ಅದಮ್ಯ ಚೇತನಗಳು
ಮಂಗಳದ ಭಾರತದ ಅಂಗಳದಿ ಬಹುಜನರು
ತಿಂಗಳು-ವರ್ಷಗಳು ನಡೆಸಿ ಹೋರಾಟ
ಅಂಗಾಂಗ ಕಳೆದರೂ ಪ್ರಾಣವನೆ ತೆತ್ತರೂ
ಸಂಘದಲಿ ನಡೆಸಿದರು ಬಹಳ ಸೆಣಸಾಟ
ನನ್ನ ಭಾರತಕಾಗಿ ದುಡಿದವರ ನೆನೆವುದಕೆ
ಅನ್ನವನು ಉಂಬಾಗ ಸರಿಸಮಯವಾಯ್ತು !
ಮುನ್ನ ಸ್ವಾತಂತ್ರ್ಯ ದೊರಕಿಸಲೆಂದು ಮಡಿದವರ
ಚೆನ್ನಾಗಿ ಸ್ಮರಿಸುವೊಲು ಮನ ಸಿದ್ಧವಾಯ್ತು
ನನೆಪಿನಾ ಮೂಟೆಯಲಿ ನಾ ತಿಳಿದು ಓದಿರುವ
ದಿನಪಬೆಳಗಿದ ರೀತಿ ಬದುಕಿದಾ ಜನರ
ಒನಪು ಒಯ್ಯಾರದಲಿ ಬದುಕಿತಿಹ ನಮ್ಮನ್ನು
ನುಣುಪಾದ ಈ ಬಾಳ್ವೆ ಬಾಳಗೊಟ್ಟವರ
ಗಲ್ಲಿಗೇರುತ ಕೂಗಿ ಭಾರತದ ಹೆಸರನ್ನು
ಅಲ್ಲಿ ಪ್ರಾಣವ ತೆತ್ತ ಮಂಗಲ ಪಾಂಡೆ
ಕಲ್ಲುಮನಸಿನ ಆಂಗ್ಲರಿಗೆ ಕಠಿಣ ದಿನಗಳನು
ನಿಲ್ಲಿಸದೇ ಮುಂದಿಟ್ಟನಾ ಭಗತ್ ಸಿಂಗ
ರಾಣಿ ಲಕ್ಷ್ಮೀಬಾಯಿ ಪ್ರಾಣಕ್ಕೆ ಭಯಪಡದೆ
ಜಾಣೆಯಾಗಿದ್ದು ಸೆಣಸಿದಳು ಬಹುದಿನದಿ
ಕಾಣಿಸದ ಕೈಗಳು ಹತ್ತಾರು ಸಾವಿರವು
ಬಾಣಬಿಟ್ಟೆಡೆಗೆಲ್ಲ ಜೈಕಾರ ಕೇಳಿದವು
ಅಗೋ ನನ್ನ ಭಾರತವು ನಿಂತಿಹುದು ಶಾಶ್ವತದಿ
ಸಗರಪುತ್ರನು ತಂದ ಗಂಗೆಯನು ಧರಿಸಿ
ಮಿಗಿಲುಂಟೆ ಈ ಜಗದಿ ನನ್ನದೇಶಕೆ ಇನ್ನು ?
ಬಗೆಬಗೆಯಲೊಂದಿಪೆನು ತಾಯರೂಪವನು