ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 6, 2010

ಜೀವನ

ಜೀವನ

ನಗುತಿತ್ತು ಹೂವು ಮನೆಯಂಗಳದಿ ಮಂಜಿನಲಿ
ಜಗವೇ ಸುಂದರವೆಂಬ ರೀತಿ
ತೊಗಲ ಮೇಲಿನ ಹನಿಯು ಜಾರುತ್ತ ನಡೆದಂತೆ
ಅಗಲಿ ನಿಂತಿತು ದಿನವು ಪೂರ್ತಿ

ಬಗೆಬಗೆಯ ದುಂಬಿಗಳು ಹಾರುತ್ತ ಬಂದಿರಲು
ಮೊಗವರಳಿ ಮಕರಂದ ನೀಡಿ
ಮಗುಮುಖದ ಮುಗ್ಧತೆಯು ಮಾಯುತಿರೆ ಕ್ಷಣಕ್ಷಣವೂ
ಅಗಲುವಿಕೆ ತಿಳಿದಿಲ್ಲ ನೋಡಿ !

ನೊಗವಿಡಿದ ಎತ್ತಂತೆ ಸೋಲುತ್ತ ಬಸವಳಿದು
ಹಗುರಾಗಿ ಮುದುಡಿ ಮುಂದೊಗಲು
ಅಗರು ಕಸ್ತೂರಿಗಳ ಪರಿಮಳವು ಕಳೆಕಳೆದು
ಬಿಗುಮಾನ ನೀಗಿ ಬಣ್ಣದೊಲು !

ಮುಗಿದಿತ್ತು ದಿನವು ಮತ್ತಾವರಿಸಿ ಕತ್ತಲೆಯು
ಲಗುಬಗೆಯಲಲ್ಲಿ ಬೆಳಗಾಗೀ
ಚಿಗುರದದು ಮತ್ತೆಂದೂ ಬಾಳಸಂಜೆಯದಂದು
ಒಗೆದಿತ್ತು ಗಿಡವು ತಲೆದೂಗೀ !

10 comments:

  1. ಧನ್ಯವಾದ ಹೆಬ್ಬಾರ್ ಸರ್!

    ReplyDelete
  2. ಭಟ್ಟರೆ ಕವನ ಚೆನ್ನಾಗಿದೆ...

    ReplyDelete
  3. ಧನ್ಯವಾದ ಪ್ರಕಾಶರೇ, ನನಗೆ ಹೂವನ್ನೇ ನೋಡುತ್ತಾ ಜೀವನದ ನೆನೆಪು ಬಂತು! ಎಷ್ಟು ಸಹಜ ಅಲ್ಲವೇ?

    ReplyDelete
  4. ಮ೦ಜಿನ ಹನಿ ಹೊತ್ತ ಸು೦ದರ ಗುಲಾಬಿ ಹೂವಿನ೦ತೆ ನಿಮ್ಮ ಕವನವೂ ಉತ್ತಮವಾಗಿದೆ.

    ReplyDelete
  5. ಬದುಕಿನ ಕ್ಷಣಭಂಗುರತೆಯನ್ನು ಹೂವಿನ ರೂಪಕದಲ್ಲಿ ಚೆನ್ನಾಗಿ ತೋರಿಸಿದ್ದೀರಿ.

    ReplyDelete
  6. ಹೂವಿನ ಅಂದಕ್ಕೆ ಅದರ ಮೋಹಕತೆಗೆ, ಸೋಲದ ಜನರು ಉಂಟೆ ?
    ನಿಮ್ಮ ಕವನ ಬಲು ಸೊಗಸು

    ReplyDelete
  7. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಅಭಿವಂದನೆಗಳು, ಅಭಿನಂದನೆಗಳು

    ReplyDelete