ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, September 22, 2011

ವಾದ್ಯದಮೇಲೆ ಓಡಾಡುವ ’ನಡೆ’ ಇದೆ !


ವಾದ್ಯದಮೇಲೆ ಓಡಾಡುವ ’ನಡೆ’ ಇದೆ !

ಕವಳದ ಸಂಚಿ[ಎಲೆಯಡಿಕೆ ಚೀಲ] ಬಗಲಲ್ಲಿ ಇಟ್ಟುಕೊಂಡು ಹೊರಟುಬಿಟ್ಟರೆ ಕೆಲವರ ಕೆಲಸವೇ ಮನೆ ಮನೆ ಸುತ್ತುವುದು. ಹಕ್ಕೆಚಡಿ ಪುರಾಣ ಹೇಳುತ್ತಾ ಇದ್ದಿದ್ದಕ್ಕೆ ಕೈಕಾಲು ಸೇರಿಸಿಯೋ ಅಥವಾ ಇಲ್ಲದಿದ್ದುದನ್ನೋ ಊದ್ದುದ್ದ ನಾಲಿಗೆ ಎಳೆಯುತ್ತಾ ಹೇಳುವುದರಲ್ಲಿ ಇಂಥಾ ಜನ ನಿಸ್ಸೀಮರಿರುತ್ತಾರೆ. ಹೆರೋಲೆ ಅಪ್ಪಚ್ಚಿ ಸತ್ತಮೇಲೆ ಚೌಡೀ ಮತ್ತು ಜಟ್ಗ, ಕೀಳು ವಗೈರೆ ದೇವತೆಗಳನ್ನು ಪೂಜೆಮಾಡಿ ಆದರಿಸುವವರು ಕಮ್ಮಿ ಆಗಿದ್ದಾರೆ ಎಂಬುದು ಕೆಲವರ ಹೇಳಿಕೆಯಾದರೂ ಪೂಜೆಗಳಂತೂ ನನಗೆ ತಿಳಿದ ಮಟ್ಟಿಗೆ ಇನ್ನೂ ನಡೆದೇ ಇವೆ.

ನಾನೇನಾದರೂ ಬಿದ್ದು ಕಲ್ಲಿಗೆ ತಲೆಬಡಿದು ತಲೆಯೊಡೆದು ಸತ್ತುಹೋಗದೇ ಬದುಕಿ ನಿಮ್ಮೆದುರು ಬರೆಯುತ್ತಿದ್ದರೆ ಅದಕ್ಕೆ ಕಾರಣ " ನಿನಗೆ ಹೆದರಿಕೆಯಾಗದಂತೇ ಜೊತೆಗೇ ಶ್ರೀಧರಸ್ವಾಮಿಗಳಿದ್ದಾರೆ " ಎಂದ ಮನೆಯ ಹಿರಿಯರ ಮಾತು. ಇಲ್ಲದಿದ್ದರೆ ಈಲೋಕಕ್ಕೆ ಬಂದಷ್ಟೇ ವೇಗದಲ್ಲಿ ನಾನು ಮರಳಿಯೂ ಬಿಡುತ್ತಿದ್ದೆ! ಚಿಕ್ಕವರಿರುವಾಗ ನಮಗೇನು ಪೇಟೇ ಮಕ್ಕಳ ಥರ ಯೂನಿಫಾರ್ಮು, ಸಾಕ್ಸು ಶೂ ಹಾಕಿ ಶಾಲೆಗೆ ಕಳಿಸುವುದು ಕರಕೊಂಡುಬರುವುದು ಇದೆಲ್ಲಾ ಇರಲಿಲ್ಲ. ಸಿಕ್ಕಿದ ಚಡ್ಡಿಯನ್ನು ಸಿಗಿಸಿಕೊಂಡು ಸವೆದ ಹವಾಯಿಯಿದ್ದರೆ ಅದನ್ನೆ ಮೆಟ್ಟಿಕೊಂಡು ಹತ್ತು ಹರದಾರಿ ನಡೆದೇ ಹೋಗಬೇಕಾಗಿತ್ತು ಶಾಲೆಗೆ. ಅದುಬಿಡಿ ಶಾಲೆಗೆ ಹೋಗುವುದಕ್ಕಿಂತಾ ಹೆಚ್ಚಾಗಿ ನೆನೆಸಿದ ಭತ್ತ ತೆಗೆದುಕೊಂಡು ಮಿಲ್ಲುಮಾಡಿಸಿ ಅವಲಕ್ಕಿತಯಾರಿಸಿಕೊಂಡು ಬರುವುದು, ಅಂಗಡಿಯಿಂದ ರವೆ, ಹಿಟ್ಟು, ತರಕಾರಿ ಇತ್ಯಾದಿಗಳನ್ನು ಅರ್ಜೆಂಟಿಗೆ ತಂದುಕೊಡುವುದು, ಕೊಟ್ಟಿಗೆಯಲ್ಲಿರುವ ನಮ್ಮ ಹಸುಗಳು ಹಾಲು ಬತ್ತಿಸಿಕೊಂಡಾಗ ನಿತ್ಯ ನಿಗದಿತವೇಳೆಗೆ ಹಾಲು ಸಿಗುವ ಬೇರೇ ಮನೆಯಿಂದ ಹಾಲು ತರುವುದು, ಬೇಸಿಗೆಯಾದರೆ ಅಡಕೆ ತೋಟಕ್ಕೆ ನೀರುಬಾರಿ ಮಾಡುವುದು, ಭಟ್ಟರ[ಪುರೋಹಿತರ] ಮನೆಗೆ ಹೋಗಿ ಅವರು ನಮ್ಮಲ್ಲೇ ಬಿಟ್ಟುಹೋಗಿದ್ದ ಸಿದ್ದಕ್ಕಿ-ಕಾಯಿಗಳನ್ನು ತಲ್ಪಿಸಿಬರುವುದು ಇತ್ಯಾದಿ ’ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ’ ಎಂಬ ರೀತಿ ಕೆಲಸಗಳು ಅಡರಿಕೊಂಡೇ ಇರುತ್ತಿದ್ದವು.

ಕೊಟ್ಟ ಯಾವುದೇ ಕೆಲಸಗಳನ್ನು ಸ್ವಲ್ಪ ಆಟವಾಡುತ್ತ ತಡವಾಗಿ ಮಾಡುವುದಿತ್ತು ಬಿಟ್ಟರೆ ಕೆಲಸ ಮಾಡುವುದಿಲ್ಲ ಎನ್ನುವುದು ನಮ್ಮ ಜಾಯಮಾನವೇ ಅಲ್ಲ. ಕೆಲಸದ ಜೊತೆಜೊತೆಗೆ ಆಗಾಗ ಹಕ್ಕೆಚಡಿ ಪುರಾಣಿಕರ ಕಥೆಗಳನ್ನು ಕೇಳುವುದೂ ಅಭ್ಯಾಸವಾಗಿಬಿಟ್ಟಿತ್ತು! ತಂಬೂರಿಯಂಥಾ ಬಾಯಿತುಂಬಾ ಕವಳದ ಕೆಂಪುಎಂಜಲನ್ನು ತುಂಬಿಕೊಂಡು ಮಧ್ಯೆ ಮಧ್ಯೆ " ಗಾಗಾಕ್ ಗಾಗಾಕ್ " ಎಂದು ಗಂಟಲಿಗೆ ಹೋಗುವ ಆ ಮಿಶ್ರಣವನ್ನು ವಾಪಾಸು ಬಾಯಿಗೆ ಎಳೆಯುತ್ತಾ ತಮ್ಮದೇ ಲೋಕದಲ್ಲಿ ಆನಂದತುಂದಿಲರಾಗಿ ವಿಹರಿಸುತ್ತಾ ಕಥಾಕಾಲಕ್ಷೇಪಮಾಡುವ ಜನ ಬಂದುಬಿಟ್ಟರೆ, ಹಾಗೆ ಬಂದ ಅವರನ್ನು ಜಾಸ್ತಿಹೊತ್ತು ಕೂರಿಸಿಕೊಳ್ಳಲೂ ಆಗದೇ ಎದ್ದುಹೋಗು ಎಂದು ಹೇಳಲೂ ಆರದೇ ತಮ್ಮೊಳಗೇ ಒದ್ದಾಡುವ ನಮ್ಮ ಹಿರಿಯರು ಬರಿದೇ ಹೂಂ ಗುಟ್ಟಿದರೂ ಸಾಕು ಅವರು ಕಥೆಹೇಳುತ್ತಲೇ ಇರುತ್ತಿದ್ದರು! ಕೆಲವು ಕಥೆಗಳು ನಮ್ಮನೆಯ ಹಿರಿಯರಿಗೆ ಬೇಡವಾದರೂ ನಮಗೆ ಬೇಕಾಗಿಬಿಡುತ್ತಿದ್ದವು !!

ಗುಂಡಬಾಳೆಯಲ್ಲಿ ವರ್ಷದ ೫ ತಿಂಗಳು ಒಂದೇ ವೇದಿಕೆಯಲ್ಲಿ ಹರಕೆಬಯಲಾಟ[ಯಕ್ಷಗಾನ]ನಡೆಯುತ್ತದೆ-ಅದು ಕರ್ನಾಟಕದ ಮಂದಿ ಸೇರಿದಂತೇ ಬೇರೇ ರಾಜ್ಯಗಳವರಿಗೂ ಗೊತ್ತು. ಯಾಕೆಂದರೆ ಜಿ.ಎಸ್.ಬಿ ಸಮುದಾಯದ ಸಂಪರ್ಕ ಎಲ್ಲೆಲ್ಲಾ ಇದೆಯೋ ಅಲ್ಲೆಲ್ಲಾ ಆ ಸುದ್ದಿ ಹಬ್ಬಿರುತ್ತದೆ. ಮೊದಲು ಎಲ್ಲಿನೋಡಿದರೂ ಗದ್ದೆಯೋಗದ್ದೆ ಎನ್ನುವ ಸುಮಾರು ೪೦-೫೦ ಎಕರೆಗಿಂತಾ ಹೆಚ್ಚಿನ ಬಹುದೊಡ್ಡ ಬಟಾಬಯಲಿನ ನಡುವೆ ಒಂದುಜಾಗದಲ್ಲಿ ಸಣ್ಣಗೆ ಚಪ್ಪರಕಟ್ಟಿ ಅದನ್ನೇ ವೇದಿಕೆ ಎಂದು ತಿಳಿದು ಆಟ ನಡೆಸುತ್ತಿದ್ದರು. ನಾವೆಲ್ಲಾ ಹುಟ್ಟುವುದಕ್ಕೂ ಮುಂಚೆ ರಾತ್ರಿ ಬೆಳಕಿನ ಸಲುವಾಗಿ ದೊಡ್ಡ ದೊಂದಿಗಳನ್ನೂ ಸೀಮೇಎಣ್ಣೆ ಗ್ಯಾಸ್ ಲೈಟ್‍ಗಳನ್ನೂ ಬಳಸಲಾಗುತ್ತಿತ್ತಂತೆ. ವೇದಿಕೆಯ ಇಕ್ಕೆಲಗಳಲ್ಲಿ ಅವುಗಳನ್ನು ಜೋಡಿಸಿ ಬೆಳಕು ಕಾಣುವಂತೇ ಮಾಡಲಾಗುತ್ತಿತ್ತಂತೆ. ಆದರೆ ನಾವೆಲ್ಲಾ ಚಿಕ್ಕವರಿರುವಾಗ ವಿದ್ಯುತ್ತು ಅದಾಗಲೇ ಬಂದಿತ್ತಾದ್ದರಿಂದ ಕಗ್ಗಾಡಿನ ಕುಗ್ರಾಮಗಳಲ್ಲೂ ಕೆಲವುಮಟ್ಟಿಗೆ ವಿದ್ಯುದ್ದೀಪಗಳು ಬಳಕೆಗೆ ಬಂದುಬಿಟ್ಟಿದ್ದವು.

ಗುಂಡಬಾಳೆಯ ಮುಖ್ಯಪ್ರಾಣ ಎಂದೇ ಹೆಸರಾದ ಹನುಮ ಒಂದಾನೊಂದು ಕಾಲಕ್ಕೆ ಪಕ್ಕದಲ್ಲೇ ಹರಿವ ನದಿಯಲ್ಲಿ ಯಾರೋ ಹವ್ಯಕ ಬ್ರಾಹ್ಮಣನೋರ್ವನಿಗೆ ಸ್ನಾನಮಾಡುವಾಗ ಸಿಕ್ಕನಂತೆ. ಸಿಕ್ಕ ಚಿಕ್ಕ ವಿಗ್ರಹವನ್ನು ನದೀ ಮುಖಜ ಭೂಮಿಯಿಂದ ಅನತಿದೂರದಲ್ಲಿ ಪ್ರತಿಷ್ಠಾಪಿಸಿ ಪೂಜೆಮಾಡುತ್ತಿದ್ದ ಆ ಬ್ರಾಹ್ಮಣ ಯಾವಕಾಲದಲ್ಲೋ ವಿಧಿವಶನಾದ. ಆತನ ವಂಶಸ್ಥರೂ ಯಾರೂ ಸರಿಯಾಗಿ ಇರಲಿಲ್ಲವಾಗಿ ಸಹಜವಾಗಿ ಆ ಪ್ರದೇಶದಕ್ಕೆ ಒಲಸೆಬಂದ ಜಿ.ಎಸ್.ಬಿ ಸಮುದಾಯದ ಒಂದೆರಡು ಕುಟುಂಬಗಳು ಹನುಮನ ಪೂಜೆ-ಪುನಸ್ಕಾರಗಳನ್ನು ನೋಡಿಕೊಂಡವು. ಕಾಲಕ್ರಮೇಣ ಹನುಮ ಕುಂತಲ್ಲಿಂದಲೇ ತನ್ನ ಪರಾಕ್ರಮವನ್ನು ತೋರಿಸಿದ. ಯಾವಮಾಯೆಯಲ್ಲಿ ಆಟಬೇಕೆಂದು ಕೇಳಿದನೋ ಗೊತ್ತಿಲ್ಲ ಅಂತೂ ಆಟ ಹರಕೆಯ ರೂಪದಲ್ಲಿ ಕಾಯಂ ಆಗಿಬಿಡ್ತು.

ಯಾರೋ ತಮ್ಮ ಜೀವನದ ಸಮಸ್ಯೆಗಳನ್ನು ಮುಂದಿಟ್ಟು " ಅಪ್ಪಾ ಹನುಮಾ ನಿನಗೆ ಹರಕೆಯಾಟವಾಡಿಸಿ ದಶಾವತಾರದ ದೃಶ್ಯಗಳನ್ನು ತೋರಿಸುವೆನಪ್ಪಾ ದಯಮಾಡಿ ನಮ್ಮ ಕೋರಿಕೆ ನೆರವೇರಿಸಿಕೊಡುತ್ತೀಯಾ ಸ್ವಾಮೀ ? " ಎಂದು ಹರಕೆಮಾಡಿಕೊಂಡು ಹೋದವರಿಗೆ ಅವರ ವಾಂಛೆಗಳು ನೆರವೇರಿದವು,ಕೆಲಸಗಳು ಕೈಗೂಡಿದವು. ಅಂಥಾ ಜನ ಹರಕೆಯಾಟವನ್ನು ನಡೆಸಿಕೊಟ್ಟರು. ಅವರನ್ನು ನೋಡಿ ಮತ್ತಷ್ಟು ಮಂದಿ ಹರಕೆ ಹೊತ್ತುಕೊಂಡರು---ಪಟ್ಟಿ ಬೆಳೆಯುತ್ತಲೇ ಹೋಯಿತು. ಈಗ ನೀವು ಆಟ ಆಡಿಸಲು ಬುಕ್ ಮಾಡಿದರೆ ಪ್ರಾಯಶಃ ಎಳಬರಾದರೆ ನಿಮ್ಮ ಮುಪ್ಪಿನ ವಯಸ್ಸಿಗೆ ಅವಕಾಶ ಸಿಗಬಹುದು, ಹಳಬರಾದರೆ ಹನುಮನ ಹುಟ್ಟೂರುಸೇರಿದಮೇಲೆ ಮುಂದಿನ ತಮ್ಮ ಪೀಳಿಗೆಯವರು ಆ ಅವಕಾಶ ಪಡೆಯಬಹುದು!! ಯಾವುದಕ್ಕೂ ಹನುಮ ಕೃಪೆದೋರಬೇಕು.

ಅಲ್ಲಿನ ಆಟದ ೫ ತಿಂಗಳದ ಅವಧಿಯಲ್ಲಿ ಹುಬ್ಬಾಸಿ ಮತು ವೀರಭದ್ರ ಈ ಎರಡು ಎಕ್ಸ್ಟ್ರಾ ವೇಷಗಳು ನಿಗದಿತ ಕಾಲದಲ್ಲಿ ಬಂದುಗೋಗುತ್ತವೆ-ಅದು ಎಲ್ಲಾ ದಿನಗಳಲ್ಲೂ ಅಲ್ಲ, ಬದಲಾಗಿ ಆ ಸಂಪೂರ್ಣ ಅವಧಿಯಲ್ಲಿ ಆಟದ ಪ್ರಸಂಗಗಳು ಜೋರುಜೋರಾಗಿ ನಡೆಯುತ್ತವೆ ಎನ್ನುವ ದಿನಗಳಲ್ಲಿ ಹುಬ್ಬಾಸಿ ಬರುತ್ತಾನೆ, ಆಟಗಳ ಸೀಸನ್ ಮುಗಿಯುತ್ತಾ ಬರುವಾಗ ವೀರಭದ್ರ ಬರುತ್ತಾನೆ. ಈ ಎರಡೂ ವೇಷಗಳು ವೇದಿಕೆಯಿಂದ ಬಹುದೂರದಲ್ಲಿ ಗುರುತಿಸಿದ ಜಾಗದಿಂದ ವಿಜೃಂಭಣೆಯ ಮೆರವಣಿಗೆಯಲ್ಲಿ ಬರುತ್ತವೆ. ಈ ವೇಷಗಳನ್ನು ಕಟ್ಟಿದವರಿಗೆ ಮೈಮೇಲೆ ಆವೇಶಬರುತ್ತದೆ ಎಂಬುದೊಂದು ಕಲ್ಪನೆ ಇದೆ. ಅದು ಬರಲಿ ಬಿಡಲಿ ಇದೆಲ್ಲಾ ಒಂದು ಭಗವಂತನ ಸೇವೆ. ಹುಬ್ಬಾಸಿ ಎಂಬ ರಕ್ಕಸ ಕರಾವಳಿ-ಮಲೆನಾಡು ಪ್ರಾಂತಗಳಲ್ಲಿ ಹಿಂದೆ ಬಹಳ ಮೆರೆದಿದ್ದಬಗ್ಗೆ ದಾಖಲೆ ಇದೆ. ಬನವಾಸಿಯ ರಾಜಾ ಮಯೂರವರ್ಮ ತನ್ನ ಮಾಂಡಲಿಕರೊಡಗೂಡಿ ಆತನನ್ನು ಸದೆಬಡಿದ ಎಂಬುದು ಇವತ್ತಿಗೆ ಇತಿಹಾಸ. ಅಂತಹ ಹುಬ್ಬಾಸಿಯ ನೆನಪಿನಲ್ಲಿ ಒಮ್ಮೆ ಆ ವೇಷ ಆವೇಶಭರಿತವಾಗಿ ಹನುಮನ ಮುಂದೆ ಗದ್ದೇಬಯಲಿನಲ್ಲಿ ನಿರ್ಮಿತವಾಗಿರುವ ವೇದಿಕೆಯನ್ನೇರಿ ನಡೆದುಹೋಗುತ್ತದೆ. ಈ ಎರಡೂ ವೇಷಗಳಿದ್ದ ದಿನ ಜನ ೫-೬ ಸಾವಿರಕ್ಕೂ ಹೆಚ್ಚುಸಂಖ್ಯೆಯಲ್ಲಿ ಸೇರುತ್ತಾರೆ! ಆವೇಶ ಭರಿತವಾಗಿ ಆ ವೇಷಗಳು ಹೆಜ್ಜೆಹಾಕಿ ಖಡ್ಗ ಝಳಪಿಸಿ ಅಬ್ಬರಿಸಿ ಕೂಗಿ ಗೆಜ್ಜೆಕಾಲನ್ನು ಘಲಿರುಘಲಿರೆಂದು ಬಡಿದು ಹುಬ್ಬು ಹಾರಿಸಿ ಕೇಕೇ ಹಾಕಿಹಾಕಿ ಕೆಂಪುಕಣ್ಣನ್ನು ತಿರುವಿದಾಗ ಜನ ನಿಬ್ಬೆರಗಾಗಿ ನೋಡುತ್ತಾರೆ! ಮಕ್ಕಳ ಚಡ್ಡಿ ಒದ್ದೆಯಾಗುವುದರಲ್ಲಿ ಅನುಮಾನವಿಲ್ಲ!! ವೇಷಗಳು ಇಳಿದುಹೋದ ಬಳಿಕ ನಿಟ್ಟುಸಿರುಬಿಡುವ ಜನರೂ ಇದ್ದಾರೆ. ಇಲ್ಲೊಂಥರಾ ಭಯ-ಭಕ್ತಿಗಳ ಮಿಶ್ರಛಾಪು ! ಎದುರು ದೂರದಲ್ಲಿ ತನ್ನ ದೇವಾಲಯದಲ್ಲೇ ಕುಳಿತ ಹನುಮ ಎಲ್ಲವನ್ನೂ ದಿಟ್ಟಿಸಿ ನೋಡುತ್ತಾನೆ ಎಂಬುದು ಅನಿಸಿಕೆ. ಅದು ಹೌದೂ ಹೌದು. [ಗುಂಡಬಾಳೆಯ ಬಗ್ಗೆ ಮತ್ತೊಮ್ಮೆ ನೋಡೋಣ ಬಿಡಿ, ಇಲ್ಲದಿದ್ರೆ ನಮ್ಮ ಕಥೆ ಕಾದಂಬರಿಯಾದೀತು ! ]

ಇಂಥಾ ಗುಂಡಬಾಳೆಯಲ್ಲಿ ಆಟಗಳ ಸೀಸನ್ ಮುಗಿದು ಓಕುಳಿಯಾಡಿದಮೇಲೆ ಪ್ರತೀ ಅಮವಾಸ್ಯೆಯ ರಾತ್ರಿ ಅದೇ ರಂಗಸ್ಥಳದಲ್ಲಿ ದೆವ್ವಗಳು-ಭೂತಪ್ರೇತಗಳು ತಮ್ಮ ಸೇವೆಯ ಆಟಗಳನ್ನು ನಡೆಸುತ್ತವೆ ಎಂಬುದು ನಮ್ಮ ತಾಂಬೂಲಾನಂದರುಗಳು ಹೇಳುವ ಪುರಾಣ. ಕತ್ತಲಲ್ಲಿ ಅಕಸ್ಮಾತ್ ಎಚ್ಚೆತ್ತು ನೋಡಿದರೆ ಭೂತಗಳು ಗೆಜ್ಜೆಕಟ್ಟಿ ಕುಣಿಯುವುದು ಕಾಣಿಸುವುದಂತೆ. ಥೇಟ್ ಮನುಷ್ಯರ ರೀತಿಯಲ್ಲೇ ಪ್ರಸಂಗಗಳನ್ನು ನಡೆಸುವ ಅವುಗಳು ಏನೋ ಸಂಭಾಶಿಸುವುದು ಕುಣಿಯುವುದು ಎಲ್ಲಾ ಕಂಡರೂ ಯಾವುದೂ ಅರ್ಥವಾಗುವುದಿಲ್ಲವಂತೆ. ಒಂದೊಮ್ಮೆ ಆಗ ಯಾರದರೂ ಅಲ್ಲಿಗೇನಾದರೂ ಹೋದರೆ ಅಪಾಯ ಕಟ್ಟಿಟ್ಟದ್ದು ಎಂಬುದು ನಮ್ಮ ಹಕ್ಕೆಚಡಿ ಪುರಾಣಿಕರ ಅಂಬೋಣ.

ಹೀಗೇ ಕೆಲವು ಆಯಕಟ್ಟಿನ ಜಾಗಗಳನ್ನು ಹೆಸರಿಸುತ್ತಾ ಅವುಗಳ ಸುತ್ತಾ ಬಣ್ಣಬಣ್ಣದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಕೂತಿರುವಾಗ ಮಕ್ಕಳಾದ ನಮಗೆ ಒಳಗೊಳಗೇ ಅವ್ಯಕ್ತ ಭಯ, ಆತಂಕ! ಒಬ್ಬರೇ ಓಡಾಡುವಾಗಿನ ಸಂಭವನೀಯತೆಗಳ ಬಗ್ಗೆ ನೆನೆದು ಮೈನಡುಕ. ಇಂಥಾ ಪುಕ್ಕಲು ಶರೀರಿಗಳಾಗಿದ್ದ ನಾವು ಎಲ್ಲಾದರೂ ಒಂಟಿಯಾಗಿ ಬಿಡುವ ಸಾಧ್ಯತೆಗಳನ್ನು ಆದಷ್ಟೂ ತಪ್ಪಿಸಿಕೊಳ್ಳುತ್ತಿದ್ದೆವು. ಆದರೂ ಹಳ್ಳಿಯ ಜೀವನದಲ್ಲಿ ಕೊನೇಪಕ್ಷ ಓಡಾಡುವಾಗಲಾದರೂ ಒಂಟಿಯಾಗಿ ಇರಬೇಕಾಗಿ ಬರಬಹುದಾದ ಪ್ರಮೇಯಗಳು ಹೆಚ್ಚು. ಮೂರು ರಸ್ತೆ ಕೂಡುವ ಜಾಗದಲ್ಲಿ ಎಳನೀರು ಅರಿಷಿನ ಕುಂಕುಮ ಇತ್ಯಾದಿ ಏನಾದರೂ ಕಂಡರೆ ನಮ್ಮ ಪ್ರಸಾದ ಒಣಗಿ ಮೂರು ಮೂರು ದಿನ ನಮಗೆ ಕಕ್ಕಸಿಗೆ ಹೋಗುವ ಗೊಡವೆಯೇ ಇರುತ್ತಿರಲಿಲ್ಲ! ಮೇಲಾಗಿ ಚಿಕ್ಕವರಿರುವಾಗ ಕಟ್ಟಡ ರೂಪದ ಕಕ್ಕಸುಮನೆ ಇರಲಿಲ್ಲ, ನಾವೆಲ್ಲಾ ಯಾರೋ ಹೇಳಿದ್ದನ್ನು ಕೇಳಿಕೊಂಡು ’ಲಂಡನ್ನಿ’ಗೆ ಹೋಗಿಬರ್ತೇವೆ ಎನ್ನುತ್ತಾ ಹೋಗುವುದಾಗಿತ್ತು. ಲಂಡನ್ನಿಗೆ ಹೋಗುವಾಗ ಕೂಡ ಓರಗೆಯ ನಾಕಾರು ಜನ ಮಕ್ಕಳು ಸೇರಿದರೇ ಧೈರ್ಯ. ಯಾಕೆಂದರೆ ನಮ್ಮ ’ಲಂಡನ್ನು’ ಇರುವುದು ಹತ್ತಿರದ ಬೆಟ್ಟದಲ್ಲಿ ! ಬೆಟ್ಟದ ಮರಗಳ ಸಂದಿಯಲ್ಲಿ ಅವಿತು ಕೂತು ನಿರಾಳವಾಗಿ ಹೊರದೂಡಿಬಿಟ್ಟರೆ ಜಗವೇ ಸುಖಮಯ !

’ಲಂಡನ್ನಿಗೆ’ ಕೂತಾಗ ಇಲ್ಲದ ಆಲೋಚನೆಗಳು ಬರುವುದೇ ಜಾಸ್ತಿ! ಕೆಲವು ಕವಿಗಳಿಗೆ, ಕಥೆಗಾರರಿಗೆ ಎಲ್ಲಾ ಸ್ಫೂರ್ತಿ ನೀಡುವ ಸಮಯ ಅದೇ ಅಂತೆ. ನಮಗೆ ಅದು ಹಾಗಾಗಿರದೇ ದೆವ್ವಗಳ ವಿರಾಟ್ ರೂಪಗಳ ಬಗ್ಗೆ ಆಲೋಚಿಸುವ ಕಾಲವಾಗಿರುತ್ತಿತ್ತು. ದೆವ್ವಗಳು ಹೇಗೆಲ್ಲಾ ಇರಬಹುದು, ವಿಕಾರ ಮುಖ, ಹಿಂದೆಮುಂದಾದ ಕಾಲುಪಾದಗಳು, ಊದ್ದುದ್ದ ಉಗುರು ಬೆಳೆದಿರುವ ಕೈಗಳು, ಪೀಚಲು ಶರೀರದ ತುಂಬಾ ಬಿಳೀಬಟ್ಟೆ .....ಇನ್ನೂ ಏನೇನೋ ! ನೆನೆದಾಗ ಒಳಗೆ ಸ್ಟಾಕ್ ಇರುವ ಅಷ್ಟೂ ಚಾಚಿ ಹೊರಬಿದ್ದು ಹೋಗುತ್ತಿತ್ತು-ಮಲಬದ್ಧತೆಯೂ ಇಲ್ಲ ಏನೂ ಇಲ್ಲ; ಎಂಥಾ ಒಳ್ಳೇ ಔಷಧ ನೋಡಿ ! ಲಂಡನ್ನಿಗೆ ಹೋಗುವ ಕೆಲಸ ಮಳೆಗಾಲದಲ್ಲಿ ಸ್ವಲ್ಪ ಪರಿಶ್ರಮದಾಯಕವಾಗಿತ್ತು. ಶಾಲೆಯ ಸಮಯ, ಮಳೆಯಿರದ ಸಮಯ, ಕತ್ತಲೆಯಾಗದ ಸಮಯ, ಜೊತೆಗಾರರು ಸಿಗುವ ಸಮಯ ---ಈ ಎಲ್ಲಾ ಸಮಯಗಳ ಅವಲಂಬನೆ ಅವಲೋಕನ ನಡೆದೇ ಲಂಡನ್ ಕೆಲಸ ಆಗಬೇಕಾಗುತ್ತಿತ್ತು. ಆಮೇಲೆ ನಾವೆಲ್ಲಾ ಸುಮಾರು ಹೈಸ್ಕೂಲಿಗೆ ಹೋಗುವ ಹೊತ್ತಿಗೆ ನಿಧಾನವಾಗಿ ಕಕ್ಕಸುಮನೆಗಳು ತಲೆ ಎತ್ತಿದವು. ಆದರೂ ಹಳೆತಲೆಯಾಗಿದ್ದ ಈಗ ಶಿವನಪಾದ ಸೇರಿರುವ ತಲಗೆರೆ ವೆಂಕಟ್ರಮಣ ಭಟ್ಟರು ಹೇಳಿದ್ದಿಷ್ಟು :

" ನೋಡೋ ಯಾರಾದ್ರೂ ಹೋದ ಜಾಗದಲೆಲ್ಲಾ ಮತ್ತೊಬ್ರು ಹೋಪ್ಲಾಗ ಮಾರಾಯಾ, ಒಂದು ಬಾಣ ಹೊಡದ್ರೆ ಎಷ್ಟು ದೂರ ಹೋಗ್ತೋ ಅಷ್ಟು ದೂರ ಹೋಗಿ ಮಣ್ಣಿನಲ್ಲಿ ಸಣ್ಣ ಕುಳಿ ತೆಗೆದು ಅಲ್ಲಿ ಕಕ್ಕಸುಮಾಡಿ ಮೇಲಿಂದ ಮಣ್ಣುಮುಚ್ಚಿ ತೊಳೆದುಕೊಳ್ಳವು. ಕೈಗೆ ಕಾಲಿಗೆ ಹುತ್ತದ ಮಣ್ಣಿನ್ನು ಹಚ್ಚಿ ತೊಳೆದುಕೊಂಡು ೧೦-೧೨ಸಲ ಬಾಯಿ ಮುಕ್ಕಳಿಸಿ ತೂಪವು. ಆಗಮಾತ್ರ ಅದು ಸರಿಯಾದ ಕೆಲ್ಸ, ಅಲ್ದಿದ್ರೆ ದೋಷ ತಟ್ತು " ಕೊನೇವರೆಗೂ ಕಟ್ಟಿದ ಕಕ್ಕಸುಮನೆಯನ್ನು ಬಳಸುವ ಗೋಜಿಗೆ ಅವರು ಹೋಗಲಿಲ್ಲ; ಬೇಕಾಗಿಯೂ ಬರಲಿಲ್ಲ. ಧೋ ಎಂದು ಸುರಿವ ಮಳೆಗಾಲದಲ್ಲಿ ಸೂರ್ಯ ಕಾಣುವುದೇ ಅಪರೂಪವಾಗಿರುವಾಗ ಒಂದು ಬಾಣ ಹೊಡೆದರೆ ಅದು ತಲ್ಪುವಷ್ಟು ದೂರ ಇರಲಿ, ಪರ್ಯಾಯ ವ್ಯವಸ್ಥೆ ಇದ್ದರೆ ಲಂಡನ್ನಿಗೆ ಹೋಗುವ ಬವಣೆಯೇ ಇರದಿದ್ದರೆ ಎಂಬ ಅಲೋಚನೆಯೂ ಬರುತ್ತಿತ್ತು.

ಮಸುಕಲ್ಮಕ್ಕಿ ಜಟ್ಗ, ಹರ್ನಮೂಲೆ ಜಟ್ಗ ಇಂಥಾ ಜಟ್ಗಗಳೇನೂ ಕಮ್ಮಿ ಅಲ್ಲ ಎಂಬ ಮಾತು ’ತಂಬೂರಿದಾಸರ’ ಬಾಯಿಂದ ಅದಾಗಲೇ ಬಂದಿದ್ದಾಗಿತ್ತು. ರಾತ್ರಿ ಜಟ್ಗನ ಬಲೆಯಲ್ಲಿ ಸದ್ದಾಗುವುದನ್ನು ಕೇಳಬೇಕಂತೆ ! ಚಿತ್ರ-ವಿಚಿತ್ರ ಸದ್ದುಗಳು ಬರುತ್ತವಂತೆ. " ಕುಪ್ಪಯ್ಯ ಶೆಟ್ಟರ ಮಗ ಎಲ್ಲಿಗೋ ಹೋದೋನು ಸರಿರಾತ್ರಿ ಹನ್ನೆರಡು ಗಂಟೆಗೆ ಆ ದಾರಿಯಾಗಿ ಬರುವಾಗ ವಾಹನ ನಿಲ್ಲಿಸಿ ಇಳಿದು ನೋಡಿದನಂತೆ, ನೋಡಿದ್ದೊಂದು ಗೊತ್ತಿ ಬಿಟ್ಟರೆ ಎಚ್ಚರತಪ್ಪಿ ಬಿದ್ದುಬಿಟ್ಟಿದ್ದನಂತೆ. ಅದೆಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಯಾರೋ ತಂದು ವಾಹನದಲ್ಲಿ ಹಾಕಿದ್ದರಂತೆ. ಮಾರನೇ ದಿನದಿಂದ ವಾರದದಿನ ಮೇಲೇಳಲೇ ಇಲ್ವಂತೆ.....ಜ್ವರಾ ಅಂದ್ರೆ ಜ್ವರ...ಕತ್ತುರ್ಯೋಜ್ವರ...ಆಮೇಲೆ ಪೂಜೆಕೊಡ್ತೇನೆ ಅಂತ ಹೇಳ್ಕೊಂಡ್ ಮೇಲೆ ಆರಾಮಾಯ್ತಂತೆ " ಇದನ್ನೆಲ್ಲಾ ಕೇಳುವಾಗ ಯಾವ ಮಕ್ಕಳಿಗೆ ಮನಸ್ಸಲ್ಲಿ ಅಲೋಚನೆ ಬರದೇ ಹೋಗುತ್ತದೆ ಹೇಳಿ?

ಹೀಗೇ ಒಮ್ಮೆ ಹಾಲು ತರಲು ಕಬ್ಬಿನಗದ್ದೆಗೆ ಹೋಗಿದ್ದೆ. ಕಬ್ಬಿನಗದ್ದೆ ಎಂದರೆ ಅದು ಈಗ ಕಬ್ಬು ಬೆಳೆಯುವ ಗದ್ದೆಯಲ್ಲ ಬದಲಿಗೆ ಈಗಿರುವುದು ಅಡಕೆ ತೋಟ ಮತ್ತು ಅದರ ಪಕ್ಕ ಎತ್ತರದಲ್ಲಿ ಒಂದು ಮನೆ. ಹಿಂದ್ಯಾವಗ್ಲೋ ಕಬ್ಬು ಬೆಳೆದ ಪ್ರದೇಶ ಅದಾಗಿತ್ತಂತೆ ಅದ್ಕೇ ಆಗಿಂದ ಚಾಲ್ತಿಯಲ್ಲಿರುವ ಹೆಸರು ಕಬ್ಬಿನಗದ್ದೆ. ಕಬ್ಬಿನಗದ್ದೆಯ ಆ ಮನೆಗೆ ನಮ್ಮನೆಯಿಂದ ಒಂದೂವರೆ ಫರ್ಲಾಂಗು ದೂರ. ಸಾಗುವ ಹಾದಿಯ ಒಂದೆ ಅಡಕೆ ತೋಟದ ಸಾಲು, ಇನ್ನೊಂದೆಡೆ ಬೆಟ್ಟ. ನಡುವೆ ಇರುವ ಕಾಲುದಾರಿಯಲ್ಲಿ ನಡೆದುಹೋದರೆ ಕಬ್ಬಿನಗದ್ದೆ ಸೇರಬಹುದು. ಹಾದಿಯ ಮಧ್ಯೆ ಒಂದಷ್ಟು ದೂರ ಯಾವುದೇ ಜನವಸತಿ ಸಿಗುತ್ತಿರಲಿಲ್ಲ. ಅದೂ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಹರಿಯುವ ನೀರಿನ ಝರಿಗಳ ಸದ್ದುಬಿಟ್ಟರೆ ಬೆಟ್ಟದ ಹಕ್ಕಿಗಳ ಕಲರವವೋ ಎಂಥದೋ ನಮಗದೆಲ್ಲಾ ಅಂದು ಬೇಡವಗಿತ್ತು;ಬಚಾವದರೆ ಸಾಕಿತ್ತು ಅಷ್ಟೇ ! " ಹಾಲು ತಂದ್ಯನೋ ? " ಎಂದು ಕೇಳುವ ಹಿರಿಯರಿಗೆ ಹೇಗಾದರೂ ಮಾಡಿ ತಂದುಕೊಡಬೇಕಾಗಿತ್ತು; ಉಪಾಯ ಇರಲಿಲ್ಲ. ನಿರ್ವಾಹವಿಲ್ಲದೇ ಓಡುತ್ತಾ ದಾರಿಗುಂಟ ಕಲ್ಲಿಗೆ ಜಪ್ಪಿ ಗಾಯಗೊಂಡ ಕಾಲುಬೆರಳನ್ನು ಉಜ್ಜುತ್ತಾ ಮತ್ತೆ ತಿರುತಿರುಗಿ ಬೆನ್ನತ್ತಿ ಏನಾದರೂ ಬಂತೋ ಎಂದು ನೋಡಿಕೊಳ್ಳುತ್ತಾ ಸಾಗುವ ನಮ್ಮ ಪಾಡು ನಮಗೆ!

ಅದೂ ಅಮಾವಾಸ್ಯೆಯ ರಾತ್ರಿಯಲ್ಲಿ ಜಟ್ಗ, ಕೀಳು ಎಲ್ಲಾ ಸೇರಿ ಭಜನೆ ಹಾಡುತ್ತಾ ಶಂಖ ಊದುತ್ತಾ ಜಾಗಟೆ ಪಂಚವಾದ್ಯಗಳ ಸಮೇತ ತಮ್ಮ ಜಾಗದಿಂದ ಅದೇ ದಾರಿಯಲ್ಲಿ ಸಾಗಿ ಮತ್ತೊಂದು ಜಾಗಕ್ಕೆ ತೆರಳುತ್ತಿದ್ದವಂತೆ. " ಸುಳ್ಳು ಹೇಳಡ ನೀನು ಕಂಡವರಿದ್ದೊ " ಎಂದು ಹೇಳಿದ್ದ ’ಪುರಾಣಿಕರ’ ಮಾತು ಆಗಾಗ ಜ್ಞಾಪಕಕ್ಕೆ ಬರುತ್ತಿರುತ್ತಿತ್ತು. ಅಕರಾಳ ವಿಕರಾಳ ಮುಖ, ರುಂಡವಿಲ್ಲದ ಶರೀರ ಕುದುರೆಮೇಲೆ ಕುಳಿತು ಓಡುವುದು ಇತ್ಯಾದಿ ವಿಚಿತ್ರ ಕಲ್ಪನೆಗಳನ್ನು ನಮ್ಮಲ್ಲಿ ಸೃಜಿಸಿ ನಮ್ಮ ಜಂಘಾಬಲವೇ ಉಡುಗಿಹೋಗುವಂತೇ ಮಾಡಿದ್ದ ಪುರಾಣಿಕ ಜನ ರಾತ್ರಿಯವೇಳೆ ಮನೆಯಿಂದ ಆಚೆಬಂದು ಮೂತ್ರವಿಸರ್ಜಿಸಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಸಿಗಿಸಿಹಾಕಿದ್ದರು! ಆಗೆಲ್ಲಾ ಮನೆಯೊಳಗೇ ಶೌಚಾಲಯ ಬಚ್ಚಲುಮನೆ ಇರಲಿಲ್ಲವಾಗಿ ಒಂದಕ್ಕೋ ಎರಡಕ್ಕೋ ಅಂತೂ ಮನೆಯ ಹೊರಗಡೆ ತೆರಳಲೇ ಬೇಕಾಗಿತ್ತು. " ನಡೆ ಇಪ್ಪ ಜಾಗಕ್ಕೆ ರಾತ್ರಿ ಹೋಪ್ದು ಒಳ್ಳೇದಲ್ಲ, ಅವ್ಕೆ ತೊಂದ್ರೆಕೊಟ್ಟಂಗಾಗಿ ಅವು ತಿರುಗಿ ಬೀಳ್ತೊ " ಎಂದಿದ್ದ ಆ ಜನರ ಮಾತು ಮನದಲ್ಲಿ ಹಗಲಿಗೂ ಪ್ರತಿಧ್ವನಿಸುತ್ತಿತ್ತು.

ಒಂದು ದಿನ ಹಾಲು ತರುವಾಗ ಹಿಂದಿನಿಂದ ಬಸಕ್ಕನೆ ಕಲ್ಲೊಂದು ಬಂದು ಬಿತ್ತು. ಶಿವನೇ ಶ್ರೀರಾಮಚಂದ್ರ, ಇಡಗುಂಜಿ ಮಾಗಣಪತಿ, ಗುಂಡಬಾಳೆ ಹನ್ಮಂತ,ಮುಗ್ವಾ ಸುಬ್ರಹ್ಮಣ್ಯ.....ಕ್ಷಣಮಾತ್ರದಲ್ಲಿ ಅಷ್ಟೂ ದೇವರುಗಳು ನೆನಪಾಗಿದ್ದರು. " ನನ್ನ ರಕ್ಷಣೆ ನಿನ್ನ ಹೊಣೆಯಪ್ಪಾ " ಎಂದು ಪ್ರಾರ್ಥಿಸಿದ್ದೇ ಪ್ರಾರ್ಥಿಸಿದ್ದು ಹೊರತಾಗಿ ತಿರುಗಿ ನೋಡುವ ಯಾವುದೇ ಧೈರ್ಯ ಇರಲಿಲ್ಲ. ಇನ್ನೇನು ಓಡಿ ಹೇಗಾದರೂ ತಪ್ಪಿಸಿಕೊಳ್ಳಲು ಸಾಧ್ಯವೋ ನೋಡಬೇಕು ಎನ್ನುವಷ್ಟರಲ್ಲಿ ಜೋರಾಗಿ ನಗು ಕೇಳಿಸಿತು! ಮತ್ತೂ ಕಂಗಾಲು ಇನ್ನೂ ಕಂಗಾಲು ! ಮುಂದೆ ಇರುವುದು ಮೆಟ್ಟಿಲುಗಳ ದಾರಿ, ಮೆಟ್ಟಿಲು ತಪ್ಪಿ ಕೆಳಗೆ ಬಿದ್ದರೆ ಕೆಳಗಡೆ ಇರುವ ಶಿಲೆಕಲ್ಲುಗಳ ರಾಶಿಗೆ ತಲೆಬಡಿದರೆ ಪರಿಣಾಮ ಏನು ಎಂದು ಹೇಳುವುದು ಕಷ್ಟ. ಹೇಗೂ ಸಾಯುವುದೇ ಎಂದುಕೊಂಡು ಶ್ರೀಧರಸ್ವಾಮಿಗಳನ್ನು ನೆನೆಯುತ್ತಾ ತಿರುಗಿ ನೋಡಿದರೆ ಆಚೆಮನೆ ಮಾಚಣ್ಣ ನಗುತ್ತಾ ನಿಂತಿದ್ದ ! ಆತನಿಗೆ ಮಕ್ಕಳನ್ನು ಹೆದರಿಸಿ ಗೋಳುಹುಯ್ದುಕೊಳ್ಳೋದು ಹವ್ಯಾಸ. ಅದ್ರಲ್ಲೂ ನನ್ನಂಥಾ ಪರದೇಶಿ ಸಿಕ್ಕಿದ್ದಕ್ಕೆ ಬಾಳ ಮಜವಾಗಿತ್ತು ಆತನಿಗೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ!

ಇಂದಿಗೂ ಊರಿಗೆ ಹೋದಾಗ ದಿನವೆರಡು ತಂಗಲು ಅವಕಾಶ ಸಿಕ್ಕರೆ ಆ ಜಾಗಗಳಿಗೆ ಹೋಗುತ್ತೇನೆ. ಜಾಗದ ರೂಪಗಳು ಬದಲಾದರೂ ನನ್ನ ನೆನಪಲ್ಲಿ ಹಾಗೇ ಉಳಿದಿವೆ. ಅಂದಿನ ದಿನಗಳ ಪೇಚಾಟಗಳನ್ನು ನೆನೆದು ನಗುಬರುತ್ತದೆ. ನನ್ನಂಥಾ ಮಕ್ಕಳು ಈಗ ಯಾರಾದರೂ ಹಾಗೇ ಅದೇ ಸ್ಥಿತಿಯಲ್ಲಿ ಇರಬಹುದೇ ಎಂದುಕೊಳ್ಳುತ್ತೇನೆ. ಜಟ್ಗಗಳು ಸ್ವಲ್ಪ ಕಾಯಿದೆ ಬದಲಿಸಿದ ಹಾಗಿದೆ! ಅವುಗಳ ಬಗ್ಗೆ ಪುರಾಣಕೊರೆಯಲು ಜನರಿಗೆ ಸಮಯ ಇರುವುದಿಲ್ಲವೋ ಏನೋ ! ಅಂತೂ ಪೂಜೆ-ಪುನಸ್ಕಾರಗಳಲ್ಲಿ ಬದಲಾವಣೆ ಇಲ್ಲ. ವಾದ್ಯದ ಮೇಲೆ ಓಡಾಡುವ ’ನಡೆ’ ಬಗ್ಗೆ ಜಾಸ್ತಿ ಮಾತು ಕೇಳಿಬರುವುದಿಲ್ಲ.