ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 18, 2011

ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ


ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ

" ಸಂಭೋ ಮಹಾದೇವ ! ಯುಗಧರ್ಮಗ್ಗೆ ತಗ್ಗಂತೇ ಎಲ್ಲವೂ ನಡೆಯಬೇಗಲ್ಲವೇ ? ಅದಗ್ಗೇ ನಿಮ್ಮ ಮನೆಯಲ್ಲಿ ಮಣಿಪ್ರಾಬ್ಲಂ, ಅನಾರೋಕ್ಯ, ಹಿಡಿದ ಗೆಲಸಗಳು ಆಕದೇ ಇರುವಂತದು, ಪೆಣ್ಣು-ಗಂಡು ಸಮಸ್ಯಾ, ಸಂತಾನಹೀನ ಸಮಸ್ಯಾ, ಸ್ತ್ರೀ ವಶೀಗರಣಂ, ಬ್ಯುಸಿನೆಸ್ಸಲ್ಲು ಧನಾಗಮಂ, ಜನವಶೀಗರಣಂ, ವಾಸ್ತುದೋಸ ನಿವಾರಣಂ ಹೀಗೇ ಹಲವು ಸಮಸ್ಯಾ ತಕ್ಕೊಂಡು ನಮ್ಮಲ್ಲಿ ಪರಿಯಾರವಕ್ಕುಂ.....ಇದು ಮಳಯಾಳೀ ಕುಟ್ಟಿಚ್ಚಾತ್ತನ್ ಸಗಾಯದಿಂದ ಪರಂಪರಾ ವಂದಿದ್ದು "

ನಗಲಿಕ್ಕೆ ಏನಿದೆ ಹೇಳಿ? ಎದುರು ಕುಳಿತ ಪ್ರಶ್ನಾರ್ಥಿ ದಂಗು ಬೀಳಬೇಕು! ಅಷ್ಟು ಅಚ್ಚ ಕನ್ನಡದಲ್ಲಿ ನಮ್ಮ ಕೇರಳದ ಲ್ಯಾಪ್ ಟಾಪ್ ಜ್ಯೋತಿಷಿಗಳು ಮಾತನಾಡುತ್ತಾರೆ. ಅವರು ಆರಾಧಿಸದೇ ಬಿಟ್ಟ ದೇವರು ಯಾವುದೋ ಇರಲಿಕ್ಕಿಲ್ಲ. ಬೇಕಾದರೆ ಅವರನ್ನೇ ಕೇಳಿ :

" ಹೌದು ಹೌದು ಪಚ್ಚವಳ್ಳ ಕುಳಕಿ ಗುರುವಾಯೂರಪ್ಪನ್ ಸಬರಿಮಲೈ ಅಯ್ಯಪ್ಪ ಸ್ವಾಮಿಗಳ್ ಬಾಲಾಂಜನೇಯ ದೇವಿ ಕಾಳಿಕಾ ದುರ್ಗಾ ಮೂಕಾಂಬಾ ಸತಕೋಟಿ ದೇವರುಗಳ್ ಯಂಗಳ ಆರಾಧನೆ ........."

ಓಹೊಹೊಹೋ ಸಾಕು ಸ್ವಾಮೀ ಸಾಕು, ಗೊತ್ತಾಯ್ತು ಬಿಡಿ, ನಿಮ್ಮಷ್ಟು ಭಾಗ್ಯವಂತರು ಯಾರು ಹೇಳಿ. ಎದುರಿಗೆ ಕುಳಿತಾಗ ನೀವು ದೂಸರಾ ಮಾತೇ ಆಡೋಹಾಗಿಲ್ಲ! ಎಲ್ಲವೂ ಮಂತ್ರಮಯ. ನಿಮಗೆ ಏನಾಗಬೇಕು ಹೇಳಿ, ಎಲ್ಲವೂ ಆಗುತ್ತದೆ. ಯಾರಾದ್ರೂ ಹೋದವರನ್ನು ಬದುಕಿಸಿಕೊಡಿ ಎಂದರೆ ಮಾತ್ರ ಸಾಧ್ಯವಾಗಲಿಕ್ಕಿಲ್ಲ, ಮಿಕ್ಕಿದ್ದೆಲ್ಲಾ ಸಾಧ್ಯ ಎನ್ನುತ್ತಾರೆ ಈ ಜ್ಯೋತಿಷಿಗಳು. ಅವರು ದಿನವೂ ದೇವರುಗಳ ಜೊತೆ ಮಾತನಾಡಬಲ್ಲ ಮಹಾಮಹಿಮರು. ಅದರಲ್ಲೂ ಮಳಯಾಳೀ ಕುಟ್ಟಿಚ್ಚಾತ್ತನ್ ಅವರ ಕೈಗೊಂಬೆಯ ಥರ ಆಗಿಬಿಟ್ಟಿದ್ದಾನೆ !

" ಗುರುಕ್ಕಳೇ ಯಂಗಳ್ ಗರ್ಣಾಟಗ ಬಿಜೇಪಿ ಸರಗಾರ ಉಳಿಯುತ್ತದೆಯೋ ? ಹೇಳಿ "

" ಆಯ್ಯಯ್ಯೋ ನಿಲ್ಲಿ ನಿಲ್ಲಿ ನಮ್ಮ ಕುಟ್ಟಿಚ್ಚಾತ್ತನ್ ಎಲ್ಲೋ ಹೋಗಿದ್ದಾರೆ [ಆಫ್ ಲೈನ್ ? ] ಅವರು ವಂದಮೇಲೆ ಉತ್ತರ ಗೇಳುತ್ತಾರೆ. ಕೊರ್ಚ ಸಮಯಂ ...................."

" ಸಮಯವೇ ಅದು ಮಾತ್ರ ಸಾಧ್ಯವೇ ಇಲ್ಲ, ನಮಗೆ ಅದೇ ಕುತೂಹಲ ಗುರುಕ್ಕಳೇ .... ಕೊರ್ಚ ಬೇಗಂ "

" ಎಂದು ಮಾರಾಯರೆ ನಿಂಗಳ್ ಅರ್ಜೆಂಟು ಮಾಡವೇಂಡ ... ಕುಟ್ಟಿಚ್ಚಾತ್ತನ್ ಕೋಪ ಬರ್ತಾರೆ "

" ನಮ್ಮ ಪುಟ್ಸಾಮಿಗೆ ಮಕ್ಳಿಲ್ಲ ಏನಾದ್ರೂ ಮಾಡ್ಕೊಡ್ತೀರಾ ? "

" ಹೋ ಹೋ ....ನಮ್ಮಿಂದ ಎಷ್ಟು ಮಗು ಹುಟ್ಟಿಲ್ಲ .....ಎಂತೆಂತಾ ಪೀಪಳ್ಗೆಲ್ಲಾ ಮಕ್ಕಳು ಮಾಡಿತ್ತು ನಾವು ..ನಿಮಕ್ಕೆ ಇಲ್ಲಾ ಎನ್ನುವುದೋ ? ಆದರೆ ಒಂದು ವಿಷಯಂ .....ಕೊರ್ಚ ಹೈ ಎಕ್ಸ್‍ಪೆಂಡಿಚರ್ ......ಮೂರು ದಿನ ೭೨ ಹವರು ಏಗಾಂತ ಪೂಜಾ....೧೦೧ ತೆಂಗಿನಗಾಯಿ ಗಳಸಂ, ವಸ್ತ್ರಂ, ಪಂಚಕಾಳೀ ಪೂಜಾ, ಭೋಜನಂ, ಕುಟ್ಟಿಚ್ಚಾತ್ತನ್ ಪೂಜಾ ...ಎರ್ಲಿ ಮಾರ್ನಿಂಗು ಪಚ್ಚವಳ್ಳ ಕುಳಿಕಿ ಆಯಿ ತದನಂತರಂ ಪೂಜಾ ....ಮನಸಿಲಾಯೋ ? "


" ಆಗ್ಲಿ ಬಿಡಿ ಅಷ್ಟೇ ತಾನೇ ಆತ ಕೊಡ್ತಾನೆ. ಖರ್ಚಿಗೆಲ್ಲಾ ತೊಂದರೆ ಇಲ್ಲಬಿಡಿ ಗುರುಕ್ಕಳೇ .... ಹಾಂ ಇನ್ನೊಂದು ನಾನು ಒಂದು ಪಕ್ಷ ಕಟ್ಟಬೇಕೆಂದಿದ್ದೇನೆ. ಅದಕ್ಕೆ ನಾನು ರಾಷ್ಟ್ರಾಧ್ಯಕ್ಷ ಮತ್ತು ನನ್ನ ಮಗ [ ಇನ್ನೂ ೪-೫ ವರ್ಷ ವಯಸ್ಸು ಈಗಲೇ ತಯಾರುಮಾಡಿದರೆ ಮುಂದೆ ಸರ್ ಹೋಗ್ತದೆ ಅದಕ್ಕೇ] ರಾಜ್ಯಾಧ್ಯಕ್ಷ .....ಹೇಗೆ ನಮ್ಮ ರಾಜಕೀಯ ಭವಿಷ್ಯ ಚೆನ್ನಾಗಿದೆಯಾ ? "

" ಕುಟ್ಟಿಚ್ಚಾತ್ತನ್ ಒಂದು ಸಲ ಒಂದೇ ಸಮಸ್ಯಾಗೆ ಪರಿಗಾರ ಹೇಳುತ್ತಾನೆ.....ತಮ್ಮ ಈ ಸಮಸ್ಯಾ ನಾಳೆ ಗೇಳುತ್ತೇನೆ"

ಆಯ್ತು ಸ್ವಾಮೀ ನಿಮ್ಮ ಕುಟ್ಟಿಚ್ಚಾತ್ತನ್ ಅದ್ಯಾವಾಗ ಆನ್‍ಲೈನ್ ಬರುತ್ತಾನೋ ಆಗ್ಲೇ ಹೇಳಿ ಪರವಾ ಇಲ್ಲ. ಸದ್ಯ ಇಲ್ಲಿಗೆ ಬಿಟ್ಟಿರಲ್ಲ ಎಂದು ಎದ್ದುಬರಬೇಕಾಗುತ್ತದೆ. ಇಂತಹ ಹಲವು ಕುಟ್ಟಿಚ್ಚಾತ್ತನ್‍ಗಳು ನಗರದ ತುಂಬ ಅಲ್ಲಲ್ಲಿ ಠಿಕಾಣಿಹೂಡಿ ಹಲವು ರೀತಿಯಲ್ಲಿ ತಮ್ಮ ಬೇಳೇ ಬೇಯಿಸಿಕೊಳ್ಳುತ್ತಿರುತ್ತಾರೆ. ಅಸಲಿಗೆ ಅವರ ಸಮಸ್ಯೆಗಳಿಗೇ ಅವರಲ್ಲಿ ಉತ್ತರವಿರುವುದಿಲ್ಲ! ಆದರೂ ಹಲವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಕೂತಿರುತ್ತಾರೆ.

ಮೊದಲೇ ರಮಲಜ್ಯೋತಿಷ್ಯ, ಕಮಲಜ್ಯೋತಿಷ್ಯ, ಫಲಜ್ಯೋತಿಷ್ಯ, ವೈಜ್ಞಾನಿಕ ಜ್ಯೋತಿಷ್ಯ, ಅಷ್ಟಮಂಗಲ ಭವಿಷ್ಯ, ಹಕ್ಕಿಶಕುನ, ಹಸ್ತಸಾಮುದ್ರಿಕ, ನಾಡೀ ಜ್ಯೋತಿಷ್ಯ, ಸಂಖ್ಯಾ ಶಾಸ್ತ್ರ, ಕುಡಿದ ಕಾಫೀ ಕಪ್ಪು ನೋಡಿ ಭವಿಷ್ಯ, ದರ್ಪಣಶಾಸ್ತ್ರ, ಟೆರೋಟ್ ಕಾರ್ಡ್ ರೀಡಿಂಗ್ ಒಂದೇ ಎರಡೇ ಇನ್ನೂ ಹಲವಾರು ನಮ್ಮ ಹುಚ್ಚಿಗೆ ತಕ್ಕಂತೇ ಲಭ್ಯವಿವೆ. ಜೇಬುಗಟ್ಟಿ ಇದ್ದರೆ ಮಜಾತೆಗೆದುಕೊಳ್ಳಬಹುದು!ಈ ಎಲ್ಲರಲ್ಲೂ ಬಹುತೇಕವಾಗಿ ಸರ್ವೇ ಸಾಮಾನ್ಯವಾಗಿ ಸಿಗುವ ಒಂದು ವಸ್ತುವೆಂದರೆ ಲ್ಯಾಪ್ ಟಾಪ್! ವಿಪರ್ಯಾಸವೆಂದರೆ [ ಇದಿಷ್ಟೂ ಜನ ಕುಳಿತಲ್ಲೇ ಕಾಸುಮಾಡುವ ಕಲೆಯನ್ನು ಕಲಿತ ನಿಪುಣರಾಗಿರುತ್ತಾರೆಯೇ ವಿನಃ ಯಾವುದೂ ಪ್ರಯೋಜನಕ್ಕೆ ಬರುವಂತಹುದಲ್ಲ. ] ಅಸಹಾಯಕತೆಯಲ್ಲಿ ತೊಳಲಾಡುತ್ತಿರುವವರೇ ಇವರ ಗಿರಾಕಿಗಳಾಗಿದ್ದು ತಿಗಣೆ ರಕ್ತಹೀರುವಹಾಗೇ ತೊಂದರೆಯೆಂದು ಬಂದ ಜನರ ಮಾನಸಿಕ ಸ್ಥಿತಿ ಮತ್ತು ಅವರ ಆರ್ಥಿಕಸ್ಥಿತಿಯನ್ನು ಆಮೂಲಾಗ್ರ ಒಂದೇ ಸಿಟ್ಟಿಂಗ್‍ನಲ್ಲಿ ಅಳೆಯುವ ಅವರು ಯಾರಿಂದ ಹೇಗೆ, ಯಾವಾಗ, ಎಲ್ಲಿ, ಎಷ್ಟುದುಡ್ಡು ಪೀಕಬೇಕೆಂಬುದನ್ನು ಗುರುತಿಸಬಲ್ಲವರಾಗಿರುತ್ತಾರೆ. ಇತ್ತೀಚೆಗೆ ಇಂತಹ ಲಕ್ಷಾಂತರ ಭೋಗಸ್ ಜ್ಯೋತಿಷಿಗಳಿಂದ,ವಾಸ್ತು ತಜ್ಞರಿಂದ ಮಧ್ಯಮವರ್ಗದವರ ಸಮಸ್ಯೆಗಳು ಇನ್ನೂ ಬಿಗಡಾಯಿಸುತ್ತಿವೆ, ಹಲವು ಪ್ರದೇಶ ಹಡಾಲೆದ್ದು ಮೂಢವಾಗಿಹೋಗಿದೆ.

-----------

ಪಕ್ಕದ ಮನೆಯ ಪಾರ್ವತಿ ಮೆನನ್ ಹೊಸದಾಗಿ ಕನ್ನಡ ಕಲಿಯುತ್ತಿದ್ದರು. ಬೆಳಿಗ್ಗೆ ಎದುರಾದವರನ್ನು ಮಾದಕ್ಕ ಕೇಳಿದಳು " ಅಕ್ಕಾ ತಿಂಡಿ ಆಯ್ತಾ ? "

ಪಾರ್ವತಿ ಮೆನನ್ ಉತ್ತರ " ಇಲ್ಲ ಇಲ್ಲ ನಿನ್ನೆ ರಾತ್ರಿ ಮಲಗುವಾಗ ಒಂದುಗಂಡ ಬೆಳಿಗ್ಗೆ ಏಳುವಾಗ ಎಂಟುಗಂಡ, ಅದಕ್ಕೇ ಲೇಟು "


------------

ಇನ್ನು ಎಂ.ಜಿ.ಎಲ್ ಟೆಕ್ನಾಲಜಿ ! ಇದೊಂದು ಪ್ರಪಂಚದಲ್ಲೇ ಹೊಸದಾಗಿ ಸಂಶೋಧಿಸಲ್ಪಟ್ಟ ಟೆಕ್ನಾಲಜಿ! ಎಂ.ಜಿ.ಎಲ್ ಎಂದರೆ ’ ಮೆಕಾನಿಕಲ್ ಗ್ರಾಸ್ ಲಾಕ್’ ಎಂದು ಅದರ ವಿಸ್ತಾರರೂಪ. ಈ ಟೆಕ್ನಾಲಜಿಯನ್ನು ಪೊರಕೆಯೊಂದರಲ್ಲಿ ಬಳಸಲಾಗಿದೆ! ಅಬ್ಬಬ್ಬ ಅದೇನು ಅಂತೀರೋ ನಿಧಾನವಾಗಿ ಕೇಳಿ: ಸ್ವಾತಂತ್ರ್ಯ ಪೂರ್ವದಲ್ಲಿ ಪೊರಕೆ [ಹಿಡಿಕಟ್ಟು] ಅಥವಾ ಕಸಪೊರಕೆಗಳಿಗೆಲ್ಲಾ ಯಾವುದೇ ಬ್ರಾಂಡ್ ಇರಲಿಲ್ಲ. ಇದನ್ನು ಸ್ವಾತಂತ್ರ್ಯ ಬಂದ ೪೦-೪೫ ವರ್ಷಗಳ ವರೆಗೂ ಯಾರೂ ಲೆಕ್ಕಿಸಲೇ ಇಲ್ಲ. ಮುಂದೆ ಹೀಗೇ ಬಿಟ್ಟರೆ ಪೊರಕೆಗಳ ಘನತೆಗೆ ಕುಂದುಂಟಾಗುತ್ತದೆಂದೂ ಹಿಂದುಳಿದ ತರಗತಿಯಲ್ಲಿರುವ ಪೊರಕೆಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಒಂದೆರಡು ಜನ ಪಂಡಿತರು ಅವುಗಳಿಗೆ ಬ್ರಾಂಡ್ ನೀಡಿದರು.

ದಿನಗಳೆದಂತೇ ಅವುಗಳ ಮರ್ಯಾದೆಗೆ ತಕ್ಕನಾಗಿ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಪ್ಯಾಕಿಂಗ್ ಮಾಡಲಾಯಿತು. ಹಾಗೆ ಪ್ಯಾಕ್ ಮಾಡಲ್ಪಟ್ಟ ಪೊರಕೆಗಳು ರಾಜ್ಯಾದ್ಯಂತ ತಿರುಗಾಡ ಹತ್ತಿದವು! ಮಾರಾಟ ಭರಾಟೆ ಜಾಸ್ತಿಯಾದಾಗ ಮೂಲವಸ್ತುಗಳಲ್ಲಿ ಒಂದನೆಯದು ಹುಲ್ಲಿನಥರದ ಮರದ ಟೊಂಗೆಗಳು ಮತ್ತೊಂದು ಉತ್ತಮ ಪ್ಲಾಸ್ಟಿಕ್ ಹಿಡಿಕೆ ಇವೆರಡರ ಗುಣಮಟ್ಟದಲ್ಲೂ ಕಳಪೆ ದರ್ಜೆ ಕಾಣಹತ್ತಿತ್ತು. ಬಲಿಯದ ಮರಗಳ ಎಳೆಯ ಟೊಂಗೆಗಳನ್ನು ಕತ್ತರಿಸಿ ಹಸಿಯಿರುವಾಗಲೇ ಅವುಗಳನ್ನು ಕಟ್ಟಿ ಒಂದೊಂದು ಹಿಡಿಕೆಯಲ್ಲಿ ಅವುಗಳನ್ನು ತೂರಿಸಿ ಆಮೇಲೆ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿಪ್ಯಾಕ್ ಮಾಡಿ ಸರಬರಾಜು ಮಾಡಲಾಯಿತು. ಮಾಧ್ಯಮಗಳಲ್ಲಿ ಜೋರಾಗಿ ಜಾಹೀರಾತು ನೀಡಲಾಯಿತು! ಜನ ಕೊಂಡೇ ಕೊಂಡರು!

ಕೊಂಡುತಂದ ಪೊರಕೆ ಕಾಸಿಗೆ ಸರಿಯಾದ ಮೌಲ್ಯವನ್ನು ಒದಗಿಸದಾಗ ಜನ ಅದನ್ನು ದೂರಹತ್ತಿದರು. ನಿಜಕ್ಕೂ ಹೇಳಲೋ ನಮ್ಮ ಹಳ್ಳಿಗಳಿಂದ ತಯಾರಾಗಿ ಬರುವ ತೆಂಗಿನಕಡ್ಡಿ ಪೊರಕೆ, ಅಡಿಕೆಸೋಗೆ ಕಡ್ಡಿ ಪೊರಕೆ, ಅಂಚಿಕಡ್ಡಿ ಪೊರಕೆ ಇವೆಲ್ಲಾ ಸಾಕಷ್ಟು ಇದ್ದರೂ ಜನರಿಗೆ ಈ ಹೊಸರೂಪದ ಪೊರಕೆ ಕ್ರಾಂತಿಕಾರಿಯಾಗಿ ಕಂಡಿತು! ಕಸದಮೇಲೆ ಎಷ್ಟೇಸಲ ಕ್ರಾಂತಿಯ ಕಹಳೆ ಮೊಳಗಿದರೂ ಕಸಮಾತ್ರ ಹಾಗೇ ಉಳಿಯ ಹತ್ತಿತು. ಜೊತೆಗೆ ಬ್ರಾಂಡೆಡ್ ಪೊರಕೆಯೇ [ಆರಂಭದಲ್ಲಿ ಚೆನ್ನಾಗಿ ಝಾಡಿಸಿ ಆಮೇಲೆ ಬಳಸಿದರೂ ಸಹ] ಸ್ವಯಂ ಧೂಳನ್ನು ಉಗುಳಹತ್ತಿತು. ಎಷ್ಟೋ ಕಡ್ಡಿಗಳು ಮಧ್ಯೆ ಮಧ್ಯೆ ತುಂಡಾಗುತ್ತಿದ್ದವು. ಕೆಲವೊಮ್ಮೆ ಹಿಡಿಕೆ ಕಳಚಿ ಪೊರಕೆಯ ಬುಡ ಹೊರಗೆಬಂದು ಕ್ಯಾಬರೇ ಡ್ಯಾನ್ಸ್ ಮಾಡಹತ್ತಿತು! ಕೂದಲು ಉದುರಿ ಕೆಲವಷ್ಟೇ ಉಳಿದಮೇಲೆ ನವಿಲುಕೋಸಿನ ಥರಾ ಕಾಣೋ ತಲೆಯಂತೇ ಕಡ್ಡಿಗಳ ತುದಿ ಮುರಿಮುರಿದು ಮೊಂಡಾಗಿ ಖರೀದಿಸಿದ ಮೂರೇ ದಿನದಲ್ಲಿ ಪೊರಕೆಗಳು ಬಿಕನಿ ತೊಟ್ಟವು!

ಇಷ್ಟರಲ್ಲೇ ಬೇಸತ್ತ ಯಾವನೋ ಒಬ್ಬ ಹೊಸದೊಂದು ಅಚ್ಚುತಯಾರಿಸಿಕೊಂಡು ಸಂಪೂರ್ಣ ಪ್ಲಾಸ್ಟಿಕ್ ಪೊರಕೆಯನ್ನು ಮಾರುಕಟ್ಟೆಗೆ ತಂದ. ಆರಂಭದಲ್ಲಿ ಕೆಲವು ನ್ಯೂನತೆಗಳಿದ್ದರೂ ಕ್ರಮೇಣ ತಿದ್ದುಪಡಿಗೊಂಡ ಆವಿಷ್ಕಾರಗಳಲ್ಲಿ ಆ ಪ್ಲಾಸ್ಟಿಕ್ ಪೊರಕೆಗಳು ಬರಹತ್ತಿದವು. ಜನ ಈಗ ಅವುಗಳನ್ನೇ ಕೊಳ್ಳ ಹತ್ತಿದರು. ಬ್ರಾಂಡೆಡ್ ಗ್ರಾಸ್ ಬ್ರೂಮ್ ಗಳಿಗಿಂತ ಪ್ಲಾಸ್ಟಿಕ್ ಬ್ರೂಮ್ ಗಳ ತಾಳಿಕೆಬಾಳಿಕೆ ಜಾಸ್ತಿಯಾಗಿ ತೋರಿತು. ಕೊಟ್ಟ ಹಣಕ್ಕೆ ಯಾವುದೇ ಕಾರಣಕ್ಕೂ ಮೋಸವಿಲ್ಲದ ರೀತಿಯಲ್ಲಿ ಈ ಪೊರಕೆಗಳು ಡ್ಯೂಟಿಮಾಡಿದವು.

ಇದನ್ನೆಲ್ಲಾ ಮನಗಂಡ ಬ್ರಾಂಡೆಡ್ ಗ್ರಾಸ್ ಬ್ರೂಮ್ ತಯಾರಕರು ಬ್ರೂಮ್ ಜೊತೆಗೆ ಒಂದು ಮೊರವನ್ನೂ ಮುಕ್ತವಾಗಿ ಕೊಟ್ಟರೂ ಪೊರಕೆಗಳ ದರವನ್ನು ಹೆಚ್ಚಿಸಿದರು. ಆದರೂ ಮಾರುಕಟ್ಟೆ ಯಾಕೋ ಪಿಕ್-ಅಪ್ ಆದಹಾಗೇ ಕಾಣಲಿಲ್ಲ. ಆಗ ತಯಾರಕರ ’ಆರ್ ಎಂಡ್ ಡಿ’ಯಲ್ಲಿ ಕಂಡುಕೊಂಡ ಹೊಸ ಟೆಕ್ನಾಲಜಿಯೇ ’ಎಂ.ಜಿ.ಎಲ್’ ! ಸಪಾಟಾದ ಬಾಯುಳ್ಳ ಪ್ಲಾಸ್ಟಿಕ್ ಹಿಡಿಕೆಯಲ್ಲಿ ಹಿಂಬಾಗಿದ ರಿಬ್ಸ್ ಗಳಿವೆಯೆಂತೆ. ಹುಲ್ಲನ್ನು ಜಾರದಂತೇ ಅವು ಬಂಧಿಸುತ್ತವಂತೆ. ಮತ್ತು ಯಂತ್ರಗಳ ಸಹಾಯದಿಂದ ಒಂದು ಮೊಳೆಯನ್ನು ಕೂರಿಸಿರುವುದರಿಂದ ಯಾವುದೇ ಕಾರಣಕ್ಕೂ ಕಡ್ಡಿಗಳು ಜಾರಿಬರುವುದಿಲ್ಲವಂತೆ. ಹಿಡಿಕೆಯು ಹಿಂಭಾಗದಲ್ಲಿ ಉರುಟಾಗಿದ್ದು ಅಲ್ಲೂ ಒಳಗಡೆ ಹಿಂಭಾಗಿದ ರಿಬ್ಸ್ ಗಳಿರುವುದರಿಂದ ಕಡ್ಡಿಗಳು ಏನೇನೇಮಾಡಿದರೂ ಆಚೆ ಬರುವುದಿಲ್ಲವಂತೆ. ಹಿಡಿಕೆಯನ್ನು ಹಿಡಿಯುವ ಭಾಗ ಮೆತ್ತಗಿದ್ದು ಕೈಗಳಿಗೆ ಗಾಯವಾಗುವುದಿಲ್ಲಾ ಎನ್ನುತ್ತಾರೆ. ಜಾಹೀರಾತನ್ನು ಓದಿದವರಿಗೆ ಪ್ರತಿ ಸಾಲಿನಲ್ಲೂ ಕಾಣಸಿಗುವುದು ’ಹುಲ್ಲಿನ ಕಡ್ಡಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ’ ಎಂಬ ವಿಷಯ. ಈ ಜಾಹೀರಾತನ್ನು ನೋಡಿದಾಗ ನನಗೆ ನೆನಪಾದದ್ದು ತಿಗಣೆ ಹೊಡೆಯುವ ಮಶಿನ್ನು [ಬಿ.ಕೆ.ಟಿ--ಬೆಡ್‍ಬಗ್ ಕಿಲ್ಲಿಂಗ್ ಟೆಕ್ನಾಲಜಿ]! ಯಾರೋ ಒಬ್ಬಾತ ಅದನ್ನು ವಿ.ಪಿ.ಪಿ ಮೂಲಕ ತರಿಸಿದ್ದನಂತೆ, ಬಾಕ್ಸ್ ಬಿಚ್ಚಿದಾಗ ಉರುಟಾದ ಎರಡು ಕಲ್ಲುಗಳು ಮತ್ತು ಒಂದು ಸಣ್ಣ ಪುಸ್ತಿಕೆ ಇದ್ದವು. ಒಂದು ಕಲ್ಲನ್ನು ನೆಲದಮೇಲೆ ಜಾಗರೂಕತೆಯಿಂದ ಇಟ್ಟು ಅದರಮೇಲೆ ತಿಗಣೆಯನ್ನು ಮಲಗಿಸಿ ಇನ್ನೊಂದು ಕಲ್ಲಿನಿಂದ ಮಸಾಜ್ ಮಾಡಿದರೆ ಸಾಕು ಎಂದು ಜೊತೆಗಿರುವ ಪುಸ್ತಿಕೆ ಹೇಳುತ್ತಿತ್ತು! ಇದಕ್ಕೂ ಎಮ್.ಜಿ.ಎಲ್. ಟೆಕ್ನಾಲಜಿಗೂ ಬಹಳ ವ್ಯತ್ಯಾಸವೇನೂ ಕಾಣಿಸುವುದಿಲ್ಲ ಅಲ್ಲವೇ ? ಬ..ಬಾಯ್