ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 29, 2011

ಚಳಿಗಾಲದ ಒಂದು ದಿನ !


ಚಳಿಗಾಲದ ಒಂದು ದಿನ !
[ಬರಹಗಳು ತ್ವರಿತಗತಿಯಲ್ಲಿ ಪ್ರಕಟಿಸಲ್ಪಟ್ಟಿವೆ, ಓದುಗ ಮಿತ್ರರು ಹಿಂದಿನ ಕೃತಿಗಳನ್ನೂ ಓದಬಹುದು. ಪ್ರಸಕ್ತ ಈ ಲೇಖನ ಯಾವುದೇ ಶಿಕ್ಷಕರನ್ನು ಹೀಗಳೆಯುವ ಕ್ರಮವಲ್ಲ, ಬದಲಾಗಿ ಅಂದಿನ ನಮ್ಮ ಆಗುಹೋಗುಗಳಲ್ಲಿ ಅನುಭವಿಸಿದ ಮಜದ ಮಜಲುಗಳನ್ನೊಳಗೊಂಡಿದ್ದಷ್ಟೇ. ಎಲ್ಲಾ ಶಿಕ್ಷಕರ ಮೇಲೂ ನನಗೆ ಅಪಾರ ಗೌರವವಿದೆ, ಸಹಾನುಭೂತಿ ಇದೆ. ಹೀಗಾಗಿ ಶಿಕ್ಷಕ ಓದುಗರು ಇದನ್ನು ಅನ್ಯಥಾ ಭಾವಿಸದೇ ತಾವೂ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ತಂದುಕೊಳ್ಳಬಹುದಾಗಿದೆ.]

ಯಾವಾಗ ನೋಡಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವ ಮಾಸ್ತರಮಂದಿ ಸಾಮಾನ್ಯವಾಗಿ ನಿಬಂಧ ಅಂತ ಬರೆಸುವಾಗ ಅವರ ಮೊಟ್ಟ ಮೊದಲ ಆಯ್ಕೆ ’ಮಳೆಗಾಲದ ಒಂದು ದಿನ’. ಹಳ್ಳಿಯ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಳೆಗಾಲದಲ್ಲಿ ಆಗುವ ತೊಂದರೆಗಳು ಹಳ್ಳಿಯ ಮೂಲದ ಬಹುತೇಕರಿಗೆ ಗೊತ್ತು. ಅಲ್ಲಿನ ಹಳ್ಳ-ದಿಣ್ಣೆಗಳು, ಗದ್ದೆ-ಬದುವುಗಳು, ತೋಟತುಡಿಕೆಗಳ ಅಕ್ಕಪಕ್ಕದಲ್ಲೆಲ್ಲೋ ಇರುವ ಕಾಲುದಾರಿಗಳಲ್ಲಿ ಸಾಗಿ ಮುಖ್ಯ ಮಣ್ಣು ರಸ್ತೆಗೆ ತಲುಪಿ ಆ ದಾರಿಯಾಗಿ ಶಾಲೆಗೆ ಹೋಗುವಾಗ ಹಲವು ಸಮಸ್ಯೆಗಳ ಉದ್ಭವ ಆಗುವುದುಂಟು. ಅದನ್ನೇ ಆಧರಿಸಿ ಅನಾದಿ ಕಾಲದ ಯಾರೋ ಮೇಷ್ಟ್ರು ಆರಂಭಿಸಿದ ಆ ಹೆಸರಿನ ಕಥಾನಕ ಇನ್ನೂ ಮುಗಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗಬೇಕು! ಕನ್ನಡ ವ್ಯಾಕರಣದ ಭಾಗವಾಗಿ ನಿಬಂಧ ಬರೆಯುವ ದಿನ ಬಂತೆಂದರೆ ಅಂದು ’ಮಳೆಗಾಲದ ಒಂದು ದಿನ’ದ ಕಥೆ ಬರುವುದು ಒಂದು ಶಾಸ್ತ್ರವೋ ಸಂಪ್ರದಾಯವೋ ಎಂಬಂತೇ ಈ ಅಂಧಾನುಕರಣೆ !

ಆ ಕಾಲದಲ್ಲೇ ’ಮಳೆಗಾಲದ ಒಂದು ದಿನ’ ಕೆಲವು ಮಾಸ್ತರ ಮಂದಿಗೆ ಚಳಿ ಬಿಡಿಸುವ ಆಲೋಚನೆ ಇರುತ್ತಿದ್ದ ವಿರೋಧೀ ವಿದ್ಯಾರ್ಥಿ ಬಣಗಳು ಇರುತ್ತಿದ್ದವು! ಹಾಗಂತ ಅಂಥಾ ಕಟು ದ್ವೇಷವೆಂದಲ್ಲ, ಆದರೂ ಅಲೋಪಥಿಕ್ ಮಾತ್ರೆಗಳನ್ನು ನುಂಗುವ ಕ್ರಾನಿಕ್ ಡಿಸೀಸ್ ಇರುವ ಜನರಹಾಗೇ ಮಾಸ್ತರಮಂದಿ ಕೊಟ್ಟ ಲತ್ತೆಗಳನ್ನು ತಿಂದೂ ತಿಂದೂ ಬೇಸರವಾಗಿ ಯಾವಾಗ ಮಾಸ್ತರ ಮಂದಿಗೆ ಚಳಿ ಬಿಡಿಸುವುದು ಎಂದು ಒಳಗೊಳಗೇ ಹಲ್ಲುಮಸೆಯುತ್ತಿದ್ದರು. ಒಳಗೇ ಕಟಗುಡುವ ಹಲ್ಲಿನ ಸಣ್ಣ ಶಬ್ದ ಅವರ ಅಕ್ಕಪಕ್ಕದಲ್ಲೆಲ್ಲೋ ಕೂತುಕೊಳ್ಳುತ್ತಿದ್ದ ನಮಗೆಲ್ಲಾ ಆಗಾಗ ಕೇಳುತ್ತಿತ್ತು. ನಾವೇನೂ ಮಹಾಸಭ್ಯರಾಗಿದ್ದವರು ಅಂತ ತಿಳೀಬೇಡಿ: ಪರ್ಸಂಟೇಜಿನಲ್ಲಿ ಸ್ವಲ್ಪ ಕಮ್ಮಿ ಇತ್ತು ಎಂದಷ್ಟೇ ಹೇಳಬಹುದು! ಯಾಕೆಂದರೆ ಅಜ್ಜನಮನೆಯಲ್ಲಿ ಎಮ್ಮೆ ಕರುಹಾಕಿದ ನೆವದಲ್ಲಿ ರಜಾ ಘೋಷಿಸಿಕೊಂಡು ವಾರ ಬಿಟ್ಟು ಮರಳಿಬಂದಾಗ ಕೆಲವು ಸರ್ತಿ ಶಾಲೆಯ ಹೊರಗೆ ಬಾಗಿ ನಿಲ್ಲಬೇಕಾಗುತ್ತಿತ್ತು! ಅಥವಾ ಶಾಲೆಯ ಇಡೀ ಕಟ್ಟಡವನ್ನೇ ದೇವಸ್ಥಾನಗಳಲ್ಲಿ ಸುತ್ತುವಂತೇ ಸುತ್ತುತ್ತಾ ಇರಬೇಕಾಗುತ್ತಿತ್ತು. ನಾವು ರಜೆ ಹಾಕಿದರೆ ಈ ಮಾಸ್ತರಮಂದಿಗೆ ಏನಪ್ಪಾ ಅಂಥಾ ತೊಂದ್ರೆ ? ಹೊಟ್ಟೆಕಿಚ್ಚಿನ ಪಾಪಿಗಳು ಎಂದುಕೊಳ್ಳುತ್ತಿದ್ದೆವು ನಾವು. ಈ ಕೆಲವು ಸಂದರ್ಭಗಳಲ್ಲಿ ಮಾತ್ರ ನಾವು ವಿರೋಧೀ ಬಣಗಳಲ್ಲಿ ಗುರುತಿಸಿಕೊಳ್ಳುತ್ತಿದ್ದೆವು ಬಿಟ್ರೆ ಮಿಕ್ಕಿದ ದಿನಗಳಲ್ಲಿ ನಾವೆಲ್ಲಾ ಗುರುಗಳ ಪಕ್ಷವೇ! ಅಲ್ಲಿ ’ಕುರ್ಚಿ’ ಸಿಗಲಿಲ್ಲ ಎಂಬ ರಾಜಕಾರಣದ ಅಂಶ ಲವಲೇಶವೂ ಇರಲಿಲ್ಲ. ರಜೆ ಹಾಕಿದಾಗ ಮಾಸ್ತರಮಂದಿ ಮಾಡುತ್ತಿದ್ದ ಕೆಂಗಣ್ಣು ಹೊರತುಪಡಿಸಿ ನಮ್ಮ ಗುರುಗಳೆಲ್ಲಾ ಬಹಳ ಒಳ್ಳೆಯವರೇ.

ಅಷ್ಟಕ್ಕೂ ಮಾಬ್ಲ, ಸುಬ್ರಾಯ ಇಂಥವ್ರೆಲ್ಲಾ ಕಾಯಮ್ಮಾಗಿ ಆಡಿಕೊಳ್ಳುತ್ತಿದ್ದ ಪಿಸುಮಾತುಗಳು ಆಗಾಗ ಹಂಗಾಮಿಗೆ ಅವರ ಪಕ್ಷ ಸೇರುತ್ತಿದ್ದ ನಮಗೂ ಗೊತ್ತಾಗುತ್ತಿದ್ದವು! ವಿರೋಧೀ ಬಣದ ಎಷ್ಟು ಪ್ರಬಲವಾಗಿತ್ತೆಂದರೆ ನಾಯಕನೇ ಇಲ್ಲದಿದ್ದರೂ ಮುಂಬೈನ ಡಬ್ಬಾವಾಲಾಗಳ ರೀತಿ ಕೆಲಸ ನಿರ್ವಹಿಸುವುದರಲ್ಲಿ ಸಮರ್ಥವಾಗಿತ್ತು; ಸಶಕ್ತವಾಗಿತ್ತು. ಮಾಸ್ತರಮಂದಿ ಶಾಲೆ ಮುಗಿಸಿ ಮನೆಗೆ ಸಾಗಿದ ಮೇಲೆ ಹಾದೀಲೋ ಬೀದೀಲೋ ಯಾವುದೋ ಮರದ ಕೆಳಗೆ ಆಗಾಗ ಬೈಠಕ್ಕು ನಡೀತಿತ್ತು. ಬೈಠಕ್ಕಿನ ವಿಷಯ ಮಾತ್ರ ದಯವಿಟ್ಟು ಕೇಳಬೇಡಿ : ಅದೊಂಥರಾ ’ ಬೆಕ್ಕಿಗೆ ಗಂಟೆ ಕಟ್ಟುವ ’ ಹಾಗಿನದು. ಹೋಗ್ಲಿ ಹೇಳೇಬಿಡ್ಲಾ? ಎದುರಾಗುವ ಮಾಸ್ತರಮಂದಿಗೆ ಎದುರಾ ಎದುರೇ ತಕ್ಕ ಶಾಸ್ತಿ ಮಾಡಿ ಬಾಕಿ ಮಕ್ಕಳಿಂದ ಶಹಭಾಸ್‍ಗಿರಿ ಪಡೆಯುವುದೇ ಆಗಿರುತ್ತಿತ್ತು. " ನೋಡ್ಡೋ ನೋಡ್ಡೋ " ಎಂದು ನೋಡುವುದಕ್ಕೇ ಒತ್ತು ಕೊಟ್ಟು ಪೌರುಷ ಕೊಚ್ಚುವ ಉತ್ತರಕುಮಾರನ ರೀತಿಯಲ್ಲಿ ಮೆರೆಯಲಿಚ್ಛಿಸುವ ಮಕ್ಕಳಿದ್ದರು. ಆದರೆ ಅಂದಿನ ದಿನಗಳಲ್ಲಿ ನಮ್ಮಲ್ಲಿನ ಪಾಲಕರಿಗೆ ಈ ಮಾಸ್ತರಮಂದಿ ಯಾವುದೇ ದೂರು ನೀಡುತ್ತಿರಲಿಲ್ಲ; ಇದು ಮಾತ್ರ ಅವರ ಔದಾರ್ಯವನ್ನು ಎತ್ತಿ ತೋರುತ್ತಿತ್ತು. ಅಲ್ಲೊಂದು ರಾಜೀ ಸೂತ್ರವೂ ಇತ್ತು: ಮಾಸ್ತರಮಂದಿ ಅಲ್ಲೀ ಇಲ್ಲೀ ಯಾರ್ಯಾರದ್ದೋ ಮನೇಲಿ ಇಸ್ಪೀಟು ಆಡಿದ್ದನ್ನೋ ಕಾಯಿವ್ಯಾಪಾರ ಮಾಡಿದ್ದನ್ನೋ ಕಂಡ ವಿರೋಧೀ ಬಣಗಳವರು ಆಗಾಗ ದೂರದಿಂದ ಬರುವ ’ಇನೇಶ ಭಟ್ಟ’ [ಇನ್ಸ್‍ಪೆಕ್ಟರ್ ಎಂದು ತಿಳಿಯಿರಿ, ಈ ಕುರಿತು ಹಿಂದಿನ ನನ್ನ ಪ್ರಬಂಧವೊಂದರಲ್ಲಿ ವಿವರವಾಗಿ ಹೇಳಿದ್ದೇನೆ]ರಿಗೆ ಹೇಳಿಬಿಟ್ಟರೆ ಎಂಬ ಅಪಾಯದ ಅರಿವಿರುವುದರಿಂದ ಅದೊಂಥರಾ ’ ಮ್ಯೂಚ್ವಲ್ ಅಂಡರ್ ಸ್ಟ್ಯಾಂಡಿಂಗು’ !

’ಮಳೆಗಾಲದ ಒಂದು ದಿನ’ ಎಂದ ತಕ್ಷಣ ನಾವೆಲ್ಲಾ ಕೆಲವು ಜನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದುದು " ಮಾಸ್ತರರ ಹಳೇ ಜಾಕೀಟು ಕಿಲೋಮೀಟರು ದೂರದವರೆಗೂ ತನ್ನ ಮುಗ್ಗಿದ ’ಪರಿಮಳ’ ಹಬ್ಬಿಸಿತ್ತು " ಎಂತಲೋ ಅಥವಾ " ಮಾಸ್ತರು ದೇವಪ್ಪಶೆಟ್ಟರ ಮನೆಯ ಅಂಗಳದ ಹಾದಿಯಲ್ಲಿ ಹಾವಸೆ ತುಳಿದು ದೊಪಕ್ಕನೆ ’ದುಡ್ಡು ಹೆಕ್ಕಿದರು’ " ಹೀಗೆಲ್ಲಾ ಇರುತ್ತಿದ್ದವು! ವಾಸ್ತವದ ಸಂಗತಿ ನಿಮ್ಮಲ್ಲಿ ಹೇಳದೇ ಬಚ್ಚಿಡಲು ಸಾಧ್ಯವೇ? ನಮ್ಮ ಕರಾವಳಿಯಲ್ಲಿ ಧೋ ಎಂದು ಸುರುಹಚ್ಚುವ ಮಳೆಯಲ್ಲಿ ವಾರಗಟ್ಟಲೆ ಒಮ್ಮೊಮ್ಮೆ ಮಿತ್ರನ ದರುಶನವೇ ಆಗುವುದಿಲ್ಲ. ಯಾವಾಗ ಆ ಫ್ರೆಂಡು ಬರುವುದಿಲ್ಲವೋ ಒದ್ದೆಯ ಪಸೆ ಹಾಗ್ಹಾಗೇ ಇದ್ದು ಬಟ್ಟೆಗಳೆಲ್ಲಾ ಒಂಥರಾ ಗಬ್ಬು ನಾರುತ್ತವೆ, ಥೂ ! ಅದರಲ್ಲಂತೂ ಸಿಗುವ ಸಂಬಳದಲ್ಲಿ ಕಷ್ಟಪಟ್ಟು ಎರಡು ಜೋಡೀ ಪ್ಯಾಂಟು ಶರ್ಟು ಹೊಲಿಸಿಕೊಳ್ಳುತ್ತಿದ್ದ ಮಾಸ್ತರಮಂದಿಗೆ ವಾರಾಂತ್ಯದಲ್ಲಿ ತೊಳೆದು ಅವು ಒಣಗದೇ ಇದ್ದಾಗ ಬಹಳ ಪೇಚಾಟ. ಕಟ್ಟಿಗೆ ಒಲೆಗೆ ಎತ್ತರದಲ್ಲಿ ಬಿದಿರಿನ ಗಳ ಅಡ್ಡಡ್ಡ ಕಟ್ಟಿ ಆ ಸೆಕೆಗೆ ಬಟ್ಟೆ ಒಣಗಿಸುವ ಪ್ರಯತ್ನವೂ ನಡೆಯುತ್ತಿತ್ತು. ಸೋನೆ ಮಳೆಯಲ್ಲಿ ಓಡಾಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಅಲ್ಲಲ್ಲಿ ಅರ್ಧರ್ಧ ನೆನೆಯುವ ಬಟ್ಟೆ ಕೆಲವೊಮ್ಮೆ ತನ್ನ ಅಮೋಘ ’ರಸದೌತಣ’ವನ್ನು ಸುತ್ತಲ ಎಲ್ಲರಿಗೂ ಕೊಡಮಾಡುವುದು ಸರ್ವೇ ಸಾಮಾನ್ಯ! ಮೂಗಿಗೆ ಪ್ಲಾಸ್ಟರ್ ಹಾಕಿಕೊಂಡರೂ ಒಡೆದು ಒಳನುಗ್ಗುವ ಅಸಾಮಾನ್ಯ ’ಪರಿಮಳ’ಕ್ಕೆ ’ಮಾರಿಹೋಗದವರೇ’ ಇಲ್ಲ! ಮಳೆಗಾಲದಲ್ಲಿ ಅದಕ್ಕೆಂತಲೇ ನಾವು ಕೆಲವು ಮನೆಗಳ ಕಡೆಗೆ ತಲೆಯನ್ನೂ ಹಾಕಿ ಮಲಗುತ್ತಿರಲಿಲ್ಲ!

ಗೂಟಕ್ಕೆ ಕಟ್ಟಿದ ಹರಕೆಯ ಕುರಿಯಂತೇ ನಾತವನ್ನು ತಾಳಲಾರದೆಯೂ ತಾಳಿಕೊಳ್ಳಬೇಕಾದ ಅಡ್ಜೆಸ್ಟ್‍ಮೆಂಟ್ ವ್ಯವಹಾರದಲ್ಲಿ ವಾಕರಿಕೆ ಬರುವಂತಾದರೂ ಮಾಸ್ತರಿಗೆ ಹೇಳಲುಂಟೇ ? ಅದರಲ್ಲಂತೂ ಕೆಲವು ಜನ ಹನಿಯುವ ನೆಗಡಿಯ ಮೂಗಿಗೆ ಕರವಸ್ತ್ರ ಹಿಡಿದು ಸೂಂ ...ಸೂಂ ... ರಪ್ ರಪ್ ರಫ್ ಎಂದು ಗೊಣ್ಣೆ ಎಳೆದು ಮಡಚಿ ಅದನ್ನು ಮತ್ತದೇ ಪ್ಯಾಂಟಿನಲ್ಲಿ ತುರುಕಿಕೊಂಡಿದ್ದನ್ನು ನೋಡಿಬಿಟ್ಟರೆ ದಿನಗಟ್ಟಲೆ ಊಟ-ತಿಂಡಿ ಬೇಡವಾಗಿ ಬಿಡುತ್ತಿತ್ತು. ನಾವೆಲ್ಲಾ ಹೇಗೇ ಅಂದರೆ ಊಟಕ್ಕೆ ಕೂತಾಗ ’ಲಂಡನ್ನಿನ’ ಸುದ್ದಿ ಬಂದರೂ ಸಹಿಸದ ಜನ; ಕಾವಲಿಯಲ್ಲಿ ಜಿಲೇಬಿ ಬಿಡುವುದಕ್ಕೂ ಲಂಡನ್ನಿಗೆ ಕೂರುವುದಕ್ಕೂ ಸಾಮ್ಯತೆ ಕಾಣುವುದರಿಂದ ಅದನ್ನೆಲ್ಲಾ ನೆನೆಸಿಕೊಳ್ಳಲೂ ಒಂಥಾರಾ ಆಗುವ ಜನ. ಅಂಥದ್ದರಲ್ಲಿ ಸಾಕ್ಷಾತ್ ಸಿಂಬಳದ ಪರಮೋಚ್ಚ ದರ್ಶನ ಮಾಸ್ತರರ ಕರವಸ್ತ್ರದಲ್ಲಿ ನಡೆದಾಗ ಇನ್ನೇನು ಕತ್ತು ಮುರಿಯಲು ಎತ್ತಿದ ಕಟುಕನ ಕೈಯ್ಯ ಕೋಳಿಯ ಅವಸ್ಥೆ ನಮ್ಮದಾಗುತ್ತಿತ್ತು; ಆದರೂ ಪ್ರಾಣಮಾತ್ರ ಇರುತ್ತಿತ್ತು !

ಆಗಾಗ ಬೀಡೀ ಧಂ ಎಳೆಯುವ ಹವ್ಯಾಸದ[ಸ್ವಲ್ಪ ಮರ್ಯಾದೆ ಕೊಡೋಣ ಚಟ ಎನ್ನಬಾರದು,ಎಷ್ಟೆಂದರೂ ಮಾಸ್ತರಲ್ಲವೇ?] , ’ಅಗ್ನಿಹೋತ್ರಿ’ ಗಳೆಂದು ವಿರೋಧೀ ಬಣದಿಂದ ಬಿರುದಾಂಕಿತಗೊಂಡ ಮಾಸ್ತರೊಬ್ಬರು ಎದುರಿಗೆ ಸೇದದಿದ್ದರೂ ಸೇದಿದ ತರುವಾಯ ತರಗತಿಗೆ ಮರಳಿದ ಅವರ ಬಾಯಿಂದ ಕೊಳೆತ ಬೀಡೀ ಮೋಟಿನ ಹೊಗೆಯ ಅನಪೇಕ್ಷಿತ ಸುಗಂಧ ದಸರಾ ಜಂಬೂಸವಾರಿಯಂತೇ ಗಜಗಾಂಭೀರ್ಯದಿಂದ ಮುಂದಕ್ಕೆ ಮುಂದಕ್ಕೆ ಮುಂದಕ್ಕೆ ನಿಧಾನವಾಗಿ ನಮ್ಮೆಡೆಗೆ ಸಾಗಿಬರುತ್ತಿತ್ತು! ಹಲ್ಲುಜ್ಜುವುದನ್ನೇ ಮರೆತಹಾಗಿರುವ ಅವರ ಬಾಚಿ ಹಲ್ಲುಗಳ ಸಂದಿಯಲ್ಲಿ ಕಪ್ಪುಗಟ್ಟಿರುವುದು ಕಾಣಿಸುತ್ತಿತ್ತು, ಕೈಲಿರುವ ಕಡ್ಡಿಯೊಂದನ್ನು ಅನಾಯಾಸವಾಗಿ ಆಗಾಗ ಹಲ್ಲಿಗೆ ಹಾಕಿ-ತೆಗೆದು ಹಾಕಿ-ತೆಗೆದು ಮಾಡುವುದರಿಂದ ಜಂಬೂಸವಾರಿಯ ಸ್ತಬ್ಧ ಚಿತ್ರಗಳು ಹಲವು ಹೊರಬರುತ್ತಿದ್ದವು ! ಇನ್ನೊಬ್ಬ ಮಾಸ್ತರು ಪಾಠಮಾಡುವಾಗ ಎದುರಿಗೆ ಕುಳಿತ ವಿದ್ಯಾರ್ಥಿಗಳಿಗೆ ಬಾಯಿಯ ’ತೀರ್ಥ ಪ್ರೋಕ್ಷಣೆ’ ಸದಾ ಅಗುತ್ತಿತ್ತು. ಇಂತಹ ಮಾಸ್ತರುಗಳ ಗುಂಪಿನ ಮಧ್ಯೆ ನಾವು ಮಾತ್ರ ಯಾವ ಪಕ್ಷದಲ್ಲೂ ಪಕ್ಕಾ ಆಗದೇ ಸ್ವತಂತ್ರ ಅಭ್ಯರ್ಥಿಗಳಾಗಿ ಪರೀಕ್ಷೆ ಎದುರಿಸುತ್ತಿದ್ದೆವು!

’ಮಳೆಗಾಲದ ಒಂದು ದಿನ’ ಎನ್ನುವ ಬದಲು ಬೇರೇ ಹೆಸರೇ ಇರಲಿಲ್ಲವೇ ನಿಬಂಧಕ್ಕೆ ? ಗೊತ್ತಿಲ್ಲ. ಆದರೆ ನೀವು ಎಲ್ಲಿಂದೆಲ್ಲಿಗಾದರೂ ಹೋಗಿ ಇಂದಿಗೂ ನಮ್ಮ ಸರಕಾರೀ ಪ್ರಾಥಮಿಕ ಶಾಲೆಗಳಲ್ಲಿ ಕಾಣುವ ಅಪ್ಪಟ ಸತ್ಯ ಯಾವುದೆಂದರೆ ’ಮಳೆಗಾಲದ ಒಂದು ದಿನ’ ! ಮಳೆಗಾಲ ಮುಗಿದಮೇಲೆ ಚಳಿಗಾಲ ಬರಬೇಕಲ್ಲ. ಚಳಿಗಾಲದಲ್ಲಿಯೂ ದಿನಗಳಿರುವುದಿಲ್ಲವೇ? ಎಂಬುದು ನಮ್ಮ ಹಲವರ ಅಂತರಂಗದಲ್ಲಿ ಹುಟ್ಟಿದ್ದ ಪ್ರಶ್ನೆಯಾದರೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಗೋಪಾಲ ಮಾಸ್ತರು ಸುಬ್ರಾಯನ ಕೆನ್ನೆಗೆ ಹೊಡೆದು ಹಲ್ಲು ಅಲುಗಾಡತೊಡಗಿದ್ದು ನಮ್ಮಲ್ಲಿನ ಒಂದು ಬೈಠಕ್ಕಿನಲ್ಲಿ ಎಲ್ಲರಿಗೂ ತಿಳಿದುಬಂದ ವಿಷಯ. ಸುಬ್ರಾಯ ಮನೆಯಲ್ಲಿ ಹೇಳಿದರೆ ತಪ್ಪುಮಾಡಿದ್ದಕ್ಕೆ ಮತ್ತೆ ಮನೆಯವರಿಂದಲೂ ಶಿಕ್ಷೆಯಾಗುತ್ತಿತ್ತು; ಅಲ್ಲಿ ಅಪ್ಪ ಅಲುಗಾಡುವ ಹಲ್ಲನ್ನು ಇಕ್ಕಳದಿಂದ ಪೂರ್ತಿ ಕಿತ್ತುಹಾಕುವ ಸಂಭವನೀಯತೆಯೇ ಜಾಸ್ತಿ ಇದ್ದಿದ್ದರಿಂದ ವಿಷಯ ನಮ್ಮೊಳಗೇ ಗೌಪ್ಯವಾಗಿತ್ತು! ಪಾಪದ ಹುಡುಗ ನೋವನ್ನು ಸಹಿಸಿ ಕೆನ್ನೆ ಊದಿಸಿಕೊಂಡು ಮನೆಗೆ ಹೋಗೀ ಬಂದು ಮಾಡುತ್ತಿದ್ದ; ಮನೆಯಲ್ಲಿ ಹಲ್ಲುನೋವಿಗೆ ಹೀಗಾಗಿದೆ ಎಂದು ಲವಂಗದ ಎಣ್ಣೆ ಹಾಕಿಕೊಂಡಿದ್ದನಂತೆ.

ಮಳೆಗಾಲ ಮುಗಿದು ದೀಪಾವಳಿ ಕಳೆದು ಚಳಿಗಾಲ ಬಂದೇ ಬಂತು. ಹಾವಿನ ದ್ವೇಷ ಹನ್ನೆರಡು ವರುಷ ಇರುತ್ತೋ ಇಲ್ಲವೋ ಗೊತ್ತಿಲ್ಲ ಸುಬ್ರಾಯನ ದ್ವೇಷ ಚಳಿಗಾಲದವರೆಗಂತೂ ಜೀವಂತವಿತ್ತು! ದ್ವೇಷಕ್ಕೆ ಕೆಲವೊಮ್ಮೆ ಅಸಾಧ್ಯ ಧೈರ್ಯವೂ ಬಂದುಬಿಡುತ್ತದೆ. ಗೋಪಾಲ್ ಮಾಸ್ತರು ಕಂಡರೆ ಕಚ್ಚಲು ಹವಣಿಸುವ ಹಾವಿನಂತಾಗುತ್ತಿದ್ದ ಸುಬ್ರಾಯ ಏನಾದರೂ ಮಾಡಿ ಮಾಸ್ತರಿಗೆ ಬುದ್ಧಿಕಲಿಸಬೇಕೆಂದು ಆಲೋಚಿಸ ಹತ್ತಿದ್ದ! ಗೋಪಾಲ್ ಮಾಸ್ತರರ ಊರಿಗೂ ನಮ್ಮ ಶಾಲೆಗೂ ಕೇವಲ ೩-೪ ಮೈಲು ಅಂತರ. ಮನೆಯಿಂದ ಬಂದು-ಹೋಗಿ ಮಾಡಲು ಅನುಕೂಲವಾಗುತ್ತದೆ ಎಂದು ಗೋಪಾಲ್ ಮಾಸ್ತರು ಈ ಶಾಲೆಗೇ ವರ್ಗ[ಟ್ರಾನ್ಸ್‍ಫರ್] ಮಾಡಿಸಿಕೊಂಡಿದ್ದರು. ಹತ್ತು ವರ್ಷವೇ ಆಗಿಬಿಟ್ಟಿತ್ತೋ ಏನೋ ಅಂತೂ ಹಾಗೂ ಹೀಗೂ ಕಸರತ್ತು ನಡೆಸಿ ಅವರು ನಮ್ಮ ಶಾಲೆಯಲ್ಲೇ ಕಾಯಂ ಆಗಿ ಠಿಕಾಣಿ ಹೂಡಿಬಿಟ್ಟಿದ್ದರು. ನದಿ ದಾಟಿ ಹೋಗುವ ಶಾಲೆಗಳಿಗೆ ಹಾಕಿಬಿಟ್ಟರೆ ಓಡಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಆ ಕಾಲದಲ್ಲಿ ಹಳ್ಳಿಗಳಲ್ಲಿ ವಾಹನ ಸೌಕರ್ಯ ಕಮ್ಮಿ ಇತ್ತು. ಬೆಳಿಗ್ಗೆ ಒಂದು -ರಾತ್ರಿ ಒಂದು ಹೀಗೇ ವೈದ್ಯರು ಗುಳಿಗೆ ಬರೆದಂತೇ ಬಸ್ಸುಗಳು ಓಡುತ್ತಿದ್ದವು. ಬಸ್ಸು ತಪ್ಪಿಹೋದರೆ ಅಂದಿನದಿನ ಫಜೀತಿಯೇ. ಅದರಲ್ಲಂತೂ ಸಾಯಂಕಾಲದ ಬಸ್ಸು ತುಂಬಾ ಮಹತ್ವದ್ದು. ಚಳಿಗಾಲದಲ್ಲಿ ಕತ್ತಲಾಗುವುದೂ ಬೇಗ. ಅಹ-ಕ್ಷಯ = ಅವಚಯ [ಹಗಲು ಕಡಿಮೆ ರಾತ್ರಿ ಹೆಚ್ಚು].

ಹೀಗೇ ಒಂದು ದಿನ ಗೋಪಾಲರು ಶಾಲೆ ಮುಗಿಸಿ ಕಳ್ಳೇ ಬಯಲಿನ ಗದ್ದೆಹಾಳಿಯಮೇಲೆ ನಡೆದು ಹೋಗುತ್ತಿದ್ದರು. ಸಮಯ ಆರೂ ಚಿಲ್ಲರೆ ಆಗಿರಬಹುದು. ಆಗಲೇ ಮಬ್ಬುಗತ್ತಲು. ಹಾದಿಯ ಪಕ್ಕದಲ್ಲಿ ಅದೆಲ್ಲೋ ಅಡಗಿದ್ದ ಸುಬ್ರಾಯ ವಿಚಿತ್ರವಾಗಿ ಕೂಗಿಬಿಟ್ಟ. ಅವಸರದಲ್ಲಿ ಓಡುತ್ತಿದ್ದ ಗೋಪಾಲ್ ಮಾಸ್ತರು ಹೆದರಿ ಹಾರಿ ಗದ್ದೆಗೆ ಬಿದ್ದರು. ಹಾರಿಬಿದ್ದ ರಭಸಕ್ಕೆ ಕಾಲು ಉಳುಕಿ ಹೋಯ್ತು. ರಿಪೇರಿಗೆ ಸುಮಾರು ಒಂದು ತಿಂಗಳೇ ಬೇಕಾಯ್ತು! ಗುಟ್ಟು ನಿಮ್ಮಲ್ಲೇ ಇರಲಿ -- ವಿಚಿತ್ರವಾಗಿ ಕೂಗಿದ್ದು ದೆವ್ವ ಎಂದಷ್ಟೇ ತಿಳಿದ ಗೋಪಾಲರಾಯರಿಗೆ ಅದು ಸುಬ್ರಾಯನ ಕಿತಾಪತಿ ಎಂಬುದು ಇನ್ನೂ ಗೊತ್ತಿಲ್ಲ; ಹೌದಲ್ವಾ ಪಾಪ ಈಗ ಮಾಸ್ತರು ಮಕ್ಕಳ ಜೊತೆಗೆ ಬೇರೇ ಏಲ್ಲೋ ಇದ್ದಾರೆ ಅನಿಸುತ್ತದೆ, ನೀವು ಹೇಳಿದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ, ಇನ್ನು ಸುಬ್ರಾಯ ನಿಮಗೆಲ್ಲಿ ಸಿಗುತ್ತಾನೆ ? ಆತ ನನಗೇ ಸಿಗದೇ ಇಡೀ ೨೦ ವರ್ಷಗಳೇ ಕಳೆದಿವೆ.


Monday, November 28, 2011

ಹಸಿರು ಪರಿಸರದಲ್ಲಿ


ಹಸಿರು ಪರಿಸರದಲ್ಲಿ

ಹಸಿರು ಪರಿಸರದಲ್ಲಿ ಮಾಮರದ ಕೊಂಬೆಯಲಿ
ಪಿಸುಮಾತನುಲಿದಿತ್ತು ಗಿಳಿಯ ಮರಿಯೊಂದು
ಹಸಿವು ಬಾಧಿಸುತಿಹುದು ತಾರೆನುತ ಊಟವನು
ಕೊಸರಾಟ ನಡೆಸಿತ್ತು ತಾಯ ಬಳಿನಿಂದು

ಗೊರವಂಕ ಕೆಂಬೂತ ಗುಟುರುತಿರಲಲ್ಲಲ್ಲಿ
ತೆರೆದಿತ್ತು ಬೆಳ್ಮುಗಿಲು ದಿನದ ಅಂಗಡಿಯ
ಹೊರಹೊರಟ ಕಾಗೆಗಳು ಕೋಗಿಲೆಗಳಂದದಲಿ
ಕರೆಕರೆದು ಸಾರಿದವು ಇರಿಸಿ ದಾಂಗುಡಿಯ

ಹರೆವ ಬಳ್ಳಿಯು ಬೆಳೆದು ಚಿಗುರುತ್ತ ಸಾಗಿತ್ತು
ಹರೆಯದುತ್ಸುಕದಲ್ಲಿ ಹಿರಿಮರವನಾತು
ಗೆರೆಗೆರೆಯ ಚಿತ್ತಾರ ಬಾನ ಬಾಂದಳದಲ್ಲಿ
ಅರೆರೆ ಅದ್ಭುತ ರಮ್ಯ ಕಂಡೆ ಮನಸೋತು !

ಮಾಗಿ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ತೂಗಿನಲಿದಾಡ್ವ ಗುಲಾಬಿದಳಗಳಲಿ
ಮಾಗಿಮಂಜಿನ ಹನಿಯು ಮುತ್ತು ಮಣಿ ಪೋಣಿಸಿದೆ
ಸಾಗುತಿದೆ ಭ್ರಮರದೋಂಕಾರ ಗಿಡಗಳಲಿ

ದೂರ ಬೆಟ್ಟಗಳಾಚೆ ಭಾನು ಹೊಳೆಯುತಲಿದ್ದ
ಹೀರಿ ತಣ್ಣನೆ ಹೊಗೆಯ ಕಿರಣನೇಯುತಲಿ
ಊರು ಕೇರಿಗಳಲ್ಲಿ ಜನವೆದ್ದು ಗಡಬಡಿಸಿ
ಬೀರಿದರು ರಂಗೋಲಿ ಹೂಗಳಾಯುತಲಿ

Saturday, November 26, 2011

ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು


ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು

ಒತ್ತಡದಲ್ಲಿ ಬರೆಯುವ ಮನಸ್ಸು ಕೆಲವೊಮ್ಮೆ ಬರುವುದೇ ಇಲ್ಲ; ಆದರೂ ಬರೆಯುವ ತೆವಲು ಕಮ್ಮಿಯಾಗುವುದಿಲ್ಲ. ಇದೊಂಥರಾ ಬಸ್ಸಿಗೆ ಹೋಗುವ ಮಲಬದ್ಧತೆ ಪ್ರಕೃತಿಯವರಿಗೆ ಆಗುವ ಸಂಕಟ ! ಇಷ್ಟಂತೂ ಸತ್ಯ, ಹೊರಗೆಹೋದಾಗ ಅವರಿಗೆಷ್ಟು ಖುಷಿಯಾಗುತ್ತದೋ ಅದರ ದುಪ್ಪಟ್ಟು ದಿಪ್ಪಟ್ಟು ಖುಷಿ ಬರೆದಾಗ ಆಗುತ್ತದೆ!ಆಮೇಲೆ ಒಂದಷ್ಟು ಹೊತ್ತು ಮನಸ್ಸು ಮತ್ತೆ ಬಸಿರುಗಟ್ಟುವವರೆಗೆ ನಿರಾಳ. ಇದ್ದಿದ್ದೇ ಬಿಡಿ ಮತ್ತದೇ ತೆವಲು, ಮತ್ತದೇ ಬರೆಯುವ ಗೋಳು ಗೀಳು ಎಲ್ಲಾ; ಬೀಡಿ ಚಟದವರಿಗೆ ಯಾವುದೂ ಸಿಗದಿದ್ದರೆ ಸೇದಿಬಿಸಾಕಿದ ಮೋಟು ಬೀಡಿಯಾದರೂ ಸರಿಯೇ ಅಂತೂ ಆ ಹೊತ್ತಿಗೆ ಆಗಬೇಕು; ಸಿಕ್ಕಿದ ಮೋಟುಬೀಡಿ ಕೊಡುವ ಚಣಕಾಲದ ಪರಮಾನಂದ ಸಿಕ್ಕುವ ತುಸುಸಮಯದ ಬರವಣಿಗೆ ಕೊಡುವ ಮಹದಾನಂದಂತೆಯೇ ಏನೋ. ಕೇಳಿ ಗೊತ್ತಷ್ಟೇ ಬಿಟ್ಟರೆ ಸದ್ಯ ಬೀಡಿ ಸಿಗರೇಟಿನ ’ಅಂಟುರೋಗ’ವಿಲ್ಲ; ಬಳಕೆ ಮಾಡಿಯೇ ಗೊತ್ತಿಲ್ಲ. ಅದಕ್ಕೇ ತಮಾಷೆಗೆ ಮಿತ್ರರೊಬ್ಬರು ಹೇಳುತ್ತಿದ್ದರು " ಸಿಗರೇಟು ಸೇದುವುದರಿಂದ ಹೊಟ್ಟೆಯೊಳಗಿನ ಕ್ರಿಮಿಗಳೆಲ್ಲಾ ನಾಶವಾಗುತ್ತವೆ " ಎಂದು ! ಆಂಗ್ಲ ಸಂಶೋಧಕರು ಅದನ್ನೂ ಒಂದು ದಿನ ಸಮ್ಮತಿಸಲೂ ಬಹುದು ಯಾರಿಗ್ಗೊತ್ತು ?

ನನ್ನ ಓದಿನ ಹರದಾರಿಯಲ್ಲಿ ಕರ್ನಾಟಕ ಸರಕಾರ ಪಠ್ಯವಾಗಿ ರೂಪಿಸಿದ ’ಶಿಖರಗಾಮಿಗಳು’ ಮಾತ್ರ ಮರೆಯಲಾಗದ ಉತ್ತಮ ಪುಸ್ತಕಗಳಲ್ಲಿ ಒಂದು. ಅದು ನೀಡಿದ ಕಿಕ್ಕು ಇಂದಿಗೂ ನೆನಪಾಗುತ್ತದೆ. ಮೊದಲೇ ನನಗೆ ಶಿಖರಗಳು ಅವುಗಳ ಮಜಲುಮಜಲುಗಳಲ್ಲಿ ಇರಬಹುದಾದ ಬಹುಥರದ ಜೀವಿಗಳು, ಅಲ್ಲಿನ ತರುಲತೆಗಳು, ಕಾಣಬಹುದಾದ ವಿವಿಧ ಆಕಾರಗಳು ಹೀಗೆಲ್ಲಾ ತಿಳಿಯಬೇಕೆಂಬ ಬಹುಮುಖದ ಆಸಕ್ತಿ. ಡಾಕ್ಟರು ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಅನ್ನೋ ಹಾಗೇ ನಾನು ಸಹಜವಾಗಿಯೇ ಓದಲು ಆಸೆ ಪಟ್ಟಿದ್ದ ಶಿಖರಗಳ ಕುರಿತಾದ ಕಿರು ಹೊತ್ತಗೆ ಅದಾಗಿತ್ತು. ನೀವೆಲ್ಲಾ ಸಾಧ್ಯವಾದರೆ ಓದಬೇಕು, ಕೆಲವರು ಓದಿರಲೂ ಸಾಕು. ಅದರಲ್ಲಿ ಹಿಲರಿ ಮತ್ತು ತೇನಸಿಂಗ್ ಇಬ್ಬರ ಮೌಂಟ್ ಎವರೆಸ್ಟ್ ಆರೋಹಣದ ಸಾಹಸಗಾಥೆಯನ್ನು ಸಾದ್ಯಂತ ವರ್ಣಿಸಲಾಗಿದೆ. ಮಾಗಿಯ ಚಳಿಯಲ್ಲಿ ಮಲೆನಾಡ ನೆಲದಲ್ಲಿ ಬಚ್ಚಲುಮನೆಯ ಒಲೆಯ ಮುಂದೆ ರಗ್ಗು ಹೊದೆದು ಕೂತು ಬಿಸಿ ಕಾಫೀ ಗುಟುಕರಿಸುತ್ತಾ ಅದನ್ನೇ ಪಕ್ಕವಾದ್ಯಗಳಂತೇ ಇಟ್ಟುಕೊಂಡು ’ಶಿಖರಗಾಮಿಗಳ’ನ್ನು ಓದುತ್ತಿದ್ದರೆ ಜಗತ್ತೆಲ್ಲಾ ಸುಂದರ, ಸುಮನೋಹರ!

ಮನುಷ್ಯರ ಜೀವನದಲ್ಲಿ ಅಂಥಾ ಸುಖವೆಂಬುದು ಬೇರೆಲ್ಲೂ ಇಲ್ಲ ಕಣ್ರೀ ! ಅದು ನಮ್ಮ ಮನೋಭಾವನೆಯ ಮೇಲೆ ಅವಲಂಬಿತವಾಗಿರ್ತದೆ. ಹತ್ತುಸಾವಿರ ಕೋಟಿ ಇದ್ದವನಿಗೂ ಹತ್ತೇ ರೂಪಾಯಿ ಇದ್ದವನಿಗೂ ಚಿಂತೆ ತಪ್ಪೋದಿಲ್ಲ; ಅದು ಮಾನವ ಜನ್ಮ ಸಹಜ. ಬುದ್ಧ ಹೇಳಿದನಂತೆ " ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ " ಅಂತ. ಹುಟ್ಟು-ಸಾವು ಹೇಗೆ ಸಹಜವೋ ಕಷ್ಟ-ಸುಖ-ಚಿಂತೆ-ನಿದ್ದೆ- ನೀರವ ಮೌನ-ದುಗುಡ-ಆಯಾಸ ಇವೆಲ್ಲವುಗಳೂ ಕೂಡ. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಗೂ ಇವುಗಳ ಬಾಧ್ಯತೆ ತಪ್ಪಿದ್ದಲ್ಲ. ಎಂದಮೇಲೆ ಬದುಕಿನಲ್ಲಿ ಗೆಲುವಾಗಿರಲು ಕೆಲವು ಸಮಯ-ಸಂದರ್ಭಗಳನ್ನು ಬೇರೇಯವರಿಗೆ, ಜಗತ್ತಿಗೆ ತೊಂದರೆಯಾಗದ ರೀತಿಯಲ್ಲಿ ನಾವೇ ನಿರ್ಮಾಣಮಾಡಿಕೊಳ್ಳಬೇಕಾಗುತ್ತದೆ.’ ಇದು ಲೈಫ್ ಈಸ್ ಶಾರ್ಟ್ ಎಂಜಾಯ್ ಟು ದ ಬೆಸ್ಟ್’ ಹುಚ್ಚು ತತ್ವವಲ್ಲ, ಬದಲಾಗಿ ಹಂಚಿತಿನ್ನುವ, ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಸಾಮರಸ್ಯದೊಂದಿಗೆ ಊಟದಲ್ಲಿ ಉಪ್ಪಿನಕಾಯಿ, ಗೊಜ್ಜು, ಪಲ್ಯ, ಚಿತ್ರಾನ್ನ ತಿಂದ ಹಾಗೇ; ಇನ್ ಕಾಂಟ್ರಾಸ್ಟ್ ಇಲ್ಲಿ ವಿಕಾರವಿಲ್ಲ, ವಿಕಾರದಿಂದ ಹುಟ್ಟುವ ವಿನೋದವೂ ಇಲ್ಲ, ಜಗತ್ತು ಈ ನಮ್ಮ ನಡವಳಿಕೆಯಿಂದ ಹಾಳಾಗುವುದೂ ಇಲ್ಲ-ಇದು ಜಗವ ಕಟ್ಟಿದವರ ಮತ್ತು ಜಗವ ಕಟ್ಟುವವರ ಕಥೆ.

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ
ಜನರೆಲ್ಲರಾಗುಡಿಯ ಕೆಲಸದಾಳುಗಳು
ಮನೆಯೇನು ಮಠವೇನು ಹೊಲವೇನು ನೆಲವೇನು
ಎಣಿಸೆಲ್ಲವದೆಯದನು | ಮಂಕುತಿಮ್ಮ

ತಿಮ್ಮಗುರು ಹೇಳಿದ್ದಾರಲ್ಲ ..ಯೋಚಿಸಿ ನೋಡಿ : ಈ ಇಡೀ ಪ್ರಪಂಚದಲ್ಲಿ ಸದಾ ಎಲ್ಲೆಲ್ಲೂ ಏನೇನೋ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇಡೀ ಪ್ರಪಂಚದ ಜನ ಒಂದೇ ದಿನವೆಂದು ಕರೆಯುವ ದಿನವೇ ಇಲ್ಲ ಯಾಕೆಂದು ನಿಮಗೇ ತಿಳಿದಿದೆ. ಒಪಕ್ಷ ಒಂದೇ ದಿನ ಎಂಬುದು ಸಿಕ್ಕಿತು ಎಂದುಕೊಳ್ಳಿ-ಎಲ್ಲರೂ ರಜೆಹಾಕಿ ಕೂತುಬಿಟ್ಟರೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ, ಹಾಲು-ಮೊಸರು ಇತ್ಯಾದಿ ನಿತ್ಯದ ಸಾಮಾನುಗಳು ಸಿಗುವುದಿಲ್ಲ ಅಥವಾ ಇನ್ನೂ ಏನೇನೋ; ಅದು ಊಹೆಗೇ ನಿಲುಕದ್ದು. ಕಟ್ಟುವವರು ಕಟ್ಟುತ್ತಾರೆ. ಕೆಲವರು ಗುಡಿ ಕಟ್ಟುತ್ತಾರೆ, ಇನ್ನು ಕೆಲವರು ಮಸೀದಿ ಕಟ್ಟುತ್ತಾರೆ, ಮತ್ತೆ ಕೆಲವರು ಇಗರ್ಜಿ ಕಟ್ಟುತ್ತಾರೆ, ಮತ್ತಿನ್ಯಾರೋ ಮನೆಕಟ್ಟುತ್ತಾರೆ, ಸರ್ಕಾರ-ಸಾರ್ವಜನಿಕ ಸಂಸ್ಥೆಗಳವರು ತಂತಮ್ಮ ಕಟ್ಟಡಗಳನ್ನೋ ಸೇತುವೆ, ಮೇಲ್ಸೇತುವೆಗಳನ್ನೋ ನಿರ್ಮಿಸುತ್ತಾರೆ. ಹಳತನ್ನು ಕೆಡವಿ ಮತ್ತೆ ಹೊಸತನ್ನು ಕಟ್ಟುತ್ತಾರೆ. ಹೊಲಿಗೆಯವರು, ವೈದ್ಯರು, ಬಡಗಿಗಳು, ಕಮ್ಮಾರರು, ಶಿಕ್ಷಕರು. ಬ್ಯಾಂಕ ನೌಕರರು ಹೀಗೇ ಅವರವರ ಉಪಜೀವನದ ದಂಧೆಗಳಲ್ಲಿ ಎಲ್ಲರೂ ನಿರತರಾಗಿರುತ್ತಾರೆ. ಹೀಗಾಗಿ ಎಲ್ಲವೂ ಆಗಿಬಿಡಲಿ ಆಮೇಲೆ ತಾನು ಆರಾಮಾಗಿ ಕೂತು ವಿರಮಿಸುತ್ತೇನೆ, ವಿಹರಿಸುತ್ತೇನೆ ಎಂದರೆ ಅದು ಸಾಧ್ಯವಾಗುವುದೇ ಇಲ್ಲ. ಮತ್ತೂರು ಕೃಷ್ಣಮೂರ್ತಿಗಳು ಹೇಳಿದ ಹಾಗೇ ಕಾಣದ ದೈವ ಕಷ್ಟವನ್ನೇ ಕೊಡುತ್ತಿದ್ದರೆ ಆ ಕಷ್ಟವೇ ಸುಖವೆಂದು ತಿಳಿದು ಅನುಭವಿಸುವ, ಅದರಲ್ಲೂ ಆನಂದ ಪಡುವ ಮನೋಭಾವ ಬರಬೇಕಾಗಿದೆ. ಒಮ್ಮೆ ಅದು ಬಂದರೆ ಅಂತಸ್ತಿನ/ ಡಂಬಾಚಾರದ /ಆಡಂಬರದ ಮಾನವರ ಬದುಕಿಗೊಂದು ನೆಲೆ ಸಿಗುತ್ತದೆ. ಓಹೋ ಅದಿಲ್ಲಾ ಇವತ್ತು ಓಹೋ ಇದು ಖಾಲಿಯಾಗಿದೆ, ಅಯ್ಯೋ ಡಿಸ್ಕೌಂಟ್ ಸೇಲು ನಾವು ಹೋಗುವವರೆಗೆ ಮುಗಿದೇ ಹೋಗುತ್ತದೆ, ಅವರಮನೇಲಿರೋ ಸ್ಕೋಡಾ ಕಾರಿಗಿಂತಾ ಉತ್ತಮವಾದ ಲೇಟೆಸ್ಟ್ ಮಾಡೆಲ್ ಕಾರನ್ನು ನಾವು ಖರೀದಿಸಬೇಕು---ಹೀಗೇ ಈ ರೀತಿಯ ಪಕ್ಕಾ ಲೌಕಿಕ ವ್ಯವಹಾರಗಳು ತಹಬಂದಿಗೆ ಬರುತ್ತವೆ.

ಇನ್ನೂ ಒಂದು ಮಾತು ನೆನಪಾಯ್ತು: ಸಿನಿಮಾ ಕವಿತೆಗಳನ್ನು ಬರೆದ ಕೆ.ಕಲ್ಯಾಣ್ ಒಬ್ಬ ಪುರೋಹಿತರ ಮಗ. ಸಿನಿಮಾ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮೊದಲು ಅವರ ಪಟ್ಟ ಪಾಡು ಅವರು ಹೇಳಿದ್ದು ಜ್ಞಾಪಕಕ್ಕೆ ಬರುತ್ತಿದೆ. ಮನೆಯಲ್ಲಿ ಬಡತನ. ಯಾರಲ್ಲೂ ಹೇಳಿಕೊಳ್ಳಲಾಗದ ಸಾಂಪ್ರದಾಯಿಕ ವ್ಯವಸ್ಥೆ, ಮೇಲಾಗಿ ಮಡಿ-ಆಚರಣೆ ಬೇರೆ. ಓರಗೆಯ ಹುಡುಗರು, ಸ್ನೇಹಿತರು ಎಲ್ಲಾ ಅಲ್ಲಲ್ಲಿ ಹೋಟೆಲ್‍ಗಳಲ್ಲಿ ಕೂತು ತಿಂಡಿ-ತೀರ್ಥ ನಡೆಸುತ್ತಿದ್ದರೆ ಕಲ್ಯಾಣ್‍ಗೆ ಮಾತ್ರ ಅದು ಸಾಧ್ಯವಿಲ್ಲ. ಅಪ್ಪನ ದುಡಿಮೆಯಲ್ಲಿ ಸಂಸಾರ ಸಾಗಿಸುವುದೇ ಕಷ್ಟ ಅಂಥದ್ದರಲ್ಲಿ ಹೋಟೆಲ್ಲು ಸಿನಿಮಾ ಅಂತೆಲ್ಲಾ ಖರ್ಚುಮಾಡಿದರೆ ಉಳಿಯಲು ಸಾಧ್ಯವೇ ? ಕಿಲೋಮೀಟರು ನಡೆದೇ ಹೋಟೆಲ್‍ಗೆ ಹೋಗುವುದು, ಅಲ್ಲಿ ನಿಂತು ಒಂದುಗ್ಲಾಸು ನೀರು ಪಡೆದು ಅದನ್ನೇ ಕಾಫೀ ಕುಡಿದ ಹಾಗೇ ಗುಟುಕರಿಸುವುದು; ಯಾಕೆಂದರೆ ಕಾಫಿಗೆ ಕಾಸಿಲ್ಲ! ಮನದಲ್ಲಿ ಮಾತ್ರ ಕಾಫಿ ಕುಡಿದ ಅದೇ ತೃಪ್ತಿ! ಆ ಭಾವವೇ ಕಲ್ಯಾಣ್ ಅವರನ್ನು ಭಾವುಕನನ್ನಾಗಿ ಹಾಡುಗಳನ್ನು ಬರೆಸಿತು. ಅದೇ ಭಾವ ಕಲ್ಯಾಣ್‍ಗೆ ವೃತ್ತಿಯೊಂದನ್ನು ಒದಗಿಸಿತು, ಅದೇ ಮುಂದೆ ಜೀವನಕ್ಕೆ ಆಧಾರವಾಯ್ತು. ಜೀವನ ಶಿಖರವನ್ನು ಹಂತಹಂತವಾಗಿ ಏರುವಾಗ ಎದುರಾಗಬಹುದಾದ ಅಡೆತಡೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಈ ಮೇಲಿನ ಇಬ್ಬರ ಉದಾಹರಣೆಗಳು ಸಾಕು.

’ಶಿಖರಗಾಮಿಗಳ’ನ್ನು ಓದುವಾಗ ಶೆರ್ಪಾ ಜನಾಂಗ, ಯಾಕ್ ಪ್ರಾಣಿ, ಯೇತಿ ಎಂಬ ವಿಚಿತ್ರ ದೈತ್ಯ ಪ್ರಾಣಿ ಇವುಗಳ ವಿವರ ಸಿಗುತ್ತಾ ಹೋಗುತ್ತದೆ. ಅಂದಿನ ಆ ಕಾಲದಲ್ಲಿ ಮೌಂಟೇನೀಯರಿಂಗ್‍ಗೆ ಅಷ್ಟೊಂದು ಸೌಲಭ್ಯಗಳಾಗಲೀ ಸಲಕರಣೆಗಳಾಗಲೀ ಇರಲಿಲ್ಲ. ಇದ್ದುದರಲ್ಲೇ ಸಾಧಿಸುವ ಕಲೆ ಮಾತ್ರ ಜನರಿಗೆ ಗೊತ್ತಿತ್ತು. ಈ ಮಾತು ಹೇಳುವಾಗ ಹಳ್ಳಿಯ ವೈದ್ಯರುಗಳ ನೆನಪಾಗುತ್ತದೆ. ಇಂದು ನಗರ/ಪಟ್ಟಣಗಳಲ್ಲಿ ಹೊಟ್ಟೆನೋವು ಎಂದರೆ ಸಾಕು ರಕ್ತ, ಮಲ-ಮೂತ್ರದಿಂದ ಹಿಡಿದು ಎಲ್ಲಾ ಚೆಕ್-ಅಪ್ ಮಾಡಿಸಿ ಎಕ್ಸ್‍ರೇ, ಸ್ಕ್ಯಾನಿಂಗು ಹಾಳು ಮೂಳು ಅಂತ ಇಲ್ಲದ್ದನ್ನೆಲ್ಲಾ ಒಂದಾದಮೇಲೊಂದರಂತೇ ದಿಢೀರನೆ ಮಾಡಿಮುಗಿಸುತ್ತಾರೆ. ಅದೇ ಹಳ್ಳಿಯ ವೈದ್ಯರುಗಳು ಇವತ್ತಿಗೂ ಹೊಟ್ಟೆ ನೋವೆಂದು ಹೋದರೆ ರೋಗ ಲಕ್ಷಣಗಳನ್ನು ಅವಲೋಕಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿಯನ್ನು ಚೆನ್ನಾಗಿ ಮಾತನಾಡಿಸಿ ಮೈದಡವಿ ಕಳುಹಿಸುತ್ತಾರೆ. ರೋಗಿಗೆ ಅರ್ಧ ಶೀಕು ಪರಿಹಾರವಾಗೋದೇ ವೈದ್ಯರ ಮಾತಿನ ಉಪಚಾರದಿಂದ! ಕಾಯಿಲೆಗಳ ತಾಯಿಬೇರು ಇರುವುದು ಮನೋರೋಗದಲ್ಲಿ. ಮನಸ್ಸಿನಲ್ಲಿ ರೋಗವಿಲ್ಲದಿದ್ದರೆ, ಮನಸ್ಸು ನಿಶ್ಕಲ್ಮಶವಾಗಿದ್ದರೆ ಮಾನವರಿಗೆ ರೋಗಗಳು ತೀರಾ ಕಮ್ಮಿ. ಆದರೆ ನೂರಕ್ಕೆ ಎಷ್ಟು ಜನ ನಿಶ್ಕಲ್ಮಶ ಮನದವರು? ಎಲ್ಲಾ ಎದುರಿಗೊಂದು ಹಿಂದೊಂದು! " ಊಟ ಚೆನ್ನಾಗಿತ್ತು " ಎಂದು ಹೊಗಳಿದ ಅದೇ ವ್ಯಕ್ತಿ ಆ ಕಡೆಗೆ ಹೋದ ಮೇಲೆ " ಅವರ ಮನೆಗೆ ಊಟಕ್ಕೆ ಹೋಗಿದ್ದೆ ಮಾರಾಯಾ ಊಟವಾ ಅದು ? " ಎನ್ನುತ್ತಾರೆ ! ಹೋಗ್ಲಿ ಬಿಡಿ. ಆಗೆಲ್ಲಾ ರೀಬುಕ್ ವುಡ್‍ಲ್ಯಾಂಡ್ ಕಂಪನಿಗಳ ಮೊಹರು ಹೊತ್ತ ಮೌಂಟೇನ್ ಶೂಗಳಿರಲಿಲ್ಲ. ಈಗ ನೋಡಿ : ನಡೆಯಲೊಂದು. ಓಡಲು ಇನ್ನೊಂದು, ಟ್ರೆಕ್ಕಿಂಗಿಗೆ ಮತ್ತೊಂದು, ಕೂತುಕೊಳ್ಳಲೂ ಇನ್ನೊಂದು, ಜಾಗಿಂಗಿಗೆ ಬೇರೇನೇ ಒಂದು, ಕಚೇರಿಗೆ ಹೊಸದೊಂದು, ಪಿಕ್ನಿಕ್ ಹೋಗಲು ವಿಭಿನ್ನವಾಗಿದ್ದೊಂದು --ಇದೆಲ್ಲದರ ಅವಶ್ಯಕತೆ ನಿಜವಾಗಿಯೂ ಇದೆಯೇ ? 'ಕುಣಿಯಲಾರದ ಸೂಳೆ ಅಂಗಳವೇ ಡೊಂಕು ಎಂದಳಂತೆ' ಎಂಬುದೊಂದು ಗಾದೆ. ಹಿಂದಕ್ಕೆ ಸೂಳೆಯರು ಮಾತ್ರ ಕುಣಿಯುತ್ತಿದ್ದರು. 'ಜೊಲ್ಲು' ಜೋರಾಗಿ ಹರಿಯುವವರು ನೋಡುತ್ತಿದ್ದರು! ಇವತ್ತೂ ಕುಣಿಯುವವರ ರೂಪ ಮತ್ತು ವೇಷಗಳಲ್ಲಿ ಬದಲಾವಣೆಯಾಗಿದೆ, ಆದರೆ ಸಾರ್ವಜನಿಕವಾಗಿ ಅದೂ ಸಿನಿಮಾರಂಗದಲ್ಲಿ ಕುಣಿಯುವ ಹೆಣ್ಣುಗಳಿಗೂ ಹಿಂದಿನ ಆ ಕುಣಿಯುವ ಜನಗಳಿಗೂ ಒಂದೇ ವ್ಯತ್ಯಾಸ ಎಂದರೆ ಅದು ಲೋ ಪ್ರೊಫೈಲು --ಇದು ಹೈಪ್ರೊಫೈಲು!

ಯೇತಿ ಎಂಬ ಅದ್ಭುತ ಮತ್ತು ವಿಚಿತ್ರ ಪ್ರಾಣಿಯ ಬಗ್ಗೆ ನೀವು ಕೇಳಿರಲೂ ಸಾಕು. ಕೆಲವರು ವಿಜ್ಞಾನಿಗಳೆಂದು ಬೋರ್ಡು ಹಾಕಿಕೊಂಡವರು ಯೇತಿಯ ಇರುವಿಕೆಯನ್ನೇ ಅಲ್ಲಗಳೆಯುತ್ತಾರೆ. ಆದರೆ ಯೇತಿ ಎಂಬ ಪ್ರಾಣಿ ಹಿಮಾಲಯದ ಶಿಖರಗಳ ನಡುವಿನ ತಪ್ಪಲುಗಳಲ್ಲಿ ಅಲ್ಲಲ್ಲಿ ವಾಸವಾಗಿದೆ. ಸುಮಾರಾಗಿ ಚಿಂಪಾಂಜಿಯನ್ನು ಹೋಲುವ ಈ ಪ್ರಾಣಿ ಮಾನವ ದೇಹಕ್ಕೆ ಹತ್ತಿರವಾದ ಹೋಲಿಕೆಯುಳ್ಳಂಥದು. ಎರಡೇ ಕಾಲಿನಲ್ಲಿ ಓಡಾಡುತ್ತದೆ, ಮರವೇರುತ್ತದೆ, ಬೆಟ್ಟ ಹತ್ತಿ-ಇಳಿಯುತ್ತದೆ. ಪರ್ವತಗಳಲ್ಲಿ ಇರುವ ಹಣ್ಣುಹಂಪಲುಗಳನ್ನು, ಕಾಯಿ-ಸೊಪ್ಪು ಮೊದಲಾದವನ್ನು ತಿಂದು ಬದುಕುತ್ತದೆ. ಕರಡಿಯಂತೇ ಮಾನವನನ್ನು ಕಂಡರೆ ದಾಳಿ ನಡೆಸಬಹುದು, ಆದರೆ ಮಾನವರಿಗೆ ಕಾಣಿಸುವುದು ಅಪರೂಪ ಎನ್ನುತ್ತಾರೆ ಶೆರ್ಪಾ ಜನಗಳು. ಅಲಲ್ಲಿ ಓಡಾಡುವಾಗ ಯೇತಿಯ ಲದ್ದಿಗಳನ್ನು ಕಾಣಬಹುದಾಗಿದೆ. ಸಿಳ್ಳೆ ಹಾಕುತ್ತಾ ಮೇಲಕ್ಕೆ ಹತ್ತಿ ಹೋಗುತ್ತಿದ್ದ ಯೇತಿಯೊಂದನ್ನು ದೂರದಿಂದ ಕಂಡಬಗ್ಗೆ ತೇನ್‍ಸಿಂಗ್ ಹೇಳಿದ್ದಾರೆ.

ಹಿಮಾಚ್ಛಾದಿತ ಹಿಮಾಲಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇಂದಿಗೆ ನಾವು ಭಾಗ್ಯವಂತರು ಯಾಕೆಂದ್ರೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಮೊದಲಾದ ಚಾನೆಲ್‍ಗಳಲ್ಲಿ ಹಿಮಶಿಖರಗಳ ಬಗ್ಗೆ ಅಲ್ಲಿನ ಸಾಹಸಗಾಥೆಗಳ ಬಗ್ಗೆ ವಿಸ್ತೃತ ವರದಿಗಳನ್ನು ಕುಳಿತಲ್ಲೇ ನೋಡುತ್ತೇವೆ. ಹಿಮಕರಡಿ, ಹಿಮಕುರಿ, ಬಿಳೀ ಹುಲಿ ಇನ್ನಿತರ ಹಿಮಪರ್ವತನಿವಾಸಿ ಪ್ರಾಣಿಗಳನ್ನೂ ಅವುಗಳ ಜೀವನ ಶೈಲಿಯನ್ನೂ ತಿಳಿದುಕೊಳ್ಳುತ್ತೇವೆ. ಅಪರೂಪಕ್ಕೆ ಕಾಡಿಗೆ ಹೋದವರಿಗೆ ಎಲ್ಲಿ ಹುಲಿ ಬಂದೀತು ಎಂಬ ಭಯವಾಗುತ್ತದೆ. ಆದರೆ ಸ್ಥಾನಿಕವಾಗಿ ಅಲ್ಲಲ್ಲೇ ಬದುಕು ಕಟ್ಟಿಕೊಂಡಿರುವ ಜನರಿಗೆ ಅದು ವಿಶೇಷವೇ ಅಲ್ಲ. ಕಾಡಾನೆಗಳು ಬೆಂಕಿಗೆ ತುಂಬಾ ಹೆದರುತ್ತವೆ. ಹಲವು ಜನರಿಗೆ ಅವು ಬೆಂಕಿಗೆ ಹೆದರುತ್ತವೆ ಎಂಬ ಅಂಶ ತಿಳಿದಿಲ್ಲ! ಕೆಲವು ಹಿಲಾಲು ಹಿಡಿದು ಕೂಗಿದರೆ ಅವು ಹೆದರಿ ಓಡುತ್ತವೆ. ಇದೇ ರೀತಿ ಪ್ರತೀ ಜೀವಿಗೂ ಅದರದ್ದೇ ಆದ ಪ್ರಾಣಭಯವಿದೆ. ಅದರ ನಾಡಿಮಿಡಿತವನ್ನು ಅರಿತ ಜನ ಆಲ್ಲಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ.

ಹಿಮಾಲಯದ ಚಳಿಗೆ ಮೈಒಡ್ಡೀ ಒಡ್ಡೀ ರೂಢಿಯಾಗಿಹೋದ ಶೆರ್ಪಾ ಜನಗಳಿಗೆ ಅಂಥಾ ಜಾಕೀಟು ಪಾಕೀಟು ಇಲ್ಲದಿದ್ದರೂ ಅವರು ಇರಬಲ್ಲರು. ಭಾರದ ಮೂಟೆಗಳನ್ನು ಬೆನ್ನಮೇಲೇರಿಸಿಕೊಂಡು ಪರ್ವತಗಳ ಕಡಿದಾದ ಕಾಲು ದಾರಿಯಲ್ಲಿ ನಿರಾತಂಕವಾಗಿ ಸಾಗಬಲ್ಲರು. ಆಮ್ಲಜನಕದ ಕೊರತೆ ಬಾಧಿಸಿದರೂ ನಮ್ಮೆಲ್ಲರಿಗಿಂತಾ ಜಾಸ್ತಿ ಹೊತ್ತು ತಡೆದುಕೊಳ್ಳಬಲ್ಲರು. ಕಾಲಿಗೆ ಇಂಥಾದ್ದೇ ಬ್ರಾಂಡಿನ ಶೂ ಕೊಡಿ ಎಂದು ಕೇಳರು! ಒಟ್ಟಾರೆ ಹೇಳುವುದಾದ್ರೆ ಕಷ್ಟವಾನಿಗಳು. ಹುಟ್ಟಿದಾರಭ್ಯ ಪರ್ವತಗಳ ಮಗ್ಗುಲಲ್ಲೇ ಬೆಳೆಯುವುದರಿಂದ ಪರ್ವತಗಳನ್ನು ಏರುವ ಬಗ್ಗೆ, ಹಿಮಪಾತವಾಗುವ ಬಗ್ಗೆ, ಸಾಗುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆಯ ಬಗ್ಗೆ ಅವರಿಗೆ ಬಹಳ ಆಳವಾದ ಜ್ಞಾನವಿದೆ. ತಂತ್ರಜ್ಞನೊಬ್ಬ ತನ್ನ ಸಂದೇಶದಿಂದಲೋ, ಅಥವಾ ಯಾವುದೋ ಉಪಕರಣದಿಂದಲೋ ಯಂತ್ರಗಳನ್ನು ನಿಯಂತ್ರಿಸುವಂತೇ/ನಿರ್ವಹಿಸುವಂತೇ ತಮ್ಮ ಚಾಕಚಕ್ಯತೆಯಿಂದ ಪರ್ವತಾರೋಹಣ ನಡೆಸುವಾಗ ಪರ್ವತದೊಡನೆ ಅದರ ಭಾಗವೇ ಆಗಿಬಿಡುವ ಶೆರ್ಪಾಗಳಿಂದ ಮಾರ್ಗದರ್ಶನ ಪಡೆದರೆ ಶಿಖರಗಾಮಿಗಳಿಗೆ ಅನುಕೂಲವಾಗುತ್ತದೆ. ಅಂದಹಾಗೇ ತೇನ್‍ಸಿಂಗ್ ಕೂಡಾ ಒಬ್ಬ ಶೆರ್ಪಾ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಕೊರೆವ ಚಳಿ, ಬೀಸುವ ಕುಳಿರ್ಗಾಳಿ, ಜಾರುವ ಹಿಮಬಂಡೆಗಳ ನಡುವೆ ಏಗುತ್ತಾ ಏಗುತ್ತಾ ಸಾಗುವ ಹಾದಿಯಲ್ಲಿ ಬಿಡಾರ ಹೂಡುವುದು, ಗುಡಾರದ ಬಿಡಾರದಲ್ಲಿ ಅಗ್ಗಿಷ್ಟಿಕೆಯ ಮುಂದೆ ಕೂತು ಅದರ ಬಿಸಿಯನ್ನು ಅನುಭವಿಸುವುದು, ಅಲ್ಲೇ ಹಿತವಾಗುವಂತೇ ಚಹಾ ಕುಡಿಯೋದು, ಒಂದಷ್ಟು ಅಡಿಗೆಮಾಡಿ ತಿಂದು ರಾತ್ರಿ ಬೆಚ್ಚನ ಚೀಲಗಳೊಳಗೆ ಹುದುಗಿಕೊಂಡು ಮಲಗಿ ಬೆಳಿಗ್ಗೆಗಾಗಿ ಕಾಯುವುದು, ವಾತಾವರಣದ ವೈಪರೀತ್ಯವಿದ್ದರೆ ಅದರ ಅಂದಾಜು ತೆಗೆದು ಮುಂದಿನ ಸಾಗಾಟವನ್ನು ನಿರ್ಧರಿಸುವುದು, ನಿತ್ಯವೂ ೫-೬ ಕಿ.ಮೀ ಪ್ರಯಾಣಿಸಿ ಮತ್ತೆ ಅಲ್ಲಲ್ಲಿ ಲಂಗರುಹಾಕಿ ತಂಬು ಹೂಡುವುದು, ಅನಾರೋಗ್ಯ ಕಾಡಿದರೆ ಇದ್ದ ಪರಿಕರಗಳಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಮಿಸುವುದು, ಹಿಂದೆ ಹೋಗಿದ್ದ ಶಿಖರಗಾಮಿಗಳ ರೋಚಕ ಕಥೆಗಳನ್ನು ಇಂಚಿಂಚಾಗಿ ತಿಳಿದು ಅಂಥದ್ದೇ ಕೆಲವು ಸನ್ನಿವೇಶಗಳನ್ನು ನಿಭಾಯಿಸುವುದು....ಒಂದಲ್ಲಾ ಎರಡಲ್ಲಾ.

ಶಿಖರವನ್ನೇರಿ ಇನ್ನೇನು ತುತ್ತ ತುದಿ ತಲುಪುವಾಗಿನ ಅಸದೃಶ, ಅದಮ್ಯ ಅನುಭವ ನಿಜಕ್ಕೂ ಅವರ ಮಾತುಗಳಲ್ಲೇ ಕೇಳಬೇಕಾದ್ದು. ಬಹುಶಃ ಜಗತ್ತನ್ನೇ ಗೆದ್ದರೂ ಸಿಗದ ಸಂತೋಷ ಎವರೆಸ್ಟ್ ಶಿಖರವನ್ನು ಪೂರ್ತಿಯಾಗಿ ಏರಿದವರಿಗೆ ಸಿಗುತ್ತದೆ ಅನಿಸುತ್ತದೆ. ಯಾವುದೋ ಚಿಕ್ಕ ಸಾಮಾನ್ಯ ಬೆಟ್ಟವನ್ನೇರಿದ ನಮ್ಮ ಆನಂದವನ್ನೇ ನಾವು ಛಾಯಾಚಿತ್ರಗಳಲ್ಲಿ ಸೆರೆಹಿಡಿದು, ಅವುಗಳನ್ನು ಅಂತರ್ಜಾಲದ ಮೂಲಕವೋ ಆಲ್ಬಮ್ಮುಗಳ ಮೂಲಕವೋ ಸ್ನೇಹಿತರುಗಳಿಗೆ ತೋರಿಸುತ್ತಾ ಹೇಳಲಾಗದ ಖುಷಿಯನ್ನು ಅನುಭವಿಸುತ್ತೇವೆ ಎಂದಮೇಲೆ ಅಂತಹ ಎತ್ತರದ ಶಿಖರದ ತುತ್ತ ತುದಿಯಮೇಲೆ ನಿಂತು ಸುತ್ತಲ ಜಗತ್ತನ್ನು ನೋಡಿದಾಗ ಅವರಿಗೇನನ್ನಿಸಿರಬಹುದು? ಕಣ್ಣಿಗೆ ಕಾಣುವಷ್ಟು ದೂರ ಅವರಿಗೆ ಏನು ಕಾಣಿಸಿರಬಹುದು ? ಪರ್ವತವನ್ನೇರಿ ಮುಗಿದು ತಿರುಗಿ ಕೆಳಗಿಳಿದಾದಮೇಲೆ ಪರಸ್ಪರರನ್ನು ಬೀಳ್ಕೊಡುವಾಗ ಅಷ್ಟುದಿನ ಒತ್ತಟ್ಟಿಗೆ ಇದ್ದ ಅನುಭವ ಪ್ರಾಯಶಃ ಒಂದೇ ಶಾಲೆಯಲ್ಲಿ ಒತ್ತಟ್ಟಿಗೇ ಬಹುಕಾಲ ಕಲಿತು ಮುಂದಿನ ಓದಿಗಾಗಿ ದೂರವಾಗುವ ಸಹಪಾಠೀ ಸ್ನೇಹಿತರುಗಳ ಮನದಲ್ಲಿನ ಅಗಲಿರಲಾರದ ಭಾವ ಇರಬಹುದೇ? ಮನೆಗೆ ಹಿಂದಿರುಗಿ ವರ್ಷಗಳು, ದಶಕಗಳು ಕಳೆದಾದಮೇಲೊಂದು ದಿನ ನೆನಪಾದಾಗ ಆ ಭಾವ ಹೇಗಿರಬಹುದು ? ಅದೊಂದು ಅನಿರ್ವಚನೀಯ ಆನಂದವಲ್ಲವೇ ? ತೇನ್‍ಸಿಂಗ್ ಅದೇ ಭಾವದಲ್ಲಿ ಕೊನೆಯವರೆಗೂ ಇದ್ದರು. ಅಂತರ್ಜಾಲವಿಲ್ಲದ ಆ ಕಾಲದಲ್ಲಿ ನಾವೆಲ್ಲಾ ಸೇರಿ ನಮ್ಮ ಶಿಕ್ಷಕರೊಬ್ಬರ ಸಹಾಯದೊಂದಿಗೆ ತೇನ್‍ಸಿಂಗ್ ವಿಳಾಸ ಹುಡುಕಿ ಪತ್ರಿಸಿದ್ದೆವು. ಮರಳಿ ಉತ್ತರ ಕಳುಹಿಸಿದ ಪುಣ್ಯಾತ್ಮ ಜೊತೆಗೆ ತಮ್ಮ ಒಂದು ಪಾಸ್‍ಪೋರ್ಟ್ ಫೋಟೋ ಕೂಡ ಕಳಿಸಿದ್ದರು! ಆ ದಿನಗಳನ್ನು ನೆನೆಸಿಕೊಂಡಾಗ ಮತ್ತೆ ಹೈಸ್ಕೂಲಿಗೆ ಹೋಗುವ ಮನಸ್ಸಾಗುತ್ತದೆ, ’ಶಿಖರಗಾಮಿಗಳ’ನ್ನು ಓದುವ ಬಯಕೆ ಮೂಡುತ್ತದೆ, ಪರ್ವತಗಳು ದೂರದಲ್ಲಿ ನಿಂತು " ಬಾ " ಎಂದವೇನೋ ಎಂಬ ಪರ್ವತಾರೋಹಣದ ಹುಚ್ಚು ಒಮ್ಮೆನೋಡಿಬಿಡುವಾ ಎಂಬ ಮನೋಗತ ಕುದುರೆಯನ್ನೇರಿಬಿಡುತ್ತದೆ! ಅಷ್ಟಕ್ಕೂ ಪ್ರಕೃತಿಯ ಮುಂದೆ ಅದರ ಸೌಂದರ್ಯ ಸಿರಿಯ ಮುಂದೆ ಹುಲುಮಾನವ ಯಾವ ಲೆಕ್ಕ ಅಲ್ಲವೇ ? ನಮಸ್ಕಾರ.

Monday, November 21, 2011

ಹರೆಯದ ಲಾಸ್ಯ !

ಸಾಂಕೇತಿಕ ಚಿತ್ರ ಋಣ : ಅಂತರ್ಜಾಲ

ಹರೆಯದ ಲಾಸ್ಯ !

ಹೇಳಿಕೊಳ್ಳಲಾಗದಂಥ ಮೃದುಮಧುರದ ಭಾವಗಳವು
ಚಿಗುರನೊಡೆದು ಮನದ ಮರದಿ ಕಳೆಯು ಕಟ್ಟಿದೆ
ಆಳ ಬೇರು ಬೀಳಲಿಳಿದು ಬೀಳದಂಥ ಹಾವಗಳವು
ಚಿಗರೆಮರಿಯ ಚೆಂಗಾಟವು ಬಂದುಬಿಟ್ಟಿದೆ !

ಎದುರಿಗಿರಲದಾವ ಭಯವೋ ಹುದುಗಿ ಎದೆಯ ಸತ್ವಗಳನು
ಬದಿಗೆ ಸರಿಸಿ ಬೇರೆ ಮಾತನಾಡುತಿರುವಲಿ
ಒದಗಿಬರದ ಒಡಲಕರೆಯು ಹೆದರಿ ಗೆದರಿ ತತ್ವಗಳನು
ಅದುರುತಿರುವ ತುಟಿಗಳಿನಿತು ಒಣಗುತಿರುವಲಿ

ತಡೆಯಲಾರದಂಥ ಚಳಿಯು ಬಡಿದು ಗಾಳಿ ಬೀಸುತಿರಲು
ಗುಡುಗುತಿಹುದು ಪಡೆವ ಬಯಕೆ ಬಿಡದೆ ನನ್ನಲಿ
ಬೆಡಗಿ ನಿನ್ನ ನೋಡಿ ಸೋತ ತುಡುಗು ಬುದ್ಧಿ ಕಾಸುತಿರಲು
ಒಡತಿ ಹೇಗೆ ಮಂಡಿಸುವುದು ಒಸಗೆ ನಿನ್ನಲಿ ?

ಹುಲ್ಲೆಯಂಥ ಮುದ್ದು ಹುಡುಗಿ ಒಲ್ಲೆನೆಂಬ ಮಾತು ಸಲ್ಲ
ಮೊಲ್ಲೆಮೊಗದ ನಗುವ ಕಂಡು ಮಾಗಿ ಮಂಜಲಿ
ಗೆಲ್ವೆನೆಂಬ ಧೈರ್ಯವಿಲ್ಲ ಮೀನ ಹೆಜ್ಜೆ ಕಾಣಿಸೊಲ್ಲ
ಎಲ್ಲೆಯೊಳಗೇ ಸೆಳೆವ ಆಸೆ ಇರುವ ನಂಜಲಿ !!

Thursday, November 17, 2011

ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ !


ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ!

ನೀವು ತಿಳಿದಷ್ಟೆಲ್ಲಾ ಸಪ್ಪೆ ಹುಡುಗರು ನಾವಾಗಿರಲಿಲ್ಲ, ಸುಮ್ನೇ ಬೊದ್ದ [ಪೆದ್ದರು ಎಂಬುದಕ್ಕೆ ಹವ್ಯಕ ಪರಿಭಾಷೆ] ಮಕ್ಕಳಾಗಿರಲಿಲ್ಲ. ನಾವು ಮಾಡದ ಕಿಲಾಡಿ ಇರಲಿಲ್ಲ. ಕಿಲಾಡಿ ಹನುಮನೋ ಕಿಲಾಡಿ ಕಿಟ್ಟ [ಕೃಷ್ಣ]ನೋ ಇದ್ದರೆ ಅವರನ್ನೂ ಮೀರಿಸಿಬಿಡುವ ಕಿಲಾಡಿಗಳು ನಾವಾಗಿದ್ದೆವು ಹಾಂ..,. ಹಾಗಂತ ಹಾಳುಗೆಡಹುವ ಕಿಲಾಡಿತನ ನಮದಲ್ಲ, ಸಿಕ್ಕ ಸಮಯದಲ್ಲಿ ಸಿಕ್ಕವಸ್ತುಗಳನ್ನೇ ಸದುಪಯೋಗಪಡಿಸಿಕೊಂಡು ಸಿಗಬಹುದಾದ ಮಜಾ ತೆಗೆದುಕೊಳ್ಳುವುದು ನಮ್ಮ ಜಾಯಮಾನವಾಗಿತ್ತು ! ಅಪ್ಪಿ-ತಪ್ಪಿ ನಮಗರಿವಿಲ್ಲದೇ ಪೆದ್ದುಬಿದ್ದಿದ್ದೆಂದು ನಿಮಗನ್ನಿಸಿದರೆ ಅದಕ್ಕೆಲ್ಲಾ ನಾವು ಜವಾಬ್ದಾರರಾಗುವುದಿಲ್ಲ. ಪಾಪ ಅಂದಿನ ಮಕ್ಕಳಿಗೆ ಇವತ್ತಿನ ದಿನದಂತೇ ಏನ್ ಟಿವಿ ಗೀವಿ ಎಲ್ಲಾ ಇತ್ತೇ ? ಪೋಗೋ ಕಾರ್ಟೂನ್ ನೆಟ್ವರ್ಕು, ನಿಕ್ಕು ಅಂತೆಲ್ಲಾ ಹಲವಾರು ಮಕ್ಕಳಾಟಿಗೆಯ ಮಾಧ್ಯಮ ವಾಹಿನಿಗಳಿದ್ದವೇ ? ಏನೋ ಪಾಪದ ಮಕ್ಕಳಾದ ನಾವು ಇದ್ದುದರಲ್ಲೇ ಅಡ್ಜೆಸ್ಟ್ ಮಾಡ್ಕೊಂಡು ಆಡುತ್ತಿದ್ದೆವಪ್ಪ.

ನಮ್ಮ ಆ ಪೂರ್ವಾಶ್ರಮದಲ್ಲಿ ನಾವು ಮಕ್ಕಳಾಗಿದ್ದಾಗ ರೇಡಿಯೋ ಅಂದರೇ ದೊಡ್ಡದು! ಅದರೊಳಗೆ ಮನುಷ್ಯರು ಹೊಕ್ಕಿ ಕೂತು ಹಾಡುವಾಗ ಕೆಲವು ಹಾಡುಗಳನ್ನು ನಮಗೆ ಹಿಡಿಸಿದರೆ ಕಿವಿಗೊಟ್ಟು ಕೇಳುತ್ತಿದ್ದೆವು. ಈ ವಾರ್ತೆಪಾರ್ತೆ ಎಲ್ಲಾ ನಮ್ಗೆ ಬೇಕಾಗ್ತಿರ್ಲಿಲ್ಲ. ಅಂದಹಾಗೇ ಆ ದಿನಗಳಲ್ಲಿ ಇಂದಿನಂತೇ ದಿನಬೆಳಗಾದ್ರೆ ರಕ್ತಪಾತ, ಹದಿನಾರು ರಸ್ತೆ ಅಪಘಾತ, ಮತ್ತೆಲ್ಲೋ ವಿಮಾನ ಅಪಘಾತ, ಧರಣಿ-ಹರತಾಳ ಇವೆಲ್ಲಾ ಕಮ್ಮಿ ಇದ್ದವೇನೋ ಅನಿಸುತ್ತದೆ. ಆ ಬಗ್ಗೆ ನಾವು ತಲೆ ಕೆಡಿಸಿಕೊಂಡಿದ್ದರಲ್ವಾ ಗೊತ್ತಿರ್ತಿತ್ತು. ತಲೆಯೊಳಗೆ ಏನಾದ್ರೂ ಇದ್ರಲ್ವಾ ತಲೆ ಕೆಡಿಸಿಕೊಳ್ಳೋದಕ್ಕಾಗ್ತಿತ್ತು ! ಛೇ ಛೇ ತೀರಾ ಆಲೂಗಡ್ಡೆ ಅಂತ ತಿಳಿಯೋ ಅವಶ್ಯಕತೆಯಿಲ್ಲ ಬಿಡಿ ಓಹೊಹೊ...ನಮಗ್ಗೊತ್ತು ನೀವು ನಮ್ತರಾನೇ ಆಟ ಆಡಿದ್ದು, ಬಿಟ್ಗೊಂಡ್ ತಿರ್ಗಿದ್ದು, ನಾಯಿಗೆ ಕಲ್ಲು ಹೊಡ್ದು ಅದು ಅಟ್ಟಿಸಿಕೊಂಡು ಬಂದಾಗ ಹೆದರಿ ಗಿಡವೇರಿ ಕೂತಿದ್ದು, ಇರೋ ಒಂದೆರಡು ಚಡ್ಡಿ ಒದ್ದೆಯಾಗಿದ್ದಾಗ ಅಪ್ಪನ ಹಳೇ ಅಂಗಿ ಹಾಕ್ಕೊಂಡು ಮೊಳಕಾಲ ಕೆಳವರೆಗೂ ಅಲೆಸುತ್ತಾ ಮಾಸ್ತರು ಬಂದ ಸುದ್ದಿ ಕೇಳಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದು...ಎಲ್ಲಾ ಗೊತ್ತಿರೋವೇ.

ಅಜ್ಜನ ಮನೇಲಿ ಎಮ್ಮೆ ಕರುಹಾಕಿದ್ರೂ ಸಾಕು ನಮ್ಮ ಕನ್ನಡ ಶಾಲೆಗೆ ಹೋಗುವುದಕ್ಕೆ ನಮಗೆ ಹಡೆದ ಸೂತಕ ತಾಗಿಬಿಡುತ್ತಿತ್ತು. ಅಜ್ಜನ ಮನೆಯ ತಿರುಗಾಟ ಮುಗಿಸಿದ ಶಾಲೆಗೆ ಮರಳಿದ ನಾವು ಅದೇ ಕಾರಣವನ್ನು ಕೊಡುವುದೂ ಇತ್ತು. ಆಗಿನ ಮಾಸ್ತರುಗಳೂ ಇಷ್ಟೆಲ್ಲಾ ಹೋಮ್ ವರ್ಕ್ ಕೊಡ್ತಿರಲಿಲ್ಲ ಬಿಡಿ; ತಮಾಷೆಗಲ್ಲ ಆ ವಿಷಯದಲ್ಲಿ ನಾವೇ ಪುಣ್ಯವಂತ್ರು! ಅಜ್ಜನ ಮನೇಲಿ ಒಂದು ರೇಡಿಯೋ ಇತ್ತು. ಅದೇನೋ ಟ್ರಾನ್ಸಿಸ್ಟರು ಅಂತಿದ್ರಪ್ಪ ಸುಣ್ಣದ ಅಂಡೆ ಥರದ ತಿರಗಣಿ ಇರುವ ಪೆಟ್ಗೆ. ಅದರೊಳಗೆ ಒಂದು ಬಿಳೇ ಕಡ್ಡಿ ಆ ಕಡೆ ಈ ಕಡೆ ಓಡಾಡ್ತಿತ್ತು-ಯಾಕೋ ಗೊತ್ತಿಲ್ಲ.

ಅಜ್ಜನ ಮನೆಗೆ ನೆರೆಕೆರೆಯ ಹತ್ತಾರು ಜನ ರೇಡಿಯೋ ಕೇಳಲು ಬರ್ತಿದ್ರು. ರೇಡಿಯೋ ಅಂತ ಬರೀತಾ ಇರೋದು ಈಗ; ಆಗೆಲ್ಲಾ ಅದು ನಮ್ಗೆ ರಡ್ಯೋ ! ರಡ್ಯೋ ಕೇಳುವ ಬಳಗದಲ್ಲಿ ಅಪ್ಪಿ ಅಜ್ಜ ಕೂಡ ಒಬ್ಬ. ಅಜ್ಜನ ಮ್ನೇಲಿ ಇದ್ದಿದ್ದು ಒಂದೇ ಆರಾಮ್ ಕುರ್ಚಿ ! ಆ ಆರಾಮ್ ಕುರ್ಚಿಗೆ ಹಾಕುವ ಬಟ್ಟೆ ಇದ್ಯಲ್ಲ ಅದನ್ನು ತೆಗೆದು ತೊಳ್ಯೋ ಹಾಗೇ ಅದಕ್ಕೆ ಮೇಲೇ ಕೆಳಗೆ ಗೂಟ ತೂರಿಸಿ ಸಿಗಿಸೋ ವ್ಯವಸ್ಥೆ ಇತ್ತು. ಅಪ್ಪಿ ಅಜ್ಜ [ ಅಜಮಾಸು ೫೦ ವರ್ಷದ ವ್ಯಕ್ತಿ] ದಿನಾಲೂ ಬರ್ತಿದ್ದಂವ ಒಂದ್ ದಿನ ಆರಮ್ ಕುರ್ಚಿ ಬಿಟ್ಟಿದ್ದ್ರೆ ಹೇಳಿ. ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ... ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ..., ಅಬಬಬಬ ಅದೇನವನ ಅಜ್ಜ ಮಾಡಿಟ್ಟ ಹಕ್ಕು ಎಂಬಂತೇ ಕೂತು ಬಿಡ್ತಿದ್ದ. ಆರಾಮ್ ಕುರ್ಚಿ ಕೂತು ಅಲ್ಲೇ ಸಣ್ಣಗೆ ಜೋಲೀ ಹೋಡಿತಾ ಮಜಾ ತಗೊಳೋದಕ್ಕೆ ಬಾಳಾ ಒಳ್ಳೆ ಸೌಲತ್ತು. ಇವತ್ತಿಗೂ ಎಲ್ಲಾದ್ರೂ ಆರಮ್ ಕುರ್ಚಿ ಇದ್ರೆ ಹೇಳಿ ದೇವಸ್ಥಾನಕ್ಕೆ ಹೋದೋರೆಲ್ಲಾ ಕುಂತೆದ್ದು ಬರೋ ಹಾಗೇ ಒಂದ್ಸಲ ಆ ಕುರ್ಚಿಮೇಲೆ ಕೂತೆದ್ದೇ ಬರೋದು.

ಅಪ್ಪಿ ಅಜ್ಜ ಆರಾಮ್ ಕುರ್ಚಿ ಬಿಡೋ ಹಾಗೆ ಏನಾದ್ರೂ ವ್ಯವಸ್ಥೆ ಆಗ್ಬೇಕಲ್ಲಾ ಎಂಬ ಇಚ್ಛೆಯ ಜೊತೆಗೆ ತಾನೊಬ್ನೇ ಕೂತು ನಮಗ್ಯಾರಿಗೂ ಆ ಕುರ್ಚಿ ಕೊಡ್ತಿರಲಿಲ್ಲ ಎಂಬ ಹೊಟ್ಟೆಕಿಚ್ಚೂ ಕೂಡ ಇತ್ತು. ಏನದ್ರೂ ಮಾಡ್ಬೇಕಲ್ಲಾ ಅಂದ್ಕೊಂಡ ಮನಸ್ಸಿಗೆ ಒಮ್ಮೆ ಮಾಷ್ಟರ್ ಪ್ಲಾನು ಬಂದೇ ಬಿಟ್ಟಿತ್ತು! ಒಂದಿನ ಹೀಗೇ ಎಮ್ಮೆ ಕರುಹಾಕಿದ ಸೂತಕದ ನೆವದಲ್ಲಿ ಶಾಲೆಗೆ ರಜಾ ಒಗೆದ ಸಮಯ ಅಜ್ಜನ ಮನೆಗೆ ಹೋಗಿದ್ದಾಗ ಮಧ್ಯಾಹ್ನ ೨:೦೦ ಗಂಟೆಗೆ ಸಿಲೋನ್ ಸ್ಟೇಶನ್ನಂತೆ ಅದರಲ್ಲಿ ಹಾಡು ಕೇಳೋಕೆ ಅಪ್ಪಿ ಅಜ್ಜನ ಸವಾರಿ ಬಂದೇ ಬಂತು. ನಮಗೆ ಮೊದಲೇ ಅಂದಾಜಿತ್ತಲ್ಲಾ.. ಪೂರ್ವ ಸಿದ್ಧತೆ ನಡೆದೇ ಹೋಗಿತ್ತು. ಆರಾಮ್ ಕುರ್ಚಿಮೇಲೆ ಕುಂತ ಅಪ್ಪಿ ಅಜ್ಜ " ಅಯಪ್ಪಾ ಇದೆಂತದಾ " ಅಂದ್ಕಂಡು ನಿಧಾನಕ್ಕೆ ಬೆನ್ನು ಉಜ್ಕೋತ ಎದ್ದ! ಅರ್ಥವಾಯ್ತಲ್ಲ? ಕುರ್ಚಿಯ ಬಟ್ಟೆಯ ಒಂದು ಕಡೆಯ ಕೋಲನ್ನು ತೆಗೆದು ಬಟ್ಟೆಯನು ಸುಸ್ಥಿಯಲ್ಲಿ ಸರಿ ಇದ್ದಹಾಗೇ ಕಾಣುವಂತೇ ಜೋಡಿಸಲಾಗಿತ್ತು. ಅಪ್ಪಿ ಅಜ್ಜನ ಸವಾರಿ ದೊಪ್ಪನೆ ನೆಲಕ್ಕೆ ಕುಸಿದಿತ್ತು! ಹಾಗೆ ಮಾಡಬಾರ್ದು ಅಪಘಾತವಾಗ್ತದೆ ಎಂಬೋದೆಲ್ಲಾ ಗೊತ್ತಿದ್ರಲ್ವಾ ಸ್ವಾಮೀ ನಮ್ಗೆ! ಆಮೇಲೆ ದೊಡ್ಡವರ್ಯಾರೋ ಕೇಳಿದ್ರು, ಬೈದ್ರು ಅದೂ ಇದೂ ಅಂತ ಹೇಳಿ ನಂಬ್ರ ಅಲ್ಲಿಗೇ ನಿಂತತು ಬಿಡಿ. ಅದಾರಾಲಾಗಾಯ್ತು ಅಪ್ಪಿ ಅಜ್ಜ ಆರಾಮ್ ಕುರ್ಚಿಮೇಲೆ ಕೂತರೆ ಹೇಳಿ ! ಕನಸಲ್ಲೂ ನೆನೆಸ್ಕೊಂಡು ಹಾರಿ ಬಿದ್ದಿರ್ಬೇಕು !

ಶಾಲೆಯ ಸಮಾರಂಭಗಳಲ್ಲಿ ಜೈಕಾರ ಹಾಕುವುದೂ ಘೋಷಣೆ ಕೂಗುವುದು ಎಲ್ಲಾ ಇರ್ತಿತ್ತಲ್ಲಾ ಅಲ್ಲೂ ಅದೇ ಕತೆ. ನಮ್ಗೆ ಬೇಡಾ ಅಂದ್ರೂ ಮಾಡಿ ಅಂದ್ರೆ ಇನ್ನೇನ್ ಮಾಡೋದು? ಯಾಕೆ ಹಾಗೆ ಕೂಗ್ಬೇಕು ಅದರಿಂದ ಏನು ಪ್ರಯೋಜನ ಎಂಬುದು ನಮಗೆಲ್ಲಾ ಗೊತ್ತಿರ್ಲಿಲ್ಲ. ಏನಾದ್ರೂ ’ರಾಷ್ಟ್ರೀಯ ಹಬ್ಬ’ ಎಂಬ ಸುದ್ದಿ ಇದ್ದ್ರೆ ಬಾವುಟ ಹಾರ್ಸೋದು ಪೆಪ್ಪರಮಿಂಟ್ ಇಸ್ಕಳದು ಅದಷ್ಟೇ ನಮ್ಕೆಲಸ; ಬಾವುಟ ಹಾರ್ಸಬೇಕೂ ಅಂತಾನೂ ಇರ್ಲಿಲ್ಲ..ಪೆಪ್ಪರಮಿಂಟ್ ಕೊಟ್ಬುಟ್ರೆ ಸರಿ, ನಮ್ ಪಾಡಿಗೆ ನಾವು! ವಲ್ಲಭ ಭಾಯಿ ಪಟೇಲರ ಬಗ್ಗೆ ಬಂದಾಗ ’ಉಕ್ಕಿನ ಮನುಷ್ಯ’ ಅಂತಿದ್ರಲ್ಲಾ ಮಾಸ್ತರಿಗೆ ತಲೆ ಇಲ್ಲಾ ಅಂದ್ಕೊಂಡಿದ್ದೆವು ನಾವು. ಉಕ್ಕಿನಿಂದ ಮನುಷ್ಯ ಆದ್ರೆ ಜೀವ ಇರುತ್ತಾ? ಅಷ್ಟೂ ತಲೆ ಬೇಡ್ವಾ ಅಂತ ! ಅದ್ರಲ್ಲೂ " ಬೋಲೋ ಭಾರತ್ ಮಾತಾ ಕಿ " ಅಂದ ತಕ್ಷಣ " ನಿಮ್ಮನೆ ಕರಿಕುನ್ನಿ ನೇತಾಕಿ " ಅಂದ್ಕೊಳ್ತಿದ್ದೆವು ಮನಸ್ನಲ್ಲಿ. ಸ್ವಾಮೀ ಏನೂ ಅಪಾರ್ಥ ಮಾಡ್ಕೊಳ್ ಬೇಡಿ-ಇದು ದೇಶಕ್ಕೆ ಅವಮರ್ಯಾದೆ ಮಾಡೋ ಹಂಬಲ ಅಲ್ಲ, ಬದಲಾಗಿ ನಮ್ಮ ಅಂದಿನ ಹೋಡ್ ಬುದ್ಧಿವಂತಕೆ.

ಶಾಲೆಯಲ್ಲಿ ಬಾಯಿಪಾಠ ಹೇಳಿಕೊಡ್ತಾ ಇದ್ರು. ಪ್ರತಿನಿತ್ಯ ಅದು ಶಿಸ್ತುಬದ್ಧ ಆಚರಣೆ. ಒಂದೊಂದ್ಲಿ ಒಂದ ಒಂದೆರಡ್ಲ ಎರಡ...ಹೀಗೇ ಮಗ್ಗಿ ಗಿಗ್ಗಿ ವಾರ ನಕ್ಷತ್ರ, ರಾಶಿ, ಸಂವತ್ಸರ ಇದೆಲ್ಲಾ ಇರ್ತಿತ್ತು. ನಮ್ಮಲ್ಲಿ ಕೆಲವು ಶಿಳ್ಳೆಕ್ಯಾತಗಳಿದ್ದವು. ನಾವೆಲ್ಲಾ ಸೇರಿ ಒಂದ್ಕಾಲ್ ಕಾಲ ಅಂತ ಹೇಳುವುದಕ್ಕೆ ಪ್ರಾಸಬದ್ಧವಾಗಿ ಅದನ್ನು ತಿರುಗಿ ಕಟ್ಟುತ್ತಿದ್ದೆವು. ಉದಾಹರಣೆಗೆ ಒಂದ್ಕಾಲ್ ಕಾಲ ಮಾಸ್ತರ ಬೆನ್ನಿಗೆ ಕೋಲ....ಒಂದ್ ಸಿದ್ದ ಭತ್ತ.. ಮಾಸ್ತರ್ ಸತ್ತ. ಯಾರಾದ್ರೂ ಮಾಸ್ತರು ಹೊಡೆದ ನೋವು ಕೆಣಕಿದ್ರೆ ಅದರ ಆರ್ಭಟ ಜಾಸ್ತಿಯಾಗಿರುತ್ತಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. [ ಅಲ್ಲಾ ವಿಷಯ ನಿಮ್ಮಲ್ಲೇ ಇರ್ಲಿ ಈಗ ನನ್ನನ್ನೂ ಸೇರಿದಂತೇ ನಮ್ಮ ಶಿಳ್ಳೇಕ್ಯಾತಗಳೆಲ್ಲಾ ಎಂಜಿನೀಯರುಗಳಾಗಿ ಬೇರೇ ಬೇರೇ ವೃತ್ತಿಗಳಲ್ಲಿ ನಿರತರಾಗಿದ್ದೇವೆ; ಕಲಿಸಿದ ಮಾಸ್ತರುಗಳನ್ನೆಲ್ಲಾ ಆಗಾಗ ನೆನೆಯುತ್ತಲೇ ಇರುತ್ತೇವೆ.]

ಕಾರ್ತೀಕ ಮಾಸದಲ್ಲಿ ಊರ ದೇವಸ್ಥಾನಗಳಲ್ಲಿ ಭಜನೆ ನಡೆಯುತ್ತಿತ್ತು. ಅದರಲ್ಲಿ ಪುರಂದರ ದಾಸರ ಭಜನೆಗಳೇ ಜಾಸ್ತಿ. ದಾಸರ ಪದಗಳಲ್ಲಿ ಅತೀ ಹೆಚ್ಚು ಸಿಗುವುದು ಪುರಂದರ ದಾಸರದ್ದು ಅಲ್ವೇ? ಹಾಗೆ ಹಾಡುವ ಭಜನೆಗಳಲ್ಲಿ ’ಹರಿಕುಣಿದಾ ನಮ್ಮ ಹರಿಕುಣಿದ..’ ಭಜನೆ ಕೂಡಾ ಒಂದು. ಅದರಲ್ಲಿ ಕೊನೇ ಸಾಲು ’ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ ’. ನೀಲ್ಕೋಡ್ ಕಡೆಯ ಹಾಗಲಬಳ್ಳಿ ನೆಂಟರಲ್ಲಿ ’ಪರಮ ಭಾಗವತ’ ಎನ್ನುವವರೂ ಒಬ್ಬರು. ಅವರ ಹೆಸರು ಪರಮೇಶ್ವರ ಎಂದಿರಬೇಕು, ಕುಟುಂಬದ ಹೆಸರು [ಸರ್ ನೇಮ್] ಭಾಗವತ ಎಂಬುದಾಗಿ ಇತ್ತು. ಹಿಂದಕ್ಕೆ ಯಕ್ಷಗಾನ ಭಾಗವತಿಕೆ ಮಾಡುವ ಮನೆತನವನ್ನು ಭಾಗವತರು ಎಂದೇ ಕರೆಯುತ್ತಿದ್ದರು. ಪರಮೇಶ್ವರ ಎನ್ನುವುದು ಕರೆಯುವುದಕ್ಕೆ ಬಹಳ ಉದ್ದವಾಗುತ್ತದೆ ಎಂಬ ಅಡಚಣೆ ಗ್ರಹಿಸಿ ಪರಮ ಭಾಗವತ ಅಥವಾ ಪರಂ ಭಾಗೊತ ಅಂತ ಕರೀತಿದ್ರು. ಇಂಥಾ ಪರಮ ಭಾಗವತರ ಮನೆ ನೀಲ್ಕೋಡ್ನಲ್ಲಿ ಒಂದು ಕೇರಿಯಲ್ಲಿ ಇತ್ತು. ಆ ಕೇರಿಯಲ್ಲಿ ಪುರಂದರ ವಿಠಲನೆಂಬಾತ ಆಡುತ್ತಾನೆ ಅಂತಾದ್ರೆ ಪುರಂದರ ದಾಸರು ಅದನ್ನು ಹ್ಯಾಗೆ ಬಂದು ನೋಡಿದ್ರು ? ಅರ್ಥವಾಗದ ಬಹಳ ದೊಡ್ಡ ಸಮಸ್ಯೆ ನಮ್ಮದು! ಪುರಂದರ ದಾಸರು ಬದುಕಿಲ್ಲ ಬಹಳ ಹಿಂದೇ ಹಾಡು ಬರೆದರು ಎಂಬುದು ಗೊತ್ತಿತ್ತು..ಆದ್ರೆ ಈಗಿರುವ ಪರಮ ಭಾಗವತರ ಕೇರಿಯನ್ನು ಆಗಲೇ ಅದು ಹೇಗೆ ಅವರು ಕಂಡರು? ತಪಸ್ಸಿನ ಫಲವೇ ? ಆಗಲೇ ಭವಿಷ್ಯ ನುಡಿದರೇ? ಗೊತ್ತಾಗಿರ್ಲಿಲ್ಲ.

ಪರಮ ಭಾಗವತರು ನಮ್ಮನೆಗೆ ಅಪರೂಪಕ್ಕೆ ಬರುವುದಿತ್ತು, ಚಾ -ತಿಂಡಿ ವಗೈರೆ ಅಲ್ಪೋಪಹಾರವೋ ಬೇಸಿಗೆಯಾದರೆ ಶೈತ್ಯೋಪಚಾರವೋ ಊಟವೋ ಮುಗಿಸಿ ಅದೂ ಇದೂ ಕಥಾಕಾಲಕ್ಷೇಪವಾದಮೇಲೆ ಮತ್ತೆ ಅವರು ವಾಪಸ್ಸಾಗುತ್ತಿದ್ದರು. ಹೀಗಿದ್ದ ಒಂದು ಸಂದರ್ಭ ಅವರು ಬಂದಾಗ ನಾನು ಧೈರ್ಯಮಾಡಿ ಕೇಳಿಯೇ ಬಿಟ್ಟೆ. " ನಿಮ್ಮ ಕೇರಿಯಲ್ಲಿ ಪುರಂದರ ವಿಠಲ ಆಡಲಿಕ್ಕೆ ಬರುತ್ತಾನಂತೆ ಎಲ್ಲಿ ? " ನನ್ನ ಚಿಕ್ಕಪ್ಪಂದಿರು, ತಂದೆ, ಅಜ್ಜ ಆದಿಯಾಗಿ ಅಲ್ಲಿದ್ದ ಎಲ್ಲರೂ ನಕ್ಕರೆ ನಮ್ಮ ಗತಿ ಏನಾಗಬೇಡ ಸ್ವಾಮೀ ? ಪರಮ ಭಾಗವತರಿಗೂ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿರಬೇಕು.

ಕೆದಕಿದರೆ ನೂರಾರು ಕಥೆಗಳನು ಬರೆವೆನು
ಬೆದಕಿದರೆ ಹಲವಾರು ಘಟನೆಗಳ ತರುವೆನು
ಕೆದಕು-ಬೆದಕಿನ ಹಲವು ಸ್ವಾರಸ್ಯಗಳ ನಡುವೆ
ಬದುಕು ನೀರಸವಾಗದಂತಿರಲಿ
ಇದಕೆ ನಿನಗೊಂದಲ್ಲ ಹತ್ತಾರು ನೂರಾರು ನಮನಗಳು
ತದುಕದೇ ಸಲಹೆಮ್ಮ ಅಧಿಕ ಪ್ರೀತಿಯ ಪುರಂದರ ವಿಠಲ !

Wednesday, November 16, 2011

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!


ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!

ಆನೆಗೆ ಆನೆ ಭಾರವಾಗಿರುವುದಂತೂ ನಿಜ. ಮೊದಲೇ ಕಾಡುಗಳ್ಳರು, ರಾಜಕಾರಣಿಗಳು ಮತ್ತು ಹೊಸದಾಗಿ ಜಮೀನಿಗಾಗಿ ಒತ್ತುವರಿಮಾಡುವ ರೈತಾಪಿ ಜನರು ಈ ಮೂರು ಕಾರಣಗಳಿಂದ ಅಡವಿ ಪ್ರದೇಶ ಕಮ್ಮಿಯಾದಮೇಲೆ ಬೃಹತ್ ಕಾಡುಪ್ರಾಣಿಗಳಿಗೆ ಜೀವನ ಕಷ್ಟಕರವೇ ಆಗಿದೆ. ಅದರಲ್ಲಂತೂ ಕಳೆದೊಂದು ವರ್ಷದಿಂದ ಬಿದಿರು ಹೂ ಬಿಟ್ಟು ತನ್ನನ್ನು ತಾನೇ ಸಂಪೂರ್ಣ ನಾಶಪಡಿಸಿಕೊಳ್ಳುವ ಹನ್ನೊಂದು ವರ್ಷಕ್ಕೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ ನಡೆದಿದೆ. ದಿನಕ್ಕೆ ೨೫೦ ಕೆಜಿ ಆಹಾರ ಅದರಲ್ಲೂ ಹೆಚ್ಚಾಗಿ ಬಿದಿರು ಸೊಪ್ಪನ್ನು ತಿಂದು ಬದುಕುವ ಆನೆ ಎಲ್ಲಿಂದ ಯಾವರೀತಿಯಲ್ಲಿ ಆಹಾರ ಹುಡುಕಿಕೊಂಡೀತು ? ತಿನ್ನಲು ಹುಡುಕುತ್ತಾ ಸಾಗುವಾಗ ಹಿಂದೊಮ್ಮೆ ತನ್ನ ರಹದಾರಿಯಾಗಿದ್ದ ಪ್ರದೇಶಗಳಲ್ಲಿ ಕಾಲಿರಿಸಿದಾಗ ಹಲವು ಜಾಗಗಳು ರೈತರ ಕೈವಶವಾಗಿ ಹಲವು ತೆರನಾದ ಬೆಳೆಗಳು ಬೆಳೆದುನಿಂತಿರುವುದನ್ನು ನೋಡಿವೆ. ಆನೆ ಕುಟುಂಬ ಅಥವಾ ಸಂಘಜೀವಿಯಾದುದರಿಂದ ಬಂದರೆ ಇಡೀ ಸಮುದಾಯ ಬರುತ್ತವೆ; ತಿಂದರೆ ಎಲ್ಲವೂ ಮೆಲ್ಲುತ್ತವೆ. ಹಾಗೆ ಬಂದಿದ್ದು ಕರ್ನಾಟಕದ ಹಾಸನ ಜಿಲ್ಲೆಯ ಕೆಲವು ಭಾಗಗಳಿಗೆ ಮೈಸೂರು ಜಿಲ್ಲೆಯ ಹಲವು ಪ್ರದೇಶಗಳಿಗೆ ಮೇಲಾಗಿ ದಾರಿತಪ್ಪಿ ಮೈಸೂರಿಗೆ ! ಅವುಗಳ ಜಾಗವನ್ನು ಅವುಗಳ ಪಾಲಿಗೇ ಬಿಟ್ಟಿದ್ದರೆ ಅವು ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ ಎಂಬುದನ್ನು ನಾವಿನ್ನೂ ಮನಗಾಣಬೇಕಾಗಿದೆ.

ವಿಷಯದ ಪ್ರಸ್ತಾವನೆ ಈ ರೀತಿಯಿಂದಾದರೂ ಇಲ್ಲಿ ಹೇಳ ಹೊರಟಿದ್ದು ಅದನ್ನಲ್ಲ. ಕಿಂಗ್ ಫಿಶರ್ ಎಂಬ ವಿಮಾನಯಾನ ಸಂಸ್ಥೆ ಯಾಕೆ ನಷ್ಟಕ್ಕೆ ಗುರಿಯಾಯ್ತು ಎಂಬುದನ್ನು ಅವಲೋಕಿಸಹೊರಟಿದ್ದು. ಜೊತೆಗೆ ವಿದರ್ಭ ಎಂಬಲ್ಲಿನದೂ ಸೇರಿದಂತೇ ನಮ್ಮ ಕರ್ನಾಟಕದ ಬಡತನದ ಕೆಲವು ಮುಖಗಳನ್ನೂ ನೋಡಿಕೊಂಡು ಬರೋಣ ಎಂಬ ಒಂದು ಪ್ರಯತ್ನ ಹೀಗೆ ಬರೆಸುತ್ತಿದೆ.

ಹಿಂದೊಮ್ಮೆ ಜೆ.ಆರ್.ಡಿ ಟಾಟಾ ಪುಸ್ತಕ ಬರೆದಿದ್ದೆ, ಅದಿನ್ನೂ ಮುದ್ರಣ ಮುಂಚಿನ ದೋಷ ಪರಿವೀಕ್ಷಣೆಯಲ್ಲಿದೆ ಅಂತಿಟ್ಟುಕೊಳ್ಳಿ. ಭಾರತದಲ್ಲಿ ವಿಮಾನಯಾನವನ್ನು ಆರಂಭಿಸಿದ್ದೇ ಜೆ.ಆರ್.ಡಿ. ಯವರು. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಕೇಂದ್ರ ಸರಕಾರ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತು. ಮಾತ್ರವಲ್ಲ ವಿಮಾನಯಾನ ಸಂಸ್ಥೆಗೆ ಮುಖ್ಯಸ್ಥರಾಗಿದ್ದ ಜೆ.ಆರ್.ಡಿಯವರನ್ನೂ ವಜಾ ಗೊಳಿಸಿರುವುದಾಗಿ ನೆಹರೂ ಜೆ.ಆರ್.ಡಿಗೆ ಪತ್ರ ಬರೆದಿದ್ದರು. ಖಾಸಗೀ ಸಂಸ್ಥೆಗಳಿಗೆ ವಿಮಾನಯಾನ ಪರವಾನಗಿ ಒಮ್ಮೆ ಇದ್ದಿದ್ದು ರದ್ದಾಗಿ ಮತ್ತೆ ಈಗ ನಾಕಾರು ವರ್ಷಗಳ ಹಿಂದೆ ಖಾಸಗೀ ಸಂಸ್ಥೆಗಳಿಗೂ ಪರವಾನಗಿ ನೀಡಲಾಯ್ತು. ಹಣವಿದ್ದ ದೊಡ್ಡ ದೊಡ್ಡ ಕಂಪನಿಗಳು ಇದನ್ನು ಬಹಳ ಆಸಕ್ತ ವಿಷಯವನ್ನಾಗಿ ತೆಗೆದುಕೊಂಡು ವಿಮಾನ ಹಾರಿಸಲು ಮುಂದಾದವು; ಆ ಪೈಕಿ ಕಿಂಗ್ ಫಿಶರ್ ಕೂಡ ಒಂದು.

ಸಾವಿರ ಕೋಟಿಗಳಲ್ಲಿ ಹೂಡಿಕೆಮಾಡಿ ನಿಧಾನವಾಗಿ ಹಿಂಪಡೆಯಬೇಕಾದ ದಂಧೆ ಅದು. ಒಂದೇ ಒಂದು ವಿಮಾನ ಹಾರಬೇಕದರೂ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಂಭವನೀಯತೆ ಇರುವ ರಿಸ್ಕೀ ಜಾಬ್ ಅದು! ಹೆಂಡದಲ್ಲಿ ಹೇರಳ ಕಾಸೆಣಿಸಿದ್ದ ದೊರೆ ಮಲ್ಯರಿಗೆ ಇದರ ಆಗು ಹೋಗುಗಳ ಬಗ್ಗೆ ಅಷ್ಟಾಗಿ ಆಳವಾದ ಜ್ಞಾನ ಇರಲಿಲ್ಲ. ಸಕಾಲದಲ್ಲಿ ಆತ ಉತ್ತಮ ಸಲಹೆದಾರರಿಂದ ಸಲಹೆಯನ್ನೂ ಪಡೆದಿದ್ದು ಸುಳ್ಳು. ಮಾಡಬೇಕೋ ಮಾಡಬೇಕು ಎಂಬ ಹುಂಬತನವೇ ಮೊದಲ ತಪ್ಪುಹೆಜ್ಜೆಯೇನೋ ಅನಿಸುತ್ತದೆ. ದೊಡ್ಡವರ ವಿಷಯ ಬಿಡಿ; ಮಾತನಾಡುವ ಹಾಗಿಲ್ಲ. ಹಣವೊಂದೇ ಇದ್ದರೆ ಯಾವ ದಂಧೆಯನ್ನದರೊ ಮಾಡಲು ಸಾಧ್ಯ ಎಂದುಕೊಳ್ಳುವವರಿಗೆ ಮಲ್ಯ ಹಾಗೆ ಮಾಡಲು ಮುಂದಾಗಬಾರದು ಎಂಬುದನ್ನು ಮುಂದೊಂದು ದಿನ ಪಾಠಮಾಡಬಹುದು!

ವಿಮಾನಯಾನ ಸಂಸ್ಥೆ ಆರಂಭಿಸಿ, ಬೆಳೆಸಿ ಬೇರೆ ಕಂಪನಿಗಳಿಗೆ ವಹಿಸಿಕೊಟ್ಟು ಹೆಚ್ಚಿನ ಕೀರ್ತಿಮೌಲ್ಯ ಎಣಿಸಿಕೊಳ್ಳುವ ಆಸೆಯೂ ಇದ್ದಿರಬಹುದು. ಏನಿದ್ದರೂ ಬೆಳೆದ ಮೂಲ ದಂಧೆಯಿಂದ ಹಣ ಹೊಂಚಿ ಇನ್ನೊಂದಕ್ಕೆ ಸುರಿಯುವಾಗ ಸ್ವಲ್ಪ ದೀರ್ಘಾಲೋಚನೆ ಅವಶ್ಯಕ. ಕಿಂಗ್ ಫಿಶರ್ ಆರಂಭವಾದ ಒಂದೆರಡು ವರ್ಷಗಳಲ್ಲೇ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನೂ ಖರೀದಿಸಿದ್ದು ಮತ್ತೊಂದು ತಪ್ಪು ಹೆಜ್ಜೆ. ಕೇವಲ ಶ್ರೀಮಂತರಿಗಷ್ಟೇ ಮೀಸಲಾಗಿಡುವ ಹೈ ಕ್ಲಾಸ್ ವಿಮಾನಯಾನವನ್ನಷ್ಟೇ ನಡೆಸಿಕೊಂಡು ನಿಗದಿತ ಪ್ರದೇಶಗಳಿಗೆ ಮಾತ್ರ ಸೀಮಿತ ವಿಮಾನಗಳನ್ನು ಇಟ್ಟುಕೊಂಡು ನಡೆಸಬಹುದಿತ್ತು. ಹಾಗೂ ಮಾಡಲಿಲ್ಲ. ಮಲ್ಯ ಕೈ ಹಾಕಿದಮೇಲೆ ಎಲ್ಲಾಕಡೆಗೂ ಅದರ ಅಮಲು ಹರಡಬೇಕೆಂಬ ಅತೀ ಮಹತ್ವಾಕಾಂಕ್ಷೆ ಇನ್ನೊಂದು ತಪ್ಪು. ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಮಾಡಿದ ಮಲ್ಯ ಹಾಗೆ ಮೇಲೇರುವಾಗ ಆಗುವ ಲಾಭ-ನಷ್ಟಗಳ ಪರಿವೆಯನ್ನೇ ಇಟ್ಟುಕೊಳ್ಳಲಿಲ್ಲ.

೨೦೦೫ ರಲ್ಲಿ ಸಂಸ್ಥೆ ಆರಂಭವಾದಾಗ ಕೆಲವು ಉದ್ಯಮಿಗಳೂ ಸೇರಿದಂತೇ ಸಿರಿವಂತ ಪ್ರಯಾಣಿಕರು ಮಲ್ಯ ಅಣಿಗೊಳಿಸಿದ ಸೆಕ್ಸೀ ಗಗನಸಖಿಯರನ್ನು ನೋಡುತ್ತಾ ಅವರ ವಿಮಾನಗಳಲ್ಲಿ ಯಾನ ಬೆಳೆಸಿದ್ದರೂ ಬರುಬರುತ್ತಾ ಅವರೆಲ್ಲಾ ಎಚ್ಚೆತ್ತುಕೊಂಡುಬಿಟ್ಟರು. ವಿಮಾನಯಾನ ಸಂಸ್ಥೆಗಳ ಸಂಖ್ಯೆಯೂ ಜಾಸ್ತಿಯಾಗಿ ಪ್ರಯಾಣದರದಲ್ಲಿ ಪೈಪೋಟಿ ಆರಂಭವಾಯ್ತು. ಕಚ್ಚಾತೈಲದ ಬೆಲೆಯೇರಿಕೆಯ ಆಧಾರದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗುತ್ತಾ ಬಂತು. ಹಣದುಬ್ಬರ ಜಾಸ್ತಿಯಾಗಿ ಬ್ಯಾಂಕುಗಳ ಸಾಲಕ್ಕೆ ಬಡ್ಡಿದರ ಜಾಸ್ತಿಯಾಯ್ತು. ವಿದೇಶೀ ಬಂಡವಾಳ ಹೂಡಿಕೆದಾರರನ್ನು ಕರೆದುಕೊಳ್ಳಲು ಮಲ್ಯರಿಗೆ ಅನುಮತಿ ಸಿಗಲಿಲ್ಲ. ಪೆಟ್ರೋಲ್ ಮೇಲೆ ಇರುವ ತೆರಿಗೆಯೇ ಬಹಳವಾಗಿ ಖರ್ಚಿನಲ್ಲಿ ಅದೇ ಸುಮಾರು ೫೦% ನಷ್ಟು ಕಬಳಿಸಿಬಿಡುತ್ತಿದ್ದು. ಮಿಕ್ಕುಳಿದಂತೇ ಸೆಕ್ಸೀ ಗಗನಸಖಿಯರನ್ನು ದುಬಾರಿ ಸಂಬಳದಲ್ಲಿ ಸಾಕಬೇಕಲ್ಲಾ ? ಅನುಭವೀ ಪೈಲಟ್‍ಗಳನ್ನು ಬೇರೇ ಇಟ್ಟುಕೊಳ್ಳಬೇಕಾಗುತ್ತದಲ್ಲಾ ಯಾಕೆಂದರೆ ವಿಮಾನ ಗಗನಮಾರ್ಗದಲ್ಲಿ ಸಾಗುವಂಥದ್ದು, ಎಲ್ಲೋ ಇಲ್ಲೇ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಾಡುವ ಲಾರಿ, ಬಸ್ಸುಗಳ ರೀತಿ ಅಲ್ಲ ನೋಡಿ! ಹೀಗೆಲ್ಲಾ ಆಗಿ ಮಲ್ಯ ಈಗ ಮಿಕಿಮಿಕಿ ನೋಡುತ್ತಿದ್ದಾರೆ.

ಈ ಸುದ್ದಿ ಆಗಾಗ ಮಾಧ್ಯಮಗಳಲ್ಲಿ ಪ್ರಚಾರ ಪಡೆದರೂ ಇಲ್ಲೀವರೆಗೂ ಮಲ್ಯ ತಡೆದುಕೊಂಡೇ ಇದ್ದಿದ್ದು ತನ್ನ ಇಮೇಜಿಗೆ ತನ್ನ ಛಾಪಿಗೆ ದಕ್ಕೆ ಬಾರದಿರಲಿ ಎಂಬ ಕಾರಣಕ್ಕಾಗಿ. ಸದ್ಯಕ್ಕೆ ನಷ್ಟ ಅಂದಾಜು ೪೮೦೦ ಕೋಟಿ ಎಂದು ಗಣಿಸಲ್ಪಟ್ಟಿದ್ದರೂ ಒಳಗಿನ ಗುಟ್ಟು ಶಿವನೇ ಬಲ್ಲ! ಒಟ್ಟೂ ೧೩ ಬ್ಯಾಂಕುಗಳು ಹಣ ಸುರಿದಿದ್ದು ಆಮೇಲಾಮೇಲೆ ಭದ್ರತೆಗಾಗಿ ೨೪% ಸ್ಟೇಕ್ಸ್‍ನ್ನು ತಮ್ಮಲ್ಲಿ ಇರಿಸಿಕೊಂಡಿವೆ. ಈಗ ಅವು ಮತ್ತೆ ಸಹಾಯ ನೀಡಲು ಮುಂದಾಗುತ್ತಿಲ್ಲ. ಆದರೂ ಮಹಾರಾಷ್ಟ್ರದ ಹಣಕಾಸು ಸಂಸ್ಥೆಯೊಂದು ೪೦೦೦ ಕೋಟಿ ಸಹಾಯ ಮಾಡುವುದಾಗಿ ಮುಂದಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆಯೇ ? ಸಂದೇಹವಂತೂ ಬಲವಾಗಿದೆ. ದೇಶದಲ್ಲಿ ಉತ್ತಮ ಆಡಳಿತ ಸಲಹೆದಾರರು ಇದ್ದವರೆಲ್ಲಾ ಏನೆನ್ನುತ್ತಾರೆ? ಯಾರೂ ತಮ್ಮ ಅಭಿಪ್ರಾಯಗಳನ್ನು ಮುಂದೆ ತರುತಿಲ್ಲ ಎಂಬುದೇ ಆಶ್ಚರ್ಯವಾಗಿದೆ !

ಇನ್ನು ವಿದರ್ಭ ಎಂಬುದು ನಮ್ಮ ನೆರೆರಾಜ್ಯವಾದ ಮಹಾರಾಷ್ಟ್ರದ ಒಂದು ಪ್ರದೇಶ. ಅಲ್ಲಿನ ರೈತರ ಜೀವನ ಎಷ್ಟು ದುರ್ಭರವಾಗಿದೆ ಎಂದರೆ ರಾಜಕಾರಣಿಗಳು ಅದರಲ್ಲೂ ರಾಹುಲ್ ಗಾಂಧಿಯಂತಹ ಜನ ಸ್ವತಃ ಭೇಟಿ ನೀಡಿ ಮತದಾರರ ಕಣ್ಸೆಳೆದರು ಬಿಟ್ಟರೆ ಅಲ್ಲೀಗ ಯಾರೂ ಕೇಳುವವರಿಲ್ಲ. ನಾಗಪುರದಿಂದ ಹೈದ್ರಾಬಾದಿಗೆ ಹೋಗುವ ಮಾರ್ಗದುದ್ದಕ್ಕೂ ಹತ್ತಿ ಬೆಳೆಯುವ ಪ್ರದೇಶಗಳನ್ನೇ ಕಾಣಬಹುದು. ಹತ್ತಿ ಬೆಳೆ ಬೆಳೆಯುವ ರೈತನಿಗೆ ಕೆಜಿಗೆ ೫ ರೂ. ಸಿಗುತ್ತದಂತೆ. ಒಂದು ದಿನಕ್ಕೆ ಬೆಳಿಗ್ಗೆಯೇ ಹತ್ತಿ ಆಯಲು ಹೋದರೆ ಸಾಯಂಕಾಲ ೬:೩೦ಕ್ಕೆ ಸಿಗುವುದು ೫ ಕೆಜಿ ಹತ್ತಿ ! ಚಿಕ್ಕ ಹಿಡುವಳಿದಾರರು ಅಲ್ಪಸ್ವಲ್ಪ ಗದ್ದೆಗಳಿರುವವರು ಹಿಂದೆ ಮಾಡಿದ ಸಾಲ ಕೈಸಾಲಗಳಿಗೆ ಮತ್ತೆ ಕಿರುಸಾಲ ಮರಿಸಾಲ ಎಂದು ಸಾಲದ ಪಟ್ಟಿ ಬೆಳೆದು ೨೫,೦೦೦ ದಿಂದ ೫೦,೦೦೦ ....೩,೦೦,೦೦೦ ವರೆಗೂ ಸಾಲ ಮಾಡಿಕೊಂಡ ಜನ ಇದ್ದಾರೆ. ಸಾಲಕೊಟ್ಟವರ ಉಪಟಳ ಜಾಸ್ತಿಯಾದಾಗ ಅವರು ಮನೆಗೆ ಬಂದು ಮರಳಿಸುವಂತೇ ಬಲವಂತ ಮಾಡಿದಾಗ ಬೇಸತ್ತು ವಿಷಪ್ರಾಶನ ಮಾಡಿದ ಹಲವು ರೈತರ ವಿಧವೆಯರು ಬದುಕಲೂ ಆರದೆ, ಸಾಯಲೂ ಆರದೇ ಜೀವ ತೇದು ಕಾಲಹಾಕುತ್ತಿದ್ದಾರೆ. ಒಪ್ಪೊತ್ತಿನ ಗಂಜಿ ಕಾಣಿಸಲಿಕ್ಕೂ ಕಷ್ಟದಾಯಕ ಪರಿಸ್ಥಿತಿ ಇದೆ. ಒಂದೊಂದು ಮನೆಯಲ್ಲಿ ಕನಿಷ್ಠ ಎರಡು ಮೂರು ಮಕ್ಕಳಿದ್ದಾರೆ. ಅವರುಗಳ ವಿದ್ಯಾಭ್ಯಾಸ, ಬಟ್ಟೆ, ಸ್ಕೂಲ್ ಫೀಸು, ಔಷಧ ವಗೈರೆ ಖರ್ಚು ನೆನಪಿಸಿಕೊಂಡರೆ ಅಲ್ಲಿನ ಆ ವಿಧವೆಯರಲ್ಲಿ ಕಣ್ಣೀರು ಉಕ್ಕಿ ಹರಿಯುತ್ತದೆ. ೨೦೦೫ ರಿಂದ ಇತ್ತೀಚೆಗೆ ರೈತರ ಸಾವುಗಳ ಸಂಖ್ಯೆ ಜಾಸ್ತಿಯಾಗಿದೆ.

ರೈತರ ಸಾಲ ಮನ್ನಾ ಆಗುವುದು ಇರಲಿ ಸತ್ತ ರೈತರಿಗೆ ಪರಿಹಾರ ಸಿಗುತ್ತಿಲ್ಲ ಏಕೆಂದರೆ ಬಹುಸಂಖ್ಯಾಕರು ಗುತ್ತಿಗೆಯಮೇಲೆ ಕೆಲ್ಸಮಾಡುವವರಾಗಿದ್ದಾರೆ. ಸತ್ತಾಗ ಅವರ ಹೆಸರಿನಲ್ಲಿ ಯಾವುದೇ ಜಮೀನು ದಾಖಲೆಪತ್ರಗಳು ಇರುವುದಿಲ್ಲ. ಇದ್ದರೂ ಅವು ಸಾಲ ಕೊಟ್ಟವರ ಕೈವಶವಾಗಿ ಖಾತೆ ಬದಲಾವಣೆಯಾಗಿರುತ್ತದೆ! ಒಂದು ಕಾಲದಲ್ಲಿ ತಮ್ಮದೇ ಆಗಿದ್ದ ಹೊಲಗಳನ್ನು ಸಾಲಕೊಟ್ಟವರಿಗೆ ಮಾರಿಕೊಂಡು ಮತ್ತದೇ ಹೊಲದಲ್ಲಿ ಗುತ್ತಿಗೆಯ ಆಧಾರದಲ್ಲಿ ಹತ್ತಿ ಕೆಲಸಮಾಡುವ ರೈತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ನಿತ್ಯ ಹನ್ನೆರಡು ತಾಸು ಕೆಲಸಮಾಡಿದರೂ ಹೊಟ್ಟೆ ತುಂಬಿಸಲಾಗದ ಬವಣೆ ಅವರನ್ನು ಕಾಡುತ್ತಿದೆ. ಮನೆಯ ಯಜಮಾನ ರಾತ್ರಿ ಮಲಗಿದವನು ಬೆಳಿಗ್ಗೆ ಏಳುತ್ತಾನೆ ಎನ್ನುವ ಗ್ಯಾರಂಟಿಯೇ ಇರದಷ್ಟು ಬೇಸತ್ತ ಜೀವನ ಅಲ್ಲಿನ ಜನರದಾಗಿದೆ. ಒಮ್ಮೆ ಬಂದು ಹೋದ ರಾಹುಲ್ ಗಾಂಧಿ ಮತ್ತೆ ಆ ಕಡೆ ತಲೆ ಹಾಕಿಲ್ಲ! ಛೆ ಛೆ ಹಾಗೆಲ್ಲಾ ಹೇಳ್ಬಾರ್ದು ನಮ್ಮ ರಾಜಕಾರಣಿಗಳೇ ಹಾಗಲ್ವೇ ?

ಕರ್ನಾಟಕದ ರಾಮನಗರದಲ್ಲಿ ಬಡತನ ಹೇಗಿದೆಯೆಂಬುದಕ್ಕೆ ಇತ್ತೀಚೆಗೆ ಟಿವಿ೯ ವರದಿಮಾಡಿತ್ತು. ಅಲ್ಲಿ ಸರಿಸುಮಾರು ೨೦,೦೦೦ ಜನ ತಮ್ಮ ಒಂದೊಂದು ಕಿಡ್ನಿ ಮಾರಾಟಮಾಡಿಕೊಂಡಿದ್ದಾರೆ ! ಕಿಡ್ನಿ ಜಾಲದ ಆಮಿಷಕ್ಕೆ ಬಲಿಬಿದ್ದು ೩-೪ ಲಕ್ಷ ಹಣಬರುತ್ತದೆ, ತಮ್ಮ ಸಾಲವಾದರೂ ತೀರಬಹುದೆಂಬ ಕಾರಣಕ್ಕೆ ಕಿಡ್ನಿ ಮಾರಿದರೆ ಜಾಲದ ಮಧ್ಯವರ್ತೀ ಕಳ್ಳಜನ ಬಹಳಷ್ಟು ಜನರಿಗೆ ೨,೦೦೦ ಅಥವಾ ೨,೫೦೦ ಕೊಟ್ಟು ಬೆದರಿಸಿ ಸುಮ್ಮನಾಗಿಸಿದ್ದಾರೆ. ವಿಚಿತ್ರವೆಂದರೆ ಕಿಡ್ನಿ ಮಾರಾಟಮಾಡಿಕೊಂಡವರು ಹೊಸ ಏಜೆನ್ಸಿ ಪಡೆದವರಂತೇ ತಮ್ಮಂತೇ ಅಸಹಾಯಕತೆಯಲ್ಲಿರುವ ಬೇರೇ ಜನರನ್ನು ಹುಡುಕಿ ತಂದು ಕಿಡ್ನಿ ಮಾರಾಟ ಮಾಡಿಸುತ್ತಿದ್ದಾರೆ. ಇದರಲ್ಲಿ ಹೆಂಗಸರೂ ಬಹಳ ಜನ ಸೇರಿದ್ದಾರೆ. ಅನಕ್ಷರಸ್ಥರಾದ ಗಂಡಸರು ಸಾಲ ತೀರಿಸುವ ಚಿಂತೆಯಲ್ಲಿ ಕುಡುಕರಾಗಿ, ದುಶ್ಚಟಗಳಿಗೆ ಬಲಿಬಿದ್ದು ಯಾರಾದರೂ ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲಾ ಎನ್ನುವ ಹಂತಕ್ಕೆ ಬಂದಾಗ, ಹೆತ್ತ ಅಪ್ಪ-ಅಮ್ಮ ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಗಳು-ಅಳಿಯಂದಿರಿಗೆ ಏನೂ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದಾಗ ಮರ್ಯಾದೆ ಉಳಿಸಿಕೊಳ್ಳಲು ಹಣ ಸಿಗುವುದೆಂಬ ಆಸೆಗೆ ಗಾಳಿ ಸುದ್ದಿಗೆ ಕಿವಿಯೊಡ್ಡಿ ತಮ್ಮ ಕಿಡ್ನಿ ಮಾರಾಟಕ್ಕೆ ಒಪ್ಪಿ ಕಳೆದುಕೊಂಡ ಹೆಂಗಸರೇ ಬಹಳ ಜನ ಇದ್ದಾರೆ. ಇದನ್ನೆಲ್ಲಾ ಕೇಳುವುದಕ್ಕೆ ಅಥವಾ ಜನರನ್ನು ಹಾಗೆಲ್ಲಾ ಮಾಡದಂತೇ ಎಜ್ಯುಕೇಟ್ ಮಾಡುವುದಕ್ಕೆ ಯಾರಿದ್ದಾರೆ ? ಗೊತ್ತಿಲ್ಲ !

ಬಡತನವೆಂಬುದು ಯಾವುದೇ ಒಂದು ಜಾತಿ, ಕುಲ-ಗೋತ್ರಕ್ಕೆ ಸಂಬಂಧಿಸಿದ್ದಲ್ಲ. ಬಡತನ ಮತ್ತು ಸಿರಿತನ ಎಂಬುದೇ ಎರಡು ಜಾತಿಗಳು. ಎಲ್ಲಾ ಜನಾಂಗಗಳಲ್ಲೂ ಬಡತನ ಇದ್ದೇ ಇದೆ. ಬಡವರು ಬಡವರಾಗೇ ಉಳಿಯುತ್ತಾರೆ, ಸಿರಿವಂತರು ಸಿರಿವಂತರಾಗುತ್ತಲೇ ನಡೆಯುತ್ತಾರೆ. ಬಡತನ ಸಿರಿತನ ಪಡೆದು ಬಂದಿದ್ದಲ್ಲ ಮಾಡಿಕೊಂಡಿದ್ದು ಎಂದು ವಾದಿಸುವ ಯಾವ ಜನರೂ ಮಾರ್ಗದರ್ಶನಕ್ಕಾಗಿ ಅಲ್ಲಿಗೆ ಬರುವುದಿಲ್ಲ. ಬಡತನ ನಿರ್ಮೂಲನೆ ಎಂಬುದು ಒಂದು ಸೋಗೇ ಹೊರತು ಅದು ಯಾವ ರಾಜಕಾರಣಿಗೂ ಬೇಕಾಗಿಲ್ಲ. ಆಗಾಗ ರಾಯಚೂರು ಕಡೆಯ ಬಡತನದ ಚಿತ್ರಣಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೀರಿ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಜೀವಗಳನ್ನು ಕಂಡಿದ್ದೀರಿ. ಇದಕ್ಕೆಲ್ಲಾ ಯಾರಾದರೂ ನಿವಾರಣೋಪಾಯ ನೀಡುವವರಿದ್ದಾರಾ?

ಕೊನೆಯ ಒಂದು ಮಾತು ಹೇಳಿ ಮುಗಿಸಿಬಿಡುವುದು ಉತ್ತಮ : ಉತ್ತರಕರ್ನಾಟಕದಲ್ಲಿ ಮೇಲ್ವರ್ಗ, ಸ್ಥಿತಿವಂತರು ಎನಿಸಿಕೊಂಡು ಸರಕಾರೀ ಮೀಸಲಾತಿ ಮತ್ತು ಕೃಪೆಯಿಂದ ದೂರವೇ ಉಳಿದ ಬ್ರಾಹ್ಮಣವರ್ಗದ ಜನ ರಣಬಿಸಿಲಲ್ಲಿ ಕಲ್ಲು ಒಡೆದು ಜಲ್ಲಿ ತಯಾರಿಸಿ ಬದುಕುತ್ತಿದ್ದಾರೆ ! ಅಲ್ಲಿನ ಕೂಲಿಯೂ ಮತ್ತದೇ ೫೦-೬೦ ರೂಪಾಯಿ. ಸಿನಿಮಾವೊಂದರಲ್ಲಿ ದಿ| ಟಿ.ಎನ್.ಬಾಲಕೃಷ್ಣ ಮುದಿವಯಸ್ಸಿನಲ್ಲಿ ಕಲ್ಲು ಒಡೆಯುವ ಕಷ್ಟದ ಚಿತ್ರಣವನ್ನು ತೋರಿಸಿದ್ದಾರೆ. ಅದೇ ರೀತಿ ಅಕ್ಷರಶಃ ಮುದುಕರೂ ಕಲ್ಲು ಒಡೆಯುವುದನ್ನು ರಾಯಚೂರು-ಸಿಂಧನೂರು-ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಕಾಣಬಹುದು ! ’ನಾಡಿಗೆ ದೂರ ಕಾಡಿಗೆ ಹತ್ತಿರ’ ಎನಿಸುವ ಮುದುಕರಿಗೆ ಹುಟ್ಟಿದ ತಪ್ಪಿಗೆ ಮಾಡಲೇಬೇಕಾದ ಅನಿವಾರ್ಯತೆ ಅಲ್ಲಿದೆ. ಬೆವರು ಸುರಿಸುತ್ತಾ ಅವರು ತಯಾರಿಸಿದ ಜಲ್ಲೀ ಕಲ್ಲುಗಳು ಎಲ್ಲೆಲ್ಲಿಗೋ ಲಾರಿಗಳಲ್ಲಿ ಸಾಗುತ್ತವೆ.

ರಾಜಕಾರಣಿಗಳ ಡೊಂಬರಾಟ ಮಾತ್ರ ಇದನ್ಯಾವುದನ್ನೂ ಲೆಕ್ಕಿಸುವುದೇ ಇಲ್ಲ, ಅಲ್ಲಿ ಖುರ್ಚಿ ಭದ್ರತೆಯೇ ಅವರ ಚಿಂತೆ. ನೋಡಿ: ಮತ್ತೆ ಬಳ್ಳಾರಿಯಲ್ಲಿ ಈಗ ಡೊಂಬರಾಟ ನಡೆಯುತ್ತಿದೆ. ಇರುವ ಶಾಸಕ ರಾಜೆನಾಮೆ ಒಗೆದ. ಕಾರಣ ಕೇಳಿದರೆ ಸ್ವಜನರಿಂದಲೇ ಅವಮರ್ಯಾದೆ, ಅವಗಣನೆ! ಈಗ ಸ್ವತಂತ್ರ ಅಭ್ಯರ್ಥಿ-ನಾಳೆ ಗೆದ್ದಮೇಲೆ ಹುಲ್ಲು ಹೊತ್ತ ಮಹಿಳೆಯ ಸೆರಗು ಹಿಡೀತಾನೆ, ಅಲ್ಲಿ ಮತ್ತೆ ಜಗಳ- ಮತ್ತೆ ಹೊರಗೆ, ಮತ್ತೆ ಚುನಾವಣೆ; ಇದು ಮುಗಿಯದ ಡೊಂಬರಾಟ. ಪ್ರತೀ ಚುನಾವಣೆಗೆ ಕದ್ದೂ ಮುಚ್ಚಿ ಕೋಟ್ಯಂತರ ಹಣ ಚೆಲ್ಲುವ ಪ್ರತೀ ಹುರಿಯಾಳು ಎಲ್ಲಿಂದ ಹಣ ತರುತ್ತಾನೆ? ಗೆದ್ದಮೇಲೆ ಮತ್ತೆ ಮಾಮೂಲಿ ಸಿಗುತ್ತದೆಯೆಂಬ ಭದ್ರತೆ ಇರದಿದ್ದರೆ ಅಷ್ಟೆಲ್ಲಾ ಧೈರ್ಯ ಹೇಗೆ ಬರುತ್ತದೆ ? ಹೆಂಡ-ಬಟ್ಟೆ-ಬ್ಯಾನರು ಇತ್ಯಾದಿ ಚುನಾವಣೆಗೆ ಖರ್ಚುಮಡುವ ಆ ಹಣವನ್ನು ಬಡತನ ನಿರ್ಮೂಲನಗೆ ಖರ್ಚುಮಾಡಲು ಸಾಧ್ಯವಿಲ್ಲವೇ ? ಅಥವಾ ಬಡತನ ನಿರ್ಮೂಲನೆ ಎಂಬ ಕೆಲಸಕ್ಕೆ ಯಾರಲ್ಲೂ ಹಣ ಇರುವುದಿಲ್ಲವೇ ? ತಪ್ಪು ನಮ್ಮದು. ನಾವು ಮಂಗಗಳಾಗಿದ್ದೇವೆ. ರಾಜೀನಾಮೆ ಯಾಕೆ ಕೊಟ್ಟೆ-ಅಥವಾ ಯಾವ ಆಧಾರದ ಮೇಲೆ ಸ್ವೀಕರಿಸಿದಿರಿ ? ಎಂಬ ಕಾರಣ ಕೇಳಲು ನಾವು ಅರ್ಹರಲ್ಲ ! ಆಡಳಿತ ಯಂತ್ರದ ಕೀಲು ಕಳಚಿಬಿದ್ದರೂ ಕಂಡೂ ಕಾಣದಂತೇ ಪಂಕ್ಚರ್ ಆದ ಬಸ್ಸನ್ನೇರಿ ಮುಂದೆ ಸಾಗಿದಂತೇ ಸಾಗಬೇಕಾಗುತ್ತದೆ! ಇದೇ ಇಂದಿನ ಪ್ರಜಾಪ್ರಭುತ್ವ !! ಪಾಪ ಅವರ ಭಾರ ಅವರಿಗೆ ಸುಮ್ನೇ ಮಾತಾಡಿ ಪ್ರಯೋಜನವಿಲ್ಲ; ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ !

Saturday, November 12, 2011

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !





ಹಣ್ಣಡಕೆ

ಚಾಲಿ ಅಡಕೆ

ಮದ್ರಾಸ್ ಅಥವಾ ಅಂಬಾಡಿ ಎಲೆ

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !

ವೈದಿಕರಿಗೆ ಎಷ್ಟೇ ಧವಸ ಧಾನ್ಯ ಬಟ್ಟೆ ಬಂಗಾರ ಏನು ಕೊಟ್ಟರೂ " ಐಶ್ವರ್ಯಮಸ್ತು " ಎನ್ನುವುದಿಲ್ಲ; ಹಾಗೆ ಹೇಳಲು ಅವರಿಗೂ ಶಾಸ್ತ್ರೋಕ್ತವಾಗಿ ಅಧಿಕಾರ ಪ್ರಾಪ್ತವಾಗುವುದು ತಾಂಬೂಲ ಕೊಟ್ಟಾಗ ಮಾತ್ರ. " ತಾಂಬೂಲಾನಿಪಾಂತು ಐಶ್ವರ್ಯಮಸ್ತು " ಎಂದು ಹರಸುತ್ತಾರೆ. ಅದಕ್ಕೇ ತಾಂಬೂಲ ಎಲ್ಲೆಲ್ಲೂ ತನ್ನದೇ ಆದ ಘನತೆಯನ್ನು ಇಂದಿನ ನವಯುಗದಲ್ಲೂ ಉಳಿಸಿಕೊಂಡಿದೆ. ಕೇಂದ್ರ ಸರಕಾರದವರು ಪಾನ್ ನಿಷೇಧ ಮಾಡಬೇಕು ಎಂದುಬಿಟ್ಟರು. ಪಾನ್ ನಲ್ಲಿ ಮುಖ್ಯವಾಗಿ ಬಳಸಬೇಕಾಗಿರುವುದು ಅಡಕೆ ಮತ್ತು ವೀಳ್ಯದೆಲೆ. ಅಡಕೆ ಜಗಿಯುವ ಕೆಲವರನ್ನು ಕಂಡು ಅದಕ್ಕೆ ಹೊಸರೂಪಕೊಡುವ ನೆಪದಲ್ಲಿ ರಾಸಾಯನಿಕ ಪರಿಮಳದ್ರವ್ಯಗಳನ್ನು ಸೇರಿಸಿ ಪ್ಲಾಸ್ಟಿಕ್ ಪೌಚ್‍ಗಳಲ್ಲಿ ತುಂಬಿಸಿ ಕಾಸು ಸಂಪಾದಿಸುವ ಅಡ್ಡ ಕಸುಬಿ ಕಂಪನಿಗಳು ಹುಟ್ಟಿಕೊಂಡು ತಾಂಬೂಲದ ಹೆಸರಿಗೆ ಮಸಿ ಬಳಿದರು. ಅಡಕೆ ಅಗಿಯುವುದು ಮಾರಕವೇ ? ಅಡಕೆ ಬೆಳೆ, ಅದರ ಆಗು-ಹೋಗು, ಅದನ್ನು ಬಳಸುವುದರಿಂದ ಆಗುವ ಉಪಕಾರಗಳ ಬಗ್ಗೆ ಕೊಂಚ ಚಿಂತಿಸೋಣ.

ದಕ್ಷಿಣಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಅಡಕೆ ಬೀಜರೂಪದಲ್ಲಿ ಬಂದದ್ದು ಆಸ್ಸಾಂ ನಿಂದ ಎನ್ನುತ್ತಾರೆ. ಆಸ್ಸಾಂ ನಲ್ಲಿ ಇದೊಂದು ಗುಡ್ಡಗಾಡು ಬೆಳೆ. ಆದರೆ ನಮ್ಮ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಅಡಕೆಯನ್ನು ಕ್ರಮಬದ್ಧ ಭಾಗಾಯಿತ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಪ್ರಾಯಶಃ ರಾಜರುಗಳ ಕೃಪಾಶ್ರಯ ಕೈಬಿಟ್ಟು ಹೋದನಂತರ ರಾಜರುಗಳೇ ಕೊಟ್ಟಿದ್ದ ಅಗ್ರಹಾರವೆಂಬ ಪ್ರದೇಶಗಳಲ್ಲಿ ತಮ್ಮ ವಸತಿಗಳ ಸುತ್ತ ಇಲ್ಲಿನ ಬ್ರಾಹ್ಮಣರು ಅಡಕೆಯನ್ನು ಬೆಳೆದರು, ಯಾಕೆಂದರೆ ಆ ಒಂದು ಸಂದರ್ಭದಲ್ಲಿ ವೇದಾಂತಿಗಳಿಗೆ, ವೇದಾಧ್ಯಯನ ಮಾಡಿದವರಿಗೆ, ಪುರೋಹಿತ ವೃತ್ತಿಯಲ್ಲಿದ್ದವರಿಗೆ ರಾಜಾಶ್ರಯವಿಲ್ಲದಾದಾಗ ಬೇರಾವ ನೌಕರಿಯನ್ನು ಮಾಡುವ ಹೊಸ ವಿದ್ಯೆಗಳ ಕುರಿತಾದ ಪದವಿಗಳು ಅವರಲ್ಲಿ ಇರಲಿಲ್ಲ. ಹೀಗಾಗಿ ಉಪಜೀವನದ ಅನಿವಾರ್ಯತೆಗಾಗಿ ಅವರು ಅಡಕೆಯನ್ನೋ ಭತ್ತ ಮತ್ತಿತರ ಬೆಳೆಗಳನ್ನೋ ಬೆಳೆಯಬೇಕಾಗಿ ಬಂತು. ಆಮೇಲಾಮೇಲೆ ಸಮಾಜದ ಎಲ್ಲಾ ವರ್ಗಗಳೂ ಅಡಕೆ ಬೆಳೆಯನ್ನು ಬೆಳೆದವು. ಇದು ಈಗ ಇತಿಹಾಸ.

ಸಂಸ್ಕೃತದಲ್ಲಿ ಪೂಗವೃಕ್ಷ ಎಂದು ಕರೆಯಲ್ಪಡುವ ಅಡಕೆಮರ ಇದ್ದ ಹೊರತು ದೇವಸ್ಥಾನಗಳಲ್ಲಿ ಹಿಂದೆ ಪ್ರತಿಷ್ಠಾಪನೆಗಳು ನಡೆಯುತ್ತಿರಲಿಲ್ಲವಂತೆ. ಒಂದೊಮ್ಮೆ ಹತ್ತಿರದಲ್ಲಿ ಸಿಗದಿದ್ದರೂ ದೂರದಿಂದ ತರಿಸುವ ವಹಿವಾಟಿತ್ತು ಎನ್ನುತ್ತಾರೆ ಅರಿತವರು. ಉತ್ತರಕರ್ನಾಟಕದ ಬಿಸಿಲು ಪ್ರದೇಶಕ್ಕೆ ಅಡಕೆ ಒಗ್ಗುವುದಿಲ್ಲ ಎಂಬುದು ಅಲ್ಲಿನವರ ಅನುಭವದ ಮಾತು. ಅರಸೀಕೆರೆ, ಬೀರೂರು, ಕಡೂರು, ಮಂಡ್ಯ, ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲೂ ಅಡಕೆ ಬೆಳೆಯುತ್ತಾರೆ. ಆದರೆ ಕರಾವಳಿಯಲ್ಲಿ ಬೆಳೆದ ಅಡಕೆಯ ಗುಣಮಟ್ಟಕ್ಕೆ ಇವುಗಳು ಸಾಟಿಯಲ್ಲ. ಅಲ್ಲಿನ ಭೂಗುಣ ಮತ್ತು ಹವಾಮಾನ ಅಡಕೆ ಬೆಳೆಗೆ ಪ್ರಶಸ್ತವಾಗಿದೆ ಎಂಬುದು ಸತ್ಯ. ಅಡಕೆ ಬಹಳ ನೀರಾವರಿಯನ್ನು ಬೇಡುವ ವರ್ಷದಲ್ಲಿ ಒಂದೇ ಸಲ ಫಸಲು ನೀಡುವ ಬೆಳೆ. ಬೆಳೆದ ಫಸಲನ್ನು ಕೊಯ್ಯುವಾಗ ಮತ್ತು ಸಂಸ್ಕರಿಸುವಾಗ ಬೇರೇ ಬೇರೇ ಪದ್ಧತಿಗಳನ್ನು ಅನುಸರಿಸಿ ಕೆಂಪಡಕೆ, ಚಾಲಿ, ಆಪಿ ಇತ್ಯಾದಿ ಹಲವು ತೆರನಾದ ಅಡಕೆಗಳನ್ನು ತಯಾರಿಸುತ್ತಾರೆ. ಆಮೇಲೆ ಅವು ಮಾರುಕಟ್ಟೆಯಲ್ಲಿ ಬಿಕರಿಗೊಂಡು ಮಧ್ಯವರ್ತಿಗಳ ಮೂಲಕ ಉತ್ತರಭಾರತ ಮತ್ತು ಇನ್ನಿತರ ಹೊರದೇಶಗಳಿಗೂ ಸಾಗಿಸಲ್ಪಡುತ್ತವೆ. ಮಧ್ಯವರ್ತಿಗಳಲ್ಲಿ ಹಲವರು ಅಡಕೆಗಳಿಗೆ ಪುನಃ ಸಂಸ್ಕಾರ ಕೊಟ್ಟು, ಇಂಡಿ, ಪಾಡ್ಚಾ, ಪುಡಿ, ಬಟ್ಲಡಕೆ, ಚೂರು ಹೀಗೇ ವಿವಿಧ ರೀತಿಯಲ್ಲಿ ಗ್ರೇಡ್ ಮಾಡುತ್ತಾರೆ. ಸಾಗುತ್ತಾ ಸಾಗುತ್ತಾ ಈ ಗ್ರೇಡೆಡ್ ಅಡಕೆಗಳು ಪುನಃ ಪುನಃ ರೂಪದಲ್ಲಿ ಮಾರ್ಪಾಡುಗೊಳಿಸಲ್ಪಡುತ್ತವೆ. ಮೂಲ ಅಡಕೆಯಲ್ಲಿ ಯಾವುದೇ ಹಾನಿಕಾರಕ ಕಲ್ಮಶ ಇರುವುದಿಲ್ಲ. ಅದಕ್ಕಾಗೇ ಅದನ್ನು ದೇವರಿಗೂ ಸಮರ್ಪಿಸಬಹುದೆಂದು ವೇದೋಕ್ತ ಮಂತ್ರಗಳೂ ಹೇಳುತ್ತವೆ.

ಫೂಗೀಫಲ ಸಮಾಯುಕ್ತಂ/ ಮಹದ್ದಿವ್ಯಂ ನಾಗವಲ್ಲೀ ದಲೈರ್ಯುತಂ |
ಕರ್ಪೂರ ಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗ್ರಹ್ಯತಾಂ ||

ಅಂದರೆ: ಅಡಕೆ, ವೀಳ್ಯದೆಲೆ , ಪಚ್ಚಕರ್ಪೂರ ಲವಂಗಾದಿಗಳನ್ನು ಇಟ್ಟು ಈ ತಾಂಬೂಲ ಕೊಡುತ್ತಿದ್ದೇನೆ ಪರಮಾತ್ಮಾ ಸ್ವೀಕರಿಸು ಎನ್ನುತ್ತೇವೆ. ಮದುವೆ, ಮುಂಜಿ ಅಥವಾ ಯಾವುದೇ ಮಂಗಲಕಾರ್ಯಗಳಲ್ಲಿ ಅಡಕೆ ಇಲ್ಲದೇ ನಡೆಯುವುದೇ ಇಲ್ಲ! ಹಳೆಯ ಕಾಲದ ವ್ಯವಹಾರಗಳಲ್ಲಿ ಗುತ್ತಿಗೆ ಹಿಡಿಯುವಾಗ ಅಥವಾ ವ್ಯವಹಾರ ನಡೆಸುವಾಗ ಸಂಚಕಾರ ಕೊಡೋದು ಅಥವಾ ವೀಳ್ಯಕೊಡೋದು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ಈಗಲೂ ಹಿಂದಿಯಲ್ಲಿ ಸುಪಾರಿ ಕೊಡೋದು ಎಂದು ಕರೆಯುತ್ತಾರಾದರೂ ಹಾಳು ಕೊಲೆಗಡುಕರ ಬಳಕೆಯಿಂದ ಈ ಶಬ್ದವನ್ನು ಬಳಸಲು ಕೆಲವರು ಹಿಂಜರಿಯುತ್ತಾರೆ. ಸ್ವಲ್ಪವಾದರೂ ಹಣವನ್ನು ವೀಳ್ಯದೆಲೆ ಅಡಕೆಯ ಮೇಲೆ ಇಟ್ಟು ಕೊಡುವುದು ಅಂದಿನ ರೂಢಿಯಾಗಿತ್ತು. ರಾಜರುಗಳ ಕಾಲದಲ್ಲಿ ಧುರವೀಳ್ಯ ಕೊಡುವುದು ಎಂದಿತ್ತು. ಧುರವೀಳ್ಯವೆಂದರೆ ಯುದ್ಧಕ್ಕೆ ಕರೆಕೊಡುವುದು. ಇಂದಿಗೂ ಪುರೋಹಿತರಿಗೆ, ವೈದಿಕರಿಗೆ ಸಂಭಾವನೆಯಾಗಿ ಕೊಡುವ ಹಣವನ್ನು ವೀಳ್ಯದೆಲೆ-ಅಡಕೆಯ ಮೇಲೆ ಇಟ್ಟೇ ಕೊಡಲಾಗುತ್ತದೆ. ಹಣ ಎಷ್ಟಿದೆ ಕಾಣಬಾರದೆಂದು ಲಕೋಟೆಗಳನ್ನು ಬಳಸಿದರೂ ಜೊತೆಗೆ ತಾಂಬೂಲ ಅನಿವಾರ್ಯ. ಇಷ್ಟೆಲ್ಲಾ ದೇದೀಪ್ಯಮಾನ ಸ್ಥಾನವನ್ನು ಅಲಂಕರಿಸಿದ ಅಡಕೆಯನ್ನು ಯಾಕೆ ಕೇಂದ್ರ ಸರಕಾರ ಪ್ರೋತ್ಸಾಹಿಸಿಲ್ಲಾ ಎಂಬುದನ್ನು ಗಮನಿಸಿದರೆ ಅದರ ಹಿಂದೆ ಗುಟ್ಕಾ, ಪಾನ್ ಪರಾಗ್ ಮೊದಲಾದ ಕೆಮಿಕಲ್ ತಯಾರಕರ ದಂಡು ಕಾಣುತ್ತದೆ.

ಬೆಂಗಳೂರಿನ ಪಾನ್ ಬೀಡಾ

ಅಗಿಯುವ ಅಡಕೆಗೆ ಕೆಮಿಕಲ್ ಸೇರಿಸಿ ಹೊಸಹೊಸ ಸ್ವಾದ ಬರುವಂತೇ ಕಿಕ್ ಹೊಡೆಯುವಂತೇ ತಂಬಾಕು ಮಿಶ್ರಮಾಡಿ ಮಾರಾಟ ಮಾಡುವುದರಿಂದ ಇದೊಂದು ದುಶ್ಚಟವೆಂದು ಗುರುತಿಸಲ್ಪಟ್ಟಿತು. ದೇವರಿಗೆ ಸಮರ್ಪಿಸುವ ರೂಪದಲ್ಲಿ ಇರುವ ಅಡಕೆಯನ್ನು ಅಗಿದರೆ ಯಾವ ಹಾನಿಯೂ ಆಗುವುದಿಲ್ಲ, ಬದಲಾಗಿ ಅದು ಒಳ್ಳೆಯದೇ. ಅಲ್ಲಿ ತಂಬಾಕು ಅಥವಾ ಕೆಮಿಕಲ್ ಹಾಕಿರುವುದಿಲ್ಲವಲ್ಲ. ಸರಕಾರ ನಡೆಸುವ ಜನ ಅಡಕೆಯೇ ಹಾನಿಕಾರಕ ಎಂದು ತಪ್ಪುತಿಳಿದಿದ್ದರು. ಈಗೀಗ ವೈಜ್ಞಾನಿಕ ಸಂಶೋಧನೆಗಳು ನಡೆದು ಸಮಜಾಯಿಸಿ ಸಿಕ್ಕಮೇಲೆ ಮೂಲ ಅಡಕೆ ಹಾನಿಕರವಲ್ಲ ಎಂಬುದು ಅವರಿಗೆ ತಿಳಿಯಿತಾದರೂ ಪ್ಲಾಸ್ಟಿಕ್ ನಿಷೇಧಿಸುವ ಇಚ್ಛೆಯಿಂದ ಅಡಕೆ ಪೌಚ್‍ಗಳನ್ನು ನಿಷೇಧಿಸಿದೆ. ಹೀಗಾಗಿ ಅಡಕೆ ಮಾರುಕಟ್ಟೆಗೆ ಸ್ವಲ್ಪ ಹೊಡೆತ ಬಿದ್ದಿದೆ. ಆದರೂ ಅಡಕೆ ಕೇವಲ ಅದನ್ನಷ್ಟೇ ಅವಲಂಬಿಸಿಲ್ಲ. ಹೀಗಾಗಿ ಅಡಕೆ ಬೆಳೆಗಾರರು ಬದುಕಿಕೊಂಡರು!

ಸಹಜವಾಗಿ ಎಲ್ಲಾ ರೈತರಂತೇ ಭೂಮಿತಾಯಿ ಕೈಬಿಡುವುದಿಲ್ಲವೆಂಬ ಒಂದೇ ನಂಬಿಕೆಯಮೇಲೆ ಬೆಳೆ ತೆಗೆಯುವವರು ಅಡಕೆ ಬೆಳೆಗಾರರು. ಮಳೆ-ಬಿಸಿಲು-ಚಳಿಗಳನ್ನು ಅವಲಂಬಿಸಿದ ಬೆಳೆಯೂ ಹೌದು. ಮಳೆ ಸಕಾಲಕ್ಕೆ ಆಗಬೇಕು, ಹಿತಮಿತವಾಗಿರಬೇಕು. ಬಿಸಿಲು ಅತಿಯಾಗಬಾರದು, ಚಳಿಯೂ ತುಂಬಾ ಅತಿಯಾದರೆ ಅನುಕೂಲವಲ್ಲ. ಮಳೆಗಾಲದಲ್ಲಿ ಮಳೆಯ ಮಧ್ಯೆಯೇ ಕೊಳೆರೋಗಕ್ಕೆ ಪರಿಹಾರವಾಗಿ ತಾಮ್ರದ ಸಲ್ಫೇಟ್ ಎಂಬ ದ್ರಾವಣವನ್ನು ಸುಣ್ಣದನೀರಿನೊಡನೆ ಮಿಶ್ರಣಮಾಡಿ ಸಿಂಪಡಿಸಲಾಗುತ್ತದೆಯೇ ಹೊರತು ಮತ್ಯಾವ ರಾಸಾಯನಿಕಗಳನ್ನೂ ಬಳಸುವುದಿಲ್ಲ. ಅದೂ ದಪ್ಪದ ಸಿಪ್ಪೆಗೆ ತಾಗುತ್ತದಷ್ಟೇ. ಒಮ್ಮೆ ಆ ಮಿಶ್ರಣವನ್ನು ತಿಂದರೂ ಅದು ಅಂತಹ ಹಾನಿಕಾರಕವಲ್ಲ. [ಟೂತ್ ಪೇಸ್ಟ್ ತಿಂದರೆ ಹೇಗೆ ಹಾನಿಯಿಲ್ಲವೋ ಹಾಗೇ !]

ಖರ್ಚುವೆಚ್ಚಗಳನ್ನು ಗಮನಿಸಿದರೆ ಒಬ್ಬ ಅಡಕೆ ಬೆಳೆಗಾರನಿಗೆ ಆತನ ಹೊಟ್ಟೆ-ಬಟ್ಟೆಗೆ ಸಾಲುವಷ್ಟು ಮಾತ್ರ ದಕ್ಕುತ್ತದೆ. ಅಡಕೆ ಬೆಳೆಗೆ ಹೊಸ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಬಹಳ ಪ್ರಾಮುಖ್ಯ. ರಾಸಾಯನಿಕ ಗೊಬ್ಬರ ಉಪಯೋಗಿಸಿದರೆ ಒಮ್ಮೆ ಅಧಿಕ ಇಳುವರಿ ಬರುತ್ತದೇನೋ ಹೌದು ಆದರೆ ಮರದ ತಿರುಳು ಬೆಂಡಿನಂತಾಗಿ ಮರ ಕೊಬ್ಬಿ ತನ್ನ ಗಡಸುತನವನ್ನು ಕಳೆದುಕೊಳ್ಳುವುದರ ಜೊತೆಗೆ ಗಾಳಿಮಳೆಗೆ ಮರ ನೆಲಕ್ಕೆ ಉರುಳುತ್ತದೆ. ಇಂದಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರ ಒದಗಿಸುವುದು ಕಷ್ಟಕರವಾಗಿದೆ. ಎರಡನೆಯದಾಗಿ ಮರಕಸುಬು ಗೊತ್ತಿರುವ ನುರಿತ ಕೆಲಸಗಾರರು ಕೊಳೆ ಔಷಧಿ ಸಿಂಪಡಿಸುವಾಗಲೂ ಮತ್ತು ಕೊನೆ ಕೊಯ್ಯುವಾಗಲೂ ಬೇಕಾಗುತ್ತಾರೆ. ಇದು ಬಹಳ ರಿಸ್ಕೀ ಜಾಬ್. ಸ್ವಲ್ಪ ಎಡವಟ್ಟಾದರೆ ಮರದಿಂದ ಕೆಳಗೆ ಬಿದ್ದು ಸೊಂಟ ಮುರಿದೀತು ಅಥವಾ ಕೆಲವೊಮ್ಮೆ ಮರವೇ ಮುರಿದುಬೀಳುವ ಸಾಧ್ಯತೆಯೂ ಇರುವುದರಿಂದ ಮರಹತ್ತುವಾಗಲೇ ಅವರ ಅನುಭವವೇ ಅವರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಎಲ್ಲಾ ಕೆಲಸಗಾರರನ್ನೂ ಅಡಕೆ ತೋಟದಲ್ಲಿ ಬಳಸಿಕೊಳ್ಳಲು ಆಗುವುದಿಲ್ಲ. ಮರಕಸುಬಿನವರಿಗೆ ಧೈರ್ಯ, ಸಾಹಸ ಮತ್ತು ಗಾಳಿಗೆ ಬೇಕಾಬಿಟ್ಟಿ ತಲೆದೂಗುವ ಮರಗಳನ್ನು ಸಂಬಾಳಿಸುವ ಚಾಕಚಕ್ಯತೆ ಬೇಕಾಗುತ್ತದೆ. ಮರವೇರುವಾತ ತೀರಾ ವಯೋವೃದ್ಧನಾದರೂ ಕಷ್ಟ ತೀರಾ ಎಳಬನಾದರೂ ಕಷ್ಟ. ಹೀಗಾಗಿ ತಲೆತಲಾಂತರದಿಂದ ಕೆಲವರು ತಾವೇ ಇಷ್ಟಪಟ್ಟು ಮಾಡುವ ವೃತ್ತಿ ಇದು.

ಕೊಯ್ದ ಕೊನೆಗಳಿಂದ ಅಡಕೆ ಬೇರ್ಪಡಿಸುವುದು, ಅವುಗಳನ್ನು ಬಿಸಿಲಲ್ಲಿ ಒಣಗಿಸುವುದೋ,[ಕಾಯಡಕೆಯಾದರೆ ಸುಲಿದು ಬಿಸಿನೀರಲ್ಲಿ ಬೇಯಿಸುವುದೋ] ನಡೆಯುತ್ತದೆ. ಅವುಗಳನ್ನು ಸುಲಿಯುವುದಕ್ಕೇ ಸುಮಾರು ಮಂದಿ ಬೇಕಗುತ್ತದೆ. ಈಗೆಲ್ಲಾ ಇದಕ್ಕೆ ಯಂತ್ರಗಳು ಬಂದಿದ್ದರೂ ಯಂತ್ರಗಳು ಎಲ್ಲರ ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಸಹಕಾರ ಸಂಘಗಳನ್ನು ಮಾಡಿಕೊಂಡು ಅದನ್ನು ಖರೀದಿಸಿ ಅಡಕೆ ಸುಲಿಯುವ ಪ್ರಕ್ರಿಯೆಗೆ ಕೆಲವರು ಮುಂದಾಗಿದ್ದಾರೆ. ಹಣವುಳ್ಳವರು ಯಂತ್ರಕೊಂಡು ಹಣಪಡೆದು ಅಡಕೆ ಸುಲಿದು ಕೊಡುವ ಕೆಲಸವೂ ಇನ್ನು ಕೆಲವು ದಿನಗಳಲ್ಲಿ ಆರಂಭವಾಗಬಹುದು. ಮಳೆಗಾಲದಲ್ಲಿ ಸಕಾಲದಲ್ಲಿ ಔಷಧಿ ಸಿಂಪಡಿಸಲು ಮರಕಸುಬಿನವರು ಸಿಗದೇ ಇದ್ದಲ್ಲಿ ಸಂಪೂರ್ಣ ಅಡಕೆಪೀಚುಗಳು ಕೊಳೆತು ಉದುರಿಬೀಳುವುದು ತಪ್ಪಿದ್ದಲ್ಲ. ದೀಪಾವಳಿ ಸಮಯದಲ್ಲಿ ಹಣ್ಣದ ಅಡಕೆಯನ್ನೋ ಕೆಲವು ಪ್ರದೇಶಗಳಲ್ಲಿ ಕಾಯಡಕೆಯನ್ನೋ ಕೊಯ್ಯಲು ಮರಕಸುಬಿನವರು ಸಿಗಲಿಲ್ಲವೆಂದರೆ ಮತೆ ಪೀಕಲಾಟ. ಹರಸಾಹಸದ ನಡುವೆ ಗೊಬ್ಬರಕ್ಕಾಗಿ ದನಗಳ ಸಾಂಗತ್ಯವೂ ಬೇಕು, ಅವುಗಳ ಆರೋಗ್ಯ, ಉಪಚಾರ ನೋಡಿಕೊಳ್ಳಬೇಕು. ಚಳಿ ಮತ್ತು ಬೇಸಿಗೆಯಲ್ಲಿ ತೋಟಕ್ಕೆ ನೀರುಹಾಯಿಸುವ ವ್ಯವಸ್ಥೆಯಾಗಬೇಕು. ಹೀಗೇ ಹಲವು ಹತ್ತು ಕೆಲಸಗಳು ಅಡಕೆ ಬೆಳಗಾರನಿಗೆ. ಕೆಲವೊಮ್ಮೆ ಅಡಕೆ ತಯಾರಾಗಿ ಮಾರುಕಟ್ಟೆಗೆ ಕಳಿಸುವ ಸಮಯದಲ್ಲಿ ಉತ್ತಮ ಧಾರಣೆ ಸಿಗುವುದೇ ಇಲ್ಲ. ಒಮ್ಮೊಮ್ಮೆ ಧಾರಣಮಟ್ಟ ಕುಸಿದಾಗ ಖರ್ಚು-ವೆಚ್ಚ ಕೂಲಿ-ಮಜೂರಿ ಎಲ್ಲಾ ಕಳೆದು ಗಂಜಿ ಊಟಕ್ಕೂ ಹಿಂಜರಿಯದೇ ಇರಬೇಕಾಗುತ್ತದೆ. ಅಡಕೆಗೆ ಸರಕಾರದ ಬೆಂಬಲ ಬೆಲೆ ಇರಲಿಲ್ಲವಾಗಿ ಆರಕ್ಕೋ ಮೂರಕ್ಕೋ ಕೇಜಿ ಮಾರಿಕೊಂಡು ಕಾಲಹಾಕಬೇಕಾಗಿತ್ತು. ೧೯೭೨ರಿಂದ ಪ್ರತೀ ಹತ್ತುವರ್ಷಗಳಿಗೊಮ್ಮೆ ಅಡಕೆ ಧಾರಣೆ ನೆಲಕಚ್ಚಿಬಿಟ್ಟಿದ್ದು ಈಗ ದಾಖಲೆಗಳಲ್ಲಿ ನೋಡಸಿಗುತ್ತದೆ. ಬೆಳೆಗಾರನಲ್ಲಿ ಖಾಯಿಲೆ-ಕಸಾಲೆಗೆ ಖರ್ಚುಮಾಡಲೂ ಕಾಸಿರಲಿಲ್ಲ! " ಬಿಡಿ ಅತ್ಲಗೆ ಅದು ಹೇಳಿ ಪ್ರಯೋಜನವಿಲ್ಲ " ಎಂದವರು ಬಹಳಮಂದಿ.

ಅಡಕೆ ಬೇರೇ ಬೇರೇ ಭಾಷೆಗಳಲ್ಲಿ ಹೇಗೆ ಗುರುತಿಸಲ್ಪಟ್ಟಿದೆ ನೋಡೋಣವೇ? [ಅಂತರ್ಜಾಲದಲ್ಲಿ ಸಂಗ್ರಹಿಸಿದ ಆಂಗ್ಲ ಭಾಷೆಯಲ್ಲಿರುವ ಈ ಕೆಲ ಮಾಹಿತಿಗಳು ನಿಮಗಾಗಿ] :

Botanical Name: Areca catechu L. Family Name : ARECACEAE

Usage : Tree Used In Ayurveda, Folk, Homeopathy, Tibetian, Unani, Sidha and Modern

Distribution :

This speices is globally distributed in Indo-Malesia. It is cultivated in tropical America, Africa and India. Within India, it has been recorded Assam, Meghalaya, West Bengal, Karnataka, in the coastal regions, from Maharashtra to Kerala and Tamil Nadu and in the Deccan Plateau and Andaman and Nicobar Islands. It is also cultivated in the areas of its occurrence for its nuts which are commercially important.

Arabic (6) faufil, fofal, fofal or foufal, fofal or fouzal, foufal, fufal

Assamese (1) guwa

Bengali (1) supari

English (4) areca nut, betel palm, betelnut, pinang

Hindi (4) supari, supiari, suppari, supyari

Kannada (24) adake, adaki, adike, adike kaayi, adike mara, betta, bettadake, bettadike, bette, chautaki, chikaniyadike, chikke, cikaniyadike, cikke, gotadike, kangu, kaungu, khapura, khhapura, kowngu, puga, pugiphala, tambula, thaamboolagotu

Malayalam (28) adaka, adakai, adakka, atakka, ataykkamaram, atekka, atekkai, caunga, cavooghoo, chempalukka, cuanga, ghhonta, ghonta, kalunnu, kamugu, kamuka, kamuku, kamunnu, kavungu, kavunnu, kazhangu, kazhunnu, khhapuram, kramukam, pakavakka, pakka, pakku, pugam

Manipuri (1) kwa

Marathi (7) madi, pophal, pophala, pophali, pung, supaaree, supari

Mizoram (2) kuva, kuvathing

Oriya (12) kuva, kuvathing, trynodrumo

Persian (4) gird-chob, girdchob, popal, pupal

Sanskrit (32) a, akota, akotaja, chhataphala, chikkana, dirghapadapa, dridhavalkala, ghonta, gopadala, gubak, guvaka, kabukah, kapitana, karamattam, khapura, khipura, kramuka, kramukah, kramukam, kuvara, phalam, pooga, puga, puga-phalam, pugah, pugi, rajatala, suranjana, tambula, tantusara, udvegam, valkataru

Tamil (65) akotam, ataikkay, cakuntam#, cakuntam@, cakuntikai, cakuntikaimaram, cattamarkkam, ciram 2, curancanam, inippilapatitam, inippilatitamaram, iracatalam, kaiccikam, kaiccikamaram, kalacattiram, kalaymaram, kamugu, kamuku, kandi, kanti, kapuram#, kapuram@, katti, kiramamuki 1, kiramamukimaram, kiramugam, kiramukam, kiramukam#, kiramukam@, kirantimukam, kirumukam, kontai 2, kottai paakku, kottai pakku, kottai-pakku, kugagam, kukacamaram, kukakam, kuntal 2, kuvakam, maturapakam, maturapakamaram, nattukkamuku, paak, pakku, pakkumaram, pakkuppanai, paku-kotai, palacankiyam, palacinikiyamam, piramataru, piramatarucam, pirumaniyam, pugam, pukaram 1, putakam, talattiram, tampulavatanimaram, tantucaram, tantucaramaram, tarpati, taru, tiritavalkam, tuvarkkay, tuvarkkaymaram

Telugu (18) chikinamu, chikini, gautupoka, kazhangu, khapuramu, kolapoka, kramukamu, oppulu, oppuvakkulu, pakavakka, pogamu, poka, poka chettu, poka-vakka, prakka, pugamu, vakka, vakkalu

Tibetan (6) gla gor zo sa, go yu, kra ma ka (p), kra mra sa, sla bor se sa (d), zu (m) khan

Urdu (12) chalia jalai hui, chalia purani jalai hai, chalia sokhta, chhalia, chhalia kohna sokhta, chikni chhalia, fufal (chalia), gond supari, gul supari, katha, supari, supari chikni pisi hui


ಗುಟ್ಟೊಂದು ಹೇಳುವೆ ಕೇಳಿ :

ವಾರಕ್ಕೊಮ್ಮೆಯಾದರೂ ಎಲೆಯಡಕೆ ತಿನ್ನುವುದರಿಂದ ಹಲ್ಲುಗಳ ಮತ್ತು ಒಸಡುಗಳ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮೂರಲ್ಲಿ ಎಲೆಯಡಕೆಗೆ ’ಕವಳ’ ಎಂಬರು. ಕವಳ ಎಂದರೆ ಊಟ. ರಸಗವಳ ಎಂದರೆ ಮೃಷ್ಟಾನ್ನ ಭೋಜನ. ಊಟದಷ್ಟೇ ಮಹತ್ವ ಎಲೆಯಡಕೆಗೂ ಇರುವುದರಿಂದ ಪೂರ್ವಜರು ಅದನ್ನು ಕವಳ ಎಂದಿದ್ದಾರೆ. ನಮ್ಮ ಹಿರಿಯರ ಪರಿಚಿತರು ಸ್ನೇಹಿತರು ನಮ್ಮೂರಕಡೆ ಕೆಲವೊಮ್ಮೆ ಬಂದಾಗ " ಗಡಿಬಿಡಿ ಇದೆ, ಊಟಗೀಟ ಏನೂ ಬೇಡ ಒಂದು ಕವಳ ಕೊಡಿ ಸಾಕು " ಎಂದು ಕವಳಹಾಕಿಕೊಂಡು ಹೋಗುತ್ತಾರೆ. ಕವಳ ಅಷ್ಟು ಉತ್ತೇಜನಕಾರಿಯಾಗಿದೆ. ಕೆಲವರಿಗೆ ಕವಳ ಇದ್ದ ಹೊರತು ಕೆಲಸವೇ ನಡೆಯುವುದಿಲ್ಲ! ಶುಭಕಾರ್ಯಗಳ ದಿನ ಊಟದ ನಂತರ ತಾಂಬೂಲ ಕೊಡುವುದು ಶಾಸ್ತ್ರೋಕ್ತ ಪದ್ಧತಿಯಾಗಿರುತ್ತದೆ. ಅದರೊಟ್ಟಿಗೆ ಅಲ್ಲಿಯೇ ಹಾಕಿಕೊಳ್ಳಲು ರಸಭರಿತ ಪಾನ್ ಬೀಡಾಗಳನ್ನು ಕೊಡುವುದೂ ವಾಡಿಕೆಯಲ್ಲಿದೆ ಅಲ್ವೇ?

ಬಾಯಲ್ಲಿ ನೀರೂರಿಸುವ ಮಘೈ ಪಾನ್

ಕವಳದಲ್ಲಿ ಏನೆಲ್ಲಾ ಇರಬೇಕು :


೧. ನಾಗವಲ್ಲೀ ----ನಾಗವಲ್ಲೀ ಎಂದರೆ ಸಿನಿಮಾದಲ್ಲಿ ನೋಡಿದ್ದು ನೆನಪಾಗಿ ಹೆದರಿ ಓಡಿಹೊಗಬೇಡಿ. ಇದೊಂದು ಜಾತಿಯ ಬಳ್ಳಿ. ಇದರ ಎಲೆಯೇ ಕವಳಕ್ಕೆ ಶ್ರೇಷ್ಟ. ಇದು ಮತ್ತದೇ ನಮ್ಮ ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ, ಬಯಲು ಸೀಮೆಯಲ್ಲಿ[ಸ್ವಲ್ಪ] ಮತ್ತು ಮೈಸೂರಿನಲ್ಲಿ ಬೆಳೆಯಲ್ಪಡುತ್ತದೆ. ಮೈಸೂರಿನ ಎಲ ಹೆಸರುವಾಸಿಯಾದರೂ ಕರಾವಳೀ ವೀಳ್ಯದೆಲೆ ಅದಕ್ಕೆ ಯಾವುದರಲ್ಲೂ ಕಮ್ಮಿಯಿಲ್ಲ. [ಮದ್ರಾಸ್ ಎಲೆ ಅಥವಾ ಅಂಬಾಡಿ ಎಲೆಯನ್ನು ಬಳಸುತ್ತಾರಾದರೂ ಅದು ವಿಶೇಷವಲ್ಲ. ಇನ್ನು ಸವಣೂರು, ಕಲ್ಕತ್ತಾ ಹೀಗೇ ಹಲವಾರು ತಳಿಯ ಎಲೆಗಳಿವೆ]

೨. ಅಡಕೆ : ಕೆಂಪಡಕೆ ತುಣುಕುಗಳು ಅಥವಾ ಚಾಲಿ ಅಡಕೆ ತುಣುಕುಗಳು

೩. ಸುಣ್ಣ: ಕಲ್ಲು ಸುಣ್ಣ ಅಥವಾ ಚಿಪ್ಪಿ ಸುಣ್ಣ [ಸ್ವಲ್ಪ]

ಹೆಚ್ಚುವರಿಯಾಗಿ ಉತ್ತಮ ಸ್ವಾದಕ್ಕಾಗಿ :

೪. ಪಚ್ಚಕರ್ಪೂರ [ಅತಿ ಚಿಕ್ಕ ಅಂಶ]

೫. ಲವಂಗ/ ಯಾಲಕ್ಕಿ : ಒಂದು

೬. ಖರ್ಜೂರ : ಉತ್ತುತ್ತಿ / ಖರ್ಜೂರ ಚಿಕ್ಕ ತುಣುಕುಗಳು

೭. ಕೊಬ್ಬರಿ : ಹಸಿ ಕಾಯಿಯ ತುಣುಕು ಅಥವಾ ಕೊಬ್ಬರಿಯ ತುಂಡು

೮. ಬೆಣ್ಣೆ ಗುಲ್ಕನ್ : ಸ್ವಲ್ಪ

ಅಡಕೆ, ವೀಳ್ಯದೆಲೆ, ಸುಣ್ಣ ಹದವಾಗಿ ಬೆರೆತಾಗ ಅದರಲ್ಲಿರುವ ಕ್ಯಾಲ್ಶಿಯಮ್ ಮತ್ತು ಇನ್ನಿತರ ನೈಸರ್ಗಿಕ ರಸಾಯನದ ಅಂಶಗಳು ಹಲ್ಲುಗಳು ಮತ್ತು ಒಸಡುಗಳನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿವೆ. ಕವಳ ಹಾಕುವ ಹಿರಿಯರನೇಕರಿಗೆ ಹಲ್ಲುನೋವಿನ ಬಾಧೆಯೇ ಇರಲಿಲ್ಲ ! ನನ್ನ ಅಜ್ಜ ೮೮ ವರ್ಷಗಳ ಕಾಲ ಬದುಕಿದ್ದರೂ ಒಂದೇ ಒಂದು ದಿನ ಹಲ್ಲು ನೋವು ಎನ್ನಲಿಲ್ಲ, ಅವರ ಹಲ್ಲುಗಳು ಗಟ್ಟಿಮುಟ್ಟಾಗಿದ್ದವು. ಅವರು ಉಪ್ಪು ಇದೆಯೆಂದು ಪ್ರಚಾರಗಿಟ್ಟಿಸುವ ಕಾಲ್ಗೇಟ್ ಬಳಸುತ್ತಿರಲಿಲ್ಲ ಬದಲಿಗೆ ಭತ್ತದ ಉಮಿ ಮತ್ತು ಕರ್ಪೂರ ಇತ್ಯಾದಿ ಸೇರಿಸಿದ ಪುಡಿಯನ್ನು ತೆಂಗಿನಕಾಯಿ ಸಿಪ್ಪೆಯ ಜೂಬಿನಲ್ಲಿ ಒಂದಷ್ಟು ತೆಗೆದುಕೊಂಡು ಗಸಗಸ ಹಲ್ಲುಜ್ಜುತ್ತಿದ್ದರು. ಹಲ್ಲುಗಳು ಫಳಫಳ ಹೊಳೆಯುತ್ತಿದ್ದವು. ಸನ್ಯಾಸಿಗಳು ಇಂಥದ್ದೇ ಮಿಶ್ರಣಕ್ಕೆ ಲವಂಗ ಮತ್ತು ಸ್ಫಟಿಕದ ಪುಡಿಗಳನ್ನು ಬೆರೆಸಿ ಹಲ್ಲುಜ್ಜುತ್ತಾರೆ ಎಂದು ಕೇಳಿಬಲ್ಲೆ. ಹಲ್ಲುಜ್ಜಲು [ಸಾಧ್ಯವಿದ್ದರೆ] ಬೇವಿನ ಕಡ್ಡಿ, ಬೈನೆಕಡ್ಡಿ ಮುಂತಾದ ಆಯುರ್ವೇದದಲ್ಲಿ ಹೇಳಿರುವ ಸಾಧನಗಳನ್ನೂ ಬಳಸಬಹುದಾಗಿದೆ. ಕವಳ ತಿಂದರೆ ಹಲ್ಲಿನ ಮೇಲೆ ಕಲೆ ಶಾಶ್ವತ ಎಂಬ ಮಾತು ಸುಳ್ಳು, ಅದು ನಾವು ಯಾವ ರೀತಿ ಕವಳ ತಿನ್ನುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಹಾಗೂ ಡೌಟಿದ್ದರೆ ನಿತ್ಯ ಬಳಸುವ ಬದಲು ವಾರಕ್ಕೊಮ್ಮೆ ಬಳಸಬಹುದಲ್ಲ ?

ಕವಳಕ್ಕೆ ಯಾವುದು ಬೇಡ :

ಗುಟ್ಕಾ, ಪಾನ್ ಪರಾಗ್, ಜರ್ದಾ, ಇನ್ನಿತರ ಕೆಮಿಕಲ್ ಗಳು ಮತ್ತು ತಂಬಾಕು. ಯಾಕೆಂದರೆ ಇವೆಲ್ಲಾ ಹಾನಿಕಾರಕಗಳಾಗಿವೆ. ಹಲ್ಲು ಕರೆಗಟ್ಟುವುದು, ಹಾಳಾಗುವುದು, ಬಾಯಿ ಹುಣ್ಣಾಗುವುದು, ಕ್ಯಾನ್ಸರ್ ಬಾಧೆ ತಗಲುವ ಸಾಧ್ಯತೆ ಇರುವುದು, ಒಸಡು ಹುಣ್ಣಾಗಿ ದುರ್ನಾತ ಬೀರುವುದು ಹೀಗೇ ಈ ಎಲ್ಲಾ ಆಗುವುದು ಕೇವಲ ಕೆಮಿಕಲ್ ಮತ್ತು ತಂಬಾಕಿನಿಂದ.


ಸಂಶೋಧನೆಗಳ ಫಲವಾಗಿ ರೆಡಾಕ್ಸೈಡ್ [ ಗೋಡೆಯ ಕೆಳಭಾಗಕ್ಕೆ ಬಳಿಯುವ ಬಣ್ಣ]ನ್ನು ಕೆಂಪಡಕೆಯಿಂದ ತಯಾರಿಸಲು ಬರುತ್ತದೆ ಎಂಬುದು ಗೊತ್ತಾಗಿ ಈಗ ತಯಾರಾಗುತ್ತಿದೆ. ಅಡಕೆಮರಗಳ ವೇಸ್ಟ್ ಗಳಿಂದ ಬಯೋ ಡೀಸೆಲ್ ತಯಾರಿಸಲು ಬರುತ್ತದೆಂಬ ವಾದವೂ ಪರಿಶೀಲನೆಯಲ್ಲಿದೆ. ಗುಣಮಟ್ಟದ ಆದ್ಯತೆಯಿಂದ ನಮ್ಮ ದೇಶದಲ್ಲಿನ ಅಡಕೆಗಳು ಕೆಲವೊಮ್ಮೆ ಭೂತಾನ್, ಪಾಕಿಸ್ತಾನ, ಅರೇಬಿಯನ್ ದೇಶಗಳಿಗೂ ರಫ್ತಾಗುತ್ತವೆ.

ಇಂಡೋನೇಷ್ಯಾದ ಅಡ್ಕತ್ರಿ

ಇಂಡೋನೇಷ್ಯಾದ ಅಜ್ಜನ ಕವಳ ಉಕ್ಕಿ ಹರಿದ ಸಂತೋಷ ನೋಡಿ ಮಜಾ ತಕಳಿ !

ಭೌಗೋಳಿಕವಾಗಿ, ವ್ಯಾವಹಾರಿಕವಾಗಿ ಉಪಯೋಗಕಾರೀ ವಸ್ತುವಾಗಿ ಮಂಗಳದ್ರವ್ಯಗಳ ಮಧ್ಯೆ ಆಸೀನವಾಗುವ ಅಡಕೆಯನ್ನು ಆಂಗ್ಲರು ಅರೇಕಾನಟ್ ಎಂದರು. ಇಷ್ಟೆಲ್ಲಾ ಕಥೆಕೇಳಿದಮೇಲಾದರೂ ಯುರೇಕಾ ಯುರೇಕಾ ಅಲ್ಲ ಅರೇಕಾನಟ್ಟು ಅಂದರೆ ಅದರ ಮಟ್ಟ ನಿಮ್ಮ ನಿಲುವಿಗೆ ನಿಲುಕಿರಬೇಕಲ್ಲ? ದುಬಾರಿಯಲ್ಲ ಬಿಡಿ; ಬೇರೇ ಹಣ್ಣು-ಕಾಯಿ ಒಡವೆ ವಸ್ತುಗಳಿಗೆ ಹೋಲಿಸಿದರೆ ಬೆಲೆ ಕಮ್ಮಿಯೇ ! ಮುಗಿಸುವುದಕ್ಕೂ ಮುನ್ನ ಹೇಳಿಬಿಡುತ್ತೇನೆ : ನಾನು ನಿಮ್ಮಗಳ ಮನೆಗೆ ಬಂದಾಗಕವಳಕೊಟ್ಟರೆ ಮಾತ್ರ ಐಶ್ವರ್ಯ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ, ಗೊತ್ತಾಯ್ತಲ್ಲ?

Thursday, November 10, 2011

ಅಂತರ್ಜಾಲದ ಆತ್ಮಶೋಧಕವೆಂಬ ಆಂಜನೇಯನ ಅಂಶಾವತಾರಿ !


ಅಂತರ್ಜಾಲದ ಆತ್ಮಶೋಧಕವೆಂಬ ಆಂಜನೇಯನ ಅಂಶಾವತಾರಿ !

ಅಂತರ್ಜಾಲದ ಮಿತ್ರರೇ, ನಾವು ನೀವುಗಳೆಲ್ಲಾ ಇಂದು ಇಲ್ಲಿ ಸೇರಿದ್ದರೆ ಅದಕ್ಕೆ ಒಂದಲ್ಲಾ ಒಂದು ’ಅಂತರ್ಜಾಲ ಶೋಧಕ’ವೇ ಕಾರಣ ಎನ್ನಬಹುದು. ನಮ್ಮಲ್ಲಿ ನಾವು ಹಲವರು ಆರ್ಕುಟ್, ಫೇಸ್ ಬುಕ್, ಗೂಗಲ್ ಬಜ್ ಹೀಗೇ ಮೊದಲಾದ ಸಾಮಾಜಿಕ ’ನೆಟ್‍ವರ್ಕ್’ [ಜಾಲಬಂಧ]ನಲ್ಲಿ ಮಿತ್ರರುಗಳಾಗಿ ಪರಸ್ಪರ ಪರಿಚಿತರಾಗಲು ಕಾರಣವೇ ಅಂತರ್ಜಾಲ ಶೋಧಕಗಳಾಗಿವೆ. ಅಂತರ್ಜಾಲದಲ್ಲಿ ಕೊಟ್ಟಿರುವ ವಿಳಾಸ ಹುಡುಕುವುದರಿಂದ ಹಿಡಿದು ಯಾವುದೋ ಪದವಿನ್ಯಾಸಕ್ಕೆ ಸಹಾಯ, ವಿಭಿನ್ನ ಭಾಷಾ ಪದಗಳ ಅರ್ಥ, ಯಾವುದೋ ಘಟನೆಗಳ ಕುರಿತು ವಿವರ, ಯಾವುದೋ ಸಂಸ್ಥೆಯ / ವ್ಯಕ್ತಿಯ ಬಗೆಗಿನ ವಿವರ, ಯಾವುದೋ ವಸ್ತುವಿನ ಬಗ್ಗೆ ವಿವರ, ಯಾವುದೋ ತಾಂತ್ರಿಕತೆಯ ಬಗ್ಗೆ ವಿವರ ಹೀಗೇ ಒಂದಲ್ಲಾ ಎರಡಲ್ಲ ಇಲ್ಲಿ ಸಿಗದ ವಿಷಯಗಳೇ ಇಲ್ಲ. [ಕೆಲವೊಮ್ಮೆ ಸಿಗುವ ವಿವರಗಳು ಪಕ್ಕಾ ಇದ್ದರೆ ಇನ್ನು ಕೆಲವೊಮ್ಮೆ ಅವು ’ಟುಸ್’ ಆಗಿಬಿಡುತ್ತವೆ ಯಾಕೆಂದರೆ ಅಂತರ್ಜಾಲದಲ್ಲಿ ಸಿಗಬಹುದಾದ ಮಾಹಿತಿ ಪುಟಗಳಿಗೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದಾಗಿದೆ. ಸೇರಿಸುವ ಮಾಹಿತಿ ಸಮರ್ಪಕವಾಗಿದ್ದರೆ ಸರಿ, ಅಸಂಗತ ಅಸಮರ್ಪಕ ಮಾಹಿತಿಯನ್ನೂ ಕೆಲವು ಕಿಡಿಗೇಡಿಗಳು ಸೇರಿಸಿಬಿಡುತ್ತಾರೆ. ಇದೊಂದು ದೋಷವನ್ನುಳಿದು ಮಿಕ್ಕಿದ್ದೆಲ್ಲಾ ಅದ್ಭುತ!]

ನೀವೆಲ್ಲಾ ಈಗೀಗ ನೋಡಿಯೇ ಇರುತ್ತೀರಿ. ಕೆಲವರಂತೂ ’ಗೂಗಲ್ ಮಾಡು’ ಎನ್ನುವುದನ್ನೇ ನಿತ್ಯದ ಮಾತಾಗಿಸಿಕೊಂಡಿದ್ದಾರೆ. ಸರ್ಚ್ ಎಂಜಿನ್ ಅಥವಾ ಜಾಲ ಸಂಶೋಧಕಗಳ ಬಗ್ಗೆ ತುಸು ತಿಳಿಯುವಾ ಅಲ್ಲವೇ? ಸರ್ ಟಿಮ್ ಬರ್ನರ್ಸ್ ಲೀ ಎಂಬವರು ಬ್ರಿಟಿಷ್ ಗಣಕಯಂತ್ರ ವಿಜ್ಞಾನಿ. ಏನೋ ಹುಡುಕ ಹೊರಟ ಅವರಿಗೆ ಯಾವುದೋ ಮಾಹಿತಿಗಾಗಿ ಪರದಾಡಬೇಕಾದ ಸ್ಥಿತಿ ಒಮ್ಮೆ ನಿರ್ಮಾಣವಾಗಿದ್ದೇ ಈ ಸರ್ಚ್ ಎಂಜಿನ್ ವ್ಯವಸ್ಥೆ ರೂಪಿತವಾಗಲು ಪ್ರಮುಖ ಕಾರಣ ! ಒಮ್ಮೆ ನಾನು ಒಬ್ಬರನ್ನು ಭೇಟಿಮಾಡಿದ್ದಾಗ " ಯುವರ್ ಕಂಪ್ಯೂಟರ್ಸ್ ಆರ್ ಗ್ಲೋರಿಫೈದ್ ಟೈಫ್‍ರೈಟರ್ಸ್ " ಎಂದಿದ್ದರು. ಅವರಿಗೆ ತಾಂತ್ರಿಕ ಉತ್ತರವನ್ನು ಕೊಟ್ಟಾಗ ನಿಬ್ಬೆರಗಾಗಿದ್ದರು. ಈಗಲೂ ಆಗಾಗ ನಮ್ಮಿಂದ ಸಲಹೆ ಪಡೆಯುವ ಆತನಿಗೆ ಗಣಕಯಂತ್ರ ಮಾಮೂಲೀ ಬೆರಳಚ್ಚು ಯಂತ್ರಕ್ಕಿಂತ ಹೇಗೆ ಭಿನ್ನ ಎಂಬ ಬಗ್ಗೆ ಒಂದು ಗಂಟೆ ಉಪನ್ಯಾಸ ಕೊರೆದಿದ್ದೆ! ಅದು ಹೇಗೆ ಭಿನ್ನ ಎಂಬುದು ನಿಮಗೆಲ್ಲಾ ತಿಳಿದೇ ಇದೆ, ತಿಳಿದಿಲ್ಲವೆಂದರೆ ನೀವು ಗಣಕಯಂತ್ರಗಳನ್ನು ಬಳಸಲು ನಾಲಾಯ್ಕು!

ಗಣಕಯಂತ್ರಕ್ಕೂ ಗಣೇಶನ ಭುದ್ಧಿಮತ್ತೆಗೊ ಹೋಲಿಸಬಹುದಾಗಿದೆ ಏಕೆಂದರೆ ಬಳಕೆದಾರನ ಅರ್ಹತೆ ಮತ್ತು ಕಾರ್ಯವೈಖರಿಯನ್ನು [ತಪಸ್ಸಿದ್ಧಿಯನ್ನು ] ಅವಲಂಬಿಸಿ ಯಂತ್ರ ಕೆಲಸಮಾಡುತ್ತದೆ. ಈ ಯಂತ್ರಕ್ಕೆ ಕೆಲವು ಮೂಲಭೂತ ಪರಿಕರಗಳ ಸಾಂಗತ್ಯ ಇರದೇ ಹೋದರೆ ಅದು ಪರಿಪೂರ್ಣವಾಗುವುದಿಲ್ಲ. ಹಾಗೆ ಬಳಸುವ ಸುತ್ತಲ ಪರಿಕರಗಳಲ್ಲಿ [ಪೆರಿಫಿರಲ್ಸ್] ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೌಲಭ್ಯ ಕೂಡ ಒಂದು. ಇವತ್ತಿನ ದಿನಮಾನಕ್ಕೆ ತಕ್ಕುದಾದ ಹೊಸ ಸಾಮಾನ್ಯಗತಿಯ ಗಣಕಯಂತ್ರ ಮತ್ತು ಬ್ರಾಡ್ ಬ್ಯಾಂಡ್ ಸೌಲಭ್ಯ ಇವೆರಡಿದ್ದರೆ ಬಹುತೇಕ ಕೆಲಸ ಸಾಧ್ಯವಾದ ಹಾಗೇ ! ’ಗೂಡಿನಲ್ಲಿರುವ ಪಕ್ಷಿ ನಾಡೆಲ್ಲಾ ನೋಡುತ್ತದೆ’ ಎಂಬ ಒಗಟು/ನಾಣ್ನುಡಿ ನಮ್ಮಲ್ಲಿದೆ. ಅದು ಕಣ್ಣಿಗೆ ಪರೋಕ್ಷವಾಗಿ ಹೇಳಿದ ಮಾತು. ಈಗ ಆ ಒಗಟು ಅಂತರ್ಜಾಲ ಶೋಧಕಕ್ಕೂ ಅನ್ವಯವಾಗುತ್ತದೆ! ಗಣಕಯಂತ್ರವೊಂದು ಚಿಕ್ಕ ಗೂಡು ಎಂದು ಭಾವಿಸಿದರೆ ಅಲ್ಲಿ ಕೂತು ಜಗತ್ತನ್ನೆಲ್ಲಾ ಸುತ್ತಾಡುವ ಈ ಶಕ್ತಿಗೆ ಅಥವಾ ಇ-ಶಕ್ತಿಗೆ ಅದೂ ಕಮ್ಮಿಯೇ.

೧೯೯೦ರ ಸಮಯದ ವರೆಗೆ ಯಾವುದೇ ಇಂತಹ ಶೋಧಕಗಳಿರಲಿಲ್ಲ. ಮೊಟ್ಟ ಮೊದಲ ಶೋಧಕ ’ಆರ್ಕೀ’ Archie ಪ್ರಸ್ತುತಗೊಂಡಿದ್ದೇ ಆಗ-ಇದು ಅಲನ್ ಎಮ್ಟೇಜ್, ಬಿಲ್ ಹೀಲನ್ ಮತ್ತು ಡೂಶ್ಚ್ ಎಂಬ ಮೇ-ಗ್ರಾಹಿಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಯತ್ನದಿಂದಾದ ಫಲ. ಸಾರ್ವಜನಿಕ ಹಿತಾಸಕ್ತಿಯಮೇಲೆ ಸ್ಥಾಪಿತವಾದ ’ಫೈಲ್ ಟ್ರಾನ್ಸ್ಫರ್ ಪ್ರೊಟೋಕಾಲ್’ [ಮಾಹಿತಿ ವರ್ಗಾವಣೆ ಶಿಷ್ಟಾಚಾರ]ದಲ್ಲಿ ನಮೂದಾಗಿರುವ ಎಲ್ಲಾ ಮಾಹಿತಿಮೂಲಗಳನ್ನು ಸಂಗ್ರಹಿಸುವಲ್ಲಿ ಈ ವಿದ್ಯಾರ್ಥಿಗಳು ನಿರ್ಮಿಸಿದ ತಂತ್ರಾಂಶ ಮುಂದಾಯಿತು. ಸಿಗಬಹುದಾದ ಮಾಹಿತಿ ಮೂಲಗಳ ವ್ಯಾಪ್ತಿ ವಿಸ್ತೃತವಾಗುತ್ತ ಹೋದುದರಿಂದ ಈ ತಂತ್ರಾಂಶದಲ್ಲಿ ಅವರು ಯಾವುದೇ ಪರಿವಿಡಿಗಳನ್ನು ಅಳವಡಿಸಲಿಲ್ಲ. ಅಗತ್ಯವಿರುವಲ್ಲಿ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ, ಅವಕಾಶದ ಶೋಧನೆಯಾಗುತ್ತದೆ.[ಈ ಸಾಲು ಯಾವ ಮನುಷ್ಯನ ಯಾವುದೇ ಕೆಲಸಕ್ಕೂ ಅನ್ವಯವಾಗುತ್ತದೆ !]ಹಾಗೆ ಶೋಧಿಸಲ್ಪಟ್ಟ ’ಗ್ರೋಫರ್’ ಎಂಬ ಮೇ-ಗ್ರಾಹಿಲ್ ವಿಶ್ವವಿದ್ಯಾನಿಲಯದ ಮುಂದಿನ ಹಂತದ ಸಂಶೋಧಕ ತಂತ್ರಾಂಶ ವೆರೊನಿಕಾ ಮತ್ತು ಜಗ್‍ಹೆಡ್ ಎಂಬೆರಡು ಹೊಸ ತಂತ್ರಾಂಶಗಳ ಜನನಕ್ಕೆ ಕಾರಣವಾಯ್ತು. ಇವು ಸಾಮಾನ್ಯ ಪರಿವಿಡಿಗಳನ್ನು ಹೊಂದಿದ್ದವು. ಏನೇ ಆದ್ರೂ ವೆಬ್ ಪುಟಗಳ ಜೋಡಣೆ ಅಂತರ್ಜಲದ ಸರ್ವರ‍್ ಗಳಲ್ಲಿ ಆಗಿದ್ದರೂ ಅವುಗಳ ತ್ವರಿತಗತಿಯ ಪರಿವಿಡಿಗಳನ್ನು ಒದಗಿಸುವಲ್ಲಿ ಮತ್ತು ಅದನ್ನು ಸಾರ್ವಜನಿಕರಿಗೆ ಕೊಡುವಲ್ಲಿ ಇವು ಯಾವುವೂ ನಿಲ್ಲಲಿಲ್ಲ.

ಜಿನೇವಾ ಯೂನಿವರ್ಸಿಟಿಯ ಆಸ್ಕರ್ ನೀರ್ಸ್ಟ್ರಾಟ್ಜ್ ಎಂಬವರ ಪರಿಶ್ರಮದ ಫಲವಾಗಿ ’ಪರ್ಲ್ಸ್’ ಎಂಬ ತಂತ್ರಾಂಶ ತಯಾರಾಗಿದ್ದು ೧೯೯೩ರಲ್ಲಿ, ಇದು ಸಿಗಬಲ್ಲ ಎಲ್ಲಾ ವೆಬ್ ಪುಟಗಳನ್ನು ಶೋಧಿಸಲು ಮತ್ತು ಪರಿಷ್ಕರಿಸಲು ಅನುಕೂಲಕರವಾದ ಸಾಮರ್ಥ್ಯವನ್ನು ಹೊಂದಿತ್ತು. ಹೀಗೇ ೨ ಸಪ್ಟೆಂಬರ್ ೧೯೯೩ರಲ್ಲಿ ವಿಶ್ವದ ಮೊದಲ ಅಂತರ್ಜಾಲ ಶೋಧಕ ತಂತ್ರಾಂಶವೆಂಬ ಹೆಗ್ಗಳಿಕೆಯನ್ನು ಇದು ಪಡೆಯಿತು. ೧೯೯೩ ಜೂನ್ ತಿಂಗಳಲ್ಲಿ ಮ್ಯಾಥ್ಯೂ ಗ್ರೇ ಎಂಬವರು ಎಂಐಟಿಯಲ್ಲಿ ’ವೆಬ್ ರೂಟ್’ ಮತ್ತು ’ಪರ್ಲ್’ ಎರಡನ್ನೂ ಬಳಸಿಕೊಂಡು ’ವರ್ಲ್ಡ್ ವೈಡ್ ವೆಬ್ ವಾಂಡರರ್’ ಎಂಬ ಪರಿವಿಡಿಯೊಂದನ್ನು ತಯಾರಿಸಿದರು ಅದು ಮುಂದೆ ’ವಾಂಡೆಕ್ಸ್’ ಎಂದು ಕರೆಯಲ್ಪಟ್ಟಿತು. ಇದರ ಮುಖ್ಯ ಉದ್ದೇಶ ಅಂತರ್ಜಾಲದ ಆಳಗಲಗಳನ್ನು ಅಳೆಯುವುದಾಗಿತ್ತು. ಇದು ೧೯೯೫ರ ವರೆಗೂ ಕೆಲಸಮಾಡಿತು. ಜಗತ್ತಿನ ಎರಡನೇ ಅಂತರ್ಜಾಲ ಸಂಶೋಧಕ ಆಲಿವೆಬ್ ನೆವ್ಂಬರ್ ೧೯೯೩ ರಲ್ಲಿ ಹುಟ್ಟಿಕೊಂಡಿತು. ಆಲಿವೆಬ್ ವೆಬ್ ರೂಟ್ ಅನ್ನು ಬಳಸಲಿಲ್ಲ; ಅದು ಜಾಲತಾಣಗಳ ನಿರ್ವಹಣಾಧಿಕಾರಿಗಳಿಂದ ವಿಶಿಷ್ಟ ರೀತಿಯಲ್ಲಿ ಗುರುತಿಸಲ್ಪಟ್ಟು ಬಳಕೆಗೆ ಬಂದಿತು. ಜಂಪ್ ಸ್ಟೇಷನ್ ಎಂಬ ಇನ್ನೊಂದು ಸರ್ಚ್ ಎಂಜಿನ್ ಅಥವಾ ಜಾಲ ಸಂಶೋಧಕ ೧೯೯೩ರ ಡಿಸೆಂಬರ್ ನಲ್ಲಿ ಹುಟ್ಟಿಕೊಂಡಿತು. ಇದು ವೆಬ್ ರೂಟ್ ನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹಬ್ಬುವ ಅಥವಾ ಪಸರಿರುವ, ಪರಿವಿಡಿಯನ್ನು ಹೊಂದಿರುವ, ಶೋಧಿಸುವ ಈ ಮೂರು ಕೆಲಸಗಳನ್ನು ನಿರ್ವಹಿಸುವ ಸಂಶೋಧಕವಾಗಿ ಇದು ಬೇಡಿಕೆಪಡೆಯಿತು. ಆದಾಗ್ಯೂ ಇವೆಲ್ಲವೂ ಕಾಲಕಾಲಕ್ಕೆ ಮತ್ತೆ ಬದಲಾವಣೆಗೊಳಗಾದೇ ಬೇರೇ ಶೋಧಕಗಳ ಅನಿವಾರ್ಯತೆ ಕಾಣಿಸಿಕೊಂಡಿತು.

೧೯೯೪ರಲ್ಲಿ ಸಂಪೂರ್ಣ ಅಕ್ಷರಮಾಲಿಕೆಗಳ ವೆಬ್‍ಕ್ರಾಲರ್ ಎಂಬ ಜಾಲದಲ್ಲಿ ತೆವಳುವ ತಂತ್ರಾಂಶ ಬಳಕೆಗೆ ಬಂತು. ಸ್ವಸಾಮರ್ಥ್ಯದಿಂದ ಇದು ಜಾಲತಾಣಗಳ ನಿರ್ಮಾತೃಗಳಿಗೊಂದೇ ಅಲ್ಲದೇ ಜನಸಾಮಾನ್ಯರಿಂದಲೂ ಗುರ್ತಿಸಲ್ಪಟ್ಟು ಪ್ರಸಿದ್ಧಿ ಪಡೆದರೂ ೧೯೯೪ರಲ್ಲಿಯೇ ಕಾರ್ನಗೀ ಮೆಲನ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಲೈಕೋಸ್ ಎಂಬ ಶೋಧಕ ವಾಣಿಜ್ಯ ವ್ಯವಹಾರದಲ್ಲಿ ಪ್ರತಿಷ್ಠಿತವಾಗಿಬಿಟ್ಟಿತು. ಇದಾದ ಕೆಲವೇ ದಿನಗಳಲ್ಲಿ ಮೆಲಗನ್, ಇನ್ಫೋಸೀಕ್, ಎಕ್ಸೈಟ್, ಇಂಕ್ಟಾಮಿ, ನಾರ್ದರ್ನ್ ಲೈಟ್, ಅಲ್ಟಾವಿಸ್ಟಾ ಮೊದಲಾದ ಶೋಧಕಗಳು ಹುಟ್ಟಿಕೊಂಡವು. ಅವುಗಳಲ್ಲಿ ಯಾಹೂ ಬಹಳ ಹೆಸರುವಾಸಿಯಾಯ್ತು. ಆದರೆ ಅದರಲ್ಲಿ ಹುಡುಕುವಿಕೆ ನಡೆಯುವುದು ಅದರಲ್ಲೇ ಅಡಕವಾಗಿರುವ ವೆಬ್ ನಿಘಂಟಿನ ಮೇಲೆ ಅವಲಂಬಿಸಿತ್ತು.

೧೯೯೬ರಲ್ಲಿ ನೆಟ್ಸ್ಕೇಪ್ ಎಂಬ ಜಾಲ ನಾವಿಕ ಹಲವು ಅನುಕೂಲತೆಗಳುಳ್ಳ ಒಂದು ಸಂಶೋಧಕವನ್ನು ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಆ ಮಧ್ಯೆ ಅದರೊಡನೆ ಯಾಹೂ,ಮೆಲಗನ್, ಇನ್ಫೋಸೀಕ್, ಎಕ್ಸೈಟ್, ಲೈಕೋಸ್ ಈ ಐದು ಸರ್ಚ್ ಎಂಜಿನ್‍ಗಳವರು ನೆಟ್ಸ್ಕೇಪ್ ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡು ತಮ್ಮ ಸರ್ಚ್ ಎಂಜಿನ್ ಗಳನ್ನು ಅವರಿಗೆ ನಿಗದಿತ ಅವಧಿಗೆ ಒಬ್ಬೊಬ್ಬರಂತೆ ಕೈಬದಲಾಯಿಸುತ್ತಾ ಸರ್ಚ್ ಕೆಲಸ ನಡೆಸಿಕೊಟ್ಟವು. ಈ ವೇಳೆಗೆ ನಾ ಮುಂದು ತಾ ಮುಂದು ಎಂದು ಹಲವಾರು ಸರ್ಚ್ ಎಂಜಿನ್ ಕಂಪನಿಗಳು ಮಾರುಕಟ್ಟೆಗೆ ನುಗ್ಗಿ ತಮ್ಮ ಕಂಪನಿಗಳ ಬಗ್ಗೆ ಇಲ್ಲದ ಆಸ್ಥೆ ಜನರಲ್ಲಿ ಮೂಡುವಂತೇ ಮಾಡಿದವಲ್ಲದೇ ಹಲವು ಕಂಪನಿಗಳಿಗೆ ’ಡಾಟ್.ಕಾಮ್’ ವಾಣಿಜ್ಯೀಕರಣದ ದಾರಿ ತೋರಿಸಿ ಕೊನೆಗೆ ದಾರಿ ತಪ್ಪಿಸಿದವು. ೧೯೯೯-೨೦೦೧ ರ ವರೆಗೆ ಹುಟ್ಟಿಕೊಂಡ ಡಾಟ್ ಕಾಮ್ ಕಂಪನಿಗಳಲ್ಲಿ ಹಲವು ಪಬ್ಲಿಕ್ ಶೇರ‍್ ಗಳನ್ನು ವಿತರಣೆಮಾಡುವಲ್ಲಿ ಮುಂದಾದವು. ಅಂತರ್ಜಾಲದ ಈ ಹೊಸ ಮಾರುಕಟ್ಟೆಯಲ್ಲಿ ಕೈತುಂಬ ಹಣಗಳಿಸಬಹುದೆಂಬ ಆಸೆಗೆ ಬಲಿಬಿದ್ದು ಅನೇಕರು ಹಣಕಳೆದುಕೊಂಡರು. ಈ ಆಟ ೨೦೦೧ ಕ್ಕೆ ಅಂತ್ಯವಾಯ್ತು.

ಇಸವಿ ೨೦೦೦ದಲ್ಲಿ ಗೂಗಲ್ ಸಂಸ್ಥೆ ಹುಟ್ಟಿಕೊಂಡಿತು ಮತ್ತು ತನ್ನದೇ ಆದ್ ಪೇಜ್‍ರಾಂಕ್ ಎಂಬ ಉತ್ತಮ ಸರ್ಚ್ ಎಂಜಿನ್ ಬಳಸಿತು. ಇದೇ ವೇಳೆಗೆ ಯಾಹೂ ಇಂಕ್ಟಾಮಿ ಮತ್ತು ಇನ್ನಿತರ ಸರ್ಚ್ ಎಂಜಿನ್ ಮೇಲೆ ಅವಲಂಬಿಸಿತ್ತು. ೨೦೦೩ರ ಹೊತ್ತಿಗೆ ಯಾಹೂ ಗೂಗಲ್ ಸರ್ಚ್ ಎಂಜಿನ್ ಅನ್ನೇ ಬಳಸಲು ಆರಂಭಿಸಿತು. ೨೦೦೪ರಲ್ಲಿ ತನ್ನ ಸ್ವಂತ ಸರ್ಚ್ ಎಂಜಿನ್ ತಯಾರಾಗುವರೆಗೂ ಯಾಹೂ ಗೂಗಲ್ ಸರ್ಚ್ ಎಂಜಿನ್‍ನ್ನೇ ಬಳಸಿಕೊಂಡಿತು. ಈ ಮಧ್ಯೆ ಮಕ್ರೋಸಾಫ್ಟ್ ತನ್ನ ಇಂಟರ್ನೇಟ್ ಎಕ್ಸ್‍ಪ್ಲೋರರ್ ಬಳಕೆದಾರರಿಗೆ ಇಂಕ್ಟಾಮಿ ಮತ್ತು ಸರ್ಚ್ ಮತ್ತು ಅಲ್ಟಾವಿಸ್ಟಾ ಸರ್ಚ್ ಎಂಜಿನ್ ಗಳನ್ನು ಬಳಸುತ್ತಿದ್ದು ನಿಧಾನವಾಗಿ ವೆಬ್ ಕ್ರಾಲರ್ ಎಂಬುದನ್ನು ಇನ್ನೂ ಪರಿಷ್ಕರಿಸಿ ಬಿಂಗ್ ಎಂದು ಮರುನಾಮಕರಣಮಾಡಿತಲ್ಲದೇ ಜೂನ್ ೧, ೨೦೦೯ರಂದು ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಜುಲೈ ೨೯, ೨೦೦೯ರಂದು ಯಾಹೂ ಆಡಳಿತಮಂಡಳಿಯವರು ಮೈಕ್ರೋಸಾಫ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡು ಬಿಂಗ್ ಸರ್ಚ್ ಎಂಜಿನ್ ಅನ್ನು ಯಾಹೂ ಬ್ರೌಸರ್ ನಲ್ಲಿ ಬಳಸತೊಡಗಿದರು.

ಇವತ್ತು ಎಲ್ಲಾ ವೆಬ್ ಸರ್ಚ್ ಎಂಜಿನ್ ಗಳು ವೆಬ್ ಪೋರ್ಟಲ್ ಗಳ ಜೊತೆಗೇ ಸೇರಿವೆ. ಜಾಹೀರಾತುಗಳು ಅವುಗಳಿಗೆ ಆಧಾರಸ್ತಂಭ. ಇವತ್ತು ೨೪/೭ ಎಷ್ಟು ಹೊತ್ತಿಗೆ ಬೇಕಾದರೂ ನಾವು ಇಂಟರ್ನೆಟ್ ಸೌಲಭ್ಯ ಇಟ್ಟುಕೊಳ್ಳಬಹುದಾಗಿದೆ ಮತ್ತು ಸರ್ಚ್ ಮಾಡಬಹುದಾಗಿದೆ. ಇದು ಹೇಗೆ ಸಾಧ್ಯ ? ಗೂಗಲ್, ಯಾಹೂ ಅದೂ ಅಲ್ಲದೇ ಕೆಲವು ಸಾಮಾಜಿಕ ತಾಣಗಳು ನಮಗೆಲ್ಲಾ ನಮ್ಮ ಶುಲ್ಕ ರಹಿತ ಖಾತೆ ತೆರೆಯಲು ಯಾಕೆ ಅನುಕೂಲ ಮಾಡಿಕೊಟ್ಟಿವೆ ? ಅವುಗಳಿಂದ ಆ ಕಂಪನಿಗಳಿಗೆ ಆಗುವ ಪ್ರಯೋಜನವಾದರೂ ಏನು ? ಇದಕ್ಕೆಲ್ಲಾ ಉತ್ತರ ಜಾಹೀರಾತು ಮೊದಲನೆಯದು ಮತ್ತು ಬಳಕೆದಾರರ ಡೇಟಾಬೇಸ್ ತಯಾರಿಸಿಕೊಡುವುದು ಇನ್ನೊಂದು ಉಪಾಯ! ರೀಡಿಫ್ ಮೇಲ್ ನೀವು ಬಳಸುತ್ತಿದ್ದರೆ ಸ್ವಾಗತಿಸಲೇ ಯಾವುದಾದ್ರೂ ಜಾಹೀರಾತು ಬರುತ್ತದೆ! ವಿಶ್ವಾದ್ಯಂತ ಇರುವ ಬಳಕೆದಾರರ್ ಪಟ್ಟಿಯಲ್ಲಿ ಕೆಲವರಾದ್ರೂ ಹಲವು ಕಂಪನಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಿರಾಕಿಗಳಾಗಿ ದೊರೆಯುತ್ತಾರೆ!

ಇವತ್ತಿನ ಸರ್ಚ್ ಎಂಜಿನ್ ಮರುಕಟ್ಟೆಯಲ್ಲಿ ಯಾರ್ಯಾರಿದ್ದಾರೆ, ಅವರ ಪಾತ್ರವೇನು ಎಂಬುದನ್ನು ಈ ಕೆಳಗಿನ ಚಾರ್ಟ್ ವಿವರಿಸುತ್ತದೆ. ಅಂತೆಯೇ ಸರ್ಚ್ ಎಂಜಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಸ್ಥೂಲರೂಪವನ್ನೂ ಆರಂಭದಲ್ಲಿ ಇರುವ ಇನ್ನೊಂದು ಚಿತ್ರ ತೋರಿಸುತ್ತದೆ, ನೋಡಿ.


ಅಂತರ್ಜಾಲ ತಾಣಗಳಲ್ಲಿ ಇಂದು ಸುರಕ್ಷಿತ ಮತ್ತು ಅಸುರಕ್ಷಿತ ತಾಣಗಳೆಂದು ಘೋಷಣೆಮಾಡಿದ ವ್ಯತ್ಯಾಸಗಳಿದ್ದರೂ ಬಹುತೇಕರು ಅದನ್ನು ಗಮನದಲ್ಲಿಡುತ್ತಿಲ್ಲ. ತಾಣಗಳಲ್ಲಿ ಬಳಕೆದಾರು ಯಾರದೋ ಮೋಸಕ್ಕೆ ಬಲಿಪಶುವಾಗದಂತೇ ಅವರನ್ನು ನಿರ್ಬಂಧಿಸಲು ಜಾಲತಾಣಗಳ ನಿರ್ಮಾತೃಗಳು ಶತಾಯಗತಾಯ ಪ್ರಯತ್ನಿಸುತ್ತಲೇ ಇರುತ್ತಾರೆ. ಪೋಲೀಸರು ಇದ್ದಾರೆ ಎಂದ ಮಾತ್ರಕ್ಕೆ ಕಳ್ಳತನ, ಕೊಲೆ-ಸುಲಿಗೆ-ದರೋಡೆ ಎಲ್ಲಾ ನಿಂತು ಹೋಗುತ್ತದೆಯೇ ? ಆದರೂ ಪೋಲೀಸರು ಅದನ್ನು ನಿಯಂತ್ರಿಸುತ್ತಾರೆ ಎಂಬುದೊಂದು ನಂಬಿಕೆ! ಪೋಲೀಸರು ಅಂತರ್ಜಾಲದಲ್ಲಿ ನಡೆಸುವ ಕಳ್ಳತನದ ಕೃತ್ಯಗಳಿಗೆ ಶಾಮೀಲಾಗಿಲ್ಲ ಯಾಕೆಂದರೆ ಅವರಿಗೆ ತಂತ್ರಜ್ಞಾನದ ಬಗೆಗೆ ಅಷ್ಟೊಂದು ಮಾಹಿತಿ ಇನ್ನೂ ಒದಗಿಲ್ಲ! ಹಾಗಂತ ಎಲ್ಲಾ ಪೋಲೀಸರೂ ಅದೇ ರೀತಿ ಅಂದುಕೊಳ್ಳಬೇಡಿ, ಕರ್ತವ್ಯಕ್ಕೆ ಮೋಸಮಾಡದ ನಿಷ್ಠೆಯಿರುವವರೂ ಬಹಳಮಂದಿ ಇದ್ದಾರೆ ಅವರಲ್ಲಿ ಎಂದು ಅವರೇ ಹೇಳುತ್ತಾರೆ ! ಅಂದಹಾಗೇ ಸೈಬರ್ ಕುಕೃತ್ಯಕ್ಕೆ ಸಂಬಂಧಿಸಿದಂತೇ ಸೈಬರ್ ಪೋಲೀಸ್ ಎಂಬ ಪ್ರತ್ಯೇಕ ಇಲಾಖೆ ತಲೆಯೆತ್ತಿದೆ. ಯಾರೋ ಅಲ್ಲಿ ಇಲ್ಲಿ ಬಾಂಬ್ ಇಟ್ಟಿದ್ದೇವೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಬೆದರಿಕೆ ಮೇಲ್ ಕಳಿಸಿದಾಗ ಅದನ್ನು ನಿರ್ವಹಿಸುವವರು ಅವರಂತೆ. ನೀವೂ ಕೂಡ " ನಿಮಗೆ ಯಾವುದೋ ಬಹುಮಾನ ಬಂದಿದೆ ಅಥವಾ ಒಂದಷ್ಟು ಫಂಡ್ಸ್ ಇದೆ, ಇದನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೊಡಿ " ಎಂದು ಬಂದ/ಬರುವ ಮಿಂಚಂಚೆಗಳನ್ನು ಸುಮ್ನೇ ಅಳಿಸಿಹಾಕಬಹುದು ಅಥವಾ ಸೈಬರ್ ಪೋಲೀಸ್‍ಗೆ ಫಾರ್ವರ್ಡ್ ಮಾಡಬಹುದಾಗಿದೆ. ಸೈಬರ್ ಪೋಲೀಸ್ ವಿವರ ಬೇಕೇ ? ಸರ್ಚ್ ಎಂಜಿನ್ ಬಳಸಿ ದೊರೆಯುತ್ತದೆ !

ಒಟ್ಟಾರೆ ಅಂತರ್ಜಾಲ ಶೋಧಕ ನಮಗಾಗಿ ಬೇಕಾಗುವ ಯಾವುದೇ ಮಾಹಿತಿಯನ್ನೇ ಆಗಲಿ ಎಲ್ಲೆಲ್ಲಿಂದಲೋ ಹುಡುಕಿ ತರುತ್ತದೆ. ಅದರ ಈ ಚಮತ್ಕಾರಿಕ ಚಟುವಟಿಕೆಯನ್ನು ಆಂಜನೇಯನ ಸಂಜೀವಿನಿ ಪರ್ವತದ 'ಹುಡುಕಿ-ತರುವಿಕೆ'ಗೆ ಹೋಲಿಸಿಸಬಹುದಾಗಿದೆ. ಮಾಹಿತಿ ಪುಟಗಳರಾಶಿ ಅದೆಷ್ಟು ಅಗಾಧ! ಅದರ ವ್ಯಾಪ್ತಿಯನ್ನು ನಾವು ಅಳೆದೇವೆಯೇ ? ಇಂತಹ ಮಾಹಿತಿ ಭಂಡಾರವನ್ನು ಅಂತರ್ಜಾಲ ನಮಗಿಂದು ಕೊಡುತ್ತಿದೆ. ಹಿಂದಿನ ಕಾಲದಲ್ಲಿ ಈ ಸೌಲಭ್ಯವಿತ್ತೇ ? ಒಂದು ಯಕ್ಕಶ್ಚಿತ ಅಕ್ಷರಬರೆಯುವ ಪೆಟ್ಟಿಗೆಯಾಗಿ ಹಲವರ ಕಣ್ಣಿಗೆ ಒಂದು ಕಾಲದಲ್ಲಿ ಕಾಣಿಸಿದ್ದ ಕಂಪ್ಯೂಟರ್ ಇಂದು ಯಾವ ಕೆಲಸವನ್ನು ಮಾಡುತ್ತಿಲ್ಲ? ಯಾವ ರಂಗದಲ್ಲಿ ಅದರ ಬಳಕೆಯಿಲ್ಲ? ಮುಂಬೈಯಂತಹ ಮಹಾನಗರಗಳಲ್ಲಿ ನಿಮಗೆ ಬನಾರಸೀ ಪಾನ್ ವಾಲಾಗಳು ಮುಂಗಡ ಬುಕ್ಕಿಂಗ್ ತೆಗೆದುಕೊಂಡು ಪಾನ್ ಬೀಡಾ ವಿತರಿಸಲೂ ಕಂಪ್ಯೂಟರ್ ಬಳಸುತ್ತಾರೆ! ನಾವೇ ಬಹುತೇಕ ನಮ್ಮ ಮಿತ್ರರನ್ನು ಖುದ್ದಾಗಿ ಭೇಟಿಯಾಗದಿದ್ದರೂ ಅಂತರ್ಜಾಲ ಈ ಅವಕಾಶ ಕಲ್ಪಿಸಿದೆ, ನೇರವಾದ ಮಾತುಕತೆಯಿರದಿದ್ದರೂ ಅಕ್ಷರಗಳಿಂದ, ಚಿತ್ರಗಳಿಂದ ಸಂವಹನ ಆರಂಭವಾಗಿ, ಗೂಗಲ್ ಚಾಟ್, ಸ್ಕೈಪ್ ಮುಂತಾದವುಗಳ ಮೂಲಕ ಚಿತ್ರ-ಧ್ವನಿಗಳ ಸಂವಹನಕ್ಕೆ ಅವಕಾಶ ಮುಂದುವರಿದಿದೆ ಅಲ್ಲವೇ? ಇಷ್ಟೆಲ್ಲಾ ಮಾಡಿಕೊಡುವ ಈ ಸರ್ಚ್ ಎಂಜಿನ್ ಗೊಂದು ಸಲಾಮು ಹೇಳುತ್ತಾ ನಿರ್ಗಮಿಸುತ್ತಿದ್ದೇನೆ, ನೀವು ಸರ್ಚ್ ಮಾಡಿ ಮತ್ತೆ ಸಿಗುತ್ತೇನೆ !

Monday, November 7, 2011

ತುಲಸೀ-ಜಲಂಧರ

ಚಿತ್ರ ಋಣ : ಅಂತರ್ಜಾಲ

ತುಲಸೀ
-ಜಲಂಧರ


[ಎರಡು ಲೇಖನಗಳು ಸ್ವಲ್ಪ ಶೀಘ್ರಗತಿಯಲ್ಲಿ ಪ್ರಕಟಗೊಂಡಿರುವುದರಿಂದ ಮನಸ್ಸಿನ ಹಸಿವಿನವರು ಹಿಂದಿನ ಲೇಖನ/ಕೃತಿಗಳನ್ನೂ ಈ ಕೆಳಗಡೆ ಓದಬಹುದಾಗಿದೆ]

ಚಿಕ್ಕವನಿರುವಾಗ ನಾನು ಮೊದಲಾಗಿ ಈ ಹೆಸರನ್ನು ಕೇಳಿದಾಗ ಆಶ್ಚರ್ಯವಾಗಿತ್ತು. ಆದರೆ ಜಲಂಧರನ ಬಗ್ಗೆ ಬಹಳ ವಿವರ ಸಿಕ್ಕಿರಲಿಲ್ಲ. ಮನದತುಂಬಾ ಸಂದೇಹಗಳಿದ್ದವು. ಕೆರೆಮನೆ ಶಂಭು ಹೆಗಡೆಯವರು ’ತುಲಸೀ-ಜಲಂಧರ’ ಎಂಬ ಯಕ್ಷಗಾನವನ್ನು ಕವಲಕ್ಕಿಯಲ್ಲಿ ನಡೆಸಿದ್ದರು. ಅದು ಆಗ ಪ್ರಚಲಿತದಲ್ಲಿರದ ಅಪರೂಪದ ಪೌರಾಣಿಕ ಪ್ರಸಂಗ. ಅದನ್ನು ನೋಡಿದಮೇಲೆ ಕಥೆಯ ಹಂದರ ಅರ್ಥವಾಗಿತ್ತು. ಹಿಂದೂ ಮೈಥಾಲಜಿ ಎಂದು ವಿಜ್ಞಾನಿಗಳು ಇಂದು ಕರೆಯುತ್ತಾರೋ ಅಂತಹ ಮೈಥಾಲಜಿಯ ಹಿಂದೆ ಅಳವಾದ ಅನುಭವ ಜನ್ಯ ಸಂಶೋಧನಾ ಫಲವಿದೆ, ನಿಜವಾಗಿ ಅದೇ ವಿಜ್ಞಾನ, ತಾವು ಪುನಃ ಸಂಶೋಧನೆ[ರಿಸರ್ಚ್]ಮಾಡುತ್ತಿದ್ದೇವೆಂಬುದು ನಮ್ಮ ವಿಜ್ಞಾನಿಗಳೇನಕರಿಗೆ ಇಂದೂ ಗೊತ್ತಿಲ್ಲ. ಅನುಭವ ಇರುವಲ್ಲಿ ಅಮೃತತ್ವ ಇರುತ್ತದೆ, ಅದು ಪ್ರೂವನ್ ಟ್ರ್ಯಾಕ್. ಅಂಥದ್ದನ್ನೂ ಕೂಡ ನಮ್ಮ ವಿಜ್ಞಾನಿಗಳೆಂಬ ಅಜ್ಞಾನಿಗಳು ಕೆಲವೊಮ್ಮೆ ಅಲ್ಲಗಳೆಯುವುದು ಬೇಸರದ ಸಂಗತಿ.

ಒಪ್ಪಿಕೊಳ್ಳೋಣ, ಹಲವನ್ನು ಕಂಡುಹಿಡಿದಿದ್ದಾರೆ, ಹಲವಷ್ಟು ಸಾಧಿಸಿದ್ದಾರೆ, ಆದರೆ ಮಜವೇನೆಂದರೆ ಇವತ್ತು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದೆಲ್ಲಾ ಮೊದಲೊಮ್ಮೆ ಬಳಕೆಯಲ್ಲಿದ್ದ ಸೂತ್ರಗಳನ್ನೇ! ಮಾನವ ಜೀವನದ ಮಧ್ಯಂತರದಲ್ಲಿ ಆ ಸೂತ್ರಗಳೂ ಸಂಶೋಧನೆಗಳೂ ಮರೆತು ಕೈತಪ್ಪಿ ಯಾರಿಗೂ ಸಿಗದಂತಾಗಿದ್ದವು. ಪ್ರಾಯಶಃ ಅದು ಪ್ರಳಯಗಳಂತಹ ಅನಾಹುತಗಳ ಪರಿಣಾಮವಾಗಿ ಆಗಿದ್ದಿರಬಹುದು. ಉದಾಹರಣೆಗೆ ವಿಮಾನ ಕಂಡು ಹಿಡಿದೆವೆಂದರು--ಪುಷ್ಪಕವಿಮಾನ ರಾಮಾಯಣ ಕಾಲದಲ್ಲೇ ಇತ್ತು! ಚರ್ಮದಲ್ಲಿ ಏಳುಪದರಗಳಿರುವುದನ್ನು ಇತ್ತೀಚೆಗೆ ಕಂಡರು-- ಈ ವಿಷಯ ವೇದಮಂತ್ರಗಳಲ್ಲಿ ಮೊದಲೇ ಉಲ್ಲೇಖವಾಗಿದೆ! ಇರಲಿ ಜಲಂಧರನ ಕಥೆ ತಿಳಿಯೋಣ.

ಜಲಂಧರನೊಬ್ಬ ರಕ್ಕಸ. ಶಿವನ ಕುರಿತು ಘೋರ ತಪಸ್ಸು ಮಾಡಿದ. ತಪಸ್ಸಿಗೆ ಒಲಿಯುವ ಬೋಲೇನಾಥ ನಮ್ಮ ಕನ್ನಡದಲ್ಲಿ ಬೋಳೇಶಂಕ್ರ ಹಾಗೆ ಹೇಳಿಸಿಕೊಳ್ಳಲು ಕಾರಣ, ಭಕ್ತನ ತಪಸ್ಸಿಗೆ ಮೆಚ್ಚಿ ಒಲಿದಾಗ ಕೇಳಿದ ವರಗಳನ್ನೆಲ್ಲಾ ಹಿಂದೆಮುಂದೆ ನೋಡದೇ ಕೊಟ್ಟುಬಿಡುವಾತ! ಆತ ಭಕ್ತಪರಾಧೀನ. ತನ್ನ ಅಥವಾ ದೇವತೆಗಳ ಆಗುಹೋಗುಗಳಿಗಿಂತ ಭಕ್ತರು ತೃಪ್ತಿಪಡುವುದನ್ನು ನೋಡಲು ಬಯಸುವ ಮುಗ್ಧ. ಸಾಕ್ಷಾತ್ ಮೃತ್ಯುಂಜಯನೇ ಆದರೂ ತಾನು ಕೊಡುವ ವರದಿಂದ ತನಗೇ ಕಂಟಕಗಳನ್ನು ತಂದುಕೊಳ್ಳುತ್ತಿದ್ದ. ಹೀಗಿದ್ದ ಸಮಯ ಜಲಂಧರನ ಕಠಿಣ ತಪಸ್ಸಿಗೆ ಒಲಿದ ವಿರೂಪಾಕ್ಷ ಆತನಿಗಷ್ಟು ವರಗಳನ್ನು ಕೊಟ್ಟುಬಿಟ್ಟ. ಅವುಗಳಲ್ಲಿ ಒಂದು ಆತನ ಪತ್ನಿ ಪತಿವೃತೆಯಾಗಿರುವವರೆಗೂ ಯಾರಿಂದಲೂ ಜಲಂಧರನಿಗೆ ಸಾವಿಲ್ಲ ಎಂಬುದು.

ಜಲಂಧರನ ಸ್ಫುರದ್ರೂಪಿ ಪತ್ನಿ ವೃಂದಾ [ಮಂದಾ ಅಂತಲೂ ಕರೆಯುತ್ತಾರೆ]. ಆಕೆ ಮಹಾಪತಿವೃತೆ. ಪತಿಯನ್ನುಳಿದು ಯಾವ ಗಂಡಸನ್ನೂ ಕಣ್ಣೆತ್ತಿ ನೋಡದ ಸಾಧ್ವಿ. ವರಪಡೆದ ಜಲಂಧರ ಇನ್ನು ತಾನು ಯಾರಿಗೂ ಹೆದರಬೇಕಿಲ್ಲ ಎಂಬುದನ್ನು ಅರ್ಥೈಸಿಕೊಂಡು ದೇವತೆಗಳಮೇಲೇ ಯುದ್ಧಕ್ಕೆ ಹೊರಟ. ದೇವತೆಗಳಿಗೆ ಹಲವು ಥರದಲ್ಲಿ ಯಮಯಾತನೆ ಕೊಡಹತ್ತಿದ. ನಿಂತಲ್ಲಿ ಕುಂತಲ್ಲಿ ದೇವತೆಗಳು ಬೆಚ್ಚಿಬೀಳುವಂತೇ ಮಾಡಹತ್ತಿದ. ಇದೆಲ್ಲಾ ಪುಕಾರು ತೆಗೆದುಕೊಂಡು ದೇವತೆಗಳು ಮಹಾವಿಷ್ಣುವನ್ನು ಕಂಡರು. " ಸ್ವಾಮೀ ನೀನೇ ಕಾಪಾಡಬೇಕು " ಎಂದರು. ಆ ಕಡೆ ಶಿವನಲ್ಲಿಗೆ ತೆರಳಿದ ಜಲಂಧರ " ಹೇ ಶಿವನೇ ನಿನಗಾಗಲೇ ಬ್ರಹ್ಮಕಪಾಲ ಹಿಡಿದಿದೆ, ನೀನು ಭಿಕ್ಷಾಪಾತ್ರೆ ಹಿಡಿದು ಭಿಕ್ಷೆಗೆ ತೆರಳು, ತ್ರಿಪುರಸುಂದರಿಯಾದ ಪಾರ್ವತಿಯನ್ನು ನನಗೆ ಕೊಡು " ಎಂದು ಪೀಡಿಸಹತ್ತಿದ.

ವಿಷ್ಣು ಮನದಲ್ಲಿ ಎಲ್ಲವನ್ನೂ ಯೋಚಿಸಿದ. ವೃಂದಾ ಪತಿವೃತೆಯಾಗಿರುವವರೆಗೂ ಜಲಂಧರನ ವಧೆ ಸಾಧ್ಯವಿಲ್ಲ ಎಂಬುದು ಮನದಟ್ಟಾಯ್ತು. ನಿರ್ವಾಹವಿಲ್ಲದೇ ಜಗತ್ಕಲ್ಯಾಣಕ್ಕಾಗಿ ದುಷ್ಟಶಿಕ್ಷಣಕ್ಕಾಗಿ ತಾನು ಜಲಂಧರನಾಗಿ ರೂಪತಳೆದು ಜಲಂಧರ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತನ ಮನೆಗೆ ಬಂದ. ಬಂದ ಜಲಂಧರವೇಷಧಾರಿಯನ್ನು ಕಂಡ ವೃಂದಾ ದಿನನಿತ್ಯದಂತೇ ಪತಿಸೇವೆಗೈದಳು. ಜಲಂಧರರೂಪಿ ಆಕೆಯ ಶೀಲಹರಣಮಾಡಿದ! ತಕ್ಷಣಕ್ಕೆ ಅದು ಆಕೆಗೆ ಗೊತ್ತಾಗಲಿಲ್ಲ. ಯಾವಾಗ ಆಕೆಯ ಪತಿ ಜಲಂಧರ ಜಲಂಧರಪಾತ್ರಧಾರಿಯ ಎದುರಿಗೆ ಬಂದನೋ ಆಗ ಆಕೆ ತಬ್ಬಿಬ್ಬಾದಳು. ಅರೇ ಇದೇನಿದು ತಾನು ನೋಡುತ್ತಿರುವುದು ಎಂದು ಭಯವಿಹ್ವಲಳಾಗಿಯೂ ಆಶ್ಚರ್ಯಚಕಿತಳಾಗಿಯೂ ನೋಡುತ್ತಿರುವಂತೆಯೇ ಜಲಂಧರರಿಬ್ಬರಲ್ಲೂ ಯುದ್ಧ ಘಟಿಸಿತು. ನಿಜವಾದ ಜಲಂಧರ ಸತ್ತು ಧರೆಗುರುಳಿದ. ಅದನ್ನು ಕಂಡು ವೃಂದಾ ಬಹಳೇ ಗೋಳಿಟ್ಟಳು. ತನ್ನ ಪತಿಯನ್ನು ವಧಿಸುವ ಸಲುವಾಗಿ ದೇವರು ತನಗೆ ಮೋಸಮಾಡಿದನೆಂದು ರಂಪಮಾಡಿದಳು.

ಪತಿವೃತಾ ಶಿರೋಮಣಿಯಾಗಿದ್ದ ವೃಂದಾ ಮಾಡಿದ ತಪ್ಪೇನೂ ಇರಲಿಲ್ಲ. ಆಕೆಯ ನೋವನ್ನೂ ಕಣ್ಣೀರನ್ನೂ ನೋಡಿ ಮಹಾವಿಷ್ಣುವಿನ ಅಂತಃಕರಣ ಕರಗಿತು. ಆಕೆ ಸತ್ತಮೇಲೆ ಆಕೆಯ ಸಮಾಧಿಸ್ಥಳದಲ್ಲಿ ಆಕೆ ’ತುಳಸಿ’ ಎಂಬ ಗಿಡವಾಗಿ ಜನಿಸುವಂತೆಯೂ ತಾನು ನೆಲ್ಲಿಯ ಗಿಡದರೂಪದಲ್ಲಿ ಬಂದು ವರಿಸುವುದಾಗಿಯೂ ಭರವಸೆಯಿತ್ತನಲ್ಲದೇ ಯುಗಭೇದವಿಲ್ಲದೇ ಸುರರು-ಭೂಸುರರಾದಿಯಾಗಿ ಎಲ್ಲರೂ ಪೂಜೆಯಲ್ಲಿ ತನಗೆ ಪ್ರಥಮ ಆದ್ಯತೆಯಾಗಿ ತುಳಸೀ ದಳಗಳ ಸಮರ್ಪಣೆಮಾಡಲೆಂದೂ ವರವನ್ನಿತ್ತ. ವೃಂದಾ ತುಳಸೀಗಿಡವಾಗಿ ನಿಂತ ಆ ಜಾಗ ವೃಂದಾವನವಾಯ್ತು. ವೃಂದಾವನ ಮಹಾವಿಷ್ಣುವಿಗೆ ಪರಮಪ್ರಿಯ ಜಾಗವೆನಿಸಿತು. ಉತ್ಥಾನದ್ವಾದಶಿಯಂದು ಈ ನೆನಪಿನಲ್ಲಿ ಮಹಾವಿಷ್ಣುವನ್ನು ವೆಂಕಟೇಶ ಅಥವಾ ನಾರಾಯಣ ಎಂತಲೂ ತುಳಸಿಯನ್ನು ಪದ್ಮಾವತಿ ಅಥವಾ ಲಕ್ಷ್ಮೀ ಎಂತಲೂ ಪರಿಗಣಿಸಿ ಅವರೀರ್ವರಿಗೂ ಸಾಂಕೇತಿಕ ಕಲ್ಯಾಣೋತ್ಸವ ನಡೆಸುವುದು ರೂಢಿಗೆ ಬಂತು.

ಮಹಾಭಾರತದಲ್ಲಿ ಶ್ರೀಕೃಷ್ಣ ತುಲಾಭಾರವೆಂಬ ಸನ್ನಿವೇಶವನ್ನು ನಾರದರು ಸಿದ್ಧಮಾಡಿದ್ದರು. ನಾರದರು ಎಂದರೆ ತಮಗೆಲ್ಲಾ ಗೊತ್ತೇ ಇದೆ. ಮನೆ-ಮನೆಗಳಲ್ಲಿ ಜಗಳ ತಂದಿಡುವ ಜನರಿಗೆ ನಮ್ಮ ತೋಂಡೀ ಶಬ್ದ " ಓ ಅಂವ ಮಾರಾಯ ನಾರದ " ಎನ್ನುವುದು ಅಭ್ಯಾಸ. ಇಂತಹ ನಾರದರು ಒಮ್ಮೆ ಹಾಗೆ ಕೃಷ್ಣನನ್ನೂ ಅವನ ಹೆಂಡತಿಯರನ್ನೂ ಮಾತಿಗಿಳಿಸಿ ತುಲಾಭಾರಕ್ಕೆ ಅಣಿಗೊಳಿಸೇಬಿಟ್ಟರು. ತಕ್ಕಡಿಯ ಒಂದು ತಟ್ಟೆಯಲ್ಲಿ ಶ್ರೀಕೃಷ್ಣ ಕುಳಿತ. ಇನ್ನೊಂದರಲ್ಲಿ ಬಂಗಾರದ ನಗ-ನಾಣ್ಯಗಳನ್ನು ಹಾಕುತ್ತಾ ನಡೆದಳು ಸತ್ಯಭಾಮೆ. ಅವಳಿಗೋ ಎಲ್ಲಿಲ್ಲದ ಗರ್ವ! ಗಂಡ ಪರಮಾತ್ಮನಲ್ಲವೇ ಅದಕ್ಕೇ ಹಾಗಿತ್ತೇನೋ. ಸುರಿದಳು ಸುರಿದಳು ಇದ್ದಬದ್ದ ಬಂಗಾರವನ್ನೆಲ್ಲಾ ಸುರಿದಳು. ಊಹುಂ.....ತಕ್ಕಡಿ ಮೇಲೇಳಲೇ ಇಲ್ಲ. ಕೃಷ್ಣ ಕುಳಿತ ತಕ್ಕಡಿ ತಟ್ಟೆ ಕೆಳಗೇ ಇತ್ತು. ಕೊನೆಗೆ ನಾರದರೇ ಮುಂದಾಗಿ ಮದ್ಯಸ್ಥಕೆ ಮಾಡಿ ರುಕ್ಮಿಣಿಗೆ ತಿಳಿಸಿ ಒಂದು ದಳ ತುಳಸಿಯನ್ನು ತಂದು ಬಂಗಾರದ ಸಮಾನುಗಳನ್ನು ಇಟ್ಟ ತಕ್ಕಡಿಗೆ ಹಾಕಲು ಹೇಳಿದರು. ರುಕ್ಮಿಣಿ ನಾರದರಿಗೆ ಕೆಲಸವಿಲ್ಲ, ಇದೇನು ಮಹಾ ಜಾದೂ ಎಂಬ ಮನಸ್ಸಿನಲ್ಲೇ ಅಂತೂ ತುಳಸೀದಳವೊಂದನ್ನು ತಂದು ಹಾಕಿದಳು. ತಕಳಿ, ತಕ್ಕಡಿ ಮೇಲೆದ್ದು ಸಮನಾಗಿ ತೂಗಿತು; ತುಲಾಭಾರ ಸಂಪನ್ನವಾಯ್ತು. ಕೃಷ್ಣನ ಇಬ್ಬರೂ ಹೆಂಡಿರಿಗೆ ನಿಮ್ಮೆಲ್ಲರಿಗಿಂತಾ ತುಳಸಿಯೇ ಶ್ರೇಷ್ಠ ಎಂಬುದನ್ನು ಪರೋಕ್ಷವಾಗಿ ಶ್ರೀಕೃಷ್ಣ ತೋರಿಸಿಕೊಟ್ಟ.

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾ ರಮಣಗರ್ಪಿತವೆನ್ನಲು
ಒಂದೇಮನದಲಿ ಸಿಂಧುಶಯನ ಮುಕುಂದನೆನೆ
ಎಂದೆಂದೂ ವಾಸಿಪನು ಮಂದಿರದೊಳಗೇ

ಹೂವ ತರುವರ ಮನೆಗೆ ಹುಲ್ಲ ತರುವಾ ....
ಅವ ಲಕುಮೀ ರಮಣ ಇವಗಿಲ್ಲ ಗರುವಾ .....

ಎಂದು ಪುರಂದರ ದಾಸರು ಹಾಡಿದ್ದಾರೆ. [ಇಲ್ಲಿ ಕರ್ನಾಟಕ ಸಂಗೀತ ಮತ್ತು ದೇವರನಾಮ ಹಾಡುವವರು ಗಮನಿಸಬೇಕು- ಅವ ಲಕುಮೀ ಎಂದರೆ ಅವಲಕ್ಷಣದ ಲಕ್ಷೀರಮಣ ಎಂದಲ್ಲ. ಅವ ಎಂಬುದು ಆತ ಎಂಬುದಕ್ಕೆ ಪರ್ಯಾಯ ಪದ. ಹಾಡುವಾಗ ಬಹಳ ಜೋಪಾನ !]

ಹೀಗೇ ಪುರಾಣೋಕ್ತವಾಗಿ, ಇತಿಹಾಸೋಕ್ತವಾಗಿ ತುಳಸಿ ಬೆಳಕಿಗೆ ಬಂತು. ಸಸ್ಯಶಾಸ್ತ್ರದಲ್ಲಿ ಅತಿ ವಿಶಿಷ್ಟ ಗಿಡವೆಂದು ಪರಿಗಣಿಸಲ್ಪಟ್ಟ ಶ್ರೀತುಳಸಿ ಹಲವು ಪ್ರಭೇದಗಳಲ್ಲಿ ಸಿಗುತ್ತಾಳೆ! ಸಮಾನ್ಯವಾಗಿ ನಾವು ಕೃಷ್ಣತುಳಸಿ, ಬಿಳಿತುಳಸಿ ಇವೆರಡನ್ನು ನೋಡಿರುತ್ತೇವೆ. ಇದಲ್ಲದೇ ಕರ್ಪೂರ ತುಳಸಿ, ನಿಂಬೂ ತುಳಸಿ ಹೀಗೇ ಹದಿನೈದು ಪ್ರಭೇದಗಳನ್ನು ನೋಡಬಯಸುವವರು ಕಾರವಾರಕ್ಕೆ ಹತ್ತಿರವಿರುವ ಕದ್ರಾ ಅಣೆಕಟ್ಟಿನ ಪ್ರದೇಶದಲ್ಲಿ ಹಿಂದೆ ಅಲ್ಲಿ ಎಂಜಿನೀಯರ್ ಆಗಿದ್ದ ಕೇಶವರಾವ್ ಎಂಬವರು ರೂಪಿಸಿದ ವಿಶಿಷ್ಟ ಸಸ್ಯೋದ್ಯಾನದಲ್ಲಿ ಕಾಣಬಹುದು. ಇದರ ಸಸ್ಯಶಾಸ್ತ್ರೀಯ ಹೆಸರು Ocimum tenuiflorum. ಇದು ಜಗತ್ತಿನ ಎಲ್ಲಾಭಾಗಗಳಲ್ಲೂ ಪಸರಿಸಿರುವ Lamiaceae ಎಂಬ ಸಸ್ಯಕುಟುಂಬಕ್ಕೆ ಸೇರಿದ್ದಾಗಿದೆ.

ಆಷಾಢ ಶುಕ್ಲ ಏಕಾದಶಿಯಂದು ವಿಶ್ರಾಂತಿ ಪಡೆಯಲು ತೆರಳಿ ಮಲಗಿದ ಮಹಾವಿಷ್ಣುವನ್ನು ಕಾರ್ತಿಕ ಶುದ್ಧ ದ್ವಾದಶಿಯಂದು ಎಬ್ಬಿಸು[ಉತ್ಥಾನ]ವ ವಾಡಿಕೆ ಶ್ರೀವೈಷ್ಣವರಲ್ಲಿದೆ. ತಿರುಮಲ ತಿರುಪತಿಯಲ್ಲೂ ಸಹ ಈ ಸೇವೆ ನಡೆಯುತ್ತದೆ. ಭಗವಂತನನ್ನು ಎಬ್ಬಿಸುವ ಈ ದ್ವಾದಶಿಯ ವಿಶೇಷವನ್ನು ಹಿಂದಿನವರು ಕೈಶಿಕ ಪುರಾಣವೆಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ವಿವರಣೆ ಸಂಸ್ಕೃತ-ತಮಿಳು-ಕೊಂಚ ತೆಲುಗು ಭಾಷೆಗಳ ಸಂಗಮರೂಪದಲ್ಲಿದೆ. ದೇವರನ್ನು ಎಬ್ಬಿಸುವಾಗ ಹಾಡುವ ಹಾಡಿನ ಕೊನೆಯ ಭಾಗದಲ್ಲಿ ಬರುವ ಈ ರಾಗವನ್ನು ಮೊದಲಾಗಿ ಚಾಂಡಾಲ ಭಕ್ತ ನಂಬದುವನ್ ಎಂಬಾತ ಹಾಡಿದ ಎಂಬುದು ಇತಿಹಾಸ. ಈ ದೃಷ್ಟಿಯಿಂದ ಉತ್ಥಾನದ್ವಾದಶಿಗೆ ಶ್ರೀವೈಷ್ಣವರು ಕೈಶಿಕ ದ್ವಾದಶಿ ಎಂದೂ ಕರೆಯುತ್ತಾರೆ. ಎದ್ದ ಮಹಾವಿಷ್ಣುವಿಗೆ ಮಿಕ್ಕ ಸಮಾಜ ತುಳಸೀಲಕ್ಷ್ಮಿಯನ್ನು ಮದುವೆಮಾಡಿಕೊಡುವುದನ್ನು ಈ ದಿನ ಕಾಣುತ್ತೇವೆ. ಕರ್ನಾಟಕದ ಕೆಲವು ಭಾಗಗಳಲ್ಲಂತೂ ಹಳೇಕಾಲದ ಕಟ್ಟಾ ಮದುವೆ ಸಂಪ್ರದಾಯದಂತೇ ಮದುವೆಯಿಂದ ಹಿಡಿದು ಚತುರ್ಥೆ [ಮದುವೆ ಮುಗಿದು ಬೀಗರ ದಿಬ್ಬಣ ಹೊರಡುವ ದಿನ ಇರಬಹುದೇ ? ]ಯ ವರೆಗೂ ನಿತ್ಯ ಸಾಯಂಕಾಲ ಪೂಜೆ, ದೀಪೋತ್ಸವ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ತುಳಸೀಕಟ್ಟೆಗೆ ಕಬ್ಬಿನಿಂದ ಸುತ್ತ ಮಂಟಪಕಟ್ಟಿ, ಚಂಡುಹೂವು, ಸೇವಂತಿಗೆ ಮುಂತಾದವುಗಳಿಂದ ಅಲಂಕರಿಸುತ್ತಾರೆ. ನಮ್ಮೂರಲ್ಲಿ ತುಳಸಿಗೆ ಕಬ್ಬಿನ ಜೊತೆಗೆ ಅಡಕೆ ದಬ್ಬೆಯಿಂದ ಮಂಟಪ ನಿರ್ಮಿಸಿ, ವಿಧವಿಧದ ಹೂವು, ಹಣ್ಣಡಕೆ[ಗೋಟಡಕೆ]ಯ ಹಾರ, ಅಡಕೆ ಶಿಂಗಾರ, ಮಾವಿನಎಲೆಗಳ ಸರ ಹೀಗೆ ಬಹುವಿಧ ಸಾಮಗ್ರಿಗಳಿಂದ ಅಲಂಕರಿಸುತ್ತಾರೆ. ಈ ಅಲಂಕಾರ ತುಳಸೀ ವಿವಾಹ ಮುಗಿದು ವಾರದ ಕಾಲ ಹಾಗೇ ಇರುತ್ತದೆ. ಪ್ರತೀ ವರ್ಷ ತನ್ನ ವಿವಾಹವನ್ನು ಮಹಾವಿಷ್ಣುನೊಟ್ಟಿಗೆ ಜನ ನಡೆಸಿಕೊಡುವ ಭಾಗ್ಯವನ್ನು ಪಡೆದ ವೃಂದಾ[ವನ] ನಿಜಕ್ಕೂ ಧನ್ಯ.

ಆಯುರ್ವೇದದಲ್ಲಿ ತುಳಸಿಯ ಬಳಕೆ ಬಹಳ ಹೆಚ್ಚಾಗಿ ಕಾಣುತ್ತದೆ. ತುಳಸಿ ಕ್ರಿಮಿನಾಶಕವಾಗಿ ಕೆಲಸಮಾಡುವುದರಿಂದಲೂ ನೆಗಡಿ ಅಥವಾ ತಂಡಿ, ಸೀತ ಎನಿಸಿಕೊಳ್ಳುವ ಬಾಧೆಗೆ ಪರಿಹಾರಕೊಡುವುದರಿಂದಲೂ ಅದನ್ನು ಮನೆಯಮುಂದೆ ದೇವರೆಂದು ಕರೆದು ಪೂಜಿಸಬೇಕು ಎಂಬ ತತ್ವವನ್ನು ನಮ್ಮ ಪೂರ್ವಜರು ಸಾರಿದರು. ಪ್ರತಿನಿತ್ಯ ತೀರ್ಥವೆಂದು ನಾವು ಕುಡಿಯಬೇಕಾದ್ದು ಹೇಗೆಂದರೆ ತುಳಸಿಯನ್ನು ತೇಯ್ದ ಶ್ರೀಗಂಧದ ಜೊತೆಗೆ ತಾಮ್ರದ ’ಸೋಮಸೂತ್ರ’ವೆಂಬ ಪಾತ್ರೆಯಲ್ಲಿಡುವ ಸಾಲಿಗ್ರಾಮಕ್ಕೆ ಪೂಸಿ, ಅದಕ್ಕೆ ಶಂಖದಿಂದ ಪುರುಷಸೂಕ್ತ ಪಠಿಸುತ್ತಾ ಶುದ್ಧಜಲವನ್ನು ಅಭಿಷೇಚಿಸಿದಾಗ, ಸೋಮಸೂತ್ರದಿಂದ ಕೆಳಗೆ ಬಸಿಯುವ ಆ ನೀರೇ ತೀರ್ಥವಾಗಿರುತ್ತದೆ. ಅದು ಶ್ರೀಗಂಧ-ತುಳಸೀ ಪರಿಮಳ ಭರಿತವೂ ಮತ್ತು ಶರೀರದೊಳಗೆ ಕ್ರಿಮಿನಾಶಕವಾಗಿ ಕೆಲಸಮಾಡಲು ಸಾಮರ್ಥ್ಯವಿರುವ ದ್ರವವೂ ಆಗಿರುತ್ತದೆ. ತುಳಸಿ ಮತ್ತು ನೆಲ್ಲಿಯ ಸಂಗಮ ಈ ಕಾಲದಲ್ಲಿ[ಚಳಿಗಾಲ] ಆರೋಗ್ಯಕ್ಕೆ ಹೇಳಿಮಾಡಿಸಿದ್ದು. ಪೂರ್ವಜರು ಇದನ್ನೆಲ್ಲಾ ಹೇಗೆ ಅರಿತರು ಎಂಬುದು ನಮಗೆ ವಿದಿತವಲ್ಲ; ಆದರೆ ಅವರು ಮಾಡಿಟ್ಟುಹೋದ ಎಲ್ಲಾ ಸೂತ್ರಗಳ ಎಲ್ಲಾ ಶಾಸ್ತ್ರಗಳ ಹಿಂದೆ ಅಪ್ರತಿಮ ವಿಜ್ಞಾನ ಅಡಗಿದೆ. ನಮಗೆ ಕಾರಣ ಗೊತ್ತಿಲ್ಲದೇ ನಾವು ತುಳಸಿಕಟ್ಟೆಗೆ ವೃಂದಾವನ ಎನ್ನುತ್ತಿದ್ದೇವೆ. " ತುಳಸಿಯಂತೆ ತುಳಸಿ ನಮಗೇ ಜಾಗವಿಲ್ಲ ಇಲ್ಲಿ " ಎಂದು ಅರಚುವ ನಗರವಾಸಿಗಳೂ ಇದ್ದಾರೆ. ಆದರೆ ಎಷ್ಟೇ ರೋಗಗಳು-ಖಾಯಿಲೆ ಕಸಾಲೆಗಳು ಜನರಿಗೆ ಬಂದರೂ ತುಳಸಿಮಾತ್ರ ಮೂಕವಾಗಿ ಮನೆಗಳ ಮುಂದೆ ನಿಂತು ತನ್ನತನವನ್ನು ಕಾಪಾಡಿಕೊಂಡಿದೆ; ಮಾತನಾಡದ ದೇವರು ಮನೆಯ ಮುಂದೆ ಪ್ರತ್ಯಕ್ಷವಿರುವಾಗ ಬಳಕೆಮಾಡದ ಮಂದಿಮಾತ್ರ ಮೆಡಿಕಲ್ ಶಾಪಿನಿಂದ ಕೆಮಿಕಲ್ ಖರೀದಿ ಮಾಡುತ್ತಾ ತಮ್ಮ ಶರೀರದ ಸ್ವಾಸ್ಥ್ಯಕ್ಕೆ ವಿರುದ್ಧ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ತುಳಸಿಯ ಬಳಕೆ ಹೆಚ್ಚಾಗಲಿ, ತುಳಸಿ ಎಲ್ಲರನ್ನೂ ಕಾಪಾಡಲಿ ಎಂಬ ಸದಾಶಯದೊಂದಿಗೆ ತುಲಸೀಹಬ್ಬದ ಶುಭಾಶಯಗಳ್ನೂ ಕೋರುತ್ತಿದ್ದೇನೆ, ನಮಸ್ಕಾರ.

Sunday, November 6, 2011

ಆ ಆ ಆ ಅಮೇರಿಕಾ ......


ಆ ಆ ಆ ಅಮೇರಿಕಾ ......

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ನಿಯಂತ್ರಿಸುವ ಅಣ್ಣನೆಂದು ಗುರುತಿಸಿಕೊಂಡಿರುವ ಅಮೇರಿಕಾ ಯಾಕೆ ಈ ರೀತಿ ಆರ್ಥಿಕ ದುರ್ಭರ ಪರಿಸ್ಥಿತಿ ಎದುರಿಸುತ್ತಿದೆ ಎಂಬುದರ ಬಗ್ಗೆ ನಾನು ಸಾಕಷ್ಟು ತಲೆಕೆಡಿಸಿಕೊಂಡಿದ್ದಿದೆ. ಜನಸಂಖ್ಯೆ ಕಮ್ಮಿ ಇರುವ ವಿಶಾಲವಾದ ಭೂಭಾಗವುಳ್ಳ ಅಮೇರಿಕಾಕ್ಕೆ ಹಣಕಾಸಿನ ಮುಗ್ಗಟ್ಟು ಬರುವಂತಹ ಯಾವ ಅನಿವಾರ್ಯತೆ ಎದುರಾಯ್ತು ಎಂಬುದನ್ನು ಸ್ವಲ್ಪ ವಿಶ್ಲೇಷಿಸಿದಾಗ ಕೆಲವು ಗೂಢ ಸಂಗತಿಗಳು ಗೋಚರಿಸುತ್ತವೆ. ಲಕ್ಷ್ಮಿ ಚಂಚಲೆ ಆಕೆ ಒಂದೆಡೆ ನಿಲ್ಲೋದಿಲ್ಲ ಎಂಬುದು ನಮ್ಮೆಲ್ಲರ ನಂಬಿಕೆ, ಇವತ್ತು ಲಕ್ಷಾಧಿಪತಿಯಾದವ ನಾಳೆ ಭಿಕ್ಷಾಧಿಪತಿಯಾಗಲೂ ಬಹುದೆನ್ನುವ ಮಾತು ಸುಳ್ಳೇನಲ್ಲ. ಬುದ್ಧಿವಂತರ ದೇಶವೆನಿಸಿದ ಅಮೇರಿಕಾದಲ್ಲೂ ಬುದ್ಧಿಕಮ್ಮಿಯಾದ ಕೆಲಸ ನಡೆಯಿತೇ ? ಅಥವಾ ಅತೀಬುದ್ಧಿವಂತಿಕೆ ಇದಕ್ಕೆ ಕಾರಣವಾಯ್ತೇ ಯೋಚಿಸಬೇಕಾಗುತ್ತದೆ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬುದು ನಮ್ಮ ಅನಿಸಿಕೆಯಾದರೆ ಕಾಲು ಚಾಚುವಷ್ಟಕ್ಕೂ ಹಾಸಿಗೆ ಹೊಲಿಸಿಕೋ ಎಂಬುದು ಅಮೇರಿಕನ್ನರ ತತ್ವ. ಈ ಭರದಲ್ಲಿ ಈಶ್ವರ ಭಸ್ಮಾಸುರನಿಗೆ ವರ ಕೊಟ್ಟು ಸಿಕ್ಕಾಕಿಕೊಂಡಂತೇ ಅವರು ಜಾರಿಗೊಳಿಸುವ ಕೆಲವು ಆರ್ಥಿಕ ಸೂತ್ರಗಳು ಅವರನ್ನೇ ಮತ್ತೆ ಮುತ್ತಿಕೊಂಡು ಪರಿಸ್ಥಿತಿಯನ್ನು ವಿಷಮತೆಗೆ ತಳ್ಳುವುದು ಕಳೆದ ಕೆಲವು ದಶಕಗಳ ಅಲ್ಲಿನ ವ್ಯವಹಾರ ವೈಖರಿಗಳನ್ನು ನೋಡಿದವರಿಗೆ ವೇದ್ಯವಾಗುವ ವಿಷಯ. ಇರುವುದನ್ನು ಅನುಭವಿಸುವುದು ಬಿಟ್ಟು ಮೊದಲೇ ಹಲವು ಸೌಲತ್ತುಗಳನ್ನು ಹೆಸರಿನ ಮೌಲ್ಯದಲ್ಲಿ ಸಾಲವಾಗಿ ಪಡೆದು ಆಮೇಲೆ ಅದನ್ನು ತೀರಿಸುತ್ತಾ ನಡೆಯುವ ಪ್ರಕ್ರಿಯೆಗೆ ಚಾಲನೆ ಕೊಟ್ಟವರೇ ಅವರು! ಕೊಟ್ಟ ಸಾಲ ಮಿತಿಮೀರಿದಾಗ, ಸಾಲಪಡೆದಾತ ತೀರಿಸಲು ಅಶಕ್ತನಾಗಿ ಅವನಲ್ಲಿ ಸಾಲದ ಹಣ ಮರಳಿಸಲು ಏನೂ ಇಲ್ಲದಾದಾಗ ಸಾಲ ಕೊಟ್ಟ ಅಲ್ಲಿನ ಬ್ಯಾಂಕುಗಳ ಸ್ಥಿತಿ ಹಡಾಲೆದ್ದು ಹೋಗಿದೆ.

ಸಾಲ ಸೌಲಭ್ಯ ಒಂದು ಹಂತಕ್ಕೆ ಬೇಕು ನಿಜ. ಆದರೆ ಸಾಲ ಪಡೆಯುವಾತನಿಗೂ ಪಡೆದ ಸಾಲವನ್ನು ಮರಳಿ ಕೊಡಲು ಸಾಧ್ಯವೇ ಎಂಬ ಮುಂದಾಲೋಚನೆ ಇರಬೇಕಾಗುತ್ತದೆ. ’ಗಂಡಾಗುಂಡಿಮಾಡಿಯಾದರೂ ಗಡಿಗೆ ತುಪ್ಪ ಕುಡೀಬೇಕು’ ಎಂಬುದು ನಮ್ಮಲ್ಲಿ ಪ್ರಚಲಿತದಲ್ಲಿರುವ ಗಾದೆಯಾದರೂ ಹಾಗೆ ಸುಖಾಸುಮ್ಮನೇ ಸಾಲಮಾಡಲು ನಮ್ಮಲ್ಲಿನ ಜನ ಹೆದರುತ್ತಾರೆ ಮಾತ್ರವಲ್ಲ ಮಾಡಿದ ಸಾಲವನ್ನು ಮರಳಿಸುವಲ್ಲಿ ನಮ್ಮವರು ಮುಂಚೂಣಿಯಲ್ಲಿರುತ್ತಾರೆ; ಆದಾಗ್ಯೂ ಅಲ್ಲಲ್ಲಿ ಐಸಿಐಸಿಐನಂತಹ ಕೆಲವು ಬ್ಯಾಂಕುಗಳು ಸಾಲ ವಸೂಲಾತಿಗೆ ರೌಡಿಗಳನ್ನು ಕಳುಹಿಸಬೇಕಾದ ಅನಿವಾರ್ಯತೆ ತಲೆದೋರಿದೆ ಎಂದರೆ ಇನ್ನು ಅಮೇರಿಕಾದಂತಹ ಧಾರಾಳಿಗರ ರಾಷ್ಟ್ರದಲ್ಲಿ ಸಾಲದ ಮರುಪಾವತಿ ವಿಷಯ ಹೇಗಿರಬಹುದು ?

ಯಾವುದೋ ವ್ಯಕ್ತಿಯೋ ಸಂಸ್ಥೆಯೋ ದುಂದುಗಾರಿಕೆಯನ್ನೋ, ಹಣವ್ಯತ್ಯಯವನ್ನೋ ಅಥವಾ ಆರ್ಥಿಕ ಅವ್ಯವಹಾರಗಳನ್ನು ಮಾಡಿ ಲೆಕ್ಕಪತ್ರಗಳಲ್ಲಿ ಅವುಗಳನ್ನು ಗೌಪ್ಯವಾಗಿಡುವುದನ್ನೋ ಕಂಡರೆ ನಾವು ಅದನ್ನು ನಿಯಂತ್ರಿಸುತ್ತೇವೆ, ನಿರ್ಬಂಧಿಸುತ್ತೇವೆ, ಆಯಾ ವ್ಯಕ್ತಿ ಅಥವಾ ಸಂಸ್ಥೆಗೆ ತಕ್ಕ ಶಿಕ್ಷೆಯನ್ನೂ ವಿಧಿಸಿ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮಾರ್ಗಹುಡುಕುತ್ತೇವೆ. ಇದಕ್ಕೆ ನಿನ್ನೆ ಜೈಲಿನಿಂದ ಬಿಡುಗಡೆಯಾದ ಸತ್ಯಂ ಕಂಪ್ಯೂಟರ್ಸ್‍ನ ರಾಮಲಿಂಗ ರಾಜುವೇ ಉದಾಹರಣೆ. ಆದರೆ ಒಂದು ಸರಕಾರವೋ ಆಡಳಿತ ಯಂತ್ರವೋ ಈ ತರಹದ ಅಪವ್ಯಯಗಳಿಗೋ ದುಂದುಗಾರಿಕೆಗೋ ಮುಂದಾಗಿ ಬಹಳಕಾಲದ ತನಕ ತನ್ನ ನಿಜದನೆಲೆಯನ್ನು ಬಚ್ಚಿಟ್ಟು, ಮುಚ್ಚಿಟ್ಟು ಆಗಾಗ ಕೈನಡೆಯದಾಗ ಆರ್ಥಿಕ ಹಿನ್ನಡೆತ ಎಂದು ಘೋಷಿಸಿದರೆ ಅದಕ್ಕೆ ಪರಿಹಾರ ಸುಲಭ ಸಾಧ್ಯವೇ ? ಅಥವಾ ಅಂತಹ ಸರಕಾರಕ್ಕೋ ಆಡಳಿತ ಯಂತ್ರವನ್ನು ನಡೆಸುತ್ತಿರುವವರಿಗೋ ಯಾವುದಾದರೂ ಶಿಕ್ಷೆ ಇದೆಯೇ ? ಗೊತ್ತಾಗಿಲ್ಲ.

ಅಮೇರಿಕಾದ ಆರ್ಥಿಕ ಹಿಂಜರಿತಕ್ಕೆ ಸಾಮಾನ್ಯ ಅವಲೋಕನದಲ್ಲಿ ಕಾಣಬಹುದಾದ ಕೆಲವು ಕಾರಣಗಳು ಹೀಗಿವೆ:

೧. ಪ್ರತೀವರ್ಷ ೧೧ ರಿಂದ ೨೨ ಬಿಲಿಯನ್ ಡಾಲರ‍್ ಗಳನ್ನು ಜನಕಲ್ಯಾಣಕ್ಕೆ ಎಂಬ ಸೋಗಿನಲ್ಲಿ ಬೇನಾಮಿ ಕಂಪನಿಗಳ ಸಹಯೋಗದೊಂದಿಗೆ ವ್ಯಯಿಸಲಾಗುತ್ತದೆ! ref : http://tinyurl.com/zob77

೨. ಪ್ರತೀವರ್ಷ ೨.೨ ಬಿಲಿಯನ್ ಡಾಲರ್ ಗಳನ್ನು ಆಹಾರ ಸಾಮಗ್ರಿಗಳ ಸರಬರಾಜು ಮತ್ತು ವಿತರಣೆ, ಶಾಲಾಮಕ್ಕಳ ಮಧ್ಯಾಹ್ನದ ಊಟಕ್ಕೆ ಎಂತೆಲ್ಲಾ ಬೇನಾಮಿ ಸಂಸ್ಥೆಗಳಿಗೆ ಪಾವತಿಸುವುದು. ref : www.cis.org/articles/2004/fiscalexec.html

೩. ಪ್ರತೀವರ್ಷ ೨.೫ ಬಿಲಿಯನ್ ಡಾಲರ್ ಗಳನ್ನು ಔಷಧೋಪಚಾರದ ಅಗತ್ಯತೆಗೆ ಬೇನಾಮಿ ಕಂಪನಿಗಳಿಗೆ ಕೊಡಲಾಗುತ್ತದೆ ! ref : http://www.cis.org/articles/2004/fiscalexec.html

೪. ಪ್ರತೀವರ್ಷ ೧೨ ಬಿಲಿಯನ್ ಡಾಲರ್ ಗಳನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಂತ ಖರ್ಚುಮಾಡಿದರೂ ಶಿಕ್ಷಣಕ್ಕಾಗಿ ಅದು ವ್ಯಯಿಸಲ್ಪಡುವುದಿಲ್ಲ.

೫. ೧೭ ಬಿಲಿಯನ್ ಡಾಲರ್ ಗಳನ್ನು ಆಂಕರ್ ಬೇಬೀಸ್ ಎನ್ನುವ ದರ್ಜೆಯ ಅಮೇರಿಕಾದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗಾಗಿ ಮತ್ತದೇ ಬೇನಾಮೀ ಮಧ್ಯವರ್ತಿಗಳ ಸಹಯೋಗದೊಂದಿಗೆ ವ್ಯಯಿಸಲಾಗುತ್ತದೆ

೬. ಪ್ರತಿನಿತ್ಯ ೩ ಮಿಲಿಯನ್ ಡಾಲರ್ ಗಳನ್ನು ಅಪರಾಧಿಗಳು ಮತ್ತು ಆಪಾದಿತರ ಶಿಕ್ಷೆಗೆ ಗುರಿಪಡಿಸುವ ಕೆಲಸಗಳಿಗಾಗಿ ಬೇನಾಮಿ ಕೈಗಳ ಸಹಾಯದೊಂದಿಗೆ ಖರ್ಚುಮಾಡಲಾಗುತ್ತದೆ. http://transcripts.cnn.com/TRANSCRIPTS/0604/01/ldt.01.html

೭. ಖೈದಿಗಳಲ್ಲಿ ೩೦ ಪ್ರತಿಶತ ಬೇನಾಮಿ ಖೈದಿಗಳಿದ್ದಾರೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ http://transcripts.cnn.com/TRANSCRIPTS/0604/01/ldt.01.html

೮. ಅಮೇರಿಕಾದ ತೆರಿಗೆದಾರರಿಂದ ವಸೂಲಾದ ಹಣದಲ್ಲಿ ೯೦ ಬಿಲಿಯನ್ ಡಾಲರ್ ಗಳು ಬೇನಾಮಿ ಜನರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಕೆಲಸಕ್ಕೆ ಖರ್ಚಾಗುತ್ತವೆ.

೯. ಬೇನಾಮಿ ಖಾತೆಗಾಗಿ ೨೦೦ ಬಿಲಿಯನ್ ಡಾಲರ್ ಗಳನ್ನು ಅಮೇರಿಕಾದ ಕೂಲಿಖಾತೆಯನ್ನು ಹತ್ತಿಕ್ಕಿ ಬಳಸಲಾಗುತ್ತದೆ. ref : http://transcripts.cnn.com/TRANSCRIPTS/0604/01/ldt.01.html

೧೦. ಅನೈತಿಕತೆಯಿಂದ ದೇಶವಾಸಿಗಳಾಗಿರುವ ಜನರ ಸಂಖ್ಯೆ ಅಮೇರಿಕಾದ ಮೂಲನಿವಾಸಿಗಳ ಹಾಗೂ ಬೇನಾಮಿ ಮೂಲನಿವಾಸಿಗಳ ಸಂಖ್ಯೆಯ ಎರಡೂವರೆ ಪಟ್ಟು ದೊಡ್ಡದಿದ್ದು ಮುಂಬರುವ ವರ್ಷಗಳಲ್ಲಿ ಅಮೇರಿಕಾಕ್ಕೆ ವಲಸೆಬಂದಿರುವರೆಂದು ಘೋಷಿಸಲ್ಪಟ್ಟ ಬೇನಾಮಿ ಜನಸಂಖ್ಯೆಲ್ಲಿ ಮಕ್ಕಳು-ಮರಿ ಅಂತ ಬೆಳೆದು ಆ ಖಾತೆಯಲ್ಲಿ ನಡೆಯಬಹುದಾದ ಅವ್ಯವಹಾರಗಳು ಇನ್ನೂ ಜಾಸ್ತಿಯಾಗುತ್ತವೆ. ref: http://transcripts.cnn.com/TRANSCRIPTS/0606/12/ldt.01.html

೧೧. ೨೦೦೫ ರಲ್ಲಿ ಸರಿಸುಮಾರು ೪ ರಿಂದ ೧೦ ಮಿಲಿಯನ್ ಅನಧಿಕೃತ ಜನರ ಸೇರ್ಪಡೆ ಅಮೇರಿಕಾದ ದಕ್ಷಿಣಭಾಗದಿಂದಾಗಿದ್ದು ಅದರಲ್ಲಿ ೧೯,೫೦೦ ವ್ಯಕ್ತಿಗಳು ಭಯೋತ್ಫಾದಕ ದೇಶಗಳಿಗೆ ಸೇರಿದವರಾಗಿದ್ದಾರೆ. ಮಿಲಿಯನ್ ಟನ್ ಗಳಷ್ಟು ಕೊಕೈನ್, ಮಾರಿಜುವಾನಾ, ಹೇರಾಯ್ನ ಮೊದಲಾದ ಮಾದಕ ಪದಾರ್ಥಗಳು ದೇಶದೊಳಕ್ಕೆ ಸಾಗಿಸಲ್ಪಟ್ಟಿವೆ Ref : Homeland Security Report: http://tinyurl.com/t9sht

೧೨. ಅನಧಿಕೃತವಾಗಿ ಉಳಿದಿರುವ ವಿದೇಶೀಯರನ್ನು ದೇಶದ ಹೊರಕ್ಕೆ ಸಾಗಹಾಕಲು ಒಟ್ಟೂವೆಚ್ಚ ಸುಮಾರು ೨೦೬ ರಿಂದ ೨೩೬ ಬಿಲಿಯನ್ ಡಾಲರ್ ಗಳು ಅಥವಾ ವಾರ್ಷಿಕ ೪೧ ರಿಂದ ೪೬ ಬಿಲಿಯನ್ ಡಾಲರ್ ಗಳು ಬೇಕಾಗಬಹುದೆಂದು ’ದಿ ನ್ಯಾಷನಲ್ ಪಾಲಿಸಿ ಇನ್ಸ್‍ಟಿಟ್ಯೂಟ್’ ಅಂದಾಜುಮಾಡಿದೆ. http://www.nationalpolicyinstitute.org/pdf/deportation.pdf

೧೩. ೨೦೦೬ರಲ್ಲಿ ೪೬ ಬಿಲಿಯನ್ ಡಾಲರ್ ಗಳನ್ನು ತಂತಮ್ಮ ದೇಶಗಳಿಗೆ ಈ ಅನಧಿಕೃತ ನಿವಾಸಿಗಳು ಕಳಿಸಿದ್ದು ತಿಳಿದುಬಂದಿದೆ.

೧೪. ದೇಶದಲ್ಲಿ ಅನಧಿಕೃತವಾಗಿ ವಾಸವಿರುವವರ ಇನ್ನೊಂದು ಕೃತ್ಯವೆಂದರೆ ಹತ್ತಿರ ಹತ್ತಿರ ಒಂದು ಮಿಲಿಯನ್ ನಷ್ಟು ಲೈಂಗಿಕ ದುಷ್ಕೃತ್ಯಗಳು ಮತ್ತು ಕೊಲೆಗಳು ಅವರಿಂದಲೇ ನಡೆಸಲ್ಪಟ್ಟಿವೆ.

ಸರಿಯಾಗಿ ಹೇಳಬೇಕೆಂದರೆ ಹಲವು ರಾಷ್ಟ್ರಗಳ ಅನಿವಾಸಿಗಳು ಅಲ್ಲಿಗೆ ಉದ್ಯೋಗಗಳನ್ನರಸಿ ಹೋಗಿರುವುದರಿಂದ ಅಲ್ಲಿರುವ ಬಹಳ ಜನರಿಗೆ ಯಾರು ಯಾರಾಗಿರಬಹುದು ? who is who ? ಎಂಬ ಸಂದೇಹವಿದೆ. ಭಾರದಲ್ಲಿ ಬೇನಾಮಿ ಹೆಸರುಗಳಲ್ಲಿ ಅಡಗಿರುವಂತೇ ಅಲ್ಲಿಯೂ ಬಹಳ ಬೇನಾಮೀ ದೇಶವಾಸಿಗಳು ತಯಾರಾಗಿಬಿಟ್ಟಿದ್ದಾರೆ. ಮನೆಯ ಹೊರಗೆ ಕಾಲಿಟ್ಟರೆ ಎದುರಾಗುವ ವ್ಯಕ್ತಿಯ ಪರಿಚಯ ಗೊತ್ತಿರುವುದಿಲ್ಲ. ಅಲ್ಲಿಯೂ ಕಳ್‍ನೋಟು ಅಂತ ನಾವು ಕರೆಯುವ ಡೂಪ್ಲಿಕೇಟ್ ಡಾಲರ್ ಗಳು ಹೇರಳವಾಗಿ ಹರಿದಾಡಿರುವ ಸಂಭವನೀಯತೆ ಇದೆ. ಯಾವಾಗ ಡೂಪ್ಲಿಕೇಟ್ ಕರೆನ್ಸಿಗಳು ದೇಶವನ್ನು ಸೇರುತ್ತವೋ ಅವುಗಳನ್ನು ಆ ದೇಶದೊಳಕ್ಕೆ ತಳ್ಳಿದ ಧೂರ್ತರು ನಿಧಾನವಾಗಿ ಆಕ್ಟೋಪಸ್ ತಾನು ಆಹಾರವಾಗಿ ಹಿಡಿಯುವ ಜೀವಿಯನ್ನು ಕಬಳಿಸಿದಂತೇ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಹಣದುಬ್ಬರ ಹಿಡಿತತಪ್ಪಿ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗುತ್ತದೆ.

ಇಷ್ಟೆಲ್ಲಾ ಆಗುವಾಗ ದೇಶದ ಆಡಳಿತ ಹತೋಟಿ ಕೈತಪ್ಪಿಹೋಗುವ ಅಥವಾ ಮುಗ್ಗರಿಸುವ ಸಾಧ್ಯತೆ ಇದ್ದೇ ಇರುತ್ತದೆ. ಹಿಂದೊಂದು ಕಾಲಕ್ಕೆ ಸಾಲದಲ್ಲಿ ಭಾರತೀಯರು ಏನನ್ನೂ ಕೊಳ್ಳುತ್ತಿರಲಿಲ್ಲ!

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲವನು ಮರಳಿ ಕೊಡುವಾಗ ಕಿಬ್ಬದಿಯ
ಕೀಲು ಮುರಿದಂತೆ | ಸರ್ವಜ್ಞ

ಎಂದು ಸರ್ವಜ್ಞ ಹೇಳಿದ್ದಾನೆ. ಸಾಲವೆಂಬುದು ಹೊನ್ನ ಶೂಲ ಎಂದು ಪೂರ್ವಿಕರಲ್ಲಿ ಅನಿವಾರ್ಯತೆಗೆ ಅಲ್ಲಲ್ಲೇ ಕೈಗಡ ಪಡೆದು ಅನುಭವಿಸಿದವರು ತಿಳಿಸಿ ಗಾದೆ ಮಾಡಿದ್ದಾರೆ. ಇವತ್ತಿನ ದಿನಮಾನ ಹಾಗಿಲ್ಲ. ಅಡಂಬರಕ್ಕೆ ನಮಗೊಂದು ಕಾರು ಬೇಕು. ಬಂಗ್ಲೆಯಂತಹ ಮನೆಯೇ ಆಗಬೇಕು. ಮನೆಯೊಳಗೆ ಮನೆಬಳಕೆಗೆ ಸಿಗಬಹುದಾದ ಎಲ್ಲಾ ಯಂತ್ರೋಪಕರಣಗಳೂ ಇರಬೇಕು. ’ಪಕ್ಕದವರಿಗಿಂತ ನಾನೇ ಪರವಾಗಿಲ್ಲ’ ಎನಿಸಿಕೊಳ್ಳಬೇಕು. ಇದು ಇಂದಿನ ನಮ್ಮವರ ಮನೋಗತವಾಗಿದೆ. ಈ ಜನ್ಮ ಚಿಕ್ಕದು ಆದಷ್ಟೂ ಎಂಜಾಯ್ ಮಾಡೋಣ ಎಂಬ ಕುತ್ಸಿತ ಬುದ್ಧಿಯೂ ಇದೆ. ಹಾಗಂತ ಎಲ್ಲರಿಗೂ ಅರ್ಹತೆಯಿಲ್ಲವೆಂದಲ್ಲ. ಆದರೆ ನವಿಲು ಕುಣಿದಾಗ ಕೆಂಬೂತವೂ ಕುಣಿದರೆ ಅದು ನವಿಲಾಗಲು ಸಾಧ್ಯವಿಲ್ಲ. ಜಾಸ್ತಿ ಕುಣಿದರೆ ಜನ ಬೇಸತ್ತು ಕಲ್ಲು ಹೊಡೆದಾರು!

ಅಮೇರಿಕನ್ನರು ಒಂದು ವಿಷಯದಲ್ಲಿ ಸ್ವಲ್ಪ ಧಾರಾಳಿಗಳು. ಅವರು ಪ್ರತಿಯೊಬ್ಬನಿಗೂ ಅವನ ಬದುಕಿಗೆ ಬೇಕಾಗಬಹುದಾದ ಖರ್ಚುವೆಚ್ಚಗಳಿಗಾಗುವಷ್ಟು ಹಣವನ್ನು ಅವನ ವೃತ್ತಿ ಒದಗಿಸುವಂತೇ ನೋಡಿಕೊಳ್ಳುತ್ತಿದ್ದರು. ಒಂದು ಅಂಗಿಗೆ ೨೦೦ ಡಾಲರ್ ಎಂದರೆ " ಯಾಕೆ? " ಎಂಬ ಪ್ರಶ್ನೆ ಅಲ್ಲಿರುವುದಿಲ್ಲ. ಹಾಗೇ ಗಳಿಸು ಹಾಗೇ ವ್ಯಯಿಸು ಎಂಬ ಅನುಮೋದಿತ ಸ್ಥಿತಿ ಅಲ್ಲಿನದು. ನಮ್ಮವರು ಅಲ್ಲಿಗೆ ಹೋದವರು ಅಲ್ಲೇ ಉಳಿಯುವುದು ಅಲ್ಲಿನ ಈ ರಿವಾಜಿಗಾಗಿ. ನಮ್ಮವರು ವ್ಯಯಿಸದೇ ಉಳಿಸಿದ ಡಾಲರ್ ಗಳು ಭಾರತಕ್ಕೆ ಬಂದಮೇಲೆ ಅವರಿಗೆ ಕೂಡಿಟ್ಟ ಹಣವಾಗಿ ನಮ್ಮ ರೂಪಾಯಿಗಳಲ್ಲಿ ಅನುಕೂಲಕರ ಮೊತ್ತವಾಗಿ ಸಿಗುವುದರಿಂದ ಹಾಗೆ ಅಲ್ಲಿ ದುಡಿಯ ಬಯಸುತ್ತಾರೆ. ಇಲ್ಲಿನ ನಮ್ಮ ಸಾಫ್ಟ್‍ವೇರ್ ಕಂಪನಿಗಳು ಎಂಜಿನೀಯರ್ ‍ಗಳಿಗೆ ಜಾಸ್ತಿ ಸಂಬಳ ಕೊಡುತ್ತಿದ್ದುದು ಯಾಕೆ ಎಂದರೆ ಗಳಿಕೆಯ ಮೂರುಭಾಗದಲ್ಲಿ ಒಂದು ಭಾಗಕ್ಕಿಂತಲೂ ಕಮ್ಮಿಭಾಗವನ್ನು ಅವರು ಸಂಬಳವಾಗಿ ವಿನಿಯೋಗಿಸುತ್ತಾರೆ. ಉದಾಹರಣೆಗೆ ವ್ಯಕ್ತಿಯೊಬ್ಬ ಇನ್ಫೋಸಿಸ್ ಗೆ ಕೆಲಸಮಾಡುವಾಗ ಅವನಿಗೆ ೫೦,೦೦೦ ರೂಪಾಯಿಗಳನ್ನು ಸಂಬಳವಾಗಿ ಕೊಟ್ಟರೆ ಅವನ ದುಡಿಮೆಯಿಂದ ಕಂಪನಿಗೆ ದೊರೆಯಬಹುದಾದ ಆದಾಯ ೧,೫೦,೦೦೦ ರೂಪಾಯಿಗಳಿಗಿಂತಾ ಜಾಸ್ತಿ ಇರುತ್ತದೆ!

ಅಮೇರಿಕದ ಜನರಿಗೆ ತಂತ್ರಾಂಶವನ್ನು ಮಾಡುವ ತಲೆಯಾಗಲೀ, ಮಾಡುತ್ತಾ ಕುಳಿತುಕೊಳ್ಳುವ ಕಲೆಯಾಗಲೀ ಅಥವಾ ಮಾಡುವುದಕ್ಕೆ ಬೇಕಾಗುವ ವ್ಯಕ್ತಿಗಳ ಬೆಲೆಯಾಗಲೀ ತಿಳಿದಿಲ್ಲ. ಅವರದು ಏನಿದ್ದರೂ ದುಡಿಸಿಕೊಳ್ಳುವ ರಾಜಗಿರಿ! ಈ ರಾಜಗಿರಿಯಿಂದಾಗಿಯೇ ಭಾರತದ ಎಂಜಿನೀಯರ್ ಗಳು ಮೈಕ್ರೋಸಾಫ್ಟ್ ನಂತಹ ಕಂಪನಿಗಳ ಬೆಳವಣಿಗೆಗೆ ಕಾರಣರಾದರು! ಇದೇ ಕಾರಣದಿಂದ ಭಾರತ ಸಾಫ್ಟ್‍ವೇರ್ ತಂತ್ರಜ್ಞಾನದಲ್ಲಿ ಮುನ್ನಡೆ ಪಡೆಯಿತು ಮತ್ತು ಜಗತ್ತಿನಲ್ಲಿಯೇ ಹೆಸರನ್ನೂ ಮತ್ತು ಆ ಮೂಲದ ಆದಾಯವನ್ನೂ ಗಳಿಸುವ ರಾಷ್ಟ್ರವಾಯ್ತು. ತಂತ್ರಾಂಶದ ಅಭಿವೃದ್ಧಿಯಲ್ಲಿ ಈಗೀಗ ಅಮೇರಿಕಾ ಕಡೆಯ ಪ್ರಾಜೆಕ್ಟ್ ಗಳು ಮುಗಿದು ಐರೋಪ್ಯ ರಾಷ್ಟ್ರಗಳ ಪ್ರಾಜೆಕ್ಟ್ ‍ಗಳು ನಡೆಸಲ್ಪಡುತ್ತಿವೆ. ಹೀಗಾಗಿ ಕೆಲವು ಕಂಪನಿಗಳು ಅಮೇರಿಕಾ ಕೆಲಸ ಕೊಡದಿದ್ದರೂ ಬದುಕಿಕೊಂಡಿವೆ! ಆದರೂ ಪೆಟ್ರೋಲ್ ದರದಲ್ಲಿ ಹೆಚ್ಚಳವಾದಾಗ ಪರೋಕ್ಷವಾಗಿ ಎಲ್ಲಾ ವಸ್ತು-ವ್ಯವಸ್ಥೆಗಳಲ್ಲಿ ಹೆಚ್ಚಿನ ಖರ್ಚು ಹೇಗೆ ಅನಿವಾರ್ಯವೋ ಹಾಗೇ ಜಾಗತಿಕ ಆರ್ಥಿಕ ಹಿನ್ನಡೆ ಎಂಬ ಬೋರ್ಡಿನಲ್ಲಿ ಕೆಲಸಗಳೂ ಕಮ್ಮಿಯಾಗುವುದರಿಂದ ಭಾರತೀಯ ಮೂಲದ ಕಂಪನಿಗಳಿಗೂ ಅದರ ಬಿಸಿ ತಟ್ಟಿದೆ; ತಟ್ಟುತ್ತದೆ. ಆಡಂಬರವನ್ನು ಬಿಟ್ಟು ಇದ್ದುದರಲ್ಲೇ ಪ್ರಸನ್ನತೆಯ ಬದುಕು ಬದುಕಿರುವ ಜನರಿಗೆ, ಕ್ರೆಡಿಟ್ ಕಾರ್ಡ್ ಸಂಸ್ಕೃತಿಯನ್ನು ಮರೆತು ನಿರಾಳ ಬದುಕಿಗೆ ಆತುಕೊಂಡವರಿಗೆ ತಲೆಮೇಲೆ ಕೈಹೊತ್ತು ಕೂರುವ ಪ್ರಮೇಯ ಎಂದಿಗೂ ಬರುವುದಿಲ್ಲ. ಆಸೆ ಅತಿಯಾಗಿ, ಕೊಳ್ಳುಬಾಕತನ ಜಾಸ್ತಿಯಾಗಿ, ಆಕಾಶಕ್ಕೆ ಏಣಿಹಾಕುವ ಆಡಂಬರಿಗಳಾದಾಗ ಆಯತಪ್ಪಿ ಕೆಳಗೆ ಬೀಳುವ ಸಾದ್ಯತೆ ಇದೆ, ಆಸೆ ಇರಲಿ-ಅದು ಆಯ-ವ್ಯಯವನ್ನು ಹೊಂದಿಕೊಂಡಿರಲಿ ಎಂಬುದು ಯುವಕರಿಗೆ ನನ್ನ ಸಲಹೆ.