ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 21, 2011

ನೋಡೀ ಸ್ವಾಮೀ ನೀವೂ ಇರಬೇಕು ಹೀಗೇ......!


ನೋಡೀ ಸ್ವಾಮೀ ನೀವೂ ಇರಬೇಕು ಹೀಗೇ.....!

ಬಿಟ್ಟಿ ಸಿಕ್ಕದ್ದಾದರೂ ಪರವಾಗಿಲ್ಲ
ಕದ್ದದ್ದಾದರೂ ತೊಂದರೆಯಿಲ್ಲ
ನಮಗೆ ಬೇಕಾದ್ದು ಸಿಕ್ಕಿಬಿಟ್ಟರೆ ಆಯಿತು
ನಾವು ಅಷ್ಟು ಸಾದಾ ಸೀದಾ ಜನ !
ರಸ್ತೆಯಲ್ಲಿ ಅಪಘಾತವಾದ ಸ್ಥಳವಿರಲಿ
ಸುನಾಮಿ ನುಗ್ಗಿ ಜನತೆ ತತ್ತರಿಸಿ
ಸಾವಿರಾರು ಮಂದಿ ಸತ್ತು ಹೋಗಿದ್ದರೂ ಪರವಾಗಿಲ್ಲ
ನಮಗೇನಾದರೂ ಸಿಗುವುದೇ ಎಂದು
ಸಂಶೋಧನೆಗೆ ಹೊರಡುವ ’ಸಭ್ಯ’ರು ನಾವು !
ನೆರೆಹಾವಳಿಯೇ ಬರಲಿ ಅತಿವೃಷ್ಟಿಯೇ ಇರಲಿ
’ಪಾಪದ ಜನತೆಗೆ ಒಂದಷ್ಟು ಪರಿಹಾರಕೊಡಿ’
ಎಂದು ತಮ್ಮ ’ಕೈ’ ಸಬಲವಾಗಿದ್ದರೂ
ಕಂಡವರಲ್ಲಿ ’ಕೈ’ಯ್ಯೊಡ್ಡಿ ಬೇಡಿ
ಅದನ್ನೂ ಬಿಡದೇ ತಿನ್ನುವ
’ಕೈ’ಗುಣದ ಭಾಗ್ಯವಂತರು ನಾವು !

ಸಭೆ-ಸಮಾರಂಭಗಳಿಗೆ
ಮಾತನಾಡಲೂ ತಿಳಿಯದ ಮುಗ್ಧ
ಮರದ ತಿಮ್ಮಕ್ಕ ಸುಕ್ರಿ ಜಟ್ಟಪ್ಪ
ಇಂಥವರನ್ನೆಲ್ಲಾ ಕರೆದು
’ಓಹೋಹೋ ಏನೋ ಮಹದುಪಕಾರಮಾಡಿದ್ದೇವೆ’
ಎನ್ನುತ್ತಾ ಜೀವಿತದಲ್ಲಿ ಅವರಿಗೆ
ಯಾವ ಕೆಲಸಕ್ಕೂ ಉಪಕಾರಕ್ಕೂ ಬಾರದ
ಮುದ್ರಿತ ’ಪ್ರಶಸ್ತಿ ಪತ್ರ’ಗಳನ್ನು
ಬೇಡವೆಂದರೂ ಬಿಡದೇ ಅವರ ಕೈಗಿತ್ತು
ಅದನ್ನೇ ’ಪ್ರಜಾತಂತ್ರದ ವೈಭವ’ ಎಂದು
ಬಣ್ಣಿಸುವ ನಾಗರಿಕರು ನಾವು !

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಎಂದುಕೊಳ್ಳುತ್ತಾ ಗಾದಿಗಾಗಿ
ಪರಸ್ಪರ ಕಿತ್ತಾಡುತ್ತಾ
ದಿನಬೆಳಗಾದರೆ ಹೋದ ಪಿಶಾಚಿ
"ಮರಳಿ ಬಂದೆ ಗವಾಕ್ಷಿಯಲ್ಲಿ"
ಎನಿಸುವ ಹಾಗೇ ರಾಜಕೀಯದಲ್ಲಿ
ಹೊಸ ವರಸೆಗಳೊಂದಿಗೆ ಹೊಲಸಲ್ಲಿ ಬಿದ್ದ
ಕಿಲುಬು ಕಾಸನ್ನೂ ಬಿಡದೇ ಮಟ್ಟಸವಾಗಿ
ನೆಕ್ಕಿ ಧಕ್ಕಿಸಿಕೊಳ್ಳುವ ಭೂಪರು ನಾವು !

ಅಲ್ಲಿದ್ದಾರೆ ನೋಡಿ ಜಪಾನೀಯರು
ತಂತ್ರಜ್ಞಾನವನ್ನು ಕಂಡುಕೊಳ್ಳುತ್ತಾ
ಬದುಕನ್ನೂ ದೇಶವನ್ನೂ ಕಟ್ಟೀ ಕಟ್ಟೀ
ಕೆಡವಿಸಿಕೊಳ್ಳುತ್ತಾ ತಲೆಯಿಲ್ಲದ
ಕೆಲಸಮಾಡುತ್ತಿದ್ದಾರೆ!
ಅವರೂ ನಮ್ಮಂತೇ ಆಗಿದ್ದರೆ
ಅಲ್ಲಿ ಸುನಾಮಿ ಬರುತ್ತಿರಲಿಲ್ಲ
ಭೂಕಂಪವೂ ಆಗುತ್ತಿರಲಿಲ್ಲ !
ಪಾಪ ಅವರ ಒಳ್ಳೆಯತನವೇ ಅವರನ್ನು
ಹಾಳುಮಾಡುತ್ತಿದೆ..ಕಲಿಯುಗ!

ಇನ್ನಾದರೂ ಅವರು ಪುಗಸಟ್ಟೆ ಸಿಗುವ
ಕಾಸನ್ನು ಹುಡುಕಲಿ
ಹೊಟ್ಟೆ ಖಂಡ್ಗಕ್ಕಿ ಚರಿಗೆಯಾದರೆ ಸಾಕು
ಅವರೆಲ್ಲಾ ನಮ್ಮವರೇ ಆಗಿಬಿಡುತ್ತಾರೆ !
ಆಗ ನಮ್ಮಂತೇ ಎಲ್ಲವೂ ನಿಧಾನ
ನಿಧಾನವೇ ಪ್ರಧಾನ !
ಮೂರಕ್ಕೆ ಬರೋಬ್ಬರಿ ಮೂರುಕ್ವಿಂಟಾಲು
ತೂಗುವ ನಮ್ಮಲ್ಲಿ ಕೆಲವರನ್ನು
ಅನುಕರಿಸಿದರೆ ಜಪಾನಿನ ತೂಕ
ಜಾಸ್ತಿಯಾಗಿ ನೆಲ ಅಲ್ಲಾಡುವುದು
ನಿಂತುಹೋಗುತ್ತದೆ ! ಎಂಥಾ ಅಪ್ಪಟ
ದೇಶೀ ತಂತ್ರಜ್ಞಾನ ಗೊತ್ತಾಯಿತಲ್ಲ ?
ಸ್ವಲ್ಪ ಅವರಿಗೂ ಹೇಳಿಬಿಡಿ