ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 30, 2010

ಉಳ್ಳವರಿಗೆ ದಿನವೂ ಹಬ್ಬ !!



ಉಳ್ಳವರಿಗೆ ದಿನವೂ ಹಬ್ಬ !!

ನಮ್ಮ ಜೀವನದಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವಿನ ಹಿಂದೆ ಕನಿಷ್ಟಪಕ್ಷ ಒಬ್ಬ ವ್ಯಕ್ತಿಯ ಕೆಲಸದ ಸಾಧನೆ ಇರುತ್ತದೆ. ಒಮ್ಮೆ ಹಾಗೆ ಕೂತು ಚಿಂತನೆ ಮಾಡಿದರೆ ಆಗ ನಮಗೆ ಕಾಣುವುದು ಮನುಷ್ಯ ತನ್ನ ಬದುಕಿಗಾಗಿ ಇಷ್ಟೆಲ್ಲಾ ಸಾಮಾನು ಸರಂಜಾಮುಗಳನ್ನು ಬಳಸುತ್ತಾನಲ್ಲ, ಒಂದೊಮ್ಮೆ ಯಾರಿಗೂ ಬಿಡುವಿರದಿದ್ದರೆ ಇವನ್ನೆಲ್ಲ ಮಾಡಲಾಗುತ್ತಿತ್ತೇ?-ಅಂತ. ಕೆಲವರು ಕೆಲಸವನ್ನು ನೇರವಾಗಿ ಮಾಡಿದರೆ ಉಳಿದವರು ಅದನ್ನು ಪರೋಕ್ಷವಾಗಿ ಮಾಡುತ್ತಾರೆ, ಯಾಕೆಂದರೆ ಒಂದು ಕಟ್ಟಡದ ನಿರ್ಮಾಣ ಎಂದುಕೊಳ್ಳೋಣ--ಅಲ್ಲಿ ತಂತ್ರಜ್ಞರ ಕೆಲಸವಿದೆ,ಗಣಕಯಂತ್ರದಲ್ಲಿ ನಕ್ಷೆ ಹಾಗೂ ಕಟ್ಟಡದ ಭಾವೀ ರೂಪರೇಷೆಗಳನ್ನು ತಯಾರಿಸಿಕೊಡುವವರ ಕೆಲಸವಿದೆ,ಹಣಕಾಸು-ಖರ್ಚು ವೆಚ್ಚದ ಲೆಕ್ಕಹಾಕಿ ಸಂಭಾವ್ಯ ಬಜೆಟ್ ಮಾಡಿಕೊಡುವವರ ಕೆಲಸವಿದೆ, ಆಮೆಲೆ ಕೂಲಿಗಳು,ಗಾರೆಯವರೌ,ಬಡಗಿಗಳು,ವಿದ್ಯುತ್ ಕೆಲಸದವರು,ಬಣ್ಣದವರು ಹೀಗೆಲ್ಲಾ ಅಂತ ಅನೇಕ ಕೆಲಸವಿರುತ್ತದೆ. ಆ ಕಟ್ಟಡಕ್ಕೆ ಬೇಕಾಗುವ ಪರಿಕರ ಸಾಮಗ್ರಿಗಳನ್ನು ಮತ್ತೆ ಬೇರೆಲ್ಲೊ ಕೆಲಸದ ಮೂಲಕವೇ ತಯಾರಿಸಲಾಗುತ್ತದೆ. ಹೀಗೆ ಒಟ್ಟಾರೆ ಕೆಲಸವನ್ನು ಮಾಡಿದರೇನೇ ಅದಕ್ಕೊಂದು ಫಲ ಸಿಗುತ್ತದೆ.

ಕಾರ್ಮಿಕರು ಅಂದಾಕ್ಷಣ ನಮಗೆ ಕಣ್ಣಿಗೆ ಬೀಳುವುದು ಕಾರ್ಖಾನೆಯ ಕೆಲಸಗಾರರು. ಆದರೆ ಕಾರ್ಮಿಕರಲ್ಲಿ ಕಟ್ಟಡದ ಕೂಲಿ ಕಾರ್ಮಿಕರು ಬಹಳ ನಗಣ್ಯರು. ಎಲ್ಲಿಂದಲೋ ಗುತ್ತಿಗೆದಾರರು ಕರೆದಾಗ ಬರುತ್ತಾರೆ, ಅವರಿಗೆ ಉಳಿದುಕೊಳ್ಳಲು ಜಾಗವೂ ಕಷ್ಟ! ಕಲ್ಲು, ಮಣ್ಣು, ಮರಳು, ಇಟ್ಟಿಗೆ, ಸಿಮೆಂಟು ಇವನ್ನೆಲ್ಲ ಹೊರುತ್ತಾರೆ. ತಮ್ಮ ಚಿಕ್ಕ ಮಕ್ಕಳಿನ ನಾಳಿನ ಭವಿಷ್ಯದ ಕನಸನ್ನು ಹೊತ್ತವರಲ್ಲ ಅವರು! ಇವತ್ತಿನ ಬದುಕು- ಹೊಟ್ಟೆ ತುಂಬಿಸಲು ತುತ್ತು ಸಿಕ್ಕರೆ ಸಾಕು. ಆ ಅನೇಕ ಮಹಲುಗಳನ್ನು, ಆಪಾರ್ಟ್ಮೆಂಟ್ ಗಳನ್ನು ನೋಡುವಾಗ ತುತ್ತಿಗಾಗಿ ಎಷ್ಟೆಲ್ಲಾ ಕೂಲಿಜನರು ಬಂದು ಪರದಾಡುತ್ತ ಅವುಗಳನ್ನು ಕಟ್ಟಲು ಕೆಲಸ ಮಾಡಿರಬಹುದು ಎಂದೆನಿಸುತ್ತದೆ. ಮನೆಯನ್ನು ಕಟ್ಟಿಸಿದವ, ಖರೀದಿಸಿದವ ಆ ಚಿಂತೆಯ ಹಂಗಿಲ್ಲದೆ ಬರೇ ದುಡ್ಡುಕೊಟ್ಟ ಚಿಂತೆಯಲ್ಲೇ ಇರುತ್ತಾನೆ! ಗುತ್ತಿಗೆದಾರ ಕೆಲಸ ಮುಗಿದಮೇಲೆ ಅವರನ್ನೆಲ್ಲ ಅಲ್ಲಿಂದ ಸಾಗಹಾಕುತ್ತಾನೆ.ಆಮೇಲೆ ಬೇರೇಡೆ ಕೆಲಸವಿದ್ದರೆ ಕೆಲಸ ಇಲ್ಲದಿದ್ದರೆ ಕೆಲಸಹುಡುಕುವ ಕೆಲಸ ! ಜಲ್ಲಿ-ಮರಳಿನ ರಾಶಿಗಳಲ್ಲಿ ಅವರ ಚಿಕ್ಕ ಕಂದಮ್ಮಗಳು ಯಾವ ಆಟದ ಸಾಮಗ್ರಿಗಳೂ ಇಲ್ಲದೇ ಸಹಜ ಬಾಲಿಶ ಪ್ರವೃತ್ತಿಯಾದ ಆಟಕ್ಕೆ ಏನೂ ಇಲ್ಲದೇ ಅಳುತ್ತಲೋ ನಿದ್ದೆಮಾಡುತ್ತಲೋ ಏಳುತ್ತ ಬೀಳುತ್ತಲೋ ಇರುತ್ತವೆ.

ಹಿಂದೆ ನಾನೊಂದು ಬಾಡಿಗೆಮನೆಯಲ್ಲಿರುವಾಗ ಅದರ ಎದುರಿನ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಎಲ್ಲಿಂದಲೋ ಕಾರ್ಮಿಕರು ಬಂದರು. ಅವರಪೈಕಿ ಒಂದು ಜೋಡಿಗೆ ನಡೆದಾಡುವಷ್ಟುದೊಡ್ಡದಾದ ಒಂದು ಮಗುವಿತ್ತು. ಸುಮಾರು ೪ ವರ್ಷ ವಯಸ್ಸು ಇರಬಹುದು. ಎದುರಿನ ರಸ್ತೆಯಲ್ಲಿ ಪಕ್ಕದ ಉಳ್ಳವರ ಮನೆಗಳ ಹಲವು ಮಕ್ಕಳು ಸೇರಿಕೊಂಡು ಆಡುತ್ತಿದ್ದರು. ಆ ಮಗುವಿಗೆ ತಾನೂ ಆಡಬೇಕೆಂಬ ಆಸೆ.ತನಗೆ ಚಂಡು ಬೇಕೆಂಬ ಬಯಕೆ! ಆ ಮಗು ಓಡೋಡಿ ಬಂದು ಆ ಆಡುತ್ತಿರುವ ಮಕ್ಕಳ ಜೊತೆ ಆಡಲು ಬಯಸುತ್ತಿತ್ತು. ಆದರೆ ಅವರು ಆ ಮಗುವನ್ನು ತಮ್ಮ ಗುಂಪಿಗೆ ಸೇರಿಸುತ್ತಿರಲಿಲ್ಲ. ಆ ಮಗು ಒಂದೇ ಸಮ ಅಳಲು ತೊಡಗಿತ್ತು. ಅದಕ್ಕೆ ತನ್ನ ತಂದೆ-ತಾಯಿ ಕೂಲಿಯವರು, ನನಗೆ ಇದನ್ನೆಲ್ಲ ತಂದುಕೊಡಲು ಶಕ್ತರಲ್ಲ ಎಂದು ತಿಳಿದಿರಲಿಲ್ಲ! ತನಗೊಂದು ಚೆಂಡು ಬೇಕು, ತಾನೂ ಆಡಬೇಕು. ಅಳುತ್ತಿರುವ ಆ ಮಗುವಿಗೆ ಮಗುವಿನ ಅಮ್ಮ ಬಂದು ಒಂದೇಟು ಕೊಟ್ಟು ಕರೆದುಕೊಂಡುಹೋದಾಗ ನನಗೆ ಕಣ್ಣೀರು ಬಂತು.

ಅದೇ ಪರಿಸರದ ಪಕ್ಕದ ಮನೆಯಲ್ಲಿ ಇರುವ ಚಿಕ್ಕ ಹುಡುಗನ ಹತ್ತಿರ ಒಂದು ಮಕ್ಕಳ ಮೂರು ಗಾಲಿಯ ಸೈಕಲ್ ಇತ್ತು. ಅದನ್ನು ಆತ ಹೊರಗಡೆ ತಂದು ಆಡುತ್ತಿದ್ದ. ಅವರಮನೆಯ ಗೇಟಿನ ಸಂದಿಯಿಂದ ಇನ್ನೊಬ್ಬ ಹುಡುಗ ಸದಾ ಅದನ್ನು ನೋಡುತ್ತಿದ್ದ. ಆತನಿಗೆ ಒಂದೇ ಒಂದುಸಲ ಸೈಕಲ್ ಆಡಬೇಕೆಂಬ ಹಂಬಲ.ತಂದೆ-ತಾಯಿ ತಂದುಕೊಡುವಷ್ಟು ಸ್ಥಿತಿವಂತರಲ್ಲ. ಆತ ಮುಖ ಸಪ್ಪಗೆ ಮಾಡಿಕೊಂಡು ನಿಂತಿದ್ದ, " ಏನಪ್ಪಾ ಮರಿ ಏನಾಗಬೇಕಿತ್ತು ? " ಅಂತ ಕೇಳಿದಾಗ, ಒಮ್ಮೆ ದೃಷ್ಟಿನೆಟ್ಟು ಆಳವಾಗಿ ನನ್ನನ್ನು ನೋಡಿದ ಆತನಿಗೆ ನಾನು ಬಯ್ಯುವವನಲ್ಲ ಎಂಬುದು ಖಾತರಿಯಾದಮೇಲೆ " ಅಂಕಲ್ ನಾನು ಸೈಕಲ್ ಆಡಬೇಕಾಗಿತ್ತು, ಅಲ್ಲಿ ಒಳಗಡೆ ಹೋದ್ರೆ ಆಂಟಿ ಬೈತಾರೆ ಅದಕ್ಕೆ ಸುಮ್ನೇ ಹೀಗೆ ನೋಡ್ತಾ ಇದೀನಿ" ನನಗೆ ಪಾಪ ಅನ್ನಿಸಿತು. ಮಕ್ಕಳಿಗೆ ಏನುತಾನೇ ಗೊತ್ತು?


ಇಂತಹ ಮನಕಲಕುವ ಹಲವು ಸನ್ನಿವೇಶಗಳು ಕೂಲಿಕಾರ್ಮಿಕರ ಬದುಕಲ್ಲಿವೆ. ಅವರು ಬಡತನದಲ್ಲೇ ಹಲವು ಮಕ್ಕಳನ್ನು ಹೆರುತ್ತಾರೆ. ಬೇಗ ದೊಡ್ಡವರಾಗಿ ಎಲ್ಲರೂ ದುಡಿದು ಹೆಚ್ಚು ಕೂಲಿ ಸಂಪಾದಿಸಿ ತಮ್ಮನ್ನು ನೋಡಿಕೊಳ್ಳಲಿ ಎಂಬ ಆಸೆ. ಹಡೆದ ಅನೇಕ ಮಕ್ಕಳಲ್ಲಿ ಹಲವು ಮಕ್ಕಳು ರೋಗರುಜಿನಗಳಿಗೆ ತುತ್ತಾಗಿ ಬಳಲಿ ಅಲ್ಲೇ ಮರಳ ರಾಶಿಗಳ ಮೇಲೆ ಸತ್ತುಹೋಗುತ್ತವೆ, ನಿಸ್ಸಹಾಯ ಕೂಲಿ ದಂಪತಿ ಆ ನೋವನ್ನು ಮರೆಯಲು ಕುಡಿಯುತ್ತಾರೆ. ಮೊನ್ನೆ ಒಬ್ಬ ಅಂಗಡಿಯಲ್ಲಿ ನಿಂತಾಗ ತಾತನೊಟ್ಟಿಗೆ ಒಂದು ಮಗುಬಂತು.ಆ ತಾತ ಹೆಳಿದ " ಒಂದು ೫೦ಪೈಸೆ ಚಾಕ್ಲೇಟ್ ಕೊಡಿ ಸರ್ " ಆಗ ಆ ಮಗು "ತಾತಾ ತಾತಾ ನಂಗೆ ಅದು ಕೊಡ್ಸು ಇದಲ್ಲ ಅದು ಕೊಡ್ಸು " ಅಂತ ಒಂದು ಚಿಕ್ಕ ’ಪರ್ಕ್’ ತೋರಿಸಿ ಅಳುತ್ತಿತ್ತು. ನಾನು ಹೆಳಿದೆ "ಕೊಡಿ ಸರ್ ನಾನು ದುಡ್ಡು ಕೊಡ್ತೇನೆ" ಅಂಗಡಿಯಾತ ತೆಗೆದು ಕೊಟ್ಟಾಗ ಆ ಮಗು ಕುಣಿದು ಕುಪ್ಪಳಿಸಿತು ! ಮಕ್ಕಳ ಲೋಕವೇ ಹಾಗೆ! ಅವರಿಗೆ ತಂದೆತಾಯಿಗಳ ಆರ್ಥಿಕತೆ ಅರ್ಥವಾಗುವುದಿಲ್ಲ. ಅರ್ಥವಾಗುವ ದಿನವನ್ನು ಅವರು ತಲ್ಪುವ ವೇಳೆಗೆ ಅಂದರೆ ೭-೮ ವಯಸ್ಸಿಗೆ ಅವು ಅದೂ ಇದೂ ಕೆಲಸಕ್ಕೆ ತೊಡಗಬೇಕಾದ ಪರಿಸ್ಥಿತಿ.

ಒಬ್ಬರು ಹೇಳಿದ್ರು- ರಾತ್ರಿಯಿಡೀ ಎದುರುಗಡೆ ಕೂಲಿಯವರ ಮಗು ನಿಮಿಷ ಬಿಡದೇ ಕೆಮ್ಮುತ್ತಿತ್ತು, ತಂದೆ-ತಾಯಿ ಎಣ್ಣೆಹಾಕಿಕೊಂಡು ನಿದ್ದೆಯಲ್ಲಿದ್ದರು, ಮಗುವಿನ ಪಾಡುಬೇಡ. ಎಲ್ಲೋ ಎಚ್ಚರವಾದಾಗ ತಂದೆ ಮಗುವಿಗೊಂದು ಹೊಡೆತ ಕೊಟ್ಟು ಬೈದಿದ್ದನ್ನು ಕೇಳಿದೆ. ಮಗು ಕೆಮ್ಮಿನೊಂದಿಗೆ ಅಳುತ್ತಲೂ ಇತ್ತು.ಈ ಕಡೆ ಮನೆಯಲ್ಲಿ ಇದ್ದ ಕೆಮ್ಮಿನ ಔಷಧ ಕೊಡಲು ಹೋದರೆ ಆ ಕುಡುಕ ದಂಪತಿ ತನಗೆ ಬೈದರೆ ಎಂಬ ಭಯ, ಆ ಕಡೆ ಮಗುವಿನ ಸಹಿಸಲಾರದ ಬಳಲುವಿಕೆಯ ಕೆಮ್ಮಿನ ಸದ್ದು. ಇಡೀ ರಾತ್ರಿ ಹಾಗೇ ಕಳೆದಿದ್ದೇನೆ-- ಎನ್ನುತ್ತ ತನ್ನ ಅಸಹಾಯಕತೆಯನ್ನು ಹೇಳಿದರು.

ಹೀಗೇ ಅವರೂ ಮನುಷ್ಯರೇ ನಾವೂ ಮನುಷ್ಯರೇ, ಆದರೆ ಸೌಲಭ್ಯ ವಂಚಿತರ ಅಹವಾಲನ್ನು ಒಮ್ಮೆ ಅವಲೋಕಿಸೋಣ. ಅವರ ಮಕ್ಕಳೂ ನಮ್ಮ ಮಕ್ಕಳಂತೆಯೇ. ಮಕ್ಕಳ ಮನಸ್ಸು ಮುಗ್ಧ. ಅವುಗಳಿಗೆ ಆಸ್ತಿ-ಅಂತಸ್ತಿನ ಗೊಡವೆ ಇಲ್ಲ.


ನಮ್ಮಲ್ಲಿ ಅನೇಕರು ನಾವು ಜನ್ಮದಿನ, ಆದಿನ ಈ ದಿನ ಅಂತೆಲ್ಲಾ ಬಹಳ ದುಂದುವೆಚ್ಚಮಾಡುತ್ತೇವೆ. ವಿವಿಧ ತಿಂಡಿ,ಪಾರ್ಟಿ, ಸ್ವೀಟು, ಗಿಫ಼್ಟು ಎಂದು ಖರ್ಚುಮಾಡುತ್ತೇವೆ, ಅದರ ಬದಲಿಗೆ ಆ ಜನ್ಮದಿನದಂದು ಇಂತಹ ಕೂಲಿಗಳ ಮಕ್ಕಳಿಗೆ, ಅನಾಥಾಶ್ರಮದ ಮಕ್ಕಳಿಗೆ ತಿಂಡಿ,ಬಟ್ಟೆ, ಆಟಿಕೆ ಏನಾದರೂ ಕೊಡಿಸುವುದರಲ್ಲಿ ಆಚರಿಸಿದರೆ ಅದು ಎಷ್ಟು ಅರ್ಥಪೂರ್ಣ ಅಲ್ಲವೇ ? ಇತ್ತೀಚೆಗೆ ಒಬ್ಬರ ಮನೆಯಲ್ಲಿ ಕೆಲವು ಪಠ್ಯಪುಸ್ತಕಗಳು-ನೋಟ್ ಬುಕ್ ಗಳ ರಾಶಿ ನೋಡಿದೆ. ಅವರದ್ದೇನೂ ಅಂಗಡಿಯಿರಲಿಲ್ಲ. ಆದರೂ ಅಷ್ಟೆಲ್ಲಾ ಏಕೆ ಎಂದು ನಾನು ವಿಚಾರಿಸಿದೆ, ಯಾವುದನ್ನೂ ಹೇಳಿಕೊಳ್ಳದ ಆತ ಅಂತೂ ಕೊನೆಗೊಮ್ಮೆ ಹೇಳಿದ್ದು, ನನ್ನ ಮಗನ ಜನ್ಮದಿನದಂದು ನಾವು ಅನಾಥಾಶ್ರಮದ ಮಕ್ಕಳಿಗೆ ಒಂದುದಿನದ ಊಟ ಮತ್ತು ಈ ಪುಸ್ತಕಗಳನ್ನು ಕೊಡುತ್ತೇವೆ ಎಂದು. ಎಂತಹ ಆದರ್ಶಪ್ರಾಯ ಗುಣ! ನಮ್ಮ ನಡುವೆಯೇ ಎಲೆಮರೆಯ ಕಾಯಿಯಂತೆ ಇರುವ ಇಂಥವರು ಇದ್ದಾರೆ, ಆದರೆ ಸಂಖ್ಯೆ ತೀರಾ ವಿರಳ !

ಎಷ್ಟೋ ಜನ ಚಟಗಳಿಗಾಗಿ ದಿನವೂ ಸಹಸ್ರಾರು ರೂಪಾಯಿ ವ್ಯಯಿಸುತ್ತಾರೆ,ಅಂತಹ ಮಹಾನುಭಾವರಲ್ಲಿ ನನ್ನ ಅರಿಕೆ ಇಷ್ಟೇ-- "ಸ್ವಾಮೀ ನಿಮ್ಮ ಚಟಕ್ಕೆಂದು ಉಪಯೋಗಿಸುವ ನೂರು ರೂಪಾಯಿಗಳಲ್ಲಿ ಕೇವಲ ಒಂದು ರೂಪಾಯಿಯನ್ನು ಬಡಮಕ್ಕಳ ಖರ್ಚಿಗೆ ಎತ್ತಿಡಿ.ಅಂಥವರನ್ನು ಕಂಡು ಅವರ ಕೈಗೆ ವಸ್ತು-ಆಹಾರ-ಬಟ್ಟೆ-ಆಟಿಕೆ ಈ ರೂಪಗಳಲ್ಲಿ ಕೊಡಿ,ಹಲವು ಚಟಗಳಲ್ಲಿ ಇದೂ ಒಂದು ಎಂದು ತಿಳಿದುಕೊಳ್ಳಿ,ಇದರಿಂದ ನಿಮಗೆ ಪುಣ್ಯ ಲಭಿಸೀತು! ನೀವು ಕಳೆಯುವ ಹಣ ದ್ವಿಗುಣವಾಗಿ ನಿಮ್ಮ ಕೈಗೆ ಮರಳೀತು !"


ನಮ್ಮ ಹಳ್ಳಿಯಲ್ಲಿ ಹಿಂದೊಮ್ಮೆ ನೋಡಿದ್ದು-- ಮದುವೆ ಮನೆಯಲ್ಲಿ ಊಟ ಮುಗಿದಾಗ ಎಂಜಲೆಲೆಗಳನ್ನು ಬಿಸಾಡಿದ ಜಾಗದಲ್ಲಿ ೨-೩ ಜನ ಇದ್ದರು. ಅವರು ಅಲ್ಲಿ ಎಲೆಗಳಲ್ಲಿ ಮಿಕ್ಕುಳಿದ ಸ್ವೀಟು, ಅನ್ನ ಮುಂತಾದ್ದನ್ನು ಎತ್ತಿಕೊಂಡು ಬೇರೆ ಬೇರೆ ಪಾತ್ರೆಗೆ ತುಂಬಿಸಿಕೊಳ್ಳುತ್ತಿದ್ದರು! ಬಹಳ ಬೇಸರವಾಯಿತು. ಅನೇಕರು ಹೆಚ್ಚೆಂದು ಚೆಲ್ಲಿದ ಆಹಾರ, ತಿಪ್ಪೆಗೆ ತೂರಿದ ಆಹಾರ, ಬೀಡಾಡಿ ನಾಯಿಗಳಿಗೆ ಸೇರಬೇಕಾದ ಆ ಆಹಾರ ಭಿಕ್ಷುಕರನ್ನು ಕೈ ಬೀಸಿ ಕರೆದಿತ್ತು. ನನಗೆ ಅಂದೇ ಅನ್ನಿಸಿತ್ತು ನಾವೆಲ್ಲ ವಿನಾಕಾರಣ ದುಂದುವೆಚ್ಚಮಾಡುತ್ತೇವೆ ಎಂದು ! ಇಂತಹ ದುಂದುವೆಚ್ಚಕ್ಕೆ ಕಡಿವಾಣ ಇರಲಿ. ಆರ್ತರಿಗೆ ಹಸಿದವರಿಗೆ ಹಂಚಿತಿನ್ನುವ ಮನೋಭಾವ ಬರಲಿ.


ಅನೇಕ ವರ್ಗದ ಕಾರ್ಮಿಕರೂ ಕೂಡ ಅಸಂಘಟಿತರೇ, ಇವತ್ತು ಅದಕ್ಕೇ ತಮ್ಮ ಉಳಿವಿಗಾಗಿ ಎಲ್ಲರೂ ಅವರವರ ವೃತ್ತಿಪರ ಸಂಘಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಒಳ್ಳೆಯದೇ. ಆದರೆ ಸಂಘಟನೆಗಳೇ ಇಲ್ಲದ ಜನರಿಗೆ ಅವರ ಜೀವನಕ್ಕೆ ಯಾರೂ ದಿಕ್ಕಿರುವುದಿಲ್ಲ. ಅವರು ನಿರಕ್ಷರಕುಕ್ಷಿಗಳಾಗಿ ಜೀವನವೇ ಹೀಗೆ ಎಂದು ನಡೆದಿದ್ದಾರೆ! ಅವರ ಹೆಸರಲ್ಲಿ ಸಿಗುವ ಸರಕಾರೀ ಸೌಲಭ್ಯ ಬೇರಾರದೋ ಪಾಲಾಗುತ್ತಿರುವುದು ವಿಪರ್ಯಾಸ. ಬೀಡಿ ಕಾರ್ಮಿಕರು, ಗುಡಿಕೈಗಾರಿಕೆಯವರು,ಊದುಬತ್ತಿ ಹೊಸೆಯುವವರು ಹೀಗೆ ಹಲವಾರು ರಂಗ ಕಂಡು ಬರುತ್ತದೆ.

ಎಲ್ಲರೂ ದುಡಿಯುವುದು ಹೊಟ್ಟೆಗಾಗಿ. || ಉದರ ನಿಮಿತ್ತಂ ಬಹುಕೃತ ವೇಷಂ || ನಮ್ಮ ನಮ್ಮ ಬದುಕಿಗಾಗಿ ನಮ್ಮಿಷ್ಟದ ರಂಗಗಳನ್ನು ಆಯ್ಕೆಮಾಡಿಕೊಂಡು ಕೆಲಸಮಾಡುತ್ತಿರುತ್ತೇವೆ, ಮಧ್ಯೆಯೇ ಪರರ ಬಗ್ಗೆ, ಕೈಲಾಗದವರ ಬಗ್ಗೆ, ವಿದ್ಯೆಯಿಲ್ಲದೆ ಏನೂಮಾಡಲಾಗದೇ ಇರುವವರ ಬಗ್ಗೆ, ಕೂಲಿಗಳ ಮಕ್ಕಳ ಹಾಗೂ ಅನಾಥ ಮಕ್ಕಳ ಬಗ್ಗೆ ನಮ್ಮ ಕಾಳಜಿ ಇರಲಿ. ಕೂಲಿಯೋರ್ವನಿಗೆ ಏನಾದರೂ ಅವಶ್ಯಕ ವಸ್ತು-ಸಾಮಾನು ಕೊಟ್ಟು [ದುಡ್ಡುಕೊಟ್ಟರೆ ಎಣ್ಣೆಗೆ ಹೋದೀತು !]ನಾವು ಈ ದಿನವನ್ನು ಕಳೆದರೆ ಅದು ನಿಜವಾದ ಕಾರ್ಮಿಕ ದಿನಾಚರಣೆ ! ಇಂತಹದ್ದಕ್ಕೆ ಆದರ್ಶರಾಗಿದ್ದ ದಿ. ಡಾ|ವಿಷ್ಣುವರ್ಧನ್ ಅವರು ಹಾಡಿದ ಹಾಡಿನ ಸಾಲಿನೊಂದಿಗೆ ಲೇಖನ ಪೂರ್ನಗೊಳಿಸಲೇ ?


ತುತ್ತು ಅನ್ನ ತಿನ್ನೋಕೇ ಬೊಗಸೇ ನೀರು ಕುಡಿಯೋಕೇ...
ತುಂಡುಬಟ್ಟೆ ಸಾಕು ನಮ್ಮ ಮಾನಾಮುಚ್ಚೋಕೇ......
ಅಂಗೈಯ್ಯಗಲ ಜಾಗಾ ಸಾಕು ಹಾಯಾಗಿರೋಕೇ ....