ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 13, 2012

ಅದುರಿದ ಇನ್ಫಿ, ಗರಿಗೆದರಿದ ಪೆಂಟಾಲೂನ್ ಮತ್ತು ಮುಗಿದ ಪಟ್ನಿ ಅಧ್ಯಾಯ

ಅದುರಿದ ಇನ್ಫಿ, ಗರಿಗೆದರಿದ ಪೆಂಟಾಲೂನ್ ಮತ್ತು ಮುಗಿದ ಪಟ್ನಿ ಅಧ್ಯಾಯ
ಜಾಗತಿಕ ಮಾರುಕಟ್ಟೆಯಲ್ಲಿ ದಿನಂಪ್ರತಿ ಪೈಪೋಟಿ ನಡೆದೇ ಇರುತ್ತದೆ. ಎಷ್ಟೇ ತಲೆಮೇಲೆತ್ತಿ ನಡೆಯಲು ಪ್ರಯತ್ನಿಸಿದರೂ ಪರಿಸ್ಥಿತಿ ಉಲ್ಬಣಿಸಿದಾಗ ತಲೆಕೆಳಗಾಗಿ ನಡೆಯಬೇಕಾಗುವುದು ಅನಿವಾರ್ಯವಾಗುತ್ತದೆ; ಹೊರ ಜಗತ್ತಿಗೆ ಅದು ಗೋಚರವಾಗುತ್ತದೆ. ಹುಡುಗಿ ೩ ತಿಂಗಳು ೬ ತಿಂಗಳು ೯ ತಿಂಗಳ ತನಕವೂ ಬಚ್ಚಿಟ್ಟ ರಹಸ್ಯ ಬಸಿರು ೯ತಿಂಗಳ ಹಡೆಯುವ ಕಾಲಕ್ಕೆ ಹೊರಬರಲೇಬೇಕಾಗುತ್ತದೆ ಹೇಗೋ, ಒತ್ತಡಗಳನ್ನು ಹಿಮ್ಮೆಟ್ಟಿಸಿ ಬಿದ್ದ ಜಾಗದಿಂದ ಸಾವರಿಸಿಕೊಂಡು ಮೇಲೆದ್ದು ಮೈಕೊಡವಿ ತನಗೇನೂ ಆಗಿಲ್ಲವೆಂದು ಪೋಸುಕೊಡುವುದು ಕೆಲವು ಹಂತಗಳವರೆಗೆ ಮಾತ್ರ ಸಾಧ್ಯ. ಯಾವುದೋ ಒಂದು ಹಂತದಲ್ಲಿ ಅಂತರಂಗ ಬಹಿರಂಗವಾಗಲೇಬೇಕಾಗುತ್ತದೆ.

ಹೊಸ ಹೊಸ ದಂಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಗಸಕ್ಕೆ ನೆಗೆದು ಹೆಸರುಮಾಡಿದವರನ್ನು ನಾವು ಕಾಣುತ್ತಲೇ ಇದ್ದೇವೆ. ಅದರಲ್ಲಿ ಇನ್ಫೋಸಿಸ್, ಫ್ಯೂಚರ್ ಗ್ರೂಪ್ ಕೂಡ ಇದ್ದಾವೆ. ಇದುವರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಮೂಲದ್ದಾಗಿ, ತಂತ್ರಾಂಶ ನಿರ್ಮಾಣದಲ್ಲಿ ಅಪ್ರತಿಮ ಹೆಸರು ಗಳಿಸಿದ ಇನ್ಫಿಗೆ ಈಗ ಹೊಡೆತದ ಸರದಿ! ವಾಸ್ತವಿಕವಾಗಿ ಜಗತ್ತಿನಲ್ಲಿ ಮೂಲಭೂತವಾಗಿ ಬೇಕಾಗುವ ತಂತ್ರಾಂಶಗಳ ಅಭಿವೃದ್ಧಿ ಅದಾಗಲೇ ನಡೆದು ಮುಗಿದಿದೆ; ಇನ್ನೇನಿದ್ದರೂ ಅವುಗಳ ಪರಿಷ್ಕರಣೆ ಮತ್ತು ಕೆಡದಂತೆ ರಕ್ಷಣೆ ಈ ಕೆಲಸಗಳು ಮಾತ್ರ ಉಳಿದಿವೆ. ಎಲ್ಲೋ ಅಲ್ಪಮಟ್ಟದಲ್ಲಿ ಹೊಸ ಹೊಸ ತಂತ್ರಾಂಶಗಳ ಪ್ರಾಜೆಕ್ಟ್ ಗಳು ಸಿಗಬಹುದಾದರೂ ಅದಕ್ಕೆ ಹತ್ತಾರು ಕಂಪನಿಗಳ ಟೆಂಡರ್ ಕರೆಯಲಾಗುತ್ತದೆ. ಕರೆದ ಹತ್ತಾರು ಕಂಪನಿಗಳ ಹೊರತಾಗಿ ನೂರಾರು ತಂತ್ರಾಂಶ ಕಂಪನಿಗಳು ತಮ್ಮ ಗುತ್ತಿಗೆಯ ಹಣವನ್ನು ಟೆಂಡರ್ ನಲ್ಲಿ ನಮೂದಿಸಿರುತ್ತವೆ. ಸಹಜವಾಗಿ ಕಡಿಮೆ ಖರ್ಚಿನಲ್ಲಿ ಉತ್ತಮವಾದ ತಂತ್ರಾಂಶ ಒದಗಿಸಬಲ್ಲ ಕಂಪನಿಯತ್ತ ಆದೇಶ ಹೊರಳುತ್ತದೆ.  

ತನ್ನ ಗಾತ್ರದಿಂದ ತನಗಿರುವ ಹಲವಾರು ಖರ್ಚುವೆಚ್ಚಗಳಿಂದ ಸಾಮಾನ್ಯವಾಗಿ ಎಲ್ಲಾ ಕಂಪನಿಗಳಿಗಿಂತಲೂ ಅಧಿಕ ಮೊತ್ತವನ್ನು ಇನ್ಫಿ ನಮೂದಿಸುವುದು ಸಹಜ. ಯಾವಾಗ ಪ್ರಾಜೆಕ್ಟ್ ವೆಚ್ಚ ಜಾಸ್ತಿಯಾಗಿ ತೋರುತ್ತದೋ ಆಗ ಹೊರಗುತ್ತಿಗೆ ಆದೇಶಿಸುವ ಕಂಪನಿಗಳು ಇನ್ಫಿಯಂತಹ ಕಂಪನಿಗಳನ್ನು ಕೈಬಿಡುವುದೂ ನಡೆಯುತ್ತದೆ. ಪ್ರಸಕ್ತ ವರ್ಷದಲ್ಲಿ ಹಾಗೇ ಆಗಿದೆ. ಜಾಗತಿಕ ಆರ್ಥಿಕ ಕುಸಿತ ಎಂಬ ಕಾರಣಕ್ಕೆ ಇನ್ಫಿ ತನ್ನ ತಂತ್ರಜ್ಞರಿಗೆ, ಕೆಲಸಗಾರರಿಗೆ ಈಗಾಗಲೇ ಸಂಬಳದಲ್ಲಿ ಕಡಿತವನ್ನು ಘೋಷಿಸಿದೆ! ಮುಂಬರುವ ದಿನಗಳಲ್ಲಿ ಇನ್ನೂ ಕಡಿತಗೊಳ್ಳುವ ಸಾಧ್ಯತೆ ಕಾಣುತ್ತದೆ. ಯಾವುದೇ ರಂಗದಲ್ಲೇ ಆಗಲಿ, ಅನಾರೋಗ್ಯಕರ ಪೈಪೋಟಿ ಯಾವಾಗ ಆರಂಭವಾಗುತ್ತದೋ ಆಗ ಅಲ್ಲಿ ಹಲವು ಕಂಪನಿಗಳು ಅಥವಾ ಕೆಲಸಗಾರರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕಂಪನಿಗಳು ಬಾಳುವ ಶಕ್ತಿಯನ್ನೇ ಕಳೆದುಕೊಳ್ಳಲೂ ಬಹುದು. ಚಿಕ್ಕಪುಟ್ಟ ಕಂಪನಿಗಳಲ್ಲಿ ಅವುಗಳ ಮಾಸಿಕ ಖರ್ಚುವೆಚ್ಚಗಳು ಕಮ್ಮಿ ಇರುತ್ತಿದ್ದು ಅವು ಹೇಗೋ ಸ್ವಲ್ಪ ನಿಭಾಯಿಸಬಹುದು, ವ್ಯವಹಾರ ಬೆಳೆಯುತ್ತಿದ್ದಾಗ, ಅದಕ್ಕೆ ತಕ್ಕಂತೇ ಹಿಗ್ಗಿದ ಗಜಗಾತ್ರದ ಮಾನವಸಂಪನ್ಮೂಲವುಳ್ಳ ಕಂಪನಿಗಳಿಗೆ ಇಂತಹ ಪೈಪೋಟಿಗಳಲ್ಲಿ ಇಳಿದಾಗ ಲುಕ್ಸಾನು ಕಟ್ಟಿಟ್ಟಬುತ್ತಿ. 

ವ್ಯಾವಹಾರಿಕವಾಗಿ ಹೊಸ ಹೊಸ ಆದೇಶಗಳನ್ನು ತನ್ನದಾಗಿಸಿಕೊಂಡು ಅಭಿವೃದ್ಧಿ ಕಾಣಬೇಕೆಂಬ ಕನಸು ಪ್ರತೀ ಕಂಪನಿಗಳ ನಿರ್ಮಾತೃಗಳಿಗೆ ಇರುತ್ತದೆ. ಅದು ಚಿಲ್ಲರೆ ಅಥವಾ ಸಗಟು ವ್ಯಾಪಾರಗಳ ರಂಗದಲ್ಲೂ ಇದೆ. ಚಿಲ್ಲರೆ ವ್ಯಾಪಾರವನ್ನೇ ಸಗಟುವ್ಯವಹಾರದ ರೀತಿ ಮಾಡಿಕೊಂಡು ಗ್ರಾಹಕರನ್ನು ನೇರವಾಗಿ ತಲ್ಪಿ ಲಾಭಪಡೆಯುವ ಸನ್ನಾಹದಿಂದ ಸಾವಿರಾರು ಕಂಪನಿಗಳ ಸಾವಿರಾರು ಉತ್ಫನ್ನಗಳನ್ನು ತನ್ನ ಮೂಲಕ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡುವುದು ಫ್ಯೂಚರ್ ಗ್ರೂಪ್ ಎಂಬ ಕಂಪನಿಯ ಸಾಹಸವಾಗಿದೆ. ಕಿಶೋರ್ ಬಿಯಾನಿ ಈ ಗ್ರೂಪನ್ನು ಆರಂಭಿಸಿದರು. ಬೆಳೆಯುತ್ತಾ ಬೆಳೆಯುತ್ತಾ ದೇಶವ್ಯಾಪಿ ತನ್ನ ಮೈಚಾಚಿ ಸಾವಿರಾರು ಜನರನ್ನು ತನ್ನ ಮಳಿಗೆಗಳಲ್ಲಿ ಕೆಲಸಕ್ಕೆ ನಿಯಮಿಸಿಕೊಂಡ ಫ್ಯೂಚರ್ ಗ್ರೂಪ್, ತತ್ಸಮಾನ ಪೈಪೋಟಿ ನೀಡಲು ಬಿರ್ಲಾ ಮೋರ್, ಟಾಟಾ ಸ್ಟಾರ್, ರಿಲಾಯನ್ಸ್  ಮಳಿಗೆಗಳು ಸನ್ನದ್ಧಗೊಂಡವು. ಸಾಲದ್ದಕ್ಕೆ ಮಹಾನಗರಗಳಲ್ಲಿ ಮಾಲ್ ಕಲ್ಚರ್ ಕಾಣಿಸಿಕೊಂಡು ಒಂದೇ ಸೂರಿನಡಿಯಲ್ಲಿ ಎಲ್ಲವೂ ದೊರೆಯುವಂತಾಗಿ ಮಾಲ್ ಗಳಲ್ಲಿ ಹಲವಾರು ಹೊಸ ಹೊಸ ಕಂಪನಿಗಳು ನೇರವಾಗಿ ವ್ಯಾಪಾರಕ್ಕೆ ಇಳಿದವು. ಇದರಿಂದ ಫ್ಯೂಚರ್ ಗ್ರೂಪ್ ೫೬೯೨ ಕೋಟಿ ಸಾಲದ ಹೊರೆಯನ್ನು ಹೊರಬೇಕಾಯಿತು. ಪೆಂಟಾಲೂನ್ಸ್, ಬಿಗ ಬಜಾರ್, ಬ್ರಾಂಡ್ ಫ್ಯಾಕ್ಟರಿ, ಸೆಂಟ್ರಲ್, ಫುಡ್ ಬಜಾರ, ಸ್ಟೆಪಲ್ಸ್, ಹೋಮ್ ಟೌನ್ ಮೊದಲಾದ ಬೇರೇ ಬೇರೇ ಹೆಸರುಗಳಲ್ಲಿ ಬೇರೇ ಬೇರೇ ವಿಭಾಗಗಳಿಗೆ ಸಂಬಂಧಿಸಿದ ಸರಕುಗಳನ್ನು ಮಾರಾಟಮಾಡುತ್ತಿದ್ದ ಫ್ಯೂಚರ್ ಗ್ರೂಪ್ ತನ್ನ ಅಸಹಾಯಕತೆಯನ್ನು ’ಥರ್ಡ್ ಐ’ ಎಂಬ ಸಲಹೆದಾರರಿಗೆ ತಿಳಿಸಿದಾಗ ಅವರು ನೀಡಿದ ಪರಿಹಾರ ಸೂತ್ರವಾಗಿ ಈಗ ಆದಿತ್ಯ ಬಿರ್ಲಾ ಗೂಪಿನ ಎ.ಬಿ.ಎನ್. ಮತ್ತು ಫ್ಯೂಚರ್ ಗ್ರೂಪಿನ ಪೆಂಟಾಲೂನ್ ನಡುವೆ ವ್ಯವಹಾರಿಕ ಒಪ್ಪಂದವಾಗಿದೆ. ಪೆಂಟಾಲೂನ್ ನ ೮೦೦ ಕೋಟಿಯ ಸ್ಟೇಕ್ ಗಳನ್ನು ಎ.ಬಿ.ಎನ್. ಖರೀದಿಸಿದ್ದೂ ಅಲ್ಲದೇ ಉದಾರ ಮನದಿಂದ ಹೆಚ್ಚುವರಿಯಾಗಿ ೮೦೦ ಕೋಟಿಯನ್ನು ನೀಡಿ ಪೆಂಟಾಲೂನ್ ಗಿದ್ದ ೧೬೦೦ ಕೋಟಿ ಸಾಲದ ಭಾರವನ್ನು ನಿವಾರಿಸಿದೆ.

ಪೀಟರ್ ಇಂಗ್ಲೆಂಡ್, ವ್ಯಾನ್ ಹ್ಯೂಸನ್ ಮೊದಲಾದ ಕೆಲವು ಬ್ರಾಂಡ್ ಗಳಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಮಾರುತ್ತಿದ್ದ ಎ.ಬಿ.ಎನ್ ಪೆಂಟಾಲೂನ್ ಜೊತೆ ಸೇರಿದ್ದರಿಂದ ಈಗ ಹೊಸದೊಂದು ಹೆಸರಿನಲ್ಲಿ ಪೆಂಟಾಲೂನ್ ಮಳಿಗೆಗಳು ಶೋಭಿಸಲಿವೆ; ವ್ಯಾಪಾರ ಮುಂದುವರಿಸಲಿವೆ. ಹಲವುದಿನಗಳಿಂದ ನಿದ್ದೆಗೆಟ್ಟಿದ್ದ ಕಿಶೋರ್ ಬಿಯಾನಿಗೆ ಇರುವ ೫೬೯೨ ಕೋಟಿ ಹೊರೆಯಲ್ಲಿ ೧೬೦೦ ಕೋಟಿ ಭಾರ ಇಳಿದಿದೆ! ಇದು ಸ್ವಲ್ಪ ನಿಟ್ಟುಸಿರಿ ಬಿಡಲು ಕಾರಣವಾಗಿದೆ. ಇದೇ ರೀತಿ ಮಿಕ್ಕುಳಿದ ವಿಭಾಗಗಳನ್ನೂ ಆಸಕ್ತಿ ಮತ್ತು ಆರ್ಥಿಕಾನುಕೂಲವಿರುವ ಬೇರೇ ಕಂಪನಿಗಳ ಜೊತೆ ಸೇರಿಕೊಂಡು ನಿಭಾಯಿಸಿದರೆ ಮಾತ್ರ ಫ್ಯೂಚರ್ ಗ್ರೂಪ್ ಉಳಿಯಬಹುದೇ ಹೊರತು ಇಲ್ಲದಿದ್ದರೆ ಇದು ಕಿಂಗ್ ಫಿಶರ್ ರೀತಿಯಲ್ಲೇ ಸಂಬಳಕೊಡಲೂ ಪರದಾಡಬೇಕಾದ ಸ್ಥಿತಿ ಬರಬಹುದು!

ಬರಕತ್ತಾಗದ ಬಿಸಿನೆಸ್ಸಿಗೆ ಕೈಹಾಕುವುದು ಎಂದರೆ ಅದು ಕಂಪನಿಯ ಅಧೋಗತಿ ಎಂತಲೇ ಅರ್ಥ. ಒಂದು ವಸ್ತುವಿಗೆ ಅಥವಾ ಒಂದು ಸೇವೆಗೆ ತಗಲಬಹುದಾದ ವೆಚ್ಚಕ್ಕಿಂತ ಭಾರೀ ಕಮ್ಮಿ ಮೊತ್ತಕ್ಕೆ ಹೊರಗುತ್ತಿಗೆ ಹಿಡಿದು ಗಿರಾಕಿಗಳನ್ನು ಸಂಭಾಳಿಸುವುದು ನಿಜಕ್ಕೂ ಬಹಳ ದುರ್ಭರ ಪ್ರಸಂಗ. ಹಸಿದ ಹೊಟ್ಟೆಗೆ ಹಳಸಿದ ಅನ್ನವಾದರೇನು ಯಾರೋ ತಿಂದುಬಿಟ್ಟು ತೂರಿದ ಅನ್ನವಾದರೇನು ಅಲ್ಲವೇ? ಪೈಪೋಟಿ ನಿರತ ಕಂಪನಿಗಳ ಉದರಂಭರಣೆ ಕೆಲವೊಮ್ಮೆ ರಾಟ್ ರೇಸ್ ನಲ್ಲಿ ಕಷ್ಟಸಾಧ್ಯ. ಗಣಕಯಂತ್ರದ ಹಾರ್ಡ್ ವೇರ್ ಲೈನ್ ನಲ್ಲಿ ಇದು ಬಹಳ ಪ್ರಸ್ತುತ. ಅಲ್ಲಿ ಮಾಡುವ ಕೆಲಸಕ್ಕೆ ತಕ್ಕಮರ್ಯಾದೆ ಇಲ್ಲ. ಎಂಜಿನೀಯರ್ ಆಗಿರಲಿ, ಎಸ್.ಎಸ್.ಎಲ್.ಸಿ ಅನುತ್ತೀರ್ಣ ವ್ಯಕ್ತಿಯೇ ಆಗಿರಲಿ ವಿಂಡೋಸ್ ಇನ್ಸ್ಟಾಲೇಶನ್ ಮಾಡುವಲ್ಲಿ ಇಬ್ಬರ ತೂಕವನ್ನೂ ಒಂದೇ ರೀತಿ ಅಳೆಯುವ ಜಾಯಮಾನ ನಮ್ಮ ಗಿರಾಕಿಗಳದು. ಗಣಕಯಂತ್ರದ ಸಮಸ್ಯೆಗಳನ್ನು ತರ್ಕಬದ್ಧವಾಗಿ ಮೂಲಬೇರು ಹಿಡಿದು ಸಮಸ್ಯಾಪೂರಣ ಗೊಳಿಸಿ ನಿವಾರಿಸಿ ಕೊಡಬಲ್ಲ ಎಂಜಿನೀಯರ್ ಗಳನ್ನೂ ಮತ್ತು ಮಧ್ಯಂತರದಲ್ಲಿ ಮೇಸ್ತ್ರಿ ಕೆಲಸಮಾಡುವ ಸರಿಯಾಗಿ ಏನೂ ಗೊತ್ತಿರದ ಹುಡುಗರನ್ನೂ ಏಕದೃಷ್ಟಿಯಿಂದ ಅಳೆದು ಕೆಲಸಕ್ಕೆ ಸಲ್ಲಬೇಕಾದ ಗೌರವ ಸಂಭಾವನೆಯಲ್ಲಿ ಏಕರೂಪವನ್ನು ಕೊಡಮಾಡುವ ಗಿರಾಕಿಗಳಿಗೆ/ಗ್ರಾಹಕರಿಗೆ/ಉದ್ದಿಮೆದಾರರಿಗೆ ಏನೆನ್ನಬೇಕೋ ತಿಳಿದಿಲ್ಲ.
 
ಹಾಗಂತ ಗಣಕಯಂತ್ರಗಳ ಬೃಹತ್ ಅಥವಾ ಮಧ್ಯಮದರ್ಜೆಯ ನೆಟ್ವರ್ಕ್ ಇರುವಲ್ಲಿ ಸ್ಕಿಲ್ಡ್ ಲೇಬರ್ ಅನಿವಾರ್ಯವೆಂಬುದು ಬಹುತೇಕರಿಗೆ ತಿಳಿದೇ ಇದೆ. ಸ್ಕಿಲ್ಡ್ ಮತ್ತು ನಾನ್-ಸ್ಕಿಲ್ಡ್ ಸರ್ವಿಸ್ ಕೊಡುವವರಬಗ್ಗೆ ಮಹಿತಿಯೂ ಇರುತ್ತದೆ. ಆದರೂ ಕಾಲಿಗೆ ಹತ್ತಿದ ಕೊಳೆಯನ್ನು ತೊಳೆದುಕೊಳ್ಳುವಷ್ಟೇ ಸಲೀಸಾಗಿ ಸಮಸ್ಯೆಗಳ ನಿವಾರಣೆಗೆ ಸೆಮಿಸ್ಕಿಲ್ಡ್ ಅಥವಾ ನಾನ್-ಸ್ಕಿಲ್ಡ್ ಕೆಲಸಗಾರರನ್ನೇ ಒಪ್ಪಿಕೊಂಡು ಹೇಗಾದರೂ ಕೆಲಸಗಳನ್ನು ಕಮ್ಮಿ ಖರ್ಚಿನಲ್ಲಿ ನಿಭಾಯಿಸಿಕೊಳ್ಳುವುದು ಹಲವು ಗಿರಾಕಿಗಳ/ಗ್ರಾಹಕರ/ಉದ್ದಿಮೆದಾರರ ಲೆಕ್ಕಾಚಾರ. ಹೀಗೆ ಉಳಿಸುವ ಅಲ್ಪ ಹಣಕ್ಕೆ ಬದಲಾಗಿ ಕೆಲವೊಮ್ಮೆ ದ್ವಿಗುಣದಷ್ಟು ಖರ್ಚು ತಂದುಕೊಳ್ಳುವ ಪರಿಸ್ಥಿತಿ ಎದುರಿಸುವವರೂ ಅವರೇ! ಆದರೂ ಇನ್ನೂ ಕೂಡ ಸಾರ್ವಜನಿಕ ರಂಗದಲ್ಲಿ ಗಣಕಯಂತ್ರಗಳ ಭೌತಿಕಕಾಯಗಳ ಸೇವೆಯನ್ನು ಸರಿಯಾದ ಪರಿಮಾಣದಲ್ಲಿ ಜನ ಗುರುತಿಸಿಲ್ಲ. " ನಿಮ್ಮ ಕಂಪನಿಯಲ್ಲಿ ಎಷ್ಟು ಜನರಿದ್ದಾರೆ? ನಿಮ್ಮ ಕಂಪನಿ ಎಷ್ಟು ಗಿರಾಕಿಗಳನ್ನು ಹೊಂದಿದೆ? ನಿಮ್ಮ ಕಂಪನಿಯ ವಾರ್ಷಿಕ ವಹಿವಾಟು ಐವತ್ತು ಲಕ್ಷಕ್ಕೂ ಮಿಕ್ಕಿದೆಯೇ? " ಇದಿಷ್ಟೇ ಮೌಲ್ಯಮಾಪನ ಸಾಕೇ? ಕಂಪನಿಯಲ್ಲಿ ಕೆಲಸಕ್ಕೆ ಇರುವ ಎಂಜಿನೀಯರ್ ಗಳೆಷ್ಟು? ಕಂಪನಿಯನ್ನು ನಡೆಸುವವರ ಸ್ವಾನುಭವವೆಷ್ಟು? ಕಂಪನಿಯಿಂದ ನಿಭಾಯಿಸಲ್ಪಟ್ಟ ಜವಾಬ್ದಾರಿಯುತ ತಾಂತ್ರಿಕ ಕೆಲಸಗಳೆಷ್ಟು? -ಇಂತಹ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಬಳಸಿದ್ದರೆ ಒಳ್ಳೆಯದಿತ್ತು. ಮೌಲ್ಯಾಧಾರಿತವಾಗಿ ಹೊರಗುತ್ತಿಗೆ ನೀಡುವಾಗ ಗುತ್ತಿಗೆ ಪಡೆಯುವ ಕಂಪನಿಗೂ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳುವ ಸೌಜನ್ಯ ಇದ್ದರೆ ಒಳ್ಳೆಯದಾಗಿತ್ತು.

ಬಹುತೇಕ ಎಸ್.ಬಿ.ಐ ಶಾಖೆಗಳು ಮತ್ತು ಇನ್ನಿತರ ಕೆಲವು ಸಂಸ್ಥೆಗಳ ಗಣಕಯಂತ್ರಗಳ ಭೌತಿಕಕಾಯಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಅತಿ ಕಡಿಮೆ ಮೊತ್ತಕ್ಕೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆ ’ಪಟ್ನಿ ಕಂಪ್ಯೂಟರ್ ಸರ್ವಿಸಸ್’. ಒಂದುಕಾಲಕ್ಕೆ ಐಐಟಿಯಿಂದ ಹೊರಬಿದ್ದ ಎಂಜಿನೀಯರ್ ಗಳಾದ, [ಇನ್ಫಿಸಂಸ್ಥಾಪಕ] ನಾರಾಯಣ ಮೂರ್ತಿ ಮೊದಲಾದವರು ಪಟ್ನಿಯಲ್ಲಿ ಕೆಲಸಮಾಡಿದವರಾಗಿದ್ದಾರೆ. ಪಿ.ಸಿ.ಎಸ್ ಎಂದು ತನ್ನದೇ ಬ್ರಾಂಡ್ ಹಾಕಿ ಗಣಕಯಂತ್ರವನ್ನೂ ಮಾರುಕಟ್ಟೆಗೆ ಬಿಟ್ಟಿದ್ದ ಪಿ.ಸಿ.ಎಸ್. ಹಾರ್ಡವೇರ್ ಮೂಲ ಬೆಲೆಗೆ ೪ ಪ್ರತಿಶತ ವೆಚ್ಚದಲ್ಲಿ ಹಾರ್ಡವೇರ್ ಸಮಸ್ಯಾಪೂರಣಕ್ಕೆ ಹೊರಗುತ್ತಿಗೆ ನಿಭಾಯಿಸುತ್ತಿತ್ತು ಎಂಬುದು ಒಳಗಿನ ಮೂಲಗಳಿಂದ ನಮಗೆ ಈ ಮೊದಲೇ ತಿಳಿದುಬಂದಿತ್ತು. ಪಿ.ಸಿ.ಎಸ್. ಅವಸಾನದ ಹಾದಿ ಹಿಡಿದಿದೆ ಎಂದು ನಾನು ೭ ವರ್ಷಗಳ ಹಿಂದೆಯೇ ಕೆಲವರಲ್ಲಿ ಹೇಳಿದ್ದೆ ಕೂಡ! ಇದು ಮತ್ಸರದಿಂದ ಹೇಳಿದ್ದಲ್ಲ ಬದಲಾಗಿ ಸನ್ನಿವೇಶವನ್ನು ವಿವೇಚಿಸಿ ಹೇಳಿದ ಮಾತಾಗಿತ್ತು. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೇ ಸ್ಕಿಲ್ಡ್ ಎಂಜಿನೀಯರ್ ಗಳ ಸಂಬಳದಲ್ಲಿ ಹೆಚ್ಚಳವನ್ನು ಮಾಡಲೇಬೇಕಿತ್ತು. ಕೆಟ್ಟುಹೋಗ ಬಹುದಾದ ಹಾರ್ಡವೇರ್ ಬಿಡಿಭಾಗಗಳನ್ನು ಅಗತ್ಯಕ್ಕನುಸಾರವಾಗಿ ಮೊದಲೇ ಕಾಯ್ದಿರಿಸಿ ದಾಸ್ತಾನು ಇಟ್ಟುಕೊಳ್ಳಬೇಕಾಗುತ್ತಿದ್ದು, ಕೆಲವೊಮ್ಮೆ ಅವು ಬಳಕೆಯಾಗದಿದ್ದ ಪಕ್ಷದಲ್ಲಿ ವಿನಾಕಾರಣ ಹಣ ಪೋಲಾದಂತಾಗುತ್ತಿತ್ತು.

ಕೆಲಸಗಾರರ ಓಡಾಟದ ಖರ್ಚು, ಅಲ್ಲಲ್ಲಿ ವಸತಿಯ ಖರ್ಚು ಹೀಗೇ ತಗಲುವ ಮೂಲ ವೆಚ್ಚಕ್ಕೂ ಒಪ್ಪಿಕೊಂಡ ವೆಚ್ಚಕ್ಕೂ ಬಹಳ ಅಂತರವೇರ್ಪಡುತ್ತಿತ್ತು, ಪ್ರತೀವರ್ಷವೂ ಬ್ಯಾಂಕುಗಳು ಹೇರಳ ಲಾಭಗಳಿಸಿದವೇ ಹೊರತು ಪಿ.ಸಿ.ಎಸ್. ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಹೊಳೆದಾಟಿದಮೇಲೆ ಅಂಬಿಗನ ಹಂಗು ಅವರಿಗೇಕೆ ಪಾಪ! ಸತತ ಹತ್ತೆಂಟು ವರ್ಷ ಪಿ.ಸಿ.ಎಸ್. ನಷ್ಟದಲ್ಲೇ ತನ್ನ ಸೇವೆಯನ್ನು ನಡೆಸಿಕೊಟ್ಟಿತಾದರೂ ಕೆಲಸವಿಲ್ಲದ ಕೈಗೆ ಕೆಲಸಪಡೆಯುವ ಹುನ್ನಾರದಲ್ಲಿ ತನ್ನನ್ನೇ ತಾನು ನಷ್ಟಕ್ಕೆ ಗುರಿಮಾಡಿಕೊಂಡಿತು. ಮೇಲಾಗಿ ಈ ಕಂಪ್ಯೂಟರ್ ಹಾರ್ಡವೇರ್ ಎನ್ನುವುದನ್ನು ಯಾರ್ಯಾರೋ ಮಾರ್ವಾಡಿಗಳು ತಮ್ಮ ವ್ಯಾಪಾರೀಕರಣಕ್ಕೆ ಬಳಸಿಕೊಂಡರು. ಫ್ಯಾಕ್ಟರಿ ಸೆಕೆಂಡ್ಸ್ ತೆಗೆದುಕೊಂಡು ಅದನ್ನು ಮಿಶ್ರಣಮಾಡಿ ಗ್ರೇ ಮಾರುಕಟ್ಟೆಯಲ್ಲಿ ಮಾರಾಟಮಾಡುತ್ತಾ ಹಾರ್ಡವೇರ್  ಮೌಲ್ಯವನ್ನೇ ಕಳೆದರು. ಎಷ್ಟೋ ಮಂದಿ ಹಾರ್ಡವೇರ್ ತಯಾರಕರು ಇದರಿಂದ ಕೈಸುಟ್ಟುಕೊಂಡು ದಂಧೆಯನ್ನೇ ಬಿಟ್ಟು ನಡೆದರು. ಹೀಗಿದ್ದೂ ಗಣಕಯಂತ್ರ ಹಾರ್ಡವೇರ್  ಮತ್ತು ಸೇವೆಗಳ ಕುರಿತಂತೇ ಸರಿಯಾದ ಅಸೋಶಿಯೇಶನ್ ಯಾವುದೂ ಅಸ್ಥಿತ್ವದಲ್ಲಿ ಬರಲಿಲ್ಲ. ಇರುವ ಸಂಘಟನೆ ಕೇವಲ ಸರಕಾರದ ತೆರಿಗೆ ಇತ್ಯಾದಿ ಸಮಸ್ಯೆಗಳ ಕುರಿತು ಚಿಂತಿಸುತ್ತದೆಯೇ ವಿನಃ ದರದಲ್ಲಿ  ಏಕರೂಪ ಅಥವಾ ಸೇವಾಶುಲ್ಕದಲ್ಲಿ ಏಕರೂಪ ಕೊಡುವುದು ಅವರಿಗೆ ಸಾಧ್ಯವಾಗಲಿಲ್ಲ. ಇದನ್ನೇ ಬಳಸಿಕೊಂಡ ಬ್ಯಾಂಕ್ ನಂತಹ ಸಂಸ್ಥೆಗಳು ಯಾರು ಕಮ್ಮಿಗೆ ಮಾಡಿಕೊಡುತ್ತಾರೋ ಅವರಿಗೇ ನಮ್ಮ ಆದೇಶ ಎಂಬುದಾಗಿ ಹೇಳಿದರು. ಆರಂಭಶೂರತನದಲ್ಲಿ ಪಿ.ಸಿ.ಎಸ್. ಮುಂಚೂಣಿಯಲ್ಲಿತ್ತು; ತಡೆದುಕೊಳ್ಳಲಾರದೇ ಈಗ ಅದು ನೆಗೆದುಬಿತ್ತು.

ಲುಕ್ಸಾನಿನಲ್ಲಿದ್ದ ಪಿ.ಸಿ.ಎಸ್ ಸಂಸ್ಥೆಗೆ ಸೇವೆಯನ್ನು ಬಹುತೇಕ ಬಿಟ್ಟಿಯಾಗೇ ಪಡೆದ ಎಸ್.ಬಿ.ಐ. ಸಾಲಕೊಡಲು ಮುಂದಾಗಲಿಲ್ಲ; ಸಾಲಪಡೆಯುವ ಇಚ್ಛೆಯಾಗಲೀ, ಇದೇ ರಂಗದ ಆದಾಯದಿಂದ ಪಡೆದಸಾಲವನ್ನು ಮರುಪಾವತಿಸುವ ಭರವಸೆಯಾಗಲೀ ಪಿ.ಸಿ.ಎಸ್. ಸ,ಸ್ಥೆಗೂ ಇರಲಿಲ್ಲ. ಹೇಳುವುದು ಸುಲಭ; ನಡೆಸುವುದು ಕಷ್ಟ ಎಂಬುದನ್ನು ನಾನು ಹಲವುಸರ್ತಿ ಹೇಳುತ್ತಿರುತ್ತೇನೆ. ಇಲ್ಲಿಯೂ ಕೂಡ ಹಾಗೇ ಪಿ.ಸಿ.ಎಸ್ ನವರು ಆರಾಮಾಗಿ ನಿಭಾಯಿಸಬಹುದಿತ್ತು ಎಂದು ಹೇಳಿಬಿಡಬಹುದು ಆದರೆ ಅದರಲ್ಲಿ ನಾವೂ ಭಾಗೀದಾರರಾಗಿದ್ದಲ್ಲಿ ಮಾತ್ರ ನಿಭಾಯಿಸುವ ಕಷ್ಟದ ಅರಿವಾಗುತ್ತದೆ. ಭಾಗಶಃ ಹಾರ್ಡವೇರ್ ರಂಗದಲ್ಲೇ ತೊಡಗಿಕೊಂಡು ಅದನ್ನು ಪಕ್ಕಕ್ಕಿರಿಸಿ ಬೇರೇ ಬೇರೇ ಉದ್ಯಮಗಳಲ್ಲಿ ತೊಡಗಿಕೊಂಡ ನಮಗೆ ಅಲ್ಲಿ ಘಟಿಸಬಹುದಾದ ಇಂಚಿಂಚಿನ ಅನುಭವ ಮತ್ತೆ ನೆನಪಿಗೆ ಬರುತ್ತದೆ. ಅಫ್ ಕೋರ್ಸ್ ಇಟ್ ಈಸ್ ಎ ಥ್ಯಾಂಕ್ ಲೆಸ್ ಜಾಬ್ ! ಹಾರ್ಡವೇರ್ ರಂಗದಲ್ಲಿ ನೂರಾರು ವರ್ಷ ಕೆಲಸಮಾಡಿದರೂ ಯಾರೊಬ್ಬರೂ ಕೃತಜ್ಞತೆ ಹೇಳುವುದಿಲ್ಲ, ಮೈ ಪೂರ್ತಿ ದುಡಿದು ಹಣ್ಣಾಗಿ ಹುಣ್ಣದರೂ ತಲೆಯಲ್ಲಿ ಮತ್ತೊಂದಷ್ಟು ಹುಣ್ಣಿರುತ್ತದೆ ಬಿಟ್ಟರೆ ಆರ್ಥಿಕವಾಗಿ ಯಾವುದೇ ನಂಬಲರ್ಹ ಆದಾಯವನ್ನು ತಂದುಕೊಡುವ ರಂಗ ಅದಲ್ಲ.

ಜಾಗತಿಕ ಆರ್ಥಿಕ, ತಾಂತ್ರಿಕ ಮತ್ತು ವಿಜ್ಞಾನ ರಂಗಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಜಾಗತಿಕ ಜನಸಂಖ್ಯೆಯೂ ಜಾಸ್ತಿಯಾಗುತ್ತಿದ್ದು ಪ್ರತಿಯೊಂದೂ ರಂಗದಲ್ಲಿ ಪೈಪೋಟಿ ಇದ್ದೇ ಇದೆ. ಕೇವಲ ಪೈಪೋಟಿಗಾಗಿ ಪೈಪೋಟಿ ಎನ್ನುತ್ತಾ ಆಮೇಲೆ ಮಕಾಡೆಮಲಗುವ ದಂಧೆಗಳನ್ನು ಆರಂಭಿಸಿ ಪೇಲವ ಮುಖಹೊತ್ತು ವಿಷಾದಕರವಾಗಿ ಮಾತನಾಡಿಕೊಳ್ಳುವುದರ ಬದಲು ಮೊದಲೇ ಅವಲೋಕನ ನಡೆಸಿ ಸರಿಯಾದ ಮಾರ್ಗದಲ್ಲಿ ಕ್ರಮಿಸುವುದು ಒಳ್ಳೆಯದು. ಪೈಪೋಟಿ ಇರಲಿ, ಅದು ಆರೋಗ್ಯಕರವಾಗಿರಲಿ ಎಂಬುದು ನನ್ನ ಅನಿಸಿಕೆ. ಅನಾರೋಗ್ಯಕರ ಪೈಪೋಟಿ ಬಂದ ಲಕ್ಷಣ ಗೋಚರಿಸುತ್ತಿರುವಂತೆಯೇ ಉದ್ದಿಮೆದಾರರು ತಮ್ಮ ಉದ್ದಿಮೆಯ ದಿಕ್ಕು-ದೆಸೆಗಳನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಆಗ ಯಾರೂ ವಿಷಾದಪಡಬೇಕಾದ ಬಾಗಿಲುಹಾಕಬೇಕಾದ ಅನಿವಾರ್ಯತೆ ಬರುವುದಿಲ್ಲ; ಬಾಗಿಲು ಬದಲಾಯಿಸಬೇಕಾಗಿ ಬರಬಹುದೇ ಹೊರತು ನೊಂದುಕೊಳ್ಳುವ ಬೇಸರದ ಛಾಯೆ ಕಾಡುವ ಪ್ರಮೇಯ ಇರುವುದಿಲ್ಲ.