ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!
ಮತ್ತೂರು ಕೃಷ್ಣಮೂರ್ತಿಗಳು ದಿವಂಗತರು ಎಂಬ ಸುದ್ದಿ ಕೇಳಿಬಂದಿದ್ದು ವಿಜಯದಶಮಿಯ ಬೆಳ್ಳಂಬೆಳಿಗ್ಗೆಯ ೯ ಗಂಟೆಯ ವಾರ್ತೆಯಲ್ಲಿ. ನಾವೆಲ್ಲಾ ಹಬ್ಬದ ಸಡಗರದಲ್ಲಿ ಮೈಸೂರಿನ ಜಂಬೂಸವಾರಿ, ೯ ದಿನಗಳ ಮಟ್ಟಿಗೆ ಗತವೈಭವ ಮರುಕಳಿಸುವ ಈಗಿನ ಅರಸರ ಭಾಗ್ಯ, ಶೃಂಗೇರಿ-ಕೊಲ್ಲೂರು ಮುಂತಾದ ಕ್ಷೇತ್ರಗಳಲ್ಲಿನ ಉಪಾಸನಾ ವೈಖರಿ ಇವುಗಳ ಬಗ್ಗೆ ಕುತೂಹಲಿಗಳಾಗಿ ಮಾಧ್ಯಮವಾಹಿನಿಗಳನ್ನು ಅವಲೋಕಿಸುತ್ತಾ ಕುಂತಾಗಲೇ ಈ ವಿಷಯ ತಿಳಿಯಿತು. ಹಳ್ಳಿಯ ಮೂಲೆಯ ಬಡ ಹುಡುಗನೊಬ್ಬ ವಾರಾನ್ನವನ್ನುಂಡು ಸಂಸ್ಕೃತವನ್ನು ಕಲಿತು ಬೆಂಗಳೂರು ಸೇರಿ ಭಾರತೀಯ ವಿದ್ಯಾಭವನದ ನಿರ್ದೇಶಕರ ಸಾಲಿಗೆ ಸೇರುವ ಎತ್ತರಕ್ಕೆ ಬೆಳೆದಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪಡೆದಿದ್ದು ಎಲ್ಲವೂ ನೆನಪಾದವು. ಸಂಸ್ಕೃತಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗೆಯ ಮತ್ತೂರಿನಲ್ಲಿ ಜನಿಸಿದರೂ ಬ್ರಿಟಿಷರ ಕಾಲದಲ್ಲಿ ಅಲ್ಲೆಲ್ಲಾ ಬಡತನವೇ ಹಾಸುಹೊಕ್ಕಾಗಿತ್ತು.
ಸಹಜವಾಗಿ ರಾಜಾಶ್ರಯ ತಪ್ಪಿದ ಹಲವು ಬ್ರಾಹ್ಮಣ ವರ್ಗಗಳಲ್ಲಿ ಒಂದಾದ ಸಾಂಕೇತಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹುಡುಗನಿಗೆ ಅಧ್ಯಯನ ಮತ್ತು ಅಧ್ಯಾಪನಗಳೇ ಹಿಡಿಸಿದವು. ಉದರಂಭರಣೆಗಾಗಿ ಖಾಸಗೀ ಬಸ್‍ಕಂಡಕ್ಟರ್ ಆಗಿ ಕೆಲವುಕಾಲ ಕೆಲಸಮಾಡಿದರೂ ಮಾನಸಿಕ ಹಸಿವು ಭರಿಸುವುದಕ್ಕೆ ಅಥವಾ ಮನೋದರಂಭರಣೆಗೆ ಮಾಡುವ ಆವೃತ್ತಿ ಹಿಡಿಸುತ್ತಿರಲಿಲ್ಲ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂದ ದಾಸವಾಣಿಯಂತೇ ಬದುಕಿನಲ್ಲಿ ಬೇರೇಯದನ್ನೇ ಬಯಸಿದ ವ್ಯಕ್ತಿ ಕೃಷ್ಣಮೂರ್ತಿಗಳು. ಅಲ್ಲಲ್ಲಿ ಉನ್ನತಮಟ್ಟದ ವ್ಯಾಖ್ಯಾನಗಳನ್ನು ನಡೆಸಿಕೊಡುತ್ತಿದ್ದ ಅವರ ಉಪನ್ಯಾಸಗಳನ್ನೂ, ಅರ್ಥವಿವರಣೆಗಳನ್ನೂ ಸ್ವತಃ ಕಂಡ ನಟ ಶ್ರೀನಾಥ್ ಹಿಂದಕ್ಕೆ ಉದಯ ವಾಹಿನಿಯ ನಿರ್ವಾಹಕ ಮುಖ್ಯಸ್ಥರಾಗಿದ್ದಾಗ ಕೃಷ್ಣಮೂರ್ತಿಗಳಲ್ಲಿ ಒಂದು ಬೇಡಿಕೆ ಇಟ್ಟರಂತೆ. ಅದರ ಫಲವಾಗಿ ಉದಯವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಮಹಾಭಾರತದ ವ್ಯಾಖ್ಯಾನ ನಡೆಯಿತು. ಗಮಕ ವಿದ್ವಾನ್ ಹೊಸಳ್ಳಿ ಕೇಶವಮೂರ್ತಿ ಮತ್ತು ಮತ್ತೂರು ಕೃಷ್ಣಮೂರ್ತಿ -ಈ ಮೂರ್ತಿದ್ವಯರ ಸಾಂಗತ್ಯ ಬೆಳಗಿನ ಅರ್ಧಗಂಟೆ ಕನ್ನಡ ಸಾರಸ್ವತಲೋಕದ/ಭಾವುಕ ಜನರ, ವಿದ್ವಾಂಸರ ಮನೋರಂಜನೆಗೆ ಕಾರಣವಾಗಿತ್ತು. ಕುಮಾರವ್ಯಾಸ ಭಾರತದ ಕಥಾಮಾಲಿಕೆ ಹರಿದು ಬರುವಾಗ ಸಮಯಾನುಕೂಲವುಳ್ಳ ಬಹಳಜನ ಅದನ್ನು ಇಷ್ಟಪಟ್ಟು ನೋಡುತ್ತಿದ್ದರು.
ಹಲವು ಜನರೊಡನೆ ಬೆರೆತು, ದೇಶವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡಿ, ೭ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿ, ಇತಿಹಾಸದ ಪುಟಗಳನ್ನು ಸೇರಬೇಕಿದ್ದ ಕೆಲವು ಶಾಲೆಗಳನ್ನು ಊರ್ಜಿತಗೊಳಿಸಿ, ನವೀಕರಿಸಿ, ಹೊಸದಾಗಿ ಒಂದೆರಡು ಶಾಲೆಗಳನ್ನೂ ಆರಂಭಿಸಿ ಸಮಾಜಕ್ಕೆ ಈ ರೀತಿಯಲ್ಲಿ ಸೇವೆಮಾಡಿದವರು ಕೃಷ್ಣಮೂರ್ತಿಗಳು. ಇದು ಅವರಿಗೆ ನನ್ನ ಭಾವನಮನ. ಇವರಂತಹ ಆದರ್ಶ ಜನ ಇವತ್ತಿನಲ್ಲಿ ಕಡಿಮೆ ಇದ್ದಾರೆ. ಆಡಂಬರವನ್ನೇ ಆಲಿಂಗಿಸಿಕೊಂಡ, ಅಹಂಕಾರವೇ ಮೈವತ್ತ ಅನೇಕ ವಿದ್ವನ್ಮಣಿಗಳಿದ್ದಾರೆ. ಅಂಥವರಲ್ಲಿ ವಿದ್ವತ್ತಿಗಿಂತ ಅವರ ’ಮಣಿ’ಗಳೇ ಎದ್ದು ಕಾಣುತ್ತವೆ! ಅಂಥವರ ಮಧ್ಯೆ ಇಂಥವರೂ ಅಲ್ಲಲ್ಲಲ್ಲಲ್ಲಿ ಇದ್ದಾರೆ ಎಂಬುದನ್ನು ತೆಗೆದುಹಾಕುವ ಹಾಗಿಲ್ಲ.
ದಸರೆಯ ಮರುದಿನ ಅಂದರೆ ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಸಂಚರಿಸುವಾಗ ಟ್ರಾಫಿಕ್ ಸಿಗ್ನಾಲ್‍ನಲ್ಲಿ ನನ್ನ ವಾಹನ ನಿಲ್ಲಿಸಿಕೊಂಡೆ. ೬ ವರ್ಷದ ಚಿಕ್ಕ ಹುಡುಗ ಗಿಜಿಗುಡುವ ಹಲವು ವಾಹನಗಳ ಜಂಗುಳಿಯ ಮಧ್ಯೆ ಓಡೋಡಿ ಬೇಡುತ್ತಿದ್ದ. ಇನ್ನೇನು ಹಸಿರು ನಿಶಾನೆ ಬಂದರೆ ಆತ ಯಾವುದದರೂ ವಾಹನದ ಚಕ್ರಕ್ಕೆ ಸಿಲುಕಬಹುದೇ ಎಂಬ ಆತಂಕ ನನ್ನಲ್ಲಿತ್ತು. ಆದರೆ ಆತನಿಗೆ ಅದ್ಯಾವ ಭಯವೂ ಇದ್ದಿರಲಿಲ್ಲ. ಜನ್ಮಕೊಟ್ಟ ಅಪ್ಪ-ಅಮ್ಮ ಹೇಳಿಕೊಟ್ಟು ಹೆದರಿಸಿ ಬೇಡುವಂತೇ ಮಾಡಿದರೋ ಅಥವಾ ಯಾವುದೋ ಕಾಣದ ಧೂರ್ತ ಇಂತಹ ಮಕ್ಕಳನ್ನು ಹೀಗೆಲ್ಲಾ ದುಡಿಸಲು ತೊಡಗಿದ್ದಾನೋ ತಿಳಿಯಲಿಲ್ಲ. ಮನದತುಂಬ ಹಲವು ಭಾವನೆಗಳ ಅಲೆಗಳು ಎದ್ದವು. ನಾವು ಕೊಡಬಹುದಾದ ಒಂದು ನಾಣ್ಯ ಆತನ ಜೀವನಕ್ಕೇನೂ ಸಾಲುವುದಿಲ್ಲ, ಆದರೆ ಅವನಂತಹ ಅಸಂಖ್ಯ ಮಕ್ಕಳು ಇದೇ ರೀತಿ ರಸ್ತೆಗಳ ಬದಿಯಲ್ಲಿ ಡೊಂಬರಾಟ ತೋರಿಸುತ್ತಾ, ಇನ್ನೇನೋ ಮಾರುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ. ಬಾಲ್ಯದ ಆಡುವ ವಯಸ್ಸಿಗೇ ಸ್ವಯಂ ಬಾಲಕಾರ್ಮಿಕರಾಗಿದ್ದಾರೆ; ಇಲ್ಲದಿದ್ದರೆ ಅವರಿಗೆ ಹೊತ್ತಿಗೆ, ತುತ್ತಿಗೆ ಕಾಸಿಲ್ಲ!
ನಮ್ಮಗಳ ಮನೆಯಲ್ಲಿ ಒಂದನ್ನೇ ಹಡೆಯುತ್ತೇವೆ, ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಊಟಮಾಡಿಸುವುದೇ ಒಂದು ಯಜ್ಞ. ಅದಕ್ಕೇ ಇರಬೇಕು ನಮ್ಮೂರಲ್ಲೊಂದು ಗಾದೆ-’ಕಂಡು ಸಾಕಿದ ಎಮ್ಮೆಯ ಕಣ್ಣು ಕುರುಡು’ ಎಂಬುದಾಗಿ. ವಯೋಮಾನದಲ್ಲಿ ಚಿಕ್ಕವರು ಮಾಡಲು ಕಷ್ಟವದುದನ್ನು ಹೊಟ್ಟೆಪಾಡಿನ ಅನಿವಾರ್ಯತೆಗೆ ಮಾಡುವ ಆ ಕಂದಮ್ಮಗಳಿಗೂ ಹೊತ್ತಿಗೆ ನಿಮಗೇನೂ ಕೊರತೆಮಾಡುವುದಿಲ್ಲ ತಿಂದುಂಡು ಸುಖವಾಗಿರಿ ಎಂದರೂ ರಂಪಮಾಡುತ್ತಾ ಮಾಧ್ಯಮಗಳ ಕಾರ್ಟೂನುಗಳಿಗಂಟಿಕೊಳ್ಳುವ ನಮ್ಮ ಮಕ್ಕಳಿಗೂ ತುಲನೆಮಾಡಿಕೊಂಡೆ. ಎಂತಹ ವಿಪರ್ಯಾಸ ನೋಡಿ: ಅಲ್ಲಿಗೂ ಇಲ್ಲಿಗೂ ಅಜಗಜಾಂತರ, ’ಪರಿಸ್ಥಿತಿ ಮನುಷ್ಯನನ್ನು ನಿರ್ಮಿಸುತ್ತದೆ’ ಎಂಬುದು ಸುಳ್ಳಲ್ಲ.
ಕೊನೆಯದಾಗಿ ನಿನ್ನೆಯ ಸಾಯಂಕಾಲದ ಒಂದು ಘಟನೆ. ಪತ್ನೀಪೀಡಕನಾಗಿ ಜೈಲು ಸೇರ್‍ರಿದ್ದ ಕನ್ನಡದ ನಟ ದರ್ಶನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಆತನ ಮನೆಹತ್ತಿರ ಜಮಾಯಿಸಿಬಿಟ್ಟರಂತೆ! ಪಟಾಕಿ ಹಚ್ಚಿದರಂತೆ, ಕೇಕು ತಂದರಂತೆ. ಇಂತಹ ಅಭಿಮಾನಿಗಳೆಲ್ಲಾ ಪೊರ್ಕಿಜನ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ. ಅಂತಹ ಜನರನ್ನು ಹಾಗೆ ಕಲೆಹಾಕಲು ನಟನಟಿಯರಿಗೆ ತಗಲುವ ಖರ್ಚು ಸುಮಾರು ಜಾಸ್ತಿಯೇ ಇರಬಹುದು! ಆದರೂ ಸಮಾಜದಲ್ಲಿ ಏನೂ ಬಿಲ್ಡಪ್ ತೋರಿಸದಿದ್ದರೆ ವರ್ಚಸ್ಸಿಗ್ಗೇ ಕಮ್ಮಿ ಎಂಬ ಅಂತ[ಸ್ತು]ರಂಗದ ಅನಿಸಿಕೆಯಿಂದ ಸಹೋದರನಿಗೋ ಇನ್ನಾರಿಗೋ ಹೇಳಿ ಹೀಗೆ ಮಾಡಿಸಿರಬಹುದು ಬಿಡಿ. ಎಲ್ಲಾರಂಗಗಳೂ ಗಬ್ಬೆದ್ದು ನಾರುವಾಗ ಮೊದಲೇ ವೇಷಧಾರಿಗಳಾಗಿ ವಿಜೃಂಭಿಸುವ ಸಿನಿಮಾರಂಗದಲ್ಲಿರುವವರ ನಾಟಕ, ವೇಷ, ರಾಜಕೀಯ, ರುಷುವತ್ತು ಇವುಗಳ ಬಗ್ಗೆ ಬರೆಯುವಾತನಿಗೆ ನಿತ್ಯವೂ ಒಂದಿಲ್ಲೊಂದು ಸುದ್ದಿ ದೊರೆಯಬಹುದು.
ಸಮಾಜ ವಿಚಿತ್ರವಾಗಿದೆ. ದರ್ಶನ್ ಮಾಡಿದ ಕೆಲಸವನ್ನು ಇನ್ಯಾರೋ ಶ್ರೀಸಾಮಾನ್ಯ ಮಾಡಿದರೆ ಜನತೆ ಕ್ಷಮಿಸುತ್ತಿರಲಿಲ್ಲ. ಯಾವ ಹೆಂಡತಿಗೂ ಕೊಟ್ಟ ದೂರನ್ನು ಮರಳಿಪಡೆಯುವ ಒತ್ತಡ ಅಷ್ಟಾಗಿ ಬರುತ್ತಿರಲಿಲ್ಲ! ಖೈದಿಯಾಗಿ ಒಮ್ಮೆ ಒಳಸೇರಿ ಹೊರಬಂದಮೇಲೆ ಮನೆಯವರನ್ನುಳಿದು ಯಾರೂ ಆತನನ್ನು ಸ್ವಾಗತಿಸುವ ಮನೋಸ್ಥಿತಿ ಉಳ್ಳವರಾಗಿರುವುದಿಲ್ಲ. ಖರ್ಚಿಗೆ ಕೊಟ್ಟು ಕರೆದರೂ ಬರುವುದಿಲ್ಲ! ಅದೇ ನಟನೊಬ್ಬ ಅಥವಾ ರಾಜಕಾರಣಿಯೊಬ್ಬ ಮಾಡಿದ ಅಪರಾಧಗಳು ಆಗಸದಲ್ಲಿ ಮಿಂಚು ಮಿಂಚಿ ಮರೆಯಾದಹಾಗೇ ಗುಡುಗಿ ಮಳೆಸುರಿಸದೇ ಸುಮ್ಮನಾಗುವ ಕೆಲವು ಮೋಡಗಳ ಹಾಗೇ ಏನೂ ನಡೆದೇ ಇಲ್ಲವೆಂಬ ರೀತಿ ಮಾಯವಾಗಿಬಿಡುತ್ತವೆ. ಈ ದಿಸೆಯಲ್ಲಿ ಅಧಿಕಾರಶಾಹಿಯಾದ ಬೀಜೇಪಿಯ ಉಡುಪಿ ಶಾಸಕ ರಘುಪತಿ ಭಟ್ಟ ಒಬ್ಬಾತ ಧುತ್ತನೇ ಕಾಣುತ್ತಾನೆ. ಹೋದ ಹೆಂಡತಿ ಹೋದಳು-ಇರುವಶಾಸಕನಿಗೆ ಜೀವದಾನ ಕೊಡಿ ಎಂದು ಮೇಲ್ದರ್ಜೆಯ ರಾಜಕಾರಣಿಗಳು ಉಸುರಿದರೇ ? ಗೊತ್ತಿಲ್ಲ.
ಸದಾ ಹೊಸಬಟ್ಟೆಯಲ್ಲೇ ಮಿರುಗಿತ್ತಿದ್ದ ಸಭೆಗಳಲ್ಲಿ ಸಮಾಜಕ್ಕೆ ಸದ್ಬೋಧನೆಗೈತಿದ್ದ ಹಾಲಪ್ಪನೆಂಬ ಮಂತ್ರಿ , ಸಿನಿಮಾರಂಗದಲ್ಲಿ ಮಸಲ್ ಪೂರಿ ಸಿನಿಮಾ ಗೀತಸಾಹಿತ್ಯವನ್ನು ಬರೆದು ಇಂದಿನ ಯುವ ಜನಾಂಗಕ್ಕೆ ಬೇಕಾದ್ದನ್ನೇ ಕೊಡುತ್ತಿರುವ ಯೋಗರಾಜ ಭಟ್ಟರ ’ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದುರೀ’ ಹಾಡಿಗೆ ತಕ್ಕವನಾದ ಜಯಲಕ್ಷ್ಮೀ ಹೃದಯಾಂತರ್ಗತ ’ಜಗದ್ಗುರು ನರ್ಸ್ ರೇಣುಕ’ ಇನ್ನೂ ನೇಪಥ್ಯದಲ್ಲಿ ಖಾಯಂ ಪರಸ್ತ್ರೀಯರ ಶೀಲವನ್ನೇ /ಮೈಸುಖವನ್ನೇ ಮೇಯುತ್ತಿರುವ ಬಹುತೇಕ ರಾಜಕಾರಣಿಗಳು, ಸಿನಿಮಾ ರಂಗದ ದಿಗ್ಗಜ, ಆಗಜ ಈಗಜ, ಗಜ ಎಲ್ಲಾ ತೆರನಾದ ಗಜಗಳು ಇವರುಗಳನ್ನೆಲ್ಲಾ ನೆನಪಾದಾಗ ಸಾಮಜಿಕ ಸ್ವಾಸ್ಥ್ಯ ಎಂಬುದು ಬರೀ ಕಲ್ಪನೆಯೇ ಅಥವಾ ವಾಸ್ತವವೇ ಎಂಬ ಇಬ್ಬಂದಿತನ ಕಾಡುತ್ತದೆ.
ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ-ಸಮಾಜ ಅದನ್ನು ಕ್ಷಮಿಸಬೇಕು ಎನ್ನುವ ಹಲವರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ, ಮನುಷ್ಯ ತಪ್ಪುಮಾಡದಿರಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಜರು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಬರೆದರು ಮತ್ತು ಅವುಗಳಲ್ಲಿ ತಮ್ಮಕಾಲಘಟ್ಟದ ಜೀವನಾನುಭವಗಳನ್ನು ಕಥೆಗಳನ್ನಾಗಿ ಉಪಕಥೆಗಳನ್ನಾಗಿ ಜೋಡಿಸಿದರು ಅಲ್ಲವೇ ? ಅವುಗಳನ್ನು ಓದುವ ವ್ಯವಧಾನ ಸಮಾಜದ ಮುಖಂಡಿರಿಗಿದೆಯೇ ? ಮಹತ್ವಾಕಾಂಕ್ಷಿಗಳಾಗಿ ದಿಲ್ಲಿ ಸರಕಾರದಲ್ಲೇ ಮಹೋನ್ನತ ಸ್ಥಾನವನ್ನು ಬಯಸುವವರು ಯಾರನ್ನೋ ಬಿಟ್ಟು ’ಮಹಾನ್ವೇಷಣ’ ಬರೆಸುತ್ತಾರೆ-ಬರೆದವರಿಗಾಗಲೀ ಬರೆಸಿದವಗಾಗಲೀ ಅದರ ತಲೆಬುಡ ಗೊತ್ತಿರುವುದಿಲ್ಲ! ಕೆಟ್ಟುಹೋದ ಸಮಾಜದಲ್ಲಿ ಮುಂದಾದರೂ ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತೆ ಚಿಗುರಲಿ ಎಂಬ ಕಾರಣಕ್ಕಾಗಿ. ವಿಜೃಂಭಿಸುತ್ತಿರುವ ವಿದೇಶೀ ಸಂಸ್ಕೃತಿಯ ಕೊಡೆಯಾದ ಲಿವ್-ಇನ್, ಒನ್ ನೈಟ್ ಸ್ಟೇ, ಡೇಟಿಂಗ್ ಮುಂತಾದ ಅನೈತಿಕ ಸಂಪರ್ಕ-ಸಂಬಂಧಗಳು ನಾಶವಾಗಲಿ ಎಂಬ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಹತಾಶೆಯಿಂದ, ನಿರಾಸೆಯಿಂದ, ನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಅಧಃಪತನಕ್ಕೆ ಇಳಿಯುವ ಜನರನ್ನು ಉದ್ದೇಶಿಸಲಾಗಿ ಕೆಲವು ಮಠಮಾನ್ಯಗಳು ಭಾರತೀಯ ಮೂಲದ್ದಾಗಿ ವಿಶ್ವವೇ ನಿಬ್ಬೆರಗಾಗಿ ಓದುವ ಬೌದ್ಧಿಕ ತರಬೇತಿ ಗ್ರಂಥ ’ಭಗವದ್ಗೀತೆ’ಯನ್ನು ಬೋಧಿಸಲು ಮುಂದಾದರೆ ರಾಜಕೀಯದ ಕೊಳಕರು ಅದರ ವಿರುದ್ಧ ಜನಾಂಗಗಳನ್ನು ಎತ್ತಿಕಟ್ಟುತ್ತಾರೆ; ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ ! ಇದು ಇಂದಿನ ಜೀವನದ ಮತ್ತೊಂದು ಮಜಲು.
ಮಾನಸಿಕ, ದೈಹಿಕ ಹಲವು ನೋವುಗಳನ್ನು ಸಹಿಸಿಯೂ ಕುಟುಂಬ ಒಡೆಯದಿರಲಿ, ತನ್ನ ಮಗನ ಭವಿಷ್ಯ ಹಾಳಾಗದಿರಲಿ, ತನ್ನಿಂದ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸಿದವನ ಕಲಾಬದುಕಿನ ಭವಿಷ್ಯ ಕೆಡದಿರಲಿ ಎಂಬ ಕಾರಣಕ್ಕೆ ಭಾರತೀಯತೆಯನ್ನು ಮೆರೆದ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೆ ನನ್ನದೊಂದು ಸಲಾಮು. ತನ್ನ ನೋವನ್ನೆಲ್ಲಾ ನುಂಗಿ ತಾನು ತಿರುಗಿ ಬಿದ್ದಿದ್ದೇ ಸುಳ್ಳೆಂದು ವಾದಿಸುತ್ತಾ ಯಾವುದೋ ವಿಷಮ ಘಳಿಗೆ ನಮ್ಮ ಬದುಕಿನಲ್ಲಿ ಘಟಿಸಿಹೋಗಿದೆ, ಅದನ್ನೆಲ್ಲಾ ಮರೆತಿದ್ದೇವೆ ಮತ್ತೆ ಒಂದಾಗಿ ಬದುಕುತ್ತೇವೆ ಎಂಬ ಅವರ ಮನೋವೃತ್ತಿಗೆ ಎಂತಹ ತಾಕತ್ತಿರಬೇಕು ಅನಿಸಿತು, ಅವರ ಕ್ಷಮಾಗುಣದ ಅರಿವಾಯಿತು. ಬಣ್ಣದ ರಂಗದಲ್ಲಿರುವ ಬಹುತೇಕರ ಹಿಂದೆ ಸದಾ ಅಪಸ್ವರಗಳು ಕೇಳುತ್ತಲೇ ಇರುತ್ತವೆ. ಅವು ಬೆಂಕಿಯಿರದೇ ಎದ್ದ ಹೊಗೆಯ ಸುರುಳಿಗಳಲ್ಲ! ಕೆಲವು ಆರುತ್ತವೆ; ಮತ್ತೆ ಕೆಲವು ಮುಂಬರುವ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುತ್ತವೆ!
ಮನುಷ್ಯನ ಬದುಕಿಗೆ ಕಲಾವಿದರು, ನಟನಟಿಯರು, ಸಂಗೀತಜ್ಞರು, ವಿದ್ವಾಂಸರು ಮಾದರಿಯೆನಿಸುತ್ತಾರೆ ! ಆ ಯಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಜನ ಕಚ್ಚೆಹರುಕರಾಗಿದ್ದರೆ ಸಮಾಜಕ್ಕೆ ಅವರಿಂದ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಭಾವಂತರಬೇಕರು ಕೆಲವೊಮ್ಮೆ ಮಾನಸಿಕ ಉದ್ವಿಗ್ನರೂ ಒಂಥರಾ ಹುಚ್ಚರೂ ಆಗಿರುತ್ತಾರೆ. ಕೆಲವು ಸಂಗೀತಗಾರರ ಕೂದಲು, ದಿರಿಸುಗಳನ್ನು ಗಮನಿಸಿ! ಯಾಕೆ ಅವರೂ ಮನುಷ್ಯರಲ್ಲವೇ ಅನಿಸುತ್ತದೆ ತಾನೇ ? ನಾವು ಶ್ರೀಸಾಮಾನ್ಯರು, ಯುವಜನಾಂಗ ಇನ್ನಾದರೂ ತಿಳಿಯಬೇಕು ಏನೆಂದರೆ ಇಂತಹ ಯಾರೂ ನಮಗೆ ರೋಲ್ ಮಾಡೆಲ್ ಅಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದರಲ್ಲಾ ಹಲವು ಗಣ್ಯರು ಅಂತಹ ದೇಶಭಕ್ತರು, ನೈತಿಕ ನಿಷ್ಠೆಯಿದ್ದವರು ನಮಗೆ ಆದರ್ಶವೆನಿಸಬೇಕೇ ಶಿವಾಯಿ ಇಂದಿನ ರಾಜಕಾರಣಿಗಳು,ಕಲಾವಿದರು, ಸಂಗೀತಗಾರರು [ಕ್ಷಮಿಸಿ ಕೆಲವು ಅಪವಾದಗಳು ಇರಲೂ ಸಾಕು] ನಮಗೆ ರೋಲ್ ಮಾಡೆಲ್ ಅಲ್ಲ. ಸರ್ವಜ್ಞನ ಕಾಲದಲ್ಲೂ ಕಚ್ಚೆಹರುಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದ್ರೆ ಕವಿ ಹೇಳಿದ್ದಾನೆ
ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದೊಳು
ನಿಶ್ಚಿಂತನಪ್ಪ | ಸರ್ವಜ್ಞ
-ಎಂಥಾ ಹಿತವಚನ ಅಲ್ಲವೇ ? ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಆಗ ಜಗವನ್ನೂ ಜಯಿಸಬಹುದಂತೆ! ಕಾಲ, ದೇಶ ಯಾವುದೇ ಇದ್ದರೂ ಉತ್ತಮ ಅಂಶಗಳನ್ನು, ಉಚ್ಚ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮೊಳಗೇ ಅವಿತಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳೆಂಬ ರಾಕ್ಷಸೀ ಪ್ರವೃತ್ತಿಯನ್ನು ದಮನಗೊಳಿಸುವರೇ ಶರನ್ನವರಾತ್ರಿಯ / ವಿಜಯದಶಮಿಯ/ ದಸರೆಯ ಈ ಸಂದೇಶವನ್ನು ತಮ್ಮಲ್ಲಿ ಈ ಅಂಕಣದ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿದ್ದೇನೆ
ಮುಗಿಸುವ ಮುನ್ನ ಒಂದು ಸಣ್ಣ ಜೋಕು-- ’ ಮಾಡಿದ್ದುಣ್ಣೋ ಮಹರಾಯ ’ ಎಂಬ ನಾಟಕ ವೇದಿಕೆಯೇರುತ್ತಿದೆ. ಪರಿಕಲ್ಪನೆ ಮತ್ತು ಮೂಲ ಕಥೆ: ಶ್ರೀ ಅಣ್ಣಾ ಹಜಾರೆ. ಕದ್ದು ದುರುದ್ದೇಶಕ್ಕೆ ಗೀತರೂಪಕಕ್ಕೆ ಅಳವಡಿಸಿದವರು : ಕೇಂದ್ರ ಕಾಂಗೈ, ಚಪ್ಪರ ಚಾವಡಿ ಮತ್ತು ನೃತ್ಯ ಸಂಯೋಜನೆ : ಸಿಬಿಐ. ಪ್ರಧಾನ ಭೂಮಿಕೆಯಲ್ಲಿ : ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಇವರಿಂದ ಕೃತಜ್ಞತಾ ಪೂರ್ವಕ ರಂಗಸಜ್ಜಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ : ಕರ್ನಾಟಕ ಲೋಕಾಯುಕ್ತ. ಪ್ರಾಂತೀಯ ಜೋಕರ್‍ಗಳಾಗಿ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್. ಮೊದಲಬಾರಿಗೆ ಖಳನಾಯಕನಾಗಿ ಕುಮಾರಣ್ಣ. ಮರದಕೆಳಗೆ ಬಿದ್ದ ಮಂಗನ ಪಾತ್ರದಲ್ಲಿ ಯಡ್ಯೂರಣ್ಣ. ಹಿನ್ನೆಲೆ ಗಾಯನ : ’ಮಣ್ಣಿನಮಕ್ಕಳಿ’ಂದ! ನಾಟಕ ಪೊಗದಸ್ತಾಗಿದೆ! ಅಂತೂ ಜನತೆಗೆ ಜೀವ ಇಲ್ಲದಿದ್ದರೂ ನಿಸರ್ಗ ಒಬ್ಬರಮೇಲೆ ಇನ್ನೊಬರನ್ನಾದರೂ ಛೂ ಬಿಟ್ಟು ಕೊನೆಗೊಮ್ಮೆ ನಿಯಂತ್ರಿಸುವುದೇ ಕಥೆಯ ಮೂಲವಸ್ತು! ಇನ್ನೂ ಹಲವು ಪಾತ್ರಗಳು ಚೌಕಿಯಲ್ಲಿ [ಗ್ರೀನ್ ರೂಮ್] ಬಣ್ಣ ಮೆತ್ತಿಸಿಕೊಳ್ಳುತ್ತಾ ವೇಷ ಕಟ್ಟಿಕೊಳ್ಳುತ್ತಾ ಇವೆ, ವಿದ್ಯುತ್ ಅಭಾವ ಇರುವುದರಿಂದ ಸ್ತ್ರೀರಾಮುಲು ಸೀಮೆ ಎಣ್ಣೆ ಗ್ಯಾಸ್‍ಲೈಟುಗಳನ್ನು ಸಂಗ್ರಹಿಸುವತ್ತ ಹೋಗಿದ್ದಾರೆ! ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ,
ಮಧ್ಯೆ ಹೀಗೊಂದು ಹಾಡು ಹರಿದುಬರುತ್ತದೆ --
ಜೈಲಲ್ಲಿ ಕರಡೀಗೆ ಜಾಮೀನು ಕೊಡಿಸೋಕೆ
ಯಾವತ್ತು ಹೋಗ್ಬಾರ್ದುರೀ
ಲಾರೀಲಿ ಲೋಡ್‍ಮಾಡಿ ಮುಟ್ಟುಗೋಲ್ಹಾಕ್ಕೊಳಕೆ
ಯಾವತ್ತು ಮರಿಬಾರ್ದುರೀ
ಅವ್ನೊಬ್ಬ ಇವ್ನೊಬ್ಬ ಮತ್ತೊಬ್ಬ ಮಗದೊಬ್ಬ
ಗಣಿಗೊಬ್ಬ ಧಣಿಗೊಬ್ಬ ೨ಜಿ ಸ್ಪೆಕ್ಟ್ರಂಗೊಬ್ಬ
ಯಾರನ್ನೂ ಹೊರಗಡೆಗೆ ಬಿಡಬಾರ್ದುರೀ.........
[ದೇಶಾದ್ಯಂತ ಒಂದೇ ಪ್ರದರ್ಶನ. ಆಕಸ್ಮಿಕವಾಗಿ ಸಂಭವಿಸಿಬಹುದಾದ ರಾಜಕೀಯ ಅವಘಡಗಳಿಂದ ಪ್ರದರ್ಶನ ರದ್ದಾದರೆ ಯಾವುದೇಕಾರಣಕ್ಕೂ ಹಣಮರುಪಾವತಿ ಸಾಧ್ಯವಿಲ್ಲ, ಸಹೃದಯೀ ಪ್ರೇಕ್ಷಕರು ಸಹಕರಿಸಲು ಕೋರಿದೆ] ನಮಸ್ಕಾರ.