ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 1, 2011

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ !

ಕಾಲ್ಪನಿಕ ಚಿತ್ರ ಕೃಪೆ: ಅಂತರ್ಜಾಲ

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ !

ಕುಸಿದುಬಿದ್ದ ಹುಡುಗಿಯ ಸುತ್ತ ಎಲ್ಲಾ ತರಗತಿಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಬೋಧಕರೂ ಸೇರಿಕೊಂಡರು. ಹಲವರು ಆಕೆಗೆ ಗಾಳಿ ಬೀಸಲಾರಂಭಿಸಿದರು. ಇನ್ನೂ ಕೆಲವರು ನೀರನ್ನು ಹೊತ್ತು ತಂದರು. [ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಅಕಸ್ಮಾತ್ ಬೇಕಾದರೆ ಶಿಕ್ಷಕರು ಅಕ್ಕಪಕ್ಕದ ಮನೆಗಳಿಂದ ತರಿಸುತ್ತಿದ್ದರು.] ಸಹಪಾಠಿಗಳನೇಕರು ಚಿಂತಾಕ್ರಾಂತರಾಗಿದ್ದರು. ಹುಡುಗಿ ಸತ್ತೇ ಹೋಗಿದ್ದಾಳೇನೋ ಎಂಬ ಭಯವೂ ಕಾಡದಿರಲಿಲ್ಲ. ೮ ವಯಸ್ಸಿನ ಆ ಹುಡುಗಿಯನ್ನು ಕೆಲವು ವಿದ್ಯಾರ್ಥಿಗಳ ಸಹಾಯದೊಂದಿಗೆ ಶಿಕ್ಷಕರು ಎತ್ತಿ ಶಾಲೆಯ ಬೋಧನಾಕೊಠಡಿಗೆ ಕೊಂಡೊಯ್ದು ಕುಳಿತುಕೊಳ್ಳುವ ಹಲಗೆಯೊಂದರ ಮೇಲೆ ಮಲಗಿಸಿದರು. ಕೆಲವರು ಕೈಹಿಡಿದು ಅಲ್ಲಾಡಿಸಿದರು. ಕೆಲವರು ಲಿಂಬೇಹಣ್ಣು ಕಿವುಚಿ ಮೂಗಿನ ಹತ್ತಿರ ಹಿಡಿದರು. ಕೆಲವರು ಹೆಸರು ಹಿಡಿದು ಜೋರಾಗಿ ಕೂಗಿದರು. ಏನು ಮಾಡಿದರೂ ಊಹೂಂ.... ಸಹ ಶಿಕ್ಷಕರೊಬ್ಬರು ಮೂಗಿನ ಹತ್ತಿರ ಬೆರಳಿಟ್ಟು ನೋಡಿ "ಶ್ವಾಸವೇ ಆಡುತ್ತಿಲ್ಲಾ ಅನುಮಾನ" ಎಂದುಬಿಟ್ಟರು !

ಆಗ ಬೆಳಿಗ್ಗೆ ೭:೪೫ರ ಸಮಯ. ನಮ್ಮೂರ ಸರಕಾರೀ ಶಾಲೆಯಲ್ಲಿ ’ಜನ ಗಣ ಮನ ....’ ಪ್ರಾರ್ಥನೆ ನಡೆಯುತ್ತಿತ್ತು. ಬೇಸಿಗೆಯ ಬಿಸಿಲಿನ ಬೇಗೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿಬಿಟ್ಟಿತ್ತು. ಅದು ಹೇಳೀ ಕೇಳೀ ಕರಾವಳಿ-ಮಲೆನಾಡು.[ಅತ್ತ ಪೂರ್ಣ ಕರಾವಳಿಯೂ ಅಲ್ಲದ ಇತ್ತ ಪೂರ್ಣ ಮಲೆನಾಡೂ ಅಲ್ಲದ ಪ್ರದೇಶ.] ಆದರೆ ಭೌಗೋಳಿಕವಾಗಿ ಅದನ್ನು ಕರಾವಳಿ ಎಂದೇ ಕರೆಯುತ್ತಾರೆ. ಕರಾವಳಿಯ ಶಾಲೆಗಳಲ್ಲಿ ಶಿಸ್ತು ಸಂಯಮಕ್ಕೆ ಬಹಳ ಆದ್ಯತೆ. ವಿದ್ಯಾರ್ಜನೆಗೆ ಬರುವವರೆಲ್ಲಾ ಮುಗ್ಧ ಮಕ್ಕಳು. ಪಟ್ಟಣದ ಮಕ್ಕಳಂತೆಲ್ಲಾ ಅತೀ ಬುದ್ಧಿವಂತಿಕೆಯನ್ನಾಗಲೀ ಆಡಂಬರವನ್ನಾಗಲೀ ಮೆರೆದವರಲ್ಲ. ತಾವಾಯಿತು ತಮ್ಮ ಕರ್ತವ್ಯವಾಯಿತು ಅಷ್ಟೇ ಅವರ ಕಥೆ. ಬೆಳಿಗ್ಗೆ ಗಡಿಬಿಡಿಯಲ್ಲಿ ತಿಂಡಿ ತಿಂದು ಹೊರಟರೆ ಮತ್ತೆ ೧೧ ಗಂಟೆಗೆ ಶಾಲೆಯ ಬೆಳಗಿನ ಬೋಧನಾವೇಳೆ ಮುಗಿದು ಮಧ್ಯಾಹ್ನ ೧೧ ರಿಂದ ೨ ಗಂಟೆಯ ವರೆಗೆ ವಿರಾಮವಿರುತ್ತಿತ್ತು. ಮನೆಗೆ ಬಂದು ಸ್ನಾನ ಊಟ ಇತ್ಯಾದಿ ಪೂರೈಸಿ ಮರಳಿದರೆ ಪುನಃ ತೆರೆದುಕೊಳ್ಳುವ ಶಾಲೆ ಸಂಜೆ ೫:೩೦ಕ್ಕೆ ಮುಗಿಯುತ್ತಿತ್ತು.


ಬೋಧಕರೂ ಸಹ ತಮ್ಮಲ್ಲಿ ಕಲಿಯುವವರನ್ನು ಮುಂದೆ ಪ್ರತಿಭಾವಂತರನ್ನಾಗಿ ಬೆಳೆಸಬೇಕೆಂಬ ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕರಾಗಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳನ್ನು ತಮ್ಮ ಮಕ್ಕಳಂತೇ ಹಚ್ಚಿಕೊಳ್ಳುತ್ತಿದ್ದರು; ಪ್ರೀತಿಸುತ್ತಿದ್ದರು. ಮನೆಯಲ್ಲಿ ಅಮ್ಮ-ಅಪ್ಪನ ಜೊತೆ ಜಗಳವಾಡಿ ಟೂ ಬಿಟ್ಟರೆ ಹೇಗೋ ಹಾಗೇ ಶಾಲೆಯಲ್ಲಿ ಅವರುಗಳು ಶಿಕ್ಷಿಸಿದಾಗ ಒಂದೆರಡು ದಿನ ಅವರುಗಳ ಮುಖ ಸರಿಯಾಗಿ ನೋಡದಿದ್ದರೂ ಮೂರೋ ನಾಲ್ಕೋ ದಿನದಲ್ಲಿ ಅವರ ಯಾವುದೋ ಪ್ರೀತಿಯ ಮಾತಿನ ಮೋಡಿ ರಾಜಿಗೆ ನಾಂದಿಹಾಡುತ್ತಿತ್ತು. ಊರ ಮಧ್ಯದಲ್ಲಿ ಇರುವ ಜಾಗದಲ್ಲಿ ಊರ ಬ್ರಾಹ್ಮಣರ ಸಂಸ್ಥೆಯೊಂದು ಕಟ್ಟಡವನ್ನು ಕಟ್ಟಿ ನಾಲ್ಕು ಜನರಿಗೆ ಓದಲು ಉಪಕಾರವಾಗಲಿ ಎಂಬ ಕಾರಣವಾಗಿ ಉದಾರವಾಗಿ ಅದನ್ನು ಶಾಲೆಗೆ ನೀಡಿತ್ತು. ಇದು ಕೂಡ ಗೊತ್ತಾಗಿದ್ದು ಮಳೆಗಾಲದಲ್ಲಿ ಏನೋ ತಗುಲಿ ಹಂಚುಗಳು ಒಡೆದರೆ ನೀರು ಸುರಿಯಲು ಆರಂಭಿಸಿದಾಗ ಪ್ರಧಾನ ಶಿಕ್ಷಕರು ಚೀಟಿಯೊಂದನ್ನು ಬರೆದು ನಮ್ಮಂಥವರ ಮೂಲಕ ಸಂಬಂಧಿಸಿದ ಆ ಸಂಸ್ಥೆಯ ಪದಾಧಿಕಾರಿಗಳಿಗೆ ಕಳಿಸುತ್ತಿದ್ದರು ಮತ್ತು ಅವರು ಶೀಘ್ರವೇ ಬಂದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದರು.


ಊರಲ್ಲಿ ಹಿಂದೂ ಮುಸ್ಲಿಮ್ ಕ್ರೈಸ್ತರೆಲ್ಲರೂ ಬಹಳ ಅನ್ಯೋನ್ಯತೆಯಿಂದ ಇದ್ದರು. ಇಡೀ ಊರಿಗೆ ಇರುವುದು ಒಂದೇ ಶಾಲೆಯಾಗಿರುವುದರಿಂದ ಶಾಲೆಗೆ ಬೇಕಾದ ಚಿಕ್ಕಪುಟ್ಟ ಸವಲತ್ತುಗಳನ್ನು ಸರಕಾರದ ಸಹಾಯಕ್ಕೆ ಕಾಯದೇ ಊರವರೇ ನಡೆಸಿಕೊಡುತ್ತಿದ್ದರು. ಶಾಲೆಯ ಶಿಕ್ಷಕರನ್ನು ಕಂಡರೆ ಸಮಾಜದಲ್ಲಿ ಗೌರವವಿತ್ತು. ಆಗಾಗ ಬೋಧಕವರ್ಗಕ್ಕೆ ಬೇಕಾಗುವ ಉಪಕರಣಗಳು ಸೀಮೇಸುಣ್ಣದ ಕಡ್ಡಿಗಳು, ಪೀಠೋಪಕರಣಗಳು, ಚಿತ್ರ ಪಟಗಳೇ ಮೊದಲಾದವುಗಳನ್ನೂ ಮತ್ತು ಅವರ ದೈನಂದಿನ ಬೋಧನಾ ಕಾರ್ಯಕ್ಕೆ ಬೇಕಾಗುವ ಯಾವುದೇ ವಸ್ತುಗಳನ್ನೇ ಆಗಲಿ ಒದಗಿಸುವ ಸಲುವಾಗಿ ಊರ ಪ್ರಮುಖರು ಸೇರಿ ’ಶಾಲಾಭಿವೃದ್ಧಿ ಸ್ಥಾನಿಕ ಸಮಿತಿ’[ಸ್ಕೂಲ್ ಬೆಟರ‍್ಮೆಂಟ್ ಲೋಕಲ್ ಕಮಿಟಿ]ಎಂಬುದನ್ನು ಸ್ಥಾಪಿಸಿದರು. ಪಂಚಾಯತದ ಅಧ್ಯಕ್ಷರು ಈ ಸಮಿತಿಗೂ ಅಧ್ಯಕ್ಷರಾಗಿರುತ್ತಿದ್ದರು. ಹೀಗಾಗಿ ಶಾಲೆಯ ಕುಂದುಕೊರತೆಗಳನ್ನು ಸರಕಾರ ಆಲಿಸುವ ಬದಲು ಊರಜನರೇ ಆಲಿಸುತ್ತಿದ್ದರು. ಇಷ್ಟೆಲ್ಲಾ ಇದ್ದರೂ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲವೇ ಎಂಬ ಪ್ರಶ್ನೆ ನೀವು ಕೇಳುವುದು ಸಹಜವಾಗಿದೆ. ಹೌದು ಕುಡಿಯುವ ನೀರಿಗೆ ಯಾರಿಂದಲೂ ಬೇಡಿಕೆ ಬರುತ್ತಿರಲಿಲ್ಲ. ಆಗಾಗ ಬಿಡುವಿನಲ್ಲಿ ಒಂದೈದು ನಿಮಿಷ ಮೂತ್ರವಿಸರ್ಜಿಸಲು [ಇದಕ್ಕೂ ಕೂಡ ಶಾಲೆಯ ಸುತ್ತಮುತ್ತಲ ಪ್ರದೇಶಗಳೇ ಆಸರೆಯಾಗಿದ್ದವೇ ಹೊರತು ಶೌಚಾಲಯಗಳ ಅಗತ್ಯ ಕಂಡಿರಲಿಲ್ಲ. ಮೂತ್ರಕ್ಕೆ ಅವಸರವಾದರೆ ಕೃಷ್ಣ ಗೋವರ್ಧನವೆತ್ತಿದಂತೇ ಕಿರುಬೆರಳೆತ್ತಿ ತೋರಿಸಿದರೆ ನಮ್ಮ ಶಿಕ್ಷಕರು ಅನುಮತಿಸುವ ಔದಾರ್ಯ ಹೊಂದಿದ್ದರು. ನಾವು ನಿಜಕ್ಕೂ ನಿಸರ್ಗದ ಮಕ್ಕಳಾಗಿ ಅದರೊಡನೆಯೇ ಅನ್ಯಾದೃಶ ಸುಖವನ್ನು ಪಡೆದವರು ಬಿಡಿ!] ಆಚೆ ಹೋದಾಗ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದೆವು. ಸಮೃದ್ಧವಾದ ಅತಿ ಶುದ್ಧ ನೈಸರ್ಗಿಕ ತಾಜಾ ನೀರನ್ನು ನಾರಾಯಣ ಹೆಗಡೆ[ ಈ ಪುಣ್ಯಾತ್ಮ ಈಗ ದಿವಂಗತರು, ಇನ್ನೂ ಜೀವಿತದಲ್ಲಿದ್ದರೆ " ನೀವು ಸಾವಿರಾರು ಮಂದಿಗೆ ನೀರುಕುಡಿಸಿದವರು ಬಿಡಿ" ಎಂದು ತಮಾಷೆಮಾಡಬಹುದಿತ್ತೇನೋ, ನಿಜಕ್ಕೂ ಅವರು ಆ ವಿಷಯದಲ್ಲಿ ಪುಣ್ಯವಂತರು] ಎಂಬವರ ಮನೆಯಲ್ಲಿ ಧಾರಾಳವಾಗಿ ಕೊಡುತ್ತಿದ್ದರು. ನೀರಿನ ಜೊತೆಗೆ ಕೆಲವೊಮ್ಮೆ ಅವರ ತೋಟದ ಬಿಂಬಲಕಾಯಿ, ಅವರ ಮನೆ ಬೆಲ್ಲ ಹೀಗೆಲ್ಲಾ ನಮ್ಮ ಕುಡಿಯುವ ನೀರಿನ ವೈಭೋಗಕ್ಕೇನೂ ಕಡಿಮೆ ಇರಲಿಲ್ಲ -ಅದು ಇವತ್ತಿನ ನಗರದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೊತ್ತುಯ್ಯುವ ಅವಾಂತರದ್ದೂ ಆಗಿರಲಿಲ್ಲ.

ಎಷ್ಟು ಮಜಾ ಅಂತೀರಿ! ಊರಲ್ಲಿ ದೇವಸ್ಥಾನದ ಪಲ್ಲಕ್ಕಿ ಜಾತಿ-ಧರ್ಮಭೇದವರಿಯದೇ ಎಲ್ಲರ ಮನೆಗಳ ಸಮ್ಮುಖದಲ್ಲೂ ಹಾದುಹೋಗುತ್ತಿತ್ತು. ಕ್ರೈಸ್ತರು ಮತ್ತು ಮುಸ್ಲಿಮರು ಹಣ್ಣು-ಕಾಯಿ ಸಮರ್ಪಿಸಿದ್ದನ್ನು ನಾನೇ ಕಂಡಿದ್ದೇನೆ. ಹಲವು ಹಿಂದೂಗಳು ಕ್ರೈಸ್ತರ ಇಗರ್ಜಿಗೂ ಮುಸ್ಲಿಮರ ಮಸೀದಿಗೂ ಭೇಟಿಕೊಟ್ಟು ಅಲ್ಲಿ ನಡೆಯುವ ಫೀಸ್ಟ್ [ ನಮಗಾಗ ಫೀಸ್ಟ್ ಎನ್ನಲು ಬರುತ್ತಿರಲಿಲ್ಲ-ಪೇಸ್ತು ಎಂದು ಯಾರೋ ಹೇಳಿಕೊಟ್ಟಿದ್ದರು, ’ಪೇಸ್ತು’ ಎಂದರೆ ಹಿಂದೂ ಜಾತ್ರೆಯಂತೇ ಇರುತ್ತದೆಯೆಂಬುದು ನಾವು ನೋಡಿದಾಗ ತಿಳಿದಿದ್ದು.]ಮತ್ತು ಉರುಸ್ ಗಳಿಗೆಲ್ಲಾ ಹೋಗುತ್ತಿದ್ದರು. ಗೇರುಸೊಪ್ಪೆಯ ಬಾಪೂ ಸಾಬರು ನಮ್ಮನೆಯ ಹಸುವಿನ ತುಪ್ಪಕ್ಕೆ ಮಾರುಹೋಗಿದ್ದರು! ಆಗಾಗ ಬಂದು ಅಜ್ಜನೊಡನೆ ಮಾತಾಡಿಕೊಂಡು ಚಾ ಕುಡಿದು ಆಮೇಲೆ ತುಪ್ಪ ತೆಗೆದುಕೊಂಡು ಹೋಗುತ್ತಿದ್ದರು. ಡಿಯೇಗ್ ಗೊನ್ಸಾಲ್ವಿಸ್ ಎನ್ನುವವರು ಸಾಮಾಜಿಕ ನಾಟಕದಲ್ಲಿ ಉತ್ತಮ ರೀತಿಯಲ್ಲಿ ಪಾತ್ರನಿರ್ವಹಿಸುತ್ತಿದ್ದರು. ನಮ್ಮೂರಕಡೆ ಯಕ್ಷಗಾನದ ಭೋಗಸಿರಿ ಬಹಳವಾಗಿರುವುದರಿಂದಲೂ ಅಂದಿನ ಆ ದಿನಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿರುವುದರಿಂದಲೂ ಅನೇಕ ಹವ್ಯಾಸಿಗಳು ಸೇರಿ ಊರಲ್ಲಿ ಆಗಾಗ ಪೂರ್ಣರಾತ್ರಿ ಯಕ್ಷಗಾನ ನಡೆಸುತ್ತಿದ್ದರು. ಅಂತಹ ’ಗದಾಯುದ್ಧ’ ಪ್ರಸಂಗದಲ್ಲಿ ಶರೀರದಲ್ಲೂ ಬರೋಬ್ಬರಿ ಇದ್ದ ಸದ್ರಿ ಡಿಯೇಗ್ ಗೊನ್ಸಾಲ್ವಿಸರು ಭೀಮನ ಪಾತ್ರವನ್ನು ಠಾಕುಠೀಕಾಗಿ ನಿರ್ವಹಿಸಿದ್ದನ್ನು ನೋಡಿ ಬಹಳ ಆಶ್ಚರ್ಯವಾಯಿತು! ಯಕ್ಷಗಾನದ ಪಾತ್ರಧಾರಿಗಳು ಸಂಭಾಷಣೆಯನ್ನು ಗಟ್ಟುಮಾಡಿಕೊಂಡು ಹೇಳುವಂಥದ್ದಿಲ್ಲ, ಆ ಯಾ ಸಮಯಕ್ಕೆ ಉಚಿತವಾಗಿ ಮೂಲ ಕಥಾನಕಕ್ಕೆ ಧಕ್ಕೆಬಾರದ ರೀತಿಯಲ್ಲಿ ಪಾತ್ರಪೋಷಣೆ ಮಾಡುವುದು ಅಲ್ಲಿನ ಔಚಿತ್ಯ. ಅಂಥಾ ಕಲೆಯೊಂದರ ಭಾಗವಾಗಿ ಕಥೆಯ ಮೂಲರೂಪವನ್ನು ತಿಂಗಳಾನುಗಟ್ಟಲೇ ಓದಿ ತಿಳಿದು ಅವರು ಪಾತ್ರ ನಿರ್ವಹಿಸಿದ್ದರು. ಇದು ನಮ್ಮ ಊರಿನ ಉಭಯ ಕುಶಲೋಪರಿ.

ಹುಡುಗಿ ಬಿದ್ದ ಸುದ್ದಿ ಸುತ್ತಲ ಹತ್ತುಮನೆಗಳಿಗೆ ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹಬ್ಬಿ ಊರ ಹಲವರು ಶಾಲೆಗೆ ಓಡೋಡುತ್ತಾ ಬಂದರು. ಹುಡುಗಿಯ ಪಾಲಕರೂ ಉಸಿರು ಬಿಗಿಹಿಡಿದು ಏದುಸಿರು ಬಿಡುತ್ತಾ ಕಣ್ಣೀರು ಸುರಿಸುತ್ತಾ ಬಂದರು. ಎಲ್ಲರ ಮುಖದಲ್ಲೂ ಹೇಳಿಕೊಳ್ಳಲಾಗದ ದುಗುಡ. ಮಕ್ಕಳು ಯಾರವೇ ಆದರೂ ಊರಲ್ಲಿ ಯಾರೂ ಹಾಗೆಲ್ಲಾ ಬಿಟ್ಟುಕೊಡುವವರಲ್ಲ. ಅಲಿನ ನಮ್ಮ ಸಭ್ಯತೆಯೇ ನಮಗೆ ರಕ್ಷಣೆ ನೀಡುತ್ತದೆ. ಊರಲ್ಲಿ ಯಾರೋ ಒಬ್ಬರ ಮನೆಯಲ್ಲಿ ದುಃಖದ ವಾತಾವರಣವಿದ್ದರೂ ಪರೋಕ್ಷವಾಗಿ ಇಡೀ ಊರು ಅದರಲ್ಲಿ ಸಹಭಾಗಿತ್ವ ಹೊಂದಿರುತ್ತದೆ; ಆ ಸಮಯದಲ್ಲಿ ಇರುವ ಯಾವುದೇ ವಿಶೇಷ ಕಾರ್ಯಕ್ರಮಗಳೂ ಮುಂದೂಡಲ್ಪಡುತ್ತವೆ ಇಲ್ಲಾ ರದ್ದಾಗಲ್ಪಡುತ್ತವೆ. ಇದು ಹಿಂದಿಗೂ ಇಂದಿಗೂ ಅನ್ವಯವಾದ ವಿಚಾರ. ಒಟ್ಟೂ ಪಾಪದ ಹುಡುಗಿಗೆ ಏನಾಯಿತು ಎಂಬುದೇ ಅಲ್ಲರ ಮನದಲ್ಲಿ ಎದ್ದ ಪ್ರಶ್ನೆ. ತಲೆಗೊಂದರಂತೇ ಸಲಹಗಳಿಗೇನೂ ಕಮ್ಮಿ ಇರಲಿಲ್ಲ. ಎಲ್ಲರೂ ಅವರವರಿಗೆ ಅನಿಸಿದ್ದನ್ನು ಮಾಡುತ್ತಲೇ ಇದ್ದರು.
ಶಿಕ್ಷಕರು ಊರ ವೈದ್ಯರನ್ನು ಕರೆತರಲು ಯಾರನ್ನೋ ಕಳಿಸಿದ್ದರು. ಹಳ್ಳಿಯಲ್ಲವೇ ಅಲ್ಲಿ ಮಧ್ಯದಲ್ಲೆಲ್ಲಾ ಡಾಮರು ರಸ್ತೆಯಿರುವುದಿಲ್ಲ, ಕೆಲವೊಮ್ಮೆ ರಸ್ತೆಯೇ ಇರುವುದಿಲ್ಲ, ಕಾಲುಹಾದಿಯೇ ಗತಿ. ಗದ್ದೆ ತೋಟಗಳ ಬದುವಿನಲ್ಲಿ ಹಾದು ಹೋಗುವ ಕಾವಿನಾಕಾರದ ಕಾಲು ಹಾದಿಯಲ್ಲಿ ನಾವು ನಡೆಯುತ್ತಿದ್ದೆವು. ಮಂಜ ಮುಂಜಾನೆಗಳ ಎಳೆಬಿಸಿಲಿನಲ್ಲಿ ಆ ದಾರಿಯಲ್ಲಿ ನಮ್ಮ ಪ್ರಭಾತಪೇರಿ ನಡೆಯುತ್ತಿತ್ತು-ಅದು ಮರೆಯಲಾಗದ ನಿತ್ಯ ನೂತನ ಮನೋವೈಭವ!

ಇರಲಿ, ಅಂತೂ ವೈದ್ಯರನ್ನು ಕರೆತರುವಾತ ಓಡುತ್ತಲೇ ಹೋದ. ಊರಲ್ಲಿರುವುದು ಒಂದೇ ಚಿಕಿತ್ಸಾಲಯ-ಇಂದಿನಂತೇ ಮೂರುಜನರಿಗೆ ನೂರು ವೈದ್ಯರು ಎನ್ನುವ ಪರಿಸ್ಥಿತಿಯಲ್ಲ! ವೈದ್ಯರು ಸ್ನಾನಕ್ಕೆ ಇಳಿದಿದ್ದರಂತೆ. ವೈದ್ಯರ ಮನೆಯಲ್ಲಿ ಪರದೆ ಸರಿಸಿ ಹೊರಕೋಣೆಗೆ ಬಂದರೆ ಅದೇ ಚಿಕಿತ್ಸಾಲಯ ಹೀಗಾಗಿ ಅದೊಂದು ೨೪/೭ ಚಿಕಿತ್ಸಾಲಯ ಅನ್ನಿ! ಹೋದಾತ ಹೊರಗಿನಿಂದಲೇ ಕೂಗಿಕೊಂಡಿದ್ದು ಒಳಗೆ ಬಚ್ಚಲುಮನೆಯಲ್ಲಿರುವ ವೈದ್ಯರಿಗೆ ಕೇಳಿಸಿತು. ಸರಳ ಸಜ್ಜನರಾದ ಅವರೂ ತಾವೂ ಕೂಗಿ "ಬೇಗ ಬಂದೇ" ಎಂದರಂತೆ. ಆತ ಅಲ್ಲೇ ನಿಂತ. ಗಡಿಬಿಡಿಯಲ್ಲಿ ಸ್ನಾನ ಮುಗಿಸಿದ ವೈದ್ಯರು ದೇವರಪಟಗಳಿಗೆ ಕೈಮುಗಿದ ಶಾಸ್ತ್ರಮಾಡಿ ಪ್ಯಾಂಟು ಸಿಗಿಸಿಕೊಂಡು ಓಡುತ್ತಲೇ ಬಂದರು. ಮುಂದೆ ವೈದ್ಯರು-ಅವರ ಹಿಂದೆ ಕರೆಯಲು ಹೋದಾತ, ಆತನ ಕೈಯ್ಯಲ್ಲಿ ವೈದ್ಯರ ಚಿಕಿತ್ಸೆಯ ಬ್ಯಾಗು. ಶಾಲೆಯ ಮುಂದೆ ಗದ್ದೆ ಇದ್ದುದರಿಂದ ಗದ್ದೆಯ ಬದುವಿನ ಕಿರುದಾರಿಯಲ್ಲಿ ಅವರುಗಳು ಓಡುತ್ತಾ ಬರುವ ಚಿತ್ರಣ ಕಾಣುತ್ತಿತ್ತು. ಎಲ್ಲರೂ ಕಣ್ ಕಣ್ ಬಿಡುತ್ತಾ ನಿಂತಿದ್ದರು.

ವೈದ್ಯರು ಬಂದವರೇ ತಮ್ಮ ಸಂಚಿಯೊಳಗಿನಿಂದ ಸ್ಟೆಥಾಸ್ಕೋಪ್[ ನಮಗೆ ಆಗೆಲ್ಲಾ ಹೇಳಲು ಬರುತ್ತಿರಲಿಲ್ಲ ಬಿಡಿ ಕಿವಿಗಿಟ್ಟ್ಕೊಂಡು ಹೊಟ್ಟೆ ಪರೀಕ್ಷೆ ಮಾಡೋದು ಎನ್ನುತ್ತಿದ್ದೆವು!]ತೆಗೆದು ಹುಡುಗಿಯನ್ನು ಪರೀಕ್ಷಿಸ ಹತ್ತಿದರು. ಹುಡುಗಿ ಸತ್ತಿಲ್ಲ ಮೂರ್ಚೆಹೋಗಿದ್ದಾಳೆ ಬಹುಶಃ ಬಿಸಿಲಲ್ಲಿ ತಲೆಸುತ್ತು ಬಂದಿರಬೇಕು ಎಂದರು. ಬ್ಯಾಗಿನಿಂದ ಏನೆನನ್ನೋ ತೆಗೆದು ಚುಚ್ಚು ಮದ್ದು ಕೊಡುವ ತಯಾರಿ ನಡೆಸಿದರು. ಇದನ್ನೆಲ್ಲಾ ಮಲಗಿದಲ್ಲಿಂದಲೇ ಸಣ್ಣ ಕಣ್ಣಂಚಿನಿಂದ ನೋಡುತ್ತಾ ಇದ್ದ ಆ ಹುಡುಗಿ ನಗುತ್ತಾ "ಅದೇನೂ ಬೇಡಾ ಡಾಕ್ಟ್ರೇ ನನಗೀಗ ಎಲ್ಲಾ ಆರಾಮಾಯ್ತು" ಎಂದು ನಗುತ್ತಾ ಎದ್ದು ಕುಳಿತಳು! ವೈದ್ಯರಿಗೆ ಇದೇನು ಕನಸೋ ನಿಜವೋ ಅರಿವಾಗಲಿಲ್ಲ. ಸೇರಿದ ಊರ ಹತ್ತು ಸಮಸ್ತರು ಬಹಳ ಕೌತುಕದಿಂದ ವೀಕ್ಷಿಸಿದರು. ಯಾರಿಗೂ ಏನೂ ಅರ್ಥವಾಗಲಿಲ್ಲ. ಎಲ್ಲರೂ ತಬ್ಬಿಬ್ಬು. ವೈದ್ಯರಿಗೆ ಇಂಥಾದ್ದು ಹೊಸ ಅನುಭವ! ತಿರುಗಿ ಬಿದ್ದ ಹುಡುಗಿ ಸುಧಾರಿಸಿಕೊಂಡರೆ ಆ ಥರ ಸಟಕ್ಕನೇ ಮಾತನಾಡಲಾಗುತ್ತಿರಲಿಲ್ಲ, ಆಡಿದರೂ ತಾನೆಲ್ಲಿದ್ದೇನೆ-ಯಾಕೆಲ್ಲಾ ಹೀಗಾಯಿತು ಎಂಬೆಲ್ಲಾ ಪ್ರಶ್ನೆಗಳು ಆಕೆಯನ್ನು ಕಾಡಬೇಕಾಗಿತ್ತು. ಆದರೆ ಇಲ್ಲಿ ಆಕೆ ಮಾಮೂಲಿ ಇರುವವರ ಹಾಗೇ " ಏನೂ ಆಗಿಲ್ಲಾ " ಎನ್ನುತ್ತಾ ಸಲೀಸಾಗಿ ಎದ್ದುಕುಳಿತು ನಗುತ್ತಿದ್ದಾಳೆ! ವೈದ್ಯರು ಅರೆಕ್ಷಣ ತಮ್ಮನ್ನೇ ತಾವು ಸುಧಾರಿಸಿಕೊಳ್ಳಬೇಕಾಯಿತು.

ಸಮಸ್ಯೆಯ ಹುರುಳು ಯಾರ ಅರಿವಿಗೂ ಬರಲಿಲ್ಲ. ಅದಕ್ಕೆಲ್ಲಾ ಕಾರಣ ಶಾಲೆಯ ಇಬ್ಬರು ಶಿಕ್ಷಕರು. ಪ್ರಧಾನ ಶಿಕ್ಷಕರು ಮತ್ತು ಮತ್ತೊಬ್ಬರು ಸಹಶಿಕ್ಷಕರು. ಮಾರ್ಚ್ ತಿಂಗಳ ಕೊನೆಗೆ ಪರೀಕ್ಷೆಗಳೆಲ್ಲಾ ಮುಗಿದು ನಿರುಮ್ಮಳರಾಗುವ ಹೊತ್ತಿಗೆ ಏಪ್ರಿಲ್ ಬರುತ್ತದಲ್ಲಾ ಆಗ ಏಪ್ರಿಲ್ ಹತ್ತನೇ ತಾರೀಖಿನವರೆಗೂ ಕೇವಲ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿರುತ್ತದೆ. ಆಗ ಬೇಸರಬಾರದಿರಲಿ ಎಂಬ ಕಾರಣಕ್ಕೆ ಮಕ್ಕಳನ್ನೂ ಶಾಲೆಗೆ ಕೆಲವು ಗಂಟೆಗಳ ಕಾಲ ಬರಹೇಳುತ್ತಿದ್ದರು. ಎಂದಿನಂತೇ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಮಾಡಿ ನಂತರ ಮಕ್ಕಳು ಆಟವಾಡಿಕೊಳ್ಳುವಾಗ ಶಿಕ್ಷಕರು ಮೌಲ್ಯಮಾಪನ ಮಾಡುತ್ತಿದ್ದರು. ಏಪ್ರಿಲ್ ಹತ್ತಕ್ಕೆ ಫಲಿತಾಂಶ ಘೋಷಿಸಿ ಮನೆಗೆ ಸಾಗಿದರೆ ಮುಂದಿನ ಎರಡು ತಿಂಗಳು ಮಕ್ಕಳ-ಶಿಕ್ಷಕರ ಭೇಟಿ ಇರುತ್ತಿರಲಿಲ್ಲ. ಹೀಗಾಗಿ ತಮಾಷೆಗಾಗಿ ಶಿಕ್ಷಕರು ’ಏಪ್ರಿಲ್ ಫೂಲ್ ’ ಕಾರ್ಯಕ್ರಮ ರೂಪಿಸಿದ್ದರು. ಇದು ಮಿಕ್ಕುಳಿದ ಶಿಕ್ಷಕ/ಶಿಕ್ಷಕಿಯರಿಗೂ ತಿಳಿದಿರಲಿಲ್ಲ. ಬೀಳುವ ಹುಡುಗಿಯನ್ನು ಪ್ರತ್ಯೇಕ ಕರೆದು ಅವಳಿಗೆ ತರಬೇತಿ ನೀಡಿ ಯಾರಿಗೂ ತಿಳಿಯದ ಹಾಗೇ ನಿರೂಪಿಸಿದ ಅವರ ಜಾಣ್ಮೆ ಮೆಚ್ಚುವಂಥದ್ದಾಗಿತ್ತು. ಮೊದಲೇ ಆಯೋಜಿಸಿದಂತೇ ಎಲ್ಲರಿಗೂ ಬೆಲ್ಲ-ನೀರು, ಲಿಂಬೂ ಪಾನಕದ ವಿತರಣೆಯಾಯಿತು. ವೈದ್ಯರಾದಿಯಾಗಿ ಸೇರಿದ್ದ ಊರಜನತೆ, ಮಕ್ಕಳು ಮತ್ತು ಬೋಧಕವರ್ಗ ಎಲ್ಲರೂ ಖುಷಿಪಟ್ಟರು ಎಂಬಲ್ಲಿಗೆ ಈ ಕಥೆಗೆ ಮಂಗಳವಪ್ಪುದು!