ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 27, 2010

ಖಂಡವಿದೆಕೋ ಮಾಂಸವಿದೆಕೋ




[ಸ್ನೇಹಿತರೇ, ಇಂದಿನ ನನ್ನ ಲೇಖನಕ್ಕೆ ಪೂರ್ವಭಾವಿಯಾಗಿ ಒಂದು ಪ್ರಸ್ತುತಿ- ಮೊನ್ನೆ ತಮ್ಮನ್ನೆಲ್ಲಾ ದಿ|ಶ್ರೀ ಮಹಾಬಲ ಹೆಗಡೆ,ಕೆರೆಮನೆ ಇವರ ನಾದ-ನಮನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆನಷ್ಟೇ? ಕಾರ್ಯಕ್ರಮ ತುಂಬಾ ಚೆನ್ನಾಗಿ ಸಾಂಗವಾಯ್ತು. ಸಾವಿರ ಸಂಖ್ಯೆಯಲ್ಲಿದ್ದ ಪ್ರೇಕ್ಷಕರನ್ನು ಮಹಾಬಲ ಹೆಗಡೆಯವರ ಮಗ ಶ್ರೀ ರಾಮ ಹೆಗಡೆಯವರು ತಮ್ಮ ಭಾವಗೀತೆ ಮತ್ತು ಯಕ್ಷಗಾನದ ಹಾಡುಗಳಿಂದ ಮಹಾಬಲರ ಕಾಲಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾದರು. ಅವರ ಇಡೀ ಕುಟುಂಬವೇ ಬಂದು ಹಾಡು-ಭಜನೆಗಳ ಮುಖಾಂತರ ಮನಸೂರೆ ಗೊಂಡರು.ನುಡಿನಮನ ಸಲ್ಲಿಸುತ್ತಾ ನಮ್ಮ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಉತ್ತರಕನ್ನಡದ ಭಾಷಾ ಸೊಗಡನ್ನು-ಅಲ್ಲಿನ ಜೀವನದ ಸೊಗಸನ್ನು ಹದ ಪಾಕ ಇಳಿಸಿ, ಮಹಾಬಲರ ಬಗ್ಗೆ-ಯಕ್ಷಗಾನದ ಬಗ್ಗೆ ತಮಗಿದ್ದ-ಇರುವ ಕಳಕಳಿ ವ್ಯಕ್ತಪಡಿಸಿದರು, ಕೆರೆಮನೆ ಶಿವಾನಂದ ಹೆಗಡೆಯವರ ನೇತ್ರತ್ವದ ಇಡಗುಂಜಿ ಮೇಳ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶಿಸಿ ಕಳೆಕಟ್ಟಿದರು, ಯಕ್ಷಗಾನ-ಹಿಂದೂಸ್ತಾನಿ ಸಂಗೀತವನ್ನು ಉಟ್ಟ-ಉಂಡ,ಆ ಕಲೆಯಲ್ಲೇ ತಮ್ಮೆಲ್ಲ ಕಷ್ಟ-ಬವಣೆ-ಬಡತನ ಮರೆತು ಜನತೆಗಾಗಿ ಭಾವುಕರಾಗಿ ಮೆರೆದು ಬದುಕು ಪೂರ್ತಿ ಪ್ರೇಕ್ಷಕರನ್ನ-ಆಸಕ್ತರನ್ನ ರಂಜಿಸಿದ ಮಹಾಬಲರು 'ಯಕ್ಷಗಾನಕ್ಕೊಬ್ಬ ಮಹಾಬಲ'ರೇ ಸರಿ ! ಕಾರ್ಯಕ್ರಮ ರೂಪಿಸಿ,ಅಳವಡಿಸಿ ಪ್ರಸ್ತುತಪಡಿಸಿದ 'ಸಪ್ತಕ' ಕ್ಕೆ ನಾವೆಲ್ಲಾ ಆಭಾರಿಗಳಾಗೋಣ. ಒಟ್ಟಾರೆ
ತಮ್ಮೆಲ್ಲರ ಪರವಾಗಿ ನಾನು ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ತಮಗೆ ಸಂದೇಶ ತಲ್ಪಿಸುತ್ತಿದ್ದೇನೆ-ಒಪ್ಪಿಸಿಕೊಳ್ಳಿ
]
---------

ಖಂಡವಿದೆಕೋ ಮಾಂಸವಿದೆಕೋ

[ಚಿತ್ರಗಳ ಋಣ : ಅಂತರ್ಜಾಲದಿಂದ ಕೆಲವು ]














ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ತನ್ನ ಮೂಲ ಸತ್ವ ಸಾರವಾದ, ಸಂಪತ್ತಿನ ಆಗರವಾದ, ಅನೇಕ ವನ್ಯಜೀವಿಗಳಿಗೆ ಆಶ್ರಯ ತಾಣವಾದ ಹಸಿರು ಕಾಡನ್ನೂ, ಆಶ್ರಯಿಸಿದ ಪಶು-ಪಕ್ಷಿಗಳಾದಿಯಾಗಿ ಎಲ್ಲಾ ವನ್ಯಜೀವಿಗಳನ್ನೂ ಕಳೆದುಕೊಳ್ಳುತ್ತದೆ. ಬೇರೆ ರಾಜ್ಯಗಳ ಮೂಲದಲ್ಲಿ ಹುಟ್ಟಿ, ಬೆಳೆದು ಇಲ್ಲಿ ಕಂಡಲ್ಲಿ ಜನರ ಒಳ್ಳೆಯತನವನ್ನೂ ದುರುಪಯೋಗಪಡಿಸಿಕೊಳ್ಳುತ್ತಾ, ಇಲ್ಲಿನ ಸಿರಿಯನ್ನು ಸೂರೆಹೊಡೆಯುತ್ತಿರುವ ಗಣಿಧಣಿಗಳಿಗೆ ನಮ್ಮ ರಾಜ್ಯದ ಮೀಸಲು ಅರಣ್ಯಗಳು ಮಾರಾಟವಾಗಿವೆ ! ಈ ಮಾರಾಟದಲ್ಲಿ ಬರುವ ನಿಕ್ಕಿ ಕಳ್ಳ ಹಣದಲ್ಲಿ ಯಾವ ಯಾವ ರಾಜಕಾರಣಿಗಳಿಗೆ-ಶಾಸಕರಿಗೆ ಪಾಲೆಷ್ಟು ಎಂಬುದು ಇನ್ನೂ premature ಸ್ಥಿತಿಯಲ್ಲಿದೆ, ಸ್ವಲ್ಪ ಸಮಯದ ನಂತರ ತಿಳಿಯಲ್ಪಡುತ್ತದೆ. ರಾಜ್ಯದ ಸ್ಥಿತಿ - ದೇವರಾಣೆ ಹೇಳುತ್ತೇನೆ ಬ್ರಿಟಿಷರೂ ಇಷ್ಟು ಕಟುಕರಾಗಿರಲಿಲ್ಲ; ಇಷ್ಟು ಹಾಳುಗೆಡವಿರಲಿಲ್ಲ,ಇಷ್ಟು ಖೊಳ್ಳೆ ಹೊಡೆದಿರಲಿಲ್ಲ ! ಅವರಿಗಾದರೂ ಒಂದು ನೀತಿ ಇತ್ತು, ರೀತಿ ಇತ್ತು ! ನಂಬಿ : ಇಂದಿನ ರಾಜಕಾರಣಿಗಳಿಗಿಂತ ಬ್ರಿಟಿಷರೇ ವಾಸಿ ಎನಿಸುತ್ತದೆ, ಯಾಕೆಂದರೆ ಕಣ್ಮುಂದೆ ನಡೆಯುವ ಬ್ರಷ್ಟಾಚಾರ, ದುರಾಚಾರ ಸಹಿಸಲಾಗುತ್ತಿಲ್ಲ.



ಒಂದಾನೊಂದು ಕಾಲವಿತ್ತು, ಅಂದು ನಮ್ಮ ಅಖಂಡ ಭಾರತವನ್ನು ವಂಗ.ಕಳಿಂಗ, ಚಾಲುಕ್ಯ, ರಾಷ್ಟ್ರಕೂಟ, ಮಗಧ, ಮೌರ್ಯ ಮುಂತಾದ ಚಪ್ಪನೈವತ್ತಾರು ದೇಶಗಳ ರಾಜರುಗಳು ಆಳುತ್ತಿದ್ದರು. ಆಳುವ ರಾಜರೆಲ್ಲರಲ್ಲಿಯೂ ತಮ್ಮ ಪ್ರಜೆಗಳಬಗ್ಗೆ-ರಾಜ್ಯ ಅಥವಾ ದೇಶದಬಗ್ಗೆ ಬಹಳ ಕಳಕಳಿ ಇತ್ತು. ರಾಜ ಯಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಹಲವಾರು ಕಲೆ-ಸಾಹಿತ್ಯ-ಸಂಗೀತ ಮುಂತಾದ ೬೪ ಯಾವುದಾದರೊಂದು ವಿದ್ಯೆಯಲ್ಲಿ ಪಾರಂಗತನಾದ ವ್ಯಕ್ತಿಯನ್ನು ರಾಜ ಗುರುತಿಸಿ, ಗೌರವಿಸಿ ಅವನಿಗೆ ವಿಶೇಷ ಬಹುಮಾನಾದಿ ಕೊಟ್ಟು ಅವನ ಉಪಜೀವನಕ್ಕೆ ಏನಾದರೂ ಮಾರ್ಗವನ್ನು ತೋರಿಸುತ್ತಿದ್ದ.

ಒಂದೊಂದುಸಲ ನೋಡಿದರೆ, ನಮ್ಮ ಹಳೆಯಕಾಲವೇ ಚೆನ್ನಾಗಿತ್ತು. ರಾಜರನೇಕರು ಧರ್ಮಮಾರ್ಗದಲ್ಲಿ ರಾಜ್ಯಭಾರಮಾಡುತ್ತಿದ್ದರು.ಪ್ರಜೆಗಳ ಕೂಗು ಅವರನ್ನು ತಟ್ಟುತ್ತಿತ್ತು. ಪ್ರಜೆಗಳಮೇಲೆ ಅಪಾರ ಅಸ್ತೆಯುಳ್ಳವರು,ಪ್ರಜೆಗಳು ಸುಖವಾಗಿದ್ದರೇ ತಾವು ಸುಖಪಡಬಹುದೆಂಬ ಇಂಗಿತವನ್ನು ಹೊಂದಿದ್ದರು. ಪ್ರಜೆಗಳೂ ರಾಜರನ್ನು ಅತ್ಯಂತ ಭಯ-ಭಕ್ತಿಯಿಂದ ಕಾಣುತ್ತಿದ್ದರು.

|| ರಾಜಾ ಪ್ರತ್ಯಕ್ಷ ದೇವತಾ ||

-ಎಂಬಂತೆ ಪ್ರಜೆಗಳು ರಾಜರನ್ನು ಪೂಜಿಸುವಮಟ್ಟಿಗೆ ಗೌರವಿಸುತ್ತಿದ್ದರು, ಕಣ್ಣಿಗೆ ಕಾಣುವ-ತಮ್ಮ ದುಃಖ ದುಮ್ಮಾನಗಳನ್ನು ಖುದ್ದಾಗಿ ಅವಲೋಕಿಸಿ ಪರಿಹರಿಸುವ ದೇವರೆಂದು ತಿಳಿಯುತ್ತಿದ್ದರು;ಅದಕ್ಕೆ ತಕ್ಕಂತೆ ರಾಜರು ಮಾರು ವೇಷಧರಿಸಿ ಪ್ರಜೆಗಳ ನಡುವೆ ಬಂದು ತಮ್ಮನ್ನೇ [ರಾಜರನ್ನೇ]ದೂರುತ್ತ ಪ್ರಜೆಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಇಂದು ಜನತಾದರ್ಶನವೆಂಬುದು ಬರೇ ನಾಟಕವಾಗಿದೆ ಅಷ್ಟೇ, ಹಾಗೊಮ್ಮೆ ನೋಡಿದರೆ ಆ ಕಾಲದ ಆಳ್ವಿಕೆ ಚೆನ್ನಾಗೇ ಇತ್ತು, ಅಲ್ಲಿ ಲಂಚವಿರಲಿಲ್ಲ, ರುಶುವತ್ತಿರಲಿಲ್ಲ, ಪಕ್ಷಾಟನೆಯಿರಲಿಲ್ಲ, ಜಾತಿ-ಮತ ಭೇದವಿರಲಿಲ್ಲ, ಅನ್ಯಾಯವಿರಲಿಲ್ಲ,ಅಸತ್ಯವಿರಲಿಲ್ಲ, ದೊಂಬಿಯಿರಲಿಲ್ಲ, ಧರಣಿಯಿರಲಿಲ್ಲ, ಹಿಂಸೆಯಿರಲಿಲ್ಲ. ಇಂದು ಅವುಗಳೆಲ್ಲ ಸಾಂಬಾರಿಗೆ ಬಳಸುವ ಮಸಾಲೆ ಪದಾರ್ಥಗಳಂತೆ ಅತೀ ಸಾಮಾನ್ಯವಾಗಿಬಿಟ್ಟಿವೆ, ಜನರ ಜೀವಕ್ಕೆ ಕಿಮ್ಮತ್ತೇ ಇಲ್ಲ, ಎಲ್ಲಿ ನೋಡಿದರೂ ಗೂಂಡಾಗಿರಿ, ಲಂಚ, ಹಿಂಸೆ, ದರೋಡೆ, ಕೊಲೆ-ಸುಲಿಗೆ, ಧರ್ಮದ ರಾಜಕೀಯ ಇವೆಲ್ಲ ಹೆಚ್ಚುತ್ತಲೇ ಇವೆಯೇ ಹೊರತು ಇವಕ್ಕೆಲ್ಲ ಕಡಿವಾಣವೇ ಇಲ್ಲ. ಇದರ ಬದಲಿಗೆ ಮೈಸೂರು ಅರಸರಂಥ ರಾಜರ ಆಳ್ವಿಕೆ ಅನುಕೂಲವಿರಬಹುದಿತ್ತಲ್ಲವೇ ? ಅಲ್ಲಿ ಒಬ್ಬ ವಿಶ್ವೇಶ್ವರಯ್ಯ, ಒಬ್ಬ ಮಿರ್ಜಾ ಇಸ್ಮಾಯಿಲ್, ಒಬ್ಬ ವೀಣೆ ಶೇಷಣ್ಣ, ಒಬ್ಬ ಪಿಟೀಲು ಚೌಡಯ್ಯ ಎಲ್ಲರೂ ಇದ್ದರಲ್ಲವೇ ? ಅಂದಮೇಲೆ ಪ್ರಜಾರಕ್ಷಕರಾಗಿ ಅವರೂ ನಮ್ಮ ಪ್ರಜಾ ಸರಕಾರಕ್ಕಿಂತ ಚೆನ್ನಾಗಿಯೇ ನಡೆಸಿದ ಉದಾಹರಣೆಗಳು ನಮಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಥರದ ರಾಜರಲ್ಲಿ ನೋಡಸಿಗುತ್ತವಲ್ಲವೇ ?














ಇಂದು ಈ ಯಾವುದೂ ವಿದ್ಯೆ ಮುಖ್ಯವಲ್ಲ. ಇಂದು ಉಪಜೀವನವೇ ಮುಖ್ಯಜೀವನವಾಗಿ ಪರಿಣಮಿಸಿದೆ. ಎಲ್ಲರಿಗೂ ದುಡ್ಡಿನದೇ ಚಿಂತೆ, ಬೇಗ ದುಡ್ಡು ಮಾಡಬೇಕು-ಅದು ನ್ಯಾಯವೋ ಅನ್ಯಾಯವೋ ಗೊತ್ತಿಲ್ಲ, life is short and one has to enjoy to the fullest ಎನ್ನುವ ಯಾರೋ ಹೇಳಿದ ಮಾತಿಗೆ ಕಟ್ಟುಬಿದ್ದು ಅದರ ಹಿಂದೆ ಬಿದ್ದು ಮೌಲ್ಯ ಕಳೆದುಕೊಂಡೆವು!















ಯಾವತ್ತಿದ್ರೂ ನಮಗೆ ಮಕ್ಕಳು ಮರಿಮಕ್ಕಳ ಕಾಲಕ್ಕೂ ಇರಲಿ ಅಂತ, ಅತೀ ದುರಾಸೆಯಿಂದ ಹಣವನ್ನು ಗೋಚಲು ಈ ಹಿಂದೆ ಹಾಗೂ ಹೀಗೂ ಗೋಚಿದ,ಬಾಚಿದ ಹಣವನ್ನೇ ಬಂಡವಾಳವನ್ನಾಗಿಟ್ಟುಕೊಂಡು ರಾಜ್ಯವನ್ನೇ ಹೆಚ್ಚೇಕೆ ದೇಶವನ್ನೇ ಕರೀದಿಸಲು ಮುಂದಾದ, ಖೊಳ್ಳೆ ಹೊಡೆಯಲು ಮುಂದಾದ ಖೂಳರು ನಮ್ಮ ಆಳುವ ಸ್ಥಾನಕ್ಕೆ ಬಂದಿರುವುದು ಇದು ನಿಜಕ್ಕೂ ಕಲಿಗಾಲ ! ಇದು ಪ್ರಜಾಪ್ರಭುತ್ವದ ವಿಪರ್ಯಾಸ; ವಿಪ್ಲವ, ದುರಂತ.


















ಮನೆಗೊಂದು ಪಕ್ಷ, ಪಕ್ಷಕ್ಕೊಬ್ಬ ಖೂಳ ಮುಖಂಡ, ಅವನ ಹಿಂದೆ ಅಧಿಕಾರಲಾಲಸೆ-ದುಡ್ಡಿನಲಾಲಿತ್ಯಕ್ಕಾಗಿ ನಾಯಿಗಳ ಥರ ಹಿಂಬಾಲಿಸುವ ಬೆಂಬಲಿಗರೆಂಬ ದಂಡು-ದುಡ್ಡಿರುವವರೆಗೆ ಉಂಡು, ಆಮೇಲೆ ಬೇರೆ ಪಕ್ಷಕ್ಕೆ ಹಾರಿಬಿಟ್ಟರು ಅವರ ಚಂಡು! ಎಂಥಾ ಆಭಾಸ ಅಲ್ಲವೇ ?

ಪುನರಪಿ ಚುನಾವಣೆ, ಹಲವು ಪಕ್ಷಗಳು ಅಧಿಕಾರಕ್ಕಾಗಿ ಮಾಡಿಕೊಂಡ ಚುನಾವಣಾನಂತರದ ದುಪಟ್ಟಾ [ಹರಿದ ಹಲವು ಬಟ್ಟೆಗಳನ್ನು ಸೇರಿಸಿ ನಮ್ಮ ಉತ್ತರಕರ್ನಾಟಕದ ಮಂದಿ ಮಾಡುತ್ತಾರಲ್ಲ ಅದು] ಮತ್ತೆ ಹರಿಯುವಿಕೆ-ಮುರಿಯುವಿಕೆ ಮತ್ತೆ ಕೂಡುವಿಕೆ-ಒಳ ಒಡಂಬಡಿಕೆ, ಮತ್ತೆ ಗೋತಾ ಇವೆಲ್ಲ ಯಾರಿಗಾಗಿ ಇನ್ನೂ ತಿಳಿಯದಾಯ್ತಾ ?













ಪ್ರಪಂಚದಲ್ಲಿ ಅತಿ ವಿಶೇಷ ಗಿಡಮೂಲಿಕೆಗಳನ್ನೊಳಗೊಂಡ ನಮ್ಮ ಹೆಮ್ಮೆಯ ಕಾಡು ಪಶ್ಚಿಮ ಘಟ್ಟದ್ದು. ಇದರಲ್ಲೇ ಕೆಲವು ಭಾಗ ಮೀಸಲು ಅರಣ್ಯ ಅಥವಾ ಅಭಯಾರಣ್ಯ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವನ್ಯಜೀವಿ ಪ್ರಭೇದಗಳು ಇಲ್ಲಿವೆ. ಆನೆ,ಸಿಂಹ,ಹುಲಿ,ಚಿರತೆ,ಕರಡಿ,ಕಾಡೆಮ್ಮೆ-ಕೋಣ,ಹಂದಿ,ಕತ್ತೆಕಿರುಬ,ನವಿಲು, ಕಾಡಿಕೋಳಿ ಒಂದೇ ಎರಡೇ ? ಈ ಜೀವ ವೈವಿಧ್ಯದ ಕೆಲವು ಈಗಾಗಲೇ ಕಾಯಿಲೆ-ಕಸಾಲೆಯಿಂದ, ಆಹಾರದ ಕೊರತೆಯಿಂದ, ಜಾಗದ ಅಭಾವದಿಂದ ನಾಶವಾಗಿದ್ದರೆ, ಇನ್ನು ಕೆಲವೇ ಕೆಲವು ಮಾತ್ರ ಉಳಿದುಕೊಂಡಿದ್ದು ಅವುಗಳಬಗ್ಗೆ ಸಾಹಿತಿ,ಕವಿ-ನಾಟಕಕಾರರು,ಬುದ್ಧಿಜೀವಿಗಳು ಹೇಗೆ ಕಾಪಾಡಬೇಕೆಂಬ ಚಿಂತನೆಯಲ್ಲಿ ಇರುವಾಗ

’ಎಲ್ಲಮರೆತಿರುವಾಗ ಇಲ್ಲಸಲ್ಲದ ನೆಪವ ಹೂಡಿಬರದಿರು ಮತ್ತೆ.......’ಎಂಬ ಕವಿ ಸಾಲಿನಂತೆ ಮನ ಮರುಗುವ ಕೆಲಸಕ್ಕೆ ಸರಕಾರ ಮುಂದಾಗಿದೆ. ಇನ್ನೇನಿದ್ದರೂ ಕೆಲವೇ ದಿನಗಳಲ್ಲಿ ಕಾಡೆಂಬುದು ಬರೇ ನೆನೆಪು ಮಾತ್ರ! ಸರಕಾರ ತಯಾರಿಸುವ ಅಕೇಶಿಯಾ ನೆಡುತೋಪಿಗೆ ಕಾಡು ಎಂದು ಕರೆಯಬೇಕಾದ ದಿನ ಬಹಳ ದೂರವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೇ ತಲೆಯಲ್ಲಿ ಅಧಿಕಾರದ ಹುಚ್ಚೊಂದೇ ತುಂಬಿದ್ದರೆ, ಅವರೇ ಬೇರೇ ಖೂಳ ರಕ್ಕಸ ರಾಜಕಾರಣಿಗಳ ಮುಂದೆ ಭಿಕ್ಷೆಯಥರ ಅಧಿಕಾರ ಉಳಿಸಿಕೊಡಲು ಕೈಯ್ಯೊಡ್ಡಿದರೆ ಆಗುವ ದುರಂತ ಇದೇ ಅಲ್ಲದೇ ಇನ್ನೇನು? ನಮಗೆ ಇರುವ ದಾರಿ ಎರಡೇ- ಒಂದು: ಸುಮ್ಮನಿದ್ದು ಎಲ್ಲವನ್ನೂ ಕಳೆದುಕೊಂಡು ದುರಂತಕ್ಕೆ ಮೂಕ ಪ್ರೇಕ್ಷಕರಾಗುವುದು, ಎರಡು : ದುರಂತವನ್ನು ತಡೆಗಟ್ಟಲು ಸ್ವಯಂ ಸೇವಕರಾಗಿ[ಆರ್.ಎಸ್.ಎಸ್. ಅಂತ ಹೇಳುತ್ತಿಲ್ಲ] ಸರಕಾರಕ್ಕೆ ಬುದ್ಧಿ ಕಲಿಸುವುದು. ಕೊನೇ ಹಂತದಲ್ಲಿದ್ದೇವೆ-ಆಯ್ಕೆ ನಿಮ್ಮದು!

ತಮ್ಮಲ್ಲೆಲ್ಲಾ ಅತ್ಯಂತ ವಿನಮ್ರನಾಗಿ ನಾನು ಬೇಡಿಕೊಳ್ಳುವುದಿಷ್ಟೇ-ನಮ್ಮ ನಮ್ಮ ಮನಸ್ಸಲ್ಲಿ-ನಮ್ಮಲ್ಲಿ ವೀರಭದ್ರರು ಹುಟ್ಟಿಬರಲಿ, ಈ ರಾಜಕೀಯವನ್ನು ಭಸ್ಮಮಾಡುವ ಭಸ್ಮಾಸುರ ಹುಟ್ಟಿಬರಲಿ, ಎಲ್ಲಾ ಸೇರೋಣ, ಆಗಬಹುದಾದ ಅನಾಹುತವನ್ನು ತಡೆಗಟ್ಟೋಣ. ಆಗದೇ ? ಕರೆದರೆ ಬರುವಿರಲ್ಲವೇ ?
ಸ್ವಾರ್ಥರಹಿತ ಬದುಕು ಬದುಕೋಣ ಅಲ್ಲವೇ ? ಪಾಪದ ಕಾಡು ಜೀವಿಗಳ ಕಣ್ಣೀರ ಕಥೆಯನ್ನ ಕಿವಿಗೊಟ್ಟು ಕೇಳೋಣ ಅಲ್ಲವೇ ? ಮಾತುಬಾರದೆ ಮೂಕವಾಗಿ ರೋದಿಸುವ ಗಿಡ-ಮರಗಳ ಬಗ್ಗೆ ಚಿಂತಿಸೋಣವೇ ? ಅವುಗಳ ಉಳಿವಿಗಾಗಿ , ಪ್ರಕೃತಿಯ ಸಮತೋಲನಕ್ಕಾಗಿ ಪರೋಕ್ಷ ನಮ್ಮ ಒಳಿತಿಗಾಗಿ ಸಾತ್ವಿಕ ಚಳುವಳಿಗೆ ಚಾಲನೆ ನೀಡೋಣವೇ ?

ದುರಂತ ವೀಕ್ಷಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಿ


ಹಲೋ ಹಲೋ, ಕ್ಷಮಿಸಿ ಓದುಗರೇ ಈಗ ಸರ್ಕಾರದ ಪರವಾಗಿ ನಮ್ಮ ಯಡ್ಯೂರಪ್ಪ ಒಂದು ಹಾಡುಹಾಡಲಿದ್ದಾರೆ. ಮೂಲ ಸಂಗೀತ ಸಂಯೋಜನೆ ದಿ| ಶ್ರೀ ಸಿ.ಅಶ್ವಥ್ [ಕ್ಷಮಿಸಿ ಸರಕಾರದ ಕೆಲಸವಾದ್ದರಿಂದ ದೇವರಕೆಲಸವೆಂದು ತಿಳಿದು ಅವರ ಮರಣಾನಂತರ ಇಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದೇನೆ!] , ಪಕ್ಕವಾದ್ಯದಲ್ಲಿ : ಘಟಂ -ಖೇಣಿ[ಅತಿಥಿ ಕಲಾವಿದರು], ತಾಳ- ಜನಾರ್ದನ ರೆಡ್ಡಿ, ಮೃದಂಗ-ಶ್ರೀರಾಮುಲು , ವಾಯೋಲಿನ್- ಕರುಣಾಕರ ರೆಡ್ಡಿ, ತಂಬೂರ-ರಾಮಚಂದ್ರ ಗೌಡ, ಮೋರ್ಸಿಂಗ್ -ಆರ್ ಅಶೋಕ್, ಬೆಳಕು-ಈಶ್ವರಪ್ಪ, ಬಣ್ಣ ಮತ್ತು ಧ್ವನಿವರ್ಧಕ-ರೇಣುಕಾಚಾರ್ಯ, ವೇದಿಕೆ ಮತ್ತು ಸಹಕಾರ- ಎಲ್ಲಾ ಶಾಸಕ ಮಿತ್ರ ಮಂಡಳಿ, ಪರಿಕಲ್ಪನೆ, ಪ್ರಧಾನ ನಿರ್ದೇಶನ ಮತ್ತು ನಿರ್ಮಾಣ-ಲಕ್ಷ್ಮಿ ಮಿತ್ತಲ್ [ಅಂತರ್ರಾಷ್ಟ್ರೀಯ ಖ್ಯಾತಿ], ಓದುಗರನ್ನು ಕ್ಷಣಕಾಲ ವಿಧಾನಸೌಧದ ಬಾಂಕ್ವೆಟ್ ಹಾಲ್ ಗೆ ಕರೆದೊಯ್ಯುತ್ತಿದ್ದೇವೆ !

ವಿ.ಸೂ. ಪ್ರಾಯೋಜಿತ ಕಾರ್ಯಕ್ರಮದಿಂದ ಬರುವ ಎಲ್ಲಾ ಹಣವನ್ನೂ 'ಕಾಡು ನಿರ್ಮೂಲನಾ ಸಮಿತಿ'ಯ ಕಟ್ಟಡ ಕಟ್ಟುವಿಕೆಗೆ ಬಳಸಲಾಗುವುದು.


ಯಡ್ಯೂರಪ್ಪರ ಹಾಡು
[ಸಂತ ಶಿಶುನಾಳ ಶರೆಫರನ್ನು ಕ್ಷಮೆಕೋರಿ ಅವರ 'ಹಾವು ತುಳಿದೇನೆ ' ಹಾಡಿನ ರಾಗವನ್ನು ಬಳಸಿಕೊಂಡಿದ್ದೇನೆ ]

ಕಾಡೂ ಕಡಿದೇನೆ ಪ್ರಜೆಗಳೇ
ಕಾಡೂ ಕಡಿದೇನೆ ......

ಕಾಡು ಕಡಿದು ನಾಡಿಗಾಗಿ ಬೀಡು ಕಟ್ಟುವ ಕೆಲಸಮಾಳ್ಪೆ
ಮೂಢತನದಲಿ ಯಾರೇಕೂಗಲಿ ನಾಡಜನ ನೀವ್ ನೋಡುತಿರಲು!

ತೇಗ ಹೊನ್ನೇ ಮತ್ತಿ ಭರಣಿ
ಮಾಗಿ ತೂಗುವ ಮಾವು ಹಲಸು
ವೇಗದಲಿ ಬೇರೆಡೆಗೆ ಬೆಳೆದು
ಬೇಗ ನಿಮಗೆ ತಂದುಕೊಡುವೆ !
ಕಾಡೂ ಕಡಿದೇನೆ ......

ಕರಡಿ ನವಿಲು ಹಾವು ಸಿಗಲು
ಜನಗಳೆಲ್ಲಾ ಹೆದರಿ ದಿಗಿಲು
ಗದರಿಕೊಂಬರು ರೈತಜನರು
ಬೆದರಿ ನಾ ಬೇಸತ್ತು ಹೋದೆ !
ಕಾಡೂ ಕಡಿದೇನೆ ......

ಆನೆ ಸಿಂಹಗಳಿಹವು ಬರಿದೇ
ಏನು ಫಲವುಂಟವುಗಳುಳಿದು ?
ಸ್ಥಾನವಂತರು ಹಣವ ಸುರಿದು
ಮೌನದಿಂದ ಕಾಯುತಿಹರು !
ಕಾಡೂ ಕಡಿದೇನೆ ......

ಮೀಸಲಿರುವಾ ಸ್ವಲ್ಪ ಕಾಡು
ಯಾತಕಿನ್ನು ಹೊಲಸುಗೋಳು ?
ಮೀಸೆಚಿಗುರದ ಗಣಿಧಣಿಗಳು
ಆಸೆಯಿಂದ ಕೇಳುತಿಹರು !
ಕಾಡೂ ಕಡಿದೇನೆ ......

ಹುಲಿಯ ದೇವರ ಬನದ ಕಾಡು
ಬಲಿದು ನಿಂತಿಹ ಪುಟ್ಟ ಕಾಡು
ಬಲಿಯಥರದಲಿ ದಾನಗೈದು
ಒಲಿದ ಪಟ್ಟವ ಉಳಿಸಿಕೊಂಬೆ !
ಕಾಡೂ ಕಡಿದೇನೆ ......

ಮಗ ಹೇಳಿದ ನರಿಕಥೆ

ಮೊನ್ನೆ ಹರಿಕಥೆಯನ್ನೇನೋ ಕೇಳಿ ಬಿಟ್ಟಿರಿ ಆದರೆ ಹೊಸಕಾಲದ ನರಿಕಥೆ ನಿಮಗೆ ಗೊತ್ತೇ ? ಅದನ್ನು ಈಗಿನ ಮಕ್ಕಳ ಬಾಯಿಂದ ಕೇಳಿದರೇ ಸಂತೋಷ ! ನಮ್ಮ ಕಾಲಕ್ಕೇ ಮಕ್ಕಳ ಬುದ್ಧಿ ಅಂಟಿಕೊಂಡಿಲ್ಲ, ಅದು ವಿಕಸಿತವಾಗಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಇಂದಿನ ಮಕ್ಕಳು ಟಿವಿ ಮಾಧ್ಯಮದಲ್ಲಿ ನೋಡಿ ಅನೇಕ ಹೆಸರುಗಳನ್ನೂ, ಅನೇಕ ಕಾರ್ಯಕ್ರಮಗಳವೇಳೆಯನ್ನೋ ತಿಳಿದು ನೆನಪಿಟ್ಟುಕೊಂಡಿರುತ್ತಾರೆ. ನಾವು ಅವರಿಗೆ ಏನನ್ನೋ ಹೇಳಿದ್ದರೆ ಅವರ ಮನಸ್ಸು ಸೃಜನಶೀಲವಾಗಿ ಆ ವಿಷಯಗಳಿಗೆ ಮತ್ತೇನನ್ನೋ ತುಲನೆ ಮಾಡುತ್ತದೆ, ಕಲ್ಪನೆಯನ್ನು ಜೋಡಿಸಲು ಸಾಧ್ಯವಾದರೆ ಜೋಡಿಸುತ್ತದೆ. ನಮ್ಮ ಸುತ್ತಲ ಪರಿಸರ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂಬುದೂ ಕೂಡ ಗಹನವಾದ ವಿಚಾರ! ಹೀಗಾಗಿ ಪಾಲಕರೇ ಮಕ್ಕಳ ಮುಂದೆ ಯಾವ ದುಶ್ಚಟಗಳನ್ನು ಶುರುವಿಟ್ಟುಕೊಳ್ಳಬೇಡಿ. ಚಟಗಳೇ ಬೇಡ, ಒಂದೊಮ್ಮೆ ಇದ್ದರೂ ನಿಮ್ಮ ಚಟಗಳೆಲ್ಲ ಅವರ ಕಣ್ಣಿಗೆ ಕಾಣಿಸದಂತಿರಲಿ. ನಮ್ಮ ಕಾಲಕ್ಕಿದ್ದ ಪೆದ್ದು ನರಿ ಈ ಕಾಲದಲ್ಲಿಲ್ಲ ! ನರಿಗೂ ಬುಧ್ಧಿ ಬೆಳೆದಿದೆ , ಓದಿ ನಿಮಗೇ ಗೊತ್ತಾಗುತ್ತೆ ...............


ಮಗ ಹೇಳಿದ ನರಿಕಥೆ
[ಚಿತ್ರಗಳ ಋಣ : ಅಂತರ್ಜಾಲ ]

ಹೀಗೆ ತಿಂಗಳ ಹಿಂದಿನ ಒಂದು ಭಾನುವಾರ, ಸ್ವಲ್ಪ ಚಳಿ ಮಿಶ್ರಿತ ವಾತಾವರಣ. ನಾನು ಮಗನೊಟ್ಟಿಗೆ ಆಟವಾಡುತ್ತ ವಿರಮಿಸುತ್ತಿದ್ದೆ. ೪.೫ ವಯಸ್ಸಿನ ಅವನಿಗೆ ಈಗ ಕಥೆಯ ಗೀಳು. " ಅಪ್ಪಾ ಆ ಕಥೆ ಹೇಳು, ಈ ಕಥೆ ಹೇಳು " ಹೀಗೆ ಕಂಡರೆ ಬೆನ್ನುಹತ್ತುವುದು ಅಭ್ಯಾಸವಾಗಿಬಿಟ್ಟಿದೆ. ಹೀಗೇ ಮಲಗಿರುವಾಗ ಅವತ್ತೂ ಕೂಡ ಕಥೆಹೇಳುವ ಮಾತು ಬಂತು, ನೀನೇ ನನಗೆ ನರಿ ದ್ರಾಕ್ಷಿ ತಿಂದ ಕಥೆ ಹೇಳು ಅಂತ ಹಠಹಿಡಿದೆ. ಮೊದಲು ಆಗುವುದಿಲ್ಲ ಅಂತ ಕುಳಿತ ಆತ ನಂತರ ಹೇಳಲು ಶುರುಮಾಡಿದ--

" ಒಂದಾನೊಂದು ಕಾಲದಲ್ಲಿ ಒಂದು ನರಿ ಇತ್ತಂತೆ, ಅದು ಅಲ್ಲಿ ಇಲ್ಲಿ ಸುತ್ತಾಡುತ್ತ ಇರುವಾಗ ಅದಕ್ಕೆ ದ್ರಾಕ್ಷಿ ತಿನ್ನುವ ಮನಸ್ಸಾಯಿತಂತೆ. ಹಾಗೇ ಹುಡುಕುತ್ತ ಒಂದು ದ್ರಾಕ್ಷಿ ತೋಟವನ್ನು ಕಂಡಿತಂತೆ. ಅಲ್ಲಿ ತುಂಬಾ ದ್ರಾಕ್ಷಿಹಣ್ಣುಗಳು ಇದ್ದವಂತೆ. ಆದರೆ ಎತ್ತರದಲ್ಲಿ, ಚಪ್ಪರದ ಎತ್ತರಕ್ಕೆ, ಮರಕ್ಕೆ ಹಬ್ಬಿಸಿದ ಬಳ್ಳಿಗಳಲ್ಲಿ ಇದ್ದವಂತೆ. ಅದನ್ನು ತಿನ್ನಬೇಕೆಂದು ನರಿ ಹತ್ತಿರ ಹೋಯಿತಂತೆ. ಒಂದು ಸರ್ತಿ ಎತ್ತರಕ್ಕೆ ಜಿಗಿಯಿತು ...ಸಿಗಲಿಲ್ಲ ........ಎರಡು ಸರ್ತಿ ಜಿಗಿಯಿತು.......ಸಿಗಲಿಲ್ಲ....ಮೂರು ಸರ್ತಿ ಜಿಗಿಯಿತು ಸಿಗಲಿಲ್ಲ.............." ಎನ್ನುತ್ತಾ ಸ್ವಲ್ಪ ನಿಧಾನ ಮಾಡತೊಡಗಿದ.

" ಆಮೇಲೆ ? " ಕೇಳಿದೆ

" ಅಲ್ಲೇ ಹತ್ತಿರ ಒಂದುಕಡೆ ಏಣಿ ಇತ್ತಂತೆ, ಅದನ್ನು ತಂದು ನಿಧಾನಕ್ಕೆ ಸಾಚಿ ಇಟ್ಟುಕೊಂಡು ಹಣ್ಣು ಕೀಳಲು ಪ್ರಯತ್ನಿಸುವ ಯೋಚನೆ ಮಾಡಿತಂತೆ "

" ನರಿಗೆಲ್ಲ ಕೈ ಇರಲ್ಲಾ ಕಣೋ, ನರಿ ಹೇಗೋ ಏಣಿನೆಲ್ಲ ಎತ್ತಿ ಇಡತ್ತೆ ? "




" ಅಪ್ಪಾ, ಸ್ವಲ್ಪ ಇರು ಹೇಳ್ತೀನಿ, ಅದು ಹಾಗೆ ವಿಚಾರ ಮಾಡಿತ್ತು ಅಷ್ಟೇ......"



"ನಂತರ ಏನಾಯ್ತು ? "

" ಹತ್ತಿರದಲ್ಲಿ ತೋಟದ ಮಾಲಿ ಒಂದು ದೋಟಿ [ಜೋಟಿ-ಉದ್ದನೆಯ ಕೊಕ್ಕೆ ] ಇಟ್ಟಿದ್ನಂತೆ ಯಾಕೋ ಬೇಕು ಅಂತ, ಅದನ್ನು ತಂದು ದ್ರಾಕ್ಷಿ ಕೊಯ್ಯಲು ಪ್ರಯತ್ನಿಸಿತಂತೆ "

" ಮಗಾ, ಏನು ತಲೆಯೋ ನಿಂದು ಈಗ ಹೇಳಿಲ್ವೇನೋ ನರಿಗೆ ಕೈ ಇಲ್ಲ ಅದು ಏನನ್ನೂ ಎತ್ತಕ್ಕಾಗಲ್ಲಾ ಅಂತ, ಮತ್ತೆ ಅದು ಹೇಗೆ ದೋಟಿ ತಂತು ? "

" ಅಲ್ಲಲ್ಲ , ದೋಟಿ ತರುವ ಯೋಚನೆ ಮಾಡುತ್ತಿತ್ತು , ದೋಟಿಯನ್ನು ಎತ್ತಲು ಆಗ್ಲಿಲ್ಲ ಅದಕ್ಕೇ ಬೇಡಾ ಅಂತ ವಾಪಸ್ ದ್ರಾಕ್ಷಿ ಬಳ್ಳಿಯ ಹತ್ತಿರ ಬಂತು"

" ಮುಂದೆ ? "

" ಮತ್ತೆ ಜಿಗಿಯಿತು, ಒಂದು ಎರಡು....ಮೂರು, ಸುಮಾರು ಸರ್ತಿ ಜಿಗೀತು, ಜಿಗ್ದೂ ಜಿಗ್ದೂ ಸುಸ್ತಾಯ್ತಲ್ಲ , ಸ್ವಲ್ಪ ಹೊತ್ತು ಅಲ್ಲೇ ಕುಂತಿತ್ತು . ಆಮೇಲೆ ಅದಕ್ಕೆ ಏನೋ ನೆನಪಾಯ್ತು "

" ಏನು ನೆನಪಾಯ್ತಪ್ಪಾ ಅದಕ್ಕೆ ? "










" ದ್ರಾಕ್ಷಿ ಹಣ್ಣುಗಳಿಗೆ ಔಷಧಿ ಹೊಡೀತಾರಲ್ಲ, ಅದನ್ನ ತಿಂದರೆ ತುಂಬಾ ಹಾಳು, ಶರೀರಕ್ಕೆಲ್ಲ ವಿಷ ಸೇರ್ಬಿಡುತ್ತೆ. ಅದಕ್ಕೇ ಜಾಣ ನರಿ ದ್ರಾಕ್ಷಿ ತಿನ್ನುವುದೇ ಬೇಡಾ ಅಂತ ತೀರ್ಮಾನಮಾಡಿ ವಾಪಸ್ ಹೊರಟೇ ಹೋಯ್ತು ! "

















[ಅಪ್ಪ-ಮಗನ 'ನರಿಕಥಾ ಕಾಲಕ್ಷೇಪ' ವನ್ನು ಶ್ರದ್ಧಾಳುವಾಗಿ ಭಕ್ತಿಯಿಂದ ಆಲಿಸುತ್ತಿದ್ದ ನನ್ನ ಹೆಂಡತಿಗೆ ೧೫ ನಿಮಿಷಗಳ ಕಾಲ ನಗೆಹಬ್ಬವನ್ನು ತಂದ ಈ ಕಥೆಯಲ್ಲಿ ಮಧ್ಯೆ ಮಧ್ಯೆ ತಾನು ಹೇಳುತ್ತಿರುವುದು ತಪ್ಪಿದೆ ಅಂತ ಅರಿವಾದಾಗ ಅವನ ಎಳೆಯ-ಮುಗ್ಧ ಮುಖದ ಭಾವನೆಗಳು ಹೇಗಿರಬಹುದು ಎಂಬುದನ್ನು ನಿಮ್ಮ ಊಹೆಗೆ-ಕಲ್ಪನೆಗೆ ಬಿಡುತ್ತಿದ್ದೇನೆ, ಎಂಜಾಯ್ ಮಾಡಿದಿರಲ್ಲವೇ ? ]

Friday, February 26, 2010

ಮಾನವ ಜನ್ಮ ದೊಡ್ಡದು-ಅದ ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'






[ಚಿತ್ರಗಳ ಋಣ : ಅಂತರ್ಜಾಲ ]





'ಮಾನವ ಜನ್ಮ

ದೊಡ್ಡದು-ಅದ

ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'



[೨೩.೦೨.೨೦೧೦ರ 'ವಿಜಯ ಕರ್ನಾಟಕ' ಲವಲvk ಯಲ್ಲಿ ಬರೆದ +ve ಥಿಂಕಿಂಗ್ ಗೆ ಪ್ರತಿಕ್ರಿಯೆ !]

ಇವತ್ತಿನ ಜೀವ ವಿಕಾಸ ವಾದ, ನಮ್ಮ ನಮ್ಮ ಅನಿಸಿಕೆ ಇವುಗಳನ್ನೆಲ್ಲ ಮೊದಲೇ ತಮ್ಮ ನೈಷ್ಥಿಕ ತಪಸ್ಸಿದ್ಧಿಯಿಂದ ಮುಂದಾಲೋಚಿಸಿದ್ದ ನಮ್ಮ ಋಷಿಮುನಿಗಳು ಎಲ್ಲವನ್ನೂ ಉಪನಿಷತ್ತು-ಪುರಾಣಗಳಲ್ಲಿ ದಾಖಲಿಸಿದರು, ಒಮ್ಮೆ ಹೀಗೆ ಯೋಚಿಸೋಣ ಹಳ್ಳಿಯಲ್ಲಿ ಒಬ್ಬ ಪೆದ್ದ ಇದ್ದ, ಆತನ ಹೆಸರು 'ಗಿಣಿಯ' ಅಂತಿಟ್ಟುಕೊಳ್ಳೋಣ. ಗಿಣಿಯನಿಗೆ ಓದು-ಬರಹ ಬಾರದು, ಅವನ ಪಾಡಿಗೆ ಅವನು ಅಲೆಯುತ್ತಾ , ಬೇಡುತ್ತಾ ಜೀವಿಸುತ್ತಿದ್ದ. ಅವನಿಗೆ ನಾನು ಭಾಷಾಶಾಸ್ತ್ರದ ನಿಘಂಟು ಕೊಟ್ಟರೆ ಆತ ಅದನ್ನು ಬಿಸಾಕಿದರೂ ತಪ್ಪಿಲ್ಲ, ಮಂಗನಿಗೆ ಮಾಣಿಕ್ಯದ ಅರಿವುಂಟೇ ? ಹೀಗೇ ಇವತ್ತು ಇಂಗ್ಲೀಷ್ ಕಲಿತು, ಡಿಗ್ರಿ ಮುಗಿಸಿದ ಮಾತ್ರಕ್ಕೆ ಆಪಾರ ವಿದ್ಯಾ ಆಗರ-ಸಾಗರವಾದ ವೇದ-ಪುರಾಣ-ಮಹಾಕಾವ್ಯಗಳು ನಮಗೆ ಅರ್ಥವಾಗಬೇಕಿಲ್ಲ, ಹೇಗೆ ಬಾವಿಯ ಆಳದಲ್ಲಿ ಬಿದ್ದಿರುವ ಏನನ್ನೋ ಹುಡುಕಲು ನೀರಲ್ಲಿ ಮುಳುಗಬೇಕಾಗುತ್ತದೋ[ಅದಕ್ಕೂ ಜಾಣ್ಮೆ ಬೇಕು,ಯುಕ್ತಿ ಬೇಕು,ಈಜು ಬರಬೇಕು ಅಲ್ಲವೇ ? ] ಆ ಮಹಾನ್ ಗ್ರಂಥಗಳಲ್ಲಿ ಸಂಪೂರ್ಣ ತನ್ಮಗ್ನರಾದರೆ ಮಾತ್ರ ಜ್ಞಾನ ಒಲಿದೀತು. ಅದಕ್ಕೇ ನಮ್ಮ ಸರ್ವಜ್ಞಕವಿ ನೇರವಾಗಿ-ಖಾರವಾಗಿ ಹೇಳುತ್ತಾನೆ -

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೆ | ಸರ್ವಜ್ಞ

ಉಪವಾಸ-ವೃತ ಇವುಗಳನ್ನೆಲ್ಲ ಕೈಗೊಳ್ಳದೆ ರಾಜಕಾರಣಿಗಳ ಥರ ಎಲ್ಲವನ್ನೂ ನುಂಗಿ ಆಪೋಶನ ತೆಗೆದುಕೊಂಡು ಹೊಟ್ಟೆಬೆಳೆಸಿಕೊಂಡು " ನನಗೆ ಸ್ವರ್ಗ ಕೊಡಿ- ತ್ರೀ ಟೈರ್ ಎ.ಸಿ.ಫಸ್ಟ್ ಕ್ಲಾಸ್ " ಅನ್ನಲಿಕ್ಕೆ ಅದು ದುಡ್ಡುಕೊಟ್ಟು ಕೊಂಡು ಕೊಳ್ಳುವ ಯಾವುದೇ ರಂಡೆಯಾಳುವ ಆಸ್ಥಾನವಲ್ಲ ಅಂತಾನೆ ! ಅದರರ್ಥ ನಾವು ಪ್ರಯತ್ನಶಾಲಿಗಳಾಗಬೇಕು, ಇರುವುದರಲ್ಲಿ ಜಪ-ತಪಾದಿ ನಿತ್ಯಾನುಷ್ಥಾನ ಮಾಡಬೇಕು, ಅವಿರತ ಪ್ರಯತ್ನದಿಂದ ಪ್ರಾರ್ಥಿಸಿ, ಒಲಿಸಿ, ಓಲೈಸಿ ಪಡೆಯಬಹುದಾದ ಮಹತ್ತರದ ಸ್ಥಾನ! ಹೇಗೆ ಮುಖ್ಯಮಂತ್ರಿಯಾಗಲು, ಪ್ರಧಾನಮಂತ್ರಿಯಾಗಲು,ರಾಷ್ಟ್ರಪತಿಯಾಗಲು ನಿರಂತರ ರಾಜಕೀಯದ ಒಲವು, ಒತ್ತಾಸೆ, ಅರ್ಪಣೆ-ತಲ್ಲೀನತೆ, ತಕ್ಕ ಮಟ್ಟದ ವಿದ್ಯೆ , ಆಡ್ಯತೆ, ಅರ್ಹತೆ ಬೇಕೋ ಹಾಗೇ ಇಲ್ಲಿಕೂಡ ಅದಕ್ಕೆ ಅದಕ್ಕಿಂತ ಹಿರಿದಾದ 'ಇಂದ್ರಿಯ ನಿಗ್ರಹ'ವೆಂಬ ಯೋಗದ ಅನುಸಂಧಾನ ಬೇಕು.

ನಮಗೆ ಅರ್ಥವಾಗಿಲ್ಲ ಅಂದಮಾತ್ರಕ್ಕೆ ಮಹಾಕವಿಯ/ದಾರ್ಶನಿಕರ ಮಹಾಕಾವ್ಯಗಳು ಅರ್ಥಹೀನ ಎಂಬ ಇತ್ತೀಚಿನ ಪತ್ರಿಕಾ ಹೇಳಿಕೆಗಳೆಲ್ಲ ಬಹಳ ನೋವು ತರಿಸುತ್ತವೆ. ಸರಿಯಾದ ಮಾರ್ಗದರ್ಶನ ಮಾಡಬೇಕಾದ ಪತ್ರಿಕೆಗಳೇ ಹೀಗಾದವೇ? ಜಗದ ಜೀವರಾಶಿಯಲ್ಲಿ ಪಶು-ಪಕ್ಷಿಗಳಾದಿಯಾಗಿ ಎಲ್ಲವೂ ನೋವನ್ನು -ಯಾತನೆಯನ್ನು ಅನುಭವಿಸುತ್ತವೆ, ಜಗಳ ಕಾಯುತ್ತವೆ, ಕಣ್ಣೀರಿಡುತ್ತವೆ. ಇದನ್ನು national geographic, discovery, animal planet ಮುಂತಾದ ಹಲವಾರು ಮಾಧ್ಯಮ ವಾಹಿನಿಗಳಲ್ಲಿ ತಾವು ನೋಡಿರುತ್ತೀರಿ! ಅವುಗಳಿಗೆ ಬಾಗಿ ನಮಿಸಲು, ಕಣ್ಣೀರು ಒರೆಸಿಕೊಳ್ಳಲು ಕೈಯಿಲ್ಲ. ಮೇಲಾಗಿ ಅವು not so evolved ಅಂತ ನಾವು ಹೇಳಬಹುದು. ಅವು ತಪ್ಪು ಮಾಡುವುದಿಲ್ಲ-ಬೇರೆಯವರ ಹಕ್ಕನ್ನು ಕಸಿಯುವುದಿಲ್ಲ ಎನ್ನುವುದೆಲ್ಲ ಸರಿಯಲ್ಲ-ಅವುಗಳನ್ನೇ ನೋಡುತ್ತಿರಿ ತಿಳಿಯುತ್ತದೆ,ಬಹಳ ಹಿಂಸೆಯಿಂದ ಹೆದರಿಕೆಯಿಂದ ಜೀವಿಸುವ ಜೀವನ ಅವುಗಳ ಪಾಡು ! ಒಂದನ್ನೊಂದು ಕೊಂದು ತಿಂದು ತೇಗುತ್ತದೆ, ಅಲ್ಲಿ ಇನ್ನೊಂದೆಡೆ ತಾಯಿಯೋ, ಮಗುವೋ ಯಾವುದನ್ನೋ ಕಳೆದುಕೊಂಡ ಇನ್ನೊಂದು ಸಂಕುಲ ಮರುಗುತ್ತದೆ-ಹಂಬಲಿಸಿ ಗೋಳಿಡುತ್ತದೆ. ಮೂಕ ರೋದನ ಅವುಗಳದು. ಹೀಗಾಗಿ ಮನುಷ್ಯಮಾತ್ರ ತಪ್ಪುಮಾಡಿ ತಪ್ಪಿನ ಅರಿವಾದಾಗ, ತನ್ನ ಮನಸ್ಸಿನಲ್ಲಿ ಸ್ಥಿರತೆ ಇರದಾಗ ದೇವರೆಂಬ ಶಕ್ತಿಯನ್ನು ಜಾಸ್ತಿಯಾಗಿ ಅವಲಂಬಿಸುತ್ತಾನೆ ಎಂಬುದು ಮೂರ್ಖರ ಮಾತಾಗದೆ ಇನ್ನೇನೂ ಇಲ್ಲ! ಈ ಹಿಂದೆ ನಾನು ಹೇಳಿದ ಹಾಗೇ ದಾಸರೆಲ್ಲ ಸಾರಿದರು

ಮಾನವ ಜನ್ಮ ದೊಡ್ಡದು
ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ
.... ಎಂದೆಲ್ಲ ವಿವರಣೆ ಸಹಿತ, with proof ಅವರು ತೋರಿಸಿದ್ದಾರೆ, ಹಾಗಾದರೆ ಅವರೆಲ್ಲಾ ಹುಚ್ಚರೇ?

ಮನುಷ್ಯ ಪ್ರಾಮಾಣಿಕನಾಗಿರಬೇಕು, ಸತ್ ಚಿಂತನೆ, ಸತ್ಕಾರ್ಯ ಇವುಗಳನ್ನು ಮಾಡುತ್ತಾ || ಪರೋಪಕಾರಾರ್ಥಮಿದಂ ಶರೀರಂ || ಎಂಬ ರೀತಿಯಲ್ಲಿ,ಮಾರ್ಗದಲ್ಲಿ ನಡೆಯಬೇಕಾದ್ದು ನಮ್ಮ ಕರ್ತವ್ಯ. ವಿಚಾರಮಾಡಿ ! ಈ ದೇವರೆಂಬ ನಂಬಿಕೆಯೇ ಕೆಟ್ಟದ್ದರ ಯೋಚನೆಯನ್ನು ತಪ್ಪಿಸುತ್ತದೆ!! ಹಲವರು ಕೆಲವರನ್ನು ಪರಿಚಯಿಸುವಾಗ ಇಂಗ್ಲೀಷ್ ನಲ್ಲಿ God Fearing Man ಅಂತ ನನ್ನೆದುರು ಹೇಳಿದ್ದನ್ನು ಕೇಳಿದ್ದೇನೆ, ಯಾಕೆ ? ಅದರರ್ಥ the other man who is introduced by him is dependable,loyal,faithful ಎಂದಲ್ಲವೇ ಆತ ಹೇಳಿರುವುದು?

ಒಂದು ಸತ್ಯವನ್ನು ಒಪ್ಪಿಕೊಳ್ಳೋಣ, ಅದು ಯಾರೇ ಬರೆದಿದ್ದಿರಲಿ, 'ಭಗವದ್ಗೀತೆ' ಎಂಬ guide ಜೀವನಕ್ಕೆ ಯಶೋಗಾಥೆ ಬರೆಯಲು ಉಪಕಾರಿ, ಜಗತ್ತಿನಲ್ಲಿಯೇ ಇಂತಹ ಅದ್ಬುತ ಗ್ರಂಥ ಮತ್ತೊಂದಿಲ್ಲ ! ಪ್ರತಿಯೊಂದು ಹಂತದಲ್ಲಿ ಅದರಲ್ಲಿ ಶ್ರೀಕೃಷ್ಣ ಅರ್ಜುನನನ್ನು ನೆಪವಾಗಿಸಿ ಜೀವನಕ್ಕೆ ಬೇಕಾದ ತತ್ವವನ್ನೆಲ್ಲ ಬೋಧಿಸುತ್ತಾನೆ. ಇವತ್ತು ಚಾನೆಲ್ ಗಳಲ್ಲಿ ಅಡುಗೆ ಹೇಳಿಕೊಡುತ್ತಿದ್ದರೆ,ಕೆಟ್ಟಧಾರಾವಾಹಿಗಳು ಬಿತ್ತರಗೊಳ್ಳುತ್ತಿದ್ದರೆ ನಮ್ಮ ಹೆಂಗಳೆಯರು ಬಹುತೇಕರು ಅದಕ್ಕೆ ಅಂಟಿಕೊಂಡಿರುತ್ತಾರೆ, ಮನೆಯಲ್ಲಿರುವ ಸಣ್ಣ ಮಕ್ಕಳೂ ಅವರನ್ನೇ ಅನುಸರಿಸುತ್ತವೆ, ಅದೇ ದೇವರ ಧ್ಯಾನಕ್ಕೆ, ಒಳಿತಿನ ಚಿಂತನೆಗೆ ಅವರಿಗೆ ಸಮಯವೇ ಇಲ್ಲ, ಇದು ನಮ್ಮ ಗಂಡಸರಲ್ಲೂ ಕಮ್ಮಿಯೇನಿಲ್ಲ, ಮೊನ್ನೆ ಒಬ್ಬ ವ್ಯಕ್ತಿ ನನಗೆ ಹೇಳಿದರು ನನಗೆ ಓದಲಿಕ್ಕೆಲ್ಲ ಸಮಯವೇ ಇರುವುದಿಲ್ಲ! ಯಾವುದಕ್ಕೂ ಸಮಯ ಇರುವುದಿಲ್ಲ ಸ್ವಾಮೀ, ಸಮಯ ಮಾಡಿಕೊಳ್ಳಬೇಕು. ಒಬ್ಬ ವೈದ್ಯನಲ್ಲಿಗೆ ಹೋಗಲು, ಸಿನಿಮಾ ನೋಡಲು, ಹುಟ್ಟಿದಹಬ್ಬ-ಮದುವೆ-ಮುಂಜಿ ಇವುಗಳಿಗೆ ಹೋಗಲು, ಕಚೇರಿಯ ಪಾರ್ಟಿಗೆ ಹೋಗಲು, ಟಿವಿ ನೋಡಲು ಇದಕ್ಕೆಲ್ಲ ಸಮಯ ಮಾಡಿಕೊಳ್ಳುವ ನಿಮಗೆ ಓದುವ ಒಳ್ಳೆಯ ಹವ್ಯಾಸಕ್ಕೆ ಸಮಯವಾದರೂ ಹೇಗೆ ಬರಬೇಕು ಪಾಪ ! ಇನ್ನೊಮ್ಮೆ ಮುಂದಿನ ಜನ್ಮದಲ್ಲಾದರೂ ಬಿಡುವು ಮಾಡಿಕೊಂಡು ಓದಿ!

ನಮ್ಮಂತಹ ಸಮಯವಿಲ್ಲದ ಹುಚ್ಚರು ಅರ್ಥಮಾಡಿಕೊಳ್ಳಲಿ ಅಂತ ಅಂತಹ ಭಗವದ್ಗೀತೆಯ ಸಾರವನ್ನೆಲ್ಲ ಹೀರಿ ನಮ್ಮ ಡೀವೀಜಿ ಎಂಬ ಮಹಾನ್ ದಾರ್ಶನಿಕ ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ, ಜೀವನ ಧರ್ಮಯೋಗ --ಈ ಹೊತ್ತಗೆಗಳನ್ನು ಬರೆದರೂ ಅವು ನಮಗೆ ಅರ್ಥವಾಗಬೇಕಲ್ಲ ಸ್ವಾಮೀ, ಇಲ್ಲೂ ಅದೇ ಕಥೆ, ಹಲವು ಸಿಕ್ಕುಗಳನ್ನು ಬಿಡಿಸಿದರೂ ಇನ್ನೂ ಕೆಲವು ನಮಗೆ ಸಿಕ್ಕಾಗೇ ಕಾಣುತ್ತವೆ! ಅಂದಮೇಲೆ ನಮ್ಮ ಯೋಗ್ಯತೆ ನಾವೇ ಅರ್ಥಮಾಡಿಕೊಳ್ಳಬೇಕಲ್ಲವೇ ? ಅದು ಬಿಟ್ಟು ಮಹಾನ್ ಕಾವ್ಯಗಳೆಲ್ಲ ಹಾಗೇ ಯಾರಿಗೂ ಅರ್ಥವಾಗುವುದಿಲ್ಲ ಎಂಬ ದುರ್ಬೋಧನೆ ಸರಿಯೇ ? ಅರ್ಥವಾಗದ , ಅರ್ಥಮಾಡಿಕೊಳ್ಳಲು ತಯಾರಿರದ ನಾವು , ರೆಡಿ ಮೇಡ್ ತಿಂಡಿಗಾಗಿ ಹಾತೊರೆಯುವ ನಾವು ಮೃಗಗಳಿಗಿಂತ ಭಿನ್ನ ಹೇಗೆ ? ನಮಗೆ ನಾವೇ

|| ಮನುಷ್ಯ ರೂಪೇಣ ಮೃಗಾಶ್ಚರಂತಿ || ಅಂದರೆ ತಪ್ಪೇನಿದೆ ?

ಮಾನ್ಯ ಪತ್ರಿಕೆಯವರೇ, ತಮ್ಮಲ್ಲಿಯ ವಿಜ್ಞಾನಿಗಳು ಚರ್ಮ-ಮಾಂಸಗಳಬಗ್ಗೆ , ಮೆದುಳಿನ ಬಗ್ಗೆ, ನಮ್ಮ ಸುತ್ತ ಆವರಿಸಿರುವ ಪ್ರಭಾವಳಿಯ ಬಗ್ಗೆ ಇನ್ನೂ Re-search [search ಅಲ್ಲ !] ಮಾಡುತ್ತಿದ್ದಾರೆ, ಅವುಗಳ ಬಗ್ಗೆ ನಮ್ಮ ವೇದ-ಪುರಾಣಗಳಲ್ಲಿ ಅವುಗಳನ್ನು ಬರೆದವರೇ ನಮೂದಿಸಿದ್ದಾರೆ, ನಮ್ಮ ಚರ್ಮದಲ್ಲಿ ೭ ಪದರಗಳಿವೆ, ನಮ್ಮ ಸುತ್ತ ಇಂತಿಷ್ಟು ವಲಯಗಳಿವೆ ಅಂತೆಲ್ಲ ಮೊದಲೇ ನಿಖರವಾಗಿ ಹೇಳಿದ್ದಾರೆ! [ನಮ್ಮ ನಾಸಾ ದವರೋ ಮತ್ತೆಲ್ಲಿಯ ಪೂಸಾದವರೋ ಕಂಡೆವು ಅಂತ ಹೇಳಿಕೆ ಕೊಟ್ಟರೇ ಸಾಕು,ನಾವು ಪುಳಕಿತರಾಗಿಬಿಡುತ್ತೇವೆ! ] ನಮ್ಮ ಪೂರ್ವಜರಿಗೆ ವಿಜ್ಞಾನ ಗೊತ್ತಿತ್ತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ! ಆದರೆ ಆರ್ಯಭಟನಂತಹ ಮೇಧಾವಿಗಳು ಖಗೋಳವನ್ನು ಕರಾರುವಾಕ್ಕಾಗಿ ಹೇಳಿದ್ದರು! ಆತ ಹೇಳಿದ ರಾಹು-ಕೇತುಗಳು ನೆಪ್ಚೂನ್ ಮತ್ತು ಪ್ಲುಟೋ ಎಂಬ ಹೆಸರನಿಂದ ಶತಮಾನಗಳ ನಂತರ ವಿದೇಶೀ ವಿಜ್ಞಾನಿಗಳಿಂದ ಹೇಳಲ್ಪಟ್ಟವು! ಇಂತಹ ವಿಷಯಗಳಲ್ಲಿ ನಾವು ಬಾಲಗ್ರಹ ಪೀಡಿತರು, ಪೂರ್ವಾಗ್ರಹ ಪೀಡಿತರು, ಅಮೇರಿಕಾಕ್ಕೆ ಕಿವಿಯೊಡ್ಡುವ ಹಿತ್ತಾಳೆ ಕಿವಿಯವರು!

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಬೇಡನೊಬ್ಬ ತನ್ನ ಜೀವನ ಪರಿವರ್ತನೆಯಿಂದ ಮುನಿಯಾಗಿ, ಕವಿ ವಾಲ್ಮೀಕಿಯಾಗಿ ರಾಮಾಯಣ ಮಹಾಕಾವ್ಯ -ಎಂಥ ಅದ್ಬುತ ಕಾದಂಬರಿಯನ್ನು ಬರೆದನಲ್ಲ, ಅಕ್ಷರ ಜ್ಞಾನವಿಲ್ಲದ ಅವನಲ್ಲಿ ಕುಳಿತು ಇಂತಹ ಮಹಾಕಾದಂಬರಿ ಬರೆಸಿದ ಶಕ್ತಿ ಯಾವುದು ?

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಮೂಕನನ್ನು ಮಾತನಾಡಿಸುವ, ಹೇಳವನನ್ನು-ಕುಂಟನನ್ನು ಪರ್ವತವೇರಿಸುವ, ಜಲಪ್ರಳಯದಿಂದ ಭೂಭಾಗವನ್ನೇ ಅಲ್ಲೋಲ-ಕಲ್ಲೋಲ [ಮೊನ್ನೆ ಉತ್ತರ ಕರ್ನಾಟಕದಲ್ಲಿ ನಮ್ಮ ರಾಜಕಾರಣಿಗಳು-ವಿಜ್ಞಾನಿಗಳು ನಿಂತು ಮಳೆ ತಡೆಯಲಾಯಿತೇ?] ಮಾಡುವ-ಮಾಡದಿರುವ, ಸುನಾಮಿ ತರುವ-ತರದಿರುವ ಹಿರಿದಾದ ಒಂದು ಶಕ್ತಿ ಇದೆ ಅನ್ನುವುದನ್ನು ಇನ್ನಾದರೂ ನಂಬಿ. ಆ ಶಕ್ತಿಯನ್ನೇ ನಾವು ದೇವರೆಂದು ಕರೆದರೆ ತಪ್ಪೇ ?

ನಮ್ಮ ವಿಮಾನಗಳು ಬರುವುದಕ್ಕಿಂತ ಮುಂಚೆ ವಿಮಾನ ಎಂಬ ಕಲ್ಪನೆಯಿರದೆ ರಾಮಾಯಣದ ಕವಿ ವಾಲ್ಮೀಕಿ, ಪುಷ್ಪಕ ವಿಮಾನವೆಂದು ಬರೆದನೇ ? ಇಂದು ನಾವು ಅಂತಹ ಒಳ್ಳೆಯ ಶಬ್ಧಗಳನ್ನೆಲ್ಲ ಕೆಟ್ಟ ಸಿನಿಮಾಗಳಿಗೆ ಇತ್ತು ಜಗತ್ತನ್ನು ಉದ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೇವೆ ! ಎಷ್ಟೋ ಸಲ ಕಣ್ಣಿದ್ದೂ ಜಾಣ ಕುರುಡರೂ ಕಿವಿಯಿದ್ದೂ ಜಾಣ ಕಿವುಡರೂ ಬಾಯಿದ್ದೂ ಜಾಣ ಮೂಕರೂ ಆಗಿಬಿಡುತ್ತೇವೆ! ನಮಗೆ ಬೇಕಾದ್ದಕ್ಕೆಲ್ಲ ತೆರೆದುಕೊಳ್ಳುತ್ತೇವೆ- ಈ ತತ್ವವನ್ನು ನಮ್ಮ ಮಹಾಕಾವ್ಯಗಳಲ್ಲಿ ಹೇಳಿಲ್ಲ ! ಹಾಗಾಗಿ ಅವು ಅರ್ಥವಾಗದ, ಅನುಪಯುಕ್ತ ಪುಸ್ತಕದ ಬದನೆಕಾಯಿಗಳು ! ತೃಪ್ತಿಯೇ ತಮಗೆ ?

ಶಂಕರಾಚಾರ್ಯರೆಂಬ ಒಬ್ಬ ಸನ್ಯಾಸಿ ಮನುಷ್ಯಮಾತ್ರನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಕೇವಲ ತನ್ನ ೩೨ ವರ್ಷ ಆಯುಷ್ಯದೊಳಗೆ ಪೂರೈಸಿ ಮಹಾನ್ ಮಹಾನ್ ಉದ್ಗ್ರಂಥಗಳನ್ನೆಲ್ಲ ಕೊಟ್ಟರಲ್ಲ ಅವರೂ ಹುಚ್ಚರೇ ಹಾಗಾದರೆ ?

ಅಲ್ಲ, ನಾವು ಹುಚ್ಚರು, ನಮ್ಮೀ ಸುತ್ತಲ ಭ್ರಮಾ ಜಗತ್ತು ಹುಚ್ಚಿನದು ಹೀಗಾಗಿ ಕಾಮಾಲೆ ರೋಗದವರಿಗೆ ಲೋಕವೆಲ್ಲ ಹಳದಿ ಹೇಗೋ ಹಾಗೇ ನಿಜದ ಅರಿವಿರದೆ ಹುಚ್ಚರಾದ ನಮಗೆ ಮಹಾ ಕವಿಗಳು-ದಾರ್ಶನಿಕರು ಹುಚ್ಚರಾಗಿ ಕಾಣುತ್ತಾರೆ, ಸ್ವಾಮೀ ಪತ್ರಕರ್ತರೇ, ದಯವಿಟ್ಟು ಅದನ್ನು ತಿದ್ದಿ ಬರೆಯಿರಿ, ಇನ್ನಾದರೂ ನಮ್ಮ ಕಾಮಾಲೆ ರೋಗ ವಾಸಿಯಾಗಲಿ ಆಗದೇ ?

ಹಿನ್ನೆಲೆಯಲ್ಲಿ ನಮ್ಮೆಲ್ಲ ದಾಸರಿಗೆ-ಕವಿಜನಸಂದಣಿಗೆ ಬಲಬಂದು ಈ ಸ್ತುತಿಗೀತೆಯನ್ನು ಬರೆಯುತ್ತಿದ್ದೇನೆ, ಆಸ್ತಿಕರೇ, ಬದುಕಿನಲ್ಲಿ ಆಸ್ತೆಯಿರುವ ಮಾಹಾಜನಂಗಳೇ ನೀವು ಓದಿ ಅನುಭವಿಸಿ ಸುಖಿಸಿದರೆ ಅದಕ್ಕಿಂತ ಬೇರೆ Certificate ಬೇಕೇ?

ಈಶನೆನಲೇ ಗಣೇಶನೆನಲೇ

ಈಶನೆನಲೇ ಗಣೇಶನೆನಲೇ ಹರಿ ಕರೆವೆ ನಿನ್ನ ವಿಧದಿ
ಏಸುದಿನದಿ ನಾವ್ ಕಲಿತರು ಬರಡದು ಬರಿದೆ ಮೂರ್ಖತನದಿ !

ವ್ಯಸನಕಳೆಯೇ ಬರೆಯಲು ತೊಡಗುತ ನಾವ್ ಮಸಿಯ ಬಳಿದುಕವಿಗೆ
ಉಸಿರಿನರ್ಥ ಅರಿವಾಗದೆ ಉರಿದೆವು ದಿನದ ಗಳಿಗೆ ಗಳಿಗೆ

ಕುಶಲತನದಿ ತನ್ನ ಕಸುವಿನಲ್ಕಡೆಯುತ ಕೊಡಲು ಮಹಾಕಾವ್ಯ
ವಶವಪ್ಪುದೆ ಈ ಲೋಕದ ಜನತೆಗೆ ಬಯಸುವರದೇ 'ನವ್ಯ'!

ಅತಿಶಯ ಪರಮಾನಂದದ ಚಂದದ ನಿನ್ನ ಸನ್ನಿಧಿಯಲಿ
ಗತಿಯಿದಷ್ಟು ಸರಿ ಬರದು ನನಗೆ ಅಹವಾಲು ಪದತಲದಲಿ

ಇನಿತು ಮೂರ್ಖರು ನಾವ್ ಏನೂ ಅರಿಯೆವು ಮನಸುತುಂಬೀಜಗವು
ಘನತೆಯೆಂಬ
ಗಾಢಾಂಧಕಾರದಲಿ ಎಲ್ಲವ ಮರೆತಿಹೆವು

ಗಣಿಸುನಮ್ಮ ಇತಿ ಮಿತಿಯನೆಲ್ಲ ಮತಿಹೀನರು ನಾವುಗಳು
ಕ್ಷಮಿಸುನಮ್ಮ ತಿದ್ದುತ ಅರೆಗಳಿಗೆಯೂ ಕುಶಲದಿ ಪ್ರಾರ್ಥಿಪೆವು

ಕಾಲೇ ವರ್ಷತು ಪರ್ಜನ್ಯಃ
ಪೃಥಿವೀಂ ಸಸ್ಯ ಸಸ್ಯಶಾಲಿನೀ|
ದೇಶೋಯಂ ಕ್ಷೋಭ ರಹಿತೋ
ಸಜ್ಜನಾಃ ಸಂತು ನಿರ್ಭಯಾಃ ||

ಸ್ವಸ್ತಿಃ
ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಮಹಿಂ ಮಹೀಷಃ|
ಗೋ
ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾ ಸಮಸ್ತಾ ಸುಖಿನೋ ಭವಂತು||

|| ಅಕ್ಷರದಾತಾ ಸುಖೀ ಭವ ||

Thursday, February 25, 2010

ಮಹಾಬಲರಿಗೆ ಕಾವ್ಯ-ನಮನ


ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಹಾಗೂ ಉಡುಪಿ ಮಲೆನಾಡುಗಳಲ್ಲಿ ವ್ಯಾಪಕವಾಗಿಯೂ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೇರೆ ಬೇರೆ ಪ್ರಾಕಾರಗಳಿಂದಲೂ ಕಂಗೊಳಿಸುವ ಕಲೆ ಯಕ್ಷಗಾನ. ಬಡಗು,ತೆಂಕು ಮತ್ತು ಬಡಾಬಡಗು ಪ್ರಾಕಾರಗಳು ಮುಖ್ಯವಾದವುಗಳು. ಅವುಗಳಲ್ಲಿ ನವರಸಗಳನ್ನೂ, ಮುನಿ ಭರತೇಶನ ಭರತನಾಟ್ಯದ ಹಲವು ಭಂಗಿಗಳನ್ನೂ, ಸಾಟಿಯಿಲ್ಲದ ಅತಿ ವಿಶಿಷ್ಟ ವೇಷಭೂಷಣಗಳನ್ನೂ, ಸಂಗೀತದ ಅನೇಕ ಸುಲಲಿತ ರಾಗಗಳನ್ನೂ-ತಾಳಗಳನ್ನೂ,ಅತ್ಯುಕೃಷ್ಟ ಹಾವ-ಭಾವ ಭಂಗಿಗಳನ್ನೂ, ಹಿತಮಿತವಾದ ಹಿಮ್ಮೇಳ ವಾದ್ಯಗಳೊಂದಿಗೆ ದೃಶ್ಯಮಾಧ್ಯಮದ ಮುಖಾಂತರ ದಶಾವತಾರದ ವಿಭಿನ್ನ ಪ್ರಸಂಗಗಳನ್ನು ಪ್ರದರ್ಶಿಸಿ, ಜನರಲ್ಲಿ ರಾಮಾಯಣ-ಮಹಾಭಾರತವೇ ಮೊದಲಾದ ಕಥೆಗಳನ್ನು ಜಾಗೃತಗೊಳಿಸಿ, ಸಮಾಜದ ಒಳಿತಿಗೆ ಜನರ ಮನೋಭೂಮಿಕೆಯನ್ನು ಪ್ರಚುರಪಡಿಸುವ ಕಲೆ ಅತ್ಯಂತಹೆಮ್ಮೆಯ ಕಲಾ ವೈಭವ. ಒಮ್ಮೆ ಇನ್ನೂ ನೋಡಿರದೆ ಹೊಸದಾಗಿ ಒಮ್ಮೆ ನೋಡಿದವರನ್ನೂ ಕೂಡ ತನ್ನತ್ತ ಕೈಬೀಸಿ ಸೆಳೆದುಕೊಳ್ಳುವ ಸಮಗ್ರ ಕಲಾ ಸಂಪತ್ತು ! ದಶಕಗಳ ಕಾಲ ಕ್ಷೇತ್ರದಲ್ಲಿ ಸತತ ತನ್ನನ್ನು ತೊಡಗಿಸಿಕೊಂಡು, ಕವಿ-ಸಾಹಿತಿಗಳಂತೆ ಅದನ್ನೇ ಬದುಕಿ, ಅದರಬಗ್ಗೆ ಸದಾ ಚಿಂತಿಸುತ್ತಾ, ಬಡಾಬಡಗಿಗೆ ತನ್ನದೇ ಆದ ಛಾಪು ಒತ್ತುವಲ್ಲಿ ಸಂಪೂರ್ಣ ಯಶಸ್ವಿಯಾದ ಡಾ| ದಿ|ಶ್ರೀ ಮಹಾಬಲ ಹೆಗಡೆ, ಕೆರೆಮನೆ ಇವರು ಕಳೆದ ೨೯ ಅಕ್ಟೋಬರ್ ೨೦೦೯ ಗುರುವಾರ ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಅಳಿಕೆಯಲ್ಲಿ ತಮ್ಮ 'ವೇಷ'ವನ್ನು ಮುಗಿಸಿದರು.


ಕೆರೆಮನೆ ಮೇಳದಲ್ಲಿ ದಿ|ಶ್ರೀ ಶಿವರಾಮ ಹೆಗಡೆ ದಿ |ಶ್ರೀ ಶಂಭು ಹೆಗಡೆ ದಿ| ಶ್ರೀ ಮಹಾಬಲ ಹೆಗಡೆ ಇವರೆಲ್ಲ ನಡೆದಾಡುವ ವಿಶ್ವವಿದ್ಯಾಲಯಗಳಂತೆ ಇದ್ದರು ಎಂದರೆ ತಪ್ಪಾಗಲಾರದು, ದಿನಂಪ್ರತಿ ಓದುತ್ತ, ಹೊಸತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತ ಕಲಾಪ್ರಕಾರಕ್ಕೆ ಮೆರುಗನ್ನೂ 'ಚಿನ್ನ-ಬೆಳ್ಳಿಯಕಿರೀಟವನ್ನೂ ', ರಾಷ್ಟ್ರ-ರಾಜ್ಯ ಪ್ರಶಸ್ತಿಗಳನ್ನೂ ತಂದುಕೊಟ್ಟ ಮಹನೀಯರು. ಶಂಭು ಹೆಗಡೆಯವರ ಅತಿ ಪರಿಶ್ರಮದಿಂದ ವಿದೇಶಗಳಲ್ಲೂ ಕಲೆ ಮಾನ್ಯತೆ ಪಡೆಯಿತು ! ಅದರಲ್ಲಂತೂ ಸರಕಾರ ಕೊಟ್ಟ ಮಾಶಾಸನವನ್ನು ಧಿಕ್ಕರಿಸಿ ವಾಪಸ್ಸಾಗಿಸಿದ ದಿ| ಮಹಾಬಲ ಹೆಗಡೆ ಬಹಳ ಸ್ವಾಭಿಮಾನೀ ವ್ಯಕ್ತಿಯಾಗಿದ್ದರು; ಯಾರಿಗಾಗಿ ಕಲೆಯಲ್ಲ-ಬದಲಾಗಿ ತನ್ನ ಸಂತುಷ್ಟಿಗಾಗಿ ತಾನು ಹಾಡಿ-ಕುಣಿಯುತ್ತೇನೆಂಬ ಛಲಹೊಂದಿದ್ದರು, ನಮ್ಮ ಹಿರಿಯ ಸಾಹಿತಿ ಮುತ್ಸದ್ದಿ ದಿ| ಕೋಟ ಶ್ರೀ ಶಿವರಾಮ ಕಾರಂತರ ಬಾಯಿಂದಲೂ ಶಹಬಾಸ್ ಪಡೆದವರು!

ಒಂದೇ ವರ್ಷದಲ್ಲಿ ಅಣ್ಣ-ತಮ್ಮ [ಮಹಾಬಲ-
ಶಂಭು] ಇಬ್ಬರನ್ನೂ ಕಳೆದುಕೊಂಡು ಯಕ್ಷಗಾನಕ್ಷೇತ್ರ ನಿಜವಾಗಿಯೂ ಬಡವಾಯಿತು, || ಜಾತಸ್ಯ ಮರಣಂ ಧ್ರುವಂ || ಬಂದವರು ಮರಳಲೇ ಬೇಕಲ್ಲವೇ ? ಎಲ್ಲಿಂದ ಬಂದೆವೆಂಬುದು ಗೊತ್ತಿಲ್ಲ, ಎಲ್ಲಿಗೆ ಹೊರಟೆವೆಂಬುದು ತಿಳಿದಿಲ್ಲ, ಆದರೆ ಪ್ರಕ್ರಿಯೆ ನಡೆದೇ ಇದೆ! ಇರುವವರೆಗೆ ನಾವು ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಳ್ಳುತ್ತೇವೆ. ಬಂದು-ಹೋಗುವ ನಡುವಿನ ಕಾಲ ಯಾರಿಗೆ ಎಷ್ಟೆಂಬುದು ಯಾರಿಂದಲೂ ಗುರುತಿಸಲ್ಪಟ್ಟಿಲ್ಲ ! ಇದೇ ಜೀವನ. ಶ್ರೀಯುತ ಶಂಭು ಹೆಗಡೆ ಅನೇಕ ಸಲ ವೇದಿಕೆಯಲ್ಲಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಅಂತ ಪ್ರಾಜ್ಞರು ಹೇಳಿದ್ದಾರೆ " ಎನ್ನುತ್ತಿದ್ದುದನ್ನು ಕೇಳಿದ್ದೆ, ಅವರೂ ಅದಕ್ಕೆ ಅಷ್ಟುಬೇಗ ಸಾಕ್ಷೀಭೂತರಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾವ ದೇವರನ್ನು ನಂಬಿ ನೆಚ್ಚಿ ನಡೆದರೋ ಅಂತಹ ದಿವ್ಯ ಸಾನ್ನಿಧ್ಯದಲ್ಲಿ, ಅದೂ ಮರ್ಯಾದಾಪುರುಷೋತ್ತಮನಾದ 'ಶ್ರೀರಾಮನಾಗಿ' , ಆವೇಷದಲ್ಲಿ ತನ್ನ ಬದುಕಿನ ವೇಷವನ್ನು ತೆರೆಗೆ ಸರಿಸಿಬಿಟ್ಟರು ಎಂಬುದನ್ನು ಟಿ.ವಿ. ಬಿತ್ತರಿಸಿದಾಗ ತಡೆಯಲಾರದೆ ಆತ್ತೆ, ಎರಡುದಿನಗಳ ತರುವಾಯ ಅವರ ಮಗ ಶಿವಾನಂದರಿಗೆ ದೂರವಾಣಿಯಲ್ಲಿ ಮಾತನಾಡಿದೆ-ಮನಸಂತೈಸಿಕೊಂಡೆ. ಮಹಾಬಲರು 'ಚೌಕಿ'ಗೆ ತೆರಳಿದಾಗ ಅಂಥದಕ್ಕೆ ಆಸ್ಪದ ದೊರೆಯಲಿಲ್ಲ. ಹೀಗಾಗಿ ಭಾವಜೀವಿಯಾದ ನನ್ನ ಕಣ್ಣ ಹನಿಗಳೇ ಅವರಿಗೆ ಕಾಣಿಕೆಯಾದವು. ಇಂದು ಅವರಬಗ್ಗೆ ಕಾರ್ಯಕ್ರಮ ಏರ್ಪಟ್ಟಿದೆ -ಬೆಂಗಳೂರಿನ ಮಲ್ಲೇಶ್ವರದ-ಹವ್ಯಕ ಸಭಾಂಗಣದಲ್ಲಿ, ನಾಡಿದ್ದು ಭಾನುವಾರ ೨೮.೦೨.೨೦೧೦ ರಂದು[ಕಾರ್ಯಕ್ರಮದ ರೂವಾರಿಯಾದ ಶ್ರೀ ಜಿ.ಎಸ್.ಹೆಗಡೆಯವರು ತಮ್ಮ 'ಸಪ್ತಕ'ಎಂಬ ಟ್ರಸ್ಟ್ ವತಿಯಿಂದ ಇದನ್ನು ಆಯೋಜಿಸಿದ್ದಾರೆ,ನನಗೆ ಅವರು ಕಳಿಸಿದ ಆಮಂತ್ರಣದ ಪ್ರತಿಯನ್ನು ತಮಗೆಲ್ಲಾ ಇಲ್ಲಿ ಕೊಡುತ್ತಿದ್ದೇನೆ],ವಿಷಯ ತಿಳಿದು ಬಹಳ ಸಂಬ್ರಮಿಸಿದವರಲ್ಲಿ ನಾನೂ ಒಬ್ಬ. ಅವರ ಸಂಗೀತ,ಶಹನಾಯಿವಾದನ ಇದರ ಬಗ್ಗೆ ಕೇಳಿ ಗೊತ್ತೇ ಹೊರತು ಅದನ್ನು ಆಸ್ವಾದಿಸುವ ಅವಕಾಶ-ಅನುಕೂಲ ನನಗೊದಗಲಿಲ್ಲ. ಆದರೂ ಅವರ ಪಾತ್ರಗಳನ್ನು ಮನಸಾರೆ ಕಣ್ತುಂಬಿಸಿಕೊಂಡು ಚಪ್ಪಾಳೆ ತಟ್ಟಿದವರಲ್ಲಿ ಚಿಕ್ಕ ಪ್ರೇಕ್ಷಕನಾಗಿ ನಾನೂ ಒಬ್ಬ. ಗತಿಸಿದ ಎರಡೂ ನಕ್ಷತ್ರಗಳಿಗೆ ಭಗವಂತ ಶ್ರೀ ಇಡಗುಂಜಿ ಮಹಾಗಣಪತಿ ಸದ್ಗತಿ ಕೊಡಲಿ, ಅವರು ಮತ್ತೆ ಹುಟ್ಟಿ ಯಕ್ಷಗಾನವನ್ನು ಮುನ್ನಡೆಸಲಿ ಎಂದು ಪ್ರಾರ್ಥಿಸಿ ಸ್ವಸಂತೋಷಕ್ಕಾಗಿ ಬರೆದುಕೊಂಡ ಹಾಡನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ --

ಖ್ಯಾತ ಹಿಂದುಸ್ತಾನೀ ಗಾಯಕ ಶ್ರೀ ವೆಂಕಟೇಶಕುಮಾರ್ ಹಾಡಿರುವ 'ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ....' ಹಾಡಿನ ದಾಟಿಯಲ್ಲಿ ಇದನ್ನು ಬರೆದಿದ್ದೇನೆ.

ಮಹಾಬಲರಿಗೆ ಕಾವ್ಯ-ನಮನ
ಬಿಡದೆ ಬಾಧಿಸುತಿಹುದು ಭೀಷ್ಮ ನಿನ್ನಯ ನೆನಪು
ನಡೆದೆ ಎಲ್ಲಿಗೆ ಹೇಳು ಇನ್ನೆಲ್ಲಿ ಒನಪು ?

ಬೇರೆ ಹಲವರು ಇಲ್ಲಿ ಪಾತ್ರ ಮಾಡಲುಬಹುದು
ನಾನಾ ರಾಗದಿ ಹಾಡಿ ಕುಣಿಯಬಹುದು
ಯಾರು ಸಾಟಿಯು ನಿನಗೆ ಯಕ್ಷರಂಗದಲಿ
ಮೀರಿ ನಿಂತಿಹರಿಲ್ಲ ನಿನ್ನ ತಿಟ್ಟಿನಲಿ

ಇಡಗುಂಜಿ ಮೇಳದಲಿ ಬಡಗುತಿಟ್ಟಿನ ವೇಷ
ಗಡಗುಡಿಸಿ ನಡುಗಿಸಿದೆ ನೀನು ಜಮದಗ್ನಿ
ಬೆಡಗು ನಾ ಮರೆವೆನೇ ಬಿಲ್ಲ ಹಬ್ಬದ ಕಂಸ
ಎಡಬಿಡದೆ ನೋಡಿದೆನು ಕೃಷ್ಣ -ಕೌರವರ

ಕೆರೆಮನೆಯ ಅಂಗಳದಿ ಆಡಿಬೆಳೆದಿಹ ಕೂಸು
ನೆರೆದೇಶದಂಗಳಕೆ ಜಿಗಿದು ಬಂತು
ಹರಕೆ ತೀರಿಸಿ ಜಗದ ಪಾತ್ರವನು ಮುಗಿಸುತ್ತ
ಗರಿಕೆಪೂಜೆಯ ನೀಡೆ ಗಣಪನೈದಿದೆಯಾ ?
------------
ಸತ್ಕಾರ್ಯವನ್ನು ಕೈಗೊಂಡಿರುವ ಶ್ರೀ ಜಿ.ಎಸ್.ಹೆಗಡೆಯವರನ್ನು ಅಭಿನಂದಿಸುತ್ತಾ , ತಮ್ಮನ್ನೆಲ್ಲಾ ಆಮಂತ್ರಿಸುತ್ತಿದ್ದೇನೆ - ಬನ್ನಿ ಸ್ನೇಹಿತರೇ, ಕಾರ್ಯಕ್ರಮವನ್ನು ಚಂದಗಾಣಿಸೋಣ ಬನ್ನಿ, ಮೇರು ನಟನಿಗೆ ನಮನ ಹೇಳೋಣ ಬನ್ನಿ !

Wednesday, February 24, 2010

'ಆಪ್ತ ರಕ್ಷಕ'

ಮನುಷ್ಯ ಹುಟ್ಟಿನಿಂದ ಎಲ್ಲವನ್ನೂ ಗಳಿಸಿರುವುದಿಲ್ಲ, ಪಡೆದ ಸುಕೃತದಿಂದ ಅನೇಕ ಅವಕಾಶಗಳನ್ನು ಆತ ಪಡೆದುಕೊಳ್ಳುತ್ತಾನೆ. ಎಷ್ಟೋ ಬಾರಿ ಒಳ್ಳೆಯ ಮನುಷ್ಯನೂ ಕೂಡ ತನ್ನದಲ್ಲದ ತಪ್ಪಿಗೆ ಯಾವುದೇ ತಪ್ಪು ಗ್ರಹಿಕೆಯಿಂದ ಜೀವನಪೂರ್ತಿಮಾನಸಿಕವಾಗಿ,ದೈಹಿಕವಾಗಿ ಶಿಕ್ಷೆಗೊಳಗಾಗುತ್ತಾನೆ ! ಆಧುನಿಕ ಜೀವನದ ಇಂತಹ ಒತ್ತಡಗಳಿಂದ ಸಕ್ಕರೆ ಕಾಯಿಲೆಯಂತಹದನ್ನು ಅನುಭವಿಸುತ್ತಾರೆ. ಅಂತಹ ವಿಷಮ ಪರಿಸ್ಥಿತಿಯಲ್ಲೂ ಹುಟ್ಟಿದ ಮನೆಗೂ, ಊರಿಗೂ, ರಾಜ್ಯ-ದೇಶಂಗಳಿಗೂ ಒಳಿತನ್ನೇ ಬಯಸುವಕರ್ಮಯೋಗಿಗಳಾಗಿ ಜೀವಿಸುತ್ತಾರೆ. ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಹಾಗೇ ಇರುತ್ತಾ ತನ್ನಿಂದಾದ ರೀತಿಯಲ್ಲಿ ದಾನ-ಧರ್ಮಾದಿ ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹೇಳಲಾರದ-ಅನುಭವಿಸಲಾರದ ತನ್ನಿರವನ್ನೂ ಮೀರಿ ಉಪಕರಿಸುವ ಇಂತಹ ವ್ಯಕ್ತಿಗಳು ಬಹು ಅರ್ಥದಲ್ಲಿ ಯೋಗಿಗಳು-ಕರ್ಮಯೋಗಿಗಳು. ಅದರಲ್ಲಂತೂ ವ್ಯಕ್ತಿ ಸಿನಿಮಾ ಮಾಧ್ಯಮದ ವ್ಯಕ್ತಿಯಾದರೆ ಅವರ ವೃತ್ತಿಜನ್ಯ ಅನಿವಾರ್ಯತೆಗಳನ್ನು ಮರೆತು ಬೇರೆಯವರಿಗೆ ಆದರ್ಶವಾಗಿ, ರೋಲ್ ಮಾಡೆಲ್ ಆಗಿ ಬದುಕುವವರು ವಿರಳ-ಅತಿ ವಿರಳ. ಅವರದೇನಿದ್ದರೂ ಗಳಿಕೆ-ಪ್ರಚಾರ [Money, Name & Fame].ಜನಸಾಮಾನ್ಯರಿಗೆ ಅವರು ಲಭ್ಯರಲ್ಲ, ಪರದೆಯಮೇಲೆ ಬಿಟ್ಟು ಹಾಗೆಲ್ಲ ಕಾಣಸಿಗುವುದೂ ಇಲ್ಲ. ಇಂತಹ ಹೀರೋ ಒಬ್ಬ ನಿಜಜೀವನದಲ್ಲಿಯೂ ಹೀರೋ ಆಗಿ ಬದುಕಿ ವೀರೋದಾತ್ತ ಮರಣವನ್ನು ಪಡೆದು ಮಡಿದೂ ಬದುಕಿದ್ದಾನೆ. ಎಲ್ಲೋ ರಸ್ತೆಯಲ್ಲಿ ಹೋಗುವಾಗ ಬಡವನೊಬ್ಬ ಅಡ್ಡ ಬಂದು ಅಂಗಲಾಚಿದರೆ ಇಂಥವರೂ ಅದನ್ನು ನೋಡುವುದುಂಟೇ ಎಂಬುದಕ್ಕೆ ವಿರುಧ್ಧವಾಗಿ ಗೊತ್ತಿರದ,ಸರಿಯಾಗಿ ಆಸರೆಯಿರದ ಮುದುಕನೋರ್ವನ ಅಹವಾಲಿಗೆ ಕಟ್ಟುಬಿದ್ದು ಕಣ್ಣುಕೊಡಿಸಿದ ಆ ವ್ಯಕ್ತಿ ನಮ್ಮ ಹೆಮ್ಮೆಯ ಕನ್ನಡ ಕುವರ ದಿ| ಡಾ| ವಿಷ್ಣುವರ್ಧನ್ ! ಹೀಗೆ ಬದುಕಿದವರ ಬದುಕು ಎಲ್ಲರಿಗೂ ಆದರ್ಶವಾಗಲಿ ಎಂಬ ನನ್ಲುಡಿಯೊಂದಿಗೆ ನನ್ನ ಕವಿಹೃದಯ ಅವರಿಗೆ ನುಡಿನಮನ ಸಲ್ಲಿಸುತ್ತಿದೆ; ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬದುಕಿದರೆ 'ಆಪ್ತರಕ್ಷಕ'ರಾಗಿ ಬದುಕೋಣ ಎಂಬ ಸಂದೇಶದೊಂದಿಗೆ !


'ಆಪ್ತ ರಕ್ಷಕ'
[ಚಿತ್ರಗಳ ಋಣ : ಅಂತರ್ಜಾಲ]

ಮಾಡಿದನ ಹೊಗಳಿದರೆ ಮಾರನಾಗಲು ಬೇಡ
ಆಡಿಕೊಂಬರು ನಿನ್ನ ಮತ್ತೊಂದು ಗಳಿಗೆ
ಕಾಡದಿರಲೀ ನಿನ್ನ ಮನುಜಸಹಜದ ವಾಂಛೆ
ರೂಢಿಗುತ್ತಮನಾಗು | ಜಗದಮಿತ್ರ

ನಡೆಯುವರು ಎಡಹುವುದು ಪ್ರಕೃತಿ ಸಹಜದಧರ್ಮ
ನಡೆಯದೆಯೇ ಆಡುವುದು ಬಲು ವಿಕೃತಕರ್ಮ
ಅಡಿಯಿಡಲು ಅಂಜುತ್ತ ಹಿಂದೇಟು ಹಾಕಿದರೆ
ಪಡಪೋಶಿ ನೀನಪ್ಪೆ | ಜಗದಮಿತ್ರ

ಹಾರತುರಾಯಿಗಳು ಭಾರೀ ಭಾರವದಕ್ಕು
ವಾರದಲಿ ದಿನಬೆಳಗು ತಾನರಸಿ ಬರಲು
ಯಾರಕೃಪೆಗಾಗಿ ನೀ ಕೈಯ್ಯೊಡ್ಡದಿರು ಮುನ್ನ
ವೀರಯೋಧನ ನೆನೆಯೊ | ಜಗದಮಿತ್ರ



















ವೇಷದಲಿ
ಕಾಯುವರು ದೇಶದಂಚಲಿನಿಂತು
ಕೋಶ ಓದದೆ ಬಹಳ ನಿಸ್ವಾರ್ಥದಿಂದ
ರಾಶಿವಿದ್ಯೆಯನರಿತು ನೀನಾಗು ಉಪಕಾರಿ
ಭೂಷಣವು ನಿನಗದುವೆ | ಜಗದಮಿತ್ರ

ಆರ್ತರನು ರಕ್ಷಿಪುದು ಅತಿ ವಿಶೇಷದ ಕೆಲಸ
ಕಾರ್ತವೀರ್ಯನ ತೋಳು ನೀಡುತೀ ಜಗದಿ
ವಾರ್ತಾಲಾಪದಿ ಕಾಲಕಳೆಯದೇ ಕೈಗೊಳ್ಳು
ಪ್ರಾರ್ಥಿಸುತ ಸಂಘಟಿಸು | ಜಗದಮಿತ್ರ

ಉಡಿತುಂಬ ಗುಡಿತುಂಬ ಗಳಿಸಿ ಕೂಡಲುಬೇಡ
ಬಡಬಡಿಸಿ ಹೆದರಿಸುತ ಬಡಜನಂಗಳನು
ಒಡವೆ-ವಸ್ತ್ರವು ಬರದು ಕಡಿದಾಗ ಭೂ ಋಣವು
ಮಡಿದರೂ ಬದುಕು ನೀ | ಜಗದಮಿತ್ರ














ವ್ಯಾಪ್ತಿಯನು
ವಿಸ್ತರಿಸಿ ಸ್ನೇಹದಿಂ ಬದುಕುತಲಿ
ಪ್ರಾಪ್ತ ಕರ್ತವ್ಯದಲಿ ತನ್ಮಯತೆಯಿಂದ
ತಪ್ತ ದೇಶದ ಭೂಮಿ ವಿಸ್ತಾರಗಳಲೆಲ್ಲ
ಆಪ್ತ ರಕ್ಷಕನಾಗು | ಜಗದಮಿತ್ರ


Tuesday, February 23, 2010

'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'



'ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೩'

ಕಳೆದವಾರ ವಿದ್ಯೆ , ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಓದಿದಿರಿ. ಈಗ ಮತ್ತೆ ಕೆಲವು ಪರೀಕ್ಷೆಗಳ ಬಗ್ಗೆ ನೋಡೋಣ-

ವ್ಯಕ್ತಿಯೋರ್ವನ ವ್ಯಕ್ತಿತ್ವದಲ್ಲಿ ಅಂತಹುದೇನಿದೆ ಎಂದು ಕೆದಕ ಹೊರಟರೆ ಅದು ದಿನವೊಂದಕ್ಕೆ ಹೊಸ ಹೊಸ ಅಧ್ಯಾಯವನ್ನು ವಿಸ್ತಾರದಿಂದ ತೋರಿಸುವ ಸಾಗರದೋಪಾದಿಯ ವಿಷಯವಾಗಿ ತನ್ನನ್ನೇ ತೋರ್ಪಡಿಸುತ್ತದೆ. ನಾವು ಸಮಾಜದಲ್ಲಿ ಅನೇಕ ತೆರನಾದ ವ್ಯಕ್ತಿಗಳನ್ನು ನೋಡುತ್ತೇವೆ. ಎಲ್ಲರೂ ಎಲ್ಲಾ ಕೆಲಸಕ್ಕೂ ಅರ್ಹರಾಗಿರುವುದಿಲ್ಲ. ಯಾರಿಗೆ ಯಾವಕೆಲಸದಲ್ಲಿ ಪರಿಣತಿ, ಪರಿಪಕ್ವತೆ ಇರುತ್ತದೋ ಅಂಥವರಿಗೆ ಅಂತಂತಹ ಕೆಲಸಗಳನ್ನು ಮಾತ್ರ ಮಾಡಲು ಸಾಧ್ಯ! ಒಳ್ಳೆಯ ಅಡುಗೆ ಮಾಡುವವ ಉತ್ತಮ ಬರಹಗಾರನಾಗಲು ಇಷ್ಟಪಡುವುದಿಲ್ಲ ; ಹಾಗೇ ಇಷ್ಟಪಡದೇ ಬರೆದರೆ ಬರಹಗಳು ಓದುವುದಕ್ಕೆ ಕಷ್ಟವಾದ ಬರಹಗಳಾಗುತ್ತವೆ! ಉತ್ತಮ ವಾಗ್ಮಿ ಒಳ್ಳೆಯ ಪೇಂಟರ್ ಆಗಲು ಹೋಗುವುದಿಲ್ಲ, ಸಿನಿಮಾ ಹೀರೋ ಸಾಹಿತಿಯಾಗುವುದಿಲ್ಲ, ಒಳ್ಳೆಯ ಮೇಷ್ಟ್ರು ಸಕ್ರಿಯರಾಜಕಾರಣಿಯಾಗಲು ಇಷ್ಟಪಡುವುದಿಲ್ಲ, ಗಾರೆ ಕೆಲಸದವ ನಾಟಕದಲ್ಲಿ ಒಳ್ಳೆಯ ಪಾತ್ರ ಪೋಷಣೆ ಮಾಡಲಾರ, ಒಬ್ಬಮಾರ್ಕೆಟಿಂಗ್ ಹೆಡ್ ಸಾಹಿತ್ಯ -ಕಾವ್ಯಗಳ ಓದು/ಬರೆಹದಲ್ಲಿ ತೊಡಗಿಸಿಕೊಳ್ಳಲು ಅನುವಾಗುವುದಿಲ್ಲ; ಅವರಿಗೆ ಅದೆಲ್ಲಾ ಅರ್ಥವಿಲ್ಲದ ಕೆಲಸಗಳು, ಒಬ್ಬ ಉತ್ತಮ ವೈದ್ಯಉತ್ತಮ ಮೆಕಾನಿಕ್ ಆಗಿರುವುದಿಲ್ಲ ಹೀಗೇ ಒಂದೊಂದು ವ್ಯಕ್ತಿತ್ವವೂ ವಿಭಿನ್ನ ಮತ್ತು ವಿಶಿಷ್ಟ !

ವ್ಯಕ್ತಿ ತನ್ನ ಮೂಲ ಆಸಕ್ತಿ ಮತ್ತು ಅರ್ಹತೆಯನ್ನು ಗುರುತಿಸಿಕೊಂಡು ನಡೆದರೆ ವ್ಯಕ್ತಿಗೂ ಮತ್ತು ಸಮಾಜಕ್ಕೂ ಅದರಿಂದ ಒಳಿತು. ವ್ಯಕ್ತಿತ್ವದ ಅರಿವಿರದೇ ಎಲ್ಲರೂ 'ರಾಷ್ಟ್ರಪತಿ'ಗಳಾಗುವ ಕನಸು ಕಂಡರೆ ಕನಸು ಕನಸೇ ಹೊರತು ಅದು ಸಾಧ್ಯತೆಗಳ ಹಂದರದಲ್ಲಿ ಬರುವ ಅರ್ಹ ಕನಸಲ್ಲ. ಇಂತಹ ಸನ್ನಿವೇಶದಲ್ಲಿ ಅನೇಕ ಪರೀಕ್ಷೆಗಳು ವ್ಯಕ್ತಿ 'ಏನಾಗಲು ಯೋಗ್ಯ' ಎಂಬುದನ್ನುತೋರಿಸಿಕೊಡುತ್ತವೆ. ಅದರ ಮುಖೇನ ವ್ಯಕ್ತಿ ತನ್ನನು ಹಾಗೇ ಗುರುತಿಸಿಕೊಳ್ಳಲು ಸುಲಭವಾಗುತ್ತದೆ. ಹಣವನ್ನು ವಿಕಸನಕ್ಕೆಸರಿಯಾದ ಮಾರ್ಗದಲ್ಲಿ ತೊಡಗಿಸುವಲ್ಲಿ ಹೇಗೆ ಇನ್ವೆಸ್ಟ್ಮೆಂಟ್ ಅಡ್ವೈಸರ್ ನ್ನು ಕಾಣುತ್ತೇವೋ ಹಾಗೇ ಸರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಸಹಾಯಮಾಡುತ್ತದೆ.

ಸ್ವತಂತ್ರ ಉದ್ಯಮಿಯಾಗುವ ಅರ್ಹತೆಗಳ ಪರೀಕ್ಷೆಗಳು
ಟೈಪ್ T ಪರ್ಸನಾಲಿಟಿ ಟೆಸ್ಟ್
ಇಂದು ಜಾಗತಿಕ ಆರ್ಥಿಕ ಮುಗ್ಗಟ್ಟನ್ನು ನೋಡುತ್ತಾ ಇದ್ದೀರಿ. ಮಾರ್ಕೆಟ್ಟಿನಲ್ಲಿ ಎಷ್ಟೇ ಬದಲಾವಣೆ ಆಗುತ್ತಿದೆ ಎಂದರೂ ಅದು ಕೇವಲ ಪುಸ್ತಕಗಳಲ್ಲಿ ಲೆಕ್ಕ ಹೊಂದಿಸುವಲ್ಲಿ ಮಾತ್ರವೇ ಹೊರತು ಕ್ರಿಯಾತ್ಮಕವಾಗಿ ಚಾಲ್ತಿಯಲ್ಲಿ ಹೊಸ ಬದಲಾವಣೆ ಬಂದಿದ್ದನು ಬಹುತೇಕ ಕಂಪನಿಗಳು ಪಡೆಯಲಾಗುತ್ತಿಲ್ಲ ! ಇಂತಹ ಆರ್ಥಿಕ ಪರಿಸ್ತಿತಿಯ ಹಿನ್ನೆಲೆಯಲ್ಲಿ ಯಾವರೀತಿಯಲ್ಲಿ ಮುನ್ನಡೆ ಸಾಧಿಸ ಬಹುದು ಎಂಬುದನ್ನು ಒಂದರ್ಥದಲ್ಲಿ ರಭಸದಿಂದ ಹರಿವ ನೀರಿಗೆ ಎದುರಾಗಿ ಈಜುವುದು ಹೇಗೆ ಎಂಬುದನ್ನು ವ್ಯಕ್ತಿಗೆ ಕೊಟ್ಟು ಪರೀಕ್ಷಿಸುವುದು. ವ್ಯಕ್ತಿ ತನ್ನ ಸ್ವಂತಿಕೆಯಿಂದ ಯಾವೆಲ್ಲ ದಾರಿಗಳನ್ನು, ಹಲವಾರು ಚಿಂತನಶೀಲ ಯೋಜನೆಗಳನ್ನು ಹೇಳ ಹೊರಡುತ್ತಾನೆ/ಳೆ ಎನ್ನುವುದನ್ನು ನಿಗದಿತ ಸಮಯದಲ್ಲಿ ಪರಿವೀಕ್ಷಿಸುವುದು. ಇದನ್ನು ಪ್ರಶ್ನೋತ್ತರ ರೂಪದಲ್ಲಿ ಕೂಡ ಮಾಡಬಹುದು.

ಮಾರ್ಕೆಟಿಂಗ್ ಖ್ವಿಜ್
ಮಾರುಕಟ್ಟೆಯ ಬಗ್ಗೆ ವ್ಯಕ್ತಿಗೆ ಏನು ಗೊತ್ತಿದೆ? ಮಾರುಕಟ್ಟೆಗೆ ಹೊಸ ವಸ್ತು ಅಥವಾ ಪ್ರಾಡಕ್ಟ್ ನ್ನು ಪರಿಚಯಿಸುವುದು ಹೇಗೆ, ಹಾಗೇ ಪರಿಚಯಿಸಲು ಸುಮಾರು ಎಷ್ಟು ಹಣ ಬೇಕಾಗಬಹುದು? ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆಗೆ ಪರಿಚಯಿಸಬೇಕು ಮುಂತಾದ ಸುಮಾರು ೧೫-೨೦ ಪ್ರಶ್ನೆಗಳು ಇರುತ್ತವೆ, ಸಮಯ ಮಿತಿ ಪ್ರಯೋಗ.

ಮಾರ್ಕೆಟ್ ರಿಸರ್ಚ್
ಮಾರುಕಟ್ಟೆಯಲ್ಲಿ ಜನ ಏನನ್ನು ಬಯಸುತ್ತಿದ್ದಾರೆ? ಯಾವ ಬೆಲೆಯಲ್ಲಿ ಬಯಸುತ್ತಾರೆ ? ನಮಗೆ ಸ್ಪರ್ಧೆಯೊಡ್ಡುವ ಬೇರೆ ಕಂಪನಿಗಳು ಯಾವವು ? ನಮ್ಮ ತಯಾರಿಕೆಯಲ್ಲಿನ ತೊಂದರೆ ಏನು ? ಮಧ್ಯವರ್ತಿಗಳು ಏನು ಹೇಳುತ್ತಿದ್ದಾರೆ ಮುಂತಾಗಿ ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !

ಸಾಹಸೀ ಪ್ರವೃತ್ತಿ ಪರೀಕ್ಷೆ
ವ್ಯಕ್ತಿ ಎಷ್ಟರಮಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಕೆಲಸಮಾಡಲು ಸಿದ್ಧ ? ಪರಿಸ್ಥಿತಿ ಹೇಗಿದ್ದರೂ ಮಾರ್ಕೆಟ್ ನಲ್ಲಿ ಹೇಗೇ ಮಾಡಿಯಾದರೂ ಬದುಕಬಲ್ಲೆನೆಂಬ ಸಾಹಸೀ ಮನೋಭಾವ ವ್ಯಕ್ತಿಗಿದೆಯೇ ? ಒದರ್ಥದಲ್ಲಿ ವ್ಯಕ್ತಿಯ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಕೆಲವು ಪ್ರಶ್ನೆಗಳು, ಸಮಯಮಿತಿ ಪ್ರಯೋಗ.

ಲೀಡರ್ಶಿಪ್ ಕ್ವಾಲಿಟಿ ಟೆಸ್ಟ್
ಉತ್ತಮ ನಾಯಕರು ಹುಟ್ಟಿನಿಂದಲೇ ಆ ಥರ ಇರುತ್ತಾರೆ ಎಂಬ ಹೇಳಿಕೆಯನ್ನು ಪಕ್ಕಕ್ಕಿಟ್ಟು ವ್ಯಕ್ತಿಯೊಳಗಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ ತಕ್ಕುದಾದ ಪರಿಸ್ಥಿತಿ ಮತ್ತು ಸಹಾಯ ಸಿಕ್ಕರೆ ಆತ/ಆಕೆ ಎಷ್ಟರಮಟ್ಟಿಗೆ ಸೃಜನಶೀಲ ಸ್ವಭಾವತೋರಿಸುತ್ತಾನೆ/ಳೆ ಎಂಬುದನ್ನು ಒರೆಗೆ ಹಚ್ಚುವುದು. ಇದರಲ್ಲಿ ವ್ಯಕ್ತಿಯ ಔಟ್ ಸ್ಟೇನ್ದಿಂಗ್
ಅಥವಾ ಅತೀ ಅಪರೂಪದ ವಿಶಿಷ್ಟ ಪ್ರತಿಕ್ರಿಯೆಯನ್ನು ಗುರುತಿಸುವುದು. ಹಲವಾರು ಪ್ರಶ್ನೆಗಳು, ಪುನಃ ಸಮಯಮಿತಿ ಪ್ರಯೋಗ !

ಯೋಗ್ಯತಾ ಪರೀಕ್ಷೆಗಳು

ಎಸ್ಸರ್ರ್ಟಿವ್ ನೆಸ್ ಪರೀಕ್ಷೆ ಅಥವಾ ವೈಯಕ್ತಿಕ ನೇರ ನುಡಿಯ ಪರೀಕ್ಷೆ
ಯಾವುದೇ ಪರಿಸರ, ಪರಿಸ್ಥಿತಿ ಇದ್ದರೂ, ಯಾರೇ ಇದ್ದರೂ ಯಾವುದೇ ಅಂಜಿಕೆ ಇಲ್ಲದೇ ತನ್ನ ವೈಯಕ್ತಿಕ ಕರಾರುವಾಕ್ಕಾದ ಅಭಿಪ್ರಾಯಗಳನ್ನು ವ್ಯಕ್ತಿ ಮಂಡಿಸುವಲ್ಲಿ ಎಷ್ಟರಮಟ್ಟಿಗೆ ಉತ್ತೀರ್ಣ ಎಂಬುದರ ಪರೀಕ್ಷೆ. ಬೇರೆಯವರ ಒತ್ತಡ ಮತ್ತು ಒತ್ತಾಸೆಗೆ ಬಲಿಯಾಗುತ್ತಾನೋ/ಳೋ ಅಥವಾ ತನ್ನದೇ ಅಭಿಪ್ರಾಯವನ್ನು ಮಂಡಿಸುತ್ತಾನೋ/ಳೋ ಅನ್ನುವುದನ್ನು ಒರೆಗೆ ಹಚ್ಚುವುದು. ಕೆಲವು ಪ್ರಶ್ನೆಗಳು ; ಸ್ಮಯಮಿತಿ ಪ್ರಯೋಗ.

ಬುದ್ಧಿ ತೀಕ್ಷ್ಣತೆಯ ಪರೀಕ್ಷೆ
ಹಲವಾರು ಸಂಬಂಧಿತ ಕೆಲಸಗಳನ್ನೊಡ್ಡಿ ಅವುಗಳನ್ನು ಅನುಕ್ರಮವಾಗಿ ಹೇಗೆ ಜೋಡಿಸುತ್ತಾರೆ ಮತ್ತು ಅದನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲು ಹೇಗೆ ಸಮಯವನ್ನು ಪರಿಗಣಿಸುತ್ತಾರೆ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಇದು ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.

ನುಮೇರಿಕಲ್ ರೀಸನಿಂಗ್ ಟೆಸ್ಟ್ ಅಥವಾ ಅಂಕೆ-ಸಂಖ್ಯೆಗಳ ಮಹತ್ವದ ಪರೀಕ್ಷೆ
ಇದರಲ್ಲಿ ಅಂಕೆಯ ದೇ ಪವಾಡ, ಅಂಕೆಗಳನ್ನು ಒಪಯೋಗಿಸಿಕೊಂಡು ಯಾವ ಯಾವ ಅಂಕೆಗೆ ಎಷ್ಟೆಷ್ಟು ಮಹತ್ವ ಕೊಡುತ್ತಾರೆ ಮತ್ತು ಅಂಕೆಯನ್ನು ಯಾವ ಕೆಲಸಕ್ಕೆ ಮೀಸಲಿಡುತ್ತಾರೆ ಭಾವನೆಗಳು ಮತ್ತು ವಿಚಾರ ಲಹರಿಯ ಮೇಲೆ ಹೇಗೆಮುಂದುವರಿಯುತ್ತಾರೆ ಎಂಬುದನ್ನು ಪರೀಕ್ಷಿಸುವುದು. ಇದು ಕೂಡ ಅತಿಯಾದ ಸಮಯಮಿತಿಯ, ಮಹತ್ವದ ಚಾಣಕ್ಯ ಅಥವಾ ಚಾಣಾಕ್ಷತನದ ಪರೀಕ್ಷೆ.

ವರ್ಬಲ್ ರೀಸನಿಂಗ್ ಟೆಸ್ಟ್ ಅಥವಾ ಶಬ್ಧ ಪ್ರಯೋಗ ಪರೀಕ್ಷೆ
ಕೆಲವೊಂದು ಶಬ್ದಗಳನ್ನು ಮುಂದಿಟ್ಟು ಅವುಗಳನ್ನು ಉಪಯೋಗಿಸಲು ಹೇಳುವುದು ಮತ್ತು ಅವುಗಳನ್ನು ವ್ಯಕ್ತಿ ಎಷ್ಟು ಸಮಂಜಸವಾಗಿ ಉಪಯೋಗಿಸುತ್ತಾನೆ/ಳೆ ಎಂಬುದನ್ನು ಪರಿವೀಕ್ಷಿಸುವುದು. ಕಾಲೋಚಿತವಾಗಿ ಎಲ್ಲೆಲ್ಲಿ ಯಾವರೀತಿ ಮಾತನಾಡುತ್ತಾರೆ ಎಂಬುದನ್ನು ಇದರಲ್ಲಿ ವಿವೇಚಿಸಲಾಗುತ್ತದೆ.

ಫೈರ್ ಫೈಟಿಂಗ್ ಟೆಸ್ಟ್ ಅಥವಾ ಆಪತ್ಕಾಲಿಕ /ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪರೀಕ್ಷೆ
ಕೊಟ್ಟ ಸಮಯದಲ್ಲಿ, ಬರಬಹುದಾದ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಲ್ಲಿ ವ್ಯಕ್ತಿ ಹೇಗೆ ಸಕ್ರಿಯವಾಗಿ, ಮುಂದಾಲೋಚನೆಯಿಂದ, ಸೌಜನ್ಯದಿಂದ ವರ್ತಿಸಿ ಕೆಲಸ ನಿಭಾಯಿಸುತ್ತಾನೆ/ಳೆ ಎಂಬುದನ್ನು ಸಮಯ ಮಿತಿಯಲ್ಲಿ ಪ್ರಶ್ನೆಗಳ ಮತ್ತು ದೃಶ್ಯ ಸನ್ನಿವೇಶಗಳಮೂಲಕ ಪರೀಕ್ಷಿಸುವುದು.
[ಮುಂದಿನವಾರ ನೋಡೋಣ ................]

Monday, February 22, 2010

'ಆಲೂ ಗಾರುಡಿ'-ಕಥಾಕಾಲಕ್ಷೇಪ


'ಆಲೂ ಗಾರುಡಿ'

ಗಜಾನನಂ ಭೂ ತಗಣಾದಿ ಸೇವಿತಂ
ಕಪಿ ಸ್ಥ ಜಂಬೂ ಫ ಲಸಾರ ಭಕ್ಸಿತಂ
ಉಮಾ ಸುತಂ ಸೋಕ ವಿನಾಶ ಕಾ.....ರಣಂ
ನಮಾಮಿ ವಿಘ್ನೇಶ್ವರ ಪಾ ದ ಪಂಕಜಂ....ಜಂ......ಹ.......

ಗಜವದ ನಾ ಬೇಡುವೆ ಗೌರಿ ತ ನ ಯ
ಗಜವದ ನಾ ಬೇಡುವೆ.....
ತ್ರಿಜಗ ವಂ ದಿತ ನೇ ಸುಜನರಾ ಪೊರೆವ ನೇ
ಗಜವದ ನಾ ಬೇಡುವೆ........
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಮಸ್ಪಾರ್ವತೀಪತೇ.................
ಹರಹರಾ ಹರಹರಾ ಮಹಾದೇವ .........

ಮೆರೆವ ಪುರದೊಳಗೆ ಬಿಹಾರವದೆನಿಸಿಹ
ಭುವಿಯದೇಶದೊಂದು ಚರಿತೆಯ ಪಾಡೇ
ಪಾಡಿ ಪೊಗಳಲ್ ಅತಿ ಮೋದವದೆನಿಸುವ
ಪಾಮರರುಧ್ಧರಿಸುವ ಕಥೆ ನೋಡ

ನಾರಾಯಣಾ........... ಕೃಷ್ಣಾ....... ನಾರಾಯಣಾ........ಕೃಷ್ಣಾ........ನಾ...ರಾ...ಯಣ

ಕೀರ್ತನಾರಂಭಕಾಲದಲ್ಲಿ ಹರಿದಾಸರು ಭಗವನ್ನಾಮ ಸ್ಮರಣೆ ಮಾಡುತ್ತಾರೆ... ಯುಗಯುಗದಲ್ಲೂ ತನ್ನ ನಾ ನಾ ಅವತಾರಗಳಿಂದ ಜಗದೊಡೆಯನಾಗಿರತಕ್ಕಂತಹ ಸ್ರೀಮನ್ನಾರಾಯ ತನ್ನ ಭಕ್ತರಮೇಲಿನ ಕಳಕಳಿಯಿಂದ, ಅವರ ಉದ್ಧಾರಕ್ಕಾಗಿ ತಾನೇ ಹಲವು ರೂಪಗಳಲ್ಲಿ ಭುವಿಯಲಿರುವ ಅವರ ಬಳಿ ಬಂದು ಸಲಹುತ್ತಾನೆಂದು ಗ್ನಾನಿಗಳು ಹೇಳುತ್ತಾರೆ. ಅಂತಹ ದಿವ್ಯಪುರುಷನನ್ನು ಕನಕ-ಪುರಂದರಾದಿ ಅನೇಕ ಹರಿದಾಸರು ನಾ ನಾ ರೀತಿಯಲ್ಲಿ ಸ್ಮರಣೆಮಾಡಿದ್ದಾರೆ.........


ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆ ...... ....ಗಳಿಗೆಲ್ಲ.......
ಅಲ್ಲಲ್ಲೇ .....ಆಹಾರ ವಿತ್ತವರು...... ಯಾರು
ಬಲ್ಲಿದನು ಕಾಗಿನೆಲೆಯಾದಿ ಕೇ ....ಶವರಾಯ
ಎಲ್ಲರನು ಸಲ ಹುವನು ಇದಕೆ...... ಸಂ .....ಶಯವಿಲ್ಲ ........
ತಲ್ಲಣಿಸ ದಿರು ಕಂಡ್ಯ ತಾಳು ಮ.....ನ... ವೇ

ಕಲ್ಲಿಗೂ ಕಠಿಣವುಂಟೇ ..ಸ್ವಾಮೀ ? ಅಂತಹ ಕಲ್ಲೆಂಬ ಕಲ್ಲೊಳಗೆ ಹುಟ್ಟೀ ಕೂಗುವಂತಹ ಕಪ್ಪೆಗಳಿಗೂ ಕಾಡಲ್ಲಿರುವ ಗಿಡಮರಗಳಿಗೂ ಪಶು-ಪಕ್ಷಾದಿ ವನ್ಯ ಜೀವಿಗಳಿಗೂ ಅಲ್ಲಲ್ಲೇ ಇದ್ದಲ್ಲೇ...ಇರುವಲ್ಲೇ ... ಆಹಾರವನ್ನು ಕೊಟ್ಟವರು ಯಾರು .........ಎಲ್ಲವನ್ನೂ ಬಲ್ಲವನು ಆ ಸ್ರೀಹರಿ..... ಸ್ರೀಮನ್ನಾರಾಯ.....ನಂಬಿದವರಿಗೆ ಇಂಬುಗೊಟ್ಟು ಸಲಹುತ್ತಾ ಬಂದಿದ್ದಾನೆಂಬುದು ತಾತ್ಪರ್ಯ.........

ಇಂತಹ ಸ್ವಾರಸ್ಯಕರ ಕಥೆಯಲ್ಲಿ ಕಥೆಯಾಗಿ ತಮಗೆ ಅತಿ ವಿಶಿಷ್ಟವಾದೊಂದು ಕಥೆಯನ್ನು ಹೇಳುತ್ತಿದ್ದೇನೆ............
ಒಂದಾನೊಂದು ಕಾಲದಲ್ಲಿ ಬಿಹಾರ ಎಂಬ ದೇಶದಲ್ಲಿ ಆಲೂ ಪ್ರಸಾದ ಎಂಬತಕ್ಕಂತವನು ವಾಸವಿದ್ದನಂತೆ, ಅವನ ತಂದೆಗೆ ಹದಿಮೂರು ಮಕ್ಕಳು....

ಆಲೂ ಬೋಂಡಾ...ಗೆಣಸಿನ ಬೋಂಡಾ ...
ಥರ ಥರ ಬಜ್ಜೀ ........ಈರುಳ್ಳಿ ಪಕೋಡಾ .....
ಕಾಶೀ ಹಲ್ವಾ ....ಮಸಾಲ ಚೂಡಾ .......
ಬಿಸಿ ಬಿಸಿ ... ಚಾಯಿಗೆ ......ಹಲವರ ....ಬಾಯಿ .....
ಬಿಸಿ ಬಿಸಿ ... ಚಾಯಿಗೆ ......ಹಲವರ............... ಬಾ...ಯಿ

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ.............
ಹರಹರಾ ಹರಹರಾ ಮಹಾದೇವ .........

ಈ ಹದಿಮೂರು ಮಕ್ಕಳನ್ನೂ ಸಂಸಾರವನ್ನೂ ನಿಭಾಯಿಸಬೇಕಲ್ಲ? ಅದಕ್ಕಾಗಿ ಅಲೂವಿನ ತಂದೆ ಅಲೂ ಬೋಂಡ, ಗೆಣಸಿನ ಬೋಂಡಾ,ಮಿರ್ಚಿ ಬಜ್ಜೀ,ಈರುಳ್ಳಿ ಪಕೋಡ,ಕಾಶೀ ಹಲ್ವಾ,ಮಸಾಲ ಚೂಡ ಇತ್ಯಾದಿಯಾಗಿ ಜನರಿಗೆ ತಿಂಡಿ [ಮೇವನ್ನು!]ಯನ್ನು ಮಾರಾಟಮಾಡುವ ಚಿಕ್ಕ ಅಂಗಡಿ ನಡೆಸುತ್ತಿದ್ದ. ಪಾಪ ಬಡತನ! ಏನು ಮಾಡುವುದು? ಆದರೂ ತಾನು ಮಾಡುವ ಕೆಲಸದಲ್ಲಿ ಅತೀ ಶ್ರದ್ಧೆಯನ್ನು ಹೊಂದಿದ್ದ ಈತ ತನ್ನ ಮಕ್ಕಳಿಗೆ ಪ್ರೀತಿಯಿಂದ ಆತ ಮಾಡುವ ತಿಂಡಿಗಳ ಹೆಸರನ್ನೇ ಉಪನಾಮವಾಗಿ ಬಳಸುತ್ತಿದ್ದ. ಹೀಗೇ ನಮ್ಮ ಇಂದಿನ ಕಥಾನಾಯಕನಾದ ಸ್ರೀಮಾನ್ ಮುಕುಲ್ ಪ್ರಸಾದ 'ಆಲೂ ಪ್ರಸಾದ' ಎಂಬ ಹೆಸರಿನಿಂದ ಪ್ರಸಿಧ್ಧನಾಗಿದ್ದ !

ಇಂತಿಪ್ಪ ಆಲೂಪ್ರಸಾದ ಬಡತನದಲ್ಲೇ ಬೆಳೆದರೂ ವಿದ್ಯೆಯಲ್ಲಿ ಬಹಳ ಮುಂದಿದ್ದ, ಚೆನ್ನಾಗಿ ಓದುತ್ತಿದ್ದ. ಬರಬರುತ್ತಾ ಅಲೂ ಬೋಂಡದ ಥರ ಬೆಳೆಯತೊಡಗಿದ ! ಬೆಳೆದೂ ಬೆಳೆದೂ ಬೆಳೆದೂ ಕಾಲೇಜಿನ ಹಂತಕ್ಕೆ ಬಂದ!

ಸರ ಸರ ಬೆಳೆಯುತ ದೊಡ್ಡವನಾದ ನಮ್ಮ ಆಲೂ ಪ್ರಸಾದ ...
ಪರಿತಪಿಸುತ ತಮ್ಮಪ್ಪ-ಅಮ್ಮನ ಬಜ್ಜಿ ಅಂಗಡಿಯ ವಿ ...ವಾದ ...
ಗರಗರ ತಿರುಗುವ ತಮ್ಮ-ತಂಗಿಯರ ಕಂಡರೇ ಅದುವೇ ವಿಷಾದ..
ಪರಿಹರಿಸಲು ಓದಿಗೆ ಮುಂದೋಡಿದ ಮರೆಯುತ ಎಲ್ಲಾ ಖೇದ .... ...ಮರೆಯುತ........ಎಲ್ಲಾ........ಖೇದ

ಲಕ್ಷ್ಮೀರಮಣ ಗೋವಿಂದಾ ...ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........

ಹೀಗೇ ಬೆಳೆದು ದೊಡ್ಡವನಾಗಿ ಕಾಲೇಜಿಗೆ ಹೋಗುತ್ತಾ ಹೋಗುತ್ತಾ ನಮ್ಮ ಆಲೂಗೆ ಬಹಳ ಗೆಳೆತನ ಹೆಚ್ಚಿತು, ಅನೇಕ ಸ್ನೇಹಿತರು ಒಗ್ಗೂಡಿದರು, ಆಗಾಗ ಮನದಣಿಯೇ ರೋಡಲಿ ಕ್ರಿಕೆಟ್ ಆಡುವರು ! ಬ್ಯಾಡ್ ಮಿಂಟನ್ ಆಡುವರು ! ಇನ್ನೂ ಅನೇಕ ಏನೇನೋ ಆಟಗಳನ್ನು ಸಾಂಗೋಪಾಂಗವಾಗಿ ಆಡುತ್ತಿದ್ದರು. ಹೀಗೇ ಕಾಲ ಕಳೆಯುತ್ತಾ ಕಳೆಯುತ್ತಾ ಏನಾಶ್ಚರ್ಯ ! ಒಂದು ದಿನ ಆಲೂ ಕಾಲೇಜಿನಲ್ಲಿ ಕಂಪ್ಯೂಟರ್ ಎಂಬತಕ್ಕಂತಹ ಅದೇನೋ ಗಣಕಯಂತ್ರ ಅಂತಾರಲ್ಲ ಅದನ್ನು ಬಳಸಲು ಕಲಿತ ! ಅದು ಹೇಗಾಯ್ತಪ್ಪಾ ಅಂತಂದರೆ ಅಲ್ಲೊಬ್ಬ ಸತ್ನಾಂ ಸಿಂಗ್ ಅಂತ ಮೇಷ್ಟ್ರು ಇರೋರು, ಅವ್ರೀಗೆ ಸಿಸ್ಯಂದ್ರು ಅಂದ್ರೆ ಭಾಳ ಖುಷಿ ! ತಮ್ಮ ಸಿಸ್ಯಂದ್ರಿಗೆ ಎಲ್ಲಾಥರದ ಸೌಲತ್ತು ಕೊಡೋರು. ಅದ್ರಲ್ಲಂತೂ ನಮ್ಮ ಕಥಾನಾಯಕನಾದ ಆಲೂ ಅಂದ್ರೆ ಪ್ರೀತಿ ಒಂದ್ ಕೈ ಜಾಸ್ತೀನೇ ಅನ್ನಿ. ಹೀಗಾಗಿ ಏನೋ ಬಡ ಹುಡುಗಾ ಅಂತಂದು ಕಂಪ್ಯೂಟರ್ ಕಲಿಸಿದರಂತೆ.

ಇರುವದೆಮ್ಮಲೊಂದು ಗಣಯಂತ್ರ ......
ಅಯ್ಯಾ ..........ಇರುವದೆಮ್ಮಲೊಂದು ಗಣಯಂತ್ರ ......
ಅದ ಬಳಸಲರಿಯದೇ ದುಃಖಿಪರು ........ಜನರು ....
ಇರುವದೆಮ್ಮಲೊಂದು............. ಗಣಯಂತ್ರ ......
ಇರುವದೆಮ್ಮಲೊಂದು............. ಗಣಯಂತ್ರ ......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಸ್ಪಾರವತೀಪ ತೇ ................ಹರಹರಾ ಹರಹರಾ ಮಹಾದೇವ .........

ಅಂತೂ ಇಂತೂ ಕಂಪ್ಯೂಟರ್ ಕಲಿತ ನಮ್ಮ ಆಲೂ ಯೇನ್ಮಾಡಿದಾನೆ ಗೊತ್ತೇ ಅದೇನೋ ಈ ಮೇಲು, ಎಲೆಕ್ಟ್ರಾನಿಕ್ ಅಂಚೆ ಅಂತಾರಲ್ಲ ಅದು ಅದನ್ನ ಮಾಡಕ್ಕೂ ಕಲ್ತು ಬುಟ್ಟಿದ್ದಾನೆ. ಕಲ್ತು ಕಲ್ತು ಅನೇಕರಿಗೆ ಈ ಮೇಲ್ ಕಳ್ಸಿದಾನೆ. ಇದ್ರಿಂದ ಅವನಿಗೆ ಗೆಳೆಯರ ಬಳಗ ಇನ್ನೂ ಜಾಸ್ತಿ ಆಗಿದೆ. ಜಾಸ್ತಿ ಆಗುತ್ತಾ ಆಗುತ್ತಾ ಕಾಲಕ್ರಮದಲ್ಲಿ ಇಡೀ ಬ್ರಹ್ಮಾಂಡವನ್ನೇ ವ್ಯಾಪಿಸುವಷ್ಟು ಗೆಳೆಯರ ಬಳಗವನ್ನು ಪಡೆದುಕೊಂಡ! ತದನಂತರ ಅವನಿಗೆ ನಮ್ಮ ಕಲ್ಯಾಣ ನಗರಿ ಬೆಂಗಳೂರಿನ ಮಾದೇಶನ ಪರಿಚಯವಾಯ್ತು , ಪರಿಚಯ ಸ್ನೇಹಕ್ಕೆ ತಿರುಗಿತು. ಇನ್ನೇನು ಹೋಗಿ-ಬಂದೂ ಮಾಡುವಷ್ಟು ಸ್ನೇಹ ಬೆಳೆಯಿತು. ಇಬ್ಬರೂ ಬಹಳ ಆಪ್ತರಾದರು.

ಅಯ್ಯಾ ಕರುಣದಿ ಕಾಯೋ ಮಾದೇಶ್ವರಾ ಎನ್ನ
ಗೆಳೆಯನೆ ನೀನು ಮಾದೇಶ್ವರಾ ....ಹೇ ಶಂಕರ ಅಭಯಂಕರ
ನಿನ್ನ ' ಗಳಿಕೆ ' ಆಪಾರ ನೀನು ' ಈ ಮೇಲು' ದೂರ
ಕರುಣದಿ ಕಾಯೋ ಮಾದೇಶ್ವರಾ..............


ಅಂತೂ e ಸ್ನೇಹ ಈ ಸ್ನೇಹಕ್ಕೆ ತಿರುಗಿ ಗೆಳೆಯ ಮಾದೇಸನ ಬಹಳ ಒತ್ತಾಯದ ಮೇರೆಗೆ ಆಲೂ ಪ್ರಸಾದ ಬೆಂಗಳೂರಿಗೆ ಬರಬೇಕೆಂದು ತೀರ್ಮಾನಿಸಿದ, ಬಂದು ವಾರದ ಕಾಲ ಇದ್ದು ವಾಪಸ್ಸು ಹೋಗಬೇಕೆಂದು ಅಂದುಕೊಂಡ. ಹೇಗೆ ಬರಬೇಕು, ಯಾವ ರೀತಿ ಬರಬೇಕು ಎಂದೆಲ್ಲ ಕೇಳಿ ತಿಳಿದುಕೊಂಡ. ಅಷ್ಟಕ್ಕೂ ಗೆಳೆಯ ಹೇಳಿದ 'ನೀನ್ಯಾಕೆ ಇಲ್ಲೇ ಕೆಲಸಮಾಡಬಾರದು ? ಎಂದು ಕೇಳಿದ. ಅದಕ್ಕೆ ಆಲೂ ಉತ್ತರಿಸಿದ್ದು ಒಳ್ಳೆಯ ಕಂಪನಿಯಲ್ಲಿ ಜಾಬು ಸಿಕ್ಕಿದ್ರೆ ತೊಂದ್ರೆ ಇಲ್ಲಾ ಅಂತ.

' ಇನ್ಫೋಸಿಸ್ ' ಎಂಬತಕ್ಕಂತಹ ಅಸಾಮಾನ್ಯ ತಂತ್ರಾಂಶದ ಮಾನಸ ಸರೋವರ ಇದೆಯೆಂತಲೂ, ದೈವಾಂಶ ಸಂಭೂತರಾದ ಕೆಲವರು ಸೇರಿ ಅದನ್ನು ತಮ್ಮ ದಶಕಗಳ ಕಾಲದ ತಪಶ್ಯಕ್ತಿಯನ್ನೆಲ್ಲ ಧಾರೆಯೆರೆದು ಪ್ರತಿಷ್ಥಾಪಿಸಿದರೆಂತಲೂ ಮತ್ತು ಯಾರೇ ಬಂದರೂ ಮೊದಲು ಅದು ಕೈಬೀಸಿಕರೆಯುತ್ತದೆಂತಲೂ ಗೆಳೆಯ ಮಾದೇಶ ಹೇಳಿದ! ಅದರ ಬಿರಡಿಂಗನ್ನು ರಾತ್ರೋರಾತ್ರಿ ದೇವತೆಗಳಂತವರು ಕಟ್ಟಿ ಬೆಳಗಾಗುವುದರೊಳಗೆ ಮುಗಿಸಿದ ರೀತಿ ಮುಗಿಸಿದ್ದರೆಂತಲೂ ಹೇಳಿಬಿಟ್ಟ! ಇಷ್ಟೆಲ್ಲಾ ಕೇಳಿದ ಮೇಲೆ ನಮ್ಮ ಆಲೂವಿಗೆ ಬಾಯಲ್ಲಿ ಬಂತು ಜೊಲ್ಲೂ.., ಆ ಕ್ಷಣವೇ ಬೆಂಗಳೂರಲ್ಲಿ ಇರುವುದಕ್ಕೆ ನಿರ್ಧರಿಸಿದ್ದಾಗಿ ತಂದೆ-ತಾಯಿಗೆ ಹೇಳಿಬಿಟ್ಟ ! ಕೆಲವೇ ದಿನಗಳಲ್ಲಿ ಹೊರಟೂ ಬಿಟ್ಟ, ಎಲ್ಲ ಗೆಳೆಯ ಮಾದೇಶನ ಸಹಕಾರದಿಂದಾ....

ಚಂಗನೆ ಜಿಗಿದಂಬರದಲಿ ಹಾರಿದ ಡೆಕ್ಕನ್ ವಿಮಾನದಲಾಗ
ಭಂಗವ ಕಳೆಯಲು ಇನ್ಫೋಸಿಸ್ಸು ಒಂದೇ..... ದಾರಿ..... ಯದೀಗ !
ಸಂಗದಿ ಗೆಳೆಯರು ಸಲುಗೆಯಲಿದ್ದರು ಕಳೆಯಿತು ದಿನವದು ಬಹಳ
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ಕಳೆದರು ದಿನ ಸರಳ......
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ....... ಕಳೆದರು..... ದಿನ...... ಸ.. ರ.. ಳ......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........


ಹೀಗೇ ಕಾಲಕಳೆಯುತ್ತಿರಲಾಗಿ ಕನಡಾ ಬಾರದ ನಮ್ಮ ಆಲೂ, ರೂಮಿಗೆ ಸಾಮಾನು ತರಲೆಂದು ಗೆಳೆಯ ಮಾದೇಸನಿಲ್ಲದಾಗ ಸೆಟ್ಟಿ ಅಂಗಡಿಗೆ ಹೋಗುತ್ತಾನೆ.

ಸೆಟ್ಟಿ ಕೇಳಿದ " ಏನ್ ಕೊಡ್ಲೀ ಸಾರ್ ?"

" ಮೇಣ , ಸೂಜಿ ಮತ್ತು ರಿಗೆ ಕೊಡಿ " ಹೇಗೋ ಕನಡಾದಲ್ಲಿ ಗೆಳೆಯ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದ ನಮ್ಮ ಆಲೂ, ಸೆಟ್ಟಿಗೆ ಹಿಂದಿ ಬರುವುದಿಲ್ಲ, ಆಲೂಗೆ ಕನಡಾ ಬರುವುದಿಲ್ಲ!

" ಮೇಣ, ಸೂಜಿ ಕೊಡ್ತೀನಿ, ರಿಗೆ ನಮ್ಮಂಗ್ಡೀಲಿಲ್ಲ ಬೇರೆಲ್ಲಾದ್ರೂ ವಿಚಾರ್ಸಿ " ಸೆಟ್ಟಿಗೆ ' ರಿಗೆ ' ಎಂದರೆ ಏನು ಎಂಬುದು ತಲೇಲಿ ಒಂಥರಾ ಹುಳಬಿಟ್ಟ ಹಾಗಾಯ್ತು !

ಮೆಣಸು ಜೀರಿಗೆ ..... ಮೆಣಸು ಜೀರಿಗೆ......ಮೆಣಸು ಜೀರಿಗೆ .......ಮೆಣಸು
ಮೆಣಸು ಜೀರಿಗೆ .......ಮೇಣ ಸೂ ಜೀ ರಿಗೆ...... ಮೆಣಸೂ ಜೀ ರಿಗೆ...... ಮೆಣಸು
ಮೇಣ ...ಸೂಜಿ.... ರಿಗೆ....... ಮೇಣ... ಸೂಜಿ.... ರಿಗೆ........ ಮೇಣ... ಸೂಜಿ... ರಿಗೆ....ಮೇಣ ...
ಮೇಣ... ಸೂಜಿ ....ರಿಗೆ.....ಮೇಣ.... ಸೂಜಿ ...ರಿಗೆ ..ಮೇಣ.... ಸೂಜಿ ರಿಗೆ....ಮೇ ..
........

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ................
ಹರಹರಾ ಹರಹರಾ ಮಹಾದೇವ .........

'ರಿಗೆ' ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಅನೇಕ ಅಂಗಡಿಗಳ ಭೂ ಪ್ರದಕ್ಷಿಣೆ ಮಾಡಿ ಕೊನೆಗೂ ಸಿಗದೇ ನೇ...ಟ್ಟಗೆ ರೂಮಿಗೆ ಬಂದು ಮಲಗಿಬಿಟ್ಟ ನಮ್ಮ ಆಲೂ. ಕೆಲವು ಗಂಟೆ ಕಳೀತು. ಕೆಲಸಕ್ಕೆ ಹೋಗಿದ್ದ ಮಾದೇಸ ರೂಮಿಗೆ ಬಂದ, ಇನ್ನೇನು ಅಡಿಗೆ ಮಾಡಲು ಹುಡುಗ್ರು ಸುರುಹಚ್ಚಿಕೊಳ್ಳಬೇಕು, ಅಷ್ಟರಲ್ಲಿ ಮಾದೇಸ ಕೇಳಿದ " ಆಗ್ಲೇ ಫೋನ್ ನಲ್ಲಿ ಮೆಣಸು-ಜೀರಗೆ ತಂದಿಡು ಅನ್ನಲ್ಲಪ್ಪಾ ಎಲ್ಲಿಟ್ಟಿದ್ದೀಯ ? " ಆಲೂ ತಾನು ತಂದಿದ್ದನ್ನು ಮಾದೇಶನ ಕೈಗೆ ಕೊಡುತ್ತಾನೆ! ಏನಾಶ್ಚರ್ಯ ಪೊಟ್ಟಣ ಬಿಡಿಸಿ ನೋಡಿದಾಗ ಅದರೊಳಗೆ ಇದ್ದುದು ಒಂದು ಉದ್ದ ಸೂಜಿ ಮತ್ತು ಸ್ವಲ್ಪ ಮೇಣ ! ಆಲೂ ಹೇಳುತ್ತಲೇ ಇದ್ದ

" ಓ ಆಪ್ ಬೋಲಾತಾನ 'ರಿಗೆ' ಓ ಕಿದರ್ ಭೀ ನಹೀ ಮಿಲರಹಾಹೈ "


ಅಲ್ಲಯ್ಯಾ ನಾನು ತರ ಹೇಳಿದ್ದು ಮೆಣಸು-ಜೀರಿಗೆ, ನೀನು ತಂದಿದ್ದು ಏನು ಎಂದು ಹಿಂದಿಯಲ್ಲಿ ಎಕ್ಷಪ್ಲೇನ್ ಮಾಡುತ್ತಾನೆ.ಅಂತೂ ಕೊನೆಗೆ ಕನಡಾ ಬಾರದ ಮಿತ್ರನ ಹುಚ್ಚಾಟ ನೋಡಿ ಮಾದೇಸನಿಗೆ ನಗು ತಡೆಯಲಾಗಲಿಲ್ಲ ! ಗಡಗಡ ಗಡಗಡ ಮೈ ಅಲುಗಾಡಿಸಿ ಬೃಹದಾಕಾರವಾಗಿ ನಕ್ಕಿದ್ದಾನೆ ಮಾದೇಸ. ಕ್ಷಣಾರ್ಧದಲ್ಲಿ ತನ್ನ ತಪ್ಪಿನ ಅರಿವಾಗಿ ಎತ್ತರದಲ್ಲಿ ಬಹು ಎತ್ತರದಲ್ಲಿ ಹಾರಾಡುತ್ತಿರುವ ಆಲೂ ನೆಲಕ್ಕೆ ಕುಸಿದಿದ್ದಾನೆ ! ದೀನನಾಗಿ ಬಹು ದೀನನಾಗಿ ಪರಿ ಪರಿಯಾಗಿ ತನ್ನನ್ನು ಪೀಡಿಸದಿರುವಂತೆ ಗೆಳೆಯನಲ್ಲಿ ಪ್ರಾರ್ಥಿಸಿದ್ದಾನೆ ! ಆದರೂ ಮೆಣಸು-ಜೀರಿಗೆಯನ್ನು ತನ್ನ ಗಾರುಡೀ ವಿದ್ಯೆಯಿಂದ ಮೇಣ-ಸೂಜಿ-ರಿಗೆ ಮಾಡಿದ ಆಲೂ ಎಂಬ ಮಹಾಮಹಿಮನನ್ನು ಮಾದೇಸ ಬಹಳವೇ ಗೋಳುಹುಯ್ದುಕೊಳ್ಳುತ್ತಾನೆ. ಹೀಗೇ ಕಾಲಾನಂತರದಲ್ಲಿ ಅನಿವಾರ್ಯವಾಗಿ ಆಲೂಪ್ರಸಾದ ನಮ್ಮ ಕನಡಾವನ್ನು ಕಲಿತ, ಮುಂದೆ ಈ ಸ್ನೇಹಿತರು ಬಹುಕಾಲ ಸುಖದಿಂದಿದ್ದರು ಎಂಬಲ್ಲಿಗೆ 'ಲಾಲೂ ಗಾರುಡಿ' ಎಂಬ ಈ ಪುಣ್ಯ ಕಥಾಕಾಲಕ್ಷೇಪಕ್ಕೆ ಮಂಗಳಹಾಡೋಣ, ಭಗವಂತ ಈ ಕಥೆಯನ್ನು ಬಹಳ ಸ್ರದ್ಧಾ-ಭಕ್ತಿಯಿಂದ ಇಲ್ಲಿಯತನಕ ಕೇಳಿದ್ದಕ್ಕೆ ತಮಗೆಲ್ಲರಿಗೂ ಆಯುರಾರೋಗ್ಯ ಐಸ್ವರ್ಯವಿತ್ತು ಸುಖ-ಶಾಂತಿ ನೆಮ್ಮದಿಯಿಂದ ಬಾಳುವಂತಾಗಲೆಂದು ಸ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸುತ್ತಾ ಎಲ್ಲರಿಗೂ ಮಂಗಳವನ್ನು ಪಾಡೋಣ............

ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ.....
ಜಯ ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ .......

ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ
ಪಾದಾರವಿಂದಕ್ಕೆ ಗೋವಿಂದಾ ಗೋವಿಂದ....ಹರನಮಸ್ಪಾರ್ವತೀಪತೇ...............
ಹರಹರಾ ಹರಹರಾ ಮಹಾದೇವ .........