ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 28, 2011

ನಾ ನಿನ್ನ ಧ್ಯಾನದೊಳಿರಲು ಸದಾ........


ನಾ ನಿನ್ನ ಧ್ಯಾನದೊಳಿರಲು ಸದಾ........

ಮಾನವ ಶರೀರ ಎಷ್ಟು ಅದ್ಭುತವಾಗಿದೆಯೆಂಬುದರ ತಿಳುವಳಿಕೆ ನಮಗೆಲ್ಲಾ ಬರುವುದೇ ಇಲ್ಲ. ನಮ್ಮ ಇವತ್ತಿನ ಯಾವ ಮಾಧ್ಯಮದ ಜ್ಯೋತಿಷಿಗಳಿಗಾಗಲೀ ವಿಜ್ಞಾನಿಗಳಿಗಾಗಲೀ ನಿಲುಕದ ಅತ್ಯುನ್ನತ ಮನೋಸ್ತರವೊಂದಿದೆ ಎಂಬುದು ನೈಷ್ಠಿಕ ತಪೋಬಲದಿಂದ ಮತ್ತು ಸ್ವಾನುಭವದಿಂದ ಗುರುಸ್ಥಾನವನ್ನು ಅಲಂಕರಿಸಿದ ಕೆಲವು ಸನ್ಯಾಸಿಗಳು ಹೇಳುವ ಮಾತು. ಅಷ್ಟಾಂಗಯೋಗದ ಪ್ರಮುಖ ಘಟ್ಟವಾದ ’ಧಾರಣ’ ಹಂತದಲ್ಲಿ ಇಂದ್ರಿಯಗಳು ಮತ್ತು ಮನಸ್ಸನ್ನು ತನ್ನ ಕೈಯ್ಯಲ್ಲಿ ಮಾನವ ಬಂಧಿಯಾಗಿಸಿ ಇಹದ ಹಲವು ಕಾಮನೆಗಳನ್ನು ದಮನಮಾಡಿ ಕೇವಲ ಧ್ಯಾನದಲ್ಲಿ ತನ್ನ ಪ್ರಾಣವಾಯು ಅಥವಾ ಪ್ರಾಣಶಕ್ತಿಯನ್ನು ತಲ್ಲೀನಗೊಳಿಸುತ್ತಾನೆ.

ಧ್ಯಾನವೆಂಬುದುಕ್ಕೆ ಲೌಕಿಕ ವ್ಯವಹಾರದ ಕೆಲವು ಉದಾಹರಣೆಗಳನ್ನು ಕೊಡಬಹುದು. ವಿಜ್ಞಾನಿಯೊಬ್ಬನಿಗೆ ತನ್ನ ಸಂಶೋಧನೆಯಲ್ಲಿ ತಾದಾತ್ಮ್ಯತೆ ಬೇಕಾಗುತ್ತದೆ. ಹಿಡಿದ ಗುರಿಯನ್ನು ತಲ್ಪುವಾಗ ಮಧ್ಯೆ ಬಾಧಕಗಳು ಸಹಜವೇ. ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ನಿವಾರಿಸಿಕೊಂಡು ಮತ್ತೆ ತನ್ನ ಹಾದಿಯಲ್ಲಿ ಮುಂದುವರಿಯುವ ಛಲ ಮತ್ತು ತೊಡಗಿಕೊಳ್ಳುವಿಕೆ ಬೇಕಾಗುತ್ತದೆ. ಕೆಲವೊಮ್ಮೆ ಅದು ಎಷ್ಟರಮಟ್ಟಿಗೆ ಎಂದರೆ ಸಂಶೋಧನೆಯ ಪರಮೋಚ್ಛ ಸ್ಥಿತಿಯಲ್ಲಿ ಹಗಲು-ರಾತ್ರಿ,ಊಟ,ನಿದ್ರೆ ಯಾವುದರ ಪರಿವೆಯೂ ಇರುವುದೇ ಇಲ್ಲ. ಸದಾಕಾಲ ಹಿಡಿದ ಆ ಸೂತ್ರದಮೇಲೇ ಕೆಲಸ! ಕೊನೆಗೂ ಗುರಿ ಸಮರ್ಪಕವಾಗಿದ್ದರೆ, ಸೂತ್ರ ಸಮಂಜಸವಾಗಿದ್ದರೆ ಆ ವ್ಯಕ್ತಿ ಹೊಸದೊಂದು ವಿಷಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಸಫಲನಾಗುತ್ತಾನೆ. ಇದೊಂದು ಧ್ಯಾನವೇ ಸರಿ. ಅದೇ ರೀತಿ ಅಬಾಕಸ್ ಕಲಿತ ಹುಡುಗ/ಹುಡುಗಿ ರಸ್ತೆಯಲ್ಲಿ ಓಡುವ ವಾಹನಗಳ ಮೇಲಿನ ಸಂಖ್ಯೆಗಳನ್ನು ಕೂಡಿಸಿ ಒಟ್ಟೂ ಮೊತ್ತವನ್ನು ಹೇಳಬಲ್ಲರು, ಸಾಮಾನ್ಯರು ಕ್ಯಾಲ್ಕ್ಯುಲೇಟರ್ ಬಳಸಿ ಮಾಡುವ ಗುಣಲಬ್ಧಗಳನ್ನು ಸೇಕಂದಿನಲ್ಲಿ ಅದಕ್ಕೂ ಮೊದಲೇ ತಿಳಿಸಬಲ್ಲರು--ಇದು ಅವರ ಧ್ಯಾನ!

ಪಾಕಶಾಸ್ತ್ರಿಯೊಬ್ಬನಿಗೆ ಬುಂದಿಲಾಡು ಮಾಡುವಾಗಾಗಲೀ ಮೈಸೂರುಪಾಕ ಮಾಡುವಾಗಾಗಲೀ ಅವುಗಳಿಗೆ ಬೇಕಾದ ಮೂಲವಸ್ತುಗಳನ್ನು ಹುರಿದೋ ಕರಿದೋ ಯಾವ ಹದದಲ್ಲಿ ಹೇಗೆ ನಿಲ್ಲಿಸಬೇಕು ಎಂಬುದರ ನಿರೀಕ್ಷೆಯಿರುತ್ತದೆ. ಸ್ವಲ್ಪ ಹೆಚ್ಚುಕಮ್ಮಿಯಾದರೆ ತಯಾರಿಸುವ ಸಿಹಿತಿಂಡಿಯ ರುಚಿ,ಬಣ್ಣ, ಆಕಾರ ಅಥವಾ ವಾಸನೆ ಬದಲಾಗಿಹೋಗುತ್ತದೆ. ಇಲ್ಲಿ ಆಡುಗೆಯಾತ ಆ ವಿಷಯದಲ್ಲಿ ಧ್ಯಾನಾಸಕ್ತನಾಗಿರುತ್ತಾನೆ. ಆಲೆಮನೆಯಲ್ಲಿ ಬೆಲ್ಲವನ್ನು ತಯಾರಿಸುವಾಗ ಕಬ್ಬಿನ ಹಾಲು ಕುದಿದು ಅದರೊಳಗಿನ ನೀರಿನ ಅಂಶ ಆವಿಯಾಗಿ, ನಂತರ ಸಿಹಿಯಂಶ ಬೆಲ್ಲವಾಗಿ ಮಾರ್ಪಡುವ ಸಮಯಬರುತ್ತದೆ; ಈ ಸಮಯದಲ್ಲಿ ಬೆಲ್ಲದ ಪಾಕವನ್ನು ನಿರೀಕ್ಷಿಸುವಾತ ಎತ್ತಲೋ ನೋಡುತ್ತಿದ್ದರೆ ಅದು ಹಾಳಾಗಿ ಹೋಗುತ್ತದೆ. ವಿದ್ಯಾರ್ಜನೆಗೆ ಇಳಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಮನಸ್ಸನ್ನು ಮೊಬೈಲ್ ಕಡೆಗೋ ಫೇಸ್‍ಬುಕ್/ಆರ್ಕುಟ್ ಕಡೆಗೋ ಹರಿಸುತ್ತಾ ಸ್ನೇಹಿತ/ಸ್ನೇಹಿತೆಯರ ಬಳಗದಲ್ಲಿ ಮಜಾ ಉಡಾಯಿಸುತ್ತಿದ್ದರೆ ಪರೀಕ್ಷೆ ಹತ್ತಿರಕ್ಕೆ ಬಂದಾಗ ದಿಗಿಲು ಆವರಿಸುತ್ತದೆ. ಇತ್ತಕಡೆ ಓದಲೂ ಆರದೇ, ಅರ್ಥಮಾಡಿಕೊಳ್ಳಲೂ ಆಗದೇ ಅತ್ತಕಡೆ ಓದದೇ ಇರಲೂ ಆಗದೇ ಮಾನಸಿಕ ಉದ್ವಿಗ್ನತೆಗೆ ಕಾರಣವಾಗುತ್ತದೆ. ಅವರು ಓದುವ ಆ ಧ್ಯಾನಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿದ್ದರೆ ಹಾಗಾಗುವುದಿಲ್ಲ. ಆದರೆ ಓದುವ ಪುಸ್ತಕಗಳಿಗಿಂತಾ ಮೊಬೈಲ್ ಮತ್ತು ಫೇಸ್‍ಬುಕ್/ಗೆಳೆಯರ ಹರಟೆ ಇವೇ ಇಷ್ಟವಾಗುತ್ತವೆ; ಧ್ಯಾನ ಕೆಟ್ಟುಹೋಗುತ್ತದೆ!

ಕಲಾವಿದ ತನ್ಮಯನಾಗಿ ಚಿತ್ರಬಿಡಿಸಿದರೆ ಕಲೆ ನಮ್ಮನ್ನು ಬೆರಗುಗೊಳಿಸುತ್ತದೆ; ಇಲ್ಲವಾದರೆ ಕಲಾವಿದನಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ’ಚೆನ್ನಾಗಿದೆ’ ಎಂದು ಹೇಳುವ ಪ್ರಸಂಗ ಬರುತ್ತದೆ!ಸಂಗೀತಗಾರ ಕೊಡುವ ಸಂಭಾವನೆಗೆ ಎಂದು ಹಾಡಹೊರಟರೆ ಒಟ್ಟಾರೆ ಅದು ಸಂಗೀತವಾಗುತ್ತದೆಯೇ ಹೊರತು ಜನ ಮನದಣಿಯೇ ಆಸ್ವಾದಿಸುವ ಸಂಗೀತವಾಗಿರುವುದಿಲ್ಲ. ಮಾಧ್ಯಮಗಳಲ್ಲಿ ಹಾಸ್ಯವನ್ನು ಉಣಬಡಿಸುವ ಇಂತಹ ಹಲವು ಕಲಾವಿದರನ್ನು ನಾವು ನೋಡಿದ್ದೇವೆ; ಅವರು ಹೇಳಿದ್ದನ್ನೇ ಮತ್ತೆ ಹೇಳುತ್ತಾ ಸಾಗುತ್ತಾರೆ-ಅದು ಬೇಸರ ತರಿಸುತ್ತದೆ. ಅಲ್ಲಿ ಧ್ಯಾನವಿರುವುದಿಲ್ಲ; ಹಾಸ್ಯ ಯಾಂತ್ರಿಕವಾಗಿ ಹೊರಹೊಮ್ಮುತ್ತಿರುತ್ತದೆ-ಅವರಲ್ಲಿ ಬೇರೇ ಸರಕು ಇರುವುದಿಲ್ಲ ನಮಗೆ ಅದನ್ನೇ ಕೇಳದೇ ವಿಧಿಯಿಲ್ಲ!

ಧ್ಯಾನದಲ್ಲಿ ತೊಡಗಿ ಫಲಪಡೆದ ಕೆಲವು ಜನರನ್ನು ಹೇಳಿದರೆ ಉತ್ತಮವೆನಿಸುತ್ತದೆ. ಕನ್ನಡಭಾಷೆಗೆ ಆಂಗ್ಲಭಾಷಿಕನೊಬ್ಬ ಶಬ್ದಕೋಶ ರಚಿಸುವುದೆಂದರೆ ಬಹುಶಃ ಅದು ಕಷ್ಟಸಾಧ್ಯದ ಕೆಲಸ; ಬಹುತೇಕರಿಗೆ ಇಷ್ಟವಾಗುವ ಕಾರ್ಯವಲ್ಲ. ಕಿಟೆಲ್ ಎನ್ನುವ ವ್ಯಕ್ತಿ ಭಾರತಕ್ಕೆ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ತನ್ನ ಸತತ ಧ್ಯಾನದಿಂದ ಅಂತಹ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ ಎಂಬುದು ಇತಿಹಾಸದ ದಾಖಲೆ! ಇವತ್ತು ಗಿನ್ನೆಸ್ ದಾಖಲೆಗೋಸ್ಕರ ಯಾರ್ಯಾರೋ ಬೇಡದ್ದನ್ನೆಲ್ಲಾ ಮಾಡುತ್ತಾರೆ. ಆದರೆ ಕೇವಲ ದಾಖಲೆ-ಪುರಸ್ಕಾರಗಳಿಗಾಗಿಯಲ್ಲದೇ ಸಮಾಜದ ಹಿತಕ್ಕಾಗಿ ಇಂತಹ ಸಾಧನೆಗಳನ್ನು ಮಾಡುವವರು ಅತಿವಿರಳ.

ಹಾಗಾದರೆ ಧ್ಯಾನ ಇಷ್ಟು ಸುಲಭವಾಗಿದ್ದರೆ ಮತ್ತೇತಕ್ಕೆ ಅಂತಹ ಇಂದ್ರಿಯ ನಿಗ್ರಹದಂತಹ ಕಷ್ಟದ ಕೆಲಸ ಎಂಬ ಪ್ರಶ್ನೆ ಕಾಡುತ್ತದೆಯಲ್ಲವೇ? ಆದರೆ ಲೌಕಿಕವಾದ ಈ ಧ್ಯಾನ ಕೇವಲ ಆ ಯಾ ಗುರಿಗೆ ಸೀಮಿತವಾಗಿರುತ್ತದೆ. ಆದರೆ ಮನಸ್ಸನ್ನು ಎಲ್ಲೂ ಹೋಗದಂತೇ ಅಂದರೆ ಯಾವ ಆಲೋಚನೆಗೂ ಒಳಗಾಗದಂತೇ ತಹಂಬದಿಗೆ ತಂದುಕೊಂಡು ತದೇಕಚಿತ್ತನಾಗಿ ಅಲೌಕಿಕವಾಗಿ ನಿರ್ವಿಷಯವಾಗಿ ಧ್ಯಾನಮಾಡುವುದು ಸ್ವಲ್ಪ ಮಹತ್ತರ ಕೆಲಸ. ಈ ಸ್ಥಾನಕ್ಕೆ ವ್ಯಕ್ತಿ ಏರಿದಾಗ ಜಗತ್ತಿನಲ್ಲಿ ಆತನಿಗೆ ದ್ವೇಷಿಕರಿಲ್ಲ, ದೇಶಕಾಲದ ಗಡಿಮಿತಿಯಿಲ್ಲ, ಬಂಧು-ಭಗಿನಿ ಎಂಬ ಭಾವ ಬಂಧುರವಿಲ್ಲ! ಹಾಗಂತ ಆತ ಇಡೀ ವಿಶ್ವಕ್ಕೇ ಇಡೀ ಮನುಕುಲಕ್ಕೇ ಒಳಿತನ್ನು ಬಯಸುವ ವ್ಯಕ್ತಿಯಾಗುತ್ತಾನೆ. ಈ ಹಂತವನ್ನು ತಲ್ಪುವಾಗ ಆತನಿಗೇ ಅರಿವಿಲ್ಲದೇ ಹಲವು ಪವಾಡಗಳು ಅತನಿಂದ ಘಟಿಸುತ್ತವೆ. ಹಾಗೆ ಘಟಿಸುವ ಪವಾಡಗಳಿಗೆ ಆತ ಆಕರ್ಷಿತನಾಗಿಬಿಟ್ಟರೆ ಅಲ್ಲಿಗೆ ಆ ಧ್ಯಾನ ನಿಂತುಹೋಗುತ್ತದೆ. ಅಲ್ಲಿಯೂ ಮಧ್ಯೆ ಮಧ್ಯೆ ಬರಬಹುದಾದ ಇಂತಹ ಪವಾಡಗಳೇ ಮೊದಲಾದ ಅಡೆತಡೆಗಳನ್ನು ಕಡೆಗಣಿಸಿ ಧ್ಯಾನದಲ್ಲಿ ಮುನ್ನಡೆದರೆ ಆತ ಸಾಧಕನಾಗುತ್ತಾನೆ, ಸಿದ್ಧಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ. ಇದಕ್ಕೆ ಯಾವುದೇ ಧರ್ಮ,ಮತಗಳ ಲೇಪವಿಲ್ಲ, ಲೋಪವೂ ಇಲ್ಲ. ಧ್ಯಾನಾಸಕ್ತನಾದ ವ್ಯಕ್ತಿ ಕ್ರಮೇಣ ತನ್ನ ಸತತ ಪರಿಕ್ರಮದಿಂದ ಸಮಾಧಿ ಸ್ಥಿತಿಗೆ ತಲುಪುತ್ತಾನೆ!

ಸಮಾಧಿ ಎಂದರೆ ಗೋರಿಯಲ್ಲ! ಇಲ್ಲಿ ’ಸಮಾಧಿ’ ಎಂಬುದು ಯೋಗದ ಕೊನೆಯ ಹಂತ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಗೆ ಬಾಹ್ಯ ಪ್ರಪಂಚದ ಅರಿವಿರುವುದಿಲ್ಲ. ಆತ ಕುಳಿತಿರಲಿ/ಮಲಗಿರಲಿ ಆತನ ಶರೀರ ನಿಶ್ಚಲವಾಗಿರುತ್ತದೆ-ನೋಡುಗರಿಗೆ ವ್ಯಕ್ತಿ ಸತ್ತಿರುವಂತೇ ಭಾಸವಾಗುತ್ತದೆ. ಆದರೆ ವಿಚಿತ್ರವೆಂದರೆ ಸಮಾಧಿ ಸ್ಥಿತಿಯಲ್ಲಿರುವ ವ್ಯಕ್ತಿಯ ಭೌತಿಕ ಶರೀರವನ್ನು ಪರಿಸರವೇ ಸಂರಕ್ಷಿಸುತ್ತದೆ. ಆತನಿಗೆ ಹಸಿವು,ನೀರಡಿಕೆ, ಆಯಾಸ, ನಿದ್ದೆ, ಬಹಿರ್ದೆಶೆಗಳ ಗಣನೆ ಇರುವುದಿಲ್ಲ- ಬೇಕಾಗಿರುವುದೂ ಇಲ್ಲ. ಆ ಕಾಲದಲ್ಲಿ ಆತ ’ಆನಂದಲೋಕ’ದ ದ್ವಾರದಲ್ಲಿ ನಿಂತಿರುತ್ತಾನೆ. ಒಂದೊಮ್ಮೆ ಆತನ ಸಾಧನೆ ಅತ್ಯುನ್ನತವಾಗಿದ್ದರೆ ಆ ಸ್ಥಿತಿಯಲ್ಲೇ ಆತ ಪರಮಾನಂದವನ್ನು ಪಡೆಯಲು ಆರಂಭಿಸುತ್ತಾನೆ.

ಪರಮಾನಂದವೆಂದು ಅಂದುಕೊಳ್ಳುವ ಹಲವು ನಮ್ಮ ಲೌಕಿಕ ಘಟನೆಗಳು ನಿಜಕ್ಕೂ ಆ ಶಬ್ದದ ಬಳಕೆಗೆ ಅರ್ಹವಲ್ಲ! " ಎಂಥಾ ಬಿಸಿಲು ಮಾರಾಯಾ ದಾರಿಯಲ್ಲಿ ಒಳ್ಳೇ ಕಬ್ಬಿನಹಾಲು ಎಳೆನೀರು ಎಲ್ಲಾ ಸಿಕ್ತು...ಕುಡಿದುಬಿಟ್ಟೆ..ಪರಮಾನಂದವಾಯ್ತು" ಎಂದು ನಾವಂದುಕೊಳ್ಳುವುದಾಗಲೀ, " ನಮ್ಮ ಮಗ-ಮಗಳು ಎಲ್ಲಾ ಚೆನ್ನಾಗಿ ಓದಿ ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದು ನಮಗೆ ಪರಮಾನಂದ " ಎನ್ನುವ ತಂದೆ-ತಾಯಿಗಳದ್ದಾಗಲೀ, " ಈ ಸರ್ತಿ ನಮ್ಮ ಸ್ಕೂಲ್‍ಗೇ ಪ್ರಥಮ ಬಹುಮಾನ ಬಂದಿದ್ದು ನಮಗೆ ಪರಮಾನಂದ ತಂದಿದೆ " ಎಂಬ ಶಾಲೆಯ ಸಮಿತಿಯದಾಗಲೀ ನಿಜವಾದ ಪರಮಾನಂದವಲ್ಲ. ಇಲ್ಲಿರುವ ಎಲ್ಲಾ ಆನಂದಕರ ಸನ್ನಿವೇಶಗಳೂ ಘಟನೆಗಳೂ ಕೇವಲ ಕ್ಷಣಿಕ! ಗಿನ್ನೆಸ್ ದಾಖಲೆಯ ವೀರನೊಬ್ಬನ ’ಪರಮಾನಂದ’ ಇನ್ನೊಬ್ಬ ಆ ದಾಖಲೆಯನ್ನು ಮುರಿಯುವವರೆಗೆ, ಜಪಾನಿನಲ್ಲಿ ನೆಲೆಸಿರುವ ಮಕ್ಕಳನ್ನು ಕಂಡು ಅನಿಭವಿಸುವ ’ಪರಮಾನಂದ’ ಭೂಕಂಪ ಸಂಭವಿಸುವವರೆಗೆ, ತಾನೇ ಸುಂದರಿ ಎಂದು ’ಡ್ರೀಮ್ ಗರ್ಲ್’ ಪಟ್ಟಪಡೆದ ಹೆಣ್ಣಿನ ’ಪರಮಾನಂದ’ ಮುಖದ ಚರ್ಮ ಸುಕ್ಕುಗಟ್ಟುವವರೆಗೆ,ಮೊನ್ನೆ ಮೊನ್ನೆಯವರೆಗೆ ನಾಯಕಿಯಾಗಿ ನಾಚುತ್ತಾ ಬಳುಕುತ್ತಾ ಬಿಂಕದ ಬೆಡಗು ಮೆರೆದ ನಟಿಯ ’ಪರಮಾನಂದ’ ಅಮ್ಮನ ಪಾತ್ರವನ್ನು ಅನಿವಾರ್ಯವಾಗಿ ಒಪ್ಪಿ ಮಾಡಬೇಕಾದ ನೈಜಸ್ಥಿತಿ ತಲುಪುವವರೆಗೆ, ೧೯೮೫-೮೬ ರಲ್ಲಿ ಹೆಮ್ಮೆಯಿಂದ ಪರರಿಗೆ ತೋರಿಸಲು ತಮ್ಮ ಶ್ರೀಮಂತಿಕೆಯ ದ್ಯೋತಕವಾಗಿ ’ಪ್ರೀಮಿಯರ್ ಪದ್ಮಿನಿ’ ಕರೀದಿಸಿದಮ್ ’ಪರಮಾನಂದ’ಇದ್ದಿದ್ದು ಅಕ್ಕ-ಪಕ್ಕದವರು ಸ್ಯಾಂಟ್ರೋ,ಫೋರ್ಡ್, ಸ್ಕಾರ್ಪಿಯೋ,ಇನ್ನೊವಾ, ಇನ್ಯಾವುದೊ ನೋವಾ ಕೊಳ್ಳುವವರೆಗೆ! ತನ್ನನ್ನು ಬಿಟ್ಟರೆ ಇನ್ನೊಬ್ಬ ಉದ್ದಿಮೆದಾರನಿಲ್ಲ ಎಂಬ ಬೆಳವಣಿಗೆ ಮತ್ತೊಬ್ಬ ಉದ್ದಿಮೆದಾರ ಮೊದಲಿನಾತನಿಗಿಂತ ಹೆಚ್ಚಿಗೆ ಬೆಳೆಯುವವರೆಗೆ---ಹೀಗೇ ಲೌಕಿಕದ ಯಾವುದೇ ಸಾಧನೆ ತೆಗೆದುಕೊಳ್ಳಿ ಅದು ಶಾಶ್ವತವಲ್ಲ! ಇದು ಕೇವಲ ಲೌಕಿಕಾನಂದವೇ ಹೊರತು ಪರಮಾನಂದವಲ್ಲ.

ಪರಮಾನಂದದ ಸ್ಥಿತಿ ತಲುಪಿದ ವ್ಯಕ್ತಿಯ ಸಾಧನೆಯನ್ನು ಮುರಿಯುವ ಮತ್ತೊಬ್ಬ ಹುಟ್ಟುವುದಿಲ್ಲ! ಅಲ್ಲಿ ಯಾವುದೇ ವಿಷಯಕ್ಕೂ ಪೈಪೋಟಿಯಿಲ್ಲ; ವಿಷಯವಸ್ತುಗಳೇ ಇಲ್ಲ! ಅಂತಹ ಪರಮಾನಂದ ಸ್ಥಿತಿಯನ್ನು ತಲುಪುವುದು ಸಾಧಾರಣ ಧ್ಯಾನದಿಂದ ಸಾಧ್ಯವಿಲ್ಲ. ಪ್ರಯತ್ನಿಸಿ ಪ್ರಯತ್ನಿಸಿ ಪ್ರಯತ್ನಿಸಿ ಧ್ಯಾನವನ್ನು ಅಂತಹ ಮಟ್ಟಕ್ಕೆ ಬೆಳೆಸಿದರೆ, ನಡೆಸಿದರೆ ಬಹಳ ನಿಧಾನಗತಿಯಲ್ಲಿ ಸಿಗುವ ಅತ್ಯುತ್ಕೃಷ್ಟ ಫಲ ಅದು. ಆ ಸಾಧಕ ಜಗತ್ತಿನ ಯಾವುದೇ ಭಾಷೆಯನ್ನೂ ಅಧ್ಯಯನ ಮಾಡದೇ ಬಳಸಬಲ್ಲ! ಯಾವ ಧರ್ಮಗ್ರಂಥವನ್ನಾದರೂ ಓದದೇ ಹೇಳಬಲ್ಲ! ಯಾವ ತಂತ್ರಜ್ಞಾನವನ್ನಾದರೂ ಕುಳಿತಲ್ಲೇ ನಿಯೋಜಿಸಬಲ್ಲ-ನಿಯಂತ್ರಿಸಬಲ್ಲ! ಅಂತಹ ಅಸಾಧಾರಣ ಶಕ್ತಿ ಒದಗಿಬರುತ್ತದೆ. ಅಂತಹ ಶಕ್ತಿಯನ್ನು ಪಡೆದ ಸನ್ಯಾಸಿಗಳು ಲೌಕಿಕವಾಗಿ ಇತರರ ಬಳಲುವಿಕೆಗಳನ್ನು ಪರಿಗಣಿಸಿ, ಅವರ ನೋವುಗಳನ್ನು ತಾವು ಸ್ವೀಕರಿಸಿ ಅನುಭವಿಸಿ ತಮ್ಮ ಧ್ಯಾನದ ಶಕ್ತಿಯ ಫಲದಿಂದ ಜನಸಾಮಾನ್ಯರನೇಕರ ರೋಗರುಜಿನ-ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ನಿಗ್ರಹಾನುಗ್ರಹ ಸಮರ್ಥರು ಎನ್ನುತ್ತೇವೆ.

ಧ್ಯಾನದ ಸ್ಥಿತಿ ಎಣ್ಣೆಗಂಬ ಏರಿದಂತೇ ಇರುತ್ತದೆ. ಅದನ್ನು ನಾವು ಏರಿದಷ್ಟೂ ಯಾರೋ ನಮಗೆ ಮತ್ತಷ್ಟು ಎಣ್ಣೆಯನ್ನು ಸುರಿದು ಜಾರುವಂತೇ ಮಾಡುತ್ತಿದ್ದಾರೆನ್ನುವಂತಹ ಭಾಸವಾಗುತ್ತದೆ. ಜಾರುಗಂಬವನ್ನು ಮಲ್ಲಯುದ್ಧ ಪರಿಣತರು ಬಿಟ್ಟೂ ಬಿಡದೇ ಏರುವಂತೇ ಧ್ಯಾನವೆಂದ ಮಲ್ಲಗಂಬವನ್ನು ನಾವು ಏರಲು ಪ್ರಯತ್ನಿಸುವುದೇ ನಮ್ಮೊಳಗೆ ಕುಳಿತ ಪ್ರಾಣವಾಯುವಿನ ಅಥವಾ ಪ್ರಾಣಶಕ್ತಿಯ ಅರಿಯುವಿಕೆಗಾಗಿ! ಇಂತಹ ಪ್ರಾಣಶಕ್ತಿಯ ಪರಿಪೂರ್ಣ ಅರಿವು ನಮಗಾದರೆ ಅದೇ ಆತ್ಮಸಾಕ್ಷಾತ್ಕಾರ. ಈ ಧ್ಯಾನದ ಮಾರ್ಗ ಎಲ್ಲರಿಗೂ ಹಿಡಿಸುವುದಿಲ್ಲ. ಯಾಕೆಂದರೆ ಅದು ಕ್ಷಣಿಕಸುಖವನ್ನು ನೀಡುವ ಮಾರ್ಗವಲ್ಲ. ಧ್ಯಾನ ಆಯುರ್ವೇದದಂತೇ ಬಹಳ ಪರಿಣಾಮಕಾರಿ. ಆದರೆ ಅಲೋಪಥಿ ಚಿಕಿತ್ಸೆಯ ಕ್ಷಣಿಕ ಪರಿಣಾಮವನ್ನು ಮೆಚ್ಚಿಕೊಂಡವರಿಗೆ ಆಯುರ್ವೇದದ ಮಹತ್ವ ಅರಿವಿಗೆ ಬಾರದಲ್ಲಾ ಹೀಗಾಗಿ ’ನಮಗೆ ಪೂಜೆ ಧ್ಯಾನ ಅಂದ್ರೆಲ್ಲಾ ಆಸಕ್ತಿಯಿಲ್ಲ... ನಮ್ಮ ಕೆಲ್ಸಾಯ್ತು ನಾವಾಯ್ತು...ನಾವು ಮಾಡೋ ಕೆಲ್ಸದಲ್ಲೇ ದೇವರು ಇದ್ದಾನೆ’ ಎನ್ನುವವರಿದ್ದಾರೆ. ಅದೂ ಸರಿಯೇ ಆದರೆ ಅವರು ಪರಮಾನಂದಕ್ಕೆ ಅರ್ಹರಲ್ಲ. ಅವರು ಮಾಡುವ ಕೆಲಸದಲ್ಲಿ ದೇವರು ಎಂಬ ಶಕ್ತಿ ಮೆಚ್ಚುವಂತೇ ನಡೆದರೆ ಆ ಕೆಲಸದಲ್ಲಿ ಅವರಿಗೆ ಔನ್ನತ್ಯ ಬರಬಹುದೇ ವಿನಃ ಅದಕ್ಕೂ ಮೀರಿದ ಸಾಧನೆ ಅವರದಾಗುವುದಿಲ್ಲ. ಮೇರೆ ಮೀರಿದ ನಿಜವಾದ ಆನಂದದ ಅನುಭೂತಿಗೆ ಅವರು ಪಾತ್ರರಾಗುವುದಿಲ್ಲ.

ಲೌಕಿಕವಾಗಿ ನಾವು ಯಾವುದೇ ಕೆಲಸದಲ್ಲಿ ತೊಡಗಿದ್ದರೂ ಒಮ್ಮೆ ಯೋಚಿಸಿ ನೋಡಿ: ಅದು ನಮ್ಮ ಜನ್ಮಾಂತರದ ಕರ್ಮಬಂಧನವೇ ಹೊರತು ನಾವಾಗಿ ನಾವು ಆಯ್ದುಕೊಂಡ ಪ್ರದೇಶ ಇದಲ್ಲ. ಯಾರೋ ಒಬ್ಬಾತ ಬಡವನಾಗಿ ಇನ್ನೊಬ್ಬ ಸಿರಿವಂತನಾಗಿ ಬದುಕುವುದು ಕೇವಲ ಲೌಕಿಕದ ಪರಿಣಾಮವಲ್ಲ. ಭಿಕ್ಷುಕ ಹಾಗೆ ಭಿಕ್ಷಾಟನೆ ಮಾಡಲು ಆತನ ಜನ್ಮಾಂತರದ ಕರ್ಮಫಲ ಕಾರಣವಾಗಿರುತ್ತದೆ. ಬಡ ಮನೆತನದಲ್ಲೇ ಹುಟ್ಟಿದ ವ್ಯಕ್ತಿಯೊಬ್ಬ ಜಗತ್ತಿನಲ್ಲೇ ಸಿರಿವಂತನಾಗಿ ಮೆರೆಯುವುದು ಶ್ರೀಮಂತನೊಬ್ಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವುದು ಅವರವರ ವಿಧಿ. ಇಂತಹ ಜನ್ಮಗಳೆಷ್ಟನ್ನೋ ಪೂರೈಸಿದರೂ ನಮಗೆ ’ಪರಮಾನಂದದ’ ಸ್ಥಿತಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಹಿಂದೆಮಾಡಿದ ಪಾಪ-ಪುಣ್ಯಗಳನ್ನು ಈ ಜನ್ಮದಲ್ಲೂ ಇಂದು ಮಾಡುತ್ತಿರುವುದನ್ನು ಮುಂದಿನ ಜನ್ಮದಲ್ಲೂ ಅನುಭವಿಸುವವರಾಗಿ ಜನನ-ಮರಣಗಳ ಚಕ್ರದಲ್ಲಿ ಸುತ್ತುತ್ತಿದ್ದೇವೆ. ಒಂದರೆಕ್ಷಣ ಆ ಬಗ್ಗೆ ಆಲೋಚಿಸಿದರೆ ಧ್ಯಾನದ ಮಹತ್ವ ಅರಿವಿಗೆ ಬರುತ್ತದೆ. ಧ್ಯಾನದಲ್ಲಿ ಸ್ವಲ್ಪವೇ ತೊಡಗಿಕೊಂಡರೂ ರಕ್ತದೊತ್ತಡದ ವ್ಯತ್ಯಾಸ, ಹಲವು ಕಾಯಿಲೆಗಳು ನಿವಾರಣೆಯಾದ ದಾಖಲೆಗಳು ಸಿಗುತ್ತವೆ. ನಮ್ಮ ಸುತ್ತ ಯಾರೋ ಏನೋ ಹೇಳಿದರು ಎಂಬುದನ್ನು ಮರೆತು ಧ್ಯಾನಾಸಕ್ತರಾದರೆ ಮನದ ಕ್ಲೇಶಗಳು ನಾಶವಾಗುತ್ತವೆ. ಇದ್ದನ್ನರಿತ ದಾಸರು ಇತರರಿಗೂ ಹೇಳಿದರು...

ನಾ ನಿನ್ನ ಧ್ಯಾನದೊಳಿರಲು ಸದಾ .....ಮಿಕ್ಕ ಹೀನಮಾನವರಿಂದ


ಜಗತ್ತಿಗೇ ಅನ್ವಯಿಸುವ ನಿಜಾರ್ಥದ ಮಾನವ ಧರ್ಮವನ್ನು ತನ್ನ ಅತೀ ಕಮ್ಮೀ ವಯದಲ್ಲೇ ತಿಳಿಸಿಕೊಟ್ಟು ಜಗದ್ಗುರುವೆನಿಸಿದ ಆದಿಶಂಕರರೂ ಇದನ್ನೇ ಹೇಳಿದರು

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ |
ಇಹ ಸಂಸಾರೇ ಬದುದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ ||

ಇಲ್ಲಿ ಮುರಾರಿ ಎಂದಿದ್ದಾರೆ ಎಂದಾಕ್ಷಣ ಕೇವಲ ಹಿಂದೂ ದೇವರೆಂಬ ಭಾವನೆ ಬೇಡ. ಆಯಾಯ ಧರ್ಮಗಳವರೌ ಅವರವರ ದೇವರುಗಳನ್ನು ಆರಾಧಿಸಿಬಹುದು. ಸೂರ್ಯನ ಕಿರಣಗಳ ಮೂಲವನ್ನು ಹುಡುಕುತ್ತಾ ನಡೆದರೆ ಹಲವು ಕೋಟಿ ಕಿರಣಗಳು ಸೇರುವುದು ಕೇವಲ ಸೂರ್ಯನೊಬ್ಬನನ್ನೇ ! ಅದರಂತೇ ಯಾವುದೇ ದೇವರನ್ನು ನೆನೆದರೂ ಅದು ಸಲ್ಲುವುದು ಜಗನ್ನಿಯಾಮಕ ಶಕ್ತಿಯೊಂದಕ್ಕೇ. ಇಂತಹ ಧ್ಯಾನದೆಡೆಗೆ ಒಮ್ಮೆ ಗಮನ ಹರಿಸೋಣ. ಮೇರೇ ಮೀರಿದ ಪರಮಾನಂದ ಎಲ್ಲರಿಗೂ ಸಿಗುವಂತಾಗಲಿ ಎಂದು ಪ್ರಾರ್ಥಿಸೋಣ,


|| ಶುಭಂ ಭ್ರೂಯಾತ್ ||