ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 17, 2010

ಗೋವು ಮತ್ತು ಮಾನವಗೋವು ಮತ್ತು ಮಾನವ


ಇದುವರೆಗೆ ತಾವೆಲ್ಲ ಗೋವಿನ ಬಗ್ಗೆ ಕೇಳುತ್ತಲೇ ಬಂದಿದ್ದೀರಿ. ಇದು ಇತ್ತೆಚೆಗೆ ಬಹಳ ದೊಡ್ಡ ಚರ್ಚಾ ವಿಷಯವಾಗಿದೆ ಕಾರಣ ಸರಕಾರ ಗೋಹತ್ಯಾ ನಿಷೇಧ ಮಸೂದೆಯನ್ನು ಜಾರಿಗೊಳಿಸಲಿದೆ. ಇದರ ಕುರಿತು ನಮ್ಮ ಕೆಲವು ಕುರಿ ಸಾಹಿತಿಗಳು ಬೀದಿಗಿಳಿದಿದ್ದಾರೆ. ಅವರು ಪ್ರಜ್ಞಾಶೂನ್ಯರಾಗಿ,ಹಿತ್ತಾಳೆ ಕಿವಿಯವರಾಗಿ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಹುತೇಕ ಬುದ್ಧಿಜೀವಿಗಳೆನಿಸಿ ಅರ್ಧ ಜೀನ್ಸ್ ಮತ್ತು ಮೇಲರ್ಧ ಕುರ್ತಾ ಹಾಕಿ, ಹಳ್ಳಿಗಳಲ್ಲಿ ಹಾವುಗೋಲರು ಬಳಸುವಂತ ಚೀಲವನ್ನು ಹೆಗಲಿಗೆ ಹಾಕಿ ಹೊರಟರೆ ಯವುದೇ ರಾಜಕೀಯ ಮಾಡಲೂ ಹಿಂದೆಗೆಯುವ ಮನೋವೃತ್ತಿ ಅವರದಲ್ಲ. ಒಮ್ಮೊಮ್ಮೆ ಅನಿಸುತ್ತದೆ ಇಂಥವರಿಗೆಲ್ಲ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರಲ ಎಂಬುದು, ಆದರೂ ನನಗೆ ನಾನೇ ಅಂದುಕೊಂಡಿದ್ದೇನೆ ಅವರಿಗೆಲ್ಲ ಕೊಟ್ಟ ಪ್ರಶಸ್ತಿ ನಮ್ಮ ಯಡ್ಯೂರಣ್ಣನವರಿಗೆ ಅವರನ್ನೇ ತಿಳಿಯದ ಅದ್ಯಾವುದೋ ದೇಶ ಗೌರವ ಡಾಕ್ಟರೇಟ್ ಕೊಟ್ಟಹಾಗೆ ಅಂತ! ಹಾಗಾಗಿ ಸರಸ್ವತಿ ತನ್ನ ಪೀಠದ ಮಹತ್ವನ್ನು ಕಳೆದುಕೊಂಡು ರಾಜಕೀಯದ ದಾಳದಿಂದ ನಲುಗಿದ್ದಾಳೆ ಎನ್ನಲು ಯಾವುದೇ ಸಂಕೋಚವಿಲ್ಲ. ಈ ಸಾಹಿತಿಗಳಿಗೆ/ನಟರಿಗೆ ಮುದಿವಯದಲ್ಲಿ ಮಾಡಲು ಬೇರೆ ಕೆಲಸವಿಲ್ಲ! ಅಬ್ಬರದ ಪ್ರಚಾರ ಸಿಗುತ್ತದೆ ಎಂಬುದೂ ಕೂಡ ಇನ್ನೊಂದು ಕಾರಣ! ಅಂತೂ ನಮ್ಮ ಕೆಲವು ಗಿರಿಗಳು,ಮೂರ್ತಿಗಳು ಗೋಹತ್ಯೆಯನ್ನು ನಿಷೇಧಿಸುವುದರ ವಿರುದ್ಧ ಕುಣಿಯುತ್ತಿದ್ದಾರೆ. ಬಹುಶಃ ಹುಟ್ಟಿದಾರಭ್ಯ ಇಲ್ಲೀವರೆಗೆ ಅವರು ಊಂಡ ಹಾಲು ನಾಯಿಯದ್ದೋ, ಕತ್ತೆಯದ್ದೋ ಇರಬೇಕು!

ಸಾಧುತ್ವಕ್ಕೆ ಪರ್ಯಾಯ ರೂಪವೇ ಗೋವು. ತನ್ನ ಸ್ಥಿತಿಗತಿ ಹೇಗೇ ಇದ್ದರೂ ಸಾಕಿದ ಒಡೆಯನ ಮನೆಯನ್ನು ತನ್ನೀಂದಾದ ಎಲ್ಲ ಉತ್ಪನ್ನಗಳಿಂದ ತುಂಬಿಸುವ ಗೋವು ಯಾವರೀತಿಯಿಂದಲೂ ನಿರುಪಯೋಗಿ ಎನಿಸುವುದಿಲ್ಲ. ಹುಟ್ಟಿನಿಂದ ಸಾಯುವವರೆಗೂ ಅದರ ಕೊಡುಗೆಗಳು ಹಲವು-ಹತ್ತು.

ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆಮಾನವ

--ಈ ಹಾಡನ್ನು ತಾವು ಕೇಳಿರುತ್ತೀರಿ. ಕೊನೇಪಕ್ಷ ಒಬ್ಬ ಕವಿಯಾದರೂ ಗೋವನ್ನು ಆ ಕಾಲಕ್ಕೇ ನೆನೆಸಿಕೊಳ್ಳುವ ಪುಣ್ಯಕೆಲಸಮಾಡಿದ್ದ.

ಒಂದು ಸಗಣಿಯಿಂದ ಈ ಮೇಲೆ ಹೇಳಿದ ಉತ್ಫನ್ನಗಳನ್ನು ಕೊಡುವ ಗೋವು ಮುಂದುವರಿದು

ಹಾಯ ಹರಿಗೋಲಾದೆ
ರಾಯಭೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ

ನದೀದಾಟಲು ಬಳಸುವ ಹರಿಗೋಲಿಗೆ ಒಳಗೆ ಹೊದಿಕೆಯಾಯಿತು ದನದ ಚರ್ಮ, ಭೇರಿ-ನಗಾರಿ ಬಾರಿಸಲು ಅದಕ್ಕೂ ಹೊದಿಕೆಯಾಯಿತು, ಮಾನವನ ಕಾಲಿಗೆ ಚಪ್ಪಲಿಯಾಯಿತು ದನದ ಚರ್ಮ ಆದರೂ ಮಾನವ ಮಾತ್ರ ದನವನ್ನು ನೆನೆಸಿಕೊಳ್ಳದ ನಿಷ್ಕರುಣಿ.

ಗೊಡ್ಡು ದನಗಳನ್ನು ಕಸಾಯಿಖಾನೆಗೆ ಕಳಿಸಬೇಕೆಂದು ಮುದುಕಾದ ಕೆಲವು ಸಾಹಿತಿಗಳು ಹೇಳುತ್ತಿರುವಾಗ ಅವರನ್ನೇ ನಿಷ್ಪ್ರಯೋಜಕರು ಎಂದು ದೂರದ ಹಿಮಾಲಯದಲ್ಲಿ ಬಿಟ್ಟುಬಂದುಬಿಡಬೇಕು ಎನಿಸುತ್ತಿದೆ! ಆದರೆ ಮುದುಕರಿಗಿಂತ ಅರೆಮುದುಕರು ಅನಂತ ಮೂತಿಯುಳ್ಳವರಾಗಿರುತ್ತಾರೆ. ತಮ್ಮ ಮೂತಿಯನ್ನು ತೂರಿಸದ ಜಾಗವೇ ಇರುವುದಿಲ್ಲ ಅವರಿಗೆ. ಯಾವೊಬ್ಬ ಮನುಷ್ಯನೂ ಆಕಳಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಂದೂ ಅದನ್ನು ಕಡಿದು ತಿನ್ನಬೇಕೆಂದು ಬಯಸುವುದಿಲ್ಲ. ಮನುಷ್ಯ ತನ್ನ ತಂದೆ-ತಾಯಿಯನ್ನೇ ಮುದಿವಯಸ್ಸಿಗೆ ವೃದ್ಧಾಶ್ರಮಕ್ಕೆ ಕಳಿಸುವಲ್ಲಿ ತೊಡಗಿದ್ದಾನೆ ಅಂದರೆ ಗೋವೆಲ್ಲ ಯಾವಲೆಕ್ಕ ಅಲ್ಲವೇ. ಆದರೆ ಗೋವುಗಳಿರುವುದು ಹಳ್ಳಿಗಳಲ್ಲಿ ಜಾಸ್ತಿ. ಹಳ್ಳಿಗರಿಗೆ ಗೋವೂ ಕೂಡ ಆಸ್ತಿ. ಹಾಲು ಹೈನ ಅರ್ಥಾತ್ ಮೊಸರು,ಮಜ್ಜಿಗೆ, ಬೆಣ್ಣೆ,ತುಪ್ಪ ಇವುಗಳನ್ನೆಲ್ಲ ಒದಗಿಸುವ ಆಕಳ ಮೂತ್ರ ಮತ್ತು ಮಲ ಕೂಡ ಪ್ರಯೋಜನಕಾರಿ ಎಂದು ರೈತರಿಗೆ ಗೊತ್ತು. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆಯಾಗುತ್ತದೆ ಎಂಬ ಸೋಗುಹಾಕಿ ಮೂತಿ ತೂರಿಸುತ್ತ ಬಹಳ ಕೆಟ್ಟ ಚಳುವಳಿಗೆ ಅಡಿಯಿಡುತ್ತಿರುವ ಓ ನಮ್ಮ ಕನ್ನಡದ ಬುದ್ಧಿಜೀವಿ ಮುದಿ[ಸಂಬಂಧಪಟ್ಟವರಿಗೆ ಮಾತ್ರ,ಕ್ಷಮಿಸಿ ಎಲ್ಲರಿಗೂ ಅನ್ವಯಿಸುವುದಿಲ್ಲ]ಸಾಹಿತಿಗಳೇ ನಿಮಗೆ ಮತ್ತೊಮ್ಮೆ ಡಾಕ್ಟರೇಟ್ ಖರೀದಿಸುವ ಹುಚ್ಚೇ? ಅಲ್ಲವೇ ಹಾಗಾದ್ರೆ ಮನೆಯಲ್ಲೋ ಯಾವುದೋ ಆಶ್ರಮದಲ್ಲೋ ಭಜನೆಗೆ ಕುಳಿತುಕೊಳ್ಳಿ. ಅದೂ ಸಾಧ್ಯವಿಲ್ಲದಿದ್ದರೆ ನಿತ್ಯಾನಂದನನು ಸೇರಿ!

ತನ್ನೆದುರು ತನ್ನದೇ ಎಳೆಗರುವನ್ನು ಎಳೆದು ಪಕ್ಕಕ್ಕೆ ಕಟ್ಟಿ ಹಾಲು ಹಿಂಡುವ ಮನುಜನ ನೋಡಿ ದುಖಿಸುವುದಿಲ್ಲ ದನ, ನೆತ್ತಿಯ ಮೇಲೆ ಕುಳಿತ ಕಾಗೆ ಕಿವಿಯ ಉಣ್ಣಿಯನ್ನು ತಿನ್ನುವ ರಕ್ತಹೀರುವಾಗ ನೆಪದಲ್ಲಿ ಕಣ್ಮುಚ್ಚಿ ಮಲಗುವ ಮೃದುಲ ಮನಸ್ಸಿನದು ನಮ್ಮ ದನ, ಶಿಖದಿಂದ ನಖದವರೆಗೆ ಉಂಡುಟ್ಟು ತೇಗಿ ಸುಖಿಸಲು ಸಹಕಾರಿಯಾಯ್ತು ನಮ್ಮ ದನ, ಹೊಟ್ಟೆಗೆ ಕೊಡಲಿ-ಕೊಡದಿರಲಿ ಹೇಳಲುಬಾರದ,ಸಂಪು-ಹರತಾಳ-ಧರಣಿ ಗೊತ್ತಿರದ ಹೊತ್ತಿಗೆ ಹೋದರೆ ಇರುವ ಹಾಲನ್ನು ಸಿಷ್ಕಪಟವಾಗಿ ಸುರಿಸುವ ಧಾರಾಳಿ ನಮ್ಮ ದನ, ಉಳುವ ಯೋಗಿಗೆ ಬಸವನಾಗಿದ್ದು ಬೆಂಬಲಿಸಿ ಹಗಲಿರುಳು ನೊಗವಿಡಿದು ಜಗ್ಗಿ ಜಗ್ಗಿ ಬಂಡಿ ಎಳೆಯುವ ಬಡಗೋವು ನಮ್ಮ ದನ,ಕಾಯಿಲೆಗೆ ಚಿಂತಿಸದೆ, ನೋವಿಗೆ ಕೊರಗದೇ ಮಳೆಯಲ್ಲೂ ಬಿಸಿಲಲ್ಲೂ ರೈತನ ನರನಾಡಿಗಳಲ್ಲಿ ನವಚೇತನವನ್ನು ತನ್ನ ಕಾರ್ಯರೂಪದಿಂದ ಹರಿಸುತ್ತದೆ ನಮ್ಮ ದನ,ಕರೆದಲ್ಲಿಗೆ ಬಂದು-ಎಳೆದಲ್ಲಿಗೆ ಹೋಗಿ ಗೊತ್ತುಗುರಿಯನ್ನೇ ಅರಿಯದೇ ತನಗೆ ಕೊಟ್ಟ ಕೆಲಸ ಮಾಡುವುದು ನಮ್ಮ ದನ, ತನ್ನೆಜಮಾನ ಆತನ ಮನೆ-ಮಡದಿ-ಮಕ್ಕಳು ಉಂಡುಟ್ಟು ಸುಖಿಸಲಿ ಎಂಬ ಮನೋಧರ್ಮದ್ದು ನಮ್ಮ ದನ, ಹೆಚ್ಚೇಕೆ ಒಡೆಯನ ದುಃಖದ ಅರಿವಾದರೆ ತನ್ನ ಕಣ್ಣಲ್ಲಿ ಸುಮ್ಮನೇ ಕಂಬನಿಸುರಿಸುವ ನಿಸ್ಪೃಹ ನಿಸ್ವಾರ್ಥ ಭಾವ ಜೀವಿ ನಮ್ಮ ದನ; ಇದ ಮರೆತರೆ ನಮ್ಮ ಧನಿಕತನ ಕರಗುತಾ ಬರುವುದು ದರಿದ್ರತನ!

ದನವನ್ನು ಬಿಟ್ಟು ಬೇರಾವ ಪ್ರಾಣಿಯ ಮಲ-ಮೂತ್ರಗಳನ್ನು ನಾವು ಭುಂಜಿಸುವುದಿಲ್ಲ! ಯಾಕೆಂದರೆ ಕೇವಲ ಭಾರತೀಯ ಗೋವಲ್ಲಿ ಮಾತ್ರ ಬಹಳ ಔಷಧೀಯ ಗುಣಗಳಿವೆ. ಗೋಮೂತ್ರ,ಗೋಮಯ,ಗೋಅರ್ಕ ಹೀಗೇ ವಿವಿಧ ರೂಪದಲ್ಲಿ ನಾವು ಗೋವಿನ ತ್ಯಾಜ್ಯವನ್ನು ಬಳಸುತ್ತೇವೆ. ಗೋಮೂತ್ರ ಬಳಕೆಯಿಂದ ಕ್ಯಾನ್ಸರ್ ಮತ್ತು ಕಾಮಾಲೆ ಕಾಯಿಲೆಗಳು ವಾಸಿಯಾಗುತ್ತವೆ. ದಿನಾಲೂ ಗೋಮೂತ್ರ ಸೇವಿಸಿದರೆ ರಕ್ತ ಶುದ್ಧಿಗೊಳ್ಳುತ್ತದೆ. ಗೋಮಯದಿಂದ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ. ಅದು ಬಿಟ್ಟು ಬಂಗಾರದ ಮೊಟ್ಟೆಗೆ ಆಸೆ ಪಟ್ಟು ಕೋಳಿಯನ್ನು ಕತ್ತರಿಸಿದಂತೇ ಒಂದೇ ದಿನ ಕಡಿದು ಮುಗಿಸಿದರೆ ರಾತ್ರಿಯೋ ಮಾರನೇದಿನವೋ ನಮಗೆ ಸಗಣಿ ಬರುತ್ತದೆಯೇ ವಿನಃ ಅದರಿಂದಾಗುವ ನಷ್ಟ ಹೇಳಲಸದಳ.

ನಾವು ಬಾಲ್ಯದಲ್ಲಿ ಗೋಮಾಳದಲ್ಲಿ ಮಿಳಿತರಾಗಿ ಗೋಪಾಲನಂತೆ ಆಟವಾಡಿದ ನೆನಪು ಮರುಕಳಿಸುತ್ತದೆ. ಆಗೆಲ್ಲ ಆವಿಗೆ ಹಲವಾರು ದೇವ,ದೇವಿಯರ, ಪುಣ್ಯ ನದಿಗಳ ಹೆಸರನ್ನೇ ಇಟ್ಟು ಸಂಬೋಧಿಸುತ್ತಿದ್ದರು. ನಾನು ತಿಳಿದಂತೆ ಭಾರತೀಯ ಗೋತಳಿ ಬಹಳ ಬುದ್ಧಿವಂತ ತಳಿ ಕೂಡ. ಅವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಿದ್ದವು. ನಾವು ಹೆಸರಿಟ್ಟು ಕರೆದರೆ ದೂರದಿಂದ ಕಿವಿನಿಮಿರಿಸಿ ನೋಡಿ ಕೂಗುತ್ತಿದ್ದವು. ಕೆಲವೊಮ್ಮೆ " ಬಾ " ಎಂದು ಕರೆದರೆ ಬಂದೂಬಿಡುತ್ತಿದ್ದವು. ಅವುಗಳ ಮೈನೀವಿ ಹುಲ್ಲುಕಿತ್ತು ತಿನಿಸಿದರೆ, ಅವುಗಳ ಕೊರಳ ಗಂಗಾಧರವೆಂಬ ಭಾಗವನ್ನು ಉಜ್ಜಿ-ತುರಿಸಿದರೆ, ಅವುಗಳ ಕೋಡುಗಳನ್ನು ಹಿಡಿದು ಸ್ವಚ್ಛಗೊಳಿಸಿದರೆ ಅವುಗಳಿಗೆ ಬಹಳ ಹಾಯೆನಿಸುತ್ತಿತ್ತು. ಕಪಿಲೆ-ನಂದಿನಿ-ಗೀತಾ ಇವಲ್ಲದೇ ರೇಣುಕಾ, ಶರಾವತಿ, ಬೆಳ್ಳಿ, ಕಮಲಿ ಮತ್ತು ವಸುಂಧರೆ ಎಂಬ ಆಕಳುಗಳ ಮಧ್ಯೆ ನಂದಿವಿಶಾಲ,ಗಣಪ,ಕರಿಯ ಮುಂತಾದ ಗೂಳಿಗಳೂ ಇದ್ದವು. ನೆಂಟರೊಬ್ಬರ ನಿಸರ್ಗವರ್ಣನೆಗೆ ಮನಸೋತ ನಾನು ಒಂದು ಮುದ್ದಾದ ಕೌಲುಬಣ್ಣದ ಹೆಂಗರುವಿಗೆ " ಮೇದಿನಿ" ಎಂಬ ಉತ್ತರಕನ್ನಡದ ಪರ್ವತವೊಂದರ ಹೆಸರನ್ನು ಇಟ್ಟಿದ್ದೆ. ಸುಮಾರು ೩೦-೩೪ ಬಾಲಗಳಿದ್ದವು.[ಆಕಳುಗಳು ಮತ್ತು ಕರುಗಳನ್ನು ಬಾಲದ ಲೆಕ್ಕಾಚಾರದಲ್ಲಿ ಹೇಳುತ್ತಿದ್ದರು].ಇಂದು ಅವೆಲ್ಲ ಮರೆಯಾಗಿ ಒಂದೆರಡು ಜರ್ಸಿ ದನಗಳು ಬಂದು ಕೂತಿರುವುದು ನನಗೆ ತಡೆಯಲಾರದ ಭಾವನೆಗಳನ್ನು ತಂದು ಎದುರಿಗೆ ರಾಶಿಹಾಕಿದಂತಾಗಿದೆ. ಇದು ಕಥೆಯಲ್ಲ-ಜೀವನ! ಇಂದಿಗೆ ಇದು ನಮ್ಮ ಹಳ್ಳಿ ಮನೆಯ ಕಥೆ. ನಾಳೆ ಎಲ್ಲರ ಮನೆಯ ಕಥೆ!

ಉಪಕಾರಿ ನಾನು ಎನ್ನುಪಕೃತಿಯು ತನದೆಂಬ
ವಿಪರೀತ ಮತಿಯುಳಿದು ವಿಪುಲಾಶ್ರಯವ ನೀವ
ಸುಫಲ ಫಲಭರಿತ ಮಾದಪದಂತೆ ..... ಕವಿಯ ಈ ಭಾವವನ್ನು ನೋಡಿ. ಮನುಷ್ಯ ಉಪಕಾರಿಯಾಗುವುದಂತೂ ತೀರಾ ಕಡಿಮೆ, ಆದರೆ ಅಪಕಾರಿಯಾಗುವುದು, ಅಪಾಯಕರಿಯಾಗುವುದು ಬೇಡ ಅಲ್ಲವೇ?

ಕಾಲ, ದೇಶ, ಭಾಷೆಗಳ ಭಿನ್ನತೆ ಮಧ್ಯೆ ತಲೆದೋರಬಹುದು, ಆದರೆ ಸದ್ಯಕ್ಕೆ ನಾವು ಮಾತನಾಡುತ್ತಿರುವುದು ಕರ್ನಾಟಕದ ವಿಷಯ. ಇಲ್ಲಿನ ಜನ ಸುಸಂಸ್ಕೃತರು,ಸಜ್ಜನರು, ನಿರುಪದ್ರವಿಗಳು, ಬುದ್ಧಿಜೀವಿಗಳು, ಧಾರಾಳಿಗಳು, ಬಹುಭಾಷಾಪ್ರಿಯರು, ಕುಲೀನರು ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಆದರೆ ನಮ್ಮಲ್ಲೇ ಅಕ್ಕಿಯಲ್ಲಿನ ಹುಳಗಳಂತೆ ಕೆಲವು ಖುಳಗಳು ವರ್ತಿಸುತ್ತವೆ. ಹಸಿದ ಹುಲಿಯು ಹಿಡಿದ ಬೇಟೆಯನ್ನು ಎಳೆದೊಯ್ವ ಮಾರ್ಗಮಧ್ಯೆ ಅಡ್ಡಬಂದರೆ ಆ ಹುಲಿಯಾದರೂ ಸ್ವಲ್ಪ ಹೆದರೀತು, ಆದರೆ ಈ ಹುಳಗಳುಮಾತ್ರ ತಮ್ಮ ಕಸುವಿರುವಷ್ಟನ್ನೂ ಉಪಯೋಗಿಸಿ ಒದ್ದಾಡಿ ಪ್ರಚಾರಬಯಸುತ್ತವೆ, ಅರ್ಥವಿರದ ಅವರ ಒದ್ದಾಟ ಹಲವರಿಗೆ ಹಲವೊಮ್ಮೆ ಇರುಸು-ಮುರುಸಿಗೆ ಕಾರಣವಾಗಿದೆ.

ರವಿ ಬೆಳಗೆರೆ ಒಮ್ಮೆಟಿವಿಯಲ್ಲಿ ತೋರಿಸುತ್ತಿದ್ದರು. ನೋಡಲಾರದ,ನೋಡಬಾರದ ದುಸ್ಥಿತಿ. ಕಟುಕ,ನೀಚ,ಪಾಪಿ ಮಾನವ ದನಗಳ ಕಾಲು ಕಟಕ್ಕನೆ ಮುರಿದು ಅವುಗಳನ್ನು ಲಾರಿಗೆ ಏರಿಸುವುದು, ಎಳೆಯ ಗಂಡುಕರುಗಳನ್ನು ಅವುಗಳ ಬಾಯಿ ಹೊಲಿದು ಕೂಡಿಹಾಕುವುದು, ಮುದಿ ಎತ್ತಿನ ಕಣ್ಣಿಗೆ ಕರದ ಪುಡಿ ಹಾಕಿ ಕಣ್ಣೊಳಗೆ ಕೈಬೆರಳು ಹಾಕಿ ಉಜ್ಜುವುದು..ಛೆ ಇಂಥಾ ಕಟುಕರೂ ರಕ್ಷಸರಲ್ಲವೇ, ಇಂಥವರಿಗೆ ದನಕರುಗಳನ್ನು ಮಾರುವ ನಾವು ರಾಕ್ಷಸರಲ್ಲವೇ ? ಇಂತಹ ಅನೇಕ ಘಟನೆಗಳನ್ನು ಕಣ್ಣೀರು ಬಂದು ಬರೆಯಲಾರದೆ ಕೈಬಿಟ್ಟಿದ್ದೇನೆ. ಹಲವನ್ನು ನೀವೇ ಊಹಿಸಿಕೊಳ್ಳಿ. ಮಾನವನ ಬದುಕಿನ ಅನಿವಾರ್ಯ ಸಂಗಾತಿಯಾಗಿ ಭಾಜ್ಯಗೊಳ್ಳುವ-ಭೋಜ್ಯಗೊಳ್ಳುವ ನಮ್ಮ ಹಸು-ಕರುಗಳು ಇಂತಹ ಪ್ರಾರಬ್ಧವನ್ನು ನಮ್ಮಿಂದ ಅನುಭವಿಸುವಂತೆ ವಿಧಿ ಬರೆಯಿತೇ ? ಬಯಲು ಸೀಮೆಯಲ್ಲಿ ಬರಗಾಲದಲ್ಲಿ ನೀರಿಲ್ಲದೇ-ಮೇವಿಲ್ಲದೆ ಅನೇಕ ಸಾವಿರ ಹಸು-ಕರುಗಳು ಸಾಯುತ್ತವೆ, ಎಷ್ಟೋ ಸಾವಿರಸಂಖ್ಯೆಯಲ್ಲಿ ಮಾರಲ್ಪಟ್ಟು ಇಂತಹ ಕಟುಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತವೆ. ತನ್ನೆ ಅನಿವಾರ್ಯತೆಯಲ್ಲಿ ಒಡೆಯನಿಗೆ ಭಾರವಾದ ಗೋಮಾತೆ ಹರಿಶ್ಚಂದ್ರನಂತೆ ತನ್ನನ್ನೇ ತಾನು ಮಾರಿಕೊಳ್ಳುತ್ತದೆ, ಹಾಗೆ ಮಾರಾಟಗೊಳ್ಳುವ ಕಡೆಯ ಕ್ಷಣದಲ್ಲಿ ಒಡೆಯನ ಕಡೆಗೇ ಹರಿಸಿದ ದಯಾರ್ದ್ರ ನೋಟ ಹೇಗಿರಬಹುದು ಊಹಿಸಬಲ್ಲಿರೇ ?

ಸಹೃದಯೀ ಮಿತ್ರರೇ ತಾವೆಲ್ಲ ಕಲೆತು ಚಿಂತನ-ಮಂಥನ ನಡೆಸಿ. ದನ ತಿನ್ನುವವರಿಗಿಂತ ದನತಿನ್ನದೇ ಇರುವ ಕುರಿಗಳ ಕಾಟ ಯಾಕೋ ತುಂಬಾ ಅತಿ ಅನಿಸುತ್ತದೆ. ಈ ಕುರಿಗಳನ್ನು ಎಲ್ಲಿಗೆ ಅಟ್ಟಿಸಿ ಓಡಿಸಬೇಕೋ ತಿಳಿಯದಾಗಿದೆ.

ಗೋವನ್ನು ಮಾತೆ ಎಂದು ಪೂಜಿಸುವ ಉಚ್ಚಕುಲಪ್ರಸೂತರೇ ನಿಮಗೆ ಹಬ್ಬದಲ್ಲಿ ಪೂಜೆಗಾಗಲೀ, ಗೃಹಪ್ರವೇಶಕ್ಕೂ ಮುನ್ನ ಗೋಪ್ರವೇಶ ಮಾಡಿಸಲಾಗಲೀ ಕೂಡ ಭಾರತೀಯ ಗೋವು ಸಿಗದಾಗಿದೆ-ಈಗಾಗಲೇ. ಅಳಿದುಳಿದ ಕೆಲವೇ ತಳಿಗಳಪೈಕಿ ಕೇವಲ ಕೇವಲ ಬಹು ಕ್ಷೀಣಸಂಖ್ಯೆಯಲ್ಲಿ ಅವುಗಳು ಕಂಡುಬರುತ್ತಿವೆ. ಇದರ ಸಲುವಾಗಿ ಅನೇಕ ಸಾಧು-ಸಂತರೂ ಮುಂದಾಗಿ ತಾವು ಅನೇಕ ರಕ್ಷಣಾಪಥಗಳನ್ನು ಹಾಕಿಕೊಂಡಿದ್ದಾರೆ, ನಾವೆಲ್ಲ ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಬಹಳ ಉಪಯುಕ್ತ ಅಂಶಗಳಲ್ಲಿ ಧೇನುವೂ ಒಂದು. ಭಕ್ಷಿಸದೇ ರಕ್ಷಿಸಿದವರನ್ನು ಸುರಧೇನುವಾಗಿ ಪೊರೆಯಬಲ್ಲ. ತನ್ನ ಮಲ-ಮೂತ್ರಾದಿಗಳಿಂದಲೂ ನಮ್ಮ ರೋಗ-ರುಜಿನಕಳೆವ ಕಪಿಲೆ-ನಂದಿನಿ-ಕಾಮಧೇನುಗಳು ಬಹುಕಾಲ ಬದುಕಲಿ, ಮನುಕುಲ ಉದ್ಧಾರವಾಗಲಿ ಅಲ್ಲವೇ ?