ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 19, 2013

ಪಾರ್ವತಿ ವಿಗ್ರಹ ಪಾತಾಳಕ್ಕೆ ಇಳಿದು ಹೋದ ಕಥೆಯು!

 ಚಿತ್ರ ಋಣ : ಅಂತರ್ಜಾಲ
ಪಾರ್ವತಿ ವಿಗ್ರಹ ಪಾತಾಳಕ್ಕೆ ಇಳಿದು ಹೋದ ಕಥೆಯು!

ಪಂಚತಂತ್ರದ ಕಥೆಗಳಂತೇ ಇಂದೂ ಕೂಡ ಆಗಾಗ ಹೊಸ ಹೊಸ ಕಥೆಗಳನ್ನು ನಾವು ಬರೆಯುತ್ತಲೇ ಇರಬಹುದು! ಹೊಸ ಕಥೆಗಳನ್ನು ಹುಟ್ಟಿಸುವಲ್ಲಿ ನನ್ನಂಥವರ ಸಹಾಯಕ್ಕೆ ವಸ್ತುವಾಗುವವರು ಕಾಗೆ ಹಾರಿಸುವ ಟಿವಿ ಜ್ಯೋತಿಷಿಗಳು. ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ಸಂಬಂಧವನ್ನು ಕಲ್ಪಿಸಿ ಹಲವರ ಬದುಕನ್ನು ಹಡಾಲೆಬ್ಬಿಸುವ ಜನರೇ ಟಿವಿ ಜ್ಯೋತಿಷಿಗಳು. Vedanga Jyotishya is much of an astronomical subject rather than an astrological.ವೇದಾಂಗ ಜ್ಯೋತಿಷ್ಯವೆಂಬುದು ಖಗೋಳ ಶಾಸ್ತ್ರ. ಅದರಲ್ಲಿ ಗ್ರಹ-ತಾರೆಗಳನ್ನು ಗುರುತಿಸುವ, ಅವುಗಳ ನಡೆಯನ್ನು ಗುಣಿಸುವ ಲೆಕ್ಕಾಚಾರಗಳೇ ತುಂಬಿವೆ. ಆಕಾಶಕಾಯಗಳ ಮತ್ತವುಗಳ ಚಲನವಲನಗಳ ಬಗೆಗಿನ ಅಂದಿನ ಆಳವಾದ ಅಧ್ಯಯನವದು. ಫಲ ಜ್ಯೋತಿಷ್ಯವೆಂಬುದು ನಂತರ ಹುಟ್ಟಿಕೊಂಡ ತುಲನಾತ್ಮಕ ಕಥೆ! ಫಲಜ್ಯೋತಿಷ್ಯವನ್ನು ನನ್ನಂಥವರು ಎಳ್ಳಷ್ಟೂ ನಂಬುವುದಿಲ್ಲ. ಫಲ ಜ್ಯೋತಿಷಿಗಳ ಹೇಳಿಕೆ ಕೆಲಮಟ್ಟಿಗೆ ಪರಿಣಾಮಕಾರಿಯಾಗುವುದು ಅವರ ವೈಯ್ಯಕ್ತಿಕ ಧ್ಯಾನ-ಅನುಷ್ಠಾನ ಇವುಗಳ ಮೇಲೆ ಎನ್ನಬಹುದು.

ಫಲ ಜ್ಯೋತಿಷ್ಯವನ್ನು ಅತಿಯಾಗಿ ನಂಬಿದರೆ ಜೀವನ ಹಾಳಾಗಿ ಹೋಗುತ್ತದೆ ಎಂಬುದಕ್ಕೆ ನೂರಾರು ಉದಾಹರಣೆ ಕೊಡಬಹುದು. ಭವಿಷ್ಯವನ್ನು ಮೊದಲೇ ಅರಿಯುವ ಕೆಟ್ಟ ಹವ್ಯಾಸ ಮಾನವನನ್ನು ಈ ಕೆಲಸಕ್ಕೆ ಹಚ್ಚಿಕೂತಿದೆ. ಕೇದಾರನಾಥದಲ್ಲಿ ಜಲಪ್ರಳಯ ನಡೆಯುತ್ತದೆ ಎಂದು ತಾನು ಮೊದಲೇ ಹೇಳಿದ್ದಾಗಿ ಜ್ಯೋತಿಷಿಯೊಬ್ಬ ಕೊಚ್ಚಿಕೊಳ್ಳುತ್ತಿದ್ದಾನೆ. ಆತ ಕಾಗೆ ಹಾರಿಸಿದ್ದು ಎಲ್ಲರಿಗೂ ಗೊತ್ತಿದೆ. ಹಾಗೇನಾದರೂ ಆತನಿಗೆ ಕಣ್ಣಿಗೆ ಕಟ್ಟುವಹಾಗೆ ಭವಿಷ್ಯ ಕಾಣಿಸಿದ್ದರೆ ಸರಕಾರವನ್ನು ಎಚ್ಚರಿಸಬಹುದಿತ್ತಲ್ಲಾ? ವರ್ಷ ಭವಿಷ್ಯವನ್ನು ಮೊದಲೇ ಹೇಳುವ ಕೆಲಜನ "ಈ ಸರ್ತಿ ಹಿರಿಯ ರಾಜಕಾರಣಿಯೊಬ್ಬರು ಸಾಯುತ್ತಾರೆ. ಮತ್ತು ದೇಶದಲ್ಲಿ ಅಲ್ಲಲ್ಲಿ ಅವಘಡಗಳು ಕಾಣಿಸುತ್ತವೆ" ಎಂದು ಕಾಗೆ ಹಾರಿಸುತ್ತಾರೆ! ಅದು ಹೊಸದೇನೂ ಅಲ್ಲ ನಡೆಯುತ್ತಲೇ ಇರುವ ವಿಷಯ!! ಅದನ್ನೇನು ಅವರೇ ಹೇಳಬೇಕೆ? ನಾನೂ ಹೇಳಬಲ್ಲೆ. ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದಷ್ಟೂ ಅವರಿಗೆ ಖಾಲೀ ಸಮಯವನ್ನು ನಿಭಾಯಿಸುವುದು ಕಷ್ಟವಾಯ್ತು; ಖಾಲೀ ಬಿದ್ದ  ಕೆಲವು ಸಮಯದ-ಸ್ಲಾಟ್ ಗಳಲ್ಲಿ ಕಾಗೆಹಾರಿಸುವ ಜ್ಯೋತಿಷಿಗಳು ಬಂದು ಕೂತುಬಿಟ್ಟರು! ಭವಿಷ್ಯ ಹೇಳಿದ್ದು ಸರಿಯಾಗದಿದ್ದರೆ "ಅದಕ್ಕೆ ಪಾರ್ವತಿ ಶಾಪವಿದೆ" ಎಂದು ಭೋಂಗು ಬಿಡುತ್ತಾರೆ! ಪಾರ್ವತಿ-ಪರಮೇಶ್ವರರು ರತಿಕ್ರೀಡೆಯಲ್ಲಿ ತೊಡಗಿದ್ದಾಗ, ಕೈಲಾಸಕ್ಕೆ ಭೇಟಿಯಿತ್ತ ಭೃಗು ಮಹರ್ಷಿ ಅದನ್ನು ಭವಿಷ್ಯದ ಕಣ್ಣಿನಿಂದ ಅರಿತನಂತೆ! ಈ ವಿಷಯ ಪಾರ್ವತಿಗೆ ಅರಿವಾಗಿ "ಜ್ಯೋತಿಷ್ಯ ಸುಳ್ಳಾಗಲಿ" ಎಂದುಬಿಟ್ಟಳಂತೆ ಮಾರಾಯ್ರೆ! ಇದು ಜ್ಯೋತಿಷಿಗಳು ಪಾರ್ವತೀದೇವಿಯಮೇಲೆ ಗೂಬೆ ಕೂರಿಸಿದ ಕಥೆ!! 

ಕಾಕತಾಳೀಯಗಳನ್ನೇ ಬಂಡವಾಳಗಳನ್ನಾಗಿ ಮಾಡಿಕೊಂಡು ಕೋಟಿಗಟ್ಟಲೆ ಹಣಮಾಡಿದ ವಿವಿಐಪಿ ಜ್ಯೋತಿಷಿಗಳೂ ಇದ್ದಾರೆ! "ಕಾಗೆ ತಲೆಯಮೇಲೆ ಕೂತರೆ ಮುಂದೆ ಗಂಡಾಂತರ ಕಾದಿದೆ." ಎಂದು ಯಾವುದೋ ಜ್ಯೋತಿಷಿ ಕಾಗೆ ಹಾರಿಸಿದ್ದನ್ನು ಕಂಡಿದ್ದ ವ್ಯಕ್ತಿಯೊಬ್ಬ ಆತನ ತಲೆಯಮೇಲೆ ಕಾಗೆ ಕುಳಿತು ಹೋಯ್ತು ಎಂಬ ಕಾರಣಕ್ಕಾಗಿ ಹೆದರಿ ಆತ್ಮಹತ್ಯೆಮಾಡಿಕೊಂಡಿದ್ದಾನೆ. ನಗರಗಳ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಮರಗಳ ಮೇಲೆ ಕಾಗೆಗಳು ಗೂಡು ಕಟ್ಟುತ್ತವೆ. ಮರಿಹಾಕಿದಾಗ ಮರಿಗಳಮೇಲಿನ ಮಮತೆ ಅವುಗಳಲ್ಲಿ ಅದೆಷ್ಟು ಇರುತ್ತದೆ ಎಂದರೆ ಸುತ್ತಲ ಅರ್ಧಫರ್ಲಾಂಗಿನಲ್ಲಿ ಬರುವ ಯಾವುದೇ ದೊಡ್ಡ ಜೀವಿಯನ್ನೂ ಕಾಗೆಗಳು ಅಟ್ಟಿಸಿ ಓಡಿಸುತ್ತವೆ. ಕರಾವಳಿಯ ಆಡುಭಾಷೆಯಲ್ಲಿ ಇದಕ್ಕೆ "ಕಾಗೆ ಸೊಣೆಯುವುದು" ಎಂದು ಹೆಸರು. ಬಹಳ ಹಿಂದೆ ಕಾಗೆಗಳು ನನಗೂ ಕೆಲವಾರು ಸರ್ತಿ ಸೊಣೆದಿದ್ದಿದೆ, ಆದರೆ ನನಗೇನೂ ಆಗಲೇ ಇಲ್ಲ. ಕಾಗೆ ಸೊಣೆದಿದ್ದಕ್ಕೆ ನಾನು ಯಾರಲ್ಲೂ ಏನೂ ಹೇಳಲಿಲ್ಲ, ಯಾವ ಶಾಂತಿಯನ್ನೂ-ಹೋಮವನ್ನೂ ಮಾಡಿಸಲೇ ಇಲ್ಲ. ಮುಖ್ಯವಾಗಿ ವಿಷಯವನ್ನು ಕಾಗೆ ಹಾರಿಸುವ ಕಳ್ಳಜ್ಯೋತಿಷಿಗಳ ಕಿವಿಗೆ ಹಾಕಲೇ ಇಲ್ಲ! ಟಿವಿ ಜ್ಯೋತಿಷಿಗಳ ಕೆಟ್ಟ ಹೇಳಿಕೆಗಳ ಫಲವಾಗಿ ಅನ್ಯಾಯವಾಗಿ ಮುಗ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡ.

ಅಷ್ಟಮಂಗಲವೆಂಬ ಮತ್ತೊಂದು ತಂತ್ರವೂ ಅಷ್ಟೇ. ನನಗೆ ಗೊತ್ತಿರುವ, ಈಗ ನವೀಕರಣಗೊಳ್ಳುತ್ತಿರುವ ದೇವಸ್ಥಾನವೊಂದರಲ್ಲೂ ಅಷ್ಟಮಂಗಲ ಕೇಳಿದ್ದರು. ಅಲ್ಲಿಗೆ ಬಂದವನೂ ಈಶ್ವರನ ಪಕ್ಕದಲ್ಲಿ ಅಮ್ಮನವರ ಗುಡಿ ಇತ್ತೆಂದು ಹೇಳಿದ್ದ. ದೇವಸ್ಥಾನದ ಪ್ರಾಕಾರದಲ್ಲೇ ಭೂಮಿಯಲ್ಲಿ ಆ ವಿಗ್ರಹ ಹುದುಗಿದೆ, ಅಗೆದು ತೆಗೆದು ಪ್ರತಿಷ್ಠಾಪನೆ ಮಾಡಬೇಕು ಎಂದು ಹೇಳಿ ಮರಳಿ ಹೋದ; ಜನ ಕೆಲಸ ಆರಂಭಿಸಿ ಅಗೆದೇ ಅಗೆದರು, ಅಗೆದೇ ಅಗೆದರು. ಎಷ್ಟು ಅಗೆದರೂ ಅಮ್ಮನವರ ವಿಗ್ರಹಮಾತ್ರ ಸಿಗಲೇ ಇಲ್ಲ! ಸುಸ್ತಾಗಿ ಅಷ್ಟಮಂಗಲದವನಿಗೆ ಫೋನು ಹಚ್ಚಿದರು. "ಅದು ನಿಮಗೆ ಲಭ್ಯವಿಲ್ಲ, ಈಗ ಪಾತಾಳಕ್ಕೆ ಹೋಗಿಬಿಟ್ಟಿದೆ. ಹೊಸದಾಗಿ ಒಂದು ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಿ" ಎಂದಿದ್ದಾನಂತೆ! ಅದೇ ದೇವಸ್ಥಾನದ ಸರೀ ಎದುರುಭಾಗದಲ್ಲಿ, ಒಂದು ಫರ್ಲಾಂಗಿನಷ್ಟು ದೂರದಲ್ಲಿ ಮಜಭೂತಾದ ಅಮ್ಮನವರ ದೇವಸ್ಥಾನವಿದೆ ಮತ್ತು ಅಲ್ಲಿನ ಆಡಳಿತವೂ ಮೊದಲು ಹೇಳಿದ ದೇವಸ್ಥಾನದ ಆಡಳಿತ ಸಮಿತಿಗೇ ಒಳಪಟ್ಟಿದೆ. ಹೀಗಿದ್ದೂ ಅಷ್ಟಮಂಗಲದವ ಇನ್ನೊಂದು ಅಮ್ಮನವರ ವಿಗ್ರಹದ ಪ್ರಸ್ತಾಪವನ್ನೇಕೆ ಮಾಡಿದ? ಮತ್ತು ಸಿಗದಾದಾಗ ಪಾತಾಳಕ್ಕೆ ಹೋಯ್ತೆಂದು ಯಾಕೆ ಹೇಳಿದ? ಉತ್ತರ ಹೇಳುವುದಕ್ಕೆ ಇನ್ನಷ್ಟು ಅಷ್ಟಮಂಗಲದವರನ್ನೇ ಕರೆತರಬೇಕಾಗಬಹುದು!

ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಇಂದು ಅಷ್ಟಮಂಗಲ ಹೇಳುವವರು ಬಹಳ ಹುಟ್ಟಿಕೊಂಡಿದ್ದಾರೆ! ದೊಡ್ಡ ದೊಡ್ಡ ವಾಹನಗಳನ್ನು ಖರೀದಿಸಿ ಮೆರೆಯಲು ತೊಡಗಿದ್ದಾರೆ!  ಮಂತ್ರಿಮಹೋದಯರಿಗಾದರೂ ಸಮಯವಿರಬಹುದು ಅಷ್ಟಮಂಗಲದವರಿಗೆ ಮಾತ್ರ ಸಮಯ ಸಿಗುವುದೇ ಕಷ್ಟ! ಏನೂ ಇಲ್ಲದ ಜಾಗದಲ್ಲಿ ಏನೇನನ್ನೋ ಸೃಷ್ಟಿಸಲು ಹೇಳುವ ಜಾಯಮಾನ ಅಷ್ಟಮಂಗಲದವರದ್ದು. ಹಾಗೆ ನೋಡಿದರೆ ಅಷ್ಟಮಂಗಲವೊಂದು ಶಕುನ ಶಾಸ್ತ್ರ. ಅಲ್ಲಿ ಕರೆಯಲು ಬರುವ ವ್ಯಕ್ತಿ, ಆತ ತೊಟ್ಟ ಬಟ್ಟೆ, ಆತನ ಮೈಮೇಲಿನ ಆಭರಣ, ಆತನ ಮುಖಚಹರೆ, ಆತ ಬಂದ ಸಮಯ, ಆತ ವಿನಂತಿಸಿದ ರೀತಿ, ಆಮೇಲೆ ಅಷ್ಟಮಂಗಲದವ ಕರೆಸಿಕೊಂಡ ಜಾಗಕ್ಕೆ ಬಂದಿಳಿದ ಸಮಯ, ಅಲ್ಲಿನ ಭೂಭೌತಿಕ ಲಕ್ಷಣ, ಜನರ ನಡಾವಳಿ, ಅಲ್ಲಿನ ಜನರಲ್ಲಿ ಇರುವ ಮೌಢ್ಯ, ದೇವಸ್ಥಾನಗಳಾದರೆ ಅಲ್ಲಿ ಹೇಗೆ ಮತ್ತು ಯಾರು ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಅಂಶ, ದೇವಸ್ಥಾನದ ಗರ್ಭಗುಡಿಯಲ್ಲಿ ಇರುವ ಪೂಜಾ ಪರಿಕರಗಳ ಮತ್ತು ಅವುಗಳ ಗುಣಮಟ್ಟದ ಲೆಕ್ಕಾಚಾರ ಹೀಗೇ ಇವುಗಳನ್ನೆಲ್ಲಾ ಮನಸ್ಸಿನಲ್ಲಿ ಗ್ರಹಿಸಿ, ಕೆಲವನ್ನು ಅಲ್ಲಿನವರ ಬಾಯಿಂದಲೇ ತಿಳಿದುಕೊಂಡು ಹಲವನ್ನು ಊಹಿಸಿ ಹೇಳುವುದು ಅಷ್ಟಮಂಗಲ!!

ಅಷ್ಟಮಂಗಲ ಫಲಕಾರಿಯಾಗಬೇಕಾದರೆ ಹೇಳುವ ವ್ಯಕ್ತಿ ದೈವತ್ವ ಹೊಂದಿರಬೇಕು-ಬಹಳ ಅನುಷ್ಠಾನನಿಷ್ಠನಾಗಿರಬೇಕು. ಆಚಾರವಿಚಾರಗಳಲ್ಲಿ ಆತ ಪರಿಶುದ್ಧ ಬ್ರಾಹ್ಮಣನಾಗಿರಬೇಕು. ಹಣಕ್ಕಾಗಿ ಅಷ್ಟಮಂಗಲವನ್ನು ಹೇಳುವ ಇರಾದೆ ಇಟ್ಟುಕೊಂಡವನಾಗಿರಬಾರದು; ಗೌರವವಾಗಿ ಕೊಟ್ಟದ್ದನ್ನು ಸ್ವೀಕರಿಸುವ ಮನೋಭಾವವುಳ್ಳವನಾಗಿರಬೇಕು. ಬಹಳ ಅಧ್ಯಯನ ಶೀಲನಾಗಿರಬೇಕು, ವೇದ-ಶಾಸ್ತ್ರಗಳಲ್ಲಿ ಪಾರಂಗತನಾಗಿರಬೇಕು. ಈಗೀಗ ಇದಾವುದೂ ಇರದ ಜನ ಅಷ್ಟಮಂಗಲ ಹೇಳಲು ಹೊರಟಿದ್ದಾರೆ. ಕಾಂಚಾಣದ ಹೊರತಾಗಿ ಅವರಿಗೆ ಯಾವ ಉಪಾಸನೆಯೂ ಇಲ್ಲ! ಯಾವ ಜಪ-ತಪದ ಫಲವೂ ಅವರ ಹೇಳಿಕೆಗಳಿಗೆ ದೊರೆಯುವುದಿಲ್ಲ; ಹೀಗಾಗಿಯೇ ಪಾರ್ವತಿ ವಿಗ್ರಹ ಪಾತಾಳಕ್ಕೆ ಹೋಗುತ್ತದೆ! ಅಷ್ಟಮಂಗಲ ಹೇಳಿದವ ಕಾರುಹತ್ತಿ ಹಾರಿಹೋಗುತ್ತಾನೆ! ಅಂದಹಾಗೆ, ಕುಲದ ಪೂರ್ವಜರು ಎಸಗಿದ್ದ ತಪ್ಪಿನಿಂದ ತಾಪ-ತ್ರಯಗಳಲ್ಲಿ ಒಂದಾದ  ಆಧ್ಯಾತ್ಮಿಕ ತೊಂದರೆಯಲ್ಲಿ ಸಿಲುಕಿದ್ದು, ಪರಿಹಾರವನ್ನು ಹುಡುಕಲು ಪುರ್ಸೊತ್ತಿರುವವರು ಅಷ್ಟಮಂಗಲ, ಹಕ್ಕಿ ಶಕುನ ಎಲ್ಲವನ್ನೂ ಕೇಳುತ್ತಾರೆ; ’ವಾಸ್ತುತಜ್ಞ’ರೆಂದು ಬೋರ್ಡು ಹಾಕಿಕೊಂಡು ಮಾಡಲಾಗದ ಬದಲಾವಣೆಗಳನ್ನೇ ಸೂಚಿಸುತ್ತಾ ಇರುವ ಜನರಂತೇ ಅಷ್ಟಮಂಗಲದವರೂ ಏನೇನೋ ಹೇಳುತ್ತಾರೆ.

ಎರಡುವಾರಗಳ ಹಿಂದೆ ಜ್ಯೋತಿಷಿಯೊಬ್ಬ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ಅಸುನೀಗಿದ ಸುದ್ದಿ ಮತ್ತು ಸದರೀ ಜ್ಯೋತಿಷಿ ನಿಮಿಷದಲ್ಲೇ ಆ ಜಾಗದಿಂದ ಪರಾರಿಯಾದ ಸುದ್ದಿ ಟಿವಿಯಲ್ಲಿ ಬಿತ್ತರಗೊಂಡಿತ್ತು; ಆ ಜ್ಯೊತಿಷಿಯ ತಲೆಯಮೇಲೆ ಕಾಗೆಯೋ ಗೂಗೆಯೋ [ಗೂಬೆ] ಒಮ್ಮೆ ಕೂತಿರಬೇಕಲ್ಲವೇ? ಜ್ಯೋತಿಷಿಗೆ ಅವರ ಅಂದಿನ ಗ್ರಹಗತಿಯ ಬಗ್ಗೆ ತಿಳಿದಿರಲಿಲ್ಲವೇ? ತಿಳಿದಿದ್ದರೂ ತಮ್ಮ ಚಾಲಕ ಬಲಿಯಾದರೆ ಆಗಲಿ ಎಂದು ಪ್ರಯಾಣ ಹೊರಟರೇ?-ಇಂಥಲ್ಲೇ ಢೋಂಗಿ ಜ್ಯೋತಿಷ್ಯ ಮಸಲತ್ತುಗಳು ಕಣ್ಣಿಗೆ ರಾಚುತ್ತವೆ. ಮುಪ್ಪಡರಿದ ಹೆಸರಾಂತ ಸಿನಿಮಾ ಕಲಾವಿದನೊಬ್ಬನ ಸಾಮಾನ್ಯ ನಾಯಕ ನಟ-ಮಗನಿಗೆ ಹೊಂದಬಹುದಾದ ಹೆಣ್ಣೊಬಳ ಅಗತ್ಯವಿತ್ತು; ಗೋತಾ ಹೊಡೆಯುತ್ತಿರುವ ಸಿನಿಮಾಗಳಿಂದ ವರ್ಚಸ್ಸು ಕಳೆದುಕೊಳ್ಳತೊಡಗಿದ್ದ ನಾಯಕ ನಟಿಯೊಬ್ಬಳಿಗೆ ಆರ್ಥಿಕ ಭದ್ರತೆಯಿರುವ ಹುಡುಗನೊಬ್ಬನ ಅಗತ್ಯತೆಯೂ ಇತ್ತು. ಇದನ್ನು ಕಂಡ ’ವಿವಿಐಪಿ ರಾಜಜ್ಯೋತಿಷಿ’ಯೊಬ್ಬ ಗುತ್ತಿಗೆ ಹಿಡಿದು ಮದುವೆ ಮಾಡಿಸಿ ಎರಡೂ ಕೈಯ್ಯಲ್ಲೂ ಚೆನ್ನಾಗಿ ಮೆದ್ದ! ಅದೇ ಜ್ಯೋತಿಷಿಯ ಜಾಗದಲ್ಲಿ ನಾವು-ನೀವು ಇದ್ದರೂ ಆ ಕಾರ್ಯ ನೆರವೇರುತ್ತಿತ್ತು. ಜ್ಯೋತಿಷಿ ಅಲ್ಲಿ ಬೇಕಾದ್ದು ನೆಪಮಾತ್ರಕ್ಕೆ! 

ಇತ್ತೀಚೆಗೆ ಹೇಳಿದ್ದ ತಿಮ್ಮಗುರುವಿನ ಕಗ್ಗವನ್ನೇ ಮತ್ತೊಮ್ಮೆ ಪುನರುಚ್ಚರಿಸುತ್ತೇನೆ:  

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ
ಸಹಿಸದಲ್ಲದೆ ಮುಗಿಯದಾವದೆಶೆ ಬಂದೊಡಂ
ಸಹನೆ ವಜ್ರದ ಕವಚ-ಮಂಕುತಿಮ್ಮ

ನನ್ನ ಸಲಹೆ ಇಂತಿದೆ: ಫಲಜ್ಯೋತಿಷ್ಯವನ್ನೋ ಅಷ್ಟಮಂಗಲವನ್ನೋ ನಂಬಿಕೂರಬೇಡಿ; ಅದರಲ್ಲಿ ಬಹಳಷ್ಟು ಕಾಕತಾಳೀಯ, ಅದು ಚೆಸ್ ಆಟದಂತೇ ಎಂಬುದು ಅನುಭವೀ ವಿದ್ವಾಂಸರೊಬ್ಬರ ಸದಭಿಪ್ರಾಯ. ಬೆರಳೆಣಿಕೆಯ ಕೆಲವರು ಹೇಳಿದ್ದು ಬಹುಭಾಗ ಸತ್ಯವಾದರೆ-ಅದು ಆವರ ಅನುಷ್ಠಾನ ಬಲ. ಅಂತಹ ಅನುಷ್ಠಾನ ಬಲ ಇರುವ ಮಂದಿಯನ್ನು ಗುರ್ತಿಸಲು ನಾವೇ ಮೊದಲು ಅಷ್ಟಮಂಗಲದವರಾಗಬೇಕಾದ ಅನಿವಾರ್ಯತೆ ಇದೆ!

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವಿಬ್ಬಂದಿ ನೀನು
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು
ಸಿಂಬಳದಿ ನೊಣ ನೀನು-ಮಂಕುತಿಮ್ಮ

ದೇವರು ಎಂಬ ಶಕ್ತಿಯನ್ನು ನಾವು ನಂಬಿಯೂ ನಂಬದವರಂತಿದ್ದೇವೆ. ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಲಾರ ಎಂಬಾಗಲೇ ’ಹುಲ್ಲನ್ನು ಮೇಯಿಸಬೇಕೆಂದೇ ಹಣೆಬರಹವಿದ್ದರೆ ಆತನೇನು ಮಾಡಬಲ್ಲ?’ ಎಂಬ ಸಂಶಯವನ್ನು ಮನದಲ್ಲಿ ಧಾರಣೆಮಾಡಿರುತ್ತೇವೆ. ಶ್ರೀಕೃಷ್ಣನ ಯುಧಿಷ್ಠಿರನಲ್ಲಿ "ಅಶ್ವತ್ಥಾಮೋ ಹತಃ ಕುಂಜರಃ" ಎಂದು ಹೇಳೆಂದಾಗ ಭಗವಂತನ ಆಜ್ಞೆಯನ್ನು ನಡೆಸುವ ಮೊದಲು ತಾನು ಘಟನೆಯನ್ನು ಕಣ್ಣಾರೆ ಕಾಣಬೇಕೆಂದ-ಧರ್ಮರಾಯ. ಸಂಶಯದ ಭೂತ ಮನಹೊಕ್ಕ ಆ ಕ್ಷಣದಲ್ಲಿ ಪ್ರಥಮ ಪಾಂಡವನ ರಥ ಗಾಳಿಯಲ್ಲಿ ತೇಲುತ್ತಿದ್ದುದು ಚಣಕಾಲ ಧರೆಗುರುಳಿತ್ತು! ನಂಬಿದವರ ಸಹಾಯಕ್ಕೆ ಕಂಬದಿಂದಲೋ ಬಿಂಬದಿಂದಲೋ ಸಮಯಬಂದಾಗ ಪ್ರಕಟಗೊಳ್ಳುವುದು ಜಗನ್ನಿಯಾಮಕ ಶಕ್ತಿ. ಜನರನ್ನು ನಂಬುವ ಬದಲು ಜನಾರ್ದನನನ್ನು ನಂಬಿದರೆ ಯಾವ ವಿಪತ್ತೂ ಬಾಧಿಸುವುದಿಲ್ಲ. ಅರ್ಧನಂಬಿದರೆ, ಕಾಲುಭಾಗ ನಂಬಿದರೆ, ಪರ್ಸಂಟೇಜ್ ಲೆಕ್ಕದಲ್ಲಿ ನೂರಕ್ಕಿಂತಾ ಒಂದಂಶ ಕಮ್ಮಿ ನಂಬಿದರೆ ಕಾವ ದೇವ ನಮ್ಮನ್ನು ಕಾಯಲಾರ! ಅದೇ ಆತನ ನೀತಿ. "ಸಕಲಗ್ರಹಬಲ ನೀನೆ ಸರಸಿಜಾಕ್ಷ" ಎಂದು ಭಗವಂತನಲ್ಲೇ ಅನನ್ಯ ಶರಣಾಗತಿ ಇಟ್ಟುಕೊಂಡು ದಿನದಲ್ಲಿ ಕೊನೇಪಕ್ಷ ಅರ್ಧಗಂಟೆಯನ್ನು ಧ್ಯಾನ-ಪ್ರಾರ್ಥನೆಗಳಲ್ಲಿ ಕಳೆಯುವವರಿಗೆ ಯಾವ ಜ್ಯೋತಿಷ್ಯವೂ ಬೇಕಾಗಿಲ್ಲ, ಹಣೆಯಲ್ಲಿ ಒಮ್ಮೆ ಬರೆದದ್ದನ್ನು ತಪ್ಪಿಸಲು ಯಾವ ಜ್ಯೋತಿಷಿಯೂ ಅರ್ಹನಲ್ಲ, ಆಗುವುದು ಆಗಲೇ ಬೇಕು. ಜರುಗುವುದು ಜರುಗಲೇ ಬೇಕು. ಶುಭದಿನ.