ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 6, 2010

ಜೀವನ

ಜೀವನ

ನಗುತಿತ್ತು ಹೂವು ಮನೆಯಂಗಳದಿ ಮಂಜಿನಲಿ
ಜಗವೇ ಸುಂದರವೆಂಬ ರೀತಿ
ತೊಗಲ ಮೇಲಿನ ಹನಿಯು ಜಾರುತ್ತ ನಡೆದಂತೆ
ಅಗಲಿ ನಿಂತಿತು ದಿನವು ಪೂರ್ತಿ

ಬಗೆಬಗೆಯ ದುಂಬಿಗಳು ಹಾರುತ್ತ ಬಂದಿರಲು
ಮೊಗವರಳಿ ಮಕರಂದ ನೀಡಿ
ಮಗುಮುಖದ ಮುಗ್ಧತೆಯು ಮಾಯುತಿರೆ ಕ್ಷಣಕ್ಷಣವೂ
ಅಗಲುವಿಕೆ ತಿಳಿದಿಲ್ಲ ನೋಡಿ !

ನೊಗವಿಡಿದ ಎತ್ತಂತೆ ಸೋಲುತ್ತ ಬಸವಳಿದು
ಹಗುರಾಗಿ ಮುದುಡಿ ಮುಂದೊಗಲು
ಅಗರು ಕಸ್ತೂರಿಗಳ ಪರಿಮಳವು ಕಳೆಕಳೆದು
ಬಿಗುಮಾನ ನೀಗಿ ಬಣ್ಣದೊಲು !

ಮುಗಿದಿತ್ತು ದಿನವು ಮತ್ತಾವರಿಸಿ ಕತ್ತಲೆಯು
ಲಗುಬಗೆಯಲಲ್ಲಿ ಬೆಳಗಾಗೀ
ಚಿಗುರದದು ಮತ್ತೆಂದೂ ಬಾಳಸಂಜೆಯದಂದು
ಒಗೆದಿತ್ತು ಗಿಡವು ತಲೆದೂಗೀ !