ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 11, 2012

ದೀಪಂ ದೇವ ದಯಾನಿಧೇ -೪


ದೀಪಂ ದೇವ ದಯಾನಿಧೇ -೪
[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ಎರಡನೇ ವಯಸ್ಸಿಗೆ ತಂದೆಯಿಂದ ಚೌಲಕರ್ಮ ಮುಗಿಸಿಕೊಂಡ ಬಾಲಕ ಶಂಕರ ೩ನೇ ವಯಸ್ಸಿನೊಳಗೇ ಸಾಹಿತ್ಯ, ವ್ಯಾಕರಣಗಳನ್ನೂ, ಭಾರತದ ಪುರಾಣೇತಿಹಾಸಗಳನ್ನೂ ಸಂಪೂರ್ಣವಾಗಿ ತಿಳಿದು ನೋಡುಗರನ್ನು ನಿಬ್ಬೆರಗಾಗಿಸಿದ್ದ. ತಂದೆಯ ಮರಣಾನಂತರ ತಾಯಿಯ ಆಶ್ರಯದಲ್ಲಿ ಐದನೇ ವಯಸ್ಸಿಗೆ ಉಪನಯನವಾಗಿ ಎಂಟನೇ ವಯಸ್ಸು ಆರಂಭವಾಗುವ ಹೂತ್ತಿಗೆ ಅಧ್ಯಯನ ಮುಗಿಸಿದ ಶಂಕರರ ಬಾಲ್ಯವನ್ನು ತಿಳಿದರೇ ಅವರು ಅವತಾರ ಪುರುಷರೆಂಬುದು ಗೊತ್ತಾಗುತ್ತದೆ. ಗುರುಕುಲ ನೆಪಮಾತ್ರಕ್ಕೆ ಅವರಿಗೆ ಗುರುಕುಲವಾಗಿತ್ತೇ ಹೊರತು ವೇದ-ವೇದಾಂಗಗಳು ಅವರಲ್ಲೇ ಹುದುಗಿದ್ದವು! ಗುರುಗಳು ಹೇಳಿಕೊಡುವ ಮುನ್ನವೇ ಶಂಕರರೇ ಕೆಲವನ್ನು ಹೇಳಿಬಿಡುತ್ತಿದ್ದರು. ಜನಸಾಮಾನ್ಯರಿಗೆ ಒಂದೊಂದು ವೇದಕ್ಕೆ ೧೨ ವರ್ಷಗಳಂತೇ ಚತುರ್ವೇದಗಳನ್ನು ಸಮರ್ಪಕವಾಗಿ ಓದಿ ಮುಗಿಸಲು ೪೮ ವರ್ಷಗಳು ಬೇಕು. ಸರಿಸುಮಾರು ೮ ವಯಸ್ಸಿಗೆ ಉಪನಯನ ಸಂಸ್ಕಾರ ನಡೆದರೆ ಅದಕ್ಕೆ ೪೮ ವರ್ಷ ಸೇರಿಸಿ ಅಂದರೆ ೫೬ ವಯಸ್ಸಿನ ವರೆಗೂ ವೇದವನ್ನು ತಿಳಿದುಕೊಳ್ಳುವುದೇ ಆಗುತ್ತದೆ. ಅಂಥಾದ್ದರಲ್ಲಿ ಶಂಕರರು ಕೇವಲ ಮೂರೇ ವರ್ಷಗಳಲ್ಲಿ ವೇದ-ವೇದಾಂಗ, ಶಾಸ್ತ್ರ, ತರ್ಕ, ನ್ಯಾಯ-ಮೀಮಾಂಸೆ ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು ! ಇಂದಿನ ವಿಜ್ಞಾನಕ್ಕೆ ಇದೊಂದು ಸವಾಲು! ಶಂಕರರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಅವರ ದಿವ್ಯ ಕೃತಿಗಳು ಇಂದಿಗೂ ಎಲ್ಲೆಲ್ಲೂ ಲಭಿಸುತ್ತವೆ. ಆಧುನಿಕ ವಾಹನಸಾರಿಗೆ ಇರದ ಆ ಕಾಲದಲ್ಲಿ ಶಂಕರರು ಅಸೇತು ಹಿಮಾಚಲದವರೆಗೂ ಬಂಗಾಳದಿಂದ ದ್ವಾರಕೆಯ ವರೆಗೂ ಭಾರತದುದ್ದಗಲಕ್ಕೂ ಸಂಚರಿಸಿರುವುದು ನಮಗೆ ತಿಳಿದೇ ಇರುವ ವಿಷಯ ಅಲ್ಲವೇ ? ಇರಲಿ, ಮುಂದೆ ನೋಡೋಣ.

ಹೀಗೇ ಗುರುಕುಲ ವಿದ್ಯಾಭ್ಯಾಸ ಮುಗಿದು ಬಾಲಕ ಶಂಕರ ಮನೆಗೆ ಮರಳಿದ. ಬಾಲಕನ ಪಾಂಡಿತ್ಯ ಆ ವೇಳೆಗಾಗಲೇ ಎಲ್ಲೆಲ್ಲೂ ಜನಜನಿತವಾಗಿ ಅನೇಕ ಪಂಡಿತ್ತೋತ್ತಮರು ತಾವು ಬಿಡಿಸಲಾಗದ ಸಮಸ್ಯೆಗಳನ್ನು ಹೊತ್ತು ಶಂಕರನಲ್ಲಿಗೆ ಬರುತ್ತಿದ್ದರು. ಅದೇನು ಮಹಾ ಎಂಬಂತೇ ಶಂಕರ ಅವುಗಳನ್ನೆಲ್ಲಾ ಅರೆನಿಮಿಷದಲ್ಲೇ ಬಗೆಹರಿಸಿಬಿಡುತ್ತಿದ್ದ. ಹೀಗಾಗಿ ಕಾಲಡಿಯ ಶಂಕರನ ಮನೆಯೇ ಒಂದು ಗುರುಕುಲದ ರೀತಿ ಆಗಿಬಿಟ್ಟಿತ್ತು. ತಾಯಿಗೆ ಶಂಕರ ಮಹಾಜ್ಞಾನಿ ಎಂಬುದು ಅರ್ಥವಾಗಿ ಹೋಗಿತ್ತು. ಶಂಕರನ ಗಹನ ಪಾಂಡಿತ್ಯವನ್ನು ತಿಳಿದ ಕೇರಳದ ಆ ಪ್ರದೇಶದ ರಾಜ ರಾಜಶೇಖರ ಪಲ್ಲಕ್ಕಿ ಸಹಿತ ಹಾರ-ತುರಾಯಿ, ಛತ್ರ-ಚಾಮರಾದಿ ಸಕಲ ರಾಜಮರ್ಯಾದೆಯ ಗೌರವದೊಂದಿಗೆ ತನ್ನ ಮಂತ್ರಿಯನ್ನೂ ಸಕಲ ಪರಿವಾರವನ್ನೂ ಶಂಕರನಲ್ಲಿಗೆ ಕಳುಹಿಸಿ ಅರಮನೆಗೆ ಬರಬೇಕೆಂದು ವಿನಂತಿಸಿದ. ಆಗಲೇ ವಿರಕ್ತನಾಗಿದ್ದ ಶಂಕರ ಧನ-ಕನಕದ ಹೊರೆಹೊತ್ತು ರಾಜಮರ್ಯಾದೆ ನೀಡಿ ಕರೆದೊಯ್ಯಲು ಬಂದ ಮಂತ್ರಿಗೆ ತನಗವ್ಯಾವವೂ ಬೇಡವೆಂದೂ ಅಂಥದ್ದರಲ್ಲಿ ಆಸಕ್ತಿ ಇಲ್ಲವೆಂದೂ ಹಲವು ಕೆಲಸಗಳಲ್ಲಿ ನಿರತನಾಗಿರುವುದರಿಂದ ಅರಮನೆಗೆ ಬರಲಾಗುವುದಿಲ್ಲವೆಂದು ನಯವಾಗಿ ಹೇಳಿಕಳುಹಿಸಿದ!

ರಾಜಾ ರಾಜಶೇಖರನಿಗೆ ಎಲ್ಲಿಲ್ಲದ ಆಶ್ಚರ್ಯ! ಕೊಟ್ಟ ಯಾವುದನ್ನೂ ಸ್ವೀಕರಿಸದ ರಾಜಮರ್ಯಾದೆಯೂ ಬೇಡವೆಂದ ಬಾಲ ಪಂಡಿತ ಮಹಾಮಹೋಪಾಧ್ಯಾಯನನ್ನು ನೋಡುವ ಕಾತರದಿಂದ ರಾಜ ಖುದ್ದಾಗಿ ತಾನೇ ಶಂಕರನ ಮನೆಗೆ ಧಾವಿಸಿ ಬಂದ! ತಾನೊಂದಷ್ಟು ಗ್ರಂಥಗಳನ್ನು ಬರೆದಿರುವೆನೆಂದೂ ಅವುಗಳಲ್ಲಿರಬಹುದಾದ ದೋಷಗಳನ್ನು ಸರಿಪಡಿಸಿಕೊಡಬೇಕೆಂದೂ ಪ್ರಾರ್ಥಿಸಿಕೊಂಡ. ತನ್ನೆದುರಲ್ಲೇ ರಾಜನೇ ಅದನ್ನು ಓದುವಂತೇ ಮಾಡಿದ ಶಂಕರ ರಾಜನ ಶಾಸ್ತ್ರಪಾಂಡಿತ್ಯಕ್ಕೆ ತಲೆದೂಗಿದನಲ್ಲದೇ ಗ್ರಂಥಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಸಂತೋಷ ವ್ಯಕ್ತಪಡಿಸಿದ. ರಾಜನೂ ಸಂತುಷ್ಟನಾಗಿ ಮತ್ತೆ ತಾನು ತಂದಿದ್ದ ನಿಧಿಯನ್ನು ಅರ್ಪಿಸಲಾಗಿ ತನಗೆ ಅದರ ಅವಶ್ಯಕತೆಯಿಲ್ಲವೆಂದೂ ಅಗತ್ಯವಿರುವ ಬಡಜನರಿಗೆ ಅದನ್ನು ತನ್ನ ಪರವಾಗಿ ಹಂಚಿಬಿಡಬೇಕೆಂದೂ ಶಂಕರ ಸಾರಿದ. ರಾಜನಿಗೆ ಪುನರಪಿ ಆಶ್ಚರ್ಯವೇ ಕಾದಿತ್ತು! ರಾಜನಿಗೆ ಆಕ್ಷಣಕ್ಕೆ ಶಂಕರರ ಅಂತಃಕರಣ ಅರ್ಥವಾಗಲಿಲ್ಲ. ಜೀವನದಲ್ಲಿ ಯಾರ್ಯಾರು ಏನೇನು ಸಾಧಿಸುತ್ತಾರೆ ಖ್ಯಾತಿಯನ್ನೋ ಕುಖ್ಯಾತಿಯನ್ನೋ ಪಡೆಯುತ್ತಾರೆ ಎಂಬುದು ಸಾಮಾನ್ಯವಾಗಿ ಹೇಳಲು ಬರುವುದಿಲ್ಲ. ಪೂರ್ವಸಂಸ್ಕಾರ ಮತ್ತು ಬೆಳೆದ ಪರಿಸರ ಇವೆರಡನ್ನು ಅವಲಂಬಿಸಿ ಕೆಲವರು ಮಹಿಮಾನ್ವಿತರಾಗಿ ಲೋಕೋಪಕಾರಿಗಳಾದರೆ ಇನ್ನು ಕೆಲವರು ಸಮಾಜಘಾತುಕರೋ ದರೋಡೆಕೋರರೋ ಆಗುತ್ತಾರೆ. ಸಮಯಾನುಸಾರ ಯವುದೋ ಅಗೋಚರ ತಿರುವಿನಿಂದ ಉತ್ತಮರಾಗಿ ಬಾಳುವವರೂ ಇದ್ದಾರೆ. ಶಂಕರರು ಲೋಕೋಪಕಾರಿಯಾಗುವ ಸನ್ಯಾಸಿಯಾಗಬೇಕೆಂಬುದು ಪರಶಿವನ ಇಚ್ಛೆಯಾಗಿತ್ತು! ಆದರೆ ಆ ದಿವ್ಯ ಸಂಕಲ್ಪ ಆ ಸಮಯದಲ್ಲಿ ಯಾರಿಗೂ ತಿಳಿದಿರಲಿಲ್ಲ.

ಬಾಲಕ ಶಂಕರ ಒಮ್ಮೆ ಮನೆಯಲ್ಲಿ ಅಮ್ಮನ ಶುಶ್ರೂಷೆ ನೋಡಿಕೊಳ್ಳುತ್ತಾ ಇದ್ದಾಗ ಈರ್ವರು ತೇಜಸ್ವೀ ಬ್ರಾಹ್ಮಣರು ಮಧ್ಯಾಹ್ನದ ಹೊತ್ತು ಅಲ್ಲಿಗೆ ಬಂದರು. ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದ ಮನೆಯದು. ಬಂದ ಅತಿಥಿಗಳಿಗೆ ಕೈ-ಕಾಲು-ಮುಖ ತೊಳೆಯಲು ನೀರು ಕೊಟ್ಟು ಒಳಗೆ ಕರೆದು ಯಥೋಚಿತ ಆಸನಗಳನ್ನು ನೀಡಿದ ಶಂಕರರ ತಾಯಿ ಹಣ್ಣು-ಹಂಪಲು ಮತ್ತು ಹಾಲನ್ನು ನೀಡಿ ತುಸುಹೊತ್ತು ವಿಶ್ರಮಿಸಲು ಅನುವುಮಾಡಿಕೊಟ್ಟಳು. ಆಮೇಲೆ ಅತಿಥಿಗಳಿಗೆ ಊಟನೀಡಿದಳು. ಶಂಕರ ಬಂದ ಆ ಬ್ರಾಹ್ಮಣರ ಜೊತೆ ಸದಾ ವೇದ-ಶಾಸ್ತ್ರಾದಿಗಳ ಕುರಿತು ಮಾತನಾಡುತ್ತಲೇ ಇದ್ದ. ಆ ವಯಸ್ಸಿನ ಶಂಕರನ ಅಗಾಧ ಪಾಂಡಿತ್ಯ ನೋಡಿ ಬ್ರಾಹ್ಮಣರಿಗೆ ಅತ್ಯಾಶ್ಚರ್ಯವಾಗಿತ್ತು! ಭೋಜನಾನಂತರ ಹೊರಟು ನಿಂತ ಅವರಲ್ಲಿ ಆರ್ಯಾಂಬೆಯು " ಪಂಡಿತೋತ್ತಮರೇ, ನನ್ನ ಮಗು ಶಂಕರ ವೇದ-ವೇದಾಂಗಗಳನ್ನೂ ಶಾಸ್ತ್ರ-ತರ್ಕಾದಿಗಳನ್ನೂ ಓದಿದ್ದು ನನಗೆ ಖುಷಿತಂದಿದೆ ಆದರೆ ಅವನ ಭವಿಷ್ಯದ ಬಗ್ಗೆ ನನಗೆ ತಿಳಿದುಕೊಳ್ಳಬೇಕಾಗಿತ್ತು ದಯಮಾಡಿ ತಿಳಿಸಿಕೊಡುತ್ತೀರಾ ?" ಎಂದಳು. " ಅಮ್ಮಾ ಶಂಕರನಿಗೆ ಆಯುಷ್ಯ ತುಂಬಾ ಕಮ್ಮಿ, ೮ನೇ ವಯಸ್ಸಿಗೆ ಆತ ........ಗತಿಸುತ್ತಾನೆ " ಎಂಬುದನ್ನು ದುಃಖಪಡುತ್ತಲೇ ತಿಳಿಸಿದರು. ಅದಾಗಲೇ ೮ನೇ ವರ್ಷ ಮುಗಿಯುವ ಸಮಯ ಬಂದಿತ್ತು. ವಿಷಯ ತಿಳಿದ ಆರ್ಯಾಂಬೆ ಬ್ರಾಹ್ಮಣರಲ್ಲಿ ಗೋಗರೆದು ಇನ್ನೊಮ್ಮೆ ಪರಿಶೀಲಿಸುವಂತೇ ಜಾತಕ ನೀಡಿದಳು. ಜಾತಕ ನೋಡಿದ ಅವರು " ತಾಯೀ, ೮ನೇ ವರ್ಷಕ್ಕೆ ಸನ್ಯಾಸವಾಗುವ ಯೋಗಕಾಣುತ್ತದೆ. ಸಾಧನೆ ಮತ್ತು ತಪಸ್ಸಿನಿಂದ ೮ ವರ್ಷ ಹೆಚ್ಚಿಗೆ ಬದುಕುತ್ತಾನೆ, ನಂತರ ಅವನಲ್ಲಿಯೇ ಅಡಕವಾಗಿರುವ ದೈವಿಕ ಶಕ್ತಿಯಿಂದ ಇನ್ನೂ ಹದಿನಾರು ವರ್ಷ ಹೆಚ್ಚಿಗೆ ಜೀವಿಸುತ್ತಾನೆ, ಒಟ್ಟೂ ೩೨ ವರ್ಷ ಪರಮಾಯುಷ್ಯ " ಎಂದು ತಮಗೆ ವೇದ್ಯವಾಗಿದ್ದನ್ನು ವಿಷದಪಡಿಸಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿಯೊಂದು ಸಿಕ್ಕಂತೇ ಬತ್ತದ ಬದುಕುವ ಸೆಲೆಯೊಂದು ಕಾಣಿಸಿ ಆರ್ಯಾಂಬೆ ಇದ್ದುದರಲ್ಲೇ ದೇವರು ಇಟ್ಟಹಾಗಾಗಲೆಂದು ತನ್ನನ್ನೇ ತಾನು ಸಮಾಧಾನಪಡಿಸಿಕೊಳ್ಳುತ್ತಾ ಅತಿಥಿಗಳನ್ನು ನಮಸ್ಕರಿಸಿ ಬೀಳ್ಕೊಟ್ಟಿದ್ದಾಳೆ.

ತಮ್ಮ ಮಗ ಎಲ್ಲರಂತೇ ಮದುವೆಯಾಗಿ ಸುಂದರ ಕುಟುಂಬಜೀವನವನ್ನು ನಡೆಸಲಿ ಎಂಬ ಬಯಕೆ ಎಲ್ಲಾ ತಾಯಿಯರಂತೇ ಆರ್ಯಾಂಬೆಗೂ ಇತ್ತು. ಆಗಲೇ ವೃದ್ಧಾಪ್ಯವಾಗಿದ್ದರಿಂದ ಬ್ರಾಹ್ಮಣರ ಮಾತನ್ನು ಕೇಳಿ ಆಕೆಗೆ ಚಣಕಾಲ ಮುಪ್ಪಿನ ಆ ಶರೀರದಲ್ಲಿ ಇದ್ದಬದ್ದ ಶಕ್ತಿಯೂ ಉಡುಗಿ ಹೋದಂತೇ ಭಾಸವಾಯಿತು. ಹಿಂದೊಮ್ಮೆ ಆರಾಧ್ಯದೈವವಾದ ವೃಷಾಚಲೇಶ್ವರ ಕನಸಲ್ಲಿ ಬಂದು ಅಲ್ಪಾಯುಷಿಯಾಗಿ ಲೋಕೋತ್ತರ ಕೀರ್ತಿವಂತನೂ ಭಾರತವನ್ನು ಬೆಳಗುವವನೂ ಆದ ಮಗ ಜನಿಸುತ್ತಾನೆ ಎಂದಿದ್ದು ನೆನಪಿಗೆ ಬಂತು. ದೇವರ ಬಯಕೆಯೇ ಹಾಗಿರುವಾಗ ಎಲ್ಲಾ ತಾಯಿಯರಂತೇ ತಾನು ಮಗ ದೀರ್ಘಾಯುವಾಗಲಿ ಎಂದು ಬಯಸುವುದು ತಪ್ಪು ಎಂದುಕೊಂಡರೂ ಸನ್ಯಾಸಿಯಾಗಿ ತನ್ನನ್ನು ತೊರೆದು ಹೋಗುವ ಮಗನ ಚಿತ್ರಣವೊಂದು ಮನಃಪಟಲದಲ್ಲಿ ಹಾದು ಹೋಯಿತು. ನಿಂತಲೇ ಆ ಹಗಲುಗನಸಿನಲ್ಲಿದ್ದ ಆರ್ಯಾಂಬೆಯನ್ನು ಬ್ರಾಹ್ಮಣರು ಮಾತನಾಡಿಸಿ

" ಅಮ್ಮಾ ನಾವಿನ್ನು ಬರುತ್ತೇವೆ. ನಿಮ್ಮ ಮಗ ಸಾಮಾನ್ಯನಲ್ಲ! ಅಳಿದುಹೋಗುತ್ತಿರುವ ಸನಾತನ ಧರ್ಮವನ್ನು ಪುನರ್ಪ್ರತಿಷ್ಠಾಪಿಸುವ ಸಲುವಾಗಿ ಧರೆಗಿಳಿದ ಸಾಕ್ಷಾತ್ ಭಗವಂತ. ಲೋಕಕ್ಕೇ ಮಾರ್ಗದರ್ಶನ ಮಾಡಬಲ್ಲ ಮಹಾಮಹಿಮ. ಅಧರ್ಮ ತಾಂಡವವಾಡುತ್ತಿರುವ ಭಾರತದಲ್ಲಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿಯೇ ಆತನ ಜನನವಾಗಿದೆ. ಶಂಕರನಿಂದ ಲೋಕಕಲ್ಯಾಣವಾಗಲಿ " ಎಂದು ಹೇಳುತ್ತಾ ಹೊರಟುಬಿಟ್ಟರು.

ಬಾಲಕ ಶಂಕರನಿಗೆ ತಾಯಿ ಅತಿಥಿಗಳೊಡನೆ ನಡೆಸಿದ ಸಂವಾದದ ಸಾರಾಂಶ ತಿಳಿದು ಹೋಗಿತ್ತು. ತನಗಿರುವ ಆಯುಷ್ಯ ಅಲ್ಪವಾಗಿದ್ದುದರಿಂದ ಹೇಗಾದರೂ ಮಾಡಿ ಅಮ್ಮನನ್ನು ಒಪ್ಪಿಸಿ ತಾನು ಸನ್ಯಾಸ ಸ್ವೀಕರಿಸಿ ಲೋಕೋಪಕಾರಕ್ಕೆ ಹೊರಡಬೇಕು ಎಂದು ಶಂಕರ ಭಾವಿಸಿದ. ಮದುವೆಯಾಗಿ ಸಂಸಾರ ಬಂಧನದಲ್ಲಿ ಸಿಲುಕಿದರೆ ಹೊರಜಗತ್ತಿಗೆ ಕೊಡಬೇಕಾದ ಮಾರ್ಗದರ್ಶನ ಪೂರ್ಣವಾಗುವುದಿಲ್ಲ, ತನ್ನ ಕಾರ್ಯಗಳಲ್ಲಿ ತಾನು ಯಶಸ್ಸು ಕಾಣಬೇಕಾದರೆ ಕಾಷಾಯ ವಸ್ತ್ರ ಧಾರಿಯಾಗಿ ಸನ್ಯಾಸಿಯಾಗುವುದು ವಿಹಿತವಾಗಿದೆ ಎಂದು ಆತ ನಿರ್ಧರಿಸಿದ.

ಸನಾತನ ಧರ್ಮಕ್ಕೆ ಯಾರೂ ಸಂಸ್ಥಾಪಕರಿಲ್ಲ. ಅನೇಕಾನೇಕ ಋಷಿಮುನಿಗಳಿಗೆ ಅವರ ದಿವ್ಯದೃಷ್ಟಿಗೆ ಗೋಚರವಾಗಿ ಬಾಯಿಂದ ಬಾಯಿಗೆ ಹರಿದ ಜ್ಞಾನಧಾರೆಗಳಾದ ವೇದಗಳನ್ನು ವೇದವ್ಯಾಸರು ವಿಂಗಡಿಸಿದರಷ್ಟೇ ವಿನಃ ವೇದಗಳು ಅಪೌರುಷೇಯ. ಇಂಥಾ ಜ್ಞಾನಭಂಡಾರ ಕೇವಲ ಎಲ್ಲೋ ಬಿದ್ದು ಕೆಲವು ಪುರೋಹಿತರುಗಳು ಮಾತ್ರ ಬಳಸಿ ಅಳಿದುಹೋಗಬಾರದೆಂಬ ವಾಂಛೆಯಿಂದ ಶಂಕರರು ಸನಾತನ ಧರ್ಮದ ಆಧಾರ ಸ್ತಂಭಗಳಾದ ವೇದ-ವೇದಾಂಗಗಳನ್ನು ಸಮರ್ಪಕವಾಗಿ ಎಲ್ಲರಿಗೂ ಲಭಿಸುವಂತೆಯೂ ಪ್ರಾಣಿಹಿಂಸೆ-ಬಲಿ ಮೊದಲಾದ ಗೊಡ್ಡು ಸಂಪ್ರದಾಯಗಳನ್ನು ತಡೆಯುವಂತೆಯೂ ಮಾಡುವ ಅವಶ್ಯಕತೆಯಿತ್ತು. ಕುಳಿತಲ್ಲೇ ಅದಾಗಲೇ ಶಂಕರ ಇವುಗಳನ್ನೆಲ್ಲಾ ಮೂರ್ತರೂಪದಲ್ಲಿ ಕಂಡು ಸಂಕಲ್ಪಿಸಿಬಿಟ್ಟಿದ್ದ. ಮಾನವರಿಗೆ ಸಹಜವಾಗಿ ಅನುಕೂಲಕರವಾದ ಸನಾತನಧರ್ಮ ಪ್ರಳಯಕಾಲದಲ್ಲೂ ಸಂಪೂರ್ಣ ವಿನಾಶವಾಗದ ಅಂಶಗಳಲ್ಲೊಂದು. ಆದರೂ ಆ ಕಾಲಘಟ್ಟದಲ್ಲಿ ಅನ್ಯಾಯ-ಅಧರ್ಮಗಳೇ ಜಾಸ್ತಿಯಾಗಿ ಧರ್ಮಯಾವುದು ಅಧರ್ಮಯಾವುದು ಎಂಬುದು ಅನೇಕರಿಗೆ ತಿಳಿಯದಂತಾಗಿತ್ತು. ಹಲವು ಕ್ಲೀಷೆಗಳಿಗೆ ಒಳಗಾಗಿದ್ದ ಆಚರಣೆಗಳು ಯಾರ್ಯಾರದೋ ಅಂಧಾನುಕರಣೆಗಳನ್ನೂ ಸೇರಿಸಿಕೊಂಡು ಮೂಲದಲ್ಲಿ ಇದ್ದ ನಿಜವಾದ ಆಚಾರ-ವಿಚಾರಗಳು ಬದಲಾಗಿಬಿಟ್ಟಿದ್ದವು. ಅಂತಹ ಧರ್ಮಗ್ಲಾನಿಯ ಸನ್ನಿವೇಶದಲ್ಲಿ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ ಸಾರಿದಂತೇ ದೇವರು ಒಂದಲ್ಲಾ ಒಂದು ರೂಪದಿಂದ ಧರ್ಮವನ್ನು ರಕ್ಷಿಸಲೇ ಬೇಕಿತ್ತು. ಆ ಕೆಲಸಕ್ಕಾಗಿ ತನ್ನನ್ನೇ ಪರಮೇಶ್ವರ ಶಂಕರನ ರೂಪದಲ್ಲಿ ನಿಯೋಜಿಸಿಕೊಂಡಿದ್ದ! ಸನಾತನ ಧರ್ಮದ ಮೂಲ ಸೂತ್ರಗಳು ಯಾವ ಕಾಲದಲ್ಲೂ ಯಾರಿಗೇ ಆದರೂ ಸಮನ್ವಯವಾಗುವ ಬದುಕುವ ಕಲೆಯನ್ನು ತಿಳಿಸುತ್ತವೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ.

[ಮೂರ್ತಿ ಪೂಜೆ ಬೇಕೋ ಬೇಡವೋ ಎಂಬುದು ಹಲವರ ಪ್ರಶ್ನೆ. ಆಗಾಗ ಇದು ಅಲ್ಲಲ್ಲಿ ಕೇಳಿಬರುತ್ತಲೇ ಇರುತ್ತದೆ. ಮೂರ್ತಿ ಪೂಜೆಯ ವಿಚಾರದಲ್ಲಿ ಶಂಕರರು ಖಡಾಖಂಡಿತವಾಗಿ ತಮ್ಮ ನಿರ್ಧಾರ ಪ್ರಕಟಿಸಿರುವುದನ್ನು ಈಗಲೇ ಹೇಳಿಬಿಡುತ್ತೇನೆ: ಜನಸಾಮಾನ್ಯರಾಗಿ ಪ್ರಾಪಂಚಿಕ ವ್ಯವಹಾರ ನಿರತ ನಮ್ಮಂಥವರಿಗೆ ಮನಸ್ಸಿಗೆ ಏಕಾಗ್ರತೆ ಬರುವುದು ಸುಲಭವಲ್ಲ. ಏಕಾಗ್ರತೆ ಎಂದರೆ ಕೇವಲ ತಾದಾತ್ಮ್ಯತೆಯಲ್ಲ. ಒಬ್ಬ ಓದುವಾಗ ಓದುವ ವಿಷಯಕ್ಕಷ್ಟೇ ಮನಸ್ಸನ್ನು ಸೀಮಿತಗೊಳಿಸಬಹುದು-ಅದು ಬೇರೇ ಪ್ರಶ್ನೆ. ಇಹವನ್ನು ಸಂಪೂರ್ಣ ಮರೆತು, ಭವದ ರಾಗದ್ವೇಷಗಳನ್ನು ಮರೆತು ಸಮಾಧಿಸ್ಥಿತಿಯನ್ನು ಸಾಧಿಸುವುದು ಸಾಮಾನ್ಯರಿಗೆ ಸಿದ್ಧಿಸುವುದಿಲ್ಲ. ಅಷ್ಟಾಂಗಯೋಗ ನಿರತರಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವುಗಳನ್ನು ನಡೆಸುತ್ತಾ ಇರುವಾಗ ನಿದಿಧ್ಯಾಸನ ಕ್ರಿಯೆ ನಡೆಸುತ್ತಾ ಸಮಾಧಿ ತಲ್ಪುವುದು ಲಕ್ಷದಲ್ಲಿ ಕೇವಲ ಬೆರಳೆಣಿಕೆಯ ಮಂದಿಗೆ ಮಾತ್ರ ಸಾಧ್ಯ! ಅಂಥವರಿಗೂ ಸಮಾಧಿ ಸ್ಥಿತಿಯಿಂದ ಅವರು ವಿಮುಖರಾದಾಗ ಮತ್ತೆ ಲೌಕಿಕದ ವ್ಯಾಪಾರ ಅಂಟಿಕೊಳ್ಳುತ್ತದೆ. ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ-ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ ಈ ಚಕ್ರ ನಿರಂತರ ನಡೆದು ತುರ್ಯಾವಸ್ಥೆಗೆ ತಲುಪುವವರೆಗೆ ಅಮೂರ್ತ ಪರಮಾತ್ಮನ ಮೂರ್ತರೂಪಗಳನ್ನು ಕಾಣುತ್ತಲೇ ಇರಬೇಕಾಗುತ್ತದೆ. ಯಾವಾಗ ವ್ಯಕ್ತಿ ಐಹಿಕ ಬಂಧನವನ್ನು ಯಾವ ಮೋಹವೂ ಇಲ್ಲದೇ ಕಿತ್ತೆಸೆದು ಪಾರಮಾರ್ಥಿಕ ಆನಂದಾನುಭೂತಿಯನ್ನು ಪಡೆಯಲು ಅರ್ಹನಾಗುತ್ತಾನೋ ಆ ಹಂತದವರೆಗೂ ಮೂರ್ತಿ ಪೂಜೆ ಅನಿವಾರ್ಯ. ಅದೊಂದು ಸ್ಲ್ಯಾಬ್ ಇದ್ದ ಹಾಗೇ. ಅಲ್ಲಿಂದಾಚೆ ಆ ವ್ಯಕ್ತಿ ಮೂರ್ತಿಗಳನ್ನು ಪೂಜಿಸುವ ಬದಲು ಭಗವಂತನನ್ನು ಅಮೂರ್ತರೂಪದಲ್ಲೇ ಕಾಣುತ್ತಾನೆ.

ವ್ಯಕ್ತಿ ಆ ಹಂತಕ್ಕೆ ತಲುಪಿದ್ದಾನೆ ಎಂದು ಗುರ್ತಿಸುವುದು ಹೇಗೆ ಎಂದರೆ-- ಮಹಾತ್ಮರು ಎಂದು ಸುತ್ತ ಇರುವ ಹಲವರು ಸಹಜ ಅನುಭವದಿಂದ ಅದನ್ನು ಒಪ್ಪುತ್ತಾರೆ. ಸಾಧನೆ ಮಾಡಿದ ವ್ಯಕ್ತಿಯ ಯೋಜನೆಗಳು, ಯೋಚನೆಗಳು ಕೇವಲ ಸಂಕಲ್ಪಮಾತ್ರದಿಂದಲೇ ಘಟಿಸುತ್ತವೆ! ಯಾವ ವಿಜ್ಞಾನಕ್ಕೂ ನಿಲುಕದ ಅಘಟಿತ ಘಟನಾ ವಿಷಾರದನಾಗುವ ವ್ಯಕ್ತಿ ಸುತ್ತಲೂ ಇರುವ ಜನರ ಲೌಕಿಕವಾದ ತಾಪತ್ರಯಗಳೆನಿಸಿದ ಅದಿದೈವಿಕ-ಅದಿಭೌತಿಕ-ಆಧ್ಯಾತ್ಮಿಕ ಆದಿ-ವ್ಯಾಧಿಗಳನ್ನು ತನ್ನ ತಪೋಬಲದಿಂದ ನಿವಾರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ. ಇನ್ನೊಬ್ಬರ ಪೂರ್ವಕುಕೃತ ಸಂಚಿತ ಫಲಗಳಿಂದುಟಾದ ರೋಗಗಳನ್ನೂ ಬವಣೆಗಳನ್ನೂ ಪರಿಹರಿಸುವ ತಾಕತ್ತನ್ನು ಪಡೆದ ವ್ಯಕ್ತಿ ಪಾರಮಾರ್ಥಿಕ ಸಾಧನೆಯ ಆ ಮಟ್ಟಕ್ಕೆ ಏರಿದ್ದಾನೆ-ದೈವತ್ವವನ್ನು ಪಡೆದಿದ್ದಾನೆ, ಅಮೂರ್ತದಲ್ಲಿ ಆನಂದಲೋಕದಲ್ಲಿ ವಿಹರಿಸುವ ಅಲೌಕಿಕ ಅತಿಮಾನುಷ ಶಕ್ತಿಯನ್ನು ಗಳಿಸಿದ್ದಾನೆ, ಆತ್ಮ-ಪರಮಾತ್ಮನಲ್ಲಿ ವಿಲೀನಗೊಳ್ಳುವ ಕ್ರಿಯೆಗೆ ಸಜ್ಜಾಗಿದೆ ಎಂಬುದು ತಿಳಿಯಬೇಕಾದ ಅಂಶ. ಅಲ್ಲಿಯವರೆಗೂ ಬರಿದೇ ಮೂರ್ತಿ ಪೂಜೆ-ಯಜ್ಞ-ಯಾಗ ಇವೆಲ್ಲಾ ಬೇಡಾ ತಾನು ಆ ಹಂತವನ್ನು ಬಿಟ್ಟು ಮೇಲೇರಿಬಿಟ್ಟಿದ್ದೇನೆ, ಅದೆಲ್ಲಾ ನರ್ಸರಿ-ಪ್ರೈಮರಿ ಹುಡುಗರ ಹಂತ ಎಂಬುದು ಮತ್ತದೇ ಅಜ್ಞಾನವಾಗುತ್ತದೆ! ಉದಾಹರಣೆಯಾಗಿ ಇತ್ತೀಚಿನವರೆಗೂ ಇದ್ದ ಸನ್ಯಾಸಿಗಳಲ್ಲಿ ಭಗವಾನ್ ಶ್ರೀಧರರು ಸಂಪೂರ್ಣ ಮೋಕ್ಷಶ್ರೀಯನ್ನು ಧರಿಸಿದ್ದರು-ಲೋಕದ ಹಲವರ ಸಂಕಷ್ಟಗಳನ್ನು ಯಾವುದೇ ಪವಾಡ ಮಾಡದೇ ಆದರೆ ಪವಾಡ ನಡೆದ ರೀತಿಯಲ್ಲೇ ಬಗೆಹರಿಸಿದ್ದಾರೆ. ಅದೇ ಹಂತವನ್ನು ರಮಣಮಹರ್ಷಿಗಳೂ ತಲ್ಪಿದ್ದರು, ಶಿರಡೀ ಸಾಯಿಬಾಬಾ ಕೂಡ. ಅವರೆಲ್ಲಾ ಮೂರ್ತಿಪೂಜೆಯನ್ನು ನಿಷೇಧಿಸಲಿಲ್ಲ, ಬದಲಾಗಿ ಅವರೂ ಅನೇಕ ವಿಗ್ರಹಗಳಲ್ಲಿ ದೇವರನ್ನು ಕಂಡರು. ವಿಗ್ರಹವೇ ದೇವರಲ್ಲಾ ವಿಗ್ರಹದ ಆವಾಸಿ ದೇವರೆಂಬುದು ಸತ್ಯ. ಆದರೆ ಅಮೂರ್ತರೂಪ ಮೂರ್ತರೂಪದಲ್ಲಿ ತನ್ನನ್ನು ಲೋಕಕ್ಕೆ ತೋರಗೊಡುವಾಗ ಅದೆಲ್ಲಾ ಸುಳ್ಳು ಎಂಬ ವಿತಂಡ ವಾದವನ್ನು ನಾನು ಒಪ್ಪುವುದಿಲ್ಲ. ಶಂಕರರ ತತ್ವಗಳು ಸರಿಯಾಗೇ ಇವೆ. ಆಧುನಿಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಪರಮಾಣು ವಿಭಜನೆಯ ಕಾಲದಲ್ಲಿ ಅದ್ವೈತ ಸತ್ಯವನ್ನು ಅನುಭವಿಸಿದುದಾಗಿ ವಿಶಿಷ್ಟಾದ್ವೈತ ಸಂಪ್ರದಾಯದವರಾಗಿದ್ದ ವಿಜ್ಞಾನಿ ಡಾ|ರಾಜಾರಾಮಣ್ಣ ಹೇಳಿದ್ದಾರೆ-ತಮ್ಮ 'YEARS OF PILGRIMAGE' ಎಂಬ ಅತ್ಮಚರಿತ್ರೆಯಲ್ಲಿ ! ಮೊಲಕ್ಕೆ ಮೂರೇ ಕಾಲು ಎಂಬುದು ಎಷ್ಟು ಹಾಸ್ಯಾಸ್ಪದವೋ ’ಕಾಣಲಾಗದವರ’ ಪಾಲಿಗೆ ಮೊಲಕ್ಕೇ ಮೂರೇ ಕಾಲು ಎಂಬುದೂ ಅಷ್ಟೇ ಸತ್ಯ-ಅದು ಅವರ ತಪ್ಪಲ್ಲ , ಅವರ ಬೌದ್ಧಿಕ ಸಾಧನೆಯ ಮಟ್ಟ ಅಷ್ಟೇ! ]

ಲೋಕದ ನೋವನು ಮಡಿಲಲಿ ಧರಿಸುತ
ನಾಕವ ಕರುಣಿಸೆ ತಾ ಮುನ್ನಡೆದ |
ಆ ಕರುಣಿಯ ವಯ ಅಲ್ಪವು ಎನಿಸಲು
ಸಾಕು ಎಂದನವ ಈ ಲೌಕಿಕಕೆ ||

ಏಕವನೇಕವು ಮೂರ್ತವಮೂರ್ತವು
ಪಾಕದೊಳಾಮನ ಸಿದ್ಧಿಯಪಡೆದು |
ಚಾಕರಿ ಧರ್ಮದ ಪುನರುಜ್ಜೀವನ
ಏಕಾಂಗಿಯು ತೆರಳಿದ ಸಾಧನೆಗೆ ||

ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್‍ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ |
ಮಾಯಾವೀವ ವಿಜೃಂಭಿಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


.........ಮುಂದುವರಿಯುತ್ತದೆ