ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 21, 2011

ಆಸಕ್ತಿ ಮತ್ತು ಶ್ರದ್ಧೆ



ಆಸಕ್ತಿ ಮತ್ತು ಶ್ರದ್ಧೆ

ಜಗತ್ತಿನಲ್ಲಿ ಯಾರೂ ಕುಳಿತು ಉಣ್ಣುವಂತಿಲ್ಲ, ಅವರವರ ಅನ್ನಕ್ಕಾಗಿ ಅವರವರು ದುಡಿಯಲೇಬೇಕು. ದುಡಿಯುವ ರೀತಿಯಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾಡುವ ವೃತ್ತಿ ಬೇರೇ ಇರಬಹುದು. ಆದರೆ ಪ್ರಾಮಾಣಿಕ ದುಡಿತವೇ ಒಳ್ಳೆಯ ಜೀವನಕ್ಕೆ ಮಾರ್ಗ. ಇಂದಿನ ದಿನಮಾನದಲ್ಲಿ ಎಳೆಯ ವಯಸ್ಸಿಗರಿಗೆ ಕೆಲಸಗಳಲ್ಲಿ ಆಸಕ್ತಿಯಿಲ್ಲ. ಹೇಗಾದರೂ ಆಗಲಿ ಆದಷ್ಟೂ ಜಾಸ್ತಿ ಗಳಿಸಬೇಕೆಂಬುದೇ ಅವರ ಉದ್ದೇಶವಾಗಿದೆ. ಹಳ್ಳಿಗಳಲ್ಲಿ ತೋಟ-ತುಡಿಕೆ ಹೊಲಗದ್ದೆಗಳಲ್ಲಿ ಕೆಲಸಮಾಡುವ ವೃತ್ತಿ ಯಾರಿಗೂ ಬೇಡವಾಗಿದೆ. ಒಂದು ಕಾಲದಲ್ಲಿ ಸರ್ವಜ್ಞ ಹೇಳಿದ ’ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೇ ಮೇಲು’ ಎನ್ನುವ ಮಾತನ್ನು ಇಂದಿನ ಯುವಜನಾಂಗ ಅಲ್ಲಗಳೆಯುತ್ತಿದೆ. ಆದರೆ ಮೇಟಿ ವಿದ್ಯೆಯೇ ಎಲ್ಲರಿಗೂ ಮೂಲ ಜೀವನಾಧಾರವೆಂಬ ಸತ್ಯ ಹಲವರು ಮರೆತಂತಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಟ್ಟ ರಾಜಕಾರಣಿಗಳ ಹಣಮಾಡುವ ಕಸರತ್ತನ್ನು ಮಾಧ್ಯಮಗಳಲ್ಲಿ ಕಂಡು ಹಳ್ಳಿಯಲ್ಲೂ ಜನಜೀವನದಲ್ಲಿ ಅದರ ಗಾಳಿ ಬೀಸಿದೆ. ಪರರಿಗೆ ಏನಾದರೂ ಆಗಲಿ ತನ್ನ ಹುಂಡಿಗೆ ಆದಷ್ಟೂ ಜಾಸ್ತಿ ಹಣ ತುಂಬಲಿ ಎಂಬುದು ಜನರೆಲ್ಲರ ಅನಿಸಿಕೆಯಾಗುತ್ತಿದೆ. ಕಾಲಮಾನದ ಬಗ್ಗೆ ಹೇಳುವಾಗ ಇತಿಹಾಸದಲ್ಲಿ ನಡೆದ ಸತ್ಯವನ್ನು ಮರೆಯಲಾಗುವುದಿಲ್ಲವಲ್ಲ...ಹೀಗಾಗಿ ಹೇಳುತ್ತಿದ್ದೇನೆ : ಹಿಂದಿನ ದಿನಗಳಲ್ಲಿ ಇರುವ ಮಾನವೀಯ ಮೌಲ್ಯಗಳಿಗೆ ಇಂದು ಪುರಸ್ಕಾರವಿಲ್ಲ. ದುಡ್ಡೇ ಎಲ್ಲದಕ್ಕೂ ಮೌಲ್ಯತರುವ ಏಕೈಕ ಕಾರಣವಾಗಿದೆ! ಹಣ ಎಷ್ಟಿಲ್ಲದಿದ್ದರೂ ಸಾಲದು ಎಂಬಂತಹ ವಾತಾವರಣವೂ ಸಮಾಜದಲ್ಲಿ ಸೃಷ್ಟಿಯಾಗಿಬಿಟ್ಟಿದೆ. ಮಾನವರೆಲ್ಲ ಕೇವಲ ಜೀವವಿರುವ ಬೊಂಬೆಗಳಾಗಿದ್ದಾರೆಯೇ ವಿನಃ ಭಾವನಾಶೂನ್ಯರಾಗಿದ್ದಾರೆ. ಅಪ್ಪ ಮಗನನ್ನೂ ಮಗ ಅಪ್ಪನನ್ನೂ ಧನಕನಕ ಆಸ್ತಿಗಾಗಿ ಬಡಿದು ತಿನ್ನುವ ಕಾಲ ಬಂದುಬಿಟ್ಟಿದೆ ಎಂದಮೇಲೆ ಮೂರನೆಯ ವ್ಯಕ್ತಿಗಳ ಸ್ಥಿತಿ ನಿಮಗೇ ಅರ್ಥವಾಗುತ್ತದೆ. ಹಣವಿದ್ದರೆ ಮಾತ್ರ ಮುಖದ ಮುಂದೆ ಗೌರವ ಸಿಗುತ್ತದೆ, ಇನ್ನು ಕೆಲವೊಮ್ಮೆ ತಮಗೆ ಏನಾದರೂ ತೊಂದರೆಯಾಗದಿರಲಿ ಎನ್ನುವ ಅನಿಸಿಕೆಯಿಂದ ರಾಜಕೀಯದವರನ್ನು ಸುಮ್ಮನೇ ಇನ್ಯಾರದೋ ಎದುರಿಗೆ ಹೊಗಳುವ ಪರಿಪಾಟವಿದೆ. ಆದರೆ ನಿಜಕ್ಕೂ ವ್ಯಕ್ತಿ ವ್ಯಕ್ತಿಗಳ ನಡುವೆ ಗೌರವದ ನಡವಳಿಕೆಗಳು, ಸಂಸ್ಕಾರಭರಿತ ಸಂಪರ್ಕಗಳು ಕ್ಷೀಣಿಸುತ್ತಿವೆ. ’ಮುಖ ನೋಡಿ ಮಣೆಹಾಕು’ ಎನ್ನುವುದನ್ನು ಸ್ವಲ್ಪ ತಿರುಚಿ ’ಹಣನೋಡಿ ಮಣೆಹಾಕು’ ಎಂದೆನ್ನಬೇಕಾಗಿದೆ. ಹಣ ಜಾಸ್ತಿ ಇದ್ದಷ್ಟೂ ಎಲ್ಲಾ ಕ್ರತ್ರಿಮ ಗೌರವಗಳೂ ಲಭ್ಯ, ಹಣವಿಲ್ಲದಿದ್ದರೆ ಯಾರೂ ಮೂಸನೋಡದ ಸ್ಥಿತಿ. ಹಣದ ಈ ಝಣತ್ಕಾರ ಜೋರಾಗಿಸಲು ಕಾರಣ ಕೆಟ್ಟ ರಾಜಕಾರಣದ ವಾತಾವರಣ. ’ಯಥಾ ರಾಜಾ ತಥಾ ಪ್ರಜಾ’! ಅಲ್ಲವೇ?

ಜಗತ್ತಿನಲ್ಲಿ ಯಾರಿಗೂ ಕೆಲಸವಿಲ್ಲಾ ಎಂಬುದಿಲ್ಲ. ಖಂಡಿತಾ ಕೆಲಸವಿದೆ. ಕೆಲಸವನ್ನು ಮಾಡುವ ಬುದ್ಧಿ ಮೊದಲಾಗಿ ಇರಬೇಕು. ಕೆಲಸವನ್ನು ನಾವೇ ಹುಡುಕಿಕೊಳ್ಳಬಹುದು. ಕೆಲಸವನ್ನು ಬೇರೆಯವರಲ್ಲಿ ಯಾಚಿಸುವುದಕ್ಕಿಂತಾ ನಮ್ಮ ಆರ್ಹತೆಗೆ ತಕ್ಕುದಾಗಿ ನಾವು ಮಾಡಬಲ್ಲ ಕೆಲಸಗಳಲ್ಲಿ ನಾವೇ ತೊಡಗಿಕೊಳ್ಳಬಹುದು. ಉದಾಹರಣೆಗೆ ಒಬ್ಬಾತ ಬಿ.ಕಾಮ್ ಮಾಡಿದ್ದರೆ ನೇರವಾಗಿ ಅಕೌಂಟೆಂಟ್ ಕೆಲಸವನ್ನು ಹುಡುಕುತ್ತಾ ಕೂರುವ ಬದಲು ಲೆಕ್ಕಪತ್ರ ಪರಿಶೋಧನೆಯಲ್ಲಿ ಪರಿಣತಿಗಾಗಿ ನುರಿತ ಲೆಕ್ಕಿಗರ ಮಾರ್ಗದರ್ಶನ ಕೆಲವುಕಾಲ ಪಡೆದು ಆಮೇಲೆ ತಾನೇ ಕೆಲಮಟ್ಟಿಗೆ ಖಾಸಗೀ ಕಂಪನಿಗಳ, ಚಿಕ್ಕಪುಟ್ಟ ವಹಿವಾಟುದಾರ ಲೆಕ್ಕಪುಸ್ತಕಗಳನ್ನು ಬರೆಯುವುದರಲ್ಲಿ ತೊಡಗಿಕೊಳ್ಳಬಹುದು. ಕೆಲವರಿಗೆ ಓದು ಕೇವಲ ಜ್ಞಾನಕ್ಕಾಗಿ ಮಾತ್ರ. ಅವರು ಓದಿದ್ದೇನೋ ಆಗಿದ್ದರೆ ಮಾಡುವ ವೃತ್ತಿ ಇನ್ನೇನೋ ಆಗುತ್ತದೆ. ಅದಕ್ಕೆ ಆಸಕ್ತಿ ಕಾರಣ.

ಎಲ್ಲರಿಗೂ ಎಲ್ಲವುದರಲ್ಲೂ ಆಸಕ್ತಿಯಿರುವುದಿಲ್ಲ. ನನಗೆ ಗೊತ್ತಿರುವ ವೈದ್ಯರು ಮೂವರನ್ನು ತೆಗೆದುಕೊಂಡರೆ ಒಬ್ಬರು ಆಂಗ್ಲ ಪದ್ಧತಿಯ ವೈದ್ಯವಿದ್ಯೆಯನ್ನು ಓದಿದವರು-ಆದರೆ ವೃತ್ತಿಯಲ್ಲಿ ’ಮೆಡಿಕಲ್ ಟ್ರಾನ್ಸ್‍ಕ್ರಿಪ್ಶನಿಷ್ಟ್’ ಆಗಿದ್ದಾರೆ. ಇನ್ನಿಬ್ಬರಲ್ಲಿ ಒಬ್ಬರು ಆಯುರ್ವೇದದ ಪದವಿ ಪಡೆದಿದ್ದರೂ ಆಂಗ್ಲಪದ್ಧತಿಯ ಆಸ್ಪತ್ರೆಗೆ ಯಜಮಾನರಾಗಿದ್ದಾರೆ. ಇನ್ನು ಮೂರನೆಯವರು ಆಯುರ್ವೇದದಲ್ಲಿ ವಿದ್ವತ್ತು ಮುಗಿಸಿ ತಮ್ಮದೇ ರಂಗದಲ್ಲಿ ತೊಡಗಿಕೊಂಡು ಚಿಕಿತ್ಸಾಲಯ ಆರಂಭಿಸಿ ಇದೀಗ ಬಹಳ ಹೆಸರುವಾಸಿಯಾಗಿದ್ದಾರೆ-ಬೆಳೆದಿದ್ದಾರೆ. ಇಲ್ಲಿ ಅವರವರ ಮನೋ ವಾಂಛೆಗೆ ತಕ್ಕಂತೇ ಅವರವರು ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಓದಿದ ಮೆಕಾನಿಕಲ್ ಅಭಿಯಂತರರು ಬಹಳಜನ ತಂತ್ರಾಂಶ ಅಭಿಯಂತರರಾಗಿ ಕೆಲಸನಿರತರಾಗಿದ್ದಾರೆ. ಇಲೆಕ್ಟ್ರಿಕಲ್ ಅಭಿಯಂತರರೊಬ್ಬರು ’ಈವೆಂಟ್ ಮ್ಯಾನೇಜ್‍ಮೆಂಟ್’ ಕಂಪನಿಯನ್ನು ನಡೆಸುತ್ತಿದ್ದಾರೆ. ಹೀಗೇ ಓದಿಗೂ ಮಡುವ ವೃತ್ತಿಗೂ ಕೆಲವೊಮ್ಮೆ ತಾಳೆಹಾಕಲಾಗುವುದಿಲ್ಲ.

ವ್ಯಕ್ತಿಗೆ ಆತನ ಆಂತರ್ಯ ಇಷ್ಟಪಡುವಂತಹ ಯಾವುದೋ ಕೆಲಸ ಆತ ಹುಡುಕುತ್ತಿರುತ್ತಾನೆ. ಆದರೆ ಕೆಲವೊಮ್ಮೆ ಮನಸ್ಸು ಬೇಡಾ ಎನ್ನುವ ವೃತ್ತಿಯಲ್ಲೂ ತೊಡಗಿಕೊಂಡುಬಿಡುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಕಷ್ಟಸಾಧ್ಯವಾಗಬಹುದು. ಉನ್ನತಿಯನ್ನು ಕಾಣಲು ಉನ್ನತ ಗುರಿಯೊಂದೇ ಸಾಲದು; ಪೂರಕ ಮನೋಗತವೂ ಬೇಕು. ವಕೀಲನೊಬ್ಬ ತನ್ನ ಕಛೇರಿಯಲ್ಲಿ ನಿವೃತ್ತರಾದ ಕೆಲವು ವ್ಯಕ್ತಿಗಳನ್ನು ಬೆರೆಳಚ್ಚಿಸಲು ನಿಯಮಿಸಿಕೊಂಡಿದ್ದ. ಗಣಕಯಂತ್ರ ಬಂದಾದಿನಗಳಲ್ಲಿ ತಕ್ಷಣ ಅವರಿಗೆಲ್ಲಾ ಗಣಕಯಂತ್ರದಲ್ಲಿ ಬೆರಳಚ್ಚಿಸುವುದನ್ನು ಕಲಿಯಹೇಳಿದ. ಆದರೆ ಆ ನಿವೃತ್ತ ಗುಮಾಸ್ತರುಗಳ ಅಂಬೋಣ ಹೀಗಿತ್ತು " ೩೫ ವರ್ಷಗಳಿಂದ ಮಾಮೂಲೀ ಟೈಪರೈಟರ್ ನಲ್ಲಿ ಕೆಲ್ಸಾ ಮಾಡಿದೀವಿ ಸಾರ್...ನಮ್ಗೆ ಇವೆಲ್ಲಾ ಯಾಕೆ ಬೇಕು ಹೇಳಿ....ಏನೋ ಸಾರು ಹೇಳ್ತಾರೆ ನಾವೂ ಕಲೀಬೇಕಾಗಿದೆ. " ಆ ಜನರಿಗೆ ಕಲಿಸಲು ನಿಂತ ವ್ಯಕ್ತಿ ಸೋತನೇ ಹೊರತು ಅವರು ಸರಿಯಾಗಿ ಕಲಿಯಲಿಲ್ಲ. ಅದೇ ಕಿರ್ಲೋಸ್ಕರ್ ಕಂಪನಿಯ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ೭೭ ವರ್ಷ ತುಂಬಿದ ಹಿರಿಯರೊಬ್ಬರು ಗಣಕಯಂತ್ರವನ್ನು ಸ್ವಂತದ ಬಳಕೆಗಾಗಿ ತರಗತಿಗೆ ಬಂದು ಕಲಿತಿದ್ದು ನನ್ನ ನೆನಪಿನಲ್ಲಿದೆ, ಅವರ ಚಿತ್ರಗಳೂ ಇವೆ--ಇದು ನಿಜವಾದ ಆಸಕ್ತಿ.

ಎಲ್ಲಿ ಆಸಕ್ತಿಯಿದೆಯೋ ಅಲ್ಲಿ ಕೆಲಸ ಸಲೀಸಾಗಿ, ಚೆನ್ನಾಗಿ ನಡೆಯುತ್ತದೆ.ಆಸಕ್ತಿ ರಹಿತ ಕೆಲಸವಾದರೆ ಕೆಲಸಮಾಡುವಾಗಲೇ ನಿದ್ದೆಯೂ ಬರಬಹುದು, ಆಕಳಿಕೆಯೂ ಬರಬಹುದು, ಎದ್ದು ಓಡುವ ಮನಸ್ಸೂ ಬರಬಹುದು. ಆದರೆ ಉದರಂಭರಣೆಗೆ ಬೇಕಲ್ಲಾ ಎಂದುಕೊಂಡು ಸಿಕ್ಕ ಆ ವೃತ್ತಿಯನ್ನು ಹೇಗೋ ಒಟ್ಟಿನಲ್ಲಿ ಮಾಡುತ್ತಾ ಕಾಲಹಾಕುವುದು ಒಂದು ವರ್ಗ. ಅಲ್ಲಿ ಎಲ್ಲವೂ ಯಾಂತ್ರಿಕವಾಗಿರುತ್ತದೆ! ಯಾವುದೂ ಇಷ್ಟವಾಗುವುದಿಲ್ಲ. ಕೆಲಸದಲ್ಲಿ ಆಸಕ್ತಿಯಿದ್ದರೆ ತಂತಾನೇ ಶ್ರದ್ಧೆಯೂ ಹುಟ್ಟಿಕೊಳ್ಳುತ್ತದೆ. ಶ್ರದ್ಧೆ ಎಂದರೆ ಇನ್ವಾಲ್ವ್‍ಮೆಂಟ್ ಹೌದಲ್ಲ? ಲೋಟದಲ್ಲಿ ನೀರು ಕೊಡುವ ಹೋಟೆಲ್ ಹುಡುಗ ಲೋಟಕ್ಕೆ ಅಂಟಿರುವ ಕೊಳೆಯನ್ನು ಗ್ರಹಿಸದೇ ಕೊಡುವುದು ಅಶ್ರದ್ಧೆ, ಅದನ್ನು ಗ್ರಹಿಸಿ ಸ್ವಚ್ಛವಾಗುಳ್ಳ ಲೋಟದಲ್ಲಿ ಕೊಡುವುದು ಶ್ರದ್ಧೆ. ಕೆಲಸವೊಂದೇ; ಮಾಡುವಲ್ಲಿ ಕಾಳಜಿ ಬೇರೆ. ಅಪ್ಪ-ಅಮ್ಮನನ್ನು ಹುಟ್ಟಿಸಿದವರು ಹೇಗೋ ಸಾಕಬೇಕಲ್ಲಾ ಎಂದುಕೊಳ್ಳುತ್ತಾ ನೋಡಿಕೊಳ್ಳುವುದಕ್ಕೂ ತಂದೆ-ತಾಯಿ ನಮ್ಮ ದೇವರೆಂದು ತಿಳಿದು ಮುಪ್ಪಿನಲ್ಲಿ ಅವರನ್ನು ಪಾಲನೆಮಾಡುವುದಕ್ಕೂ ಅಂತರವಿದೆಯಲ್ಲ? ಇದು ನಮ್ಮ ಶ್ರದ್ಧೆಯನ್ನು ತೋರಿಸುತ್ತದೆ. ಶ್ರದ್ಧೆ ಭಕ್ತಿಯ ಇನ್ನೊಂದು ರೂಪಕೂಡ ಹೌದು. ಆದರೆ ಇದು ದೇವರಮೇಲಿನ ಭಕ್ತಿಯಲ್ಲಿ; ಮಾಡುವ ಕೆಲಸದಲ್ಲೇ ದೇವರನ್ನು ಕಾಣುವ ಭಕ್ತಿ!

ಸಮಾಜದಲ್ಲಿ ಎಲ್ಲರಿಗೆ ಮೇಲಾಗಿ ಬೆಳೆಯುವ ಹುಡುಗರಿಗೆ ಕೆಲಸದಲ್ಲಿ ಆಸಕ್ತಿ ಮತ್ತು ಶ್ರದ್ಧೆ ಬೇಕು. ಮಾಡುವ ವೃತ್ತಿಯಲ್ಲಿ ಇವೆರಡೂ ಇದ್ದಾಗ ಆ ಮಾರ್ಗವಾಗಿ ಪ್ರತಿಫಲ ದೊರೆತೇ ದೊರೆಯುತ್ತದೆ. ಹಾಗಂತ ಗುಡ್ಡಕ್ಕೆ ಮಣ್ಣುಹೊರುವ ಕೆಲಸವನ್ನು ಶ್ರದ್ಧೆಯ ಕೆಲಸವಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲಸವನ್ನು ಆಯ್ದುಕೊಳ್ಳುವಾಗ ಹಲವಾರು ಪರಿಮಿತಿಗಳನ್ನು ಅವಲೋಕಿಸಬೇಕಾಗುತ್ತದೆ. ಮರುಭೂಮಿಯ ಬರದ ನಾಡಿನಲ್ಲಿ ಬಾವಿ ತೆಗೆದರೆ ನೀರು ಸಿಗುವುದು ದುರ್ಲಭ ಎಂಬುದು ಹೊರನೋಟಕ್ಕೆ ತಿಳಿದುಬರುವ ವಿಷಯ. ಅನುಭವಿಕರ ಮಾರ್ಗದರ್ಶನ ಪಡೆದು ಆಸಕ್ತಿತಳೆದು ಹಿಡಿಯಬೇಕಾದ ವೃತ್ತಿಗಳ ಪಟ್ಟಿಯಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕು. ಬಾವಿತೆಗೆಯುವವ ಮೂರಡಿ ತೆಗೆದು ನೀರು ಬರಲಿಲ್ಲ ಎಂದು ಬಿಡುವುದಿಲ್ಲ ಹೇಗೋ ಹಾಗೇ ಆಯ್ಕೆಮಾಡಿಕೊಂಡ ವೃತ್ತಿಯಲ್ಲಿ ತಾದಾತ್ಮ್ಯತೆಯಿಂದ ತೊಡಗಿಕೊಂಡು ಸಹನಶೀಲರಾಗಿ ಕೆಲಕಾಲ ಮುನ್ನಡೆಯಬೇಕು. ಹಾಗೊಮ್ಮೆ ಮಾಡಿದ ವೃತ್ತಿಯಲ್ಲಿ ತಕ್ಕ ಪ್ರತಿಫಲ ಕಾಣಿಸದೇ ಹೋದರೆ ಆಗ ಮಾಡಿದ ವೃತ್ತಿಯ ದೋಷಗಳತ್ತ ಕಣ್ಣುಹಾಯಿಸಬೇಕು.

ವಾಡಿಕೆಯಲ್ಲೊಂದು ಗಾದೆಯಿದೆ ’ಎಣ್ಣೆಬರುತ್ತದೆ ಎನ್ನುವಾಗ ಗಾಣಮುರಿಯಿತು’ ಎಂದು ಈ ರೀತಿ ಸೃಷ್ಟಿಸಹಜ ವೈಪರೀತ್ಯಗಳಿಂದ ಅನುಭವಿಸಬೇಕಾಗಿ ಬರಬಹುದಾದ ಕೆಲವು ಪರಿಣಾಮಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕಾಗುತ್ತದೆ. ಗಾಣವನ್ನು ನಾವು ಮೊದಲೇ ಸುಸ್ಥಿತಿಯಲ್ಲಿಟ್ಟುಕೊಂಡಿದ್ದರೆ ಗಾಣ ಮುರಿಯುತ್ತಿರಲಿಲ್ಲವೇನೋ ಅಥವಾ ಮುರಿದುಹೋಗಬಹುದಾದ ಗಾಣದ ಬದಲು ಬೇರೇ ಗಾಣವನ್ನು ಬಳಸಬಹುದಿತ್ತೇನೋ ಎಂಬುದನ್ನು ನಾವು ಲೆಕ್ಕಿಸಬೇಕಾಗುತ್ತದೆ.

ಒಟ್ಟಿನಲ್ಲಿ ಸೂಕ್ತ ಮುಂಧೋರಣೆ, ವೃತ್ತಿ ತಾದಾತ್ಮ್ಯತೆ ಮತ್ತು ತಾಳ್ಮೆ ಈ ಮೂರು ಅಂಶಗಳಿಂದ ಪ್ರೇರಿತರಾಗಿ ಆಸಕ್ತಿ ಮತ್ತು ಶ್ರದ್ಧೆಯನ್ನು ವಹಿಸಿ ಕೆಲಸಮಾಡಿದರೆ ವ್ಯಕ್ತಿ ಗೆದ್ದೇಗೆಲ್ಲುತ್ತಾನೆ. ಆ ಗೆಲುವು ಎಲ್ಲರದಾಗಲಿ ಎಂದು ಹಾರೈಸೋಣ.