ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 1, 2011

ಮತ್ತೆ ಹಾಡಿತು ಕೋಗಿಲೆ !


ಮತ್ತೆ ಹಾಡಿತು ಕೋಗಿಲೆ !

ನದಿಯಾ ತಮಿಳು ಮೂಲದ ಕೂಲಿ ಕಾರ್ಮಿಕಳು. ಕೃಷ್ಣ ಸುಂದರ ಷೋಡಶಿ. ಬಡತನದಲ್ಲೂ ಬೆಂಕಿಯಲ್ಲಿ ಅರಳಿದ ಹೂವಂತೇ ಅರಳಿದ ಹೂವು. ಕಪ್ಪು ಮುಖದಲ್ಲಿ ಮಲ್ಲಿಗೆ ದಂಡೆ ಅರಳಿದಂತೇ ಕಾಣುವ ತುಂಬುನಗು. ಹದವಾದ ನಿತಂಬ. ಸಪಾಟು ಹೊಟ್ಟೆಯ ತೀಕ್ಷ್ಣ ಕಣ್ಣಿನ ಚಟುವಟಿಕೆಯ ಹುಡುಗಿ. ಮೈಸೂರು ಮಲ್ಲಿಗೆಯ ಮಾಲೆಯನ್ನು ಮೊಳವೆರಡು ಮುಡಿದು ಗಾರೆ ಕೆಲಸಕ್ಕೆ ಬಂದರೆ ಕೆಲಸದ ಗಂಡುಹುಡುಗರಿಗೂ ಯಾವುದೋ ಇಲ್ಲದ ಚಾಲನೆ ಸಿಗುತ್ತಿತ್ತು; ಮೈಯ್ಯಲ್ಲಿ ಏನೋ ಸಂಚಲನವಾಗುತ್ತಿತ್ತು. ಎಷ್ಟೋ ದಿನ ಮನೆಕಟ್ಟಿಸುತ್ತಿದ್ದ ಯಜಮಾನಿ ನಂದಿನಿಗೇ ಸ್ವಗತದಲ್ಲಿ ಅನಿಸಿದ್ದಿದೆ ’ ಏನಪ್ಪಾ ಮಲ್ಲಿಗೆ ಮೊಳಕ್ಕೆ ೨೦ ರೂಪಾಯಿ ಆದರೂ ಕೂಲಿ ಮಾಡಿ ಹೊಟ್ಟೆಹೊರೆದುಕೊಳ್ಳುವ ಈ ಹುಡುಗಿ ಅದು ಹೇಗೆ ಪ್ರತಿನಿತ್ಯ ಎರಡೆರಡು ಮೊಳ ಮಲ್ಲಿಗೆ ಹೂ ಮುಡಿದುಬರ್ತಾಳೆ ? ’ ಉತ್ತರ ಸಿಕ್ಕಿರಲೇ ಇಲ್ಲ. ಹೋಗಲಿ ತಾವು ಮಧ್ಯಮವರ್ಗದವರಾಗಿಯೂ ಪ್ರತಿಯೊಂದನ್ನೂ ಲೆಕ್ಕಹಾಕಿ ಅಳೆದು ತೂಗಿ ಸಂಸಾರ ನಡೆಸುವಾಗ ಖರ್ಚಿಗೆ ಸಾಲದೇ ಸಾಲದ ಮೊರೆಹೋಗುವ ನಮಗೆ ಮೊಳ ಮಲ್ಲಿಗೆ ಅಪರೂಪಕ್ಕೆ ಕೊಳ್ಳುವುದಕ್ಕೂ ಆತಂಕ, ಅಂಥಾದ್ದರಲ್ಲಿ ಇವಳದ್ದೇನಪ್ಪಾ ಈ ವಿಚಿತ್ರ ಎಂದುಕೊಂಡೇ ಇದ್ದಳು. ಮನಸ್ಸಿದ್ದರೆ ಮಾರ್ಗ ಎನ್ನುವ ಉತ್ತರವೂ ಒಮ್ಮೆ ನೆನಪಿಗೆ ಬಂದಿತ್ತು.

ಆತನಿಗೆ ಗೊತ್ತು ತನಗೆ ಬೇಕಾದ ವಸ್ತು ಎಲ್ಲಿ ಹಿಡಿದರೆ ಸಿಗುತ್ತದೆ? ಯಾವಾಗ ಎಲ್ಲಿ ಹೇಗೆ ಹಿಡಿಯಬೇಕು ಎಂಬುದು. ಹೂವು ಮಾರುವ ದಾರಿಯಲ್ಲಿ ಸೈಕಲ್ ಓಡಿಸಿ ಬರುತ್ತಾ ಬರುತ್ತಾ ಕಂಡವಳೇ ನದಿಯಾ! " ಪರವಾಗಿಲ್ಲ, ನಲ್ಲ ಇರಕ್ಕು" ಎಂದುಕೊಂಡ ಆತನ ಮತೃಮೂಲವೂ ತಮಿಳೇ. ನದಿಯಾ ಕೂಲಿಮಾಡಿದರೇನಾಯ್ತು ಆಕೆಯಲ್ಲಿ ಆಕೆಯ ಹರೆಯದಲ್ಲಿ ಜಗನ್ಮೋಹಿನಿಯನ್ನೇ ಕಂಡ ಈ ಮುರುಗ ! ಹೇಗಾದರೂ ಮಾಡಿ ಆಕೆಯನ್ನು ಪಡೆಯುವ ಮನಸ್ಸು ಆತನಿಗೆ. ಆರಂಭದ ಮುಗುಳ್ನಗು ಬರುಬರುತ್ತಾ ೫ ನಿಮಿಷದ ಮಾತಿಗೆ ತಿರುಗಿ ಈಗೀಗ ಗಂಟೆಗಟ್ಟಲೆ ಮಾತೂ ಮಾತೂ ಮಾತು. ಆಕೆಗೆ ಜಾಸ್ತಿ ಏನೂ ತಿಳೀದು. ಹರೆಯದ ಮುಗ್ಧ ಸ್ನಿಗ್ಧ ಭಾವಗಳಿಗೆ ತೆರೆದುಕೊಂಡಿದ್ದಳಷ್ಟೇ. ಮುರುಗನನ್ನು ಕಂಡಾಗಲೆಲ್ಲಾ ’ಮುರಳೀಧರ’ನ ಮುರಳಿಗೆ ಮನಸೋತ ಗೋವಿನಂತಾಗುತ್ತಿದ್ದಳು! ಯಾಕೋ ಮುರುಗ ಬರುವ ಸಮಯ ಹತ್ತಿರ ಬಂದಾಗ ಹಾದಿಬದಿಯಲ್ಲೇ ನಿಂತಿರೋಳು. ಅಪ್ಪ-ಅಮ್ಮ ಬೇರೇ ಜಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಸಿಕ್ಕಿತ್ತು.

ಜೋಗುಪಾಳ್ಯದ ಮುರುಗೇಶ ನಿತ್ಯವೂ ಹೂ ಮಾರುತ್ತಾ ಬರುತ್ತಿದ್ದ. ಸೈಕಲ್ಲಿಗೆ ಹೂವಿನ ಬುಟ್ಟಿ ಏರಿಸಿ ಹೊರಟುಬಿಟ್ಟರೆ ಹೂ ಮಾರಿ ಮುಗಿದಮೇಲೇ ಮನೆ ಸೇರುವಾತ. ಆಗಾಗ ಆಗಾಗ ನಂದಿನಿಯ ನಿರ್ಮಾಣ ಹಂತದಲ್ಲಿರುವ ಮನೆಯ ಅಕ್ಕ-ಪಕ್ಕ ನಿಂತು ಹುಡುಗರ ಕೂಡ ಮಾತನಾಡಿಕೊಂಡು ಹೋಗುತ್ತಿರುವಾಗಲೇ ಅವನಿಗೆ ನದಿಯಾಳ ಸಲುಗೆ ಸಿಗಲು ಆರಂಭವಾಯ್ತು. ಆತನೋ ಈಕೆಗಿಂತ ಸ್ಥಿತಿವಂತ. ಹೊಟ್ಟೆಬಟ್ಟೆಗೆ ಮನೆಯ ಎಲ್ಲರೂ ಸೇರಿ ಅದೂ ಇದೂ ಯಾಪಾರ ಸಾಪಾರ ಮಾಡಿ ದುಡೀತಿದ್ರು-ಸಾಕಾಗ್ತಿತ್ತು. ಅಪ್ಪ ಹಳೇ ಲಾರಿ ಬಾಡಿಗೆ ಓಡಿಸಿ ಒಂದಷ್ಟು ಹಣ ಕೂಡಿಟ್ಟು ಸಣ್ಣ ಸೈಟುಕೊಂಡು ಗೂಡೊಂದ ಕಟ್ಟಿದ್ದ. ಇರುವ ಇಬ್ರು ಹೆಣ್ಮಕ್ಕಳ ಮದುವೆ ಅದಾಗಲೇ ಆಗಿಹೋಗಿತ್ತು. ಮುರುಗನಿಗೂ ಇನ್ನೇನು ಮದುವೆ ವಯಸ್ಸೇ ಆತನ ಅಪ್ಪನ ಲೆಕ್ಕದಲ್ಲಿ. ೨೧ ವರ್ಷ ಕಳೆದು ೨೨ ಮೆಟ್ಟಿತ್ತು. ಎಲ್ಲಾದರೂ ಸಲ್ಪ ಅನುಕೂಲ ಇರುವ ತಮಿಳು ಮನೆತನದಿಂದ ಹೆಣ್ಣೊಂದನ್ನ ಸೊಸೆಯಾಗಿ ತರುವ ಬಯಕೆ ಅವರಿಗಿತ್ತು.

ಗಾರೆ ಕೆಲಸಕ್ಕೆ ಸಹಾಯಕಳಾಗಿರುವ ಬಡ ನದಿಯಾಳನ್ನು ಮದುವೆಯಾಗುತ್ತೇನೆ ಎಂದರೆ ಮನೆಯಲ್ಲಿ ಹುರಿದುಮುಕ್ಕಿಬಿಡುತ್ತಾರೆ. ಅದೂ ಅಲ್ಲದೇ ಆಕೆಗೆ ಯಾವ ಆಸ್ತಿಯೂ ಇಲ್ಲ. ಇರುವ ಹರೆಯದ ದೇಹವೇ ಆಸ್ತಿ. ಮುರುಗನಿಗೂ ಆಸ್ತಿಬೇಕೆಂಬ ಆಸೆ ಇತ್ತು ಆದರೆ ಹರೆಯದ ಕರೆಯ ಜೋರಾಗಿತ್ತು, ಮೈಯಲಿ ಆಕೆಯನ್ನು ಕಂಡಾಗಲೆಲ್ಲ ಕರೆಂಟು ಹರಿಯುತ್ತಿತ್ತು. ’ಆಸ್ತಿ ಪಾಸ್ತಿ ಆಮೇಲೆ ನೋಡುವಾ ಮೊದಲೊಮ್ಮೆ ಸಿಕ್ಕರೆ’ ಎನ್ನುತ್ತಿತ್ತು ಮನಸ್ಸು. ಬಿಗಿದಪ್ಪಿ ಏನೇನೋ ಮಾಡುವ ಬಯಕೆಯೆಲ್ಲಾ ಚಿಗುರಿ ಬಹಳಕಾಲವಾಗಿತ್ತು. ಬುಟ್ಟಿಯೊಳಗಿನ ಹಾವು ಆಗಾಗ ಆಗಾಗ ಬುಸುಗುಡುತ್ತಲೇ ಇತ್ತು. ತಾಳಲಾಗದ ಕಿಚ್ಚಿಗೆ ಏನೆಲ್ಲಾ ಮಾಡಿದ್ದಿದೆ ಎಂದರೆ ಛೆ ಹೇಳುವುದು ಬೇಡಬಿಡಿ. ಅದು ಕೇಳುವುದಕ್ಕೆ ಲಾಯಕ್ಕಿಲ್ಲ. ತಡ್ಕೋಬೇಕು ತಡ್ಕೋಬೇಕು ಅಂದ್ರೆ ಎಲ್ಲೀವರೆಗೆ ತಡ್ಕೋಬೇಕು ? ಅದ್ಕೂ ಇತಿಮಿತಿ ಇಲ್ವೇ? ನಿರ್ಧಾರಕ್ಕೆ ಬಂದುಬಿಟ್ಟಿದ್ದ: ಮನೆಯವರು ಏನಾದ್ರೂ ಮಾಡ್ಕೊಳ್ಲಿ, ತನಗಂತೂ ಒಂದಷ್ಟ್ ದಿನ ಆಕೆ ಬೇಕು !

ನದಿಯಾಗೂ ಶರೀರ ಅದ್ಯಾಕೋ ಮುರುಗನನ್ನು ಕಂದಾಗೆಲ್ಲ ಕಾದ ಕಬ್ಬಿಣದಂತಾಗುತ್ತಿತ್ತು. ಕರಗಿ ನೀರಾಗಿ ಹರಿದ ಮಂಜು ಬಿಂದಿವಿನಿಂದ ತೊರೆ, ಹಳ್ಳ, ನದಿ ಎಲ್ಲಾ ಅಗಿ ಸಾಗರ ಸೇರುವಂತೇ ಒಳಗೊಳಗೆ ಒತ್ತರಿಸಿ ಓಡಾಡುವ ಭಾವನೆಗಳನ್ನು ಮುರುಗನ ಎದೆಗೊರಗಿ ಹಂಚಿಕೊಳ್ಳುವುದರಲ್ಲಿ ಇಷ್ಟವಿತ್ತು. ಆಕೆ ಟೆಂಟಿನಲ್ಲಿ ಸಿನಿಮಾಗಳನ್ನು ನೋಡುತ್ತಿದ್ದಳಲ್ಲಾ ಅಲ್ಲೆಲ್ಲಾ ನಾಯಕ ನಾಯಕಿ ರೋಮಾನ್ಸು ನೋಡಿದಾಗ ನಾಯಕನಲ್ಲಿ ಮುರುಗನನ್ನೇ ಕಾಣುತ್ತಿದ್ದಳು. ಹೇಳುವುದಕ್ಕೇ ಮರೆತೆ- ಬನ್ನೇರು ಘಟ್ಟ ರಸ್ತೆಯ ಬಿಳೇಕಳ್ಳಿ ಪಕ್ಕದ ಟೆಂಟಿನಲ್ಲಿ ಇತ್ತೀಚೆಗೆ ಮುರುಗ ಮತ್ತು ನದಿಯಾ ಸೇರಿ ಒಂದು ಸಿನಿಮಾ ನೋಡಿದ್ದರು. ಸಿನಿಮಾ ಅರಂಭದಿಂದ ಮುಗ್ಯೋವರೆಗೂ ಕಥೆಗಿಂತಾ ಆತ ಗಟ್ಟಿಯಾಗಿ ಆಗಾಗ ಅಪ್ಪಿಕೊಂಡು ಮೇಲೆಲ್ಲಾ ಏನೇನೋ ಮಾಡುತ್ತಿದ್ದುದು ನೆನಪಾದಗ ಜೀವನ ಸುಂದರವಾಗಿ ಕಾಣುತ್ತಿತ್ತು. ಪ್ರತೀದಿನವೂ ಸಿನಿಮಾ ನೋಡುವ ಮನಸ್ಸಾಗುತ್ತಿತ್ತು. ಯಾವಾಗಲೂ ಸಿನಿಮಾ ಟೆಂಟಿನಲ್ಲಿ ಕೂತೇ ಇರೋಣ ಎನ್ನಿಸುತ್ತಲೂ ಇತ್ತು. ಕರೆಂಟು ಹೋಗಿ ಕತ್ತಲಲ್ಲಿ ಮುರುಗ ಜೋರಾಗಿ ಮುತ್ತುಕೊಡುವಾಗ ಎಲ್ಲಿಂದಲೋ ಟಾರ್ಚ್ ಬೆಳಕೊಂದು ಹಾದುಹೋಗಿ ತಮ್ಮನ್ನು ಕಂಡ ಪಡ್ಡೆಗಳು ಸೀಟಿ ಹೊಡೆದು ಅದೇನೋ ಕೂಗಿದ್ದು ಈಕೆಗೆ ಈಗಲೂ ನಗುಬರಿಸುತ್ತಿತ್ತು.

ಅಂತೂ ಕಟ್ಟಡಕ್ಕೆ ಮೊದಲ ಹಂತದ ಮುಚ್ಚಿಗೆ ಮುಗಿದು ಮಹಡಿ ಕಟ್ಟುತ್ತಿರುವಾಗ ಕೆಲವು ಕೊಠಡಿಗಳನ್ನು ಕಟ್ಟುತ್ತಿದ್ದರು. ಬಹಳದಿನದಿಂದ ಬುಟ್ಟಿಯಿಂದ ಹೊರಬರಲೆತ್ನಿಸುತ್ತಿದ್ದ ಮುರುಗನ ಹಾವಿಗೆ ಅಂದುಬಿಡುಗಡೆಯ ಅವಕಾಶ ಒದಗಿಬಂದಿತ್ತು! ಮುರುಗನ ಆಸೆಗೆ ನದಿಯಾ ಬೇಡ ಎನ್ನಲಿಲ್ಲ. ನಿತ್ಯವೂ ಮಲ್ಲಿಗೆ ಮೊಳವೆರಡನ್ನು ಕೊಟ್ಟು ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮುರುಗನಿಗೆ ಹಾಗೆಲ್ಲಾ ಯಾವುದನ್ನೂ ಬೇಡಾ ಎನ್ನುವ ದಾರ್ಷ್ಟ್ಯ ಅವಳಲ್ಲಿರಲಿಲ್ಲ. ಮದುವೆಯ ಬಗ್ಗೆ ಆಕೆಗೆ ತಿಳೀದು ಬಿಡಿ....ಅದನ್ನೆಲ್ಲಾ ಅಕೆ ಸದ್ಯ ಯೋಚಿಸಲೇ ಇಲ್ಲ. ಅಂದು ಕೃಷ್ಣ ಪಕ್ಷದ ಕ್ಷೀಣಚಂದ್ರನಿದ್ದ. ತಿಂಗಳು ಹಾಲು ಚೆಲ್ಲಿದಂತಿರಲಿಲ್ಲ, ಬದಲಾಗಿ ಅಲ್ಲಲ್ಲಿ ಅಲ್ಲಲ್ಲಿ ಮೋಡಗಳ ನೆರಳೂ ಸೇರಿದಂತೇ ಬಿಳೀ ಕಾಗದದಮೇಲೆ ವಾಟರ್ ಮಾರ್ಕ್ ಬಣ್ಣ ಬರೆದಂತಿತ್ತು. ನದಿಯಾ ಕೆಲಸಮುಗಿದು ಮನೆಗೆ ಹೊರಟವಳು ದಾರಿಯಲ್ಲಿ ಮುರುಗನನ್ನು ಭೇಟಿಮಾಡಿದಳು. ಮನೆಗಳಲ್ಲಿ ಏನು ಹೇಳಿದರೋ ಅರಿವಿಲ್ಲ. ಅಂತೂ ಇಬ್ಬರ ಮನೆಗಳಲ್ಲೂ ಹುಡುಕಾಟವೂ ನಡೆದಿರಬಹುದು. ಆದರೆ ಆ ರಾತ್ರಿಮಾತ್ರ ಹಾವು ಹುತ್ತಸೇರಿತ್ತು! ಕೀಲಿ ತಿರುಗಿಸಿದ ಭೂಪನ ಚಿಗುರುಮೀಸೆಯನ್ನು ಸ್ವತಃ ತಾನೇ ಕೈಯಿಂದ ನೀವುತ್ತ ಖುಷಿಪಟ್ಟಳು ನದಿಯಾ. ಎಂದೂ ಕಂಡಿರದ ಅದೇನೋ ಕಂಡಂತಾಗಿತ್ತು. ಬೆಳಗಿನ ಜಾವದವರೆಗೂ ’ಅರೆಮನೆ’ಯ ಮಹಡಿಯಲ್ಲಿ ರೂಪುಗೊಳ್ಳುತ್ತಿದ್ದ ಕೊಠಡಿದ ಗೋಡೆಯ ಪಕ್ಕದಲ್ಲಿ ದೇಹವೆರಡೂ ಒಂದಾಗಿತ್ತು. ಬೆಳಗಿನ ಐದುಗಂಟೆಗೆ ಜಾಗ್ ಮಾಡುವವರ ಮಾತುಕೇಳಿ ಎಚ್ಚೆತ್ತು ಇಬ್ಬರೂ ಅಗಲಲಾರದೇ ಅಗಲಿದರು!

ನದಿಯಾಳ ಅಪ್ಪ-ಅಮ್ಮ ಹುಡುಕಿ ಸೋತರು. ಬಡವರಾದ ತಮಗೆ ಮಗಳೂ ಕಳೆದು ಈ ರೀತಿ ತೊಂದರೆಯಾಗಬೇಕೇ ಎಂದು ಚಿಂತಿಸುತ್ತಿರುವ ವೇಳೆಗೆ ಬೆಳ್ಳಂಬೆಳಿಗ್ಗೆ ನದಿಯಾ ಬಂದುಬಿಟ್ಟಿದ್ದಳು. ಗದರಿಕೊಂಡ ಅಪ್ಪ-ಅಮ್ಮನಿಗೆ ಯಾರೋ ತೊಂದರೆಕೊಟ್ಟು ಅಟ್ಟಿಸಿಕೊಂಡು ಬಂದಾಗ ಅಲ್ಲೆಲ್ಲೋ ಅಡಗಿದ್ದು ರಾತ್ರಿ ಕಳೆದು ಬಂದೆ ಎಂದಳು. ಹುಡುಕಿದ ಅಪ್ಪ-ಅಮ್ಮನಿಗೆ ಗೆಳೆಯನೊಬ್ಬನಿಗೆ ಏನೋ ಅಪಘಾತಕ್ಕೆ ಈಡಾಗಿದ್ದು ರಾತ್ರಿಯೆಲ್ಲಾ ಆಸ್ಪತ್ರೆಯಲ್ಲಿ ಕಳೆದುದಾಗಿ ವರದಿ ಒಪ್ಪಿಸಿದ ಮುರುಗ! ಅಲ್ಲಿಗೆ ಆ ರಾತ್ರಿಯ ಕಥೆ ಹಾಗೆ ಕಳೆದು ಹೋಯ್ತು, ಮುಗಿದೂ ಹೋಯ್ತು.

ವಾರವೆರಡು ಕಳೆದಿರಲಿಲ್ಲ, ನದಿಯಾಗೆ ವಾಂತಿ ! "ಏನು ತಿಂದೆ ಯಾಕೆ ವಾಂತಿ ? " ಎಂದರು ಅಪ್ಪ-ಅಮ್ಮ. ತನಗೇನೂ ತಿಳಿದಿಲ್ಲವೆಂದೊ ಹೊರಗಡೆ ತಾನೇನೂ ತಿಂದಿಲ್ಲವೆಂದೂ ತಿಳಿಸಿದಳು. ವೈದ್ಯರಲ್ಲಿಗೆ ಹೋಗಲು ಜಾಸ್ತಿ ಕಾಸಿಲ್ಲ. ಸರಕಾರೀ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹೋದಾಗ ಅಲ್ಲಿನ ವೈದ್ಯರು ಕೇಳಿದ್ದು " ನೋಡಮ್ಮಾ ನಿನಗೆ ಹುಡುಗ ಯಾರದರೂ ಗೊತ್ತಾ ? " , ಆಕೆಗೆ ಹೌದು ಅನ್ನಬೇಕೋ ಇಲ್ಲಾ ಅನ್ನಬೇಕೋ ತಿಳೀಲಿಲ್ಲ. ವೈದ್ಯರೇ ಮುಂದುವರಿಸಿದರು " ನೀನೀಗ ಬಸುರಿಯಾಗಿದೀಯ ಕಣಮ್ಮ...ಮದುವೆ ಆಗಿಲ್ವಾ ? " ಕುಸಿದುಹೋದ ಅವಳೆಂದಳು " ಆಗಿದೆ" . ವೈದ್ಯರು ವಾಂತಿ ತಹಬದಿಗೆ ಬರಲು ಸ್ವಲ್ಪ ಮಾತ್ರೆ ಪಡೆದುಹೋಗುವಂತೇ ಚೀಟಿ ನೀಡಿದರು. ಕಟ್ಟುತ್ತಿರುವ ಜಾಗದಲ್ಲೇ ಒಂದು ಸಣ್ಣ ಗೂಡು ಅವಳ ಮನೆ. ಮನಗೆ ಬಂದ ಆಕೆಗೆ ತಲೆಸುತ್ತು ಬರುತ್ತಿತ್ತು, ನಿದ್ದೆ ಬರುತ್ತಿತ್ತು. ಇನ್ನೂ ಏನೇನೋ ! " ವೈದ್ಯರು ಕಮ್ಮಿ ಆಗ್ತದೆ ಎಂದು ಹೇಳಿದ್ದಾರೆ " ಎಂದು ಸುಮ್ಮನಾಗಿಸಿಬಿಟ್ಟಿದ್ದಳು ಅಪ್ಪ-ಅಮ್ಮನ್ನ. ಮುರುಗನಿಗೆ ನಿಧಾನಕ್ಕೆ ವಿಷಯ ತಿಳಿಸಿದಳು. ಮುರುಗ ನಕ್ಕು ಅದೇನಾಗಲ್ಲ ಬಿಡು ಎಂದ, ತಾನು ನೋಡ್ಕೋತೀನಿ ಎಂದ. ಆ ನಂತರದ ದಿನಗಳಲ್ಲಿ ಮುರುಗ ಬಹಳ ಹೊತ್ತು ನಿಲ್ಲುತ್ತಿರಲಿಲ್ಲ. ಬರುತ್ತಿದ್ದ, ನಗುತ್ತಿದ್ದ, ಹೂ ನೀಡುತ್ತಿದ್ದ, ಸ್ವಲ್ಪವೇ ಸ್ವಲ್ಪ ಹೊತ್ತು ಹೊರಟುಹೋಗಿಬಿಡುತ್ತಿದ್ದ!

ಒತ್ತಾಯಕ್ಕೆ ಬಸಿರಾದರೆ ಹಡೆಯೋದು ದಾರೀಲಿ ಎಂಬೊಂದು ಗಾದೆ ಇದ್ಯಲ್ಲ ಹಾಗೇ ಮೂರು ತಿಂಗಳವರೆಗೆ ಹೇಗೋ ಮ್ಯಾನೇಜ್ ಮಾಡಿದಳು. ಆನಂತರ ಹೊಟ್ಟೆ ಉಬ್ಬರಿಸಿ ಕಾಣುತ್ತಿತ್ತು. ಕೆಲಸಮಾಡಲು ಆಸಕ್ತಿ ಇರಲಿಲ್ಲ. ಶರೀರ ನಿತ್ರಾಣವಾದಂತಿತ್ತು. ಕುಂತಲ್ಲೇ ನಿದ್ದೆ ಹೋಗೋಳು. ಅಪ್ಪ-ಅಮ್ಮಂಗೆ ಹೊಟ್ಟೆನೋಡಿ ಡೌಟು ಬಂತು. ಕೇಳೇ ಕೇಳಿದರು. ಅಪ್ಪ ಒಂದು ಇಟ್ಟೂ ಬಿಟ್ಟರು. ಒಡಲಾಳದ ಉರಿ ಬೇರೆ ಅಪ್ಪನ ಹೊಡೆತ ಬೇರೆ ನದಿಯಾ ಮರುಗಿದಳು. ಆಕೆಯ ಅಮ್ಮ ತಾನು ಸತ್ತುಹೋಗಬಾರದಿತ್ತೇ ಎಂದಳು. ಅಪ್ಪ-ಅಮ್ಮನ ಮನಸ್ಸನ್ನು ಇಷ್ಟೆಲ್ಲಾ ನೋಯಿಸಿ ತಾನು ಇರಬೇಕೆ ಎಂಬ ಅನಿಸಿಕೆಗೂ ಅವಕಾಶ ಕೂಡಿಬಂತು. " ಯಾರು ಬೊಗಳು ? " ಅಪ್ಪ ಗದರಿದರು. ಕಡೆಗಣ್ಣಿನಲ್ಲಿ ಅದು ಹೇಗೋ ಎಲ್ಲೆಲ್ಲೋ ನೋಡುತ್ತಾ " ಮುರುಗ " ಸಣ್ಣಗೆ ಉಲಿದಳು.

ಮಾರನೇ ಬೆಳಿಗ್ಗೆ ನಂದಿನಿಯ ನಿರ್ಮಾಣವಾಗುತ್ತಿರುವ ಆ ಮನೆಮುಂದೆ ನದಿಯಾಳ ಅಪ್ಪ ಅಡಗಿನಿಂತಿದ್ದ. ಯಾರು ಎಲ್ಲಿ ಏನು ಸೂಟುಕೊಟ್ಟರೋ ಗೊತ್ತಾಗಲಿಲ್ಲ, ಆ ದಿನ ಮುರುಗ ಬರಲೇ ಇಲ್ಲ. ಅದಕ್ಕೂ ಮಾರನೇ ದಿನವೂ ಬರಲಿಲ್ಲ. ಆ ನಂತರ ಆತ ಬರುವುದನ್ನೇ ನಿಲ್ಲಿಸಿಬಿಟ್ಟ. ಹೂ ಮಾರುವುದನ್ನು ಬೇರೇ ಪ್ರದೇಶಕ್ಕೆ ಸೀಮಿತಗೊಳಿಸಿಬಿಟ್ಟ. ನದಿಯಾ ನಲುಗಿದಳು. ಹೇಳಲೂ ಆಗದ ಕೇಳಲೂ ಆಗದ ಸ್ಥಿತಿ ಅವಳದು. ಮುರುಗನ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಬೇಡಿ ಕಾಡಿ ಪಡೆದ ಭಾವಚಿತ್ರವೊಂದೇ ಅವಳ ತಾಬಾ ಇದ್ದಿದ್ದು. ಭಾವಚಿತ್ರವನ್ನು ಅಪ್ಪನಿಗೆ ಕೊಟ್ಟಳು. ಮೇಸ್ತ್ರಿ ಮತ್ತು ಇನ್ನೊಂದಿಬ್ಬರಿಗೆ ಅಪ್ಪ ವಿಷಯ ಹೇಳಲೇಬೇಕಾಯ್ತು. ಅವರನ್ನೊಡಗೂಡಿ ಅಪ್ಪ ಪೋಲೀಸರಿಗೆ ವಿಷಯ ತಿಳಿಸಿದ. ಕಾಸಿಲ್ಲದ ಕೈಲಿ ಬಂದ ಅವರನ್ನು " ಆಯ್ತಪ್ಪಾ ನೋಡ್ತೀವಿ ಕಂಪ್ಲೇಂಟು ಕೊಟ್ಟು ಹೋಗಿ " ಎಂದರು. ಬಡತನ ಇಲ್ಲೂ ಹಾಗೇ ತನ್ನತನ ಕಾಪಾಡಿಕೊಂಡಿತ್ತು! ಫಿರ್ಯಾದಿ ಕೊಟ್ಟಿದ್ದು ಕೆಲಸಕ್ಕೆ ಬರಲಿಲ್ಲ. ಯಾರೋ ಹೇಳಿದರು ನೀವು ಮಾಧ್ಯಮದವರಿಗೆ ಹೇಳಿ ವಿನಂತಿಸಿಕೊಳ್ಳಿ.

ಮಾಧ್ಯಮದ ಮಂದಿ ನದಿಯಾಳನ್ನೂ ತಂದೆಯನ್ನೂ ಮಾತನಾಡಿಸಿ ಅದನ್ನು ಬಿತ್ತರಿಸಿದರು. ಮುರುಗನ ಛಾಯಾಚಿತ್ರವನ್ನು ಬಹಿರಂಗಗೊಳಿಸಿದರು. ಮುರುಗನ ಅಮ್ಮ ಲೋಕಲ್ ಚಾನೆಲ್‍ನಲ್ಲಿ ಇದನ್ನು ಕಂಡುಬಿಟ್ಟರು. ಆ ರಾತ್ರಿ ಮುರುಗ ಮನೆಗೆ ಬರುತ್ತಿದ್ದಂತೇ ಆತನಗೆ ಮಂಗಳಾರತಿ ಬೆಳಗಿದರು. " ಪೋಲೀಸರು ಹುಡುಕಿದರೆ ಏನು ಮಾಡ್ತೀಯಾ ? " ಕೇಳಿದರು. ಕೂಲಿಯವಳನ್ನು ಮುಟ್ಟಿದೆಯಾ ಮನೆಹಾಳನೆ ಎಂದು ಜರಿದರು. ಅಪ್ಪ-ಅಮ್ಮ ಪ್ಲಾನುಮಾಡಿ ಚೆನ್ನೈ ಹತ್ತಿರದ ಹಳ್ಳಿಯ ನೆಂಟರ ಮನೆಗೆ ಕಳಿಸಿಬಿಟ್ಟರು. ಅಲ್ಲಿಂದಲೇ ವ್ಯವಹಾರ ಕುದುರಿಸಿ ಮದುವೆ ಗೊತ್ತುಮಾಡಿ ಮುರುಗನ ಮದುವೆ ನಡೆದುಹೋಯಿತು. ಕಾಸಿರುವ ಕುಟುಂಬದ ಕನ್ಯೆ ಮುರುಗನ ಹೆಂಡತಿಯಾಗಿ ಮನೆಸೇರಿದಳು. ಮುರುಗ ಗಡ್ಡ ಮೀಸೆ ಬೆಳೆಸಿಕೊಂಡು ಚಹರೆ ಬದಲಿಸಿಕೊಂಡು ಬದುಕುತ್ತಿದ್ದ.

ಒಂದಷ್ಟು ದಿನ ಮಾಧ್ಯಮದವರು, ಪೋಲೀಸರು ತಡಕಾಡಿದರು. ಗಟ್ಟಿಇಲ್ಲದ ಕೇಸು ಎಂದು ಬಿಟ್ಟುಕೊಟ್ಟರು. ಸಾರ್ವಜನಿಕರಿಗೆ ನಿತ್ಯವೂ ಇಂಥದೇ ಯಾವುದೋ ಒಂದು ಕಥೆ ನಡೆದೇ ಇರುವುದರಿಂದ ಜಾಸ್ತಿ ತಲೆತೂರಿಸುವ ಮನಸ್ಸಾಗಲಿಲ್ಲ. ಮದುವೆಗೆ ಮೊದಲೇ ಬಸಿರಾದ ಹುಡುಗಿಯ ಅಪ್ಪ-ಅಮ್ಮನಿಗೆ ಅವರ ಜಾತಿಯವರು ಕಟ್ಟಿಕೊಟ್ಟರು ;ಬಹಿಷ್ಕಾರ ಹಾಕಿದರು. ಅಪ್ಪ-ಅಮ್ಮನ ಅಳಲು ಕಂಡು ತಾಳಲಾರದ ಗರ್ಭಿಣಿ ನದಿಯಾ ಮುರುಗನ ಪ್ರೀತಿಯನ್ನೂ ಮರೆಯಲಾಗದೇ ಮನೆಯನ್ನೇ ತೊರೆದಳು. ರೈಲುನಿಲ್ದಾಣ ಅಲ್ಲಿ-ಇಲ್ಲಿ ಅಂತ ಅಲೆದಳು. ಅದೆಲ್ಲೋ ಹೇಗೋ ಹಡೆದಳು. ಹೆತ್ತ ಕೂಸನ್ನು ಬಗಲಿನ ಜೋಳಿಗೆಗೆ ತುಂಬಿಸಿಕೊಂಡು ಬೇಡಿದಳು. ಜನವೆಲ್ಲ ಅಕೆಯನ್ನು ಅರೆಹುಚ್ಚಿ ಎಂದು ತಿಳಿದರು. ರಾತ್ರಿ ಹೊತ್ತು ಕಾಮುಕರ ಕಾಟ ತಪ್ಪಿಸಿಕೊಳ್ಳುವುದು ಹರಸಾಹಸವಾಗಿತ್ತು. ಆದರೂ ತನ್ನ ಶರೀರವನ್ನು ಇನ್ಯಾರಿಗೂ ಕೊಡದೇ ರಕ್ಷಿಸಿಕೊಂಡಳು. ಮಗುವಿನ ಭಾಗ್ಯವನ್ನು ನೆನೆದು ಮಮ್ಮಲ ಮರುಗಿದಳು. ಮಗು ಸ್ವಲ್ಪ ದೊಡ್ಡದಾಗುತ್ತಿರುವಂತೇ ಮತ್ತೆಲ್ಲೋ ಗಾರೆ ಕೆಲಸಕ್ಕೆ ಶುರುವಿಟ್ಟಳು.

ಮುರುಗನ ಅಪ್ಪ-ಅಮ್ಮ ವರದಕ್ಷಿಣೆ ಆಸೆಗೆ ಏನೋ ಮಾಡಲು ಹೋಗಿ ಮುರುಗನೋ ಸೇರಿದಂತೇ ಎಲ್ಲರೂ ಜೈಲುಸೇರಿದ್ದರು. ಬೀಗರ ಬಡಿತಕ್ಕೆ ಅಡ್ಡಡ್ಡ ಮಲಗಿಬಿಟ್ಟ ಮುರುಗನ ಅಪ್ಪ-ಅಮ್ಮ ತಪ್ಪಿನ ಅರಿವಿಗೆ ಬಂದರು. ಜೈಲುಹಕ್ಕಿಯಾಗಿ ಬಂಧಿಯಾಗಿರುವ ಮುರುಗನಿಗೆ ಕೃಷ್ಣಪಕ್ಷನ ಕ್ಷೀಣಚಂದ್ರನ ತಿಂಗಳ ಬೆಳಕು ಮತ್ತೆ ಚೆಲ್ಲಿದ ನೆನಪು ಕಾಡುತ್ತಿತ್ತು. ೫ ವರ್ಷಗಳ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಮಹಾನಗರಪಾಲಿಕೆಯವರು ಮುರುಗನ ಅಪ್ಪ ಕೊಂಡಿರುವ ಜಾಗ ತಮ್ಮದೆಂದೂ ಅದರ ಖಾತೆಯಲ್ಲಿ ಮೋಸವಾಗಿದೆಯೆಂದೂ ಮನೆಯನ್ನೂ ಉರುಳಿಸಿದ್ದರು. ಮನೆಯಿರಲಿ ಅವರ ವಸ್ತುಗಳೆಲ್ಲಾ ಎಲ್ಲಿಗೆ ಹೋದವೋ ಅರಿವಿಲ್ಲ. ಕೈಲಿರುವ ಕಾಸು ಕರಗಿತ್ತು. ಮತ್ತೆ ದುಡಿತ ಬೇಕಿತ್ತು. ಕೆಲಸ ಹುಡುಕುತ್ತಾ ಹೊರಟ ಮುರುಗನ ಮನೆಯವರಿಗೆ ಸಸಾರದ ಕೆಲಸ ಮತ್ತದೇ ಗಾರೆ ಕೆಲಸವಾಗಿತ್ತು. ಮನೆಯ ಮೂರೂ ಜನ ಹಾಗೆ ಗಾರೆ ಕೆಲಸಕ್ಕೆ ಆತು ಜೀವನ ನಡೆಸಬೇಕಾಯಿತು.

ಕಟ್ಟುತ್ತಿರುವ ಕಟ್ಟಡದ ಹತ್ತಿರದಲ್ಲಿ ಮರಳಿನ ರಾಶಿಯಮೇಲೆ ಆಡುತ್ತಿರುವ ಮುದ್ದಾದ ಮಗುವನ್ನು ಕಂಡು ಮಾತನಾಡಿಸಿದ ಮುರುಗ. ಆತನಿಗೆ ಆಕೆ ತಮಿಳು ಮೂಲದವರ ಮಗಳೆಂಬುದು ಗೊತ್ತೇ ವಿನಃ ಮತ್ತೇನೂ ತಿಳಿದಿರಲಿಲ್ಲ. ಮಗುವನ್ನು ಬಿಟ್ಟು ಬಹಳಹೊತ್ತು ಒಳಗಡೆ ಕೆಲಸದಲ್ಲಿದ್ದ ಮಗುವಿನ ತಾಯಿ ಮಗು ಏನುಮಾಡುತ್ತಿರಬಹುದೆಂಬ ಸಹಜ ಕುತೂಹಲದಿಂದ ಬಂದು ನೋಡುತ್ತಾಳೆ--ಮುರುಗ ಮಗುವನ್ನು ಮಾತನಾಡಿಸುತ್ತಿದ್ದಾನೆ ! ಓಡೋಡಿ ಬಂದು ಮುರುಗನನ್ನು ಮಾತನಾಡಿಸಿದಳು. " ಹೇಗಿದ್ದೀರಿ ? " ಎಂಬ ಪ್ರೀತಿಯ ಹರವನ್ನು ಹೊರಸೂಸಿದಳು. ತನ್ನ ನೋವನ್ನೆಲ್ಲಾ ಅರೆಕ್ಷಣ ಮರೆತು ಮುರುಗ ಮಾಡಿದ್ದು ತಪ್ಪು ಎನ್ನುವುದನ್ನೂ ಮರೆತಳು. ಮಾತನಾಡಿದರು ಜೋಡಿ. ಮಗುವಿಗೆ ಒಂದೂ ಅರ್ಥವಿಲ್ಲ! ಬಹಳ ಹೊತ್ತಿನ ಮಾತು. ಮತ್ತೆ ಪ್ರೀತಿ, ಮತ್ತೆ ಬಯಕೆ! ಯಾರೋ ಪುಣ್ಯಾತ್ಮರು ಆಕೆಗೆ ಒಳ್ಳೆಯ ಕಂತ್ರಾಟುದಾರರ ಪರಿಚಯ ಮಾಡಿಸಿದ್ದರಿಂದ ಅನುದಿನವೂ ಕೆಲಸಕ್ಕೆ ಬರಗಾಲವಿರಲಿಲ್ಲ. ಮುರುಗನಿಗೂ ಅಲ್ಲೇ ಕೆಲಸ ಕೊಡಿಸುವ ಇಚ್ಛೆ ವ್ಯಕ್ತಪಡಿಸಿದಾಗ ಆತ ಒಪ್ಪಿಕೊಂಡ. ಮಗು ತನ್ನದೇ ಎಂಬುದನ್ನರಿತ ಆ ಕ್ಷಣ ಭುವಿಯೇ ಸ್ವರ್ಗದಂತಿತ್ತು. ಮಗುವನ್ನು ಎತ್ತಿ ಮುದ್ದಾಡಿದ ಮುರುಗ ನದಿಯಾಳ ಸಂಗಾತಿಯಾಗಿ ಶಾಶ್ವತವಾಗಿ ಅವಳೊಂದಿಗೆ ಬದುಕು ಕಟ್ಟುವ ಮನಸ್ಸುಮಾಡಿದ. ಇಬ್ಬರ ಮನದಲ್ಲೂ ಕೋಗಿಲೆ ಮತ್ತೆ ಹಾಡಿತು. ದೂರದ ಮಾಮರದಲ್ಲಿ ವಸಂತಾಗಮನವಾಗಿ ಹೊಸಹಸಿರು ಚಿಗುರೊಡೆದು ಕೋಗಿಲೆಯೊಂದು ಕುಳಿತು ಇಂಪಾಗಿ ಹಾಡಹತ್ತಿತ್ತು. ಕಣ್ಣಂಚಲ್ಲಿ ಹರಿದ ಮುತ್ತಿನಮಣಿಗಳು ಗಲ್ಲದಮೇಲೆ ಧುಮ್ಮಿಕ್ಕುತ್ತಿರುವಂತೇ ಹಾದಿಯಲ್ಲಿ ಹಾದುಹೋಗುತ್ತಿರುವ ಮಲ್ಲಿಗೆ ಹೂ ಮಾರುವವನನ್ನು ಕರೆದು ಮೊಳ ಮಲ್ಲಿಗೆ ಕೊಂಡು ನದಿಯಾಗೆ ಮುಡಿಸಿದ ಮುರುಗ.