ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 8, 2012

’ಭೀಮಾ ತೀರದಲ್ಲಿ’ ಎಸೆದ ಕಲ್ಲಿಗೆ ಹಣ್ಣು ಬೀಳಲೇ ಇಲ್ಲ!


’ಭೀಮಾ ತೀರದಲ್ಲಿ’ ಎಸೆದ ಕಲ್ಲಿಗೆ ಹಣ್ಣು ಬೀಳಲೇ ಇಲ್ಲ!

ಪತ್ರಕರ್ತರೆಲ್ಲಾ ಸಾಹಿತಿಗಳಲ್ಲ, ಆದರೆ ಸಾಹಿತಿಗಳು ಪತ್ರಕರ್ತರಾಗಲೂ ಬಹುದು ಎಂಬುದು ನನ್ನ ಅನಿಸಿಕೆ. ಭಾಷಾ ಪ್ರೌಢಿಮೆಯನ್ನು ಬೆಳೆಸಿಕೊಂಡು ಕೆಲವರು, ಹಲವು ಸಾಹಿತಿಗಳ ಮತ್ತು ಜನಪದರ ಪದಪುಂಜಗಳನ್ನು ಅಲ್ಲಲ್ಲಿ ಬಳಸುತ್ತಾ, ಹೊಸದೇನನ್ನೋ ಕೊಡುತ್ತೇನೆ ಎನ್ನುತ್ತಾ ಹಳೆಯ ಹೆಂಡವನ್ನೇ ಹೊಸ ಬಾಟ್ಲಿಯಲ್ಲಿ ತುಂಬಿಸಿ ಕುಡಿಯಬಹುದಾದ ಅಮಾಯಕರಿಗೆ ಕುಡಿಸಲೂಬಹುದು. ಮತ್ತೇರುವ ಅಭ್ಯಾಸ ಬೆಳೆಸಿಕೊಂಡ ಆ ಜನಕ್ಕೆ ಮೊದಲು ಕೊಟ್ಟ ಒಂದು ಲೋಟದ ನಂತರ ಸುರುವಿದ್ದೆಲ್ಲಾ ಚರಂಡಿ ನೀರೇ, ಆದರೂ ಗೊತ್ತಾಗುವುದಿಲ್ಲ! ಕೊಳೆತ ನಾಯಿಮರಿಯೂ ಸೇರಿದಂತೇ ಹಲವು ಹೊಲಸು ತುಂಬಿ ಹುಳಗಳಿಂದ ನಾರುವ ಹುಳಿನೀರಿನ ಬಗ್ಗಡವನ್ನು ಬೇಯಿಸಿ ಕಳ್ಳಭಟ್ಟಿ ಇಳಿಸಿ ಕೊಟ್ಟರೂ ಅಂಥವರು ಕುಡಿದೇ ಕುಡಿಯುತ್ತಾರೆ! ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನು ಗುರುತಿಸಲಾಗದ ಒಂದು ಓದುಗವರ್ಗ ಸಮಾಜದಲ್ಲಿದೆ. ಅವರಿಗೆ ಪಕ್ಕದ ಮನೆಯ ಯಮುನಾ ಯಾರ ಜೊತೆಗೋ ರಾತ್ರಿ ಮಲಗುವ ಗಾಳಿ ಸುದ್ದಿಬೇಕು ! ಕೊನೇಮನೆ ಲಕ್ಷ್ಮೀನಾರಣಪ್ಪನ ಮಗಳು ಪಾರು ಅದ್ಯಾವುದೋ ಹುಡುಗನ ಜೊತೆ ಪರಾರಿಯಾದ ಇತಿಹಾಸ ಬೇಕು. ಮಿಕ್ಕುಳಿದಂತೇ ರಾಜಕಾರಣಿಗಳು, ಸಿನಿಮಾಮಂದಿ ಕದ್ದುಮುಚ್ಚಿ ಬಿಚ್ಚುತ್ತಾ ಬೋರಲಾಗುವ ರಂಜನೀಯ ವ್ಯಂಜನಗಳ ಗಂಟು ಬರುತ್ತಲೇ ಇರಬೇಕು. ನಡೆದದ್ದೆಷ್ಟೋ ಸುಮ್ನೇ ಕಟ್ಟಿಬರೆದಿದ್ದೆಷ್ಟೋ ಲೆಕ್ಕಕ್ಕೇ ಇಲ್ಲ! ಬರೆದಿದ್ದೆಲ್ಲಾ ಸತ್ಯ, ಅವು ವೇದಗಳಷ್ಟೇ ಮಾನ್ಯ ಎಂದು ಸಮರ್ಥಿಸಿಕೊಳ್ಳುವ ಕೆಲವರನ್ನು ಅಲ್ಲಗಳೆಯಲು ಆ ಓದುಗವರ್ಗ ಒಪ್ಪುವುದಿಲ್ಲ. ಅದು ನಡೆದುಬಂದ ಬಿಡಲಾರದ ಹೆಂಡದ ಸಹವಾಸ!

ಪತ್ರಕರ್ತರಾದವರಲ್ಲಿ ಬದಲಾವಣೆಯೆ ಗಾಳಿ ಬೀಸಿದ್ದು ಒಂದೆರಡು ಕೆಟ್ಟ ಪತ್ರಿಕೆಗಳಿಂದ. ಅವುಗಳ ಯಜಮಾನರುಗಳು ರೋಲ್ ಕಾಲ್ ಆರಂಭಿಸಿದ್ದರಿಂದ. ದಶಕಗಳ ಹಿಂದೆ ಅದನ್ನು ಆರಂಭಿಸಿದ ಒಬ್ಬಾತ ಮಠಮಾನ್ಯಗಳ ಹಿಂದೆ ಬಿದ್ದ. ಮಂಚದಕೆಳಗೆ ಸಂಸಾರ ನಡೆಸುವ ಹಲವು ಸಂಸಾರಿಗಳ-ಮಠಗಳ ಜೊತೆಗೆ ಉತ್ತಮ ಸಾಮಾಜಿಕ ಮೌಲ್ಯವರ್ಧನೆಗಾಗಿ, ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಮಠಗಳೂ ಆ ಯಾದಿಯಲ್ಲಿದ್ದವು. ಒಂದಾದಮೇಲೊಂದರಂತೇ ವರದಿ ಮಾಡುತ್ತಾ ನಡೆದ ಆತ ಸನ್ಯಾಸಿಯೊಬ್ಬರಿರುವ ಮಠವೊಂದಕ್ಕೆ ಕರೆಮಾಡಿದ! ಅವರದಕ್ಕೆ ಸೊಪ್ಪು ಹಾಕಲಿಲ್ಲ. ಊದಿದ ರಣಕಹಳೆಗೆ ತಲೆಬಾಗುತ್ತಾರೆಂಬ ’ಜಾಣ’ನ ಧೋರಣೆ ತಲೆಕೆಳಗಾಗಿತ್ತು. ಪತ್ರಿಕೆಯಲ್ಲಿ ಅತಿ ಕೆಟ್ಟಪದಗಳಲ್ಲಿ ಕಥೆ ಹುಟ್ಟಿಸಿ ಬರೆದ. ಸಮಾಜದ ಆ ವರ್ಗದ ಓದುಗರು ಆಗಲೂ ಇದ್ದರಲ್ಲಾ ಅವರು ಓದಿ ಖುಷಿಪಟ್ಟರು. ಕೆಲವೇ ದಿನಗಳಲ್ಲಿ ಇನ್ಯಾರಿಂದಲೋ ಮೂಳೆ ಮುರಿಯುವಷ್ಟು ಚೆನ್ನಾಗೇ ಹೊಡೆತವನ್ನೂ ತಿಂದ! [ಸನ್ಯಾಸಿಗಳ ಮನ ನೋಯಿಸಿದ್ದಕ್ಕೆ ಇರಬಹುದೇ?] ಕಾಲ ಒಂದೇ ರೀತಿ ಇರುವುದಿಲ್ಲವಲ್ಲ, ಈಗ ಆ ಪತ್ರಿಕೆ ಹೇಳಹೆಸರಿಲ್ಲ; ಯಾರೂ ಸರಿಯಾಗಿ ಮೂಸಿಯೂ ನೋಡುವುದಿಲ್ಲ.

ಅದೇ ಗರಡಿಯಲ್ಲಿ ಕೆಲವರು ಬೆಳೆದರು! ತಿಂಗಳ ಖರ್ಚಿಗೆ ಹಣ ಕಮ್ಮಿಯಾಗಿದ್ದಕ್ಕೆ ಅಪರೂಪಕ್ಕೆ ರೋಲ್ ಕಾಲ್ ಮಾಡುತ್ತಿದ್ದ ಅವರಿಗೆ ಕ್ರಮೇಣ ಅದೇ ಮಾಮೂಲಾಗಿಹೋಯ್ತು! ಮಾತೆತ್ತಿದರೆ ’ನಿನ್ನ ಸುದ್ದಿ ಪತ್ರಿಕೇಲಿ ಬರೆದು ಮಾನ ಹರಾಜು ಹಾಕ್ತೀನಿ ಇಲ್ಲಾಂದ್ರೆ ಇಷ್ಟು ಕೊಡು’ ಎಂಬ ಹೇಳಿಕೆ. ಒಬ್ಬಾತ ತಾನು ಮಾಡಿದ ಪತ್ರಿಕೆಯ ತುಂಬೆಲ್ಲಾ ಬರೆದಿದ್ದು: ಕೊಲೆ-ಮಾನಭಂಗ ಆಧರಿಸಿದ ರೋಚಕ ಕಥೆಗಳನ್ನು, ಅನೈತಿಕ ಸಂಬಂಧಗಳ ಕುರಿತಾಗಿ ಕಟ್ಟಿದ ಕಥೆಗಳನ್ನು, ಪರನಿಂದನೆಯ ಕೆಟ್ಟ ಲೇಖನಗಳನ್ನು, ರಾಜಕೀಯ ಮತ್ತು ಸಿನಿಮಾಮಂದಿಗಳ ಕುರಿತಾದ ಸ್ವಲ್ಪ ’ಇದ್ದದ್ದೂ’ ಬಹಳ ’ಇಲ್ಲದ್ದೂ’ ಸೇರಿಸಿದ ವ್ಯಂಜನಗಳನ್ನು! ಬಹುತೇಕ ಪತ್ರಿಕೆ ನಡೆದಿದ್ದೇ ಕಾಮಕೇಳಿಗಳ ಕುರಿತಾದ ಕೆಟ್ಟ ರಂಜನೀಯ ಪದಗಳಿಂದ ಮತ್ತು ಹೆಗ್ಗಣಬಿದ್ದು ಹೊಲಸು ನಾರುವ ಕಡ್ಲೇಹಿಟ್ಟನ್ನೇ ಬಳಸಿ ಕಮಟುತ್ತಿರುವ ಎಣ್ಣೆಯಲ್ಲಿ ಬಜ್ಜಿ-ಬೋಂಡಾ ಕರಿದು ಕೊಟ್ಟ ಸಾಹಸಗಾಥೆ! ಓದುಗರ ಆ ವರ್ಗ ಬರೆದಿದ್ದೆಲ್ಲವನ್ನೂ ಕಣ್ ಕಣ್ ಬಿಟ್ಟು ಓದಿದರು! ಅದೇ ವರ್ಗ ಅಭಿಮಾನೀ ಬಳಗವಾಗಿಯೂ ಬೆಳೆಯಿತು!

ಇಂದಿನ ಸಮಾಜದಲ್ಲಿ ಒಳಿತನ್ನು ಮಾಡಿದರೆ ಫ್ಯಾನ್ ಫಾಲೋವಿಂಗ್ ಯಾರಿಗೂ ಇರುವುದಿಲ್ಲ! ಅದೇ, ಕೆಡುಕನ್ನು ಮಾಡಿದರೆ ಮಾರನೇ ದಿನದಿಂದಲೇ ಹಲವು ಜನ ಹಿಂಬಾಲಕರು ತಯಾರಾಗುತ್ತಾರೆ-ಹೀಗಾಗುತ್ತಿರುವುದು ದುರಂತ. ಅಭಿಮಾನಿಗಳ ಖದರ್ ಗಮನಿಸಿ ಅವರನ್ನು ಆದಷ್ಟೂ ಹೊಗಳುತ್ತಾ ಅಟ್ಟಕ್ಕೆ ಏರಿಸಿ ತನ್ನ ಬೇಳೇ ಬೇಯಿಸಿಕೊಂಡ ಪತ್ರಿಕೆಯಾತನ ಹಣದ ಥೈಲಿ ತುಂಬುತ್ತಲೇ ನಡೆಯಿತು. ಸಹಜವಾಗಿ ಊರಿದ್ದಲ್ಲಿ ಹೊಲಗೇಡು ಎಂಬಂತೇ ಅಲ್ಲಲ್ಲಿ ಬೇಡದ ಘಟನೆಗಳು ಸಂಭವಿಸುತ್ತಿರುವುದರಿಂದಲೂ, ಅವುಗಳಲ್ಲೇ ಪರ ಮತ್ತು ವಿರೋಧಿ ಬಣಗಳಿರುವುದರಿಂದಲೂ, ಯಾರಿಂದ ಹೆಚ್ಚಿಗೆ ಸಿಗುತ್ತದೋ ಅವರಿಗೆ ಪೂರಕವಾಗಿ ವರದಿಗಳು ಪ್ರಕಟವಾದವು! ಪತ್ರಿಕಾಧರ್ಮವೆಲ್ಲ ಇರಲಿ, ಕೊನೇಪಕ್ಷ ಸಮಾಜಕ್ಕೆ ತಾನು ಕೊಡುತ್ತಿರುವ ಮೌಲ್ಯಯುತ ಕೃತಿಗಳೇನು ಎಂಬುದನ್ನು ತಿಳಿಯದೇ ಕೇವಲ ಸ್ವಾರ್ಥಿಯಾಗಿ ಬರೆದಿದ್ದೇ ಬರೆದಿದ್ದು; ಜಿಲೆಟಿನ್ ಟ್ಯಾಬ್ಲೆಟ್ ಹಾಕಿ ಸ್ವಚ್ಛವಾಗಿ ಕಾಣುವಂತೇ ಮಾಡಿದ ನೀರನ್ನು, ’ಶುದ್ಧ ಮಿನರಲ್ ವಾಟರ್’ ಎಂದು ಕ್ಯಾನ್ ಗಳಲ್ಲಿ ತುಂಬಿಸಿ ಮಾರಾಟಮಾಡಿ ಹಣ ಎಣಿಸಿಕೊಳ್ಳುವ ಕೆಲಮಂದಿಯಂತೇ ತನ್ನ ಪತ್ರಿಕೆಯಲ್ಲಿ ಇಂತಹ ವರದಿಗಳು ಬರುತ್ತಿರುವುದೇ ನಿಮ್ಮ ಪುಣ್ಯ ಎನ್ನುವ ರೀತಿಯಲ್ಲಿ ಬರೆದ!

ಗಂಟುಗಳು ಬಂದವು! ಹೊಸಹೊಸ ಜಾಗಗಳ ಖರೀದಿ ನಡೆಯಿತು. ಹೊಸಹೊಸ ಕಟ್ಟಡಗಳು ತಲೆ ಎತ್ತಿದವು. ಹಣಮಾಡುವ ’ವಿದ್ಯಾಕೇಂದ್ರ’ಗಳೂ ಹುಟ್ಟಿದವು. ಈಗ ಕೋಟ್ಯಂತರ ವಹಿವಾಟು! ಸದಾ ಬೇರೇ ಜನರ ಬಗ್ಗೇ ಬರೆಯುತ್ತಾ ಕಾಸೆಣಿಸಿಕೊಂಡಾತ ಬರೆದಿದ್ದು ಅನುವಾದಿತ ಕೆಲವು ಕೃತಿಗಳು, ಮತ್ತದೇ ಕಾಮಕಾಂಡಗಳ ಬಗೆಗಿನ ಪುಸ್ತಕಗಳು, ಯಾರೋ ಅಲ್ಲೆಲ್ಲೋ ಕದ್ದು ಹಣಮಾಡಿದರು ಎಂದು ಬೊಟ್ಟುಮಾಡುವ ಕೃತಿಗಳು, ಯಾವುದೋ ಭಾಷೆಯಲ್ಲಿ ಖ್ಯಾತವಾದ ಕೆಲವು ಕೃತಿಗಳ ಸಮ್ಮಿಶ್ರಿತ ರೂಪವಾಗಿ ’ತನ್ನದೇ ಹೊಸದೆ’ಂದು ಪ್ರಕಟಿಸಿದ ರಟ್ಟೆಗಾತ್ರದ ಕೃತಿಗಳು--ಹೀಗೇ ಎಲ್ಲವೂ ಒಟ್ಟಾರೆ ಕೃತಿಗಳೇ ಹೊರತು ಬರೆದ ಅಷ್ಟೂ ಪುಸ್ತಕಗಳಲ್ಲಿ ಸಾಮಾಜಿಕವಾಗಿ ಯಾವ ಉತ್ತಮ ಸಂದೇಶಗಳಿವೆ ? ಯಾವ ಉತ್ತಮ ಸಂಸ್ಕೃತಿಯನ್ನು ಅವು ಬಿಂಬಿಸುತ್ತವೆ ಎಂಬುದನ್ನು ಸಮಾಜವೇ ತಿಳಿದು ನೋಡಬೇಕಾಗಿದೆ. ಕೇವಲ ತನ್ನ ಭಾಷಾ ಪ್ರೌಢಿಮೆಯಿಂದಲೂ, ಗಳಿಸಿದ ಅಪಾರ ಸಂಪತ್ತಿನಿಂದಲೂ ಇವತ್ತು ಕವಿ-ಸಾಹಿತಿಗಳನ್ನು ಖರೀದಿಸುವ ಮಟ್ಟಕ್ಕೆ ಬೆಳೆದದ್ದು ನೋಡಿದರೆ ಯುಗಧರ್ಮ ಸುಳ್ಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕರೆದಾಗ ಹೋಗದಿದ್ದರೆ ತಮ್ಮ ಬಗ್ಗೂ ಅಪಸ್ವರದಲ್ಲಿ ಕೂಗಬಹುದೆಂಬ ಅನುಮಾನದಿಂದಲೋ ಅಥವಾ ಅಷ್ಟೆಲ್ಲಾ ಸರ್ತಿ ಕರೆದಾಗ ಹೋಗದೇ ಇರುವುದು ತಮ್ಮ ಧರ್ಮವಲ್ಲ ಎಂಬ ಅನಿಸಿಕೆಯಿಂದಲೋ ಅನೇಕ ಕವಿ-ಸಾಹಿತಿಗಳೂ ಆಗಾಗ ಆತ ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು; ಅನಿವಾರ್ಯವಾಗಿ ಹಾಡಿಹೊಗಳಿದರು.

ಮಹಾನ್ ಲಂಪಟನಾದ ಆತನಿಗೆ ಹೊಗಳಿಸಿಕೊಳ್ಳುವುದೆಂದರೆ ಪರಮಪ್ರೀತಿ. ಹಸಿರು ಹುಲ್ಲನ್ನು ಕಂಡ ಜಾನುವಾರುಗಳು ನೆಟ್ಟಗೆ ಅಲ್ಲಿಗೇ ದೌಡಾಯಿಸಿದಂತೇ ’ಮೇವು’ಕಂಡರೆ ಬಿಡುವ ಜಾಯಮಾನದ್ದಲ್ಲ ಈ ಪಾರ್ಟಿ! ಅನೇಕ ಹೆಂಗಸರೂ ಹುಡುಗಿಯರೂ ತಮ್ಮ ಮನೆಗಳಲ್ಲಿ ಆಶ್ರಯವನ್ನೇ ಕಳೆದುಕೊಂಡಿದ್ದು ಈತನ ಹಲ್ಕಟ್ ಲೇಖನಗಳಿಂದ. ಹುಟ್ಟಿಸಿ ಕಟ್ಟಿಬರೆದ ಕಥೆಗಳಿಂದ ಮರ್ಯಾದೆಗೆ ಅಂಜಿ ಸತ್ತುಹೋದವರು ಅದೆಷ್ಟು ಮಂದಿಯೋ ಲೆಕ್ಕ ಸಿಗುತ್ತಿಲ್ಲ. ಸದಾ ಬೇರೇ ವ್ಯಕ್ತಿಗಳ ವೈಯ್ಯಕ್ತಿಕ ಬದುಕಿನ ಬಗ್ಗೇ ಕಾತುರನಾಗಿ, ಬೊಕ್ಕಸಕ್ಕೆ ಕಾಣಿಕೆ ಬಾರದಿದ್ದಾಗ ತನಗೆ ಬೇಕಾದ ರೀತಿಯಲ್ಲಿ ಬರೆಯುವ ಆತನ ವೈಯ್ಯಕ್ತಿಕದಲ್ಲಿ ಅದೆಷ್ಟು ಹೆಣ್ಣುಗಳು ಮಗ್ಗುಲಾಗಿ ನರಳಿದವೋ ಶಿವನೇ ಬಲ್ಲ! ಕೇವಲ ಭಾಷಾಪ್ರೌಢಿಮೆಯಿಂದ ಆಡುವ ಮಾತುಗಳು ರಸಬೆಲ್ಲ; ಅದಕ್ಕೆ ತಲೆದೂಗದ ಶ್ರೋತ್ರಗಳಿಲ್ಲ! ಪರಿಸ್ಥಿತಿಯನ್ನು ತನಗೆ ಬೇಕಾದಹಾಗೇ ತಿರುಗಿಸಿಕೊಳ್ಳುವ ಸನ್ನಾಹದಲ್ಲಿ ಬಹುತೇಕ ಯಶಸ್ವಿಯಾಗುತ್ತಿದ್ದ ಆತ ನಿನ್ನೆ ಎಸೆದ ಕಲ್ಲಿಗೆ ಮಾತ್ರ ಹಣ್ಣು ಬೀಳಲೇ ಇಲ್ಲ; ಬದಲಾಗಿ ಹೊಡೆದ ಕಲ್ಲು ಮರಳಿ ಆತನ ಮೈಮೇಲೇ ಬಿದ್ದಿದ್ದು ಹಲವರಿಗೆ ಮಜವಾಗಿ ಗೋಚರಿಸಿತು!

ತನ್ನ ಮತ್ತು ತನ್ನ ಬಳಗದ ಯಾವುದೇ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ವೈಯ್ಯಕ್ತಿಕ ಪ್ರವಾಸ, ಸಿನಿಮಾ ಏನೇ ಇದ್ದರೂ ಅವುಗಳೆಲ್ಲದರ ಬಗ್ಗೆ ’ಅಪಾರ’ದರ್ಶಕವಾಗಿ ಪತ್ರಿಕೆಯಲ್ಲಿ ಕೊಚ್ಚಿಕೊಳ್ಳುವ ಆ ಪತ್ರಕರ್ತ ತನ್ನನ್ನು ಬಿಟ್ಟರೆ, ಕನ್ನಡನೆಲದಲ್ಲಿ ಬರವಣಿಗೆಯಲ್ಲಿ ಟಾಪ್ ಮೋಸ್ಟ್ ಎನಿಸುವ ಬೇರೇ ಯಾರೂ ಸಿಗುವುದಿಲ್ಲ ಎಂಬ ಹಮ್ಮು ಬೆಳೆಸಿಕೊಳ್ಳುವುದರ ಜೊತೆಗೆ, ಇಡೀ ಪತ್ರಿಕೆ ಆತನನ್ನೇ ಪರೋಕ್ಷ ಸ್ತುತಿಸುತ್ತಿರುವಂತೇ ಮಾಡಿ ಓದುಗರ ಆ ವರ್ಗಕ್ಕೂ ಅದೇ ಭ್ರಮೆ ಹುಟ್ಟಿಸಿಬಿಟ್ಟಿದ್ದಾನೆ. ತನ್ನ ಪುಸ್ತಕಗಳು ಅಷ್ಟು ಖರ್ಚಾದವು ಇಷ್ಟು ಖರ್ಚಾದವು ಎಂದು ಡಂಗುರ ಸಾರಿಕೊಳ್ಳುವ ಮನೋವೃತ್ತಿ ಪ್ರತೀ ಸಂಚಿಕೆಯಲ್ಲೂ ಢಾಳಾಗಿ ಕಾಣುತ್ತದೆ. ದಿನಪತ್ರಿಕೆಯನ್ನೋ ವಾರಪತ್ರಿಕೆಯನ್ನೋ ನಡೆಸುವ ಇತರ ಕೆಲವರು ’ಗೆಸ್ಟ್ ರೈಟರ್’ ಅಥವಾ ಅಂಕಣಬರಹಗಾರನಾಗಿ ಕರೆದಿದ್ದಾರೆ- ಅವರಿಗೆ ಗೊತ್ತು ತನ್ನ ತಾಕತ್ತು ಎಂದು ತನ್ನನ್ನು ತಾನೇ ಪ್ರತೀ ಹೆಜ್ಜೆಯಲ್ಲೂ ಹೊಗಳಿಕೊಳ್ಳುವ ಆತನಿಗೆ, ಬೇರೇ ಯಾರೋ ತಮ್ಮನ್ನು ಸ್ವಲ್ಪ ಮಟ್ಟಿಗೆ ಹೊಗಳಿಕೊಂಡರೆ ಅದಕ್ಕೆ ’ಸ್ವಕುಚಮರ್ದನ’ ಎಂಬ ಪದವನ್ನು ಬಳಸಿ ಟೀಕಿಸುವ ಸ್ವಭಾವ.

ಸಮಾಜದಲ್ಲಿ ಯಾವುದೋ ಪ್ರದೇಶದಲ್ಲೋ ಹಳ್ಳಿಯ ಮೂಲೆಯಲ್ಲೋ ನಡೆದ ಯಾವುದೇ ಘಟನೆಗಳನ್ನು ವರದಿಯಾಗಿ ಪ್ರಕಟಿಸಿದರೆ ಅದು ಲೇಖಕನ ಇಂಟೆಲೆಕ್ಚ್ವಲ್ ಪ್ರಾಪರ್ಟಿ ಆಗುವುದಿಲ್ಲ. ಲೇಖಕ ತನ್ನ ಸ್ವಂತಿಕೆಯಿಂದ ಪಾತ್ರಗಳನ್ನು ಕಲ್ಪಿಸಿಕೊಂಡೋ, ಯಾವುದೋ ಸ್ಫೂರ್ತಿಯನ್ನು ಪಡೆದು ಅದನ್ನು ಆಧಾರವಾಗಿಟ್ಟುಕೊಂಡೋ ಕಥೆ, ಕಾದಂಬರಿಗಳನ್ನೋ ಕೃತಿಗಳನ್ನೋ ಬರೆದರೆ ಆಗ ಮಾತ್ರ ಅವು ಆತನ ಇಂಟೆಲೆಕ್ಚ್ವಲ್ ಪ್ರಾಪರ್ಟಿಯಾಗುತ್ತವೆ. ಎಲ್ಲೋ ನಡೆದ ಘಟನೆಗಳನ್ನು "ನಾನು ಮೊದಲಾಗಿ, ಖುದ್ದಾಗಿ ಹೋಗಿ ಇದ್ದು, ಊಟಮಾಡಿ, ನೋಡಿ, ಕೇಳಿ, ಗ್ರಹಿಸಿ ವರದಿ ಬರೆದೆ" ಎಂದಮಾತ್ರಕ್ಕೆ ಅದು ಅದು ಹಕ್ಕುಸ್ವಾಮ್ಯದ ಕಥೆಯಲ್ಲ! ಅಲ್ಲಿ ನಡೆದಿದ್ದ ಅಹಿತಕರ ಘಟನೆಗಳ ವರದಿಯನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ತಿಳಿದುಕೊಳ್ಳಬಹುದು, ವರದಿಯನ್ನೂ ತಯಾರಿಸಿಕೊಳ್ಳಬಹುದು. ಅಲ್ಲಿನ ಘಟನೆಗಳನ್ನು ಆಧರಿಸಿ ಸಿನಿಮಾವನ್ನೋ ನಾಟಕವನ್ನೋ ತಯಾರು ಮಾಡಿದರೆ ಅದರಲ್ಲಿ ತಪ್ಪೇನೂ ಇರುವುದಿಲ್ಲ.

ಸಿನಿಮಾಗಳು ಹಣಮಾಡಲೆಂದೇ ಇರುವುದಾದರೆ ಹಲವು ನಿರ್ಮಾಪಕ ನಿರ್ದೇಶಕರು ನಿದ್ರೆಮಾತ್ರೆಗಳ ಮೊರೆಹೋಗುತ್ತಿರಲಿಲ್ಲ. ಉತ್ತಮ ಸಿನಿಮಾಗಳನ್ನು ತಯಾರಿಸಿದ ಕೆಲವರು ಹಣವನ್ನು ಎಣಿಸಿಕೊಂಡರು ಎಂಬುದರಲ್ಲೂ ಎರಡು ಮಾತಿಲ್ಲ. ಸದ್ಯಕ್ಕೆ ’ಭೀಮಾತೀರದಲ್ಲಿ’ ಎಂಬ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯಗಳು ಹಬ್ಬಿವೆ. ವಾಣಿಜ್ಯಕವಾಗಿ ತಯಾರಿಸಿಲಾದ ರಂಜನೀಯ ಸಿನಿಮಾ ಅದು ಎಂಬುದನ್ನು ಜನ ಹೇಳತೊಡಗಿದ್ದಾಗಲೇ ’ನಿರ್ಮಾಪಕನಿಗೆ ಬೆದರಿಕೆಯ ಕರೆ’ ಎಂಬ ಸುದ್ದಿ ಬಂತು. ಮಧ್ಯಾಹ್ನದ ಹೊತ್ತಿಗೆ ಮಾಧ್ಯಮ ವಾಹಿನಿಯೊಂದರಲ್ಲಿ ಕೇಳಿಬರುತ್ತಿದ್ದ ದೂರವಾಣಿಯ ಮಾತುಗಳಲ್ಲಿ, ಪೊದೆಯ ಹಿಂದೆ ನಿಂತ ಹುಲಿಯ ಘರ್ಜನೆ ಕೇಳಿಬರುತ್ತಿತ್ತು! ಸದರೀ ವಾಹಿನಿಯವರು ಆ ಸಿನಿಮಾ ನಿರ್ಮಾಪಕನನ್ನು ನೇರವಾಗಿ ಸಂದರ್ಶಿಸುತ್ತಿದ್ದರು. ತಾವು ಯಾವುದೇ ಕಥೆಯನ್ನು ನೇರವಾಗಿ ಬಳಸಿಕೊಂಡಿಲ್ಲ ಎಂದು ಆತ ಹೇಳುತ್ತಿದ್ದ. ಆದರೂ ಹುಲಿಯ ಅಬ್ಬರ ಜಾಸ್ತಿಯಾಗುತ್ತಲೇ ಇತ್ತು. ಮೊದಲು ಸಿನಿಮಾದಲ್ಲಿ ಬರುವ ಕೆಲವು ಪಾತ್ರಗಳ ಹೆಸರುಗಳನ್ನು ಬದಲಾಯಿಸಬೇಕೆಂಬ ಒತ್ತಾಯವನ್ನು, ಹುಲಿ ಪರೋಕ್ಷವಾಗಿ ತನ್ನ ಅನುಯಾಯಿಯಿಂದ ಮಂಡಿಸಿತು! ಆಮೇಲೆ " ಇಡೀ ಪಾತ್ರಗಳನ್ನೇ ತೆಗೆದು ಹಾಕೋಕ್ಕೇಳೋ ತಮ್ಮಾ" ಎಂದಿತು. ಇನ್ನೊಂದು ಕಡೆಯಿಂದ ಇನ್ನೊಂದು ದೂರವಾಣಿಯಲ್ಲಿ ಮಾತನಾಡುತ್ತಿದ್ದ [ಸಿನಿಮಾದಲ್ಲಿ ಬರುವ ಚಿಕ್ಕ ಪಾತ್ರವೊಂದರ ಹೆಸರಿನ ವ್ಯಕ್ತಿಯ ಮಗನೆನ್ನಲಾದ]ವ್ಯಕ್ತಿಗೆ ಕುಮ್ಮಕ್ಕು ಕೊಟ್ಟು ಕರೆಮಾಡಿಸಿದ್ದು ಯಾರೆಂಬುದು ಎಲ್ಲರಿಗೂ ತಿಳಿದು ಹೋಗಿತ್ತು!

ಅಷ್ಟಕ್ಕೂ ಪೊದೆಯ ಹಿಂದಿನ 'ಹುಲಿ' 'ಆಹಾರಕ್ಕಾಗಿ'
ಹಂಬಲಿಸಿರುವುದು ಎಲ್ಲರಿಗೂ ತಿಳಿದುಹೋದ ವಿಷಯವಾಗಿದೆ! ನಂತರ ವಾಹಿನಿಯವರು ಹುಲಿಯನ್ನೂ ಮಿಕಗಳನ್ನೂ ಕರೆಸಿದರು, ಮಾತಾನಾಡಿಸಿದರು. ತಾನು ಆ ವರದಿಯ ಪಿತಾಮಹ ಇಲ್ಲೇ ಇರುವಾಗ ಕೊನೇಪಕ್ಷ ತನ್ನನ್ನು " ಅಣಾ ಒಂದ್ ಸಿನ್ಮಾ ಮಾಡ್ತಿದೀವಿ ಅಂತ ಕೇಳ್ಬೋದಾಗಿತ್ತಲ್ಲಾ" ಎಂಬ ಗುಟುರು! ತನ್ನ ಧೋರಣೆ ಯಾರಿಗೂ ಸ್ಪಷ್ಟವಾಗದಿರಲಿ ಎಂದು, ಆ ಘಟನೆಗಳು ನಡೆದ ಉತ್ತರಕರ್ನಾಟಕದ ಆ ಭಾಗದ ಜನರಿಗೆ ಈ ಸಿನಿಮಾ ನಿರ್ಮಾಪಕರು ಧನಸಹಾಯಮಾಡಬೇಕೆಂಬ ತಾಕೀತು, ಮತ್ತು ಸಿನಿಮಾದಲ್ಲಿ ಬಳಸಿಕೊಂಡ ನಾಯಕಪಾತ್ರದ ಹೆಸರಿನ ವ್ಯಕ್ತಿಯ ಹೆಂಡತಿಗೆ ಜೀವಿತಕ್ಕೆ ಅಂತ ೫೦ ಲಕ್ಷ ಕೊಡಿ ಎಂಬ ಡಿಮಾಂಡು! ’ಸಾಮಾಜಿಕ ಕಳಕಳಿ’ ಬಹಳವಾಗಿರುವ ಆತ, ಬೆಂಗಳೂರಿನಲ್ಲಿ ನಾಕಾರು ಹಣಗಳಿಕೆಯ ಶಾಲೆಗಳನ್ನು ನಡೆಸಿದಂತೇ ಉತ್ತರಕರ್ನಾಟಕದ ಆ ಭಾಗದಲ್ಲೂ ಧರ್ಮಾರ್ಥ ಶಾಲೆಗಳನ್ನು ನಡೆಸಬಹುದಿತ್ತಲ್ಲಾ ?

ನಮ್ಮಲ್ಲೊಬ್ಬ ಅತೀ ದಡ್ಡನಿದ್ದ. ’ಗುರುಶಿಷ್ಯರು’ ಎಂಬ ಸಿನಿಮಾದಲ್ಲಿ ಕಾಣುವ ದಡ್ಡರ ತೆರನಾದವ. ಆತನ ಅಮ್ಮ ಅತನಿಗೆ ಕಲಿಸಿಕೊಟ್ಟಿದ್ದು ದೇವರಪೂಜೆ ಮಾತ್ರ. ದಡ್ಡ ವಯಸ್ಸಿನಲ್ಲಿ ದೊಡ್ಡವನಾಗುತ್ತಾ ನಡೆದ. ತಂದೆ-ತಾಯಿಗಳು ಕಾಲವಾಗಿಹೋದರು. ಅಣ್ಣಂದಿರು ಇವನನ್ನು ಮನೆಯಲ್ಲಿ ಇರಿಸಿಕೊಳ್ಳದಾದರು. ಊರೂರು ಅಲೆಯುತ್ತಾ ಕಂಡವರ ಮನೆಯಲ್ಲಿ ದೇವರಪೂಜೆಗಳನ್ನು ಮಾಡುತ್ತಾ ಬದುಕುತ್ತಿದ್ದ. ಪಕ್ಕದೂರಿನಲ್ಲೊಂದು ದೇವಸ್ಥಾನವಿತ್ತು. ಅಲ್ಲೊಂದು ಪುರೋಹಿತರ ಕುಟುಂಬ. ಆ ಪುರೋಹಿತರು ಈತನ ದಡ್ಡತನಕ್ಕೆ ಮರುಗಿ, ಸರಕಾರದಿಂದ ಸಿಗಬಬಹುದಾದ ಮಾಶಾಸನ ಸಿಗುವಂತೇ ವ್ಯವಸ್ಥೆಮಾಡಿಸಿ ಅವನ ಹೆಸರಲ್ಲೊಂದು ಬ್ಯಾಂಕ್ ಅಕೌಂಟ್ ತೆರೆಯಿಸಿಕೊಟ್ಟರು. ಊರೂರು ತಿರುಗಿ "ನಾನು ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇನೆ ಎಲ್ಲಾ ಬನ್ನಿ" ಎನ್ನುತ್ತಿದ್ದ. ನಿಗದಿತವಾದ ಒಂದು ದಿನ ಮೇಲೆ ಹೇಳಿದ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯನ್ನೂ ನಡೆಸುತ್ತಿದ್ದ. ಅನೇಕ ಮನೆಗಳಲ್ಲಿ ಅವನ ಪೂಜೆಯ ಕಾರ್ಯಕ್ರಮಕ್ಕಾಗಿ ಐದೋ ಹತ್ತೋ ರೂಪಾಯಿ ಕೊಟ್ಟು ಕಳುಹಿಸುತ್ತಿದ್ದರು. ಆ ಪುರೋಹಿತರು ತಮ್ಮಲ್ಲೇ ಕೆಲವು ಜನರನ್ನು ಸೇರಿಸಿಕೊಂಡು ಅಡುಗೆಮಾಡಿ ಅಲ್ಲಿಗೆ ಬಂದ ದಡ್ಡನ ಅತಿಥಿಗಳಿಗೆ, ಆ ದಿನ ಊಟಹಾಕುತ್ತಿದ್ದರು. ಸಮಾಜದಿಂದ ಪಡೆದ ಹಣಕ್ಕೆ ತನ್ನ ಮಾಶಾಸನದ ಹಣವನ್ನೂ ಸೇರಿಸಿಕೊಂಡು ದೇವಕಾರ್ಯಮಾಡಿ ಎಲ್ಲರಿಗೂ ಉಣಬಡಿಸುವ ಕೆಲಸ ನಡೆಸಿದ್ದ ಆ ದಡ್ಡ ಈಗ ದಿವಂಗತ.

ಸಮಾಜದ ಯಾವುದೋ ಭಾಗಕ್ಕೆ ಯಾವುದೋ ಘಟನೆಗಳಿಂದಲೋ, ನಿಸರ್ಗ ವಿಕೋಪದಿಂದಲೋ ತೊಂದರೆಯಾದಾಗ, ಅಲ್ಲಿನ ಅವರ ಜೀವನಕ್ರಮದ ಸುಧಾರಣೆಗಾಗಿಯೋ ಮೂಲವಾಗಿ ಬೇಕಾದ ಅನ್ನ-ವಸತಿ-ಬಟ್ಟೆಗಾಗಿಯೋ ಸಮಾಜದಿಂದ ಅನುಕೂಲಸ್ಥ ಭಾಗದಿಂದ ಹಣವನ್ನು ಕೇಳಿ ಕ್ರೋಡೀಕರಿಸಿ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿ ಬಹುತೇಕ ಮಾಧ್ಯಮಗಳ/ಪತ್ರಿಕೆಗಳ ಕರ್ತವ್ಯ. [ಮೇಲಿನ ಕಥೆಯಲ್ಲಿ ಕಂಡ ದಡ್ಡನೂ ಸಹ ಊರಿಗೇ ಒಂದು ಮಧ್ಯಾಹ್ನದ ಊಟಹಾಕುವ ಜನೋಪಕಾರೀ ಕೆಲಸ ಮಾಡಿದ್ದನಲ್ಲವೇ?]ಅದನ್ನೇ ತಮ್ಮ ಹೆಚ್ಚುಗಾರಿಕೆ ಎಂದು ಬಿಂಬಿಸಿಕೊಳ್ಳುವುದು ನಿಜಕ್ಕೂ ಸಲ್ಲ. ತಮ್ಮ ಬದುಕಿಗಾಗಿ, ತಮ್ಮ ಮಾಧ್ಯಮದ ಉಳಿವಿಗಾಗಿ-ಏಳ್ಗೆಗಾಗಿ, ಸಮಾಜದಿಂದ ಪರೋಕ್ಷವಾಗಿ ಸಹಾಯ ಪಡೆದ ಜನ, ತಮಗೆ ಆಗುವ ಲಾಭದಲ್ಲಿ ಎಷ್ಟುಪಾಲು ಅಂತಹ ಕಾರ್ಯಗಳಿಗೆ ಕೊಟ್ಟಿದ್ದಾರೆ? ಸಮಾಜದಿಂದಲೇ ಕ್ರೋಡೀಕರಿಸಿ ನೀಡುವ ಆ ದಾನ, ಗುಡ್ಡದಮೇಲೋ ಗೋಮಾಳದಲ್ಲೋ ಮೇಯುವ ದನವನ್ನು ಕರೆದು ಗೋದಾನ ಮಾಡಿದ ಹಾಸ್ಯಪ್ರಹಸನದಂತೇ ಅನಿಸುವುದಿಲ್ಲವೇ? ಬಹಳವಾಗಿ ಇಂಟೆಲೆಕ್ಚ್ವಲ್ ಪ್ರಾಪರ್ಟಿ ಹೊಂದಿರುವ ಮಾಧ್ಯಮಗಳವರು ಇತ್ತೀಚಿನ ದಿನಗಳಲ್ಲಿ ಅಪಾರ ಆಸ್ತಿಯನ್ನೂ ಗಳಿಸುತ್ತಿದ್ದಾರೆ ಎಂಬುದರಲ್ಲಿ ಲವಲೇಶವೂ ಸುಳ್ಳಿಲ್ಲ. ತಮ್ಮ ಆಸ್ತಿಯ ವೃದ್ಧಿಯನ್ನು ಅವರು ಯಾವ ಮಾರ್ಗದಲ್ಲಿ ಮಾಡಿಕೊಂಡರು ಎಂಬುದನ್ನು ಮಾತ್ರ ಅವರವರೇ ಆತ್ಮವಿಮರ್ಶೆಯ ಮೂಲಕ ಅರಿತುಕೊಳ್ಳಬೇಕಾಗಿದೆ. ಅಂತಹ ಅಪಾರವಾದ ಆಸ್ತಿಗಳಲ್ಲಿ ನೂರಕ್ಕೆ ಒಂದನ್ನು ವಿನಿಯೋಗಿಸಿ ಹಾಳೂರನ್ನು ಉದ್ಧಾರಮಾಡಲು ಸಿದ್ಧರಾಗಬಹುದಲ್ಲ?

ಕೆಲವರು ಪತ್ರಕರ್ತರ ಸೋಗಿನಲ್ಲಿ ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದಕ್ಕೆ ನಿನ್ನೆಯ ಪ್ರಹಸನ ಜ್ವಲಂತ ನಿದರ್ಶನವಾಗಿದೆ; ಇನ್ನಾದರೂ ಆ ಓದುಗವರ್ಗ ಎಚ್ಚೆತ್ತು, ಬದಲಾಗಿ ತಾವು ಏನನ್ನು ಓದಬೇಕು ಮತ್ತು ಏನನ್ನು ಓದಬಾರದು ಎಂಬುದನ್ನು ಅರಿಯಬೇಕಾಗಿದೆ. ಸಮಾಜದ ಎಲ್ಲಾ ವರ್ಗಗಳಿಂದಲೂ ಉತ್ತಮ ಓದಿನ ಅಭಿರುಚಿಯನ್ನು ನಿರೀಕ್ಷಿಸಬಹುದೇ ?