ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, October 24, 2010

’ಅನಾತ್ಮಾ’ವಲೋಕನ


’ಅನಾತ್ಮಾ’ವಲೋಕನ

ಮೊನ್ನೆ ಆತ್ಮದ ಬಗ್ಗೆ ಹೇಳಿದೆ. ಇಂದು ಅನಾತ್ಮದ ಬಗ್ಗೆ ಹೇಳುತ್ತಿದ್ದೇನೆ. ಅನಾತ್ಮ ಎಂಬ ಶಬ್ಧಕ್ಕೆ ಇಲ್ಲಿ ಅರ್ಥವನ್ನು ಹೇಳಿರುವುದು ಇದು ಕೇವಲ ಒಬ್ಬರ ಆತ್ಮಕಥೆಯಲ್ಲ ಬದಲಾಗಿ ಹಲವು ಸಾಮಾಜಿಕ ಕಥೆಗಳಂತೇ ಒಬ್ಬ ವ್ಯಕ್ತಿಯ ಅನುಭವಕ್ಕೆ ಬಂದ ಘಟನೆಗಳು ಕಥೆಗಳಾಗಿ ರೂಪುಗೊಂಡಿರುವುದು. ಒಂದರ್ಥದಲ್ಲಿ ಕಾವ್ಯ-ಸಾಹಿತ್ಯರಂಗದ ನನ್ನ ಗುರುಗಳನೇಕರ ಸಾಲಿನಲ್ಲಿ ಕುಳಿತಿರುವ ಡಾ| ಶ್ರೀ ಎಚ್.ಎಸ್. ವೆಂಕಟೇಶಮೂರ್ತಿಗಳ ಕೃತಿ ’ಅನಾತ್ಮಕಥನ’. ಹೆಸರೂ ಸುಂದರವಾಗಿರುವಂತೇ ವಸ್ತುವಿಷಯಗಳ ಹರವೂ ಸುಂದರ, ಅವು ಮನವನ್ನು ಕೆದಕಿ ಕೆರಳಿಸುತ್ತ, ಬಸ್ಸಿನ ಭರ್ತಿಯಾಗಿರುವ ಸೀಟೊಂದರಲ್ಲಿ ಜಾಗಮಾಡಿ ಕುಳಿತುಕೊಂಡ ಹಾಗೇ ಮನದಲ್ಲೇ ಆಸೀನವಾಗಿಬಿಡುವ ಭಾವಬಂಧುರ.

ಬಿಪಿ ವಾಡಿಯಾ ಸಂಭಾಂಗಣದಲ್ಲಿ ಇಂದು ಎರಡನೇಬಾರಿ ಬಿಡುಗಡೆಗೊಂಡ ಕೃತಿ ಇದು. ನಾಲ್ಕುವಾರಗಳ ಹಿಂದೆ ಅಮೇರಿಕಾದಲ್ಲಿ ದಿ| ಶ್ರೀ ಪು.ತಿ.ನ ಅವರ ಮಗಳಮನೆಯಲ್ಲಿ ಒಮ್ಮೆ ಬಿಡುಗಡೆಗೊಂಡ ಕೃತಿ ಕನ್ನಡ ಜನತೆಯ ಸಂಭ್ರಮಕ್ಕೆನ್ನುವಂತೇ ಇಂದು ಇನ್ನೊಮ್ಮೆ ಇಲ್ಲಿ ಸಾಂಪ್ರದಾಯಿಕ ಲೋಕಾರ್ಪಣ ಸಂಸ್ಕಾರವನ್ನು ಕಂಡಿತು. ಅತಿರಥ ಮಹಾರಥರೇ ಮಂಡಿಸಿದ್ದ ಸಭೆಯಲ್ಲಿ ವೇದಿಕೆಯ ಮೇಲೂ ಕೆಳಗೂ ಎಲ್ಲೆಲ್ಲೂ ಗಣ್ಯರದೇ ಸಾಲು ಕಾಣುತ್ತಿತ್ತು. ವೇದಿಕೆಯಲ್ಲಿ ಶ್ರೀ ರವಿಬೆಳಗೆರೆ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಗಿರೀಶ್ ರಾವ್ [ಜೋಗಿ] , ಶ್ರೀ ವಸುಧೇಂದ್ರ ಆಚೀಚೆ ಕುಳಿತಿದ್ದರೆ, ಮಧ್ಯೆ ಶ್ರೀ ವೆಂಕಟೇಶಮೂರ್ತಿಗಳು ಕುಳಿತಿದ್ದರು. ಶ್ರೋತೃಗಳಲ್ಲಿ ಶ್ರೀ ಎಚ್.ಜಿ.ಸೋಮಶೇಖರ ರಾವ್, ಶ್ರೀ ಟಿ.ಎನ್.ಸೀತಾರಮ್, ಶ್ರೀ ನಡಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದ ಹಲವು ಗಣ್ಯರು ಆಸೀನರಾಗಿದ್ದರು. ಅನೇಕ ಬ್ಲಾಗಿಗ ಮಿತ್ರರು ಬಂದಿದ್ದರು ಎಂಬುದು ಬಹಳ ಸಂತೋಷ. ಕಾರ್ಯಕ್ರಮದ ಬಗ್ಗೆ ಹೊಸದಾಗಿ ಬರೆಯುವ ಅವಶ್ಯಕತೆಯಿದೆಯೇ ? ನೀವೇ ಊಹಿಸಿಕೊಳ್ಳಿ ! ಕನ್ನಡ ಸಾರಸ್ವತ ಲೋಕಕ್ಕೆ ಆತ್ಮಕಥನದ ಪರಿಚಯವಿದೆ, ಅದರಲ್ಲಿ ಹಲವು ರೀತಿಯ ಆತ್ಮಕಥೆಗಳೂ ಬಂದಿವೆ. ವಿಭಿನ್ನವಾದ ಶೈಲಿಯಲ್ಲಿ ಅತೀ ಮುದ್ದಾಗಿ ಮತ್ತು ಪುಟ್ಟಪುಸ್ತಕವಾಗಿ ಓದಲು ಬಹಳ ಇಷ್ಟವಾಗುವ ಕೃತಿ ’ಅನಾತ್ಮಕಥನ’. ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶ್ರೀ ಮೋಹನ್ ಅವರಿಗೂ ಹಾಗೂ ಎಚ್ಚರಿಸಿ ಕರೆದೊಯ್ದ ಮಿತ್ರ ಶ್ರೀ ಪರಾಂಜಪೆಯವರಿಗೂ ಒಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನನ್ನ ನೆಚ್ಚಿನ ಶ್ರೀ ಎಚ್.ಎಸ್.ವಿಯವರು ಸ್ವತಃ ಆಗಮಿಸುತ್ತಿದ್ದಂತೇ [ಅಲ್ಲಿಗೆ ತಂದಿಟ್ಟಿರುವ] ಕಾಫೀ ಕುಡಿಯಲು ಆಹ್ವಾನಿಸಿದರು, ಸರಳ,ನಿಗರ್ವೀ ಜೀವನಕ್ಕೆ ಬೇರೆ ಉದಾಹರಣೆ ಬೇಕೆ? ಸಾರಸ್ವತಲೋಕದಲ್ಲಿರುವ ವ್ಯಕ್ತಿ ತನ್ನ ಕೃತಿಗಳ ಬಗ್ಗೆಯೇ ಕೇಂದ್ರೀಕೃತವಾಗದೇ ಬಾಹ್ಯಪ್ರಪಂಚದ, ನಿತ್ಯಜೀವನದ ಬಗ್ಗೆ ಸಹಜವಾಗಿ ಮಾತನಾಡಲು ಹೊರಟಾಗ ಮಾತ್ರ ಎಲ್ಲರಿಗೂ ಅದು ಇಷ್ಟವಾಗುತ್ತದೆ ಎಂಬ ಅವರ ಅನಿಸಿಕೆ ನಿಜಕ್ಕೂ ಸತ್ಯವಷ್ಟೇ ?

ಎಚ್.ಎಸ್.ವಿಯವರ ಜೀವನದಲ್ಲಿ ಆಗಾಗ ಬಂದುಹೋದ ಹಲವಾರು ಪಾತ್ರಗಳು ಕಥೆಗಳಮೂಲಕ ನಮ್ಮ ಬದುಕಿಗೂ ಲಗ್ಗೆಇಟ್ಟುಬಿಡುವುದು ಅವರ ವಿಶಿಷ್ಟ, ಸರಳ ಹಾಗೂ ಅದ್ಬುತ ಶೈಲಿಯ ಮೂಲಕ. ಅನೇಕ ಕವಿ-ಸಾಹಿತಿಗಳನ್ನೂ ಹಾಗೂ ಅವರ ಬದುಕು-ಬರೆಹಗಳನ್ನೂ ಸೇರಿಸಿದಂತೆ ಅವರೇ ಬರೆದಿರುವ ಆತ್ಮಕಥೆಗಳನ್ನೂ ಕೇಳಿದ್ದೇವೆ; ಎಷ್ಟೋ ಇಷ್ಟವಾಗಿದೆ-ಕೆಲವನ್ನು ಓದುವುದೇ ಕಷ್ಟವಾಗಿದೆ. ಆದರೆ ಇಲ್ಲಿ ನಾವು ಅನಾತ್ಮಕಥನವನ್ನು ತೆರೆದರೆ ಆರಂಭದ ಪುಟದಿಂದ ಓದಲು ಶುರುಮಾಡಿದರೆ ಅದು ಅಂತ್ಯವಾಗುವವರೆಗೂ ಪ್ರತೀ ಕಥೆ ಅಥವಾ ಘಟನೆ ನಮ್ಮನ್ನು ಮುಂದೆ ಓದುವಂತೆ ಸೆಳೆಯುತ್ತಲೇ ಹೋಗುತ್ತದೆ ! ಏನಿಲ್ಲಾ ಎಂದರೆ ಎಲ್ಲವೂ ಇದೆ ಎನ್ನುವ ಸಾಂಬಾರ್ ಬಟ್ಟಲು ಅನಾತ್ಮಕಥನ. ನವರಸಗಳನ್ನೂ ಕುಟ್ಟಾಣಿಯಲ್ಲಿ ಹಾಕಿ ಯಾವುದೋ ಆಯುರ್ವೇದದ ಔಷಧವನ್ನು ಅರೆಯುವಂತೇ ಕುಟ್ಟಿ ಸಮ್ಮಿಶ್ರಗೊಳಿಸಿ ತಿನ್ನುವ ಗುಳಿಗೆಗಳನ್ನಾಗಿ ಕೊಟ್ಟಿದ್ದಾರೆ ಎಚ್.ಎಸ್.ವಿಯವರು. ಇದು ಗದ್ಯ ಅನ್ನುವುದಕ್ಕಿಂತ ಕಾವ್ಯಗಳಾಗಬೇಕಿದ್ದ ಅವರ ಕೆಲವು ಅನಿಸಿಕೆಗಳು-ಅನುಭವಗಳು ಗದ್ಯವಾಗಿ ಬರೆಯಲ್ಪಟಿವೆ. ಮನೆಜನ, ದೂರದ ಗೆಳೆಯರು, ಡಾ| ರಾಜಕುಮಾರ್, ಸಿ.ಅಶ್ವತ್ಥ್, ಮೈಸೂರು ಅನಂತಸ್ವಾಮಿ ಮುಂತಾದ ಹಲವರು ಬಂದುಹೋಗುವ ’ವೇದಿಕೆ’ ಅನಾತ್ಮಕಥನ.

ಇಲ್ಲಿ ಪ್ರಾಣಿಗಳಿಗೂ ಮಾನ್ಯತೆಯಿದೆ. ಸಾಕು ಪ್ರಾಣಿಗಳ ಬಗ್ಗೆ ನಾವು ಅಷ್ಟಾಗಿ ಆಲೋಚಿಸುವುದು ವಿರಳವಷ್ಟೇ? ಆದರೆ ಎಚ್.ಎಸ್.ವಿ ಘಟನೆಯೊಂದನ್ನು ಬರೆಯುತ್ತ ರೂಬಿ ಎಂಬ ನಾಯಿಯ ಬಗ್ಗೆ ಬರೆಯುತ್ತಾರೆ. ಕಥೆಗಳ ಬಗ್ಗೆ ನಾನು ಹೇಳುವುದಕ್ಕಿಂತ ಅದನ್ನು ನೇರವಾಗಿ ಓದಿದರೇ ಪರಿಣಾಮ ಸರಿಯಾಗಿರುತ್ತದೆ. ಕೇವಲ ೧-೨ ಘಂಟೆಗಳನ್ನು ಅಥವಾ ಒಂದು ಸಿನಿಮಾ ನೋಡಲೋ ಅಥವಾ ಹೊರಗಡೆ ಸುತ್ತಲೋ ಬಳಸುವ ಸಮಯದ ಭಾಗವನ್ನು ಒಂದುದಿನ ಮೀಸಲಾಗಿರಿಸಿದರೆ ಒಂದೇಒಂದುಸಲ ಆಕಳಿಸದೇ, ಕುಳಿತಲ್ಲೇ ತಲೆ ಓಲಾಡದೇ ಹಿಡಿದಿಟ್ಟು ಓದಿಸಿ ಖುಷಿಕೊಡುವ ಕೃತಿ ಇದು. ಜೀವನದಲ್ಲಿ ಬೇಸರಗೊಂಡ ವ್ಯಕ್ತಿಗೆ ತನ್ನೊಬ್ಬನ ಜೀವನದಲ್ಲಿ ಮಾತ್ರ ಈ ರೀತಿಯಾಯಿತೇ ಎಂಬ ಹಳವಂಡಗಳಿದ್ದರೆ ಅನಾತ್ಮಕಥನವನ್ನು ಓದುವುದರಿಂದ ಎಂತೆಂತಹ ಸನ್ನಿವೇಶಗಳನ್ನು ಎಚ್.ಎಸ್.ವಿ ಅನುಭವಿಸಿದ್ದಾರಪ್ಪ ಎಂಬುದು ಅರಿವಿಗೆ ಬರುತ್ತದೆ. ಈ ಘಟನೆಗಳಂತಹದೇ ಹಲವಾರು ಘಟನೆಗಳು ನಮ್ಮ-ನಿಮ್ಮ ಜೀವನದಲ್ಲೂ ಆಗಿಹೋಗಿರುವುದರಿಂದ, ಆಗುತ್ತಿರುವುದರಿಂದ, ಆಗಬಹುದಾದುರಿಂದ ಕಥೆಗಳು ನಮ್ಮದೇ ಕಥೆಗಳೇನೋ ಅಥವಾ ಘಟನೆಗಳ ಪ್ರತ್ಯಕ್ಷದರ್ಶಿಗಳು ನಾವೂ ಸಹ ಹೌದೇನೋ ಎಂಬ ಅನಿಸಿಕೆ ಮೂಡುತ್ತದೆ. ಆ ಕ್ಷಣದಲ್ಲಿ ಎಚ್.ಎಸ್.ವಿ ಬರಹಗಳು ನಮ್ಮ ದೇಹದ ಕಣಕಣವನ್ನೂ ವ್ಯಾಪಿಸಿ, ವಿಜ್ರಂಭಿಸಿ, ಮನಸ್ಸಲ್ಲಿ ಸಂತಸದ ಮೆರವಣಿಗೆ ಹೊರಡಿಸುವುದರಿಂದ ಯಾವುದೇ ಜಾತ್ರೆಗೆ ಹೋಗಿಬಂದದ್ದಕ್ಕಿಂತಲೂ ನೆಮ್ಮದಿ ಕೃತಿಯನ್ನೋದುವುದರಿಂದ ಸ್ವಾನುಭವಕ್ಕೆ ಸಿದ್ಧಿಸುತ್ತದೆ.
ದೇಶ ತಿರುಗು ಅಥವಾ ಕೋಶ ಓದು ಎಂಬ ಗಾದೆಗೆ ತಕ್ಕುದಾಗಿ ಯಾವುದೇ ಅನುಭವಗಳ ಕೋಶಕ್ಕೂ ಕಮ್ಮಿಯಿರದ ಕೃತಿ ಅನಾತ್ಮಕಥನ.

ಹೇಳಿಬಿಡುತ್ತೇನೆ ಕೇಳಿ: ನಾನು ಶ್ರೀ ಎಚ್.ಎಸ್.ವಿ ಯವರು ಅವರ ’ಪರಸ್ಪರ’ ಬ್ಲಾಗಿನಲ್ಲಿ ಹಾಕಿದ್ದ, ಅಡಿಗರ ಕುರಿತಾದ ಘಟನೆಯೊಂದನ್ನು ಓದಿದ್ದೆ, ಅಡಿಗರು-ಅವರಿಗೆ ಬೆಕ್ಕಿನಮೇಲಿರುವ ಪ್ರೀತಿ-ಅವರು ಮನೆಬದಲಾಯಿಸಿ ಹೋದಾಗ ಬೆಕ್ಕು ಆ ಮನೆಯನ್ನು ತೊರೆದು ಬರದೇ ಇದ್ದುದೇ ಮೊದಲಾಗಿ ಅಳೆ ಎಳೆಯ ಆಪ್ತವಿಚಾರಗಳು ಅದರಲ್ಲಿದ್ದವು. ಅದರ ನಂತರ ’ನಾಣೀಭಟ್ಟನ ಭೂತ’ ಎಂಬ ಅವರ ತಂದೆ ಹಾಗೂ ಅವರ ಕುರಿತಾದ ಕಥೆಯನ್ನೂ ಓದಿದೆ. ಹೀಗೇ ಓದುತ್ತಾ ಓದುತ್ತಾ ಶ್ರೀ ಜಿ.ಎನ್. ಮೋಹನ್ ಅವರು ಅವಧಿಯಲ್ಲಿ ಪ್ರಕಟಿಸಿರುವ, ಎಚ್.ಎಸ್.ವಿಯವರು ಬರೆದಿರುವ ಕೆಲವು ಕಥನಗಳನ್ನೂ ಓದಿದೆ. ಒಂದಕ್ಕಿಂತಾ ಒಂದು ರಸಗವಳ. ವಾರಗಳ ಕಾಲ ಮತ್ತೆ ಬೇರೇನೋ ಹಾಕುತ್ತಾರೇನೋ ಎಂದು ಕಾದಿದ್ದೆ, ಆದರೆ ಅಲ್ಲಿ ಹಾಕಲಿಲ್ಲ ಬದಲಾಗಿ ಅವುಗಳನ್ನೇ ಪೋಣಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ, ಪ್ರಕಾಶಿಸುವ ಇರಾದೆಯನ್ನು ಅವರು ಎಚ್.ಎಸ್.ವಿಯವರಲ್ಲಿ ಹೇಳಿದಾಗ ಎಚ್.ಎಸ್.ವಿಯವರು ಒಪ್ಪಿಕೊಂಡು ಅತ್ಮೀಯವಾಗಿ ಬರೆದ ಲೇಖನಗಳ ಕಟ್ಟು ಅನಾತ್ಮಕಥನ. ಈ ವಿಷಯದಲ್ಲಿ ಮೇಫ್ಲವರ್ ಮತ್ತು ಗುಲ್ ಮೋಹರ್ ಒತ್ತಟ್ಟಿಗೆ ಸೇರಿಸಿ ಈ ಕೃತಿ ಪ್ರಕಾಶಿಸಿದ ಮೋಹನ್ ಅವರಿಗೆ ನಾನು ಆಭಾರಿ.

ಹಳಬರೊಂದಿಗೂ ಎಳಬರೊಂದಿಗೂ ಹೊಂದಾಣಿಕೊಂಡು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ, ಆತ್ಮೀಯತೆಯಿಂದ ಕಾಣುವ ಸಹೃದಯೀ ಕವಿ-ಸಾಹಿತಿಯಾದ ಎಚ್.ಎಸ್.ವಿಗಳು ಮೊಸರು ಕಡೆದು ತೆಗೆದು ತಿನ್ನಲು ಕೊಟ್ಟ ನವನೀತ ಇದು; ಕಾಯಿ-ಬೆಲ್ಲ ತುಂಬಿ ಕರಿದು ಮಟ್ಟಸವಾಗಿ ಜೋಡಿಸಿಟ್ಟು ತಣಿಸಿ ಮೆಲ್ಲಲು ಕೊಟ್ಟ ಮೋದಕ ಇದು. ಸಾಹಿತ್ಯಾಸಕ್ತರು, ಸಜ್ಜನರು, ಕವಿಗಳು, ಬ್ಲಾಗಿಗರು ಅಲ್ಲದೇ ಯಾರೇ ಆಗಲಿ: ಕನ್ನಡ ಬಲ್ಲವರು ಕೊಂಡು ಓದಬಹುದಾದ, ಓದಬೇಕಾದ ಕೃತಿ ’ಅನಾತ್ಮಕಥನ’ .