[ನಗುವಿಲ್ಲದಿದ್ದರೆ ಬದುಕು ನೀರವವಾಗಿರುತ್ತದೆ, ನೀರಸವಾಗಿರುತ್ತದೆ. ನಕ್ಕಾಗ ಶರೀರದಲ್ಲಿರುವ ೭೨೦೦೦ ನಾಡಿಗಳೂ ಕೆಲಸಮಾಡುವವಂತೆ; ಆಯುಷ್ಯ, ಆರೋಗ್ಯ ವರ್ಧಿಸುವುದಂತೆ. ಬಣಬಣಗುಡುವ ಒಣಗುವ ಬೇಸಿಗೆಯಲ್ಲಿ ನೀರಸವಾದರೆ ಹೇಗೆ? ಗ್ರಾಮ್ಯ ಜನಪದರ ಮಾತುಕತೆ ಹಲವೊಮ್ಮೆ ನಮ್ಮಲ್ಲಿ ಹಾಸ್ಯರಸವನ್ನು ಉಕ್ಕಿಹರಿಸುತ್ತದೆ. ಈ ನಗೆಹೂರಣದಲ್ಲಿ ಬಳಸಲ್ಪಟ್ಟಿರುವ ಗ್ರಾಮ್ಯ ಭಾಷೆ, ಪದಗಳು ಎಲ್ಲರಿಗೂ ಅರ್ಥವಾಗುತ್ತದೋ ಇಲ್ಲವೋ ಅರಿಯೆ. ಬಿರುಬೇಸಿಗೆಯಲ್ಲಿ ಶರೀರ ಬೆವರಿ ನಾಲಿಗೆ ಒಣಗಿ ಹೋಗುವಾಗ, ಬಾಯಲ್ಲಿ ಮತ್ತೆ ನೀರೂರಿಸುವ ’ಭಟ್ರ ಕಾಚಾ’ ಕಥಾನಕವನ್ನು ನಿಮ್ಮ ಮುಂದಿಡಬೇಕೆಂಬ ಬಹುದಿನದ ಬಯಕೆಯನ್ನು ತೀರಿಸಿಕೊಂಡ ಸಮಾಧಾನವಷ್ಟೇ ನನ್ನದು. ಕೆಲವು ಪದ-ಅರ್ಥಗಳ ಕೋಷ್ಟಕವನ್ನು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ, ಅರ್ಥವಾಗದ ಪಕ್ಷದಲ್ಲಿ, ಕೋಷ್ಟಕದಿಂದ ನಗದು ಸಾಲ ಎತ್ತಿಕೊಂಡು ನೀವು ನಗದೇ ಇರಲಾರಿರಿ ಎಂಬುದು ಬರಹಗಾರನ ಅನಿಸಿಕೆ; ಹಾಗೊಮ್ಮೆ ಆದರೆ ಅದು ಬರಹ ಸಾಫಲ್ಯಗೊಳ್ಳುವ ಬಗೆ, ಎಂದಮೇಲೆ ತಡವೇಕೆ? ಓದುವುದಕ್ಕೆ ತೊಡಗಿಕೊಳ್ಳಿ, ನಮಸ್ಕಾರ]
ಕಳದ ಬ್ಯಾಸ್ಗಿಲಿ ನಮ್ಮನಿ ಶಣ್ ತಂಗಿ ಬೆಂಗ್ಳೂರ್ಗೆ ಕರ್ಕಂಡೋಗಿತಲ...ಅಲ್ಲೀತನ ನಾಂವು ಎಂತದು ಸರ್ಯಾಗಿ ಕಂಡೊರೇ ಅಲ್ಲ. ನಮ್ಮನಿ ಹೆರಿ ತಂಗಿ ಮದ್ವಿ ಮಾಡ್ಬೇಕಾರೆ, ಮರ್ತ್ ಕಮ್ತಿಯೋರ್ ಜವಳಿ ಅಂಗ್ಡೀಲಿ ಉದ್ರಿ ಮ್ಯಾಲೆ ತಕಂಡದ್ದೇ ನಾಕ್ ಪತ್ಲ, ಎರಡ್ ಮುಂಡು, ಎರಡ್ ಜೋಡಿ ಅಂಟ್ರವಾಲ್ ಹೊಲ್ಸ್ಕಂಬುಕೆ ವಸ್ತ್ರ, ಹತ್ರಂದೋರ್ಗೆ ಕೊಡುಕೆ ಹೇಳಿ ಹತ್ತು ಟುವಾಲು, ಮದಮಗಗೆ ಒಂದ್ ಸರ್ಟ್ ಪೀಸು-ಒಂದ್ ಪ್ಯಾಂಟ್ಪೀಸು ಇಂತದೆಲ್ಲಾ ಸೇರಿ ಒಟ್ಟೂ ೨೦ ಸಾವ್ರ ದಾಟೋಯ್ತು. ನಮ್ಕೆಲೆಲ್ಲಾ ದುಡ್ಡೆಲ್ಲದೆ? ಹ್ಯಾಂಗೊ ದೇವರ ನಡ್ಸನೆ ಬಿಟ್ರೆ ನಮ್ಕುಡೇನೂ ಇಲ್ಲ. ಯಾಕೊ ಮರ್ತ್ ಕಮತೀರು ಗುರ್ತದಗೆ ಉದ್ರಿಕೊಟ್ರು ಮರ್ಯಾದುಳೀತು, ಇಲ್ಲಾಂದ್ರೆ ನಮ್ಗತಿ ಬೇಕಾ? ನಂಗೊಟ್ಟು ೫ ಹೆಣ್ಮಕ್ಳು. ಗಂಡಾಯ್ತದ್ಯನೊ ಹೇಳಿ ನೋಡ್ತಿದ್ದಾಗಿತು ಗಂಡ್ ಹುಟ್ಲೇ ಇಲ್ಲ. ಯಾವ್ದಾರು ಆಕಳ್ಳಿ ಗಂಡೂ ಸಮ ಹೆಣ್ಣೂ ಸಮ ದೇವ್ರು ಕೊಟ್ಟುಂದು ಅಂತೇಳಿ ಸುಮ್ಕಾಕಂಡೊ. ಮಕ್ಕಳು ದೊಡ್ಡಾಯ್ತ್ಲೇಯ ಕರ್ಚೇನ್ ಕಮ್ಮಿ ಬತ್ತದ್ಯಾ? ನಮ್ಮನಿ ಶಣ್ ತಂಗಿ "ಅಪ ನೀ ಬ್ಯಾಜಾರ್ ಮಾಡ್ಕಂಬ್ಯಾಡ. ಹೆಣ್ಣಾರೇನಾಯ್ತು ಗಂಡ್ಗಿಂತ ಚಲೋ ಕೆಲ್ಸ ಮಾಡಿ ತೋರ್ಸುಕೆ ಆಯ್ತದೆ. ಈಗೆಲ್ಲಾ ಕಾಲ ಬದ್ಲಾಗದೆ" ಅಂತಿತ್ತು, "ಶಾಲಿ ಕಲಿತೆ" ಅಂತು, ಕಳಸ್ದೆ, ಕೋಲೇಜ್ಗೂ ಹೋಗಿ ಬೀಯೆ ಮುಗಿಸ್ಗಂಡು ಬೆಂಗಳೂರಗೆ ನೌಕರಿ ಮಾಡುಕೆ ಹೋಗುವರೀಗು ಕರ್ಚ್ ಮಾಡ್ದೆ. ಈಗ ಅದರ ಕಾಲ್ಮೇಲೆ ಅದು ನಿತ್ಗಂಡದೆ.
ಟೀವಿಲಿ ವಾರ್ತಿ ಓದತ್ತದ್ಯಲ್ರ, ’ಭಾರತಿ’ ಅಂತಿ, ಅದೇಯ ನಮ್ಮನಿ ಶಣ್ ತಂಗಿ. ಗುಂಡಿಬೈಲ್ ಪರಂಭಟ್ರ ನೆಂಟ್ರ ಕೈಮೇಲೆ ಬೆಂಗಳೂರಗೆ ನೌಕರಿ ಸಿಕ್ಕಂದು. "ಅಪಾ ನೀ ಬರ್ಲೇಬೇಕು" ಅಂದಿ ಹಟ ಹಿಡೀತು ಅದ್ಕೇ ಕಳದ ಬ್ಯಾಸ್ಗಿಲಿ ಬೆಂಗಳೂರ್ಗೆ ಹೋದಂದು. ಬೆಂಗಳೂರ್ಗೆ ಹೋದಂದೌದು, ಅದ್ಯೆಂತ ಕೇಳ್ತ್ರಿ? ನಮ್ಗೆಲ್ಲ ಲಾಯ್ಕಿಲ್ಲಪ. ಮಾರ್ ಮಾರ್ಗೂ ದುಡ್ಡಿದ್ರೆ ಮಾತ್ರ ಜೀವನ, ಯಾರೂ ನರಮನಸ್ರು ಅಂಬೋ ರೀತೀಲೇ ಕಾಂಬುದಿಲ್ಲ. ಎಲ್ನೋಡ್ರು ಬಿರಿಡಿಂಗೋ ಬಿರಡಿಂಗು-ಮೋವತ್ತು ನಲ್ವತ್ತು ಮಾಳಗೆ ಬಿರಡಿಂಗು, ಒಂದಕ್ಕಿಂತಾ ಇನ್ನೊಂದ್ ಬಲ. ಒಂದೊಂದ್ ರಸ್ತಿ ಕಾಂಬೇಕು! ಓಹೊಹೋ ಅದೆಷ್ಟಗಲ ಅಂದ್ಕಂಡೀರಿ? ಸುಮಾರ್ನೋರ್ಗೆ ದಾಟುಕೆ ಸಾಧ್ಯಾಗ, ಲೆಕ್ಕತಪ್ಪಿ ವಾಹನ ಬೇರೆ. ದಾಟುಕೂವ ಅದೆಂತದೋ ಸಿಂಗಾಲ್ ಕೊಡ್ತರೆ ಸಿಂಗಾಲ್ ಕೊಟ್ಟಾಗೇ ದಾಟ್ಕಂಬೇಕು. ಎಲ್ನೋಡ್ರು ಜನ ಜನ ಜನ. ತಂಗಿ ಕೆಲಸ ಮಾಡು ಆಫೀಸ್ಗೆ ಕರ್ಕಂಡೋಗಿತು: ಅದೆಂತದೋ ಪೆಟ್ಗಿ ಕಂಡಾಂಗಾಯ್ತದೆ, ಅದರೊಳಗೆ ಹೊಕ್ಕ ನಿತ್ಗಂಡ್ರಾಯ್ತು ಅದು ಮ್ಯಾಲೆ-ಕೆಳಗೆ ಇರು ಮೆತ್ತಿಗೆಲ್ಲಾ ಕರ್ಕಂಡೋಯ್ತದೆ. ತಡೀರಿ ಅದ್ಕೇನೋ ಹೆಸರದೆ....’ನಿಪ್ಟು’ ಅಂತರ್ಯಪ. ಪ್ಯಾಟೆಲ್ಲ ಏನ್ ಕಮ್ಮಿ ಬೆಳದದ್ಯ ಈಗ? ನಾವೆಲ್ಲ ಶಣ್ಕಿಪ್ಪಗೆ ಇಂತಾ ಪ್ಯಾಟೆಲ್ಲ ಇಲ್ಲಾಗಿತು. ಎಂತಾರು ಬೇಕಾರೆ ಕೊಳಗದ್ದಿ ತೇರನ ಬಯಲಗೆ ಪ್ಯಾಟಿ ಬತ್ತಿತಲ್ರ..ಅಲ್ಲೇ ನಾವು ಕರುದಿ ಮಾಡುದಾಗಿತು. ಕಾಯಸ್ಸಿದ್ರೆ ಎನಾರು ಕರುದಿ ಇಲ್ಲಾಂದ್ರೆ ಇಲ್ಲ. ಈಗ ತಕಣಿ ಹೊನ್ನಾವ್ರ...ಕುಮಟಿ...ಭಟ್ಕಳ ಏಲ್ನೋಡ್ರು ಪ್ಯಾಟ್ಯೇವ. ಆದರೂ ಬೆಂಗಳೂರ್ ಪ್ಯಾಟಿ ನಮುನಿ ಪ್ಯಾಟೆ ನಾ ನೋಡ್ಲೇ ಇಲ್ಲ. ಹೋದ್ಲಾಗಾಯ್ತು ಕಣ್ಣೋದ್ಕಡಿಗೆಲ್ಲಾ ಅಂಗಡಿಯೇವ. ಒಂದ ಗದ್ದಿ, ಹಿತ್ಲ, ತ್ವಾಟ ಅಂಬುದೇ ಕಾಂಬುಕಿಲ್ಲ.
ನಾವೊಂದಪಗೆ ಹತ್ತೊರ್ಸದ ಹಿಂದೆ ಮಂಗಳೂರ್ಗೆ ಹೋಗಾಗಿತು-ನೀರಡಕಿ ಯಾಪಾರ ಮಾಡವಂಗೆ. ಅಲ್ಲೊಬ್ಬ ಜಾಸ್ತಿ ಕರುದಿ ಮಾಡ್ತನೆ ಹೇಳಿ ಸುದ್ದಿ ಸಿಕ್ದ ಕೂಡ್ಲೆ ಹೋಗಾಗಿತು. ಮೂರ್ತಿ, ನಾನು, ತಿಮ್ಮ, ಯಂಕ್ಟ ನಾಕ ಜನ ಸೇರಿ ಹೋಗಿರು. ಯಾಪಾರಕೆ ತಡ ಆಗಿ ದುಡ್ಡು ಸಿಗುದು ಮಾರ್ನೇ ದಿನ ಅಂತಾಗಿತು, ಹೀಂಗಾಗಿ ಉಳ್ಕಂಬು ಪ್ರಸಂಗ ಬಂತು. ಅದ್ಯಾವ್ದೋ ಹೋಟ್ಲಗೆ ಉಳ್ಕಂಬನಿ ಹೇಳಿ ಮೂರ್ತಿ ಹೇಳ್ದ. ಕರ್ಚೆಲ್ಲಾ ಯಾಪಾರದ ಸಾವ್ಕಾರ್ರೇ ಕೊಡ್ತರ್ಯಂತೆ ಅಂದ. ಸವಲತ್ತು ಕೊಟ್ಮೇಲೆ ನಮ್ಗಿನ್ನೇನು ಹೇಳಿ ಉಳ್ಕಂಡಾಗಿತು. ಅಲ್ಲೆಂತದ್ರ...ತಿಂಬುಕೆ ಉಂಬುಕೆ ಅದೆಷ್ಟ್ ಸಾಮಾನು! ನಂಗ್ ಆ ಹೆಸರೆಲ್ಲ ಹೇಳೂಕ್ ಬರುದಿಲ್ಲ. ಅದ್ಯಾವ್ಯಾವ್ ನಮೂನಿ ತಿಂಡಿ ಇತ್ತು ಗೊತ್ತದ್ಯಾ? ಬೆಳಗು ಸೆರಿಗೆ ಎದ್ದೊತ್ಗೆ ತೊಳ್ಕಂಬುಕೆ ಬಚ್ಚಲಕೊಟ್ಗಿ ಅಲ್ಲೇ ಇರ್ತದೆ. ನಮ್ಮನಿಲಿ ದೇವರಮನೆಯೂ ಹೊಳ್ಯೂದಿಲ್ಲ ಗುತ್ತದ್ಯಾ ಅಷ್ಟು ಪಳ ಪಳ ಪಳ ಹೊಳಿತಿತ್ತು ನೆಲ, ಗ್ವಾಡೆ ಎಲ್ಲಾವ. ಬೆಳ್ಳಗದೆಂತದೋ ಮರಗಿ ನಮೂನಿಲಿ ಇತ್ತು. ಅದ್ರಗೆ ನೀರು ಸಲ್ಪ ಮಾತ್ರ ಇತ್ರ- ಕೈ ಹಾಕಿ ಹಾಂಗೇ ಮೊಕ ತೊಳ್ಕಂಡೆ. "ಬಾಕಿ ಎಲ್ಲಾ ಹೌದು ಅದ್ಯಂತಕೆ ಬೆಳಿ ಮರಿಗೀಲಿ ನೀರಿಲ್ಲ?" ಹೇಳಿ ಮೂರ್ತಿಕುಡೆ ಕೇಳ್ದೆ. ಮೂರ್ತಿ "ಯಾವ್ ಮರಗಿ ಸೆಂಬಣ್ಣ?" ಅಂದ. "ಅದೇವ ನೋಡು" ಹೇಳಿ ಕೈ ಮಾಡಿ ತೋರ್ಸದೆ. ಆ ಮೂರ್ತಿ ಕೇಳ್ದವ್ನೇ, ಅದೆಂತಾ ಆಯ್ತೋ ಗುತ್ತಿಲ್ಲ, ಆ ನಮ್ನಿ ನಗ್ಯಾಡ್ದ ಮಾರಾರೆ. ಅದೆಂಥದೋ ಕಮೋಡಂತೆ ಕಮೋಡು, ನಂಗೆ ಗುತ್ತಾಗ್ಲಿಲ್ಲ, ಮೂರ್ತಿ, ತಿಮ್ಮ, ಯಂಕ್ಟ ಅಲ್ಲಿಂದ ಬರೂವರಿಗೂ ನಗ್ಯಾಡುದ್ರು. ಹೋಕ್ಕಳಿ ಬುಡು ಅವರ ಮಾಡ್ದ ಪಾಪ ಅವರಿಗೆ ಅಂದ್ಕ ಸುಮ್ನಾಗ್ಬುಟ್ಟೆ.
ನಾವೆಲ್ಲಾ ಹಳೇ ಜನ. ಈ ಪ್ಯಾಟೆ ಜನ ತಯಾರ್ಮಾಡಂದು ಕೆಲವೆಲ್ಲಾ ನಮಗೆ ಗುತ್ತಾಗುದಿಲ್ಲ. ಮುಟ್ಟುಕೆ, ಸುಚ್ಚಾಕುಕೆ ಎಲ್ಲಾ ಹೆದರ್ಕಿ. ಮುಟ್ಟದ್ರೆ ಕೆಲು ಹಾಳಾಗೋಯ್ತದ್ಯನೋ ಅಂತಿ ಅನುಮಾನ. ಯಂಕ್ಟ ಅದೆಂತದೋ ಒತ್ತಿದೊಡ್ತಕ್ಕೆ ಬಸ್ ಅಂತಿ ನೀರು ಹರೀತು ಗುತ್ತದ್ಯಾ? ಅದೆಲ್ಲೆಲ್ಲಿ ಎಂತೆಂತಾ ಮರಗಿ ಇಡ್ತರೆ ಹೇಳೇ ಗುತ್ತಿಲ್ಲ. ನಮ್ ದಾಮು ಇದ್ನಲ್ರ ಕೊಳಿಅಡಕೆ ಯಾಪಾರದಂವ, ಅಂವಗೆ ಗಾಡಿ ಡಿಕ್ಕಿಯಾಗಿ ಪರ್ಟಿ ಹೊಡ್ದು ಹೊಟ್ಟಿ ಕಳ್ಳೆಲ್ಲಾ ಹೆರಗೆ ಕಾಣ್ತಿತ್ತು ಮಾರಾರೆ. ಕರ್ಚೆಷ್ಟಾರು ಆಕಳ್ಳಿ, ಮೊನ್ನಾಗಷ್ಟೇ ಮದ್ವ್ಯಾದ ಮನ್ಸ ಅಂತೇಳಿ, ತಾಪರತೋಪು ಮಂಗಳೂರ್ ಆಸ್ಪಟ್ರಿಗೆ ಕರ್ಕಂಡೋದ್ರು. ನಾವೆಲ್ಲಾ ಸೇರಿ ವರ್ಗಿಣಿ ಹಾಕ್ಕಂಬುದು ಹೇಳಿ ಮಾತಾಡ್ಕಂಡಾಗಿತು. ಡಾಕ್ಟ್ರು ಅವರ್ಯಲ್ರ...ಅವರು, "ಹೊಲಗಿ ಹಾಕ್ಬೇಕಾಯ್ತದೆ ಇಲ್ಲಾಂದ್ರೆ ಆಗೂದಿಲ್ಲ" ಅಂದ್ರಂತೆ. "ಹೊಲಿಗಿಲೆಲ್ಲಾ ನಾನಾ ನಮೂನಿ ಅದೆ, ಬರೀ ಹೊಲಿಗಿ ಬ್ಯಾರೆ, ಎಮರಾಡಿ ಬ್ಯಾರೆ, ಡಿಜಾಯ್ನು ಮಾಡಿದ್ದಕ್ಕೆ ಬ್ಯಾರೆ" ಅಂತವ ನಮ್ಮ ಶಣ್ ತಂಗಿ ಹೇಳುಂದು ನೆನಪ್ನಗಿತ್ತು. ಅಲ್ಲಿಗೋದ್ ನಮ್ ಜನ ಪೋನ್ ಮಾಡ್ದಾಗ ಹೇಳೇಬುಟ್ಟೆ"ನೋಡ್ರೋ, ಬ್ಯಾರೆ ಬ್ಯಾರೆ ನಮೂನಿ ಹೊಲಗಿ ಅದ್ಯಂತೆ, ನಮಗೆ ಸಾದಾ ಹೊಲಗಿ ಸಾಕು ಮತ್ತೆ, ಎಮರಾಡಿ ಗಿಮರಾಡಿ ಎಲ್ಲಾ ಬ್ಯಾಡ, ಕರ್ಚು ಸಿಕ್ಕಾಪಟ್ಟೆ ಮಿತಿ ಮೀರೋಯ್ತದೆ" ಅಂದೆ. ದಾಮು ಆರಾಮಾಗಿ, ಕಳದ ವಾರ ಮನೆಗ್ ಬಂದ. ಸಂತಿಗಿದ್ದೋರೆಲ್ಲಾ ನನ್ನೋಡಿ ಹಲ್ಕಿರೂಕೆ ಸುರುಮಾಡದ್ರು. ನನ್ನಿಂದ ಏನೋ ತಪ್ಪಾಗದೆ ಹೇಳಿ ನಂಗುತ್ತಾಗೋಯ್ತು. ಬಾಳ ಸಲ ಕೇಳ್ದ ಮ್ಯಾಲೆ ತಿಮ್ಮ ಹೇಳುಂದು ಹೀಂಗದೆ:" ಸೆಂಬಣ್ಣ, ನಾನಾ ನಮೂನಿ ಹೊಲಗಿ ಹಾಕೂಕೆ ಅದೆಂತಾ ವಸ್ತ್ರ ಅಂತ ತಿಳ್ಕಂಡಿದ್ಯ. ಮನಸ್ರಿಗೆ ಹೊಲಗಿ ಹಾಕುವಾಗ ಆ ನಮೂನಿ ಎಲ್ಲಾ ಬಳ್ಸೂದಿಲ್ಲ ಮಾರಾಯ" ಅಂದ.
ನಮ್ಗೆಲ್ಲಾ ಜಾಸ್ತಿ ಆಸ್ತಿಪಾಸ್ತಿ ಇಲ್ರ; ದುಡಿಬೇಕು ಉಂಬೇಕು ಅಷ್ಟೇಯ. ಯಾಕೋ ಈಗ ನಮ್ಮ ಶಣ್ ತಂಗಿ ಬೆಂಗಳೂರಗೆ ಇದ್ದ್ ಮ್ಯಾಲೇ ನಾವು ಪರಪಂಚ ಸಲ್ಪ ನೋಡಂದು. ನಾವೆಲ್ಲಾ ಹಳ್ಳೀ ಜನವಪ್ಪ, ನಾಂವ್ ಕಲ್ತಂದೆಷ್ಟು? ನಮ್ಗೆ ಪ್ಯಾಟೆ ಮಂದಿ ಇಂಗ್ಲೀಸು ಪಂಗ್ಲೀಸೆಲ್ಲಾ ಗುತ್ತಾಗುದಿಲ್ಲ. ಆದ್ರೂ ಒಂದಷ್ಟ್ ಇಂಗ್ಲೀಸ್ನ ಒಳ ಪೆಡ್ಲಲ್ನಾಗೇ ಕಲ್ತೆ. ನಮ್ಮನಿ ಶಣ್ ತಂಗಿ ಮುಂದೇ ಮಾತಾಡುಕೆ ಮರ್ಯಾದಿ ಗುತ್ತದ್ಯಾ? ಅದು ಹ್ಯಾಂಗ್ ಮಾತಾಡ್ತದೆ ಅಂತ್ರಿ; ಒಳ್ಳೇ ಹೊದಲು ಹೊಟ್ದಂಗೆ ಮಾತಾಡ್ತದೆ. ನಾಂವ್ ಕಲೀದಿಗಿದ್ರೂ ಬ್ಯಾಜಾರಿಲ್ಲ ನಮ್ಮಲ್ಲಿ ಒಬ್ರಾರೂ ಕಲ್ತವರು ಅವ್ಯರಲ ಹೇಳೇ ಖುಷಿಯಾಗದೆ. ನಮ್ಗೆಲ್ಲಾ ಇನ್ನೆಂತದ್ರ? ನಾಡ್ಗೆ ದೂರ ಕಾಡ್ಗೆ ಹತ್ರ. ಮಕ್ಳಮರಿ ಮದ್ವೆಮನಕಾಲ ಮುಗಿಸಿ ಕಡಿಗೆಂತಾ ಆದ್ರೂ ಬ್ಯಾಜಾರಿಲ್ಲ. ನಾವೆಲ್ಲಾ ಬಾಳಾ ಭಾವಿಕರು. ನಂಬ್ಕಿ ಜನ. ಸುಳ್ಳೇಳುದು, ಡಗ ಹಾಕುದು ಇವೆಲ್ಲಾ ಇಲ್ಲ. ಅದ್ಕೇ ಅಲ್ವನ್ರ...ಅಡಕೆ ಯಾಪಾರದಗೆ ಸಾವ್ರಾರ್ ರುಪಾಯಿ ಕಳ್ಕಂಡಂದು. ಸೆಂಬಣ್ಣ ಬರಿ ಬೋಳೆ ಅಂತ ಬಾಕ್ಯೊರ್ ತೆಳ್ಕಂಡರೆ. ಮ್ಯಾಲೊಬ್ಬ ಕುಂತನೆ...ಅಂವ ನೋಡ್ತನೆ ಬಿಡಿ.
ಆರಾಮಿಲ್ಲಾಗಿತು ಹೇಳಿ ದವಾಖಾನಿಗೆ ಹೋಗಿದೆ; ಡಾಕ್ಟ್ರು ಪರೀಕ್ಸಿ ಮಾಡಿ, ೧೦ ಬೆಳಿ ಗುಳಗೆ ೫ ಅರಷ್ನಿಬಣ್ಣದ ಗುಳಗೆ ಕೊಟ್ರು, ಚೀಟಿ ಬರ್ದು "ದಿನಾ ಮೂರ್ ಚಮಚ ತಕಳಿ, ವಾರ ಆದ್ಮೇಲೆ ಬನ್ನಿ" ಅಂದ್ರು. ನಮ್ಮಳ್ಳಿಯಿಂದ ಪ್ಯಾಟಿಗೆಂತ ದಿನಾ ಹೋಗುಕಾಯ್ತದ್ಯಾ? ಅದ್ಕೇ ಯೋಚ್ನಿ ಮಾಡ್ದೆ. ವಾರಕ್ಕೆ ಯೋಳ್ ದಿನ, ಯೋಳ್ಮೂರ್ಲ ೨೧ ಅಂತ ಲೆಕ್ಕ ಮಾಡ್ಕಂಡೆ. ಸೀದಾ ಬಜಾರ್ ರಸ್ತೆ ಶಾಂತ್ ಪರಬುರ ಪಾತ್ರೆ ಅಂಗ್ಡೀಗೆ ಹೋಗಿ ನಿಂತ್ಕಂಡೆ. "ಒಡ್ಯಾ ಹಣ ತುಸು ಕಮ್ಮಿ ಅಯ್ತದ್ಯಾಬಲ, ನಂಗೊಂದ್ ೨೧ ಚಮಚ ಕೊಡುರಾ? ಮುಂದನವಾರ ಮತ್ತೆ ಬರೂದದೆ-ಬಂದಾಗ ಕೊಟ್ಟೋಯ್ತೆ" ಅಂದೆ. ಅವ್ರೆಲ್ಲಾ ನಮ್ಗೆ ಪರಚಯದ ಜನ. ಆಯ್ತು ತಕಂಡೋಗಿ ಅಂದ್ಬುಟ್ರು, ತಂದೆ. ವಾರದ ನಂತ್ರ, ’ಹ್ಯಾಂಗೂ ಕಮ್ಮಿ ಆಗದೆ ಮತ್ತೆ ಡಾಕ್ಟ್ರ ತಾವ ಹೋಗ್ಲೋ ಬ್ಯಾಡವೋ’ ಹೇಳಿ ಯೋಚ್ನಿ ಮಾಡ್ದೆ. ಡಾಕ್ಟ್ರಿಗೆ ಸಿಟ್ಟಬಂದ್ರೆ ಮುಂದೆಲ್ಲಾರು ಬೈದ್ರೆ ಕಷ್ಟ ಹೇಳಿ ಮತ್ತೆ ಹೊಂಟೆ. "ಡಾಕ್ಟ್ರೇ, ನಂಗಕಮ್ಮಿ ಆಗದೆ. ನೀವು ಹೇಳ್ದಾಂಗೇಯ ಎಲ್ಲಾ ಮಾಡ್ದೆ, ಪದೇ ಪದೇ ಅಲ್ಲಿಂದ ಪ್ಯಾಟಿಗೆ ಬರೂಕಾಗೂದಿಲ್ಲ ಹೇಳಿ ದಿನಕ್ಕೆ ಮೂರರಂತೇ ವಾರಕ್ಕೆ ೨೧ ಚಮಚ ಆಯ್ತಿತ್ತಲ್ರ, ಅದಷ್ಟ್ನೂ ಶಾಂತ್ ಪರಬುರ ಅಂಗಡೀಲಿ ಕರುದಿ ಮಾಡ್ಕಂಡೇ ಹೋಗ್ಬುಟ್ಟಿದ್ದೆ" ಅಂದೆ. ಡಾಕ್ಟ್ರ ಮುಂದೆ ಸುಮಾರ್ ಜನ ಇದ್ರು. ಡಾಕ್ಟ್ರು ಎಂತಕೋ ನಗ್ಯಾಡದ್ರು. ವಾಪಸ್ ಬಂದವ್ನೆ ನಮ್ಮಟ್ಟಿ ಯಂಕ್ಟನ ಕರದು ಹೇಳ್ದೆ. ಅವನೂ ಜೋರ್ ಹಲ್ಕಿರದ. "ಸೆಂಬಣ್ಣಾ, ಡಾಕ್ಟ್ರು ಚೀಟೀಲಿ ನೀರೌಷದಿ ಬರ್ದರೆ. ಅದನ್ನ ಔಷದಿ ಅಂಗ್ಡೀಲಿ ಕರುದಿ ಮಾಡಿ, ದಿನಕ್ಕೆ ಮೂರ ಚಮಚ ಕುಡಿ ಅಂತ ಹೇಳಂದು" ಅಂದ. ಯಾರ್ನ ನಂಬುದು ಯಾರ್ನ ಬಿಡುದು ಮಾರಾರೆ?
ಕಳದವರ್ಸ ಈ ದಿನ್ದಗೆ ಬೆಂಗಳೂರಗೆ ಹದನೈದ್ ದಿನ ಇದ್ದೆ. ನಮ್ಮನಿ ಶಣ್ ತಂಗಿ ಅಲ್ಲಿ ಸುಮಾರ್ ಬದಿಗೆ ಕರ್ಕಂಡೋಗಿತು. ಮಂತ್ರಿ ಮಹಲಿಗೂ ಕರ್ಕೊಂಡೋಗಿತು ಬಲ್ರ. ಅದೆಂತದು ಅಂತ್ರಿ...ಸ್ವರ್ಗ ಸ್ವರ್ಗ ಗುತ್ತದ್ಯಾ? "ಅಪ್ಪ-ಅಮ್ಮನ್ನೊಂದು ಬಿಟ್ಟು ಬಾಕಿ ಎಲ್ಲಾ ಒಂದೇ ಕಡೀಗೆ ಸಿಕ್ತದೆ ಅಪಾ"ಅಂತು. ಮೆಟ್ಲೆಲ್ಲಾ ಗರಗರ ತಿರುಗೂದ್ ನೋಡ್ಬೇಕು. ಅದ್ಯಂತದ್ರ ಮಾರಾರೆ? ನನ್ ಕೈ ಹಿಡ್ಕಂಡೇ ಕರ್ಕಂಡೋಯ್ತಿತ್ತಾ....ಆದ್ರೂ ಕಾಲಿಡುಕೇ ಗುತ್ತಾಗ್ಲಿಲ್ಲ. ಇಡ್ಬೇಕು ಅಂದ್ಕೂಡ್ಲೇ ಸರಗುಟ್ಕಂಡು ಮುಂದೋಯ್ತಿತು-ಮೆಟ್ಲು. ಜಾರಿ ಬೀಳುದೊಂದ್ ಬಾಕಿ. ಹಿಂದಿದ್ದೋರ್ ಯಾರೋ ಹಿಡದ್ರು. ಆ ಬೆಳಕು, ಆ ಬಣ್ಣ, ಆ ವಸ್ತ್ರ, ಆ ಜನ, ಆ ವ್ಯವಸ್ಥೆ ಇಂದ್ರನ ಅಮರಾವತಿ ಇದ್ದಂಗಿತ್ತು ಮಾರಾರೆ. ಕರುದಿ ಕರ್ಚಿಗೆ ದುಡ್ಡೊಂದಿದ್ರೆ ನಮ್ಮಂತೊರ್ಗೆ ಯಂತ ತಕಬೇಕು ಹೇಳೆ ತೆಳೂದಿಲ್ಲ. ತಿರುಗು ಕುರ್ಚಿ, ತಿರುಗು ಪೆಟ್ಗೆ, ತಿರುಗು ಮೆಟ್ಲು, ಎಲ್ಲ ಒಂದ್ಸಲ ನೋಡ್ವಾಂಗದೆ. ಒಂದೇ ತೊಂದ್ರೆ ಅಂದ್ರೆ ಬೀಡಿ ಸೇದೂಕೆ ಕವಳ ಹಾಕುಕೆ ಎಲ್ಲೂ ಜಾಗ ಸಿಗುದಿಲ್ಲ. ಮತ್ತೊಂದ ಸಲಿ ಬಂದಾಗ ಹಿಸ್ಗನ ದೇವಸ್ಥಾನಕ್ಕೂ ಹೋಪನಿ ಅಂತು ನಮ್ ಶಣ್ ತಂಗಿ. ಹಿಸ್ಗಂಗೂ ದೇವಸ್ಥಾನ ಮಾಡರ್ಯಾ?
ಈ ಸಲ ಸಿಕ್ಕಾಪಟ್ಟೆ ಸೆಕೆಯಲ್ರ. ಅಪರೂಪಕ್ಕೆ ಮೊನ್ನಾಗೆ ಪ್ಯಾಟಿಗೋಗಿದೆ. ಶಕೆ ತಡೂಕಾಲಿಲ್ಲ. ಕೆಲ್ಸ ಮುಗ್ದಮ್ಯಾಲೆ ಬಿಕ್ಕು ಕಮ್ತೀರ ಐಶ್ರೀಮ್ ಅಂಗಡಿಗೆ ಹೋದೆ. "ಏನ್ ಕೊಡ್ಲಿ?" ಅಂದ್ರು. ಸ್ವತಾ ಅವರೇ ಕೆಲಸ ಮಾಡ್ತರೆ. ಸಪ್ಲಾಯ್ ಹಿಡದು ಗಲ್ಲಿಮೇಲೆ ಕೂರೂವರೆಗಿನ ಕೆಲಸವೂ ಅವ್ರದೇ. ಎಂತೆಂತಾ ಅದೆ ಕೇಳ್ದೆ. ಬರ್ಗುಂಟ್ಕಂಡು ಪಟಪಟಪಟ ೧೫-೨೦ ಹೆಸರು ಹೇಳದ್ರು. ಬೆಂಗಳೂರಿಗೆ ಹೋದಾಗ ನಮ್ ತಂಗಿ ಸಂತೀಗೆ ಒಂದ ಕಡೆಗೆ ಐಶ್ರೀಮ್ ತಿಂದಿದ್ದೆ. ’ಭಟ್ರ ಕಾಚಾ ಕೊಡಿ’ ಅಂತು, ಕೊಟ್ಟಿದ್ರು, ಬಾಳಾ ಚೊಲೊ ಇತ್ತು ಆಯ್ತಾ..ಅದ್ಕೇಯ ಇಲ್ಲೂ ಸಿಕ್ರೆ ಅದನೇ ತಿಂಬ ಹೇಳಿ ಭಿಕ್ಕು ಕಮ್ತೀರಿಗೆ ಹೇಳ್ದೆ"ಭಟ್ರ ಕಾಚಾ ಕೊಡಿ." ಭಿಕ್ಕು ಕಮ್ತೀರಿಗೆ ನೆಗ್ಯೋ ನೆಗಿ. "ಯಂತಕ್ರ ಮರಾರೆ? ಯಂತಾ ಆಯ್ತು?" ಅಂದೆ. "ಭಟ್ರ ಕಾಚಾ ಒಣಗೂಕೆ ಹಾಕರೆ. ಅರ್ಧಗಂಟೆ ಆಯ್ತದೆ" ಅಂದ್ಕಂಡು ಮತ್ತೆ ನಗೂಕೆ ಸುರುಮಾಡೀರು ಆಯ್ತಾ. ನಾ ಹೇಳಂದು ಯಂತದು ಹೇಳಿ ಅವರಿಗೆ ಅರ್ತಾ ಆಗಿತ್ತು ಅಂತಿಟ್ಕಣಿ. ಅದನ್ನೇ ಕೊಟ್ರು ತಿಂದ್ಕಂಡೂ ಬಂದೆ. ರಾತ್ರಿ ತಂಗಿಗೆ ಪೋನ್ ಮಾಡಿ ಕೇಳ್ದೆ. "ಶಣ್ ತಂಗಿ ನಾ ಬೇಂಗ್ಳೂರಿಗ್ ಬಂದಾಗ ಅದ್ಯಾವ್ದೋ ನಮೂನಿ ಐಶ್ರೀಮ್ ತಿಂದಾಗಿತಲೇ ಅದ್ಕೆ ಹೆಸರೆಂತದು?" "ಅಪಾ ಅದು ಬಟರ್ ಸ್ಕಾಚು" ಅಂತು. ಸದ್ಯಕ್ಕೆ ಇನ್ಯಾರ್ಗೂ ಗುತ್ತಾಗ್ಲಿಲ್ಲ ಅಂದ್ಕಂಡು ಸುಮ್ನಾಕಂಡೆ.
__________________
ಗ್ರಾಮ್ಯ ಪದ-ಅರ್ಥ ಕೋಷ್ಟಕ
____________________
ಮರ್ತ್ ಕಮ್ತಿ-ಮಾರುತಿ ಕಾಮತ್
ಕಲಿ,ಕಲ್ತ-ಓದು, ಓದಿದ
ಪತ್ಲ-ಸೀರೆ
ಮುಂಡು-ಅಡ್ಡಪಂಚೆ
ಅಂಟ್ರವಾಲು-ಅಂಡರ್ ವೇರ್
ಟುವಾಲು- ಟವೆಲ್
ಬಿರಡಿಂಗು- ಬಿಲ್ಡಿಂಗ್
ಮೆತ್ತು-ಮಹಡಿ
ನೀರಡಕಿ/ನೀರಡಕೆ-ನೀರಲ್ಲಿ ನೆನೆಸಿದ ಒಂದುವಿಧದ ಸಿಪ್ಪೆ ಕೊಳೆತ ವಾಸನೆಯುತ ಅಡಕೆ
ಕೊಳಿ ಅಡಕೆ-ಒಂದು ವಿದದ ಹಾಳು ಅಡಕೆ
ಸುಚ್ಚು-ಸ್ವಿಚ್
ಮರಗಿ-ಮರಿಗೆ
ಅಂತಿ-ಅಂತ
ಎಮರಾಡಿ-ಎಂಬ್ರಾಯ್ಡರಿ
ಸಂತಿಗೆ-ಜೊತೆಗೆ, ಸಂಗಡ
ಹೊದಲು ಹೊಟ್ದಂಗೆ-ಅರಳು ಹುರಿದ ಹಾಗೆ
ಗುಳಗೆ-ಗುಳಿಗೆ, ಮಾತ್ರೆ
ಶಾಂತ್ ಪರಬು-ಶಾಂತರಾಮ ಪ್ರಭು
ಕವಳ-ಎಲೆಯಡಕೆ
ಭಿಕ್ಕು ಕಮ್ತಿ- ಭಿಕ್ಕು ಕಾಮತ್
ಹಿಸ್ಗನ ದೇವಸ್ಥಾನ-ಇಸ್ಕಾನ್ [ಹಿಸ್ಗ ಅಂದರೆ ಉತ್ತರಕನ್ನಡ-ಮಲೆನಾಡು ಪ್ರಾಂತದಲ್ಲಿ ಬಸವನ ಹುಳು!]