ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 10, 2011

ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು


ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು

" ಅಮ್ಮಾ ನಂಗೆ ಭಯ ಆಗ್ತಿದೆ....ಯಾರಿದ್ದೀರ ಅಲ್ಲಿ ಪ್ಲೀಸ್ ಹೆಲ್ಪ್ ಮಿ.......ಆಯ್ ಕಾಂಟ್ ಡು ಎನಿಮೋರ್.....ಪ್ಲೀಸ್....ನಾನು ಹೆಲ್ಪ್ ಸಿಗ್ಲಿಲ್ಲಾ ಅಂದ್ರೆ ಸತ್ತೇ ಹೋಗ್ತೀನಿ " ---ಇದು ಹರೆಯದ ಹುಡುಗಿಯೊಬ್ಬಳ ಸ್ಮಶಾನರೋದನ ! ಇದೇ ರೀತಿ ವಿದೇಶೀಯರ ಪಾದಸೇವೆ ಮಸ್ಸಾಜು, ಹಳ್ಳಿಗಳಲ್ಲಿ ಎಮ್ಮೆ ಸಗಣಿ ತಿನ್ನುವುದು ಪೂರ್ತಿ ಒಂದು ಲೋಟ ಗಂಜಳ ಕುಡಿಯುವುದು, ಹೊಲದಲ್ಲಿ ಟ್ರಾಕ್ಟರುಗಳನ್ನು ಓಡಿಸುವುದು,ಗುಡ್ಡಗಾಡು ವಾಸಿಗಳಾದ ಸಿದ್ಧಿ ಜನಾಂಗದ ಹುಡುಗರನ್ನು ತಂದು ನಗರಗಳಲ್ಲಿ ಅವರ ಗೋಳು ಹುಯ್ದು ಕೊಳ್ಳುವುದು ಇತ್ಯಾದಿ ಹಲವು ಹುಚ್ಚು ಕ್ರೀಡೆಗಳನ್ನು ನೀವೆಲ್ಲಾ ನೋಡಿರುತ್ತೀರಿ. ಇದು ಯಾವ ತಲೆಹಿಡುಕ ಮಹಾಶಯನ ಕ್ರಿಯೇಟಿವಿಟಿಯ ಫಲವೋ ಗೊತ್ತಿಲ್ಲ. ಆದರೆ ಒಂದಾದಮೇಲೊಂದು ಮಾಧ್ಯಮ ವಾಹಿನಿಗಳು ಇಂಥದಕ್ಕೆ ಎಡತಾಕಿರುವುದು ಬಹಳ ಬೇಸರ ತರಿಸುವ ವಿಷಯ.

ನಗರಗಳಲ್ಲಿ ಹಾಯಾಗಿ ತಮ್ಮ ಸ್ಕೂಲು-ಕಾಲೇಜುಗಳು ಅಭ್ಯಾಸ,ಗೆಳೆಯ/ಗೆಳತಿಯರು ಅಂತ ನಲಿದುಕೊಂಡಿದ್ದ ಪ್ರಾಯದ ಹುಡುಗಿಯರ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ತೆವಲಿಗೆ ಆ ಹುಡುಗಿಯರು ಇಂತಹ ಬೆಲೆ ತೆರುತ್ತಿದ್ದಾರೆ. ಹುಟ್ಟಿದಾರಭ್ಯ ಇದುವರೆಗೆ ತಂದೆ-ತಾಯಿಯ ಪಾದಪೂಜೆ ಮಾಡದ ಇಂಥಾ ಕ್ಷುದ್ರ ಜೀವಿಗಳು ತಾವೂ ಕಮ್ಮಿಯಿಲ್ಲಾ ಎಂದು ಹೇಳಿಸಿಕೊಳ್ಳುವ ಸಲುವಾಗಿ ’ರಿಯಾಲಿಟಿ ಶೋ’ ನಿರ್ಮಾಪಕ/ನಿರ್ದೇಶಕರು ಹೇಳಿದ್ದೆಲ್ಲವನ್ನೂ ಚಾಚೂತಪ್ಪದೇ ಮಾಡುತ್ತಿದ್ದಾರೆ. ಮನೆಯಲ್ಲಿ ಮೊಬೈಲಿಗೆ ಮತ್ತು ಲ್ಯಾಪ್‍ಟಾಪಿಗೆ ಅಂಟಿಕೊಂಡು ಇಡೀ ದಿನದಲ್ಲಿ ಕಡ್ಡಿ ಕೆಲಸ ಹಂದದ ಇಂಥಾ ನಫರದಂಡ ಹುಡುಗಿಯರಿಗೆ ಮಾಡಲು ಬೇರೇ ಕೆಲಸವಿಲ್ಲವೇ ? ಅಥವಾ ಅಂಥಾ ಕಚಡಾ ಶೋ ಗಳಿಗೆ ಕಳಿಸುವ ಅವರ ಮಾತಾ-ಪಿತೃಗಳಿಗೆ ತಲೆ ಸರಿಯಿಲ್ಲವೋ ತಿಳಿಯದಾಗಿದೆ! ಎಲ್ಲವೂ ಪ್ರಚಾರದ ಪ್ರಶ್ನೆ !

ಆಯ್ತು ಬಿಡಿ ಹೋಗಲಿ, ಬಾಕಿ ಎಲ್ಲಾ ಕೆಲಸಗಳಿಗೂ ತಲೆಹಾಕುವ ಸರಕಾರೀ ಹ್ಯೂಮನ್ ರೈಟ್ಸ್ ಸಂಸ್ಥೆಯವರು ಇಂಥಾ ಅಸಂಬದ್ಧ ಕೆಲಸಗಳನ್ನು ಮಾಡಿಸುವ ಮಾಧ್ಯಮ ಧಾರಾವಾಹಿಗಳ ನಿರ್ಮಾಪಕ/ನಿರ್ದೇಶಕರತ್ತ ನೋಡುವುದೇ ಇಲ್ಲವಲ್ಲ ! ಹಿಂದಿಯಲ್ಲಿ ಮಾಡಿದರು ಎಂದು ಕನ್ನಡದಲ್ಲಿ ಇಲ್ಲಾ ಮತ್ತೊಂದು ಭಾಷೆಯಲ್ಲಿ ಹೀಗೇ ಇತ್ತೀಚೆಗೆ ಸತತವಾಗಿ ಇಂಥಾ ಕೆಟ್ಟ ಶೋಗಳು ನಡೆದೇ ಇವೆಯಲ್ಲಾ ಇವುಗಳಿಗೆ ಕಡಿವಾಣ ಹಾಕುವವರ್ಯಾರೂ ಕಾಣುತ್ತಿಲ್ಲ. ಪ್ರಾಯಶಃ ನಾಗರಿಕರೆನಿಸಿದ ನಾಗರಿಕರಿಗೂ ಆಗಾಗ ಬದಲಾವಣೆಗಾಗಿ ರಕ್ಕಸ ಮನೋರಂಜನೆ ಬೇಕೆನಿಸುತ್ತದೆ ! ಚಲನಚಿತ್ರಗಳಲ್ಲಿ ಐಟಮ್ ಸಾಂಗ್‍ಗಳಲ್ಲಿ ಬಿಚ್ಚುಡುಗೆ ಅಂದಗಾತಿಯರನ್ನು ಬಯಸುವ ಸಮಾಜದ ಕೆಲವು ಮುಖಗಳು ಮಾಧ್ಯಮವಾಹಿನಿಗಳಲ್ಲೂ ಮಸಾಲೆಯನ್ನೇ ಬಯಸುತ್ತಾರೆಯೋ ಎಂಬ ಅನುಮಾನ ಉದ್ಭವವಾಗುತ್ತದೆ.

ಸೃಜನಶೀಲತೆ ಸಮಾಜವನ್ನು ದಿಕ್ಕು ತಪ್ಪಿಸುವ ದಿಸೆಯಲ್ಲಿ ನಡೆಯಬೇಕೇ ? ಇಂತಹ ಎಡಬಿಡಂಗಿಗಳಿಗೆ ಮಾಡಲು ಬೇರೇ ಯಾವುದೂ ತೋಚದಿದ್ದರೆ ಹಿಂದಿಯವರನ್ನೋ ಮತ್ಯಾರನ್ನೋ ಅನುಕರಿಸುತ್ತಾ ಅದನ್ನೇ ಭಾರೀ ವಿಶೇಷವೆನ್ನುವ ರೀತಿಯಲ್ಲಿ ಪ್ರಚುರಪಡಿಸುವುದು ನಿಜಕ್ಕೂ ವಿಷಾದನೀಯ. ವಾಹಿನಿಯೊಂದೆರಡು ಮದುವೆ ಮಾಡಿಸಲು ಹೊರಟವು...ಮಧ್ಯದಲ್ಲೇ ಮಗುಚಿಬಿದ್ದವು! ಹಿಂದೀ ಮಾಧ್ಯಮವಾಹಿನಿಗಳಲ್ಲಿ ಕಾಣುವ, ಹಣಕ್ಕಾಗಿ ಏನಾನ್ನಾದರೂ ಮಾಡಲೂ ತಮ್ಮನ್ನೇ ಮಾರಿಕೊಳ್ಳಲೂ ಸಿದ್ಧರಿರುವ ಬೆಕ್ಕಿನ ಕಣ್ಣಿನ ಗಂಡುಬೀರಿ ಹುಡುಗಿಯರು ನಡೆಸಿಕೊಟ್ಟ ಅಂಥಾ ಶೋಗಳು ಕನ್ನಡದ ಸಂಸ್ಕೃತಿಗೆ ಒಗ್ಗುತ್ತಿತ್ತೇ ಎಂಬುದೂ ಕಾಡುವ ಪ್ರಶ್ನೆಯಾಗಿದೆ. ನೇರವಾಗಿ ವ್ಯವಹರಿಸಿ, ಜಾತಕ-ಮೇಳಾಮೇಳಿ ಮೊದಲಾದವುಗಳನ್ನೆಲ್ಲಾ ಪರಿಗಣಿಸಿ ಆದಮೇಲೂ ಕೊಡುಕೊಳ್ಳುವಿಕೆಯ [ಮುಸುಕಿನಲ್ಲಿ ನಡೆಯುವ ವರದಕ್ಷಿಣೆ ವ್ಯವಹಾರ]ಮಾತುಕತೆಯಿಂದಲೋ ಅಥವಾ ಹುಡುಗ-ಹುಡುಗಿಯ ವೈಯ್ಯಕ್ತಿಕ ಪ್ರೀತಿ-ಪ್ರೇಮಗಳ ಹಿಂದಿನ ಅಧ್ಯಾಯಗಳನ್ನು ಅವರು ಹಂಚಿಕೊಂಡಮೇಲೋ ಸಂಬಂಧ ನಿಂತುಹೋಗುವುದಿದೆ!ಸಮಾಜಕ್ಕೆ ಗೊತ್ತಿರಲಿ ಬಿಡಲಿ ’ಲಿವ್-ಇನ್ ರಿಲೇಶನ್’ ಎಂಬ ಹೊಸಮಾದರಿಯ ಜೀವನಕ್ರಮಕ್ಕೆ ಅದಾಗಲೇ ಒಗ್ಗಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು, ಕಾಲ್‍ಸೆಂಟರ್ ಕಾರ್ಯಾನುವರ್ತಿಗಳು ಆಗಾಗ ಆಗಾಗ ದೋಸೆ ಮಗುಚಿದ ಹಾಗೇ ಸಂಬಂಧಗಳನ್ನು ಬದಲಾಯಿಸಿಕೊಳ್ಳುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಅದನ್ನೇ ಪುಷ್ಟೀಕರಿಸುವ ಧಾರಾವಾಹಿಗಳೂ ಬಂದಿವೆ-ಬರುತ್ತಲಿವೆ.

ಕಳೆದ ಕೆಲವು ದಿನಗಳ ಹಿಂದೆ ಮಾಧ್ಯಮವಾಹಿನಿಗಳು ಕನ್ನಡದಲ್ಲಿ ಕೆಲವು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ನಟಿಯೊಬ್ಬಳ ಕಾಮಕಾಂಡದ ಬಗ್ಗೆ ವಿಶ್ಲೇಷಿದವು. ಅದೂ ಕೂಡಾ ತುಂಬಾ ಮಹತ್ವಕೊಟ್ಟು ಪದೇ ಪದೇ ಅದನ್ನು ತೋರಿಸುತ್ತಲೇ ಇದ್ದವು. ನಿಜ ಹೇಳುತ್ತೇನೆ ಕೇಳಿ ನಮಗೆ-ನಿಮಗೆ ಗೊತ್ತಿರುವ ಆದರೂ ಬಹಿರಂಗವಾಗಿ ನಾವು ಹಾಗೆ ನೋಡದ ಹಾದರಗಿತ್ತಿಯರೇ ನಟಿಯರು! ನಟಿಯರು ಒಂದಿಲ್ಲೊಂದು ಸಮಯದಲ್ಲಿ ತಮ್ಮ ಶೀಲವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ ಎಂದು ಚಾಣಕ್ಯನೇ ಹೇಳುತ್ತಾನೆ! ಇನ್ನು ರೂಪವನ್ನೇ ಬಳಸಿಕೊಂಡು ಹಣಮಾಡುವ ನಟಿ/ಹುಡುಗಿಯರಿಗೇನೂ ಕಮ್ಮಿ ಇಲ್ಲ. ಸಾಮಾಜಿಕವಾಗಿ ಸಾಮೂಹಿಕ ಸಂಪರ್ಕಕ್ಕೆ ಬಂದ ಬಹುಸಂಖ್ಯಾಕ ಹೆಣ್ಣುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ತಮ್ಮ ಶೀಲವನ್ನು ಕಾಪಾಡಿಕೊಂಡಿರಬಹುದೇ ಹೊರತು ಆ ರಂಗದಲ್ಲಿ ಅದನ್ನು ಹಾಗೇ ಜೋಪಾನ ಮಾಡುವುದು ಹಿಮಪಾತವಾಗುವಾಗ ಮೌಂಟ್‍ಎವರೆಸ್ಟ್ ಏರುವಷ್ಟು ಕಷ್ಟ! ಇತ್ತೀಚೆಗಂತೂ ಕಲಿಕಾ ಕೇಂದ್ರಗಳಲ್ಲಿ ಜ್ಞಾನದೇಗುಲಗಳಲ್ಲಿ ಉಪನ್ಯಾಸಕರೆನಿಸಿದ ಗಂಡುಗೂಳಿಗಳು ತಮ್ಮ ತೆವಲನ್ನು ತೀರಿಸಿಕೊಳ್ಳಲು ವಿದ್ಯಾರ್ಜನೆಗೆ ಬರುವ ಹುಡುಗಿ/ಹೆಂಗಸರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ತಾವು ಕಾಣುತ್ತಿದ್ದೀರಿ. ಎಂತಹ ಆಭಾಸ !

ಮಹಿಳೆಯರ ಬಗ್ಗೆ ವಾದಮಂಡಿಸುವ/ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಹಲವರಿದ್ದಾರೆ. ಆದರೆ ಇಂತಹ ’ರಿಯಾಲಿಟಿ ಶೋ’ಗಳ ಬಗ್ಗೆ ಅವರು ಚಕಾರ ಎತ್ತುವುದಿಲ್ಲವಲ್ಲ--ಆಶ್ಚರ್ಯವಾಗುತ್ತದೆ. ೨೨ನೇ ಶತಮಾನದಲ್ಲಿದ್ದೇವೆ ಇದೆಂತಹ ಹಳಸಲು ವಿಷಯವೆಂದು ಮೂಗು ಮುರಿಯುವ ಮಹಾನುಭಾವರಿಗೆ ಒಂದು ಪ್ರಶ್ನೆ-- ನೀವೇ ಆ ಗಂಡೋ/ಹೆಣ್ಣೋ ಅಥವಾ ಪಾಲಕರೋ ಆಗಿದ್ದರೆ ಪೂರ್ವದಲ್ಲಿ ಹಲವು ಸಂಬಂಧಗಳನ್ನು ಇರಲಿ ಒಂದೇಒಂದು ಸಂಬಂಧವನ್ನು ಇಟ್ಟುಕೊಂಡಿದ್ದ ವ್ಯಕ್ತಿಯೊಡನೆ ಶಾಶ್ವತ ಸಂಬಂಧ ಕಲ್ಪಿಸಿಕೊಂಡು ಜೀವನನಡೆಸಲು ಒಪ್ಪುತ್ತೀರಾ ? ತಮ್ಮ ಕಾಲಬುಡಕ್ಕೆ ಬಂದಾಗ ತಮಗೆ ಮಾತ್ರ ಯಾವುದೇ ತೊಂದರೆಯಾಗದಿರಲಿ ಎನ್ನುವ ಜನ ಬೇರೆಯವರ ವಿಷಯಗಳಲ್ಲಿ ಅದು ಸಹಜ ಎಂದು ನಡೆದುಕೊಳ್ಳುವುದು ಎಷ್ಟು ಸಮಂಜಸ ? ಇಂತಹ ಲಿವ್-ಇನ್‍ಗಳು ಜಾಸ್ತಿಯಾದರೆ ಮುಂದೆ ಭಾರತದಲ್ಲಿ ಸ್ವಸ್ತ ಸಮಾಜ ಇರಬಹುದೇ? ಅಥವಾ ಐರೋಪ್ಯ ರಾಷ್ಟ್ರಗಳ/ಅಮೇರಿಕದ ರೀತಿ ಶಾಂತಿಯನ್ನು ಅರಸುತ್ತಾ ನಾವೂ ಮತ್ಯಾವುದಾದರೂ ದೇಶಕ್ಕೆ ಹೋಗಬೇಕಾಗಬಹುದೇ ಎಂಬುದು ಗಹನವಾಗಿ ಚಿಂತಿಸಬೇಕಾದ ವಿಚಾರ.

ಇದಕ್ಕೆ ಪೂರಕವಾಗಿ ೧೬ನೇ ವಯಸ್ಸು ಆಗುತ್ತಿದ್ದಂತೇ ಸ್ವೇಚ್ಛೆಯಿಂದ ಹೆಣ್ಣು-ಗಂಡುಗಳು ಸೇರಬಹುದು ಎಂಬ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತರುವುದನ್ನು ಕೇಳುತ್ತಿದ್ದೇವೆ. ಈಗಾಗಲೇ ಗೌಪ್ಯವಾಗಿದ್ದೇ ಅನಿಯಂತ್ರಿತವಾಗಿದೆ. ಬೀದಿಗಳಲ್ಲಿ, ಕಸದಗುಡ್ಡೆಗಳ ಪಕ್ಕದಲ್ಲಿ ಬೇಡದ ಸಂಬಂಧದ ಫಲವಾದ ಪಾಪದ ಕೂಸುಗಳು ಬಿಸುಡಲ್ಪಟ್ಟು ಬೀದಿನಾಯಿಗಳಿಗೆ ಆಹಾರವಾಗುತ್ತಿರುವ ದೃಶ್ಯವನ್ನು ಕಾಣುತ್ತಿದ್ದೇವೆ. ಇಂತಹ ಎಲ್ಲದರ ನಡುವೆ ಆ ಕಾಯ್ದೆಯೂ ಬಂದರೆ ಅಪ್ಪ-ಅಮ್ಮನ ಎದುರೇ ಪ್ರಿಯಕರ ಬಂದು ಮಗಳನ್ನು ಎಳೆದೊಯ್ದರೂ ಅವರು ಬೆಪ್ಪರಾಗಬೇಕಾದ ಪರಿಸ್ಥಿತಿ ಇದೆ. ಆಮೇಲಾಮೇಲೆ ನಾಯಿಗೋತ್ರ ! ಅಪ್ಪ ಯಾರೋ- ಅಮ್ಮ ಯಾರೋ ! ಹಲೋ ಎನ್ನುತ್ತಿದಂತೇ ಪ್ರೀತಿ, ಹಾಯ್ ಎನ್ನುತ್ತಿದ್ದಂತೇ ಮಕ್ಕಳು, ಬಾಯ್ ಎನ್ನುತ್ತಿದಂತೇ ವಿಚ್ಛೇದನ!

ರಿಯಾಲಿಟಿ ಶೋವೊಂದರಲ್ಲಿ ವೀಣಾ ಮಾಲಿಕ್ ಎಂಬ ಪಾಕಿಸ್ತಾನೀ ಯುವತಿ ಮತ್ತು ಅಶ್ಮಿತ್ ಪಟೇಲ್ ಪರಸ್ಪರ ಚುಂಬಿಸಿದರು ತಬ್ಬಿಕೊಂಡರು. ಇಂತಹ ರಿಯಾಲಿಟಿ ಶೋಗಳನ್ನು ಹಿರಿಯರು ನೋಡುವಾಗ ಅದನ್ನೇ ನೋಡುತ್ತಿರುವ ಕಿರಿಯರ ಮನಸ್ಸಿನ ಮೇಲೆ ಯಾವ ಪರಿಣಾಮವಾಗಬಹುದು? ಒಳ ಉಡುಗೆಗಳ ಜಾಹೀರಾತನ್ನು ಕೊಡುವ ಜನ ಒಂದಿಂಚು ಜಾಗ ಬಿಟ್ಟು ಇಡೀ ಶರೀರವನ್ನೂ ತೋರಿಸುತ್ತಾರೆ! ಕಾಂಡೋಮ್‍ಗಳ ವ್ಯಾಪಕ ಪ್ರಚಾರದ ಭಾರಾಟೆಯೇ ಇದೆ. ಇದನ್ನೆಲ್ಲಾ ಅವಲೋಕಿಸುವ ಕಿರಿಯರಿಗೆ ಅರ್ಥವಾಗದ್ದೇನು ? ಓಮ್ದು ಕಾಲಕ್ಕೆ ನಾರಿಯ ಸೀರೆಯ ಸೆರಗು ಜಾರಿದರೇ ಜನ ವಿಚಿತ್ರವಾಗಿ ನೋಡುತ್ತಿದ್ದರು. ಇಂದು ಸೆರಗೇ ಇಲ್ಲದ ಪ್ರದರ್ಶನ! ಇದೂ ನಮ್ಮ ಸಂಸ್ಕೃತಿಯಲ್ಲಾದ ಬದಲಾವಣೆ ಎನ್ನೋಣವೇ ? ಕಾಲೇಜುಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಹಾಕಿ ಬರಬೇಡಿ ಎಂದು ಹುಡುಗಿಯರಿಗೆ ತಾಕೀತು ಮಾಡಿದರೆ ದಂಗೆಯೇ ಆರಂಭ! ಅಸಹ್ಯಕರ ಬರಹಗಳನ್ನು ಹೊತ್ತ ಟೀಶರ್ಟ್‍ನ್ನು ಅವರು ಧರಿಸಿ ಬರುವಾಗ ಕೆಲವರಿಗಾದರೂ ನೋಡಲು ಮುಜುಗರವೆನಿಸಬಹುದಲ್ಲ ? ಹೀಗೇ ಚಿತ್ರ ವಿಚಿತ್ರ ದಿರಿಸುಗಳ ಮೂಲಕ ಪರೋಕ್ಷ ಹರೆಯದ ಹುಡುಗರ ಮನಸೆಳೆಯುವ ಹುಡುಗಿಯರು ಮುಂದಿನ ಅಧ್ಯಾಯಕ್ಕೆ ನಾಂದಿಹಾಡಲು ಕಾರಣರು ಎಂದರೆ ತಪ್ಪೇ ?

ಇಂದಿನ ಧಾರಾವಾಹಿಗಳಲ್ಲಿ ತಲೆಬೋಳಿಸಿಕೊಂಡು ಪಾತ್ರಮಾಡುವುದಕ್ಕಾದರೂ ಸೈ ಎನ್ನುವ ನಮ್ಮ ಹುಡುಗಿಯರನೇಕರು ಗ್ರಾಮೀಣಭಾಗದಲ್ಲಿ ಕೈತುಂಬಾ ಕೆಲಸಗಳಿದ್ದರೂ ತೊರೆದು ನಗರಕ್ಕೆ ಬಂದು ನೆಲೆಸಿ ಮಾಧ್ಯಮಗಳಿಗೆ ಅಂಟಿಕೊಂಡಿರುವುದು ಒಂದು ವಿಪರ್ಯಾಸ ಎಂದರೆ "ನಾವು ಕಲಾವಿದರು ನಮಗೆ ಹಳ್ಳಿಗಳಲ್ಲಿ ಬೆಲೆಯಿಲ್ಲಾ" ಎನ್ನುವ ಅವರ ಉತ್ತರ ಬರಬಹುದು ಆದರೆ ಹಳ್ಳಿಗಳಲ್ಲಿ ಅವರಿಗಿಂತಾ ಉತ್ತಮ ಕಲಾವಿದರು ನೆಲೆಸಿದ್ದಾರೆ; ಅವರೆಂದೂ ತಮ್ಮತನ ಕಳೆದುಕೊಳ್ಳುವ ಗೋಜಿಗೆ ಹೋದವರಲ್ಲ, ಮಾಧ್ಯಮದ ಅನಿವಾರ್ಯತೆಗಾಗಿ ಯಾವನೋ ಹುಡುಗನ ಜೊತೆಗೆ ಕ್ರತ್ರಿಮವಾಗಿ ನಗುತ್ತಾ ಕಾರ್ಯಕ್ರಮಗಳನ್ನು ನಡೆಸುವ ಬಣ್ಣದಬೊಂಬೆಗಳು ಒಂದೆರಡೇ ? ಆರ್ಥಿಕ ಸ್ವಾತಂತ್ರ್ಯವೆಂಬ ಏಕಮುಖೀ ಧೋರಣೆಯಲ್ಲಿ ಇಂಥವರೇ ಬಹಳಮಂದಿ ’ಇವ್-ಇನ್ ರಿಲೇಶನ್’ನಲ್ಲಿ ಇರುತ್ತಾರೆ ಎಂದರೆ ಇಲ್ಲವೆನ್ನುತ್ತೀರೇ? ಇನ್ನು ತಾಂತ್ರಿಕ ಮತ್ತು ಔಷಧೀಯ ವಿಷಯಗಳನ್ನೂ ಸೇರಿದಂತೇ ಹಲವು ಉನ್ನತ ವಿದ್ಯೆಗಳನ್ನು ಕಲಿಯಲು ಊರು ತೊರೆದು ನಗರಕ್ಕೆ ತೆರಳುವ ಹುಡುಗಿಯರು ಇಂತಹ ಸಂಬಂಧಗಳನ್ನು ಅಪ್ಪಿರುವುದೂ ಕಾಣಬರುವ ಸತ್ಯಸಂಗತಿಯಾಗಿದೆ.

ತಂತ್ರಜ್ಞಾನದ ಕ್ರಾಂತಿಯಿಂದ ತಳ್ಳುವಗಾಡಿಯ ವ್ಯಾಪಾರಿಯೂ ಬೀದಿಗುಡಿಸುವವರೂ ಸೇರಿದಂತೇ ಎಲ್ಲರೂ ಮೊಬೈಲ್ ಬಳಸುತ್ತಿರುವುದು ಕಾಣುತ್ತದೆ. ಆಗಲಿ ಬಿಡಿ. ಪ್ರಗತಿ ಒಳ್ಳೆಯದಕ್ಕಾದರೆ ಬೇಸರವಿಲ್ಲ. ಇಅದೇ ತಂತ್ರಜ್ಞಾನವೇ ಅನೈತಿಕ ಸಂಬಂಧಗಳನ್ನು ಕುದುರಿಸಿಕೊಳ್ಳುವಲ್ಲಿ, ನಡೆಸುವಲ್ಲಿ ಸಹಕಾರಿಯಾಗುತ್ತಿರುವುದು ಖೇದತರುವ ವಿಷಯ. ಸೋಶಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಇಂದು ಪರಿಚಯವಾದ ಹುಡುಗ-ಹುಡುಗಿ ನಾಳೆ ಉದ್ಯಾನದಲ್ಲಿ ಕೈಕೈ ಹಿಡಿದು ಅಲೆಯುವಷ್ಟು ಪ್ರಗತಿ ನಮ್ಮದು ! ಈ ಸಂಬಂಧಗಳೆಲ್ಲಾ ಸ್ಥಿರವೇ ? ಇವುಗಳಿಂದ ಯಾವುದೇ ಆಘಾತ ಇಲ್ಲವೇ ? ಹಾಗಾದ್ರೆ ಯಾವುದೇ ತಪ್ಪು ಮಾಡಿರದ ಸ್ಪುರದ್ರೂಪೀ ತಂತ್ರಾಂಶ ಅಭಿಯಂತರ[ಗಿರೀಶ್]ನನ್ನು ಮದುವೆಯ ನಿಶ್ಚಿತಾರ್ಥದವರೆಗೂ ಕಮಕ್ ಕಿಮಕ್ ಎನ್ನದೇ ಒಪ್ಪಿ ನಡೆದಿದ್ದ ಅನುರೂಪೀ ಹುಡುಗಿ ಶುಭಾ ಕರೀ ಜಿರಲೆಯ ಮರಿಯಂತಿದ್ದ ಅದ್ಯಾವುದೋ ತಮಿಳು ಹುಡುಗನನ್ನು ಮೊಬೈಲ್ ಸಂದೇಶದ ಮೂಲಕ ಕರೆದು ಬಲಿಹಾಕಿರುವುದು ಯಾಕೆ ? ತನಗೆ ಈ ಮದುವೆ ಇಷ್ಟವಿಲ್ಲಾ ಎಂದರೆ ಅವಳ ಗಂಟೇನು ಹೋಗುತ್ತಿತ್ತು. ಮಾಡಿದ್ದನ್ನು ಮಾಡಿಕೊಂಡೂ ತನ್ನದೇನೂ ತಪ್ಪಿಲ್ಲಾ ಎಂದು ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಆಕೆಗೆ ಆತನ ಹೆತ್ತ ಪಾಲಕರು ಯಾವ ಶಿಕ್ಷೆ ವಿಧಿಸಬೇಕು? ಸಮಾಜ ಕಂಡೂ ಕಂಡೂ ಇಂಥಾದ್ದನ್ನು ಪುರಸ್ಕರಿಸಬೇಕೇ ?

ನಮ್ಮೂರಲ್ಲಿ ಒಂದು ಗಾದೆ ಇದೆ-- ಹೆಣ್ಣು ತಿರುಗಿ ಕೆಟ್ಟಳು ಗಂಡು ಕೂತು ಕೆಟ್ಟ-ಅಂತ. ಇದರರ್ಥ ಸೃಷ್ಟಿ ಸಹಜ ನಿಯಮದಂತೇ ಮಾನವರಲ್ಲಿ ಸಹಜವಾಗಿ ಹುಡುಗಿಯರೇ ಸುಂದರವಾಗಿರುತ್ತಾರೆ. ಅಂತಹ ಹುಡುಗಿಯರು ಉದ್ಯೋಗಕ್ಕೋ, ಕಲಿಕೆಗೋ, ವ್ಯವಹಾರಕ್ಕೋ ತಿರುಗಾಡುವುದು ಜಾಸ್ತಿಯಾದಾಗ ಸಹಜವಾಗಿ ಹುಡುಗರ ದೃಷ್ಟಿಗೆ ಬೀಳುತ್ತಾರೆ. ಮುಂದೆ ಹುಡುಗರು ಅವರ ಹಿಂದೆ ಬಿದ್ದು ಅವರನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಇಷ್ಟವೋ ಅನಿಷ್ಟವೋ ಹುಡುಗಿಯರನೇಕರು ಜಾರುತ್ತಾರೆ! ಗಂಡಿನ ಸೌಂದರ್ಯ ಆತನ ಗಡುಸುತನ ಮತ್ತು ಸಮರ್ಪಕ ಕೆಲಸ ನಿರ್ವಹಣೆಯಲ್ಲಿರುತ್ತದೆ. ಹೀಗಾಗಿ ಶಾರೀರಿಕವಾಗಿ ಮಾಸಿಕ ಸ್ರಾವಾದಿ ತೊಂದರೆಗಳಾಗಲೀ ಮಕ್ಕಳನ್ನು ಹಡೆದು ಪೋಷಿಸುವ ಅಮ್ಮಂದಿರ ಪಾತ್ರವಾಗಲೀ ಗಂಡಸಿಗೆ ಬರುವುದಿಲ್ಲವಾದ್ದರಿಂದ ಆತ ದುಡಿಮೆಗೆ ಯೋಗ್ಯ ಎಂಬ ಹಿತಾರ್ಥದಿಂದ ಗಂಡು ಎಂದೂ ಕೂತು ಉಣ್ಣಬಾರದು ಎಂದಿದ್ದಾರೆ. ಆದರೆ ಇಂದು ಇದನ್ನೆಲ್ಲಾ ಪರಿಗಣಿಸುವವರೇ ಇಲ್ಲ. ಮಹಿಳಾ ಸಬಲೀಕರಣ ಮಹಿಳಾ ಸಬಲೀಕರಣ...ಇವತ್ತಿಗೂ ನಾನೊಂದು ಪ್ರಶ್ನೆ ಕೇಳುತ್ತೇನೆ-ಗಂಡಸರ ಯಾವ ಹಂಗೂ ಇಲ್ಲದೇ ಮಹಿಳೆಯರೇ ಯಾವುದನ್ನಾದರೂ ಸ್ವತಂತ್ರವಾಗಿ ನಡೆಸುತ್ತಾರೆಯೇ ? ಆಗುವುದಿಲ್ಲ, ಬರೀ ಆಡುವುದಷ್ಟೇ!

ಕೇವಲ ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ಹೆಣ್ಣು ಸಬಲಳಾದರೆ ಸಾಲದು ಅದಕ್ಕೆ ಪೂರಕ ಸಂಸ್ಕಾರ ಬೇಕು. ವಿನಾಕಾರಣ ಗಂಡಸರು ತಮ್ಮನ್ನು ಹಾಗೆ ಮಾಡುತ್ತಾರೆ ಹೀಗೆ ಮಾಡುತ್ತಾರೆ ಎನ್ನುವ ಬದಲು ತಮ್ಮ ಮಡಿವಂತಿಕೆಯ[ಸ್ವೇಚ್ಛಾಚಾರ ರಹಿತವಾಗಿರುವುದ]ನ್ನು ಸ್ವಲ್ಪವಾದರೂ ಅವರು ಉಳಿಸಿಕೊಂಡರೆ ಆಗ ಅವರು ಸಬಲರಾಗುತ್ತಾರೆ. ಮಾಧ್ಯಮಗಳಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆಯಿಂದ ಯಾರೋ ವಿದೇಶೀಯನ ಕಾಲು ಉಜ್ಜುವುದು, ಪಾದಸೇವೆ ಮಾಡುವುದು, ಪಡ್ಡೆಗಳ ಜೊತೆ ನಾಟ್ಯವಾಡುವುದು ಇದನ್ನೆಲ್ಲಾ ಮಾಡಹೊರಟ ಯುವತಿಯರೇ ನಿಮಗಾದರೂ ಕೊಂಚ ಬುದ್ಧಿಬೇಡವೇ ? ನಿಮ್ಮ ಜೀವನದ ಯಾವ ಅನಿವಾರ್ಯತೆಗೆ ಇಂತಹ ಕೆಲಸಕ್ಕೆ ಇಳಿಯುತ್ತೀರಿ ? ಓದುಗ ಮಿತ್ರರೇ ಈ ಬಗ್ಗೆ ನೀವೇನನ್ನುತ್ತೀರಿ?