ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 7, 2011

ಅತ್ಯಭೂತಪೂರ್ವ ಮಂಗಳ ಸನ್ನಿವೇಶಅತ್ಯಭೂತಪೂರ್ವ ಮಂಗಳ ಸನ್ನಿವೇಶ

ಕನ್ನಡದ ಮನೆಯಂಗಳದಲ್ಲಿ ನಿಜವಾಗಲೂ ಎಂದೋ ಆಗಬೇಕಿದ್ದ ಉಚ್ಛಕಾರ್ಯವೊಂದು ಸುಸೂತ್ರವಾಗಿ ಮತ್ತು ಸಮರ್ಪಕವಗಿ ನಡೆಯಿತು: ಅದೇ ೭೭ನೇ ಕನ್ನಡ ನುಡಿ ತೇರು. ಕನ್ನಡ ತನ್ನತನವನ್ನು ಕಳೆದುಕೊಂಡು ಸಮ್ಮಿಶ್ರ ಸರಕಾರದಂತೇ ಸಮ್ಮಿಶ್ರ ಭಾಷೆಯಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಯಾವುದೋ ದೇಶದ, ರಾಜ್ಯಗಳ ಜನರು ಬಂದು-ಇಲ್ಲಿ ನೆಲೆನಿಂತು ತಮಗೆ ಬೇಕಾದ ಬೇಳೆಬೇಯಿಸಿಕೊಂಡು ಒತ್ತಾಯದಿಂದ ತಮ್ಮೆಲ್ಲರ ಭಾಷೆಯನ್ನು ಕನ್ನಡಿಗರಿಗೆ ಹೇರುತ್ತಿರುವ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿರುವ ಉತ್ತಮ ಕೆಲಸವೊಂದನ್ನು ಮಾಡಿದೆ ಎಂಬುದು ಸ್ತುತ್ಯಾರ್ಹ.ರಾಜ್ಯಗಳ ವಿಂಗಡಣೆಯಾಗಿ ಎಲ್ಲರೂ ಭಾಷಾವಾರು ತಂತಮ್ಮ ಜಾಗವನ್ನು ಭದ್ರಪಡಿಸಿಕೊಂಡರೂ ಬೇರೇ ಭಾಷೆಗಳವರ ಬಗ್ಗೆ ಮಲತಾಯ ಧೋರಣೆ ತಳೆಯದ ಸಹಿಷ್ಣುತೆಯನ್ನು ಒಗ್ಗಿಸಿಕೊಂಡು ಸಂಯಮದಿಂದಲೂ ಸೌಜನ್ಯದಿಂದಲೂ ನಡೆದ ಏಕೈಕ ರಾಜ್ಯವೆಂದರೆ ಅದು ಕನ್ನಡನೆಲ-ಕರ್ನಾಟಕ.

ಯಾವುದೇ ಕಾರ್ಯ ಯಶಸ್ವಿಯಾದಗಲೂ ಅದರ ಬಗ್ಗೆ ಹೇಳುವವರು ಕಮ್ಮಿ ಇರುತ್ತಾರೆ. ಅದೇ ಬೃಹತ್ ಕಾರ್ಯವೊಂದರಲ್ಲಿ ಕಿಂಚಿತ್ತು ಕೊರತೆ ಕಂಡರೂ ಎಲ್ಲರೂ ಆಡುವವರೇ. ಹಿಂದಿನ ನನ್ನ ಲೇಖನದಲ್ಲಿ ನಾನು ಕೆಲವು ನ್ಯೂನತೆಗಳನ್ನು ನೆನಪಿಸಿದ್ದೇನೆಯೇ ಹೊರತು ಅದರ ಬಗ್ಗೆ ವಿವಾದವನ್ನು ಹುಟ್ಟಿಸುವ ಮನಸ್ಸಿನಿಂದ ಎಂದೂ ಬರೆಯಲಿಲ್ಲ. ಪರಿಷತ್ತಿನ ಸಾಮನ್ಯ ಸದಸ್ಯರು ಬಯಸುವುದು ಕೊನೇಪಕ್ಷ ತಮಗೊಂದು ಮಾಹಿತಿ ಪತ್ರ ತಲ್ಪಲಿ ಎಂಬುದು. ಅದರ ಕುರಿತು ಸದಸ್ಯರೊಬ್ಬರು ದೂರವಾಣಿಯಲ್ಲಿ ಮಾತನಾಡಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದರಿಂದ ಅದನ್ನೇ ಬರೆದಿದ್ದೇನೆ. ಆದರೆ ನನಗೆ ಸಭೆಯಲ್ಲಿ ಗೊತ್ತಾಗಿದ್ದು ನಿಜಕ್ಕೂ ಆಶ್ಚರ್ಯಕರ ವಿಷಯ. "೪೦ ವರ್ಷಗಳ ಹಿಂದಿನ ಪರಿಷತ್ತಿನ ಸದಸ್ಯರ ಸಂಖ್ಯೆ ಕೇವಲ ೫-೬೦೦೦ -ಈಗ ಅದು ಒಂದು ಲಕ್ಷದ ಹದಿನೇಳುಸಾವಿರ. ಆಗಿನ ಪರಿಷತ್ತಿನಲ್ಲಿ ಕೆಲಸಗಾರರ ಸಂಖ್ಯೆ ಇದ್ದದ್ದು ನೂರಾರು ಆದರೆ ಇಂದು ಬರೇ ಹದಿನೇಳು. ಇಂದಿನ ಇರುವ ಹದಿನೇಳು ಜನರಲ್ಲಿ ಯಾರು ವ್ಯವಸ್ಥಾಪಕರು ಯಾರು ಕಸಗುಡಿಸುವವರು ಯಾರು ಗುಮಾಸ್ತೆ ಇದ್ಯಾವುದೂ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಬದಲಿಗೆ ಎಲ್ಲರೂ ಎಲ್ಲಾ ಕೆಲಸವನ್ನೂ ಹಂಚಿಕೊಂಡು ಮಾಡುತ್ತಿರುವುದರಿಂದ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ." --ಇದೆಲ್ಲಾ ಅಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಅವರೇ ಹೇಳಿದ್ದು. ಕೇವಲ ಹದಿನೇಳು ಜನರ ಕೇಂದ್ರ ಪರಿಷತ್ತು ೬ ಕೋಟಿ ಜನರ ಪ್ರತಿನಿಧಿಗಳಾಗಿ ಈ ಸಮಾರಂಭಕ್ಕೆ ತಯಾರಿ ನಡೆಸುವಾಗ ಸಹಜವಾಗಿ ಒತ್ತಡಗಳಲ್ಲಿ ಕೆಲವು ಚಿಕ್ಕಪುಟ್ಟ ನ್ಯೂನತೆಗಳು ಕಂಡರೂ ಇದು ನಿಜಕ್ಕೂ ಒಂದು ಸಾಧನೆಯೇ ಸರಿ.

ಯಾವುದೇ ಕಾರ್ಯವನ್ನು ಹೊರಗೆ ನಿಂತು ನೋಡುವುದು, ದೂಷಿಸುವುದು ತುಂಬಾ ಸುಲಭದ ಕೆಲಸ. ಅದೇ ಕಾರ್ಯಕರ್ತರ ಸ್ಥಾನದಲ್ಲಿ ನಿಂತು ನಿರ್ವಹಿಸಿದಾಗ ಮಾತ್ರ ಅದರ ಕಷ್ಟಕೋಟಲೆಗಳು ಅನುಭವ ವೇದ್ಯ. ಇಂತಹ ಅಕ್ಷರ ಸಮ್ಮೇಳನಕ್ಕೆ ಹೋಗುವಾಗ ಜ್ಞಾನದಾಹಿಗಳಾಗಿ ಹೋಗಬೇಕೇ ವಿನಃ ಹೊಟ್ಟೆತುಂಬಿಸಿಕೊಂಡು ಬರಲು ಬರಿದೇ ಏನಿದೆಯೆಂದು ವಿಹರಿಸಿ ಬರಲು ಇದು ಸಾದಾ ಸೀದಾ ಜಾತ್ರೆಯಲ್ಲ. ಕೆಲವರಂತೂ ಕೂಗಾಡಿದ್ದನ್ನು ಮಾಧ್ಯಮವಾಹಿನಿಗಳಲ್ಲಿ ಗಮನಿಸಿದಾಗ ಅನಿಸಿದ್ದು ಅಂಥವರು ಬರೇ ಊಟಕ್ಕಾಗೇ ಅಲ್ಲಿಗೆ ಬಂದಿದ್ದರೇ ಎಂಬುದು! ಕಂತ್ರಾಟುದಾರ ಯಾರೇ ಇರಲಿ ವ್ಯವಸ್ಥೆ ಯಾವುದೇ ಇರಲಿ ಲಕ್ಷ ಅಥವಾ ಅಧಿಕ ಜನರಿಗೆ ಏಕಕಾಲಕ್ಕೆ ಭೋಜನವ್ಯವಸ್ಥೆ ಏರ್ಪಾಟುಮಾಡುವುದು ಹುಡುಗಾಟಿಕೆಯ ಮಾತೇ ? ಹಣವನ್ನು ಕೋಟಿಯಲ್ಲಿ ಎಣಿಸುವುದಾದರೂ ಸುಲಭವಾಗಬಹುದು ಆದರೆ ಈ ಕೆಲಸ ಅಷ್ಟೇನೂ ಸುಲಭಸಾಧ್ಯವಲ್ಲ ಅನಿಸುತ್ತಿದೆ; ಆದರೂ ತಕ್ಕಮಟ್ಟಿಗೆ ಮಾಡಿದ್ದಾರೆ.

ಪ್ರತಿನಿಧಿಗಳಾಗಿ ಹಲವು ಪ್ರದೇಶಗಳಿಂದ ಬರುವ ಜನರೂ ಸಮ್ಮೇಳನದ ಗಾತ್ರ ಮತ್ತು ಗುರುತರ ಜವಬ್ದಾರಿಗಳನ್ನರಿತು ಅವರದೇ ಆದ ಪರ್ಯಾಯ ವ್ಯವಸ್ಥೆಯೊಂದನ್ನು ಇಟ್ಟುಕೊಂಡಿದ್ದರೇ ಉತ್ತಮ. ಕನ್ನಡ ನುಡಿತೇರಿನಲ್ಲಿ ಭಾಗವಹಿಸಿದ ’ಪ್ರತಿನಿಧಿಗಳಿಗಷ್ಟೇ ಭೋಜನ ವ್ಯವಸ್ಥೆ ಮಿಕ್ಕಿದವರಿಗೆ ಇಲ್ಲಾ’ ಎನ್ನುವ ಮನೋಭಾವ ಕನ್ನಡಿಗರದಲ್ಲ. ಕನ್ನಡಿಗರು ಎಷ್ಟೆಂದರೂ ಅತಿಥಿಸತ್ಕಾರಕ್ಕೆ ಆದ್ಯತೆ ಕೊಡುವವರು. ಹೀಗಿರುವಾಗ ಲಕ್ಷಾಂತರ ಜನರು ಊಟಮಾಡುವಾಗ ಕೆಲವು ಪ್ರತಿನಿಧಿಗಳಿಗೇ ಮಧ್ಯೆ ಆಹಾರ ಪೂರೈಕೆಯಾಗಲಿಲ್ಲ ಎಂಬುದನ್ನು ಅವರು ತೋಡಿಕೊಂಡಿರುವುದು ನಿಜಕ್ಕೂ ವಿಷಾದನೀಯ, ಮತ್ತು ನಗಣ್ಯ.

ಯಾವ ಮಹಾನಗರ ಕೇವಲ ಕನ್ನಡೆತರರ ಔದ್ಯೋಗಿಕ ಕೇಂದ್ರವಾಗಿ ಬೆಳೆದು ಜಾಗತಿಕ ಮಟ್ಟದಲ್ಲಿ ತಂತ್ರಾಂಶ ಮತ್ತು ಜೈವಿಕ ತಂತ್ರಜ್ಞಾನಕ್ಕಾಗಿ ಹೆಸರುಮಾಡಿದೆಯೋ, ಯಾವ ಇನ್ಫೋಸಿಸ್ ಎಂಬ ಕಂಪೆನಿ ತಾನು ಹುಟ್ಟಿದ ನೆಲದ ಮಹತ್ವಸಾರುವ ರಾಷ್ಟ್ರಗೀತೆಯನ್ನು ತನ್ನ ಕಟ್ಟಡದಲ್ಲಿ ತನ್ನ ಉದ್ಯೋಗಿಗಳು ಬೇಕಾಬಿಟ್ಟಿ ಹೀಯಾಳಿಸಿ ಅಣಕವಾಡಿದ್ದನ್ನು ಕ್ಷಮಿಸಿತೋ ಅದೇ ಮಹಾನಗರಿಯ ನೆಲದಲ್ಲಿ ಅತ್ಯಭೂತಪೂರ್ವವಾಗಿ ಈ ಸಮ್ಮೇಳನ ನಡೆಯಿತು ಎಂಬುದು ಅತ್ಯಂತ ಖುಷಿತಂದಿರುವ ಸಮಾಧಾನತಂದಿರುವ ವಿಷಯ. ಇದೇ ನೆಲದಲ್ಲಿ ಹುಟ್ಟಿಬೆಳೆದು ಜಗದ್ವ್ಯಾಪಿಯಾಗಿ ವಿಸ್ತರಿಸಿಕೊಂಡ ಅನೇಕ ಖಾಸಗೀ ಸಂಸ್ಥೆಗಳು ನಮ್ಮ ಕನ್ನಡಕ್ಕೆ ಕೊಟ್ಟಿರುವ ಕಾಣಿಕೆ ಮಾತ್ರ ಶೂನ್ಯ. ಈ ವಿಷಯದಲ್ಲಿ ತಂತ್ರಾಂಶದ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಕೂಡ ಅಕ್ಷಮ್ಯ ಅಪರಧವನ್ನೇ ಮಾಡಿದೆ ಎಂದರೆ ತಪ್ಪಲ್ಲ. ಕನ್ನಡ ಜನತೆ ಕೇವಲ ಇಂದಿನ ಇನ್ಫೋಸಿಸ್ ಮತ್ತಿತರ ಐಟಿ ಬಿಟಿ ಕಂಪನಿಗಳ ಭಿಕ್ಷೆಯಿಂದ ಬದುಕಿಲ್ಲ. ಕನ್ನಡ ಜನತೆ ಮೊದಲೂ ಬದುಕಿದ್ದರು ಈಗಲೂ ಬದುಕಿದ್ದಾರೆ. ಕನ್ನಡ ಜನತೆಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಬೆಳೆದ ಅಂತಹ ಸಂಸ್ಥೆಗಳು ಕನ್ನಡ ನೆಲಕ್ಕಾಗಿಯೇ ಮೀಸಲಾದ ಯವುದದರೂ ಘನಕಾರ್ಯ ಮಾಡಿದ್ದರೆ ಹೇಳಿ.

ತಮಗೆ ಅನುಕೂಲವಾಗುವ ಕಡೆ ಕ್ಯಾಂಪಸ್ ತೆರೆಯುವುದು. ಪರಿಣತರಲ್ಲಿ ಹೆಚ್ಚಿನ ಸಂಬಳಪಡೆಯುವವರನ್ನು ನಿಧಾನವಾಗಿ ಮನೆಗೆ ಕಳಿಸಿ ಹೊಸಬರನ್ನು ಆರಿಸಿಕೊಳ್ಳುವುದು ಅವುಗಳ ಆದ್ಯತೆ-ಅದು ಅವರವರ ಅನುಕೂಲ ಮಾಡಿಕೊಳ್ಳಲಿ ಬಿಡಿ. ಆದರೆ ನಾವು ತೆರಿಗೆ ಕಟ್ಟಿದ್ದೇವೆ ಎನ್ನುವ ಜನ ಯಾವಗಿನಿಂದ ಎಷ್ಟೆಷ್ಟು ಲಾಭ ಗಳಿಸಿದರು ಎಷ್ಟೆಷ್ಟು ತೆರಿಗೆ ಕೊಟ್ಟರು ಎಂಬುದು ಮುಖ್ಯ. ಅಷ್ಟಕ್ಕೂ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ತಂತ್ರಾಂಶ ತಯಾರಕರಿಗೆ ತೆರಿಗೆ ವಿನಾಯತಿ ಇತ್ತು. ಕರ್ನಾಟಕದ ಬಡ ಮೆಕಾನಿಕಲ್ ಅಥವಾ ಇನ್ನಿತರ ರಂಗಗಳ ಕಂಪನಿಗಳು ದೊಡ್ಡ ಲಾಭದ ಹಾದಿ ಬಹುದೂರವೇ ಇದ್ದರೂ ತೆರಿಗೆ ಪಾವತಿಸಿದವು. ಆದರೆ ಬಹುದೊಡ್ಡ ಲಾಭವನ್ನು ಹೇರಳವಾಗಿ ಎಣಿಸಿಕೊಂಡ ತಂತ್ರಾಂಶ ಕಂಪನಿಗಳು ತೆರಿಗೆಯಿಂದ ಮುಕ್ತಗೊಂಡವು! ಎಂತಹ ವಿಪರ್ಯಾಸ ಎನಿಸಿವುದಿಲ್ಲವೇ? ಈಗ ತರಾವರಿ ರಸ್ತೆಕೊಡಿ, ಮತ್ತೊಂದು ಕೊಡಿ ಇಲ್ಲದಿದ್ದರೆ ನಾವು ಪುಣೆಗೋ ಮತ್ತೆಲ್ಲಿಗೋ ಹೋಗಿಬಿಡುತ್ತೇವೆ ಎಂದು ಗಂಡ ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವಂತೇ ಪೀಡಿಸುವ ಇಂಥವರು ಇಲ್ಲಿದ್ದರೆಷ್ಟು ಅಲ್ಲಿಗೆ ಹೋದರೆಷ್ಟು. ಕನ್ನಡ ಜನತೆ ಇನ್ನಾದರೂ ಇಂತಹ ’ಬುದ್ಧಿಜೀವಿಗಳನ್ನು’ ಚಂದ್ರಲೋಕದಿಂದ ಕರೆತಂದು ಭೂಮಿಗೆ ಕರೆತಂದು ಸೂರ್ಯನ ಬಿಸಿಲು ತಾಗಿಸಬೇಕು. ಅಂದರೇನೇ ಅವರಿಗೆ ಕನ್ನಡದ ಅಭಿಮಾನ ಅನಿವಾರ್ಯವಾಗಿ ಬರುತ್ತದೆ. ಕನ್ನಡ ಜನತೆಯಲ್ಲಿ ಅರ್ಹತೆಯುಳ್ಳ ವ್ಯಕ್ತಿಗಳಿಲ್ಲವೇ? ಇಲ್ಲಿನವರಿಗೇ ಉದ್ಯೋಗದಲ್ಲಿ ಆದ್ಯತೆ ಸಿಗಲಿ, ಅದಿಲ್ಲಾ ಕಂಪನಿಗಳು ಜಾಗ ಖಾಲಿಮಾಡಲಿ.

ನಮ್ಮನ್ನಾಳುವ ದೊರೆಗಳಲ್ಲೂ ಒಂದು ನ್ಯೂನತೆಯಿದೆ. ಉಂಡು ಬೋರಲು ಬಿದ್ದು ನಿದ್ದೆಮಾಡುವಂತೇ ನಮ್ಮ ದೊರೆಗಳು ಒಂದಷ್ಟು ತಮ್ಮ ’ಹೊಟ್ಟೆ’ ತುಂಬಿದಮೇಲೆ ನಿದ್ದೆ ಮಾಡಿಬಿಡುತ್ತಾರೆ. ಎಲ್ಲಾದರೂ ಚುನಾವಣೆ ಅದೂ ಇದೂ ಸಮ್ಮೇಳನ ಬಂದರೆ ಅಲ್ಲಿಗೆ ಹೋಗಿ ವೇದಿಕೆಗೆ ತಕ್ಕ ಹಾಗೇ ಒಂದಷ್ಟು ವದರಿವಿಟ್ಟರೆ ಮುಗಿಯಿತು. ಇನ್ನೂ ಕೆಲವರು ಕುಡಿದ ಮತ್ತಿನಲ್ಲಿ ಕುಡುಕ ಹಳವಳಿಸಿದಂತೇ "ಕನ್ನಡ ನಮ್ ಭಾಷೆಯಾಬೇಕು ಕನ್ನಡ ನಮ್ ತಾಯಿ " ಎಂದೆಲ್ಲಾ ಹೇಳುತ್ತಿರುತ್ತಾರೆಯೇ ಶಿವಾಯಿ ಕನ್ನಡವನ್ನು ಅಧಿಕಾರಯುತವಾಗಿ ಅಳವಡಿಸಲು ಯಾವಯಾವ ಕೆಲಸಗಳು ಬೇಕೋ ಅದನ್ನು ಮಾಡಲು ಹೋಗುವುದಿಲ್ಲ. ಇದಕ್ಕೆ ಕಾರಣವೊಂದಿದೆ. ದೊರೆಗಳ ಜೊತೆಗಿರುವ ಅಧಿಕಾರಿಗಳಲ್ಲಿ ಅನೇಕರು ವಿವಿಧ ರಾಜ್ಯಗಳಿಂದ ಬಂದಿರುತ್ತಾರೆ. ಅವರುಗಳಿಗೆ ಕನ್ನಡ ಬರುವುದಿಲ್ಲ. ಇವರ ಹರುಮುರುಕು ಇಂಗ್ಲೀಷನ್ನು ಅವರುಗಳು ಡಾಕ್ಟರುಗಳ ಕೈಬರಹವನ್ನು ಔಷಧ ಅಂಗಡಿಯವರು ಅರ್ಥವಿಸುವಂತೇ ಅರ್ಥವಿಸುತ್ತಾರೆ. ಒಂದೊಮ್ಮೆ ಕನ್ನಡದಲ್ಲೇ ಎಲ್ಲವನ್ನೂ ಜಾರಿಗೊಳಿಸಿಬಿಟ್ಟರೆ ನಮ್ಮ ದೊರೆಗಳಿಗಳಲ್ಲಿ ಹಲವರಿಗೆ ಕನ್ನಡದ ಬಹುತೇಕ ಉಚ್ಛಶಬ್ದಗಾಳು ತಿಳಿದಿಲ್ಲ! ಅಧಿಕಾರಿಗಳಿಗೆಲ್ಲಾ ಕನ್ನಡ ಕಲಿಸುತ್ತಾ ಇವರೂ ಹೊಸದಾಗಿ ಕನ್ನಡ ಕಲಿಯಬೇಕಾದ ಪ್ರಮೇಯ ಬರುತ್ತದೆ. ಹೀಗಾಗಿ ’ಏನಾದರೂ ಮಾಡಿಕೊಂಡು ಹೋಗಲಿ’ ಎಂದು ಸುಮ್ಮನಾಗಿಬಿಡುತ್ತಾರೆ. ಇಲ್ಲೇ ಎಡವಟ್ಟಾಗುತ್ತಿದೆ.

ಆಳುವ ದೊರೆಗಳಿಗೆ ಹಿಂದೆಲ್ಲಾ ಅದಕ್ಕೆಂದೇ ವಿದ್ಯಾಭ್ಯಾಸವನ್ನು ಅವರ ಪೂರ್ವಜರು ಅತೀ ಕಾಳಜಿಯಿಂದ ಗುರುಕುಲದಲ್ಲಿ ನಡೆಸುತ್ತಿದ್ದರು. ಇಂದು ಗುರುಕುಲವೂ ಇಲ್ಲ; ಇದ್ದರೆ ಹೋಗುವವರೂ ಇಲ್ಲ. ಇಂದಿನ ನಮ್ಮ ದೊರೆಗಳಲ್ಲಿ ಬಹುತೇಕರು ಕ್ರಿಮಿನಲ್ ಮೊಕದ್ದಮೆಗಳ ಸರದಾರರಾಗಿರುತ್ತಾರೆ. ಯಾವ ಸ್ಥಾನದಲ್ಲಿ ಜಗಳ-ದೊಂಬಿ,ಕೈಕೈ ಮಿಲಾಯಿಸುವಿಕೆ ನಡೆಯಬಾರದೋ ಅಂತಹ ಜಾಗದಲ್ಲಿ ಪ್ರಜಾಪ್ರಭುತ್ವದ ’ಕುರುಡುಕಾಂಚಾಣದ ತಾಕತ್ತು’ ಎದ್ದು ಕುಣಿಯುತ್ತದೆ. ಇದನ್ನಿಲ್ಲಿ ಪ್ರಸ್ತಾಪಿಸಿದ್ದು ಏಕೆಂದರೆ ಅಕ್ಷರಕ್ಕೂ ಆಳುವಿಕೆಗೂ ಅನ್ಯೋನ್ಯ ಸಂಬಂಧವಿದೆ. ನಿಜವಾದ ’ಅಕ್ಷರಿಗಳು’ ಆಳುವ ದೊರೆಗಳಾದರೆ ಅಲ್ಲಿ ಈ ತೆರನಾದ ಹೊಡೆದಾಟ ಗುದ್ದಾಟ ಇರುತ್ತಿರಲಿಲ್ಲ. ಇವತ್ತಿನ ಈ ಎಲ್ಲಾ ಹೊಡೆದಾಟಗಳಿಗೂ ಜ್ಞಾನಿಗಳ ಮರ್ಗದರ್ಶನ ಪಡೆಯದಿರುವುದೇ ಕಾರಣವಾಗಿದೆ.ಜ್ಞಾನಿಗಳು ಬಂದರೆ ಅಲ್ಲಿ ಅವರು ಎಲ್ಲರಿಗೂ ನಿಜವಾಗಿ ಸಮಪಾಲು-ಸಹಬಾಳ್ವೆ ಬೋಧಿಸುತ್ತಾರೆ. ಆಗ ಕುದುರೆ ವ್ಯಾಪಾರಕ್ಕೋ ಸ್ವಿಸ್ ಬ್ಯಾಂಕಿನ ವ್ಯವಹರಕ್ಕೋ ಅವಕಾಶವಾಗುವುದಿಲ್ಲ. ಹೀಗಾಗಿ ಜ್ಞಾನಿಗಳನ್ನು ಕಡೆಗಣಿಸಿಬಿಟ್ಟರೆ ತಮ್ಮ ಬೇಳೆ ಬೇಯುತ್ತದಲ್ಲ ಎಂಬುದು ರಾಜಕಾರಣಿಗಳ ಹಂಬಲ! ಎಲ್ಲೋ ಕೆಲವರು ಉತ್ತಮ ರಾಜಕಾರಣಿಗಳೂ ಇರಬಹುದು. ಆದರೆ ಬಹುತೇಕರು ಹಣದ ಥೈಲಿಯನ್ನು ಹಿಡಿದೇ ಅದನ್ನು ವೃದ್ಧಿಮಾಡಲು ಬಯಸುವವರು. ಅವರಿಗೆ ಕನ್ನಡವೋ ಮರಾಠಿಯೋ ಥೈಲಿ ತುಂಬಿದ್ದೇ ಗೊತ್ತು!

ಇರಲಿ ಅಕ್ಷರ ಜಾತ್ರೆ ಸಮರ್ಪಕವಾಗಿ ಸಂಪನ್ನವಾಯಿತು. ೮ ಕೋಟಿ ಮೌಲ್ಯದ ಕನ್ನಡ ಪುಸ್ತಕಗಳು ಮಾರಲ್ಪಟ್ಟವು. ಬಂದ ಮೂರು ಲಕ್ಷಕ್ಕೂ ಅಧಿಕ ಮಂದಿ ಒಳ್ಳೆಯ ನೆನಪನ್ನು ಹೊತ್ತು ಮರಳಿದರು. ಕೋಟಿ ಕೋಟಿ ಕನ್ನಡಿಗರು ಮಾಧ್ಯಮಗಳಲ್ಲಿ ವೀಕ್ಷಿಸಿದರು. ಇಂತಹ ಹಬ್ಬ ಹಲವು ಹತ್ತು ನಡೆಯಲಿ. ಮುಂಬರುವ ವಿಶ್ವಕನ್ನಡ ಸಮ್ಮೇಳನಕ್ಕೂ ಶುಭವನ್ನು ಕೋರಿ ನಿಮ್ಮಿಂದ ಈಗೊಮ್ಮೆ ಬೀಳ್ಕೊಳ್ಳುತ್ತೇನೆ, ಹಾರ್ದಿಕ ಶುಭಕಾಮನೆಗಳು,

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗಲ್ಲಿಗಲ್ಲಿಗೆ.