ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 25, 2012

ದೀಪಂ ದೇವ ದಯಾನಿಧೇ-೫

ಚಿತ್ರಋಣ: ಶೃಂಗೇರಿ. ಕೋ.ಇನ್

ದೀಪಂ ದೇವ ದಯಾನಿಧೇ-೫

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ವೈದಿಕರು ತನಗೆ ಆಯುಷ್ಯ ಕಮ್ಮಿ ಎಂದು ಅಮ್ಮನಿಗೆ ತಿಳಿಸಿ ಹೊರಟಿದ್ದು ಶಂಕರನಿಗೆ ಕೇಳಿಸಿಬಿಟ್ಟಿತ್ತು! ಬ್ರಾಹ್ಮಣರು ಹೋದಮೇಲೆ ತಾಯಿಯನ್ನು ಬಾಲಶಂಕರ ತಾನೇ ಸಂತೈಸಿದ. ತಾಯಿಯ ಆಂತರ್ಯದ ಅಳಲು ಶಂಕರರಿಗೆ ಅರ್ಥವಾಗಿಹೋಯ್ತು. ಯಾವ ತಾಯಿಯೂ ತನ್ನ ಮಗನಿಗೆ ಕೆಟ್ಟದಾಗುವುದನ್ನೋ ಮಗ/ಮಕ್ಕಳು ಬಳಲುವುದನ್ನೋ ಬಯಸುವುದಿಲ್ಲ.ಕಷ್ಟಕೋಟಲೆಗಳೆಲ್ಲಾ ಏನಿದ್ದರೂ ಮಕ್ಕಳ ಬದಲಾಗಿ ತನಗೇ ಬಂದುಬಿಡಲಿ ಎಂದು ಬಯಸುವ ಮಾತೃಹೃದಯ ಅದು.

"ಅಮ್ಮಾ ನಿನ್ನ ಮನದಲ್ಲಿ ಉಂಟಾಗಿರುವ ವೇದನೆಯನ್ನು ನಾನು ಬಲ್ಲೆ. ಹುಟ್ಟಿದ ಎಲ್ಲಾ ಜೀವಿಗಳಿಗೂ ತಾಯಿ ಎಂಬ ಪ್ರತ್ಯಕ್ಷ ದೇವರನ್ನು ಕರುಣಿಸಿದ ಆ ದೇವರು ಜೀವನವನ್ನು ಆರಂಭಿಸಲು ಬೇಕಾದ ಪ್ರಾಥಮಿಕ ವಿದ್ಯೆಗಳನ್ನೂ ಸಂಸ್ಕಾರಗಳನ್ನೂ ತಾಯಿಯಿಂದಲೇ ಕೊಡಮಾಡುವುದು ಆಶ್ಚರ್ಯಕರ ಸಂಗತಿ. ಆ ವಿಷಯದಲ್ಲಿ ನಿನ್ನಂತಹ ತಾಯಿಯನ್ನು ಪಡೆದ ನಾನು ಧನ್ಯ. ಜಗತ್ತು ಹೇಗೆ ನಡೆಯುತ್ತದೆ ಎಂಬುದನ್ನು ನೀನು ತಿಳಿದುಕೊಂಡೇ ಇದ್ದೀಯ. ಈ ಜಗದಲ್ಲಿ ದಿನನಿತ್ಯ ಹಲವಾರು ಘಟನೆಗಳು ಸಂಭವಿಸುತ್ತಿರುತ್ತವೆ. ಇಲ್ಲಿನ ಯಾವುದೂ ಶಾಶ್ವತವಲ್ಲ. ಸಿಕ್ಕ ಸಮಯವನ್ನು ಭಗವಂತನ ಸೇವೆಗೆ ಸದುಪಯೋಗ ಪಡಿಸಿಕೊಳ್ಳುವುದೊಂದೇ ಉನ್ನತ ಕೆಲಸವಾಗುತ್ತದೆ. ಕ್ಷಣಿಕ ಜೀವನದಲ್ಲಿ ಇದಕ್ಕಿಂತ ಮಹೋನ್ನತ ಭಾಗ್ಯ ಬೇರೇ ಯಾವುದಿದೆ?"

"ಮಗನೇ ಕಂದಾ" ಎನ್ನುತ್ತಾ ಮಗನನ್ನು ಬಾಚಿತಬ್ಬಿಕೊಂಡು ಗಳಗಳನೆ ಅತ್ತುಬಿಟ್ಟಳು ಆರ್ಯಾಂಬೆ. ವಿಶ್ವದಲ್ಲಿ ಮಕ್ಕಳಾಗಲಿಲ್ಲಾ ಎಂಬ ಕೊರಗು ಹಲವರದಾದರೆ ಹುಟ್ಟಿದ ಮಕ್ಕಳ ಕೆಟ್ಟನಡತೆಯಿಂದ ನೋಯುವ ಪಾಲಕರು ಇನ್ನೂ ಹಲವರು. ಉತ್ತಮವಾದ ಮಗುವೊಂದು ತಮ್ಮ ಜೀವನದಲ್ಲಿ ತಡವಾಗಿ ಜನಿಸಿಯೂ ಅಲ್ಪಾಯುಷಿಯಾಗುತ್ತದೆಂದರೆ ಯಾವ ತಾಯಿ ಸಹಿಸಿಯಾಳು. ಕನಸಿನಲ್ಲಿ ಕಂಡ ಭಗವಂತ ಕೇಳಿದ್ದಕ್ಕೆ "ಅಲ್ಪಾಯುವಾದರೂ ಪರವಾಗಿಲ್ಲ ಲೋಕೋಪಕಾರಿಯಾದ ಮಗನೇ ಜನಿಸಲಿ" ಎಂದು ಉತ್ತರಿಸಿದ್ದರು, ಆದರೆ ಮಗ ಹುಟ್ಟಿದಮೇಲೆ ಅಲ್ಪಾಯುಷಿ ಎಂಬುದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗುತ್ತಿರಲಿಲ್ಲ. ಹೀಗೇ ಆ ದಿನ ದುಃಖದ ಕಡಲಲ್ಲೇ ಕಳೆದುಹೋಯಿತು. ಅಮ್ಮನ ದುಃಖ ಅತ್ತೂ ಅತ್ತೂ ಹೊರಬಂದು ಮನಸ್ಸು ಅದನ್ನು ಸಹಿಸಿಕೊಳ್ಳುವ ಸಿದ್ಧತೆ ನಡೆಸುವವರೆಗೆ ಸುಮ್ಮನಿದ್ದ ಶಂಕರ ದಿನವೆರಡು ಕಳೆದು ತನ್ನ ಸನ್ಯಾಸಮಾರ್ಗದ ಸಂಕಲ್ಪವನ್ನು ಪ್ರಕಟಿಸಿಯೇಬಿಟ್ಟ.

"ಅಮ್ಮಾ ನಿನ್ನಲ್ಲಿ ಇವತ್ತು ನನ್ನ ನಿರ್ಧಾರವನ್ನು ತಿಳಿಸಬೇಕಾಗಿದೆಯಮ್ಮ"

"ಏನಪ್ಪಾ ಮಗನೇ ? ನಿನಗೆ ನಾನು ಬೇಡ ಈ ಲೋಕದ ಸಂಸಾರಬಂಧನ ಬೇಡ ಎಂದಲ್ಲವೇ ?"

"ಅಮ್ಮಾ ನಾನು ಸನ್ಯಾಸಿಯಾಗುವ ನಿರ್ಧಾರಕ್ಕೆ ಬಂದಿದ್ದೇನೆ."

ಶಂಕರ ತನ್ನ ಖಂಡಿತವಾದವನ್ನು ಮಂಡಿಸಿದ್ದನ್ನು ನೋಡಿ ಮತ್ತೆ ದುಃಖಿತಳಾದಳು ತಾಯಿ ಆರ್ಯಾಂಬೆ. ಇದ್ದೊಬ್ಬ ಮಗ ಅತೀ ಎಳೆಯವಯಸ್ಸಿನಲ್ಲಿ ಸನ್ಯಾಸಿಯಾಗಿ ತನ್ನನ್ನು ತೊರೆದುಹೋಗುತ್ತಾನಲ್ಲಾ ಎಂಬ ಕೊರಗು ಅವಳದು. ಮಗ ತನಗಾಗಿ ಜೊತೆಗಿರದಿದ್ದರೂ ಲೋಕೋಪಕಾರಕ್ಕಾಗಿಯೇ ಜನಿಸಿದ ಆತನಿಂದ ಏನೇನೆಲ್ಲ ನಡೆಯುವುದೋ ಎಂಬ ಕುತೂಹಲವಿದ್ದರೂ ಅಮ್ಮನಾಗಿ ಮುದ್ದುಮಗು ಶಂಕರನನ್ನು ತೊರೆದು ಜೀವಿಸಲು ಅವಳಿನ್ನೂ ಪೂರ್ಣವಾಗಿ ಸಿದ್ಧಳಾಗಿರಲಿಲ್ಲ. ಯಾವ ತಾಯಿಯೂ ತನ್ನ ಮಗನನ್ನು ಅಗಲಿರುವುದಕ್ಕೆ ಇಷ್ಟಪಡುವುದಿಲ್ಲ, ಒಂದೊಮ್ಮೆ ಆತ ದೂರದಲ್ಲೇ ಇದ್ದರೂ ಸಂಸಾರಿಯಾಗಿ ಸುಖಿಯಾಗಿ ಜೀವನ ನಡೆಸುತ್ತಿರುವ ಸುದ್ದಿಯನ್ನು ತಿಳಿಯುತ್ತಲೇ ಇರುವುದಕ್ಕೆ ತಾಯಿಯಾದವಳು ಬಯಸುತ್ತಾಳೆ.

"ಮಗನೇ, ಅನೇಕ ವರ್ಷಗಳ ತಪಸನ್ನು ನಡೆಸಿ ಅದರ ಫಲವಾಗಿ ನಾವು ನಿನ್ನನ್ನು ಪಡೆದೆವಪ್ಪಾ, ನನಗೋ ಮುಪ್ಪಿನ ವಯಸ್ಸು, ನೀನು ಸನ್ಯಾಸಿಯಾಗಿ ಮನೆಯನ್ನು ತ್ಯಜಿಸಿ ಹೋದರೆ ಯಾರೆಂದರೆ ಯಾರೂ ಇಲ್ಲದ ನನ್ನನ್ನು ನೋಡಿಕೊಳ್ಳುವವರಾದರೂ ಯಾರಪ್ಪಾ?"

ಅಮ್ಮ ಹೇಳುತ್ತಿರುವುದೂ ಹೌದೆನಿಸಿತು ಶಂಕರನಿಗೆ. ವಯಸ್ಸಿನಲ್ಲಿ ರೂಪದಲ್ಲಿ ಚಿಕ್ಕವನಾದರೂ ಅಮ್ಮನ ಸಂಕಟವನ್ನು ಅರಿಯದ ಬಾಲಮನಸ್ಸು ಶಂಕರನದಲ್ಲ! ಅದೇ ಆ ಪ್ರಬುದ್ಧ ಮನಸ್ಸು ಹೊರಜಗತ್ತಿನಲ್ಲಿ ನಶಿಸಿಹೋಗುತ್ತಿರುವ ಸನಾತನ ಧರ್ಮದ ಪುನರುತ್ಥಾನವನ್ನೂ ಮಾಡಬಯಸಿತ್ತು. ಬಲಹೀನವಾದ ಹಿಂದೂಧರ್ಮವನ್ನು ಯಾರೂ ಬಲಶಾಲೀ ಧರ್ಮವೆಂದು ಪ್ರತಿಪಾದಿಸುವ ಕೆಲಸವನ್ನು ಮಾಡುವವರಿರಲಿಲ್ಲ. ತಾನಾದರೂ ಆ ಕೆಲಸವನ್ನು ಕರ್ತವ್ಯವಾಗಿ ನಡೆಸಬೇಕು ಎಂಬುದು ಶಂಕರನ ಗುರಿಯಾಗಿತ್ತು. ಯಾವುದರಿಂದ ಜಗತ್ತಿಗೇ ಒಳಿತಾಗುವುದೋ, ಯಾವುದು ವೇದಗಳ ಭದ್ರಬುನಾದಿಯಮೇಲೆ ನಿಲ್ಲಿಸಲ್ಪಟ್ಟ ಮಾನವ ಸಹಜ ಜೀವನಕ್ರಮ ಎಂಬುದನ್ನು ಅರಿತಿದ್ದ ಶಂಕರ ಅಮ್ಮನಲ್ಲಿ ಮತ್ತೆ ಬಿನ್ನವಿಸತೊಡಗಿದ.

"ಮಗನೇ ಶಂಕರ, ನಿನ್ನನ್ನು ತೊರೆದು ಬದುಕಲು ನನ್ನ ಮನಸ್ಸು ಒಪ್ಪುತ್ತಲೇ ಇಲ್ಲ. ಒಂದೊಮ್ಮೆ ನೀನು ಸನ್ಯಾಸಿಯೇ ಆಗುವುದು ಎಂದು ನಿರ್ಧಾರ ತಳೆದಿದ್ದರೆ ನಾನು ಸತ್ತಮೇಲೆ ಸನ್ಯಾಸ ಸ್ವೀಕರಿಸು" ಎಂದಳು ತಾಯಿ ಆರ್ಯಾಂಬೆ.

ಶಂಕರ ಕ್ಷಣಕಾಲ ಅವಲೋಕಿಸಿದ. ಉಭಯಸಂಕಟದಲ್ಲಿ ಬಳಲಿದ. ಮನುಷ್ಯ ಜೀವನದಲ್ಲಿ ಸಹಜವಾಗಿ ನಾಲ್ಕು ಆಶ್ರಮಗಳು: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಸನ್ಯಾಸದಿಂದ ಮಾತ್ರ ಮೋಕ್ಷಸಾಧನೆಯಾಗುವುದರ ಜೊತೆಗೆ ಲೋಕೋಪಕಾರವೂ ನಡೆಯುತ್ತದೆ. ಪ್ರಯಾಣಿಕರಿಗೆ ದಾರಿಯಲ್ಲಿ ಅಲ್ಲಲ್ಲಿ ನಿಂತು ವಿಶ್ರಮಿಸಿಕೊಳ್ಳಲು ವಿಶ್ರಾಂತಿಗೃಹಗಳಿರುವಂತೇ ಜೀವನದ ಈ ನಾಲ್ಕು ಆಶ್ರಮಗಳಲ್ಲಿ, ಸಾಧನೆ ಬಯಸುವ ವ್ಯಕ್ತಿ ಅಲ್ಲಲ್ಲಿ ನಿಂತು ಮುನ್ನಡೆಯುತ್ತಾನೆ. ಮೊದಲ ಮೂರು ಆಶ್ರಮಗಳನ್ನು ಮುಗಿಸಿ ನಾಲ್ಕನೇ ಆಶ್ರಮಕ್ಕೆ ವ್ಯಕ್ತಿ ಹೊರಳಿದಾಗ ಸಾಂಸಾರಿಕ ಮತ್ತು ಐಹಿಕ ಬಂಧಗಳಿಂದ ಮುಕ್ತನಾಗುತ್ತಾನೆ ಎಂಬುದು ಮನುಸ್ಮೃತಿಯ ಉಲ್ಲೇಖ.

ನ್ಯಾಸ ಎಂದರೆ ತ್ಯಾಗ, ತ್ಯಜಿಸುವುದು ಎಂದರ್ಥ. ಸನ್ಯಾಸ ಎಂದರೆ ಎಲ್ಲವನ್ನೂ ತ್ಯಜಿಸುವುದರ ಮೂಲಕ ವಿರಕ್ತನಾಗಿ ಇಡೀ ದೇಶವೇ/ಲೋಕವೇ ತನ್ನ ಮನೆ, ಸಮಾಜದ ಸತ್ಪ್ರಜೆಗಳೇ ತನ್ನ ಬಂಧುಗಳು ಎಂಬ ಅನಿಸಿಕೆಯಿಂದ, ಸಮಾಜದ ಒಳಿತನ್ನು ಬಯಸುತ್ತಾ, ಕರತಲ ಭಿಕ್ಷೆಯನ್ನು ಸ್ವೀಕರಿಸುತ್ತಾ ಕೆಲವೊಮ್ಮೆ ತರುವೃಕ್ಷಗಳಡಿಯಲ್ಲಿ ಕುಳಿತು ತಪಗೈಯ್ಯುತ್ತಾ ನಡೆಯುವ ಆತನಿಗೆ ಮುಮುಕ್ಷುತ್ವದಿಂದ ಪಡೆವ ಆನಂದಮಯ ಸ್ವರೂಪವೇ ಪರಮೋದ್ದೇಶವಾಗಿರುತ್ತದೆ. ಸಮಾಜದ ಜನರೊಟ್ಟಿಗೇ ಇದ್ದರೂ ಸಮಾಜಕ್ಕೆ ಅಂಟಿಕೊಳ್ಳದೇ ಮೌನವಾಗಿ ಸಮಾಜದ ಆಗುಹೋಗುಗಳನ್ನು ವೀಕ್ಷಿಸುತ್ತಾ ಸರ್ವರ ಹಿತಬಯಸಿ ಮೌನದಲ್ಲೇ ಪ್ರಾರ್ಥಿಸುವ ಆತ ಮೌನಿ-ಮುನಿ. ಸನ್ಯಾಸಿಯಾಗಲು ಸದಾ ಮನುಷ್ಯ ಪ್ರಯತ್ನಿಸುತ್ತಲೇ ಇರಬೇಕು. ಅದು ಆತನ ಕೈಲೇ ಇರುತ್ತದೆ. ಹಾಗೆ ಸದಾ ಬಯಸುತ್ತಿದ್ದರೆ ಕ್ರಮೇಣ ಕ್ರಮೇಣ ಸನ್ಯಾಸಿಯಾಗುವ ಅವಕಾಶ ಸಿದ್ಧಗೊಳ್ಳುತ್ತದೆ.

ತಾನಂತೂ ಮನದಲ್ಲಿ ಸನ್ಯಾಸಿಯೇ ಆಗಿಬಿಟ್ಟಿದ್ದೇನೆ-ಆ ಸಂಕಲ್ಪ ಅದೆಂದೋ ಆಗಿಬಿಟ್ಟಿದೆ. ಮುಪ್ಪಿನ ಅಮ್ಮನಲ್ಲಿ ಮತ್ತೆ ಹೇಗೆ ಪ್ರಾರ್ಥಿಸಲಿ? ಎಂಬುದೇ ಶಂಕರನ ಚಿಂತೆಯಾಗಿತ್ತು. ಶಂಕರನ ವಿಷಯದಲ್ಲಿ ಕಾಣದ ಶಕ್ತಿಯ ಕೈವಾಡವೊಂದು ನಡೆಯಿತೋ ಎಂಬಂತೇ ಘಟನೆಯೊಂದು ನಡೆದುಹೋಯಿತು:

ಶಂಕರ ಎಂದಿನಂತೇ ಒಂದು ಪ್ರಾತಃಕಾಲ ಮನೆಯ ಪಕ್ಕದಲ್ಲೇ ಹರಿಯತೊಡಗಿದ್ದ ಪೂರ್ಣಾನದಿಗಿಳಿದು ಸ್ನಾನಮಾಡುತ್ತಲಿದ್ದ. ಈಜುತ್ತಿರುವಾಗ ಎಲ್ಲಿಂದಲೋ ಮೊಸಳೆಯೊಂದು ಬಂದು ಶಂಕರನ ಕಾಲು ಹಿಡಿದು ನದಿಯ ನೀರಿನಾಳಕ್ಕೆ ಎಳೆದೊಯ್ಯತೊಡಗಿತು. ಮೊಸಳೆಯ ಹಿಡಿತದಿಂದ ಹಾಗೆಲ್ಲಾ ತಪ್ಪಿಸಿಕೊಳ್ಳಲು ಸಾಧ್ಯವೇ? ಗಜೇಂದ್ರನ ಕಾಲು ಹಿಡಿದಾಗ ಗರುಡವಾಹನನೇ ಸ್ವತಃ ಬಂದು ರಕ್ಷಿಸಬೇಕಾಯ್ತೇ ವಿನಃ ಬಲಶಾಲಿಯಾದ ಆನೆಗೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದಮೇಲೆ ಬಾಲಕ ಶಂಕರ ಮೊಸಳೆಯಿಂದ ಪಾರಾಗುವುದು ಸಾಧ್ಯವೇ? ದೈವನಿಯಮದಂತೇ ತನ್ನ ವಯಸ್ಸು ಎಂಟಾಗಿದ್ದುದರಿಂದ ತನ್ನ ಜೀವಿತಾವಧಿ ಮುಗಿದಿದೆ ಎಂದೇ ಶಂಕರ ಭಾವಿಸಿದ.

"ಅಮ್ಮಾ... ಅಮ್ಮಾ" ಎಂಬ ಮಗನ ಆಕ್ರಂದನಕ್ಕೆ ಅಮ್ಮ ಓಡೋಡಿ ಹೊರಗೆ ಬಂದು ಮಗನನ್ನು ಹುಡುಕಿದಾಗ ನದಿಯಲ್ಲಿ ಮೊಸಳೆಯ ಸೆಳೆತದಿಂದ ಬಳಲುತ್ತಿರುವ ಮಗನನ್ನು ಕಂಡು ದಿಗ್ಭ್ರಾಂತಳಾದಳು.

"ಅಮ್ಮಾ ಮೊಸಳೆ ನನ್ನ ಕಾಲನ್ನು ಹಿಡಿದಿದೆ, ನನ್ನು ಅಂತ್ಯಕಾಲ ಸಮೀಪಿಸಿದೆ, ಬದುಕಿನ ಕೊನೆಯ ಕ್ಷಣದಲ್ಲಾದರೂ ಸನ್ಯಾಸಿಯಾಗಲು ಅಪ್ಪಣೆ ಕೊಡು, ಆತುರಸನ್ಯಾಸ ಸ್ವೀಕರಿಸಿ ಭಗವಂತನ ಸ್ಮರಣೆಯೊಂದಿಗೆ ಸದ್ಗತಿ ಪಡೆಯುತ್ತೇನೆ "

ಇದ್ದೊಬ್ಬ ಮಗ ಹೀಗೆ ಬಳಲುತ್ತಿರುವಾಗ ದಿಕ್ಕೇ ತೋಚದಾದ ಆರ್ಯಾಂಬೆಗೆ ಮಗನ ಕೊನೆಯ ಆಸೆಯನ್ನು ನೆರವೇರಿಸುವ ಇಚ್ಛೆಯಾಯಿತು. ಅದನ್ನೇ ಚಿಂತಿಸುತ್ತಿರುವಷ್ಟರಲ್ಲಿ ಅದಾಗಲೇ, ಸನ್ಯಾಸ ಸ್ವೀಕಾರವೆಂದರೆ ಹೇಗೂ ಒಂದು ಜನ್ಮಹೋಗಿ ಮತ್ತೊಂದು ಜನ್ಮ ಪಡೆದಂತೆಯೇ, ಸನ್ಯಾಸ ಪಡೆದಮೇಲೆ ಜೀವಿಸಿದ್ದರೆ ಅದೇ ಹೊಸಜನ್ಮ ಅದಿಲ್ಲಾ ಸತ್ತನಂತರ ಮತ್ತೆ ಸಹಜವಾಗಿ ಇನ್ನೊಂದು ಜನ್ಮ ಎಂಬ ತಿಳುವಳಿಕೆಯನ್ನು ಶಂಕರ ಹೊಂದಿದ್ದ!

"ಅಮ್ಮಾ ಬೇಗ ಅಪ್ಪಣೆಕೊಡು...ಮೊಸಳೆ ಅತಿಯಾಗಿ ನನ್ನನ್ನು ಬಾಧಿಸುತ್ತಿದೆ" ಎನ್ನುವ ಶಂಕರನ ಕೂಗು ಕೇಳುತ್ತಲೇ ಇತ್ತು.

ಸನ್ಯಾಸಿಯಾಗಿಯಾದರೂ ಮಗ ಬದುಕಿದರೆ ಸಾಕು, ಅದು ದೈವೇಚ್ಛೆ ಎಂದುಕೊಳ್ಳುತ್ತಾ ಕಣ್ಣೀರ್ಗರೆಯುತ್ತಾ "ಮಗನೇ ಆಗಲಿ ನೀನು ಸನ್ಯಾಸಿಯಾಗು" ಎನ್ನುತ್ತಾ ಮೂರ್ಛೆಹೋದಳು.

ಬಾಲಕ ಶಂಕರ ಶಂಕರರಾದದ್ದು ಇಲ್ಲಿಯೇ ! ಬಹಳವಾಗಿ ಬಾಧಿಸುತ್ತಿದ್ದ ಪೀಡೆ ತೊಲಗಿದಂತಾಗಿತ್ತು, ಬಹುಶಃ ಐಹಿಕ ಬಂಧನದಿಂದ ಬಿಡುಗಡೆಗೊಳಿಸಲೇ ಬಂದಿತ್ತೋ ಎಂಬಂತೇ ಕಾಲು ಹಿಡಿದು ಪೀಡಿಸುತ್ತಿದ್ದ ಮೊಸಳೆ ಶಂಕರರನ್ನು ಬಿಟ್ಟು ನದಿಯಲ್ಲೆಲ್ಲೋ ಮಾಯವಾಗಿತ್ತು! ಶಂಕರರು ಈಜಿ ದಡಸೇರಿ ಕುಳಿತುಕೊಂಡು ಸುಧಾರಿಸಿಕೊಳ್ಳುತ್ತಿರುವಾಗ ತಾಯಿ ಆರ್ಯಾಂಬೆ ಎಚ್ಚೆತ್ತಳು. ಮಗ ಶಂಕರ ಮೊಸಳೆಯಿಂದ ಪಾರಾಗಿಬಂದು ನದಿಯ ದಡದಲ್ಲಿ ಕುಳಿತುಕೊಂಡಿರುವುದನ್ನು ಕಂಡಳು.

"ಸದ್ಯ ಭಗವಂತ ಪಾರುಮಾಡಿದನಲ್ಲ. ಮಗೂ ಬಾ ಮನೆಗೆ ಹೋಗೋಣ"

"ನಾನು ಸನ್ಯಾಸಿ. ಸನ್ಯಾಸಿ ಸಂಸಾರ-ಸರ್ವಸಂಗ ಪರಿತ್ಯಾಗಿ. ಸನ್ಯಾಸಿ ತನ್ನ ಪೂರ್ವಾಶ್ರಮದ ಮನೆಯಲ್ಲೇ ಇರುವುದು ತರವಲ್ಲ. ನನಗಿನ್ನು ಯಾವಮನೆಯೂ ಇಲ್ಲ"

[ಓದುಗರ ಗಮನಕ್ಕೆ : ಸನ್ಯಾಸಗಳಲ್ಲಿ ಹಲವು ಮಾರ್ಗಗಳಿವೆ. ಅವುಗಳಲ್ಲಿ ಪ್ರಮುಖವೆನಿಸುವುದು ಈ ೨೩ ಮಾರ್ಗಗಳು :

೧. ಬ್ರಹ್ಮ
೨. ಜಾಬಾಲ
೩. ಶ್ವೇತಾಶ್ವತಾರ
೪. ಆರುಣೇಯ
೫. ಗರ್ಭ
೬. ಪರಮಹಂಸ
೭. ಮೈತ್ರಾಯಣಿ
೮. ಮೈತ್ರೇಯಿ
೯. ತೇಜೋಬಿಂದು
೧೦.ಪರಿವ್ರಾಟ ಅಥವಾ ನಾರದಪರಿವ್ರಾಜಕ
೧೧.ನಿರ್ವಾಣ
೧೨.ಅದ್ವಯತಾರಕ
೧೩.ಭಿಕ್ಷು
೧೪.ತುರ್ಯಾತೀತ
೧೫.ಸಂನ್ಯಾಸ
೧೬.ಪರಮಹಂಸ ಪರಿವ್ರಾಜಕ
೧೭.ಕುಂಡಿಕ
೧೮.ಪರಬ್ರಹ್ಮ
೧೯.ಅವಧೂತ
೨೦.ಕಠರುದ್ರ
೨೧.ಯಾಜ್ಞವಲ್ಕ್ಯ
೨೨.ವರಾಹ
೨೩.ಸಾತ್ಯಾಯಣಿ

ಆತುರ ಸನ್ಯಾಸ ಇವೆಲ್ಲವುಗಳಿಗಿಂತ ಹಿರಿದು, ಇವೆಲ್ಲಾ ಕ್ರಮಗಳಲ್ಲಿರುವ ಅತ್ಯುನ್ನತವಾದ ಅಂಶಗಳನ್ನು ಒಳಗೊಂಡಿದ್ದು. ಇನ್ನೇನು ಸಾವು ಬರುತ್ತಿದೆ ಅನ್ನುವಾಗ ಆಕ್ಷಣದಲ್ಲೂ ಸನ್ಯಾಸಿಯಾಗಬೇಕೆಂದು ಹಪಹಪಿಸುವ ವಿರಕ್ತ ಮನೋಸ್ಥಿತಿಗೆ ಮಾತ್ರ ಆತುರ ಸನ್ಯಾಸ ಸಾಧ್ಯ! ಶಿವನೇ ಶಂಕರನಾದ ಶಂಕರರಿಗೆ ಸನ್ಯಾಸವಾಗಲೀ ಗುರುವಾಗಲೀ ಬೇಕೇ ? ಆದರೂ ಲೌಕಿಕವಾಗಿ ನಡೆಯಬೇಕಾಗುವ ಆಚರಣೆಗಳನ್ನು ಜಗತ್ತಿಗೆ ಬೋಧಿಸುವ ಆಚಾರ್ಯರಾಗಿ ಸ್ವತಃ ಅವರೇ ಮಾಡಿತೋರಿಸಿದ್ದಾರೆ. ಶಂಕರರು ಆ ಕ್ಷಣದಲ್ಲಿ ಆತುರ ಸನ್ಯಾಸ ಪಡೆದುಕೊಂಡರೂ ಮುಂದೆ ಗೋವಿಂದಭಗತ್ಪಾದರಿಂದ ದೀಕ್ಷೆಯನ್ನು ಪಡೆದುಕೊಂಡರು ಎಂಬುದನ್ನು ಮುಂದಿನ ಕಂತಿನಲ್ಲಿ ತಿಳಿಯುತ್ತೀರಿ.]

"ಮಗೂ ನೀನಿನ್ನೂ ಚಿಕ್ಕ ಹುಡುಗ. ನಿನಗೆ ಸನ್ಯಾಸವೇ? ಮುಪ್ಪಿನ ನನ್ನನ್ನು ಯಾರು ರಕ್ಷಣೆಮಾಡುತ್ತಾರಪ್ಪಾ? ನಿನ್ನನ್ನು ಬಿಟ್ಟು ಬದುಕಲಾರೆನಪ್ಪಾ ಕಂದಾ. ಅಂತ್ಯಕಾಲದಲ್ಲಿ ನನಗೊದಗಿ ಬರುವವರಾರು ಮಗನೇ? ಬೇಡ ಎನ್ನುವುದಿಲ್ಲ, ನನ್ನ ಅಂತ್ಯವಾದಮೇಲೆ ವಿಧಿಯುಕ್ತವಾಗಿ ನನ್ನ ಅಂತ್ಯವಿಧಿಗಳನ್ನು ಮುಗಿಸಿ ಅಮೇಲೆ ನೀನು ಸನ್ಯಾಸ ಸ್ವೀಕರಿಸು" ಎಂದು ಪರಿಪರಿಯಾಗಿ ಆ ಎಳೆಯ ಬಾಲಕ ಶಂಕರರಲ್ಲಿ ಬೇಡಿಕೊಂಡಳು.

ಶಂಕರರು ಆತುರಸನ್ಯಾಸ ಸ್ವೀಕರಿಸಿ ಆಗಿಬಿಟ್ಟಿತ್ತಲ್ಲ. ಅಮ್ಮ ಈಗ ಅದನ್ನು ಅಲ್ಲಗಳೆಯುವಂತಿರಲಿಲ್ಲ!
"ಅಮ್ಮಾ, ನಾನಿಲ್ಲವಾದರೆ ಅಂತ್ಯಕಾಲದಲ್ಲಿ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ ಎಂದೆಯಾ? ಜಗದ ಎಲ್ಲರನ್ನೂ ರಕ್ಷಿಸುವ ಪರಮಾತ್ಮನಿಗೆ ನೀನೊಬ್ಬಳು ಹೆಚ್ಚೇ? ಭಗವಂತ ನಿನ್ನನ್ನು ನೋಡಿಕೊಳ್ಳುತ್ತಾನೆ. ನಾನಿಲ್ಲವಾದರೇನು ಅವನಿಲ್ಲವೇ? ನಿನ್ನ ಯೋಗಕ್ಷೇಮವನ್ನು ಊರಿನಲ್ಲಿರುವ ನಿನ್ನ ಬಂಧುಗಳು ನೋಡಿಕೊಳ್ಳುತ್ತಾರೆ." ಎಂದರು ಶಂಕರರು.

ಶಂಕರರು ಸನ್ಯಾಸ ಸ್ವೀಕರಿಸಿದ ಸುದ್ದಿ ಊರತುಂಬಾ ವ್ಯಾಪಿಸಿತು. ಅನೇಕಜನ ಬಾಲಸನ್ಯಾಸಿಯನ್ನು ಹತ್ತಿರದಿಂದ ನೋಡಿ ಮಾತನಾಡಿಸಲು ಬಂದರು. ಹಾಗೆ ಬಂದ ಊರ ಬಂಧು-ಮಿತ್ರರಲ್ಲಿ ಅಮ್ಮನ ಯೋಗಕ್ಷೇಮವನ್ನು ನೋಡಿಕೊಳ್ಳುವಂತೇ ಶಂಕರರು ವಿನಂತಿಸಿದರು. ಶಂಕರರು ಲೋಕಸೇವೆಗೆ ಹುಟ್ಟಿದ ಮಗುವೆಂಬುದು ಆರ್ಯಾಂಬೆಗೆ ಅನಿಸದೇ ಇರಲಿಲ್ಲ. ಈಶ್ವರ ಸಂಕಲ್ಪದಂತೇ ಹುಟ್ಟಿದ ಆತನನ್ನು ತಾನಿನ್ನು ತಡೆಯಲು ಹಕ್ಕುದಾರಳಲ್ಲ ಎಂಬ ಭಾವನೆಯಿಂದ ಉಮ್ಮಳಿಸಿ ಬರುತ್ತಿರುವ ದುಃಖವನ್ನೂ ಹತ್ತಿಕ್ಕಿದಳು. ಬಳಿಕ ಶಂಕರರು ತಾಯಿಯ ಬಳಿಗೆ ನಡೆದುಬಂದು ಸಾಷ್ಟಾಂಗ ನಮಸ್ಕಾರ ಮಾಡಿ,

"ಅಮ್ಮಾ ನನ್ನನ್ನು ಆಶೀರ್ವದಿಸು. ಜ್ಞಾನಮಾರ್ಗದಿಂದ ಸಿದ್ಧಿಪಡೆಯಲೆಂದು ಹರಸು" ಎಂದು ಪ್ರಾರ್ಥಿಸಿದರು.

|| ಸರ್ವವಂದ್ಯೇಣ ಯತಿನಾಂ ಪ್ರಸೂರ್ಮಾತಾ ಪ್ರಯತ್ನತಃ || ಈ ಲೋಕದ ಯಾವುದೇ ಋಣವೂ ತೀರಿಹೋಗಬಹುದು ಆದರೆ ಹೆತ್ತಮ್ಮನ ಋಣವನ್ನು ಮಾತ್ರ ಸನ್ಯಾಸಿಯೂ ತೀರಿಸಲಾರ ಎನ್ನುತ್ತದೆ ಸಂಸ್ಕೃತದ ಈ ಉಲ್ಲೇಖ. ಸಾಕ್ಷಾತ್ ಜಗದ್ಗುರುಗಳೂ ಕೂಡ ಪೀಠದಲ್ಲಿ ವಿರಾಜಮಾನರಾಗಿರುವಾಗ ಅಮ್ಮನಿಂದ ಮಾತ್ರ ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ನನಗೆ ಗೊತ್ತಿರುವ ಒಂದು ಮಠದಲ್ಲಿ ಹಿಂದಕ್ಕೆ ಸ್ವಾಮಿಗಳಾಗಿದ್ದವರ ತಾಯಿ ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಮಗನ ನೆನಪು ಅತಿಯಾಗಿ ಬಾಧಿಸಿದಾಗ ಬಂದು ಕಾಣುತ್ತಿದ್ದರಂತೆ. ಮುಖಾಮುಖಿಯಾದಾಗ ಸ್ವಾಮಿಗಳು ಅವರನ್ನು ಎಲ್ಲಾ ಶಿಷ್ಯರಂತೆಯೇ ಕಂಡರೂ ಅಮ್ಮನಿಗೆ ನಮಸ್ಕರಿಸುತ್ತಿದ್ದರೇ ವಿನಃ ಅಮ್ಮನಿಂದ ನಮಸ್ಕಾರ ಪಡೆಯುತ್ತಿರಲಿಲ್ಲವಂತೆ. ಅಷ್ಟಾಗಿಯೂ ಸ್ವಾಮಿಗಳು ಪೀಠದಿಂದಿಳಿದು ಸ್ನಾನಕ್ಕೋ ಜಪ-ತಪಕ್ಕೋ ತೆರಳಿದಾಗ ಆದಿಶಂಕರರು ಸ್ಥಾಪಿಸಿದ ದಿವ್ಯ ಪೀಠಕ್ಕೆ ಈ ಸ್ವಾಮಿಗಳ ತಾಯಿ ನಮಸ್ಕಾರ ಮಾಡುತ್ತಿದ್ದರಂತೆ! ಇದು ಸನ್ಯಾಸಿಗಳ ಜೀವನದಲ್ಲಿ ನಡೆಯಬಹುದಾದ ಕ್ರಮ.

ಆರ್ಯಾಂಬೆ ಕಣ್ಣೀರಿಡುತ್ತಾ "ಮಗನೇ, ನಾನು ಸಾಯುವುದಕ್ಕೆ ಮೊದಲು ಒಮ್ಮೆಯಾದರೂ ನಿನ್ನನ್ನು ನೋಡಲು ಸಾಧ್ಯವೇನಪ್ಪಾ ?" ಎಂದು ಗದ್ಗದಿತಳಾಗಿ ಕೇಳಿದಳು.

ತಾಯಹೃದಯವನ್ನು ಮೊದಲೇ ಅರಿತಿದ್ದ ಶಂಕರರು,

"ಅಮ್ಮಾ, ನಿನ್ನ ಅಂತ್ಯಕಾಲದಲ್ಲಿ ನನ್ನನ್ನು ಸ್ಮರಿಸಿಕೋ, ಯೋಗಶಕ್ತಿಯಿಂದ ನಾನು ನಿನ್ನಲ್ಲಿಗೆ ಧಾವಿಸಿಬರುತ್ತೇನೆ. ಅಂತ್ಯಕಾಲದಲ್ಲಿ ನಿನ್ನ ಸೇವೆಮಾಡುವ ಭಾಗ್ಯ ನನಗೆ ಭಗವಂತ ಅನುಗ್ರಹಿಸಲಿ ಎಂದು ಆತನಲ್ಲಿ ಪ್ರಾರ್ಥಿಸುತ್ತೇನೆ. ಮರಣಾನಂತರ ನಿನ್ನ ಅಂತ್ಯವಿಧಿಯನ್ನು ನೆರವೇರಿಸಲು ನೆರವಾಗುತ್ತೇನೆ. ನನ್ನ ಸನ್ಯಾಸ ಸಫಲವಾಗಲಿ ಎಂದು ಆಶೀರ್ವದಿಸಮ್ಮ" ಎಂದರು.

ಮರುದಿನ ತಾಯಿಯ ಕೈಯಾರೆ ಕಾಷಾಯವಸ್ತ್ರ ತರಿಸಿ ಸ್ವೀಕರಿಸಿ ಧರಿಸಿಕೊಂಡ ಶಂಕರರು ತಾಯಿಯ ಮನಸ್ಸು ಭಗವಂತನಲ್ಲಿ ತಲ್ಲೀನವಾಗಲಿ ಎಂಬ ಕಾರಣಕ್ಕಾಗಿ ಹೊರಡುವುದಕ್ಕೂ ಮುನ್ನ ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹವೊಂದನ್ನು ಸ್ಥಾಪಿಸಿ "ಅಮ್ಮನನ್ನು ನೀನೇ ನೋಡಿಕೋ" ಎಂದು ಪ್ರಾರ್ಥಿಸಿದರು.

ಕಾಲಟಿಯ ಕೇಶವ ದೇವಸ್ಥಾನಕ್ಕೆ ಬಂದು ಅಲ್ಲಿ ಪ್ರಾರ್ಥಿಸಿದರು. ಸೇರಿದ್ದ ಊರ ಜನರಿಗೆ ಬಾಲಸನ್ಯಾನಿ ಶಂಕರರು ಎಲ್ಲಿಗೆ ಹೋಗುವರೆಂಬುದೇ ತಿಳಿಯದಾಯಿತು! "ಕೀರ್ತಿಶಾಲಿಯಾಗು ಮಗನೇ" ಎಂಬ ಅಮ್ಮನ ಅಶೀರ್ವಾದವನ್ನು ಹೊತ್ತ ಶಂಕರರು ಧರ್ಮದಿಗ್ವಿಜಯವನ್ನು ಆರಂಭಿಸಿದ್ದರು! ಕಾಲಟಿಯಲ್ಲಿ ಪುರಜನರು ಪರಿಜನರು ಅಬಾಲವೃದ್ಧರಾದಿಯಾಗಿ ಎಲ್ಲರೂ ಬಾಲಸನ್ಯಾಸಿಯನ್ನೇ ನೋಡುತ್ತಿದ್ದರು. ಎಲ್ಲರಲ್ಲೂ ಹೇಳಿಕೊಳ್ಳಲಾಗದ ದುಗುಡ, ಅತಂಕವಿತ್ತು; ಬಾಲ ಶಂಕರರನ್ನು ಬಹಳಕಾಲ ಬಿಟ್ಟಿರಲಾರದ ಅನ್ಯೋನ್ಯತೆಯಿತ್ತು. ಎಲ್ಲರೂ ನೋಡುತ್ತಿರುವಂತೆಯೇ ಜ್ಞಾನದಾಹಿಯಾದ ಶಂಕರರು ಕಾಡಿನ ದಾರಿ ಹಿಡಿದು ಮುನ್ನಡೆದರು. ಭರತಭೂಮಿಯ ಪುಣ್ಯದ ಫಲವಾಗಿ ಮಹಾನ್ ದಾರ್ಶನಿಕನೊಬ್ಬನ ಉಗಮವಾಗಿತ್ತು. ಅದು ದೈವೀ ಸಂಕಲ್ಪವಾಗಿತ್ತು. ನವಸಿದ್ಧಾಂತವೊಂದನ್ನು ಪ್ರತಿಪಾದಿಸುವ ಮಹಾಪುರುಷನೊಬ್ಬ ಬಾಲಶಂಕರನಾಗಿ ದಟ್ಟಕಾನನದೆಡೆಗೆ ನಡೆದ.


ಬಾಲಕ ಶಂಕರ ಮಾತೆಗೆ ನಮಿಸುತ
ಕಾಲದಿ ಬೇಡಿದ ದೀಕ್ಷೆಯನು |
ಆಲಯಗಳೇ ತನ್ನರಮನೆಯೆನ್ನುತ
ಜಾಲದಿ ಮುಕ್ತಿಯ ಬಯಸಿದನು ||

ಕಾಲಟಿ ಗ್ರಾಮದ ಪೂರ್ಣಾನದಿಯೊಳು
ಕಾಲನು ಮೊಸಳೆಯು ಹಿಡಿದಿರಲು |
ವಾಲುತ ನೀರೊಳಗಮ್ಮನ ಕರೆದೂ
ಕಾಲನ ಧರ್ಮವನರುಹಿದನು ||

ಆಲಿಸಿ ಮರುಗಿದ ಅಮ್ಮನ ಕರುಳಿಗೆ
ಪಾಲಿಸೆ ನ್ಯಾಸವ ನೀಡೆನಲು |
ಸೋಲುತಲೊಪ್ಪಿದ ತಾಯಿಗೆ ಮೂರ್ಛೆಯು
ಲೀಲೆಯು ಮಕರವು ತೊಲಗಿಹುದು!

ಮೇಲೇಳುತ ಸನ್ಯಾಸಿಯು ನಡೆದನು
ಮೂಲದ ರೂಪವ ಕಾಣುವೊಲು |
ಬಾಲನ ಬಿಟ್ಟಿರಲಾರದ ಜನತೆಯು
ಕಾಲಟಿಯಲಿ ಕಣ್ಣೀರ್ಗರೆದು ||

ಜಯಜಯ ಶಂಕರ ಹರಹರ ಶಂಕರ
ಜಯಜಯ ಶಂಕರ ಪಾಲಯ ಮಾಂ |
ಜಯಜಯ ಶಂಕರ ಭವಬಂಧನಹರ
ಜಯಜಯ ಶಂಕರ ರಕ್ಷಯ ಮಾಂ ||