ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 9, 2010

ಅಭಿನವ ಭಾರತಚಿತ್ರ ಕೃಪೆ :ಅಂತರ್ಜಾಲ

ಅಭಿನವ ಭಾರತ

ನಮ್ಮದೀ ದೇಗುಲವು ಪುಣ್ಯ ಭಾರತದೇಶ
ಪಡೆದು ಬಾ ಹುಟ್ಟಲೊಮ್ಮೆ!
ಹೆಮ್ಮೆಯಲಿ ಬೀಗುವೆವು ಭರತ ಖಂಡವಿದೆಂದು
ದುಡಿದು ಬಾ ನೋಡಲೊಮ್ಮೆ!

ಅಗಣಿತ ವಿದ್ಯೆಗಳ ಆಗರವು ಈ ನೆಲವು
ಸಗರಚಕ್ರವರ್ತಿ ಆಳ್ದ ಜಗವು
ಬಗೆಬಗೆಯ ವೇಷಭೂಷಣಗಳಲಿ ಶೋಭಿಸುವ
ನಗೆಹೊನಲು ಹರಿಸಿದ ಜನರಕಡಲು

ನವರತ್ನ ರಾಶಿಗಳ ಬಳ್ಳ ಬಳ್ಳದಿ ಅಳೆದು
ಉಳ್ಳವರು ಮಾರಿದರು ಯುಗಯುಗಾಂತರದಿ
ಕವಿರತ್ನ ಕಾಳಿದಾಸನು ಮತ್ತೆ ವಾಲ್ಮೀಕಿ
ಹಳ್ಳ-ಹೊಳೆ ಹರಿಸಿದರು ಕಾವ್ಯಗಳ ತೆರದಿ

ಕನ್ನಡಾಂಬೆಯು ಸೇರಿ ಹಲವು ಮಕ್ಕಳ ಬೀಡು
ಸನ್ನಡತೆ-ಸಂಸ್ಕೃತಿಯ ವಿಶ್ವದಾಲಯವು
ಪನ್ನೀರ ಕಾರಂಜಿ ಜನರಗುಣ ಅಪರಂಜಿ
ಮುನ್ನಡೆದ ರಾಷ್ಟ್ರಗಳ ರಾಣಿಯರಮನೆಯು.

ಧುಮ್ಮಿಕ್ಕಿ ಹರಿವಂತ ಹಲವು ನದಿಗಳ ನಾಡು
ಗೊಮ್ಮಟನು ನೆಲೆನಿಂತ ದಿವ್ಯ ಪರಿಸರವು
ಹೊಮ್ಮಿ ಹೊರಹರಿದ ಹಲ ಪ್ರತಿಭೆಗಳ ಸಾಗರವು
ಗಮ್ಮತ್ತು-ಗರದಿಯಾಟವು ನಡೆದ ಸ್ಥಳವು