ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 26, 2011

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ಚಿತ್ರ ಕೃಪೆ : ಮಂಜುನಾಥ ಹೆಗಡೆ, ಸಾಯೀಮನೆ.

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ದಿನ ಪೂರ್ತಿ ಭಜನೆಗಳ ಮಹಾಪೂರವೇ ಹರಿದರೆ ಕುಳಿತ ದೇವರಿಗೆ ಎಷ್ಟು ಸಂತಸವಾಗಬಹುದು! ಇಂಥಾ ಭಜನೆಗಳ ಮಹಾಪೂರವನ್ನೇ ಭಜನೆ ಪ್ರಹರ ಎಂದು ನಮ್ಮಲ್ಲಿ ಕರೆಯುತ್ತಾರೆ. ಅಪರೂಪಕ್ಕೊಮ್ಮೆ ಈ ಸುಸಂಧಿ ನನಗೊದಗಿತ್ತು! ನನ್ನ ಬಾಲ್ಯದ ದಿನಗಳು, ಚಳಿಯಲ್ಲೂ ಗಡಗಡ ಗುಡುತ್ತಾ ಹರಕಲು ಚಾಪೆಯ ಮೇಲೆ ಕುಳಿತು ಕೈಲಿ ತಾಳ ಹಿಡಿದು ಓರಗೆಯ ಒಂದಿಬ್ಬರು ಬಾಲಕರು ಮತ್ತು ಮಿಕ್ಕುಳಿದ ಹಿರಿಯರೊಡನೆ ನಾನು ಊರ ದೇವಸ್ಥಾನಗಳ ಭಜನೆಪ್ರಹರಗಳಲ್ಲಿ ತಲ್ಲೀನನಾಗುತ್ತಿದ್ದುದು ನೆನಪಿಗೆ ಬಂತು; ಜೊತೆಗೆ ಕೆಲವು ಸ್ನೇಹಿತರು ಕೂಡಾ ಸಿಕ್ಕಿದ್ದು ಸಂತೋಷವನ್ನು ದ್ವಿಗುಣಗೊಳಿಸಿತ್ತು. ಅನೇಕ ಹಿರಿಯ ಜೀವಗಳು ಇನ್ನೂ ಭಜನೆಯಲ್ಲಿ ಆಸ್ಥೆ ವಹಿಸಿದ್ದು ಬಹಳ ಹಿಡಿಸಿತು. ಹಳೇಕಾಲದ ಭಜನೆಗಳು, ಆದಿತಾಳ-ಜಂಪೆತಾಳ-ತ್ರಿತಾಳ-ಏಕತಾಳ ಇತ್ಯಾದಿ ಹಲವು ತಾಳಗಳು, ಸಾಥ್ ಕೊಡುವ ಚಿಕ್ಕ ಭಜನೆ ಡೋಲು, ಹಾರ್ಮೋನಿಯಂ, ತಬಲಾ ಇತ್ಯಾದಿ ಕೆಲವು ಮಿತ ವಾದ್ಯ ಪರಿಕರಗಳಿದ್ದವು. ಪರವೂರ ಕೆಲವು ಭಜನಾಸಕ್ತರು ತಮ್ಮ ಕಂಠಸಿರಿಯನ್ನು ತೋರಿಸಿ ಗಮನ ಸೆಳೆಯಲು ಹತ್ತಾರು ಕಿಲೋಮೀಟರು ಕ್ರಮಿಸಿ ಬಂದಿದ್ದರು.

ಊರಿಗೆ ಹೋದದ್ದು ನಮ್ಮ ಕೆಲವು ವೈಯ್ಯಕ್ತಿಕ ಕಾರ್ಯಕ್ರಮಗಳಿಗಾದರೆ ಅಲ್ಲಿಗೆ ಹೋದಾಗ ತಿಳಿದದ್ದು--ಕಾರ್ತೀಕ ಅಮಾವಾಸ್ಯೆಗೆ ಅಲ್ಲಿನ ಜನರಿಗೆ ಸೂತಕವಿದ್ದುದರಿಂದ ಈ ಸರ್ತಿಯ ಭಜನೆ ಪ್ರಹರನ್ನು ಈ ಮಾರ್ಗಶೀರ್ಷ ಅಮಾವಾಸ್ಯೆಗೆ ನಡೆಸುತ್ತಿದ್ದಾರೆಂದು. ’ಸಿಕ್ತಲೇ ಮಗನೇ ಚಾನ್ಸು’ ಎಂದುಕೊಂಡವನು ನೇರವಾಗಿ ದೌಡಾಯಿಸಿದ್ದೇ ದೇವಸ್ಥಾನಕ್ಕೆ! ಬೆಳಿಗ್ಗೆ ೧೦ಕ್ಕೆ ಆರಂಭವಾದ ಭಜನೆ ಮಾರನೇದಿನ ಬೆಳಿಗ್ಗೆ ೧೦ಕ್ಕೆ ಓಕುಳಿಯಾಗುತ್ತದೆ, ಅಲ್ಲಿಗೆ ತಿಂಗಳದಿನ ಪ್ರತೀ ಸಂಜೆ ನಡೆಸುವ ಭಜನೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಮುಕ್ತಾಯದ ಮಂಗಳದಿನದಂದು ದೇವರಿಗೆ ವಿಶೇಷ ಅಭಿಷೇಕ, ಪೊಜೆ, ಉಪಚಾರ ಮತ್ತು ಮಹಾಮಂಗಳಾರತಿ, ಸೇರಿದ ಭಕ್ತರಿಗೆ ಊಟ. ಇವು ಸದಾ ನಡೆದೇ ಇವೆ. ಸೇವಾ ಸಮಿತಿಯ ಮಂದಿ ವರ್ಗಿಣಿ ಹಾಕಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ಹೆಚ್ಚುಳಿದ ಸಾಮಾನುಗಳನ್ನು ಆ ರಾತ್ರಿ ಹರಾಜಿನ ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ದೇವರ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಾರೆ.ದೇವರಿಗೇ ಬೊಕ್ಕಸವೇ ಎಂದು ಕೇಳಬೇಡಿ, ಸ್ಥಾನಿಕವಾಗಿ ದೇವರು ತನ್ನ ಆಸ್ಥಾನದಲ್ಲಿ ನಡೆಸುವ ಎಲ್ಲಾ ಚಡಂಗಗಳಿಗೂ ಖರ್ಚಿಗೆ ಬೇಡವೇ ಮತ್ತೆ?

ಸದಾಶಿವ, ಗಜಾನನ ಇತ್ಯಾದಿ ಕೆಲವು ಸ್ನೇಹಿತರೊಂದಿಗೆ ಮಾತುಕತೆ ರಸವತ್ತಾಗಿತ್ತು. ಅದೇ ನಾವೆಲ್ಲಾ ಒಂದೆಲ್ಲಾ ಒಂದು ಕಾಲದಲ್ಲಿ ಈ ದೇವಸ್ಥಾನಗಳಲ್ಲಿ ಭಜನೆ ಪ್ರಹರದ ರಾತ್ರಿ ಚಳಿಕಾಯಿಸಲು ದೇವಸ್ಥಾನದ ಮಗ್ಗುಲ ತುಸುದೂರದ ಖಾಲೀ ಜಾಗದಲ್ಲಿ ಹೊಡಚ್ಲು[ಕ್ಯಾಂಫೈರ್]ಹಾಕಿಕೊಳ್ಳುವುದಿತ್ತು. ಅಕ್ಕಪಕ್ಕ ಗಿಡಮರಗಳಿಂದ ಬಿದ್ದಿರುವ ಕಸ-ಕಡ್ಡಿಗಳನ್ನೂ ಯಾರೋ ಎಸೆದ ಒಂದಷ್ಟು ರದ್ದೀ ಕಾಗದಗಳನ್ನೂ ಯಾವುದೋ ಕೆಲಸಕ್ಕೆ ಅಂತ ತಂದು ಬಳಕೆಗೆ ಜಾಸ್ತಿ ಎನಿಸಿ ಬಿಸಾಕಿದ ಹಗರದಬ್ಬೆಯ ತುಂಡುಗಳನ್ನೂ ಒತ್ತಟ್ಟಿಗೆ ಒಟ್ಟಿ ಕಡ್ಡಿಗೀರಿ ಉರಿಯುವ ಬೆಂಕಿಯ ಸುತ್ತ ಕುಳಿತು ಚಳಿಹೋಯ್ತೆಂದುಕೊಳ್ಳುವುದು ನಮಗೆ ಬಲು ಖುಷಿಕೊಡುತ್ತಿತ್ತು. [ಇಂದು ಅಂತಹ ಮಕ್ಕಳೂ ಇಲ್ಲ, ಮಕ್ಕಳಲ್ಲಿ ಆ ಉತ್ಸಾಹವೂ ಇಲ್ಲ!]ಅದೇ ಮಕ್ಕಳು ನಾವಿಂದು ಒಬ್ಬ ಬಿ.ಇ.ಓ ಆದರೆ ಇನ್ನೊಬ್ಬ ಡಾಕ್ಟರೇಟ್ ಪಡೆದು ಪ್ರಾಂಶುಪಾಲನಾಗಿದ್ದಾನೆ, ನಾನು ಹೀಗಿದ್ದೇನೆ ನಿಮ್ಮೊಡನೆ!--ಹೇಗಿದೆ ಜೀವನ ವ್ಯಾಪಾರ ? ಮಜವೆನಿಸುವುದಿಲ್ಲವೇ?

ಒಂದೆಡೆ ಸೇರಿದ್ದ ನಮ್ಮಲ್ಲಿ ಹಲವು ಮಾತುಕತೆಗಳಾದವು. ಬಾಲ್ಯದ ಲಹರಿಯಿಂದ ಹಿಡಿದು ಇಂದಿನ ಗಡಸು ಜೀವನದ ಹಲವು ಮಗ್ಗಲುಗಳು ಮಾತಿನಲ್ಲಿ ಸುಳಿದವು. ಒಮ್ಮೆಯಾದರೂ ಈ ಸರ್ತಿ ಊರಲ್ಲೊಂದು ಸಾಂಸ್ಕೃತಿಕ ಹಬ್ಬ ಮಾಡಬೇಕು. ಅದಕ್ಕೆ ಜಾತಿ-ಧರ್ಮಗಳ ಬಂಧನವಿಲ್ಲ. ನಮ್ಮ ಊರ ಮಹನೀಯರಲ್ಲಿ ಬಣ್ಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗೋಪಾಲ್ ಮಾಸ್ತರರಿದ್ದಾರೆ, ಗದಾಯುದ್ಧದಲ್ಲಿ ಭೀಮನಾಗಿ ಮಿಂಚಿದ ಡಿಯೇಗ್ ಗೊನ್ಸಾಲ್ವಿಸ್ ಇದ್ದಾರೆ, ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮಾಜೀ ಯುವಕರ ಸಂಘವೇ ಇದೆ! ಉತ್ತಮ ಸಂಗೀತಗಾರರಿದ್ದಾರೆ, ಉತ್ತಮ ವಕೀಲರಿದ್ದಾರೆ,ವಾಗ್ಮಿಗಳಿದ್ದಾರೆ, ವಿದ್ವಾಂಸರಿದ್ದಾರೆ, ನುರಿತ ವೈದ್ಯರಿದ್ದಾರೆ, ದಂತತಜ್ಞರುಗಳಿದ್ದಾರೆ, ಆಯ್.ಎ.ಎಸ್ ಅಧಿಕಾರಿಗಳಿದ್ದಾರೆ, ಯಕ್ಷಗಾನದ ಪ್ರಮುಖ ಪಾತ್ರಧಾರಿಯಾಗಿ ಮೆರೆದವರಿದ್ದಾರೆ, ಭಾಗವತರಿದ್ದಾರೆ, ಚಿತ್ರಕಲೆಯಲ್ಲಿ ಛಾಪು ಒತ್ತಿದವರಿದ್ದಾರೆ, ಜನಪದ ಸಂಗೀತವನ್ನು ತಮ್ಮದೇ ಸುಶ್ರಾವ್ಯ ಕಂಠದಲ್ಲಿ ಹಾಡುವ ಮಂದಿ ಇದ್ದಾರೆ, ರೈತರಿದ್ದಾರೆ, ಶ್ರಮಿಕರಿದ್ದಾರೆ, ಪುರೋಹಿತರಾಗಿ ದೂರದ ಊರುಗಳಿಗೆ ಸಾಗಿಹೋದ ಜನ ಇದ್ದಾರೆ---ಎಂದಮೇಲೆ ನಮ್ಮೂರಲ್ಲಿ ಯಾವರಂಗದಲ್ಲೂ ಕಮ್ಮಿ ಎನಿಸುವ ಕೊರತೆ ತೋರಿಬರುವುದಿಲ್ಲ. ಆದರೆ ವೃತ್ತಿಯನ್ನಾಧರಿಸಿ ಹಲವಾರು ಮಂದಿ ಊರಿನಿಂದ ಬಹುದೂರ ನೆಲೆಸಿದ್ದಾರೆ. ಅವರುಗಳನ್ನೆಲ್ಲಾ ಕರೆದು ಕಲೆಹಾಕಿ ಕೊನೇಪಕ್ಷ ಏಕದಿನ ಕಾರ್ಯಕ್ರಮ ನಡೆಸಬಹುದೇ ಎಂಬಕುರಿತು ನಾವು ನಾವೇ ಮಾತಾಡಿಕೊಂಡೆವು. ಗೆಳೆಯರ ಬಳಗದಲ್ಲಿ ಅನೇಕ ಜನ ಸಾಹಿತ್ಯಾಸಕ್ತರೂ ಬರಹಗಾರರೂ ಇರುವುದರಿಂದ ಈ ಕಾರ್ಯಕ್ರಮಕ್ಕೂ ಮುಂಚೆ ಬರಹಗಳಲ್ಲಿ ಕೆಲವನ್ನಾದರೂ ಪುಸ್ತಕರೂಪದಲ್ಲಿ ತರುವಂತೇ ಕೇಳಿದ್ದಾರೆ. ಕ್ಷಣವೊಮ್ಮೆ ಮೈ ಜುಂ ಎಂತು, ನಮ್ಮೂರ ಬಗ್ಗೆ ಬಹಳ ಹೆಮ್ಮೆ ಎನಿಸಿತು.

ತುತ್ತಿನ ಚೀಲ ತುಂಬಿಸುವ ಭರದಲ್ಲಿ ಸಾಗುವ ದಾರಿ ಸೇರುವ ಗಮ್ಯ ಮೊದಲು ಅರಿವಿಗೆ ಬಾರದಲ್ಲ ? ಕಾಲೇಜು ವಿದ್ಯೆಯಲ್ಲಿ ಎರಡುವರ್ಷ ಪೂರೈಸಿದ ಮೇಲೆ ಯಾರ್ಯಾರೋ ಎಲ್ಲೆಲ್ಲಿಗೋ ಹೋದೆವು; ಯಾರು ಎಲ್ಲಿ ಎತ್ತ ಎಂಬುದರ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡವರಲ್ಲ, ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯೂಸಿ ಬ್ಯೂಸಿ. ಆದರೂ ಬಾಲ್ಯಕಾಲದ ಚಡ್ಡೀ ದೋಸ್ತಿಯ ಆ ಅನ್ಯಾದೃಶ ಅನುಭವ ಮತ್ತೆ ಮತ್ತೆ ಸ್ನೇಹಿತರು ಸಿಕ್ಕಾಗ ಮನಃಪಟಲದಲ್ಲಿ ಸುಳಿದಾಡುತ್ತದೆ. ಸುಬ್ರಹ್ಮಣ್ಯನೆಂಬ ಗೆಳೆಯನಿಗೂ ನನಗೂ ಯಾವುದೋ ಮಾತಿನ ಜಟಾಪಟಿ ನಡೆದಿದ್ದು, ನನ್ನ ಉಪನಯನಕ್ಕೆ ಆತನಿಗೆ ಬರದಂತೇ ನಾನು ತಾಕೀತು ಮಾಡಿದ್ದು, ಬರದಂತೇ ಮುಳ್ಳಬೇಲೀ ಹಾಕುತ್ತೇನೆಂದು ಹೆದರಿಸಿದ್ದು, ಇನ್ನೂ ಹಸಿಹಸಿ ಎಂಟನೇ ವಯಸ್ಸಿಗೇ ನನಗೆ ಉಪನಯನವಾಗಿದ್ದು ಎಲ್ಲವನ್ನೂ ನೆನೆದು ನನ್ನಷ್ಟಕ್ಕೇ ಒಂಥರಾ ಆನಂದಪಡುತ್ತೇನೆ. ಸುಬ್ರಹ್ಮಣ್ಯ ಸಿಗದೇ ದಶಕಗಳೇ ಸಂದವು. ಆತ ಹೇಗಿದ್ದಾನೋ ಈ ಸರ್ತಿಯೂ ಸಂದರ್ಶಿಸಲಾಗಲಿಲ್ಲ. ಬಡತನದಲ್ಲಿದ್ದ ಅವರ ಮನೆಯ ಹೊರಜಗುಲಿಗೆ ಶಿರವಾಳೆ [ಕಿಟಕಿ ಜಾಲಂದ್ರ]ಇರಲಿಲ್ಲ. ಒಂದೇ ಚಡ್ಡಿ-ಅಂಗಿಯಲ್ಲಿ ಇಡೀವಾರ ಶಾಲೆಯನ್ನು ಮುಗಿಸಬೇಕಾಗಿತ್ತು. ಚಪ್ಪಲಿಯಿಲ್ಲದ ಬರಿಗಾಲಲ್ಲಿ ಆತ ನಡೆದುಬರುತ್ತಿದ್ದ. ಸಣ್ಣಗೆ ಕಿಲಾಡಿಯಾಗಿದ್ದ ಆತ ಶಾಲೆಗೆ ಮಾತ್ರ ಸರಿಯಾಗಿ ಬರುತ್ತಿದ್ದ. ಬಡತನದ ಆ ಮುಖವನ್ನೊಮ್ಮೆ ನೆನೆದು ಕಣ್ಣಾಲಿ ತುಂಬಿಕೊಳ್ಳುತ್ತದೆ.

ವಿಶ್ವನಾಥ ನಮಗಿಂತ ಮೂರ್ನಾಕು ವರ್ಷ ಹಿರಿಯ. ಆತನ ತಂದೆ ೭೫-೭೬ ವರ್ಷದ ರಾಮಣ್ಣ ಮೊನ್ನೆ ಕೂಡಾ ಭಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಳೆಯ ರಾಗಗಳನ್ನು ಹಾಡಿ ಎಲ್ಲರ ಮನಗಳಲ್ಲೂ ಭಾವತರಂಗಗಳು ಮಾರ್ದನಿಸುವಂತೇ ಮಾಡಿದರು. ಕಳೆದವರ್ಷ ಅಕಾಲ ಜ್ವರದಿಂದ ಬಳಲಿ ವಿಶ್ವನಾಥ ತೀರಿಕೊಂಡಿದ್ದರ ಬಗ್ಗೆ ನಾನು ಬರೆದಿದ್ದೆ. ಜಾಸ್ತಿ ಓದಿರದಿದ್ದರೂ ಎಲ್ಲರಿಗೂ ಸ್ನೇಹಿತನಾಗಿದ್ದ ವಿಶ್ವನಾಥನ ಬಗ್ಗೆ ಹೊಸದಾಗಿ ಮತ್ತೆ ಬರೆಯುವುದಾಗುವುದಿಲ್ಲ. ಈ ಸಲದ ಭಜನೆ ಪ್ರಹರದಲ್ಲಿ ಪಾಪ ವಿಶ್ವನಾಥ ಇರಲಿಲ್ಲ. ಜೀವಿಯ ಜೀವನದಲ್ಲಿ ಯಾವುದು ಘಟಿಸಬೇಕೋ ಅದು ನಡೆಯಲೇ ಬೇಕಾದುದು ವಿಧಿಯನಿಯಮ. ಊರಕಡೆ ಎರಡು ಪ್ರದೇಶಕ್ಕೆ ನಾನು ಭೇಟಿಕೊಟ್ಟಿದ್ದೆ: ಎರಡೂ ಕಡೆಗಳಲ್ಲಿ ಮುದ್ದಾದ ಒಂದೊಂದು ಬೆಕ್ಕಿನ ಮರಿಗಳಿದ್ದವು. ಒಂದರ ತಾಯಿ ಮನೆಯ ಹತ್ತಿರದ ರಾಷ್ಟ್ರೀಯ ರಸ್ತೆ ದಾಟುತ್ತಿರುವಾಗ ವಾಹನಕ್ಕೆ ಸಿಲುಕಿ ಅಸುನೀಗಿದೆಯಂತೆ. ಆಗಿನ್ನೂ ಆ ಮರಿ ಕಣ್ಣನ್ನೇ ತೆರೆದಿರಲಿಲ್ಲವಂತೆ. ಬಾಟಲಿಯಲ್ಲಿ ಹಾಲುಣಿಸಿ ಆ ಮರಿಯನ್ನು ಬೆಳೆಸಿದ್ದಾರೆ-ಈಗ ಅಲ್ಲಿ ಇಲ್ಲಿ ಓಡಾಡುತ್ತಿದೆ. ಇನ್ನೊಂದರ ಅಮ್ಮನಿಗೆ ವಾತವೋ ಏನೋ ಮುದುರಿಕೊಂಡು ಸತ್ತುಹೋಯಿತಂತೆ, ಆ ಮರಿಯೂ ಚಿಕ್ಕದೇ ಇತ್ತು, ಹೊಟ್ಟೆಗೆ ಆಹಾರ ಹುಡುಕಿ ತಿನ್ನುವುದನ್ನು ಕಲಿತಿರದ ಅಮ್ಮನನ್ನೇ ಅವಲಂಬಿಸಿದ ಆ ಮರಿಗಳನ್ನು ಕಂಡಾಗ ’ಅಮ್ಮನ ಪಾತ್ರ’ದ ಋಣ ತೀರಿಸಲಾಗುವುದಿಲ್ಲ ಎಂಬುದು ನೆನಪಿಗೆ ಬಂತು. ಆ ವಿಷಯದಲ್ಲಿ ನನಗೆ ಅಮ್ಮನ ಪ್ರೀತಿಯಲ್ಲಿ ಕಿಂಚಿತ್ತೂ ಕೊರತೆಯಾಗಲಿಲ್ಲ; ಇವತ್ತಿಗೂ ನನಗೆ ಅಮ್ಮನ ಪ್ರೀತಿಯ ಆಸರೆ ಇದೆ.

ಹಳೆಯ ಮನೆಗಳು ಕಸುವು ಕಳೆದುಕೊಂಡು ಅಲ್ಲಲ್ಲಿ ಬಳಸಿದ ಕಟ್ಟಿಗೆಗಳಲ್ಲಿ ಹುಳುಬಿದ್ದು ಅಜಡಾಗಿವೆ. ಹೊಸಮನೆಗಳು ತಾರಸಿಯವು ಇನ್ನೂ ಮೇಲೆದ್ದಿಲ್ಲ. ದಶಕಗಳ ಹಿಂದೆ ಕಾಡು ಸಮೃದ್ಧವಾಗಿತ್ತು, ನಾಟುಗಳು, ಮರಮಟ್ಟುಗಳು ಸಿಗುತ್ತಿದ್ದವು, ಮನೆ ಕಟ್ಟುವುದಿರಲಿ, ದುರಸ್ತಿಯಿರಲಿ ಸಲೀಸಾಗಿ ನಡೆಯಬಹುದಿತ್ತು. ಆದರೆ ಈಗ ದುರಸ್ತಿಯೂ ತೀರಾ ದುಬಾರಿ, ಹೊಸಮನೆಕಟ್ಟಿದರೆ ಹಳೆಯ ಆ ಕಟ್ಟಿಗೆಯ ಅಥವಾ ಹಂಚಿನ ಮನೆಗಳ ಆಪ್ತತೆ ತಾರಸಿ ಮನೆಗಳಲ್ಲಿ ಕಾಣುವುದಿಲ್ಲ! ಕಾಲಗತಿಗೆ ತಕ್ಕಂತೇ ಚಳಿ-ಮಳೆಗಳಲ್ಲಿ ಬೆಚ್ಚಗೂ ಬಿಸಿಲಲ್ಲಿ ತಣ್ಣಗೂ ಇರುತ್ತಿದ್ದ ಹಂಚಿನ ಮನೆಗಳನ್ನು ಮತ್ತೆ ಕಟ್ಟಿದರೆ ಪರೋಕ್ಷವಾಗಿ ಕಾಡು ಕಡಿಯುವ ಕೆಲಸಕ್ಕೆ ನಾವೇ ಪ್ರೇರೇಪಣೆ ನೀಡಿದಂತಾಗುತ್ತದೆಯಲ್ಲವೇ? ಸದ್ಯ ನಮ್ಮನೆಗೆ ಅಂತಹ ತೊಂದರೆ ತೀರಾ ಇಲ್ಲ, ಸಾಕಷ್ಟು ಸರ್ತಿ ಸುಣ್ಣ, ಬಣ್ಣ ಹಚ್ಚಿಸಿಕೊಂಡ ಮನೆಯ ಕಟ್ಟಿಗೆಯಲ್ಲಿ ಇರುವ ಹುಳಗಳು ಅಲ್ಲಲ್ಲೇ ಸತ್ತುಹೋದವೋ ಏನೋ!

ಊರಿಗೆ ಹೋದಾಗೆಲ್ಲಾ ಹತ್ತಾರು ಸಾರಿ ಅಂದುಕೊಳ್ಳುವುದು ನಾವು ಕಲಿತ ಶಾಲೆಕಡೆ ಹೋಗಿ ಬರಬೇಕು ಎಂದು. ಇಂದು ಅಂತಹ ಮಾಸ್ತರಮಂದಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾವು ಹುತುತು ಕಬಡ್ಡಿ ಆಡಿದ ಜಾಗ ಈಗ ಕ್ರಿಕೆಟ್ಟಿಗೆ ಬಳಕೆಯಾಗುತ್ತಿರಬಹುದು. ಮಗ್ಗಿ ಹೇಳಿಕೊಡುತ್ತಾರೋ ಇಲ್ಲವೋ ಎಂಬುದೂ ತಿಳಿದಿಲ್ಲ. ಆಗ ನಮ್ಮಲ್ಲಿದ್ದಿದ್ದು ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯೊಂದೇ! ಅದೂ ನಮ್ಮ ಶಾಲೆಯಲ್ಲಿ ಗಂಡುಮಕ್ಕಳೇ ಒಂದು ಕಾಲಕ್ಕೆ ಜಾಸ್ತಿ ಇದ್ದುದರಿಂದ ’ಕನ್ನಡ ಗಂಡುಮಕ್ಕಳ ಶಾಲೆ’ ಎಂದು ನಾವೂ ಓದಲು ಆರಂಭಿಸುವ ಮುನ್ನ ಅದಕ್ಕೆ ಹೆಸರಿದ್ದಿದ್ದು ತಿಳಿದುಬರುತ್ತದೆ. ಒಂದಾನೊಂದು ದಿನ ನಾವು ಅಂತಹ ಠಸ್ಸೆಯನ್ನೂ ಕಾಗದಪತ್ರಗಳಲ್ಲಿ ಕಂಡಿದ್ದೆವು; ಈಗ ಅದು ಹಾಗಿಲ್ಲ, ಬರೇ ಗಂಡುಮಕ್ಕಳಿರಲಿ ಮಕ್ಕಳ ಸಂಖ್ಯೆಯೇ ಇದೆಯೋ ಇಲ್ಲವೋ ಗೊತ್ತಾಗಿಲ್ಲ! ಊರಲ್ಲಿ ಅಲ್ಲಲ್ಲಿ ಖಾಸಗೀ ಶಾಲೆಗಳು ತಲೆ ಎತ್ತಿವೆ, ಎಲ್ಲರಿಗೂ ಒಳಗೊಳಗೇ ಇಂಗ್ಲೀಷ್ ವ್ಯಾಮೋಹ! ಶಾಲೆಯ ಆ ದಿನಗಳಲ್ಲಿ ನಮಗೆ ಆಡಲು ಅಷ್ಟೊಂದೆಲ್ಲಾ ಆಟದ ಪರಿಕರಗಳಿರಲಿಲ್ಲ. ಇಡೀ ಶಾಲೆಯಲ್ಲಿ ಕಲಿಯುವ ಒಟ್ಟೂ ಸುಮಾರು ೩೫೦-೪೦೦ ಮಕ್ಕಳಿಗೆ ಇದ್ದುದು ಎರಡೇ ಕೇರಂಬೋರ್ಡು, ಹಳೆಯ ಕೆಲವು ಡಂಬೆಲ್ಸು. ನಮ್ಮ ಶಾಲೆಯಲ್ಲಿ ಅಂದು ಯಾವುದೇ ವಾದ್ಯ ಪರಿಕರಗಳಿರಲಿಲ್ಲ. ಕುಡಿಯುವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ವಿದ್ಯುದ್ದೀಪ ಇರಲಿಲ್ಲ. ನಕಾಶೆಗಳು ಸಾಕಷ್ಟು ಇರಲಿಲ್ಲ. ಆದರೂ ಮಕ್ಕಳಲ್ಲಿ ಮಾತ್ರ ಅವುಗಳ ಕೊರತೆ ಕಂಡುಬರಲಿಲ್ಲ. ಇರುವುದನ್ನೇ ಬಳಸಿಕೊಂಡಿದ್ದೆವು. ಒಟ್ಟಾಗಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು.

ಶಾಲೆಯ ಅಂಗಳದಲ್ಲಿ ಸಣ್ಣ ಹೂದೋಟವಿತ್ತು. ಅಲ್ಲಿ ನಿತ್ಯವೂ ಗಿಡಗಳಿಗೆ ಪಾಳಿಯ ಪ್ರಕಾರ ನೀರು ಹಾಕುವುದು[ಚಳಿ ಮತ್ತು ಬೇಸಿಗೆ ಕಾಲಗಳಲ್ಲಿ]ಮತ್ತು ಅವುಗಳ ಲಾಲನೆ ಪಾಲನೆ ಮಕ್ಕಳ ಜವಾಬ್ದಾರಿಯೇ ಆಗಿತ್ತು. ಶಂಖಪುಷ್ಪದ ಬಳ್ಳಿ, ಗಡಿಯಾರ ಸಂಪಿಗೆ ಮುಂತಾದ ಅಪರೂಪದ ಹೂಗಳು ಅರಳಿ ನಿಲ್ಲುತ್ತಿದ್ದವು. ಬಣ್ಣಬಣ್ಣದ ಗಿಡಗಳನ್ನು ನೋಡುತ್ತಾ ಗಾಳಿಗೆ ಅವು ತಲೆಯಾಡಿಸುವಾಗ ನಮಗೂ ಅವುಗಳಿಗೂ ಭಾವಬಂಧನ ಬೆಸುಗೆಯಾಗುತ್ತಿತ್ತು. ಅದರ ಮಗ್ಗುಲಲ್ಲೇ ಮರದ ಧ್ವಜಸ್ತಂಭ ನೆಟ್ಟಿದ್ದರು. ಆಗಾಗ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ನಡೆಸಲು ಅದು ಬಳಕೆಯಾಗುತ್ತಿತ್ತು. ಸ್ಥಳೀಯ ಯುವಕ ಸಂಘದ ಸಹಕಾರದೊಂದಿಗೆ ನಾವು ಮಕ್ಕಳೆಲ್ಲಾ ಶ್ರಮದಾನಮಾಡಿ ಅಂಗಳದ ಒಂದು ಪಕ್ಕದಲ್ಲಿ ವೇದಿಕೆಯೊಂದನ್ನು ಕಟ್ಟಿದ್ದೆವು. ವಾರ್ಷಿಕ ಸ್ನೇಹ ಸಮ್ಮೇಲನಕ್ಕೆ ಅದು ಬಳಕೆಯಾಗುತ್ತಿತ್ತು. ಡಿಸೆಂಬರ್, ಜನವರಿ ಹೊತ್ತಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತೀರಾ ದೂರವೇನೂ ಅಲ್ಲ. ಹೆಚ್ಚೆಂದರೆ ಗೋಕರ್ಣ, ಮುರ್ಡೇಶ್ವರ, ಬನವಾಸಿ ಈ ಥರದ ಜಾಗಗಳಿಗೆ. ಆದರೂ ಅಲ್ಲಲ್ಲೇ ಅದೂ ಇದೂ ನೋಡುತ್ತಾ ಎರಡು ದಿನಗಳು ಕಳೆದುಹೋಗುತ್ತಿದ್ದವು. ಒಟ್ಟಿಗೇ ಕೂತು ಒಂದೇ ವಾಹನದಲ್ಲಿ ಪ್ರಯಾಣಿಸುವುದು, ’....ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಜಯವಾಗಲಿ/ಜಯವಾಯಿತು’ ಎಂದು ಕೈಬರಹದಲ್ಲಿ ಬರೆದಿದ್ದ ಚೀಟಿಕಟ್ಟುಗಳಿಂದ ಒಂದೊಂದನ್ನೇ ಅಲ್ಲಲ್ಲಿ ಹಾರಿಬಿಡುತ್ತಾ ಸಾಗುವುದು, ದಾರಿಯುದ್ದಕ್ಕೂ ಹಾಡು, ಜೈಕಾರ, ತೆರಳಿದ ಜಾಗಗಳಲ್ಲಿ ಒಟ್ಟಿಗೇ ಊಟ, ತಿಂಡಿ, ವಿಶ್ರಾಂತಿ ಬಹಳ ಮಜವಾಗಿರುತ್ತಿತ್ತು. ನೆನೆಸಿದರೆ ಬಾಲ್ಯ ಮತ್ತೆ ಬರುವುದೇ?

ಯಾವುದೇ ತಾಪತ್ರಯವಿರದ ಆ ದಿನಗಳ ಮಹತ್ವ ಇವತ್ತಿಗೆ ಅರಿವಿಗೆ ಬರುತ್ತದೆ. ಇದ್ದರೂ ಒಂದೇ ಇರದಿದ್ದರೂ ಒಂದೇ ಎಂಬ ಮನೋಭಾವ ಅಂದಿಗೆ ಆಗುತ್ತಿದ್ದುದು ಕಾಲಕಳೆದಮೇಲೆ ಅದುಬೇಕು, ಇದುಬೇಕು ಎಂಬ ಆಸೆಗೆ ಇಳಿದುಬಿಡುತ್ತದೆ! ಹೆತ್ತವರಾಗಿ ಸಹಜವಾಗಿ ನಮ್ಮ ಏಳ್ಗೆಗೆ ಕಾರಣೀಭೂತರಾದ ನಮ್ಮ ಪಾಲಕರು ತಾವು ಪಡೆಯದ ಸೌಲಭ್ಯಗಳನ್ನು ನಮಗಾಗಿ ಕಲ್ಪಿಸಿದ್ದರು. ಮಕ್ಕಳ ಮುಖದ ಗೆಲುವಿನ ನಗುವಿನಲ್ಲಿ ಕಷ್ಟದ ಚಣಗಳನ್ನು ಕಳೆಯಲೆತ್ನಿಸುತ್ತಾ ಓದಿಸಿದ ಅವರಿಗೆ ನಾವೆಷ್ಟೇ ಕೃತಜ್ಞರಾಗಿದ್ದರೂ ಕಮ್ಮಿ ಎನಿಸುತ್ತದೆ. ಜೀವನದ ಭಾಗವಾಗಿ ಕೆಲವು ಕೆಲಸಗಳನ್ನೂ ಮಾಡಿಕೊಳ್ಳುವ ಕಲೆಯನ್ನು ಅವರು ನಮಗೆ ಧಾರೆ ಎರೆದರು. ಕೇವಲ ಪುಸ್ತಕದ ವಿದ್ಯೆ ವಿದ್ಯೆಯಲ್ಲಾ ಜೀವನಕ್ಕೆ ಬೇಕಾದ ಕಾರ್ಯಗಳನ್ನು ನಿಭಾಯಿಸಲು ಕಲಿಯಬೇಕೆಂಬುದೂ ಅವರ ಇಚ್ಛೆಯಾಗಿತ್ತು. ಅದು ಇಂದು ನಮಗೆ ಹೆಜ್ಜೆಹೆಜ್ಜೆಗೆ ಸಹಕಾರಿಯಾಗಿದೆ. ಅಂತಹ ಕಾರ್ಯಗಳಲ್ಲಿ ಸಾಮೂಹಿಕವಾಗಿ ಕಲೆಯುವ ಎಲ್ಲರೊಳಗೊಂದಾಗುವ ಕಲೆ ಕೂಡ ಒಂದು. ಅದೇ ಈ ಭಜನೆ ಕಾರ್ಯಕ್ರಮ. ಭಾವಪೂರಿತವಾಗಿ ಭಜನೆಗಳಲ್ಲಿ ನಾವು ತೊಡಗಿಕೊಂಡಾಗ ನಮ್ಮದೆಲ್ಲವನ್ನೂ ಪರಮಾತ್ಮನ ಪಾದಕ್ಕೆ ಹಾಕಿ ಶರಣಾದಾಗ ಯಾವುದೋ ರಕ್ಷಣಾ ಕವಚ ಸಿಕ್ಕ ಅನುಭವ ನಮಗಾಗುತ್ತದೆ; ಯಾವುದೋ ಅವ್ಯಕ್ತ ಆಸರೆ ನಮ್ಮನ್ನು ಪೊರೆಯುವ ಭರವಸೆ ಇತ್ತಂತಾಗುತ್ತದೆ. ಅಂತಹ ಆ ಆಸರೆ ಪುಟ್ಟ ಕಂದಮ್ಮಗಳ ಅಮ್ಮಂದಿರನ್ನು ಕಸಿದುಕೊಳ್ಳದಿರಲಿ, ಯಾವುದೇ ಜೀವಿಯೂ ಅಮ್ಮನ ಪ್ರೀತಿಯಿಂದ ವಂಚಿತವಾಗದಿರಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ಭಜನೆಯ ಸಾಲೊಂದಿಗೆ ಇದೋ ಲೋಕದ ಹಿತಾರ್ಥ ವಂದಿಸಿಕೊಳ್ಳುತ್ತಿದ್ದೇನೆ :

ಸೀತಾರಾಮ್ ಜೈಜೈರಾಮ್ ಭಜರೇ ಮನ......ಭಜರೇ ಮನ ಭಜ ರಾಮನಾಮ
ಸೀತಾರಾಮ್ ಜೈಜೈರಾಮ್ ಭಜರೇ ಮನ...