ ಬಾಯಿಪಾಠ ಮಾಡುವುದಲ್ಲ.

ಇವತ್ತಿಗೂ ಒಬ್ಬ ಡಿಗ್ರೀ ಪಡೆದ ಎಂಜಿನೀಯರ್ ಒಂದು ಸೆಂಟ್ರಿ ಫ್ಯುಗಲ್ ಪಂಪ್ ಬಗ್ಗೆ ಅದರ ರಿಪೇರಿ ಬಗ್ಗೆ ಕೇಳಿದರೆ ಅದನ್ನು ಬಾಯಲ್ಲಿ ಹಾಗೇ ಹೀಗೆ ಅಂತ ಹೇಳುತ್ತಾನೆಯೇ ಹೊರತು ಅವುಗಳ ರಿಪೇರಿ, ರೀವೈಂಡ್ ಕೆಲಸಗಳು ಅವನಿಗೆ ಬರುವುದಿಲ್ಲ ! ಯಾಕೆಂದರೆ ಆತ ಅದನ್ನು ಪ್ರಾಕ್ಟೀಸು ಮಾಡಿಲ್ಲ. ನಮ್ಮ ರಮೇಶ ಅದನ್ನು ಮಾಡಬಲ್ಲ. ಈತ ಯಾವ ಇಂಜಿನೀಯರಿಂಗ್ ಮಾಡಿಲ್ಲ, ಸಾಲದ್ದಕ್ಕೆ ಇಂದಿಗೂ ಸರಿಯಾಗಿ ಬರೆಯಲಿಕ್ಕೆ ಬರುತ್ತದೋ ಇಲ್ಲವೋ ! ಆದರೆ ಜೀವನದಲ್ಲಿ ಆತ ತಾನು ಕಲಿತ ಪಾಠ ದೊಡ್ಡದು, ಅದರಿಂದ ಆತನ ಜೀವನ ನಿರ್ವಹಣೆ ಸಾಗಿದೆ, ಆತನ ಸಹಪಾಟಿಗಳಾದವರು ದೊಡ್ಡ ದೊಡ್ಡ ನಗರಗಳ ಬೀದಿಗಳಲ್ಲಿ BIO-DATA ಹಿಡಿದು ಅಲೆಯುತ್ತಿದ್ದಾರೆ ಅಂದರೆ ಅಂದು ಸೋತ ರಮೇಶ ಇಂದು ಗೆದ್ದಿದ್ದಾನೆ, ನನಗೆ ಬಹಳ ಹೆಮ್ಮೆ, ನನ್ನ ಮನಸ್ಸಿಗೆ ಅದು ತುಂಬಾ ಖುಷಿ. ONLY PRACTICE MAKES MAN PERFECT !

ಹೀಗಾಗಿ ಎಂದೂ ಮರೆಯದ ಅನುಭವ ರಮೇಶ ತೋರಿಸಿದ ಇಂದಿನ ಹೊಸ
' ಮಂಗೇಕಾಯಿ ದೊಣ '