Monday, April 2, 2012
ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !
ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !
ನಗುವಳುವಿನ ಭಾವಗಳನು ದೇವನಿತ್ತ ಕಟ್ಟಲು
ಬಗೆಬಗೆಯಲಿ ಜೀವರಾಶಿ ಯಾವ ಜನ್ಮ ಎಂದಿಗೋ
ಅಗೆದುಮೊಗೆದು ಎಣಿಸಿಗುಣಿಸೆ ಕಾಣಲಿಲ್ಲ ಮಂದಿಗೂ !
ಸೊಗದ ಸಿರಿಯೊ ದುಃಖದ ಕರುಬೊ ಹೆಜ್ಜೆಹೆಜ್ಜೆ ಸಂದಿಗೂ
ಸಿಗದ ಸೂತ್ರ ಹುಡುಕಿ ಅಲೆದು ಸಣ್ಣವಾದೆವಿಂದಿಗೂ
ಹಗಲಿರುಳಿನ ಭೇದಮರೆತ ಜಗವೆನ್ನದು ಈ ದಿನ
ಬಿಗಡಾಯಿಸಿ ಒತ್ತಡಗಳು ಹುರಿದು ಮುಕ್ಕುತೀಮನ
ಒಗೆಯಲೇನು ಕಾಯವೆಂಬ ಬೇಗುದಿಯದು ಅನುದಿನ
ಅಗಲಲಾರೆ ಲೋಕವೆಂಬ ವ್ಯಾಮೋಹದ ಬಂಧನ !
ಚಿಗರೆ ಜಿಂಕೆ ಕಾಡುಗಳವು ನಾಶವಾಗಿ ಹೋದವು
ಸಗರ ಪುತ್ರ ತಂದ ಗಂಗೆ ತುಂಗೆ ಮಲಿನವಾದವು !
ನಗರಗಳಲಿ ನರಕರೂಪ ನರ್ತನವನೆ ಗೈದವು
ಹಗುರವೆಲ್ಲ ಮೌಲ್ಯವಿಲ್ಲ ಮುಗುದತನವನಳಿದವು !
ಮಗುಚಿಕೊಳ್ಳೆ ಭಯವ ತರುವ ರಕ್ಕಸರಾ ಮರ್ಮವು
ನೆಗಚುತಿರಲು ಗೂಢಚಾರ ಮತಾಂಧರ ಕರ್ಮವು
ನಿಗುಚುತಿರುವ ಲಂಚಕೋರ ಅಳುವರ ಅಧರ್ಮವು
ತುಗುಚುತಿರುವೆ ಹಲವನರಿಯೆ ನನ್ನದಿಲ್ಲಿ ತರ್ಮವು
Labels:
ಹೀಗೊಂದು ಪ್ರಯತ್ನ
Subscribe to:
Posts (Atom)