ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 14, 2010

ಹರಕಂಗಿ ಮಾಬ್ಲೇಶ್ವರ ಪುರಾಣವು

ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಕಾಮಕಾಂಡದ ಕಾವೀಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ಕಾಮಾತುರಾಣಾಂ ನ ಭಯಂ ನ ಲಜ್ಜಾ " ಅಂದರೆ ಕಾಮದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದೂ ಅವನೊಳಗಿನ 'ಕಳ್ಳ ಬೆಕ್ಕು ಇಲಿಹಿಡಿಯಲು' ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ಬಿಡದಿ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಅತೃಪ್ತ ಆತ್ಮದ ಆರ್ತನಾದ ಅವನಿಗೆ ಕೇಳಿಸಿತು . ಈಗ ಆತ್ಮಗಳು ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಅತೃಪ್ತ ಆತ್ಮಗಳದ್ದೂ ಒಂದು ಲೋಕವಿದೆ ಅಂತ ಒಪ್ಪಿಕೊಳ್ಳದಿದ್ದರೂ ದೆವ್ವ-ಭೂತ-ಪಿಶಾಚಾದಿಗಳು ಭುವಿಯಲ್ಲಿ
ಮನೆಮಾಡಿರುವುದಂತೂ ಸತ್ಯ ಎಂದು ಇವತ್ತಿನ ವಿಜ್ಞಾನವೇ ಒಪ್ಪಿಕೊಂಡಿದೆ. ಹೀಗಾಗಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ " ತರುಲತೆಗಳೇ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು??? ................. ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ಆತ್ಮ ಹೀಗೆ ಉತ್ತರಿಸಿತು .

"ನೋಡು ರಾಮ ನಿನ್ನ ತಮ್ಮ ಲಕ್ಷ್ಮಣನಿಂದ ಬಾಣವನ್ನು ತಿಂದು ದೇಹವನ್ನು ತ್ಯಜಿಸಿದ ಲಂಕೆಯ ಹಲವಾರು ರಕ್ಕಸರಲ್ಲಿ ಓರ್ವ ಖೂಳ ರಕ್ಕಸ ನಾನು . ನನ್ನನ್ನು ಹಿಂಡಿ ರಸ ತೆಗೆದು ಬಿಸಾಕುವ ಕಬ್ಬಿನ ಸಿಪ್ಪೆಯಂತೆ ಮಾಡಿದ ಲಕ್ಷ್ಮಣಾದಿಗಳು ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ. ಇರುವುದಕ್ಕೆ ದೇಹವಿರದೇ ನನ್ನಲ್ಲಿರುವ ಬಹಳ ಬಯಕೆಯ ಸುಖೋಪಭೋಗಗಳನ್ನು ಪಡೆಯಲಾರದೇ ಬಹುಕಾಲದಿಂದ ಪರಿತಪಿಸುತ್ತಿರುವೆ. ರಾಮರಾಜ್ಯದಲ್ಲಿ ಇದು ನ್ಯಾಯವೇ ??" ಎಂದು ಕೇಳಿದಾಗ ರಾಮ ಹೇಳಿದ " ಎಲೈ ರಕ್ಕಸಾತ್ಮವೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಬಾಣದಿಂದ ಗತಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ.ಅಲ್ಲಿ ನೀನು ಎಲ್ಲರನ್ನೂ ವಂಚಿಸುತ್ತಾ ನಿನ್ನ ಐಹಿಕ ಭೋಗಗಳನ್ನು ಯಥೇಚ್ಛ ತೀರಿಸಿಕೊಂಡು ಪುನರಪಿ ರೌರವ ನರಕಕ್ಕೆ ಬರುವಷ್ಟು ಪಾಪಗ್ರಸ್ತವಾಗುವಂತೆ ಅನುಗ್ರಹಿಸುತ್ತೇನೆ, ಆ ಮೂಲಕವಾದರೂ ಮತ್ತೆ ಬೇರೆ ಏನಾದರೂ ಆಗಿ ಜನ್ಮಾಂತರಗಳಲ್ಲಿ ಪುಣ್ಯ ಸಂಚಯನ ಮಾಡಿ ಕೊನೆಗೆ ಮಾಮೂಲಿ ಮನುಷ್ಯನಂತೆ ಮರಳಿ ಜನಿಸು "ಎಂದು ಹರಸಿದ . ಅದರ ಪರಿಣಾಮವಾಗಿ ಹುಟ್ಟಿದ ಅವತಾರವೇ ನಮ್ಮ ಕಳ್ಳಕಾವಿಯ ಅವತಾರ.

ತನ್ನ ಅಂಗಿ ಹರಿದಿದ್ದರಿಂದ, ಬೇರೆ ಹೊಲಿಸಿಕೊಳ್ಳಲು ಬಡತನವಿದ್ದದ್ದರಿಂದ ಅದೇ ಹರುಕು ಅಂಗಿಯನ್ನೇ ತನ್ನ ಕಾವ್ಯನಾಮವಾಗಿಸಿಕೊಂಡು ಆದಿಕವಿ ಮಾಬ್ಲೇಶ್ವರ ತನ್ನ ' ಹರಕಂಗಿ ಮಾಬ್ಲೇಶ್ವರ ಪುರಾಣವು ' ವೆಂಬ ಹೆಸರಿನಿಂದ ಈ ಮಹಾಕಾವ್ಯವನ್ನು ಧರೆಯ ಜನರುಪಕಾರಕ್ಕೆ ಲಿಖಿತ ರೂಪದಲ್ಲಿ ಕೊಟ್ಟ. ಇದರ ಫಲಶ್ರುತಿಯಂತೆ ಇದನ್ನು ಓದಿದವರಿಗೆ, ಬೇರೆಯವರಿಗೆ ಓದಲು ಹೇಳಿದವರಿಗೆ, ಓದಿ ಯತಾನ್ ಶಕ್ತಿ ನಗುವವರಿಗೆ , ಇದರ ಸಲುವಾಗಿ ಈ ಮೇಲ್ ಮಾಡಿ ಸ್ನೇಹಿತರನ್ನು ರಂಜಿಸುವವರಿಗೆ, ಕೆಲಸವಿಲ್ಲದೇ ಗಣಕಯಂತ್ರದ ಮುಂದೆ ಕುಳಿತು ಹೊಟ್ಟೆಬರಿಸಿ ಕೊಂಡವರಿಗೆ, ಬಂದ ಹೊಟ್ಟೆ ಕರಗಲೆಂದು ಶತಾಯಗತಾಯ ಪಾರ್ಕಲ್ಲಿ ತಕತಕತಕನೆ ಕುಣಿವವರಿಗೆ, ಇಂತಹ ಪಾಪಾತ್ಮರ ಪಾಪಜನ್ಮದ ಕಥೆ ಕೇಳಿ ಇಹದಲ್ಲಿ ಬಳಲಿ ಬೆಂಡಾಗಿರುವ ನತದೃಷ್ಟ ಕುವರಿಯರಿಗೂ ಇದರಿಂದ ಅವರವರ ಸಂಕಷ್ಟ ನಿವಾರಣೆಯಾಗಿ ಒಳಿತಾಗಲೆಂದೂ ಪುರಾಣ ಸಾರುತ್ತದೆ. ಅದರ ಆಯ್ದ ಭಾಗಗಳನ್ನು ಸಂಪ್ರದಾಯದಂತೆ ಆದಿ-ಅಂತ್ಯಭಾಗಗಳೊಂದಿಗೆ ಯಥಾವತ್ ಇಲ್ಲಿ ಕೊಡಲಾಗಿದೆ--

ಹರಕಂಗಿ ಮಾಬ್ಲೇಶ್ವರ ಪುರಾಣವು

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ರೂಢಿಯೋಳ್ ನಮಗೆ ಮೀಡಿಯದವರ ಬೆಂಬಲವು ನೋಡಿಬಂದಿದೆ ಹಲವು ಬೆಳಕಿಂಡಿಗಳಲಿ ಜಾಡು ಹಿಡಿದು ಝಾಡಿಸಲ್ಕೀ ಲಾಡು ಪಂಚಾ -ಮೃತವ ನಿತ್ಯ ಸತ್ಯದ ಪೂಜೆಯ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಬಿಸಜನಾಭನ ಪೂಜೆ ಕೈಂಕರ್ಯ ಕೈಕಸುಬಿನಿಂ ಪೂರೈಸಿ ಕಪಟದಲಿ ಕನವರಿಸೆ ಪಂಚತಾರಾ ವ್ಯವಸ್ಥೆಯೋಳ್ ಕೆಸರಿಲ್ಲದ ಸರೋವರಂಗಳನು ಕೃತ್ರಿಮ ನಿರ್ಮಿಸಲ್ಕೆ ಮನದಲಿ ಕೆಸರಿಲ್ಲದ ಭಕ್ತರದೋ ತಾವ್ ಬಂದು ಧೊಪ್ಪೆಂದು ಮುಗಿಬಿದ್ದರದಾ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಶಾವಿಗೆ ಬಾತು ಖೀರು ಪರಮಾನ್ನ ಮಾಳಿಗೆಯ ವಸತಿ ಮೃದ್ವಂಗಿ ಕೈಕಾಲು ಹೊಸೆಯಲ್ಕೆ ಚಿತ್ರತಾರೆಯರಿಟ್ಟು ಮಿಗೆ ಎಲ್ಲ ಶಿಷ್ಯಂಗಳ್ಗೆ ಬ್ರಹ್ಮಪದ ಬೋಧಿಸುವೋಲ್ ನೀಮು ಮದುವೆಯಪ್ಪುದು ನಿಮಗೆ ಬಿಟ್ಟಿದ್ದೆನುತ ಕಾವಿಯೋಳ್ ಕಣ್ಕಟ್ವರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವ್ಯಸನದೋಳ್ ತಲೆಕಾಯ್ವರಿಲ್ಲೆನಗೆ ಅದಕೆ ಮಸಿಯ ಬಳಿಯಲುಪಕ್ರಮಿಸಿಹರು ಎಂದು ತಿಳಿಯದೇ
ಸ್ವಯಂಕೃತಾಪರಾಧವಂ ಮಾಡಿ ಸೀಡಿಯಲಿ ಸಕಲರ್ಗೆ ತೋರಿಸಲ್ಕೆ ಭಕುತರೆಲ್ಲ ಹೌಹಾರಿ ಬಿಡದಿಯ ತೊರೆದು
ರಕುತಬಸಿಯುತ ಹಾರೋಡಿ ಹೋದರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪಕಪಕನೆ ಅರ್ಥಮಪ್ಪ ಆಂಗ್ಲಭಾಷೆಯ ಸುಖದಿ ಉಚ್ಚರಿಸುತ್ತ ಮತಿಹೀನ ನಾನಾದೆನೇಂ ಎನುಕೊಳುತ ಮತ್ತೆ ಪುನರಾವರ್ತಿಸದಂತೆ ಎಚ್ಚರೆಚ್ಚರಮಿರುವೆನೆನುತ ಯುಕುತಿಯ ಮೆರೆಯೇಮ್ ಸಂದರ್ಶಕನಿಟ್ಟ ಚಿಲ್ಲರೆ ಪ್ರಶ್ನೆಗಳಿಗೇಂ ಉತ್ತರಿಸುತ ಎಡವಿದ ಕಥೆಯಪೇಳ್ದನು ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!


ಬಿಸಿಲಝಳ ಅಬ್ಬರಿಸೆ ಸುಖವಿಲ್ಲ ದೇಹದಲಿ ಇಸಿದುಕುಡಿದರೆ ಶಾಂಪೇನು ಕಷಾಯವಂ ಶಯ್ಯೆಯೋಳ್
ನಸುನಾಚಿ ಬರ್ಪ ಹಸುಗೂಸ ನೆನೆನೆನೆದು ರಂಜಿತಾನಂದದಿಂದ ಮುಸಲ ಮುದ್ಗಲ ವಜ್ರಾಯುಧಗಳೆಲ್ಲ ಬೀಸಿ ವಕ್ಕರಿಸುವ ನಿರೀಕ್ಷೆಯಂ ಕಳೆದುಕೊಂಡು ನಸುನಕ್ಕು ಮೂರುದಿನ ಲೇಟಾಗಿ ಯೂಟ್ಯೂಬಲೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಏನುತಿಳಿದಿರಿ ನೀಮು ಎನ್ನನೇನು ತಿಳಿದಿರಿ ಆತುರದಿ ನಿರ್ಧರಿಸಬೇಡೀ ಯೆನುತ ಆತುಕೊಂಡಾ ಮಂಚವೆಲ್ಲಂ ಬರೇ ಕಪೋಲಕಲ್ಪಿತಮಕ್ಕು ರಾಶಿಕಾಂಚಾಣಮಂ ನಾ ಸುರಿಯೇ ರಾಜಕೀಯವೇ ಹಾಸುಹೊಕ್ಕಾಗಿರ್ಪ ಆಶ್ರಮದೊಳೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವನಜಮುಖಿಯರು ತಾಮು ಹಲವುಕಾಲದಿ ಇರ್ಪರ್ ಯೆನಗದೆಲ್ಲ ಹೊಸದಲ್ಲವೈ ಯೀಗ ಕಣಜದುಡ್ಡಿನದಾಯ್ತು ಬಹಳ ಜನ ಮುಗಿಬಿದ್ದರದಕೆ ತಾ ಪಾಲು ಕೊಡದಿರ್ಪೆ ಅದಕೀಗಲಂ ಅವರುಗಳ್ ಸಂದಿಯೋಳ್ ಕ್ಯಾಮರಮಿಟ್ಟು ನಡೆಪ ಆಷ್ಟಾಂಗಯೋಗವಂ ಚಿತ್ರೀಕರಿಸಿ ಬಿತ್ತರಿಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪೊರಗೆ ನಮ್ಮನು ನೋಡಿ ಪೊಗಳಲ್ಕೆ ಒಂದು ಕಾಮನ್ ಕಾರಣವಂ ಮುಂದಿಟ್ಟುಮಿಗೆಯಿದಕೆ 'ರಾಜಕೀಯ ಷಡ್ಯಂತ್ರ' ಮೆನುತ ಪೆಸರಿಸುವೋಲ್ ಕೆಲಮಂದಿಯಿರ್ಕು ಅವರ್ಗೆ ಬೇರೆ ಕಸುಬಿಲ್ಲ ನಮ್ಮಂಥ ಬಣ್ಣದ ಕಾವಿಯಂ ಬೆಂಬಲಿಸಲ್ ಭರದಿ ಬರ್ಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಕಾಕಶುಕಪಿಕವಾಗಿ ಪಂದಿನಾಯಿಯದಾಗಿ ಮೇಕೆಕುರಿಮರಿಯಾಗಿ ಏನದರೊಂದಾಗಿ ಮೇಣ್ ಮರಿದುಂಬಿಯಾಗಿ ಹಲವು ಪೂವುಗಳ್ಗೆ ಪರಾಗವನಿಕ್ಕೆ ಕಾವಿಯಂ ಭರದಿ ಅಂಬರದೆತ್ತರಕೇರಿ ಉದ್ಧರಿಪ ಸಸಾರವಲ್ಲದ ಸಂಸಾರಮಿದು ಸಂ-ನ್ಯಾಸ ನ್ಯಾಸದಿಂ ಪೂರ್ಣಗೊಳಿಪೆನೆಂದ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಕುವರಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ

ನಲ್ಲೆಯ ಕೂಡ ಕಳೆವಾರೆ ಒಂದು ದಿನ

ಒಂದು ಭಾನುವಾರ ಹೆಂಡತಿ ಮಕ್ಕಳೊಂದಿಗೆ ಕಳೆಯಲು ಸಮಯವೇ ಇಲ್ಲ ನಮಗೆ ! ಬೆಳಿಗ್ಗೆ ಎದ್ದರೆ ಎಂತೆಂತಹ ವೇಷಗಳನ್ನು ಎದುರಿಸಬೇಕು! ಯಾರ್ಯಾರಿಗೆ ಉತ್ತರಿಸಬೇಕು? ಯಾರ್ಯಾರನ್ನು ಹಾಗೇ ಕಳಿಸಬೇಕು ಇದೆಲ್ಲಾ ತಲೆಯಲ್ಲಿ. ತಿಂಡಿ-ಊಟ ಮಾಡುವಾಗಲೇ ಬೆಲ್ಲು, ಓಹೋ ಯಾರೋ ಬಂದ್ರು ಓಡು ಬಾಗಿಲು ತೆಗಿ ಇದೇ ರಗಳೆ, ಈ ನಡುವೆ ನಡು ನಡುವೆಯೇ ಹೊರಳಿ ಹೊರಳಿ ಹುಟ್ಟಿದ್ದು ಕುರ್ಕುರ್ರೆ ಥರದ ಕಂಗ್ಲೀಷ್ ಹಾಡು [ಕನ್ನಡ-ಇಂಗ್ಲೀಷ್ ಮಿಶ್ರಿತ ಅಂಥ] ಬಹಳ ಹೇಳುವುದೇಕೆ, ಇದೆಲ್ಲಾ ನೀವೂ ಅನುಭವಿಸುವ ಊಟದಲ್ಲಿ ನಡುವೆ ಕೆಲವೊಮ್ಮೆ ಸಿಗುವ ಕಲ್ಲಿನ ಥರ!
ನಲ್ಲೆಯ
ಕೂಡ ಕಳೆವಾರೆ ಒಂದು ದಿನ


ನಲ್ಲೆಯ ಕೂಡ ಕಳೆವಾರೆ ಒಂದು ದಿನ
ಬೆಲ್ಲ ದಂತಹ ಈ ದಿನ
ಅಲ್ಲುಂಟು ಹಲವು ಕಾಣಿಸದಂತ ಅಡತಡೆಯು
'ಕಲ್ಲು ಸಿಗುವ ಊಟದ' ಮನ

ಬರುವ ಹಲವರಿಗೇನು ಭಾನುವಾರವೇ ಬೇಕೇ ?
ಬರಿದೇ ತೊಂದರೆ ಕೊಡಲು ತಿಳಿಯದಾಯ್ತೆ ?
ಕರಿಮೋಡ ಮುಸುಕಿದ ರೀತಿ ಕೆಲಸಗಳು
ಸರಿಹೋಯ್ತು ಇನ್ನೆಲ್ಲಿ ಕುರುಕುರುಕಲು ?

ಹಾಲಿನವ ಬಂದ ಎಣಿಸುತ ಹೋದನಾಗಷ್ಟೇ
ಪೇಪರವ ಬಂದ ಲೆಕ್ಕವ ತೆಗೆಯುತಾ
ರಸ್ತೆ ಕಸದವ ಬಂದ ಅಕ್ಕಾ -ಅಮ್ಮಾ ಎನುತ
ರೊಚ್ಚೆ ಮಗುವಿನದು ಏನೋ ನೆನೆಯುತಾ

'ಅನ್ನದಾನಕೆ ಕೊಡಿರಿ' ಬಂದರಣ್ಣಮ್ಮ ಜನ
ಮುನ್ನ ವಯ್ದಿಹರು ತಿಳಿಯದೆ ಅವರಿಗೆ ?
ಸಣ್ಣ ಹೆಲ್ಪನು ಕೇಳಿ ಸುಬ್ರಾಯ ತಾ ಬಂದ
ಅಣ್ಣಾ ನಮಸ್ಕಾರ ಹೇಗಿದ್ರಿ ಎನುತಾ

ಪಕ್ಕದಾಕೆಗೆ ಎಲ್ಲೋ ಹೋಗುವಾ ಅರ್ಜೆಂಟು
ಸಿಕ್ಕ ಕೆಲಸದ ಲಿಸ್ಟು ರೆಡಿ ತಂದು ತಾನು
ಚೊಕ್ಕಮನದಲಿ ನನ್ನ ಹೆಂಡತಿಯ ಕೈಲಿಕ್ಕಿ
ಬೊಕ್ಕತಲೆಯನ ಕೂಡ ಬುರ್ರನೋಡಿದಳು

" ಏನ್ರೀ ಈ ದಿನ ಅಲ್ಲಿ ಹೊಸ ಸೇಲು-ಡಿಸ್ಕೌಂಟು
ಹೋಗಿ ಬರುವಾ " ಎನಲು ಆಸೆಯಿಂದವಳು
" ಬನ್ರೀ ಇಲ್ಲೇ ನಮ್ಮ ಭಾವಮೈದುನನ ಮದುವೆ"
ಬೇಗ ಕರೆದರು ಗೌಡ್ರು ಭಾವ ಭಂಗಿಯೊಳು

ಮಗನ ಆಟಕೆ ಬೇಕು ಮಿಕ್ಕ ಇಷ್ಟೇ ಇಷ್ಟು
ಮಘಮಘಿಸುವಾ ಸಮಯವೂ
ಗಗನದೆತ್ತರ ರಾಶಿ ಆಟಿಗೆಯ ವಸ್ತುಗಳು
ನಗೆ ಮುಖವು ಬಾಡುವುದು ಮಿತಿಹೇರಲು