ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, September 16, 2011

" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "


" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "

ಕಾರಿರುಳ ಕತ್ತಲಲ್ಲಿ ಜೀರುಂಡೆಗಳ ಕೂಗು, ಬಾವಲಿಗಳ ಹಾರಾಟ, ಕಾಡುಪ್ರಾಣಿಗಳ ಸರಸರ ಸಂಚಲನ, ಅಲ್ಲಲ್ಲಿ ನರಿಗಳ ಊಳು, ಕರಡಿಗಳೂ ಇದ್ದಿರಬಹುದಾದ ಪರಿಸರ-ಗೊತ್ತಿಲ್ಲದ ಸಂಗತಿ ! --ಇಂಥಾ ಮಣ್ಣರಸ್ತೆಯಲ್ಲಿ ಯಾವ ಬೆಳಕಿನ ಸಹಾಯವೂ ಇಲ್ಲದ ಆ ಕತ್ತಲಲ್ಲಿ ಬಾಳದೀವಿಗೆಯಾದ ಜ್ಞಾನನದೀವಿಗೆಯನ್ನು ಬೆಳಗುವ ಸಲುವಾಗಿ, ವ್ಯಾಸಂಗಮಾಡುತ್ತಿರುವ ವಿದ್ಯಾಲಯಕ್ಕೆ ತನ್ನ ಓದಿನಲೆಕ್ಕದ ಹಣಪಾವತಿಸುವ ಸಲುವಾಗಿ ಆ ಹಣವನ್ನು ಪಡೆಯಲು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ನಡೆದಿದ್ದ ವಿದ್ಯಾರ್ಥಿಯ ಮನದಲ್ಲಿ ಕಠಿಣ ನಿರ್ಧಾರವೊಂದಿತ್ತು---ತಾನು ಪ್ರಯತ್ನಿಸಿ ಹಲವರ ಬಾಳಿಗೆ ಬೆಳಕಾಗುವುದು ! ಅದೇ ದೃಢವಿಶ್ವಾಸ ಅದೇ ಅಚಲ ನಂಬಿಕೆ ಅದೇ ಸಾಧಿಸುವ ಛಲ ಹುಡುಗನನ್ನು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೂ ಅಲ್ಲಿಂದ ಮರಳಿ ಬೆಂಗಳೂರಿಗೂ ನಡೆದೇ ಸಾಗುವಂತೇ ಮಾಡಿತ್ತು. ವಿದ್ಯಾರ್ಜನೆಗೆ ಮನೆಯಲ್ಲಿ ಪಡೆದ ಶುಲ್ಕದ ಹೊರತಾಗಿ ಬಿಡಿಗಾಸೂ ಇಲ್ಲದ ಬಡತನಕ್ಕೆ ಆತ ಮರುಗಲಿಲ್ಲ, ಬದಲಾಗಿ ಅದರಿಂದ ನೇರಮಾರ್ಗದಲ್ಲಿ ಬಿಡುಗಡೆ ಬಯಸಿದರು, ಯೋಚಿಸಿದರು, ಯೋಜಿಸಿದರು, ಬೆಳೆದರು, ಹಲವರನ್ನು ಬೆಳೆಸಿದರು ಮತ್ತು ಸ್ವತಃ ತನ್ನ ಜೀವನವನ್ನೇ ದೇಶಕ್ಕಾಗಿ ರಾಜ್ಯಕ್ಕಾಗಿ ದುಡಿಸಿದರು ! ಅಂತಹ ಭಾರತದ ಸುಪುತ್ರ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಹುಟ್ಟಿ ನೂರೈವತ್ತು ವರ್ಷಗಳು ಕಳೆದುಹೋದವು !!

ಜನಸಾಮಾನ್ಯರಾದ ನಾವು ಜಲಪಾತವನ್ನು ಕಂಡರೆ " ಆಹಾಹಾ ಎಂತಹ ಸೌಂದರ್ಯ " ಎನ್ನುತ್ತಾ ಯಾರೋ ತಯಾರಿಸಿದ ಡಿಜಿಟಲ್ ಕ್ಯಾಮರಾ ಹಿಡಿದು ಕ್ಲಿಕ್ಕಿಸುತ್ತಿರುತ್ತೇವೆ ಬಿಟ್ಟರೆ ಅಂತಹದ್ದೇ ಆದ ಜೋಗ ಜಲಪಾತವನ್ನು ಕಂಡಾಗ ಈ ಮಹಾತ್ಮ ಹೇಳಿದ್ದು " ವ್ಹಾಟ್ ಎ ವೇಸ್ಟ್ " ! ಹರಿದು ಪೋಲಾಗುವ ನೀರಿನ ಶಕ್ತಿಯನ್ನೇ ಬಳಸಿ ವಿದ್ಯುತ್ತನ್ನು ತಯಾರಿಸುವ ಅತಿ ದೊಡ್ಡ ಮಟ್ಟದ ಯಂತ್ರಾಗಾರವನ್ನು ರೂಪಿಸಿದ ಸ್ಥಾಪಿಸಿದ ಆ ಮನುಷ್ಯ ಸ್ವತಃ ಅತ್ಯಂತ ಸಣಕಲು ಶರೀರಿ ಎಂಬುದನ್ನು ನೋಡಿದಾಗ ನಾವೆಷ್ಟು ದಂಗಾಗುತ್ತೇವೆ ಅಲ್ವೇ ? ಈ ರಾಜ್ಯದ ಯಾ ದೇಶದ ಯಾರನ್ನೇ ಮರೆತರೂ ವಿಶ್ವೇಶ್ವರಯ್ಯನವರನ್ನು ಮರೆಯಲು ಮತ್ತು ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಯಾಕೆಂದರೆ ದೀಪಕ್ಕೆ ’ಇದು ದೀಪ ಇರುತ್ತದೆ ’ ಎಂದು ಯಾರೂ ಹೊಸದಾಗಿ ಬೋರ್ಡುಹಾಕುವುದು ಬೇಕಾಗುವುದಿಲ್ಲ!

ಬಡತನದಲ್ಲಿ ಕಷ್ಟಪಟ್ಟು ಎಲ್ಲೆಲ್ಲೋ ಹೋಗಿ, ರಾಜರ ಕಾಲದ ಬೀದಿ ದೀಪದಲ್ಲಿ[ಹರಳೆಣ್ಣೆ ದೀಪ] ಓದಿ ಸಿವಿಲ್ ವಿಭಾಗದಲ್ಲಿ ತಾಂತ್ರಿಕ ಪದವಿಯನ್ನು ಪೂರೈಸಿದ ಶ್ರೀಯುತರು ಮೈಸೂರು ರಾಜ್ಯದಲ್ಲಿ ಅಂದಿಗೆ ಇರುವ ಕೊರತೆಗಳನ್ನು ನೀಗಿಸಲು ಯೋಜನೆಗಳನ್ನು ತನ್ನೊಳಗೇ ನಿಯೋಜಿಸಿಕೊಂಡರು. ಆ ಸಮಯದಲ್ಲಿ ಹಿ ಈಸ್ ಒನ್ ಮ್ಯಾನ್ ಆರ್ಮಿ ! ಕರ್ನಾಟಕಕ್ಕೆ ಕುಡಿಯುವ ನೀರಿನ, ವಿದ್ಯುತ್ತಿನ್ನ ಅವಶ್ಯಕತೆಯಿತ್ತು. ಹಡೆದ ಅಮ್ಮ ಮನೆಯಲ್ಲಿ " ತಮ್ಮಾ ವಿಶೂ ಜನರಿಗೆ ಕುಡಿಯಲು ನೀರನ್ನು ಪೂರೈಸುವ ಯಾವುದಾದರೂ ಕೆಲಸವನ್ನು ಮಾಡಪ್ಪಾ " ಎಂದು ಹರಸಿದ್ದರು, ಹಡೆದಮ್ಮನ ಹರಕೆಯ ಫಲ ಕಾವೇರಿ ನದಿಗೆ ಸೇತುವೆಯ ನಿರ್ಮಾಣ! ಕನ್ನಂಬಾಡಿಕಟ್ಟೆ ನಿರ್ಮಾಣಕ್ಕೂ ಮುನ್ನ ಮೈಸೂರಿಗೆ ತೆರಳಿದ್ದ ಅವರನ್ನು ಕಂಡ ರಾಜರಿಗೆ ಅನಿಸಿದ್ದು ’ಯಾವನೋ ಪೋರ ನದಿಗೆ ಗೋಡೆ ಕಟ್ಟಿ ನೀರು ಶೇಖರಿಸುತ್ತಾನಂತೆ ಎಲ್ಲಾದರೂ ಉಂಟೇ ? ’ ಎಂಬಂಥದು. ಆದರೂ ತಮ್ಮ ಸಹಜ ರಾಜಸ ಮನೋವೃತ್ತಿಯಿಂದ ರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು " ಆಗಲಿ ತಮ್ಮಾ ಇದೋ ಹಣ ನೀಡುತ್ತೇನೆ ಆದರೆ ಮತ್ತೆ ಕೇಳಬೇಡ-ಇಷ್ಟರಲ್ಲೇ ಮುಗಿಸಬೇಕು ಅಥವಾ ನಿಲ್ಲಿಸಿಬಿಡಬೇಕು ಅಲ್ಲದೇ ಇದು ಮೇಲಾಗಿ ಮೈಸೂರು ರಾಜ್ಯದ ಪ್ರಜೆಗಳ ಮಾನಾಪಮಾನದ ಪ್ರಶ್ನೆ ಅದನ್ನೇ ಪಣವಾಗಿಸಿದ್ದೇನೆ ಕಟ್ಟು ಹೋಗು " ಎಂದು ಹೇಳಿಬಿಟ್ಟರಂತೆ ! ಕಟ್ಟೆ ಪೂರ್ತಿಯಾಗುವುದಕ್ಕೂ ಮುನ್ನ ಹಣ ಖಾಲಿಯಾಯಿತು. ಮತ್ತೆ ರಾಜರನ್ನು ಕಂಡಿದ್ದಾಯ್ತು. ರಾಜರು ನೋಡುತ್ತಿದ್ದಂತೆಯೇ

" ಇನ್ನು ಹಣಕೊಡಲು ಸಾಧ್ಯವಿಲ್ಲ " ಎಂದುಬಿಟ್ಟರು.

" ಹಣವಲ್ಲ ಸ್ವಾಮೀ, ಸದ್ಯಕ್ಕೆ ಕನ್ನಡನಾಡಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿಯಿಲ್ಲ, ನಮ್ಮ ಕಟ್ಟೆ ಕಟ್ಟುವ ಆ ಪ್ರದೇಶದಲ್ಲಿ ೫-೬ ಮದ್ಯದ ಅಂಗಡಿಗಳನ್ನು ಇಡಲು ಅನುಮತಿ ಬೇಕು "

" ಅಲ್ಲಯ್ಯಾ ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧವಯ್ಯಾ ? "

" ಮಹಸ್ವಾಮೀ, ಕಟ್ಟೆ ಕಟ್ಟುವ ಕೂಲಿ ಕೆಲಸದವರು ಶನಿವಾರದ ಸಂಬಳ ಪಡೆದು ನೆರೆರಾಜ್ಯವಾದ ತಮಿಳು ಪ್ರಾಂತದಲ್ಲಿರುವ ಸೆರೆ ಅಂಗಡಿಗಳಿಗೆ ಹೋಗಿ ಅಲ್ಲಿ ಕುಡಿದು ಕಾಲಹರಣಮಾಡುತ್ತಾರೆ ಮತ್ತು ಸೋಮವಾರದ ತನಕ ನಮಗೆ ಅವರು ಮರಳಿ ಸಿಗುವುದಿಲ್ಲ. ಅವರು ದುಡಿದ ಹಣ ಇಲ್ಲೇ ಈ ರಾಜ್ಯದ ಅಂಗಡಿಯನ್ನೇ ಸೇರಿದರೆ ಅದೇ ಹಣವನ್ನು ಮರುವಿನಿಯೋಗಿಸುವುದರ ಜೊತೆಗೆ ಅವರನ್ನೂ ಇಲ್ಲೇ ಇರಿಸಿಕೊಂಡು ಜಾಸ್ತಿ ಕಾಲಹರಣವಾಗದಂತೇ ಬೇಗ ಮುಗಿಸಲು ಅನುಕೂಲವಾಗುತ್ತದೆ "

ರಾಜರು ತಲೆದೂಗಿದರು ! ಕನ್ನಂಬಾಡಿ ಎದ್ದು ನಿಂತಿತು, ಹಲವರಿಗೆ ಅನುಕೂಲವಯಿತು.

ಅವರು ಬದುಕಿದ್ದ ಕಾಲಘಟ್ಟದಲ್ಲೇ ಒಮ್ಮೆ ಕೃಷ್ಣರಾಜಸಾಗರ ಬತ್ತಿಹೋಯಿತು! ಜನರೆಲ್ಲಾ ಬೊಬ್ಬಿಟ್ಟರು, ಹಲವು ಮೇಧಾವಿಗಳು " ಏನು ಮಾಡೋದು ವಿಶ್ವೇಶ್ವರಯ್ಯನೋರೇ ? " ಎನ್ನುತ್ತಾ ಬಂದರು. ಆಗ ನಿಧಾನವಾಗಿ ಸರ್ ನೀಡಿ ಉತ್ತರ ಒಂದೇ " ಇದು ಸಕಾಲ, ದೇವರೇ ನೀಡಿದ್ದು-ಹಾಗೆಲ್ಲಾ ಮತ್ತೆ ಮತ್ತೆ ಲಭಿಸುವುದಿಲ್ಲ, ಹೋಗಿ ಜಲಾಶಯದ ಹೂಳನ್ನು ತೆಗೆಸಿಬಿಡಿ " !

೨೦೦೪ರ ಬೇಸಿಗೆಯಲ್ಲೂ ಜಲಾಶಯ ಖಾಲೀ ಆಗಿತ್ತು, ಆದರೆ ಹೂಳೆತ್ತುವ ಯಾವುದೇ ಸಾಹಸಕ್ಕೆ ಯೋಜನೆಗಳಿರಲಿ ಜಾಸ್ತಿ ನೀರು ನಿಂತರೆ ಒತ್ತಡದಿಂದ ಶತಮಾನದಷ್ಟು ಹಳತದ ಕಟ್ಟೆ ಒಡೆದರೆ ಎಂಬ ಹೆದರಿಕೆಗೆ ಯಾವ ರಾಜಕಾರಣಿಯೂ ಯಾವ ಎಂಜಿನೀಯರೂ ಮನಸ್ಸುಮಾಡಲಿಲ್ಲ! ಸರಕಾರಕ್ಕೇ ಸವಾಲು ಎಸೆಯುವ ಛಾತಿ ಇದ್ದುದು ಒಬ್ಬರಲ್ಲೇ ಅದು ಆಗಿಹೋಗಿರುವ ನಮ್ಮ ವಿಶ್ವೇಶ್ವರಯ್ಯನವರಲ್ಲಿ ಮಾತ್ರ!

ಮೈಸೂರಿನ ದಿವಾನರಾಗಿ ನೇಮಕಗೊಳ್ಳುವ ಮುನ್ನಾದಿನ ಹತ್ತಿರದ ಬಂಧು-ಮಿತ್ರ-ಆಪ್ತೇಷ್ಟರನ್ನು ಕರೆದು ಅವರು ಹೇಳಿದ್ದೇನು ಬಲ್ಲಿರೋ ? " ನಾಳೆಯಿಂದ ಮಹಾರಾಜರು ನನಗೆ ಅತ್ಯಂತ ದೊಡ್ಡ ಜವಾಬ್ದಾರಿಯೊಂದನ್ನು ಕೊಡಲಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಅದನ್ನು ಎಲ್ಲೂ ದುರುಪಯೋಗಮಾಡದಂತೇ ಇರಿ ಎನ್ನಲು ನಿಮ್ಮನ್ನೆಲ್ಲಾ ಕರೆದಿದ್ದೇನೆ " ಹೇಳಿದ್ದು ಮಾತ್ರವಲ್ಲ ದಿವಾನಖಾನೆಯಿಂದ ಹಿಡಿದು ರಾಜರ ಸರಕಾರದ ಯಾವುದೇ ಅಂಗಗಳಲ್ಲೂ ತಮ್ಮ ಕುಟುಂಬ-ಬಳಗದ ಯಾರಿಗೂ ತನ್ನ ಪ್ರಭಾವದಿಂದ ನೌಕರಿ ಕೊಡಿಸುವ ಸರ್ಕಸ್ಸು ಮಾಡಲಿಲ್ಲ. ಪ್ರತಿಭಾನ್ವಿತರಿಗೆ ಎಲ್ಲಿದ್ದರೂ ಆದ್ಯತೆಯಿದೆ ಎಂಬುದು ಅವರ ಅನಿಸಿಕೆಯಾಅಗಿತ್ತು, ಅಭಿಪ್ರಾಯವಾಗಿತ್ತು.

ಸರಕಾರದ ಬೇರೇ ವಿಭಾಗದಲ್ಲಿ ಕೆಲಸಮಡುತ್ತಿರುವಾಗ ಒಮ್ಮೆ ಮಹಾರಾಜರು ಅವರನ್ನು ಕರೆದು
" ವಿಶ್ವೇಶ್ವರಯನೋರೇ, ನೀವು ಸ್ಥಾಪಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಈಗ ನಷ್ಟದಲ್ಲಿ ನಡೆಯುತ್ತಿದೆಯಂತೆ ಅದಕ್ಕೇನಾದರೂ ಮಾಡಲು ಸಾಧ್ಯವೇ ? " ಎಂದರು. ಅಲ್ಲಿಗೆ ತೆರಳಿ ಅಲ್ಲಿನ ನ್ಯೂನತೆಗಳನ್ನು ಅವಲೋಕಿಸಿದ ಸರ್ ಎಂ.ವಿ ನಷ್ಟ ಭರಿಸುವ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರಲ್ಲದೇ ಸ್ವತಃ ತಾನೇ ನಿಂತು ಅಮೇರಿಕಾದಂತಹ ರಾಷ್ಟ್ರಕ್ಕೆ ಕಬ್ಬಿಣ-ಉಕ್ಕು ಪೂರೈಸುವ ದೊಡ್ಡ ಆರ್ಡರ್ ಪಡೆದು ನಷ್ಟವನ್ನು ನಿವಾರಿಸಿಯೂ ಬಿಟ್ಟರು!

ವಿದೇಶವೊಂದರಲ್ಲಿ ಕನ್ಸಲ್ಟಂಟ್ ಆಗಿ ಮುದಿಪ್ರಾಯದ ಎಂಬತ್ತರಲ್ಲಿ ಭೇಟಿ ನೀಡಿದ್ದಾಗ, ಅಲ್ಲಿಯೂ ಯಾವುದೋ ಕಟ್ಟೆ[ಡ್ಯಾಮ್] ಕಟ್ಟುವ ಬಗ್ಗೆ ಮಾಹಿತಿ ನೀಡಬೇಕಾಗಿತ್ತಂತೆ. ಅಲ್ಲಿನ ತಜ್ಞರು ತಂದುಹಾಕಿರುವ ದೇಶವಿದೇಶಗಳ ಶಿಲೆಯ ಕಲ್ಲುಗಳ ಪೈಕಿ ಅತ್ಯಂತ ಉತ್ಕೃಷ್ಟವೆಂದು ಪರಿಗಣಿಸಿ ಹೆಚ್ಚಿನ ಹಣಕೊಟ್ಟು ತರಿಸಿದ್ದ ಒಂದು ರಾಶಿಯ ಕೆಲವು ಕಲ್ಲುಗಳನ್ನು ತಮ್ಮ ಊರುಗೋಲಿನಿಂದ ಬಡಿದು ನೋಡಿದ ಸರ್ ಎಂ.ವಿ " ಈ ರಾಶಿ ಸುತರಾಂ ಬಳಕೆಗೆ ಸಲ್ಲ " ಎಂದುಬಿಟ್ಟರಂತೆ! ಕೆಲವರು ಸರ್ ಎಂ.ವಿ.ಗೆ ವಯಸ್ಸಾಯ್ತು ಅರಳು-ಮರುಳು ಎಂದುಕೊಂಡು ನಕ್ಕರೆ ಅವರಲ್ಲಿಯೇ ಕೆಲವರು ’ದೆರ್ ಮಸ್ಟ್ ಬಿ ಎ ಬ್ರೇನ್ ಬಿಹೈಂಡ್ ದಿಸ್ ರಾಂಡಮ್ ಚೆಕಿಂಗ್’ ಎಂದುಕೊಂಡು ಆ ಕಲ್ಲುಗಳಮೇಲೆ ಪ್ರಮಾಣಿಸಲು ಒತ್ತಡಹಾಕಿದಾಗ ಇನ್ನೂ ಸಾಕಷ್ಟು ಒತ್ತಡ ಬೀಳುವ ಮೊದಲೇ ಕಲ್ಲುಗಳು ಪುಡಿಪುಡಿಯಾದವಂತೆ ! ಇಂತಹ ವಿಶ್ವೇಶ್ವರಯ್ಯ ಕೇವಲ ಕರ್ನಾಟಕ ಎಂದು ಪಕ್ಷಪಾತ ಮಾಡದೇ ಇಡೀ ದೇಶಕ್ಕಾಗಿ ದುಡಿದರು. ವಿದೇಶಗಳಿಗೂ ಸಹಕರಿಸಿದ ಏಕೈಕ ತಜ್ಞ ಅವರಾಗಿದ್ದಾರೆ. ಒರಿಸ್ಸಾ, ಹೈದರಾಬಾದ್, ಬಿಹಾರ್ ಮುಂತಾದ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳಿದ್ದವು; ಉತ್ತರವಾದುವೊಂದೇ ಸರ್. ಎಂ.ವಿಯವರ ಸಲಹೆ!

ಕೇವಲ ಸಿವಿಲ್ ಎಂಬ ವಿಭಾಗದಲ್ಲಿ ಗುರುತಿಸಿಕೊಳ್ಳದೇ ಎಲ್ಲಾರಂಗಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದವರು ಸರ್. ಎಂ.ವಿ. ಜನತೆಗೆ ಅಂದಿನಕಾಲದಲ್ಲೇ ಮೈಸೂರು ಬ್ಯಾಂಕ್ ಸ್ಥಾಪಿಸಿಕೊಟ್ಟರು, ಮೈಸೂರು ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನು ಆರಂಭಿಸಿದರು, ತನಗೆ ರಾಜರು ಬಹುಮಾನವಾಗಿ ನೀಡಿದ ಹಣದಲ್ಲಿ ಮೈಸೂರಿನಲ್ಲಿ ಜಯಚಾಮರಜೇಂದ್ರ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನಲ್ಲಿ ಸಿಲ್ವರ್ ಜ್ಯೂಬಿಲಿ ಪಾಲಿಟೆಕ್ನಿಕ್ ಹೀಗೇ ಎರಡು ಪಾಲಿಟೆಕ್ನಿಕ್‍ಗಳನ್ನು ನಿರ್ಮಿಸಿ ತಾಂತ್ರಿಕ ವಿದ್ಯೆ ಹಲವರಿಗೆ ಸುಲಭದಲ್ಲಿ ದೊರೆಯುವಂತೇ ಮಾಡಿದರು ಮಾತ್ರವಲ್ಲ ಎಲ್ಲಿಯೂ ತಮ್ಮ ಹೆಸರನ್ನು ಇಡಗೊಡಲಿಲ್ಲ ! ಎಂಜಿನೀಯರಿಂಗ ಕಾಲೇಜು ಆರಂಭಿಸಿದರು, ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ ಆರಂಭಿಸಿದರು ಹೀಗೇ ಒಂದೇ ಎರಡೇ ಆನೆ ನಡೆದದ್ದೇ ದಾರಿ ಎನ್ನುವ ಹಾಗೇ ಸರ್. ಎಂ.ವಿ. ನಡೆಸಿದ್ದೆಲ್ಲವೂ ಫಲಪ್ರದವಾಗಿವೆ; ಲಕ್ಷೋಪಲಕ್ಷ ಜನರಿಗೆ ಅನುಕೂಲ ತಂದಿವೆ.

ಇಂತಹ ಮಹಾನ ವ್ಯಕ್ತಿ ಜಪಾನಿಗೆ ಒಮೆ ಭೇಟಿ ನೀಡಿದ್ದಾಗ ಅಲ್ಲಿನ ಮುತ್ಸದ್ಧಿಯೊಬ್ಬರು ಇವರನ್ನು ಕಂಡು ಮಾತನಡಿದರಂತೆ " ನೀವು ಭಾರತೀಯರಿ ಅತಿ ಬುದ್ಧಿವಂತರು, ಆದರೆ ನೀವು ತೋರಿಸಿದ ಗುಣಮಟ್ಟದ ವಸ್ತುಗಳನ್ನು ಕಳಿಸುವಾಗ ಗುಣಮಟ್ಟವನ್ನು ಬದಲಿಸುವುದರಲ್ಲೂ ನಿಷ್ಣಾತರು ಹಾಗಾಗಿ ನಾವು ನಿಮ್ಮನ್ನು ನಂಬುವಹಾಗಿಲ್ಲ " ---ಈ ವಿಷಯ ಸರ್. ಎಂ.ವಿ.ಗೆ ಮನದಲ್ಲಿ ಕೊನೇವರೆಗೂ ಕೊರೆಯುತ್ತಿತ್ತಂತೆ. ಇನ್ನೊಮ್ಮೆ ಅಮೇರಿಕಾಕ್ಕೆ ಹೋದಾಗ ನ್ಯೂಯಾರ್ಕ ನಗರದಲ್ಲಿ ಅವರಿಗೆ ಹಲ್ಲಿನ ತೊಂದರೆ ಕಾಡಿತಂತೆ. ಅಲ್ಲಿನ ಹಲ್ಲಿನ ವೈದ್ಯರೊಬ್ಬರಲ್ಲಿಗೆ ತೆರಳಿದ ಸರ್.ಎಂ.ವಿ ಚಿಕಿತ್ಸೆ ಪಡೆದು ವೈದ್ಯರ ಶುಲ್ಕವನ್ನು ಒಂದು ಲಕೋಟೆಯಲ್ಲಿಟ್ಟು ಪಾವತಿಸಿ ಬಂದರಂತೆ. ಅದಾದ ವಾರದಲ್ಲೇ ಸರ್. ಎಂ.ವಿ ಭಾರತಕ್ಕೆ ಮರಳುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಯಾರೋ ತಮ್ಮನ್ನು ಹುಡುಕಿಬಂದ ಸಂದೇಶವನ್ನು ಪಡೆದು ನೋಡಲಾಗಿ ಆ ಹಲ್ಲಿನ ವೈದ್ಯರು ನಿಂತಿದ್ದರಂತೆ. ವಿಚಾರಿಸಲಾಗಿ ತಮಗೆ ಶುಲ್ಕಕ್ಕಿಂತ ತುಸು ಜಾಸ್ತಿ ಹಣ ಪಾವತಿಸಿರುವುದರಿಂದ ಅದನ್ನು ಮರಳಿ ಕೊಡುವ ಸಲುವಾಗಿ ಸರ್.ಎಂ.ವಿಯವರನ್ನು ಹುಡುಕಿಕೊಂಡು ಆ ವೈದ್ಯ ಅಲ್ಲಿಗೆ ಹಾಗೆ ಬಂದಿದ್ದರು! " ಇರಲಿ ಬಿಡಿ, ತಮ್ಮ ಉತ್ತಮ ಚಿಕಿತ್ಸೆಗೆ ಅದು ಹೆಚ್ಚೇ ? " ಎಂದು ಸರ್ ಕೇಳಿದರೂ ಆ ವೈದ್ಯರು ಅದನ್ನು ಇಟ್ಟುಕೊಳ್ಳದೇ ಮರಳಿಸಿರುವುದು ಅಲ್ಲಿನ ಜನರ ನಿಯತ್ತನ್ನು ತೋರಿಸುತ್ತದೆ ಎಂಬುದನ್ನು ಸರ್. ಎಂ.ವಿ ಆಗಾಗ ಹೇಳುತ್ತಿದ್ದರಂತೆ. ನಾವು ಬಿಡಿ ಭಾರತೀಯರು ಯಾರನ್ನು ಬಿಟ್ಟಿದ್ದೇವೆ ನಾವು? ಸಾರ್ವಜನಿಕ ಬೀದಿಯಲ್ಲಿ ನಿಂತು ಅಣ್ಣಾಹಜಾರೆಗೆ ಜೈ ಎನ್ನುವ ನಮ್ಮೆಲ್ಲರೊಳಗೇ ನಿಯತ್ತಿಲ್ಲದ ಸ್ವಾರ್ಥದ ರಕ್ಕಸ ಆಗಾಗ ಎದ್ದು ನಿಂತು ಮೈಕೊಡವಿ ತನ್ನ ಇರುವನ್ನು ಬೇರೆಯವರಿಗೆ ತೋರಿಸುತ್ತಾನೆ. ಪ್ರಾಮಾಣಿಕತೆ ಇಲ್ಲದ ಜೀವನ ಎಲ್ಲಕ್ಕಿಂತ ಹೀನ ಎಂಬುದು ಸರ್. ಎಂ.ವಿ.ಯವರ ಅಂಬೋಣವಾಗಿತ್ತು.

ಇಡೀ ಬೆಂಗಳೂರು ಕೊಳೆಗೇರಿ ಆಗದಿರಲು ಕಾರಣ ಹಳೆಯ ಬೆಂಗಳೂರು ನಗರದ ರೂಪುರೇಷೆಗಳನ್ನು ಸರ್. ಎಂ.ವಿ. ತಿದ್ದಿದರು, ನಗರಕ್ಕೆ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆಯ ಸೂತ್ರಗಳನ್ನು ನಿರ್ಮಿಸಿದರು. ಇದೂ ಅಲ್ಲದೇ ಇಂದಿನ ಬೃಹತ್ತಾಗಿ ಬೆಳೆದ/ಬೆಳೆಯುತ್ತಲೇ ಇರುವ ಬೆಂಗಳೂರಿನ ಇನ್ನರ್ ಮತ್ತು ಔಟರ್ ರಿಂಗ್ ರೋಡ್‍ಗಳನ್ನು ಸರ್.ಎಂ.ವಿ ಮೊದಲೇ ಗುರುತಿಸಿ ತಿಳಿಸಿದ್ದರಂತೆ ಎಂದರೆ ಅವರೆಷ್ಟು ಪಂಡಿತರಬಹುದು. ನಾವು ಚಿಕ್ಕವರಿದ್ದಾಗ ಕೆಲವು ಕಥೆಗಳನ್ನು ಕೇಳಿದ್ದೆವು. ಅವುಗಳಲ್ಲಿ ಒಂದು ಬ್ರಿಟಿಷರು ವಿಶ್ವೇಶ್ವರಯ್ಯನವರ ಮೆದುಳಿಗೆ ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದರಂತೆ ಎಂಬುದು ! ಅದು ನಿಜವೋ ಸುಳ್ಳೋ ಅರಿವಿಲ್ಲ ಆದರೆ ಸಮಗ್ರ ಜಗತ್ತಿನ ಸಕಲದೇಶಗಳ ತಜ್ಞ-ವಿಜ್ಞಾನಿಗಳ, ಅಭಿಯಂತರರುಗಳ ದೃಷ್ಟಿ ಆ ಕಾಲಕ್ಕೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೃಶಕಾಯದ ವಿಶ್ವೇಶ್ವರಯ್ಯನವರಮೇಲೆ ನೆಟ್ಟಿದ್ದುದಂತೂ ನಿಜ.

ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿದರೆ ನಮಗನ್ನಿಸುವುದು " ಸಂಭವಾಮಿ ಯುಗೇ ಯುಗೇ " ಎಂಬ ಭಗವಂತನ ಗೀತಯ ವಚನ! ಎಲ್ಲಿ ಪ್ರಜೆಗಳಿಗೆ ಆಪತ್ತು-ವಿಪತ್ತು ಅತಿರೇಕಕ್ಕೆ ಹೋಗುತ್ತದೋ ಆಗ ತನ್ನ ಆವಿರ್ಭಾವ ಮಾನವ ಶರೀರದಲ್ಲಿ ಆಗುತ್ತದೆ ಎಂಬುದು. ಸರ್.ಎಂ.ವಿ ಯವರ ಮನೆತನದಲ್ಲಿ ಹಿಂದಕ್ಕೆ ನೋಡಿದರೆ ಅಂತಹ ಪ್ರಕಾಂಡ ಪಂಡಿತರಾಗಲೀ ಮೇಧಾವಿಗಳಾಗಲೀ ಜಾಸ್ತಿ ಆಂಗ್ಲವಿದ್ಯೆ/ಪದವಿ ಪಡೆದವರಾಗಲೀ ಇರಲಿಲ್ಲ. ಅವರ ನಂತರದಲ್ಲೂ ಮುಂದೆ ಇಲ್ಲೀವರೆಗೆ ಅವರ ವಂಶದಲ್ಲಿ ಯಾರೂ ಅಂತಹ ಮೇಧಾವಿ ಹುಟ್ಟಿ ಬರಲಿಲ್ಲ. ಒಂದೊಮ್ಮೆ ಸರ್.ಎಂ.ವಿ ಹುಟ್ಟಿಬರದಿದ್ದರೆ ಇಂದು ನಾವೆಲ್ಲಾ ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ? --ಅದು ಊಹಿಸಲಸಾಧ್ಯ. ಕರ್ನಾಟಕದ ಬಹುಭಾಗಕ್ಕೆ ವಿದ್ಯುತ್ತು ಪೂರೈಸುವ ಶರಾವತಿ ಜಲವಿದ್ಯುತ್ ಯೋಜನೆಯನ್ನು ರೂಪಿಸಿದ ಆ ಪುಣ್ಯಾತ್ಮನ ಅನುಗ್ರಹದಿಂದ ಮನೆಮನೆಯಲ್ಲೂ ಇಂದು ಟಿವಿ,ಫ್ರಿಜ್ಜು, ವಾಶಿಂಗ್ ಮಶಿನ್, ಮಿಕ್ಸರ್, ಗ್ರೈಂಡರ್, ಓವನ್, ಗೀಸರ್, ಕಂಪ್ಯೂಟರ್ .....ಈ ಎಲ್ಲಾ ಯಂತ್ರಗಳನ್ನು ನಡೆಸುವ ಅನುಕೂಲ ಲಭ್ಯವಾಗಿದೆ, ಕತ್ತಲೆಯ ಮನೆಗಳು ಬೆಳಕು ಕಂಡಿವೆ!

ಸರ್.ಎಂ.ವಿಯನ್ನು ಉತ್ತಮ ಆಡಳಿತಗಾರನೆನ್ನಬಹುದೇ? ಉತ್ತಮ ತಂತ್ರಜ್ಞಾನಿ ಎನ್ನಬಹುದೇ ? ನಿಜವಾದ ದೇಶಭಕ್ತ ಎನ್ನಬಹುದೇ? ನಿಸ್ವಾರ್ಥ ಕರ್ಮಯೋಗಿ ಅನ್ನಬಹುದೇ? ಉತ್ತಮ ವಾಗ್ಮಿ ಎನ್ನಬಹುದೇ? ಉತ್ತಮ ನಿರ್ದೇಶಕ ಎನ್ನಬಹುದೇ? ಉತ್ತಮ ಮಾರ್ಗದರ್ಶಕ ಎನ್ನಬಹುದೇ? ಉತ್ತಮ ಮಾರ್ಕೆಟರ್ ಎನ್ನಬಹುದೇ ? ಭಗವದ್ಗೀತೆಯ ಹಲವು ಅಂಶಗಳನ್ನು ತನ್ನ ಕೃತಿಗಳಲ್ಲಿ ತೋರಿಸಿದ ಅವರಿಗೆ ಯಾವ ಹೆಸರಿನಿಂದ ಕರೆದರೂ ಅದು ಸಮಂಜಸವೆನಿಸುತ್ತದೆ. ಕೆಲವು ವಿಗ್ರಹಗಳ ದೃಷ್ಟಿ ಎಲ್ಲಿನಿಂತರೂ ನಮ್ಮನ್ನೇ ನೋಡುವ ಭಾಸವಾಗುವಂತೇ ಇನ್ನೂ ಕೆಲವು ಗುಡ್ಡಗಳು ಪರ್ವತಗಳು ಒಂದೊಂದು ಕಡೆಯಿಂದ ಒಂದೊಂದು ಆಕಾರದಿಂದ ಕಂಗೊಳಿಸುವಂತೇ ಸರ್ ಎಂ.ವಿ ಕೂಡ ಸರ್ವತ್ರ ಕಾಣಿಸಿಕೊಳ್ಳುತ್ತಾರೆ. ಬಡಕಲು ಶರೀರದ ಸಣ್ಣತಲೆಯೊಳಗಿನ ’ದೊಡ್ಡ ತಲೆ’ಯಲ್ಲಿ ಅದೇನಿತ್ತೋ ಜಗನ್ನಿಯಾಮಕನೇ ಬಲ್ಲ ! ಇವತ್ತಿನ ಬೆಂಗಳೂರಿನ ’ವಿಶ್ವೇಶ್ವರಯ್ಯ ಟಾವರ್’ ಎಂಬ ಜಾಗದಲ್ಲಿ ಮನೆಮಾಡಿಕೊಂಡು ವಾಸವಿದ್ದ ಸರ್.ಎಂ.ವಿ ತಮ್ಮ ಇಳಿಜೀವನವನ್ನು ಕೊನೆಯವರೆಗೂ ಅಲ್ಲೇ ಕಳೆದರಂತೆ. ದೇಹವಿಸರ್ಜಿಸಿದಾಗ ಅವರ ಖಾತೆಯಲ್ಲಿದ್ದ ೩೨೦೦೦ ರೂಪಾಯಿಗಳನ್ನು ಅವರ ಮುಪ್ಪಿನಲ್ಲಿ ಜೊತೆಯಲ್ಲಿ ಸಹಕರಿಸಿಕೊಂಡಿದ್ದ ಒಂದಿಬ್ಬರು ಹುಡುಗರಿಗೆ ಸೇರಬೇಕು ಎಂದು ಬರೆದಿದ್ದರಂತೆ! ಅದು ಬಿಟ್ಟರೆ ಇನ್ನೇನೂ ಅವರದಾದ ಆಸ್ತಿ ಇಲ್ಲ ! ಇಂದಿನ ಅಭಿಯಂತರರುಗಳು ಹೊಡೆಯುವ ಕೋಟಿಗಟ್ಟಲೆ ಹಣ ಆಸ್ತಿ-ಪಾಸ್ತಿ ನೋಡಿದರೆ ನಿಜಕ್ಕೂ ಸರ್.ಎಂ.ವಿ ದೇವಮಾನವರಾಗಿ ಕಾಣುತ್ತಾರೆ! ನಮ್ಮಪುಣ್ಯ ನಾವು ಅವರನ್ನು ಕನ್ನಡನಾಡಿನಲ್ಲಿ ಪಡೆದಿದ್ದೆವು; ನಮ್ಮ ಭಾಗ್ಯ ಅವರು ನಮಗಾಗಿ ಬಹಳಷ್ಟು ಕಟ್ಟಿಕೊಟ್ಟರು.

ಸರ್ ಎಂ.ವಿ ಒಮ್ಮೆ ಎಲ್ಲಿಗೋ ಹೋಗಿದ್ದಾಗ ಮಾರ್ಗಮಧ್ಯೆ ತಮ್ಮ ಮುದ್ದೇನಹಳ್ಳಿ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಾಯಿತು. ಮಕ್ಕಳಮೇಲಿನ ಪ್ರೀತಿಯಿಂದ ಅಂದಿನ ಕಾಲಕ್ಕೆ ಹತ್ತುಸಾವಿರದಲ್ಲಿ ಸಿಹಿತಿನಿಸು/ಚಿಕ್ಕ ಕೊಡುಗೆ ತರಿಸಿ ಎಲ್ಲಾ ಮಕ್ಕಳಿಗೂ ವಿತರಿಸಿದ ಸರ್ ಎಂ.ವಿ ಅಲ್ಲಿನ ಜನರ ಒತ್ತಾಯದ ಮೇಲೆ ಹತ್ತು ನಿಮಿಷ ಭಾಷಣಮಾಡಬೇಕಾಗಿ ಬಂತಂತೆ. ಯಾವಾಗಲೂ ಪೂರ್ವತಯಾರಿಯಿಲ್ಲದೇ ಭಾಷಣಮಾಡಲು ನಿರಾಕರಿಸುತ್ತಿದ್ದ ಅವರು ಅಂದು ಹಾಗೆ ಮಾಡದಾದರು. ಸಭೆ ಮುಗಿಯಿತು. ಅವರು ಮರಳಿ ಬೆಂಗಳೂರಿಗೆ ಬಂದಮೇಲೆ ತಮ್ಮ ಮಾತು ಮಕ್ಕಳಿಗೆ ರುಚಿಸಿತೋ ಇಲ್ಲವೋ ಎಂಬ ಅನಿಸಿಕೆಯಿಂದ ಇನ್ನೊಮ್ಮೆ ತಾವು ಅಲ್ಲಿಗೆ ಬರುವುದಾಗಿ ಘೋಷಿಸಿ ಮತ್ತೆ ತೆರಳಿ ಮತ್ತೆ ಸಿಹಿತಿನಿಸುಗಳನ್ನು ವಿತರಿಸಿ ತಯಾರಿಸಿಕೊಂಡ ಭಾಷಣವನ್ನು ಮಂಡಿಸಿದರಂತೆ ! ಮಕ್ಕಳನ್ನೂ ಅವಗಣನೆ ಮಾಡದ ಅವರ ಮನಸ್ಸು ಯಾವುದೇ ಕೆಲಸವನ್ನು ಮಾಡುವಾಗಲೂ ಪರಿಪೂರ್ಣತೆಯನ್ನು ಬಯಸುತ್ತಿತ್ತು ಎಂಬುದಕ್ಕೆ ಇದು ಉದಾಹರಣೆ. ಹೇಳುತ್ತಾ ಹೋದರೆ ಮುಗಿಯದ ಚರಿತ್ರೆ, ಸರ್.ಎಂ.ವಿ ವ್ಯಕ್ತಿ ಎನ್ನುವುದಕ್ಕಿಂತ ದಂತಕಥೆಯಾದ ಶಕ್ತಿ ಎನ್ನುವುದು ಉತ್ತಮ. ಜೀವನದಲ್ಲಿ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಮತ್ತು ಉದ್ಯೋಗಶೀಲರಾಗಿ ಪರಿಪೂರ್ಣವಾಗಿ ತೊಡಗಿಕೊಂಡು ನಮ್ಮನ್ನೇ ನಾವು ಆಗಾಗ ಅವಲೋಕಿಸಿಕೊಳ್ಳುತ್ತಾ ಮಾಡುವ ಕೆಲಸಗಳಲ್ಲಿ ಪರಿಪಕ್ವತೆ ಪಡೆದರೆ ಅದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ. ಹಾಗೆ ಬದುಕೋಣ ಅಲ್ಲವೇ ? ನಮಸ್ಕಾರ.