ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, October 22, 2010

ಚಿದಾನಂದ-ರೂಪಂ ಶಿವೋಹಂ ಶಿವೋಹಂ


ಚಿದಾನಂದ-ರೂಪಂ ಶಿವೋಹಂ ಶಿವೋಹಂ

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||

ಆತ್ಮ ಷಟ್ಕಮ್ ಎಂಬ ಷಟ್ಕದ ೬ ನೇ ಶ್ಲೋಕದ ಮೂಲಕ ಸಾಧಕರ ಬಗ್ಗೆ ಒಂದೆರಡು ಮಾತು ಬರೆಯುವುದು ಹಿತವೆನಿಸುತ್ತದೆ. ಆತ್ಮದ ಮೂಲರೂಪಕ್ಕೆ ಯಾವುದೇ ಹಕ್ಕು-ಬಾಧ್ಯತೆಗಳು ಎಡತಾಕುವುದಿಲ್ಲಾ ಎಂಬುದನ್ನು ಆತ್ಮ ಷಟ್ಕ ವಿವರಿಸುತ್ತದೆ. ಅಸಲಿಗೆ ಆಕಾರವೇ ಇರದ, ನಿರ್ವಿಕಲ್ಪ ಸ್ವರೂಪವಾದ ಆತ್ಮ ದೇಹವೆಂಬ ಪಂಜರದಲ್ಲಿ ಬಂದು ಕುಳಿತುಕೊಳ್ಳುತ್ತದೆಯೇ ವಿನಃ ಅದಕ್ಕೆ ಯಾವುದೇ ಬಂಧನಗಳಿಲ್ಲ. ಅದರಲ್ಲಂತೂ ಮಹಾತ್ಮರು ಮಾನವ ದೇಹದಿಂದ ಜನಿಸುವುದು ಭುವಿಯ ಜನರ ಭಾಗ್ಯ.

ಯಾವುದೇ ನಾಸ್ತಿಕನೂ ಜೀವನದ ಅಂತ್ಯಭಾಗದಲ್ಲಿ ಒಮ್ಮೆ ತಾನು ನಾಸ್ತಿಕನಾಗಿ ಕೆಟ್ಟೆ ಎಂಬ ಭಾವನೆಗೆ ಒಳಗಾದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆ ಬೀಳುವವರೆಗೂ ಅಂತಹ ನಾಸ್ತಿಕರೆಲ್ಲ ಜಪಿಸುವ ಘೋಷವಾಕ್ಯ ’ ದೇವರು ಅಥವಾ ನಮಗಿಂತ ಹಿರಿದಾದ ಶಕ್ತಿಯೇ ಇಲ್ಲ. ಆಕಾಶ್,ಭೂಮಿ,ವಾಯು,ಅಗ್ನಿ, ನೀರು ಎಲ್ಲವೂ ನಿಸರ್ಗ, ಮನುಷ್ಯ ಕೇವಲ ತನ್ನ ಪ್ರಯತ್ನದಿಂದಲೇ ಎಲ್ಲವನ್ನೂ ಸಾಧಿಸಬಹುದು’ ಎಂಬುದು. ಅಡಿಗೆ ಬಿದ್ದರೂ ಮೂಗು ಮಣ್ಣಾಗಲಿಲ್ಲ--ಎಂಬೊಂದು ಗಾದೆಯಂತೇ ಆಸ್ತಿಕರು ಕೇಳುವ ಪ್ರಶ್ನೆಗಳಿಗೆ ಅವರು ಹಾರಿಕೆಯ ಉತ್ತರ ಕೊಡುತ್ತಾರೆ.

ನಮ್ಮೀ ಭೌತಿಕ ಜಗತ್ತಿನಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಎಂಬ ಕೋಶಗಳಿವೆ ಎಂಬುದಾಗಿ ವೇದ ಸಾರುತ್ತದೆ. ಜನಸಾಮಾನ್ಯರಾದ ನಮಗೆಲ್ಲಾ ಮೊದಲಿನ ಮೂರು ಗೋಚರವಾದರೆ ವಿಜ್ಞಾನದ ನಿತ್ಯಾನುಸಂಧಾನದಿಂದ ವಿಜ್ಞಾನಮಯ ಕೋಶಗಳ ಕೆಲವು ಸ್ತರಗಳನ್ನು ಆಗಾಗ ಅಲ್ಲಲ್ಲಿ ಕೆಲವು ವಿಜ್ಞಾನಿಗಳು ಕಾಣುತ್ತಾರೆ. ಹಾಗೆ ಕಾಣುವಾಗ, ಅವರು ಯಶಸ್ಸು ಪಡೆಯುವಾಗ ಆ ದಿಸೆಯಲ್ಲಿ ಪ್ರಯೋಗಾಲಯಗಳಲ್ಲಿ ಅವರು ಬಹುಕಾಲ ಅದಕ್ಕೆ ಸಂಬಂಧಿಸಿದ ತಪಸ್ಸಿನಲ್ಲಿ ನಿರತರಾಗಿರುತ್ತಾರೆ. ತಪಸ್ಸೆಂದರೆ ಕೇವಲ ಬಾಹ್ಯ ದೇಹವನ್ನು ಒಂದು ಕಡೆ ಆಸನದಮೇಲೆ ಕೂರಿಸಿ, ಮೂಗು ಹಿಡಿದೋ ಅಥವಾ ಕಣ್ಣುಮುಚ್ಚೋ ಏನನ್ನೋ ಗುನುಗುನಿಸುವುದಲ್ಲ, ಬದಲಿಗೆ ಇಟ್ ಈಸ್ ಆನ್ ಅಲೈನ್ ಮೆಂಟ್ ಪ್ರೊಸಿಜರ್ ಟು ಪ್ಲೇಸ್ ಅವರ್ ಸೌಲ್ ಇನ್ಲೈನ್ ವಿಥ್ ದಿ ಸುಪ್ರೀಮ್ ಸೌಲ್ ! ಹೇಗೆ ಕೃತಕ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದನ್ನು ತಿಳಿಯುತ್ತೇವೋ ಹಾಗೇ ಇಲ್ಲಿನ ಅಥವಾ ಇಹದ ಬಂಧನಗಳನ್ನು, ಹಕ್ಕು-ಬಾಧ್ಯತೆಗಳನ್ನು ಯಾ ಭವದ ಭೌತಿಕ ಅಸ್ಥಿತ್ವವನ್ನೇ ಮರೆಯುವ ಆ ಆನಂದಮಯ ಕಕ್ಷೆಗೆ ಸೇರಲು ಪ್ರಯತ್ನಿಸುವುದು.

ಅಯ್ಯಪ್ಪ ಭಕ್ತರು ವೃತನಿಷ್ಟರಾದಾಗ ಮಾತ್ರ ಆ ಕಾಲದಲ್ಲಿ ಬಾಹ್ಯವಾಗಿ ಅದೂ ಇದೂ ಆಚರಣೆಯಲ್ಲಿ ನಿರತರಾಗಿರುತ್ತಾರೆ, ಆಮೇಲೆ ಅದನ್ನೆಲ್ಲಾ ಮರೆತು ಮತ್ತೆ ಕರ್ಕ ಮಕರಸಂಕ್ರಮಣ ಬರುವವರೆಗೆ ಬೇಕಾದಹಾಗೆಲ್ಲಾ ಇದ್ದುಬಿಡುತ್ತಾರಲ್ಲಾ--ಇದು ಸರಿಯಲ್ಲ. ಅಲ್ಲಿ ೧೮ ಮೆಟ್ಟಿಲುಗಳನ್ನು ಏರಲು ಹದಿನೆಂಟು ಸಾಧನೆಗಳನ್ನು ಮಾಡಬೇಕೆಂಬ ನಿಯಮವಿದೆ. ಬಹುತೇಕರು ಆ ಸಾಧನೆಯನ್ನು ಸಾಧಿಸುವುದಿಲ್ಲ! ಆದರೂ ದೇವರನ್ನು ಆ ಮೆಟ್ಟಿಲುಗಳನ್ನು ಏರಿಯೇ ದರ್ಶನಮಾಡುತ್ತಾರೆ. ಕಾಸಿದ್ದರೆ ಕರೆದೊಯ್ದು ನೇರವಾಗಿ ತಿರುಪತಿಯ ತಿಮ್ಮಪ್ಪನ ದರುಶನ ಮಾಡಿಸುವ ಏಜೆಂಟರಿದ್ದಾರೆ. ಆದರೆ ಈ ಯಾವುದೇ ಕ್ರಿಯೆ ದೇವರ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯಲು ಸಾಧ್ಯವಿಲ್ಲ. ದೇವರ ದರುಶನಕ್ಕೆ ಆಯಾಯ ಕ್ಷೇತ್ರಗಳಲ್ಲಿ ನಿಬಂಧಿಸಿರುವ ನಿಯಮಗಳನ್ನು ಉಲ್ಲಂಘಿಸದೇ ಪ್ರಯಾಸಪೂರ್ವಕವಾಗಿ ಮಾಡಿದ ದರ್ಶನವೇ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲಾಂದರೆ ದುಡ್ಡು ಕೊಟ್ಟು ಕೊಳ್ಳುವ ಬೇಕರಿಯ ತಿನಿಸಿಗೂ ಪರಮಾತ್ಮನಿಗೂ ಏನೂ ವ್ಯತ್ಯಾಸ ಕಾಣಿಸುವುದಿಲ್ಲ. ಭಗವಂತ ಅಷ್ಟು ಸುಲಭಸಾಧ್ಯನಲ್ಲ ! ಅದರೆ ಸುಲಭ ಸಾಧ್ಯನೂ ಹೌದು. ಅದು ಅಂತಹ ಸಾಧಕ ಮನಸ್ಕರಿಗೆ ಮಾತ್ರ. ನಮ್ಮ ಮನಸ್ಸನ್ನು ತಹಬಂದಿಗೆ ತಂದು, ನಮ್ಮ ಕೈಯ್ಯಲ್ಲಿ ಮನಸ್ಸನ್ನು ಯಾವುದೋ ವಸ್ತುವನ್ನು ಹಿಡಿದಂತೇ ಗಟ್ಟಿಯಾಗಿ ಹಿಡಿದು, ಏಕಾಗ್ರತೆ ಸಾಧಿಸಿದರೆ ಆಗ ನಾವು ಮಾಡುವ ಧ್ಯಾನ ಅಥವಾ ನಿರಾಕಾರ ಧ್ಯಾನ, ನಿರ್ವಿಷಯ ಧ್ಯಾನ ನಮ್ಮನ್ನು ನಿರ್ವಿಕಲ್ಪದೆಡೆಗೆ ಕರೆದೊಯ್ಯಲು ಪ್ರಾರಂಭಿಸುತ್ತದೆ.

ಇದನ್ನೆಲ್ಲಾ ನಾನು ಬರೆದೆನೆಂದ ಮಾತ್ರಕ್ಕೆ ಎಲ್ಲರೂ ಓದುವುದಿಲ್ಲ. ಬಹಳಜನ ಓದಿದರೂ ಓದುವಾಗ ಆಕಳಿಕೆಯೊಂದಿಗೇ ಓದುತ್ತಾರೆ. ಕೇವಲ ಕೆಲವು ಜನ ಇದರಲ್ಲೇನಿದೆ ಎಂದು ಅರಿಯಬಯಸುತ್ತಾರೆ. ಪರಮಾತ್ಮನಲ್ಲಿನ ಆಸಕ್ತಿ ಕೂಡ ಹಾಗೇ. ಕಾಣುವ ತೀಟೆಯುಳ್ಳ ನಮ್ಮ ಕಣ್ಣಿಗೆ ಚೆನ್ನಾಗಿ ಕಾಣಲೆಂದು ಹಲವು ರೂಪಗಳಲ್ಲಿ ಭಗವಂತನನ್ನು ತೋರಿಸಿದರು, ಕೇಳುವ ಕಿವಿಯ ಆಹ್ಲಾದಕತೆಗೆ ಬೇಕಾಗಿ ಭಗವಂತನ ಕುರಿತಾದ ಸ್ತುತಿ, ಸಂಗೀತಗಳನ್ನು ರಚಿಸಿದರು, ಸ್ಪರ್ಶಸುಖಕ್ಕೆ ಹಾತೊರೆವ ಚರ್ಮಕ್ಕೆ ಸೋಕಲೆಂದು ವಿಗ್ರಹ ಮುಟ್ಟಿ ದರುಶನಮಾಡಲು ಕೆಲವು ಕಡೆ ಅನುವುಮಾಡಿಕೊಟ್ಟರು, ಜಿಹ್ವಾಚಾಪಲ್ಯಕ್ಕೆ ಇರಲೆಂದು ಭವಂತನಿಗೆ ನಿವೇದಿಸಿದ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲುಕೊಟ್ಟರು, ಆಘ್ರಾಣಿಸುವ ಮೂಗಿಗೆ ಅನುಕೂಲವಾಗಲೆಂದು ಧೂಪ-ದೀಪ-ಅಗರು ಕಸ್ತೂರಿ-ಚಂದನಗಳನ್ನು ಬಳಸಿದರು. ಆದರೆ ಇವು ಮತ್ತೆ ನಮ್ಮ ಇಂದ್ರಿಯಪರಿಧಿಗಷ್ಟೇ ಮೀಸಲು ! ಈ ಪರಿಧಿಯನ್ನು ಬಿಟ್ಟು ಹೊರಪರಿಧಿಗೆ ಹೊರಟಾಗ ಮಾತ್ರ ನಮಗೆ ಆಂತರ್ಯದ ಪ್ರಪಂಚ ಅರಿವಿಗೆ ಬರುತ್ತದೆ. ಆ ಪ್ರಪಂಚದ ಅರಿವಾದ ಜನರಿಗೆ ಈ ಪ್ರಪಂಚ ಬಹುಗೌಣವಾಗುತ್ತದೆ. ಆದರೂ ಕೆಲವೊಮ್ಮೆ ಸಾಧಕರು ಭಕ್ತರಿಗೆ/ಶಿಷ್ಯರಿಗೆ ಬೇಕಾಗಿ ಅಲಂಕರಿತ ಪಲ್ಲಕ್ಕಿಯಲ್ಲಿ ಕೂರುವುದೋ, ಪೀಠದಲ್ಲಿ ಕುಳಿತು ದರ್ಬಾರ್ ನಡೆಸುವುದೋ ಇಂತಹದ್ದನ್ನೆಲ್ಲಾ ಮಾಡಲೂಬಹುದು.

ಜಿಲ್ಲಾಮಟ್ಟದ ವ್ಯಾವಹಾರಿಕನಿಗೆ ತಾಲೂಕು ಚಿಕ್ಕದು, ರಾಜ್ಯಮಟ್ಟದವನಿಗೆ ಜಿಲ್ಲಾಮಟ್ಟ ಚಿಕ್ಕದು, ದೇಶಮಟ್ಟದವನಿಗೆ ರಾಜ್ಯಮಟ್ಟ ಚಿಕ್ಕದು, ಅಂತರ್ರಾಷ್ಟ್ರೀಯ ವ್ಯವಹಾರಸ್ಥನಿಗೆ ದೇಶಕೂಡ ಚಿಕ್ಕದು--ಹೀಗೇ ಅಂತರ್ರಾಷ್ಟ್ರೀಯ ಮಟ್ಟದ ವ್ಯವಹಾರಸ್ಥ ಆಗಾಗ ಆಗಾಗ ವಿದೇಶಗಳಿಗೆ ವಿಮಾನವೇರಿ ಹೋಗಿ ಬಂದಂತೇ ಆಂತರ್ಯದ ಪ್ರಪಂಚವನ್ನು ಅರಿತವರಿಗೆ ಈ ಪ್ರಪಂಚ ಚಿಕ್ಕದಾಗಿ ಕಾಣಿಸುತ್ತದೆ, ನಶ್ವರವಾಗಿ ಕಾಣಿಸುತ್ತದೆ! ಅವರು ಆಗಾಗ ಆಗಾಗ ಅಥವಾ ದಿನವೂ ಒಂದೆರಡಾವರ್ತಿ ಧ್ಯಾನಸ್ಥರಾಗಿ ಆ ಪ್ರಪಂಚಕ್ಕೆ ಹೋಗಿಬರುತ್ತಾರೆ. ಇಲ್ಲಿ ಅವರೇರುವ ವಿಮಾನವೇ ತಹಬಂದಿಗೆ ತಂದ ಮನಸ್ಸು. ಹೇಗೆ ವಿಮಾನ ಅಪಘಾತವಾದರೆ ಕಷ್ಟವೋ ಹಾಗೇ ಮನಸ್ಸೆಂಬ ಪೈಲಟ್ ರಹಿತ ವಿಮಾನ ನಮ್ಮನ್ನು ಎಲ್ಲೆಲ್ಲೋ ಹೈಜಾಕ್ ಮಾಡಿಬಿಡುವ ಸಾಧ್ಯತೆಗಳಿರುತ್ತವೆ. ಮನಸ್ಸೆಂಬ ವಿಮಾನ ಬೇರಾವ ಅಪಘಾತಕ್ಕೆ ಈಡಾಗದಿದ್ದರೂ ಈ ಹೈಜಾಕ್ ಆಗುವ ಪ್ರಕ್ರಿಯೆಯೇ ಅಪಘಾತವೆಂದು ತಿಳಿದರೆ ತಪ್ಪಲ್ಲ. ಈ ಮನಸ್ಸೆಂಬ ವಿಮಾನದ ಪೈಲಟ್ ಆಗಲು ಒಂದು ಮಾರ್ಗ ಲಭ್ಯವಿದೆ. ಅದೇ ಅಷ್ಟಾಂಗ ಯೋಗ. ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ--ಈ ಮೆಟ್ಟಿಲುಗಳು ನಮ್ಮನ್ನು ಪರಾತತ್ವದೆಡೆಗೆ ಕರೆದೊಯ್ಯುತ್ತವೆ.

ತಿನ್ನಲಾರದ ದ್ರಾಕ್ಷಿ ಹುಳಿಯೆಂದ ನರಿಕಥೆಯನ್ನೂ, ಮೊಲಕ್ಕೆ ಮೂರೇ ಕಾಲೆಂದು ವಾದಿಸಿದ ವಿತಂಡವಾದಿಗಳ ತತ್ವವನ್ನೂ ನಾವು ಕೇಳಿದ್ದೇವೆ. ನಾಸ್ತಿಕರೂ ಕೂಡ ಇಲ್ಲೇ ಎಲ್ಲೋ ಅಕ್ಕ-ಪಕ್ಕ ನಿಲ್ಲುತ್ತಾರೆ. ಇದಕ್ಕೂ ಮುಂದೆ ಅವರು ಸಾಗುವುದಿಲ್ಲ. ಯಾಕೆಂದರೆ ಅವರಿಗೆ ಅದು ಸಾಧ್ಯವಿಲ್ಲ- ಸಾಧ್ಯವಿಲ್ಲದ್ದು " ಇಲ್ಲವೇ ಇಲ್ಲ "
ಎಂದುಬಿಟ್ಟರೆ ಅವರ ಅಹಂ ಗೆ ತೊಂದರೆಯಾಗುವುದಿಲ್ಲ. ಹೀಗಾಗಿ ದೇವರೂ ಸುಳ್ಳು, ಎಲ್ಲವೂ ಸುಳ್ಳು ಎಂಬುದೇ ಅವರು ಹೇಳುವ ಅಪ್ಪಟ ಸುಳ್ಳು ಎಂಬುದನ್ನು ಸಹೃದಯ ಓದುಗರಲ್ಲಿ ಭಿನ್ನವಿಸುತ್ತಿದ್ದೇನೆ.

ಈ ನಡುವೆ ಗೀತೆಯಲ್ಲಿ ಭಗವಂತ ಹೇಳುತ್ತಾನೆ - ಒಂದೊಮ್ಮೆ ಸಾಧಿಸಲು ಪ್ರಯತ್ನಿಸಿ ವಿಫಲನಾದರೆ ಆತನಿಗೆ ಮುಂದಿನ ಜನ್ಮದಲ್ಲಿ ಅದಕ್ಕೂ ಮುಂದಿನ ಹಂತವನ್ನೋ ಅಥವಾ ಆತ ಸಾಧಿಸಿದರೆ ಮೋಕ್ಷವನ್ನೋ ಕರುಣಿಸುತ್ತೇನೆ ಎಂದು. ಉದಾಹರಣೆಗೆ: ಉಡುಪಿಯ ವಿದ್ಯಾಭೂಷಣರು ಸಾಧನೆಯ ಹಾದಿಯಲ್ಲಿದ್ದರು. ಆದರೆ ಲೌಕಿಕದ ಆಕರ್ಷಣೆಯಿಂದ ಮನಸ್ಸು ವಿಚಲಿತವಾಯಿತು. ಆಂತರ್ಯದಲ್ಲೊಂದು ಬಾಹ್ಯದಲ್ಲೊಂದು ರೀತಿಯಲ್ಲಿ ಬದುಕಲು ಇಷ್ಟಪಡದೇ ನೇರವಾಗಿ ಸಮಾಜದಿಂದ, ಉಳಿದ ಪೀಠಾಧಿಪತಿಗಳಿಂದ ಆಗಬಹುದಾದ ಮಾನಸಿಕ ಆಘಾತಗಳನ್ನು ಗ್ರಹಿಸಿಯೂ ಆತ ಸನ್ಯಾಸಧರ್ಮ ತ್ಯಜಿಸಿ ಸಂಸಾರಿಯಾದರು. ಇದು ಒಂದರ್ಥದಲ್ಲಿ ಒಳ್ಳೆಯದೇ. ಈಗ ಅವರ ಸನ್ಯಾಸದಲ್ಲಿದ್ದಾಗ ನಡೆಸಿದ ಜಪ-ತಪದ ಆಧ್ಯಾತ್ಮಿಕ ಬ್ಯಾಂಕ್ ಬ್ಯಾಲೆನ್ಸ್ ಹಾಗೇ ಇರುತ್ತದೆ. ಮುಂದಿನ ಜನ್ಮದಲ್ಲಿ ಮತ್ತೆ ಸನ್ಯಾಸಿಯಾಗಿ ಹುಟ್ಟು ಇನ್ನೂ ಮೇಲ್ಪಂಕ್ತಿಗೋ ಮುಕ್ತಿಗೋ ಹೋಗಲು ದೇವರು ಅನುಕೂಲ ಕಲ್ಪಿಸುತ್ತಾನೆ. ವಿದ್ಯುದೀಪ ಉರಿಯುತ್ತಿರುವಾಗ ವಿದ್ಯುತ್ತು ಹೋದರೆ ಮರಳಿಬಂದಾಗಾ ಪುನಃ ಹೇಗೆ ಆ ದೀಪ ಉರಿಯುವುದೋ [ ನಾವು ಗುಂಡಿಯನ್ನು ಅದುಮಿ ಆರಿಸಿದ್ದರೆ ಆ ಪ್ರಶ್ನೆ ಬೇರೆ !] ಹಾಗೇ ಎಲ್ಲಿಗೇ ನಿಲ್ಲಿಸಿದ್ದರೋ ಅಲ್ಲಿಂದಲೇ ಹಿಡಿದೆತ್ತಿ ಮುಂದೆ ಅವಕಾಶ ಕಲ್ಪಿಸುತ್ತೇನೆ ಎಂಬುದು ಭಗವಂತನ ಹೇಳಿಕೆ.

ವಿಮಾನ ಚಾಲಕನಿಗೆ ವಾತಾವರಣದ ಪ್ರಕ್ಷುಬ್ಧತೆ ಪರಿಣಾಮ ಬೀರುವ ಹಾಗೇ ಮನೋವಿಮಾನ ಚಾಲಕನಿಗೆ ಬಾಹ್ಯಾಚರಣೆಗಳ ಪ್ರಕ್ಷುಬ್ಧತೆ ಆತನ ವೈಫಲ್ಯಕ್ಕೆ ಕಾರಣವಾಗಬಹುದು. ರಸ್ತೆಯಲ್ಲಿ ನಡೆಯುವ ಚಿಕ್ಕಮಕ್ಕಳನ್ನು ಬರಹೋಗುವ ವಾಹನಗಳಿಗೆ ಸಿಲುಕದಂತೆ ತಪ್ಪಿಸಲು ಕೈಹಿಡಿದು ಹೇಗೆ ನಡೆಸುತ್ತೇವೆಯೋ ಹಾಗೆಯೇ ನಮ್ಮ ಮನಸ್ಸನ್ನು ದುರ್ಗಮವಾದ ಹಾಗೂ ಕಡಿದಾದ ಈ ಶಿಖರದ ಹಾದಿಯಲ್ಲಿ ನಡೆಸುವುದು ಭಗವಂತ ನಮಗೇ ಕೊಟ್ಟ ಹೊಣೆಗಾರಿಕೆಯಾಗಿರುತ್ತದೆ. ಅದಕ್ಕೆಂದೇ ಸನ್ಯಾಸಿಗಳು ಬಾಹ್ಯಾಚರಣೆಯಲ್ಲಿ ಸಂಗೀತ ಪರಿಕರಗಳನ್ನು ನುಡಿಸುವುದು, ಹಾಡುವುದು, ನರ್ತಿಸುವುದೇ ಮುಂತಾದ ಐಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂಬ ನಿಯಮವಿದೆ. ಅದಲ್ಲದೇ ಸನ್ಯಾಸಿಗಳ ಮುಖ್ಯ ಕರ್ತವ್ಯಾ ತಪಸ್ಸನ್ನು ಆಚರಿಸುವುದು ಮತ್ತು ಸತ್ಯ-ನ್ಯಾಯ-ಧರ್ಮ ಮಾರ್ಗವನ್ನು ಶಿಷ್ಯರಿಗೆ ಬೋಧಿಸುವುದಾಗಿರುತ್ತದೆ. ಮಿಕ್ಕುಳಿದ ಎಂಜಿನೀಯರಿಂಗ್ ಕಾಲೇಜು ನಡೆಸುವುದು, ಆಸ್ಪತ್ರೆ ಕಟ್ಟುವುದು ಇವೆಲ್ಲಾ ರಾಜಕೀಯವನ್ನು ಹಿಡಿದು ಆಳುತ್ತಿರುವವರ ಜವಬ್ದಾರಿಯೇ ಹೊರತು ಯಾರೋ ಸ್ವಾಮಿಗಳು ತಮಗೆ ಏನನ್ನೂ ಮಾಡಲಿಲ್ಲಾ ಎಂಬುದು ಸರಿಯಲ್ಲ. ಬದಲಾಗಿ ಸಮಾಜ/ಶಿಷ್ಯರು ತಂತಮ್ಮ ಆತ್ಮೋನ್ನತಿಗೆ ಬೇಕಾಗಿ ಮಾರ್ಗದರ್ಶಿಸಲು ಬೇಕಾಗಿ ಅಂತಹ ಗುರುವನ್ನು ಗುರುತಿಸುವುದು,ಗೌರವಿಸುವುದು ಮಾಡಬೇಕಾದುದು ಶಿಷ್ಯರಾದವರ ಧರ್ಮ. ಸನ್ಯಾಸಿಗಳು ತಾನೇ ತಾನಾಗಿ ಸಮಾಜಕ್ಕೆ ವಿದ್ಯೆಯನ್ನೋ ಆರೋಗ್ಯವನ್ನೋ ಕೊಡಲು ಮುಂದಾಗಿ ಕೆಲವಾರು ಸಂಸ್ಥೆಗಳನ್ನು ನಡೆಸಿದರೆ ಅದು ಅವರ ಸ್ವ-ಇಚ್ಛೆ. ಹೀಗೆ ನಡೆಸುವಾಗ ಕಾರಣಾಂತರಗಳಿಂದ ಬಾಹ್ಯಾಚರಣೆಯ ಪ್ರಕ್ಷುಬ್ಧತೆ ತನ್ನನ್ನು ಕಾಡದಂತೆ ಅವರು ಎಚ್ಚರವಹಿಸಬೇಕಾಗುತ್ತದೆ, ಯಾಕೆಂದರೆ ಸನ್ಯಾಸಿಗಳಿಗೆ ಕರ್ಮಾಧಿಕಾರವಿಲ್ಲ, ಪ್ರತೀ ಕೆಲಸಕ್ಕೂ ಅವರು ಪರಾವಲಂಬಿಯಾಗಿ ಬದುಕಬೇಕಾಗುತ್ತದೆ, ಊಟಮಾಡುವಾಗ ಕೂಡ ಶಿಷ್ಯನೊಬ್ಬ ಉದ್ದರಣೆಯಿಂದ ಹಸ್ತೋದಕ ಹಾಕಿದರೇ ಊಟಮಾಡಬೇಕು ಇಲ್ಲಾಂದರೆ ಹಾಗೇ ಉಳಿಯಬೇಕು-- ಇದು ಸನ್ಯಾಸಾಶ್ರಮದ ಅನಿವಾರ್ಯತೆ !

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ-ರೂಪ ಶಿವೋಹಂ ಶಿವೋಹಂ ||

ಎಂತಹ ಚಂದದ ವಾಖ್ಯಗಳು, ಎಷ್ಟು ಅರ್ಥಗರ್ಭಿತ ! ಆತ್ಮದ ಮೂಲರೂಪಕ್ಕೆ ಯಾವುದೇ ಪಾಪ-ಪುಣ್ಯ, ಸುಖ-ದುಃಖಗಳ ಗೊಡವೆಯಿಲ್ಲ, ಯಾವುದೇ ತೀರ್ಥ- ಮಂತ್ರ, ವೇದ-ಯಜ್ಞಗಳ ಅನುಷ್ಠಾನವಿಲ್ಲ, ಊಟವಿದ್ದರೂ ಇರದಿದ್ದರೂ ಒಂದೇ ಸ್ಥಿತಿ--ಅದೇ ಚಿದಾನಂದ ರೂಪ !

ನೀವೀಗ ಕೇಳುತ್ತೀರಿ ಅರೆರೆ ಆತ್ಮೋದ್ಧಾರಕ್ಕೆ ಏಕಾಗ್ರಚಿತ್ತದಿಂದ ಧ್ಯಾನಮಾಡಬೇಕೆಂದು ಹೇಳಿದ ನಾನೇ ಈಗ ಆತ್ಮಕ್ಕೆ ಯಾವುದೂ ಬಾಧಕವಲ್ಲ ಎಂಬುದನ್ನು ಪ್ರತಿಪಾದಿಸುತ್ತಿರುವುದು ವಿರೋಧಾಭಾಸವಾಗಿ ಕಾಣಬಹುದು. ಹೇಳುತ್ತೇನೆ ಕೇಳಿ: ಆತ್ಮದಲ್ಲಿ ಹಲವು ಜೋಡಣೆಗಳಿವೆ. ಅವು ಕೇವಲಾತ್ಮಕ್ಕೆ ಅಂಟಿಕೊಂಡಿರುತ್ತವೆ. ಹಾಗೆ ಅಂಟಿಕೊಂಡಿರುವ ನಂಟನ್ನು ಕಳೆಯಲೇ ನಾವು ಸಾಧನೆಯ ಮಾರ್ಗ ಹಿಡಿಯಬೇಕಾಗುತ್ತದೆ. ಒಂದು ಉದಾಹರಣೆ ಕೇಳಿ- ಶೇಂಗಾ ಅಥವ ನೆಲಗಡಲೆ ಮೂಲದಲ್ಲಿ ಒಂದೇ. ಆದರೆ ನಾವದನ್ನು ಹಲವು ರೀತಿಯಲ್ಲಿ ಕಾಣುತ್ತೇವೆ. ಆಗತಾನೇ ಕಿತ್ತ ಹಸಿಶೇಂಗಾ, ಸಿಪ್ಪೆಸಹಿತ ಒಣಗಿದ ಶೇಂಗಾ, ಸಿಪ್ಪೆರಹಿತ ಒಣಗಿದ ಶೇಂಗಾ, ಹುರಿದ ಶೇಂಗಾ, ಕರಿದ ಶೇಂಗಾ ......ಹೀಗೇ..., ಅದೇ ರೀತಿ ಆತ್ಮ ದೇಹದಲ್ಲಿ ಆಸೀನವಾದಾಗ ಅದಕ್ಕೆ ಸ್ಥಿತ್ಯಂತರದ ಪ್ರಭಾವವಿರುತ್ತದೆ. ದೇಹದೊಳಗಿನ ಆತ್ಮ ಬಾಣಲೆಯಲ್ಲಿರುವ ಶೇಂಗಾದಂತೇ ಆದಾಗ ಮಾತ್ರ ಅದು ಕೇವಲಾತ್ಮವಾಗುತ್ತದೆ. ಹೇಗೆ ಹುರಿದ/ಕರಿದ ಶೇಂಗಾ ಭುವಿಯಲ್ಲಿ ನೆಟ್ಟರೆ ಸಸಿಹುಟ್ಟಲಾರದೋ ಕೇವಲಾತ್ಮ ಸ್ಥಿತಿಗೆ ತಲ್ಪಿದ ಆತ್ಮ ಮತ್ತೆ ಮರುಹುಟ್ಟು ಪಡೆಯದೇ ಪರಮಾತ್ಮದಲ್ಲಿ ಅಥವಾ ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮೇಲಿನ ಶ್ಲೋಕ ಕೇವಲಾತ್ಮದ ಕುರಿತಾಗಿ ಹೇಳಿದ್ದಿರುತ್ತದೆ. ಕೇವಲಾತ್ಮಕ್ಕೂ ಪರಮಾತ್ಮಕ್ಕೂ ಭಿನ್ನತೆ ಇರುವುದಿಲ್ಲ. ಕೇವಲಾತ್ಮ ಅತ್ಯಂತ ಶಕ್ತಿಸಾಮರ್ಥ್ಯವುಳ್ಳದ್ದಾಗಿರುತ್ತದೆ.

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಹುಟ್ಟೂ-ಸಾವು , ಯಾವುದೇ ಶಂಕೆ, ಜಾತಿ ಭೇದ, ತಂದೆ-ತಾಯಿ, ಬಂಧು-ಮಿತ್ರ, ಗುರು-ಶಿಷ್ಯ ಇವ್ಯಾವ ಪರಿಧಿ-ಕಟ್ಟುಪಾಡುಗಳೂ ಕೇವಲಾತ್ಮಕ್ಕೆ ತಟ್ಟುವುದಿಲ್ಲ. ಅದಕ್ಕೆ ಅಪ್ಪನೂ ಇಲ್ಲ-ಅಮ್ಮನೂ ಇಲ್ಲ, ಬಂಧುವೂ ಇಲ್ಲ-ಮಿತ್ರರೂ ಇಲ್ಲ, ಜಾತಿಯೂ ಇಲ್ಲ-ಭೇದವೂ ಇಲ್ಲ,ಗುರುವೂ ಇಲ್ಲ-ಶಿಷ್ಯನೂ ಇಲ್ಲ. ಇದುವೇ ಆತ್ಮದ ಚಿದಾನಂದ ರೂಪ.

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಯಾವುದೇ ರಾಗದ್ವೇಷವಿಲ್ಲ, ಲೋಭ-ಮೋಹಗಳೂ ಇಲ್ಲ, ಸೊಕ್ಕೂ ಇಲ್ಲ, ಸಿಡುಕೂ ಇಲ್ಲ, ಹೊಟ್ಟೆಕಿಚ್ಚೂ ಇಲ್ಲ, ಯಾವುದೇ ಧರ್ಮವೂ ಇಲ್ಲ, ಧನವೂ ಇಲ್ಲ, ಕಾಮವಾಂಛೆಯೂ ಇಲ್ಲ, ಮೋಕ್ಷವೂ ಇಲ್ಲ....ಈ ಸ್ಥಿತಿಯೇ ಆತ್ಮದ ಚಿದಾನಂದ ಸ್ಥಿತಿ.

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಪಾಯೂ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಪ್ರಾಣದ ಸಂಜ್ಞೆಯಿಲ್ಲ, ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ಎಂಬ ಪಂಚ ವಾಯುಗಳ ಪರಿಷೇಚನೆಯಿಲ್ಲ, ಸಪ್ತಧಾತುಗಳಾಗಳೀ ಪಂಚಕೋಶಗಳಾಗಲೀ ಕಾರ್ಯಕಾರಣವಲ್ಲ, ಮಾತನಾಡುವುದಿಲ್ಲ, ಹಸ್ತ-ಪಾದಗಳೆಂಬ ಅವಯವಗಳೂ ಇಲ್ಲ--ಇದೇ ಚಿದಾನಂದ-ರೂಪ.

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಬುದ್ಧಿ-ಮನಸ್ಸು-ಚಿತ್ತಗಳಿಲ್ಲ, ಕೇಳುವ ಕಿವಿಯಾಗಲೀ, ನೋಡುವ ಕಣ್ಣಾಗಲೀ, ಆಘ್ರಾಣಿಸುವ ನಾಸಿಕವಾಗಲೀ, ರುಚಿನೋಡುವ ನಾಲಿಗೆಯಾಗಲೀ ಇಲ್ಲ, ಭೂಮಿ-ಆಕಾಶ-ಅಗ್ನಿ-ವಾಯು-ವರುಣ[ಜಲ]ರೆಂಬ ಪಂಚಭೂತಗಳ ಪ್ರಲೋಭನೆಯಿಲ್ಲ--ಇದೇ ಚಿದಾನಂದರೂಪ--ಇದೇ ಸದಾನಂದ ರೂಪ.

ಇವತ್ತು ಯಾರೋ ವಿಜ್ಞಾನಿಯೊಬ್ಬ ಯಾವುದೋ ಪ್ರಯೋಗದಲ್ಲಿ ತೊಡಗಿದ್ದರೆ ನಾವು ಆತನನ್ನು ವಿಜ್ಞಾನಿಯೆಂದು ಗುರುತಿಸುತ್ತೇವೆ, ಗೌರವಿಸುತ್ತೇವೆ. ಅದೇ ಮನುಷ್ಯನಿಗೂ ಮಿಗಿಲಾದ ಅತಿಮಾನುಷ ಶಕ್ತಿಯನ್ನು ಆವರ್ಭವಿಸಿಕೊಳ್ಳಲು ಕಾತ್ರರಾಗಿರುವ, ಅದನ್ನು ತಲುಪಲು ಬಯಸುವ, ಆ ಶಕ್ತಿಯನ್ನು ತನ್ನಲ್ಲಿ ಭಾಗಶಃ ಹುದುಗಿಸಿಕೊಂಡು ತನ್ನ ಸುತ್ತಲಿನ ಶಿಷ್ಯವೃಂದಕ್ಕೆ ಸನ್ಮಾರ್ಗವನ್ನು ತೋರಿಸುವ, ಶಿಷ್ಯವೃಂದದ ಜನ್ಮಾಂತರದ ಕಷ್ಟಕಾರ್ಪಣ್ಯಗಳನ್ನು ನೀಗುವ ಯೋಗೀಂದ್ರನೊಬ್ಬ ನಮ್ಮ ನಡುವಿದ್ದರೆ ಅವರನ್ನು ಕಾಣದಾಗುತ್ತೇವೆ. ಆಧುನಿಕತೆಯ ಸೋಗಿನಲ್ಲಿ ತಾವು ಬುದ್ಧಿಜೀವಿಗಳೆಂದು ಬೋರ್ಡುಹಾಕಿಕೊಳ್ಳುವ ನಾವು ನಮಗಿಂತ ಉತ್ತಮ ಸ್ತರದಲ್ಲಿದ್ದ ಬುದ್ಧಿಜೀವಿಗಳು ಅನುಭವಿಸಿದ, ಅನುಭಾವಿಗಳಾಗಿ ನಮ್ಮೊಳಿತಿಗಾಗಿ ಹಂಚಿದ ಜ್ಞಾನವನ್ನು ಅರ್ಥಹೀನವೆಂದು ಪರಿಗಣಿಸುತ್ತೇವೆ. ವಿವೇಚಿಸದೇ ಕೈಲಾಗದವರು ಸನ್ಯಾಸಿಗಳೋ ಸಾಧುಗಳೋ ಆಗುತ್ತಾರೆಂದು ತಿಳಿಯುತ್ತೇವೆ. ನಮ್ಮತನವೇ ದೊಡ್ಡದೆಂದು ಹೆಮ್ಮೆಯಿಂದ ಸಂಭ್ರಮಿಸುತ್ತೇವೆ. ಅರಿಯದೇ ಉರಿಯುತ್ತೇವೆ-ಇದು ನಮ್ಮ ಅಜ್ಞಾನವೇ ಹೊರತು ನಿಜವಾದ ಸಾಧು-ಸಂತರು ಅಜ್ಞಾನಿಗಳಲ್ಲ. ಅವರು ಆಧ್ಯಾತ್ಮ ವಿಜ್ಞಾನಿಗಳು! ಅವರೂ ಸಂಶೋಧಕರೇ. ಅವರವರು ಅವರವರದೇ ಆದ ಶಿಸ್ತಿನಲ್ಲಿ, ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ಈಸಿ ಫಾರ್ಮುಲಾ ಸಂಶೋಧಿಸುತ್ತಾರೆ.

ಇಂತಹ ಸಂತ-ಮಹಂತರ ಸಾಲಿಗೆ ಶ್ರೀ ಶ್ರೀ ಕೇಶವಮೂರ್ತಿಗಳೆಂಬ ಸಾಧುಗಳೂ ಸೇರಿದ್ದರು. ಅವರ ಕುಟುಂಬದ ಹಿರಿಯರು ಈಗ ಯಾರೂ ಇರಲಾರರೇನೋ--ಯಾಕೆಂದರೆ ಮೊನ್ನೆ ಅವರು ಮುಕ್ತರಾದಾಗ ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ತುಂಬಾ ಎಳವೆಯಲ್ಲೇ ತೆಂದೆ-ತಾಯಿಗಳನ್ನು ಕಳೆದುಕೊಂಡಿದ್ದರಿಂದಲೂ, ಊರನ್ನು ಬಿಟ್ಟು ಹಲವಾರೆಡೆಗೆ ಸಾಧುಜೀವನ ನಡೆಸಿದ್ದರಿಂದಲೂ ಅವರ ಕುಟುಂಬ-ಬಂಧುವರ್ಗದ ಎಳೆಯ ವ್ಯಕ್ತಿಗಳಿಗೆ ಅವರ ಪರಿಚಯವಿತ್ತೋ ಇಲ್ಲವೋ ತಿಳಿದಿಲ್ಲ. ಕೇಶವಮೂರ್ತಿಗಳನ್ನು ಈ ವಿಷಯದಲ್ಲಿ ಬಹಳವಾಗಿ ಯಾರೂ ಕೆದಕುತ್ತಿರಲಿಲ್ಲ. ಅವರೊಬ್ಬ ಸಾಂಕೇತಿ ಬ್ರಾಹ್ಮಣ ಕುಟುಂಬದ ಹಿನ್ನೆಲೆಯಿಂದ ಬಂದವರೆಂದು ಅವರೇ ಹೇಳಿದ್ದರಂತೆ. ಬಹಳ ಸಾದಾ ಸೀದಾ ಇದ್ದ ಅವರು ಆಜಾನುಬಾಹುವೇನೂ ಆಗಿರಲಿಲ್ಲ. ಸುಮಾರು ೫ ಅಡಿ-೩ ಅಂಗುಲ ಎತ್ತರವಿದ್ದರು. ಶಜವಾಗಿ ಕೃಶಶರೀರಿ. ಒಪ್ಪೊತ್ತೂಟ- ಅದಕ್ಕೂ ಸಂಕೋಚ. ಶ್ರೀಧರಾಶ್ರಮದಲ್ಲಿ ತಮ್ಮೆಲ್ಲಾ ಕೆಲಸಗಳನ್ನು ಕೊನೆಯವರೆಗೂ ತಾವೇ ಮಾಡಿಕೊಳ್ಳುತ್ತಿದ್ದರು. ಬೆಳಗಿನಜಾವದಿಂದ ಮಧ್ಯಾಹ್ನದವರೆಗೆ ಧ್ಯಾನದಲ್ಲಿರುತ್ತಿದ್ದ ಅವರು ೧೨ ಗಂಟೆಗೆ ಅವರಿರುವ ಕೊಠಡಿಯಿಂದ ಸುಮಾರು ೬೦-೭೦ ಮೆಟ್ಟಿಲೇರಿ ಶ್ರೀಧರರ ಸಮಾಧಿಮಂದಿರಕ್ಕೆ ಮಹಾಮಂಗಲಾರತಿಗೆ ನಿತ್ಯವೂ ತಪ್ಪಿಸದೇ ಬರುತ್ತಿದ್ದರು. ಆಮೇಲೆ ೧:೩೦ರ ವೇಳೆಗೆ ಮತ್ತೆ ಕೆಳಗಡೆ ದೂರದಲ್ಲಿರುವ ಭೋಜನಶಾಲೆಗೆ ನಡೆದೇ ಹೋಗಿ ಆಶ್ರಮದ ಇತರ ವಟುಗಳೊಡನೆ ಸಹಪಂಕ್ತಿ ಭೋಜನದಲ್ಲಿ ಊಟ ಸೇವಿಸುತ್ತಿದ್ದರು. ಊಟದ ನಂತರ ತಮ್ಮ ತಟ್ಟೆಯನ್ನು ತಾವೇ ತೊಳೆದಿಟ್ಟು ಹೋಗುತ್ತಿದ್ದರು. ಬರೇ ಒಂದೇ ಊಟ. ಮತ್ತೆ ಹೊಟ್ಟೆಗೆ ಆಹಾರ ಬೀಳುತ್ತಿದ್ದುದು ಮಾರನೇ ದಿನ ಮಧ್ಯಾಹ್ನವೇ ! ಆಶ್ರಮದ ಆಡಳ್ತೆಯ ಸದಸ್ಯರೊಬ್ಬರು ಕೇಶವಮೂರ್ತಿಗಳ್ಯಾಕೆ ಸನ್ಯಾಸ ದೀಕ್ಷೆ ಸ್ವೀಕರಿಸಿಲ್ಲಾ ಎಂದು ಕೇಳಿದರೆ, "ನಾನು ಹಾಗೇ ಮಾಡಿದರೆ ಕರ್ಮಾಧಿಕಾರ ಹೋಗಿ ನಿಮ್ಮೆಲ್ಲರಿಂದ ಸೇವೆ ಮಾಡಿಸ್ಕೊಳ್ಳಬೇಕಾಗುತ್ತಪ್ಪಾ " ಎಂದುಬಿಟ್ಟರಂತೆ ! ಪಾಠಶಾಲೆಯ ಹುಡುಗರು ಕೆಲವೊಮ್ಮೆ ಅವರ ಕೂಡ ತರಲೆಮಾಡುತ್ತಿದ್ದರು. ಆದರೂ ಅವರನ್ನೆಲ್ಲಾ ಸಹಿಸಿಕೊಂಡೇ, ಕ್ಷಮಿಸುತ್ತಲೇ ಬದುಕಿದ ದಿವ್ಯರೂಪವದು. ಎಲ್ಲರಿಗೂ ಹಿರಿಯಜ್ಜನ ಥರ ಇದ್ದ ಅವರು ಹೊರಗಡೆ ಬರುತ್ತಿದ್ದುದು ಕಮ್ಮಿ-ಹೀಗಾಗಿ ಬಹಳ ಮಂದಿಗೆ ಅವರ ದರ್ಶನವಾಗಲೀ, ಪರಿಚಯವಾಗಲೀ ಆಗಿಲ್ಲ. ಅಂತೂ ಅವರೊಬ್ಬ ಮಹಾನ್ ಚೇತನವೆಂಬುದು ಸುಳ್ಳಲ್ಲ.

ಹತ್ತುವರ್ಷಗಳ ಹಿಂದೆ ತಡವಾಗಿ ಗುರುತಿಸಿದ ಆಶ್ರಮದ ಸಮಿತಿ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ಅವರ ಹೆಸರು ಶಾಶ್ವತವಾಗಿ ಆಶ್ರಮದ ಯಾತ್ರಾರ್ಥಿಗಳಿಗೆ ಗೋಚರಿಸುವ ಹಾಗೇ ಏನಾದರೊಂದು ಸ್ಮರಣೀಯವಾದುದನ್ನು ಮಾಡಬೇಕೆಂಬ ಆಶಯವನ್ನು ಸಮಿತಿ ಹೊಂದಿದೆ. ಸಜ್ಜನರು ಸಿಗುವುದು ದುರ್ಲಭ, ಅದರಲ್ಲಂತೂ ಬದುಕಿನುದ್ದಕ್ಕೂ ಯಾರಿಂದಲೂ ಸೇವೆ ಅಪೇಕ್ಷಿಸದೇ, ನಿಸ್ವಾರ್ಥರಾಗಿ, ಸಮಾಜದ ಎಲ್ಲರ ಒಳಿತಿಗಾಗಿ ಆಶ್ರಮದಲ್ಲಿದ್ದು ತಪಗೈದ ಅವರ ಕಾರ್ಯ ಶ್ಲಾಘನೀಯ ಮತ್ತು ಮನನೀಯ. ಸಾಧುವಿಗೂ ಸನ್ಯಾಸಿಗೂ ಬರೇ ದೀಕ್ಷೆಯಷ್ಟೇ ಅಂತರವಾದರೂ ಸನ್ಯಾಸಿಗಳಿಗೆ ಸಿಗುವ ಸೌಲಭ್ಯ ಸಾಧುಗಳಿಗೆ ಸಿಗುವುದಿಲ್ಲ. ಅಂತ್ಯಕಾರ್ಯಕೂಡ ಸಾಧುಗಳಿಗೆ ಸಾದಾ ಜನರಂತೇ ನಡೆದರೆ ಸನ್ಯಾಸಿಗಳಿಗೆ ಅದರ ಕ್ರಮ ವಿಭಿನ್ನವಾಗಿರುತ್ತದೆ. ಏನೇ ಇದ್ದರೂ ಯಾವೊಬ್ಬ ಸನ್ಯಾಸಿಗಿಂತ ತೂಕ ಹೆಚ್ಚಿರಬಹುದಾದ ತಪಸ್ಸಾಧನೆಗೈದ ಶ್ರೀ ಶ್ರೀ ಕೇಶವಮೂರ್ತಿಗಳಿಗೆ ತ್ರಿಕರಣಪೂರ್ವಕ ಪಾದಾಭಿವಂದನೆ, ಸಾಷ್ಟಾಂಗ ವಂದನೆ. ಗುರುವಿನ ಬೆಳಕು ಚೆಲ್ಲುವ ಅವರ ಚೇತನವನ್ನು ನೆನೆದು ಸ್ತುತಿಗೀತೆಯೊಂದನ್ನು ಬರೆದೆ. ಅದು ನಿಮ್ಮೆಲ್ಲರ ಓದಿಗಾಗಿ ಇಲ್ಲಿದೆ:

ಗುರುವೆ ನಮ್ಮ ತಾಯಿ-ತಂದೆ
ಗುರುವೆ ನಮ್ಮ ಬಂಧು-ಬಳಗ
ಗುರುವೆ ಸಕಲ ಸಂಪದವೂ
ಹರಿಯು ಹರನು ಬ್ರಹ್ಮನು

ನಶ್ವರವಿದು ಈ ಶರೀರ
ಶಾಶ್ವತದೆಡೆ ಸಾಗುಬಾರ
ನಿಶ್ಚಯವದು ಪರದಸ್ಥಿತ್ವ
ನೆಚ್ಚಿ ನಡೆಯೆಸಿಗುವುದು !

ಜ್ಯೋತಿ ಬೆಳಕನೀಡಿ ಜಗದಿ
ಅಂಧಕಾರ ಕಳೆಯುವಂತೆ
ನೀತಿ-ನಿಯಮ ಬೋಧೆತಿಳಿದು
ಬೆಳಗಲಾತ್ಮ ಚೇತನ

ದಾಸರಾಗಲಿಲ್ಲ ನಾವು
ಸಾಧುವಾಗದಕ್ಕೆ ನೋವು
ಸಾಧಕರ ಪಾದದಡಿಯ
ಧೂಳಾಗಲಿ ಮೈಮನ

ನಗುವಿನಲೀ ನೋವಿನಲೀ
ಬಗೆಯ ಭೇದ ಕಾಣದಂತ
ನಿಜದ ಬ್ರಹ್ಮಜ್ಞಾನವರಿತು
ಭಜನೆಮಾಡು ದೇವನ

ಗುರುಕರುಣೆಯ ಜ್ಯೋತಿಯಲ್ಲಿ
ಅವರ ಮಂದಹಾಸದಲ್ಲಿ
ಗುರುಪಾದದ ಸೇವೆಯಲ್ಲಿ
ನಡೆಯಲೆಮ್ಮ ಜೀವನ