ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 29, 2011

ಸಂಕ್ರುವಿನ ಸಾಂಗತ್ಯ-ಗುಮ್ಟೆಪಾಂಗ ಮತ್ತು ನಮ್ಮನೆ ದೀಪಾವಳಿ


ಸಂಕ್ರುವಿನ ಸಾಂಗತ್ಯ-ಗುಮ್ಟೆಪಾಂಗ ಮತ್ತು ನಮ್ಮನೆ ದೀಪಾವಳಿ

ಹರಿವ ಹಳ್ಳದಲ್ಲಿ ಮಿಂದು, ನೆನೆದ ಪಂಚೆಯನ್ನೇ ಹಾಗೇ ಉಟ್ಟು ಬೆಟ್ಟವೇರುವ ಸಂಕ್ರು [’ಶಂಕರ’ದ ಅಪಭ್ರಂಶ ಇರಬಹುದೇ?] ಕೀಳಿನ ಪೂಜೆಗೆ ತೊಡಗುತ್ತಿದ್ದ. ವರ್ಷಗಟ್ಟಲೆಯಿಂದ ಅನ್ನ ಕಾಣಲೇ ಇಲ್ಲವೆನ್ನುವಷ್ಟು ಸಣಕಲು ತುಂಬಾಲೆ ಶರೀರಿಯಾದ ಆತ ಹಲ್ಲಿಲ್ಲದ ಬೊಚ್ಚು ಬಾಯನ್ನು ಕಿವಿಯವರೆಗೂ ಎಳೆದು ನಗೆಸೂಸಿ ಹಿಂದಕ್ಕೆ ಬಿಟ್ಟ ತಲೆಗೂದಲನ್ನು ಜುಟ್ಟಿನಂತೇ ಸುತ್ತಿ ಕಟ್ಟಿ, ಕೆಲಸಮಾಡುತ್ತಿದ್ದ ನಮ್ಮನೆಯ ತೋಟದಿಂದ ತಂದ ಅಡಕೆ ಶಿಂಗಾರವನ್ನೂ ಬಾಳೆಗೊನೆಯನ್ನೂ ಬುಟ್ಟಿಯಲ್ಲಿಟ್ಟು ಹೆಗಲಿಗೇರಿಸಿ ಹೊರಟುಬಿಟ್ಟರೆ ಒಬ್ಬನೇ ಆದ್ರೂ ಅಡ್ಡಿಯಿಲ್ಲ ಪೂಜೆ ಮಾಡಿಯೇ ಸಿದ್ಧ. ಅಲ್ಲಿ ಅನಾದಿಕಾಲದ ಕೀಳು ದೆವ್ವಗಳನ್ನು ಹೂತಿಟ್ಟ ಕಲ್ಲಿನ ಗುತ್ತಿನಲ್ಲಿ ಕರೆದು ಪೂಜಿಸಿದರೇ ತಮ್ಮ ಮನೆತನದ, ತಮ್ಮವರ ಆರೋಗ್ಯ ಸರಿಯಿರುತ್ತದೆ ಎಂಬುದು ಆತನ ನಂಬಿಕೆ. ಹರಿಜನ ಕೇರಿಯಲ್ಲಿ ಯಾರಿಗಾದರೂ ಗಾಳಿಮೆಟ್ಟಿಕೊಂಡರೆ ಅದಕ್ಕೆ ವೈದ್ಯಗಾರ್ಕೆ ಮಾಡೋನೇ ಸಂಕ್ರು ಅಂದ್ರೆ ತಪ್ಪಲ್ಲ. ಸಾಯ್ದ ಗಾಳಿ, ಸುಂಟರಗಾಳಿ, ಮಾಯ್ದಗಾಳಿ, ಮಾಟದಗಾಳಿ, ಆಟದಗಾಳಿ ....ಎಂಬೆಲ್ಲಾ ದೆವ್ವಗಳ ಪ್ರಭೇದಗಳನ್ನು ಗುರುತಿಸಿದ್ದ.

ಮಿಕ್ಕವರಂತೇ ಹಾಗೆಲ್ಲಾ ಪಡಪೋಶಿ ಜನವಲ್ಲ ಸಂಕ್ರು. ಹರಿಜನವಾದರೇನು ಆತನ ಸೌಮ್ಯ ಸ್ವಭಾವಕ್ಕೆ ಮಾರುಹೋಗದವರೇ ಇರ್ಲಿಲ್ಲ. ನಮಗೆಲ್ಲಾ ಆತನೊಬ್ಬ ಹಿರಿಯಜ್ಜನಾಗಿದ್ದ ಎಂದರೆ ತಪ್ಪಲ್ಲ. ಮಕ್ಕಳಿಲ್ಲದ ಸಂಕ್ರುಗೆ ನಾವೆಲ್ಲಾ ಮಕ್ಕಳಂತೇ ಆಗಿಬಿಟ್ಟಿದ್ದೆವು. ಸಂಕ್ರು ನಮ್ಮನೆಗೆ ಬಂದುಬಿಟ್ಟರೆ ಸಂಜೆ ೪-೫ ಗಂಟೆಯವರೆಗೂ ಇರುತ್ತಿದ್ದ. ಆಗಾಗ ತಿಂಡಿ-ಚಾ ಊಟ ಇವೆಲ್ಲಾ ನಮ್ಮ ಮನೆಯ ವಟಾರದಲ್ಲೇ ನಡೆಯುತ್ತಿದ್ದವು. ತೋಟದ ಕೆಲಸದ ಹಲವರ ಪೈಕಿ ಸಂಕ್ರು ಕೂಡ ಒಬ್ಬ. ಅದು ಹೇಗೋ ಬೇರೆಲ್ಲೋ ಕೆಲಸಮಾಡುತ್ತಿದ್ದ ಸಂಕ್ರು ಒಂದಿನ ನಮ್ಮನೆಗೆ ಅನಿರೀಕ್ಷಿತವಾಗಿ ಬಂದ. " ಒಡ್ಯಾ ನನ್ಕೈಲಿ ಆಗು ಕೆಲ್ಸ ಮಾಡ್ಕಂಡಿರ್ಲಾ " ಕೇಳ್ದ. ಅದಕ್ಕೆ ನನ್ನಜ್ಜನಿಗೆ ಆತನ ರೂಪ, ಹಿನ್ನೆಲೆ, ಮಕ್ಕಳಿಲ್ಲದ ಪರಿ ಎಲ್ಲಾ ಕೇಳಿ ಪಾಪ ಅನ್ನಿಸಿತೋ ಏನೋ " ಹೂಂ ....." ಅಂದುಬಿಟ್ಟರು. ಅದ್ಕೂ ಮೇಲೆ ದಿನಾ ಬೆಳಿಗ್ಗೆ ೯ ಗಂಟೆಗೆ ಹಾಜರು.

ಸಂಕ್ರು ಮಾಡಿದ ಕೆಲಸಕ್ಕೆ ಯಾರೂ ತಕರಾರು ತೆಗೀತಿರ್ಲಿಲ್ಲ. ಆತ ಹೇಗೇ ಮಾಡದ್ರೂ ಒಪ್ಪಿಗೆ ಎನ್ನೋ ಮಟ್ಟಕ್ಕೆ ಆಪ್ತನಾಗಿಬಿಟ್ಟಿದ್ದ. ಕಠಿಣತಮ ಕೆಲಸಗಳು, ಮರವೇರುವ ಕೆಲಸಗಳು ಆತನಿಂದ ಊ ಹೂಂ..., ಗೊಬ್ಬರ ಹರಗುವುದು, ಕೊಟ್ಟಿಗೆ ಶುಚಿಗೊಳಿಸುವುದು, ಅಡಕೆ ತೋಟಕ್ಕೆ ನೀರುಹಾಯಿಸುವುದು, ಬಿದ್ದ ಅಡಕೆ ಸೋಗೆಗಳನ್ನು ಎಳೆದುತಂದು ಗುಪ್ಪೆ ಹಾಕುವುದು, ಬೇರೇ ಕೆಲಸಗಾರರಿಗೆ ಬೇಕಾಗುವ ಕುಟಾರೆ[ಗುದ್ಲಿ], ಪಿಕಾಸಿ ಇಂಥಾ ಕೃಷಿ ಸಲಕರಣೆಗಳನ್ನು ಒಯ್ದು ತಲ್ಪಿಸುವುದು, ಮನೆಯಲ್ಲಿ ಬಂದುಹೋಗುವವರ ಕವಳದ[ಎಲೆಯಡಿಕೆ] ಖರ್ಚಿಗೆ ವೀಳ್ಯದೆಲೆ ಕೊಯ್ದುಕೊಂಡು ಬರೋದು, ಕುಂಟುತ್ತಾ ಬಂದ ಆಕಳ ಕಾಲಿಗೆ ಏನಾಗಿದೆ ಎಂದು ನೋಡಿ ಚಿಕಿತ್ಸೆ ಮಾಡಲು ಸಹಕರಿಸುವುದು ಹೀಗೇ ಪಡಚಾಕ್ರಿ ಕೆಲಸಗಳೇ ಆತನದ್ದು.

ಸಂಕ್ರುನ ಹೆಂಡತಿ ಶಣ್ತಂಗಿ. ಆಕೆಯ ತಂದೆಗೆ ಇಬ್ರೇ ಹೆಣ್ಮಕ್ಳಂತೆ. ಒಬ್ಬಳು ದೊಡ್ತಂಗಿ ಇನ್ನೊಬ್ಬಳು ಶಣ್ತಂಗಿ! ದೊಡ್ತಂಗಿಯನ್ನು ಅಳ್ಳಂಕಿ ಕಡೆ ಮದುವೆಮಾಡಿಕೊಟ್ಟಿದ್ರಂತೆ. ಜೋಡೀ ಅಂದ್ರೆ ಹೇಳಿಮಾಡ್ಸಿದ್ ಜೋಡಿ. ಅವಳೂ ಅಷ್ಟೇ ನಿಧಾನ. ಕೆಲಸ ಬಾಳ ಅಚ್ಚುಕಟ್ಟು. ಯಾವ್ದೇ ಕೆಲಸ ಮಾಡ್ಲಿ ಅದ್ರಲ್ಲಿ ಐಬಿಲ್ಲ. ಕೊಟ್ಟಿಗೆಗೆ ಮಳೆಗಾಲದಲ್ಲಿ ಹಸಿರು ಸೊಪ್ಪು, ದೀಪಾವಳಿಯಿಂದ ಕರಡ[ಗುಡ್ಡದಲ್ಲಿ ಬೆಳೆದು ಒಣಗಿದ ಕಡ್ಡಿ ಥರದ ಹುಲ್ಲು], ಬೇಸಿಗೆಯಲ್ಲಿ ದರಕು[ಒಣಗಿದ ಎಲೆಗಳ ಗುಡ್ಡೆ]ಇವುಗಳನ್ನೆಲ್ಲಾ ಆಯಾ ಕಾಲಕ್ಕೆ ತಕ್ಕನಾಗಿ ತರೋದು ಶಣ್ತಂಗಿ ಕೆಲಸ. ಹರಿಜನಕೇರಿಯ ಹಲವು ಹೆಂಗಸರ ಜೊತೆ ಬೆಳಿಗ್ಗೆ ಬೆಟ್ಟದ ಕಡೆ ಮುಖಹಾಕಿದರೆ ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಒಂದು ಹೊರೆ ತಂದುಹಾಕಿ ನಮ್ಮನೆಯಲ್ಲಿ ತಿಂಡಿ-ತೀರ್ಥ ಮುಗಿಸಿ ಆಮೇಲೆ ಮತ್ತೆ ಹೊರಟರೆ ಸಂಜೆ ೪ರ ಹೊತ್ತಿಗೆ ಇನ್ನೊಂದು ಹೊರೆ. ಹೀಗೇ ಸಂಜೆ ಸಂಕ್ರು ಮನೆಗೆ ಹೋಗುವಾಗ ಇಬ್ರೂ ಜೊತೇಲೇ ಮನೆಗೆ ಹೋಗುತ್ತಿದ್ದರು.

ನಮಗೆಲ್ಲಾ ಸಂಕ್ರು ಇಷ್ಟವಾಗಿದ್ದು ಅಂವ ಹೇಳ್ತಿದ್ದ ಕಥೆಗಳಿಂದ! ಯಾವ ಕಥೆಯನ್ನೂ ನೆಟ್ಟಗೆ ಹೇಳಿದ ಮನುಷ್ಯನೇ ಅಲ್ಲ. ಒಗಟು ಒಗಟಾಗಿ ಹೇಳಿ ಮುಸಿಮುಸಿ ನಗುತ್ತಿದ್ದ ಆತನಲ್ಲಿ ಹಲವು ಪ್ರಶ್ನೆ ಕೇಳೀ ಕೇಳೀ ಕಥಾಭಾಗವನ್ನು ಅರ್ಥಮಾಡಿಕೊಳ್ಳಬೇಕಾಗ್ತಿತ್ತು. ಆದ್ರೂ ಕಥೆಯ ವ್ಯಾಪ್ತಿ ಬಹಳ ಆಳಕ್ಕೆ ಇಳಿಯುತ್ತಿತ್ತಾದ್ದರಿಂದ ನಮಗೆ ಯಾವುದೇ ಬೇಸರವಿರಲಿಲ್ಲ. ಕಥೆಗಳು ಎಂದ್ರೆ ಅಂತಿಂಥಾ ಕಥೆಗಳಲ್ಲ, ನವರಸ ತುಂಬಿದ ಕಥೆಗಳು. ಇಂಥಾ ಸಂಕ್ರು ಬಯಲಸೀಮೆಯ ಸಂಗ್ಯಾಬಾಳ್ಯಾ ಕಥೆಯನ್ನು ಬೇರೆಯ ರೀತಿಯಲ್ಲೇ ಅರ್ಥೈಸಿಕೊಂಡು ’ಸಿಂಗಿಬೋಳ’ನನ್ನು ಮಾಡಿ ಕಟ್ಟಿಹೇಳಿದ ಕಥೆ ಇನ್ನೂ ನೆನಪಾಗಿ ನಗುಬರುತ್ತದೆ.

ಮೊದಲ ಮಳೆಬಿದ್ದು ಎಲ್ಲೆಲ್ಲೂ ಮಣ್ಣಿನ ವಾಸನೆ ಎದ್ದ ಕೆಲವೇ ದಿನಗಳಲ್ಲಿ ನಮ್ಮೂರಿಗೆ ನಾಕಾರು ಕಿಲೋಮೀಟರು ದೂರದಲ್ಲಿರುವ ಶಿಂಗಾರ ಬೇಣ ಹಸಿರುಟ್ಟು ನವವಧುವಿನಂತೇ ಆಗುತ್ತಿತ್ತು. ನಮ್ಮಂಥಾ ಚಿಕ್ಕವರು ಹೋಗಬಾರದ ಕಾಡುಪ್ರಾಣಿಗಳು ಓಡಾಡುವ ಕಾಡು ಜಾಗವದು. ಬಹಳ ಎತ್ತರದ ಬೆಟ್ಟ ಎಂದರೆ ತಪ್ಪಲ್ಲಾ.[ನಾವೆಲ್ಲಾ ಬೆಳೆದು ಖುದ್ದಾಗಿ ಹೋಗಿ ನೋಡುವ ಹೊತ್ತಿಗೆ ಅದು ಕಾಡಾಗಿರದೇ ನಾಡಿನ ಮಧ್ಯದ ಗುಡ್ಡವಾಗಿ ಮಾರ್ಪಾಡಾಗುತ್ತಾ ನಡೆದಿತ್ತು]. ತನ್ನ ಆಕಾರಶುದ್ಧತೆ, ಅಲಂಕಾರ ಬದ್ಧತೆಯಿಂದ ಹಲವು ಬಣ್ಣದ ಗಿಡಮರ ತರುಲತೆಗಳನ್ನು ಹೊಂದಿದ್ದ ಆ ಬೆಟ್ಟಕ್ಕೆ ಅನ್ವರ್ಥನಾಮ ’ಶೃಂಗಾರಬೇಣ’ ಆಡುಮಾತಲ್ಲಿ ’ಶಿಂಗಾರಬೇಣ’ವಾಗಿತ್ತು. ಅಲ್ಲಿರುವ ಗುಹೆಗಳು, ಜಲಧಾರೆಗಳು ಇವುಗಳನ್ನೆಲ್ಲಾ ಕಣ್ಣಿಗೆಕಟ್ಟುವಹಾಗೇ ವರ್ಣಿಸುತ್ತಿದ್ದ ’ಮಹಾಕವಿ ಸಂಕ್ರು’ ನಿಜಕ್ಕೂ ಕಲಾವಿದನೇ ಸೈ. ಒಂದಷ್ಟು ಬೆಲ್ಲ-ನೀರು ಬಾಯ್ತುಂಬ ಮೆಲ್ಲಲು ತಾಂಬೂಲ ಕೊಟ್ಟುಬಿಟ್ಟರೆ ಕಥೆಗೆ ಅಂತ್ಯವೇ ಇಲ್ಲ. ಶಾಲೆಗೆ ಬಿಡುವಿರುವಾಗೆಲ್ಲಾ ಸಂಕ್ರು ಇದ್ದಾನಾ ಎಂದು ತಿಳಿದು ಆತನ ಹಿಂದೆ ಓಡುವುದು ನಮ್ಮ ಪರಿಪಾಟವಾಗಿಬಿಟ್ಟಿತ್ತು.

" ಮೊನ್ನಾಗೆ ನಾವು ಹಾರ್ಬೆಕ್ಕು ಹೊಡ್ದಾಗಿತು ...ಹ್ಯಾಂಗಿತ್ತು ಗೊತ್ತದ್ಯಾ ? " ಎಂದು ಕುತೂಹಲ ಕೆರಳಿಸುತ್ತಿದ್ದ ಆತನಿಗೆ ಶಿಕಾರಿಗೆ ಹೋಗುವುದೂ ಒಂದು ಹವ್ಯಾಸ. ಹರಿಜನರಲ್ಲಿ ಕೆಲವರು ಒಟ್ಟಾಗಿ ಸೇರಿ ಕಾಡೊಳಗೆ ಶಿಕಾರಿಗೆ ಹೋಗುವುದಿತ್ತು. ಹಂದಿ, ಕಡವೆ, ಸಾರಂಗ, ಜಿಂಕೆ, ಮೊಲ, ಕಾಡುಕೋಳಿ, ಕಾನ್ಕುರಿ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಅವರು ಬೇಟೆಯಾಡಲು ಹೋಗುತ್ತಿದ್ದುದುಂಟು. ಬೇಟೆಗೆ ಹಾಗೆ ಹೋಗುವಾಗ ತಾವು ಸಾಕಿದ ಕೆಲವು ನಾಯಿಗಳನ್ನೂ, ಭರ್ಚಿಯ ಥರದ ಕೆಲವು ಹತ್ಯಾರಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಅವರಲ್ಲಿ ಕಾಡತೂಸು ಒಂದೋ ಎರಡೋ ಇದ್ದವೇನೋ ಅಷ್ಟೇ. ಮಿಕ್ಕೆಲ್ಲಾ ವ್ಯವಹಾರ ಉಳ್ಳ[ಉರುಳು]ಹಾಕುವುದು, ಮದ್ದು ಇಡುವುದು ಈ ರೀತಿ ಹಲವು ತಂತ್ರಗಳಿಂದ ನಡೆಯುತ್ತಿತ್ತು. ಹರೆಯದ ಪುಂಡರ ನಡುವೆ ನಡುಸೋತ ಸಂಕ್ರುವೂ ಸೇರಿಕೊಳ್ಳುತ್ತಿದ್ದ. ಆತನ ಜೀವನೋತ್ಸಾಹದಿಂದ ಮಿಕ್ಕ ಜನರಿಗೆ ಧೈರ್ಯ, ಸ್ಥೈರ್ಯ ಬರುತ್ತಿತ್ತು.

" ಶಿಕಾರಿ ಮಾಡಿ ಪ್ರಾಣಿ ಹಿಂಸೆ ಮಾಡೋದು ಸರೀನಾ ?" ಅಂದ್ರೆ " ಓ ಅಲ್ಕಾಣಿ ಅದೆಲ್ಲಾ ನೋಡ್ತಾಯ್ಕಂಬುದಿಲ್ಲ..ಕೊಂದ್ ಪಾಪ ತಿಂದ್ ಪರಿಹಾರಂತೆ " ಎನ್ನುತ್ತಾ ಗರ್ರರ್ ಗರ್ರರ್ ಸದ್ದಿನೊಂದಿಗೆ ನಕ್ಕುಬಿಡ್ತಿದ್ದ ಸಂಕ್ರು. ಶಿಕಾರಿಗೆ ಹೋದ ದಿನ ಮತ್ತು ಆ ಮರುದಿನವೂ ಅಲ್ಲದೇ ಇನ್ನೂ ಒಂದೆರಡು ದಿನ ಸಂಕ್ರು ಕೆಲಸಕ್ಕೆ ರಜಾ ಒಗೆದುಬಿಡುತ್ತಿದ್ದ. ಕೊಂದು ತಂದ ಪ್ರಾಣಿಗಳನ್ನು ಪಾಲುಮಾಡಿ ತಿಂದು ತೇಗುವ ಹರಿಜನರಕೇರಿಯಲ್ಲಿ ಆ ದಿನ ಹಬ್ಬವೋ ಹಬ್ಬ! ಊಟದ ಗಮ್ಮತ್ತಿನಲ್ಲಿ ಗಾಂವ್ಟಿ ಸಾರಾಯಿ ಸೇರಿಕೊಂಡು ಗುಮ್ಟೆಪಾಂಗ[ಒಂದು ತೆರನಾದ ಮಣ್ಣಿನ ಮಡಕೆಯ ಚರ್ಮವಾದ್ಯ] ಶುರುಹಚ್ಚಿಕೊಂಡರೆ ಆ ರಾತ್ರಿ ಸಿಂಗಿಬೋಳನ ಕಥೆಯ ರೀತಿ ಏನೇನೋ ಅವರದ್ದೇ ಆದ ಹಾಡುಗಳನ್ನು ಹೇಳಿಕೊಂಡು ಅಷ್ಟೂ ಜನ ಕುಣಿಯುತ್ತಿದ್ದರು. ಸಂಕ್ರು ಹಾಡಲು ಕೂತರೆ ಆಕಾಶ ಭೂಮಿ ಒಂದಾದ್ರೂ ಏಳುವ ಆಸಾಮಿಯಲ್ಲ; ಹಾಡು ಮುಗೀಬೇಕೇ ಆತ ಏಳಬೇಕೆ. ಆತನ ಕಂಠದಲ್ಲಿ ಹಾಗೆ ಮಾಧುರ್ಯವೂ ಇತ್ತು ಅನ್ನಿ. ಸಾಹಿತ್ಯ ಸರಿಯಿರದಿದ್ದರೂ ಸ್ವರಲಾಲಿತ್ಯವನ್ನು ತೋರುತಿದ್ದ. ಹಾಗಂತ ಇವನ್ನೆಲ್ಲಾ ನಾವು ಅಲ್ಲಿಗೆ ಹೋಗಿ ನೋಡಿದ್ದಿಲ್ಲ ಮಾರಾಯ್ರೆ! ಇದು ನಮ್ಮ ಭಾತ್ಮೀದಾರರಾದ ’ಸಂಕ್ರು ಹಳ್ಳೇರ’ರಿಂದ ಬಂದ ಭಾತ್ಮೆ. ಹಾಡನ್ನು ಕೇಳಿದ್ದೆವು; ಯಾಕೆಂದ್ರೆ ನಮ್ಮ ಒತ್ತಾಯಕ್ಕೆ ತೋಟದಲ್ಲಿ ಗಾಳಿಮಳೆಗೆ ಮುರಿದುಬಿದ್ದ ಅಡಕೆಮರದ ತುಂಡಿನ ಮೇಲೆ ಕೂತು ಹಾಡು ಹೇಳಿದ್ದು ಈಗಲೂ ಕಿವಿಯಲ್ಲಿ ಗುನುಗುನಿಸುತ್ತಲೇ ಇದೆ.

" ಅಂವ್ಗೆ ಕೊಡಬೇಡಿ ನಂಕುಡೆ ಕೊಡಿ ಮನೀಲಿ ಸಾಮಾನಿಲ್ಲ, ಅಂವ್ಗೆ ಕೊಟ್ರೆ ಪೂರಾ ದೇಗನಂಗ್ಡಿಗೋಯ್ತದೆ " ಅಂತಿದ್ದು ಶಣ್ತಂಗಿ. ಅವರ ಮನೆಯ ಆಗುಹೋಗುಗಳನ್ನೆಲ್ಲಾ ಅವಳೇ ನಿಭಾಯಿಸಬೇಕಿತ್ತು. ಈ ಪುಣ್ಯಾತ್ಮ ಸಂಕ್ರು ಕೆಲಸಮಾಡಿದ್ದಕ್ಕೆ ಕಾಸು ಕೇಳಿ ಇಸ್ಗಂಡು ನೇಟ್ಗೆ ’ಡಿಯೇಗ್’ ಎನ್ನುವವರ ಸರ್ಕಾರಿ ಹೆಂಡದಂಗ್ಡಿಗೆ ನುಗ್ಗಿಬಿಡುತ್ತಿದ್ದ. ’ಪರಮಾತ್ಮ’ನನ್ನು ಒಳಗೆ ಇಳಿಸಿದವನೇ ಸೀದಾ ಮನೆಗೆ ಹೋಗಿ ಮಲಗಿಬಿಡುತ್ತಿದ್ದ. ಯಾರ್ದೂ ತಂಟಿಲ್ಲ-ತಕ್ರಾರಿಲ್ಲ, ಯಾರ ಗೋಜಿಗೆ ಹೋಗೋದು ಅಥವಾ ಹಾದಿ ಬೀದೀಲಿ ನಿಂತು ಹಲಬೋದು ಸಂಕ್ರುಗೆ ಹಿಡಿಸ್ತಾ ಇರ್ಲಿಲ್ಲ. ಆದ್ರೆ ಕೈಲಿ ಇದ್ದಷ್ಟೂ ಕಾಸಿಗೆ ಕುಡಿದುಬಿಡ್ತಿದ್ದ...ಹುಷಾರು ತಪ್ಪುವಷ್ಟಾದ್ರೂ ಬಿಡ್ತಿರಲಿಲ್ಲ. ಅದ್ಯೇನ್ ತೀಟೆಯೋ ಯಾವ ಚಿಂತ್ಯೋ ಯಾವ್ದೋ ನಮ್ಗೆ ತಿಳೀತಿರ್ಲಿಲ್ಲ. ಮಕ್ಕಳಿಲ್ಲಾ ಎಂಬ ಕಾರಣಕ್ಕೆ ಹಾಗೆ ಮಾಡ್ತಿದ್ದನೋ ಏನೋ.

ನಮ್ಮಲ್ಲಿನ ದೀಪಾವಳಿಗೆ ಸಂಕ್ರು ಇರ್ದೇ ಲಕ್ಷಣವೇ ಇಲ್ಲ ಎಂಬಷ್ಟು ನಮ್ಮಲ್ಲಿ ಒಂದಾಗಿದ್ದ ಆತ ಕೊಟ್ಟಿಗೆ ತೊಳೆದು, ಕರಡಹಾಸಿ ದನಗಳ ಮೈ ನೋವಾಗದಂತೇ ಮೆತ್ತಗೆ ಮಲಗಲಿ ಎಂದು ಬಯಸುವ ಮೃದುಮನಸ್ಸಿನವನೂ ಆಗಿದ್ದ. ದೀಪಾವಳಿಯ ಬಲಿಪಾಡ್ಯದ ದಿನ ಬೆಳ್ಳಂಬೆಳಿಗ್ಗೆ ಗೋಪೂಜೆಗೆ ಹಾಜರಾಗುವ ಆತನಿಗೆ ಗೋವುಗಳಿಗೆ ಕಟ್ಟಿರುವ ಚಾಟಿ [ಅಡಕೆ, ವೀಳ್ಯದೆಲೆ, ಶಿಂಗಾರ, ದನಮಾಲೆ ಹೂ, ಚಪ್ಪೆದೋಸೆ ] ಹರಿಯುವುದು ಬಹಳ ಮಜಾಕೊಡುವ ಕೆಲಸ. ನಮ್ಮಲ್ಲಿ ಗೋಪೂಜೆಗೆ ಒಣಗಿದ ಬಾಳೆಯ ರೆಂಬೆಗಳಿಂದ ಮಾಡಿದ ಲಡ್ಡು ಬಳ್ಳಿಗಳಲ್ಲಿ ಚಾಟಿಯನ್ನು ಪೋಣಿಸುತ್ತಿದ್ದರು. ಕೆಲವು ಅಡಕೆ ಸರಗಳನ್ನೂ ಮಾಡುತ್ತಿದ್ದರು. ಗಣಪತಿ ಪೂಜೆಯಿಂದ ಆರಂಭಗೊಳ್ಳುವ ಗೋಪೂಜೆ ಗೋವಿನ ಕಾಲುಗಳು-ಮೈ ತೊಳೆದ ಶಾಸ್ತ್ರಮಾಡಿ, ಗೋವಿಗೆ ಚಾಟಿ ಕಟ್ಟಿ, ಆರತಿ ಬೆಳಗಿ, ಗೋಗ್ರಾಸ [ಬೆಲ್ಲದ ಪಾಕದಲ್ಲಿ ಅನ್ನ, ಬಾಳೇಹಣ್ಣು, ಕಾಯಿತುರಿ, ತುಪ್ಪ, ಯಾಲಕ್ಕಿ ಇವುಗಳನ್ನು ಹಾಕಿ ಕಲಸಿ ಹದಮಾಡಿದ್ದು]ಕೊಟ್ಟು, ಬಾಯಿತೊಳೆಸಿದ ಶಾಸ್ತ್ರಮಾಡಿ ಮತ್ತೆ ಮಂಗಳಾರತಿ ಎತ್ತಿ ನಂತರ ಮಂತ್ರಪುಷ್ಪ-ಪ್ರಾರ್ಥನೆಯೊಂದಿಗೆ ಮುಗಿಯುತ್ತಿತ್ತು. ಆದಾದಮೇಲೆ ಪ್ರಸಾದ ಸ್ವೀಕರಿಸಿ ಗೊತ್ತಾದ ಮುಹೂರ್ತದಲ್ಲಿ ಅಂದು ದನಗಳ ಹಗ್ಗದ ಕಣ್ಣಿ ಕಳಚುತಿದ್ದರು. ಹಗ್ಗ ಬಿಡಿಸಿದ ದನಗಳನ್ನು ಜಾಗಟೆ ಬಡಿದು ಕೊಟ್ಟಿಗೆಯಿಂದ ಹೊರಗೆ ಓಡಿಸುವುದು ಮಕ್ಕಳ ಕೆಲಸವಾಗಿತ್ತು. ಬೆದರಿ ಓಡುವ ಹಸುಗಳ ಕುತ್ತಿಗೆಗೆ ಕಟ್ಟಿರುವ ಚಾಟಿಗಳನ್ನು ಅಡಗಿನಿಂತು ಹರಿಯುವುದು ಸಂಕ್ರು-ತಂಡದವರ ಆಟ. ಅಲ್ಲಿ ಆಟದೊಂದಿಗೆ ಅವರಿಗೊಂದಷ್ಟು ಅಡಕೆ,ವೀಳ್ಯದೆಲೆ ಇವೆಲ್ಲಾ ಸಿಗುತ್ತಿದ್ದವು!

ಕಿರುಬೇಸಿಗೆ ಅಂದರೆ ಜನವರಿ ತಿಂಗಳ ಹೊತ್ತಿಗೆ ನಮ್ಮ ಹಳ್ಳಿಯ ಕಡೆಗೆ ಹಸಿ ಗೇರುಬೀಜ ಸಿಗುವುದು ಅಪರೂಪ. ಎಲ್ಲೋ ಗುಡ್ಡಗಳಲ್ಲಿ ಕಣ್ಣಿಟ್ಟು ನಮಗಾಗಿ ಹಸಿಗೇರುಬೀಜಗಳನ್ನು ಹೀಚಿ ಒಳಗಿನ ಬೆಳ್ಳಗಿನ ಎಳೆಯ ಬೀಜಗಳನ್ನು ತಂದುಕೊಡುತ್ತಿದ್ದುದೂ ಕೂಡ ಸಂಕ್ರುವೇ, ತಪ್ಪಿದರೆ ಶಣ್ತಂಗಿ. ನಾನು ಓದು ಮುಗಿಸಿ ಉದ್ಯೋಗಿಯಾಗಿ ಬೆಂಗಳೂರು ತಲ್ಪಿದರೂ ಆ ಮುದುಕ-ಮುದುಕಿ ನಮ್ಮಲ್ಲೇ ಇದ್ದರು, ಬೇಸಿಗೆಯಲ್ಲಿ ನನ್ನ ಬರುವಿಕೆಯ ವಾರ್ತೆ ಮೊದಲೇ ತಿಳಿದು ಆ ದಿನಕ್ಕೆ ಸರಿಯಾಗಿ ಎಳೇ ಗೇರುಬೀಜ, ಬಿಳೀಮುಳ್ಳೇ ಹಣ್ಣು, ಕಾರೇಕಾಯಿ, ಕೌಳೀಕಾಯಿ-ಹಣ್ಣು, ಜಂಬೇಹಣ್ಣು, ನೇರಲೆಹಣ್ಣು, ಜೇನುತುಪ್ಪ ಇತ್ಯಾದಿಯಾಗಿ ಹಲವು ಹಣ್ಣು-ಕಾಯಿ ಇಟ್ಗೊಂಡು ದಾರಿಕಾಯ್ತಾ ಇರ್ತಿದ್ರು. ಅವರಿಂದ ಅವುಗಳನ್ನು ಸ್ವೀಕರಿಸಿ ಚಪ್ಪರಿಸಿ ತಿಂದರೇನೆ ಅವರಿಗೆ ಖುಷಿ. ಅವರಿಗೊಂದಷ್ಟು ಬಟ್ಟೆ-ಬರೆ, ಸ್ವಲ್ಪ ಹಣ ಇತ್ಯಾದಿ ಕೊಟ್ಟಾಗ ಬ್ರಹ್ಮಾಂಡದಲ್ಲೇ ಅವರಷ್ಟು ಸುಖಿ ಬೇರೇ ಇಲ್ಲ ಎನ್ನುವಂತಹ ಭಾವ ಅವರ ಕಂಗಳಲ್ಲಿ!

ಕಾಯದ ಕಾಲ ತನ್ನ ಪರಿಕ್ರಮದಲ್ಲಿ ಹಲವರನ್ನು ಸೃಜಿಸುತ್ತಾ-ಹಿಂಪಡೆಯುತ್ತಾ ನಡೆಯುವುದು ನಿಸರ್ಗ ನಿಯಮವಷ್ಟೇ ? ಹಾಗೆ ನಂಗೆ ಕೆಲವು ವರ್ಷಗಳ ಹಿಂದೆ ಕೇಳಿಬಂದ ಸುದ್ದಿ ಸಂಕ್ರು ಗತಿಸಿಹೋಗಿದ್ದು. ಸುಮಾರು ಮುದಿವಯಸ್ಸಿಗನೇ ಆದ್ರೂ ಇನ್ನೂ ಆತ ಬದುಕಿರಲಿ ಎಂಬುದೇ ನಮ್ಮೆಲ್ಲರ ಇಚ್ಛೆಯಾಗಿತ್ತಾದರೂ ಯಾರನ್ನು ಯಾರು ತಾನೇ ಎಷ್ಟು ದಿನ ಇಲ್ಲಿ ಇಟ್ಟುಕೊಂಡಾರು; ಅದು ವಿಧಿಯಿಚ್ಛೆ. ಯಾವುದೋ ರಾತ್ರಿ ಸ್ವಲ್ಪ ಜಾಸ್ತಿಯೇ ಕುಡಿದು ಮನೆಗೆ ಹೋಗಿದ್ದ ಸಂಕ್ರು ಬೆಳಗಾಗುವಷ್ಟರಲ್ಲಿ ಯಾತ್ರೆ ಮುಗಿಸಿಬಿಟ್ಟಿದ್ದನಂತೆ. ಶಣ್ತಂಗಿ ಈಗ ಒಬ್ಬಂಟಿ; ಆಕೆಯಿಂದ ಕೆಲಸಮಾಡಿಸುತ್ತಿಲ್ಲ-ಹಾಗೆ ತಿಳಿಯಬೇಡಿ. ಆಕೆಗೆ ಆಗಾಗ ಸ್ವಲ್ಪ ಹಣ ಅದೂ ಇದೂ ಅಂತ ಕೊಡುವುದಿದೆ. ಆಕೆಯೆ ಜೊತೆಗಾಗಿ ಆಕೆಯ ಹತ್ತಿರದ ಬಂಧುವೊಬ್ಬರ ಮಗ ಮತ್ತಾತನ ಹೆಂಡತಿ ಇದ್ದಾರೆ. ಹಬ್ಬ-ಹರಿದಿನ, ವಿಶೇಷ ದಿನಗಳಲ್ಲಿ, ಕಾರ್ಯ-ಕಟ್ಲೆ ಏನಾದ್ರೂ ಇದ್ರೆ ಹೇಳಿ ಕಳಿಸ್ತೇವೆ; ಬಂದು ಊಟಮಾಡಿ ಒಂದಷ್ಟು ಹೊತ್ತು ಮಾತನಾಡಿಕೊಂಡು, ಸ್ವಲ್ಪ ಹಣ ತೆಗೆದುಕೊಂಡು ಮರಳಿ ಹೋಗುತ್ತಾಳೆ.

ದೀಪಾವಳಿಗೆ ಈಗ ಮೊದಲಿನಂತಹ ಅಮಿತೋತ್ಸಾಹ ಇಲ್ಲ. ಆಗಿನಂತೇ ಈಗ ಕೊಟ್ಟಿಗೆಯಲ್ಲಿ ೩೪-೩೫ ದನಗಳ ಹಿಂಡಿಲ್ಲ. ಪೂಜೆಯ ಸಮಯಕ್ಕೆ ಸರಿಯಾಗಿ ಬಂದುನಿಲ್ಲುವ ಸಂಕ್ರು-ತಂಡದವರಿಲ್ಲ. ನರಕ ಚತುರ್ದಶಿಗೂ ಮುನ್ನಾದಿನದ ರಾತ್ರಿ ಹಂಡೆತೊಳೆದು ಕೆಮ್ಮಣ್ಣು-ಶೇಡಿ ಬಳಿದು, ಶಿಂಡ್ಲೆ ಬಳ್ಳಿಯನ್ನು ಹಂಡೆಯ ಕಂಟಕ್ಕೆ ಹಾಕಿ, ಉರಿವ ಕುಂಟೆಯ ಒಲೆಯಮೇಲೆ ನೀರು ಕಾಯಿಸುವುದು, ಚತುರ್ದಶಿಯ ಬೆಳಗಿನ ಜಾವ ಹಿರಿಯರಿಂದ ಎಣ್ಣೆ ಹನಿಸಿಕೊಂಡು, ಮಂಗಲಾಕ್ಷತೆ ಎರಚಿಸಿಕೊಂಡು, ಆರತಿ ಬೆಳಗಿಸಿಕೊಂಡು ರಾಜಕುಮಾರರಂತೇ ಅಭ್ಯಂಗಕ್ಕೆ ಅಣಿಯಾಗುತ್ತಿದ್ದ ಆ ದಿನಗಳು ಇತಿಹಾಸದ ಅಧ್ಯಾಯಗಳಾದಂತೇ ಅನಿಸುತ್ತಿವೆ. ಅಭ್ಯಂಗ ಪೂರೈಸಿ ಬಂದವರಿಗೆ ಹುಣಿಸೇಹಣ್ಣಿನ ಪಾನಕ, ತಿನ್ನಲು ಅವಲಕ್ಕಿ ಮೊಸರು ನೀಡುತ್ತಿದ್ದುದರ ಸಿಹಿನೆನಪು ಪ್ರತೀ ದೀಪಾವಳಿಯ ಸಂದರ್ಭ ಕಾಡುತ್ತದೆ. ಅಮ್ಮ-ಅಪ್ಪ ಎಲ್ಲರೂ ಇದ್ದರೂ ಅಜ್ಜನ ಮಂತ್ರ- ಅಜ್ಜಿಯ ಹಾಡು ಕೇಳಿಸುವುದಿಲ್ಲ. ಕಾಲಗರ್ಭದಲ್ಲಿ ಮರೆಯಾಗಿ ಹೋದ ಕೆಲವು ವ್ಯಕ್ತಿಗಳು ನಮ್ಮೊಟ್ಟಿಗೇ ಇದ್ದಿದ್ದರೆ ಎಂಬ ಭಾವ ಹುಟ್ಟಿ ತೊರೆ-ನದಿ-ಮಹಾನದಿಯಾಗಿ ತಲೆತುಂಬಿಕೊಳ್ಳುತ್ತದೆ. ನಗರಜೀವನದ ಅನಿವಾರ್ಯ ವೇಳಾಪಟ್ಟಿಯಲ್ಲಿ ಬಂಧಿಯಾಗಿರುವ ನಮಗೆ ಕೆಲವೊಮ್ಮೆ ಹೋಗಿಬರಲೂ ಬಿಡುವಿರದೇ ಇದ್ದಲ್ಲೇ ದೀಪಾವಳಿ ಆಚರಿಸುವಂತಾಗಿದೆ. ನಗರದ ಬೀದಿಗಳಲ್ಲಿ ಎತ್ತೆತ್ತರಕ್ಕೆ ಹಾರಿಸುವ ಪಟಾಕಿಗಳು ನಮ್ಮನ್ನು ಅಣಕಿಸುತ್ತವೋ ಎಂಬಂತಾಗಿಬಿಟ್ಟಿದೆ. ಆ ನೆನಪಲ್ಲೇ ದೀಪಗಳನ್ನು ಹತ್ತಿಸುತ್ತಾ ಕಳೆದು ಕೊಂಡ ಅವರನ್ನೆಲ್ಲಾ ನೆನೆದು ಆಕಾಶಬುಟ್ಟಿಯಲ್ಲಿ ದೀಪ ಬೆಳಗುವುದೇ ಮಾರ್ಗವಾಗಿದೆ; ಬದುಕಿನ ಸಹಜ ಘಟ್ಟವಾಗಿದೆ.